ಸೋಮವಾರ, ಆಗಸ್ಟ್ 31, 2009

ಗಣಕಿಂಡಿ - ೦೧೬ (ಆಗಸ್ಟ್ ೩೧, ೨೦೦೯)

ಅಂತರಜಾಲಾಡಿ

ಯಾವುದು ಹೇಗೆ?

ಏನನ್ನಾದರೂ ಮಾಡುವುದು ಹೇಗೆ ಎಂದು ಚಿಂತಿಸಿದ್ದೀರಾ? ಉದಾಹರಣೆಗೆ ಕ್ಯಾಮರ ಬಳಸುವುದು, ಗೂಗ್ಲ್‌ನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸುವುದು, ವೈ-ಫೈ ಸಿಗ್ನಲ್ ಶಕ್ತಿಯನ್ನು ಹೆಚ್ಚಿಸುವುದು, ಲೇಸರ್ ಮೈಕ್ರೋಫೋನ್ ತಯಾರಿಸುವುದು, ಇತ್ಯಾದಿ. ಇವು ಮಾತ್ರವಲ್ಲದೆ ಇನ್ನೂ ನೂರಾರು ವಿಷಯಗಳಲ್ಲಿ “ಯಾವುದನ್ನು ಹೇಗೆ ಮಾಡುವುದು” ಎಂದು ವಿವರಿಸುವ ವೀಡಿಯೋಗಳಿರುವ ಜಾಲತಾಣ www.wonderhowto.com. ಈ ಜಾಲತಾಣದಲ್ಲಿ ನೀಡಿರುವ ವೀಡಿಯೋಗಳನ್ನು ವೀಕ್ಷಿಸಲು ನಿಮಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಇದ್ದರೆ ಒಳ್ಳೆಯದು. ಇಲ್ಲಿ ನೀಡಿರುವ ವೀಡಿಯೋಗಳಲ್ಲಿ ಕೆಲವು ಅಮೇರಿಕಾಕ್ಕೆ ಮಾತ್ರ ಅನ್ವಯವಾಗುವಂತವು.

ಡೌನ್‌ಲೋಡ್

ತಾರೀಕನ್ನು ಹಿಂದೂಡುವುದು

ಕೆಲವು ತಂತ್ರಾಂಶಗಳು ಕೆಲವು ನಿರ್ದಿಷ್ಟ ಸಮಯದ ವರೆಗೆ ಮಾತ್ರ ಕೆಲಸ ಮಾಡುತ್ತವೆ. ಅನಂತರ ಅವು ಕೆಲಸ ಮಾಡುವುದಿಲ್ಲ. ಇಂತಹ ತಂತ್ರಾಂಶವನ್ನು ಅವುಗಳ ವಾಯಿದೆ ಮುಗಿದ ಮೇಲೂ ಬಳಸಲು ಒಂದು ಉಪಾಯವೆಂದರೆ ಗಣಕದ ದಿನಾಂಕವನ್ನೇ ಸ್ವಲ್ಪ ಹಿಂದೂಡುವುದು. ಹೀಗೆ ಮಾಡುವುದರಿಂದ ಹಲವು ತೊಂದರೆಗಳಾಗುತ್ತವೆ. ಉದಾಹರಣೆಗೆ ನೀವು ತಯಾರಿಸಿದ ಕಡತಗಳೆಲ್ಲ ಹಿಂದಿನ ದಿನಾಂಕವನ್ನು ತೋರಿಸುತ್ತವೆ, ನೀವು ಕಳುಹಿಸಿದ ಇಮೈಲ್‌ಗಳು ಹಿಂದಿನ ದಿನಾಂಕದಲ್ಲಿ ಬರೆದಂತೆ ತೋರಿಸುತ್ತವೆ, ಇತ್ಯಾದಿ. ಕೇವಲ ಒಂದು ತಂತ್ರಾಂಶವನ್ನು ನಡೆಸಲು ಮಾತ್ರ ಗಣಕದ ದಿನಾಂಕವನ್ನು ಹಿಂದೂಡುವಂತಿದ್ದರೆ ಚೆನ್ನಲ್ಲವೆ? ಹೀಗೆ ಮಾಡಲು ಸಹಾಯಕಾರಿಯಾದ ತಂತ್ರಾಂಶ RunAsDate. ಈ ತಂತ್ರಾಂಶವನ್ನು ಡೌನ್‌ಲೋಡ್ ಮಾಡಬೇಕಿದ್ದರೆ ಭೇಟಿ ನೀಡಬೇಕಾದ ಜಾಲತಾಣ - bit.ly/1FDMeG

e - ಸುದ್ದಿ

ಸತ್ತ ನಂತರ ಇಮೈಲ್ ಕಳುಹಿಸಿ!

ಸತ್ತ ನಂತರ ಆಸ್ತಿ ಪಾಸ್ತಿ ಯಾರು ಯಾರಿಗೆ ಯಾವ ಯಾವ ರೀತಿ ಹಂಚಿಕೆ ಆಗಬೇಕು ಎಂದು ಉಯಿಲು ಬರೆಯುವುದು ಗೊತ್ತು ತಾನೆ? ಸತ್ತ ನಂತರ ಇಮೈಲ್ ಕಳುಹಿಸುವುದು? ಹೌದು. ಅದೂ ಸಾಧ್ಯವಾಗಿದೆ. www.lastmessagesclub.co.uk ಜಾಲತಾಣದಲ್ಲಿ ಹೆಸರು ನೋಂದಾಯಿಸಿ ತಾನು ಸತ್ತ ನಂತರ ಯಾರು ಯಾರಿಗೆ ಏನೇನು ಸಂದೇಶ ಕಳುಹಿಸಬೇಕು ಎಂದು ದಾಖಲಿಸಿದರೆ ಸತ್ತ ನಂತರ ಆ ಜಾಲತಾಣವು ಅದೇ ರೀತಿ ಇಮೈಲ್ ಕಳುಹಿಸುತ್ತದೆ. ಇವು ಕುಟುಂಬದವರಿಗೆ ಬ್ಯಾಂಕ್, ಇನ್ಶೂರೆನ್ಸ್ ಬಗ್ಗೆ ಸೂಚನೆ ಇರಬಹುದು, ಆಪ್ತರಿಗೆ ಕೊನೆಯ ಪತ್ರ ಇರಬಹುದು, ಇನ್ನು ಏನು ಬೇಕಾದರೂ ಆಗಿರಬಹುದು.

e- ಪದ

ಫಿಶಿಂಗ್ (phishing) - ಅಂತರಜಾಲ ಬ್ಯಾಂಕಿಂಗ್, ವಾಣಿಜ್ಯ ಮತ್ತು ಇನ್ನಿತರ ವ್ಯವಹಾರಗಳ ಗುಪ್ತಪದ (password) ಕದಿಯಲು ಖದೀಮರು ಬಳಸುವ ಒಂದು ತಂತ್ರ. ನ್ಯಾಯಬದ್ಧ ಇಮೈಲ್‌ನಂತೆಯೇ ಕಾಣಿಸುವ ಒಂದು ಇಮೈಲ್ ಮೂಲಕ ಗುಪ್ತಪದ ಕದಿಯಲೆಂದೇ ನಿರ್ಮಿಸಿರುವ, ಅಧಿಕೃತ ಬ್ಯಾಂಕಿನ ಜಾಲತಾಣವನ್ನೇ ಹೋಲುವ ಒಂದು ಜಾಲತಾಣದಲ್ಲಿ ನಿಮ್ಮ ಲಾಗಿನ್ ಮತ್ತು ಪಾಸ್‌ವರ್ಡ್ ದಾಖಲಿಸಲು ನಿಮ್ಮನ್ನು ಈ ಇಮೈಲ್ ಕೇಳಿಕೊಳ್ಳುತ್ತದೆ. ಅಲ್ಲಿ ನಿಮ್ಮ ದಾಖಲೆಗಳನ್ನು ನೀಡಿದರೆ ಮುಗಿಯಿತು. ನಿಮ್ಮ ಬ್ಯಾಂಕಿನ ಖಾತೆಯಿಂದ ಹಣ ಇನ್ನೆಲ್ಲಿಗೋ ವರ್ಗಾವಣೆಯಾಗಿರುತ್ತದೆ. ಸಾಮಾನ್ಯವಾಗಿ ಈ ರೀತಿ ಕೇಳಿಕೊಳ್ಳುವ ಇಮೈಲಿನಲ್ಲಿ ನೀಡಿರುವ ಜಾಲತಾಣದ ವಿಳಾಸದಲ್ಲಿ ಅಧಿಕೃತ ಬ್ಯಾಂಕಿನ ವಿಳಾಸದ ಬದಲು ಯಾವುದೋ ಸಂಖ್ಯೆಗಳಿರುತ್ತವೆ.

e - ಸಲಹೆ

ನಿಮಗೆ ಬಂದ ಇಮೈಲ್ ಫಿಶಿಂಗ್ ಇಮೈಲ್ ಹೌದೋ ಅಲ್ಲವೇ ಎಂದು ತಿಳಿಯುವುದು ಹೇಗೆ? ಉದಾಹರಣೆಗೆ ಸಿಟಿಬ್ಯಾಂಕಿನಿಂದ ಎಂದು ಹೇಳಿಕೊಂಡು ಇಮೈಲ್ ಬಂದಿದೆ ಎಂದು ಇಟ್ಟುಕೊಳ್ಳೋಣ. ನಿಮ್ಮ ವಿವರಗಳನ್ನು ಅಪ್‌ಡೇಟ್ ಮಾಡಲು ಇಲ್ಲಿ ಕ್ಲಿಕ್ಕಿಸಿ ಎಂದು ಸಂದೇಶ ಇರುತ್ತದೆ. ಆ ಪದಪುಂಜವು ಸರಿಯಾಗಿ ಸಿಟಿಬ್ಯಾಂಕಿನ ಜಾಲತಾಣದ ವಿಳಾಸವೇ ಆಗಿರುತ್ತದೆ. ಆದರೆ ಅದನ್ನು ಕ್ಲಿಕ್ಕಿಸಿದಾಗ ಅದು ಸಿಟಿಬ್ಯಾಂಕಿನ ಜಾಲತಾಣವನ್ನೇ ಹೋಲುವ ಇನ್ಯಾವುದೋ ಜಾಲತಾಣಕ್ಕೆ ಕರೆದೊಯ್ಯುತ್ತದೆ. ಇದರ ಅಧಿಕೃತತೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಸಿಟಿಬ್ಯಾಂಕಿನ ಜಾಲತಾಣದ ವಿಳಾಸ www.citibank.com ಅಥವಾ www.citibank.co.in ಇರುತ್ತದೆ. ಫಿಶಿಂಗ್ ಜಾಲತಾಣವಾದರೆ ಯಾವುದೋ ಸಂಖ್ಯೆಯಿಂದ ಪ್ರಾರಂಭವಾಗುತ್ತದೆ. ಉದಾ -http://123.456.789.123/citiback/login.htm (ಇಲ್ಲಿ ನೀಡಿರುವ ಸಂಖ್ಯೆಗಳು ಕೇವಲ ಉದಾಹರಣೆಗಾಗಿ ಮಾತ್ರ). ಸಾಮಾನ್ಯವಾಗಿ ವಾಣಿಜ್ಯ ಜಾಲತಾಣಗಳ ಲಾಗಿನ್ ಪುಟಗಳ ವಿಳಾಸಗಳು https:// ಎಂದು ಪ್ರಾರಂಭವಾಗುತ್ತವೆ. ಫಿಶಿಂಗ್ ಜಾಲತಾಣಗಳು ಇತರೆ ಸಾಮಾನ್ಯ ಜಾಲತಾಣಗಳಂತೆ http:// ಎಂದು ಪ್ರಾರಂಭವಾಗುತ್ತವೆ.

ಕಂಪ್ಯೂತರ್ಲೆ

ಇನ್ನೊಂದಿಷ್ಟು ಬ್ಲಾಗ್ ಗಾದೆಗಳು:
  • ಪತ್ರಿಕೆಯಿಂದ ಹಿಂದೆ ಬಂದ ಲೇಖನವನ್ನು ಬ್ಲಾಗ್ ಮಾಡಿದರಂತೆ
  • ಲೇಖನಗಳಿಗೊಂದು ಕಾಲ, ಬ್ಲಾಗುಗಳಿಗೊಂದು ಕಾಲ
  • ಕೆಲವರಿಗೆ ಬ್ಲಾಗ್ ಭಯವಾದರೆ ಇನ್ನು ಕೆಲವರಿಗೆ ಕಮೆಂಟ್ ಭಯ
  • ಕಮೆಂಟುಗಳಿಗೆ ಹೆದರಿ ಬ್ಲಾಗನ್ನೇ ನಿಲ್ಲಿಸಿದರಂತೆ

ಬುಧವಾರ, ಆಗಸ್ಟ್ 26, 2009

ಗಣಕಿಂಡಿ - ೦೧೫ (ಆಗಸ್ಟ್ ೨೫, ೨೦೦೯)

ಅಂತರಜಾಲಾಡಿ

ಯಾರು ಏನು ಹೇಳಿದರು?

ಭಾಷಣ ಮಾಡುವಾಗ, ತರಗತಿಯಲ್ಲಿ ಪಾಠ ಮಾಡುವಾಗ, ಲೇಖನ ಬರೆಯುವಾಗ ಆಗಾಗ ಅಲ್ಲಲ್ಲಿ ಖ್ಯಾತನಾಮರ ಮಾತುಗಳನ್ನು ಉದಾಹರಿಸುವ ಅಭ್ಯಾಸ ಇದೆ ತಾನೆ? ಹೀಗೆ ಉದಾಹರಿಸಲು ಪ್ರಸಿದ್ಧ ಮಾತುಗಳನ್ನು ಬರೆದಿಟ್ಟುಕೊಳ್ಳುವ ಅಭ್ಯಾಸವೂ ಕೆಲವರಿಗಿದೆ. ಕೆಲವೊಮ್ಮೆ ಇಂತಹ ಮಾತುಗಳು ಜೀವನಕ್ಕೆ ದಾರಿದೀಪವಾಗಿಯೂ ಬೇಕಾಗುತ್ತವೆ. ಇಂತಹ ಜಗತ್ಪ್ರಸಿದ್ಧ ಮಾತುಗಳ ಜಾಲತಾಣ www.brainyquote.com. ನೀವು ಆಗಾಗ ಇಲ್ಲಿಗೆ ಭೇಟಿ ನೀಡಿ ಕೊಟೇಶನ್‌ಗಳನ್ನು ಓದಬಹುದು, ಅವುಗಳಿಗೆ ಚಂದಾದಾರರಾಗಬಹುದು, ನಿಮ್ಮ ಗಣಕದ ಪರದೆಯಲ್ಲಿ ಒಂದು ಬದಿಯಲ್ಲಿ ಈ ಮಾತುಗಳು ಬರುತ್ತಾ ಇರುವಂತೆ ಮಾಡಬಹುದು, ನಿಮ್ಮ ಬ್ಲಾಗ್‌ತಾಣದಲ್ಲಿ ಅವು ಮೂಡುವಂತೆ ಮಾಡಬಹುದು -ಇತ್ಯಾದಿ ಸವಲತ್ತುಗಳಿವೆ.

ಡೌನ್‌ಲೋಡ್Link
ಪಿಡಿಎಫ್ ಕಡತ ತಯಾರಿಸಿ

ಅಡೋಬ್‌ನವರ ಪಿಡಿಎಫ್ ಮಾದರಿಯ ಕಡತಗಳನ್ನು ನೀವೆಲ್ಲ ಗಮನಿಸಿರಬಹುದು ಹಾಗೂ ಓದಿರಬಹುದು. ಕನ್ನಡಪ್ರಭ ಪತ್ರಿಕೆಯೂ ಅಂತರಜಾಲದಲ್ಲಿ ಪಿಡಿಎಫ್ ಮಾದರಿಯಲ್ಲಿ ಓದಲು ಲಭ್ಯವಿದೆ. ನೀವು ತಯಾರಿಸಿದ ಪತ್ರ, ಕಡತ ಅಥವಾ ಪುಸ್ತಕವನ್ನು ಪಿಡಿಎಫ್ ಆಗಿ ಬದಲಾಯಿಸಬೇಕೆ? ಹಾಗೆ ಮಾಡಲು ಅಡೋಬ್‌ನವರದೇ ಆಕ್ರೋಬಾಟ್ ತಂತ್ರಾಂಶ ಲಭ್ಯವಿದೆ. ಆದರೆ ಅದು ಬಲು ದುಬಾರಿ. ಇದೇ ಕೆಲಸ ಮಾಡಲು ನೆರವಾಗುವ ಉಚಿತ ತಂತ್ರಾಂಶ ಪಿಡಿಎಫ್ ಕ್ರಿಯೇಟರ್. ಇದು ದೊರೆಯುವ ಜಾಲತಾಣ http://bit.ly/i1OXM. ಈ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಂಡರೆ ಇದು ಒಂದು ಮುದ್ರಕ (ಪ್ರಿಂಟರ್) ಆಗಿ ಕಂಡುಬರುತ್ತದೆ. ಯಾವುದೇ ತಂತ್ರಾಂಶದಿಂದ (ಉದಾ -ಮೈಕ್ರೋಸಾಫ್ಟ್ ವರ್ಡ್, ಪೇಜ್‌ಮೇಕರ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಇತ್ಯಾದಿ) ಮುದ್ರಿಸು (ಪ್ರಿಂಟ್) ಎಂದು ಆಯ್ಕೆ ಮಾಡಿ ಮುದ್ರಕವಾಗಿ PDFCreator ಅನ್ನು ಆಯ್ಕೆ ಮಾಡಿಕೊಂಡರೆ ಆಯಿತು.

e - ಸುದ್ದಿ

ಅನಾಮಧೇಯ ಬ್ಲಾಗಿಗಳೇ, ಎಚ್ಚರಿಕೆ!

ಇತ್ತೀಚೆಗೆ ಅನಾಮಧೇಯ ಬ್ಲಾಗರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ತಮಗೆ ಆಗದವರ ಬಗ್ಗೆ ಹೀನಾಯವಾಗಿ ಬರೆಯಲು ಜನರು ಈಗ ಬ್ಲಾಗಿಂಗ್‌ನ ಮರೆ ಹೋಗುತ್ತಿದ್ದಾರೆ. ಹಾಗಂತ ಹೇಳಿ ಎಲ್ಲ ಅನಾಮಧೇಯ ಬ್ಲಾಗ್‌ಗಳೂ ಬೈಗುಳವೇ ಎಂದು ತೀರ್ಮಾನಿಸಬೇಕಾಗಿಲ್ಲ. ಸಮಾಜೋಪಯೋಗಿ ಅನಾಮಧೇಯ ಬ್ಲಾಗ್‌ಗಳೂ ಇವೆ. ಇರಲಿ. ಅಮೇರಿಕದಲ್ಲಿ ಖ್ಯಾತ ಮಾಡೆಲ್ ಒಬ್ಬಳ ಬಗ್ಗೆ ಕೆಟ್ಟಕೆಟ್ಟದಾಗಿ ಬರೆಯಲೆಂದೇ ಒಬ್ಬಾತ ಒಂದು ಅನಾಮಧೇಯ ಬ್ಲಾಗ್ ಒಂದನ್ನು ಪ್ರಾರಂಬಿಸಿದ್ದ. ಅದರಲ್ಲಿ ಆಕೆಯ ಚಾರಿತ್ರ್ಯವಧೆ ಮಾಡುತ್ತಲೇ ಇದ್ದ. ಆಕೆ ನ್ಯಾಯಾಲಯದ ಮೊರೆಹೋದಳು. ಬ್ಲಾಗ್ ಹೋಸ್ಟ್ ಆಗಿರುವ ಗೂಗ್ಲ್ ಕಂಪೆನಿ ಆ ಬ್ಲಾಗ್ ನಡೆಸುತ್ತಿರುವವನ ಇಮೈಲ್ ಮತ್ತು ಇತರೆ ವಿವರಗಳನ್ನು ನ್ಯಾಯಾಲಯದ ಆದೇಶದಂತೆ ನೀಡಿದೆ. ಆಕೆ ಆತನ ಮೇಲೆ ದಾವೆ ಹೂಡಿದ್ದಾಳೆ. ಮುಂದೆ ಏನು ನಡೆಯುತ್ತದೆಯೋ ಕಾದು ನೋಡಬೇಕು. ಅನಾಮಧೇಯ ಬ್ಲಾಗ್ ಮೂಲಕ ಅಂತರಜಾಲ ಪುಂಡಾಟಿಕೆ ನಡೆಸುವವರು ತಾವು ಸಿಕ್ಕಿ ಬೀಳುವುದಿಲ್ಲ ಎಂಬ ಭಾವನೆಯಿಂದ ಹೊರಬರುವುದು ಒಳಿತು.

e- ಪದ

ಅಂತರಜಾಲ ಪುಂಡಾಟಿಕೆ (cyberbullying) - ಅಂತರಜಾಲ ಮೂಲಕ ಬಿಡದೆ ಬೆಂಬತ್ತಿ ಯಾರನ್ನಾದರೂ ಪೀಡಿಸುವುದು. ಇದರಲ್ಲಿ ಹಲವು ವಿಧಾನಗಳಿವೆ. ಬ್ಲಾಗ್ ಮೂಲಕ, ದ್ವೇಷದ ಇಮೈಲ್ ಕಳಿಸುವುದು, ಚರ್ಚಾವೇದಿಕೆಗಳಲ್ಲಿ ಸೇಡಿನ ಮಾತುಗಳನ್ನು ಬರೆಯುವುದು, ಆರ್ಕುಟ್ ಮಾದರಿಯ ಜಾಲತಾಣಗಳಲ್ಲಿ ದ್ವೇಷದ ಮಾತುಗಳನ್ನು ಬರೆಯುವುದು -ಹೀಗೆ ಹಲವಾರು ರೀತಿಯಲ್ಲಿ ಬೆಂಬಿಡದೆ ಪೀಡಿಸುವುದು. ಈ ರೀತಿ ಮಾಡುವುದು ಅಂತರಜಾಲದ ಮೂಲಕ ಬಹಳ ಸರಳ ಹಾಗೂ ಸುಲಭ. ಯಾಕೆಂದರೆ ಯಾರು ಬೇಕಾದರೂ ಅನಾಮಧೇಯವಾಗಿ ಇಮೈಲ್ ವಿಳಾಸ, ಬ್ಲಾಗ್ ವಿಳಾಸ ಹಾಗೂ ಇತರೆ ಗುರುತುಗಳನ್ನು ಆರಾಮವಾಗಿ ಪಡೆಯಬಹುದು. ಹೀಗೆ ಪಡೆದ ಗುರುತನ್ನು ಬಳಸಿ ತಮಗಾಗದವರನ್ನು ಅಂತರಜಾಲದ ಮೂಲಕ ಪೀಡಿಸುವುದು ಬಹು ಸುಲಭ. ಆದರೆ ಸೈಬರ್ ಕಾನೂನು ಪ್ರಕಾರ ಹೀಗೆ ಮಾಡುವುದು ಶಿಕ್ಷಾರ್ಹ ಅಪರಾಧ.

e - ಸಲಹೆ

ಒಂದು ಗಣಕದಲ್ಲಿ ಒಂದಕ್ಕಿಂತ ಹೆಚ್ಚು ಕಾರ್ಯಾಚರಣೆಯ ವ್ಯವಸ್ಥೆಗಳನ್ನು (ಆಪರೇಟಿಂಗ್ ಸಿಸ್ಟಮ್) ಹಾಕಬೇಕೆ? ಹಾಗಿದ್ದರೆ ಪ್ರತಿಯೊಂದಕ್ಕೂ ತನ್ನದೇ ಆದ ಹಾರ್ಡ್‌ಡಿಸ್ಕ್ ವಿಭಾಗ (ಪಾರ್ಟಿಶನ್) ಅಗತ್ಯ. ಹಳೆಯ ಆವೃತ್ತಿಯ ಕಾರ್ಯಾಚರಣೆಯ ವ್ಯವಸ್ಥೆಯನ್ನು ಮೊದಲು ಇನ್‌ಸ್ಟಾಲ್ ಮಾಡಿ ನಂತರದ ಆವೃತ್ತಿ ಅಂದರೆ ಹೊಸತನ್ನು ಇನ್ನೊಂದು ಪಾರ್ಟಿಶನ್‌ನಲ್ಲಿ ಇನ್‌ಸ್ಟಾಲ್ ಮಾಡತಕ್ಕದ್ದು. ಉದಾಹರಣೆಗೆ ವಿಂಡೋಸ್ ಎಕ್ಸ್‌ಪಿ ಮೊದಲು, ಆನಂತರ ವಿಸ್ಟ. ಲಿನಕ್ಸ್ ಕೂಡ ಬೇಕಿದ್ದಲ್ಲಿ ಅದನ್ನು ಕೊನೆಯದಾಗಿ ಇನ್‌ಸ್ಟಾಲ್ ಮಾಡತಕ್ಕದ್ದು.

ಕಂಪ್ಯೂತರ್ಲೆ

ಗ್ರಾಹಕ: “ಹಲೋ, ನಾನು ನಿಮ್ಮ ಬ್ಯಾಂಕಿನ ಆನ್‌ಲೈನ್ ಹಣಕಾಸು ವ್ಯವಹಾರ ಪ್ರಾರಂಭಿಸಬೇಕೆಂದುಕೊಂಡಿದ್ದೇನೆ. ಅದಕ್ಕೆ ಏನೇನು ಬೇಕು?”
ಬ್ಯಾಂಕಿನ ಸಿಬ್ಬಂದಿ: “ಖಂಡಿತ. ಬಹಳ ಸುಲಭ. ನಿಮ್ಮಲ್ಲಿ ಕಂಪ್ಯೂಟರ್, ಮೋಡೆಮ್ ಮತ್ತು ಇಂಟರ್‌ನೆಟ್ ಸಂಪರ್ಕ ಇದ್ದರೆ ಸಾಕು”
ಗ್ರಾಹಕ: “ಹೌದಾ! ಹಣ ಎಲ್ಲಿಂದ ಹೊರಗೆ ಬರುತ್ತದೆ?”
ಸಿಬ್ಬಂದಿ: “ನನಗೆ ಅರ್ಥವಾಗಲಿಲ್ಲ”
ಗ್ರಾಹಕ: “ಅಂದರೆ, ನಾನು ಕೇಳಿದ್ದು, ಕಂಪ್ಯೂಟರಿನಲ್ಲಿ ಒಂದು ಕಿಂಡಿಯ ರೀತಿ ಇದೆಯಲ್ಲವಾ, ಅದರಿಂದ ಹಣ ಹೊರಗೆ ಬರುತ್ತದೋ ಎಂದು”
ಸಿಬ್ಬಂದಿ ಮೂರ್ಛೆ ಹೋದ.

ಸೋಮವಾರ, ಆಗಸ್ಟ್ 17, 2009

ಗಣಕಿಂಡಿ - ೦೧೪ (ಆಗಸ್ಟ್ ೧೭, ೨೦೦೯)

ಅಂತರಜಾಲಾಡಿ

ಮಿಥ್ಯಾಕೋಶ

ಅಂತರಜಾಲದ ಸುಪ್ರಸಿದ್ಧ ಮುಕ್ತ ಸಹಯೋಗಿ ವಿಶ್ವಕೋಶ ವಿಕಿಪೀಡಿಯಾ (www.wikipedia.org) ಗೊತ್ತು ತಾನೆ? ಅದರ ಮಾದರಿಯಲ್ಲೇ ಅದರೆ ಸಂಪೂರ್ಣ ನಿರುಪಯೋಗಿ, ಬರಿ ಅಸಂಬದ್ಧ ಮಾಹಿತಿಗಳೇ ತುಂಬಿರುವ ಮಿಥ್ಯಾಕೋಶ -ಅನ್‌ಸೈಕ್ಲೋಪೀಡಿಯಾ. ಇದರ ಜಾಲತಾಣ - uncyclopedia.org. ಮಾಡಲು ಬೇರೇನೂ ಕೆಲಸವಿಲ್ಲದಿದ್ದಾಗ ಈ ಜಾಲತಾಣಕ್ಕೆ ಭೇಟಿ ನೀಡಿ ಸಮಯ ಕಳೆಯಬಹುದು. ಇದರಲ್ಲಿರುವ “ಇದು ಹೇಗೆ” (howto) ವಿಭಾಗದಲ್ಲಿರುವ ಲೇಖನಗಳು ತುಂಬ ಸ್ವಾರಸ್ಯಕರವಾಗಿವೆ. ಇದರಲ್ಲಿ ಸೂಚಿಸಿದಂತೆ ಹಲ್ಲುಜ್ಜಲು ಹೋಗಿ ಹಲ್ಲು ಕಳೆದುಕೊಳ್ಳಬಹುದು :-)

ಡೌನ್‌ಲೋಡ್

ಮಾಹಿತಿ ಪ್ರವಾಹಕ್ಕೊಂದು ಮೀಟರ್

ನೀವು ಬ್ರಾಡ್‌ಬಾಂಡ್ ಅಥವಾ ಸಾಧಾರಣ ಅಂತರಜಾಲ ಸಂಪರ್ಕ ಸೇವೆ ಪಡೆದಿದ್ದೀರಿ ತಾನೆ? ಇಂತಹ ಬಹುಪಾಲು ಸೇವೆಗಳಲ್ಲಿ ತಿಂಗಳಿಗೆ ಇಂತಿಷ್ಟು ಒಟ್ಟು ಮಾಹಿತಿ ಪ್ರವಾಹ (ಡೌನ್‌ಲೋಡ್ ಮತ್ತು ಅಪ್‌ಲೋಡ್ ಸೇರಿ) ಉಚಿತ, ಅದಕ್ಕಿಂತ ಹೆಚ್ಚಾದರೆ ಮೆಗಾಬೈಟ್‌ಗೆ ಇಂತಿಷ್ಟು ಎಂದು ದರ ನಿಗದಿ ಮಾಡಿರುತ್ತಾರೆ. ಈ ಸೇವೆ ನೀಡುವವರು ಸಂಪರ್ಕವು ಇಂತಿಷ್ಟು ವೇಗವನ್ನು ನೀಡುತ್ತದೆ ಎಂದು ಹೇಳಿಕೊಂಡಿರುತ್ತಾರೆ. ಈ ಮಾಹಿತಿ ಪ್ರವಾಹ ಎಷ್ಟಿದೆ, ತಿಂಗಳಿಗೆ ಒಟ್ಟು ಎಷ್ಟು ಮಾಹಿತಿ ಪ್ರವಾಹ ಆಗಿದೆ ಎಂದು ತಿಳಿಯುವುದು ಹೇಗೆ? ಈ ಸಮಸ್ಯೆಗೆ ಪರಿಹಾರ ನೆಟ್‌ವರ್ಕ್ಸ್ ತಂತ್ರಾಂಶ. ಇದು ದೊರೆಯುವ ಜಾಲತಾಣ http://bit.ly/3UkzUA.

e - ಸುದ್ದಿ

ಆಧುನಿಕ ಕುಂಭಕರ್ಣರಿಗೆ ವರದಾನ

ನಮ್ಮಲ್ಲಿ ಸೂರ್ಯವಂಶಜರಿಗೇನು ಕೊರತೆಯಿಲ್ಲ. ಅಂತಹವರನ್ನು ಬಡಿದೆಬ್ಬಿಸಲು ಚಿತ್ರವಿಚಿತ್ರ ಅಲಾರಾಂ ಗಡಿಯಾರಗಳಿವೆ. ಇತ್ತೀಚೆಗೆ ಈ ಪಟ್ಟಿಗೆ ಹೊಸದಾದ ಸೇರ್ಪಡೆ -ಮಲಗಿದವರನ್ನು ಎತ್ತಿ ಬೀಳಿಸುವ ಅಲಾರಾಂ ಮಂಚ. ಕೆವಿನ್ ಎಂಬಾತ ಒಂದು ಸ್ಪರ್ಧೆಗೋಸ್ಕರ ಈ ಮಂಚ ಅಲ್ಲ ಅಲಾರಾಂ ಗಡಿಯಾರ ತಯಾರಿಸಿದ. ಇದು ಕಂಪ್ಯೂಟರ್ ನಿಯಂತ್ರಿತ ಮಂಚ. ಆಯ್ಕೆ ಮಾಡಿದ ಸಮಯಕ್ಕೆ ಸರಿಯಾಗಿ ಈ ಮಂಚ ಜೋರಾಗಿ ಅಲ್ಲಾಡುತ್ತದೆ. ಮಲಗಿದವ ಆಗ ಏಳಲೇ ಬೇಕು. ಇಲ್ಲವಾದಲ್ಲಿ ನೆಲಕ್ಕೆ ಉರುಳಿ ಬಿದ್ದಿರುತ್ತಾನೆ. ಇದನ್ನು ಕೊಂಡುಕೊಳ್ಳಲು ಆಲೋಚಿಸುತ್ತಿದ್ದೀರಾ? ಇದು ಇನ್ನೂ ಮಾರುಕಟ್ಟೆಗೆ ಬಂದಿಲ್ಲ.

e- ಪದ

ನೆಟಿಕ್ವೆಟ್ (netiquette) - ಅಂತರಜಾಲ ಶಿಷ್ಟಾಚಾರ. ಅಂತರಜಾಲದಲ್ಲಿ ವ್ಯವಹರಿಸುವಾಗ, ಮುಖ್ಯವಾಗಿ ಚರ್ಚಾಕೂಟಗಳಲ್ಲಿ, ವಿಚಾರಜಾಲಗಳಲ್ಲಿ ಸಂದೇಶಗಳನ್ನು ಸೇರಿಸುವಾಗ, ಅಲ್ಲಿ ನಡೆಯುತ್ತಿರುವ ಚರ್ಚೆಗಳಿಗೆ ಉತ್ತರಿಸುವಾಗ ನಡೆದುಕೊಳ್ಳಬೇಕಾದ ಶಿಷ್ಟಾಚಾರ. ಯಾವುದೇ ಭಾಷೆ, ಧರ್ಮ, ರಾಜ್ಯ, ದೇಶ, ಇತ್ಯಾದಿ ವಿಷಯಗಳನ್ನು ಅನವಶ್ಯಕವಾಗಿ ಮೂಲ ಚರ್ಚೆಗೆ ಪೂರಕವಲ್ಲದಿದ್ದಾಗ ಎಳೆದು ತರಬಾರದು. ಚರ್ಚೆ ನಡೆಸುತ್ತಿರುವ ವ್ಯಕ್ತಿಗಳನ್ನು ವೈಯಕ್ತಿಕವಾಗಿ ನಿಂದಿಸಬಾರದು. ಚರ್ಚೆ ನಡೆಯುತ್ತಿರುವ ವಿಷಯ ಬಿಟ್ಟು ಇನ್ನು ಯಾವುದೋ ವಿಷಯವನ್ನು ಎಳೆದು ತರಬಾರದು. ಜಾಹಿರಾತುಗಳನ್ನು ಸೇರಿಸಬಾರದು -ಇವು ಅಂತರಜಾಲ ಶಿಷ್ಟಾಚಾರಗಳಿಗೆ ಉದಾಹರಣೆಗಳು.

e - ಸಲಹೆ

ನಿಮ್ಮ ಗಣಕ ಆಗಾಗ ತನ್ನಿಂದತಾನೆ ರಿಬೂಟ್ ಆಗುತ್ತಿದೆಯೇ? ಇದಕ್ಕೆ ಹಲವು ಕಾರಣಗಳಿರಬಹುದು. ಇವುಗಳಲ್ಲಿ ಒಂದು ಪ್ರಮುಖ ಕಾರಣ ಮೆಮೊರಿ ಚಿಪ್ ಕೆಟ್ಟಿರುವುದು ಅಥವಾ ಸರಿಯಾಗಿ ಕುಳಿತುಕೊಳ್ಳದಿರುವುದು. ಗಣಕವನ್ನು ಆಫ್ ಮಾಡಿ ಅದನ್ನು ಬಿಚ್ಚಿ ಮೆಮೊರಿ ಚಿಪ್ ಅನ್ನು ತೆಗೆದು ಅದರ ಸಂಪರ್ಕ ಜಾಗವನ್ನು ಸ್ವಚ್ಛ ಮಾಡಿ ಅದರ ಜಾಗದಲ್ಲಿ ವಾಪಾಸು ಸರಿಯಾಗಿ ಕೂರಿಸಿ. ಈಗಲೂ ರಿಬೂಟ್ ಆಗುತ್ತಿದೆಯೇ? ಅಂದರೆ ಮೆಮೊರಿ ಚಿಪ್ ಕೆಟ್ಟಿರುವ ಸಾಧ್ಯತೆ ಇದೆ. ಎರಡು ಚಿಪ್‌ಗಳಿದ್ದಲ್ಲಿ ಒಂದೊಂದನ್ನೇ ತೆಗೆದು ಪರೀಕ್ಷಿಸಿ. ಹಾಗೆಯೇ ಮದರ್‌ಬೋರ್ಡಿನ ಸಿಪಿಯು ಮೇಲೆ ಇರುವ ಚಿಕ್ಕ ಫ್ಯಾನ್ ಕೆಲಸ ಮಾಡುತ್ತಿದೆಯೇ ಎಂದೂ ಪರೀಕ್ಷಿಸಿ.

ಕಂಪ್ಯೂತರ್ಲೆ

ಗಣಕವಾಡುಗಳು:
  • ಅನಿಸುತಿದೆ ಯಾಕೋ ಇಂದು ಈ ಕಂಪ್ಯೂಟರ್ ತುಂಬ ಬರಿ ವೈರಸ್ ಎಂದು
  • ಒಂದೆ ಒಂದೆ ಸಾರಿ ಚಾಟಿಂಗ್‌ಗೆ ಬಾರೆ, ಕಂಪ್ಯೂಟರ್ ತುಂಬ ನಿನ್ನನ್ನೆ ತುಂಬಿಕೊಂಡಿಹೆನು
  • ಇಮೈಲ್ ಮಾಡಿ ಬಾರೆ ಚಾಟ್ ಮಾಡಿ ಬಾರೆ, ನಲ್ಲೆ ನಿನಗಿದೊ ಥಂಬ್ ಡ್ರೈವ್‌ನ ಮಾಲೆ

ಸೋಮವಾರ, ಆಗಸ್ಟ್ 10, 2009

ಗಣಕಿಂಡಿ - ೦೧೩ (ಆಗಸ್ಟ್ ೧೦, ೨೦೦೯)

ಅಂತರಜಾಲಾಡಿ

ಮೊಬೈಲ್ ಫೋನನ್ನು ರಿಸೆಟ್ ಮಾಡಿ

ಮೊಬೈಲ್ ಫೋನು ಕೆಲವೊಮ್ಮೆ ಕೈಕೊಡುವುದು ಎಲ್ಲರ ಅನುಭವಕ್ಕೆ ಬಂದಿರುತ್ತದೆ. ಅಂತಹ ಸಂದರ್ಭದಲ್ಲಿ ಅದನ್ನು ಫ್ಯಾಕ್ಟರಿ ಸೆಟ್ಟಿಂಗ್‌ಗೆ ವಾಪಾಸು ತೆಗೆದುಕೊಂಡು ಹೋದರೆ ಬಹುಪಾಲು ಸಂದರ್ಭದಲ್ಲಿ ಸಮಸ್ಯೆ ಪರಿಹಾರವಾಗುತ್ತದೆ. ಮೊಬೈಲ್ ಫೋನುಗಳ ಕೈಪಿಡಿಯಲ್ಲಿ ಈ ಒಂದು ವಿಷಯವನ್ನು ಸರಿಯಾಗಿ ನೀಡಿರುವುದಿಲ್ಲ. ಅದಕ್ಕೆ ಕಾರಣವೂ ಇದೆ. ಈ ರಿಸೆಟ್ ಮಾಡಲು ಜನಸಾಮಾನ್ಯರು ಪ್ರಯತ್ನಿಸಬಾರದು. ಕೇವಲ ಪರಿಣತರು ಮಾತ್ರ ಇದನ್ನು ಮಾಡುವುದು ಸೂಕ್ತ. ನೀವು ಪರಿಣತರಾಗಬಯುಸುತ್ತೀರಾ? ಅಂದರೆ ಫೋನನ್ನು ಫ್ಯಾಕ್ಟರಿ ಸೆಟ್ಟಿಂಗ್‌ಗೆ ರಿಸೆಟ್ ಮಾಡಬಯಸುತ್ತೀರಾ? ಹಾಗಿದ್ದರೆ ಏನು ಮಾಡಬೇಕು? ಜಗತ್ತಿನ ಬಹುತೇಕ ಫೋನುಗಳನ್ನು ರಿಸೆಟ್ ಮಾಡುವುದು ಹೇಗೆ ಎಂದು ವಿವರಿಸುವ ಜಾಲತಾಣ http://bit.ly/q9pWS

ಡೌನ್‌ಲೋಡ್

ಪಾಸ್‌ವರ್ಡ್‌ಗಳಿಗೊಂದು ಪಾಸ್‌ವರ್ಡ್

ಈಗಿನ ದಿನಗಳಲ್ಲಿ ಹಲವಾರು ಜಾಲತಾಣಗಳು, ಇಮೈಲ್, ಪ್ರೋಗ್ರಾಂಗಳು, ಫೋನು, ಎಟಿಎಂ, ಇತ್ಯಾದಿ ಎಲ್ಲ ಕಡೆ ಒಂದೊಂದು ಗುಪ್ತಪದ (ಪಾಸ್‌ವರ್ಡ್) ಬಳಸಬೇಕಾಗುತ್ತದೆ. ಎಲ್ಲ ಕಡೆ ಒಂದೆ ಗುಪ್ತಪದ ಬಳಸುವುದು ಒಳ್ಳೆಯದಲ್ಲ. ಹಲವಾರು ಗುಪ್ತಪದಗಳನ್ನು ನೆನಪಿಟ್ಟುಕೊಳ್ಳುವುದು ಹೇಗೆ? ಅವುಗಳನ್ನು ಎಲ್ಲೂ ಬರೆದಿಟ್ಟುಕೊಳ್ಳಬಾರದು. ಈ ಸಮಸ್ಯೆಗೆ ಪರಿಹಾರ ಕೀಪಾಸ್ ತಂತ್ರಾಂಶ. ಇದು ಬೇಕಿದ್ದರೆ http://bit.ly/166IFl ಜಾಲತಾಣಕ್ಕೆ ಭೇಟಿ ನೀಡಿ. ಎಲ್ಲ ಗುಪ್ತಪದಗಳನ್ನು ಈ ತಂತ್ರಾಂಶದಲ್ಲಿ ಸಂಗ್ರಹಿಸಿ ಇಡಿ. ಇದಕ್ಕೊಂದು ಗುಪ್ತ ಪದ ನೀಡಿ. ನಂತರ ಈ ಒಂದು ಗುಪ್ತಪದವನ್ನು ನೆನಪಿಟ್ಟುಕೊಂಡರೆ ಸಾಕು. ಅಂದ ಹಾಗೆ ಈ ತಂತ್ರಾಂಶದ ಮೊಬೈಲ್ ಫೋನು ಆವೃತ್ತಿಯೂ ಲಭ್ಯವಿದೆ.

e - ಸುದ್ದಿ

ಜಾಲನಾಗರಿಕರು ಸ್ವಲ್ಪ ಎಚ್ಚರವಹಿಸಿದರೆ ಒಳ್ಳೆಯದು

ಇಂಗ್ಲೆಂಡಿನಲ್ಲೊಬ್ಬ ಫೇಸ್‌ಬುಕ್‌ನಲ್ಲಿ ತನ್ನ ಪುಟದಲ್ಲೊಂದು ಜಾಹೀರಾತು ನೀಡಿದ. ಏನೆಂದರೆ ತನ್ನ ತೋಟದಲ್ಲಿ ರಾತ್ರಿಯಿಡೀ ನಡೆಯಲಿರುವ ಪಾರ್ಟಿಗೆ ಬನ್ನಿ ಎಂದು ಆಹ್ವಾನ ಪತ್ರಿಕೆ ಛಾಪಿಸಿದ್ದ. ಆಹ್ವಾನ ಮನ್ನಿಸಿ ಸ್ನೇಹಿತರು ಬಂದರು ಕೂಡ. ಆದರೆ ಜೊತೆಯಲ್ಲಿ ಪೋಲೀಸರೂ ಬಂದು ಪಾರ್ಟಿ ನಡೆಯದಂತೆ ನೋಡಿಕೊಂಡರು. ಯಾಕಪ್ಪಾ ಅಂದರೆ ಇಂಗ್ಲೆಂಡಿನಲ್ಲಿ ರಾತ್ರಿ ಪೂರ್ತಿ ತೆರೆದ ಜಾಗದಲ್ಲಿ ಪಾರ್ಟಿ ನಡೆಸುವಂತಿಲ್ಲ. ಆದುದರಿಂದ ಜಾಲನಾಗರಿಕರು ತಾವು ಏನು ಮಾಡುತ್ತೇವೆ/ಮಾಡಲಿದ್ದೇವೆ ಎಂದು ಅಂತರಜಾಲದಲ್ಲಿ ಘೋಷಿಸುವಾಗ ಎಚ್ಚರವಹಿಸತಕ್ಕದ್ದು.

e- ಪದ

ಜಾಲನಾಗರಿಕ (netizen) - ಅಂತರಜಾಲದಲ್ಲಿ ಸದಾ ಸಕ್ರಿಯನಾಗಿರುವವ. ಅಂತರಜಾಲ ನಾಗರಿಕ ಎನ್ನಬಹುದು. ಮೂಲ ಇಂಗ್ಲಿಶ್‌ನಲ್ಲಿ ಇದು ಇಂಟರ್‌ನೆಟ್ ಮತ್ತು ಸಿಟಿಝನ್ ಎಂಬ ಪದಗಳ ಭಾಗಗಳು ಸೇರಿ ಆಗಿರುವ ಪದ. ಜಾಲನಾಗರಿಕರು ಸಾಮಾನ್ಯವಾಗಿ ಸದಾ ಆನ್‌ಲೈನ್ ಆಗಿರುತ್ತಾರೆ. ಅಂತರಜಾಲದಲ್ಲಿರುವ ಬಹುಪಾಲು ಸೋಶಿಯಲ್ ನೆಟ್‌ವರ್ಕಿಂಗ್ ಜಾಲತಾಣಗಳಲ್ಲಿ (ಉದಾ -ಆರ್ಕುಟ್, ಫೇಸ್‌ಬುಕ್, ಟ್ವಿಟ್ಟರ್...) ಭಾಗವಹಿಸುತ್ತಿರುತ್ತಾರೆ. ಚರ್ಚಾತಾಣಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ.

e - ಸಲಹೆ

ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಆಗಾಗ ಬಳಸುವ ಆದೇಶಕ್ಕೆ ಒಂದು ಶಾರ್ಟ್‌ಕಟ್ ಇದ್ದರೆ ಒಳಿತು ತಾನೆ. ಇದಕ್ಕಾಗಿ ವರ್ಡ್2003 ರಲ್ಲಿ Tools ಮೆನುವಿನಲ್ಲಿ Customize ಅನ್ನು ಆಯ್ಕೆ ಮಾಡಿ (ವರ್ಡ್2007ರಲ್ಲಿ ವರ್ಡ್ ಬಟನ್‌ನಲ್ಲಿ Word Options ನಲ್ಲಿ Customize ಆಯ್ಕೆ ಮಾಡಿ). ಈಗ Keyboard ಬಟನ್ ಕ್ಲಿಕ್ ಮಾಡಿ ನಂತರ ನಿಮಗೆ ಬೇಕಾದ ಆದೇಶಕ್ಕೆ ಬೇಕಾದ ಕೀಲಿಯನ್ನು ಆಯ್ಕೆ ಮಾಡಿ.

ಕಂಪ್ಯೂತರ್ಲೆ

ಆಧುನಿಕ ಗಾದೆಗಳು:
  • ವೆಬ್‌ಕಾಮ್‌ನಲ್ಲಿ ತಂಗಿಯನ್ನು ತೋರಿಸಿ ಅಕ್ಕನನ್ನು ಮದುವೆ ಮಾಡಿದರಂತೆ.
  • ಪ್ರೋಗ್ರಾಂ ಮಾಡಲು ಬಾರದವಳು ಕೀಬೋರ್ಡ್ ಸರಿಯಿಲ್ಲ ಅಂದಳಂತೆ.
  • ಇಂಟರ್‌ನೆಟ್ ದೇವಸ್ಥಾನಕ್ಕೆ ಭೇಟಿ ನೀಡೋಣ ಎಂದರೆ ಬಿಕ್ಷುಕರೆಲ್ಲಿ ಎಂದು ಕೇಳಿದನಂತೆ.
  • ಇಮೈಲಲ್ಲಿ ಹೋದ ಮಾನ ಚಾಟ್‌ನಲ್ಲಿ ಬರುವುದೇ?

ಮಂಗಳವಾರ, ಆಗಸ್ಟ್ 4, 2009

ಗಣಕಿಂಡಿ - ೦೧೨ (ಆಗಸ್ಟ್ ೦೩, ೨೦೦೯)

ಅಂತರಜಾಲಾಡಿ

ಸ್ವಲ್ಪ ಟೈಮ್ ತಿಳಿಸ್ತೀರಾ?

ದಾರಿಯಲ್ಲಿ ಹೋಗುವಾಗ, ಬಸ್ ನಿಲ್ದಾಣದಲ್ಲಿ, ಅಥವಾ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ನಿಮ್ಮಲ್ಲಿ ಜನರು ಸ್ವಲ್ಪ ಟೈಮ್ ಎಷ್ಟಾಯ್ತು ಹೇಳ್ತೀರಾ ಎಂದು ಕೇಳುವುದು ಸಾಮಾನ್ಯ ತಾನೆ? ನಿಮ್ಮ ಕೈಗಡಿಯಾರದ ಸಮಯ ಎಷ್ಟು ಸರಿ? ಅದನ್ನು ತಿಳಿಯುವುದು ಹೇಗೆ? ನಮ್ಮ ದೇಶದ ಸಮಯ ಮಾತ್ರವಲ್ಲ, ಪ್ರಪಂಚದ ಯಾವುದೇ ದೇಶದ ವರ್ತಮಾನ ಸಮಯವನ್ನು ತಿಳಿಯಲು ಸಹಾಯ ಮಾಡುವ ಜಾಲತಾಣ www.timeanddate.com. ಈ ಜಾಲತಾಣದಲ್ಲಿ ಸಮಯ ಮಾತ್ರವಲ್ಲ, ಕ್ಯಾಲೆಂಡರ್, ಎರಡು ದಿನಾಂಕಗಳ ನಡುವೆ ಇರುವ ಒಟ್ಟು ದಿನಗಳನ್ನು ಲೆಕ್ಕ ಹಾಕುವುದು, ಇನ್ನೂ ಹಲವಾರು ಸೌಲಭ್ಯಗಳಿವೆ.

ಡೌನ್‌ಲೋಡ್

ಬಿಟ್‌ಟೊರೆಂಟ್ ಗ್ರಾಹಕ

ಮ್ಯುಟೊರೆಂಟ್ (µTorrent) ಜಗತ್ತಿನ ಅತಿ ಜನಪ್ರಿಯ ಬಿಟ್‌ಟೊರೆಂಟ್ ಗ್ರಾಹಕ. ಇತರೆ ಬಿಟ್‌ಟೊರೆಂಟ್ ಗ್ರಾಹಕ ತಂತ್ರಾಂಶಗಳಿಂದ ಇದು ಗಾತ್ರದಲ್ಲಿ ಅತಿ ಚಿಕ್ಕದು. ಇದರ ಗಾತ್ರ 300 ಕಿಲೊಬೈಟ್‌ಗಿಂತಲೂ ಕಡಿಮೆ. ಇದು ಕೆಲಸ ಮಾಡುತ್ತಿರುವಾಗ ಗಣಕದ ಇತರೆ ಕೆಲಸಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ ಅಂದರೆ ಇತರೆ ಕೆಲಸಗಳು ನಿಧಾನವಾಗುವುದಿಲ್ಲ. ಅತಿ ದೊಡ್ಡ ಗಾತ್ರದ ಫೈಲು ಡೌನ್‌ಲೋಡ್ ಮಾಡುತ್ತಿರುವಿರಾದರೆ ದಿನ ಬಿಟ್ಟು ದಿನ ಬೇಕಾದರೂ ಡೌನ್‌ಲೋಡ್ ಮಾಡಬಹುದು. ರಾತ್ರಿಯಿಡೀ ಡೌನ್‌ಲೋಡ್ ಮಾಡಲು ಹಾಕಿ, ಅರ್ಧರಾತ್ರಿಯಲ್ಲಿ ಡೌನ್‌ಲೋಡ್ ಮುಗಿದರೆ ಗಣಕವನ್ನು ಸ್ವಿಚ್ ಆಫ್ ಮಾಡು ಎಂದು ಬೇಕಿದ್ದರೂ ಆಯ್ಕೆ ಮಾಡಿಕೊಂಡು ನಿಶ್ಚಿಂತೆಯಿಂದ ನಿದ್ದೆ ಮಾಡಬಹುದು. ಮ್ಯುಟೊರೆಂಟ್ ಬೇಕಿದ್ದಲ್ಲಿ www.utorrent.com ಜಾಲತಾಣಕ್ಕೆ ಭೇಟಿ ನೀಡಿ.

e - ಸುದ್ದಿ

ವಿದ್ಯುತ್ ಸಾಕೆಟ್ ಬಳಸಿ ಮಾಹಿತಿಯ ಕಳವು

ಗಣಕವನ್ನು ಬಳಸಲು ವಿದ್ಯುತ್ ಬೇಕು ತಾನೆ? ಗಣಕವನ್ನು ವಿದ್ಯುತ್ ಸಾಕೆಟಿಗೆ ಸಂಪರ್ಕಿಸಿ ಕೆಲಸ ಮಾಡುವಾಗ ಕೀಲಿಮಣೆಯಲ್ಲಿ ಒತ್ತಿದ ಕೀಲಿಗಳನ್ನು ಪತ್ತೆಹಚ್ಚಬಹುದು ಎಂದು ಇತ್ತೀಚೆಗೆ ಸಂಶೋಧನೆಯ ಮೂಲಕ ತೋರಿಸಿ ಕೊಟ್ಟಿದ್ದಾರೆ. ಸಮೀಪದ ಇನ್ನೊಂದು ಸಾಕೆಟನ್ನು ಬಳಸಿ ಅದರಲ್ಲಿ ಉತ್ಪತ್ತಿಯಾಗುತ್ತಿರುವ ಗ್ರೌಂಡ್ ವಿದ್ಯುತ್ ಪ್ರವಾಹವು ಕೀಲಿಮಣೆಯಲ್ಲಿ ಒತ್ತಿದ ಕೀಲಿಗೆ ಅನುಗುಣವಾಗಿರುತ್ತದೆ ಎಂಬುದನ್ನು ಅವರು ಪತ್ತೆ ಹಚ್ಚಿದ್ದಾರೆ. ಅಂದರೆ ಒಬ್ಬರು ಗಣಕದಲ್ಲಿ ಕೆಲಸ ಮಾಡುತ್ತಿರುವಾಗ ಸಮೀಪದ ಇನ್ನೊಂದು ಸಾಕೆಟನ್ನು ಬಳಸಿ ಮಾಹಿತಿಯ ಕಳವು ಮಾಡಬಹುದು!

e- ಪದ

ಬಿಟ್‌ಟೊರೆಂಟ್ (BitTorrent) - ಅಂತರಜಾಲದಲ್ಲಿ ತಂತ್ರಾಂಶ, ಸಂಗೀತ, ಚಲನಚಿತ್ರ, ಅಥವಾ ಇನ್ಯಾವುದೇ ಫೈಲುಗಳನ್ನು ಪ್ರಪಂಚಾದ್ಯಂತ ವಿವಿಧ ವ್ಯಕ್ತಿಗಳು ತಮ್ಮ ಗಣಕಗಳಲ್ಲಿ ಸಂಗ್ರಹಿಸಿಟ್ಟು ಆಸಕ್ತರಿಗೆ ಡೌನ್‌ಲೋಡ್ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಈ ರೀತಿಯ ಸೌಲಭ್ಯಕ್ಕೆ P2P ಅಂದರೆ ಪರ್ಸನ್-ಟು-ಪರ್ಸನ್ ಅರ್ಥಾತ್ ವ್ಯಕ್ತಿಯಿಂದ ವ್ಯಕ್ತಿಗೆ ಎಂದು ಕರೆಯುತ್ತಾರೆ. ಈ ವಿಧಾನದಲ್ಲಿ ಡೌನ್‌ಲೋಡ್ ಮಾಡುವಾಗ ಫೈಲುಗಳು ಒಂದೇ ತಾಣದಿಂದ ಬರುತ್ತವೆ ಎಂದು ಖಾತ್ರಿಯಿಲ್ಲ. ಅವು ತುಂಡುಗಳಾಗಿ ವಿವಿಧ ಗಣಕಗಳಿಂದ ಬರುತ್ತಿರುತ್ತವೆ. ಸಾಮಾನ್ಯವಾಗಿ ಬಹುಪಾಲು ಮುಕ್ತ ತಂತ್ರಾಂಶಗಳು ಈ ವಿಧಾನದಲ್ಲಿ ಹಂಚಿಕೆಯಾಗುತ್ತಿವೆ. ಅದಕ್ಕಿಂತ ಹೆಚ್ಚಾಗಿ ಚಲನಚಿತ್ರ, ತಂತ್ರಾಂಶ, ಸಂಗೀತ ಇತ್ಯಾದಿಗಳ ಚೌರ್ಯ (ಪೈರಸಿ) ನಡೆಯುತ್ತಿರುವುದು ಇದನ್ನೇ ಬಳಸಿ.

e - ಸಲಹೆ

ನಿಮ್ಮ ಗಣಕ ನಿಧಾನವಾಗಿ ಕೆಲಸ ಮಾಡುತ್ತಿದ್ದರೆ ಅದರ ಮೆಮೊರಿಯಲ್ಲಿ ಅನವಶ್ಯಕವಾಗಿ ತುಂಬಿಕೊಂಡಿರುವ ತಂತ್ರಾಂಶಗಳು ಕಾರಣವಿರಬಹುದು. ಸಾಮಾನ್ಯವಾಗಿ ಗಣಕ ಕೆಲಸ ಮಾಡುತ್ತಿರುವಾಗ ಹಲವಾರು ತಂತ್ರಾಂಶಗಳು ಮೆಮೊರಿಯಲ್ಲಿರುತ್ತವೆ, ಇರಲೇ ಬೇಕಾಗುತ್ತವೆ. ಆದರೆ ಇನ್ನೂ ಹಲವಾರು ತಂತ್ರಾಂಶಗಳು ಯಾವಾಗಲು ಮೆಮೊರಿಯಲ್ಲಿರಬೇಕಾಗಿರುವುದಿಲ್ಲ. ಇವನ್ನು ಪತ್ತೆ ಹಚ್ಚಿ ಸ್ವಚ್ಛ ಮಾಡಲು ಹಿಂದಿನ ಸಂಚಿಕೆಯಲ್ಲಿ ಡೌನ್‌ಲೋಡ್ ವಿಭಾಗದಲ್ಲಿ ಸೂಚಿಸಿದ್ದ ವಿನ್‌ಪಾಟ್ರೊಲ್ ತಂತ್ರಾಂಶವನ್ನು ಬಳಸಿ (ಇದು ಬೇಕಿದ್ದರೆ bit.ly/LoCBR ಜಾಲತಾಣಕ್ಕೆ ಭೇಟಿ ನೀಡಿ). ವಿನ್‌ಪಾಟ್ರೊಲ್ ತಂತ್ರಾಂಶದ ಐಕಾನ್ ಮೇಲೆ ಬಲಮೌಸ್ ಕ್ಲಿಕ್ ಮಾಡಿ Display active tasks ಎಂದು ಆಯ್ಕೆ ಮಾಡಿ. ಈಗ ಕಾಣಸಿಗುವ ಪಟ್ಟಿಯಲ್ಲಿ ಅನಗತ್ಯವಾದ ತಂತ್ರಾಂಶಗಳನ್ನು ಕಿತ್ತು ಹಾಕಿ.

ಕಂಪ್ಯೂತರ್ಲೆ

ಕೆಲವು ತರಲೆ ಅನುವಾದಗಳು:
Button state = ಗುಂಡಿ ರಾಜ್ಯ
Mathematical expressions = ಗಣಿತದ ಭಾವನೆಗಳು
Interest table = ಆಸಕ್ತಿ ಮೇಜು

ಭಾನುವಾರ, ಆಗಸ್ಟ್ 2, 2009

ಗಣಕಿಂಡಿ - ೦೧೧ (ಜುಲೈ ೨೭, ೨೦೦೯)

ಅಂತರಜಾಲಾಡಿ

ಚಲನಚಿತ್ರಪ್ರಿಯರಿಗೆ

ಚಲನಚಿತ್ರ ನೋಡದವರ‍್ಯಾರು? ಚಲನಚಿತ್ರ ನೋಡುವ ಮೊದಲು ಸಾಮಾನ್ಯವಾಗಿ ಆ ಚಲನಚಿತ್ರದ ಬಗ್ಗೆ ವಿಮರ್ಶೆಗಳು ಏನು ಹೇಳುತ್ತಿವೆ ಎಂದು ನೋಡುವ ಪರಿಪಾಠವಿದೆ ತಾನೆ? ಹಾಗೆಯೇ, ಸಿನಿಮಾ ನೋಡಿ ಬಂದವರೊಡನೆ ಆ ಸಿನಿಮಾ ಬಗ್ಗೆ ಅಭಿಪ್ರಾಯವನ್ನೂ ಕೇಳುವುದು ಸಾಮಾನ್ಯ. ಸಿನಿಮಾಗಳ ಬಗ್ಗೆ ಸಮಸ್ತ ವಿವರ ನಿಡುವ ಜಾಲತಾಣ www.imdb.com. ಈ ಜಾಲತಾಣದಲ್ಲಿ ಸಿನಿಮಾಗಳ ಹೆಸರು, ನಿರ್ದೇಶಕ, ನಟ, ನಟಿ, ತಂತ್ರಜ್ಞರು ಎಲ್ಲ ವಿವರಗಳು ಸಿಗುತ್ತವೆ. ಆ ಚಲನಚಿತ್ರ ನೋಡಿದವರ ಅಭಿಪ್ರಾಯಗಳು, ಅದರ ಬಗ್ಗೆ ಅವರು ನೀಡಿದ ರೇಟಿಂಗ್ ಎಲ್ಲ ನೋಡಬಹುದು. ಜಗತ್ತಿನ ಶ್ರೇಷ್ಠ ಸಿನಿಮಾಗಳ ಪಟ್ಟಿಯೂ ಇಲ್ಲಿದೆ. ಇನ್ನು ಮುಂದೆ ಸಿನಿಮಾ ನೋಡುವ ಮೊದಲು ಈ ಜಾಲತಾಣಕ್ಕೆ ಭೇಟಿ ನೀಡುತ್ತೀರಿ ತಾನೆ? ಅಂದ ಹಾಗೆ ಈ ಜಾಲತಾಣದಲ್ಲಿ 436 ಕನ್ನಡ ಚಲನಚಿತ್ರಗಳ ವಿವರ ಇದೆ. ಚಲನಚಿತ್ರ ನೋಡಿದ ನಂತರ ಆ ಸಿನಿಮಾದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ದಾಖಲಿಸಲು ಮರೆಯಬೇಡಿ.

ಡೌನ್‌ಲೋಡ್

ನಿಮ್ಮ ಗಣಕಕ್ಕೊಂದು ಕಾವಲುನಾಯಿ

ಪ್ರತಿ ಮನೆಗೊಂದು ಕಾವಲುನಾಯಿ ಬೇಕು ತಾನೆ? ಅದೇ ರೀತಿ ನಿಮ್ಮ ಗಣಕಕ್ಕೂ ಒಂದು ಕಾವಲುನಾಯಿ ರೀತಿ ಕೆಲಸ ಮಾಡುವ ತಂತ್ರಾಂಶ ಬೇಕು. ಇಂತಹ ಒಂದು ಉಚಿತ ತಂತ್ರಾಂಶ ವಿನ್‌ಪಾಟ್ರೋಲ್. ಇದು ದೊರೆಯುವ ಜಾಲತಾಣ bit.ly/LoCBR. ಇದು ಗಣಕದಲ್ಲಿ ನಡೆಯುತ್ತಿರುವ ಎಲ್ಲ ಕ್ರಿಯೆಗಳ ಮೇಲೆ ಒಂದು ಕಣ್ಣಿಟ್ಟಿರುತ್ತದೆ. ಯಾವುದೇ ತಂತ್ರಾಂಶ ತಾನು ಮಾಡಬೇಕಾದ ಕೆಲಸ ಬಿಟ್ಟು ಇತರೆ ಗೌಪ್ಯ ಕೆಲಸ ಮಾಡಲು ಹೊರಟರೆ ಇದು ಕೂಡಲೆ ಬೊಗಳಿ(!) ಎಚ್ಚರಿಕೆ ನೀಡುತ್ತದೆ. ಅಂತರಜಾಲ ವೀಕ್ಷಣೆ ಮಾಡುವಾಗ ಕೆಲವು ಜಾಲತಾಣಗಳು ನಿಮ್ಮ ಅನುಮತಿಯಿಲ್ಲದೆ ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡಲು ಹೊರಟರೆ ಅಥವಾ ಬ್ರೌಸರಿನ ಆಯ್ಕೆಗಳನ್ನು ಬದಲಾವಣೆ ಮಾಡಲು ಪ್ರಯತ್ನಿಸಿದರೆ ವಿನ್‌ಪಾಟ್ರೋಲ್ ತಂತ್ರಾಂಶ ಎಚ್ಚರಿಕೆ ನೀಡುತ್ತದೆ.

e - ಸುದ್ದಿ

ಆಪಲ್ ಗೌಪ್ಯತೆ ಒತ್ತಡಕ್ಕೆ ತಂತ್ರಜ್ಞ ಬಲಿ

ಆಪಲ್ ಕಂಪೆನಿಯ ಐಪಾಡ್ ಮತ್ತು ಐಫೋನ್‌ಗಳು ತಮ್ಮ ವಿನ್ಯಾಸಕ್ಕೆ ಜಗತ್ಪ್ರಸಿದ್ಧ. ತಮ್ಮ ಹೊಸ ಮಾದರಿಯ ಉತ್ಪನ್ನ ಮಾರುಕಟ್ಟೆಗೆ ಇನ್ನು ಆರು ತಿಂಗಳ ನಂತರ ಬಿಡುಗಡೆಯಾಗುತ್ತದೆ ಎಂದು ಅವರು ಘೋಷಿಸಿದೊಡನೆ ಅದು ಹೇಗಿರಬಹುದೆಂಬ ಊಹಾಪೋಹನೆಯ ವಿನ್ಯಾಸಗಳು ನೂರಾರು ಬ್ಲಾಗುತಾಣಗಳಲ್ಲಿ ರಾರಾಜಿಸತೊಡಗುತ್ತವೆ. ಉತ್ಪನ್ನ ಮಾರುಕಟ್ಟೆಗೆ ಬರುವ ತನಕ ಅದು ಹೇಗಿರುತ್ತದೆ ಎಂಬುದನ್ನು ತುಂಬ ಗೌಪ್ಯವಾಗಿ ಇಡಲಾಗುತ್ತದೆ. ಈ ಗೋಪ್ಯತೆಯನ್ನು ಕಾಪಾಡಲಿಕ್ಕಾಗಿ ಆಪಲ್ ಕಂಪೆನಿ ತನ್ನ ಹೊರಗುತ್ತಿಗೆಯ ಕಂಪೆನಿಗಳಿಗೆ ತುಂಬ ಒತ್ತಡ ಹೇರುತ್ತದೆ. ಚೀನಾ ದೇಶದಲ್ಲಿ ಆಪಲ್ ಕಂಪೆನಿಯ ಉತ್ಪನ್ನಗಳ ವಿನ್ಯಾಸದ ಹೊರಗುತ್ತಿಗೆ ಪಡೆದಿದ್ದ ಕಂಪೆನಿ ತಂತ್ರಜ್ಞನೊಬ್ಬ ಈ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿದೆ. ಆತನ ಕಂಪೆನಿಯಲ್ಲಿ ಆಪಲ್‌ನ ೪ನೆ ಆವೃತ್ತಿಯ ಫೋನುಗಳ ವಿನ್ಯಾಸ ನಡೆಯುತ್ತಿತ್ತು. ಒಂದು ಫೋನು ಕಾಣೆಯಾದುದು ಆತನ ಗಮನಕ್ಕೆ ಬಂತು. ಅದನ್ನು ಆತ ವರದಿ ಮಾಡಿದ. ಕಂಪೆನಿಯವರು ಆತನ ಮನೆ ತನಿಖೆ ಮಾಡಿ ಆತನನ್ನು ಕೆಟ್ಟದಾಗಿ ನಡೆಸಿಕೊಂಡರು. ಇದರಿಂದ ನೊಂದ ಆತ ಆತ್ಮಹತ್ಯೆಗೆ ಶರಣಾದ.

e- ಪದ

ಬ್ರೌಸರ್ (browser) -ಜಾಲತಾಣ ವೀಕ್ಷಕ ತಂತ್ರಾಂಶ. ವಿಶ್ವವ್ಯಾಪಿಜಾಲದಲ್ಲಿ (world wide web) ಕೋಟಿಗಟ್ಟಲೆ ಜಾಲತಾಣಗಳಿವೆ (web-sites). ಈ ಜಾಲತಾಣಗಳನ್ನು ವೀಕ್ಷಿಸಲು ಬಳಸುವ ತಂತ್ರಾಂಶವೇ ಬ್ರೌಸರ್. ಹಲವಾರು ಬ್ರೌಸರ್ ತಂತ್ರಾಂಶಗಳಿವೆ. ಮೈಕ್ರೋಸಾಫ್ಟ್ ಕಂಪೆನಿಯ ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಮೊಝಿಲ್ಲಾ ಫೈರ್‌ಪಾಕ್ಸ್, ಆಪಲ್ ಸಫಾರಿ, ಒಪೆರಾ, ಗೂಗ್ಲ್ ಕ್ರೋಮ್ -ಇವು ಕೆಲವು ಉದಾಹರಣೆಗಳು. ಇವುಗಳಲ್ಲಿ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಸದ್ಯಕ್ಕೆ ಜನಪ್ರಿಯತೆಯಲ್ಲಿ ಮೊದಲನೆಯ ಸ್ಥಾನದಲ್ಲಿದೆ.

e - ಸಲಹೆ

ಗಣಕ ನಿಧಾನವಾಗಿ ಕೆಲಸ ಮಾಡುತ್ತಿದ್ದರೆ ಅದಕ್ಕೆ ಹಲವು ಕಾರಣಗಳಿರಬಹುದು. ಅವುಗಳಲ್ಲಿ ಒಂದು ಪ್ರಮುಖ ಕಾರಣ ಹಾರ್ಡ್‌ಡಿಸ್ಕ್‌ನಲ್ಲಿರುವ ಫೈಲುಗಳು ಚಲ್ಲಾಪಿಲ್ಲಿಯಾಗಿರುವುದು. ಈ ಫೈಲುಗಳನ್ನು ಒಂದು ಕ್ರಮದಲ್ಲಿ ಜೋಡಿಸಿ ಖಾಲಿ ಜಾಗವನ್ನು ಕೂಡ ಕ್ರಮವಾಗಿ ಜೋಡಿಸಿದರೆ ಗಣಕ ವೇಗವಾಗಿ ಕೆಲಸ ಮಾಡುತ್ತದೆ. ಇದಕ್ಕೆ ಗಣಕ ಪರಿಭಾಷೆಯಲ್ಲಿ ಡಿಸ್ಕ್ ಡಿಫ್ರಾಗ್ಮೆಂಟೇಶನ್ ಎನ್ನುತ್ತಾರೆ. ಇದಕ್ಕಾಗಿ ಹಾರ್ಡ್‌ಡಿಸ್ಕ್‌ನ ಐಕಾನ್ ಮೇಲೆ ಬಲ ಮೌಸ್ ಗುಂಡಿ ಅದುಮಿ Properties ಆಯ್ಕೆ ಮಾಡಿ. ನಂತರ Tools ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ನಂತರ Defragment now ಎಂಬ ಬಟನ್ ಮೇಲೆ ಒತ್ತಿ.

ಕಂಪ್ಯೂತರ್ಲೆ

ಕೋಲ್ಯ “ನನ್ನ ಮನೆಯಲ್ಲಿರುವ ಬೆಕ್ಕು ನಿನಗೆ ಬೇಕಾ?”
ಸಂತಾ “ಯಾಕೆ? ನಿನಗೆ ಬೇಡವಾ?”
ಕೋಲ್ಯ “ನಾನು ನಾಳೆ ಒಂದು ಹೊಸ ಕಂಪ್ಯೂಟರ್ ಕೊಂಡು ತರುವವನಿದ್ದೇನೆ”
ಸಂತಾ “ಅದಕ್ಕೂ ಬೆಕ್ಕನ್ನು ನನಗೆ ನೀಡುವುದಕ್ಕೂ ಏನು ಸಂಬಂಧ?”
ಕೋಲ್ಯ “ಕಂಪ್ಯೂಟರಿನ ಜೊತೆ ಮೌಸ್ ಇರುತ್ತಲ್ಲ. ಅದಕ್ಕೆ ಬೆಕ್ಕು ಮನೆಯಲ್ಲಿ ಬೇಡ ಎಂದು”