ಬುಧವಾರ, ಸೆಪ್ಟೆಂಬರ್ 23, 2009

ಗಣಕಿಂಡಿ - ೦೧೯ (ಸಪ್ಟಂಬರ್ ೨೧, ೨೦೦೯)

ಅಂತರಜಾಲಾಡಿ

ಮೈಸೂರು ದಸರ ಎಷ್ಟೊಂದು ಸುಂದರ

ಹಳೆಯ ಚಿತ್ರಗೀತೆಯೊಂದರ ಪ್ರಾರಂಭದ ಸಾಲು “ಮೈಸೂರು ದಸರ, ಎಷ್ಟೊಂದು ಸುಂದರ, ಚೆಲ್ಲಿದೆ ನಗೆಯಾ ಪನ್ನೀರಾ...”. ಹೌದು. ಮೈಸೂರು ದಸರ ನಿಜಕ್ಕೂ ಬಲು ಸುಂದರ. ಮೈಸೂರು ದಸರ ಜಗತ್ಪ್ರಸಿದ್ಧ. ಅದನ್ನು ನೋಡಿ ಆನಂದಿಸಲು ದೇಶವಿದೇಶಗಳಿಂದ ಸಾವಿರಾರು ಜನರು ಬರುತ್ತಾರೆ. ದಸರ ಸಮಯದಲ್ಲಿ ಹಲವಾರು ಕಾರ್ಯಕ್ರಮಗಳು ಮೈಸೂರಿನಾದ್ಯಂತ ಜರಗುತ್ತವೆ. ಯಾವ ದಿನ ಎಲ್ಲಿ ಏನು ಕಾರ್ಯಕ್ರಮ ನಡೆಯುತ್ತದೆ, ಎಲ್ಲಿ ವಸತಿ ಸಿಗಬಹುದು, ಮೈಸೂರಿನ ಸುತ್ತಮುತ್ತ ಯಾವ ಯಾವ ಪ್ರೇಕ್ಷಣೀಯ ಸ್ಥಳಗಳಿವೆ, ಅಲ್ಲಿಗೆ ಹೋಗುವುದು ಹೇಗೆ, ಅಷ್ಟು ಮಾತ್ರವಲ್ಲ, ಮೈಸೂರಿನಲ್ಲಿ ಎಲ್ಲೆಲ್ಲಿ ಬ್ಯಾಂಕುಗಳ ಎಟಿಎಂಗಳಿವೆ -ಹೀಗೆ ಹಲವಾರು ಉಪಯುಕ್ತ ಮಾಹಿತಿಗಳನ್ನು ನೀಡುವ ಜಾಲತಾಣ - www.mysoredasara.com. ಇದು ಇಂಗ್ಲಿಶ್ ಹಾಗೂ ಕನ್ನಡ ಭಾಷೆಗಳಲ್ಲಿದೆ. ಮೈಸೂರು ದಸರ ಕಾರ್ಯಕ್ರಮದ ಅಧಿಕೃತ ಜಾಲತಾಣ ಇದು. ಉತ್ತಮ ಗುಣಮಟ್ಟದ ಈ ಜಾಲತಾಣದ ಕನ್ನಡ ವಿಭಾಗ ಯುನಿಕೋಡ್‌ನಲ್ಲಿದೆ.

ಡೌನ್‌ಲೋಡ್

ಯುಟ್ಯೂಬಿನಿಂದ ವೀಡಿಯೋ ಬೇಕೆ?

ಚಿಕ್ಕ ಚಿಕ್ಕ ವೀಡಿಯೋ ತುಣುಕುಗಳಿಂದ ಹಿಡಿದು ಪೂರ್ತಿ ಪ್ರಮಾಣದ ಚಲನಚಿತ್ರಗಳ ತನಕ ಎಲ್ಲ ರೀತಿಯ ವೀಡಿಯೋಗಳಿರುವ ಜಾಲತಾಣ ಯುಟ್ಯೂಬ್ (youtube.com). ಈ ಜಾಲತಾಣದಲ್ಲಿ ಸಹಸ್ರಾರು ವೀಡಿಯೋಗಳಿವೆ. ಹಲವು ಉಪಯುಕ್ತ, ಶೈಕ್ಷಣಿಕ ವೀಡಿಯೋಗಳೂ ಇವೆ. ಇವನ್ನೆಲ್ಲ ಆ ಜಾಲತಾಣದಲ್ಲೇ ವೀಕ್ಷಿಸಬೇಕು. ಅಂದರೆ ಪ್ರತಿ ಸಾರಿ ವೀಡಿಯೋ ವೀಕ್ಷಿಸಲೂ ಜಾಲತಾಣಕ್ಕೆ ಭೇಟಿ ನೀಡಬೇಕು. ಇನ್ನೂ ಒಂದು ಸಮಸ್ಯೆಯಿದೆ. ಉತ್ತಮ ಬ್ರಾಡ್‌ಬ್ಯಾಂಡ್ ಸಂಪರ್ಕವಿದ್ದರೂ ವೀಡಿಯೋ ನಿಂತು ನಿಂತು ಬರುತ್ತದೆ. ಯುಟ್ಯೂಬ್ ಜಾಲತಾಣದಿಂದ ವೀಡಿಯೋಗಳನ್ನು ನಿಮ್ಮ ಗಣಕಕ್ಕೆ ಡೌನ್‌ಲೋಡ್ ಮಾಡಿಕೊಳ್ಳಲು ಸಹಾಯ ಮಾಡುವ ತಂತ್ರಾಂಶ - YouTube Downloader. ಇದು ಬೇಕಿದ್ದಲ್ಲಿ http://bit.ly/oRMpZ ಜಾಲತಾಣಕ್ಕೆ ಭೇಟಿ ನೀಡಿ.

e - ಸುದ್ದಿ

ಅಂತರಜಾಲಕ್ಕಿಂತ ಪಾರಿವಾಳವೇ ವೇಗ

ಅಂತರಜಾಲದ ಮೂಲಕ ೮೦ ಕಿಮೀ ದೂರಕ್ಕೆ ಮಾಹಿತಿ ಸಾಗಿಸಲು ಎಷ್ಟು ಸಮಯ ಹಿಡಿಯಬಹುದು? ಮಾಹಿತಿಯ ಗಾತ್ರವನ್ನು ಇದು ಅವಲಂಬಿಸಿದೆ. ಈಗಿನ ಬ್ರಾಡ್‌ಬ್ಯಾಂಡ್ ಸಂಪರ್ಕ ಕಾಲದಲ್ಲಿ ಇದೇನು ತುಂಬ ಸಮಯ ತೆಗೆದುಕೊಳ್ಳುವ ಕೆಲಸವಲ್ಲ ಅಂತೀರಾ? ಹಾಗಿದ್ದರೆ ದಕ್ಷಿಣ ಆಫ್ರಿಕಾಕ್ಕೆ ಬನ್ನಿ. ಅಲ್ಲಿ ಅಂತರಜಾಲಕ್ಕಿಂತ ಪಾರಿವಾಳವೇ ವೇಗ ಎಂದು ಸಾಧಿಸಿ ತೋರಿಸಲಾಗಿದೆ. ತನ್ನ ಕಾಲಿಗೆ ಮಾಹಿತಿಭರಿತ ಡಾಟಾ ಕಾರ್ಡ್ ಕಟ್ಟಿಕೊಂಡ ಪಾರಿವಾಳವು ೮೦ ಕಿಮೀ ದೂರವನ್ನು ೬೮ ನಿಮಿಷಗಳಲ್ಲಿ ಸಾಗಿತು. ಅಂತರಜಾಲದ ಮೂಲಕ ಅಷ್ಟೇ ಮಾಹಿತಿಯನ್ನು ಸಾಗಿಸಲು ಪ್ರಯತ್ನಿಸಲಾಯಿತು. ೧೨೭ ನಿಮಿಷಗಳ ನಂತರ ಕೇವಲ ಶೇಕಡ ೪ರಷ್ಟು ಮಾಹಿತಿಯನ್ನು ಸಾಗಿಸಲು ಸಾಧ್ಯವಾಯಿತು. ಇದು ದಕ್ಷಿಣ ಆಫ್ರಿಕಾದ ಕತೆ. ನಮ್ಮಲ್ಲಿ ಪರಿಸ್ಥಿತಿ ಅಷ್ಟು ಕೆಟ್ಟಿಲ್ಲ ಎನ್ನುತ್ತೀರಾ? ಹಾಗಿದ್ದರೆ ಬೆಂಗಳೂರಿನಂತಹ ದೊಡ್ಡ ನಗರದಿಂದ ಕೇವಲ ೨೦ ಕಿಮೀ ದೂರ ಹೋಗಿ ನೋಡಿ.

e- ಪದ

ಗುಂಪುಗುತ್ತಿಗೆ

ಕ್ರೌಡ್‌ಸೋರ್ಸಿಂಗ್ -(crowdsourcing) --ಜನರಿಂದ ಸಹಾಯ ಪಡೆದುಕೊಂಡು ವಾಣಿಜ್ಯ ಅಥವಾ ಇನ್ನಾವುದಾದರೂ ಸಮಸ್ಯೆಗೆ ಪರಿಹಾರ ಅಥವಾ ತಂತ್ರಾಂಶ ತಯಾರಿಸುವುದು. ಉದಾಹರಣೆಗೆ ಜನರೆಲ್ಲ ಸೇರಿ ಒಂದು ನಿಘಂಟು ತಯಾರಿಸುವುದು. ಅನುವಾದ ಆಗಬೇಕಾಗಿರುವ ಪದ ಅಥವಾ ಪದಗುಚ್ಛಗಳನ್ನು ಅಂತರಜಾಲದಲ್ಲಿ ಇಟ್ಟು ಎಲ್ಲರನ್ನು ಇವುಗಳನ್ನು ಅನುವಾದಿಸಲು ಆಹ್ವಾನಿಸುವುದು. ಈ ವಿಧಾನದಲ್ಲಿ ಸಹಾಯಹಸ್ತ ನೀಡುವ ಯಾರಿಗೂ ಸಂಭಾವನೆ ನೀಡಲಾಗುವುದಿಲ್ಲ. ಹೊರಗುತ್ತಿಗೆಗೆ ಬಳಸುವ ವಿಖ್ಯಾತ ಪದ ಔಟ್‌ಸೋರ್ಸಿಂಗ್ ಪದವನ್ನೇ ತಿರುಚಿ ಈ ಪದದ ಸೃಷ್ಟಿ ಮಾಡಲಾಗಿದೆ.

e - ಸಲಹೆ

ಗಣಕಿಂಡಿ ಓದುಗರಾದ ಉಮೇಶ ಗೌಡರ ಪ್ರಶ್ನೆ: ನಾನು ಕನ್ನಡ ಬ್ಲಾಗುಗಳನ್ನು ಮತ್ತು ಕೆಲವು ಕನ್ನಡ ಜಾಲತಾಣಗಳನ್ನು ಓದುವಾಗ ಚಿಕ್ಕಚಿಕ್ಕ ಚೌಕಗಳನ್ನು ಮಾತ್ರ ಕಾಣುತ್ತೇನೆ. ಕನ್ನಡದಲ್ಲಿ ಅಕ್ಷರಗಳು ಕಾಣಿಸುವುದಿಲ್ಲ. ಇದಕ್ಕೆ ಪರಿಹಾರವೇನು?
ಉ: ನಿಮ್ಮ ಗಣಕದಲ್ಲಿ ಕನ್ನಡ ಯುನಿಕೋಡ್ ಶಿಷ್ಟತೆಯನ್ನು ನೀವು ಚಾಲನೆಗೊಳಿಸದಿದ್ದಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಇತ್ತೀಚೆಗೆ ಬಹುಪಾಲು ಕನ್ನಡ ಜಾಲತಾಣಗಳು ಮತ್ತು ಬ್ಲಾಗ್ ತಾಣಗಳು ಯುನಿಕೋಡ್ ಶಿಷ್ಟತೆಯನ್ನು ಪಾಲಿಸುತ್ತಿವೆ. ಇದು ಜಾಗತಿಕ ಶಿಷ್ಟತೆ. ಇಂತಹ ಜಾಲತಾಣಗಳನ್ನು ವೀಕ್ಷಿಸಲು ನಿಮ್ಮ ಗಣಕವು ಭಾರತೀಯ ಭಾಷೆಗಳ ಯುನಿಕೋಡ್ ಬೆಂಬಲಿತವಾಗಿರಬೇಕು. ವಿಂಡೋಸ್‌ನಲ್ಲಾದರೆ ಎಕ್ಸ್‌ಪಿ ಮತ್ತು ನಂತರದ ಎಲ್ಲ ಆವೃತ್ತಿಗಳಲ್ಲಿ ಈ ಸೌಲಭ್ಯ ಇದೆ. ಆದರೆ ಅದನ್ನು ಚಾಲನೆಗೊಳಿಸಬೇಕು. ಅದು ಹೇಗೆ? ವಿವರಗಳಿಗೆ ಈ ಜಾಲತಾಣ ನೋಡಿ http://bit.ly/Qhzcl

ಕಂಪ್ಯೂತರ್ಲೆ

ಮಾಹಿತಿಯ ತೂಕವೆಷ್ಟು?

ಇದು ಮೈಕ್ರೋಸಾಫ್ಟ್ ಕಂಪೆನಿಯವರು ತಮ್ಮ ಗ್ರಾಹಕರು ಮತ್ತು ಇತರರು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲು, ಒಬ್ಬರೊಬ್ಬರಿಗೆ ಸಹಾಯ ಮಾಡಲು ಹಾಗೂ ಪರಸ್ಪರ ವಿಚಾರವಿನಿಮಯ ಮಾಡಿಕೊಳ್ಳಲು ನಿರ್ಮಿಸಿರುವ ಚರ್ಚಾಕೂಟದಲ್ಲಿ ಒಬ್ಬರು ನಿಜವಾಗಿಯೂ ಕೇಳಿದ ಪ್ರಶ್ನೆ: “ಒಂದು ಗಿಗಾಬೈಟ್ ಮಾಹಿತಿ ಎಷ್ಟು ತೂಗುತ್ತದೆ? ನಾನು ಲ್ಯಾಪ್‌ಟಾಪ್ ಕೊಂಡುಕೊಂಡಾಗ ಇದ್ದ ತೂಕಕ್ಕಿಂತ ಅದರಲ್ಲಿ ನಾನು ಸಾಕಷ್ಟು ಮಾಹಿತಿಗಳನ್ನು ಸೇರಿಸಿದ ಕಾರಣ ಈಗ ಅದರ ತೂಕ ಜಾಸ್ತಿಯಾಗಿದೆ. ಹೀಗೆ ಜಾಸ್ತಿಯಾಗಿ ನನ್ನ ಹಾರ್ಡ್‌ಡಿಸ್ಕ್ ಪೂರ್ತಿ ತುಂಬಿದಾಗ ಅದರ ತೂಕ ಎಷ್ಟು ಜಾಸ್ತಿ ಆಗುವುದು?”

ಬುಧವಾರ, ಸೆಪ್ಟೆಂಬರ್ 16, 2009

ಗಣಕಿಂಡಿ - ೦೧೮ (ಸಪ್ಟಂಬರ್ ೧೪, ೨೦೦೯)

ಅಂತರಜಾಲಾಡಿ

ಪುಸ್ತಕಪ್ರಿಯರಿಗೆ

ಮನುಷ್ಯನನ್ನು ಪರಿಪೂರ್ಣನನ್ನಾಗಿಸುವುದು ಪುಸ್ತಕಗಳ ಓದುವಿಕೆ ಅಂತ ಹಲವಾರು ಪ್ರಾಜ್ಞರು ಹೇಳಿದ್ದಾರೆ. ಅಂತರಜಾಲದಲ್ಲಿ ಪುಸ್ತಕಗಳನ್ನು ಓದಬಲ್ಲ ಜಾಲತಾಣಗಳು ಹಲವಾರಿವೆ. ಪ್ರಾಜೆಕ್ಟ್ ಗುಟೆನ್‌ಬರ್ಗ್ (gutenberg.org) ಅವುಗಳಲ್ಲಿ ತುಂಬ ಪ್ರಖ್ಯಾತ. ಹಕ್ಕುಸ್ವಾಮ್ಯದಿಂದ ಹೊರಬಂದ ಪುಸ್ತಕಗಳನ್ನು ಇಲ್ಲಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಗೂಗ್ಲ್‌ನವರು ಪುಸ್ತಕ ಪ್ರಕಾಶನ ಸಂಸ್ಥೆಗಳು ಮತ್ತು ಲೇಖನರ ಜೊತೆ ಒಪ್ಪಂದ ಮಾಡಿಕೊಂಡು ಇನ್ನೊಂದು ರೀತಿಯ ಸವಲತ್ತು ನೀಡಿದ್ದಾರೆ. ಅದುವೇ ಗೂಗ್ಲ್ ಬುಕ್ಸ್ (books.google.com). ಈ ಜಾಲತಾಣದಲ್ಲಿ ಮಾರಾಟಕ್ಕೆ ದೊರಕುವ, ಉಚಿತವಾಗಿರುವ, ಸ್ಯಾಂಪಲ್ ಪುಟಗಳನ್ನು ಮಾತ್ರ ನೀಡಿರುವ ಪುಸ್ತಕಗಳನ್ನು ಓದಬಹುದು. ಪುಸ್ತಕಗಳನ್ನು ಜಾಲತಾಣದಲ್ಲೇ ಓದಬೇಕು. ಪುಸ್ತವನ್ನು ನಿಮ್ಮ ಗಣಕಕ್ಕೆ ಡೌನ್‌ಲೋಡ್ ಮಾಡಲಾಗುವುದಿಲ್ಲ. ಅಂದರೆ ಪೂರ್ತಿ ಪುಸ್ತಕ ಓದಲು ಅಂತರಜಾಲ ಸಂಪರ್ಕ ನಿರಂತರವಾಗಿರಬೇಕು. ಇದಕ್ಕೆ ಅಪವಾದವೂ ಇವೆ. ಅದು ಹೇಗೆಂದರೆ ಲೇಖಕ ಅಥವಾ ಪ್ರಕಾಶಕರೇ ಡೌನ್‌ಲೋಡ್ ಮಾಡಿಕೊಳ್ಳಬಲ್ಲ ಪಿಡಿಎಫ್ ರೂಪದಲ್ಲಿ ಪುಸ್ತಕವನ್ನು ನೀಡಿರಬೇಕು.

ಡೌನ್‌ಲೋಡ್

ಗೂಗ್ಲ್‌ನಿಂದ ಪುಸ್ತಕ ಡೌನ್‌ಲೋಡ್ ಮಾಡಿ

ಗೂಗ್ಲ್ ಬುಕ್ಸ್ ಜಾಲತಾಣದಿಂದ ಪುಸ್ತಕವನ್ನು ಸಾಮಾನ್ಯವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಆಗುವದಿಲ್ಲ. ಆದರೆ ಇಲ್ಲಿಂದ ಪುಸ್ತಗಳನ್ನು ನಿಮ್ಮ ಗಣಕಕ್ಕೆ ಡೌನ್‌ಲೋಡ್ ಮಾಡಲೆಂದೇ ಒಂದು ಉಚಿತ ತಂತ್ರಾಂಶ ಇದೆ. ಅದುವೇ Google Book Downloader (http://bit.ly/bQFoV). ಇದು ಒಂದು ಚಿಕ್ಕ ತಂತ್ರಾಂಶ. ಇದನ್ನು ಬಳಸಿ ಗೂಗ್ಲ್ ಪುಸ್ತಕ ಜಾಲತಾಣದಿಂದ ಎಲ್ಲ ರೀತಿಯ ಪುಸ್ತಗಳನ್ನು ನಿಮ್ಮ ಗಣಕ್ಕೆ ಪಿಡಿಎಫ್ ರೂಪದಲ್ಲಿ ಪ್ರತಿ ಮಾಡಿಕೊಳ್ಳಬಹುದು. ಇದನ್ನು ಬಳಸಲು ಮೈಕ್ರೋಸಾಫ್ಟ್‌ನವರ ಡಾಟ್‌ನೆಟ್ ತಂತ್ರಾಂಶವು ನಿಮ್ಮ ಗಣಕದಲ್ಲಿ ಇರತಕ್ಕದ್ದು. ಹೆಚ್ಚಿನ ವಿವರಗಳು ಜಾಲತಾಣದಲ್ಲಿವೆ. ಇದನ್ನು ಬಳಸಿ ಪೂರ್ತಿ ಪುಸ್ತಕ ಡೌನ್‌ಲೋಡ್ ಮಾಡಲು ದೀರ್ಘ ಕಾಲ ಬೇಕಾಗುತ್ತದೆ.

e - ಸುದ್ದಿ

ದಪ್ಪಕ್ಷರದಲ್ಲಿ ಇಮೈಲ್ ಕಳುಹಿದ್ದಕ್ಕೆ ದಂಡ

ನ್ಯೂಝಿಲ್ಯಾಂಡ್‌ನಿಂದ ಒಂದು ವಿಚಿತ್ರ ವರದಿ ಬಂದಿದೆ. ಒಬ್ಬಾಕೆ ತನ್ನ ಸಹೋದ್ಯೋಗಿಗಳಿಗೆ ಇಂಗ್ಲಿಶ್‌ನ ಕಾಪಿಟಲ್ ಅಕ್ಷರಗಳಲ್ಲಿ ಇಮೈಲ್ ಮಾಡಿದಳು. ಅವಳ ಉದ್ದೇಶವೇನೋ ಒಳ್ಳೆಯದೇ ಆಗಿತ್ತು. ಕಚೇರಿಯ ವಿವಿಧ ಸವಲತ್ತುಗಳನ್ನು ಬಳಸುವಾಗ ಯಾವ ಯಾವ ರೀತಿಯ ಎಚ್ಚರಿಕೆ ವಹಿಸಬೇಕು ಎಂಬುದನ್ನು ಒತ್ತಿ ಹೇಳುವುದು ಆಕೆಯ ಉದ್ದೇಶವಾಗಿತ್ತು. ವಿಷಯಗಳನ್ನು ಒತ್ತಿ ಹೇಳಲು ಆಕೆ ಕ್ಯಾಪಿಟಲ್ ಅಕ್ಷರಗಳನ್ನು ಮಾತ್ರವಲ್ಲ, ದಪ್ಪಕ್ಷರಗಳನ್ನೂ ಬಳಸಿ ಅಲ್ಲಲ್ಲಿ ಅಕ್ಷರಗಳಿಗೆ ಕೆಂಪು ಬಣ್ಣ ಬಳಿದಿದ್ದಳು. ಅಂತರಜಾಲ ಪರಿಭಾಷೆಯಲ್ಲಿ ಕ್ಯಾಪಿಟಲ್ ಅಕ್ಷರಗಳ ಬಳಕೆ ಎಂದರೆ ಬೈಗುಳ ಎಂದರ್ಥ. ಈ ತಪ್ಪಿಗಾಗಿ ಆಕೆಯನ್ನು ಕೆಲಸದಿಂದ ತೆಗೆದುಹಾಕಲಾಯಿತು. ಆಕೆ ನ್ಯಾಯಾಲಯದಲ್ಲಿ ದಾವೆ ಹೂಡಿ ಕಂಪೆನಿಯಿಂದ ತಪ್ಪು ದಂಡವನ್ನು ಪಡೆದಳೆಂದು ಇತ್ತೀಚೆಗೆ ವರದಿಯಾಗಿದೆ.

e- ಪದ

ಬೆಂಕಿಹಚ್ಚುವುದು

ಪ್ಲೇಮಿಂಗ್ (flaming) - ಅಂತರಜಾಲದಲ್ಲಿರುವ ಚರ್ಚಾ ವೇದಿಕೆಗಳಲ್ಲಿ ಸಂದೇಶಗಳನ್ನು ಸೇರಿಸುವಾಗ ಅಥವಾ ಸಂದೇಶಗಳಿಗೆ ಉತ್ತರಿಸುವಾಗ ಇನ್ನೊಬ್ಬರನ್ನು ಅವಹೇಳನ ಮಾಡುವುದು ಅಥವಾ ಕೆಣಕುವುದು. ಉದಾಹರಣೆಗೆ ಒಬ್ಬಾತ ಭಾರತೀಯ ತಂತ್ರಾಂಶಗಳಲ್ಲಿ ಒಂದಾದ ತಮಿಳು ಭಾಷೆಯನ್ನು ಬಳಸುವಾಗ ಕಂಡುಬಂದ ತೊಂದರೆಯನ್ನು ತೋಡಿಕೊಂಡ ಎಂದಿಟ್ಟುಕೊಳ್ಳೋಣ. ಅದನ್ನು ಓದಿದ ಕನ್ನಡಿಗನೊಬ್ಬ ತಮಿಳರನ್ನಾಗಲೀ, ಕಾವೇರಿ ವಿವಾದವನ್ನಾಗಲೀ ಅಲ್ಲಿಗೆ ಎಳೆದು ತಂದು ಜಗಳ ಹುಟ್ಟುಹಾಕುವುದು. ಅದಕ್ಕಾಗಿ ಆತ ಬಳಸಿದ ಸಂದೇಶಕ್ಕೆ ಫ್ಲೇಮಿಂಗ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಮಾತುಕತೆ ನಡೆಸುವಾಗ (ಚಾಟ್ ಮಾಡುವಾಗ) ಅಥವಾ ಇಮೈಲ್‌ನಲ್ಲಿ ಇಂಗ್ಲಿಶ್ ಭಾಷೆಯ ಕ್ಯಾಪಿಟಲ್ ಅಕ್ಷರಗಳ ಬಳಕೆ ಮಾಡಿದರೆ ಅದನ್ನು ಬೈಗುಳ ಎಂದು ಮತ್ತು ಫ್ಲೇಮಿಂಗ್‌ನ ಒಂದು ವಿಧಾನ ಎಂದೇ ಪರಿಗಣಿಸಲಾಗುತ್ತದೆ.

e - ಸಲಹೆ

ಡೆಸ್ಕ್‌ಟಾಪ್‌ಗೆ ಇನ್ನೊಂದು ದಾರಿ

ಗಣಕದಲ್ಲಿ ಹಲವಾರು ವಿಂಡೋಗಳನ್ನು ತೆರೆದಿದ್ದಾಗ ಡೆಸ್ಕ್‌ಟಾಪ್‌ಗೆ ನೇರವಾಗಿ ಹೋಗಲು ಒಂದು ಅಡ್ಡದಾರಿಯನ್ನು (ಶಾರ್ಟ್‌ಕಟ್) ಹಿಂದೊಮ್ಮೆ ನೀಡಲಾಗಿತ್ತು (ಗಣಕಿಂಡಿ, ಜೂನ್ ೧, ೨೦೦೯). ಅದನ್ನು ಓದಿದ ನಮ್ಮ ಓದುಗರಲ್ಲೊಬ್ಬರಾದ ಶಿವಶಂಕರ ವಿಷ್ಣು ಯಳವತ್ತಿಯವರು ನನಗೆ ಮರೆತುಹೋಗಿದ್ದ ಇನ್ನೊಂದು ಸರಳ ಉಪಾಯವನ್ನು ನೆನಪಿಸಿದ್ದಾರೆ. ಕೀಲಿಮಣೆಯಲ್ಲಿರುವ ವಿಂಡೋಸ್ ಕೀಲಿಯ ಜೊತೆ D ಅಕ್ಷರದ ಕೀಲಿಯನ್ನು ಒತ್ತಿದರೆ ನೇರವಾಗಿ ಡೆಸ್ಕ್‌ಟಾಪ್‌ಗೆ ಹೋಬಗಹುದು.

ಕಂಪ್ಯೂತರ್ಲೆ

ಕೋಲ್ಯನಲ್ಲಿರುವ ಒಂದು ಸಿ.ಡಿ. ಆತನ ಸ್ನೇಹಿತನಿಗೆ ಬೇಕಾಗಿತ್ತು. ಆತ ಕೋಲ್ಯನಿಗೆ ಅದರ ಪ್ರತಿ ಮಾಡಿ ತೆಗೆದುಕೊಂಡು ಬರಲು ಹೇಳಿದ. ಮರುದಿನ ಸ್ನೇಹಿತನ ಮನೆಯಲ್ಲಿ ಕೋಲ್ಯ ಪ್ರತ್ಯಕ್ಷನಾದ. ಆತನ ಕೈಯಲ್ಲಿ ಏನಿತ್ತು ಗೊತ್ತೆ? ಆತನ ಸಿ.ಡಿ.ಯ ಕ್ಸೆರಾಕ್ಸ್ ಪ್ರತಿ!

ಮಂಗಳವಾರ, ಸೆಪ್ಟೆಂಬರ್ 8, 2009

ಗಣಕಿಂಡಿ - ೦೧೭ (ಸಪ್ಟಂಬರ್ ೦೭, ೨೦೦೯)

ಅಂತರಜಾಲಾಡಿ

ದೇಗುಲ ದರ್ಶನ

ಕರ್ನಾಟಕದಲ್ಲಿ ನೂರಾರು ದೇವಸ್ಥಾನಗಳಿವೆ. ಅಲ್ಲಿಗೆ ಭೇಟಿ ನೀಡುವ ಬಯಕೆ ಹಲವರಿಗಿರಬಹುದು. ಯಾವ ದೇವಸ್ಥಾನ ಎಲ್ಲಿದೆ? ಯಾವ ದೇವರ ಬಗ್ಗೆ ದೇವಸ್ಥಾನ ಎಲ್ಲಿದೆ? ಯಾವ ಜಿಲ್ಲೆಯಲ್ಲಿ ಯಾವ ದೇವರ ದೇವಸ್ಥಾನ ಇದೆ? ಈ ದೇವಸ್ಥಾನಗಳಿಗೆ ಹೋಗುವುದು ಹೇಗೆ? ಹತ್ತಿರದ ಬಸ್, ರೈಲು, ವಿಮಾನ ನಿಲ್ದಾಣ ಎಲ್ಲಿವೆ? ಈ ರೀತಿಯ ಹಲವು ಮಾಹಿತಿ ನೀಡುವ ಜಾಲತಾಣ karnatakatemples.com. ಬಹುಶಃ ಕನ್ನಡ ಗೊತ್ತಿಲ್ಲದ ಹೊರ ರಾಜ್ಯ ಮತ್ತು ವಿದೇಶದ ಪ್ರವಾಸಿಗಳನ್ನು ಉದ್ದೇಶಿಸಿ ಈ ಜಾಲತಾಣದಲ್ಲಿಯ ವಿವರಗಳು ಇಂಗ್ಲೀಶಿನಲ್ಲಿವೆ. ಇದೇ ಮಾದರಿಯ ಆದರೆ ಎಲ್ಲ ಮಾಹಿತಿಗಳು ಕನ್ನಡದಲ್ಲಿರುವ ಜಾಲತಾಣ ourtemples.in.

ಡೌನ್‌ಲೋಡ್

ಉಚಿತ ವೈರಸ್ ನಿರೋಧಕ

ಗಣಕಗಳಿಗೆ ವೈರಸ್, ಟ್ರೋಜನ್, ಸ್ಪೈವೇರ್ ಇತ್ಯಾದಿ ಉಪದ್ರವಕಾರಿ ತಂತ್ರಾಂಶಗಳ ಬಾಧೆ ತಪ್ಪಿದ್ದಲ್ಲ. ಸರಿಯಾಗಿ ಸುರಕ್ಷೆ ಮಾಡದಿದ್ದಲ್ಲಿ ಈ ಪೋಕರಿ ತಂತ್ರಾಂಶಗಳು ಗಣಕದೊಳಗೆ ನುಸುಳಿ ತೊಂದರೆ ನೀಡುತ್ತವೆ. ಈ ರೀತಿ ತೊಂದರೆಯಿಂದ ತಪ್ಪಿಸಿಕೊಳ್ಳಲು ಹಲವು ವೈರಸ್ ನಿರೋಧಕ ತಂತ್ರಾಂಶಗಳು ಲಭ್ಯವಿವೆ. ಇವುಗಳಿಗೆ ಆಂಟಿ ವೈರಸ್ ತಂತ್ರಾಂಶಗಳೆನ್ನುತ್ತಾರೆ. ಇಂತಹ ತಂತ್ರಾಂಶಗಳು ಹಲವಾರಿವೆ. ಇಂತಹ ಒಂದು ಉಚಿತ ತಂತ್ರಾಂಶ AVG Anti-Virus Free Edition. ಇದು ದೊರೆಯುವ ಜಾಲತಾಣದ ವಿಳಾಸ http://bit.ly/72S4S. ಮನೆಗಳಲ್ಲಿ ಉಪಯೋಗಿಸಲು ಮಾತ್ರ ಇದು ಉಚಿತ. ಇದು ವೈರಸ್ ಮಾತ್ರವಲ್ಲದೆ ಟ್ರೋಜನ್‌ಗಳನ್ನೂ ಹಿಡಿಯುತ್ತದೆ.

e - ಸುದ್ದಿ

ಟ್ವಿಟ್ಟರ್ ಹಾಲಿವುಡ್ ಸಿನಿಮಾಗಳನ್ನು ಕೊಲ್ಲುತ್ತಿದೆ

ಸಾಮಾನ್ಯವಾಗಿ ಚಲನಚಿತ್ರಗಳಿಗೆ ಹೋಗುವ ಮೊದಲು ಜನರು ಇತರರನ್ನು ಆ ಸಿನಿಮಾದ ಬಗ್ಗೆ ಅಭಿಪ್ರಾಯ ಕೇಳುತ್ತಾರೆ. ಅದರ ಬಗ್ಗೆ ಪತ್ರಿಕೆ ಮತ್ತು ಅಂತರಜಾಲದಲ್ಲಿ ಬಂದ ವಿಮರ್ಶೆಗಳನ್ನು ಓದುತ್ತಾರೆ. ನಂತರ ಆ ಸಿನಿಮಾಕ್ಕೆ ಹೋಗಬೇಕೇ ಬೇಡವೇ ಎಂದು ತೀರ್ಮಾನಿಸುತ್ತಾರೆ. ಇತ್ತೀಚೆಗೆ ಚುಟುಕು ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್ ತುಂಬ ಜನಪ್ರಿಯವಾಗುತ್ತಿದೆ. ಇದರ ಜನಪ್ರಿಯತೆ ಮತ್ತು ಅದರ ಶಕ್ತಿ ಎಷ್ಟಿದೆಯೆಂದರೆ ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಹಾಲಿವುಡ್ ಸಿನಿಮಾಗಳ ಸೋಲು ಗೆಲುವು ಟ್ವಿಟ್ಟರನ್ನು ಅವಲಂಬಿಸಿದೆ. ಟ್ವಿಟ್ಟರಿನಲ್ಲಿ ಕೇವಲ ೧೪೦ ಪದಗಳ ಮಿತಿಯಲ್ಲಿ ಬ್ಲಾಗ್ ಮಾಡಬೇಕು. ಸಿನಿಮಾ ನೋಡುತ್ತಿದ್ದಂತೆಯೇ ಮತ್ತು ನೋಡಿದ ನಂತರ ಜನರು ಅದರ ಬಗ್ಗೆ ಅಭಿಪ್ರಾಯ ಬರೆಯುತ್ತಿದ್ದಾರೆ. ಅದನ್ನು ನೋಡಿದ ಜನರು ಸಿನಿಮಾ ನೋಡುವ ಅಥವಾ ನೋಡದಿರುವ ತೀರ್ಮಾನ ಮಾಡುತ್ತಾರೆ. ಇತ್ತೀಚೆಗೆ ಬಿಡುಗಡೆಯಾದ ಅರ್ಧ ಡಜನ್‌ನಷ್ಟು ಹಾಲಿವುಡ್ ಸಿನಿಮಾಗಳು ಟ್ವಿಟ್ಟರ್ ಪ್ರಭಾವದಿಂದಾಗಿ ನೆಲಕಚ್ಚಿವೆ.

e- ಪದ

ಟ್ರೋಜನ್ (trojan) -ಉಪಯುಕ್ತ ತಂತ್ರಾಂಶದ ಸೋಗು ಹಾಕಿಕೊಂಡು ಆದರೆ ಗಣಕವನ್ನು ಹಾಳು ಮಾಡುವ ತಂತ್ರಾಂಶ. ಇವು ವೈರಸ್‌ಗಳಿಗಿಂತ ಸ್ವಲ್ಪ ಭಿನ್ನ. ವೈರಸ್ ತಂತ್ರಾಂಶಗಳು ತಮ್ಮನ್ನು ತಾವೆ ಪುನರುತ್ಪತ್ತಿ ಮಾಡಿಕೊಳ್ಳುತ್ತವೆ (ಜೈವಿಕ ವೈರಸ್‌ಗಳಂತೆ). ಟ್ರೋಜನ್‌ಗಳು ಹಾಗೆ ಮಾಡುವುದಿಲ್ಲ. ಅವು ಇತರೆ ಉಪಯುಕ್ತ ತಂತ್ರಾಂಶಗಳ ಒಳಗೆ ಅಡಗಿ ಕುಳಿತಿರುತ್ತವೆ. ಆದರೆ ಗಣಕವನ್ನು ತೀವ್ರವಾಗಿ ಹಾನಿ ಮಾಡಬಲ್ಲವು. ಗ್ರೀಕರು ಟ್ರೋಜನ್ ಎಂಬ ಹೆಸರಿನ ಒಂದು ದೊಡ್ಡ ಮರದ ಕುದುರೆಯನ್ನು ವಿರೋಧಿಗಳಿಗೆ ಉಡುಗೊರೆಯಾಗಿ ನೀಡಿ ಅದರ ಒಳಗೆ ಸೈನಿಕರನ್ನು ತುಂಬಿಸಿ ಕಳುಹಿಸಿ ಅವರ ರಾಜ್ಯವನ್ನು ವಶಪಡಿಸಿಕೊಂಡ ಕಥೆಯಿಂದ ಸ್ಫೂರ್ತಿಗೊಂಡು ಈ ಮಾದರಿಯ ತಂತ್ರಾಂಶಗಳಿಗೆ ಟ್ರೋಜನ್ ಎಂಬ ಹೆಸರು ಬಂದಿದೆ.

e - ಸಲಹೆ

ಗಣಕಿಂಡಿ ಓದುಗ ಬೆಂಗಳೂರಿನ ತಿಮ್ಮಯ್ಯ ಅವರ
ಪ್ರಶ್ನೆ: ನನ್ನ ಗಣಕದಲ್ಲಿ ೨೬ ಟ್ರೋಜನ್ ವೈರಸ್‌ಗಳಿವೆ. ಅವುಗಳನ್ನು ನಿವಾರಿಸುವುದು ಹೇಗೆ?
ಉತ್ತರ: ಮೊತ್ತ ಮೊದಲನೆಯದಾಗಿ, ನಿಮ್ಮ ಗಣಕದಲ್ಲಿ ನಿಖರವಾಗಿ ೨೬ ಸಂಖ್ಯೆಯ ಟ್ರೋಜನ್‌ಗಳಿವೆ ಎಂದು ಗೊತ್ತಾದದ್ದು ಹೇಗೆ? ವೈರಸ್‌ಗಳನ್ನು ಪತ್ತೆ ಹಚ್ಚುವ ಹಲವಾರು ಜಾಲತಾಣಗಳಿವೆ. ಅವುಗಳಲ್ಲಿ ಕೆಲವು, ನಿಮ್ಮ ಗಣಕವನ್ನು ಹುಡುಕಾಡಿ ಕೊನೆಗೆ ಇಂತಿಷ್ಟು ವೈರಸ್‌ಗಳು ಪತ್ತೆಯಾಗಿವೆ; ಅವುಗಳನ್ನು ನಿವಾರಿಸಬೇಕಾದರೆ ಇಂತಿಷ್ಟು ಹಣ ನೀಡಿ ನಮ್ಮ ತಂತ್ರಾಂಶವನ್ನು ಕೊಂಡುಕೊಳ್ಳಿ ಎಂದು ಹೇಳುತ್ತವೆ. ನಿಜವಾಗಿಯೂ ಅಷ್ಟು ಸಂಖ್ಯೆಯ ವೈರಸ್‌ಗಳು ಇರಲೇಬೇಕಾಗಿಲ್ಲ. ಆದುದರಿಂದ ಇದೇ ಅಂಕಣದ ಡೌನ್‌ಲೋಡ್ ವಿಭಾಗದಲ್ಲಿ ನೀಡಿರುವ ಎವಿಜಿ ಆಂಟಿ-ವೈರಸ್ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿ ಅದನ್ನು ಬಳಸಿ ಟ್ರೋಜನ್ ಮತ್ತು ವೈರಸ್‌ಗಳನ್ನು ನಿವಾರಿಸಿಕೊಳ್ಳಿ.

ಕಂಪ್ಯೂತರ್ಲೆ

ಗೂಗ್ಲ್ ಸೂಚಿಸುತ್ತಿದೆ

ಗೂಗ್ಲ್‌ನಲ್ಲಿ ಏನನ್ನಾದರು ಹುಡುಕುವಾಗ ಬೆರಳಚ್ಚು ಮಾಡುತ್ತಿದ್ದಂತೆ ಅದು ನೀವು ಹುಡುಕುತ್ತಿರುವುದು ಇದನ್ನೋ ಎಂದು ಸಲಹೆ ನೀಡಲು ಪ್ರಾರಂಭಿಸುತ್ತದೆ. ಈ ರೀತಿ ಕೆಲವು ಪದಗಳನ್ನು ಹುಡುಕುವಾಗ ಅದು ನೀಡಿದ ಸಲಹೆಗಳು ಇಂತಿವೆ.


ಪದಸಲಹೆ
mastibull
karantkarantina massacre
tungatonga earthquake
pavanajapavanaja stuti patra


ಗೂಗ್ಲ್ ಸದ್ಯಕ್ಕೆ ಕನ್ನಡದಲ್ಲಿ ಹುಡುಕಿದರೆ ಯಾವುದೇ ಸಲಹೆ ನೀಡುತ್ತಿಲ್ಲ.