ಮಂಗಳವಾರ, ಜೂನ್ 30, 2009

ಗಣಕಿಂಡಿ - ೦೦೭ (ಜೂನ್ ೨೯, ೨೦೦೯)

ಅಂತರಜಾಲಾಡಿ

ಅಂತರಜಾಲದಲ್ಲಿ ಫೋಟೋಶಾಪ್

ಹೆಚ್ಚಿನ ಮಂದಿ ಚಿತ್ರ ರಚಿಸಲು, ಛಾಯಾಚಿತ್ರಗಳನ್ನು ಸಂಪಾದಿಸಲು ಬಳಸುವುದು ಅಡೋಬ್‌ನವರ ಫೋಟೋಶಾಪ್ ತಂತ್ರಾಂಶ. ಇದು ಬಲು ದುಬಾರಿ ತಂತ್ರಾಂಶ. ಆದುದರಿಂದಲೇ ಬಹುಪಾಲು ಭಾರತೀಯರು ಬಳಸುತ್ತಿರುವುದು ಅಧಿಕೃತವಾಗಿ ಖರೀದಿ ಮಾಡದ, ಅವರಿವರಿಂದ ನಕಲು ಮಾಡಿದ ತಂತ್ರಾಂಶ ಪ್ರತಿಗಳನ್ನು. ಕಾನೂನು ಪ್ರಕಾರ ಇದು ಅಪರಾಧ. ಕಾನೂನನ್ನು ಮುರಿಯದೆ ಅಡೋಬ್ ಫೋಟೋಶಾಪ್ ಬಳಸಲು ಈಗ ಅವರೇ ಒಂದು ಸೌಕರ್ಯ ನೀಡಿದ್ದಾರೆ. ಅದುವೇ www.photoshop.com ಎಂಬ ಜಾಲತಾಣ. ಫೋಟೋಶಾಫ್ ತಂತ್ರಾಂಶವನ್ನು ನಿಮ್ಮ ಗಣಕದಲ್ಲಿ ಇನ್‌ಸ್ಟಾಲ್ ಮಾಡಿ ನೀವು ಏನೇನು ಮಾಡಬಹುದೋ ಅವುಗಳಲ್ಲಿ ಅತೀ ಅಗತ್ಯವಿರುವ ಬಹುಪಾಲು ಕೆಲಸಗಳನ್ನು ಈ ತಾಣವನ್ನು ಬಳಸಿ ಮಾಡಬಹುದು. ನಿಮ್ಮ ಕೆಲಸವನ್ನು ಜಾಲತಾಣದಲ್ಲೇ ಸಂಗ್ರಹಿಸಿಡಲು ಸ್ವಲ್ಪ ಜಾಗವನ್ನೂ ನಿಡುತ್ತಿದ್ದಾರೆ. ಇವೆಲ್ಲ ಸಂಪೂರ್ಣ ಉಚಿತ.


ಡೌನ್‌ಲೋಡ್

ವಿಂಡೋಸ್‌ನ ಹೊಸ ಆವೃತ್ತಿ

ಮೈಕ್ರೋಸಾಫ್ಟ್ ವಿಂಡೋಸ್ ಬಳಸದವರಾರು? ಬಹುಪಾಲು ಜನ ಬಳಸುವುದು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು (ಆಪರೇಟಿಂಗ್ ಸಿಸ್ಟಮ್). ವಿಂಡೋಸ್‌ನ ಹೊಸ ಆವೃತ್ತಿ, ವಿಂಡೋಸ್ ೭, ಸದ್ಯಕ್ಕೆ ಪ್ರಯೋಗಾತ್ಮಕವಾಗಿ ಲಭ್ಯವಿದೆ. ಇದು ಬೇಕಿದ್ದರೆ bit.ly/QIK1h ತಾಣಕ್ಕೆ ಭೇಟಿ ನೀಡಿ. ವಿಂಡೋಸ್ ೭ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ. ಈಗ ಲಭ್ಯವಿರುವ ಪ್ರಯೋಗಾತ್ಮಕ ಆವೃತ್ತಿ ಮುಂದಿನ ವರ್ಷದ ಮಾರ್ಚ್ ತಿಂಗಳ ತನಕ ಮಾತ್ರ ಸರಿಯಾಗಿ ಕೆಲಸ ಮಾಡುತ್ತದೆ. ಆದುದರಿಂದ ಇದನ್ನು ನಿಮ್ಮ ಪ್ರಮುಖ ಕಾರ್ಯಾಚರಣ ವ್ಯವಸ್ಥೆ ಆಗಿ ಬಳಸಬೇಡಿ. ಇನ್ನು ಇನ್‌ಸ್ಟಾಲ್ ಮಾಡಿಕೊಂಡು ಇದರಲ್ಲಿ ಕನ್ನಡವನ್ನು ಯಾವ ರೀತಿ ಅಳವಡಿಸಿದ್ದಾರೆ ಎಂದು ಪರೀಕ್ಷಿಸಿ ತಪ್ಪುಗಳಿದ್ದಲ್ಲಿ ಕೂಡಲೆ ಮೈಕ್ರೋಸಾಫ್ಟ್ ಕಂಪೆನಿಗೆ ವರದಿ ಮಾಡಿ. ಅಂತಿಮ ಆವೃತ್ತಿ ಬಂದ ನಂತರ ಕನ್ನಡವನ್ನು ಅಳವಡಿಸಿದುದರಲ್ಲಿ ತಪ್ಪುಗಳಿದ್ದಲ್ಲಿ ದೂರುವುದಕ್ಕಿಂತ ಈಗಲೇ ಪರೀಕ್ಷಿಸಿ ನೋಡುವುದು ಒಳ್ಳೆಯದು.

e - ಸುದ್ದಿ

ದರೋಡೆಗಾರರ ಪತ್ತೆ ಹಚ್ಚಿದ ಗೂಗ್ಲ್ ಬೀದಿ ನೋಟ

ಗೂಗ್ಲ್‌ನ ಬೀದಿನೋಟ (Google Streetview) ಸವಲತ್ತನ್ನು ಬಳಸಿ ಹೆಂಗಸೊಬ್ಬಳು ತನ್ನ ಗಂಡ ತನಗೆ ಮೋಸಮಾಡುತ್ತಿದ್ದುದನ್ನು ಪತ್ತೆಹಚ್ಚಿದ್ದನ್ನು ಇದೇ ಅಂಕಣದಲ್ಲಿ ಹಿಂದೆ ತಿಳಿಸಲಾಗಿತ್ತು (ನೋಡಿ - ಗಣಕಿಂಡಿ, ಮೇ ೧೮, ೨೦೦೯). ೧೪ ವರ್ಷದ ಹುಡುಗನೊಬ್ಬ ತನ್ನನ್ನು ದರೋಡೆ ಮಾಡಿದವರನ್ನು ಇದೇ ಸವಲತ್ತನ್ನು ಬಳಸಿ ಪತ್ತೆ ಮಾಡಿದ ವರದಿ ಹಾಲೆಂಡ್ ದೇಶದಿಂದ ಬಂದಿದೆ. ಆತ ಸೈಕಲ್ಲಿನಲ್ಲಿ ಹೋಗುತ್ತಿದ್ದಾಗ ಇಬ್ಬರು ಆತನನ್ನು ಬೀಳಿಸಿ ಆತನಿಂದ ೧೬೫ ಯುರೋ ಮತ್ತು ಮೊಬೈಲ್ ಫೋನು ಕಸಿದುಕೊಂಡು ಹೋಗಿದ್ದರು. ಆರು ತಿಂಗಳ ನಂತರ ಆತ ಸುಮ್ಮನೆ ಗೂಗ್ಲ್ ಬೀದಿನೋಟ ನೋಡುತ್ತಿದ್ದಾಗ, ಅದೇ ಜಾಗಕ್ಕೆ ಹೋಗಿ ನೋಡಿದಾಗ, ಅದೃಷ್ಟಕ್ಕೆ ಅದೇ ದೃಶ್ಯ ಅದರಲ್ಲಿ ಮುದ್ರಿತವಾಗಿತ್ತು. ಇಬ್ಬರು ತಾನು ಸೈಕಲ್ಲಿನಲ್ಲಿ ಹೋಗುತ್ತಿದ್ದಾಗ ತನ್ನನ್ನು ಹಿಂಬಾಲಿಸುತ್ತಿರುವುದನ್ನು ನೋಡಿದಾಗ ಆತನಿಗೆ ಕಳ್ಳರ ಗುರುತು ಸಿಕ್ಕಿತು. ಆತ ಪೋಲೀಸರಿಗೆ ಇದನ್ನು ವರದಿ ಮಾಡಿದ. ಪೋಲೀಸರು ಗೂಗ್ಲ್‌ನವರನ್ನು ವಿನಂತಿಸಿಕೊಂಡು ಉತ್ತಮ ಗುಣಮಟ್ಟದ ಚಿತ್ರ ಪಡೆದು ಕಳ್ಳರನ್ನು ಬಂಧಿಸಿದರು. ಗೂಗ್ಲ್‌ನ ಬೀದಿನೋಟ ಸವಲತ್ತಿಗಾಗಿ ಕಾರಿನ ಮೇಲೆ ವೀಡಿಯೋ ಕ್ಯಾಮೆರಾ ಇಟ್ಟು ಎಲ್ಲವನ್ನು ಮುದ್ರಿಸಿಕೊಳ್ಳುತ್ತಿದ್ದ ಕಾರಿನ ಚಾಲಕ ಇಷ್ಟೆಲ್ಲ ನಡೆಯುತ್ತಿದ್ದಾಗ ಏನು ಮಾಡುತ್ತಿದ್ದ?

e- ಪದ

ಕುಕೀ (cookie) -ಮತ್ತೆ ಮತ್ತೆ ಭೇಟಿ ನೀಡುವ ಗ್ರಾಹಕನನ್ನು ಗುರುತಿಸಲು ಅಂತರಜಾಲ ತಾಣಗಳು ಗ್ರಾಹಕನ ಗಣಕದಲ್ಲಿ ಬರೆದಿಡುವ ಕಿರು ಮಾಹಿತಿ. ಇದನ್ನು ಬಳಸುವುದರಿಂದ ಜಾಲತಾಣಗಳಲ್ಲಿ ಪದೇ ಪದೇ ಲಾಗಿನ್ ಆಗುವ ಅಗತ್ಯ ಬೀಳುವುದಿಲ್ಲ. ಅಷ್ಟು ಮಾತ್ರವಲ್ಲ ನಿಮ್ಮ ಸಂಪೂರ್ಣ ವಿವರವನ್ನು ಮತ್ತೆ ಮತ್ತೆ ದಾಖಲಿಸುವ ಅಗತ್ಯವೂ ಬೀಳುವುದಿಲ್ಲ. ಆದರೆ ಕೆಲವು ಪೋಕರಿ ಜಾಲತಾಣಗಳು ಕುಕೀ ಬಳಸಿ ನೀವು ಬೇರೆ ಯಾವ ತಾಣಗಳಿಗೆ ಭೇಟಿ ನೀಡುತ್ತೀರಿ, ನಿಮ್ಮ ವೀಕ್ಷಣೆಯ ಪರಿ ಯಾವುದು, ಇತ್ಯಾದಿ ಎಲ್ಲ ದಾಖಲಿಸಿಕೊಳ್ಳುತ್ತವೆ. ಆಗಾಗ ನಿಮ್ಮ ಗಣಕದಲ್ಲಿ ಸಂಗ್ರಹವಾಗಿರುವ ಕುಕೀಗಳನ್ನು ಅಳಿಸುವುದು ಒಳ್ಳೆಯದು.


e - ಸಲಹೆ

ಗೂಗ್ಲ್ ಬಳಸಿ ಮಾಹಿತಿಯನ್ನು ಹುಡುಕುವಾಗ ಹುಡುಕಿದ ಮಾಹಿತಿಗೆ ಸಂಬಂಧಿಸಿದ ಹತ್ತು ಜಾಲತಾಣಗಳನ್ನು ಮಾತ್ರ ಒಂದು ಪುಟದಲ್ಲಿ ನೀಡುವುದನ್ನು ಗಮನಿಸಿದ್ದೀರಾ? ಮುಂದಿನ ಹತ್ತು ಜಾಲತಾಣಗಳ ಕೊಂಡಿಗಳನ್ನು ವೀಕ್ಷಸಲು ಮುಂದಿನ ಪುಟಕ್ಕೆ ಹೋಗಲು Next ಎಂಬುದನ್ನು ಕ್ಲಿಕ್ ಮಾಡಬೇಕು. ಹೀಗೆ ಮಾಡುತ್ತ ಹೋಗುವ ಬದಲು, location bar ನಲ್ಲಿ ಗೂಗ್ಲ್ ನೀಡುವ ಉದ್ದ ಕೊಂಡಿಯ ಮುಂದೆ &num=100 ಎಂದು ಸೇರಿಸಿ Enter ಕೀಲಿಯನ್ನು ಒತ್ತಿರಿ. ಈಗ ಪ್ರತಿ ಪುಟದಲ್ಲಿ ೧೦೦ ಜಾಲತಾಣಗಳ ಕೊಂಡಿಯನ್ನು ಗೂಗ್ಲ್ ನೀಡುತ್ತದೆ.

ಕಂಪ್ಯೂತರ್ಲೆ

ಕೋಲ್ಯ ಕಂಪ್ಯೂಟರ್ ಕೊಂಡುಕೊಳ್ಳಲು ಅಂಗಡಿಗೆ ಹೋದ. ಅಂಗಡಿಯಾತ ಹೇಳಿದ “ಈ ಕಂಪ್ಯೂಟರ್ ನಿಮ್ಮ ಕೆಲಸವನ್ನು ೫೦% ರಷ್ಟು ಕಡಿಮೆ ಮಾಡುತ್ತದೆ.” ಕೋಲ್ಯ ಹೇಳಿದ “ಹಾಗಾದರೆ ಎರಡು ಕಂಪ್ಯೂಟರ್ ಪ್ಯಾಕ್ ಮಾಡು. ಆಗ ನಾನು ಯಾವ ಕೆಲಸವನ್ನೂ ಮಾಡಬೇಕಾಗಿರುವುದಿಲ್ಲ.”

ಸೋಮವಾರ, ಜೂನ್ 22, 2009

ಗಣಕಿಂಡಿ - ೦೦೬ (ಜೂನ್ ೨೨, ೨೦೦೯)

ಅಂತರಜಾಲಾಡಿ

ಹಂದಿ ಜ್ವರ

ಏನಿದು ಹಂದಿ ಜ್ವರ? ಯಾವ ಪತ್ರಿಕೆ ತೆರೆದರೂ, ಟಿವಿ ಹಾಕಿದರೂ ಇದರ ಬಗ್ಗೆ ಸುದ್ದಿ ಇಲ್ಲದೆ ಇಲ್ಲ. ಪ್ರಪಂಚದ ಸುಮಾರು ೭೦ ದೇಶಗಳಲ್ಲಿ ಇದು ವ್ಯಾಪಿಸಿದೆ. ಭಾರತಕ್ಕೂ ಕಾಲಿಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯವರೂ ಎಚ್ಚರಿಕೆಯ ಘಂಟೆ ಬಾರಿಸಿದ್ದಾರೆ. ಈ ಹಂದಿ ಜ್ವರದ ಬಗ್ಗೆ ಸಮಗ್ರ ಮಾಹಿತಿ ನೀಡುವ ವಿಶ್ವ ಆರೋಗ್ಯ ಸಂಸ್ಥೆಯ ಜಾಲತಾಣ - www.who.int/csr/disease/swineflu/en. ಅಮೆರಿಕ ಸರಕಾರದ ಸಾಂಕ್ರಾಮಿಕ ಖಾಯಿಲೆಗಳ ವಿಭಾಗವೂ ಹಂದಿ ಜ್ವರದ ಬಗ್ಗೆ ತನ್ನದೇ ಆದ ಒಂದು ಜಾಲತಾಣದಲ್ಲಿ ವಿವರ ನೀಡುತ್ತಿದೆ. ಅದರ ವಿಳಾಸ - www.cdc.gov/h1n1flu.

ಡೌನ್‌ಲೋಡ್

ಮನೆ ಮನೆ ನಮ್ಮ ಮನೆ

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆ ಮಾತೊಂದಿದೆ. ಮನೆ ಎಂಬುದು ಎಷ್ಟು ಮುಖ್ಯ ಎಂದು ಇದು ಸೂಚಿಸುತ್ತದೆ. ಮನೆ ಕಟ್ಟಿಸಲು ಹೊರಟಾಗ ಮನೆಯ ವಿನ್ಯಾಸ ಮಾಡುವುದು ದೊಡ್ಡ ತಲೆನೋವಿನ ಕೆಲಸ. ಗೋಡೆಗಳನ್ನು ಎಲ್ಲಿ ಹೇಗೆ ಕಟ್ಟಿಸಬೇಕು, ಯಾವ ರೀತಿ ಆಸನ, ಮಂಚ, ಮೇಜು, ಇತ್ಯಾದಿ ಇಡಬೇಕು -ಇವುಗಳ ಬಗ್ಗೆ ಮನೆ ಮಂದಿಯೆಲ್ಲ ಕೂತು ದಿನಾ ಚರ್ಚೆ ನಡೆಸುವುದು ಸಾಮಾನ್ಯ. ಹೀಗೆ ವಿವಿಧ ರೀತಿಯಲ್ಲಿ ವಿನ್ಯಾಸಗಳನ್ನು ಕಾಗದದಲ್ಲಿ ಮಾಡುವುದು ಎಲ್ಲರಿಂದ ಆಗುವ ಕೆಲಸವೂ ಅಲ್ಲ. ಅದಕ್ಕಾಗಿ ಹಲವು ತಂತ್ರಾಂಶಗಳು ಲಭ್ಯವಿವೆ. ನೀವು ಯಾರಾದರು ಇಂಜಿನಿಯರನ್ನು ಇದಕ್ಕಾಗಿ ನೇಮಿಸಿದರೆ ಅವರು ಬಳಸುವುದು ದುಬಾರಿ ತಂತ್ರಾಂಶವನ್ನು. ಅದನ್ನು ಕೊಂಡು, ಕಲಿತು, ಬಳಸುವುದು ಎಲ್ಲರಿಂದ ಆಗುವ ಕೆಲಸವಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ - Sweet Home 3D ಎಂಬ ತಂತ್ರಾಂಶ. ಇದು ಲಭ್ಯವಿರುವ ಜಾಲತಾಣ - www.sweethome3d.eu. ಇದು ಸಂಪೂರ್ಣ ಮುಕ್ತ ಮತ್ತು ಉಚಿತ ತಂತ್ರಾಂಶ.

e - ಸುದ್ದಿ

ವಿಕಿಪೀಡಿಯಾದಿಂದ ಚರ್ಚ್‌ಗೆ ನಿಷೇಧ

ವಿಕಿಪೀಡಿಯಾ ಒಂದು ಮುಕ್ತ ವಿಶ್ವಕೋಶ. ಇದರಲ್ಲಿರುವ ಅಗಾಧ ಮಾಹಿತಿ ಜನರಿಗಾಗಿ ಜನರೇ ಸಂಗ್ರಹಿಸಿ, ಸಂಪಾದಿಸಿ, ಸೇರಿಸಿದ್ದು. ಇದರಲ್ಲಿ ಯಾರು ಬೇಕಾದರು ಮಾಹಿತಿ ಸೇರಿಸಬಹುದು ಮತ್ತು ಇರುವ ಮಾಹಿತಿಯನ್ನು ಸಂಪಾದಿಸಬಹುದು. ಕೆಲವೊಮ್ಮೆ ಕೆಲವು ವ್ಯಕ್ತಿ ಹಾಗೂ ಸಂಸ್ಥೆಗಳು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಈ ವಿಕಿಪೀಡಿಯಾವನ್ನು ಬಳಸುವುದು ಬೆಳಕಿಗೆ ಬಂದಿದೆ. ಹಾಗೆ ಆದಾಗೆಲ್ಲ ವಿಕಿಪೀಡಿಯಾದ “ನ್ಯಾಯಾಧಿಕಾರಿಗಳು” ಅವರನ್ನು ವಿಕಿಪೀಡಿಯಾದಿಂದ ನಿಷೇಧಿಸುತ್ತಾರೆ ಮತ್ತು ಅವರು ಸೇರಿಸಿದ ಮಾಹಿತಿಯನ್ನು ಕಿತ್ತು ಹಾಕುತ್ತಾರೆ. ಈ ಪಟ್ಟಿಗೆ ಇತ್ತೀಚೆಗಿನ ಸೇರ್ಪಡೆ -“ಚರ್ಚ್ ಆಫ್ ಸೈಂಟಾಲಜಿ”. ಇವರು ತಮ್ಮ ಧರ್ಮ ಪ್ರಚಾರಕ್ಕೆ ವಿಕಿಪೀಡಿಯಾವನ್ನು ಬಳಸುತ್ತಿರುವುದು ಕಂಡು ಬಂದು ಅವರನ್ನು ವಿಕಿಪೀಡಿಯಾದಿಂದ ನಿಷೇಧಿಸಲಾಗಿದೆ.

e- ಪದ

ಫೈರ್‌ವಾಲ್ (Firewall) - ಗಣಕ, ಗಣಕ ಜಾಲ, ಅಂತರಜಾಲ ಸರ್ವರ್, ಇತ್ಯಾದಿಗಳನ್ನು ಹೊರಗಡೆಯಿಂದ ಕಿಡಿಗೇಡಿಗಳು ಅನಧಿಕೃತವಾಗಿ ಪ್ರವೇಶಿಸಿ ಮಾಹಿತಿ ಕದಿಯುವಿಕೆ ಅಥವಾ ಬೇರೆ ಯಾವುದಾದರೂ ಹಾನಿ ಮಾಡದಂತೆ ತಡೆಯುಲು ಬಳಸುವ ತಡೆಗೋಡೆ ತಂತ್ರಾಂಶ. ವಿಂಡೋಸ್ ಎಕ್ಸ್‌ಪಿ ನಂತರದ ಎಲ್ಲ ಆವೃತ್ತಿಗಳಲ್ಲಿ ಈ ಸೌಲಭ್ಯ ಇದೆ. ಅದನ್ನು ಚಾಲನೆಯಲ್ಲಿಟ್ಟರೆ ಒಳ್ಳೆದು.

e - ಸಲಹೆ

ಕನ್ನಡ ಯುನಿಕೋಡ್ ಬಳಸಿ ಬೆರಳಚ್ಚು ಮಾಡುವಾಗ ಶುದ್ಧ ವ್ಯಂಜನದ ನಂತರ ಬರುವ ವ್ಯಂಜನ ಅದಕ್ಕೆ ಒತ್ತಕ್ಷರವಾಗಬಾರದಾದರೆ ಏನು ಮಾಡಬೇಕು? ಉದಾಹರಣೆಗೆ ಸಾಫ್ಟ್‌ವೇರ್ ಎಂದು ಬೆರಳಚ್ಚು ಮಾಡುವಾಗ ಸಾಫ್ಟ್ವೇರ್ ಎಂದು ಆಗಬಾರದು. ಅದಕ್ಕಾಗಿ ಯುನಿಕೋಡ್‌ನಲ್ಲಿ Zero Width Non-Joiner ಎಂಬ ಒಂದು ಸಂತೇತಾಕ್ಷರ ನೀಡಿದ್ದಾರೆ. ಫ್ ಮತ್ತು ಟ್ ಬೆರಳಚ್ಚು ಮಾಡಿದ ನಂತರ ಈ ಅಕ್ಷರವನ್ನು ಬೆರಳಚ್ಚು ಮಾಡಿದರೆ ನಂತರದ ವ್ಯಂಜನ ಒತ್ತಕ್ಷರವಾಗಿ ಮೂಡಿಬರುವುದಿಲ್ಲ. ಈ ಅಕ್ಷರವನ್ನು ಬೆರಳಚ್ಚು ಮಾಡಲು ವಿಂಡೋಸ್ ಎಕ್ಸ್‌ಪಿಯ ಜೊತೆ ನೀಡಿರುವ ಕನ್ನಡದ ಕೀಲಿಮಣೆಯಲ್ಲಿ Ctrl, Shift ಮತ್ತು 2 ಕೀಲಿಗಳನ್ನು ಒಟ್ಟಿಗೆ ಒತ್ತಬೇಕು. ಮೂಲ ಕೆ.ಪಿ. ರಾವ್ ವಿನ್ಯಾಸದ ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆಯಲ್ಲಿ (ಕಗಪ ಕೀಲಿಮಣೆ; ಬರಹ ಡೈರೆಕ್ಟ್‌ನಲ್ಲಿ Language > KGP Keyboard > Unicode ಎಂದು ಆಯ್ಕೆ ಮಾಡಿಕೊಳ್ಳಬೇಕು) ಯುನಿಕೋಡ್ ವಿಧಾನದಲ್ಲಿ ಬೆರಳಚ್ಚು ಮಾಡುವಾಗ ಇದನ್ನು ಮೂಡಿಸಲು f ಕೀಲಿಯನ್ನು ಎರಡು ಸಲ ಒತ್ತಬೇಕು.

ಕಂಪ್ಯೂತರ್ಲೆ

ಇತ್ತೀಚೆಗೆ ಪತ್ತೆಯಾಗಿರುವ ಕೆಲವು ಗಣಕ ವೈರಸ್‌ಗಳು ಮತ್ತು ಅವುಗಳ ಗುಣವೈಶಿಷ್ಟ್ಯಗಳು:

ಬಂಗಾರಪ್ಪ ವೈರಸ್ - ಪ್ರತಿ ದಿನ ಹೊಸ ಗಣಕಕ್ಕೆ ಬದಲಾಯಿಸುತ್ತಿರುವುದರಿಂದ ಯಾವಾಗ ಯಾವ ಗಣಕದಲ್ಲಿದೆ ಎಂದು ತಿಳಿಯುವುದಿಲ್ಲ.
ದೇವೇಗೌಡ ವೈರಸ್ - ಯಾವ ಗಣಕಕ್ಕೆ ಸೇರಿಕೊಳ್ಳುತ್ತದೋ ಅದನ್ನು ಭಸ್ಮಾಸುರನಂತೆ ನಾಶಮಾಡುತ್ತದೆ.
ಅರ್ಜುನ್ ಸಿಂಗ್ ವೈರಸ್ - ಗಣಕದ ೪೯% ಅಂಶಕ್ಕೆ ಮಾತ್ರ ತೊಂದರೆ ಮಾಡುತ್ತದೆ.
ವರುಣ್ ಗಾಂಧಿ ವೈರಸ್ - ಕೈ ಕತ್ತರಿಸುತ್ತೇನೆ ಎಂದು ಎಚ್ಚರಿಸುವ ವೈರಸ್. ಇದು ಎಷ್ಟು ಸಾಂಕ್ರಾಮಿಕವಾಗಿದೆ ಎಂದರೆ ಇದನ್ನೇ ನಕಲು ಮಾಡಿ ನಾಲಗೆ, ತಲೆ, ಕುತ್ತಿಗೆ, ಮೂಗು, ಕಿವಿ, ಇತ್ಯಾದಿ ಎಲ್ಲ ಕತ್ತರಿಸುವ, ಹಲವು ಬೇರೆ ಬೇರೆ ವೈರಸ್‌ಗಳು ಹುಟ್ಟಿಕೊಂಡಿವೆ.
ಲಾಲು ವೈರಸ್ - ವರುಣ್ ಗಾಂಧಿ ವೈರಸ್‌ನ್ನು ರೋಡ್ ರೋಲರ್ ಅಡಿಯಲ್ಲಿ ಹಾಕಿ ನಾಶ ಮಾಡುತ್ತೇನೆ ಎಂದು ಧಮಕಿ ಹಾಕುತ್ತದೆ.
ರೇಣುಕಾ ಚೌಧುರಿ ವೈರಸ್ - ಪಬ್ಬುಗಳಿಗೆ ಹೋಗಲು ಪ್ರಚೋದನೆ ನೀಡುತ್ತದೆ.

ಬುಧವಾರ, ಜೂನ್ 17, 2009

ಗಣಕಿಂಡಿ - ೦೦೫ (ಜೂನ್ ೧೫, ೨೦೦೯)

ಅಂತರಜಾಲಾಡಿ

ಡಿಜಿಟಲ್ ಛಾಯಾಗ್ರಹಣ

ಡಿಜಿಟಲ್ ಛಾಯಾಗ್ರಾಹಕಗಳು ಈಗ ಸರ್ವೇಸಾಮಾನ್ಯವಾಗಿಬಿಟ್ಟಿವೆ. ಎಷ್ಟರ ಮಟ್ಟಿಗೆ ಎಂದರೆ ಫಿಲ್ಮ್ ಕ್ಯಾಮರಾಗಳು ಕಣ್ಣಿಗೆ ಬೀಳುವುದೇ ಇಲ್ಲವೆನ್ನಬಹುದು. ಪ್ರತಿ ದಿನ ಹೊಸ ಮಾದರಿಯ ಕ್ಯಾಮರಾಗಳು ಮಾರುಕಟ್ಟೆಗೆ ಬರುತ್ತಿವೆ. ಸಾದಾ ಕ್ಯಾಮರಾಗಳು ಮಾತ್ರವಲ್ಲ ಡಿಜಿಟಲ್ ಎಸ್ಎಲ್ಆರ್ ಕ್ಯಾಮರಾಗಳೂ ಜನಸಾಮಾನ್ಯರ ಕೈಗೆಟುಕುವ ಬೆಲೆಗೆ ಸಿಗುತ್ತಿವೆ. ವಿವಿಧ ನಮೂನೆಯ ಕ್ಯಾಮರಾಗಳ ವಿವರಗಳು, ಬೆಲೆ, ಅವುಗಳ ವಿಮರ್ಶೆ, ಬೇರೆ ಬೇರೆ ಕ್ಯಾಮರಾಗಳ ಹೋಲಿಕೆ, ಉತ್ತಮ ಛಾಯಾಚಿತ್ರ ಸ್ಪರ್ಧೆ, ಇತ್ಯಾದಿ ಎಲ್ಲ ಒಂದೆಡೆ ಕಲೆ ಹಾಕಿರುವ ಬಲು ಉಪಯುಕ್ತ ಜಾಲತಾಣ - www.dpreview.com. ಡಿಜಿಟಲ್ ಕ್ಯಾಮರಾ ಕೊಳ್ಳುವ ಮೊದಲು ಈ ತಾಣಕ್ಕೊಮ್ಮೆ ಭೇಟಿ ನೀಡಿ. ಡಿಜಿಟಲ್ ಛಾಯಾಗ್ರಹಣದ ಮತ್ತು ಛಾಯಾಗ್ರಾಹಕಗಳ ಬಗ್ಗೆ ಚರ್ಚೆ, ವಿಮರ್ಶೆ ಮಾಡುವ ಸೌಲಭ್ಯವೂ ಇಲ್ಲಿದೆ.

ಡೌನ್‌ಲೋಡ್

ನಿಮ್ಮ ಗಣಕದಲ್ಲೊಂದು ತಾರಾಲಯ

ನಿಮಗೆ ಖಗೋಳದಲ್ಲಿ ಆಸಕ್ತಿ ಇದೆಯೇ? ನಿಮ್ಮ ಗಣಕದಲ್ಲೊಂದು ತಾರಾಲಯವನ್ನು ಸ್ಥಾಪಿಸಿದರೆ ಹೇಗ? ಅದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೆ - aciqra.sourceforge.net ಭೇಟಿ ನೀಡಿ ಅಲ್ಲಿ ದೊರಕುವ Aciqra ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಂಡರೆ ಆಯಿತು. ನೈಜತೆಗೆ ಹತ್ತಿರವಾದ ಚಿತ್ರವನ್ನು ನೋಡಬೇಕಾದರೆ ನಿಮ್ಮ ಸ್ಥಳದ ಅಕ್ಷಾಂಶ ರೇಖಾಂಶಗಳನ್ನು ನೀಡಿ. ಆಕಾಶವನ್ನು ನಿಮ್ಮ ಸ್ಥಳದಿಂದ ನೋಡಿದರೆ ಹೇಗೆ ಕಾಣಿಸುವುದೋ ಅದೇ ರೀತಿಯ ಚಿತ್ರ ಮೂಡಿ ಬರುತ್ತದೆ. ಸಮಯವನ್ನು ಬದಲಾವಣೆ ಮಾಡುತ್ತಲೇ ಆಕಾಶದಲ್ಲಾಗುವ ಬದಲಾವಣೆಗಳನ್ನು ನೋಡುವ ಸೌಲಭ್ಯವೂ ಇದೆ. ಗ್ರಹಣಗಳನ್ನು ಕೂಡ ನೋಡಬಹುದು. ಉದಾಹರಣೆಗೆ ಇದೇ ವರ್ಷದ ಜುಲೈ ೨೨ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದನ್ನು ನೋಡಲು ಭೋಪಾಲಿಗೆ ಹೋಗಬೇಕು. ಈ ತಂತ್ರಾಂಶದಲ್ಲಿ ಬೋಪಾಲಿನ ಅಕ್ಷಾಂಶ ರೇಖಾಂಶಗಳನ್ನು ನೀಡಿ (೨೩ಉ, ೭೭ಪೂ), ದಿನಾಂಕವನ್ನು ೨೨ ಜುಲೈ ಬೆಳಿಗ್ಗೆ ೬ ಘಂಟೆಗೆ ಹೊಂದಿಸಿ ಅನಂತರ ಪ್ಲೇ ಗುಂಡಿಯನ್ನು ಒತ್ತಿದರೆ ಸಮಯ ಮುಂದುವರಿಯಲು ಪ್ರಾರಂಭಿಸಿ ಸೂರ್ಯಗ್ರಹಣವನ್ನು ನೋಡಬಹುದು.

e - ಸುದ್ದಿ

ಟ್ವಿಟ್ಟರ್ ಬಳಸಿ ಅತೀಂದ್ರಿಯ ಶಕ್ತಿಯ ಪರೀಕ್ಷೆ

ಕೆಲವು ವ್ಯಕ್ತಿಗಳು ತಮಗೆ ಅತೀಂದ್ರಿಯ ಶಕ್ತಿ ಇದೆ. ತಾವು ಕಣ್ಣಿಗೆ ಕಾಣದ, ದೂರದಲ್ಲಿರುವ, ತಾವು ಇದು ತನಕ ನೋಡದ ಸ್ಥಳವನ್ನು ಅತೀಂದ್ರಿಯ ಶಕ್ತಿಯ ಮೂಲಕ ನೋಡಬಲ್ಲೆವು, ವಿವರಿಸಬಲ್ಲೆವು ಎಂದು ನಂಬಿದ್ದಾರೆ. ಈ ಶಕ್ತಿಯು ಜನರಿಗೆ ನಿಜವಾಗಿಯೂ ಇದೆಯೇ ಎಂಬುದನ್ನು ಪರೀಕ್ಷಿಸಲು ಅಮೆರಿಕ ಸರಕಾರವು ಕಳೆದ ೨೦ ವರ್ಷಗಳಲ್ಲಿ ಹಲವು ಕೋಟಿ ಡಾಲರ್ ಖರ್ಚು ಮಾಡಿದೆ. ಇತ್ತೀಚೆಗೆ ನ್ಯೂ ಸೈಂಟಿಸ್ಟ್ ಪತ್ರಿಕೆಯ ರಿಚರ್ಡ್ ವೈಸ್ಮನ್ ಟ್ವಿಟ್ಟರ್ ಬಳಸಿ ಇದನ್ನು ಪರೀಕ್ಷಿಸಿದರು. ಅವರು ಸಾವಿರಾರು ಜನರನ್ನು ಟ್ವಿಟ್ಟರ್ ಮೂಲಕ ಈ ಪ್ರಯೋಗದಲ್ಲಿ ಭಾಗಿಯಾಗಲು ಆಹ್ವಾನಿಸಿದರು. ಭಾಗವಹಿಸಿದವರಲ್ಲಿ ತಮಗೆ ಅತೀಂದ್ರಿಯ ಶಕ್ತಿ ಇದೆ ಎಂದು ನಂಬಿದವರೂ ನಂಬದವರೂ ಇದ್ದರು. ರಿಚರ್ಡ್ ಅವರು ಪ್ರತಿ ದಿನ ಒಂದು ಅಜ್ಞಾತ ಸ್ಥಳಕ್ಕೆ ಹೋಗಿ ಅಲ್ಲಿಂದ ಟ್ವಿಟ್ಟರಿನಲ್ಲಿ ಆ ಸ್ಥಳದ ಬಗ್ಗೆ ಚುಟುಕವಾಗಿ ಮಾಹಿತಿ ನೀಡಿ ಅದನ್ನು ಊಹಿಸಲು ಜನರಿಗೆ ಆಹ್ವಾನಿಸಿದರು. ಆ ನಂತರ ಆ ಸ್ಥಳದ ಒಂದು ಚಿತ್ರ ನೀಡಿದರು. ಹೀಗೆ ೪ ದಿನ ಮಾಡಿದರು. ಕೊನೆಗೆ ಪರೀಕ್ಷೆಯ ಫಲಿತಾಂಶ ಬಂತು. ಅತೀಂದ್ರಿಯ ಶಕ್ತಿ ಜನರಿಗೆ ಇಲ್ಲ ಎಂಬ ತೀರ್ಮಾನಕ್ಕೆ ಬಂದರು.

e- ಪದ

ನೆಟ್‌ಬುಕ್ (Netbook) - ಕಡಿಮೆ ಶಕ್ತಿಯ, ಲ್ಯಾಪ್‌ಟಾಪ್‌ಗಳಿಗಿಂತ ಸ್ವಲ್ಪ ಚಿಕ್ಕದಾದ, ಬಹುಪಾಲು ಲ್ಯಾಪ್‌ಟಾಪ್‌ನಂತೆಯೇ ಕಾಣುವ ಚಿಕ್ಕ, ಮಡಚಬಲ್ಲ ಗಣಕಗಳು. ಇವುಗಳನ್ನು ಲ್ಯಾಪ್‌ಟಾಪ್‌ನ ತಮ್ಮ/ಮಗ ಎಂದೂ ಕರೆಯಬಹುದೇನೋ? ಇವುಗಳು ಮಾರುಕಟ್ಟೆಗೆ ಬರಲು ಪ್ರಾರಂಭವಾದಾಗ ಇವುಗಳಲ್ಲಿ ಸಿಡಿ, ಡಿವಿಡಿ, ಹಾರ್ಡ್‌‌ಡಿಸ್ಕ್ ಇತ್ಯಾದಿಗಳಿರಲಿಲ್ಲ. ಅಂತರಜಾಲವನ್ನು ಸಂಪರ್ಕಿಸಿ ಎಲ್ಲ ಕೆಲಸ ಮಾಡಲು ಇದನ್ನು ಬಳಸಬಹುದಾಗಿತ್ತು. ಅಂದರೆ ಇವುಗಳ ಪ್ರಮುಖ ಕೆಲಸ ಅಂತರಜಾಲವನ್ನು ಸಂಪರ್ಕಿಸುವುದು. ಆದುದರಿಂದ ಇವುಗಳಿಗೆ ನೆಟ್‌ಬುಕ್ ಎಂಬ ಹೆಸರು ಬಂದದ್ದು. ಆದರೆ ಈಗೀಗ ತಯಾರಾಗುತ್ತಿರುವ ನೆಟ್‌ಬುಕ್‌ಗಳಲ್ಲಿ ಹಾರ್ಡ್‌‌ಡಿಸ್ಕ್‌ಗಳಿವೆ.

e - ಸಲಹೆ

ಸ್ವಲ್ಪ ಸಮಯ ಗಣಕದಿಂದ ದೂರ ಹೋಗುವಾಗ ಗಣಕವನ್ನು ನೀವು ಹೈಬರ್ನೇಟ್ ಮಾಡಿ ಅಥವಾ ಸ್ಟಾಂಡ್‌ಬೈ ಸ್ಥಿತಿಯಲ್ಲಿಟ್ಟು ಹೋಗುತ್ತೀರಾ? ನಿಮ್ಮ ಅನುಪಸ್ಥಿತಿಯಲ್ಲಿ ಗಣಕವನ್ನು ಬೇರೆ ಯಾರೂ ಬಳಸದಂತೆ ಮಾಡಲು ಹೀಗೆ ಮಾಡುವುದು ಸರ್ವೇ ಸಾಮಾನ್ಯ. ನಿಮ್ಮ ಅನುಪಸ್ಥಿತಿಯಲ್ಲಿ ಗಣಕವನ್ನು ಇತರರು ಬಳಸದಂತೆ ಲಾಕ್ ಮಾಡಲು ಒಂದು ಸುಲಭ ವಿಧಾನವಿದೆ. ಕೀಲಿಮಣೆಯಲ್ಲಿರುವ ವಿಂಡೋಸ್ ಕೀಲಿ ಮತ್ತು L ಕೀಲಿಯನ್ನು ಒಟ್ಟಿಗೆ ಒತ್ತಿ.

ಕಂಪ್ಯೂತರ್ಲೆ

ಕಂಪ್ಯೂಟರ್ ಎಂದರೆ ಏನು ಎಂಬ ಪ್ರಶ್ನೆಗೆ ಕೆಲವು ಉತ್ತರಗಳು-
  • ಊಡಿಸಿದ ಮಾಹಿತಿಯನ್ನು (input data) ದೋಷಸಂದೇಶಗಳಾಗಿ (error messages) ಪರಿವರ್ತಿಸುವ ಯಂತ್ರ.
  • ತಮ್ಮ ಮೈಗಳ್ಳತನಕ್ಕೆ ಹೊಣೆಗಾರನಾಗಿ ಸರಕಾರಿ ನೌಕರರು ದೂರುವ ಯಂತ್ರ.
  • ಸಮಯ ಉಳಿಸುವುದಕ್ಕಾಗಿ ಆವಿಷ್ಕಾರವಾಗಿರುವ ಆದರೆ ಸಮಯ ಹಾಳು ಮಾಡಲು ಬಳಕೆಯಾಗುತ್ತಿರುವ ಯಂತ್ರ.

ಸೋಮವಾರ, ಜೂನ್ 8, 2009

ಗಣಕಿಂಡಿ - ೦೦೪ (ಜೂನ್ ೦೮, ೨೦೦೯)

ಅಂತರಜಾಲಾಡಿ

ಪಿಯುಸಿ ನಂತರ ಮುಂದೆ ಸೇರಲು ಕಾಲೇಜುಗಳ ವಿವರ ಇರುವ ಜಾಲತಾಣದ ವಿಳಾಸ ಕಳೆದ ವಾರ ಕೊಡಲಾಗಿತ್ತು. ಈಗಷ್ಟೇ ಅದೇ ಮಾದರಿಯ ಆದರೆ ಇನ್ನಷ್ಟು ಹೆಚ್ಚು ಮಾಹಿತಿಗಳ ಮತ್ತೊಂದು ಜಾಲತಾಣ ಸೃಷ್ಟಿಯಾಗಿದೆ. ಇದರ ವಿಳಾಸ www.colkonnect.com ಬಹುಶಃ ಇವರು ಗೂಗ್ಲ್‌ನವರಿಂದ ತುಂಬ ಪ್ರಭಾವಿತರಾಗಿರಬೇಕು. ಯಾಕೆಂದರೆ ಬೀಟಾ (Beta) ಎಂದು ಹಾಕಿಕೊಂಡಿದ್ದಾರೆ. ಇದರಲ್ಲಿ ಕರ್ನಾಟಕದ ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಮಾತ್ರ ಇದೆ. ಈ ತಾಣದ ವೈಶಿಷ್ಟ್ಯವೆಂದರೆ ಕಾಲೇಜುಗಳ ರ್ಯಾಂಕಿಂಗ್, ಅಂದರೆ ಕರ್ನಾಟಕದ ಯಾವ ಕಾಲೇಜು ಯಾವ ಸ್ಥಾನದಲ್ಲಿದೆ, ಹೋದ ವರ್ಷಗಳಲ್ಲಿ ಇಲ್ಲಿಗೆ ಸೇರಬೇಕಾದರೆ ಸಿಇಟಿ ಪರೀಕ್ಷೆಯಲ್ಲಿ ಯಾವ ಸ್ಥಾನ ಬಂದಿರಬೇಕಿತ್ತು, ಇತ್ಯಾದಿ ಮಾಹಿತಿಗಳಿವೆ. ಒಂದು ಕೋರ್ಸು ಮಾಡಲು ಎಷ್ಟು ಖರ್ಚು ಆಗಬಹುದು ಎಂಬ ಲೆಕ್ಕ ಮಾಡುವ ಸೌಲಭ್ಯವೂ ಇದೆ.

ಡೌನ್‌ಲೋಡ್

ಛಾಯಾಚಿತ್ರದಿಂದ ಕಲಾಚಿತ್ರ

ನಿಮ್ಮ ಛಾಯಾಚಿತ್ರವನ್ನು ಕಲಾಚಿತ್ರವಾಗಿ ಪರಿವರ್ತಿಸಬೇಕೇ? ಅದಕ್ಕಾಗಿ ಉತ್ತಮ ಕಲಾವಿದರನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. www.fotosketcher.com ತಾಣದಿಂದ ಫೋಟೋಸ್ಕೆಚರ್ ಎಂಬ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ನಿಮ್ಮ ಛಾಯಾಚಿತ್ರವನ್ನು ಅದಕ್ಕೆ ನೀಡಿ ಕೆಲವು ಆಯ್ಕೆಗಳನ್ನು ಮಾಡಿಕೊಂಡು ಆದೇಶ ನೀಡಿದರೆ ನಿಮ್ಮ ಕಲಾಚಿತ್ರ ಸಿದ್ಧ. ಪೆನ್ಸಿಲ್, ಶಾಯಿ ಅಥವಾ ಬಣ್ಣದ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಹುಡುಗಿಯರು ಆರ್ಕುಟ್‌ನಂತಹ ತಾಣಗಳಲ್ಲಿ ತಮ್ಮ ಛಾಯಾಚಿತ್ರಗಳನ್ನು ಹಾಕುವುದು ಅಷ್ಟು ಒಳ್ಳೆಯದಲ್ಲ. ಅವರು ಈ ತಂತ್ರಾಂಶವನ್ನು ಬಳಸಿ ಛಾಯಾಚಿತ್ರವನ್ನು ಕಲಾಚಿತ್ರವನ್ನಾಗಿಸಿ ಹಾಕಬಹುದು.

e - ಸುದ್ದಿ

ಬುದ್ಧ ನಕ್ಕ

ತಮ್ಮ ಸಾವಿರಾರು ವರ್ಷ ಹಳೆಯ ಸಂಪ್ರದಾಯಗಳ ಆಚರಣೆಗೆ ತಂತ್ರಜ್ಞಾನವನ್ನು ಬಳಸುವಲ್ಲಿ ಜಪಾನೀಯರದು ಎತ್ತಿದ ಕೈ. ಈಗ ಅಲ್ಲಿ ಬುದ್ಧ ಫೋನು ತಯಾರಾಗಿದೆ. ಬೌದ್ಧ ಧರ್ಮೀಯರು ತಮ್ಮ ಧಾರ್ಮಿಕ ವಿಧಿಗಳನ್ನು ಆಚರಿಸಲು ಸಹಾಯವಾಗುವಂತಹ ಸವಲತ್ತುಗಳನ್ನು ಈ ಫೋನಿನಲ್ಲಿ ನೀಡಿದ್ದಾರೆ. ಉದಾಹರಣೆಗೆ ಗುಂಡಿ ಒತ್ತಿದೊಡನೆ ಮುಗುಳುನಗುವ ಬುದ್ಧನ ಚಿತ್ರ ಮೂಡಿಬರುತ್ತದೆ. ಒಂದೇ ಚಿತ್ರವಲ್ಲ. ಹಲವು ಅವತಾರಗಳ ಚಿತ್ರಗಳಲ್ಲಿ ಯಾವುದನ್ನು ಬೇಕೋ ಅದನ್ನು ಆಯ್ಕೆ ಮಾಡುವ ಸವಲತ್ತು ಇದೆ. ಬೌದ್ಧರು ಇದನ್ನು ನೋಡಿಕೊಂಡು ತಮ್ಮ ಪ್ರಾರ್ಥನಾವಿಧಿಗಳನ್ನು ನೆರವೇರಿಸಿಕೊಳ್ಳಬಹುದು. ನಮ್ಮ ದೇವರುಗಳಿಗೆ ಇಂತಹ ಫೋನುಗಳನ್ನು ತಯಾರಿಸುವುದಾದರೆ ಬೇಕಾದಷ್ಟು ಅವಕಾಶಗಳಿವೆ. ಫೋನು ತಯಾರಕರೇ, ಕೇಳಿಸಿಕೊಳ್ಳುತ್ತಿದ್ದೀರಾ?

e- ಪದ

ಬ್ಲೂಟೂತ್ (Bluetooth) - ನಿಸ್ತಂತು (ವಯರ್ಲೆಸ್) ತಂತ್ರಜ್ಞಾನ ಮೂಲಕ ತಂತಿ ಇಲ್ಲದೆ ಸಂಪರ್ಕ ಸಾಧಿಸುವ ಇನ್ನೊಂದು ವಿಧಾನ. ಇದನ್ನು ಸಾಮಾನ್ಯವಾಗಿ ಹೆಡ್‌ಫೋನ್‌ಗಳನ್ನು ಮೊಬೈಲ್ ಫೋನಿಗೆ ಜೋಡಿಸಲು ಬಳಸುತ್ತಾರೆ. ಗಣಕದಿಂದ ಸಂಪರ್ಕ ಸಾಧಿಸಲೂ ಬಳಸಬಹುದು. ಇದರ ವ್ಯಾಪ್ತಿ ಮತ್ತು ಮಾಹಿತಿಯ ಸಾರಿಗೆಯ ಶಕ್ತಿ ತುಂಬ ಕಡಿಮೆ. ಒಂದು ಮೊಬೈಲ್ ಫೋನಿನಿಂದ ಇನ್ನೊಂದು ಮೊಬೈಲ್ ಫೋನಿಗೆ ಬ್ಲೂಟೂತ್ ಮೂಲಕ ಒಂದು ಛಾಯಾಚಿತ್ರ ಕಳುಹಿಸಲು ಸುಮಾರು ಎರಡರಿಂದ ಐದಾರು ನಿಮಿಷ ಹಿಡಿಯುವ ಸಾಧ್ಯತೆಗಳಿವೆ. ಇತ್ತೀಚೆಗಿನ ದಿನಗಳಲ್ಲಿ ಕಾರಿನಲ್ಲಿ ಜೋಡಿಸುವ ಸಂಗೀತ ಉಪಕರಣಗಳಲ್ಲೂ ಈ ಸೌಲಭ್ಯ ದೊರಕುತ್ತಿದೆ.

e - ಸಲಹೆ

ಪೇಜ್‌ಮೇಕರ್ ಬಳಸಿ ಕನ್ನಡದ ಕಡತಗಳನ್ನು ತಯಾರಿಸುವಾಗ ಒಂದು ಸಮಸ್ಯೆ ಕಾಡುತ್ತದೆ. ಅದೇನೆಂದರೆ ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ತಯಾರಿಸಿದ ಫೈಲುಗಳನ್ನು ಆಯಾತ ಮಾಡುವ ಸಮಸ್ಯೆ. ವರ್ಡ್‌ನಲ್ಲಿ ಬೆರಳಚ್ಚು ಮಾಡಿ DOC ಆಗಿ ಉಳಿಸಿದರೆ ಅದನ್ನು ಪೇಜ್‌ಮೇಕರ್ ಗುರುತಿಸುವುದಿಲ್ಲ. RTF ಆಗಿ ಉಳಿಸಿದರೆ ಪೇಜ್‌ಮೇಕರ್ ಗುರುತಿಸುತ್ತದೆ. ಆದರೆ ಆಯಾತ ಮಾಡಿದಾಗ ಸರಿಯಾಗಿ ಬರುವುದಿಲ್ಲ. ಇದಕ್ಕೆ ಪರಿಹಾರವೆಂದರೆ ವರ್ಡ್‌ನಲ್ಲಿರುವ ಮಾಹಿತಿಯನ್ನು ನಕಲು ಮಾಡಿ ವರ್ಡ್‌‌ಪ್ಯಾಡ್‌ಗೆ ಅಂಟಿಸಿ ಅನಂತರ ಅದನ್ನು RTF ಫೈಲ್ ಆಗಿ ಉಳಿಸುವುದು. ವರ್ಡ್‌‌ಪ್ಯಾಡ್‌ನಿಂದ RTF ಆಗಿ ಉಳಿಸಿದ ಕನ್ನಡದ ಫೈಲನ್ನು ಪೇಜ್‌ಮೇಕರ್ ಯಾವುದೇ ಕಿರಿಕಿರಿಯಿಲ್ಲದೆ ಆಯಾತ ಮಾಡಿಕೊಳ್ಳುತ್ತದೆ.

ಕಂಪ್ಯೂತರ್ಲೆ

ತರ್ಲೆ ಅನುವಾದಗಳು

ಗಣಕದಲ್ಲಿ ಬಳಸುವ ಇಂಗ್ಲಿಶ್ ಪದಗಳನ್ನು ಕನ್ನಡಕ್ಕೆ ಅನುವಾದ ಮಾಡಿದಾಗ-
Save = ಕಾಪಾಡಿ
Save as = ಈ ರೀತಿ ಕಾಪಾಡಿ
Help = ನನ್ನನ್ನು ಕಾಪಾಡಿ
Save and Exit = ಕಾಪಾಡಿ ಮತ್ತು ತೊಲಗಿ
Open = ಬಿಚ್ಚು
Bold = ಧೈರ್ಯವಂತ
Bluetooth = ನೀಲಿಹಲ್ಲು

ಮಂಗಳವಾರ, ಜೂನ್ 2, 2009

ಗಣಕಿಂಡಿ - ೦೦೩ (ಜೂನ್ ೦೧, ೨೦೦೯)

ಅಂತರಜಾಲಾಡಿ

ಪಿಯುಸಿ ನಂತರ ಯಾವ ಕಾಲೇಜು?

ಈಗಷ್ಟೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಜೊತೆಗೆ ಸಿಇಟಿ ಫಲಿತಾಂಶಗಳು ಹೊರಬಿದ್ದಿವೆ. ಮುಂದಿನ ಹಾದಿ ಹುಡುಕುವ ಕೆಲಸ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು/ಪೋಷಕರದಾಗಿದೆ. ಕರ್ನಾಟಕದಲ್ಲಿ ನೂರಾರು ಕಾಲೇಜುಗಳಿವೆ. ಹಲವಾರು ಕೋರ್ಸುಗಳಿವೆ. ಎಲ್ಲೆಲ್ಲಿ ಯಾವ ಯಾವ ಕಾಲೇಜುಗಳಿವೆ, ಅಲ್ಲಿ ಯಾವ ಯಾವ ವಿಷಯಗಳಿವೆ, ಕಾಲೇಜಿಗೆ ಅರ್ಜಿ ಸಲ್ಲಿಸುವ ವಿಧಾನ, ಕಾಲೇಜಿನ ಜಾಲತಾಣದ ವಿಳಾಸ -ಇತ್ಯಾದಿಗಳೆಲ್ಲ ಒಂದೆಡೆ ಸಿಗುವ ಜಾಲತಾಣ -www.gettarget.com. ಅಷ್ಟು ಮಾತ್ರವಲ್ಲ. ಈ ತಾಣದ ಮೂಲಕವೇ ಕರ್ನಾಟಕದ ಎಲ್ಲ ಕಾಲೇಜುಗಳಿಗೆ ಏಕಕಾಲಕ್ಕೆ ಅರ್ಜಿ ಸಲ್ಲಿಸಬಹುದು. ಇಂಜಿನಿಯರಿಂಗ್, ವೈದ್ಯಕೀಯ, ಮ್ಯಾನೇಜ್ಮೆಂಟ್, ಇತ್ಯಾದಿ ವಿಷಯಗಳಲ್ಲಿ ಉತ್ತಮ ಕಾಲೇಜುಗಳ ಪಟ್ಟಿ (ಟಾಪ್ ೧೦) ಕೂಡ ಈ ತಾಣದಲ್ಲಿದೆ.

ಡೌನ್‌ಲೋಡ್

ಸಂಗೀತ ಮತ್ತು ಚಲನಚಿತ್ರ ಸಂಪಾದಕ/ಪರಿವರ್ತಕ

ಆಪಲ್ ಐಪಾಡ್ ಹಾಗೂ ಅದೇ ಮಾದರಿಯ ಸಂಗೀತ ಮತ್ತು ಚಲನಚಿತ್ರ ಪ್ಲೇಯರ್ ಸಾಧನಗಳು ಮಾರುಕಟ್ಟೆಯಲ್ಲಿ ಹಲವಾರಿವೆ. ಒಂದೊಂದು ಉಪಕರಣವೂ ಒಂದೊಂದು ರೀತಿಯ ಫೈಲ್‌ಗಳನ್ನು ಬಳಸುತ್ತವೆ. ಅದೇ ರೀತಿಯಲ್ಲಿ ಗಣಕ ಮತ್ತು ಅಂತರಜಾಲದಲ್ಲಿ ಲಭ್ಯವಿರುವ ಸಂಗೀತ ಹಾಗೂ ಚಲನಚಿತ್ರಗಳು ಹಲವು ವಿಧದಲ್ಲಿವೆ. ಹಾಗೆಯೇ ನಮ್ಮ ನಿಮ್ಮಲ್ಲಿರುವ ಸಂಗೀತ ಮತ್ತು ಚಲನಚಿತ್ರ ಸಿ.ಡಿ., ಡಿ.ವಿ.ಡಿ.ಗಳನ್ನು ಗಣಕಕ್ಕೆ ಮತ್ತು ಐಪಾಡ್ ಮಾದರಿಯ ಉಪಕರಣಗಳಿಗೆ ಪರಿವರ್ತಿಸಬೇಕಾಗಿದೆ. ಈ ಎಲ್ಲ ಕೆಲಸಗಳನ್ನು ಮಾಡಬಲ್ಲ ತಂತ್ರಾಂಶಗಳು ಹಲವಾರಿವೆ. ಹೆಚ್ಚಿನ ತಂತ್ರಾಂಶಗಳು ದುಬಾರಿ ಬೆಲೆಬಾಳುತ್ತವೆ. ಎಲ್ಲ ಸೌಲಭ್ಯಗಳನ್ನು ಹೊಂದಿದ್ದೂ ಸಂಪೂರ್ಣ ಉಚಿತ ಹಾಗೂ ಮುಕ್ತ ತಂತ್ರಾಂಶವೊಂದಿದೆ (opensource software). ಅದುವೇ ಮೀಡಿಯಾಕೋಡರ್. ಇದರ ಜಾಲತಾಣ www.mediacoderhq.com. ಇದನ್ನು ಬಳಸುವುದನ್ನು ಕಲಿತರೆ ನಿಮ್ಮ ಮದುವೆಯ ಡಿವಿಡಿಯನ್ನು ಐಪಾಡ್‌ಗೆ ಪರಿವರ್ತಿಸಲು ನೀವು ಯಾವುದೆ ಪರಿಣತರನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ.

e - ಸುದ್ದಿ

ಮಕ್ಕಳಿಗೆ ಅರಿವಳಿಕೆ ನೀಡುವುದು ಹೇಗೆ?

ತುಂಬ ಚುರುಕಾಗಿರುವ ಹಾಗೂ ಸದಾ ಚಟುವಟಿಕೆಯಿಂದಿರುವ ಮಕ್ಕಳಿಗೆ ಚಿಕಿತ್ಸೆ ಮಾಡಲು ಅರಿವಳಿಕೆ (ಅನಸ್ತೇಶಿಯಾ) ನೀಡುವ ಸಮಸ್ಯೆ ವೈದ್ಯರನ್ನು ಆಗಾಗ ಬಾಧಿಸುತ್ತದೆ. ಮಕ್ಕಳನ್ನು ಒಂದು ಕಡೆ ಸುಮ್ಮನೆ ಕೂಡಿಸಿ ಇಂಜಕ್ಷನ್ ನೀಡುವುದು ಅಷ್ಟು ಸುಲಭದ ಕೆಲಸವಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಅಮೆರಿಕದ ಫಿಲಡೆಲ್ಪಿಯಾದಲ್ಲಿರುವ ವೈದ್ಯ ಹಾರ್ಟ್ ಅವರು ಮಕ್ಕಳಿಗೆ ಅರಿವಳಿಕೆ ನೀಡಲು ಒಂದು ಆಟದ ಸಾಧನವನ್ನು ಆವಿಷ್ಕರಿಸಿದ್ದಾರೆ. ಇದು ಒಂದು ಹೆಡ್ಫೋನ್ ಮಾದರಿಯಲ್ಲಿದೆ. ನೈನ್ಟೆನ್ಡು ಅಥವಾ ಸೋನಿ ಪ್ಲೇಸ್ಟೇಶನ್ ಮಾದರಿಯ ಆಟದ ಸಾಮಾನು ಅಥವಾ ಸಿ.ಡಿ. ಪ್ಲೇಯರ್ಗೆ ಇದನ್ನು ಹೆಡ್ಫೋನ್ ಬದಲಿಗೆ ಜೋಡಿಸಿ ಬಳಸಬಹುದು. ಮಕ್ಕಳು ಆಟ ಆಡುತ್ತ ಅಥವಾ ಸಂಗೀತ ಕೇಳುತ್ತ ನಿಧಾನವಾಗಿ ಹೆಡ್ಫೋನ್ ಮೂಲಕ ಬರುವ ಅರಿವಳಿಕೆ ಅನಿಲವನ್ನು ಸೇವಿಸಿ ಎಚ್ಚರ ತಪ್ಪುತ್ತಾರೆ.

e- ಪದ

ಯುಎಸ್‌ಬಿ (USB) - ಇದು ಯುನಿವರ್ಸಲ್ ಸೀರಿಯಲ್ ಬಸ್ ಎನ್ನುವುದರ ಸಂಕ್ಷಿಪ್ತ ರೂಪ. ಗಣಕಗಳಲ್ಲಿ ಯುಎಸ್‌ಬಿ ಹೆಸರಿನ ಪುಟ್ಟ ಕಿಂಡಿ (USB port) ಇರುತ್ತದೆ. ಈ ಕಿಂಡಿಯನ್ನು ಬಳಸುವ ಸಾಧನಗಳನ್ನು ಯುಎಸ್‌ಬಿ ಡ್ರೈವ್ ಎಂದು ಕರೆಯುತ್ತಾರೆ. ಇಂತಹ ಸಾಧನಗಳಲ್ಲಿ ತುಂಬ ವೈವಿಧ್ಯವಿದೆ. ಇವುಗಳಲ್ಲಿ ತುಂಬ ಜನಪ್ರಿಯವಾದವೆಂದರೆ ಪೆನ್ ಡ್ರೈವ್ ಅಥವಾ ಥಂಬ್ ಡ್ರೈವ್. ಇವುಗಳನ್ನು ಮಾಹಿತಿಯ ಸಂಗ್ರಹ ಮತ್ತು ವಿನಿಮಯಕ್ಕೆ ಬಳಸುತ್ತಾರೆ. ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಂತೂ ಕುತ್ತಿಗೆಗೆ ಈ ಸಾಧನವನ್ನು ನೇತಾಡಿಸಿಕೊಂಡು ಓಡಾಡುವವರನ್ನು ಕಾಣುವುದು ಸಹಜವಾಗಿದೆ. ಇತ್ತೀಚೆಗಿನ ಮೊಬೈಲ್ ಫೋನ್, ಐಪಾಡ್ ಮಾದರಿಯ ಸಂಗೀತ ಉಪಕರಣ, ಕ್ಯಾಮರಾ -ಇವೆಲ್ಲ ಗಣಕಕ್ಕೆ ಯುಎಸ್‌ಬಿ ಕಿಂಡಿಯ ಮೂಲಕವೇ ಜೋಡಣೆಯಾಗುತ್ತವೆ.

e - ಸಲಹೆ

ದಾರಿ ಯಾವುದಯ್ಯ ಡೆಸ್ಕ್‌ಟಾಪ್‌ಗೆ?

(ಗಣಕಿಂಡಿ ಓದುಗರಲ್ಲೊಬ್ಬರಾದ ಹಿರಿಯ ಪತ್ರಕರ್ತ, ಖ್ಯಾತ ವಿಜ್ಞಾನ ಲೇಖಕ, ನಾಗೇಶ ಹೆಗಡೆಯವರು ಇಮೈಲ್ ಮೂಲಕ ಕೇಳಿದ ಸಮಸ್ಯೆಗೆ ಪರಿಹಾರ)

ಗಣಕದಲ್ಲಿ ಹಲವಾರು ವಿಂಡೋಗಳನ್ನು ತೆರೆದಿದ್ದಾಗ ಡೆಸ್ಕ್ಟಾಪ್ಗೆ ಹೋಗಬೇಕಾದಾಗ ಏನು ಮಾಡುತ್ತೀರಿ? ಎಲ್ಲ ವಿಂಡೋಗಳನ್ನು ಕಿರಿದುಗೊಳಿಸುತ್ತಾ (ಮಿನಿಮೈಸ್ ಮಾಡುವುದು) ಹೋದಾಗ ಕೊನೆಗೆ ಡೆಸ್ಕ್‌ಟಾಪ್ ಸಿಗುತ್ತದೆ. ಆದರೆ ಡೆಸ್ಕ್‌ಟಾಪ್‌ಗೆಂದೇ ಒಂದು ಶಾರ್ಟ್‌‌ಕಟ್ (ಅಡ್ಡದಾರಿ?) ಇದೆ. ಪರದೆಯ ಕೆಳಭಾಗದಲ್ಲಿರುವ ಟಾಸ್ಕ್‌ಬಾರ್‌ನ ಎಡ ಭಾಗದಲ್ಲಿ, ಅಂದರೆ ಸ್ಟಾರ್ಟ್ ಬಟನ್‌ನ ಬಲಭಾಗದಲ್ಲಿ ಕ್ವಿಕ್ ಲಾಂಚ್ ಎಂಬ ಭಾಗದಲ್ಲಿ Show Desktop ಎಂಬ ಐಕಾನ್ ಇದೆ. ಅದನ್ನು ಕ್ಲಿಕ್ ಮಾಡಿದರೆ ಆಯಿತು. ತುಂಬ ಸರಳ. ಈ ಕ್ವಿಕ್ ಲಾಂಚ್ ಕಾಣಿಸುತ್ತಿಲ್ಲವಾದಲ್ಲಿ ಟಾಸ್ಕ್‌ಬಾರ್‌ನ ಮೇಲೆ ಮೌಸ್‌ನ ಬಲಗುಂಡಿಯನ್ನು ಕ್ಲಿಕ್ ಮಾಡಿ Properties ಅನ್ನು ಆಯ್ಕೆ ಮಾಡಿ ನಂತರ Show quick launch ಅನ್ನು ಆಯ್ಕೆ ಮಾಡಿ.

ಕಂಪ್ಯೂತರ್ಲೆ

ಕೋಲ್ಯನಿಗೊಂದು ಕನ್ನಡಿ ಬೇಕಾಗಿತ್ತು. ಗಣಕದ ಪರದೆಯನ್ನೇ ಕನ್ನಡಿಯಂತೆ ಬಳಸಲು ಆಗುವುದಿಲ್ಲವೇ ಎಂಬ ಒಂದು ಆಲೋಚನೆ ಆತನಿಗೆ ಬಂತು. ಅದಕ್ಕಾಗಿ ಆತ ಒಂದು ಕನ್ನಡಿಯನ್ನು ಸ್ಕ್ಯಾನರ್ ಮೇಲೆ ಇಟ್ಟು ಸ್ಕ್ಯಾನ್ ಮಾಡಿದ. ಹಾಗೆ ದೊರೆತ ಚಿತ್ರವನ್ನು ಗಣಕದ ಪರದೆಯಲ್ಲಿ ಮೂಡಿಸಿ ಅದನ್ನು ಕನ್ನಡಿಯಂತೆ ಬಳಸಲು ಪ್ರಯತ್ನಿಸಿದ!