ಸೋಮವಾರ, ನವೆಂಬರ್ 30, 2009

ಗಣಕಿಂಡಿ - ೦೨೮ (ನವಂಬರ್ ೩೦, ೨೦೦೯)

ಅಂತರಜಾಲಾಡಿ
ಕರ್ನಾಟಕ ಸಾಹಿತ್ಯ ಅಕಾಡೆಮಿ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಂತರಜಾಲತಾಣದ ವಿಳಾಸ karnatakasahithyaacademy.org. ಈ ಜಾಲತಾಣ ಸಂಪೂರ್ಣ ಫ್ಲಾಶ್‌ನಲ್ಲಿದೆ. ಯಾವುದೇ ಮಾಹಿತಿ ಪಠ್ಯ ರೂಪದಲ್ಲಿಲ್ಲ. ಅಂದರೆ ಇಲ್ಲಿರುವ ಮಾಹಿತಿಯನ್ನು ಗೂಗ್ಲ್, ಬಿಂಗ್ ಅಥವಾ ಬೇರೆ ಯಾವುದೇ ಶೋಧಕ ಬಳಸಿ ಹುಡುಕಲು ಅಸಾಧ್ಯ. ಉದಾಹರಣೆಗೆ ಈ ಜಾಲತಾಣದಲ್ಲಿ ಕನ್ನಡದ ಹಲವು ಜೀವಂತ ಮತ್ತು ದಿವಂಗತ ಸಾಹಿತಿಗಳ ವಿಳಾಸ ಇದೆ (ಹೌದು, ಎಂದೋ ನಿಧನರಾದ ಸಾಹಿತಿಗಳ ವಿಳಾಸವೂ ಇದೆ!). ನೀವು ಗೂಗ್ಲ್ ಬಳಸಿ ಸಾಹಿತಿಗಳ ಮಾಹಿತಿ ಹುಡುಕಿದಾಗ ಈ ಜಾಲತಾಣದಲ್ಲಿರುವ ಮಾಹಿತಿ ದೊರೆಯುವುದಿಲ್ಲ. ಇದಕ್ಕೆಲ್ಲ ಕಾರಣ ಈ ಜಾಲತಾಣ ಕನ್ನಡ ಯುನಿಕೋಡ್ ಬಳಸದೆ ಫ್ಲಾಶ್ ವಿಧಾನವನ್ನು ಬಳಸಿರುವುದು. ಕನ್ನಡದ ಜಾಲತಾಣ ಯಾವ ರೀತಿ ಇರಬಾರದು ಎಂಬುದಕ್ಕೆ ಈ ಜಾಲತಾಣ ಉತ್ತಮ ಉದಾಹರಣೆ. ಇದೇ ರೀತಿಯ ಇನ್ನೂ ಒಂದು ಉದಾಹರಣೆ ಬೇಕಿದ್ದರೆ ಕನ್ನಡ ಸಾಹಿತ್ಯ ಪರಿಷತ್ತಿನ ಜಾಲತಾಣವನ್ನು (kasapa.org) ನೋಡಬಹುದು. ಇದರಲ್ಲಿ ಈಗಲೂ ಚಂಪಾ ಅವರೇ ಅಧ್ಯಕ್ಷರಾಗಿದ್ದಾರೆ! ಇದು ಇನ್ನೂ ೨೦೦೬ರಲ್ಲೇ ಇದೆ.

ಡೌನ್‌ಲೋಡ್
ಪ್ರಪಂಚಾದ್ಯಂತ ಶಾಲೆಗಳಲ್ಲಿ ೫ ರಿಂದ ೮ ನೇ ತರಗತಿಳಿಗೆ ಕಲಿಸುವುದು ಲೋಗೋ (LOGO) ಎಂಬ ಮಕ್ಕಳಿಗಾಗಿಯೇ ಸಿದ್ಧವಾಗಿರುವ ಗಣಕ ಕ್ರಮವಿಧಿ ತಯಾರಿಯ ತಂತ್ರಾಂಶ/ಭಾಷೆ (programming language for children). ಇದನ್ನು ಉಪಯೋಗಿಸಿ ಮಕ್ಕಳು ಗಣಕದಲ್ಲಿ ಕ್ರಮವಿಧಿ ತಯಾರಿಯ ಮುಖ್ಯ ಅಂಶಗಳನ್ನು ಕಲಿಯುತ್ತಾರೆ. ೬೦ರ ದಶಕದಿಂದಲೇ ಪ್ರಪಂಚಾದ್ಯಂತ ಉಪಯೋಗಲ್ಲಿರುವ ಲೋಗೋ ಮೂಲ ಇಂಗ್ಲೀಷ್ ಭಾಷೆಯಲ್ಲಿದೆ. ಜರ್ಮನ್, ಫ್ರೆಂಚ್, ಇಟಾಲಿಯನ್, ಗ್ರೀಕ್, ಡಚ್, ಜಪಾನ್, ಇತ್ಯಾದಿ ಭಾಷೆಗಳಲ್ಲಿ ಲೋಗೋ ಲಭ್ಯವಿದೆ. ಭಾರತದ ಶಾಲೆಗಳಲ್ಲೂ ಇಂಗ್ಲಿಷ್ ಭಾಷೆಯ ಲೋಗೋವನ್ನು ಕಲಿಸುತ್ತಿದ್ದಾರೆ. ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕಲಿಸಲು ಕನ್ನಡ ಭಾಷೆಯಲ್ಲಿ ಲೋಗೋ ಲಭ್ಯವಿದೆ. ಲೋಗೋದಲ್ಲಿ ಕ್ರಮವಿಧಿ ರಚಿಸುವ ಮೂಲಕ ಮಕ್ಕಳು ಮತ್ತು ಗಣಕ ತಂತ್ರಾಂಶ ತಯಾರಿಯ ಕ್ಷೇತ್ರಕ್ಕೆ ಕಾಲಿಡುತ್ತಿರುವ ದೊಡ್ಡವರು ಗಣಿತ, ತರ್ಕಗಳಲ್ಲಿ ಪರಿಣತಿಯನ್ನು ಹೊಂದಬಹುದು. ಗಣಕ ಕ್ಷೇತ್ರದಲ್ಲಿ ಮುಂದೆ ಬರಲು ಇವೆರಡು ಬಹುಮೂಲ್ಯ ಪೂರಕಗಳು. ಕನ್ನಡಲೋಗೊ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ -vishvakannada.com/kannadalogo

e - ಸುದ್ದಿ
ಪೋಕರಿತನ ಮಾಡಿದ್ದಕ್ಕೆ ದಂಡ ಅಲ್ಲ ಕೆಲಸ
ನಮ್ಮಲ್ಲೊಂದು ಗಾದೆ ಇದೆ “ಕಳ್ಳನ ಕೈಯಲ್ಲಿ ಬೀಗದ ಕೈ ಕೊಡಬೇಕು” ಎಂದು. ಕಳ್ಳರನ್ನು ಹಿಡಿಯಲು ಸುಧಾರಿತ ಕಳ್ಳರನ್ನೇ ನೇಮಿಸುವುದನ್ನು ಚಲನಚಿತ್ರಗಳಲ್ಲಿ ನೋಡಿರುತ್ತೀರಿ. ಸುಮಾರು ಇದೇ ರೀತಿಯ ಸುದ್ದಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ಬಂದಿದೆ. ಐಫೋನ್‌ಗೆ ಒಂದು ರೀತಿಯ ವೈರಸ್ (ನಿಜವಾಗಿ ಅದು ವೈರಸ್ ಅಲ್ಲ, ಅದನ್ನು ಗಣಕ ಪರಿಭಾಷೆಯಲ್ಲಿ ವರ್ಮ್ (ಹುಳ?) ಎನ್ನುತ್ತಾರೆ) ತಯಾರಿಸಿದವನನ್ನು ಒಂದು ಕಂಪೆನಿ ಕೆಲಸಕ್ಕೆ ತೆಗೆದುಕೊಂಡಿದೆ. ಈ ವರ್ಮ್‌ಗಳು ಒಂದು ಗಣಕ ಅಥವಾ ಫೋನಿನಿಂದ ಇನ್ನೊಂದಕ್ಕೆ ಎಲ್ಲ ನಮೂನೆಯ ಸಂಪರ್ಕಜಾಲಗಳ ಮೂಲಕ ಹರಿದಾಡಿ ಕಿಡಿಗೇಡಿತನ ನಡೆಸುತ್ತವೆ. ಅದು ವೈರಸ್ ಆಗಿದ್ದರೂ ಒಂದು ಅದ್ಭುತ ತಂತ್ರಾಂಶವೇ ತಾನೆ? ಅದನ್ನು ತಯಾರಿಸಲು ಸಾಮಾನ್ಯ ಪ್ರೋಗ್ರಾಮರುಗಳಿಗಿಂತ ಹೆಚ್ಚಿನ ಕೌಶಲ್ಯ ಬೇಕಾಗುತ್ತದೆ. ಇಂತಹ ಕೌಶಲ್ಯ ಇರುವವರನ್ನು ಕೆಲಸಕ್ಕೆ ತೆಗೆದುಕೊಂಡರೆ ಕಂಪೆನಿಗೆ ಒಳ್ಳೆಯದೇ ತಾನೆ? ಹೇಗಿದೆ ತರ್ಕ? ಇಂತಹವರನ್ನು ವೈರಸ್ ನಿರೋಧಕ ತಂತ್ರಾಂಶ ತಯಾರಿಗೆ ಬಳಸಿಕೊಂಡರೆ ಇನ್ನಷ್ಟು ಒಳ್ಳೆಯದು.

e- ಪದ

ಟಾಸ್ಕ್‌ಬಾರ್

ಟಾಸ್ಕ್‌ಬಾರ್ (taskbar) -ಇದನ್ನು ವಿಂಡೋಸ್ ಟಾಸ್ಕ್‌ಬಾರ್ ಎಂದೂ ಕರೆಯುತ್ತಾರೆ. ಗಣಕದ ಪರದೆಯ ಕೆಳಭಾಗದಲ್ಲಿ ಗೋಚರಿಸುವ ಒಂದು ಪಟ್ಟಿ. ಸದ್ಯ ಚಾಲನೆಯಲ್ಲಿರುವ ತಂತ್ರಾಂಶಗಳ ಚಿತ್ರಿಕೆ (ಐಕಾನ್) ಇಲ್ಲಿ ಕಂಡುಬರುತ್ತದೆ. ಇದನ್ನು ಬಳಸಿ ಬೇಕಾದ ತಂತ್ರಾಂಶವನ್ನು ಮುಂದಕ್ಕೆ ತಂದು ಕೆಲಸ ಮಾಡಬಹುದು. ಈ ಟಾಸ್ಕ್‌ಬಾರ್ ಅನ್ನು ವಿಂಡೋಸ್ ೭ ರಲ್ಲಿಇನ್ನಷ್ಟು ಸುಧಾರಿಸಿದ್ದಾರೆ.

e - ಸಲಹೆ

ಟಾಸ್ಕ್‌ಬಾರ್ ನಾಪತ್ತೆಯಾದರೆ

ಕೆಲವೊಮ್ಮೆ ವಿಂಡೋಸ್ ಟಾಸ್ಕ್‌ಬಾರ್ ನಾಪತ್ತೆಯಾಗಿರುತ್ತದೆ. ಇದಕ್ಕೆ ಕಾರಣ ಟಾಸ್ಕ್‌ಬಾರ್‌ನಲ್ಲಿಯ ಆಟೋಹೈಡ್ (Auto-hide) ಎಂಬ ಆಯ್ಕೆ.  ಇದನ್ನು ಆಯ್ಕೆ ಮಾಡಿಕೊಂಡರೆ ಮೌಸ್ ಈ ಟಾಸ್ಕ್‌ಬಾರ್‌ನಿಂದ ದೂರ ಹೋದೊಡನೆ ಅದು ಅದೃಶ್ಯವಾಗುತ್ತದೆ. ಆಗ ಮೌಸ್ ಅನ್ನು ಪರದೆಯ ಕೆಳಭಾಗಕ್ಕೆ ತಂದರೆ ಟಾಸ್ಕ್‌ಬಾರ್ ಮತ್ತೆ ಗೋಚರಿಸುತ್ತದೆ. ಟಾಸ್ಕ್‌ಬಾರ್ ಅದೃಶ್ಯವಾಗಬಾರದು ಎಂದಿದ್ದಲ್ಲಿ ಅದರ ಮೇಲೆ ಮೌಸ್‌ನ ಬಲಗುಂಡಿಯನ್ನು ಕ್ಲಿಕ್ ಮಾಡಿ Properties ಅನ್ನು ಆಯ್ಕೆ ಮಾಡಿ ನಂತರ Auto-hide the taskbar ಎಂಬ ಆಯ್ಕೆಯನ್ನು ರದ್ದು ಮಾಡಿ.

ಕಂಪ್ಯೂತರ್ಲೆ

ಗೂಗ್ಲ್‌ನವರು ಇತ್ತೀಚೆಗೆ ನಿಘಂಟು ಸವಲತ್ತು ನೀಡಿದ್ದಾರೆ (google.com/dictionary). ಇದರಲ್ಲಿ ಜಗತ್ತಿನ ಹಲವು ಭಾಷೆಗಳ ನಡುವೆ ಪದ ಅಥವಾ ಪದಗುಚ್ಛಗಳ ಅರ್ಥ ವಿವರ ತಿಳಿಯುವ ಸವಲತ್ತು ಇದೆ. ಇದರಲ್ಲಿ ಇಂಗ್ಲಿಷ್ ಮತ್ತು ಕನ್ನಡ ಮಧ್ಯೆ ಕೆಲವು ಪದಗಳ ಅರ್ಥ ಹುಡುಕಿದಾಗ ದೊರಕಿದ್ದು:
second-storey man = ಚಾವಣಿ ಚೋರ, ಮಾಳಿಗೆ ಕಳ್ಳ
wise woman = ಮಾಟಗಾತಿ, ಮಂತ್ರವಾದಿನಿ
old woman = ರಗಳೆ ಮನುಷ್ಯ, ಪುಕ್ಕಲ

ಸೋಮವಾರ, ನವೆಂಬರ್ 23, 2009

ಗಣಕಿಂಡಿ - ೦೨೭ (ನವಂಬರ್ ೨೩, ೨೦೦೯)

ಅಂತರಜಾಲಾಡಿ

ಕನ್ನಡ ರೇಡಿಯೋ ಕೇಳಿ

ಅಂತರಜಾಲದಲ್ಲಿ ಸಾವಿರಾರು ರೇಡಿಯೋ ಕೇಂದ್ರಗಳಿವೆ. ಆಕಾಶವಾಣಿ ಕೂಡ ಇದೆ. ಆದರೆ ಈಗ ಪ್ರಸಾರ ಮಾಡುತ್ತಿಲ್ಲ. ಅದೇನೋ ಸರಿ. ಕನ್ನಡ ರೇಡಿಯೋ ಇಲ್ಲವೇ ಎಂದು ಕೇಳುತ್ತೀರಾ? ಹೌದು. ಇದೆ. ಅದನ್ನು ಆಲಿಸಲು ನೀವು ಭೇಟಿ ಮಾಡಬೇಕಾದ ಜಾಲತಾಣದ ವಿಳಾಸ http://bit.ly/4BxX1v. ರೇಡಿಯೋ ಕೇಂದ್ರ ಎಂದರೆ ನೇರಪ್ರಸಾರ. ಅರ್ಥಾತ್ ನೀವು ಭೇಟಿ ನೀಡಿದಾಗ ಯಾವ ಸಂಗೀತ ಪ್ರಸಾರ ಆಗುತ್ತಿದೆಯೋ ಅದನ್ನು ಆಲಿಸಬೇಕು. ನಿಮಗೆ ಇಷ್ಟವಾದ ಹಾಡನ್ನು ಬೇಕಾದಾಗ ಆಲಿಸಬೇಕಾದರೆ www.kannadaaudio.com ಜಾಲತಾಣಕ್ಕೆ ಭೇಟಿ ನೀಡಿ. ಆದರೆ ನಿಮಗೆ ಇಷ್ಟವಾದ ಹಾಡು ಅಲ್ಲಿರಬೇಕು, ಅಷ್ಟೆ. www.raaga.com ಜಾಲತಾಣದಲ್ಲೂ ಕನ್ನಡ ಹಾಡುಗಳಿವೆ.

ಡೌನ್‌ಲೋಡ್

ಉಚಿತ ಕನ್ನಡ ತಂತ್ರಾಂಶಗಳು

ಕೇಂದ್ರ ಸರಕಾರದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಇಲಾಖೆಯವರು ಎಲ್ಲ ಭಾರತೀಯ ಭಾಷೆಗಳಿಗೆ ಅವಶ್ಯ ತಂತ್ರಜ್ಞಾನಗಳ ತಯಾರಿಕೆಗಾಗಿ ಒಂದು ಇಲಾಖೆಯನ್ನು ನಿರ್ಮಿಸಿದ್ದಾರೆ. ಅವರು ತಯಾರಿಸಿದ ಮತ್ತು ಇತರೆ ಹಲವಾರು ಸಂಘ ಸಂಸ್ಥೆಗಳು ತಯಾರಿಸಿದ ಹಲವಾರು ಉಪಯುಕ್ತ ತಂತ್ರಾಂಶಗಳು, ಫಾಂಟ್‌ಗಳು, ಪರಿವರ್ತಕ ತಂತ್ರಾಂಶಗಳು, ಕನ್ನಡ ಕಲಿಯಲು ಉಪಯುಕ್ತ ತಂತ್ರಾಂಶ ಮತ್ತು ಆಟಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ http://bit.ly/7NEZrF

e - ಸುದ್ದಿ

ಜಾಲಿಗನಾಗಿರುವುದು ಒಳಿತು

ಒಬ್ಬರಿಗೊಬ್ಬರು ಸದಾ ಸಂಪರ್ಕದಲ್ಲಿರಲು ಅನುವು ಮಾಡಿಕೊಡುವ ಜಾಲತಾಣಗಳಿಗೆ ಸೋಶಿಯಲ್ ನೆಟ್‌ವರ್ಕಿಂಗ್ ಜಾಲತಾಣಗಳೆನ್ನುತ್ತಾರೆ. ಆರ್ಕುಟ್ ಮತ್ತು ಫೇಸ್‌ಬುಕ್ ಇದಕ್ಕೆ ಉತ್ತಮ ಉದಾಹರಣೆಗಳು. ಈ ಜಾಲತಾಣಗಳಲ್ಲಿ ತಮ್ಮ ಸದ್ಯದ ಜಾಗ, ತಾವು ಏನು ಮಾಡುತ್ತಿದ್ದೇವೆ, ಇತ್ಯಾದಿಗಳನ್ನು ಸೇರಿಸುತ್ತಲೇ ಇರಬಹುದು. ಕೆಲವರು ತಾವು ಎಲ್ಲಿಗೆ ಹೊರಟಿದ್ದೇವೆ, ಎಲ್ಲಿ ಊಟ ಮಾಡುತ್ತಿದ್ದೇವೆ, ಯಾವ ಚಲನಚಿತ್ರ ನೋಡುತ್ತಿದ್ದೇವೆ, ಹೀಗೆ ತಮ್ಮ ಬಗ್ಗೆ ಪ್ರತಿಯೊಂದು ವಿವರ ದಾಖಲಿಸುತ್ತಾರೆ. ಹಿಗೆ ಜಗಜ್ಜಾಹೀರು ಮಾಡುವುದರಿಂದ ಕಳ್ಳರಿಗೂ ಉಪಯೋಗವಾಗುವ ಸಾಧ್ಯತೆಯಿದೆ ಎಂದು ಪೋಲೀಸರು ಎಚ್ಚರಿಸುತ್ತಾರೆ. ಆದರೆ ಒಬ್ಬಾತ ಹೀಗೆ ತನ್ನ ಪ್ರತಿಯೊಂದು ಚಟುವಟಿಕೆಯನ್ನು ದಾಖಲಿಸಿದುದರಿಂದ ಕಾರಾಗೃಹವಾಸವನ್ನು ತಪ್ಪಿಸಿಕೊಂಡಿದ್ದಾನೆ. ತಾನು ಇರುವ ಸ್ಥಳದಿಂದ ಸುಮಾರು ಇಪ್ಪತ್ತು ಕಿ.ಮೀ. ದೂರದ ಒಂದು ಮನೆಯಲ್ಲಿ ನಡೆದ ದರೋಡೆಯ ಅಪರಾಧಿ ಎಂದು ಆತನನ್ನು ಪೋಲೀಸರು ಬಂಧಿಸಿದ್ದರು. ಆದರೆ ದರೋಡೆ ನಡೆದ ಸಮಯದಿಂದ ಕೇವಲ ಒಂದು ನಿಮಿಷ ಮೊದಲು ಆತ ತನ್ನ ಫೇಸ್‌ಬುಕ್ ಪುಟದಲ್ಲಿ ಸಂದೇಶ ಸೇರಿಸಿದ್ದ. ಅದರ ಸಹಾಯದಿಂದ ತಾನು ದರೋಡೆ ನಡೆದ ಸ್ಥಳದಲ್ಲಿ ಆ ಸಮಯದಲ್ಲಿ ತಾನು ಇರಲು ಸಾಧ್ಯವಿಲ್ಲ ಎಂದು ಆತ ಸಾಧಿಸಿದ. ಪೋಲೀಸರು ಆತನನ್ನು ಬಿಡುಗಡೆ ಮಾಡಿದರು.

e- ಪದ

ಅನ್‌ಫ್ರೆಂಡ್ (unfriend) -ಸೋಶಿಯಲ್ ನೆಟ್‌ವರ್ಕಿಂಗ್ ಜಾಲತಾಣಗಳಲ್ಲಿ ಒಬ್ಬ ವ್ಯಕ್ತಿ ತನ್ನ ಸ್ನೇಹಿತ ಆಗಿದ್ದವನನ್ನು ಸ್ನೇಹಿತ ಅಲ್ಲ ಎಂದು ದಾಖಲಿಸುವುದು. ಹೀಗೆ ಮಾಡುವುದರಿಂದ ಆತ ನಿಮ್ಮ ಸಂಪರ್ಕಪಟ್ಟಿಯಿಂದ ಹೊರಗಾಗುತ್ತಾನೆ. ಆ ನಂತರ ಆತ ನಿಮ್ಮ ಸಂದೇಶ, ಚಿತ್ರ, ಇತ್ಯಾದಿಗಳನ್ನು ನೋಡುವಂತಿಲ್ಲ. ಅಂದರೆ ಆತ ನಿಮ್ಮ ಜಾಲದಿಂದ ಹೊರಗಾಗುತ್ತಾನೆ. ಈ ಪದವನನ್ನು ಬಳಸಿದ್ದು ಫೇಸ್‌ಬುಕ್. ಈ ಪದವನ್ನು ಆಕ್ಸ್‌ಫರ್ಡ್ ಅಮೆರಿಕನ್ ನಿಘಂಟು ೨೦೦೯ನೆಯ ಇಸವಿಯ ಪದ ಎಂದು ಆಯ್ಕೆ ಮಾಡಿದೆ.

e - ಸಲಹೆ

ಬಾಗಲಕೋಟೆಯ ದೀಪಕ್ ಅವರ ಪ್ರಶ್ನೆ: ಬಯೋಸ್‌ಗೆ ಪಾಸ್‌ವರ್ಡ್ ನಿಗದಿ ಮಾಡುವುದು ಹೇಗೆ?
ಉ: ಸಾಮಾನ್ಯವಾಗಿ ಗಣಕ ಪ್ರಾರಂಭ ಆಗುವಾಗ, ಕಾರ್ಯಾಚರಣೆಯ ವ್ಯವಸ್ಥೆ (ಹೆಚ್ಚಿನವರಲ್ಲಿ ಇದು ವಿಂಡೋಸ್ ಆಗಿರುತ್ತದೆ) ಪ್ರಾರಂಭ ಆಗುವ ಮೊದಲು ಬಯೋಸ್ ಸಂದೇಶಗಳು ಬರುತ್ತವೆ. ಆ ಸಮಯದಲ್ಲಿ F10 ಕೀಲಿಯನ್ನು ಒತ್ತುವ ಮೂಲಕ ಬಯೋಸ್‌ನ ಆಯ್ಕೆಗಳನ್ನು ನಿಗದಿ ಮಾಡಬಹುದು. ಅದರಲ್ಲಿ ಕಂಡುಬರುವ ಬೂಟ್ ಮೆನುವಿನಲ್ಲಿ ಅಧಿಕಾರಿ (admin ಅಥವಾ supervisor) ಮತ್ತು ಬಳಕೆದಾರ (user) ಎಂದು ಎರಡು ರೀತಿಯ ಪಾಸ್‌ವರ್ಡ್‌ಗಳನ್ನು ನಿಗದಿ ಮಾಡಬಹುದು.

ಕಂಪ್ಯೂತರ್ಲೆ

ಗೀಕಾಸನ

ಯಾವಾಗಲೂ ತಂತ್ರಜ್ಞಾನಕ್ಕೆ ಅದರಲ್ಲು ಗಣಕಕ್ಕೆ ಅಂಟಿಕೊಂಡಿರುವವರಿಗೆ ಮತ್ತು ಅದರಲ್ಲಿ ಪರಿಣತರಾಗಿರುವವರಿಗೆ ಗೀಕ್ ಎನ್ನುತ್ತಾರೆ. ಇವರು ಒಂದು ಕಡೆ ಒಂದೇ ರಿತಿಯಲ್ಲಿ ಕುಳಿತುಕೊಂಡು ಗಣಕ ಅಥವಾ ಲ್ಯಾಪ್‌ಟಾಪ್ ಬಳಸುತ್ತಿರಬೇಕಾಗಿಲ್ಲ. ಮಲಗಿಕೊಂಡು, ತಲೆಕೆಳಗಾಗಿ ನಿಂತುಕೊಂಡು ಅಂದರೆ ಶೀರ್ಶಾಸನ ಮಾಡಿಕೊಂಡು, ಅರ್ಧ ಮಲಗಿ ಕಾಲುಗಳ ಮಧ್ಯೆ ಲ್ಯಾಪ್‌ಟಾಪ್ ಇಟ್ಟುಕೊಂಡು, ಹೀಗೆ ಹಲವು ರೀತಿಯಲ್ಲಿ ಆಸನ ಮಾಡುತ್ತ ಲ್ಯಾಪ್‌ಟಾಪ್ ಬಳಸಬಹುದು. ಈ ರೀತಿಯ ಆಸನಗಳಿಗೆ ಗೀಕಾಸನ ಎನ್ನುತ್ತಾರೆ. ಗೀಕಾಸನಗಳನ್ನು ಮುದ್ರಿಸಿದ ಟೀ-ಶರ್ಟ್ ಬೇಕಿದ್ದಲ್ಲಿ http://bit.ly/64y3JL ಜಾಲತಾಣಕ್ಕೆ ಭೇಟಿ ನೀಡಿ.

ಸೋಮವಾರ, ನವೆಂಬರ್ 16, 2009

ಗಣಕಿಂಡಿ - ೦೨೬ (ನವಂಬರ್ ೧೬, ೨೦೦೯)

ಅಂತರಜಾಲಾಡಿ
ಕನ್ನಡದ ಬ್ಲಾಗಿಗಳೆಲ್ಲಾ ಒಂದಾಗಿ ಬನ್ನಿ
ಕನ್ನಡದ ಬ್ಲಾಗೋತ್ತಮರ ಸಂಖ್ಯೆ ೨೦೦೦ವನ್ನು ತಲುಪುತ್ತಿದೆ. ಈ ಮಾಹಿತಿ ನಿಮಗೆ ಆಶ್ಚರ್ಯ ತರಬಹುದು. ಕನ್ನಡದಲ್ಲಿ ವಿಶ್ವಮಟ್ಟದ ಬ್ಲಾಗ್ ಬರೆಯುವವರಿದ್ದಾರೆ. ಪತ್ರಿಕೆ, ಮ್ಯಾಗಝಿನ್‌ಗಳಲ್ಲಿ ಪ್ರಕಟಗೊಳ್ಳದ ಹಲವು ವಿಷಯಗಳು ಬ್ಲಾಗ್‌ಗಳಲ್ಲಿ ಪ್ರಕಟಗೊಂಡಿವೆ. ಈ ಬ್ಲಾಗಿಗಳ ಲೋಕ ಬೇರೆಯೇ ಇದೆ. ಈ ಬ್ಲಾಗಿಗಳು ಎಲ್ಲ ಒಂದೆಡೆ ಕಲೆತು ವಿಚಾರವಿನಿಮಯ ಮಾಡಲು ಒಕ್ಕೂಟವನ್ನು ಮಾಡಿಕೊಂಡಿದ್ದಾರೆ. ಆರ್ಕುಟ್ ಮಾದರಿಯಲ್ಲಿ ನಮಗೆ ಬೇಕಾದ ಸಮೂಹವನ್ನು ನಾವೆ ಸೃಷ್ಟಿಸಿ ನಡೆಸಲು ಅನುವು ಮಾಡಿಕೊಡುವ ning.com ಜಾಲತಾಣದಲ್ಲಿ ಇದನ್ನು ಸೃಷ್ಟಿ ಮಾಡಲಾಗಿದೆ. ಅದರ ವಿಳಾಸ kannadablogs.ning.com. ಸದ್ಯ ಇದರ ಸದಸ್ಯರ ಸಂಖ್ಯೆ ೨೦೦೦ಕ್ಕೆ ಹತ್ತಿರ ಇದೆ. ಇದೇ ರೀತಿಯ ಮತ್ತೊಂದು ಒಕ್ಕೂಟದ ವಿಳಾಸ kannadabloggers.ning.com. ಈ ರೀತಿಯ ಗುಂಪೊಂದು ಆರ್ಕುಟ್‌ನಲ್ಲು ಇದೆ. ಅದು ಹೆಚ್ಚು ಜನಪ್ರಿಯವಾಗಿಲ್ಲ.

ಡೌನ್‌ಲೋಡ್
ಕನ್ನಡ ನಿಘಂಟು
ಕನ್ನಡದಲ್ಲಿ ಲೇಖನ ಬರೆಯುವಾಗ ನಿಘಂಟು ಪಕ್ಕ ಇದ್ದರೆ ಒಳ್ಳೆಯದಲ್ಲವೇ? ಅಂತರಜಾಲದಲ್ಲಿ ಒಂದು ಕನ್ನಡ ನಿಘಂಟು ಇದೆ. ಇದರ ವಿಳಾಸ www.kannadakasturi.com. ಇದನ್ನು ಅಂತರಜಾಲ ಸಂಪರ್ಕ ಇದ್ದಾಗ ಮಾತ್ರ ಬಳಸಬಹುದು. ನಿಮ್ಮ ಗಣಕದಲ್ಲೇ ಒಂದು ನಿಘಂಟು ಇದ್ದರೆ ಒಳ್ಳೆಯದಲ್ಲವೇ? ಹೌದು. ಅದೂ ಇದೇ ಜಾಲತಾಣದಲ್ಲಿ ಲಭ್ಯವಿದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಲು http://bit.ly/3vJH1L ಜಾಲತಾಣಕ್ಕೆ ಭೇಟಿ ನೀಡಿ. ಜಾಲತಾಣದಲ್ಲಿ ಒಟ್ಟು ಸುಮಾರು ೧೩೫೦೦೦ ಪದಗಳಿವೆ. ಆದರೆ ಡೌನ್‌ಲೋಡ್ ಮಾಡಬಲ್ಲ ನಿಘಂಟುವಿನಲ್ಲಿ ಸುಮಾರು ೫೦೦೦೦ ಪದಗಳು ಮಾತ್ರವಿವೆ. ಆದರೆ ಇವೆರಡೂ ಇನ್ನೂ ಯುನಿಕೋಡ್‌ನಲ್ಲಿ ಲಭ್ಯವಿಲ್ಲ.

e - ಸುದ್ದಿ
ಕೊಲೆಗಾರನ ಹೆಸರ ಹೇಳುವಂತಿಲ್ಲ
ಜರ್ಮನಿಯಲ್ಲಿ ೧೯೯೦ರಲ್ಲಿ ಒಬ್ಬ ನಟನ ಕೊಲೆ ಮಾಡಿ ೧೯ ವರ್ಷ ಜೈಲುವಾಸ ಅನುಭವಿಸಿ ಹೊರಬಂದ ವ್ಯಕ್ತಿ ಈಗ ಸುದ್ದಿಯಲ್ಲಿದ್ದಾನೆ. ಕೊಲೆ ಮಾಡಲ್ಪಟ್ಟ ನಟನ ಬಗ್ಗೆ ಮುಕ್ತ ವಿಶ್ವಕೋಶ ವಿಕಿಪೀಡಿಯಾದಲ್ಲಿ ಇರುವ ಮಾಹಿತಿಯಲ್ಲಿ ಕೊನೆಗೆ ಕೊಲೆಗಾರನ ಹೆಸರೂ ಇದೆ.  ಈತನಿಗೆ ಅದನ್ನು ಅಲ್ಲಿಂದ ತೆಗೆಸಬೇಕಾಗಿದೆ. ಇದಕ್ಕಾಗಿ ಆತ ಮೊರೆಹೋಗಿದ್ದು ಜರ್ಮನಿಯ ಕಾನೂನನ್ನು. ಶಿಕ್ಷೆ ಮುಗಿದು ಹೊರಬಂದ ಅಪರಾಧಿಗಳಿಗೆ ನಂತರ ಅವರು ಎಲ್ಲರಂತೆ ಜೀವನ ಮಾಡಲು ಅವಕಾಶ ಮಾಡಿಕೊಡಲು ಅವರು ಅಪರಾಧ ಮಾಡಿ ಶಿಕ್ಷೆ ಅನುಭವಿಸಿದ್ದರ ಬಗ್ಗೆ ಪ್ರಚಾರ ಮಾಡುವಂತಿಲ್ಲ ಎಂದು ಜರ್ಮನಿಯಲ್ಲಿ ಕಾನೂನಿದೆ. ಈ ಕಾನೂನಿಂತೆ ಅಪರಾಧಿಯ ಹೆಸರನ್ನು ವಿಕಿಪೀಡಿಯಾದಿಂದ ತೆಗೆದು ಹಾಕಬೇಕು ಮತ್ತು ತನಗೆ ಪರಿಹಾರ ನೀಡಬೇಕು ಎಂದು ಆತ ಕೋರ್ಟಿನಲ್ಲಿ ವ್ಯಾಜ್ಯ ಹೂಡಿದ್ದಾನೆ. ಇನ್ನೂ ಅಪರಾಧಿ ಎಂದು ತೀರ್ಮಾನ ಆಗುವ ಮೊದಲೇ, ಕೆಲವೊಮ್ಮೆ ಸಂಪೂರ್ಣ ನಿರಪರಾಧಿ, ವ್ಯಕ್ತಿಗಳ ಮಾನಹರಣ ಮಾಡಿ ಹೀನಾಯವಾಗಿ ಪ್ರಚಾರ ಮಾಡುವ ನಮ್ಮ ಮಾಧ್ಯಮಗಳು ಜರ್ಮನಿಯಲ್ಲಿದ್ದರೆ ಏನಾಗುತ್ತಿತ್ತೋ? ಈಗಿನ ಸುದ್ದಿಯಂತೆ ಇಂಗ್ಲಿಶ್ ಆವೃತ್ತಿಯಲ್ಲಿ ಕೊಲೆಗಾರನ ಹೆಸರಿದೆ. ಆದರೆ ಜರ್ಮನ್ ಆವೃತ್ತಿಯಿಂದ ಆತನ ಹೆರನ್ನು ತೆಗೆದುಹಾಕಲಾಗಿದೆ.

e- ಪದ

ಸಿಸ್ಟಮ್ ಟ್ರೇ (system tray) - ಗಣಕದ ಪರದೆಯ ಬಲಬದಿಯ ಮೂಲೆಯಲ್ಲಿ ಗಡಿಯಾರ, ಪ್ರಿಂಟರ್, ಮೋಡೆಮ್, ವೈರಸ್‌ನಿರೋಧಕ, ಇತ್ಯಾದಿ ಮೆಮೊರಿಯಲ್ಲಿ ಸಕ್ರಿಯವಾಗಿರುವ ತಂತ್ರಾಂಶಗಳ ಚಿತ್ರಿಕೆಗಳನ್ನು (ಐಕಾನ್) ಇದು ತೋರಿಸುತ್ತಿರುತ್ತದೆ. ಈ ಚಿತ್ರಿಕೆಗಳ ಮೇಲೆ ಎರಡು ಸಲ ಕ್ಲಿಕ್ ಮಾಡುವ ಮೂಲಕ ಈ ತಂತ್ರಾಂಶಗಳ ವಿಂಡೋವನ್ನು ತೆರೆದು ಆಯ್ಕೆಗಳನ್ನು ನಿಗದಿ ಮಾಡಬಹುದು. ಇದನ್ನು ವಿಂಡೋಸ್ ೯೫ರಲ್ಲಿ ಪ್ರಥಮ ಬಾರಿಗೆ ನೀಡಲಾಗಿತ್ತು. ವಿಂಡೋಸ್ ೭ ರಲ್ಲಿ ಇದು ಒಂದು ಚಿಕ್ಕ ತ್ರಿಕೋಣಾಕಾರದಲ್ಲಿದ್ದು ಅದರ ಮೇಲೆ ಕ್ಲಿಕ್ ಮಾಡಿದಾಗ ಇನ್ನೊಂದು ಚಿಕ್ಕ ಕಿಟಿಕಿ ತೆರೆದುಕೊಂಡು ಎಲ್ಲ ಚಿತ್ರಿಕೆಗಳು ಕಂಡುಬರುತ್ತವೆ.

e - ಸಲಹೆ

ಕಿರಿಕಿರಿ ಪದಪರೀಕ್ಷಕ

ಖ್ಯಾತ ವಿಜ್ಞಾನ ಲೇಖಕ ನಾಗೇಶ ಹೆಗಡೆಯವರ ಪ್ರಶ್ನೆ: ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ನುಡಿ ಅಥವಾ ಬರಹವನ್ನು ಬಳಸಿ ಬೆರಳಚ್ಚು ಮಾಡುವಾಗ ಅದು ತನ್ನ ಸ್ವಯಂಚಾಲಿತ ಪದಪರೀಕ್ಷಕವನ್ನು ಚಾಲೂಗೊಳಿಸಿ ಕನ್ನಡದ ಅಕ್ಷರಗಳನ್ನು ಏನೇನೋ ಆಗಿ ಬದಲಿಸಿ ಉಪದ್ರವ ನೀಡುತ್ತಿರುತ್ತದೆ. ಇದನ್ನು ನಿಲ್ಲಿಸುವುದು ಹೇಗೆ?
ಉ: ಕನ್ನಡದಲ್ಲಿ ಯುನಿಕೋಡ್ ವಿಧಾನವನ್ನು ಬಳಸದೆ ಹಳೆಯ ವಿಧಾನದಲ್ಲಿ ಬೆರಳಚ್ಚು ಮಾಡುವ ಎಲ್ಲರಿಗೆ ಈ ಸಮಸ್ಯೆ ಇದೆ. ಮೂಲಭೂತವಾಗಿ ಇಲ್ಲಿ ಏನು ಆಗುತ್ತಿದೆಯೆಂದರೆ ವರ್ಡ್ ತಂತ್ರಾಂಶವು ನಿಮಗೆ ಉಪಕಾರ ಮಾಡಲು ಹೋಗಿ ಅದು ನಿಮಗೆ ಉಪದ್ರ ಆಗುತ್ತಿದೆ. ನುಡಿ, ಬರಹ, ಇತ್ಯಾದಿ ತಂತ್ರಾಂಶಗಳು ಬಳಸುವ ಫಾಂಟ್ ಇಂಗ್ಲಿಶ್‌ನ ಅಕ್ಷರಭಾಗಗಳ ಜಾಗದಲ್ಲಿ ಕನ್ನಡದ ಅಕ್ಷರ ಭಾಗಗಳನ್ನು ಕೂರಿಸಿದಂತವುಗಳು. ವರ್ಡ್ ತನ್ನ ಸ್ವಯಂಚಾಲಿತ ಪದಪರೀಕ್ಷಕವನ್ನು ಬಳಸಿದಾಗ ಅದಕ್ಕೆ ಈ ಪದಗಳು ಅರ್ಥವಾಗದೆ, ಏನೇನೋ ಆಗಿ ಬದಲಿಸಿ ಅದು ಕನ್ನಡದ ಫಾಂಟ್‌ನಲ್ಲಿ ನೋಡಿದಾಗ ಅರ್ಥವಿಲ್ಲದ ಪದಗಳಾಗಿರುತ್ತವೆ. ಇದಕ್ಕೆ ವರ್ಡ್‌ನಲ್ಲಿರುವ auto format ಸವಲತ್ತನ್ನು ನಿಷ್ಕ್ರಿಯಗೊಳಿಸುವುದೊಂದೇ ಪರಿಹಾರ. ಇದಕ್ಕಾಗಿ ಪದಪರೀಕ್ಷಕವು ತಾನೇ ಬದಲಸಿದ ಪದದ ಪಕ್ಕ ಮೂಡಿಬಂದಿರುವ ಚಿತ್ರಿಕೆಯಲ್ಲಿರುವ ಕೆಳತ್ರಿಕೋಣದ ಮೇಲೆ ಕ್ಲಿಕ್ ಮಾಡಿ auto correct options ಎಂಬದನ್ನು ಆಯ್ಕೆ ಮಾಡಿ ಅಲ್ಲಿರುವ ಎಲ್ಲ ಆಯ್ಕೆಗಳನ್ನು ಕಿತ್ತುಹಾಕಿ. ಎಲ್ಲರೂ ಕನ್ನಡ ಬೆರಳಚ್ಚು ಮಾಡಲು ಯುನಿಕೋಡ್ ಬಳಸಿದಾಗ ಈ ಸಮಸ್ಯೆ ಮಾಯವಾಗುತ್ತದೆ.

ಕಂಪ್ಯೂತರ್ಲೆ

ಬ್ಲಾಗ್‌ಸುಂಕ

ಗಣಿದೊರೆಗಳ ಒತ್ತಡಕ್ಕೆ ಮಣಿದು ಅದಿರು ಸಾಗಣೆ ಲಾರಿಗಳ ಮೇಲೆ ವಿಧಿಸಿದ ಸುಂಕವನ್ನು ರದ್ದು ಮಾಡಿದ ಯಡ್ಯೂರಪ್ಪನವರು ನೆರೆಸಂತ್ರಸ್ತರಿಗೆ ಪರಿಹಾರಕ್ಕೆ ಹಣ ಸಂಗ್ರಹಿಸಲು ಹೊಸ ವಿಧಾನವೊಂದನ್ನು ಅನ್ವೇಷಿಸಿದ್ದಾರೆ. ಅದೆಂದರೆ ಬ್ಲಾಗಿಂಗ್‌ಗೆ ಸುಂಕ ವಿಧಿಸುವುದು. ಇತ್ತೀಚೆಗೆ ಬ್ಲಾಗಿಂಗ್, ಅದರಲ್ಲೂ ಟ್ವಿಟ್ಟರ್ ತುಂಬ ಜನಪ್ರಿಯವಾಗುತ್ತಿದೆ. ಒಂದು ಬ್ಲಾಗ್‌ಗೆ ಇಂತಿಷ್ಟು ಎಂದು ಬ್ಲಾಗ್‌ಸುಂಕ ವಿಧಿಸಲಾಗುವುದು ಎಂದು ನಿಧಾನಸೌಧದಿಂದ ಹೊರಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪೂರ್ತಿಪ್ರಮಾಣದ ಬ್ಲಾಗಿಗೆ ಹೆಚ್ಚು ಮತ್ತು ಕಿರುಬ್ಲಾಗ್ ಟ್ವಿಟ್ಟರಿಗೆ ಕಡಿಮೆ ಸುಂಕ ನಿಗದಿ ಮಾಡಲಾಗಿದೆ. ತೆರಿಗೆಯ ಮೆಲೆ ಸರ್‌ಚಾರ್ಜ್ ವಿಧಿಸುವ ಪರಿಪಾಠದಂತೆ ಬ್ಲಾಗಿಗೆ ಸುಂಕ ವಿಧಿಸಲಾಗಿದ್ದರೆ ಬ್ಲಾಗಿನ ಕೆಳಗೆ ಓದುಗರು ಬರೆಯುವ ಕಮೆಂಟು(ಟಿಪ್ಪಣಿ)ಗಳಿಗೆ ಸರ್‌ಚಾರ್ಜ್ ವಿಧಿಸಲಾಗಿದೆ. ಟ್ವಿಟ್ಟರಿನಲ್ಲಿ ೪ ಲಕ್ಷ ಹಿಂಬಾಲಕರನ್ನು ಹೊಂದಿರುವ ಶಶಿತರೂರ್ ಇದನ್ನು ಪ್ರತಿಭಟಿಸಿದ ಸುದ್ದಿ ಇನ್ನೂ ಬಂದಿಲ್ಲ.

ಸೋಮವಾರ, ನವೆಂಬರ್ 9, 2009

ಗಣಕಿಂಡಿ - ೦೨೫ (ನವಂಬರ್ ೦೯, ೨೦೦೯)

ಅಂತರಜಾಲಾಡಿ
ಮಾಹಿತಿ ಹೆದ್ದಾರಿಗೆ ಕನ್ನಡದ ಮಹಾದ್ವಾರ
ದಾಟ್ಸ್‌ಕನ್ನಡ (thatskannada.oneindia.in) ಕನ್ನಡದ ಪ್ರಥಮ ಪೋರ್ಟಲ್. ಕನ್ನಡದಲ್ಲಿ ಹಲವು ಪೋರ್ಟಲ್‌ಗಳು ಬಂದು ನಾಪತ್ತೆಯಾದರೂ ಸುಮಾರು ಹತ್ತು ವರ್ಷಗಳಿಂದ ನಿರಂತರ ಸಾಗುತ್ತ ಬಂದಿರುವ ಪೋರ್ಟಲ್ ದಾಟ್ಸ್‌ಕನ್ನಡ. ದಿನಕ್ಕೆ ಹಲವು ಬಾರಿ ತಾಜಾ ಸುದ್ದಿಯನ್ನು ನೀಡುವುದರ ಜೊತೆಗೆ ವೈವಿಧ್ಯಮಯವಾದ ಇತರೆ ವಿಷಯ, ಲೇಖನ, ಸಾಹಿತ್ಯ, ಅಂಕಣಗಳು, ಸಿನಿಮಾ ಮಸಾಲೆ, ಇತ್ಯಾದಿಗಳೂ ಇಲ್ಲಿವೆ. ಕನ್ನಡದ ಇತರೆ ಕೆಲವು ಪೋರ್ಟಲ್‌ಗಳು -in.kannada.yahoo.com, kannada.webdunia.com, in.msn.com/kannada, kannada.samachar.com. ಈ ಪಟ್ಟಿಯಲ್ಲಿ ನಮೂದಿಸದ ಜಾಲತಾಣಗಳು ಚೆನ್ನಾಗಿಲ್ಲ ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ. 

ಡೌನ್‌ಲೋಡ್
ಬರಹ
ತುಂಬ ಜನಪ್ರಿಯವಾಗಿರುವ ಕನ್ನಡ ತಂತ್ರಾಂಶ ಬರಹ. ಇದು ವಿಂಡೋಸ್ ಕಾರ್ಯಾಚರಣೆಯ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತದೆ. ಹಲವು ಆವೃತ್ತಿಗಳನ್ನು ನೀಡಿರುವ ಈ ತಂತ್ರಾಂಶದ ಸದ್ಯದ ಆವೃತ್ತಿ ೮.೦. ಇದು ಕನ್ನಡ ಯುನಿಕೋಡ್ ಸೌಲಭ್ಯವನ್ನೂ ಹೊಂದಿದೆ. ಇದನ್ನು ಬಳಸಿ ಕನ್ನಡ ಮಾತ್ರವಲ್ಲದೆ ಇತರೆ ಹಲವು ಭಾರತೀಯ ಭಾಷೆಗಳಲ್ಲಿ ಬೆರಳಚ್ಚು ಮಾಡಬಹುದು. ಇದರಲ್ಲಿ ಬರಹ ಡೈರೆಕ್ಟ್, ಬರಹಪ್ಯಾಡ್, ಪಾಂಟ್ ಪರಿವರ್ತಕ, ಇತ್ಯಾದಿ ಇತರೆ ಉಪಯುಕ್ತ ತಂತ್ರಾಂಶಗಳಿವೆ. ಬರಹ ಬೇಕಿದ್ದಲ್ಲಿ www.baraha.com ಜಾಲತಾಣಕ್ಕೆ ಭೇಟಿ ನೀಡಿ. ಬರಹ ಡೈರೆಕ್ಟ್ ಬಳಸಿ ಮೈಕ್ರೋಸಾಫ್ಟ್ ವರ್ಡ್‌ನ ಎಕ್ಸ್‌ಪಿ, ೨೦೦೩ ಮತ್ತು ೨೦೦೭ ಆವೃತ್ತಿಗಳಲ್ಲಿ ಕನ್ನಡ ಯುನಿಕೋಡ್‌ನಲ್ಲಿ ಬೆರಳಚ್ಚು ಮಾಡುವಾಗ ಖಾಲಿ ಚೌಕಗಳು ಮೂಡುವ ಸಮಸ್ಯೆ ಈ ಹಿಂದಿನ ಆವೃತ್ತಿಯ ಬರಹ ತಂತ್ರಾಂಶಗಳಲ್ಲಿತ್ತು. ಈ ಸಮಸ್ಯೆಯನ್ನು ಬರಹ ೮.೦ ರಲ್ಲಿ ಸರಿಪಡಿಸಲಾಗಿದೆ.

e - ಸುದ್ದಿ
ಅಂತರಜಾಲದಲ್ಲಿ ಹೆರಿಗೆ
ಬಸ್ಸು, ರೈಲು, ರಿಕ್ಷಾ, ವಿಮಾನಗಳಲ್ಲಿ ಹೆರಿಗೆ ಆದ ಸಂಗತಿ ಕೇಳಿರಬಹುದು. ಅಂತರಜಾಲದಲ್ಲಿ ಹೆರಿಗೆ? ಅದು ಹೇಗೆ ಸಾಧ್ಯ ಅಂತೀರಾ? ಅತಿರೇಕಗಳ ನಾಡಾದ ಅಮೇರಿಕದ ಬೋಸ್ಟನ್ ನಗರದ ಲಿನ್ಸೀ ಎಂಬಾಕೆ ಪ್ರಥಮ ಬಾರಿಗೆ ಅಮ್ಮ ಆಗುವವಳಿದ್ದಾಳೆ. ಅವಳ ಪ್ರತಿ ದಿನ/ವಾರದ ಬೆಳವಣಿಗೆ ಬಗ್ಗೆ ಆಕೆ ಈಗಾಗಲೆ ಬ್ಲಾಗ್ ಮಾಡುತ್ತಿದ್ದಾಳೆ. ಇಷ್ಟೇನಾ, ಅದರಲ್ಲೇನು ವಿಶೇಷ, ಅತಿರೇಕ, ಎನ್ನುತ್ತೀರಾ? ಮುಂದೆ ಕೇಳಿ. ಆಕೆ ತನ್ನ ಹೆರಿಗೆಯನ್ನು ಅಂತರಜಾಲದಲ್ಲಿ ನೇರಪ್ರಸಾರ ಮಾಡುವವಳಿದ್ದಾಳೆ. ಪ್ರಸೂತಿಕೋಣೆಯಲ್ಲಿ ಕ್ಯಾಮರಾ ಅಳವಡಿಸಿ ಅದನ್ನು ಅಂತರಜಾಲಕ್ಕೆ ಸಂಪರ್ಕಿಸಿ ಪ್ರಸಾರ ಮಾಡಲಾಗುವುದು. ನಿಮಗೆ ಈ ನೇರಪ್ರಸಾರವನ್ನು ನೋಡಬೇಕಿದ್ದರೆ http://bit.ly/37HbqT ಜಾಲತಾಣದಲ್ಲಿ ಹೆಸರು ನೋಂದಾಯಿಸಿಕೊಳ್ಳಿ.

e- ಪದ

ಜಾಲದ್ವಾರ

ಪೋರ್ಟಲ್ (portal) -ಈ ಪದದ ನಿಜವಾದ ಅರ್ಥ ಮಹಾದ್ವಾರ ಎಂದು. ವಿಶ್ವವ್ಯಾಪಿ ಜಾಲ (worldwide web) ದಲ್ಲಿರುವ ಕೋಟ್ಯಾಂತರ ಜಾಲತಾಣಗಳಿಗೆ ಪ್ರವೇಶಪಡೆಯಲು ಈ ಜಾಲತಾಣ ಒಂದು ರೀತಿಯಲ್ಲಿ ಮಹಾದ್ವಾರದ ರೀತಿಯಲ್ಲಿ ಕೆಲಸ ಮಾಡುತ್ತದೆ. ಉದಾಹರಣೆಗೆ yahoo.com. ಈ ಜಾಲತಾಣದಿಂದ ಇತರೆ ಜಾಲತಾಣಗಳಿಗೆ ಕೊಂಡಿಗಳಿವೆ. ಈ ಕೊಂಡಿಗಳನ್ನು ಹಲವು ವಿಧಗಳಲ್ಲಿ ವಿಂಗಡಿಸಲಾಗಿದೆ. ಪೋರ್ಟಲ್‌ಗಳನ್ನು ಸಾಮಾನ್ಯ ಪೋರ್ಟಲ್ ಮತ್ತು ಯಾವುದಾದರೂ ವಿಷಯಕ್ಕೆ ಸಂಬಂಧಿಸಿದ ವಿಶೇಷ ಪೋರ್ಟಲ್ ಎಂದು ವಿಭಾಗಿಸಬಹುದು. ಯಾಹೂ ಸಾಮಾನ್ಯ ಪೋರ್ಟಲ್. ದಾಟ್ಸ್‌ಕನ್ನಡ ಕನ್ನಡದ ಪೋರ್ಟಲ್.

e - ಸಲಹೆ

ಯುನಿಕೋಡ್‌ಗೆ ಬದಲಾವಣೆ

ಬ್ಲಾಗ್‌ಗೆ ಸೇರಿಸಲು ಅಥವಾ ಇಮೈಲ್ ಮಾಡಲು ಪಠ್ಯವು ಯುನಿಕೋಡ್‌ನಲ್ಲಿರಬೇಕು. ಬರಹ ಅಥವಾ ನುಡಿ ತಂತ್ರಾಂಶದಲ್ಲಿ ತಯಾರಿಸಿದ ಲೇಖನವನ್ನು ಯುನಿಕೋಡ್‌ಗೆ ಬದಲಾಯಿಸಬೇಕೇ? ಇದಕ್ಕಾಗಿ ಬರಹ ತಂತ್ರಾಂಶದಲ್ಲಿ ಒಂದು ಸವಲತ್ತು ಲಭ್ಯವಿದೆ. ಬರಹ ಡೈರೆಕ್ಟನ್ನು ಪ್ರಾರಂಭಿಸಿ. ಪಠ್ಯವು ಮೈಕ್ರೋಸಾಫ್ಟ್ ವರ್ಡ್‌ನಲ್ಲಿದ್ದರೆ ಅದನ್ನು ಆಯ್ಕೆ ಮಾಡಿ ನಕಲು ಮಾಡಿ (Ctrl-C ಒತ್ತಿ). ನಂತರ ಸಿಸ್ಟಂ ಟ್ರೇನಲ್ಲಿರುವ (ಪರದೆಯ ಬಲಭಾಗದ ಕೆಳಮೂಲೆಯಲ್ಲಿರುವ ಗಡಿಯಾರದ ಪಕ್ಕದಲ್ಲಿರುವ) ಬರಹ ಡೈರೆಕ್ಟ್‌ನ ಚಿತ್ರಿಕೆ (ಐಕಾನ್) ಮೇಲೆ ಮೌಸ್‌ನ ಬಲ ಗುಂಡಿ ಕ್ಲಿಕ್ ಮಾಡಿ Convert To -> Kannada -> Unicode ಎಂದು ಆಯ್ಕೆ ಮಾಡಿ. ನಂತರ ನಿಮಗೆ ಬೇಕಾದಲ್ಲಿ ಪಠ್ಯವನ್ನು ಅಂಟಿಸಿ (Ctrl-V ಒತ್ತಿ).

ಕಂಪ್ಯೂತರ್ಲೆ

ರತ್ನನ್ ಗಣಕ ಪದ

ಮೌಸ್ ಕೀಬೋರ್ಡ್ ಕನ್ನಡ ಪದಗೋಳಂದ್ರೆ ರತ್ನಂಗ್ ಪ್ರಾಣ
ಕೀಬೋರ್ಡ್ ಕುಟ್ಟಾಕ್ ಹೊರಟಾಂತಂದ್ರೆ ತಕ್ಕೋ ಪದಗಳ್ ಬಾಣ

ಬುಧವಾರ, ನವೆಂಬರ್ 4, 2009

ಗಣಕಿಂಡಿ - ೦೨೪ (ನವಂಬರ್ ೦೨, ೨೦೦೯)

ಅಂತರಜಾಲಾಡಿ

ಅಂತರಜಾಲದಲ್ಲಿ ಕನ್ನಡ ಬೆರಳಚ್ಚು

ಕನ್ನಡ ಯುನಿಕೋಡ್ ಬೆರಳಚ್ಚು ಮಾಡಲು ವಿಂಡೋಸ್ ಎಕ್ಸ್‌ಪಿ ಮತ್ತು ನಂತರದ ಎಲ್ಲ ಆವೃತ್ತಿಗಳಲ್ಲಿ ಸೌಲಭ್ಯ ಇದೆ. ಲಿನಕ್ಸ್‌ನಲ್ಲೂ ಇದೆ. ಆದರೆ ಇದನ್ನು ಸಕ್ರಿಯಗೊಳಿಸಿರಬೇಕಾಗುತ್ತದೆ. ಇದಕ್ಕಾಗಿ ನಿಮಗೆ ಆ ಗಣಕಕ್ಕೆ ಅಧಿಕಾರಿ ಪರವಾನಗಿ ಬೇಕಾಗಿರುತ್ತದೆ. ಕೆಲವು ಕಂಪೆನಿಗಳಲ್ಲಿ ಉದ್ಯೋಗಿಗಳಿಗೆ ಈ ಪರವಾನಿಗೆ ಇರುವುದಿಲ್ಲ. ಹಲವು ಸೈಬರ್‌ಕೆಫೆಗಳಲ್ಲೂ ಕನ್ನಡದ ಬೆಂಬಲವನ್ನು ಸಕ್ರಿಯಗೊಳಿಸಿರುವುದಿಲ್ಲ. ಇಂತಹ ಕಡೆಗಳಲ್ಲಿ ಕನ್ನಡದ ಇಮೈಲ್ ಮಾಡಲು, ಬ್ಲಾಗ್ ಮಾಡಲು ಅಥವಾ ಬೇರೆ ಯಾವ ಕಾರಣಕ್ಕಾದರೂ ಅಂತರಜಾಲತಾಣಗಳಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡಬೇಕಾಗಿ ಬಂದಾಗ ಏನು ಮಾಡುವುದು? ಹಲವು ಕನ್ನಡ ಜಾಲತಾಣಗಳಲ್ಲಿ ಅವರೇ ಇಂತಹ ಸವಲತ್ತು ನೀಡಿರುತ್ತಾರೆ. ಗೂಗ್ಲ್‌ನವರು ಇಂಗ್ಲಿಶ್‌ನಿಂದ ಕನ್ನಡಕ್ಕೆ ಲಿಪ್ಯಂತರದ ಸವಲತ್ತು ನೀಡಿದ್ದಾರೆ. ಇದರಲ್ಲಿ ಇಂಗ್ಲಿಶ್ ಲಿಪಿಯಲ್ಲಿ ಬೆರಳಚ್ಚು ಮಾಡಿದರೆ ಕನ್ನಡ ಲಿಪಿಗೆ ಮಾರ್ಪಾಟು ಆಗುತ್ತದೆ. ಇದನ್ನು ಬಳಸಲು bit.ly/1ohe3Q ಜಾಲತಾಣಕ್ಕೆ ಭೇಟಿ  ನೀಡಿ. ಇದೇ ರೀತಿಯ ಸವಲತ್ತು ನೀಡುವ ಇನ್ನೊಂದು ಜಾಲತಾಣ quillpad.com/kannada. ಗೂಗ್ಲ್‌ನವರು ಬುಕ್‌ಮಾರ್ಕ್‌ಲೆಟ್ ಎನ್ನುವ ಇನ್ನೊಂದು ಸವಲತ್ತನ್ನು ನೀಡಿದ್ದಾರೆ. ಇದನ್ನು ಬಳಸಿ ಯಾವ ಜಾಲತಾಣದಲ್ಲಿ ಬೇಕಾದರೂ ಕನ್ನಡದಲ್ಲಿ ಬೆರಳಚ್ಚು ಮಾಡಬಹುದು. ಇದರ ವಿಳಾಸ bit.ly/28zTqR.     

ಡೌನ್‌ಲೋಡ್

ಭಾಷಾಇಂಡಿಯ ಕೀಲಿಮಣೆ

ವಿಂಡೋಸ್ ಎಕ್ಸ್‌ಪಿ ಮತ್ತು ನಂತರದ ಆವೃತ್ತಿಗಳಲ್ಲಿ ಕನ್ನಡ ಯುನಿಕೋಡ್ ಬೆರಳಚ್ಚು ಮಾಡಲು ಕೀಲಿಮಣೆಯ ಸವಲತ್ತನ್ನು ನೀಡಿದ್ದಾರೆ. ಇದು ಕೇಂದ್ರ ಸರಕಾರದ ಶಿಷ್ಟತೆಗನುಗುಣವಾಗಿರುವ ಇನ್‌ಸ್ಕ್ರಿಪ್ಟ್ ವಿನ್ಯಾಸದಲ್ಲಿದೆ. ಕೆ.ಪಿ.ರಾವ್ ಅವರು ಮೂಲಭೂತವಾಗಿ ವಿನ್ಯಾಸ ಮಾಡಿರುವ, ನುಡಿ ತಂತ್ರಾಂಶದಲ್ಲಿ ಅಳವಡಿಸಿರುವ, ಕಗಪ ಕೀಲಿಮಣೆಯೆಂದು ಕರೆಯಲ್ಪಡುತ್ತಿರುವ ವಿನ್ಯಾಸವು ತುಂಬ ಜನಪ್ರಿಯವಾಗಿದೆ. ಯುನಿಕೋಡ್‌ನಲ್ಲಿ ಬೆರಳಚ್ಚು ಮಾಡಲು ಈ ಕೀಲಿಮಣೆ ಬೇಕಿದ್ದರೆ ಭಾಷಾಇಂಡಿಯ ಜಾಲತಾಣದಲ್ಲಿ ಲಭ್ಯವಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ವಿಂಡೋಸ್ ೭ ರಲ್ಲು ಕೆಲಸ ಮಾಡುವಂತಹ ಆವೃತ್ತಿಯೂ ಲಭ್ಯವಿದೆ. ಇದು ಬೇಕಿದ್ದರೆ ಭಾಷಾಇಂಡಿಯ ಜಾಲತಾಣಕ್ಕೆ ಭೇಟಿ ನೀಡಿ.

e - ಸುದ್ದಿ

ಗಗನವು ಎಲ್ಲೋ ಲ್ಯಾಪ್‌ಟಾಪ್ ಎಲ್ಲೋ!

ವಿಮಾನಪ್ರಯಾಣಕ್ಕೆ ಬೋರ್ಡಿಂಗ್ ಪಾಸ್ ತೆಗೆದುಕೊಂಡ ನಂತರ ಕಾಯುತ್ತಿರುವಾಗ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತ ಸಮಯದ ಪರಿವೆಯಿಲ್ಲದೆ ವಿಮಾನವನ್ನು ಕಳಕೊಳಕೊಂಡ ಪ್ರಕರಣಗಳು ಹಲವಾರಿವೆ. ನನಗೂ ಒಮ್ಮೆ ಹೀಗೆ ಆಗಿತ್ತು. ಪತ್ರಿಕೆಯೊಂದಕ್ಕೆ ಲೇಖನ ತಯಾರು ಮಾಡುತ್ತ ಕುಳಿತಿದ್ದಾಗ ವಿಮಾನ ಹೊರಟೇ ಹೋಗಿತ್ತು. ಪ್ರಯಾಣಿಕರು ಹೀಗೆ ಮಾಡಿದರೆ ಅವರಿಗೆ ಮಾತ್ರ ನಷ್ಟ. ವಿಮಾನದ ಪೈಲಟ್ ವಿಮಾನ ಹಾರಿಸುತ್ತ ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡುತ್ತ ವಿಮಾನ ಇಳಿಯಬೇಕಾದ ನಿಲ್ದಾಣ ತಪ್ಪಿ ಮುಂದೆ ಹೋದರೆ? ಹೌದು. ಅಮೆರಿಕದಲ್ಲಿ ಹೀಗೇ ಆಗಿತ್ತು. ಒಬ್ಬ ಪೈಲಟ್ ಇನ್ನೊಬ್ಬ ಪೈಲಟ್‌ಗೆ ತನ್ನ ಲ್ಯಾಪ್‌ಟಾಪ್‌ನಲ್ಲಿ ಪಾಠ ಮಾಡುತ್ತ ಸಮಯದ ಪರಿವೆ ಇಲ್ಲದೆ ತಾನು ಇಳಿಯಬೇಕಾದ ನಿಲ್ದಾಣದಿಂದ ಸುಮಾರು ೧೦೦ ಕಿ.ಮೀ. ಮುಂದೆ ಹೋಗಿಬಿಟ್ಟಿದ್ದರು. ಕೊನೆಗೊಮ್ಮೆ ಗಗನಸಖಿ ಬಂದು ಎಚ್ಚರಿಸಿದಾಗ ಪರಿಸ್ಥಿತಿ ಅರಿವಾಗಿ ಹಿಂದೆ ಬಂದು ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ವಿಮಾನ ಚಲಾಯಿಸುತ್ತಿರುವಾಗ ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡಬಾರದು ಎಂದು ಅಂತಾರಾಷ್ಟ್ರೀಯ ವಿಮಾನಯಾನ ನಿಯಮವಿದೆ.

e- ಪದ

ಪ್ರಾಕ್ಸಿ ಸರ್ವರ್ (Proxy Server) -ಕಂಪೆನಿಗಳಲ್ಲಿ ಎಲ್ಲರು ಬಳಸುವ ಗಣಕಗಳು ಮತ್ತು ಅಂತರಜಾಲದ ಮಧ್ಯೆ ಇರುವಂತಹ ಒಂದು ಸರ್ವರ್. ಇದರ ಮುಖ್ಯ ಉದ್ದೇಶ, ಉದ್ಯೋಗಿಗಳು ನೇರವಾಗಿ ಅಂತರಜಾಲವನ್ನು ಸಂಪರ್ಕಿಸುವುದನ್ನು ತಡೆಯುವುದು. ಕಂಪೆನಿಯ ನಿಯಮದನ್ವಯ ಅನುಮತಿ ಇರುವಂತಹ ಜಾಲತಾಣಗಳನ್ನು ಮಾತ್ರ ಉದ್ಯೋಗಿಗಳು ವೀಕ್ಷಿಸಲು ಇದು ಅನುವು ಮಾಡಿಕೊಡುತ್ತದೆ. ಎಲ್ಲ ಉದ್ಯೋಗಿಗಳು ತುಂಬ ವೀಕ್ಷಿಸುವಂತಹ ಜಾಲತಾಣಗಳ ಪ್ರತಿಯನ್ನು ತನ್ನಲ್ಲೇ ಇಟ್ಟುಕೊಂಡು ಅಂತಹ ಜಾಲತಾಣಗಳ ವೀಕ್ಷಣೆ ಸುಗಮವಾಗಿ ಆಗುವಂತೆಯೂ ಈ ಪ್ರಾಕ್ಸಿ ಸರ್ವರ್ ಮಾಡುತ್ತದೆ.


e - ಸಲಹೆ

ರೋಹಿತ್ ಸಿಂಗ್ ಅವರ ಪ್ರಶ್ನೆ: ನಾನು ತಿಂಗಳಿಗೆ ಒಂದು ಸಲ ಹಾರ್ಡ್ ಡಿಸ್ಕನ್ನು ಫಾರ್ಮಾಟ್ ಮಾಡಬಹುದೇ?
ಉ: ಮಾಡಬಹುದು. ಆದರೆ ಅಗತ್ಯವಿಲ್ಲ. ಫಾರ್ಮಾಟ್ ಮಾಡುವ ಬದಲು ಆಗಾಗ ಸ್ವಚ್ಛ ಮಾಡಿ (ಸಿಕ್ಲೀನರ್ ಬಳಸಬಹುದು. ನೋಡಿ ಗಣಕಿಂಡಿ, ಜುಲೈ ೨೦, ೨೦೦೯). ಅನಂತರ ಬೇಕಿದ್ದರೆ ಡಿಫ್ರಾಗ್ಮೆಂಟ್ ಮಾಡಬಹುದು. ಕಾರ್ಯಾಚರಣೆಯ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) ಇರುವ ವಿಭಾಗವನ್ನು (ಪಾರ್ಟೀಶನ್) ಆಗಾಗ ಫಾರ್ಮಾಟ್ ಮಾಡುವುದು ಅಷ್ಟು ಒಳ್ಳೆಯದಲ್ಲ.

ಕಂಪ್ಯೂತರ್ಲೆ

ಗಣಕ(ತ)ಗಾದೆಗಳು

ಕವಿಯಾಗಲಾರದವ ವಿಮರ್ಶಕನಾಗುತ್ತಾನೆ. ಪ್ರೋಗ್ರಾಮರ್ ಆಗಲಾರದವ ಟೆಸ್ಟರ್ ಆಗುತ್ತಾನೆ.
ಬ್ಲಾಗ್ ಮಾಡಲು ತಾಳ್ಮೆ ಇಲ್ಲದವ (ಟ್ವಿಟ್ಟರ್‌ನಲ್ಲಿ) ಟ್ವೀಟ್ ಮಾಡುತ್ತಾನೆ.