ಮಂಗಳವಾರ, ಮಾರ್ಚ್ 30, 2010

ಗಣಕಿಂಡಿ - ೦೪೫ (ಮಾರ್ಚ್ ೨೯, ೨೦೧೦)

ಅಂತರಜಾಲಾಡಿ

ಎಪ್ರಿಲ್ ಫೂಲ್

ಎಪ್ರಿಲ್ ೧ರಂದು ಜನರನ್ನು ಎಪ್ರಿಲ್ ಫೂಲ್ ಮಾಡುವ ಹವ್ಯಾಸ ಈಗ, ಇತರೆ ವಿದೇಶೀ ಗೀಳುಗಳಂತೆ, ನಮ್ಮಲ್ಲಿಗೂ ಬಂದು ಬಿಟ್ಟಿದೆ. ಹಲವಾರು ನಮೂನೆಗಳಲ್ಲಿ ಸ್ನೇಹಿತರನ್ನು, ಬಂಧುಗಳನ್ನು, ಸಹೋದ್ಯೋಗಿಗಳನ್ನು ಮೂರ್ಖರನ್ನಾಗಿಸಬೇಕೆ? ಮೂರ್ಖರನ್ನಾಗಿಸಲು ಹಲವಾರು ಉಪಾಯಗಳು ಬೇಕೇ? ಹಾಗಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ aprilfoolzone.com. ಈ ಜಾಲತಾಣದಲ್ಲಿ ಬೇರೆ ಬೇರೆ ವಿಧಾನಗಳಲ್ಲಿ ಜನರನ್ನು ಹೇಗೆ ಬೇಸ್ತು ಬೀಳಿಸಬಹುದು ಎಂದು ವಿವರಿಸಿದ್ದಾರೆ. ಉದಾಹರಣೆಗೆ ನಿಮ್ಮ ಸ್ನೇಹಿತರ ಗಣಕದಲ್ಲಿ ಮೌಸ್‌ನ ಎಡ ಮತ್ತು ಬಲ ಗುಂಡಿಗಳ ಕಾರ್ಯಗಳನ್ನು ಬದಲಿಸಿಬಿಡಿ. ಆತ ಎಡ ಗುಂಡಿ ಒತ್ತಿದಾಗ ಅದು ಬಲಗುಂಡಿ ಒತ್ತಿದಂತೆ ನಡೆದುಕೊಳ್ಳುತ್ತದೆ.

ಡೌನ್‌ಲೋಡ್

ಕೀಟಲೆ ತಂತ್ರಾಂಶ

ಎಪ್ರಿಲ್ ಫೂಲ್ ಮಾಡಲು ಉಪಾಯಗಳು ಏನೋ ಸಿಕ್ಕವು. ಆದರೆ ಕೀಟಲೆ ತಂತ್ರಾಂಶಗಳು ಬೇಕೆನಿಸುತ್ತಿವೆಯೇ? ಹೌದಾದಾರೆ ನೀವು ಭೇಟಿ ನೀಡಬೇಕಾದ ಜಾಲತಾಣ rjlpranks.com/pranks. ಇಲ್ಲಿ ಸುಮಾರು ೪೦ಕ್ಕೂ ಮೀರಿ ಕೀಟಲೆ ತಂತ್ರಾಂಶಗಳು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿವೆ. ಉದಾಹರಣೆಗೆ Add/Remove ಎನ್ನುವ ತಂತ್ರಾಂಶ. ಇದನ್ನು ನಿಮ್ಮ ಸ್ನೇಹಿತನ ಗಣಕದಲ್ಲಿ ಬಳಸಿ ನೋಡಿ. ಆತನ ಗಣಕದಲ್ಲಿ ಇರುವ ಎಲ್ಲ ತಂತ್ರಾಂಶಗಳ ಪಟ್ಟಿ ನೀಡಿ ಇವುಗಳನ್ನೆಲ್ಲ ನಾನು ತೆಗೆದು ಹಾಕುತ್ತಿದ್ದೇನೆ ಎಂಬ ಸಂದೇಶ ನೀಡುತ್ತದೆ. ನಂತರ ಎಲ್ಲವನ್ನೂ ಒಂದೊಂದಾಗಿ ಅಳಿಸಿಹಾಕಿದ್ದೇನೆ ಎಂಬ ಪಟ್ಟಿ ನೀಡುತ್ತದೆ. ಕೊನೆಗೆ ಗಾಭರಿಯಾಗಬೇಡಿ, ಯಾವುದನ್ನೂ ಅಳಿಸಿಲ್ಲ ಎಂದು ಸಂದೇಶ ನೀಡುತ್ತದೆ. ಇದೇ ರೀತಿ ಬೇಸ್ತು ಬೀಳಿಸುವ ಹಲವು ತಂತ್ರಾಂಶಗಳು ಇಲ್ಲಿ ಲಭ್ಯ.

e - ಸುದ್ದಿ

ಕೆಲಸ ಕಳೆದುಕೊಂಡ ತಂತ್ರಜ್ಞ...

ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದಲ್ಲೊಮ್ಮೆ ನೂರಾರು ಕಾರುಗಳು ಇದ್ದಕ್ಕಿದ್ದಂತೆ ಸ್ತಬ್ಧವಾದವು. ಇನ್ನು ಕೆಲವು ಇದ್ದಕ್ಕಿದ್ದಂತೆ ಹಾರ್ನ್ ಬಾರಿಸತೊಡಗಿದವು. ಈ ಎಲ್ಲ ಕಾರುಗಳಲ್ಲಿ ಒಂದು ಗ್ಯಾಜೆಟ್ ಅಳವಡಿಸಲಾಗಿತ್ತು. ಅದರ ಕರ್ತವ್ಯವೇನೆಂದರೆ ಕಾರು ಕೊಂಡಾತ ಬ್ಯಾಂಕಿನ ಸಾಲದ ಕಂತು ಕಟ್ಟದಿದ್ದಲ್ಲಿ ಅದು ಕಾರಿನ ಹಾರ್ನ್ ಕಿರಿಚುವಂತೆ ಮಾಡಬಲ್ಲುದು ಹಾಗೂ ಕಾರನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಬಲ್ಲುದು. ಇದು ಕಾರು ಕೊಂಡಾತನಿಗೆ ಕಂತು ಕಟ್ಟಲು ಎಚ್ಚರಿಕೆ ನೀಡಲು ಕಾರು ತಯಾರಕರು ಮತ್ತು ಬ್ಯಾಂಕಿನವರು ಸೇರಿ ರೂಪಿಸಿದ ತಂತ್ರ. ಈ ಗ್ಯಾಜೆಟ್ ಅನ್ನು ಅಂತರಜಾಲದ ಮೂಲಕ ಚಾಲನೆಗೊಳಿಸಬಹುದಿತ್ತು. ಈ ಸಂದರ್ಭದಲ್ಲಿ ಆದುದೇ ಬೇರೆ. ಕಾರು ಕಂಪೆನಿಯಲ್ಲಿ ಕೆಲಸದಲ್ಲಿದ್ದ ತಂತ್ರಜ್ಞನೊಬ್ಬ ಕೆಲಸ ಕಳೆದುಕೊಂಡಿದ್ದ. ಕೆಲಸದಿಂದ ತೆಗೆದುಹಾಕಿದ್ದಕ್ಕಾಗಿ ಕಂಪೆನಿ ಮೇಲೆ ಸೇಡು ತೀರಿಸಿಕೊಳ್ಳಲು ಆತ ಅನುಸರಿಸಿದ ಉಪಾಯವಿದು. ಕಂಪೆನಿ ಬಿಡುವ ಮೊದಲು ಗ್ರಾಹಕರ ಕಾರುಗಳ ಮತ್ತು ಅವುಗಳಲ್ಲಿ ಅಳವಡಿಸಿದ್ದ ಗ್ಯಾಜೆಟ್‌ಗಳ ವಿವರಗಳನ್ನು ಆತ ಕೊಂಡೊಯ್ದಿದ್ದ. ಮನೆಯಲ್ಲಿ ಕುಳಿತುಕೊಂಡು ತನಗಿಷ್ಟಬಂದಂತೆ ಕಾರುಗಳನ್ನು ನಿಷ್ಕ್ರಿಯ ಮಾಡುತ್ತ ಹೋದ. ಕೊನೆಗೆ ಪೋಲೀಸರ ಅತಿಥಿಯಾದ.


e- ಪದ

ಬಗ್ (bug) - ಗಣಕ ಕ್ರಮವಿಧಿ (programming language) ತಯಾರಿಕೆಯಲ್ಲಿ, ತಂತ್ರಾಂಶದಲ್ಲಿ ಅಥವಾ ಯಂತ್ರಾಂಶದಲ್ಲಿ ನುಸುಳಿದ ದೋಷ. ಉದಾಹರಣೆಗೆ ನಿಮಗೆ ಟೆಲಿಫೋನ್ ಇಲಾಖೆಯಿಂದ “ನಿಮ್ಮ ಬಾಕಿ ೦ (ಸೊನ್ನೆ) ರೂ.ಗಳನ್ನು ಕೂಡಲೆ ಪಾವತಿಸತಕ್ಕದ್ದು” ಎಂದು ಎಚ್ಚರಿಕೆಯ ಪತ್ರ ಗಣಕದ ಮೂಲಕ ಬಂದಿದೆ ಎಂದಿಟ್ಟುಕೊಳ್ಳೋಣ. ಇಲ್ಲಿ ಏನಾಗಿದೆಯೆಂದರೆ ಗಣಕ ಕ್ರಮವಿಧಿ ತಯಾರಿಸಿದವರು ಬಾಕಿ ಸೊನ್ನೆ ಇದ್ದಾಗ ಪತ್ರ ಕಳುಹಿಸತಕ್ಕದ್ದಲ್ಲ ಎಂದ ಒಂದು ನಿಯಮವನ್ನು ಕ್ರಮವಿಧಿಯಲ್ಲಿ ಸೇರಿಸಲು ಮರೆತಿದ್ದು. ಇದು ತಂತ್ರಾಂಶದ ಬಗ್. ೧೯೪೫ನೆಯ ಇಸವಿಯಲ್ಲಿಅಸ್ತಿತ್ವದಲ್ಲಿದ್ದ ಮಾರ್ಕ್-II ಎಂಬ ಹೆಸರಿನ ಗಣಕದಲ್ಲಿ ವಿದ್ಯುತ್ ರಿಲೇ ಸ್ವಿಚ್ ಒಂದರಲ್ಲಿ ನಿಜವಾದ ತಗಣೆಯೊಂದು ಸಿಕ್ಕಿಹಾಕಿಕೊಂಡು ಅದು ಕೆಲಸ ನಿಲ್ಲಿಸಿತ್ತು, ಆದುದರಿಂದ ಎಲ್ಲ ಗಣಕ ದೋಷಗಳಿಗೆ ಬಗ್ ಎಂಬ ಹೆಸರು ಬಂತು ಎಂದು ಐತಿಹ್ಯವಿದೆ.

e - ಸಲಹೆ

ರೋಹಿತ್ ಸಿಂಗ್ ಅವರ ಪ್ರಶ್ನೆ: ನಾನು ಅವಸ್ತ್ ವೈರಸ್ ನಿರೋಧಕ ತಂತ್ರಾಂಶ ಬಳಸುತ್ತಿದ್ದೇನೆ. ನನ್ನ ಗಣಕ ತುಂಬ ನಿಧಾನವಾಗಿದೆ. ಅವಸ್ತ್ ಗಣಕವನ್ನು ನಿಧಾನಗೊಳಿಸುತ್ತದೆ ಎಂದು ಕೆಲವರು ಹೇಳುತ್ತಾರೆ. ಹೌದೇ? ಅದರ ಬದಲಿಗೆ ಬೆರೆ ಯಾವ ಉಚಿತ ವೈರಸ್ ನಿರೋಧಕ ತಂತ್ರಾಂಶ ಬಳಸಬಹುದು?
ಉ: ಹೌದು. ಅವಸ್ತ್ ಗಣಕವನ್ನು ನಿಧಾನಗೊಳಿಸುತ್ತದೆ. ಅದರ ಬದಲಿಗೆ ನೀವು ಮೈಕ್ರೋಸಾಫ್ಟ್‌ನವರ ಉಚಿತ ತಂತ್ರಾಂಶ ಬಳಸಬಹುದು. ಅದು ದೊರೆಯುವ ಜಾಲತಾಣ - microsoft.com/security_essentials
   
ಕಂಪ್ಯೂತರ್ಲೆ

ಕೋಲ್ಯ ಗಣಕ ತರಬೇತಿ ಸಂಸ್ಥೆಗೆ ವಿದ್ಯಾರ್ಥಿಯಾಗಿ ಸೇರಿದ. ಒಂದು ಪೀರಿಯಡ್ ಖಾಲಿ ಇದ್ದಾಗ ಏನಾದರೊಂದು ತರಲೆ ಮಾಡಬೇಕೆಂದು ಹೊರಟ. ಎರಡು ಗಣಕಗಳು ಪಕ್ಕ ಪಕ್ಕದಲ್ಲಿದ್ದವು. ಆತ ಒಂದರ ಕೀಬೋರ್ಡನ್ನು ಇನ್ನೊಂದು ಗಣಕಕ್ಕೆ ಜೋಡಿಸಿಟ್ಟ. ತರಬೇತಿದಾರರು ಬಂದು ಹೇಳಿಕೊಡಲು ಹೊರಟಾಗ, ಕೀಲಿಮಣೆಯಲ್ಲಿ ಕುಟ್ಟಿದ್ದು ಯಾವುದೂ ಪರದೆ ಮೇಲೆ ಬರುತ್ತಿರಲಿಲ್ಲ.

ಸೋಮವಾರ, ಮಾರ್ಚ್ 22, 2010

ಗಣಕಿಂಡಿ - ೦೪೪ (ಮಾರ್ಚ್ ೨೨, ೨೦೧೦)

ಅಂತರಜಾಲಾಡಿ

ಸುಲಭದಲ್ಲಿ ವಿಜ್ಞಾನ ಆಟಿಕೆಗಳು

ವಿಜ್ಞಾನ ಶಿಕ್ಷಕರುಗಳಿಗೆ ಒಂದು ದೊಡ್ಡ ಸಮಸ್ಯೆಯೆಂದರೆ ವಿಜ್ಞಾನವನ್ನು ಕಲಿಸಲು ಬಳಸುವ ವೈಜ್ಞಾನಿಕ ಮಾದರಿಗಳ ಕೊರತೆ. ಇಡಿಯ ಕರ್ನಾಟಕ ರಾಜ್ಯಕ್ಕೆ ಒಂದು ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯ ಬೆಂಗಳೂರಿನಲ್ಲಿದೆ. ಪ್ರತಿಯೊಂದು ಶಾಲೆಯಿಂದ ಮಕ್ಕಳನ್ನು ಅಲ್ಲಿ ತನಕ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ವಿಜ್ಞಾನ ಕಲಿಸಲು ಸಹಾಯಕಾರಿಯಾಗುವ ಎಲ್ಲ ಮಾದರಿಗಳನ್ನು ಎಲ್ಲ ಶಾಲೆಗಳಲ್ಲಿ ಕೊಂಡುಕೊಳ್ಳಲೂ ಸಾಧ್ಯವಿಲ್ಲ. ಕೆಲವು ಮಾದರಿಗಳನ್ನು ಶಿಕ್ಷಕರೇ ತಮಗೆ ಲಭ್ಯವಿರುವ ವಸ್ತುಗಳಿಂದಲೇ ತಯಾರಿಸಬಹುದು. ಆದರೆ ಹೇಗೆ? ಅಂತಹ ಹಲವು ಮಾದರಿಗಳನ್ನು ಮತ್ತು ಆಟಿಕೆಗಳನ್ನು ತಯಾರಿಸಲು ವಿವರಣೆ ನೀಡುವ ಜಾಲತಾಣ www.arvindguptatoys.com. ಈ ಜಾಲತಾಣದಲ್ಲಿ ಹಲವು ಉಪಯುಕ್ತ ವಿ-ಪುಸ್ತಕಗಳು ಮತ್ತು ವೀಡಿಯೋಗಳು ಕೂಡ ಇವೆ. ಎಲ್ಲ ವಿಜ್ಞಾನ ಶಿಕ್ಷಕರುಗಳಿಗೂ ವಿದ್ಯಾರ್ಥಿಗಳಿಗೂ ತುಂಬ ಉಪಯುಕ್ತ ಜಾಲತಾಣ ಇದು.

ಡೌನ್‌ಲೋಡ್

ಮರೆತ ಗುಪ್ತಪದ ಹಿಂಪಡೆಯಿರಿ

ಕೆಲವೊಮ್ಮೆ ಹೀಗಾಗುತ್ತದೆ -ಯಾವುದೋ ತಂತ್ರಾಂಶದಲ್ಲಿ ಗುಪ್ತಪದ (ಪಾಸ್‌ವರ್ಡ್) ದಾಖಲಿಸಿರುತ್ತೀರಿ. ಅದನ್ನು ವರ್ಷಗಳಿಂದ ಬಳಸಿರುತ್ತೀರಿ. ಉದಾಹರಣೆಗೆ ಔಟ್‌ಲುಕ್‌ನಲ್ಲಿ ದಾಖಲಿಸಿದ ನಿಮ್ಮ ಇಮೈಲ್ ಪಾಸ್‌ವರ್ಡ್. ಆದರೆ ಅದರೆ ಅದರಲ್ಲಿ ದಾಖಲಿಸಿದ ಗುಪ್ತ ಪದ ಮರೆತು ಹೋಗಿರುತ್ತದೆ. ಬೇರೆ ಗಣಕದಲ್ಲಿ ಕೆಲಸ ಮಾಡಬೇಕಾಗಿ ಬಂದಾಗ ಆ ಗುಪ್ತಪದವನ್ನು ದಾಖಲಿಸಬೇಕಾಗಿ ಬರುತ್ತದೆ. ಆಗ ಏನು ಮಾಡುವುದು. ಆ ತಂತ್ರಾಂಶವನ್ನು ತೆರೆದರೆ ಅಲ್ಲಿ ಪಾಸ್‌ವರ್ಡ್ ಎಂಬಲ್ಲಿ ಕೆಲವು ನಕ್ಷತ್ರಗಳನ್ನು ತೋರಿಸುತ್ತದೆ. ಈ ನಕ್ಷತ್ರಗಳನ್ನು ನಿಜವಾದ ಅಕ್ಷರಗಳಿಗೆ ಬದಲಾಯಿಸಲು ಒಂದು ತಂತ್ರಾಂಶ ಲಭ್ಯವಿದೆ. ಅದುವೇ Asterisk Logger.  ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನಿಡಬೇಕಾದ ಜಾಲತಾಣ http://bit.ly/cgRc6c

e - ಸುದ್ದಿ

ಫೋಟೋ ಮೂಲಕ ಚೆಕ್ ಹಾಕಿರಿ


ಬ್ಯಾಂಕಿಗೆ ಚೆಕ್ ಹಾಕಬೇಕಾದರೆ ಬ್ಯಾಂಕ್ ತನಕ ಹೋಗಿ ಅಲ್ಲಿ ಸಾಲು ನಿಂತು ಚೆಕ್ ಹಾಕಬೇಕಾದ ಕಾಲ ಕಳೆದು ಹೋಗಿದೆ. ಈಗ ಎಟಿಎಂಗಳಲ್ಲೂ ಚೆಕ್ ಹಾಕುವ ಸೌಲಭ್ಯವನ್ನು ಬಹುಪಾಲು ಬ್ಯಾಂಕುಗಳು ನೀಡುತ್ತಿವೆ. ಅಲ್ಲಿ ತನಕವೂ ಹೋಗಲು ನಿಮಗೆ ವ್ಯವಧಾನವಿಲ್ಲದಿದ್ದರೆ? ಹಾಗೆ ಚೆಕ್ ಹಾಕಿದರೂ ಅದು ನಗದಾಗಿ ಬರಲು ಕನಿಷ್ಠ ಮೂರು ದಿನಗಳು ಬೇಕು. ಕೂಡಲೇ ಹಣ ಸಿಗುವಂತಿದ್ದರೆ? ಚೆಕ್‌ನ ಫೋಟೋವನ್ನು ತೆಗೆದು ಅದನ್ನೇ ಬ್ಯಾಂಕಿಗೆ ಇಮೈಲ್ ಅಥವಾ ಎಸ್‌ಎಂಎಸ್ ಮೂಲಕ ಕಳುಹಿಸುವಂತಿದ್ದರೆ? ಏನಿದು ತಮಾಷೆ ಅನ್ನುತ್ತಿದ್ದೀರಾ? ಖಂಡಿತ ಅಲ್ಲ. ಇಂತಹ ತಂತ್ರಾಂಶವನ್ನು ಅಮೇರಿಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇನ್ನು ಮುಂದೆ ನಿಮಗೆ ಯಾರಾದರು ಚೆಕ್ ನೀಡಿದರೆ ನಿಮ್ಮ ಮೊಬೈಲ್ ಫೋನಿನಲ್ಲಿ ಅದರ ಫೋಟೋ ತೆಗೆದು ಅದನ್ನು ಇಮೈಲ್ ಮೂಲಕ ಬ್ಯಾಂಕಿಗೆ ಕಳುಹಿದರೆ ಆಯಿತು. ಗಣಕವು ಚೆಕ್ ಅನ್ನು ಓದಿ ಅದರಲ್ಲಿರುವ ಸಹಿಯನ್ನು ತನ್ನಲ್ಲಿರುವ ದಾಖಲೆಯೊಂದಿಗೆ ಹೋಲಿಸಿ ನೋಡಿ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸುತ್ತದೆ. ಎಲ್ಲ ಕಾರ್ಯ ಕ್ಷಣಮಾತ್ರದಲ್ಲಿ ನಡೆಯುತ್ತದೆ. ನಂತರ ನಿಧಾನವಾಗಿ ನಿಜವಾದ ಚೆಕ್ ಅನ್ನು ಅಂಚೆ ಮೂಲಕ ಕಳುಹಿಸತಕ್ಕದ್ದು.

e- ಪದ

ಅಂತರಜಾಲ ಮೂಲಕ ಕಂಪ್ಯೂಟಿಂಗ್

ಕ್ಲೌಡ್ ಕಂಪ್ಯೂಟಿಂಗ್ (cloud computing) - ಅಂತರಜಾಲ ಮೂಲಕ ಗಣಕ ಬಳಸಿ ಮಾಡುವ ಎಲ್ಲ ಕೆಲಸಗಳು, ಮುಖ್ಯವಾಗಿ ಡಾಟಾಬೇಸ್ ಆಧಾರಿತ ಲೆಕ್ಕಾಚಾರಗಳು. ಸಾಮಾನ್ಯವಾಗಿ ದೊಡ್ಡ ಮಟ್ಟ ಗಣಕ ಬಳಸಿ ಮಾಡುವ ಲೆಕ್ಕಾಚಾರಗಳು (ಕಂಪ್ಯೂಟಿಂಗ್) ಗಣಕ ಜಾಲಗಳನ್ನು ಬಳಸಿ ಒಂದು ಸ್ಥಳದಲ್ಲೇ ಇರುವ ಗಣಕಗಳನ್ನು ಬಳಸುತ್ತವೆ. ಕ್ಲೌಡ್ ಎಂಬುದು ಅಂತರಜಾಲಕ್ಕೆ ಇನ್ನೊಂದು ಹೆಸರು. ಕ್ಲೌಡ್ ಕಂಪ್ಯುಟಿಂಗ್‌ನಲ್ಲಿ ಹಲವಾರು ಗಣಕಗಳು, ಸರ್ವರ್‌ಗಳು ಎಲ್ಲ ಪ್ರಪಂಚಾದ್ಯಂತ ಚೆದುರಿ ಹೋಗಿರುತ್ತವೆ. ಒಂದು ತಂತ್ರಾಂಶ ಅಮೇರಿಕದಲ್ಲಿದ್ದರೆ ಇನ್ನೊಂದು ಭಾರತದಲ್ಲಿರಬಹುದು. ಅಲ್ಲಲ್ಲಿನ ಸಂಪನ್ಮೂಲಗಳನ್ನು ಅಲ್ಲಲ್ಲೇ ಬಳಸಿ ಮಾಡುವ ಲೆಕ್ಕಾಚಾರಗಳಲ್ಲಿ ಇವುಗಳ ಬಳಕೆ ಜಾಸ್ತಿ.

e - ಸಲಹೆ

ಮೈಸೂರಿನ ಪ್ರಭಾಕರ ಅವರ ಪ್ರಶ್ನೆ: ನನಗೆ ಉಚಿತ ಒಸಿಆರ್ ತಂತ್ರಾಂಶ ಬೇಕು. ಎಲ್ಲಿ ಸಿಗುತ್ತದೆ?
ಉ: ಉಚಿತ ಒಸಿಆರ್ ತಂತ್ರಾಂಶ ವಾಣಿಜ್ಯಕ ತಂತ್ರಾಂಶಗಳಷ್ಟು ನಿಖರವಾಗಿರುವ ಸಾಧ್ಯತೆ ಕಡಿಮೆ. ನೀವು MoreDataFast ಎಂಬ ತಂತ್ರಾಂಶವನ್ನು http://bit.ly/bk5Ycz ಜಾಲತಾಣದಿಂದ ಡೌನ್‌ಲೋಡ್ ಮಾಡಿ ಬಳಸಿ ನೋಡಬಹುದು.
   
ಕಂಪ್ಯೂತರ್ಲೆ

ಕೋಲ್ಯ ತನ್ನ ನಾಯಿ ಕಾಣೆಯಾಗಿದೆ ಎಂದು ಚಿಂತಾಕ್ರಾಂತನಾಗಿ ಕುಳಿತಿದ್ದ. ಅದನ್ನು ನೋಡಿದ ಆತನ ಗೆಳೆಯ ಹೇಳಿದ “ನೀನು ಯಾಕೆ ಇಂಟರ್‌ನೆಟ್‌ನಲ್ಲಿ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಹಾಕಬಾರದು?”. ಅದಕ್ಕೆ ಆತ ಉತ್ತರಿಸಿದ “ತಮಾಷೆ ಮಾಡುತ್ತಿದ್ದೀಯಾ? ನನ್ನ ನಾಯಿಗೆ ಟ್ವಟ್ಟರ್ ಎಲ್ಲಿ ಗೊತ್ತು? ಅದು ಟ್ವಿಟ್ಟರನ್ನು ನೋಡುವುದೂ ಇಲ್ಲ”.

ಸೋಮವಾರ, ಮಾರ್ಚ್ 15, 2010

ಗಣಕಿಂಡಿ - ೦೪೩ (ಮಾರ್ಚ್ ೧೫, ೨೦೧೦)

ಅಂತರಜಾಲಾಡಿ

ಸಾಕ್ಷ್ಯಚಿತ್ರ ನೋಡಿ

ಚಲನಚಿತ್ರ ವೀಕ್ಷಿಸಲು ಆಸಕ್ತಿ ಇರದವರಾರು? ಆದರೆ ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ) ವೀಕ್ಷಿಸಲು ಆಸಕ್ತಿ ನಿಮಗಿದೆಯೇ? ಚಲನಚಿತ್ರಗಳಾದರೆ ಸುಲಭವಾಗಿ ನೋಡಲು ಸಿಗುತ್ತವೆ. ಸಾಕ್ಷ್ಯಚಿತ್ರ ಹಾಗಲ್ಲ. ಅವು ಬೇಕೆಂದಾಗ ವೀಕ್ಷಿಸಲು ಸಿಗುವುದಿಲ್ಲ. ಕೊಂಡುಕೊಳ್ಳಲೂ ಅಷ್ಟೆ. ಸಿಗುವುದು ಕಷ್ಟ. ಅಂತರಜಾಲದಲ್ಲಿ ಚಲನಚಿತ್ರ ವೀಕ್ಷಿಸಲು ಅನುವು ಮಾಡಿಕೊಡುವ ಜಾಲತಾಣಗಳು ಹಲವಾರಿವೆ. ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಬೇಕಾದರೆ ನೀವು ಭೇಟಿ ನೀಡಬೇಕಾದ ಜಾಲತಾಣ www.snagfilms.com. ಈ ಜಾಲತಾಣದಲ್ಲಿ ಸಾಕ್ಷ್ಯಚಿತ್ರಗಳನ್ನು ಹಲವಾರು ವಿಭಾಗಗಳಲ್ಲಿ ವೀಕ್ಷಿಸಲು ಅನುವು ಮಾಡಿಟ್ಟಿದ್ದಾರೆ. ವಿಜ್ಞಾನ ತಂತ್ರಜ್ಞಾನದಿಂದ ಹಿಡಿದು ಕ್ರೀಡೆಯ ತನಕ ವಿವಿಧ ವಿಷಯಗಳ ಸಾಕ್ಷ್ಯಚಿತ್ರಗಳನ್ನು ಇಲ್ಲಿ ವೀಕ್ಷಿಸಬಹುದು. 

ಡೌನ್‌ಲೋಡ್

ಫೋಲ್ಡರ್ ಅಡಗಿಸಿ

ಕೆಲವೊಮ್ಮೆ ನಿಮ್ಮ ಗಣಕದಲ್ಲಿರುವ ಕೆಲವು ಫೈಲುಗಳನ್ನು ಅಥವಾ ಫೈಲುಗಳ ಸಮೇತ ಫೋಲ್ಡರನ್ನು ಅಡಗಿಸಬೇಕಾಗಿ ಬರುತ್ತದೆ. ಗಣಕವನ್ನು ಇತರರ ಜೊತೆ ಹಂಚಿಕೊಳ್ಳುವಾಗ ನಿಮ್ಮ ಫೈಲುಗಳು ಇತರರ ಕೈಗೆ ಸಿಗದಂತೆ ಮಾಡಲು ಅವುಗಳನ್ನು ಅಡಗಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಉಪಯೋಗಕ್ಕೆ ಬರುವುದು WinMend Folder Hidden ಎಂಬ ತಂತ್ರಾಂಶ. ಈ ತಂತ್ರಾಂಶವನ್ನು ಬಳಸಿ ಫೈಲ್ ಮತ್ತು ಫೋಲ್ಡರ್ ಮಾತ್ರವಲ್ಲದೆ ಯುಎಸ್‌ಬಿ ಡ್ರೈವ್‌ಗಳಲ್ಲಿರುವ ಫೈಲ್‌ಗಳನ್ನು ಕೂಡ ಅಡಗಿಸಬಹುದು. ಪಾಸ್‌ವರ್ಡ್ ನೀಡಿ ನಿಮ್ಮ ಫೈಲ್‌ಗಳನ್ನು ನೀವು ಬೇಕಾದಾಗ ವಾಪಾಸು ಪಡೆದುಕೊಳ್ಳಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ - http://bit.ly/ceqKo1


e - ಸುದ್ದಿ

ಆಟದ ಮೂಲಕ ಆಹ್ವಾನ

ವಿವಿಧ ನಮೂನೆಯ ಮದುವೆ ಆಹ್ವಾನ ಪತ್ರಿಕೆಗಳನ್ನು ಕೇಳಿರಬಹುದು ಮತ್ತು ನೋಡಿರಬಹುದು. ಮದುವೆ ಆಗುತ್ತಿರುವ ಗಂಡು ಹೆಣ್ಣು ಇಬ್ಬರೂ ಗಣಕವ್ಯಸನಿಗಳಾಗಿದ್ದರೆ (ಗೀಕ್) ಆಹ್ವಾನ ಪತ್ರ ಹೇಗಿರಬಹುದು? ಅದು ಒಂದು ಸಿ.ಡಿ.ಯಲ್ಲಿರಬಹುದು ಎಂದು ನೀವು ಕೂಡಲೆ ಊಹೆ ಮಾಡಿರುತ್ತೀರ. ಅದು ಸರಿಯೇ. ಆದರೆ ಸಿ.ಡಿ.ಯಲ್ಲಿದ್ದದ್ದು ಆಹ್ವಾನ ಪತ್ರದ ವಿದ್ಯುನ್ಮಾನ ರೂಪವಲ್ಲ. ಅಂದರೆ ಆಹ್ವಾನ ಪತ್ರ ಒಂದು ಪಿಡಿಎಫ್ ಅಥವಾ ವರ್ಡ್ ಕಡತದ ರೂಪದಲ್ಲಿರಲಿಲ್ಲ. ಸಿ.ಡಿ.ಯಲ್ಲಿದ್ದದ್ದು ಒಂದು ಆಟ. ಅದನ್ನು ಗಣಕದಲ್ಲಿ ಹಾಕಿ ಆಡಬೇಕು. ಅದರಲ್ಲಿರುವ ಹಲವು ಹಂತಗಳನ್ನು ಗೆದ್ದು ಕೊನೆಯ ಹಂತಕ್ಕೆ ತಲುಪಿದಾಗ ಮದುವೆ ನಡೆಯಲಿರುವ ಸ್ಥಳ, ಸಮಯ, ಇತ್ಯಾದಿ ವಿವರಗಳಿದ್ದವು. ಮದುವೆ ಮನೆಯಲ್ಲಿ ಮದುವೆಯ ನಂತರ ಊಟ ಬೇಕಿದ್ದರೆ ಅಲ್ಲೂ ಆಟದಲ್ಲಿ ಗೆಲ್ಲಬೇಕೆಂಬ ಶರತ್ತು ಪುಣ್ಯಕ್ಕೆ ಅಲ್ಲಿರಲಿಲ್ಲ. 


e- ಪದ

3G -ಮೂರನೆಯ ತಲೆಮಾರಿನ ಮೊಬೈಲ್ ಸಂಪರ್ಕ ತಂತ್ರಜ್ಞಾನ. ಅನಲಾಗ್ ಮೊದಲನೆಯ ತಲೆಮಾರಿನದು. ಸರಳ ಡಿಜಿಟಲ್ ವಿಧಾನ ಎರಡನೆಯದು. 3G ಮೂರನೆಯದು. ಇದರಲ್ಲಿ ಅತಿವೇಗದ ಸಂಪರ್ಕ ಸಾಧ್ಯ. ಆದುದರಿಂದ ಈ ವಿಧಾನವನ್ನು ಬಳಸುವ ಮೊಬೈಲ್ ಫೋನುಗಳ ಮೂಲಕ ಒಬ್ಬರಿಗೊಬ್ಬರು ವೀಡಿಯೋ ಕರೆ ಕೂಡ ಮಾಡಬಹುದು. ಸುಮಾರು 3.6 mbps ನಷ್ಟು ವೇಗದಲ್ಲಿ ಅಂತರಜಾಲ ಸಂಪರ್ಕ ಸಾಧ್ಯ. ಟೆಲಿವಿಶನ್ ಕೂಡ ನೋಡಬಹುದು. ಹ್ಞಾಂ, ಇದೆಲ್ಲ ಮಾಡಬೇಕಾದರೆ ನಿಮ್ಮ ಮೊಬೈಲ್ ಫೋನಿನಲ್ಲಿ 3G ಸೌಲಭ್ಯ ಇರಬೇಕು ಮತ್ತು ನಿಮ್ಮ ಮೊಬೈಲ್ ಸಂಪರ್ಕ ಸೇವೆ ನೀಡುವವರು ಈ ಸೇವೆಯನ್ನು ನೀಡುತ್ತಿರಬೇಕು. ಇತ್ತೀಚೆಗೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಬಿಎಸ್‌ಎನ್‌ಎಲ್‌ನವರು ಈ ಸೇವೆ ಪ್ರಾರಂಭಿಸಿದ್ದಾರೆ. ಇನ್ನೆರಡು ತಿಂಗಳುಗಳಲ್ಲಿ ಕರ್ನಾಟಕದ 32 ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಬಹುಶಃ ಆರು ತಿಂಗಳುಗಳಲ್ಲಿ ಇತರೆ ಖಾಸಗಿ ಮೊಬೈಲ್ ಸಂಪರ್ಕ ನೀಡುವವರೂ ಈ ಸೇವೆಯನ್ನು ನಿಡಬಹುದು.
 
e - ಸಲಹೆ


ಬೆಳಗಾವಿಯ ಅಮೃತ ಲಕ್ಕಶೆಟ್ಟಿ ಅವರ ಪ್ರಶ್ನೆ: ನನಗೆ ಫೋಲ್ಡರನ್ನು ಸುರಕ್ಷಿತವಾಗಿ ಬೀಗಹಾಕಿಡುವ (ಫೋಲ್ಡರ್ ಲಾಕ್) ಸಂಪೂರ್ಣ ಉಚಿತ ತಂತ್ರಾಂಶ ಬೇಕು. ನಾನು ಅಂತರಜಾಲದಿಂದ ಡೌನ್‌ಲೋಡ್ ಮಾಡಿದ ತಂತ್ರಾಂಶ ಯಾವುದು ಉಚಿತವಲ್ಲ. ಅವು ಪ್ರಯೋಗಾತ್ಮಕವಾದವುಗಳಾಗಿದ್ದವು. ಆದುದರಿಂದ ನನಗೆ ಪೂರ್ತಿ ಉಪಯೋಗಕ್ಕೆ ಸಿಗಲಿಲ್ಲ. ದಯವಿಟ್ಟು ಸಂಪೂರ್ಣ ಉಚಿತ ತಂತ್ರಾಂಶ ಯಾವುದಾದರು ಇದ್ದಲ್ಲಿ ತಿಳಿಸಬೇಕು.
ಉ: ಇದೇ ಅಂಕಣದ ಡೌನ್‌ಲೋಡ್ ವಿಭಾಗದಲ್ಲಿ ನೀಡಿರುವ WinMend Folder Hidden ತಂತ್ರಾಂಶ ಬಳಸಿ.   
                           

ಕಂಪ್ಯೂತರ್ಲೆ

ಕೆಲವು ಗಣಕ ಕ್ರಮವಿಧಿ ರಚನೆಯ ಭಾಷೆಗಳ (programming languages) ಹೆಸರುಗಳನ್ನು ಕನ್ನಡಕ್ಕೆ ಅನುವಾದಿಸಿದಾಗ:

C - ನೋಡು
C++ - ಕೂಡಿಸಿ ನೋಡು
Visual C++ - ದೃಷ್ಟಿಬೀರಿ ಕೂಡಿಸಿ ನೋಡು
Perl - ಮುತ್ತು
Python - ಹೆಬ್ಬಾವು
Ruby - ಮಾಣಿಕ್ಯ

ಶುಕ್ರವಾರ, ಮಾರ್ಚ್ 12, 2010

ಗಣಕಿಂಡಿ - ೦೪೨ (ಮಾರ್ಚ್ ೦೮, ೨೦೧೦)

ಅಂತರಜಾಲಾಡಿ

ಜ್ವಾಲಾಮುಖಿಗೆ ಭೇಟಿ ನೀಡಿ

೨೦೧೦೨ ಚಲನಚಿತ್ರ ನೋಡಿರಬಹುದಲ್ಲವೇ? ಅದರಲ್ಲಿ ಭೂಕಂಪ, ಜ್ವಾಲಾಮುಖಿ ಎಲ್ಲ ಇತ್ತು. ಅವೆಲ್ಲ ಗಣಕ ಬಳಸಿ ಸೃಷ್ಠಿ ಮಾಡಿದಂತಹವು. ನಿಜವಾದ ಜ್ವಾಲಾಮುಖಿ ನೋಡುವುದು ಬಹಳ ಕಷ್ಟ. ಅದಕ್ಕಾಗಿ ನೀವು ವಿಶೇಷ ವಿಮಾನ ಅಥವಾ ಹೆಲಿಕಾಫ್ಟರಿನಲ್ಲಿ ಪ್ರಯಾಣ ಮಾಡಬೇಕು. ಆದೂ ಜ್ವಾಲಾಮುಖಿ ಜೀವಂತವಾಗಿದ್ದಾಗ. ಜ್ವಾಲಾಮುಖಿಗಳಿರುವಲ್ಲಿಗೆ ಪ್ರವಾಸ ಹೋಗಬೇಕೆ? ಪ್ರಪಂಚದ ಖ್ಯಾತ ಜ್ವಾಲಾಮುಖಿಗಳ ವಿವಿಧ ನೋಟಗಳ ಚಿತ್ರಣವನ್ನು ನೋಡಬೇಕೇ? ಹಾಗಿದ್ದರೆ ನೀವು ಭೇಟಿ  ನೀಡಬೇಕಾದ ಜಾಲತಾಣ - www.volcanodiscovery.com

ಡೌನ್‌ಲೋಡ್

ಟ್ವೀಟ್‌ಡೆಕ್

ಟ್ವಿಟ್ಟರ್ ಬಳಸುತ್ತಿದ್ದೀರಾ? ೧೪೦ ಅಕ್ಷರಗಳ ಮಿತಿಯೊಳಗೆ ಬ್ಲಾಗ್ ಮಾಡುವುದಕ್ಕೆ ಮೈಕ್ರೋಬ್ಲಾಗಿಂಗ್ ಎನ್ನುತ್ತಾರೆ. ಟ್ವಟ್ಟರ್ (www.twitter.com) ಒಂದು ಪ್ರಸಿದ್ಧ ಮೈಕ್ರೋಬ್ಲಾಗಿಂಗ್ ಜಾಲತಾಣ. ಸಾಮಾನ್ಯವಾಗಿ ಬಹುಪಾಲು ಮಂದಿ ಈ ಜಾಲತಾಣದಲ್ಲಿ ನೇರವಾಗಿ ಬ್ಲಾಗ್ ಮಾಡುವುದು ಕಡಿಮೆ. ಟ್ವಿಟ್ಟರ್‌ಗೆ ಹಲವಾರು ಗ್ರಾಹಕ ತಂತ್ರಾಂಶಗಳಿವೆ. ಅವುಗಳಲ್ಲಿ ತುಂಬ ಜನಪ್ರಿಯವಾಗಿರುವುದು ಟ್ವೀಟ್‌ಡೆಕ್. ಇದು ದೊರೆಯುವ ಜಾಲತಾಣ www.tweetdeck.com. ಇದು ಅಡೋಬಿಯವರ AIR ಅನ್ನು ಬಳಸುತ್ತದೆ.

e - ಸುದ್ದಿ

ಪೇಪಾಲ್ ಭಾರತಕ್ಕೆ ನಿರ್ಬಂಧ

ಅಂತರಜಾಲದ ಮೂಲಕ ಹಣಕಾಸು ವ್ಯವಹಾರ ನಡೆಸುವುದಕ್ಕೆ ಪೇಪಾಲ್ (www.paypal.com) ತುಂಬ ಪ್ರಸಿದ್ಧ. ಈ ಜಾಲತಾಣದ ಮೂಲಕ ಯಾರು ಬೇಕಾದರೂ ಹಣ ಸ್ವೀಕಾರ ಮಾಡಬಹುದಿತ್ತು. ತುಂಬ ಜನ ಉಚಿತ ತಂತ್ರಾಂಶ ವಿತರಿಸುವವರು, ನಿಮಗೆ ಮನಸ್ಸಿದ್ದರೆ ನನಗೆ ಧನಸಹಾಯ ನೀಡಬಹುದು, ಅದಕ್ಕಾಗಿ ಇಲ್ಲಿ ನೀಡಿರುವ ಪೇಪಾಲ್ ಕೊಂಡಿಯನ್ನು ಕ್ಲಿಕ್ಕಿಸಿ ಎಂದು ತಮ್ಮ ಜಾಲತಾಣದಲ್ಲಿ ಬರೆದಿರುತ್ತಾರೆ. ಹಾಗೆ ಪೇಪಾಲ್ ಮೂಲಕ ನೀಡಿದ ಹಣವನ್ನು ನಮಗೆ ಬೇಕಾದಾಗ ಚೆಕ್ ಮೂಲಕ ತರಿಸಿಕೊಳ್ಳಬಹುದಿತ್ತು. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ನವರು ಕೆಲವು ನಿರ್ಬಂಧ ವಿಧಿಸಿದುದರಿಂದ ಪೇಪಾಲ್‌ನವರು ಭಾರತಕ್ಕೆ ಹಣ ಕಳುಹಿಸುವುದನ್ನು ನಿಲ್ಲಿಸಿದ್ದರು. ಈಗ ಅದನ್ನು ಮತ್ತೆ ಚಾಲನೆ ಮಾಡಿದ್ದಾರೆ. ಆದರೆ ಹಣ ಪಡೆಯುವವರು ಯಾತಕ್ಕೆ ಹಣ ಪಡೆಯುತ್ತಿದ್ದೇವೆ ಎಂಬುದನ್ನು ಕಾರಣ ಸಮೇತ ವಿವರಿಸಬೇಕು. ಬೇರೆ ಬೇರೆ ಕಾರಣಗಳಿಗೆ ಬೇರೆ ಬೇರೆ ಸಂಕೇತಸಂಖ್ಯೆ ನೀಡಿದ್ದಾರೆ. ಈ ಸಂಖ್ಯೆಯನ್ನು ಅಲ್ಲಿ ನಮೂದಿಸಿಬೇಕು. ರಿಸರ್ವ್ ಬ್ಯಾಂಕ್‌ನವರು ಕೇಳಿದಾಗ ಕಾರಣಕ್ಕೆ ಪೂರಕವಾದ ಎಲ್ಲ ದಾಖಲೆ ನೀಡಬೇಕು. ಈಗಿನ ಹೊಸ ನಿಯಮ ಪ್ರಕಾರ ಪೇಪಾಲ್ ಮೂಲಕ ದೇಣಿಗೆ ಸ್ವೀಕರಿಸುವಂತಿಲ್ಲ.

e- ಪದ

ರಿಲೀಸ್ ಕ್ಯಾಂಡಿಡೇಟ್ (RC - Release Candidate) - ಇನ್ನೇನು ಬಿಡುಗಡೆ ಮಾಡಬಹುದು ಎನ್ನು ಹಂತಕ್ಕೆ ತಲುಪಿದ ತಂತ್ರಾಂಶ. ತಂತ್ರಾಂಶ ಉತ್ಪನ್ನ ತಯಾರಿಕೆಯಲ್ಲಿ ಇದು ಕೊನೆಯ ಹಂತ. ಇದಕ್ಕೆ ಹಿಂದಿನದು ಬೀಟಾ ಆವೃತ್ತಿ. ಇದರ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ವಿವರಿಸಲಾಗಿತ್ತು. ರಿಲೀಸ್ ಕ್ಯಾಂಡಿಡೇಟ್ ಅಂತಿಮವಾಗಿ ಮಾರುಕಟ್ಟೆಗೆ ಬಿಡುಗಡೆಯಾಗುವಾಗ ಯಾವುದೇ ಹೊಸ ಗುಣಲಕ್ಷಣಗಳನ್ನು ಸೇರಿಸಿಕೊಂಡಿರುವುದಿಲ್ಲ. ಯಾವುದಾದರೂ ದೋಷ (ಬಗ್) ಪತ್ತೆಯಾಗಿದ್ದರೆ ಅದನ್ನು ನಿವಾರಿಸಿರುತ್ತಾರೆ, ಅಷ್ಟೆ.

e - ಸಲಹೆ

ಪ್ರ: ನನಗೆ ಏನೇನೂ ಪರಿಚಯವಿಲ್ಲದ ಯಾರ‍್ಯಾರೋ ಮಂದಿ ಏನೇನೋ ಇಮೈಲ್‌ಗಳನ್ನು ಕಳುಹಿಸುತ್ತಾರೆ. ಅವರಿಗೆ ನನ್ನ ಇಮೈಲ್ ವಿಳಾಸ ಹೇಗೆ ದೊರೆಯಿತು?
ಉ: ಇದಕ್ಕೆ ಒಂದು ಕಾರಣ ನಿಮ್ಮ ಬೇಜಾವಾಬ್ದಾರಿ ಸ್ನೇಹಿತರೇ. ಯಾರೋ ಏನೋ ಒಂದು ಜೋಕ್, ಅಥವಾ ಚಿತ್ರ, ಅಥವಾ ಇನ್ಯಾವುದೋ ಕೆಲಸಕ್ಕೆ ಬಾರದ ಇಮೈಲ್ ಅನ್ನು ಅವರ ಎಲ್ಲ ಸ್ನೇಹಿತರಿಗೆ ಕಳುಹಿಸಿರುತ್ತಾರೆ (forward). ಹಾಗೆ ಮಾಡುವಾಗ ನಿಮ್ಮ ಇಮೈಲ್ ವಿಳಾಸವೂ ಸೇರಿಕೊಂಡಿರುತ್ತದೆ. ಇನ್ನು ಕೆಲವರು ಅವರಿಗೆ ಬಂದ ಇಮೈಲ್‌ಗೆ ಉತ್ತರಿಸುವಾಗ Reply All ಎಂದು ಕ್ಲಿಕ್ ಮಾಡಿರುತ್ತಾರೆ. ಈ ಎರಡು ವಿಧಾನದಲ್ಲೂ ನಿಮ್ಮ ಇಮೈಲ್ ವಿಳಾಸ cc ವಿಭಾಗದಲ್ಲಿ ಇದ್ದರೆ ಅದು ಎಲ್ಲರಿಗೂ ತಿಳಿಯುತ್ತದೆ. ಇದನ್ನು ತಪ್ಪಿಸಲು, ತುಂಬ ಜನರಿಗೆ ಇಮೈಲ್ ಮಾಡುವಾಗ, ಎಲ್ಲರ ಇಮೈಲ್ ವಿಳಾಸವನ್ನಿ bcc ವಿಭಾಗದಲ್ಲಿ ಸೇರಿಸತಕ್ಕದ್ದು.
                           

ಕಂಪ್ಯೂತರ್ಲೆ

ಗಣಕವಾಡು

ಯುಗ ಯುಗಾದಿ ಕಳೆದರೂ ವೈರಸ್ ಮರಳಿ ಬರುತಿದೆ
ಹೊಸ ಗಣಕಕೆ ಹೊಸ ರೂಪದಿ ಮತ್ತೆ ನುಸುಳಿ ಬರುತಿದೆ
(ಬೇಂದ್ರೆ ಕ್ಷಮೆ ಕೋರಿ)

ಸೋಮವಾರ, ಮಾರ್ಚ್ 1, 2010

ಗಣಕಿಂಡಿ - ೦೪೧ (ಮಾರ್ಚ್ ೦೧, ೨೦೧೦)

ಅಂತರಜಾಲಾಡಿ

ಪ್ರತಿದಿನ ವಿಜ್ಞಾನ ವಿಶೇಷ

ವಿಜ್ಞಾನದ ವಿಶೇಷಗಳನ್ನು ತಿಳಿಸುವ ಜಾಲತಾಣಗಳು ಹಲವಾರಿವೆ. ಕೆಲವು ವಿಜ್ಞಾನವನ್ನು ಟ್ಯುಟೋರಿಯಲ್ ಮಾದರಿಯಲ್ಲಿ ವಿವರಿಸುತ್ತವೆ. ಇನ್ನು ಕೆಲವು ಖ್ಯಾತ ವಿಜ್ಞಾನ ಪತ್ರಿಕೆಗಳ ಜಾಲತಾಣಗಳಾಗಿವೆ. ಆಯಾ ದಿನ ನಡೆದ ವಿಜ್ಞಾನದ ಸಂಶೋಧನೆಗಳನ್ನು ಆಯಾ ದಿನವೇ ಜನರಿಗೆ ಚುರುಕಾಗಿ ತಲುಪಿಸುವ ಜಾಲತಾಣ www.sciencedaily.com. ಆರೋಗ್ಯ, ಸಸ್ಯ ಶಾಸ್ತ್ರ, ಪ್ರಾಣಿಶಾಸ್ತ್ರ, ಖಗೋಳಶಾಸ್ತ್ರ, ಗಣಕ ಕ್ಷೇತ್ರ -ಇವೆಲ್ಲ ಅಲ್ಲದೆ ಇನ್ನೂ ಹಲವಾರು ವಿಷಯಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಇಲ್ಲಿ ಓದಬಹುದು. ಇವುಗಳ ಜೊತೆ ವಿಜ್ಞಾನದ ವಿಷಯಗಳ ಬಗ್ಗೆ ಲೇಖನಗಳು ಹಾಗೂ ಚಲನಚಿತ್ರಗಳೂ ಇಲ್ಲಿವೆ. ವಿಜ್ಞಾನದ ವಿದ್ಯಾರ್ಥಿಗಳಿಗೂ ಅಧ್ಯಾಪಕರುಗಳಿಗೂ ತುಂಬ ಉಪಯುಕ್ತ ಜಾಲತಾಣ ಇದು.

ಡೌನ್‌ಲೋಡ್

ಹರಿದುಹಂಚಿದವುಗಳನ್ನು ಸರಿಜೋಡಿಸಿ

ಕೆಲವು ತಂತ್ರಾಂಶಗಳು ನಿಧಾನವಾಗಿ ಪ್ರಾರಂಭವಾಗುವುದಕ್ಕೆ ಮತ್ತು ಕೆಲಸ ಮಾಡುವುದಕ್ಕೆ ಆ ತಂತ್ರಾಂಶದ ಫೈಲ್ ಹಾರ್ಡ್‌ಡಿಸ್ಕ್‌ನಲ್ಲಿ ಹಲವಾರು ಕಡೆ ಹರಿದುಹಂಚಿ ಹೋಗಿರುವುದೂ ಒಂದು ಕಾರಣವಾಗಿರಬಹುದು. ತಂತ್ರಾಂಶದ ಫೈಲ್ ಅತಿ ದೊಡ್ಡದಾಗಿದ್ದಾಗ ಮತ್ತು ಹಲವಾರು ಫೈಲುಗಳನ್ನು ಅಳಿಸಿ ಈ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿದ್ದಾಗ ಈ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಗಣಕದ ಹಾರ್ಡ್‌ಡಿಸ್ಕ್ ಅನ್ನು ಡಿಫ್ರಾಗ್ಮೆಂಟೇಶನ್ ಮಾಡಿದರೆ ಅಂದರೆ ಹಲವಾರು ಕಡೆ ಹರಿದುಹಂಚಿ ಹೋದ ಎಲ್ಲ ಫೈಲುಗಳನ್ನು ಸರಿಯಾಗಿ ಜೋಡಿಸಿದರೆ ಗಣಕವು ವೇಗವಾಗಿ ಕೆಲಸ ಮಾಡುತ್ತದೆ. ಆದರೆ ಹೀಗೆ ಮಾಡಲು ಹಾರ್ಡ್‌ಡಿಸ್ಕ್‌ನಲ್ಲಿ ಸಾಕಷ್ಟು ಖಾಲಿ ಜಾಗವಿರಬೇಕು ಮತ್ತು ಅದಕ್ಕೆ ತುಂಬ ಸಮಯ ಹಿಡಿಯುತ್ತದೆ. ನಮಗೆ ಬೇಕಾದ ಫೈಲನ್ನು ಮಾತ್ರ ಡಿಫ್ರಾಗ್ಮೆಂಟೇಶನ್ ಮಾಡಿಕೊಡುವ ಉಚಿತ ತಂತ್ರಾಂಶ Defraggler. ಇದು ದೊರೆಯುವ ಜಾಲತಾಣ - http://bit.ly/aGDUV5

e - ಸುದ್ದಿ

ಲ್ಯಾಪ್‌ಟಾಪ್ ಮೂಲಕ ಗೂಢಚರ್ಯೆ

ಅಮೇರಿಕದ ಪೆನ್ಸಿಲ್ವೇನಿಯಾದ ಪ್ರೌಢ ಶಾಲೆಯೊಂದರಲ್ಲಿ ಮಕ್ಕಳಿಗೆ ಲ್ಯಾಪ್‌ಟಾಪ್ ಕೊಟ್ಟಿದ್ದರು. ಅವುಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿತ್ತು. ಈ ಕ್ಯಾಮರಾ ಬಳಸಿ ಶಾಲೆಯ ಅಧಿಕಾರಿಗಳು, ಅಧ್ಯಾಪಕರುಗಳು ಮಕ್ಕಳ ಮೇಲೆ ಗೂಢಚರ್ಯೆ ನಡೆಸುತ್ತಿದ್ದುದು ವರದಿಯಾಗಿದೆ. ಮಕ್ಕಳು ತಮ್ಮ ಮನೆಯ ಕೋಣೆಯಲ್ಲಿ ಏನೇನು ಮಾಡುತ್ತಾರೆ ಎಂಬುದನ್ನು ಅಧ್ಯಾಪಕರುಗಳು ನೋಡುತ್ತಿದ್ದರು. ಇದರ ಹಿಂದಿನ ಉದ್ದೇಶವೇನೋ ಒಳ್ಳೆಯದೇ ಇದ್ದಿರಬಹುದು. ಮಕ್ಕಳು ಮಾದಕ ವಸ್ತುಗಳ ವ್ಯಸನಿಯಾಗಿದ್ದಾರೋ, ಅಥವಾ ಇನ್ಯಾವುದಾದರೂ ದುಶ್ಚಟದ ದಾಸರಾಗಿದ್ದಾರೋ ಎಂದು ಪತ್ತೆ ಹಚ್ಚುವುದು ಅವರ ಉದ್ದೇಶವಾಗಿತ್ತು. ಆದರೆ ಮಕ್ಕಳು ನಡೆಸುವ ಎಲ್ಲ ಚಟುವಟಿಕೆಗಳು ಅಂದರೆ ಬಟ್ಟೆ ಬದಲಾಯಿಸುವುದು ಎಲ್ಲ ಕ್ಯಾಮರಾ ಮೂಲಕ ದಾಖಲಾಗುತ್ತಿತ್ತು. ಈ ರೀತಿ ಗೂಢಚರ್ಯೆ ನಡೆಸುವುದರ ವಿರುದ್ಧ ತುಂಬ ಪ್ರತಿಭಟನೆಗಳು ಬಂದವು. ಇತ್ತೀಚೆಗಿನ ವರದಿಯಂತೆ ಅಲ್ಲಿನ ನ್ಯಾಯಾಧೀಶರು ಈ ರೀತಿ ಗೂಢಚರ್ಯೆ ನಡೆಸಬಾರದು ಎಂದು ಶಾಲೆಗೆ ಆದೇಶ ನೀಡಿದ್ದಾರೆ.

e- ಪದ

ಬೀಟಾ ಆವೃತ್ತಿ (beta version) -ಅಂತಿಮ ಬಿಡುಗಡೆಗೆ ಮೊದಲು ಕೆಲವು ತಂತ್ರಾಂಶ ಪರಿಣತರಿಗೆ ಪರೀಕ್ಷಾರ್ಥವಾಗಿ ನೀಡುವ ತಂತ್ರಾಂಶ ಆವೃತ್ತಿ. ಇವುಗಳನ್ನು ಸಾಮಾನ್ಯವಾಗಿ ಇಂತಹ ಪ್ರಯೋಗಗಳಿಗೆಂದೇ ಪ್ರತ್ಯೇಕವಾಗಿ ಇರುವ ಗಣಕಗಳಲ್ಲಿ ಇನ್‌ಸ್ಟಾಲ್ ಮಾಡುತ್ತಾರೆ. ಪರಿಣತರು ಅದನ್ನು ಬಳಸಿ ನೋಡಿ ಕಂಪೆನಿಗೆ ತಮ್ಮ ಅಭಿಪ್ರಾಯ ಮತ್ತು ದೋಷಗಳ ಪಟ್ಟಿ ನೀಡುತ್ತಾರೆ. ತಂತ್ರಾಂಶ ತಯಾರಿಕೆಯಲ್ಲಿ ಇದು ಒಂದು ಪ್ರಮುಖ ಹಂತ. ಜನಸಾಮಾನ್ಯರು ಬೀಟಾ ಆವೃತ್ತಿಯನ್ನು ಬಳಸದಿರುವುದೇ ಒಳ್ಳೆಯದು.

e - ಸಲಹೆ

ಅಶೋಕ್.ಎ.ಹೆಚ್ ಅವರ ಪ್ರಶ್ನೆ: ನನ್ನ ಬಳಿ ಒಂದು ಟ್ರಾನ್ಸೆಂಡ್ ಕಂಪೆನಿಯ ೪ ಜಿ.ಬಿ. ಪೆನ್ ಡ್ರೈವ್ ಇದೆ. ಆದರೆ ಕೆಲವು ದಿನಗಳಿಂದ ಈ ಪೆನ್ ಡ್ರೈವ್ ಕೆಲಸ ಮಾಡುತ್ತಿಲ್ಲ. ಅದನ್ನು ಸಿಸ್ಟಂಗೆ ಕನೆಕ್ಟ್ ಮಾಡಿದಾಗ ಡಿಟೆಕ್ಟ್ ಆಗುತ್ತದೆ. ಎಫ್ ಡ್ರೈವ್‌ನಲ್ಲಿ ರಿಮೋವೇಬಲ್ ಡಿಸ್ಕ್ ಎಂದು ತೋರಿಸುತ್ತದೆ. ಅದನ್ನು ಓಪನ್ ಮಾಡಲು ಹೋದರೆ ಪ್ಲೀಸ್ ಇನ್‌ಸರ್ಟ್ ಡಿಸ್ಕ್ ಇನ್‌ಟು ಡ್ರೈವ್ ಎಫ್ ಎಂದು ಕೇಳುತ್ತಿದೆ. ದಯವಿಟ್ಟು ಇದಕ್ಕೆ ಪರಿಹಾರವನ್ನು ಸೂಚಿಸಿ.
ಉ: ಬಹುಶಃ ನಿಮ್ಮ ಪೆನ್ ಡ್ರೈವ್ ಹಾಳಾಗಿರಬಹುದು ಅಥವಾ ಅದಕ್ಕೆ ವೈರಸ್ ಬಂದಿರಬಹುದು. ಮೊದಲನೆಯದಾಗಿ ಅದು ಬೇರೆ ಗಣಕದಲ್ಲಿ ಕೆಲಸ ಮಾಡುತ್ತದೆಯೇ ಎಂಬುದನ್ನು ಪರಿಶೀಲಿಸಿ. ಅಲ್ಲಿ ಕೆಲಸ ಮಾಡುತ್ತಿದೆಯೆಂದಾದರೆ ನಿಮ್ಮ ಗಣಕದ ಯುಎಸ್‌ಬಿ ಪೋರ್ಟ್ ಬಗ್ಗೆ ಅನುಮಾನ ಪಡಬೇಕಾಗುತ್ತದೆ. ಇನ್ನೊಂದು ಪೆನ್ ಡ್ರೈವ್ ಬಳಸಿ ಅದನ್ನು ಪರಿಶೀಲಿಸಿ. ನಿಮ್ಮ ಪೆನ್ ಡ್ರೈವ್ ಬೇರೆ ಗಣಕದಲ್ಲೂ ಕೆಲಸ ಮಾಡುತ್ತಿಲ್ಲವೆಂದಾದಲ್ಲಿ ಅದನ್ನು ಫಾರ್ಮಾಟ್ ಮಾಡಲು ಪ್ರಯತ್ನಿಸಿ. ವೈರಸ್ ತೊಂದರೆಯಾಗಿದ್ದಲ್ಲಿ ಫಾರ್ಮಾಟ್ ಮಾಡಿದಾಗ ಪರಿಹಾರವಾಗಬಹುದು.                           

ಕಂಪ್ಯೂತರ್ಲೆ

ಕೋಲ್ಯನ ಮಗಳಿಗೆ ಯುಟ್ಯೂಬ್‌ನಲ್ಲಿ ವೀಕ್ಷಿಸುತ್ತಿದ್ದ ಚಲನಚಿತ್ರದ ತುಣುಕನ್ನು (ವೀಡಿಯೋ) ಡೌನ್‌ಲೋಡ್ ಮಾಡಿಕೊಳ್ಳಬೇಕಿತ್ತು. ಆದರೆ ಹೇಗೆ ಮಾಡುವುದೆಂದು ತಿಳಿದಿರಲಿಲ್ಲ. ಇದಕ್ಕಾಗಿ ಆಕೆ ಮಾಡಿದ ಉಪಾಯವೇನು ಗೊತ್ತೆ? ಯುಟ್ಯೂಬ್‌ನಲ್ಲಿ ವೀಡಿಯೋ ಪ್ಲೇ ಮಾಡಿ ಗಣಕದ ಪರದೆಯ ಮುಂದೆ ತನ್ನ ಮೊಬೈಲ್ ಫೋನ್ ಹಿಡಿದು ಅದರಲ್ಲಿ ಆಕೆ ವೀಡಿಯೋ ವಿಧಾನದಲ್ಲಿ ರೆಕಾರ್ಡ್ ಮಾಡಿಕೊಂಡಳು.