ಬುಧವಾರ, ಡಿಸೆಂಬರ್ 30, 2009

ಗಣಕಿಂಡಿ - ೦೩೨ (೨೮, ೨೦೦೯)

ಅಂತರಜಾಲಾಡಿ

ಭರವಸೆಯಾಗಣಿ


ಕೋಪನ್‌ಹಾಗನ್‌ನಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳ ನಾಯಕರುಗಳು ಸೇರಿ ಜಾಗತಿಕ ತಾಪಮಾನ ಹೆಚ್ಚಳವನ್ನು ಕಡಿಮೆ ಮಾಡುವ ಬಗ್ಗೆ ಚರ್ಚಿಸಿದ್ದು ನಿಮಗೆ ಗೊತ್ತಿರಬಹುದು. ಈ ಚರ್ಚೆ ಕೊನೆಗೆ ಯಾವುದೇ ನಿರ್ದಿಷ್ಟ ತೀರ್ಮಾನಕ್ಕೆ ಬರದೆ ಕೊನೆಗೊಂಡಿದ್ದೂ ತಿಳಿದಿರಬಹುದು. ಈ ನಾಯಕರು ಹೀಗೆಯೇ ಮಾಡಬಹುದು ಎಂದು ಹಲವು ಮಂದಿ ಪರಿಸರವಾದಿಗಳು, ವಿಜ್ಞಾನಿಗಳು, ಚಿಂತಕರು ಮೊದಲೇ ಊಹಿಸಿದ್ದರು. ಈ ನಾಯಕರುಗಳೆಂದರೆ ಯಾರು? ಜನಸಾಮಾನ್ಯರು ಆರಿಸಿ ಕಳಿಸಿದವರು ತಾನೆ? ನಾಯಕರುಗಳ ಮೇಲೆ ಜನಸಾಮಾನ್ಯರು ಒತ್ತಡ ಹೇರಿದರೆ
ಅವರು ಕೆಲಸ ಮಾಡಿಯೇ ಮಾಡುತ್ತಾರೆ. ಹೀಗೆ ಜನಸಾಮಾನ್ಯರೆಲ್ಲ ಸೇರಿ ಜಗತ್ತನ್ನು ವಿನಾಶದಿಂದ ಉಳಿಸಬೇಕೆಂಬ ಚಿಂತನೆಯಿಂದ ಕೋಪನ್‌ಹಾಗನ್ ಶಿಖರ ಸಮ್ಮೇಳನದ ಸಮಯಕ್ಕೆ ಸರಿಯಾಗಿ ನಿರ್ಮಿಸಿದ ಜಾಲತಾಣ ಹೋಪನ್‌ಹಾಗನ್. ಇದರ ವಿಳಾಸ - hopenhagen.org. ಇಲ್ಲಿ ನಿಮ್ಮ ಹೆಸರು ನೋಂದಾಯಿಸಿ ಈ ಚಳವಳಿಯಲ್ಲಿ ನೀವೂ ಜೊತೆಗೂಡಬಹುದು. 

ಡೌನ್‌ಲೋಡ್
ಗೂಢಲಿಪಿಕಾರಕ

ನಿಮ್ಮ ಗಣಕದ ಹಾರ್ಡ್‌ಡಿಸ್ಕ್‌ನಲ್ಲಾಗಲಿ, ಯುಎಸ್‌ಬಿ ಡ್ರೈವ್‌ನಲ್ಲಾಗಲಿ ಸಂಗ್ರಹಿಸಿಟ್ಟ ಮಾಹಿತಿಯನ್ನು ಇತರರು ಓದುವ ಸಾಧ್ಯತೆಗಳಿವೆ. ಅಮೂಲ್ಯ ಮಾಹಿತಿಯನ್ನು ಇತರರು ಓದದಂತೆ ರಕ್ಷಿಸಿಡಬೇಕಾದರೆ ಅದನ್ನು ಗೂಢಲಿಪೀಕರಿಸಿಡಬೇಕು. ಅಂದರೆ ಮಾಹಿತಿಯನ್ನು ಸಂಗ್ರಹಿಸಿಡುವ ಸಂಕೇತೀಕರಣದಲ್ಲಿ ಬದಲಾವಣೆ ಮಾಡಬೇಕು. ಹೀಗೆ ಬದಲಾವಣೆ ಮಾಡಿದ ಮಾಹಿತಿಯನ್ನು ಓದಬೇಕಾದರೆ ಹಿಂದಿನ ವಿಧಾನಕ್ಕೆ ಬದಲಿಸಿ ಓದಬೇಕು. ಈ ರೀತಿ ಮಾಡಲು ಒಂದು ಮುಕ್ತ ತಂತ್ರಾಂಶ ಲಭ್ಯವಿದೆ. ಅದರ ಹೆಸರು TrueCrypt. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ - truecrypt.org. ಇದು ವಿಂಡೋಸ್ ಮಾತ್ರವಲ್ಲದೆ ಲೈನಕ್ಸ್‌ನಲ್ಲೂ ಕೆಲಸ ಮಾಡುತ್ತದೆ.

e - ಸುದ್ದಿ
ಮಗು ಸಾಯುತ್ತಿದ್ದಾಗ ಟ್ವಿಟ್ಟರ್ ಮಾಡುತ್ತಿದ್ದ ತಾಯಿ!
ಟ್ವಿಟ್ಟರ್‌ನ ಅತಿರೇಕಗಳ ಉದಾಹರಣೆಗೆ ಮತ್ತೊಂದು ಸೇರ್ಪಡೆ. ಫ್ಲಾರಿಡಾವಾಸಿ ತಾಯಿಯೊಬ್ಬಳು ತನ್ನ ಎರಡು ವರ್ಷದ ಮಗು ಈಜುಕೊಳದಲ್ಲಿ ಬಿದ್ದಾಗ ಟ್ವಿಟ್ಟರ್‌ನಲ್ಲಿ ಕಾಲ ಕಳೆಯುತ್ತಿದ್ದಳು. ಹಾಗೆಂತ ಹೇಳಿ ಆಕೆ ತನ್ನ ಮಗುವನ್ನು ಉಳಿಸಲು ಪ್ರಯತ್ನಿಸಲಿಲ್ಲ ಎಂದುಕೊಳ್ಳಬೇಡಿ. ಎರಡು ವರ್ಷದ ಮಗು ಈಜುಕೊಳದ ಪಕ್ಕದಲ್ಲಿ ಓಡಾಡುತ್ತಿದ್ದಾಗ ಮಗುವಿನ ಮೇಲೆ ಕಣ್ಣಿಡುವುದು ಬಿಟ್ಟು ಟ್ವೀಟ್ ಮಾಡುತ್ತಿದ್ದುದು ಆಕೆಯ ತಪ್ಪು ಎಂದು ಜಾಲನಾಗರಿಕರೆಲ್ಲ ಬೊಬ್ಬೆಹಾಕುತ್ತಿದ್ದಾರೆ. ಆಕೆ ತನ್ನ ಮಗು ಈಜುಕೊಳದಲ್ಲಿ ಬಿದ್ದುದನ್ನೂ ಟ್ವಿಟ್ಟರಿನಲ್ಲಿ ದಾಖಲಿಸಿದ್ದಾಳೆ. ಈಗಷ್ಟೆ ನನ್ನ ಮಗು ಈಜುಕೊಳದಲ್ಲಿ ಬಿದ್ದಿದೆ. ದಯವಿಟ್ಟು ನನ್ನ ಮಗುವಿನ ಪರವಾಗಿ ದೇವರಲ್ಲಿ ಬೇಡಿಕೊಳ್ಳಿ ಎಂದು ತನ್ನ ಹಿಂಬಾಲಕರಲ್ಲಿ ಆಕೆ ಕೇಳಿಕೊಂಡಿದ್ದಾಳೆ. ಅಂದರೆ ಮಗುವನ್ನು ಎತ್ತಿ ತಂದ ನಂತರ ಪ್ರಥಮೋಪಚಾರ ಮಾಡಿ, ಪೋಲೀಸು ಮತ್ತು ಅಂಬುಲೆನ್ಸ್‌ಗೆ ಕರೆ ನೀಡಿ, ಅವರು ಬರಲು ಕಾಯುತ್ತಿದ್ದಾಗ ಆಕೆ ಈ ರೀತಿ ಬರೆದಿದ್ದಾಳೆ. ಏನಿದ್ದರೂ ಆಕೆಯ ಪರ ಮತ್ತು ವಿರೋಧವಾಗಿ ಅಂತರಜಾಲದಲ್ಲಿ ವಾಗ್ವಾದಗಳು ನಡೆದವು.  

e- ಪದ

ಕಾಪ್ಚ (CAPTCHA=Completely Automated Public Turing test to tell Computers and Humans Apart) -ಅಂತರಜಾಲತಾಣಗಳಲ್ಲಿ ನೋಂದಾಯಿಸಿಕೊಳ್ಳುವಾಗ ಒಂದು ಚಿತ್ರದ ರೂಪದಲ್ಲಿ ತೋರಿಸುವ ಹಾಗೂ ಅದನ್ನು ಅಲ್ಲೇ ನೀಡಿರುವ ಬಾಕ್ಸ್‌ನಲ್ಲಿ ಬೆರಳಚ್ಚು ಮಾಡಬೇಕಾಗಿರುವ ಪದಗುಚ್ಛ. ಇದು ಜಾಲತಾಣಗಳಲ್ಲಿ ಮನುಷ್ಯರೇ ನೋಂದಾಯಿಸಿಕೊಳ್ಳತಕ್ಕದ್ದು ಎಂಬ ನಿಯಮವನ್ನು ಜಾರಿಗೆ ತರಲು ಮಾಡಿರುವ ಉಪಾಯ. ಜಾಲತಾಣಗಳಲ್ಲಿ ಸ್ವಯಂಚಾಲಿತ ತಂತ್ರಾಂಶಗಳ ಮೂಲಕ ಗಲೀಜು ಜಾಲತಾಣಗಳ ಜಾಹೀರಾತು ಹಾಕುವುದನ್ನು ತಪ್ಪಿಸಲು ಇದನ್ನು ಬಳಸಲಾಗುತ್ತದೆ.


e - ಸಲಹೆ


ಮೈಸೂರಿನ ಪ್ರಸನ್ನ ರಾವ್ ಅವರ ಪ್ರಶ್ನೆ: ವೈರಸ್ ವಿರೋಧಿ ತಂತ್ರಾಂಶಗಳು ಮಾರುಕಟ್ಟೆಯಲ್ಲಿ ಸಾವಿರಾರು ಇವೆ. ಇವುಗಳಲ್ಲಿ ಮನೆ ಬಳಕೆಗೆ ಯಾವುದು ಒಳ್ಳೆಯದು?
ಉ: ನೀವು ಎವಿಜಿಯ ಉಚಿತ ಆವೃತ್ತಿಯನ್ನು ಬಳಸಬಹುದು. ಇದನ್ನು http://bit.ly/72S4S ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕಂಪ್ಯೂತರ್ಲೆ

ಕನ್ನಡದಲ್ಲಿ ಬ್ಲಾಗಿಂಗ್ ಮಾಡಬೇಕಾದರೆ ಯುನಿಕೋಡ್ ಬಳಸಬೇಕು ಎಂದು ಕೋಲ್ಯನಿಗೆ ಯಾರೋ ಹೇಳಿದ್ದರು. ಕೋಲ್ಯ ತಾನು ಗಣಕ ತೆಗೆದುಕೊಂಡ ಕಂಪೆನಿಗೆ ಫೋನ್ ಮಾಡಿ ಕೇಳಿದ “ರೀ ನಾನು ನಿಮ್ಮಿಂದ ಒಂದು ಕಂಪ್ಯೂಟರ್ ತೆಗೆದುಕೊಂಡಿದ್ದೇನೆ. ಅದರಲ್ಲಿ ಯುನಿಕೋಡ್ ಇಲ್ಲ. ನೀವು ಯುನಿಕೋಡ್‌ನ್ನು ಒಂದು ಸಿ.ಡಿ.ಯಲ್ಲಿ ಹಾಕಿ ನನಗೆ ಕಳುಹಿಸಿಕೊಡಿ”.
(ಮಾಹಿತಿಗೆ: ಯುನಿಕೋಡ್ ಒಂದು ಶಿಷ್ಟತೆಯೇ ವಿನಃ ಒಂದು ತಂತ್ರಾಂಶ ಅರ್ಥಾತ್ ಸಾಫ್ಟ್‌ವೇರ್ ಅಲ್ಲ)

ಸೋಮವಾರ, ಡಿಸೆಂಬರ್ 21, 2009

ಗಣಕಿಂಡಿ - ೦೩೧ (೨೧, ೨೦೦೯)

ಅಂತರಜಾಲಾಡಿ
ಗೋಯಾತ್ರೆಯ ಜಾಲತಾಣ

ಭಾರತೀಯ ಗೋತಳಿಗಳ ಉಳಿವಿಗಾಗಿ ಶ್ರಮಿಸುತ್ತಿರುವ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಸಂಕಲ್ಪದಿಂದ ವಿಶ್ವಮಂಗಲ ಗೋಗ್ರಾಮ ಯಾತ್ರೆ ನಡೆಯುತ್ತಿದೆ. ಇದು ಸಪ್ಟೆಂಬರ್ ೩೦, ೨೦೦೯ರಂದು ಕುರುಕ್ಷೇತ್ರದಿಂದ ಪ್ರಾರಂಭವಾಗಿ ದೇಶಾದ್ಯಂತ ಸುತ್ತಿ ಜನವರಿ ೧೭, ೨೦೧೦ರಂದು ನಾಗಪುರದಲ್ಲಿ ಸಮಾವೇಶಗೊಳ್ಳಲಿದೆ.  ಈ ಯಾತ್ರೆಯ ಸಮಗ್ರ ವಿವರ ನೀಡುವ ಜಾಲತಾಣ gougram.org. ಈ ಜಾಲತಾಣ ಇಂಗ್ಲಿಶ್, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿವೆ. ಗೋಯಾತ್ರೆಯ ವಿವರಗಳಲ್ಲದೆ, ಭಾರತೀಯ ಗೋತಳಿಗಳ ಮಾಹಿತಿ, ಗೋ ಆಧಾರಿತ ಕೃಷಿ ಮತ್ತು ಜೀವನ ಸಂಬಂಧಿ ಲೇಖನಗಳೂ ಇಲ್ಲಿವೆ. ಕನ್ನಡ ಭಾಷೆಯಲ್ಲಿ ಗೋವಿನ ಬಗ್ಗೆ ಪ್ರಕಟವಾಗುತ್ತಿರುವ ಏಕೈಕ e-ಪತ್ರಿಕೆ “ಗೋ ವಿಶ್ವ”ದ ಎಲ್ಲ ಸಂಚಿಕೆಗಳನ್ನು ಕೂಡ ಇಲ್ಲಿ ಓದಬಹುದು. 

ಡೌನ್‌ಲೋಡ್
ಯುನಿಕೋಡ್ ಪದಸಂಸ್ಕಾರಕ
ಯುನಿಕೋಡ್ ಶಿಷ್ಟತೆಯನ್ನು ಬಳಸಿ ಬೆರಳಚ್ಚು ಮಾಡಲು ಹಲವು ವಿಧಾನಗಳಿವೆ. ಪಠ್ಯವನ್ನು ಬೆರಳಚ್ಚು ಮಾಡಿ ಸಂಗ್ರಹಿಸಿಡಲು ವಿಂಡೋಸ್‌ನಲ್ಲಿ ನೋಟ್‌ಪಾಡ್ ಎಂಬ ಸರಳ ತಂತ್ರಾಂಶವಿದೆ. ಇದರಲ್ಲಿ ಕೆಲವೇ ಸವಲತ್ತುಗಳಿವೆ. ಯುನಿಕೋಡ್ ವಿಧಾನದಲ್ಲಿ ಪ್ರಪಂಚದ ಯಾವುದೇ ಭಾಷೆಯಲ್ಲಿ ಬೆರಳಚ್ಚು ಮಾಡಿ ಪಠ್ಯರೂಪದಲ್ಲಿ ಸಂಗ್ರಹಿಸಿಡಲು BabelPad ಎಂಬ ಉಚಿತ ತಂತ್ರಾಂಶ ಲಭ್ಯವಿದೆ. ಇದರಲ್ಲಿ ಇನ್ನೂ ಹಲವು ವಿಶೇಷ ಸವಲತ್ತುಗಳಿವೆ. ಉದಾಹರಣೆಗೆ ಬಳಸುವ ಅಕ್ಷರಶೈಲಿಯಲ್ಲಿ (ಫಾಂಟ್) ಬಳಸಿರುವ ಎಲ್ಲ ಅಕ್ಷರಭಾಗಗಳನ್ನು ಚಿತ್ರರೂಪದಲ್ಲಿ ಪಡೆಯಬಹುದು. ಇದು ಫಾಂಟ್ ತಯಾರಕರುಗಳಿಗೆ ಸಹಾಯಕಾರಿ. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ http://bit.ly/57E3PT

e - ಸುದ್ದಿ
ಕ್ಯಾಮರಾದಂತೆ ಕೆಲಸ ಮಾಡುವ ಗಣಕಪರದೆ 
ಗಣಕದ ಪರದೆಗಳಲ್ಲಿ ಹಲವು ವಿಧ. ಇತ್ತೀಚೆಗೆ ತುಂಬ ಜನಪ್ರಿಯವಾಗಿರುವವು ದ್ರವಸ್ಫಟಿಕದಿಂದ (LCD=Liquid Crystal Display) ಮಾಡಿದವು. ಅಮೇರಿಕದ ಮಸ್ಯಾಚುಸೆಟ್ಸ್ ತಾಂತ್ರಿಕ ವಿಶ್ವವಿದ್ಯಾಲಯದ ರಮೇಶ್ ರಾಸ್ಕರ್ ಮತ್ತು ಸಹೋದ್ಯೋಗಿಗಳು ಈ ಎಲ್‌ಸಿಡಿ ಪರದೆಗಳನ್ನು ಬದಲಿಸಿ ಕ್ಯಾಮರಾದಂತೆ ಬಳಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್‌ಸಿಡಿ ಪರದೆಗಳಲ್ಲಿ ಸಹಸ್ರಾರು ಅತಿ ಚಿಕ್ಕ ಕಣ ರೂಪದಲ್ಲಿರುವ ದ್ರವಸ್ಫಟಿಕದ ಘಟಕಗಳಿವೆ. ಇವು ಪರದೆಯಲ್ಲಿ ಚಿತ್ರವನ್ನು ಮೂಡಿಸುತ್ತವೆ. ಈ ಕಣಗಳ ಮಧ್ಯೆ ಇರುವ ಅತಿ ಚಿಕ್ಕ ತೂತನ್ನೇ ಪಿನ್ ಹೋಲ್ ಕ್ಯಾಮರಾದಂತೆ ಬಳಸುವಲ್ಲಿ ಈ ತಂಡ ಯಶಸ್ವಿಯಾಗಿದೆ. ಹೀಗೆ ಪಡೆದ ಚಿಕ್ಕ ಚಿಕ್ಕ ಚಿತ್ರಗಳನ್ನು ನೇಯ್ದು ಪರದೆಯ ಮುಂದಿರುವ ವಸ್ತುವಿನ ಪೂರ್ತಿಪ್ರಮಾಣದ ಮೂರು ಆಯಾಮದ ಚಿತ್ರ ಪಡೆಯಬಹುದು. ಇನ್ನು ಮುಂದೆ ಗಣಕ ಪರದೆಯ ಮುಂದೆ ಬಟ್ಟೆ ಬದಲಾಯಿಸುವಾಗ ಎಚ್ಚರಿಕೆಯಿಂದಿರಬೇಕು!

e- ಪದ

ಯುನಿಕೋಡ್ (unicode) - ಯುನಿಫೋರ್ಮ್ ಕೋಡ್ ಎನ್ನುವುದರ ಸಂಕ್ಷಿಪ್ತ ರೂಪ. ಮಾಹಿತಿ ವಿನಿಮಯಕ್ಕಾಗಿ ಪ್ರಪಂಚಕ್ಕೆಲ್ಲ ಒಂದೇ ಏಕರೂಪ ಸಂಕೇತ ಬೇಕೆಂದು ಮಾಡಿಕೊಂಡ ಶಿಷ್ಟ ಸಂಕೇತ. ಇದು ೧೬ ಬಿಟ್‌ಗಳನ್ನು ಹೊಂದಿದೆ. ೮ ಬಿಟ್‌ಗಳ ಆಸ್ಕಿ ಸಂಕೇತ ವಿಧಾನದಲ್ಲಿ ಪ್ರಪಂಚದ ಎಲ್ಲ ಭಾಷೆಗಳಿಗೆ ಸ್ಥಾನವಿಲ್ಲ. ಯುನಿಕೋಡ್‌ನಲ್ಲಿ ಪ್ರಪಂಚದ ಎಲ್ಲ ಭಾಷೆಗಳಿಗೂ, ಕನ್ನಡವೂ ಸೇರಿದಂತೆ, ಪ್ರತ್ಯೇಕ ಸಂಕೇತ ನಿಗದಿ ಮಾಡಲಾಗಿದೆ. ಪ್ರಪಂಚದ ಎಲ್ಲ ಗಣಕಗಳೂ ಒಂದೇ ಶಿಷ್ಟ ಸಂಕೇತ ಬಳಸುವುದರಿಂದ ಮಾಹಿತಿ ವಿನಿಮಯದಲ್ಲಿ ಅಡಚಣೆಯುಂಟಾಗುವುದಿಲ್ಲ. ಮೈಕ್ರೋಸಾಫ್ಟ್‌ನ ವಿಂಡೋಸ್ ಎಕ್ಸ್‌ಪಿ ಮತ್ತು ನಂತರದ ಎಲ್ಲ ಆವೃತ್ತಿಗಳಲ್ಲಿ ಕನ್ನಡವನ್ನು ಯುನಿಕೋಡ್ ವಿಧಾನದಲ್ಲಿ ಅಳವಡಿಸಲಾಗಿದೆ. ಗೂಗ್ಲ್ ಮತ್ತು ಇತರೆ ಶೋಧಕಗಳನ್ನು ಬಳಸಿ ಮಾಹಿತಿಯನ್ನು ಹುಡುಕಿದಾಗ ಕನ್ನಡ ಯುನಿಕೋಡ್‌ನಲ್ಲಿ ಇರುವ ಅಂತರಜಾಲ ತಾಣಗಳನ್ನು ಮಾತ್ರ ಅವು ಪತ್ತೆಹಚ್ಚುತ್ತವೆ.


e - ಸಲಹೆ

ಕೊಪ್ಪಳದ ಶರಣ್ ಹೂಗಾರ್ ಅವರ ಪ್ರಶ್ನೆ: ನಾನು ಒಂದು ಕನ್ನಡ ವೆಬ್‌ಸೈಟ್ ತಯಾರು ಮಾಡಿರುವೆ. ಆದರೆ ಅದರಲ್ಲಿ ಕನ್ನಡ ಅಕ್ಷರಗಳನ್ನು ಸೇರಿಸಲು ಆಗುತ್ತಿಲ್ಲ. ನಾನು (Dreamweaver software) ನಲ್ಲಿ ಮಾಡುತಿದ್ದೇನೆ. ಅದಕ್ಕೆ ಯಾವ ಕನ್ನಡ ತಂತ್ರಾಂಶ support ಮಾಡುತ್ತದೆ ತಿಳಿಸಿ. ಅಥವಾ Unicode softwareನ್ನು ಡೌನ್‌ಲೋಡ್ ಮಾಡಿಕೊಳ್ಳಲು website link ಕಳುಹಿಸಿಕೊಡಿ.
ಉ: ಯುನಿಕೋಡ್ ಎಂಬುದು ಒಂದು ತಂತ್ರಾಂಶವಲ್ಲ. ಅದು ಒಂದು ಜಾಗತಿಕ ಶಿಷ್ಟತೆ. ನೀವು ಡ್ರೀಮ್‌ವೀವರ್‌ನಲ್ಲಿ Default encoding ಎಂಬಲ್ಲಿ UTF-8 (Unicode) ಎಂಬುದಾಗಿ ಆಯ್ಕೆ ಮಾಡಿಕೊಳ್ಳಬೇಕು. ಅನಂತರ ಯುನಿಕೋಡ್ ವಿಧಾನದಲ್ಲಿ ಬೆರಳಚ್ಚು ಮಾಡಲು ಯಾವುದೇ ಕೀಲಿಮಣೆ ತಂತ್ರಾಂಶ (ಉದಾ -ಬರಹ) ಅಥವಾ ವಿಂಡೋಸ್‌ನಲ್ಲೇ ಇರುವ ಕನ್ನಡ ಕೀಲಿಮಣೆಯನ್ನು ಬಳಸಬಹುದು.

ಕಂಪ್ಯೂತರ್ಲೆ

ಕನ್ನಡಕ್ಕೆ ಯುನಿಕೋಡ್ ಬಳಸಬೇಕಾದರೆ ಓಪನ್‌ಟೈಪ್ ಫಾಂಟ್‌ಗಳನ್ನು ಬಳಸಬೇಕಾಗುತ್ತದೆ. ಇಂತಹ ಫಾಂಟ್‌ಗಳು ತುಂಬ ಇಲ್ಲ. ಇವುಗಳಲ್ಲಿ ೩ ಫಾಂಟ್‌ಗಳ ಹೆಸರು ಸಂಪಿಗೆ, ಮಲ್ಲಿಗೆ  ಮತ್ತು ಕೇದಗೆ. ಕೋಲ್ಯ ಒಂದು ಡಿಟಿಪಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಆತನ ಬಾಸ್ ಆತನನ್ನು ಭಾರತೀಯ ವಿಜ್ಞಾನ ಸಂಸ್ಥೆಗೆ ಸಂಪಿಗೆ, ಮಲ್ಲಿಗೆ ಮತ್ತು ಕೇದಗೆಗಳನ್ನು ತರಲು ಕಳುಹಿಸಿದ. ಕೋಲ್ಯ ಮಲ್ಲಿಗೆ ಮತ್ತು ಸಂಪಿಗೆಗಳನ್ನು ಮಲ್ಲೇಶ್ವರದ ಮಾರುಕಟ್ಟೆಯಲ್ಲಿ ಕೊಂಡುಕೊಂಡು ಬಂದ. ಕೇದಗೆ ಎಲ್ಲೂ ಸಿಗಲಿಲ್ಲ ಎಂದು ವರದಿ ಮಾಡಿದ.

ಮಂಗಳವಾರ, ಡಿಸೆಂಬರ್ 15, 2009

ಗಣಕಿಂಡಿ - ೦೩೦ (೧೪, ೨೦೦೯)

ಅಂತರಜಾಲಾಡಿ

ಭಾರತೀಯ ವಿದ್ಯುನ್ಮಾನ ಗ್ರಂಥಾಲಯ

ಪುಸ್ತಕಗಳನ್ನು ಅಂಕೀಕರಿಸಿ ಅಂದರೆ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಅದನ್ನು ಗಣಕದಲ್ಲಿ, ಸಿ.ಡಿ.ಯಲ್ಲಿ ಅಥವಾ ಅಂತರಜಾಲದಲ್ಲಿ ಓದಲು ಅನುವಾಗುವಂತೆ ಮಾಡುವ ವಿಧಾನಕ್ಕೆ e-book ಅರ್ಥಾತ್ ವಿದ್ಯುನ್ಮಾನ ಪುಸ್ತಕ ಎನ್ನುತ್ತಾರೆ. ಈ ರೀತಿಯ ವಿದ್ಯುನ್ಮಾನ ಪುಸ್ತಕಗಳಿಗೆಂದೇ ಹಲವಾರು ಜಾಲತಾಣಗಳಿವೆ. ಭಾರತ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಭಾರತೀಯ ವಿದ್ಯುನ್ಮಾನ ಪುಸ್ತಕ ಭಂಡಾರ. ಇದು ಅಂತರಜಾಲದಲ್ಲಿ ಉಚಿತವಾಗಿ ಓದಲು ಲಭ್ಯವಿದೆ. ಅದರ ವಿಳಾಸ www.new.dli.ernet.in. ಕನ್ನಡವೂ ಸೇರಿದಂತೆ ಭಾರತದ ಎಲ್ಲ ಭಾಷೆಯ ಸಹಸ್ರಾರು ಪುಸ್ತಕಗಳು ಇಲ್ಲಿ ಓದಲು ಲಭ್ಯವಿವೆ. ಆದರೆ ಪುಸ್ತಕಗಳನ್ನು ಜಾಲತಾಣದಲ್ಲಿಯೇ ಓದಬೇಕು. ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸವಲತ್ತನ್ನು ನೀಡಿಲ್ಲ. ಬಹುಶಃ ಇದಕ್ಕೆ ಪುಸ್ತಕಗಳ ಹಕ್ಕುಸ್ವಾಮ್ಯದ ಸಮಸ್ಯೆ ಅಡ್ಡಿಯಾಗಿರಬೇಕು.

ಡೌನ್‌ಲೋಡ್
ದಿನಚರಿ ಬರೆಯುವವರಿಗೆ
ಈಗಿನ ಕಾಲದಲ್ಲೂ ದಿನಚರಿ ಬರೆಯುವವರಿದ್ದಾರೆಯೇ? ಹಾಗೆ ಬರೆಯುವ ಅಭ್ಯಾಸವಿದ್ದವರಲ್ಲಿ ಎಷ್ಟು ಜನ ಗಣಕ ಬಳಕೆದಾರರಿದ್ದಾರೆ? ನೀವು ಅಂತವರಲ್ಲೊಬ್ಬರಾದರೆ ದಿನಚರಿಯನ್ನು ಪುಸ್ತಕದಲ್ಲಿ ಬರೆಯುವ ಬದಲು ಗಣಕದಲ್ಲಿ ಬರೆಯುವಂತಿದ್ದರೆ ಚೆನ್ನಾಗಿತ್ತು ಅನ್ನಿಸಿರಬಹುದಲ್ಲವೇ? ಹಾಗಿದ್ದರೆ ನಿಮಗೆ ಬೇಕು Efficient Diary ತಂತ್ರಾಂಶ. ಇದು ದೊರಕುವ ಜಾಲತಾಣದ ವಿಳಾಸ www.efficientdiary.com. ಇದರಲ್ಲಿ ಕನ್ನಡ ಲಿಪಿಯಲ್ಲಿ (ಯುನಿಕೋಡ್‌ನಲ್ಲಿ) ಮಾಹಿತಿ ದಾಖಲಿಸಲು ಆಗುವುದಿಲ್ಲ. ಕನ್ನಡಲ್ಲಿ ಬೆರಳಚ್ಚು ಮಾಡಬಲ್ಲ ದಿನಚರಿ ತಂತ್ರಾಂಶ iDailyDiary (http://bit.ly/4CL7Fv). ಇದರಲ್ಲಿ ಕನ್ನಡದಲ್ಲಿ ಬೆರಳಚ್ಚೇನೋ ಮಾಡಬಹುದು, ಆದರೆ ಮಾಹಿತಿಯನ್ನು ಹುಡುಕುವ ಸವಲತ್ತಿನಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡಲು ಆಗುವುದಿಲ್ಲ. ಕನ್ನಡದಲ್ಲಿ (ಯುನಿಕೋಡ್) ಸಂಪೂರ್ಣವಾಗಿ ಬಳಕೆ ಮಾಡಬಹುದಾದ  ಉಚಿತ ದಿನಚರಿ ತಂತ್ರಾಂಶ ಇನ್ನೂ ನನಗೆ ಪತ್ತೆಯಾಗಿಲ್ಲ. ನಿಮ್ಮಲ್ಲಿ ಯಾರಿಗಾದರೂ ಗೊತ್ತಿದ್ದರೆ ತಿಳಿಸಬಹುದು.

e - ಸುದ್ದಿ
ಆಟದ ಸಾಮಾನು ಕೊಡದಿದ್ದುದಕ್ಕೆ ಪೋಲೀಸರಿಗೆ ದೂರು!
ಅಮೇರಿಕ ದೇಶದಲ್ಲಿ ೯೧೧ ಎಂಬ ದೂರವಾಣಿ ಸಂಖ್ಯೆ ನಮ್ಮ ದೇಶದ ದೂರವಾಣಿ ಸಂಖ್ಯೆ ೧೦೦ಕ್ಕೆ ಸಮಾನ. ಇದಕ್ಕೆ ಕರೆ ಮಾಡಿದರೆ ನೇರವಾಗಿ ಪೋಲೀಸ್ ಕೇಂದ್ರಕ್ಕೆ ಹೋಗುತ್ತದೆ. ಆಪತ್‌ಕಾಲೀನ ಪರಿಸ್ಥಿತಿಯಲ್ಲಿ ದೂರು ನೀಡಲು ಇದನ್ನು ಬಳಸುತ್ತಾರೆ. ಒಂದು ದಿನ ಈ ಸಂಖ್ಯೆಗೆ ಒಬ್ಬ ೧೫ ವರ್ಷ ಪ್ರಾಯದ ಹುಡುಗನಿಂದ ಕರೆ ಬಂತು. ಆತನ ದೂರು ಏನು ಗೊತ್ತೆ? ಆತನ ಎಕ್ಸ್‌ಬಾಕ್ಸ್ ಎಂಬ ಗಣಕಾಧಾರಿತ ಆಟದ ಸಾಮಾನನ್ನು ಆತನ ಪೋಷಕರು ಆತನಿಗೆ ನೀಡುತ್ತಿಲ್ಲ ಎಂಬುದಾಗಿತ್ತು. ಮಕ್ಕಳು ಆಟದಲ್ಲೇ ಹೊತ್ತು ಕಳೆಯುತ್ತಿದ್ದರೆ ಅವರ ಆಟದ ಸಾಮಾನನ್ನು ಎತ್ತಿಡುವುದನ್ನು ಎಲ್ಲ ತಂದೆತಾಯಿಯರು ಮಾಡುತ್ತಾರೆ ತಾನೆ? ಹಾಗೆಯೇ ಅಲ್ಲಿಯೂ ಆಗಿತ್ತು. ಪೋಲೀಸರೇನೋ ಆತನ ಮನೆಗೆ ಬಂದರು. ಆದರೆ ಆತನಿಗೆ ಆಟದ ಸಾಮಾನು ಕೊಡಿಸಲಿಲ್ಲ. ಬದಲಿಗೆ ನಿನ್ನ ತಂದೆತಾಯಿ ಹೇಳಿದಂತೆ ಕೇಳು ಎಂದು ಬುದ್ಧಿವಾದ ಹೇಳಿ ಹೋದರು. 

e- ಪದ

ಚಿತ್ರಿಕೆ (icon) -ಯಾವುದಾದರೊಂದು ತಂತ್ರಾಂಶ ಅಥವಾ ಸವಲತ್ತನ್ನು ಚಾಲನೆಗೊಳಿಸಲು ಅನುವು ಮಾಡಿಕೊಡುವ ಆ ತಂತ್ರಾಂಶದ ಕಿರು ರೂಪದ ಲಾಂಛನ ಚಿಹ್ನೆ. ಉದಾಹರಣೆಗೆ ಪರದೆಯ ಮೇಲಿರುವ ಗಣಕದ ಚಿಹ್ನೆ. ಇದರ ಮೇಲೆ ಮೌಸ್‌ನಿಂದ ಕ್ಲಿಕ್ ಮಾಡಿದರೆ ನಿಮ್ಮ ಗಣಕದಲ್ಲಿರುವ ಡ್ರೈವ್‌ಗಳು ತೆರೆಯುತ್ತವೆ. ನೀವು ಬರಹ ತಂತ್ರಾಂಶ ಬಳಸುವವರಾದರೆ “ಕ” ರೂಪದ ಅದರ ಚಿತ್ರಿಕೆ ಮೇಲೆ ಕ್ಲಿಕ್ ಮಾಡಿದರೆ ಬರಹ ಚಾಲನೆಗೊಳ್ಳುತ್ತದೆ.


e - ಸಲಹೆ

ಎಲ್ಲೆಂದರಲ್ಲಿ ನಿಮ್ಮ ಗುಪ್ತಪದ ನೀಡಬೇಡಿ

ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ನೆಟ್‌ವರ್ಕಿಂಗ್ ಜಾಲತಾಣಗಳ ಹುಚ್ಚು ತುಂಬ ಜಾಸ್ತಿಯಾಗಿದೆ. ಒಬ್ಬರಿಗೊಬ್ಬರು ಸಂಪರ್ಕದಲ್ಲಿರಲು ಈ ಜಾಲತಾಣಗಳು ಸಹಾಯಮಾಡುತ್ತವೆ. ಎಂದೋ ಸಂಪರ್ಕ ಕಳೆದುಹೋದ ಸ್ನೇಹಿತ ಅಥವಾ ದೂರಸಂಬಂಧಿ ಇಂತಹ ಜಾಲತಾಣಗಳ ಮೂಲಕ ಮತ್ತೆ ದೊರೆತ ಉದಾಹರಣೆಗಳು ಸಾಕಷ್ಟಿವೆ. ಇಂತಹ ಜಾಲತಾಣಗಳಿಗೆ ಉದಾಹರಣೆ ಆರ್ಕುಟ್, ಫೇಸ್‌ಬುಕ್, ಮೈಸ್ಪೇಸ್ ಇತ್ಯಾದಿ. ಇದೇ ಮಾದರಿಯಲ್ಲಿ ಇತ್ತೀಚೆಗೆ ನೂರಾರು ಜಾಲತಾಣಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಎಲ್ಲವೂ ಸಂಭಾವಿತ ಜಾಲತಾಣಗಳಲ್ಲ. ಕೆಲವು ಜಾಲತಾಣಗಳಲ್ಲಿ ನೋಂದಣಿ ಮಾಡುವಾಗ ಅವು ನಿಮ್ಮ ಇಮೈಲ್‌ನ ಗುಪ್ತಪದ (ಪಾಸ್‌ವರ್ಡ್) ಕೇಳುತ್ತವೆ. ಹಾಗೆ ಅಲ್ಲಿ ನಿಮ್ಮ ಗುಪ್ತಪದ ದಾಖಲಿಸಿದರೆ, ಈ ಜಾಲತಾಣಗಳು ನಿಮ್ಮ ಇಮೈಲ್ ಖಾತೆಯ ವಿಳಾಸ ಪುಸ್ತಕದಲ್ಲಿ ಇರುವ ಎಲ್ಲ ವಿಳಾಸಗಳಿಗೆ ನಿಮ್ಮ ಅನುಮತಿಯಿಲ್ಲದೇ ಆಹ್ವಾನ ಕಳುಹಿಸುತ್ತವೆ. ಕೆಲವರಿಗೆ ಇದು ತುಂಬ ಕಿರಿಕಿರಿ ಉಂಟು ಮಾಡಬಹುದು. ಇದೇ ಜಾಲತಾಣದಿಂದ ಆಹ್ವಾನ ಕಳುಹಿಸಿದರೆ ಒಂದು ರೀತಿ. ಆದರೆ ಬೇರೆ ಇನ್ಯಾವುದೋ ಸಂಬಂಧವೇ ಇಲ್ಲದ ಜಾಲತಾಣದಿಂದ ಆಹ್ವಾನ ಕಳುಹಿಸಿದರೆ? ನಿಮ್ಮ ಸ್ನೇಹಿತ ನಿಮಗೆ ಅದನ್ನು ವಾಪಾಸು ಕಳುಹಿಸಿದರೆ ಮಾತ್ರ ನಿಮಗೆ ಅದು ಗೊತ್ತಾಗುತ್ತದೆ. ಉದಾಹರಣೆಗೆ ಡೇಟಿಂಗ್ ಜಾಲತಾಣ. ನಿಮ್ಮ ಸ್ನೇಹಿತರಿಗೆ ನಿಮ್ಮ ಇಮೈಲ್‌ನಿಂದ ಡೇಟಿಂಗ್ ಆಹ್ವಾನ ಹೋದರೆ ನಿಮಗೆ ಮತ್ತು ಅವರಿಗೆ ಎಷ್ಟು ಮುಜುಗುರವಾಗಬಹುದು? ಆದುದರಿಂದ ಇಂತಹ ಜಾಲತಾಣಗಳಲ್ಲಿ ನಿಮ್ಮ ಇಮೈಲ್ ಪಾಸ್‌ವರ್ಡ್ ನೀಡಬೇಡಿ.

ಕಂಪ್ಯೂತರ್ಲೆ

ಕೋಲ್ಯ ಬಟ್ಟೆ ಅಂಗಡಿಗೆ ಹೋಗಿ ಕಿಟಿಕಿ ಪರದೆ ಬಟ್ಟೆ ಕೇಳಿದ. ಅಂಗಡಿಯಾತ ಕಿಟಿಕಿಯ ಅಳತೆ ಕೇಳಿದ. ಕೋಲ್ಯ ಹೇಳಿದ “ಅದು ನನ್ನ ಕಂಪ್ಯೂಟರ್‌ಗೆ” ಎಂದು. ಅಂಗಡಿಯಾತನಿಗೆ ಆಶ್ಚರ್ಯವಾಯಿತು. “ಕಂಪ್ಯೂಟರ್‌ಗೇಕೆ ಕರ್ಟನ್” ಎಂದು ಕೇಳಿದಾಗ ಕೋಲ್ಯ ಹೇಳಿದ “ಯಾಕೆಂದರೆ ನನ್ನ ಕಂಪ್ಯೂಟರ್‌ಗೆ ವಿಂಡೋಸ್ ಫಿಟ್ ಮಾಡಿದ್ದೇನೆ. ಅದಕ್ಕೆ ಕರ್ಟನ್ ಬೇಕು”.

ಸೋಮವಾರ, ಡಿಸೆಂಬರ್ 7, 2009

ಗಣಕಿಂಡಿ - ೦೨೯ (೭, ೨೦೦೯)

ಅಂತರಜಾಲಾಡಿ
ಪರಿಸರಕ್ಕಾಗಿ ತಂತ್ರಜ್ಞಾನವ್ಯಸನಿಗಳು
ಆಧುನಿಕ ತಂತ್ರಜ್ಞಾನದ ಅತಿಯಾದ ಬಳಕೆಯಿಂದಾಗಿ ಭೂಮಿ ಬಿಸಿಯಾಗುತ್ತಿದೆ, ಪ್ರಾಕೃತಿಕ ಸಂಪತ್ತು ಕಡಿಮೆಯಾಗುತ್ತಿದೆ, ಪ್ರದೂಷಣ ಜಾಸ್ತಿಯಾಗುತ್ತಿದೆ, ಇತ್ಯಾದಿ ಓದುತ್ತಲೇ ಇರುತ್ತೇವೆ. ತಂತ್ರಜ್ಞಾನವನ್ನೇ ಈ ಪರಿಸರದ ಒಳಿತಿಗಾಗಿ ಬಳಸಿದರೆ ಹೇಗೆ? ಸೌರವಿದ್ಯುತ್ ಬಳಕೆ ಎಲ್ಲರಿಗೂ ಗೊತ್ತು. ಹಾಗೆಯೇ ಗಾಳಿಯಂತ್ರ. ಇದೇ ರೀತಿ ತಂತ್ರಜ್ಞಾನವನ್ನು ಇನ್ನೂ ಹಲವು ರೀತಿಯಲ್ಲಿ ಪರಿಸರದ ಉಳಿವಿಗಾಗಿ ಬಳಸಬಹುದು. ಪರಿಸರಕ್ಕಾಗಿ ತಂತ್ರಜ್ಞಾನವನ್ನು ಯಾವ ರೀತಿ ಬಳಸಬಹುದು ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸುವ ಜಾಲತಾಣ www.ecogeek.org.

ಡೌನ್‌ಲೋಡ್
ಅಳಿಸಿದ ಮೇಲೆ ಅಳುತ್ತೀರಾ?
ಹೌದು. ಹಲವು ಬಾರಿ ಫೈಲುಗಳನ್ನು ಇವು ಬೇಡ ಎಂದು ಅಳಿಸಿ ಹಾಕಿದ ಮೇಲೆ, ಛೇ, ಹಾಗೆ ಮಾಡಬಾರದಿತ್ತು, ಅದೀಗ ಬೇಕಾಗಿತ್ತು, ಏನು ಮಾಡಲಿ ಎಂದು ಚಿಂತಿಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಅಳಿಸಿದುದನ್ನು ಮತ್ತೆ ಹಿಂದಕ್ಕೆ ಪಡೆಯುವಂತೆ ಮಾಡುವ ತಂತ್ರಾಂಶ ಬೇಕು. ಅಂತಹ ಒಂದು ತಂತ್ರಾಂಶ NTFS Undelete. ಇದು ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/5471SB. ಇಲ್ಲೊಂದು ಎಚ್ಚರಿಕೆ ನೀಡಬೇಕಾಗಿದೆ. ವಿಂಡೋಸ್ ತಂತ್ರಾಂಶವು ನೀವು ಒಂದು ಫೈಲನ್ನು ಅಳಿಸಿದಾಗ ಅದನ್ನು ನಿಜವಾಗಿ ಅಳಿಸುವುದಿಲ್ಲ. ಆ ಫೈಲು ಬಳಸಿದ ಜಾಗವನ್ನು ಬೇರೆ ಫೈಲುಗಳಿಗೆ ಲಭ್ಯ ಎಂದು ದಾಖಲಿಸುತ್ತದೆ. ಆ ಮಾಹಿತಿ ಅಲ್ಲೇ ಇರುತ್ತದೆ. ಇನ್ನೊಂದು ಫೈಲು ತಯಾರಿಸಿದಾಗ ಈ ಜಾಗವನ್ನು ಅದು ಬಳಸುವ ಸಾಧ್ಯತೆಗಳಿವೆ. ಆದುದರಿಂದ ಒಂದು ಫೈಲು ಅಳಿಸಿ ಎಷ್ಟು ಸಮಯದೊಳಗೆ ನೀವು ಈ ತಂತ್ರಾಂಶವನ್ನು ಬಳಸುತ್ತೀರಿ ಎಂಬುದನ್ನು ಹೊಂದಿಕೊಂಡು ನಿಮಗೆ ಆ ಫೈಲಿನ ಮಾಹಿತಿ ಪೂರ್ತಿಯಾಗಿ ವಾಪಾಸು ದೊರಕುತ್ತೋ ಇಲ್ಲವೋ ಎಂಬುದು ಹೊಂದಿಕೊಂಡಿದೆ.

e - ಸುದ್ದಿ
ರಜಾ ಹಾಕಿ ಮಜಾ ಮಾಡಿದರೆ
ಮಾನಸಿಕವಾಗಿ ಖಿನ್ನತೆಯಿಂದ ನರಳುತ್ತಿರುವುದಾಗಿ ವೈದ್ಯರಿಂದ ಶಿಫಾರಸುಪತ್ರ ತೆಗೆದುಕೊಂಡು ಅದರ ಬಲದಿಂದ ವೈದ್ಯಕೀಯ ರಜೆ ಪಡೆದು ಸಮುದ್ರಕಿನಾರೆಯಲ್ಲಿ ಮಜಾ ಮಾಡಿದ್ದ ಉದ್ಯೋಗಿಯೊಬ್ಬಳನ್ನು ಕೆಲಸದಿಂದ ತೆಗೆದುಹಾಕಿದ ಘಟನೆ ಕೆನಡಾದಿಂದ ವರದಿಯಾಗಿದೆ. ಅದರಲ್ಲೇನು ಮಹಾ? ನಮ್ಮ ದೇಶದಲ್ಲೂ ಸುಳ್ಳು ನೆವ ನೀಡಿ ರಜಾಪಡೆದು ಸಿಕ್ಕಿಬಿದ್ದು ಕೆಲಸ ಕಳೆದುಕೊಂಡ ಉದಾಹರಣೆಗಳಿಲ್ಲವೇ ಎಂದು ಕೇಳಬಹುದು. ಆದರೆ ಇಲ್ಲಿ ಆಕೆ ಸಿಕ್ಕಿಬಿದ್ದದ್ದು ಫೇಸ್‌ಬುಕ್‌ನಿಂದಾಗಿ. ತಾನು ಸಮುದ್ರಕಿನಾರೆಯಲ್ಲಿ ಸಂತೋಷವಾಗಿ ಕಾಲಕಳೆದುದರ ಭಾವಚಿತ್ರಗಳನ್ನು ಆಕೆ ತನ್ನ ಫೇಸ್‌ಬುಕ್ ಜಾಲತಾಣದಲ್ಲಿ ದಾಖಲಿಸಿದ್ದಳು. ಅದನ್ನು ನೋಡಿದ ವಿಮಾ ಕಂಪೆನಿಯವರು “ನೀನು ಖಿನ್ನಳಾಗಿಲ್ಲ, ಆದುದರಿಂದ ನಿನಗೆ ಸಂಬಳಸಹಿತ ವೈದ್ಯಕೀಯ ರಜೆಯ ಸವಲತ್ತು ನೀಡಲಾಗುವುದಿಲ್ಲ” ಎಂದರು. ಇದೇ ಕಾರಣ ನೀಡಿ ಕಂಪೆನಿಯೂ ಆಕೆಯ ಸಹಾಯಕ್ಕೆ ಬರಲಿಲ್ಲ.

e- ಪದ

ತಂತ್ರಜ್ಞಾನವ್ಯಸನಿ (ಗೀಕ್, geek) - ತಂತ್ರಜ್ಞಾನಕ್ಕೆ ಅತಿಯಾಗಿ ಅಂಟಿಕೊಂಡಿರುವ ವ್ಯಕ್ತಿ. ಇದು ಉತ್ತಮ ಪದವಾಗಿಯೂ ಕೆಟ್ಟ ಪದವಾಗಿಯೂ ಬಳಕೆಯಲ್ಲಿದೆ. ಯಾವಾಗಲೂ ತಂತ್ರಜ್ಞಾನಕ್ಕೆ ಅಂಟಿಕೊಂಡಿರುವುದು ಒಳ್ಳೆಯದೋ ಕೆಟ್ಟದೋ ಎಂಬ ನಿಮ್ಮ ತೀರ್ಮಾನಕ್ಕೆ ಅನುಗುಣವಾಗಿ ಇದು ಒಳ್ಳೆಯ ಪದವೋ ಕೆಟ್ಟ ಪದವೋ ಎಂದು ತೀರ್ಮಾನಕ್ಕೆ ನೀವು ಬರಬಹುದು.


e - ಸಲಹೆ

ನುಡಿಯಿಂದ ಯುನಿಕೋಡ್‌ಗೆ

ಮೈಸೂರಿನ ಅಮಾಸೆ ಮಂಜುನಾಥರ ಪ್ರಶ್ನೆ: ನಾನೊಂದು ಬ್ಲಾಗ್ ಮಾಡಿಕೊಳ್ಳಬೇಕೆಂದುಕೊಂಡಿದ್ದೇನೆ. ಈಗ ನನ್ನ ಸಮಸ್ಯೆಯೇನೆಂದರೆ ನಾನು ನನ್ನ ಸಿಸ್ಟಂನಲ್ಲಿ ನುಡಿಯಲ್ಲಿ ಟೈಪ್ ಮಾಡಿಟ್ಟುಕೊಂಡಿರುವ text ಅನ್ನು ಬರಹಕ್ಕೆ ಕನ್ವರ್ಟ್ ಮಾಡಿ ಬ್ಲಾಗ್‌ಗೆ ಪೋಸ್ಟ್ ಮಾಡುವುದು ಹೇಗೆ? ದಯವಿಟ್ಟು ತಿಳಿಸಿಕೊಡಿ. ಯಾಕೆಂದರೆ ಬ್ಲಾಗ್‌ನಲ್ಲಿಯೇ ಟೈಪ್ ಮಾಡುವುದು ಬಹಳ ತ್ರಾಸದಾಯಕ ಮತ್ತು ತುಂಬ ಸಮಯ ಹಿಡಿಯುತ್ತದೆ. ಪರಿಹಾರ ತಿಳಿಸಿ.
ಉ: ಇದನ್ನು ಹಿಂದೊಮ್ಮೆ ವಿವರಿಸಲಾಗಿತ್ತು. ನುಡಿ ಮತ್ತು ಬರಹ ಒಂದೇ ಫಾಂಟ್ ಸಂಕೇತವನ್ನು ಬಳಸುತ್ತವೆ. ಮೊದಲನೆಯದಾಗಿ ನುಡಿ ಫಾಂಟ್‌ನಲ್ಲಿರುವ ಪಠ್ಯವನ್ನು ಬರಹ ಫಾಂಟ್‌ಗೆ ಬದಲಿಸಿ. ಬ್ಲಾಗ್‌ಗೆ ಸೇರಿಸಲು ಅಥವಾ ಇಮೈಲ್ ಮಾಡಲು ಪಠ್ಯವು ಯುನಿಕೋಡ್‌ನಲ್ಲಿರಬೇಕು. ಇದಕ್ಕಾಗಿ ಬರಹ ತಂತ್ರಾಂಶದಲ್ಲಿ ಒಂದು ಸವಲತ್ತು ಲಭ್ಯವಿದೆ. ಬರಹ ಡೈರೆಕ್ಟನ್ನು ಪ್ರಾರಂಭಿಸಿ. ಪಠ್ಯವು ಮೈಕ್ರೋಸಾಫ್ಟ್ ವರ್ಡ್‌ನಲ್ಲಿದ್ದರೆ ಅದನ್ನು ಆಯ್ಕೆ ಮಾಡಿ ನಕಲು ಮಾಡಿ (Ctrl-C ಒತ್ತಿ). ನಂತರ ಸಿಸ್ಟಂ ಟ್ರೇನಲ್ಲಿರುವ (ಪರದೆಯ ಬಲಭಾಗದ ಕೆಳಮೂಲೆಯಲ್ಲಿರುವ ಗಡಿಯಾರದ ಪಕ್ಕದಲ್ಲಿರುವ) ಬರಹ ಡೈರೆಕ್ಟ್‌ನ ಚಿತ್ರಿಕೆ (ಐಕಾನ್) ಮೇಲೆ ಮೌಸ್‌ನ ಬಲ ಗುಂಡಿ ಕ್ಲಿಕ್ ಮಾಡಿ Convert To -> Kannada -> Unicode ಎಂದು ಆಯ್ಕೆ ಮಾಡಿ. ನಂತರ ನಿಮಗೆ ಬೇಕಾದಲ್ಲಿ ಪಠ್ಯವನ್ನು ಅಂಟಿಸಿ (Ctrl-V ಒತ್ತಿ).

ಕಂಪ್ಯೂತರ್ಲೆ

“ಹಲೋ, ನನ್ನ ಕಂಪ್ಯೂಟರ್ ಕೆಲಸ ಮಾಡುತ್ತಿಲ್ಲ”
“ನೀವು ವಿಂಡೋಸ್‌ನಲ್ಲಿ ಕೆಲಸ ಮಾಡುತ್ತಿದ್ದೀರಾ?”
“ಇಲ್ಲಪ್ಪ. ನಾನು ಕುರ್ಚಿಯಲ್ಲಿ ಕುಳಿತು ಮೇಜಿನ ಮೇಲೆ ಕೆಲಸ ಮಾಡುತ್ತಿದ್ದೇನೆ”