ಮಂಗಳವಾರ, ಜುಲೈ 21, 2009

ಗಣಕಿಂಡಿ - ೦೧೦ (ಜುಲೈ ೨೦, ೨೦೦೯)

ಅಂತರಜಾಲಾಡಿ

ಉಚಿತ ಫಾಂಟ್‌ಗಳು

ಗಣಕದಲ್ಲಿ ಊಡಿಸಿದ ಮಾಹಿತಿಯನ್ನು ಪರದೆಯ ಮೇಲೆ ಮೂಡಿಸಲು ಅಥವಾ ಮುದ್ರಿಸಲು ಬಳಸುವ ಅಕ್ಷರಶೈಲಿಗಳಿಗೆ ಗಣಕ ಪರಿಭಾಷೆಯಲ್ಲಿ ಫಾಂಟ್ ಎನ್ನುತ್ತಾರೆ. ಹಲವು ವಿನ್ಯಾಸಗಳ ಫಾಂಟ್‌ಗಳಿರುವುದು ಗಣಕ ಬಳಸುವ ಎಲ್ಲರಿಗೂ ತಿಳಿದಿರುವ ವಿಷಯ. ಪುಸ್ತಕ ವಿನ್ಯಾಸ ಮಾಡುವವರು ಅಥವಾ ಆಹ್ವಾನ ಪತ್ರಿಕೆ ತಯಾರಿಸುವವರು ಹಲವು ನಮೂನೆಯ ಫಾಂಟ್‌ಗಳನ್ನು ತಮ್ಮ ಗಣಕದಲ್ಲಿ ಇಟ್ಟುಕೊಂಡಿರುತ್ತಾರೆ. ಸಾಮಾನ್ಯವಾಗಿ ಈ ರೀತಿಯ ವಿವಿಧ ವಿನ್ಯಾಸದ ಫಾಂಟ್‌ಗಳನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಬೇಕು. ಸಾವಿರಾರು ಉಚಿತ ಫಾಂಟ್‌ಗಳು ದೊರಕುವ ಜಾಲತಾಣ www.dafont.com. ಆದರೆ ಇಲ್ಲಿ ಭಾರತೀಯ ಭಾಷೆಯ ಫಾಂಟ್‌ಗಳು ಇಲ್ಲ.

ಡೌನ್‌ಲೋಡ್

ಗಣಕಕ್ಕೊಂದು ಪೊರಕೆ

ಗಣಕ ಬಳಸುತ್ತಿದ್ದಂತೆ ಅದರಲ್ಲಿ ಬೇಡವಾದ ಮಾಹಿತಿಗಳು ಶೇಖರವಾಗುತ್ತ ಹೋಗುತ್ತವೆ. ಇವು ಕುಲಗೆಟ್ಟ ಫೈಲುಗಳು, ಅಂತರಜಾಲತಾಣ ವೀಕ್ಷಣೆ ಮಾಡುವಾಗ ಶೇಖರಗೊಂಡ ಫೈಲುಗಳು, ತಂತ್ರಾಂಶಗಳನ್ನು ತೆಗೆದುಹಾಕುವಾಗ ಅರೆಬರೆಯಾಗಿ ಉಳಿದ ಫೈಲುಗಳು -ಹೀಗೆ ಹಲವು ರೀತಿಯ ಕಚಡಗಳಿರಬಹುದು. ಇವು ಗಣಕದ ಹಾರ್ಡ್‌ಡಿಸ್ಕ್‌ನಲ್ಲಿ ಜಾಗವನ್ನು ಸುಮ್ಮನೆ ಹಾಳು ಮಾಡುತ್ತಿರುತ್ತವೆ. ಇವುಗಳನ್ನು ಆಗಾಗ ಸ್ವಚ್ಛ ಮಾಡಿದರೆ ಒಳ್ಳೆಯದು. ಇದಕ್ಕಾಗಿ ಸಿಕ್ಲೀನರ್ ಎನ್ನುವ ತಂತ್ರಾಂಶವನ್ನು ಬಳಸಬಹುದು. ಇದು ದೊರೆಯುವ ಜಾಲತಾಣ - www.ccleaner.com. ಇದು ಹಾರ್ಡ್‌ಡಿಸ್ಕ್‌ನಲ್ಲಿರುವ ಕಚಡ ಮಾತ್ರವಲ್ಲ, ಬ್ರೌಸರ್‌ನಲ್ಲಿ ನೀವು ವೀಕ್ಷಿಸಿದ ಜಾಲತಾಣಗಳ ಪಟ್ಟಿ, ತಾತ್ಕಾಲಿಕ ಫೈಲುಗಳು, ಕುಕಿ, ರಿಸೈಕ್ಲ್ ಬಿನ್ ಎಲ್ಲ ಗುಡಿಸಿಹಾಕುತ್ತದೆ. ಆಗಾಗ ಇದನ್ನು ಚಾಲನೆ ಮಾಡಿದರೆ ನಿಮ್ಮ ತಂತ್ರಾಂಶಗಳಿಗೆ ಹೆಚ್ಚು ಜಾಗ ದೊರೆಯುವಂತಾಗುತ್ತದೆ.

e - ಸುದ್ದಿ

ಯುವಕ ಯುವತಿಯರು ಯಾವಾಗ ನೋಡಿದರೂ ಮೊಬೈಲ್ ಫೋನು ಹಿಡಿದುಕೊಂಡು ಕಿರು ಸಂದೇಶ ಕಳುಹಿಸುತ್ತಲೇ ಇರುವುದನ್ನು ಗಮನಿಸಿರಬಹುದು. ಈಗಂತೂ ಮೈಕ್ರೋಬ್ಲಾಗಿಂಗ್ ಮತ್ತು ಟ್ವಿಟ್ಟರ್ ಬಂದ ಮೇಲೆ ಕೇಳುವುದೇ ಬೇಡ. ಫೋನಿನಲ್ಲಿ ಸಂದೇಶ ಕುಟ್ಟುತ್ತ ಸುತ್ತ ಮುತ್ತ ಏನು ನಡೆಯುತ್ತಿದೆ ಎಂಬ ಪರಿವೆಯೇ ಇರುವುದಿಲ್ಲ. ಅಮೆರಿಕ ದೇಶದಲ್ಲಿ ೧೫ ವರ್ಷದ ಹುಡುಗಿಯೊಬ್ಬಳು ರಸ್ತೆ ಪಕ್ಕ ನಡೆಯುತ್ತ ಮೊಬೈಲ್ ಫೋನಿನಲ್ಲಿ ಸಂದೇಶ ಕುಟ್ಟುತ್ತ ತೆರೆದಿದ್ದ ಮ್ಯಾನ್‌ಹೋಲ್ ಮೂಲಕ ಚರಂಡಿಯೊಳಗೆ ಬಿದ್ದಳು. ಚರಂಡಿ ಮುಚ್ಚಳ ತೆರೆದಿದ್ದದ್ದು ಅವಳಿಗೆ ಗೊತ್ತಾಗಲಿಲ್ಲ. ಜನರೆಲ್ಲ ಸೇರಿ ಅವಳನ್ನು ಸುರಕ್ಷಿತವಾಗಿ ಮೇಲೆ ಎಳೆದರೆನ್ನಿ. ಆದರೆ ಅವಳ ತಂದೆ ಮಾತ್ರ ಚರಂಡಿ ಮುಚ್ಚದೆ ಬಿಟ್ಟದ್ದಕ್ಕಾಗಿ ಮುನಿಸಿಪಾಲಿಟಿಯ ಮೇಲೆ ಕೋರ್ಟಿನಲ್ಲಿ ಕೇಸು ದಾಖಲಿಸಿರುವುದು ವರದಿಯಾಗಿದೆ. ಭಾರತದಲ್ಲಿ ಹೀಗೆ ಆಗುವುದು ಕಡಿಮೆ, ಯಾಕೆಂದರೆ ಯಾರೂ ರಸ್ತೆ ಪಕ್ಕದ ಪಾದಚಾರಿ ದಾರಿಯಲ್ಲಿ ನಡೆಯುವುದೇ ಇಲ್ಲ; ಎಲ್ಲರೂ ರಸ್ತೆಯಲ್ಲೇ ನಡೆಯುತ್ತಾರೆ ಎನ್ನುತ್ತೀರಾ?

e- ಪದ

ಸಿಲ್ವರ್‌ಲೈಟ್ (Silverlight) - ಚಿತ್ರಸಂಚಲನೆ (ಅನಿಮೇಶನ್) ಮತ್ತು ವಿಡಿಯೋಗಳನ್ನು ಅಂತರಜಾಲ ಮೂಲಕ ತೋರಿಸಲು ಮತ್ತು ಪ್ರತಿಸ್ಪಂದನಾತ್ಮಕವಾಗಿ ಕೆಲಸ ಮಾಡಲು ಮೈಕ್ರೋಸಾಫ್ಟ್‌ನವರು ಹೊರತಂದಿರುವ ಒಂದು ತಂತ್ರಾಂಶ ಸವಲತ್ತು. ಇದು ಮೈಕ್ರೋಸಾಫ್ಟ್‌ನವರ ತಂತ್ರಾಂಶಗಳಾದ ವಿಂಡೋಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಮಾತ್ರವಲ್ಲದೆ ಫೈರ್‌ಪಾಕ್ಸ್ ಮತ್ತು ಸಫಾರಿ ಬ್ರೌಸರ್‌ಗಳಲ್ಲೂ ಕೆಲಸ ಮಾಡುತ್ತದೆ. ಇದು ಅಡೋಬ್ ಕಂಪೆನಿಯರ ಫ್ಲಾಶ್ ಮತ್ತು ಆಪಲ್ ಕಂಪೆನಿಯವರ ಕ್ವಿಕ್‌ಟೈಮ್ ತಂತ್ರಾಂಶಗಳಿಗೆ ಪ್ರತಿಸ್ಪರ್ಧಿಯಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ silverlight.net ಜಾಲತಾಣ ನೋಡಬಹುದು.

e - ಸಲಹೆ

ಗಣಕದಲ್ಲಿ ಸಿ.ಡಿ. ಅಥವಾ ಯುಎಸ್‌ಬಿ ಡ್ರೈವ್ ತೂರಿಸಿದೊಡನೆ ಆಟೋಪ್ಲೇ ಚಾಲೂ ಆಗುತ್ತದೆ. ಸಾಮಾನ್ಯವಾಗಿ ಸಿ.ಡಿ. ಆದರೆ ಸಿ.ಡಿ.ಯಲ್ಲಿರುವ ಪ್ರಾರಂಭದ ತಂತ್ರಾಂಶ ತಂತಾನೇ ಚಾಲೂ ಆಗುತ್ತದೆ. ಯುಎಸ್‌ಬಿಯಲ್ಲಾದರೆ ಡ್ರೈವ್‌ನ ಫೈಲುಗಳ ಪಟ್ಟಿ ತೆರೆಯುತ್ತದೆ. ಯುಎಸ್‌ಬಿ ಡ್ರೈವ್‌ನಲ್ಲಿ ಕೂಡ ಆಟೋಪ್ಲೇ ತಂತ್ರಾಂಶ ಇದ್ದರೆ ಅದು ಚಾಲನೆಗೊಳ್ಳುತ್ತದೆ. ಈ ಆಟೋಪ್ಲೇ ಆಗಬಾರದೆಂದಿದ್ದರೆ ಮಾಡಬೇಕಾದದ್ದು ಇಷ್ಟೆ -ಸಿ.ಡಿ. ಹಾಕುವಾಗ ಅಥವಾ ಯುಎಸ್‌ಬಿ ಡ್ರೈವ್ ತೂರಿಸುವಾಗ ಶಿಫ್ಟ್ ಕೀಯನ್ನು ಒತ್ತಿ ಹಿಡಿದುಕೊಳ್ಳಬೇಕು. ಇತ್ತೀಚೆಗೆ ವೈರಸ್‌ಗಳು ಆಟೋಪ್ಲೇ ಮೂಲಕ ಚಾಲನೆಗೊಳ್ಳುತ್ತಿವೆ. ಆದುದರಿಂದ ಈ ಬಗ್ಗೆ ಸ್ವಲ್ಪ ಜಾಗರೂಕರಾಗಿದ್ದರೆ ಒಳ್ಳೆಯದು.


(ನಿಮ್ಮಲ್ಲಿ ಗಣಕ, ಅಂತರಜಾಲ ಸಂಬಂಧಿ ಸಮಸ್ಯೆಗಳೇನಾದರೂ ಇದ್ದಲ್ಲಿ ganakindi AT gmail DOT com ಗೆ ಇಮೈಲ್ ಕಳುಹಿಸಬಹುದು)

ಕಂಪ್ಯೂತರ್ಲೆ

ಕೋಲ್ಯ ಹೊಸ ಗಣಕ ಕೊಂಡುಕೊಂಡ. ರಾತ್ರಿಯೆಲ್ಲ ಕೆಲಸ ಮಾಡುತ್ತಲೇ ಇದ್ದ. ಬೆಳಗ್ಗೆ ಬಂದ ಬಾಸ್‌ಗೆ ಖುಷಿಯಾಗಿ ಕೇಳಿದ “ರಾತ್ರಿಯೆಲ್ಲ ಕಂಪ್ಯೂಟರಿನಲ್ಲಿ ಏನು ಕೆಲಸ ಮಾಡುತ್ತಿದ್ದೆ?”. ಕೋಲ್ಯ ಹೇಳಿದ “ಸಾರ್, ಈ ಕಂಪ್ಯೂಟರಿನ ಕೀಬೋರ್ಡಿನಲ್ಲಿ ಅಕ್ಷರಗಳು ಒಂದು ಕ್ರಮದಲ್ಲಿ ಇಲ್ಲ. ಅವುಗಳನ್ನೆಲ್ಲ ಕಿತ್ತು ಕ್ರಮಬದ್ಧವಾಗಿ ಜೋಡಿಸಿದೆ”

ಸೋಮವಾರ, ಜುಲೈ 13, 2009

ಗಣಕಿಂಡಿ - ೦೦೯ (ಜುಲೈ ೧೩, ೨೦೦೯)

ಅಂತರಜಾಲಾಡಿ

ದೂರು ನೀಡಬೇಕೆ?

ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದಾದರೂ ವಿಭಾಗಕ್ಕೆ ದೂರು ಸಲ್ಲಿಸಬೇಕಾದರೆ ಏನು ಮಾಡಬೇಕು ಎಂಬ ಚಿಂತೆ ಎಲ್ಲರಿಗೂ ಕನಿಷ್ಠ ಒಮ್ಮೆಯಾದರೂ ಬಂದಿರುತ್ತದೆ. ದೂರು ಸಲ್ಲಿಸಲೆಂದೇ ಕೇಂದ್ರ ಸರಕಾರದ ಜಾಲತಾಣವೊಂದಿದೆ. ಅದರ ವಿಳಾಸ - www.pgportal.gov.in. ತಾಣದಲ್ಲಿ ದೂರು ಸಲ್ಲಿಸಿದರೆ ನಿಮ್ಮ ದೂರಿಗೆ ಒಂದು ನೋಂದಣಿ ಸಂಖ್ಯೆ ದೊರೆಯುತ್ತದೆ. ನಂತರ ನಿಮ್ಮ ದೂರು ಎಲ್ಲಿಗೆ ತಲುಪಿದೆ, ಅದರ ಬಗ್ಗೆ ಏನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾಲಕಾಲಕ್ಕೆ ಪರಿಶೀಲಿಸುತ್ತಿರಬಹುದು. ವೈಯಕ್ತಿಕವಾಗಿ ಹೇಳುವುದಾದರೆ, ಖಾಸಗಿ ಡಿಟಿಎಚ್ ಸೇವೆ ನೀಡುವವರು ದೂರದರ್ಶನಗಳ ಉಚಿತ ಚಾನೆಲುಗಳನ್ನು ನೀಡುವುದನ್ನು ನಿಲ್ಲಿಸಿದಾಗ ನಾನು ಜಾಲತಾಣದಲ್ಲಿ ದೂರು ನೀಡಿ ಅದನ್ನು ಸರಿಪಡಿಸಿಕೊಂಡಿದ್ದೇನೆ.

ಡೌನ್ಲೋಡ್

ಎಲ್ಲ ಬಹುಮಾಧ್ಯಮಗಳಿಗೆ ಒಂದೇ ಪ್ಲೇಯರ್

ಚಲನಚಿತ್ರ, ವೀಡಿಯೋಗಳನ್ನು ಗಣಕದಲ್ಲಿ ವೀಕ್ಷಿಸದವರು ಯಾರು? ಇವುಗಳನ್ನು ಸಾಮಾನ್ಯವಾಗಿ ವಿಂಡೋಸ್ ಬಳಸುವವರು ತಮ್ಮ ಗಣಕದಲ್ಲೇ ಇರುವ ವಿಂಡೋಸ್ ಮೀಡಿಯಾ ಪ್ಲೇಯರ್ ಬಳಸಿ ವೀಕ್ಷಿಸುತ್ತಾರೆ. ಆದರೆ ಇದರಲ್ಲಿರುವ ಸಮಸ್ಯೆಯೆಂದರೆ ಕೆಲವು ನಮೂನೆಯ ಫೈಲುಗಳನ್ನು ಇದನ್ನು ಬಳಸಿ ವೀಕ್ಷಿಸಲು ಆಗುವುದಿಲ್ಲ. ಉದಾಹರಣೆಗೆ ಯುಟ್ಯೂಬ್ ತಾಣದಿಂದ ಡೌನ್ಲೋಡ್ ಮಾಡಿದ ಫ್ಲಾಶ್ ವೀಡಿಯೋ ಫೈಲುಗಳು. ಇಂತಹ ಫೈಲುಗಳನ್ನು ವೀಕ್ಷಿಸಲು ವಿಎಲ್ಸಿ ಪ್ಲೇಯರ್ ಬಳಸಬಹುದು. ಇದು ದೊರೆಯುವ ಜಾಲತಾಣ - www.videolan.org/vlc ಜಾಲತಾಣದಲ್ಲಿ ವಿಂಡೋಸ್ ಮಾತ್ರವಲ್ಲದೆ ಲೈನಕ್ಸ್ ಮತ್ತು ಮ್ಯಾಕ್ಗಳಿಗೂ ಪ್ಲೇಯರ್ ಲಭ್ಯವಿದೆ. ಇದು ಸಂಪೂರ್ಣ ಉಚಿತ ಮತ್ತು ಮುಕ್ತ ತಂತ್ರಾಂಶ.

e - ಸುದ್ದಿ

ದೊಡ್ಡ ಗಾತ್ರದ ಫೋನು ಜೀವ ಉಳಿಸಿತು

ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಸ್ಮಾರ್ಟ್ಫೋನುಗಳು ಅಂದರೆ ಕಿಸೆ ಗಣಕ ಎಂದೇ ಕರೆಯಬಹುದಾದ ಗ್ಯಾಜೆಟ್ಗಳು ಎಷ್ಟು ದೊಡ್ಡದಾಗಿವೆಯೆಂದರೆ ಅದರಿಂದಾಗಿ ಒಬ್ಬನ ಜೀವ ಉಳಿದ ಘಟನೆ ವರದಿಯಾಗಿದೆ. ಡೇವಿಡ್ ಎಂಬಾತ ಸ್ಕೀಯಿಂಗ್ ಮಾಡುತ್ತಾ ಹಿಮದಲ್ಲಿ ಜಾರಿ ಬಿದ್ದು ನಿಯಂತ್ರಣ ತಪ್ಪಿ ಪ್ರಪಾತದೆಡೆಗೆ ಜಾರತೊಡಗಿದ. ಹಿಮದಲ್ಲಿ ಒಬ್ಬ ವ್ಯಕ್ತಿ ತೂರಬಹುದಾದಷ್ಟು ಅಗಲವಾದ ಕಂದರವೊಂದಿತ್ತು. ಅದರಡಿಯಲ್ಲಿ ಆಳವಾದ ಪ್ರಪಾತವಿತ್ತು. ಈತನ ಅಂಗಿ ಕಿಸೆಯಲ್ಲಿ ದೊಡ್ಡದಾದ ಬ್ಲಾಕ್ಬೆರಿ ಫೋನು ಇತ್ತು. ಅದರಿಂದಾಗಿ ಆತ ಕಂದರದಲ್ಲಿ ಕೆಳಗೆ ಬೀಳದೆ ಸಿಕ್ಕಿಹಾಕಿಕೊಂಡು ಬದುಕಿ ಉಳಿದ.

e- ಪದ

ಅಂತರಜಾಲ ಮತ್ತು ಅಂತರ್ಜಾಲ - ಪದಗಳ ಬಳಕೆಯಲ್ಲಿ ಗೊಂದಲ ಆಗುತ್ತಿದೆ. ಬಹುಪಾಲು ಜನರು ಇಂಟರ್ನೆಟ್ ಎಂಬುದಕ್ಕೆ ಪರ್ಯಾಯವಾಗಿ ಅಂತರ್ಜಾಲ ಎಂದು ಬಳಸುತ್ತಿದ್ದಾರೆ. ಇದು ತಪ್ಪು. Intranet ಎಂಬುದಕ್ಕೆ ಪಾರಿಭಾಷಿಕ ಪದ ಅಂತರ್ಜಾಲ. ಹಾಗೆಯೇ Internet ಎಂಬುದಕ್ಕೆ ಪಾರಿಭಾಷಿಕ ಪದ ಅಂತರಜಾಲ. ಒಂದು ಕಚೇರಿಯಲ್ಲಿರುವ ಹಲವಾರು ಗಣಕಗಳನ್ನು ಒಂದಕ್ಕೊಂದು ಬೆಸೆದಾಗ ಆಗುವ ಜಾಲ ಅಂತರ್ಜಾಲ (ಇಂಟ್ರಾನೆಟ್). ಜಗತ್ತಿನಲ್ಲಿರುವ ಎಲ್ಲ ಗಣಕಗಳನ್ನು ತಂತಿ, ನಿಸ್ತಂತು, ಉಪಗ್ರಹ, ಇತ್ಯಾದಿಗಳ ಮೂಲಕ ಒಂದಕ್ಕೊಂದು ಬೆಸೆದಾಗ ದೊರೆಯುವ ಜಾಲ ಅಂತರಜಾಲ (ಇಂಟರ್ನೆಟ್). ಇತರೆ ಉದಾಹರಣೆಗಳನ್ನೂ ಗಮನಿಸಬಹುದು. ದೇಶದೊಳಗೆ ಕಳುಹಿಸಲು ಅಂತರ್ದೇಶೀಯ ಪತ್ರ. ಭೂಮಿಯೊಳಗೆ ಇರುವ ನೀರು ಅಂತರ್ಜಲ. ಇಂಟರ್ನ್ಯಾಶನಲ್ ಎಂಬುದಕ್ಕೆ ಪಾರಿಭಾಷಿಕ ಪದ ಅಂತರರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ. ಹಾಗೆ ನೋಡ ಹೊರಟರೆ ಬೇರೆ ಜಾತಿಯ ಹುಡುಗ ಹುಡುಗಿ ಮದುವೆಯಾಗುವುದಕ್ಕೆ ಅಂತರ್ಜಾತೀಯ ವಿವಾಹ ಎಂದು ಬರೆಯುವುದೂ ತಪ್ಪು. ಅದು ಅಂತರಜಾತೀಯ ವಿವಾಹ ಎಂದಾಗಬೇಕು.

e - ಸಲಹೆ

ಕನ್ನಡದಲ್ಲಿ ಬ್ಲಾಗಿಸುವವರ ಸಂಖ್ಯೆ ಸಾವಿರ ದಾಟಿದೆ. ಯಾರು ಯಾವಾಗ ತಮ್ಮ ಬ್ಲಾಗಿಗೆ ಹೊಸ ಲೇಖನ ಸೇರಿಸಿದ್ದಾರೆ ಎಂದು ತಿಳಿಯುವುದು ಹೇಗೆ? ಪ್ರತಿಯೊಂದು ಬ್ಲಾಗಿನ ಜಾಲತಾಣವನ್ನೂ ತೆರೆದು ನೋಡುತ್ತಾ ಕುಳಿತರೆ ಸಮಯ ಎಷ್ಟು ಬೇಕು? ಇದಕ್ಕೊಂದು ಸುಲಭ ಪರಿಹಾರ ಇದೆ. ಅದುವೇ ಗೂಗ್ಲ್ ರೀಡರ್. ಇದರ ವಿಳಾಸ www.google.com/reader. ನಿಮಗೆ ಗೂಗ್ಲ್ (ಜಿಮೈಲ್) ಖಾತೆ ಇದ್ದಲ್ಲಿ ಇಲ್ಲೂ ಅದನ್ನೇ ಬಳಸಬಹುದು. ಇದಕ್ಕೆ ಲಾಗಿನ್ ಆಗಿ ನಿಮಗೆ ಓದಬೇಕಾಗಿರುವ ಬ್ಲಾಗಿನ ವಿಳಾಸವನ್ನು ನೀಡಿ ಅದಕ್ಕೆ ಚಂದಾದಾರರಾಗಿ. ಹಾಗೆ ಎಲ್ಲ ಬ್ಲಾಗುಗಳಿಗೆ ಮಾಡಿ. ನಂತರ ಜಾಲತಾಣಕ್ಕೆ ಭೇಟಿ ನೀಡಿದರೆ ಸಾಕು. ಬ್ಲಾಗಿಸುವವರೂ ಅಷ್ಟೆ. ನನ್ನ ಬ್ಲಾಗಿನಲ್ಲಿ ಹೊಸ ಲೇಖನ ಇದೆ. ಓದಿ ಸಲಹೆ ನೀಡಿ ಎಂದು ಹೊಸ ಲೇಖನ ಸೇರಿಸಿದಾಗೆಲ್ಲ ಒಂದು ಇಮೈಲ್ ಕಳುಹಿಸುವ ಅಗತ್ಯ ಇಲ್ಲ.

ಕಂಪ್ಯೂತರ್ಲೆ

ಇನ್ಕಂ ಟ್ಯಾಕ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಕೋಲ್ಯ ಮದುವೆಗೆ ಹುಡುಗಿ ನೋಡಲು ಹೋದ. ಹುಡುಗಿ ಐಟಿ, ಅಂದರೆ ಮಾಹಿತಿ ತಂತ್ರಜ್ಞಾನದಲ್ಲಿ, ಕೆಲಸ ಮಾಡುತ್ತಿರುವ ಹುಡುಗಿ. ಕೋಲ್ಯ ತಾನೂ ಐಟಿಯಲ್ಲೇ ಕೆಲಸ ಮಾಡುತ್ತಿರುವುದು ಎಂದೊಡನೆ ಹುಡುಗಿ ಕೇಳಿದಳು ಯಾವ ಪ್ಲಾಟ್ಫಾರಂನಲ್ಲಿ ಕೆಲಸ ಮಾಡುತ್ತಿದ್ದೀರಾ?”. ಕೋಲ್ಯನಿಗೆ ವಿಪರೀತ ಸಿಟ್ಟು ಬಂತು. ನಾನು ರೈಲ್ವೆ ನಿಲ್ದಾಣದಲ್ಲಿ ಸಾಮಾನು ಹೊರುವ ಕೂಲಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದುಕೊಡಿದ್ದೀಯಾ? ಎಂದು ಗುರ್ರಾಯಿಸಿದ. ಮದುವೆ ಮುರಿದು ಬಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ?

ಮಂಗಳವಾರ, ಜುಲೈ 7, 2009

ಗಣಕಿಂಡಿ - ೦೦೮ (ಜುಲೈ ೦೬, ೨೦೦೯)

ಅಂತರಜಾಲಾಡಿ

ವೈಚಿತ್ರ್ಯಗಳಿಗೊಂದು ತಾಣ

ಯಾವುದಾದರೊಂದು ಹೋಟೆಲಿನ ಹೆಸರಿನ ಕೆಳಗೆ “ಸಾಸ್ಯಹರಿ” ಎಂದು ಕಂಡುಬಂದರೆ ಹುಬ್ಬೇರಿಸುತ್ತೀರಿ ತಾನೆ? ಇಂತಹ ವಿಚಿತ್ರ ಹೆಸರುಗಳು, ಪ್ರಾಕೃತಿಕ ಘಟನೆಗಳು, ಅತಿ ಉದ್ದ, ಎತ್ತರ, ಚಿಕ್ಕ ವಸ್ತು, ಮನುಷ್ಯ, ಇತ್ಯಾದಿ ಎಲ್ಲ ಪಟ್ಟಿ ಮಾಡುವ ಒಂದು ಜಾಲತಾಣ oddee.com. ಈ ಜಾಲತಾಣವನ್ನು ೨೦೦೮ನೆಯ ಇಸವಿಯ ಅತಿ ಜನಪ್ರಿಯ ೧೦೦ ಜಾಲತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ನಿಮಗೆ ತುಂಬ ಬೇಜಾರಾಗಿದೆ, ಹೇಗೋ ಹೊತ್ತು ಕಳೆಯಬೇಕಾಗಿದೆ ಎಂದಾದಲ್ಲಿ ಈ ಜಾಲತಾಣಕ್ಕೆ ಭೇಟಿ ನೀಡಬಹುದು. ಹಾಗೆಂದುಕೊಂಡು ಇಲ್ಲಿರುವುದೆಲ್ಲವೂ ಸಮಯ ಹಾಳು ಮಾಡುವ ವಿಷಯಗಳೇ ಎಂದುಕೊಳ್ಳಬೇಕಾಗಿಲ್ಲ. ವಿಜ್ಞಾನದ ವಿಶೇಷಗಳೂ ಇಲ್ಲಿವೆ.

ಡೌನ್‌ಲೋಡ್

ಸೌಂಡ್ ಇಂಜಿನಿಯರ್ ಆಗಿ

ಗಣಕದಲ್ಲಿ ಧ್ವನಿ, ಸಂಗೀತ, ಧ್ವನಿಮುದ್ರಣ ಮಾಡಿಕೊಳ್ಳಲು ಮತ್ತು ಧ್ವನಿಮುದ್ರಿತ ಸಂಗೀತವನ್ನು ಸಂಪಾದಿಸಲು ಬಳಕೆಯಾಗುವ ತಂತ್ರಾಂಶ ಅಡಾಸಿಟಿ. ಇದು ದೊರಕುವ ಜಾಲತಾಣ audacity.sourceforge.net. ಇದು ಸಂಪೂರ್ಣ ಮುಕ್ತ ಮತ್ತು ಉಚಿತ ತಂತ್ರಾಂಶ. ಇದನ್ನು ಇನ್‌ಸ್ಟಾಲ್ ಮಾಡಿಕೊಂಡು ನಿಮ್ಮ, ನಿಮ್ಮ ಮಕ್ಕಳ, ಕುಟುಂಬದ ಮಂದಿಯ ಅಥವಾ ಇತರೆ ಸಂಗೀತಗಾರರ ಧ್ವನಿ, ಹಾಡುಗಾರಿಕೆ, ಸಂಗೀತ ಕಾರ್ಯಕ್ರಮ -ಇತ್ಯಾದಿಗಳನ್ನು ಮನೆಯಲ್ಲೆ ಧ್ವನಿಮುದ್ರಣ ಮಾಡಿಕೊಳ್ಳಬಹುದು. ಹೀಗೆ ಧ್ವನಿಮುದ್ರಣ ಮಾಡಿಕೊಂಡದ್ದನ್ನು ನಿಮಗೆ ಇಷ್ಟವಾದ ವಿಧಾನದಲ್ಲಿ (ಉದಾ. ಎಂಪಿ-೩) ಸಂಗ್ರಹಿಸಿಡಬಹುದು. ಸಿ.ಡಿ. (ಅಥವಾ ಡಿ.ವಿ.ಡಿ.) ರೆಕಾರ್ಡರ್ ಇದ್ದರೆ ಮನೆಯಲ್ಲೇ ಸಂಗೀತ ಸಿ.ಡಿ. (ಅಥವಾ ಡಿ.ವಿ.ಡಿ.) ತಯಾರಿಸಲೂಬಹುದು. ನಿಮ್ಮಲ್ಲಿ ಹಳೆಯ ಕ್ಯಾಸೆಟ್ಟುಗಳಿದ್ದಲ್ಲಿ, ಉತ್ತಮ ಗುಣಮಟ್ಟದ ಕ್ಯಾಸೆಟ್ ಪ್ಲೇಯರ್ ಇದ್ದಲ್ಲಿ, ಅವುಗಳನ್ನೆಲ್ಲ ಎಂಪಿ-೩ ಸಿ.ಡಿ. ಮಾಡಲೂ ಈ ತಂತ್ರಾಂಶವನ್ನು ಬಳಸಬಹುದು.

e - ಸುದ್ದಿ

ಖ್ಯಾತ ಪಾಪ್ ಗಾಯಕ ಮೈಕೆಲ್ ಜಾಕ್ಸನ್ ಸತ್ತಾಗ ಸ್ವಲ್ಪ ಸಮಯ ಹಲವು ಜನಪ್ರಿಯ ಜಾಲತಾಣಗಳೂ ತಾತ್ಕಾಲಿಕವಾಗಿ ಸತ್ತವು. ಜಾಲತಾಣಗಳು ಸಾಯುವುದೆಂದರೇನು? ಅವೇನೂ ಸತ್ತಿರಲಿಲ್ಲ. ಕೋಟಿಗಟ್ಟಳೆ ಮಂದಿ ಏಕಕಾಲದಲ್ಲಿ ಒಂದೇ ಜಾಲತಾಣಕ್ಕೆ ಭೇಟಿ ನೀಡಿದರೆ ಆ ಜಾಲತಾಣ ಎಲ್ಲರಿಗೂ ಉತ್ತರ ನೀಡಲಾರದೆ ಸ್ಥಬ್ಧವಾತ್ತದೆ. ತುಂಬ ಜನಪ್ರಿಯವಾಗಿರುವ ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ಗೆ ಇದೇ ಗತಿ ಆಯಿತು. ಗೂಗ್ಲ್‌ನಲ್ಲಂತೂ ಪ್ರತಿಯಬ್ಬರೂ ಮೈಕೆಲ್ ಜಾಕ್ಸನ್ ಎಂಬ ಪದಪುಂಜವನ್ನೇ ಹುಡುಕತೊಡಗಿದರು. ಕೋಟಿಗಟ್ಟಳೆ ಗಣಕಗಳಿಂದ ಏಕಕಾಲದಲ್ಲಿ ಮೈಕೆಲ್ ಜಾಕ್ಸನ್ ಎಂಬ ಪದಪುಂಜದ ಬಗ್ಗೆ ಹುಡುಕಾಟ ನಡೆಯುವುದನ್ನು ಗೂಗ್ಲ್‌ನ ತಂತ್ರಾಂಶವು ಗಮನಿಸಿ ಇದೊಂದು ವೈರಸ್ ಮಾದರಿಯ ಧಾಳಿ ಎಂದು ಪರಿಗಣಿಸಿ ಈ ಪದಪುಂಜವನ್ನು ತಡೆಹಿಡಿಯಿತು. ಮೈಕೆಲ್ ಜಾಕ್ಸನ್ ಎಂದು ಹಡುಕಿದವರಿಗೆ Error ಎಂಬ ಸಂದೇಶ ಬರುತ್ತಿತ್ತು. ಕೊನೆಗೆ ಎಲ್ಲ ಸರಿಯಾಯಿತು.

e- ಪದ

ಇವಿಡಿಒ (EV-DO - Evolution-Data Optimized) -ನಿಸ್ತಂತು (ವಯರ್‌ಲೆಸ್) ತಂತ್ರಜ್ಞಾನ ಮೂಲಕ ತಂತಿ ಇಲ್ಲದೆ ಅಂತರಜಾಲಕ್ಕೆ ಗಣಕವನ್ನು ಸಂಪರ್ಕಗೊಳಿಸುವ ಇನ್ನೊಂದು ವಿಧಾನ. ಇದನ್ನು ವಯರ್‌ಲೆಸ್ ಬ್ರಾಡ್‌ಬಾಂಡ್ ಎಂದೂ ಕರೆಯುತ್ತಾರೆ. ಇದು ವೈ-ಫೈ ಮತ್ತು ವೈ ಮಾಕ್ಸ್‌ಗಿಂತ ತುಂಬ ಹೆಚ್ಚಿನ ಮಾಹಿತಿ ಸಾಗಾಣಿಕೆಯ ಸಾಮರ್ಥ್ಯ ಹೊಂದಿದೆ. ಇದನ್ನು ಬಳಸಲು ಇವಿಡಿಒ ಕಾರ್ಡ್ ಅಥವಾ ಯುಎಸ್‌ಬಿ ಸಾಧನ ಬೇಕಾಗುತ್ತದೆ. ಇದು ಯಾವಾಗಲೂ ಸಂಪರ್ಕದಲ್ಲಿರುವ ವ್ಯವಸ್ಥೆ. ಇತ್ತೀಚೆಗೆ ಬಿಎಸ್‌ಎನ್‌ಎಲ್ ಮತ್ತು ರಿಲಯನ್ಸ್‌ನವರು ಈ ವಿಧಾನದಲ್ಲಿ ಅಂತರಜಾಲ ಸಂಪರ್ಕ ಸೇವೆ ನೀಡಲು ಪ್ರಾರಂಭಿಸಿದ್ದಾರೆ.

e - ಸಲಹೆ

ಹಲವಾರು ತಂತ್ರಾಂಶಗಳನ್ನು ವಿಂಡೋಸ್ ಎಕ್ಸ್‌ಪಿಯಲ್ಲಿ ಇನ್‌ಸ್ಟಾಲ್ ಮಾಡಿದಾಗ ಬೇಕಾದ ತಂತ್ರಾಂಶವನ್ನು ಪ್ರಾರಂಭಿಸಲು ಕ್ಲಿಕ್ ಮಾಡಬೇಕಾದ ಆದೇಶ ಎಲ್ಲಿದೆ ಎಂದು ಹುಡುಕುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಇದಕ್ಕೆ ಕಾರಣ ಹಲವಾರು ತಂತ್ರಾಂಶಗಳ ಆದೇಶಗಳು ಒಂದು ಕ್ರಮದಲ್ಲಿ ಇಲ್ಲದಿರುವುದು. ಇವನ್ನೆಲ್ಲ ಒಂದು ಕ್ರಮದಲ್ಲಿ ಅಂದರೆ ಇಂಗ್ಲಿಶ್ ಭಾಷೆಯ ಅಕ್ಷರ ಪ್ರಕಾರ ವಿಂಗಡಿಸಿದರೆ ಹಡುಕುವುದು ಸುಲಭವಾಗುತ್ತದೆ. ಹೀಗೆ ಮಾಡುವುದು ಬಲು ಸುಲಭ. Start ಮೆನುವಿನ All Programs ಮೆನುವಿನಲ್ಲಿ ಎಲ್ಲಿಯಾದರೊಂದು ಕಡೆ ಮೌಸ್ ಇಟ್ಟು ಬಲಗುಂಡಿಯನ್ನು ಅದುಮಿ Sort by Name ಎಂದು ಆಯ್ಕೆ ಮಾಡಿ.

ಕಂಪ್ಯೂತರ್ಲೆ

ಕೋಲ್ಯ “ನನಗೆ ಒಂದು ಸುತ್ತಿಗೆ ಮತ್ತು ಕೆಲವು ಮೊಳೆಗಳು ಬೇಕು”
ಅಂಗಡಿಯಾತ “ಯಾಕೆ?”
ಕೋಲ್ಯ “ನನ್ನ ಕಂಪ್ಯೂಟರಿಗೆ ವಿಂಡೋಸ್ ಫಿಟ್ ಮಾಡಬೇಕಿತ್ತು”