ಮಂಗಳವಾರ, ಏಪ್ರಿಲ್ 27, 2010

ಗಣಕಿಂಡಿ - ೦೪೯ (ಎಪ್ರಿಲ್ ೨೬, ೨೦೧೦)

ಅಂತರಜಾಲಾಡಿ

ಫೈಲ್ ಮಾಹಿತಿ

ನಿಮ್ಮ ಸ್ನೇಹಿತರೊಬ್ಬರು ನಿಮಗೆ ಒಂದು ಫೈಲ್ (ಕಡತ) ಅನ್ನು ಇಮೈಲ್ ಮೂಲಕ ಕಳುಹಿಸಿದ್ದಾರೆ. ಆದರೆ ಅದು ಯಾವ ತಂತ್ರಾಂಶದಲ್ಲಿ ತೆರೆಯುತ್ತದೆ ಎಂದು ನಿಮಗೆ ಗೊತ್ತಿಲ್ಲ. ಅವರು ತಿಳಿಸಿಯೂ ಇಲ್ಲ. ಆಗ ಏನು ಮಾಡುತ್ತೀರಿ? ಎಲ್ಲ ಫೈಲ್‌ಗಳಿಗೂ ಕಡತ ವಿಸ್ತರಣೆ (file extension) ಇರುತ್ತದೆ. ಕಡತದ ಹೆಸರಿನಲ್ಲಿ ಕೊನೆಯ ಚುಕ್ಕಿಯ ನಂತರ ಇರುವ 3 ಅಥವಾ 4 ಅಕ್ಷರಗಳು ಆ ಕಡತ (ಫೈಲ್) ಯಾವ ತಂತ್ರಾಂಶಕ್ಕೆ ಸಂಬಂಧಿಸಿದ್ದು ಎಂಬುದನ್ನು ಸೂಚಿಸುತ್ತದೆ. ಕೆಲವು ಉದಾಹರಣೆಗಳು - doc -ಮೈಕ್ರೋಸಾಫ್ಟ್ ವರ್ಡ್, txt -ಕೇವಲ ಪಠ್ಯ (Notepad), p65 -ಪೇಜ್‌ಮೇಕರ್ 6.5, ಇತ್ಯಾದಿ. ಯಾವ ಕಡತ ವಿಸ್ತರಣೆ ಯಾವ ತಂತ್ರಾಂಶಕ್ಕೆ ಸಂಬಧಿಸಿದ್ದು ಎಂದು ತಿಳಿಯಬೇಕೇ? ಹಾಗಿದ್ದರೆ www.fileinfo.com ಜಾಲತಾಣಕ್ಕೆ ಭೇಟಿ ನೀಡಿ.


ಡೌನ್‌ಲೋಡ್

ಮನಸ್ಸಿನ ನಕಾಶೆ

ಮನಸ್ಸಿನಲ್ಲಿ ಮೂಡಿಬರುವ ಆಲೋಚನೆಗಳನ್ನು ನಕಾಶೆ ರೂಪದಲ್ಲಿ ಚಿತ್ರಿಸುವುದನ್ನು mindmap ಎನ್ನುತ್ತಾರೆ. ಇಂತಹ ನಕಾಶೆಗಳನ್ನು ಚಿತ್ರಿಸಲು ಹಲವಾರು ತಂತ್ರಾಂಶಗಳು ಲಭ್ಯವಿವೆ. ಅಂತಹ ಒಂದು ಮುಕ್ತ ತಂತ್ರಾಂಶ FreeMind. ಪರಿಯೋಜನೆಗಳ ಮತ್ತು ಅವುಗಳಲ್ಲಿಯ ಉಪಯೋಜನೆಗಳ ನಕಾಶೆ, ಟಿಪ್ಪಣಿಗಳನ್ನು ವ್ಯವಸ್ಥಿತವಾಗಿಡುವುದು, ಜ್ಞಾನಲೇಖನಗಳನ್ನು ವ್ಯವಸ್ಥಿತವಾಗಿಡುವುದು, ಭಾಷಣ ಕೊಡಲು ಅಗತ್ಯ ವಿಷಯಗಳನ್ನು ನಕಾಶೆ ರೂಪದಲ್ಲಿ ಮೂಡಿಸುವುದು -ಇತ್ಯಾದಿಗಳನ್ನೆಲ್ಲ ಈ ತಂತ್ರಾಂಶ ಬಳಸಿ ಮಾಡಬಹುದು. ಇದನ್ನು ಪಡೆಯಲು ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/bir0gv


e - ಸುದ್ದಿ

ಮೆದುಳನ್ನು ಓದುವುದು

ಒಬ್ಬ ವ್ಯಕ್ತಿ ಏನು ಆಲೋಚನೆ ಮಾಡುತ್ತಿದ್ದಾನೆ ಎಂಬುದನ್ನು ತಿಳಿಯುವ ತಂತ್ರಾಂಶವನ್ನು ತಯಾರಿಸುವಲ್ಲಿ ಅಮೇರಿಕಾದ ವಿಜ್ಞಾನಿಗಳು ಭಾಗಶಃ ಯಶಸ್ಸು ಪಡೆದಿದ್ದಾರೆ. ಮೆದುಳಿನ ಸ್ಕ್ಯಾನ್ ಮಾಡಿಸುವುದು ನಿಮಗೆ ತಿಳಿದೇ ಇರಬಹುದು. ಈ ಸ್ಕ್ಯಾನ್‌ಗಳಲ್ಲಿ ವ್ಯಕ್ತಿಯ ಆಲೋಚನೆಗಳೂ ಅಡಗಿವೆ. ಕೆಲವು ವ್ಯಕ್ತಿಗಳಿಗೆ ಹಲವಾರು ಪದಗಳನ್ನು ತೋರಿಸಿ ಆಗ ಅವರು ಮಾಡುವ ಆಲೋಚನೆಗಳನ್ನು ಸ್ಕ್ಯಾನ್ ಮೂಲಕ ದಾಖಲಿಸಲಾಯಿತು. ನಂತರ ಆ ವ್ಯಕ್ತಿಗಳಿಗೆ ಕೆಲವು ಪದಗಳ ಬಗ್ಗೆ ಆಲೋಚಿಸಲು ತಿಳಿಸಲಾಯಿತು. ಆಗ ತೆಗೆದ ಮೆದುಳಿನ ಸ್ಕ್ಯಾನ್‌ಗಳನ್ನು ಗಣಕವು ವಿಶ್ಲೇಷಿಸಿ ಅವರು ಇಂತಹುದೇ ಪದದ ಬಗ್ಗೆ ಆಲೋಚಿಸುತ್ತಿದ್ದಾರೆ ಎಂದು ತಿಳಿಸಿತು. ಈ ಪರೀಕ್ಷೆಯಲ್ಲಿ ಗಣಕವು ತೇರ್ಗಡೆಯಾಯಿತು. ಈ ಸಂಶೋಧನೆ ಈಗಿನ್ನೂ ಪ್ರಾರಂಭದ ಹಂತದಲ್ಲಿದೆ.

e- ಪದ

ಟ್ವೀಟ್ ಮಾಡುವುದು (tweeting) -ಟ್ವಿಟ್ಟರ್‌ನಲ್ಲಿ ಸಂದೇಶ ಸೇರಿಸುವುದು. ೧೪೦ ಅಕ್ಷರಗಳ ಒಳಗೆ ಬ್ಲಾಗ್ ಮಾಡುವ ಜಾಲತಾಣ ಟ್ವಿಟ್ಟರ್. ಇದರಲ್ಲಿ ಸೇರಿಸುವ ಸಂದೇಶಕ್ಕೆ ಟ್ವೀಟ್ ಎನ್ನುತ್ತಾರೆ. ಹಾಗೆ ಸಂದೇಶ ಸೇರಿಸುವುದನ್ನು ಟ್ವೀಟ್ ಮಾಡುವುದು ಅಥವಾ ಟ್ವೀಟಿಸುವುದು ಎನ್ನಬಹುದು. ನಾನು ಟ್ವೀಟ್ ಮಾಡಿದೆ ಅಥವಾ ನಾನು ಟ್ವೀಟಿಸಿದೆ ಎಂದೂ ಬಳಕೆ ಮಾಡಬಹುದು. ನಾನು ಫೋನ್ ಮಾಡಿದೆ ಅಥವಾ ಫೋನಾಯಿಸಿದೆ ಎಂಬ ಬಳಕೆಯ ಜೊತೆ ಹೋಲಿಸಿಕೊಳ್ಳಿ.

e - ಸಲಹೆ

ಶ್ರೀಧರ ಹೂಗಾರ್ ಅವರ ಪ್ರಶ್ನೆ: ನನ್ನ ಕಂಪ್ಯೂಟರಿನಲ್ಲಿ ಡೆಸ್ಕ್‌ಟಾಪ್ ಮೇಲೆ ಒಂದು ಫೈಲ್ ಉಳಿಸಿದ್ದೆ. ಆದರೆ ಆ ದಿನ ಕರೆಂಟ್ ಸಮಸ್ಯೆಯಿಂದಾಗಿ ನನ್ನ ಕಂಪ್ಯೂಟರ್ ಹಾಳಾಯಿತು. ಆಗ ನಾನು ಕಂಪ್ಯೂಟರನ್ನು ಫಾರ್ಮಾಟ್ ಮಾಡಿದ್ದೇನೆ. ನನಗೆ ಈಗ ಆ ಫೈಲೇ ಬೇಕಾಗಿದ್ದು ನಾನು ಹೇಗೆ ಪಡೆಯಬಹುದು ಎಂದು ತಿಳಿಸಿ ಕೊಡಬೇಕಾಗಿ ಕೇಳುತ್ತಿದ್ದೇನೆ.
ಉ: ಒಮ್ಮೆ ಫಾರ್ಮಾಟ್ ಮಾಡಿದ ನಂತರ ಯಾವ ಫೈಲ್ ಕೂಡ ನಿಮಗೆ ಸಿಗಲಾರದು.
   
ಕಂಪ್ಯೂತರ್ಲೆ

ಟ್ವಿಟ್ಟರ್ ವ್ಯಸನಿಯ ಹಾಡುಗಳು

  • ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಟ್ವೀಟ್ ಮಾಡುತ್ತಿರು.
  • ಎದೆ ತುಂಬಿ ಟ್ವೀಟಿದೆನು ಇಂದು ನಾನು. ಎಲ್ಲ ಓದಲಿ ಎಂದು ನಾನು ಟ್ವೀಟುವುದಿಲ್ಲ. ಟ್ವೀಟುವುದು ಅನಿವಾರ್ಯ ಕರ್ಮ ನನಗೆ.

ಸೋಮವಾರ, ಏಪ್ರಿಲ್ 19, 2010

ಗಣಕಿಂಡಿ - ೦೪೮ (ಎಪ್ರಿಲ್ ೧೯, ೨೦೧೦)

ಅಂತರಜಾಲಾಡಿ

ಗಣಿತಜ್ಞರಾಗಿ

ಕೆಲವು ಶಾಲಾ ವಿದ್ಯಾರ್ಥಿಗಳಿಗೆ ತುಂಬ ತಲೆನೋವಿನ ಸಮಸ್ಯೆ ಗಣಿತ. ಯಾವುದೋ ವರ್ಷದಲ್ಲಿ ತಂದೆ ಮತ್ತು ಮಗನ ಪ್ರಾಯದ ವ್ಯತ್ಯಾಸ ಇಷ್ಟು ಪಾಲು, ಇನ್ನೆಷ್ಟೋ ವರ್ಷಗಳ ನಂತರ ಇಷ್ಟು ಪಾಲು, ಹಾಗಾದರೆ ಅವರ ಪ್ರಾಯಗಳೆಷ್ಟು? ಇದು ಎಲ್ಲ ವಿದ್ಯಾರ್ಥಿಗಳು ಬಿಡಿಸಲೇಬೇಕಾದ ಸಮಸ್ಯೆ. ಸಮೀಕರಣಗಳ ಗ್ರಾಫ್ ಬಿಡಿಸುವುದು ಇನ್ನೊಂದು ನಮೂನೆಯ ಸಮಸ್ಯೆ. ಗಣಿತವೆಂದರೆ ಇಷ್ಟೇ ಅಲ್ಲ. ಇನ್ನೂ ಹಲವು ಸಮಸ್ಯೆಗಳಿವೆ. ಇಂತಹ ಸಮಸ್ಯೆಗಳನ್ನು ಬಿಡಿಸಲೆಂದೇ ಒಂದು ಜಾಲತಾಣವಿದೆ. ಅದುವೇ www.wolframalpha.com. ಹಾಗೆಂದು ಈ ಜಾಲತಾಣ ಗಣಿತದ ಸಮಸ್ಯೆಗಳನ್ನು ಪರಿಹರಿಸಲು ಮಾತ್ರವೇ ಇದೆ ಎಂದು ತಿಳಿಯಬೇಕಾಗಿಲ್ಲ. ಅವರೇ ಹೇಳಿಕೊಂಡಂತೆ ಇದು ಒಂದು ಜ್ಞಾನಯಂತ್ರ. ಹೆಚ್ಚಿನ ಮಾಹಿತಿಗಳನ್ನು ನೀವೇ ಭೇಟಿ ನೀಡಿ ತಿಳಿದುಕೊಳ್ಳಿ.


ಡೌನ್‌ಲೋಡ್

ತೊಂದರೆ ಪರಿಹರಿಸಿಕೊಳ್ಳಿ

ಗಣಕದಲ್ಲಿ ಆಗಾಗ ಹಲವಾರು ತೊಂದರೆಗಳು ಕಂಡುಬರುತ್ತವೆ. ನನ್ನ ಗಣಕಕ್ಕೆ ಏನಾಗಿದೆ ಎಂದು ತಲೆ ಕೆರೆದುಕೊಳ್ಳುತ್ತೀರಿ. ಆಗ ಸಹಾಯಕ್ಕೆ ಬರುವುದು Sysinternals Suite ಎಂಬ ತಂತ್ರಾಂಶ. ಇದನ್ನು ಬಳಸಿ ಗಣಕದ ಯಾವ ಭಾಗದಲ್ಲಿ ಏನು ತೊಂದರೆ ಇದೆ ಎಂದು ತಿಳಿದುಕೊಂಡು ಅದನ್ನು ಪರಿಹರಿಸಿಕೊಳ್ಳಬಹುದು. ಇದನ್ನು ಬಳಸಲು ನೀವು ಸ್ವಲ್ಪ ಮಟ್ಟಿನ ತಾಂತ್ರಿಕ ಪರಿಣತಿ ಹೊಂದಿದ್ದರೆ ಒಳ್ಳೆಯದು. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://dwarfurl.com/be85d8


e - ಸುದ್ದಿ

ಗೂಗ್ಲ್ ಅರ್ಥ್ ಮೂಲಕ ಪಳೆಯುಳಿಕೆಗಳ ಪತ್ತೆ

ದಕ್ಷಿಣ ಆಫ್ರಿಕಾದಲ್ಲಿ ಹುಡುಗನೊಬ್ಬ ಕಾಡಿನಲ್ಲಿ ಆಟವಾಡುತ್ತ ಒಂದು ತುಂಬ ಹಳೆಯ ಕಾಲದ ಜೀವಿಯೊಂದರ ಪಳೆಯುಳಿಕೆಯನ್ನು ಎಡವಿದ. ಅದನ್ನು ಪರಿಶೀಲಿಸಿದಾಗ ಅದು ೨೦ ಲಕ್ಷ ವರ್ಷಗಳಷ್ಟು ಹಳೆಯ, ವಿಕಾಸದಲ್ಲಿ ಮಾನವನಿಗಿಂತ ಒಂದು ಹಂತ ಹಿಂದಿದ್ದ ಜೀವಿಯದಾಗಿತ್ತು ಎಂದು ತಿಳಿದುಬಂತು. ವಿಜ್ಞಾನಿಗಳು ಗೂಗ್ಲ್ ಅರ್ಥ್ ಬಳಸಿ ಆ ಪ್ರದೇಶವನ್ನು ಪರಿಶೀಲಿಸಿದಾಗ ಆ ಪ್ರದೇಶದಲ್ಲಿ ಹಲವಾರು ಗುಹೆಗಳು ಕಂಡು ಬಂದವು. ಅವುಗಳಲ್ಲಿ ಅದೇ ರೀತಿಯ ಇನ್ನೂ ಹಲವಾರು ಪಳೆಯುಳಿಕೆಗಳು ಸಿಕ್ಕವು. ಈ ಜೀವಿ ಮಾನವನ ವಿಕಾಸದಲ್ಲಿ ಒಂದು ಮಹತ್ವದ ಕೊಂಡಿ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.


e- ಪದ

ವೈಕಿ (wiki) - ಸಹಯೋಗಿ ಜ್ಞಾನ ಭಂಡಾರ. ಇದಕ್ಕೆ ಉತ್ತಮ ಉದಾಹರಣೆ ಸಹಯೋಗಿ ಮುಕ್ತ ವಿಶ್ವಕೋಶ wikipedia.org. ಇದಕ್ಕೆ ಯಾರು ಬೇಕಾದರು ಮಾಹಿತಿ ಸೇರಿಸಬಹುದು ಮತ್ತು ಇರುವ ಮಾಹಿತಿಯನ್ನು ತಿದ್ದಬಹುದು.


e - ಸಲಹೆ

ಅಶೋಕ ಬಿಳಗಿ ಅವರ ಪತ್ರ: ಕಳೆದವಾರ ನೀವು ಸೂಚಿಸಿದ WebcamXP ತಂತ್ರಾಂಶದಲ್ಲಿ ವೈರಸ್ ಇದೆ. ದಯವಿಟ್ಟು ಇಂತಹ ವೈರಸ್ ಭರಿತ ತಂತ್ರಾಂಶಗಳನ್ನು ಸೂಚಿಸಬೇಡಿ. ಜಾಲತಾಣಗಳನ್ನು ಸೂಚಿಸುವಾಗ ಎಚ್ಚರವಿರಲಿ.
ಉ: ನಾನು ಆ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿ ಬಳಸಿ ನೋಡಿದ್ದೇನೆ. ಅದರಲ್ಲಿ ಯಾವುದೇ ವೈರಸ್ ಇಲ್ಲ. ನಾನು ಮೈಕ್ರೋಸಾಫ್ಟ್ ಸೆಕ್ಯುರಿಟಿ ಎಸ್ಸೆನ್ಶಿಯಲ್ಸ್ ವೈರಸ್ ನಿರೋಧಕ ಬಳಸುತ್ತದ್ದೇನೆ. ಇದು ಚೆನ್ನಾಗಿದೆ. ಎಲ್ಲ ವೈಸರ್‌ಗಳನ್ನು ಇದು ಪತ್ತೆಹಚ್ಚುತ್ತದೆ. ನಾನು ಅತ್ಯಾಧುನಿಕ ಬ್ರೌಸರ್ ತಂತ್ರಾಂಶಗಳನ್ನು ಬಳಸುತ್ತೇನೆ (ಮೈಕ್ರೋಸಾಫ್ಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ೮, ಫೈರ್‌ಪಾಕ್ಸ್ ೩.೬, ಗೂಗ್ಲ್ ಕ್ರೋಮ್ ೪.೧). ಇವು ವೈರಸ್‌ಭರಿತ ಜಾಲತಾಣಗಳನ್ನು ತಡೆಹಿಡಿಯುತ್ತವೆ. ಬಹುಶಃ ನಿಮ್ಮ ಗಣಕದಲ್ಲಿ ವೈರಸ್ ಇರಬಹುದು. ಒಮ್ಮೆ ಪರಿಶೀಲಿಸಿ ನೋಡಿ.

   
ಕಂಪ್ಯೂತರ್ಲೆ

ತರಲೆ ಅನುವಾದ

ಇಂಗ್ಲಿಶ್: please copy this thumb drive and return
ಕನ್ನಡ: ಈ ಹೆಬ್ಬೆರಳನ್ನು ಕೋಪಿಸಿಕೊಂಡು ವಾಪಾಸುಕೊಡು

ಸೋಮವಾರ, ಏಪ್ರಿಲ್ 12, 2010

ಗಣಕಿಂಡಿ - ೦೪೭ (ಎಪ್ರಿಲ್ ೧೨, ೨೦೧೦)

ಅಂತರಜಾಲಾಡಿ

ಸುಳ್ಳುಸುದ್ದಿಗಳಿಗೊಂದು ಜಾಲತಾಣ

ಸುದ್ದಿ ಎಲ್ಲರಿಗೂ ಬೇಕು. ಆದರೆ ಸುಳ್ಳು ಸುದ್ದಿ? ಅರ್ಥಾತ್ ವಿಡಂಬನಾತ್ಮಕ ಸುದ್ದಿ. ನಿಜವಾಗಿ ನೋಡಿದರೆ ಅವು ಸುದ್ದಿ ಅಲ್ಲ. ಆದರೆ ಸದ್ಯ ಪ್ರಚಲಿತ ವಿಷಯಗಳನ್ನೇ ತಿರುಚಿ ನಿಜವಾದ ಸುದ್ದಿಯೇನೋ ಎಂಬಂತೆ ಬಿಂಬಿಸಿ ತಯಾರಿಸಿದ ರೋಚಕ “ಸುದ್ದಿ”ಗಳು. ಓದಲು ನಿಜವಾಗಿಯೂ ಉಲ್ಲಾಸದಾಯಕವಾಗಿರುತ್ತವೆ. ಕೆಲವೊಮ್ಮೆ ವಿಚಾರಪ್ರದವಾಗಿಯೂ ಇರುತ್ತವೆ. ಇಂತಹ ಸುದ್ದಿಗಳ ಜಾಲತಾಣ www.fakingnews.com. ಇದು ಭಾರತೀಯರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾದ ಜಾಲತಾಣ. ಅಂದರೆ ಇಲ್ಲಿರುವುದೆಲ್ಲ ಭಾರತೀಯ “ಸುದ್ದಿ”ಗಳು. ಇದರಲ್ಲಿ ಕೆಲವು ನಿಜಕ್ಕೂ ಸ್ವಾರಸ್ಯಕರವಾದ “ಸುದ್ದಿ”ಗಳು ಪ್ರಕಟವಾಗಿವೆ. ಉದಾಹರಣೆಗೆ ಗೂಗ್ಲ್ ವೇವ್ ಅರ್ಥವಾಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ತಂತ್ರವ್ಯಸನಿ (ಗೀಕ್). ಈ ಜಾಲತಾಣವು ಜಗತ್ಪ್ರಸಿದ್ಧ ಓನಿಯನ್ (www.theonion.com) ಜಾಲತಾಣವನ್ನು ಮಾದರಿಯಾಗಿ ಇಟ್ಟುಕೊಂಡು ತಯಾರಾಗಿದೆ. ಇದೇ ಮಾದರಿಯಲ್ಲಿ ಕನ್ನಡದಲ್ಲಿ ಬೊಗಳೆ ಓದಬೇಕೆ? ಹಾಗಿದ್ದರೆ www.anveshi.net  ಜಾಲತಾಣಕ್ಕೆ ಭೇಟಿ ನೀಡಿ.

ಡೌನ್‌ಲೋಡ್

ಕ್ಯಾಮರಾ ತಂತ್ರಾಂಶ

ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಹುಪಾಲು ಲ್ಯಾಪ್‌ಟಾಪ್ ಗಣಕಗಳಲ್ಲಿ (ಮಡಿಲ ಗಣಕ?) ವೆಬ್‌ಕ್ಯಾಮ್ ಅಂದರೆ ಕ್ಯಾಮರಾ ಅಳವಡಿಸಿರುತ್ತಾರೆ. ಆದರೆ ಲ್ಯಾಪ್‌ಟಾಪ್ ತಯಾರಕರು ಅದನ್ನು ಬಳಸಲು ಯಾವುದೇ ತಂತ್ರಾಂಶ ನೀಡಿರುವುದಿಲ್ಲ. ಈ ಕ್ಯಾಮರಾ ಬಳಸಿ ನೀವು ನಿಮ್ಮ ಸ್ನೇಹಿತರ ಜೊತೆ ಅಂತರಜಾಲ ಮುಖೇನ ವೀಡಿಯೋ ಚಾಟ್ ಮಾಡಬಹುದು. ಅಂದರೆ ನೀವು ಮತ್ತು ನಿಮ್ಮ ಸ್ನೇಹಿತ ಒಬ್ಬರನ್ನೊಬ್ಬರು ನೋಡಿಕೊಂಡು ಮಾತನಾಡಬಹುದು. ಈ ವೆಬ್‌ಕ್ಯಾಮ್‌ಗಳನ್ನು ಬಳಸಲು ತಂತ್ರಾಂಶ ಬೇಕು ತಾನೆ? ಅಂತಹ ಒಂದು ಉಚಿತ ತಂತ್ರಾಂಶ webcamXP ದೊರೆಯುವ ಜಾಲತಾಣ www.webcamxp.com. ಇದನ್ನು ಬಳಸಿ ಅಮೇರಿಕದಲ್ಲಿರುವ ಹುಡುಗ ಭಾರತದಲ್ಲಿರುವ ಹಡುಗಿಯ ವಧುಪರೀಕ್ಷೆಯನ್ನೂ ನಡೆಸಬಹುದು! ಇದನ್ನು ಬಳಸಿ ಇದರಲ್ಲಿ ಮೂಡುವ ವೀಡಿಯೋ ನೋಡಿಕೊಂಡು ತಲೆ ಬಾಚಿ ನೋಡೋಣ!


e - ಸುದ್ದಿ

ಕಳೆದುಹೋದವನ್ನು ಪತ್ತೆ ಹಚ್ಚಿ

ನಮ್ಮಲ್ಲಿ ಕೆಲವರಿಗೆ ಬೀಗದ ಕೈ, ಛತ್ರಿ, ಐಪ್ಯಾಡ್, ಪೊಬೈಲ್ ಫೋನ್, ಇತ್ಯಾದಿಗಳನ್ನು ಆಗಾಗ ಕಳೆದುಕೊಳ್ಳುವ ಅಭ್ಯಾಸವಿದೆ. ಅವುಗಳನ್ನು ಕಳ್ಳರು ಕದಿಯುತ್ತಾರೆಂದಲ್ಲ. ಅವನ್ನು ಎಲ್ಲಿ ಇಟ್ಟಿದ್ದೆನೆಂಬುದು ಅವರಿಗೆ ಮರೆತು ಹೋಗಿರುತ್ತದೆ. ಮೊಬೈಲ್ ಫೋನಾದರೆ ಆ ಸಂಖ್ಯೆಗೆ ಇನ್ನೊಂದು ಫೋನಿನಿಂದ ಕರೆ ಮಾಡಿ ಪತ್ತೆ ಹಚ್ಚಬಹುದು. ಇತರೆ ವಸ್ತುಗಳನ್ನು ಎಲ್ಲಿಟ್ಟಿದ್ದೆ ಎಂದು ಜ್ಞಾಪಿಸಿಕೊಳ್ಳುವುದು ಹೇಗೆ? ಜಪಾನಿನ ವಿಜ್ಞಾನಿಗಳು ಇದಕ್ಕೆಂದೇ ಒಂದು ಗ್ಯಾಜೆಟ್ ತಯಾರಿಸಿದ್ದಾರೆ. ಇದು ಕಣ್ಣಿಗೆ ಧರಿಸುವ ಕನ್ನಡಕದ ತರಹ ಇರುತ್ತದೆ. ಆದರೆ ಇದರಲ್ಲಿ ಒಂದು ಕ್ಯಾಮರಾ, ಒಂದು ಚಿಕ್ಕ ಪರದೆ ಮತ್ತು ಬುದ್ಧಿವಂತ ಗಣಕ ಎಲ್ಲ ಇವೆ. ಇದನ್ನು ಧರಿಸಿ ಮನೆಯೆಲ್ಲ ಓಡಾಡಿ ಕಣ್ಣಿಗೆ ಬಿದ್ದ ಎಲ್ಲ ವಸ್ತುಗಳ ಹೆಸರುಗಳನ್ನು ದೊಡ್ಡದಾಗಿ ಹೇಳುತ್ತಾ ಹೋಗಬೇಕು. ಗಣಕ ಅವನ್ನೆಲ್ಲ ದಾಖಲಿಸುತ್ತ ಹೋಗುತ್ತದೆ. ಮುಂದೆ ಯಾವಾಗಾದರೊಮ್ಮೆ ಯಾವುದಾದರು ವಸ್ತು ಎಲ್ಲಿಟ್ಟಿದ್ದೆ ಎಂದು ಜ್ಞಾಪಿಸಿಕೊಳ್ಳಬೇಕಾದಾಗ ಅದರ ಹೆಸರನ್ನು ಹೇಳಿದರೆ ಸಾಕು. ಗಣಕ ತನ್ನಲ್ಲಿರುವ ಮಾಹಿತಿಯನ್ನು ಜಾಲಾಡಿ ಕೊನೆಯ ಬಾರಿಗೆ ಆ ವಸ್ತುವನ್ನು ಎಲ್ಲಿ ನೋಡಿದ್ದೆ ಎಂಬ ವೀಡಿಯೋ ತುಣುಕನ್ನು ಕನ್ನಡಕದ ಮೂಲೆಯಲ್ಲಿರುವ ಚಿಕ್ಕ ಪರದೆಯಲ್ಲಿ ಪ್ಲೇ ಮಾಡಿ ತೋರಿಸುತ್ತದೆ. ಅದೇನೋ ಸರಿ. ಆದರೆ ಕನ್ನಡಕವನ್ನೇ ಎಲ್ಲಿಟ್ಟಿದ್ದೆ ಎಂದು ಮರೆತರೆ?

e- ಪದ

ಮನೆಯೊಳಗೆ ಮನೆಯೊಡೆಯನಿಲ್ಲ

ಕಾಬ್‌ವೆಬ್ ಸೈಟ್ (cobweb Site) - ಹಲವು ಸಮಯಗಳಿಂದ ಯಾವುದೇ ಮಾಹಿತಿಯನ್ನು ನವೀಕರಿಸದ ಜಾಲತಾಣ. ಜಾಲತಾಣವನ್ನು ತಯಾರಿಸುವುದು ಸುಲಭ. ಆದರೆ ಅದಕ್ಕೆ ಆಗಾಗ ಮಾಹಿತಿಯನ್ನು ಸೇರಿಸುವುದು ಮಾತ್ರ ಅಷ್ಟು ಸುಲಭದ ಕೆಲಸವಲ್ಲ. ಆದುದರಿಂದ ವಿಶ್ವವ್ಯಾಪಿ ಜಾಲದಲ್ಲಿ ಕೋಟಿಗಟ್ಟಲೆ ಜಾಲತಾಣಗಳು ಗೊರಕೆ ಹೊಡೆಯುತ್ತಿವೆ ಅಥವಾ ಮನೆಯೊಡೆಯನಿಲ್ಲದ ಮನೆಯೊಳಗೆ ಜೇಡರ ಬಲೆ ತುಂಬಿದಂತಿವೆ. ನಮ್ಮ ಬಹುಪಾಲು ಸರಕಾರಿ ಮತ್ತು ಅರೆ ಸರಕಾರಿ ಜಾಲತಾಣಗಳ ಹಣೆಬರೆಹ ಹೀಗೆಯೇ ಇದೆ. ತುಂಬ ಗದ್ದಲ ಮಾಡಿ ಜಾಲತಾಣದ ಉದ್ಘಾಟನೆ ಮಾಡುತ್ತಾರೆ. ನಂತರ ಅದಕ್ಕೆ ಕಾಲಕಾಲಕ್ಕೆ ಮಾಹಿತಿ ಸೇರಿಸುವ ಗೊಡವೆಗೆ ಯಾರೂ ಹೋಗುವುದಿಲ್ಲ. ಉದಾಹರಣೆಗೆ ಕರ್ನಾಟಕ ಸರಕಾರದ ವಿಶ್ವಕೋಶ ಕಣಜ (kanaja.in). ಉದ್ಘಾಟನೆಯ ನಂತರ ಈ ಜಾಲತಾಣಕ್ಕೆ ಯಾವ ಮಾಹಿತಿಯನ್ನೂ ಸೇರಿಸಿಲ್ಲ.

e - ಸಲಹೆ

ದಾವಣಗೆರೆಯ ಶಮಂತ್ ವಿ.ಎಂ. ಅವರ ಪ್ರಶ್ನೆ: ನಾನು ಡಿಜಿಟಲ್ ಕ್ಯಾಮರದಿಂದ ತೆಗೆದ ಮಹತ್ವದ ಫೋಟೋಗಳನ್ನು ಸಿ.ಡಿ. ಒಂದರಲ್ಲಿ ಉಳಿಸಿಟ್ಟಿದ್ದೆ.  ಆದರೆ ಆ ಸಿ.ಡಿ. ಮಧ್ಯ ಭಾಗದಿಂದ ಸ್ವಲ್ಪ ಸೀಳು ಬಿಟ್ಟಿದೆ. ಈಗ ಆ ಸಿ.ಡಿ. ಗಣಕ ಯಂತ್ರದ ಸಿ.ಡಿ. ಚಾಲಕದಲ್ಲಿ ಆರಂಭವಾಗುತ್ತಿಲ್ಲ. ಅವು ಮಹತ್ವದ ಛಾಯಾಚಿತ್ರಗಳಾಗಿದ್ದು ಅವುಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಸಾಧ್ಯವೇ ದಯವಿಟ್ಟು ತಿಳಿಸಿ.  ನಾನು ನಿಮ್ಮ ಗಣಕಿಂಡಿ ಅಂಕಣದ ಓದುಗ. 
ಉ: ಹಿಂದೊಮ್ಮೆ ಇಂತಹದೇ ಪ್ರಶ್ನೆಗೆ ಉತ್ತರಿಸಲಾಗಿತ್ತು. ನೀವು CD Recovery Toolbox ಎಂಬ ಉಚಿತ ತಂತ್ರಾಂಶವನ್ನು ಬಳಸಿ ಪ್ರಯತ್ನಿಸಬಹುದು. ನೀವು ಇದನ್ನು http://bit.ly/4JUUGn ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

   
ಕಂಪ್ಯೂತರ್ಲೆ

ಗಣಕ ತಗಾದೆಗಳು

ಚಾಟ್‌ನಲ್ಲಿ ಹೋದ ಮಾನ ಇಮೈಲ್‌ನಲ್ಲಿ ವಾಪಾಸು ಬರುವುದಿಲ್ಲ.
ಆರ್ಕುಟ್‌ನಲ್ಲಿ ಹೋದ ಮಾನ ಫೇಸ್‌ಬುಕ್‌ನಲ್ಲಿ ವಾಪಾಸು ಬರುವುದಿಲ್ಲ.
ಬ್ಲಾಗ್ ಮಾಡಲು ಸೋಮಾರಿಯಾದವನು ಟ್ವೀಟ್ ಮಾಡಿದನಂತೆ.
ಟ್ವೀಟ್ ಮಾಡುವುದರಿಂದ ಹುಲಿಗಳನ್ನು ಉಳಿಸಲು ಸಾಧ್ಯವಿಲ್ಲ.

ಮಂಗಳವಾರ, ಏಪ್ರಿಲ್ 6, 2010

ಗಣಕಿಂಡಿ - ೦೪೬ (ಎಪ್ರಿಲ್ ೦೫, ೨೦೧೦)

ಅಂತರಜಾಲಾಡಿ

ಬೋರ್ ಆಗಿದೆಯೇ?

ಅಂದ ಹಾಗೆ ಈ ಬೋರ್ ಅನ್ನೋ ಪದಕ್ಕೆ ಶೇಕಡ ನೂರು ಸಮಾನಾರ್ಥವಾದ ಕನ್ನಡ ಪದವೇನು? ಇಲ್ಲವೇ? ಯಾಕೆಂದರೆ ಮೂಲ ಕನ್ನಡಿಗರಿಗೆ ಬೋರ್ ಆಗುತ್ತಲೇ ಇರಲಿಲ್ಲ! ಇರಲಿ. ಈಗ ಪಾಶ್ಚಾತ್ಯ ಸಂಸ್ಕೃತಿಯ ಗಾಳಿಯಿಂದಾಗಿ ನಿಮಗೂ ಬೋರ್ ಆಗುತ್ತಿದೆಯೇ? ಹಾಗಿದ್ದರೆ ನೀವು ಖಂಡಿತವಾಗಿಯೂ www.bored.com ಜಾಲತಾಣಕ್ಕೆ ಭೇಟಿ ನೀಡಬೇಕು. ನಿಮ್ಮ ಬೋರ್ ಹೋಗಲಾಡಿಸಲು ಬೇಕಾದುದೆಲ್ಲ ಇಲ್ಲಿವೆ. ಆಟಗಳು, ವಿಡಿಯೋ, ನಗೆಹನಿ, ಸಮಸ್ಯೆಗಳು ಹೀಗೆ ನಿಮ್ಮ ಬೋರ್ ಕಳೆಯಲು ಹಾಗೂ ಸಮಯ ಹಾಳು ಮಾಡಲು ಬೇಕಾದ ಎಲ್ಲ ಸಂಗತಿಗಳು ಇಲ್ಲಿವೆ. ಇನ್ನೊಮ್ಮೆ ನಿಮ್ಮ ಸ್ನೇಹಿತರು ಯಾರಾದರೂ “ನನಗೆ ತುಂಬ ಬೋರ್ ಆಗುತ್ತಿದೆ” ಎಂದರೆ ಈ ಜಾಲತಾಣಕ್ಕೆ ಭೇಟಿ ನೀಡಲು ಸಲಹೆ ನೀಡಿ! ಈ ಜಾಲತಾಣದಲ್ಲಿ ಇನ್ನೂ ಒಂದು ಸೌಲಭ್ಯವಿದೆ. ಅಮೇರಿಕಾದ ಯಾವುದಾದರೂ ದೂರವಾಣಿಗೆ ಸಂದೇಶವನ್ನು ಬೆರಳಚ್ಚು ಮಾಡಿದರೆ ಅದನ್ನು ಆ ದೂರವಾಣಿಗೆ ಫೋನ್ ಮಾಡಿ ಅದು ಉಲಿಯುತ್ತದೆ!


ಡೌನ್‌ಲೋಡ್

ವೀಡಿಯೋ ಕದಿಯಬೇಕೇ?

ಹಲವಾರು ವೀಡಿಯೋ ಜಾಲತಾಣಗಳಿವೆ. ಅವುಗಳಲ್ಲಿ ಯುಟ್ಯೂಬ್ (youtube.com) ತುಂಬ ಜನಪ್ರಿಯ. ಬೇರೆ ಬೇರೆ ವೀಡಿಯೋ ಜಾಲತಾಣಗಳಿಂದ ವೀಡಿಯೋ ಡೌನಲೋಡ್ ಮಾಡಲು ಬೇರೆ ಬೇರೆ ತಂತ್ರಾಂಶಗಳು ಲಭ್ಯವಿವೆ. ಆದರೆ ಎಲ್ಲ ಜಾಲತಾಣಗಳಿಂದಲೂ ವೀಡಿಯೋ ಡೌನ್‌ಲೋಡ್ ಮಾಡಬಲ್ಲ ತಂತ್ರಾಂಶ ಒಂದಿದೆ. ಅದುವೇ xVideoServiceThief. ಇದನ್ನು ಬಳಸಿ ಎಲ್ಲ ಜಾಲತಾಣಗಳಿಂದಲೂ ವೀಡಿಯೋ ಡೌನ್‌ಲೋಡ್ ಮಾಡಬಹುದು. ಇದು ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ - http://bit.ly/99Dm2P. ಈ ತಂತ್ರಾಂಶ ಬಳಸಿ ಯಾವ ನಮೂನೆಯ ವೀಡಿಯೋವನ್ನೂ ಡೌನ್‌ಲೋಡ್ ಮಾಡಬಹುದು. ಡೌನ್‌ಲೋಡ್ ಆದ ನಂತರ ನಿಮಗೆ ಬೇಕಾದ ವಿಧಾನಕ್ಕೆ ಪರಿವರ್ತಿಸಿಕೊಳ್ಳಲೂಬಹುದು. ಈ ತಂತ್ರಾಂಶ ಕೇವಲ ವಿಂಡೋಸ್‌ಗೆ ಮಾತ್ರವಲ್ಲ, ಲಿನಕ್ಸ್ ಹಾಗೂ ಮ್ಯಾಕ್‌ಗೂ ಲಭ್ಯವಿದೆ.


e - ಸುದ್ದಿ

ಮಾನವನ ಕೈ ಮೂಲಕ ಬ್ರಾಡ್‌ಬ್ಯಾಂಡ್

ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ತಂತಿ, ನಿಸ್ತಂತು (ವೈರ್‌ಲೆಸ್) ಮೂಲಕ ಪಡೆಯುವುದು ತಿಳಿದಿರಬಹುದು. ಇತ್ತೀಚೆಗೆ ಕೊರಿಯಾದ ವಿಜ್ಞಾನಿಗಳು ಮಾನವನ ಕೈ ಮೂಲಕವೇ ಬ್ರಾಡ್‌ಬ್ಯಾಂಡ್ ವೇಗದಲ್ಲಿ ಮಾಹಿತಿ ಸಂವಹನದಲ್ಲಿ ಯಶಸ್ವಿಯಾಗಿದ್ದಾರೆ. ಒಬ್ಬ ವ್ಯಕ್ತಿಯ ಕೈಯಲ್ಲಿ ೩೦ ಸೆ.ಮೀ. ದೂರದಲ್ಲಿ ಎರಡು ಎಲೆಕ್ಟ್ರೋಡ್‌ಗಳನ್ನು ಅಳವಡಿಸಿ ಅವುಗಳ ಮೂಲಕ ೧೦ ಮೆಗಾಬಿಟ್‌ನಷ್ಟು ವೇಗದಲ್ಲಿ ಮಾಹಿತಿ ಕಳುಹಿಸುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅತಿ ಕಡಿಮೆ ವಿದ್ಯಚ್ಛಕ್ತಿಯನ್ನು ಈ ಪ್ರಯೋಗದಲ್ಲಿ ಬಳಸಲಾಗಿತ್ತು. ಇದು ಮನುಷ್ಯರ ಚರ್ಮ, ಹೃದಯ, ರಕ್ತ ಪರಿಚಲನೆಯ ಮೇಲೆ ಯಾವುದೇ ದುಷ್ಪರಿಣಾಮ ಮಾಡುವುದಿಲ್ಲ ಎಂದು ಅವರು ಹೇಳಿಕೆ ನಿಡಿದ್ದಾರೆ. ಆದರೆ ಇವುಗಳನ್ನು ಅವರು ಪರೀಕ್ಷೆ ಮೂಲಕ ದೃಢಪಡಿಸಿಲ್ಲ.


e- ಪದ

ಮಾನವಾಂಶ? (ಹ್ಯೂಮನ್ ವೇರ್ - humanware) - ಎಲ್ಲ ತಂತ್ರಾಂಶ ಮತ್ತು ಯಂತ್ರಾಂಶಗಳು ಮಾನವನನ್ನು ಗಮನದಲ್ಲಿಟ್ಟುಕೊಂಡೇ ತಯಾರಾಗಿರುವುದು. ಆದರೆ ಅವು ಯಾವಾಗಲೂ ಹಾಗೆಯೇ ಇದೆ ಎಂಬುದು ನಿಜವಲ್ಲ. ಇತ್ತೀಚೆಗೆ ಗ್ರಾಹಕನನ್ನು ಗಮನದಲ್ಲಿಟ್ಟುಕೊಂಡು ಅಂದರೆ ಬಳಕೆದಾರ ಸ್ನೇಹಿಯಾದ ಯಂತ್ರಾಂಶ ಮತ್ತು ತಂತ್ರಾಂಶಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇವುಗಳಿಗೆ ಹ್ಯೂಮನ್‌ವೇರ್ ಎಂದು ಹೆಸರಿಸಲಾಗಿದೆ. ಸರಕಾರದ ನೌಕರರಿಗೆ ಯಾವ ರೀತಿಯ ಯಂತ್ರಾಂಶ ಮತ್ತು ತಂತ್ರಾಂಶ ನೀಡಿದರೂ ಅವರು ಅದನ್ನು ಬಳಸದಿರುವುದು ನಿಮಗೆ ತಿಳಿದಿರಬಹುದು. ಈ ಸರಕಾರಿ ಹ್ಯೂಮನ್‌ವೇರ್ ರೋಗಕ್ಕೆ ಮದ್ದಿಲ್ಲ :)

e - ಸಲಹೆ

ಭರತ್ ಅವರ ಪ್ರಶ್ನೆ: ನನಗೆ ಉಚಿತ ಕೀ ಲೋಗ್ಗರ್ ತಂತ್ರಾಂಶ ಬೇಕು. ಎಲ್ಲಿ ಸಿಗುತ್ತದೆ?
ಉ: ಕೀ ಲೋಗ್ಗರ್ ಅಂದರೆ ನಿಮ್ಮ ಗಣಕದಲ್ಲಿ ಒತ್ತಿದ ಎಲ್ಲ ಕೀಲಿಗಳನ್ನು ಗುಪ್ತವಾಗಿ ಸಂಗ್ರಹಿಸಿಡುವ ತಂತ್ರಾಂಶ. ಇಂತಹ ತಂತ್ರಾಂಶಗಳನ್ನು ಸಾಮಾನ್ಯವಾಗಿ ಎಲ್ಲ ವೈರಸ್ ನಿರೋಧಕ ತಂತ್ರಾಂಶಗಳು ಅಳಿಸಿಹಾಕುತ್ತವೆ. ವೈರಸ್ ನಿರೋಧಕ ತಂತ್ರಾಂಶದಲ್ಲಿ ಮೊದಲೇ ಈ ಕೀ ಲೋಗ್ಗರ್ ತಂತ್ರಾಂಶದ ಹೆಸರನ್ನು ದಾಖಲಿಸಿ, ಅಳಿಸದಂತೆ ಮಾಡಿ ಮುಂದುವರೆಯಬೇಕಾಗುತ್ತದೆ. ಹೀಗೆಲ್ಲ ಮಾಡಲು ನೀವು ತಯಾರಿದ್ದರೆ ನೀವು www.refog.com/keylogger.html ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಸಂಪೂರ್ಣ ಉಚಿತ ಮತ್ತು ವಾಣಿಜ್ಯಕ ಎಂಬ ಎರಡು ಆವೃತ್ತಿಗಳಿವೆ. ಉಚಿತ ಆವೃತ್ತಿಯಲ್ಲಿ ಕೆಲವು ಮಿತಿಗಳಿವೆ. ಅವು ಏನೇನು ಎಂದು ಅದೇ ಜಾಲತಾಣದಲ್ಲಿ ಪಟ್ಟಿ ಮಾಡಿದ್ದಾರೆ.
   
ಕಂಪ್ಯೂತರ್ಲೆ

ಗಣಕಜ್ಞ ವಚನಗಳು

ಗಣಕಜ್ಞನೆಂಬವನು ಗರ್ವದಿಂದಾದವನೆ?
ಸರ್ವರೊಳು ಒಂದೊಂದು ಬಗ್ ಪಡೆದು
ಪ್ರೋಗ್ರಾಮ್‌ನ ಕಂತೆಯೇ ಆದ ಗಣಕಜ್ಞ

ಜಾತಿಹೀನನ ಮನೆಯ ಗಣಕ ತಾ ಹೀನವೇ?
ಗಣಕಕ್ಕೆ ಜಾತಿ ತಾನೇಕೆ? ಗಣಕ ಕೆಲಸ
ಮಾಡಿದರೆ ತಾ ಸಾಲದೆ ಗಣಕಜ್ಞ

ಚಾಟ್ ಮಾಡಿದರು ಉತ್ತರಿಸದ
ಇಮೈಲ್‌ಗೂ ಉತ್ತರಿಸದ ಭೂಪ ತಾ
ಏನು ಮಾಡದರೇನು ಫಲ ಗಣಕಜ್ಞ