ಮಂಗಳವಾರ, ಅಕ್ಟೋಬರ್ 27, 2009

ಗಣಕಿಂಡಿ - ೦೨೩ (ಅಕ್ಟೋಬರ್ ೨೬, ೨೦೦೯)

ಅಂತರಜಾಲಾಡಿ

ಸೋರಿದ ಗುಪ್ತ ದಾಖಲೆಗಳಿಗೊಂದು ಜಾಲತಾಣ

ಆಗಾಗ ಪತ್ರಿಕೆಗಳಲ್ಲಿ ನೀವು ಓದಿಯೇ ಇರುತ್ತೀರಾ -ಯಾವುದೋ ಒಂದು ರಹಸ್ಯ ಕಡತ ಸೋರಿ ಹೊರಬಂದು ಹಲವು ವಿವಾದಗಳಿಗೆ ಕಾರಣೀಭೂತವಾಗುವುದನ್ನು. ಈ ರೀತಿ ರಹಸ್ಯ ಕಡತಗಳನ್ನು ಮುದ್ರಿಸುವವರಿಗೆ, ಬ್ಲಾಗುಗಳಲ್ಲಿ ಪ್ರಕಟಿಸುವವರಿಗೆ ಅಥವಾ ಪತ್ರಿಕೆಗಳಿಗೆ ನೀಡುವವರಿಗೆ ಒಂದಲ್ಲ ಒಂದು ರೀತಿಯ ಭಯ ಅಪಾಯ ಇದ್ದೇ ಇರುತ್ತದೆ. ಅಂಥಹ ದಾಖಲೆ, ಕಡತಗಳಿಗೆಂದೇ ಒಂದು ಜಾಲತಾಣ ಸಿದ್ಧವಾಗಿದೆ. ನಿಮ್ಮಲ್ಲಿ ಯಾವುದಾದರೂ ಮಹತ್ವದ ರಹಸ್ಯ ಕಡತ, ದಾಖಲೆ ಇದ್ದಲ್ಲಿ wikileaks.org ಜಾಲತಾಣಕ್ಕೆ ರವಾನಿಸಿ. ಆಢಳಿತ ಮತ್ತು ಯಾವುದೇ ಸಾರ್ವಜನಿಕ ವ್ಯವಹಾರದಲ್ಲಿ ಪಾರದರ್ಶಕತೆಯಿರಬೇಕೆಂದು ಬಯಸುವ ಎಲ್ಲ ಕ್ರಿಯಾಶೀಲರು ಈ ಜಾಲತಾಣವನ್ನು ಬಳಸಬಹುದು.
 
ಡೌನ್‌ಲೋಡ್

ಜಾಲತಾಣ ಪ್ರತಿಮಾಡಿಕೊಳ್ಳಿ

ನಿಮಗಿಷ್ಟವಾದ ಜಾಲತಾಣವೊಂದಿದೆ. ಅದರಲ್ಲಿ ನೂರಾರು ಲೇಖನಗಳಿವೆ. ಆ ಲೇಖನಗಳನ್ನು ಮತ್ತೆ ಮತ್ತೆ ಓದಬೇಕಾಗಿದೆ. ಅಂದರೆ ನೀವು ಯಾವಾಗಲೂ ಅಂತರಜಾಲದ ಸಂಪರ್ಕದಲ್ಲಿ ಇರಬೇಕು ಎಂದಾಯಿತು. ಆ ಸೌಕರ್ಯ ನಿಮಗಿಲ್ಲವಾದಲ್ಲಿ ಎನು ಮಾಡಬಹುದು? ಇಡಿಯ ಜಾಲತಾಣವನ್ನೇ ನಿಮ್ಮ ಗಣಕಕ್ಕೆ ಪ್ರತಿ ಮಾಡಿಕೊಳ್ಳುವಂತಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ಯೋಚಿಸುತ್ತಿದ್ದೀರಾ? ಅದಕ್ಕೂ ತಂತ್ರಾಂಶ ಲಭ್ಯವಿದೆ. HTTrack ಹೆಸರಿನ ಈ ತಂತ್ರಾಂಶ ಬೇಕಿದ್ದಲ್ಲಿ httrack.com ಜಾಲತಾಣಕ್ಕೆ ಭೇಟಿ ನೀಡಿ. ಜಾಲತಾಣವೊಂದನ್ನು ಪ್ರತಿ ಮಾಡಲು ಇದರಲ್ಲಿ ಹಲವು ಸವಲತ್ತುಗಳಿವೆ. ಈ ಜಾಲತಾಣವನ್ನು ಬಿಟ್ಟು ಹೊರಗೆ ಹೋಗಬೇಡ, ಈ ಪುಟದಿಂದ ಇಂತಿಷ್ಟೇ ಕೊಂಡಿಗಳಷ್ಟು ಕೆಳಕ್ಕೆ ಇಳಿ, ಇತ್ಯಾದಿ. ಈ ಆಯ್ಕೆಗಳನ್ನು ಎಚ್ಚರಿಕೆಯಿಂದ ನಿಗದಿಪಡಿಸಬೇಕು. ಇಲ್ಲವಾದಲ್ಲಿ ಅದು ಇಡಿಯ ಅಂತರಜಾಲವನ್ನೇ ನಿಮ್ಮ ಗಣಕಕ್ಕೆ ಪ್ರತಿಮಾಡಿಬಿಟ್ಟೀತು!

e - ಸುದ್ದಿ

ಕೃತಿಚೌರ್ಯಪತ್ತೆಯ ತಂತ್ರಾಂಶವು ಶೇಕ್ಸ್‌ಪಿಯರ್‌ನ ಕೃತಿಯೊಂದನ್ನು ಪತ್ತೆಹಚ್ಚಿದ ಸುದ್ದಿ ಬಂದಿದೆ. ಕೃತಿಚೌರ್ಯ ಪತ್ತೆಗೆ ಇರುವ ತಂತ್ರಾಂಶಗಳು ಸಾಮಾನ್ಯವಾಗಿ ಅನುಮಾನ ಇರುವ ಕೃತಿಯಲ್ಲಿ ಬಳಸಿರುವ ಪದ, ಪದಗುಚ್ಛ, ವಾಕ್ಯಗಳನ್ನು ಇತರೆ ಸಹಸ್ರಾರು ಕೃತಿಗಳಲ್ಲಿ ಹುಡುಕುತ್ತದೆ. ಹಾಗೆ ಹುಡುಕಿದಾಗ ತುಂಬ ತಾಳೆ ಬಂದಲ್ಲಿ ಈ ಕೃತಿ ಇಂತಹ ಕೃತಿಯ ನಕಲಿ ಇರಬಹುದು ಎಂದು ಸೂಚಿಸುತ್ತದೆ. ಇತ್ತೀಚೆಗೆ ಶೇಕ್ಸ್‌ಪಿಯರ್‌ನ ಕೃತಿ ಇರಬಹುದೇ ಎಂಬ ಅನುಮಾನವಿದ್ದ ಕೃತಿಯೊಂದನ್ನು ಇಂತಹ ತಂತ್ರಾಂಶಕ್ಕೆ ಊಡಿಸಿ ಅದು ಶೇಕ್ಸ್‌ಪಿಯರನ ಕೃತಿಯೇ ಹೌದು ಎಂದು ತೀರ್ಮಾನಕ್ಕೆ ಬರಲಾಗಿದೆ. 

e- ಪದ

ಐಪಿಟಿವಿ (IPTV - Internet protocol television) - ಅಂತರಜಾಲವು ಕೆಲಸ ಮಾಡುವ ಶಿಷ್ಟತೆ (ಪ್ರೋಟೋಕಾಲ್) ಬಳಸಿ, ಬ್ರಾಡ್‌ಬ್ಯಾಂಡ್ ಮೂಲಕ ಟಿವಿ ಸಂಪರ್ಕ. ಇದರಲ್ಲಿ ನಿಮ್ಮ ಮನೆಗೆ ಕೇಬಲ್ ಮೂಲಕ ಬ್ರಾಡ್‌ಬ್ಯಾಂಡ್ ಅಂತರಜಾಲ ಸಂಪರ್ಕ ಬರುತ್ತದೆ. ಟಿವಿಯ ಮೇಲೆ ಇಡುವ ಪೆಟ್ಟಿಗೆಗೆ ಅದು ಸಂಪರ್ಕಗೊಳ್ಳುತ್ತದೆ ಆ ಪೆಟ್ಟಿಗೆಯಿಂದ ಒಂದು ಸಂಪರ್ಕ ಗಣಕಕ್ಕೆ, ಇನ್ನೊಂದು ದೂರವಾಣಿಗೆ,  ಇನ್ನೊಂದು ಟಿವಿಗೆ ಹೋಗುತ್ತದೆ. ಅಂದರೆ ಒಂದು ಕೇಬಲ್ ನಿಮ್ಮ ಮನೆಗೆ ಬಂದರೆ ಎಲ್ಲ ಸಂಪರ್ಕಗಳೂ ಅದರಲ್ಲೇ ಅಡಕಗೊಂಡಿರುತ್ತವೆ. ಈ ಮಾದರಿಯ ಟಿವಿಯಲ್ಲಿ ಇನ್ನು ಹಲವಾರು ಸೌಲಭ್ಯಗಳಿವೆ. ನಿಮಗೆ ಬೇಕಾದ ಕಾರ್ಯಕ್ರಮವನ್ನು ಮುದ್ರಿಸಿಕೊಂಡು ಬೇಕಾದಾಗ ನೋಡಬಹುದು, ಇಷ್ಟಪಟ್ಟ ಸಿನಿಮಾ ನೋಡಬಹುದು, ಇತ್ಯಾದಿ.

e - ಸಲಹೆ

ಮಡಿಕೇರಿಯ ಬಿ.ಡಿ. ರವೀಂದ್ರ ಅವರ ಪ್ರಶ್ನೆ: ನನ್ನ ಗಣಕದ ಕಾರ್ಯಾಚರಣೆ ವ್ಯವಸ್ಥೆ ವಿಂಡೋಸ್ ಎಕ್ಸ್‌ಪಿ. ನನಗೆ ನುಡಿ ತಂತ್ರಾಂಶವನ್ನು ಉಪಯೋಗಿಸಿ ಎಂ.ಎಸ್. ವರ್ಡ್ (೨೦೦೩) ನಲ್ಲಿ ಯೂನಿಕೋಡ್‌ನಲ್ಲಿ ಬೆರಳಚ್ಚು ಮಾಡುವಾಗ ಅಕ್ಷರಗಳು ಸರಿಯಾಗಿ ಮೂಡಿ ಬರುವುದಿಲ್ಲ. ಕೆಲವೊಮ್ಮೆ ಬರೇ ಚೌಕಾಕೃತಿಗಳು ಮೂಡುತ್ತವೆ. ಏಕಭಾಷೆ ಮತ್ತು ದ್ವಿಭಾಷೆಯಲ್ಲಿ ಒತ್ತಕ್ಷರಗಳನ್ನು ಮೂಡಿಸಲು ‘ಎಫ್’ ಕೀಯನ್ನು ಒತ್ತಿ ನಂತರ ಮುಂದಿನ ಅಕ್ಷರವನ್ನು ಒತ್ತುವಾಗ ಒತ್ತಕ್ಷರ ಮೂಡುವಂತೆ ಯೂನಿಕೋಡ್‌ನಲ್ಲಿ ಒತ್ತಕ್ಷರ ಮೂಡಿಸಲು ಆಗುವುದಿಲ್ಲ. ಆದ್ದರಿಂದ ದಯಮಾಡಿ ನುಡಿ ತಂತ್ರಾಂಶದಲ್ಲಿ ಕಗಪ ಕೀಲಿಮಣೆಯನ್ನು ಉಪಯೋಗಿಸಿ ಯೂನಿಕೋಡ್‌ನಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡಲು ವಿಂಡೋಸ್ ಮತ್ತು ವರ್ಡ್‌ಗಳಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಮಾಡಬೇಕೆಂದು ದಯವಿಟ್ಟು ತಿಳಿಸಿರಿ.
ಉ: ನುಡಿ ತಂತ್ರಾಂಶದಲ್ಲಿ ಈ ದೋಷ ಇದೆ. ಹಿಂದಿನ ಆವೃತ್ತಿಯ ಬರಹ ತಂತ್ರಾಂಶದಲ್ಲೂ ಈ ದೋಷ ಇತ್ತು. ಬರಹ ೮ ರಲ್ಲಿ ಈ ದೋಷ ನಿವಾರಣೆಯಾಗಿದೆ. ನೀವು ಅದನ್ನು ಬಳಸಬಹುದು. ಬರಹ ತಂತ್ರಾಂಶದಲ್ಲೂ (ಬರಹ ಡೈರೆಕ್ಟ್) ಕಗಪ ಕೀಲಿಮಣೆ ವಿನ್ಯಾಸ ಇದೆಯೆಂಬುದು ಹಲವರಿಗೆ ತಿಳಿದಿಲ್ಲ! bhashaindia.com ತಾಣದಿಂದ Indic IME ಯನ್ನು ಡೌನ್‌ಲೋಡ್ ಮಾಡಿಕೊಂಡು ಅದನ್ನೂ ಬಳಸಬಹುದು. ಅದರಲ್ಲೂ ಕಗಪ ಕೀಲಿಮಣೆ ವಿನ್ಯಾಸ ಇದೆ.

ಕಂಪ್ಯೂತರ್ಲೆ

ಗಣಕ ತಂತ್ರಜ್ಞ ಪ್ರೇಮಿಯೊಬ್ಬನ ಅಳಲು


ಪತ್ರ ಬರೆಯಲಾ, ಇಲ್ಲಾ ಇಮೈಲ್ ಮಾಡಲಾ? ಟ್ವೀಟ್ ಮಾಡಲಾ, ಇಲ್ಲಾ ಸ್ಕ್ರಾಪ್ ಮಾಡಲಾ? ಹೇಗೆ ತಿಳಿಸಲೀ ನನ್ನ ಮನದ ಕಳವಳಾ?

ಬುಧವಾರ, ಅಕ್ಟೋಬರ್ 21, 2009

ಗಣಕಿಂಡಿ - ೦೨೨ (ಅಕ್ಟೋಬರ್ ೧೯, ೨೦೦೯)

ಅಂತರಜಾಲಾಡಿ

ಅಂತಾರಾಷ್ಟ್ರೀಯ ಖಗೋಳ ವರ್ಷ

೨೦೦೯ನೆಯ ಇಸವಿಯನ್ನು ಅಂತಾರಾಷ್ಟ್ರೀಯ ಖಗೋಳ ವರ್ಷವೆಂದು ಘೋಷಿಸಲಾಗಿದೆ. ಇದನ್ನು ಗೆಲಿಲಿಯೋನ ಸಾಧನೆಯ ೪೦೦ನೆಯ ವರ್ಧಂತಿಯ ನೆನಪಿಗಾಗಿ ಆಚರಿಸಲಾಗುತ್ತಿದೆ. ಜಗತ್ತಿನಾದ್ಯಂತ ಹಲವಾರು ಕಡೆಗಳಲ್ಲಿ ಈ ಬಗ್ಗೆ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ಉದಾಹರಣೆಗೆ ಗೆಲಿಲಿಯನ್ ರಾತ್ರಿಗಳು ಎಂಬ ಮಾಲಿಕೆಯಲ್ಲಿ ವಿವಿಧ ಕಡೆಗಳಲ್ಲಿ ಖಗೋಳ ಶಾಸ್ತ್ರದ ಬಗ್ಗೆ ಜನಸಾಮಾನ್ಯರಲ್ಲಿ ಮತ್ತು ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಇವೆಲ್ಲದರ ವಿವರಗಳನ್ನು ನೀಡುವ ಜಾಲತಾಣ www.astronomy2009.org. ಇದು ಜಾಗತಿಕ ವಿಷಯಗಳ ಬಗೆಗಿನ ಜಾಲತಾಣವಾಯಿತು, ಭಾರತದಲ್ಲೇನಾಗುತ್ತಿದೆ ಎಂದು ತಿಳಿಯುವ ಕತೂಹಲವಿದೆಯೇ? ಹಾಗಿದ್ದರೆ http://bit.ly/28NShJ ಜಾಲತಾಣಕ್ಕೆ ಭೇಟಿ ನೀಡಿ. ಅಕ್ಟೋಬರ್ ೨೨ರಿಂದ ೨೪ರ ತನಕ ಜರುಗಲಿರುವ ಗೆಲಿಲಿಯನ್ ರಾತ್ರಿಗಳ ಬಗ್ಗೆಯೇ ಒಂದು ಜಾಲತಾಣವಿದೆ. ಅದರ ವಿಳಾಸ www.galileannights.org 
 
ಡೌನ್‌ಲೋಡ್

ಮನೆಯಲ್ಲೊಂದು ತಾರಾಲಯ

ಮನೆಯ ಗಣಕದ ಮುಂದೆ ಕುಳಿತೇ ಸಂಪೂರ್ಣ ಬ್ರಹ್ಮಾಂಡ ವೀಕ್ಷಣೆ ಮಾಡಿದರೆ ಹೇಗಿರುತ್ತದೆ? ಭೂಮಿಯಿಂದ ಆರಂಭಿಸಿ ನಮ್ಮ ಸೌರವ್ಯೂಹ ದರ್ಶನ ಮುಗಿಸಿ ಧ್ರುವ ನಕ್ಷತ್ರದೆಡೆಗೆ ಪಯಣಿಸಿ, ನಮ್ಮ ಆಕಾಶಗಂಗೆಗೆ ಒಂದು ಸುತ್ತು ಹೊಡೆದು ಕೊನೆಗೆ ನಮ್ಮ ಭೂಮಿಗೆ ವಾಪಾಸು ಬರಬಹುದು. ಇದೆಲ್ಲ ಹೇಗೆ ಎಂದು ಕೇಳುತ್ತಿದ್ದೀರಾ? www.shatters.net/celestia ತಾಣದಿಂದ celestia ಎಂಬ ತಂತ್ರಾಂಶವನ್ನು ಪ್ರತಿಮಾಡಿಕೊಂಡು ನಿಮ್ಮ ಗಣಕದಲ್ಲಿ ಅನುಸ್ಥಾಪಿಸಿಕೊಂಡರೆ ಆಯಿತು. ಇದರಲ್ಲಿ ಗ್ರಹ, ಕ್ಷುದ್ರಗ್ರಹ, ಚಂದ್ರ, ಉಪಗ್ರಹ ಇತ್ಯಾದಿಗಳ ಮೇಲ್ಮೈಗಳನ್ನು ಅವು ನಿಜವಾಗಿ ಹೇಗಿವೆಯೋ ಅದೇ ರೂಪ, ಬಣ್ಣಗಳಲ್ಲಿ ನೋಡಬಹುದು. ಇದು ನಿಜಕ್ಕೂ ಒಂದು ಅದ್ಭುತ ತಂತ್ರಾಂಶ. ಇದು ಸಂಪೂರ್ಣ ಉಚಿತ. ಈ ತಂತ್ರಾಂಶಕ್ಕೆ ಹಲವಾರು ಸೇರ್ಪಡೆಗಳೂ ಲಭ್ಯವಿವೆ ಮಾತ್ರವಲ್ಲ, ನೀವೂ ಇಂತವುಗಳನ್ನು ತಯಾರಿಸಿ ಹಂಚಬಹುದು.

e - ಸುದ್ದಿ

ಮೆದುಳಿನಿಂದ ಮೆದುಳಿಗೆ

ಗಣಕದಿಂದ ಗಣಕಕ್ಕೆ ಸಂದೇಶ ಕಳುಹಿಸುವುದು ಗೊತ್ತು ತಾನೆ? ಇದೇ ರೀತಿ ಒಬ್ಬರ ಮೆದುಳಿನಿಂದ ಇನ್ನೊಬ್ಬರ ಮೆದುಳಿಗೆ ನೇರವಾಗಿ ಸಂದೇಶ ಕಳುಹಿಸುವಂತಿದ್ದರೆ? ಅದನ್ನು ನಾವು ಈಗಾಗಲೆ ಮಾತಿನ ಮೂಲಕ ಮಾಡುತ್ತಿದ್ದೇವೆ ತಾನೆ ಎನ್ನುತ್ತೀರಾ? ಇದು ಹಾಗಲ್ಲ. ಒಬ್ಬ ಒಂದು ಕಡೆ, ಇನ್ನೊಬ್ಬ ಮತ್ತಿನ್ನೆಲ್ಲೋ ಇದ್ದು ಮೆದುಳಿನಿಂದ ಸಂದೇಶವನ್ನು ಗಣಕ ಮತ್ತು ಅಂತರಜಾಲದ ಮೂಲಕ ಕಳುಹಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಮೆದುಳಿನಿಂದ ಗಣಕಕ್ಕೆ ಸಂದೇಶವನ್ನು ನೇರವಾಗಿ ರವಾನಿಸುವುದು ಹೊಸದೇನಲ್ಲ. ಅದನ್ನು ಹಿಂದೆಯೇ ಮಾಡಲಾಗಿದೆ. ಈ ಹೊಸ ಪ್ರಯೋಗದಲ್ಲಿ ವ್ಯಕ್ತಿಯ ಮೆದುಳಿನಿಂದ ಗಣಕಕ್ಕೆ ಸಂದೇಶ ಕಳುಹಿಸಿ ಅದನ್ನು ಅಂತರಜಾಲದ ಮೂಲಕ ಇನ್ನೊಂದು ಗಣಕಕ್ಕೆ ರವಾನಿಸಿ ಅದರಿಂದ ಇನ್ನೊಬ್ಬನ ಮೆದುಳಿಗೆ ರವಾನಿಸಲಾಗಿದೆ. ಮೆದುಳು ಮತ್ತು ಯಂತ್ರದ ನಡುವಿನ ಸಂಪರ್ಕ ತಂತಿಗಳ ಮೂಲಕ ಮಾಡಲಾಗಿದೆ.  

e- ಪದ

ಕಿರುಬ್ಲಾಗ್

ಕಿರುಬ್ಲಾಗ್ (microblog) -ಕಿರುಸಂದೇಶದ ಮಾದರಿಯಲ್ಲಿ ಬ್ಲಾಗ್ ಬರೆಯುವುದು. ಇದರಲ್ಲಿ ತುಂಬ ಪ್ರಖ್ಯಾತವಾದುದು ಟ್ವಿಟ್ಟರ್ (twitter.com). ಇದರಲ್ಲಿ ಕೇವಲ ೧೪೦ ಅಕ್ಷರಗಳ ಮಿತಿಯಲ್ಲಿ ಬ್ಲಾಗ್ ಬರೆಯತಕ್ಕದ್ದು. ಈ ಟ್ವಿಟ್ಟರ್ ತುಂಬ ಜನಪ್ರಿಯವಾಗಿದೆ. ಹಲವಾರು ಖ್ಯಾತನಾಮರು ಇದನ್ನು ಬಳಸುತ್ತಿದ್ದಾರೆ. ನಮ್ಮ ದೇಶದ ವಿದೇಶಾಂಗ ಖಾತೆಯ ರಾಜ್ಯ ಸಚಿವ ಶಶಿ ತರೂರ್ ಟ್ವಿಟ್ಟರ್ ಬಳಸುತ್ತಿದ್ದಾರೆ. ಅದರಲ್ಲಿ ಅವರು ಬರೆದ ಕೆಲವು ಮಾತುಗಳು ತುಂಬ ವಿವಾದಕ್ಕೆ ಕಾರಣೀಭೂತವಾದುದನ್ನು ಪತ್ರಿಕೆಗಳಲ್ಲಿ ನೀವು ಓದಿರಬಹುದು. ಅವರ ಕಿರುಬ್ಲಾಗ್ ಕೆಲವರಿಗೆ ಕಿರಿಕಿರಿಬ್ಲಾಗ್ ಆಗಿಬಿಟ್ಟಿದೆ. ಅಂದಹಾಗೆ ನನ್ನ ಟ್ವಿಟ್ಟರ್ ಬ್ಲಾಗಿನ ವಿಳಾಸ twitter.com/pavanaja.

e - ಸಲಹೆ

ಎಸ್.ಡಿ. ಸವದತ್ತಿಯವರ ಪ್ರಶ್ನೆ: ನಾನು ಪಿ.ಡಿ.ಎಫ್. ಪೈಲ್‌ನ್ನು ಬೇರೆ ಸೈಟಿನಿಂದ ತೆಗೆದುಕೊಂಡಿದ್ಡು ಅದರಲ್ಲಿ ಬೆರಳಚ್ಚು ಮಾಡಲು ಆಗುತ್ತಿಲ್ಲ ಸಹಾಯ ಮಾಡೀರಿ.
ಉ: ಪಿ.ಡಿ.ಎಫ್. ಮಾದರಿಯ ಕಡತಗಳಲ್ಲಿ ಸಾಮಾನ್ಯವಾಗಿ ಬೆರಳಚ್ಚು ಮಾಡಲು ಆಗುವುದಿಲ್ಲ. ಇಂಗ್ಲಿಶ್ ಕಡತವಾದರೆ ಅಲ್ಲಲ್ಲಿ ಟಿಪ್ಪಣಿ ಸೇರಿಬಹುದು. ಕನ್ನಡಕ್ಕೇ ಈ ಸೌಲಭ್ಯವೂ ಸದ್ಯಕ್ಕೆ ಲಭ್ಯವಿಲ್ಲ. ಅಡೋಬ್‌ನವರು ಕನ್ನಡ ಯುನಿಕೋಡ್‌ನ ಬೆಂಬಲವನ್ನು ಪಿ.ಡಿ.ಎಫ್.ನಲ್ಲಿ ನೀಡಿದಾಗ ಇದು ಸಾಧ್ಯವಾಗಬಹುದು.

ಕಂಪ್ಯೂತರ್ಲೆ

ಆಧುನಿಕ ಜೀವನ

ಆರ್ಕುಟ್‌ನಲ್ಲಿ ಭೇಟಿ.
ಚಾಟ್‌ನಲ್ಲಿ ಪ್ರೀತಿ.
ಇಮೈಲ್‌ನಲ್ಲಿ ಆಹ್ವಾನ.
ಇಂಟರ್‌ನೆಟ್‌ನಲ್ಲಿ ಮದುವೆ.

ಮುಂದೆ?
ನಿಮ್ಮ ಊಹೆಗೆ ಬಿಟ್ಟದ್ದು!

ಸೋಮವಾರ, ಅಕ್ಟೋಬರ್ 12, 2009

ಗಣಕಿಂಡಿ - ೦೨೧ (ಅಕ್ಟೋಬರ್ ೧೨, ೨೦೦೯)

ಅಂತರಜಾಲಾಡಿ

ಜಾಲಬುದ್ಧಿವಂತರಾಗಿ

ಅಂತರಜಾಲದಲ್ಲಿ ವಿಹರಿಸುವಾಗ ಎಚ್ಚರವಾಗಿರಬೇಕು. ವೈರಸ್, ವರ್ಮ್‌ಗಳು ಧಾಳಿ ಇಡುವುದು ಅತಿ ಸಾಮಾನ್ಯ. ಇತ್ತೀಚೆಗಂತೂ ಫಿಶಿಂಗ್ ಹಾವಳಿಯೂ ಅಧಿಕವಾಗಿದೆ. ಮಕ್ಕಳು ಅಂತರಜಾಲವನ್ನು ಬಳಸುವಾಗ ದೊಡ್ಡವರು ಎಚ್ಚರಿಕೆ ವಹಿಸಬೇಕು. ಇಮೈಲ್ ವಿಳಾಸವನ್ನು ಜಾಲತಾಣಗಳಲ್ಲಿ ಎಲ್ಲೆಂದರಲ್ಲಿ ನೀಡುವಂತಿಲ್ಲ. ಅಂತರಜಾಲ ಬ್ಯಾಂಕಿಂಗ್ ಮಾಡುವವರ ಪ್ರವೇಶಪದ (ಪಾಸ್‌ವರ್ಡ್) ಕದಿಯುವ ತಂತ್ರಾಂಶಗಳೂ ಇವೆ. ಹೌದು ಸ್ವಾಮಿ, ಇಷ್ಟೆಲ್ಲ ತೊಂದರೆ ಇದ್ದರೆ ಅಂತರಜಾಲವನ್ನೇ ಬಳಸದೆ ಇರಬಹುದಲ್ಲ ಎನ್ನುತೀರಾ? ಹಾಗೇನಿಲ್ಲ. ಎಚ್ಚರದಿಂದಿರಬೇಕು, ಅಷ್ಟೆ. ಯಾವ ರೀತಿ ಎಚ್ಚರದಿಂದಿರಬೇಕು ಎಂದು ಕೇಳುತ್ತಿದ್ದೀರಾ? ಉತ್ತರಕ್ಕೆ getnetwise.org  ಜಾಲತಾಣಕ್ಕೆ ಭೇಟಿ ನೀಡಿ.  

ಡೌನ್‌ಲೋಡ್

ಬಿಟ್ಟು ಬಿಟ್ಟು ಡೌನ್‌ಲೋಡ್ ಮಾಡಿ

ಅಂತರಜಾಲದಿಂದ ದೊಡ್ಡ ಪೈಲುಗಳನ್ನು ಡೌನ್‌ಲೋಡ್ ಮಾಡುತ್ತಿರುವಾಗ ವಿದ್ಯುತ್ ಸರಬರಾಜು ನಿಂತರೆ, ಅಂತರಜಾಲ ಸಂಪರ್ಕ ಕಡಿತವಾದರೆ ಅಥವಾ ಅವಸರದ ಕಾರ್ಯ ನಿಮಿತ್ತ ನಿಮಗೆ ಹೊರಗೆ ಹೋಗಬೇಕಾಗಿದ್ದರೆ ಡೌನ್‌ಲೋಡನ್ನು ನಿಲ್ಲಿಸಬೇಕಾಗುತ್ತದೆ. ಮುಂದೆ ಆ ಡೌನ್‌ಲೋಡನ್ನು ಪುನ ಪ್ರಾರಂಭಿಸಿದಾಗ ಅದು ಮತ್ತೆ ಮೊದಲಿನಿಂದಲೇ ಪ್ರಾರಂಭಿಸುತ್ತದೆ. ಇಂತಹ ಸಂದರ್ಭದಲ್ಲಿ ಉಪಯೋಗಕ್ಕೆ ಬರುವುದು Orbit downloader ಎಂಬ ತಂತ್ರಾಂಶ. ಇದರ ಮೂಲಕ ಡೌನ್‌ಲೋಡ್ ಮಾಡಿದರೆ ಮೊದಲು ಎಲ್ಲಿ ತನಕ ಆಗಿತ್ತೋ ಅಲ್ಲಿಂದ ಮುಂದುವರೆಸಬಹುದು. ದೊಡ್ಡ ಫೈಲನ್ನು ಡೌನ್‌ಲೋಡ್ ಮಾಡುತ್ತಿರುವಿರಾದರೆ, ರಾತ್ರಿ ಹೊತ್ತು ಅದನ್ನು ಡೌನ್‌ಲೋಡಿಗೆ ಹಾಕಿ, ಡೌನ್‌ಲೋಡ್ ಆದೊಡನೆ ಗಣಕವನ್ನು ಸ್ವಿಚ್ ಆಫ್ ಮಾಡು ಎಂದು ಆದೇಶ ನೀಡಿ ನಿರಾತಂಕವಾಗಿ ನಿದ್ದೆ ಮಾಡಬಹುದು. ಈ ಉಚಿತ ತಂತ್ರಾಂಶ ಸಿಗುವ ಜಾಲತಾಣ orbitdownloader.com.

e - ಸುದ್ದಿ

ಹುಳಗಳ ವಿರುದ್ಧ ಇರುವೆ

ಹೂವು, ತರಕಾರಿ ಅಥವಾ ಉಪಯುಕ್ತ ಬೆಳೆಗಳ ಮೇಲೆ ಧಾಳಿ ಮಾಡುವ ಹುಳ, ಕೀಟಗಳನ್ನು ನಾಶ ಮಾಡಲು ಅಂತಹ ಕೀಟಗಳನ್ನೇ ಹುಡುಕಿ ಅವುಗಳ ಮೇಲೆ ಧಾಳಿ ಮಾಡುವ ಕೀಟಗಳನ್ನು ತಯಾರಿ ಮಾಡಿ ಬಳಸುತ್ತಿರುವ ವಿಷಯ ಗೊತ್ತಿರಬಹುದು. ಈಗ ಗಣಕಗಳಲ್ಲಿ ಅದೇ ವಿಧಾನವನ್ನು ಬಳಸಿ ಜಯಶೀಲರಾಗಿದ್ದಾರೆ. ಗಣಕಜಾಲಗಳಿಗೆ ಧಾಳಿ ಮಾಡಿ ಅವುಗಳನ್ನು ಪೀಡಿಸುವ ಗಣಕ ವೈರಸ್‌ಗಳಿಗೆ ವರ್ಮ್ (ಹುಳ?) ಎನ್ನುತ್ತಾರೆ. ಈಗ ಅಮೇರಿಕಾದ ಪ್ರಯೋಗಶಾಲೆಯೊಂದರಲ್ಲಿ ಇಂತಹ ಹುಳಗಳನ್ನೇ ಹುಡುಕಿ ಅವುಗಳ ಮೇಲೆ ಧಾಳಿ ಮಾಡುವ ಡಿಜಿಟಲ್ ಇರುವೆಗಳನ್ನು ತಯಾರಿಸಿದ್ದಾರೆ. ಜೈವಿಕ ಇರುವೆಗಳ ಮಾದರಿಯಲ್ಲೇ ಇವು ಗಣಕಜಾಲದಲ್ಲಿ ಹುಳ ಪತ್ತೆಯಾದಾಗ ಗುಂಪಾಗಿ ಅದರ ಮೇಲೆ ಧಾಳಿ ಮಾಡಿ ಅದನ್ನು ನಾಶ ಮಾಡುತ್ತವೆ. ಬಹುಶಃ ಇನ್ನೊಂದು ವರ್ಷದ ಒಳಗೆ ಇವು ನಮ್ಮ ಬಳಕೆಗೆ ದೊರಕಬಹುದು.

e- ಪದ

ಝೋಂಬಿ (zombie) -ಕಿಡಿಗೇಡಿಗಳ ವಶಕ್ಕೊಳಪಟ್ಟು ಇನ್ನೊಂದು ಗಣಕಜಾಲದ ಮೇಲೆ ಧಾಳಿ ಮಾಡಲು ಬಳಕೆಯಾಗುತ್ತಿರುವ ಗಣಕ. ಗಣಕ ಜಾಲದೊಳಗೆ ಅನಧಿಕೃತವಾಗಿ ಪ್ರವೇಶಿಸುವವರಿಗೆ ಹ್ಯಾಕರ್‌ಗಳೆನ್ನುತ್ತಾರೆ. ಕೆಲವೊಮ್ಮ ಈ ಹ್ಯಾಕರ್‌ಗಳು ತಮ್ಮ ಅಂಕೆಗೊಳಪಟ್ಟ ಗಣಕವನ್ನು ಬಳಸಿ ಇನ್ನೊಂದು ಜಾಲತಾಣಕ್ಕೆ ಅಥವಾ ಗಣಕಜಾಲಕ್ಕೆ ಧಾಳಿ ಇಡುತ್ತಾರೆ. ಪ್ರಪಂಚಾದ್ಯಂತ ಸಾವಿರಾರು ಗಣಕಗಳನ್ನು ಏಕಕಾಲಕ್ಕೆ ತಮ್ಮ ವಶಕ್ಕೆ ತೆಗೆದುಕೊಂಡು ಹೀಗೆ ಧಾಳಿ ಮಾಡಿದಾಗ ಧಾಳಿಗೊಳಪಟ್ಟ ಜಾಲತಾಣ ಕುಸಿಯುತ್ತದೆ. ಇದಕ್ಕೆ denial of service attack ಎನ್ನುತ್ತಾರೆ.

e - ಸಲಹೆ

ನೀವು ಕನ್ನಡದಲ್ಲಿ ಪಿಡಿಎಫ್ ಮಾದರಿಯ ಕಡತಗಳನ್ನು ತಯಾರಿಸಿ ಇತರರಿಗೆ ಕಳುಹಿಸಿದಾಗ ಕೆಲವೊಮ್ಮೆ ಅವರ ಗಣಕದಲ್ಲಿ ಅದನ್ನು ಓದಲು ಆಗದೆ ಇರುವ ಸಾಧ್ಯತೆಗಳಿರುತ್ತವೆ. ಇದಕ್ಕೆ ಕಾರಣ ಅವರ ಗಣಕದಲ್ಲಿ ನೀವು ಬಳಸಿದ ಕನ್ನಡದ ಫಾಂಟ್ ಇಲ್ಲದಿರುವುದು ಮತ್ತು ನೀವು ಬಳಸಿದ ಫಾಂಟನ್ನು ಪಿಡಿಎಫ್ ಕಡತದಲ್ಲಿ ಅಡಕವಾಗಿಸದಿರುವುದು. ನೀವು ಆಗಸ್ಟ್ ೨೫, ೨೦೦೯ರ ಗಣಕಿಂಡಿಯಲ್ಲಿ ಸೂಚಿಸಿದ PDFCreator ಬಳಸುತ್ತಿರುವವರಾದರೆ, ಅದರಲ್ಲಿ ಒಂದು ಆಯ್ಕೆ ಇದೆ. ಅದರ ಆಯ್ಕೆ (options) ಯಲ್ಲಿ ಪಿಡಿಎಫ್ ವಿಭಾಗದಲ್ಲಿ ಫಾಂಟ್ ಎಂಬಲ್ಲಿ Embed all fonts ಎಂದು ಆಯ್ಕೆ ಮಾಡಿ.

ಕಂಪ್ಯೂತರ್ಲೆ

ಗಣಕವೇದವಾಕ್ಯ

ವಾಟಾಳ್ ನಾಗರಾಜ್ ಕನ್ನಡಕ ತೆಗೆಯುವ ತನಕ,  ಜಯಲಲಿತ ಮದುವೆಯಾಗುವ ತನಕ, ಕರುಣಾನಿಧಿ ಕನ್ನಡಕ ತೆಗೆಯುವ ತನಕ, ದೇವೇಗೌಡ ಪ್ಯಾಂಟ್ ಧರಿಸುವ ತನಕ, ಬಂಗಾರಪ್ಪ ಪಕ್ಷ ಬದಲಿಸುವುದನ್ನು ನಿಲ್ಲಿಸುವ ತನಕ, ರಾಜಕಾರಣಿಗಳು ಸುಳ್ಳು ಹೇಳುವುದನ್ನು ನಿಲ್ಲಿಸುವ ತನಕ ನಿಮ್ಮ ಗಣಕದಲ್ಲಿ ವೈರಸ್ ಇದ್ದೇ ಇರುತ್ತದೆ.

ಮಂಗಳವಾರ, ಅಕ್ಟೋಬರ್ 6, 2009

ಗಣಕಿಂಡಿ - ೦೨೦ (ಅಕ್ಟೋಬರ್ ೦೫, ೨೦೦೯)

ಅಂತರಜಾಲಾಡಿ

ನಕಲಿ ಹೆಡ್‌ಫೋನ್ ಪತ್ತೆಹಚ್ಚಿ

ಸಂಗೀತ ಸವಿಯಲು, ಇನ್ನೊಬ್ಬರಿಗೆ ಕಿರಿಕಿರಿಯಾಗದಂತೆ ಸಿನಿಮಾ ನೋಡಲು, ರೇಡಿಯೋ ಕೇಳಲು -ಹೀಗೆ ಹಲವಾರು ರೀತಿಯಲ್ಲಿ ಹೆಡ್‌ಫೋನ್‌ಗಳು ಬಳಕೆಯಾಗುತ್ತಿವೆ. ಇವುಗಳು ೫೦ ರೂ.ನಿಂದ ಹಿಡಿದು ೫೦,೦೦೦ ರೂ.ಗಳ ತನಕವೂ ಲಭ್ಯವಿವೆ. ಜಾಸ್ತಿ ಬೆಲೆಬಾಳುವ ಹೆಡ್‌ಫೋನ್‌ಗಳು ಉತ್ತಮ ಗುಣಮಟ್ಟದವುಗಳಾಗಿರುತ್ತವೆ. ಇನ್ನೂ ಹೆಚ್ಚಿನ ಬೆಲೆಬಾಳುವ ಹೆಡ್‌ಫೋನ್‌ಗಳಲ್ಲಿ ಹೊರಗಿನ ಗಲಾಟೆಯನ್ನು ಕೇಳದಂತೆ ಮಾಡಿ ಕೇವಲ ಸಂಗೀತ ಮಾತ್ರ ಕೇಳುವಂತೆ ಮಾಡುವ ವ್ಯವಸ್ಥೆಯಿರುತ್ತದೆ. ಬೋಸ್ ಕಂಪೆನಿಯ ಇಂತಹ ಹೆಡ್‌ಫೋನ್‌ಗೆ ಸುಮಾರು ೨೨,೦೦೦ ರೂ. ಬೆಲೆ ಇದೆ. ಅಧಿಕ ಬೆಲೆಬಾಳುವ ಹೆಡ್‌ಫೋನ್‌ಗಳಿರುವಂತೆಯೇ ಅವುಗಳನ್ನು ನಕಲಿ ಮಾಡಿ ಅಂತೆಯೇ ಕಾಣುವ ಆದರೆ ಕಡಿಮೆ ಗುಣಮಟ್ಟದ ಹೆಡ್‌ಫೋನ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ನಕಲಿ ಹೆಡ್‌ಫೋನ್‌ಗಳನ್ನು ಪತ್ತೆ ಹಚ್ಚುವುದು ಹೇಗೆ? ಅದಕ್ಕೆಂದೇ ಮೀಸಲಾಗಿರುವ ಜಾಲತಾಣ - fakeheadphones.com. ದುಬಾರಿ ಹೆಡ್‌ಫೋನ್ ಕೊಳ್ಳುವ ಮೊದಲು ಈ ಜಾಲತಾಣಕ್ಕೆ ಭೇಟಿ ನೀಡಲು ಮರೆಯದಿರಿ.  

ಡೌನ್‌ಲೋಡ್

ಸುಡೊಕು ಪ್ರಿಯರಿಗೆ

ದಿನ ಪತ್ರಿಕೆ, ವಾರಪತ್ರಿಕೆ, ಮ್ಯಾಗಝಿನ್ -ಯಾವುದನ್ನು ಬೇಕಾದರೂ ತೆಗೆದು ನೊಡಿ. ಸುಡೊಕು ಇದ್ದೇ ಇರುತ್ತದೆ. ಜಪಾನೀ ಮೂಲದ ಈ ಆಟ ತುಂಬ ಜನಪ್ರಿಯ. ಮೆದುಳಿಗೂ ಕೆಲಸ ಕೊಡುತ್ತದೆ. ಸುಡೊಕು ಸಮಸ್ಯೆಗೆ ಪರಿಹಾರ ಬೇಕೇ? ಅಥವಾ ಸುಡೊಕು ಸಮಸ್ಯೆ ತಯಾರಿಸಬೇಕೇ? ಇವೆಲ್ಲ ಗಣಕದ ಮೂಲಕವೇ ಆಗಬೇಕೇ? ಹಾಗಿದ್ದರೆ ನಿಮಗೆ ಬೇಕು Isanaki ತಂತ್ರಾಂಶ. ಇದು ಸುಡೊಕು ಮಾತ್ರವಲ್ಲ. ಅಕ್ಷರ ಆಧಾರಿತ (ಅಂಕೆಗಳ ಬದಲಿಗೆ) ವರ್ಡೊಕು ಸಮಸ್ಯೆಯನ್ನು ಕೂಡ ಇದು ಸೃಷ್ಟಿಸಬಲ್ಲುದು ಹಾಗೂ ಪರಿಹರಿಸಬಲ್ಲುದು. ಈ ತಂತ್ರಾಂಶ ಬೇಕಿದ್ದಲ್ಲಿ ಈ ಜಾಲತಾಣಕ್ಕೆ ಭೇಟಿ ನೀಡಿ - http://bit.ly/PKg2I 

e - ಸುದ್ದಿ

ಜಾಲಿಗ ಕಳ್ಳ ಸಿಕ್ಕಬಿದ್ದ

ಕಳ್ಳನೊಬ್ಬ ಮನೆಗೆ ನುಗ್ಗಿ ಕಳವು ಮಾಡಿದ. ನಂತರ ಬೇಕಾದಷ್ಟು ಸಮಯ ಇದೆ ಎಂದು ತಿಳಿದು ಆರಾಮವಾಗಿ ಅಲ್ಲೇ ಇದ್ದ ಗಣಕದಲ್ಲಿ ತಪ್ಪಿಸಿಕೊಂಡು ಹೋಗುವ ದಾರಿ ಎಂದು ಗೂಗ್ಲ್‌ನಲ್ಲಿ ಹುಡಕಾಡಿದ. ಇಷ್ಟೇ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಆತ ತನ್ನ ಫೇಸ್‌ಬುಕ್ ಖಾತೆಗೆ ಲಾಗ್‌ಇನ್ ಆಗಿ ನಾನೊಂದು ಮನೆಗೆ ನುಗ್ಗಿ ದರೋಡೆ ಮಾಡಿದೆ ಎಂದೂ ಬರೆದ. ಫೇಸ್‌ಬುಕ್‌ನಿಂದ ಲಾಗ್ ಔಟ್ ಮಾಡದೆ ಆರಾಮವಾಗಿ ಹೊರನಡೆದ. ಇಷ್ಟೆಲ್ಲ ಮಾಡಿದ ಮೇಲೆ ಪೋಲೀಸರ ಕೈಗೆ ಸಿಕ್ಕಿಬೀಳುವುದು ಎಷ್ಟು ಹೊತ್ತಿನ ಕೆಲಸ? ಆತನ ಬಗ್ಗೆ ಎಲ್ಲ ವಿವರಗಳಿರುವ ಆತನ ಫೇಸ್‌ಬುಕ್ ಖಾತೆಯಿಂದ ಲಾಗ್‌ಔಟ್ ಮಾಡಿದ್ದರೆ ಆತನನ್ನು ಹಿಡಿಯುವುದು ಅಷ್ಟು ಸುಲಭವಾಗುತ್ತಿರಲಿಲ್ಲ. ವಿಚಾರಣೆ ಮುಗಿದ ಮೇಲೆ ಬಹುಶಃ ಆತನಿಗೆ ಹತ್ತು ವರ್ಷ ಕಾರಾಗೃಹವಾಸದ ಶಿಕ್ಷೆ ಆಗಬಹುದು. ಆಂ, ಆತನಿಗೆ ಆಗ ಅಂತರಜಾಲ ಸೌಲಭ್ಯ ಇರುವುದಿಲ್ಲ. ಇದೆಲ್ಲ ನಡೆದಿದ್ದು ಅಮೇರಿಕ ದೇಶದಲ್ಲಿ.

e- ಪದ

ರದ್ದೀಮೈಲ್ (ಸ್ಪಾಮ್ -spam) -ನಿಮಗೆ ಬೇಕೋ ಬೇಡವೋ, ನಿಮ್ಮ ಟಪಾಲು ಪೆಟ್ಟಿಗೆಯಲ್ಲಿ ಒಂದಿಷ್ಟು ಜಾಹೀರಾತು ಪತ್ರಗಳು ದಿನನಿತ್ಯ ಬಂದು ಬೀಳುತ್ತವೆ ತಾನೆ? ಅದನ್ನು ನೀವು ರದ್ದಿ ಎಂದೇ ಕರೆಯುತ್ತೀರಿ ತಾನೆ? ಅದೇ ರೀತಿ ದಿನನಿತ್ಯ ನಿಮ್ಮ ಇಮೈಲ್‌ಗೆ ನಮಗೆ ಬೇಡವಾದ ಜಾಹೀರಾತು, ಇನ್ಯಾವುದೋ  ಸುದ್ದಿ ಪತ್ರ, ತಮ್ಮ ಜಾಲತಾಣ ಅಥವಾ ಬ್ಲಾಗ್ ನೋಡಿ ಎಂಬ ಕೇಳಿಕೆ -ಇತ್ಯಾದಿ, ನಮಗೆ ಅಗತ್ಯವಿಲ್ಲದ, ನಾವು ಕೋರಿಕೊಳ್ಳದ, ಇಮೈಲ್ ಬಂದು ಬಿದ್ದರೆ ಅದನ್ನು ಸ್ಪಾಮ್ ಇಮೈಲ್ ಎಂದು ಕರೆಯಲಾಗುತ್ತದೆ. ಈ ರೀತಿ ಸ್ಪಾಮ್ ಇಮೈಲ್ ಕಳಿಸುವುದು ಕಾನೂನು ಪ್ರಕಾರ ಅಪರಾಧ.

e - ಸಲಹೆ

ಗೂಗ್ಲ್‌ನಲ್ಲಿ ಬೇಕಾದ ಫೈಲ್ ಹುಡುಕಿ

ಗೂಗ್ಲ್ ಬಳಸಿ ನಮಗೆ ಬೇಕಾದ ಮಾಹಿತಿಯನ್ನು ಹುಡುಕುವುದು ಗೊತ್ತು ತಾನೆ? ಅದೇ ರೀತಿ ನಮಗೆ ಬೇಕಾದ ರೀತಿಯ ಫೈಲನ್ನು ಕೂಡ ಹುಡುಕಬಹುದು. ಅದಕ್ಕೆ ಮಾಡಬೇಕಾದದ್ದು ಇಷ್ಟೆ: ಗೂಗ್ಲ್‌ನಲ್ಲಿ ಹುಡುಕಬೇಕಾದ ಮಾಹಿತಿಯನ್ನು ಬೆರಳಚ್ಚಿಸಿ ಅದರ ಮುಂದೆ filtype: ಎಂದು ನಮೂದಿಸಿ ಬೇಕಾದ ಫೈಲ್ ಮಾದರಿಯನ್ನು ನಮೂದಿಸಬೇಕು. ಉದಾಹರಣೆಗೆ ಪವರ್‌ಪಾಯಿಂಟ್ ಸ್ಲೈಡ್ ಬೇಕಿದ್ದಲ್ಲಿ filetype:PPT,  ಪಿಡಿಎಫ್ ಕಡತ ಬೇಕಾಗಿದ್ದಲ್ಲಿ filetype:PDF, ಇತ್ಯಾದಿ.

ಕಂಪ್ಯೂತರ್ಲೆ

ಗಣಕವಾಡುಗಳು

“ನನ್ನ ಗಣಕಕ್ಕೆ ಬಂದಿದೆ ವೈರಸ್ಸಾಸುರಾ, ಎನ್ನ ಗಣಕವ ಕಾಯೋ ಮಹದೇಶ್ವರಾ”
“ಕೀಬೋರ್ಡ್ ತುಂಬ ಉರುಳುರುಳುತಾ, ಮೌಸ್‌ನಲ್ಲೂ ತುಂಬಿರಲು ನೀನು, ಮೌಸ್‌ಪಾಡ್‌ನಲ್ಲಿ ಹೊಳೆಹೊಳೆಯುತ, ಅಂಗೈಯಲ್ಲೂ ಅಂಟಿಕೊಂಡಿರಲು ನೀನು, ಕಸವೆಂಬ ದಿವ್ಯ ಕೀಟವೆ ನಿನಗೆ ಪ್ರಣಾಮಾ..”