ಸೋಮವಾರ, ಫೆಬ್ರವರಿ 22, 2010

ಗಣಕಿಂಡಿ - ೦೪೦ (ಫೆಬ್ರವರಿ ೨೨, ೨೦೧೦)

ಅಂತರಜಾಲಾಡಿ

ಕಲಾವಿದರಾಗಿ

ಅಡೋಬಿಯವರ ದುಬಾರಿ ಫೋಟೋಶಾಪ್ ತಂತ್ರಾಂಶ ಕೊಂಡುಕೊಳ್ಳುವಷ್ಟು ಹಣ ನಿಮ್ಮಲ್ಲಿಲ್ಲವೇ? ಆದರೂ ಗಣಕ ಬಳಸಿ ಚಿತ್ರ ಬಿಡಿಸಬೇಕೇ? ಹಾಗಿದ್ದರೆ ನಿಮಗಾಗಿ ಅಂತರಜಾಲ ಮೂಲಕ ಚಿತ್ರ ಬಿಡಿಸುವ ಉಚಿತ ತಂತ್ರಾಂಶವೊಂದು ಲಭ್ಯವಿದೆ. ಅದಕ್ಕಾಗಿ ನೀವು pixlr.com ಜಾಲತಾಣಕ್ಕೆ ಭೇಟಿ ನೀಡಬೇಕು. ಫೋಟೋಶಾಪ್ ತಂತ್ರಾಂಶದಲ್ಲಿ ನೀಡಿರುವಂತಹ ಪ್ರತಿಯೊಂದು ಸೌಲಭ್ಯವನ್ನು ಇಲ್ಲಿ ನೀಡಿಲ್ಲ. ಆದರೆ ಜನಸಾಮಾನ್ಯರು ಹೆಚ್ಚಾಗಿ ಬಳಸುವ ಸೌಲಭ್ಯಗಳು ಇವೆ. ಅಡೋಬಿಯವರು ಇದೇ ರೀತಿ ಅಂತಜಾಲ ಆಧಾರಿತ ಫೋಟೋಶಾಪ್ ಸೌಲಭ್ಯವನ್ನು photoshop.com ಜಾಲತಾಣದಲ್ಲಿ ನೀಡಿದ್ದಾರೆ. ಆದರೆ ಅಲ್ಲಿ ತಯಾರಿಸಿದ ಚಿತ್ರವನ್ನು ನೀವು ಅವರ ಜಾಲತಾಣದಲ್ಲೇ ಸಂಗ್ರಹಿಸಿಡಬೇಕು. ಈ ಜಾಲತಾಣದಲ್ಲಿ ಅಂತಹ ನಿಯಮವಿಲ್ಲ. ನೀವು ತಯಾರಿಸಿದ ಚಿತ್ರವನ್ನು ನಿಮ್ಮ ಗಣಕದಲ್ಲೇ ಉಳಿಸಬಹುದು. ಇದು ಒಂದು ಉತ್ತಮ ಸೌಲಭ್ಯ.

ಡೌನ್‌ಲೋಡ್
ಯುಎಸ್‌ಬಿಗೊಂದು ಚುಚ್ಚುಮದ್ದು

ನಿಮ್ಮ ಯುಎಸ್‌ಬಿ ಡ್ರೈವ್ ಅನ್ನು ಇನ್ನೊಬ್ಬರ ಗಣಕದಲ್ಲಿ ತೂರಿಸಿ ಅವರಿಂದ ಯಾವುದಾದರೂ ಫೈಲು ತೆಗೆದುಕೊಂಡು ಬಂದ ನಂತರ ನಿಮ್ಮ ಯುಎಸ್‌ಬಿ ಡ್ರೈವ್‌ನಲ್ಲಿ ವೈರಸ್ ಬಂದ ಅನುಭವ ನಿಮಗೆ ಆಗಿರಬಹುದು. ಈ ರೀತಿಯ ಅನುಭವ ಸಾಮಾನ್ಯವಾಗಿ ನೀವು ತೆಗೆದ ಫೋಟೋವನ್ನು ಮುದ್ರಣಕ್ಕಾಗಿ ಸ್ಟುಡಿಯೋದಲ್ಲಿ ನೀಡಿದ ಬಳಿಕ ಅಥವಾ ಯಾವುದಾದರೂ ಸೈಬರ್‌ಕೆಫೆಯಲ್ಲಿ ಬಳಸಿದ ಬಳಿಕ  ಆಗುವುದು ಸಾಮಾನ್ಯ. ಬಹುಜನರು ತಮ್ಮಲ್ಲಿರುವ ಎಲ್ಲ ನಮೂನೆಯ ಡ್ರೈವ್‌ಗಳನ್ನು ಬಳಸಿ ಇಂತಹ ಸಾರ್ವಜನಿಕ ಬಳಕೆಯ ಗಣಕಗಳಲ್ಲಿ ವೈರಸ್ ತುಂಬಿರುತ್ತದೆ. ಅಂತಹ ಗಣಕದಿಂದ ನಿಮ್ಮ ಯುಎಸ್‌ಬಿ ಡ್ರೈವ್‌ಗೂ ಅದು ಬರುತ್ತದೆ. ಈ ರೀತಿ ಆಗದಂತೆ ನಿಮ್ಮ ಯುಎಸ್‌ಬಿ ಡ್ರೈವ್‌ಗೊಂದು ಚುಚ್ಚುಮದ್ದು (ವ್ಯಾಕ್ಸೀನ್) ತಂತ್ರಾಂಶ Panda USB Vaccine ಲಭ್ಯವಿದೆ. ಇದು ಬೇಕಿದ್ದಲ್ಲಿ ನಿವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ - http://bit.ly/gvvDo

e - ಸುದ್ದಿ
ಟ್ವೀಟ್ ಮತ್ತು ಗೂಗ್ಲ್ 
ಇತ್ತೀಚೆಗೆ ಅಮೇರಿಕದ ಭಾಷಾ ಸಮಾಜವು ೨೦೦೯ನೆಯ ಇಸವಿಯ ಮತ್ತು ದಶಕದ ಪದಗಳನ್ನು ಬಿಡುಗಡೆ ಮಾಡಿದೆ. ೨೦೦೯ನೆಯ ವರ್ಷದ ಪದವಾಗಿ ಟ್ವೀಟ್ ಆಯ್ಕೆಯಾಗಿದೆ ಹಾಗೂ ೨೦೦೦-೦೯ ದಶಕದ ಪದವಾಗಿ ಗೂಗ್ಲ್ ಆಯ್ಕೆಯಾಗಿದೆ. ಟ್ವಿಟ್ಟರ್‌ನಲ್ಲಿ ಕಳುಹಿಸುವ ಕಿರು ಬ್ಲಾಗ್ ಸಂದೇಶಕ್ಕೆ ಟ್ವೀಟ್ ಎನ್ನುತ್ತಾರೆ. ಇದನ್ನು ನಾಮಪದವಾಗಿಯೂ ಕ್ರಿಯಾಪದವಾಗಿಯೂ ಬಳಸುತ್ತಾರೆ. ಅದೇ ರೀತಿ ಗೂಗ್ಲ್ ಎಂಬುದು ಈಗ ಕ್ರಿಯಾಪದವಾಗಿ ನಿಘಂಟುಗಳನ್ನು ಪ್ರವೇಶಿಸಿದೆ. ಯಾವುದಾದರೊಂದು ಮಾಹಿತಿ ಬೇಕಿದ್ದರೆ ಅದಕ್ಕಾಗಿ ಸ್ವಲ್ಪ ಗೂಗ್ಲ್ ಮಾಡು ಎನ್ನುವುದು ವಾಡಿಕೆಯಾಗಿಬಿಟ್ಟಿದೆ.

e- ಪದ
ಸ್ಪೂಫ್ (spoof) -ಮೋಸಮಾಡುವುದು. ಗಣಕ ಜಾಲಗಳಲ್ಲಿ ಪ್ರತಿಯೊಂದು ಗಣಕ ಮತ್ತು ಸಂಪರ್ಕಿಸಲ್ಪಟ್ಟ ಯಾವುದೇ ಸಾಧನಕ್ಕೂ ಒಂದು ಗುರುತು ಇರುತ್ತದೆ. ಆ ರೀತಿಯಾಗಿ ತೋರಿಸಿಕೊಂಡು ಗಣಕ ಜಾಲದೊಳಗೆ ಹೊರಗಿನಿಂದ ನುಸುಳುವುದಕ್ಕೆ ಇದನ್ನು ಅನ್ವಯಿಸುತ್ತಾರೆ. ಆದರೆ ಇತ್ತೀಚೆಗೆ ಇಮೈಲ್ ಸ್ಪೂಫಿಂಗ್ ಅನ್ನುವುದು ಹೆಚ್ಚು ವಾಡಿಕೆಯಲ್ಲಿದೆ. ಯಾವುದಾದರೊಂದು ಬ್ಯಾಂಕ್ ಅಥವಾ ಇನ್ಯಾವುದಾದರೊಂದು ವ್ಯವಹಾರದ ಜಾಲತಾಣದಿಂದ ಬಂದಿದೆ ಎಂದು ತೋರಿಸಿಕೊಂಡು, ಅಂದರೆ ಅದೇ ರೀತಿಯ ಇಮೈಲ್ ವಿಳಾಸವನ್ನು ಹೊಂದಿರುವ, ಆದರೆ ಬೇರೆ ಇನ್ನೆಲ್ಲಿಂದಲೋ ಬಂದಿರುವ ಇಮೈಲ್ ಆಗಿರುತ್ತದೆ. ಅದನ್ನು ನಂಬಿ ಮೋಸ ಹೋಗುವವರು ತುಂಬ ಮಂದಿ ಇದ್ದಾರೆ. ಅದುದರಿಂದ ಇಂತಹ ಇಮೈಲ್ ಬಂದಾಗ ಎಚ್ಚರಿಕೆಯಿಂದ ವರ್ತಿಸಬೇಕು. 

e - ಸಲಹೆ

ಬೆಳಗಾವಿಯಿಂದ ವೀರೇಂದ್ರ ಅವರ ಪ್ರಶ್ನೆ: ನನಗೆ ಕಂಪ್ಯೂಟರ್ ಹಾರ್ಡ್‌ವೇರ್ ಬಗ್ಗೆ ತಿಳಿಯಬೇಕು. ಅಂತಹ ವೆಬ್‌ಸೈಟ್‌ಗಳು ಯಾವುವು?
ಉ: ಅಂತಹ ಜಾಲತಾಣಗಳು ಹಲವಾರಿವೆ. ನೀವು hardwarecentral.com ಮತ್ತು tomshardware.co.uk ಜಾಲತಾಣಗಳನ್ನು ವೀಕ್ಷಿಸಬಹುದು.

ಕಂಪ್ಯೂತರ್ಲೆ

ಕೋಲ್ಯ ಗಣಕ ಕಂಪೆನಿಗೆ ಫೋನು ಮಾಡಿ ಹೇಳಿದ “ನಾನು ಕೀಬೋರ್ಡಿನಲ್ಲಿರುವ ಕಂಟ್ರೋಲ್ ಕೀಲಿಯನ್ನು ಎಷ್ಟು ಸಲ ಒತ್ತಿದರೂ ಕಂಪ್ಯೂಟರ್ ನನ್ನ ಕಂಟ್ರೋಲಿಗೆ ಬರುತ್ತಿಲ್ಲ. ಯಾಕೆ?”

ಸೋಮವಾರ, ಫೆಬ್ರವರಿ 15, 2010

ಗಣಕಿಂಡಿ - ೦೩೯ (ಫೆಬ್ರವರಿ ೧೫, ೨೦೧೦)

ಅಂತರಜಾಲಾಡಿ

ಮೆದುಳಿಗೆ ಕೆಲಸ ಕೊಡಿ

ನೀವು ಒಬ್ಬ ಅಧ್ಯಾಪಕರೇ? ಅಥವಾ ಶಾಲೆಗೆ ಹೋಗುವ ಮಕ್ಕಳಿರುವ ಪೋಷಕರೇ? ಮಕ್ಕಳಿಗೆ ವಿಜ್ಞಾನ ಮತ್ತು ಇತರೆ ವಿಷಯಗಳಲ್ಲಿ ಆಸಕ್ತಿ ಮೂಡಿಸುವ ಚಟುವಟಿಕೆಗಳನ್ನು ಮಾಡಿಸಬೇಕೆ? ಹಾಗಿದ್ದರೆ ಅದಕ್ಕೆ ಹಲವು ಉಪಾಯಗಳಿವೆ. ಅಂಗಡಿಗಳಲ್ಲಿ ಸಿಗುವ ದುಬಾರಿ ಕಿಟ್‌ಗಳನ್ನು ಕೊಂಡುಕೊಳ್ಳುವುದು ಎಲ್ಲರಿಂದ ಸಾಧ್ಯವಿಲ್ಲ. ಚಟುವಟಿಕೆಗಳನ್ನು ಗಣಕಗಳಲ್ಲಿ ಮಿಥ್ಯಾವಾಸ್ತವ ಮೂಲಕ ಮಾಡಿಸಬಹುದಲ್ಲವೇ? ಉದಾಹರಣೆಗೆ ಸಾಮಾನ್ಯ ಯಂತ್ರ, ಗೇರ್, ಸನ್ನೆ, ಇತ್ಯಾದಿ ಕೆಲಸ ಮಾಡುವ ವಿಧಾನ. ಇದನ್ನು ಪ್ರತಿಸ್ಪಂದನಾತ್ಮಕವಾಗಿ ಬಹುಮಾಧ್ಯಮದ ಮೂಲಕ ಗಣಕಾಧಾರಿತ ಶಿಕ್ಷಣವನ್ನು ಬಳಸಿ ವಿವರಿಸಬಹುದು. ಇಂತಹ ತಂತ್ರಾಂಶಗಳನ್ನು ಕೊಂಡುಕೊಳ್ಳಬಹುದು. ಅಥವಾ ಅಂತಹ ಚಟುವಟಿಕೆಗಳನ್ನು ಅಂತರಜಾಲದಲ್ಲೇ ನೇರವಾಗಿ ಮಾಡಲು ಅನುವು ಮಾಡಿಕೊಡುವ ಜಾಲತಾಣಗಳನ್ನು ಬಳಸಬಹುದು. ಅಂತಹ ಒಂದು ಜಾಲತಾಣ www.edheads.org.

ಡೌನ್‌ಲೋಡ್

ಆಟಕ್ಕೆ ಶಕ್ತಿ ನೀಡಿ

ಗಣಕದಲ್ಲಿ ಕೆಲವೊಂದು ಆಟಗಳನ್ನು ಆಡುವಾಗ ಈ ಗಣಕದ ವೇಗ ಸಾಲುತ್ತಿಲ್ಲ. ಇದಕ್ಕೊಂದಿಷ್ಟು ಹೆಚ್ಚಿಗೆ ಶಕ್ತಿ ಇದ್ದರೆ ಒಳ್ಳೆಯದಿತ್ತು ಎಂದು ಕೆಲವೊಮ್ಮೆ ಅನ್ನಿಸಿದೆಯೇ? ಹಾಗಿದ್ದರೆ ನಿಮಗೆ ಬೇಕು Game Booster ತಂತ್ರಾಂಶ. ಇದು ಉಚಿತ. ಸಾಮಾನ್ಯವಾಗಿ ಈಗಿನ ಹೊಸ ತಲೆಮಾರಿನ ಆಟಗಳು ಹಾರ್ಡ್‌ಡಿಸ್ಕ್‌ನಲ್ಲಿ ತುಂಬ ಜಾಗ ಆಕ್ರಮಿಸುತ್ತವೆ. ಅವುಗಳನ್ನು ಇನ್‌ಸ್ಟಾಲ್ ಮಾಡಲು ನೀವು ಜಾಗ ಮಾಡಿರುತ್ತೀರಿ. ಆದರೆ ಏನಾಗಿರುತ್ತದೆಯೆಂದರೆ ಈ ಆಟದ ಫೈಲುಗಳು ಹಲವು ಕಡೆ ಹರಿದು ಹಂಚಿ ಹೋಗಿರುತ್ತವೆ. ಇವುಗಳನ್ನು ಒಂದೇ ಕಡೆ ತಂದರೆ ಆಟ ಸ್ವಲ್ಪ ವೇಗವಾಗಿ ಕೆಲಸ ಮಾಡುತ್ತದೆ. ಗಣಕದಲ್ಲಿ ಸಾಮಾನ್ಯವಾಗಿ ಅದರ ಮೆಮೊರಿಯಲ್ಲಿ ಹಲವು ತಂತ್ರಾಂಶಗಳು ಕುಳಿತಿರುತ್ತವೆ ಮತ್ತು ಪ್ರಕ್ರಿಯೆಗಳು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುತ್ತವೆ. ಇವುಗಳಲ್ಲೆ ಕೆಲವನ್ನು ತಾತ್ಕಾಲಿಕವಾಗಿ ನಿಲ್ಲಿಸಬಹುದು. ಈ Game Booster ತಂತ್ರಾಂಶ ಈ ಎಲ್ಲ ಕೆಲಸಗಳನ್ನು ಮಾಡಿ ಆಟ ವೇಗವಾಗಿ ನಡೆಯುವಂತೆ ಮಾಡುತ್ತದೆ. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ - http://bit.ly/bg5xtP

e - ಸುದ್ದಿ

ಗೂಗ್ಲ್ ಬಝ್

ಗೂಗ್ಲ್‌ನವರು ಏನು ಮಾಡಿದರೂ ಅದು ಸುದ್ದಿಯಾಗುತ್ತದೆ. ಇತ್ತೀಚೆಗೆ ಅವರು ಬಝ್ ಹೆಸರಿನ ಹೊಸ ಸವಲತ್ತೊಂದನ್ನು ಜನರಿಗೆ ಒದಗಿಸಿದ್ದಾರೆ. ಇದು ಬಹುಮಟ್ಟಿಗೆ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ನೀಡಿರುವ ಮೈಕ್ರೋಬ್ಲಾಗಿಂಗ್ ತರಹ ಕೆಲಸ ಮಾಡುತ್ತದೆ. ೧೪೦ ಅಕ್ಷರಗಳ ಮಿತಿಯಲ್ಲಿ ಬ್ಲಾಗಿಂಗ್ ಮಾಡಲು ಅನುವು ಮಾಡಿಕೊಡುವ ಟ್ವಿಟ್ಟರ್ ಮೈಕ್ರೋಬ್ಲಾಗಿಂಗ್ ಜಾಲತಾಣ ತುಂಬ ಜನಪ್ರಿಯ. ಫೇಸ್‌ಬುಕ್‌ನಲ್ಲು ಇದೇ ರೀತಿ ನಾನೀಗ ಏನು ಮಾಡುತ್ತಿದ್ದೇನೆ ಎಂಬುದನ್ನು ಟ್ವಿಟ್ಟರ್ ಮಾದರಿಯಲ್ಲಿ ದಾಖಲಿಸುವ ಸವಲತ್ತನ್ನು ನೀಡಿದ್ದಾರೆ. ಆದರೆ ಇದಕ್ಕೆ ೧೪೦ ಅಕ್ಷರಗಳ ಮಿತಿಯಿಲ್ಲ. ಈಗ ಗೂಗ್ಲ್ ಬಝ್ ಅದೇ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಜಿಮೈಲ್‌ನ ವಿಳಾಸ ಪಸ್ತಕದಲ್ಲಿರುವ ಎಲ್ಲರನ್ನು ತಾನಾಗಿಯೇ ನಿಮ್ಮ ಅನುಯಾಯಿ ಮತ್ತು ನೀವು ಅನುಸರಿಸುತ್ತಿರುವವರ ಪಟ್ಟಿಗೆ ಸೇರಿಸುವ ಕಿಡಿಗೇಡಿತನವನ್ನು ಈ ಬಝ್ ಮಾಡುತ್ತಿದೆ ಎಂದು ಅಂತರಜಾಲ ತುಂಬೆಲ್ಲ ಜನರು ಬೈದ ನಂತರ ಗೂಗ್ಲ್‌ನವರು ಅದನ್ನು ಸ್ವಲ್ಪ ಸುಧಾರಿಸಿದ್ದಾರೆ. ಆದರೂ ಇದು ಟ್ವಿಟ್ಟರಿನ ಜನಪ್ರಿಯತೆಯನ್ನು ಕಡಿಮೆ ಮಾಡುತ್ತದೆಯೇ ಎಂಬುದನ್ನು ಕಾಲವೇ ನಿರ್ಧರಿಸಬೇಕು. ಗೂಗ್ಲ್‌ನವರ ವೇವ್ ಎಂಬ ಸೌಕರ್ಯ ವಿಫಲವಾದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 

e- ಪದ

ನರ್ಡ್ (nerd) -ತಾಂತ್ರಿಕವಾಗಿ ಅತಿ ಬುದ್ಧಿವಂತ ಆದರೆ ಸಾಮಾಜಿಕವಾಗಿ ಅವಿವೇಕಿ. ಸಾಮಾನ್ಯವಾಗಿ ಇವರನ್ನು ಕೆದರಿದ ಕೂದಲು, ದಪ್ಪ ಕನ್ನಡಕ, ಸುತ್ತಮುತ್ತ ಗಣಕಗಳನ್ನು ಹರಡಿಕೊಂಡಿರುವಂತೆ ಚಿತ್ರಿಸುತ್ತಾರೆ. ಇವರುಗಳಿಗೆ ತಂತ್ರಜ್ಞಾನವನ್ನುಳಿದು ಇನ್ನಿತರೆ ಯಾವುದೇ ವಿಷಯಗಳಲ್ಲಿ ಆಸಕ್ತಿ ಇರುವುದಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇವರು ಭೇಟಿ ನೀಡುವುದೇ ಇಲ್ಲ ಎನ್ನಬಹುದು.

e - ಸಲಹೆ

ಸೂರಜ್ ಪಾಟೀಲರ ಪ್ರಶ್ನೆ: ನನಗೆ ಎಂಪಿ೩ ಹಾಡುಗಳ ಫೈಲುಗಳಿಂದ ಧ್ವನಿಯನ್ನು ತೆಗೆದು ಕೇವಲ ಸಂಗೀತ ಮಾತ್ರ ಉಳಿಯುವಂತೆ ಮಾಡುವ ತಂತ್ರಾಂಶ ಬೇಕು. ಅಂತರಜಾಲದಲ್ಲಿ ಎಲ್ಲಿ ಹುಡುಕಬೇಕು ನನಗೆ ಗೊತ್ತಾಗಲಿಲ್ಲ. ಅಂತಹ ತಂತ್ರಾಂಶ ಸಿಗುತ್ತದೆಯೇ?
ಉ: ಇಂತಹ ತಂತ್ರಾಂಶಗಳು ಬೆಲೆಗೆ ಮತ್ತು ಕೆಲವು ಉಚಿತವಾಗಿಯೂ ದೊರೆಯುತ್ತವೆ. ಆದರೆ ಯಾವುದೂ ಪರಿಪೂರ್ಣವಾಗಿ ಧ್ವನಿಯನ್ನು ತೆಗೆಯುವುದಿಲ್ಲ. ಹಾಗೆ ತೆಗೆಯುವಾಗ ಸ್ವಲ್ಪ ಮಟ್ಟಿಗೆ ಸಂಗೀತವನ್ನೂ ತೆಗೆಯುತ್ತವೆ. http://bit.ly/a8nF8T ಜಾಲತಾಣದಲ್ಲಿ ಅಂತಹ ಕೆಲವು ಉಚಿತ ತಂತ್ರಾಂಶಗಳನ್ನು ಪಟ್ಟಿ ಮಾಡಿದ್ದಾರೆ. ಅವುಗಳನ್ನು ನೀವು ಬಳಸಿ ನೋಡಬಹುದು.

ಕಂಪ್ಯೂತರ್ಲೆ

ಕೋಲ್ಯ ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಿಂದ ಬಸ್ ಹತ್ತಿದ. ಬಸ್ಸಿನಲ್ಲಿ ಕೆಲವು ತಂತ್ರಜ್ಞರೂ ಇದ್ದರು. ಅವರು ಹೊಸದಾಗಿ ಬಿಡುಗಡೆಯಾಗದ ಗೂಗ್ಲ್ ಬಝ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಕೋಲ್ಯನಿಗೆ ಸರಿಯಾಗಿ ಕೇಳಿಸಿಕೊಳ್ಳಲಾಗಲಿಲ್ಲ. ಆತ ಅದು ಯಾವುದೋ ಹೊಸ ನಮೂನೆಯ ಬಜ್ಜಿ ಇರಬೇಕು ಅಂದುಕೊಂಡ.

ಸೋಮವಾರ, ಫೆಬ್ರವರಿ 8, 2010

ಗಣಕಿಂಡಿ - ೦೩೮ (ಫೆಬ್ರವರಿ ೦೮, ೨೦೧೦)

ಅಂತರಜಾಲಾಡಿ

ಸಹಯೋಗಿ ಕುಮಾರವ್ಯಾಸಭಾರತ

ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಎಂದು ಕುವೆಂಪು ನಾರಣಪ್ಪ ಕವಿಯ ಗದುಗಿನ ಭಾರತವನ್ನು ಹಾಡಿ ಹೊಗಳಿದ್ದಾರೆ. ಮಹಾಭಾರತವು ಭಾರತೀಯರ ರಕ್ತದಲ್ಲಿ ಹರಿಯುತ್ತಿದೆ. ಅಂತೆಯೆ ಕುಮಾರವ್ಯಾಸಭಾರತ ಕನ್ನಡಿಗರಿಗೆ ತುಂಬ ಪ್ರೀತಿಯ ಮಹಾಕಾವ್ಯ. ಒಂದು ಕಾಲದಲ್ಲಿ ಈ ಕಾವ್ಯದ ವಾಚನ ಎಲ್ಲ ಹಳ್ಳಿಗಳಲ್ಲೂ ಜರುಗುತ್ತಿತ್ತು. ಈಗಲೂ ಈ ಕಾವ್ಯದ ಜನಪ್ರಿಯತೆ ಕಡಿಮೆಯಾಗಿಲ್ಲ. ಈ ಮಹಾಕಾವ್ಯವನ್ನು ಎಲ್ಲರಿಗೂ ದೊರೆಯುವಂತೆ ಅಂತರಜಾಲದಲ್ಲಿ ಹಾಕಿದರೆ ಹೇಗೆ? ಒಳ್ಳೆಯ ಆಲೋಚನೆ ಎಂದಿರಾ? ಆದರೆ ಅಷ್ಟು ದೊಡ್ಡ ಮಹಾಕಾವ್ಯವನ್ನು ಬೆರಳಚ್ಚು ಮಾಡಿ ಅಂತರಜಾಲದಲ್ಲಿ ಸೇರಿಸುವುದು ಒಬ್ಬರಿಂದ ಆಗುವ ಕೆಲಸವಲ್ಲ. ಹಲವರು ಸೇರಿ ಕೆಲಸ ಮಾಡಿದರೆ ಇದನ್ನು ಸಾಧಿಸಬಹುದು. ಹೀಗೆ ಮಾಡಲೆಂದೆ ಕೆಲವು ಆಸಕ್ತರು ಸೇರಿ ಒಂದು ಬ್ಲಾಗ್‌ತಾಣ ನಿರ್ಮಿಸಿದ್ದಾರೆ. ಅದರ ವಿಳಾಸ gaduginabharata.blogspot.com. ಇಲ್ಲಿ ಹೆಸರು ನೋಂದಾಯಿಸಿಕೊಂಡು ಈ ಕೆಲಸದಲ್ಲಿ ನೀವೂ ಕೈಜೋಡಿಸಬಹುದು.

ಡೌನ್‌ಲೋಡ್

ಗೂಢಚಾರಿಗಳನ್ನು ನಾಶಮಾಡಿ

ಗಣಕದಲ್ಲಿ ಕೆಲವೊಮ್ಮೆ ಗುಪ್ತವಾಗಿ ಅಡಗಿ ಕುಳಿತಿದ್ದು ನೀವು ಮಾಡುವ ಕೆಲಸಗಳನ್ನೆಲ್ಲ ದಾಖಲಿಸಿ ಯಾವುದೋ ಜಾಲತಾಣಕ್ಕೆ ಗುಪ್ತವಾಗಿ ರವಾನಿಸುವ ಕಿಡಿಗೇಡಿ ತಂತ್ರಾಂಶಗಳಿವೆ. ಇವು ಬಹು ಅಪಾಯಕಾರಿ. ಇವು ನಿಮ್ಮ ಗುಪ್ತಪದಗಳನ್ನು (ಪಾಸ್‌ವರ್ಡ್) ಕದಿಯುತ್ತವೆ. ನಿಮ್ಮ ಇಮೈಲ್‌ಗೆ ಯಾರೋ ಕದ್ದು ನುಸುಳಿ ನೀವೇ ಇಮೈಲ್ ಕಳುಹಿಸಿದ್ದುಎಂಬ ಭಾವನೆ ಬರುವಂತೆ ನಿಮ್ಮ ಸ್ನೇಹಿತರಿಗೆ ಇಮೈಲ್ ಮಾಡಿ ನಾನು ಕಷ್ಟದಲ್ಲಿದ್ದೇನೆ, ನನಗೆ ಹಣ ಕಳುಹಿಸಿ ಎಂಬಿತ್ಯಾದಿಯಾಗಿ ಇಮೈಲ್ ಮಾಡಿರುವುದು ವರದಿಯಾಗಿದೆ. ಇಂತಹ ಗೂಢಚಾರಿ ತಂತ್ರಾಂಶಗಳನ್ನು ಹುಡುಕಿ ನಾಶಮಾಡಲು Spybot - Search & Destroy ಎಂಬ ತಂತ್ರಾಂಶವನ್ನು ಬಳಸಬಹುದು. ಈ ತಂತ್ರಾಂಶ ದೊರೆಯು ಜಾಲತಾಣದ ವಿಳಾಸ http://bit.ly/c51kpP

e - ಸುದ್ದಿ

ಅಂತರಜಾಲ ಕ್ಯಾಮರಾದಿಂದಾಗಿ ಬದುಕುಳಿದ

ಜರ್ಮನಿಯ ಕರಾವಳಿಯಲ್ಲಿ ಹೆಪ್ಪುಗಟ್ಟಿದ ಸಮುದ್ರದ ಮೇಲೆ ನಡೆದಾಡುತ್ತ ಒಬ್ಬಾತ ದಾರಿ ತಪ್ಪಿದ. ಸಂಪೂರ್ಣವಾಗಿ ಹೆಪ್ಪುಗಟ್ಟಿದ ಸಮುದ್ರದ ಮೇಲೆ ಆತ ಸೂರ್ಯಾಸ್ತದ ಚಿತ್ರೀಕರಣ ಮಾಡಲೆಂದು ನಡೆಯುತ್ತ ಸಮುದ್ರದ ಒಳಗೆ ಸುಮಾರು ದೂರ ಹೋಗಿಬಿಟ್ಟದ್ದ. ಆ ನಂತರ ಹಿಂದಕ್ಕೆ ಬರಲು ಆತನಿಗೆ ದಾರಿ ತಿಳಿಯಲಿಲ್ಲ. ಎಲ್ಲ ಕಡೆ ನೋಡಿದರು ಬಿಳಿ ಬಣ್ಣವೇ. ಭೂಮಿ ಯಾವ ಕಡೆಗಿದೆ ಎಂದು ಗೊತ್ತಾಗುತ್ತಿರಲಿಲ್ಲ. ಆತ ತನ್ನ ಕೈಯಲ್ಲಿದ್ದ ಟಾರ್ಚಿನಲ್ಲಿ ಒಂದೇ ಹಾಗೆ ಹೊತ್ತಿಸಿ ನಂದಿಸಿ ಸಂದೇಶ ಕಳುಹಿಸತೊಡಗಿದ. ಆತನ ಸಂದೇಶವನ್ನು ಅಲ್ಲಿ ಯಾರೂ ಗಮನಿಸಲಿಲ್ಲ. ಆದರೆ ನೂರಾರು ಮೈಲುಗಳ ದೂರದಲ್ಲಿ ಅಂತರಜಾಲ ಕ್ಯಾಮರ ಮೂಲಕ ಸೂರ್ಯಾಸ್ತ ವೀಕ್ಷಿಸುತ್ತಿದ್ದಾಕೆಯೊಬ್ಬಳು ಅದನ್ನು ಗಮನಿಸಿದಳು. ಜರ್ಮನಿಯ ಕರಾವಳಿಯ ಸೌಂದರ್ಯವನ್ನು ಸವಿಯಲೆಂದು ಕ್ಯಾಮರಾ ಇಟ್ಟು ಅದನ್ನು ಅಂತರಜಾಲಕ್ಕೆ ಜೋಡಿಸಲಾಗಿತ್ತು. ಆ ಕ್ಯಾಮರಾದಲ್ಲಿ ಈತನ ಸಂದೇಶ ಮೂಡಿ ಬರುತ್ತಿತ್ತು. ಅದನ್ನು ಆಕೆ ಪೋಲೀಸರಿಗೆ ವರದಿ ಮಾಡಿದಳು. ಪೋಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಆತನನ್ನು ಬದುಕಿಸಿದರು.

e- ಪದ

ಗೂಢಚಾರಿ ತಂತ್ರಾಂಶ (spyware) -ಗಣಕದಲ್ಲಿ ಗುಪ್ತವಾಗಿದ್ದುಕೊಂಡು ಮಾಹಿತಿಯನ್ನು ಸಂಗ್ರಹಿಸಿ ಅಂತರಜಾಲದ ಮೂಲಕ ಇನ್ಯಾರಿಗೋ ರವಾನಿಸುವ ಕಿಡಿಗೇಡಿ ತಂತ್ರಾಂಶ. ಇವು ರವಾನಿಸುವ ಮಾಹಿತಿ ಸಾಮಾನ್ಯವಾಗಿ ಇಮೈಲ್, ಅಂತರಜಾಲ ಬ್ಯಾಂಕಿಂಗ್‌ನ ಪಾಸ್‌ವರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಆಗಿರುತ್ತದೆ. ಕೆಲವು ಉಚಿತ ತಂತ್ರಾಂಶಗಳಲ್ಲಿ ಇವು ಗುಪ್ತವಾಗಿ ಸೇರ್ಪಡೆಯಾಗಿರುತ್ತವೆ. ಇನ್ನು ಕೆಲವು ಅಂತರಜಾಲ ತಾಣಗಳಲ್ಲೂ ಇವು ಇರುತ್ತವೆ. ಅಂತಹ ಜಾಲತಾಣಗಳಿಂದ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡುವಾಗ ಇವೂ ಜೊತೆಯಲ್ಲಿ ಬಂದುಬಿಡುತ್ತವೆ. 


e - ಸಲಹೆ

ಪ್ರ: ನನ್ನ ಗಣಕದಲ್ಲಿ ವೈರಸ್‌ಗಳು ತುಂಬಿವೆ. ಹಾರ್ಡ್‌ಡಿಸ್ಕನ್ನು ಫಾರ್ಮಾಟ್ ಮಾಡಿ ವೈರಸ್‌ಗಳನ್ನೆಲ್ಲ ನಾಶ ಮಾಡಿದರೆ ಪುನಃ ವಿಂಡೋಸ್ ಇನ್‌ಸ್ಟಾಲ್ ಮಾಡಲು ವಿಂಡೋಸ್ ಸಿ.ಡಿ./ಡಿ.ವಿ.ಡಿ. ಬೇಕಾಗುತ್ತದೆಯೇ?
ಉ: ಹೌದು. ಬಹುಪಾಲು ಮಂದಿ ವಿಂಡೋಸ್ ಅನ್ನು ಹಣ ಕೊಟ್ಟು ಕೊಂಡುಕೊಂಡಿರುವುದಿಲ್ಲ. ಇದರಿಂದಾಗಿ ಅವರಲ್ಲಿ ಅಸಲಿ ವಿಂಡೋಸ್ ಸಿ.ಡಿ./ಡಿ.ವಿ.ಡಿ. ಇರುವುದಿಲ್ಲ. ಇದರಿಂದಾಗಿ ವಿಂಡೋಸ್ ಅನ್ನು ಅಳಿಸಿ ಮತ್ತೊಮ್ಮೆ ಇನ್‌ಸ್ಟಾಲ್ ಮಾಡಲು ಆಗುವುದಿಲ್ಲ. ಕನಿಷ್ಠ ವಿಂಡೋಸ್ ಹಣ ಕೊಟ್ಟು ಕೊಂಡುಕೊಳ್ಳುವುದೇ ಒಳ್ಳೆಯದು. ಇದರಿಂದಾಗಿ ಆಗಾಗ ಬಿಡುಗಡೆಯಾಗುವ ನವೀಕರಣಗಳನ್ನು ಇನ್‌ಸ್ಟಾಲ್ ಮಾಡಿಕೊಂಡು ನಿಮ್ಮ ಗಣಕವನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು.

ಕಂಪ್ಯೂತರ್ಲೆ

ಭೂಮಿಯ ಮೇಲೆ ಹಸಿರು ಕಡಿಮೆಯಾಗುತ್ತಿದೆ. ಕೃಷಿ ಮಾಡುವುದೂ ಕಡಿಮೆಯಾಗುತ್ತಿದೆ. ಇದು ಹೀಗೆ ಸಾಗಿದರೆ ಒಳ್ಳೆಯದಲ್ಲ. ನಾನೂ ಸ್ವಲ್ಪ ಕೃಷಿ ಮಾಡಲೇ ಬೇಕು ಎಂದು ಕೋಲ್ಯ ನಿರ್ಧರಿಸಿದ. ಕೂಡಲೆ ಆತ ಮಾಡಿದ್ದೇನು ಗೊತ್ತೆ? ಅಂತರಜಾಲಕ್ಕೆ ಸಂಪರ್ಕ ಮಾಡಿ ಫೇಸ್‌ಬುಕ್ ಜಾಲತಾಣವನ್ನು ತೆರೆದು ಅದರಲ್ಲಿ ಫಾರ್ಮ್‌ವಿಲ್ಲೆ ಎಂಬ ಆಟದ ಮೂಲಕ ತೋಟಗಾರಿಕೆ ಸುರು ಮಾಡಿದ.

ಮಂಗಳವಾರ, ಫೆಬ್ರವರಿ 2, 2010

ಗಣಕಿಂಡಿ - ೦೩೭ (ಫೆಬ್ರವರಿ ೦೧, ೨೦೧೦)

ಅಂತರಜಾಲಾಡಿ

ಕೃಷಿ ಮಾರಾಟವಾಹಿನಿ

ಕೃಷಿ ಉತ್ಪನ್ನಗಳ ಅಂದಂದಿನ ಬೆಲೆ ಆಗಿಂದಾಗ ತಿಳಿಯುವಂತಿದ್ದರೆ ಒಳ್ಳೆಯದಲ್ಲವೇ? ಯಾವ ಉತ್ಪನ್ನಕ್ಕೆ ಯಾವ ದಿನ ಎಷ್ಟು ಬೆಲೆ ಇದೆ ಎಂದು ಅರಿತು ಯಾವುದನ್ನು ಯಾವಾಗ ಮಾರಬಹುದು ಎಂದು ನಿರ್ಧರಿಸಬಹುದು. ಹಾಗೆಯೇ ತಮಗೆ ಸಮೀಪದ ಮಾರುಕಟ್ಟೆ ಯಾವುದು, ಅದು ಎಲ್ಲಿದೆ, ಅದರ ವಿಳಾಸ, ದೂರವಾಣಿ ಸಂಖ್ಯೆ ಎಲ್ಲ ತಿಳಿಯಬೇಕಲ್ಲವೇ? ಹೌದು. ಈ ಎಲ್ಲ ಸೌಕರ್ಯಗಳನ್ನು ಒಳಗೊಂಡ ಕೃಷಿ ಮಾರಾಟವಾಹಿನಿ ಜಾಲತಾಣದ ವಿಳಾಸ krishimaratavahini.kar.nic.in. ಈ ಜಾಲತಾಣ ಕನ್ನಡ (ಯುನಿಕೋಡ್) ಮತ್ತು ಇಂಗ್ಲಿಶ್ ಭಾಷೆಗಳಲ್ಲಿದೆ.

ಡೌನ್‌ಲೋಡ್

ಗೂಗ್ಲ್‌ನಿಂದಲೂ ಕನ್ನಡದ ಕೀಲಿಮಣೆ

ಕನ್ನಡದ ಕೀಲಿಮಣೆ ತಂತ್ರಾಂಶಗಳು ಹಲವಾರಿವೆ. ಹೆಚ್ಚಿನವು ಉಚಿತವಾಗಿವೆ. ಈ ಪಟ್ಟಿಗೆ ಹೊಸ ಸೇರ್ಪಡೆ ಗೂಗ್ಲ್. ಜಾಲತಾಣದ ಮೂಲಕ ಕನ್ನಡವನ್ನು ಬೆರಳಚ್ಚು ಮಾಡುವ ಸವಲತ್ತನ್ನು ಅವರು ಹಿಂದೆಯೇ ನೀಡಿದ್ದರು. ಈಗ ಡೌನ್‌ಲೋಡ್ ಮಾಡಬಲ್ಲ ಕೀಲಿಮಣೆ ತಂತ್ರಾಂಶವನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದು ಬೇಕಿದ್ದಲ್ಲಿ ನೀವು ಭೇಟಿ ಮಾಡಬೇಕಾಗಿರುವ ಜಾಲತಾಣದ ವಿಳಾಸ http://bit.ly/alaAAw. ಇದು 32 ಬಿಟ್ ಆವೃತ್ತಿಯ ವಿಂಡೋಸ್ ಕಾರ್ಯಾಚರಣೆಯ ವ್ಯವಸ್ಥೆಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ.

e - ಸುದ್ದಿ

ಐಪ್ಯಾಡ್ = ಐಫೇಲ್

ಆಪಲ್ ಕಂಪೆನಿಯವರು ಹೊಸ ಟ್ಯಾಬ್ಲೆಟ್ ಕಂಪ್ಯೂಟರ್ ತಯಾರಿಸುತ್ತಿದ್ದಾರೆ, ಅದನ್ನು ಜನವರಿ ತಿಂಗಳಲ್ಲಿ ಬಿಡುಗಡೆ ಮಾಡುವವರಿದ್ದಾರೆ, ಅದರ ಗುಣವಿಶೇಷಗಳು ಏನೇನು ಇರಬಹುದು ಎಂಬಿತ್ಯಾದಿ  ಚರ್ಚೆಗಳು ಅಂತರಜಾಲದಲ್ಲಿ ಹಲವಾರು ತಿಂಗಳುಗಳಿಂದ ನಡೆದೇ ಇತ್ತು. ಕೊನೆಗೂ ಆಪಲ್ ಕಂಪೆನಿ ಅದನ್ನು ಐಪ್ಯಾಡ್ ಹೆಸರಿನಿಂದ ಬಿಡುಗಡೆ ಮಾಡಿತು. ಅದರಲ್ಲಿ ಇರುವ ಸವಲತ್ತುಗಳಿಗಿಂತ ಇಲ್ಲದ ಸವಲತ್ತುಗಳ ಬಗ್ಗೆಯೇ ಹೆಚ್ಚಿನ ಚರ್ಚೆಗಳು ಅಂತರಜಾಲ ತುಂಬ ಜರುಗುತ್ತಿವೆ. ಅದರಲ್ಲಿ ಇಲ್ಲದಿರುವವು -ಯುಎಸ್‌ಬಿ ಕಿಂಡಿ, ಕ್ಯಾಮೆರಾ, ಸಿ.ಡಿ./ಡಿ.ವಿ.ಡಿ ಡ್ರೈವ್, ಹಲವು ತಂತ್ರಾಂಶಗಳನ್ನು ಏಕಕಾಲದಲ್ಲಿ ಚಲಾಯಿಸುವ ಸೌಕರ್ಯ, ಕೀಲಿಮಣೆ, ಇತ್ಯಾದಿ. ಜಾಲಿಗರು ಅದನ್ನು ಐಫೇಲ್ (iPad=iFail) ಎಂದು ತೀರ್ಪು ನೀಡಿದ್ದಾರೆ. ಪರ್ವತಪ್ರಸವ ಎನ್ನೋಣವೇ? 

e- ಪದ

ಬ್ಲೂ ರೇ (blue ray) ಡಿಸ್ಕ್ - ಅತಿ ಹೆಚ್ಚಿನ ಸಾಂದ್ರತೆಯಲ್ಲಿ ಮಾಹಿತಿಯನ್ನು ಸಂಗ್ರಹಿಸಿಡುವ ಸಿ.ಡಿ./ಡಿ.ವಿ.ಡಿ. ಮಾದರಿಯ ಮಾಹಿತಿ ಸಂಗ್ರಹ ತಟ್ಟೆ. ಒಂದು ಪದರದ ತಟ್ಟೆಗಳಲ್ಲಿ 25 ಜಿಬಿ ಮತ್ತು ಎರಡು ಪದರದವುಗಳಲ್ಲಿ ಸುಮಾರು 50 ಜಿಬಿ ಮಾಹಿತಿಯನ್ನು ಸಂಗ್ರಹಿಸಿಡಬಹುದು. ಒಂದು ಸಾಮಾನ್ಯ ಚಲನಚಿತ್ರ ಸುಮಾರು 1 ಜಿಬಿಯಷ್ಟಿರುತ್ತದೆ ಎಂದರೆ ಈ ಮಾಹಿತಿ ತಟ್ಟೆಗಳ ಸಂಗ್ರಹ ಸಾಮರ್ಥ್ಯ ಅರಿವಾಗಬಹುದು. ಈ ತಟ್ಟೆಗಳು ಸಿ.ಡಿ., ಡಿ.ವಿ.ಡಿ.ಗಳ ಗಾತ್ರದಷ್ಟೇ ಇರುತ್ತವೆ. ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಹೈಡೆಫಿನಿಶನ್ ವೀಡಿಯೋ ಚಲನ ಚಿತ್ರಗಳನ್ನು ಸಂಗ್ರಹಿಸಿಡಲು ಈ ಮಾದರಿಯ ತಟ್ಟೆಗಳೇ ಬೇಕಾಗಿವೆ. ಈ ತಟ್ಟೆಗಳನ್ನು ಚಲಾಯಿಸಬಲ್ಲ ಪ್ಲೇಯರ್‌ಗಳೂ ಮಾರುಕಟ್ಟೆಗೆ ಬರತೊಡಗಿವೆ.  


e - ಸಲಹೆ

ಶಣ್ಮುಖ ಕುಮಾರ್ ಅವರ ಪ್ರಸ್ನೆ: ನನ್ನ ಸಹೋದರ ವಿಂಡೋಸ್ ಎಕ್ಸ್‌ಪಿಯ ಪಾಸ್‌ವರ್ಡ್ ಬದಲಿಸಿ ಈಗ ಅದನ್ನು ಮರೆತು ಬಿಟ್ಟಿದ್ದಾನೆ. ಈಗ ನಾನು ನನ್ನ ಗಣಕವನ್ನು ಬಳಸುವುದು ಹೇಗೆ?
ಉ: ನಿಮ್ಮ ಗಣಕದಲ್ಲಿ ವಿಂಡೋಸ್ ಅನ್ನು ನೀವು ಇನ್‌ಸ್ಟಾಲ್ ಮಾಡುವಾಗ ಅದರಲ್ಲಿ ಸೃಷ್ಟಿ ಆಗುವ ಮೇಲಧಿಕಾರಿ ಖಾತೆಗೆ (Administrator account) ನೀವು ಯಾವುದೇ ಪ್ರವೇಶಪದ (ಪಾಸ್‌ವರ್ಡ್) ನೀಡಿಲ್ಲ ಎಂದಾದಲ್ಲಿ ಈ ವಿಧಾನ ಬಳಸಬಹುದು: ಗಣಕವನ್ನು ರಿಬೂಟ್ ಮಾಡಿ. ಅದು ಬೂಟ್ ಆಗುತ್ತಿದ್ದಂತೆ, ವಿಂಡೋಸ್ ಪ್ರಾರಂಭವಾಗುವ ಮೊದಲು F8 ಕೀಲಿಯನ್ನು ಒತ್ತಿ Safe mode ಅನ್ನು ಆಯ್ಕೆ ಮಾಡಿ. ಹಲವು ಪುಟಗಳ ನಂತರ ಬರುವ ಸ್ವಾಗತ ಪುಟದಲ್ಲಿ Administrator ಎಂದು ಆಯ್ಕೆ ಮಾಡಿ. ನಂತರ Control panel ನಲ್ಲಿರುವ User Settings ಸವಲತ್ತನ್ನು ಬಳಸುವ ಮೂಲಕ ನಿಮಗೆ ಬೇಕಾದ ಖಾತೆಯ ಪಾಸ್‌ವರ್ಡ್ ಬದಲಾಯಿಸಿ ರಿಬೂಟ್ ಮಾಡಿ.

ಕಂಪ್ಯೂತರ್ಲೆ

ಆಪಲ್ ಕಂಪೆನಿಯ ಉತ್ಪನ್ನಗಳು i ಅಕ್ಷರದಿಂದ ಪ್ರಾರಂಭವಾಗುತ್ತವೆ. ಉದಾ -iMac, iPod, iPhone ಮತ್ತು ಈಗಿನ ಸೇರ್ಪಡೆ iPad. ಆಪಲ್ ಕಂಪೆನಿಯ ಉತ್ಪನ್ನಗಳಿಗೆ ಅಂಟಿಕೊಂಡ ಅಮೇರಿಕಾ ದೇಶದ ಬಾಲಕನೊಬ್ಬ ಇರಾನ್ (iRan) ಮತ್ತು ಇರಾಕ್ (iRaq) ಕೂಡ ಆಪಲ್ ಕಂಪೆನಿಯ ಉತ್ಪನ್ನ ಎಂದೇ ಭಾವಿಸಿದ್ದು ವರದಿಯಾಗಿದೆ. ಭಾರತ (iNdia) ಏಕೋ ಆತನ ನೆನಪಿಗೆ ಬಂದಂತಿಲ್ಲ.