ಸೋಮವಾರ, ಮೇ 31, 2010

ಗಣಕಿಂಡಿ - ೦೫೪ (ಮೇ ೩೧, ೨೦೧೦)

ಅಂತರಜಾಲಾಡಿ

ಪರಿಸರಪ್ರಿಯರಾಗಿ

ಜೂನ್ ೫ ವಿಶ್ವ ಪರಿಸರ ದಿನ. ಪ್ರಪಂಚಾದ್ಯಂತ ಪರಿಸರದ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಲು ಆ ದಿನ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ವಿಶ್ವ ಪರಿಸರ ಕಾರ್ಯಕ್ರಮಗಳ ಬಗ್ಗೆ ಒಂದು ಜಾಲತಾಣವಿದೆ. ಅದರ ವಿಳಾಸ www.unep.org. ವಿಶ್ವ ಪರಿಸರ ದಿನ, ಜೀವ ವೈವಿಧ್ಯ, ಹವಾಮಾನದ ಬದಲಾವಣೆ, ಹಲವಾರು ಬಹುಮಾಧ್ಯಮ ಕಡತಗಳು, ಪರಿಸರ ಕಾರ್ಯಕ್ರಮಗಳ ಕ್ಯಾಲೆಂಡರ್, ಹೀಗೆ ಹಲವಾರು ಉಪಯುಕ್ತ ಮಾಹಿತಿಗಳು ಈ ಜಾಲತಾಣದಲ್ಲಿ ಲಭ್ಯ. ಗೊರಿಲ್ಲಕ್ಕೆ ಹೆಸರು ನೀಡಿ ಬಹುಮಾನ ಗೆಲ್ಲಬೇಕೆ? ಹಾಗಿದ್ದರೆ ಜೂನ್ ೫ರ ಒಳಗೆ ಹೆಸರು ಸೂಚಿಸಿ. ನಾವು ವಾಸಿಸುತ್ತಿರುವ ಭೂಗ್ರಹದ ಬಗ್ಗೆ ಇದೇ ಮಾದರಿಯ ಇನ್ನೊಂದು ಉಪಯುಕ್ತ ಜಾಲತಾಣ www.goodplanet.org. ಇದು ತೆರೆದಾಗ ಫ್ರೆಂಚ್ ಭಾಷೆಯಲ್ಲಿರುತ್ತದೆ. ಇಂಗ್ಲಿಷ್ ಭಾಷೆಗೆ ಬದಲಾಯಿಸಿಕೊಂಡು ಓದಿ. ಇದರಲ್ಲೂ ಹಲವಾರು ಉಪಯುಕ್ತ ಮಾಹಿತಿಗಳು ಬಹುಮಾಧ್ಯಮಗಳು ಇವೆ.

ಡೌನ್‌ಲೋಡ್

ಈ ಭೂಮಿ ನಮ್ಮ ಮನೆ

ಈ ಭೂಗ್ರಹಕ್ಕೆ ೪.೫೪ ಬಿಲಿಯನ್ (ಶತಕೋಟಿ) ವರ್ಷಗಳ ಪ್ರಾಯ. ಇಷ್ಟು ದೀರ್ಘ ಇತಿಹಾಸವಿರುವ ಭೂಗ್ರಹದಲ್ಲಿ ಮಾನವನ ಹುಟ್ಟು ಆಗಿದ್ದು ಸುಮಾರು ಎರಡು ಲಕ್ಷ ವರ್ಷಗಳ ಹಿಂದೆ. ಆತ ಕೃಷಿ ಮಾಡಿ ಅಡುಗೆ ಮಾಡಲು ಕಲಿತಿದ್ದು ಸುಮಾರು ೧೫ ಸಾವಿರ ವರ್ಷಗಳ ಹಿಂದೆ. ಆದರೆ ಇತ್ತೀಚೆಗಿನ ಕೇವಲ ೫೦ ವರ್ಷಗಳ ಕಾಲದಲ್ಲಿ ಇದೇ ಮಾನವ ತನಗೆ ಆಶ್ರಯ ನೀಡಿ ಪೊರೆದ ಭೂಮಿಯನ್ನು ಇತಿಮಿತಿಯಿಲ್ಲದೆ ಹಾಳುಗೆಡವಿದ್ದಾನೆ. ಈ ಎಲ್ಲ ವಿಷಯಗಳನ್ನು ಚೆನ್ನಾಗಿ ಮನದಟ್ಟುಮಾಡುವ ಚಲನಚಿತ್ರ ಹೋಮ್ (Home). ಇದು ಫ್ರೆಂಚ್, ಸ್ಪಾನಿಶ್, ಇಂಗ್ಲಿಶ್ ಇತ್ಯಾದಿ ಭಾಷೆಗಳಲ್ಲಿ ಲಭ್ಯವಿದೆ. ಇದನ್ನು ವೀಕ್ಷಿಸಲು ನೀವು www.youtube.com/homeproject ಜಾಲತಾಣಕ್ಕೆ ಭೇಟಿ ನೀಡಬೇಕು. ಇದನ್ನು ನಿಮ್ಮ ಗಣಕಕ್ಕೆ ಡೌನ್‌ಲೋಡ್ ಮಾಡಿಕೊಳ್ಳಬೇಕಾದರೆ ಇದೇ ಗಣಕಿಂಡಿ ಅಂಕಣದಲ್ಲಿ ಹಿಂದೊಮ್ಮೆ ಸೂಚಿಸಿದ್ದ ಯುಟ್ಯೂಬ್ ಡೌನ್‌ಲೋಡರ್ (http://bit.ly/oRMpZ) ತಂತ್ರಾಂಶವನ್ನು ಬಳಸಿ.


e - ಸುದ್ದಿ

ಮಾನವನಿಗೆ ಕಂಪ್ಯೂಟರ್ ವೈರಸ್

ಕಂಪ್ಯೂಟರ್‌ಗಳಿಗೆ ವೈರಸ್ ಪೀಡೆ ಬರುವುದು ಎಲ್ಲರಿಗೂ ಗೊತ್ತು. ಮನುಷ್ಯರಿಗೂ ವೈರಸ್ ಪೀಡೆ ಬರುತ್ತದೆ. ಆದರೆ ಈ ಎರಡು ವೈರಸ್‌ಗಳು ಬೇರೆ ಬೇರೆ ನಮೂನೆಯವು. ಮಾನವನ ದೇಹಕ್ಕೆ ಕಂಪ್ಯೂಟರ್ ವೈರಸ್ ಸೇರಿಸಿದರೆ? ಏನು ಅಸಂಬದ್ಧ ಮಾತು ಅನ್ನುತ್ತೀರಾ? ಮಾರ್ಕ್ ಗ್ಯಾಸನ್ ಎಂಬ ಬ್ರಿಟಿಷ್ ವಿಜ್ಞಾನಿಯೊಬ್ಬರು ತನ್ನ ದೇಹಕ್ಕೆ ಕಂಪ್ಯೂಟರ್ ವೈರಸ್ ಇರುವ ಚಿಪ್ ಒಂದನ್ನು ಶಸ್ತ್ರಕ್ರಿಯೆಯ ಮೂಲಕ ಸೇರಿಸಿದ್ದಾರೆ. ಅವರು ಗಣಕಜಾಲಗಳಿಗೆ ಈ ಚಿಪ್ ಮೂಲಕ ವೈರಸ್ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಗಣಕಜಾಲಗಳಿರುವಲ್ಲಿ ನಡೆದಾಡಿ ಈ ಸಾಧನೆ ಮಾಡಿ ತೋರಿಸದ್ದಾರೆ. ಮುಂದೆ ಕಿಡಿಗೇಡಿಗಳು ಯಾವ ರೀತಿಯಲ್ಲಿ ಗಣಕಜಾಲಗಳನ್ನು ಕೆಡಿಸಬಹುದು ಎಂಬುದನ್ನು ವೈಜ್ಞಾನಿಕವಾಗಿ ತೋರಿಸಲು ಅವರು ಈ ಪ್ರಯೋಗ ಮಾಡಿ ತೋರಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ.

e- ಪದ

ಹಸಿರು ಗಣಿಸು (Green computing) -ಪರಿಸರ ಸ್ನೇಹಿ ಗಣಕೀಕರಣ ಅಥವಾ ಮಾಹಿತಿ ತಂತ್ರಜ್ಞಾನ. ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಯಂತ್ರಾಂಶಗಳು ಪರಿಸರ ಸ್ನೇಹಿಯಾಗಿದ್ದು ಅವುಗಳು ಪುನರ್ಬಳಕೆ ಮಾಡಬಲ್ಲವಾಗಿರುವುದು ಅಥವಾ ಜೈವಿಕವಾಗಿ ಕೊಳೆಯಬಲ್ಲವು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಕೆಯಾಗುವ ಎಲ್ಲ ಯಂತ್ರಾಂಶಗಳ ಆಯುಷ್ಯ ಮುಗಿದ ನಂತರ ಅವುಗಳನ್ನು ಅಲ್ಲಿ ಇಲ್ಲಿ ಎಸೆಯುವುದರಿಂದ ಪರಿಸರದ ಮೇಲೆ ದೊಡ್ಡ ಹಾನಿಯಾಗುತ್ತದೆ. ಇತ್ತೀಚೆಗೆ ಇಂತಹ ಹಾನಿಯನ್ನು ಕಡಿಮೆ ಮಾಡಬೇಕು ಎಂಬ ಅರಿವು ಜನರಲ್ಲಿ ಮೂಡಿದೆ.

e - ಸಲಹೆ

ಎ. ರಾಮಚಂದ್ರ ಅವರ ಪ್ರಶ್ನೆ: ನನಗೆ ಹಿಂದಿ ಭಾಷೆಯಲ್ಲಿ ಮುದ್ರಿತ ಪಠ್ಯವನ್ನು ಸ್ಕ್ಯಾನ್ ಮಾಡಿ ಗಣಕದಲ್ಲಿ ಪಠ್ಯವನ್ನಾಗಿ ಪರಿವರ್ತಿಸುವ ತಂತ್ರಾಂಶ ಬೇಕು. ಅಂತಹ ತಂತ್ರಾಂಶ ಸಿಗುತ್ತದೆಯೇ? ಸಿಗುವುದಿದ್ದರೆ ಎಲ್ಲಿ?
ಉ: ಕೇಂದ್ರ ಸರಕಾರದ ಅಧೀನಕ್ಕೊಳಪಟ್ಟ ಸಿ-ಡ್ಯಾಕ್ ಸಂಸ್ಥೆಯವರು ಚಿತ್ರಾಂಕಣ ಎನ್ನುವ ತಂತ್ರಾಂಶವನ್ನು ತಯಾರಿಸಿದ್ದಾರೆ. ಇದನ್ನು ನೀವು ಬಳಸಿ ನೋಡಬಹುದು. ಇದು ಎಷ್ಟು ಪರಿಪೂರ್ಣವಾಗಿದೆ, ಇದಕ್ಕೆ ಬೆಲೆಯಿದೆಯೇ, ಅಥವಾ ಉಚಿತವೇ ಇತ್ಯಾದಿ ಮಾಹಿತಿಗಳು ಅವರ ಜಾಲತಾಣದಲ್ಲಿ ಇಲ್ಲ. ಜಾಲತಾಣದ ವಿಳಾಸ http://bit.ly/bClU2B.
   
ಕಂಪ್ಯೂತರ್ಲೆ

ಕೋಲ್ಯನಿಗೆ ಯಾರೋ ಗಣಕೀಕರಣದಿಂದಾಗಿ ಪರಿಸರದ ಮೇಲೆ ಆಗುವ ಹಾನಿಯ ಬಗ್ಗೆ ಹೇಳಿದರು. ಹಸಿರು ಗಣನೆಯ (Green computing) ಬಗ್ಗೆ ಆತನಿಗೆ ಎಚ್ಚರವಾಯಿತು. ತಾನೂ ಈ ಬಗ್ಗೆ ಏನಾದರೂ ಮಾಡಬೇಕೆಂದುಕೊಂಡ. ಕೂಡಲೆ ಮಾರುಕಟ್ಟೆಗೆ ಹೋಗಿ ಒಂದು ಡಬ್ಬ ಹಸಿರು ಬಣ್ಣ ಕೊಂಡುಕೊಂಡು ಬಂದ. ತನ್ನ ಗಣಕ, ಪರದೆ, ಮೌಸ್, ಕೀಬೋರ್ಡ್ ಎಲ್ಲವಕ್ಕೂ ಹಸಿರು ಬಣ್ಣ ಬಳಿದ.

ಸೋಮವಾರ, ಮೇ 24, 2010

ಗಣಕಿಂಡಿ - ೦೫೩ (ಮೇ ೨೪, ೨೦೧೦)

ಅಂತರಜಾಲಾಡಿ

ಮುಕ್ತ ವೈದ್ಯಕೀಯ ವಿಶ್ವಕೋಶ

ಅಂತರಜಾಲದಲ್ಲೊಂದು ಮುಕ್ತ ವೈದ್ಯಕೀಯ ವಿಶ್ವಕೋಶವಿದೆ. ಅದರ ವಿಳಾಸ www.medpedia.com. ಇದು ಬಹುಮಟ್ಟಿಗೆ ಮುಕ್ತ ವಿಶ್ವಕೋಶ ವಿಕಿಪೀಡಿಯಾ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಇದರ ಉದ್ದೇಶ ವೈದ್ಯಕೀಯ ಜ್ಞಾನವನ್ನು ಎಲ್ಲರಿಗೂ ಉಚಿತವಾಗಿ ತಲುಪಿಸುವುದು. ಇದಕ್ಕೆ ಎಲ್ಲರೂ ಮಾಹಿತಿ ತುಂಬಿಸಬಹುದು. ಇದರಲ್ಲಿ ಕೇವಲ ಮುಕ್ತ ವಿಶ್ವಕೋಶ ಮಾತ್ರವಲ್ಲ. ಲೇಖನಗಳು, ಪ್ರಶ್ನೋತ್ತರಗಳು, ವೈದ್ಯಕೀಯ ಮಾಹಿತಿ, ಎಲ್ಲವೂ ಇವೆ. ಇದನ್ನು ಜನಸಾಮಾನ್ಯರು, ವೈದ್ಯರು, ವಿಜ್ಞಾನಿಗಳು, ಲೇಖಕರು, ಎಲ್ಲರೂ ಬಳಸಬಹುದು.


ಡೌನ್‌ಲೋಡ್

ಯುಎಸ್‌ಬಿ ಗಣಕ ರಕ್ಷಕ

ನಿಮ್ಮ ಗಣಕದಲ್ಲಿ ಕೆಲಸ ಮಾಡುತ್ತಿದ್ದಾಗ ಮಧ್ಯೆ ಎದ್ದು ಹೋಗಬೇಕಾಗಿ ಬಂದಿದೆ. ಹಾಗೆ ಹೋದಾಗ ನಿಮ್ಮ ಗಣಕವನ್ನು ಬೇರೆಯವರು ಬಳಸದಂತೆ ರಕ್ಷಿಸಬೇಕಲ್ಲವೇ? ಗುಪ್ತಪದ (ಪಾಸ್‌ವರ್ಡ್) ಬಳಸುವುದು ಒಂದು ವಿಧ. ಆದರೆ ಅದನ್ನು ಮುರಿಯುವುದು ಅಷ್ಟು ಕಷ್ಟವೇನಲ್ಲ. ಯುಎಸ್‌ಬಿ ಡ್ರೈವ್ ಅನ್ನು ಕೀಲಿಯಂತೆ ಬಳಸುವುದು ಇನ್ನೊಂದು ವಿಧಾನ. ಅದಕ್ಕಾಗಿ ಒಂದು ತಂತ್ರಾಂಶ PREDATOR ಲಭ್ಯವಿದೆ. ಅದು ಬೇಕಿದ್ದಲ್ಲಿ ನೀವು ಭೇಟಿ ನಿಡಬೇಕಾದ ಜಾಲತಾಣ http://bit.ly/alGe4Y. ಈ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಕೆಲಸ ಮಾಡುತ್ತಿದ್ದಲ್ಲಿಂದ ಎದ್ದು ಹೋಗುವಾಗ ಯುಎಸ್‌ಬಿ ಡ್ರೈವ್ ಅನ್ನು ಗಣಕದಿಂದ ಕಿತ್ತು ತೆಗೆದುಕೊಂಡು ಹೋದರೆ ಆಯಿತು. ಆ ಯುಎಸ್‌ಬಿ ಡ್ರೈವ್ ಅನ್ನು ಪುನಃ ತುರುಕಿಸುವ ತನಕ ನಿಮ್ಮ ಗಣಕ ಕೆಲಸ ಮಾಡುವುದಿಲ್ಲ. ಆ ಯುಎಸ್‌ಬಿ ಡ್ರೈವ್ ಅನ್ನು ತುರುಕಿಸಿದಾಗ ನೀವು ಗಣಕದಲ್ಲಿ ಕೆಲಸಗಳನ್ನು ಯಾವ ಸ್ಥಿತಿಯಲ್ಲಿ ಬಿಟ್ಟುಹೋಗಿದ್ದೀರೋ ಅದೇ ಸ್ಥಿತಿಯಿಂದ ಕೆಲಸ ಮುಂದುವರಿಸಬಹುದು. ನಿಮ್ಮ ಅನುಪಸ್ಥಿತಿಯಲ್ಲಿ ಯಾರಾದರೂ ಗಣಕವನ್ನು ಬಳಸಲು ಪ್ರಯತ್ನಿಸಿದರೆ ಅದನ್ನೂ ಅದು ದಾಖಲಿಸಿ ನಿಮಗೆ ತಿಳಿಸುತ್ತದೆ.


e - ಸುದ್ದಿ

ಸೆಗಣಿ ಅನಿಲದಿಂದ ಸರ್ವರ್‌ಗೆ ವಿದ್ಯುತ್

ನಮ್ಮೂರ ಹಳ್ಳಿಗಳಲ್ಲಿ ದನ ಸಾಕುವವರ ಮನೆಗಳಲ್ಲಿ ಸೆಗಣಿ ಅನಿಲದಿಂದ ಅಡುಗೆ ಮಾಡುವುದು, ದೀಪ ಉರಿಸುವುದು ನಿಮಗೆ ತಿಳಿದೇ ಇರಬಹುದು. ಇದೇ ವಿಧಾನದಿಂದ ಸಾವಿರಾರು ಸರ್ವರ್‌ಗಳನ್ನು ಒಟ್ಟಿಗೆ ಇಟ್ಟಿರುವ ಡಾಟಾಸೆಂಟರ್‌ಗೆ ವಿದ್ಯುತ್ ಸರಬರಾಜು ಮಾಡಬಹುದು ಎಂದಿ ವಿಜ್ಞಾನಿಗಳು ಪ್ರತಿಪಾದಿಸುತ್ತಿದ್ದಾರೆ. ಡಾಟಾಸೆಂಟರ್‌ಗಳನ್ನು ಸಾವಿರಾರು ದನಗಳನ್ನು ಸಾಕುತ್ತಿರುವ ಡೈರಿಯ ಪಕ್ಕ ಸ್ಥಾಪಿಸಿ ಅದಕ್ಕೆ ಬೇಕಾದ ವಿದ್ಯುತ್ತನ್ನು ಡೈರಿಯಲ್ಲಿ ದೊರೆಯುವ ಸೆಗಣಿಯಿಂದ ತಯಾರಿಸಿದ ಅನಿಲದ ಮೂಲಕ ಪಡೆಯಬಹುದು ಎಂದು ಅವರು ನಿಖರವಾದ ಲೆಕ್ಕಾಚಾರದ ಮೂಲಕ ತೋರಿಸಿ ಕೊಟ್ಟಿದ್ದಾರೆ. ಇದನ್ನು ಇನ್ನೂ ಯಾರೂ ಆಚರಣೆಗೆ ತಂದಿಲ್ಲ.


e- ಪದ

ಡಾಟಾ ಸೆಂಟರ್ (data center) - ಕೇಂದ್ರೀಕೃತ ಮಾಹಿತಿ ಸಂಗ್ರಹ ವ್ಯವಸ್ಥೆ. ಇದನ್ನು ಸಾಮಾನ್ಯವಾಗಿ ಅಂತರಜಾಲ ಸರ್ವರ್‌ಗಳನ್ನು ಇಡಲು ಬಳಸುತ್ತಾರೆ. ಹಾಗೆಯೇ ಇತರೆ ಅಗಾಧ ಪ್ರಮಾಣದ ಮಾಹಿತಿಗಳನ್ನು ಸಂಗ್ರಹಿಸಡಲೂ ಬಳಸುತ್ತಾರೆ. ಇಂತಹ ಕೇಂದ್ರಗಳಲ್ಲಿ ನೂರಾರು ಗಣಕಗಳು ಮತ್ತು ಸಾವಿರಾರು ಹಾರ್ಡ್‌ಡಿಸ್ಕ್‌ಗಳು ಕೆಲಸ ಮಾಡುತ್ತಿರುತ್ತವೆ. ಇವುಗಳನ್ನು ನಡೆಸಲು ಅಗಾಧ ಪ್ರಮಾಣದ ವಿದ್ಯುತ್ ಅಗತ್ಯವಿರುತ್ತದೆ. ಅಲ್ಲದೆ ಇವು ಹೊರಸೂಸುವ ಅಗಾಧ ಪ್ರಮಾಣದ ಉಷ್ಣವನ್ನು ಹೀರುವ ಸವಲತ್ತೂ ಬೇಕು.

e - ಸಲಹೆ


ಮಹೇಶ ಅವರ ಪ್ರಶ್ನೆ: ನಾನು ಪ್ರೈಮರಿ ಶಾಲೆಯಲ್ಲಿ ಶಿಕ್ಷಕ. ನನಗೆ ಪ್ರಶ್ನೆ ಪತ್ರಿಕೆ ತಯಾರಿಸುವ ತಂತ್ರಾಂಶ ಲಭ್ಯವಿದ್ದರೆ ಬೇಕಿತ್ತು. ಅಂತಹ ತಂತ್ರಾಂಶ ಸಿಗುತ್ತದೆಯೇ? 
ಉ: ಖಂಡಿತವಾಗಿಯೂ ಅಂತಹ ತಂತ್ರಾಂಶ ಲಭ್ಯವಿದೆ. ಅದಕ್ಕಾಗಿ ನೀವು http://bit.ly/aTpEh1 ಜಾಲತಾಣಕ್ಕೆ ಭೇಟಿ ನೀಡಿ. ಇದನ್ನು ಬಳಸಲು ಸ್ವಲ್ಪ ಮಟ್ಟಿನ ಗಣಕ ಪರಿಣತಿ ಇದ್ದರೆ ಒಳ್ಳೆಯದು. ಇದರಲ್ಲಿ ಎರಡು ಅಂಗಗಳಿವೆ. ಒಂದನ್ನು ಬಳಸಿ ನೀವು ಪ್ರಶ್ನೆ ಬ್ಯಾಂಕ್ ಮತ್ತು ಪ್ರಶ್ನೆ ಪತ್ರಿಕೆ ತಯಾರಿಸಬಹುದು. ಇನ್ನೊಂದನ್ನು ಬಳಸಿ ವಿದ್ಯಾರ್ಥಿ ಉತ್ತರಿಸಬಹುದು. ಪ್ರಶ್ನೆ ಬ್ಯಾಂಕ್ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಸರ್ವರ್‌ನಲ್ಲಿ ಇಟ್ಟು ಆಂತರಿಕಜಾಲದಲ್ಲಿ ಸಂಪರ್ಕದಲ್ಲಿರುವ ಗಣಕಗಳಲ್ಲಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಪರೀಕ್ಷೆ ಉತ್ತರಿಸುವಂತೆ ಏರ್ಪಾಡು ಮಾಡಬಹುದು.
   
ಕಂಪ್ಯೂತರ್ಲೆ

ಕೋಲ್ಯ ಗಣಕ ತೆಗೆದುಕೊಂಡ. ಒಂದು ತಿಂಗಳು ಬಳಸಿದ ನಂತರ ಬಿಲ್‌ಗೇಟ್ಸ್‌ಗೆ ಇಮೈಲ್ ಮಾಡಿದ-
“ನನ್ನ ಗಣಕದಲ್ಲಿ Start ಬಟನ್ ಇದೆ. ಆದರೆ Stop ಬಟನ್ ಇಲ್ಲ. ದಯವಿಟ್ಟು ಅದನ್ನು ಸೇರಿಸಿ ಕೊಡಿ.”
“Re-cycle bin ಎಂದು ಇದೆ. ಆದರೆ ನನ್ನಲ್ಲಿ ಸೈಕಲ್ ಇಲ್ಲ. ಸ್ಕೂಟರ್ ಇದೆ. ಆದುದರಿಂದ Re-scooter bin ಕೊಡಿ.”
“ನನ್ನ ಮಗನಿಗೆ Word ಕಲಿತು ಆಯಿತು. ಆದುದರಿಂದ Sentence ಕೊಡಿ.”
“ನಿಮ್ಮ ಹೆಸರು Gates. ಆದರೆ ಯಾಕೆ Windows ಮಾರುತ್ತಿದ್ದೀರಾ?”

ಸೋಮವಾರ, ಮೇ 17, 2010

ಗಣಕಿಂಡಿ - ೦೫೨ (ಮೇ ೧೭, ೨೦೧೦)

ಅಂತರಜಾಲಾಡಿ

ಸಂಶೋಧನಾ ಪತ್ರಿಕೆಗಳ ಸೂಚಿ

ಬೆಂಗಳೂರಿನಿಂದ ದೂರ ಇರುವ ಲೇಖಕರ ಮತ್ತು ಅಧ್ಯಾಪಕರ ಒಂದು ದೂರು ಏನೆಂದರೆ ಸಂಶೋಧನಾ ಪತ್ರಿಕೆಗಳು ಸಿಗದಿರುವುದು. ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಬಗ್ಗೆ ಬರೆಯುವವರು ಕೇವಲ ಬೆರಳೆಣಿಕೆಯಷ್ಟು ಮಂದಿ. ಅವರಲ್ಲಿ ಬಹುಪಾಲು ಮಂದಿ ಬೆಂಗಳೂರಿನಲ್ಲೇ ಇದ್ದಾರೆ. ಬೆಂಗಳೂರಿನಿಂದ ದೂರ ಇರುವ ಕೆಲವರಿಗೆ ವಿಜ್ಞಾನ ತಂತ್ರಜ್ಞಾನ ಮತ್ತು ಇತರೆ ಆಧುನಿಕ ವಿಷಯಗಳ ಬಗ್ಗ ಲೇಖನ ಬರೆಯಲು ಆಸಕ್ತಿ ಇದ್ದರೂ ಮಾಹಿತಿಯ ಕೊರತೆ ಬಾಧಿಸುತ್ತಿದೆ. ಹಾಗಾಗಿ ನಮ್ಮಲ್ಲಿ ವಿಷಯಸಾಹಿತ್ಯದ ಬಗ್ಗೆ ಲೇಖನ ಬರೆಯುವವರು ಕಡಿಮೆ. ಅಂತರಜಾಲದಲ್ಲಿ ವಿಷಯಜ್ಞಾನ ಎಷ್ಟು ಬೇಕಾದರೂ ಸಿಗುತ್ತದೆ. ಎಲ್ಲಿ? ಹಲವಾರು ಸಂಶೋಧನಾ ಪತ್ರಿಕೆಗಳು ಅಂತರಜಾಲದಲ್ಲಿ ಉಚಿತವಾಗಿ ಓದಲು ಸಿಗುತ್ತವೆ. ಅಂತಹ ಪತ್ರಿಕೆಗಳ ಸೂಚಿ ಇರುವ ಜಾಲತಾಣ www.doaj.org.


ಡೌನ್‌ಲೋಡ್

ಚಿತ್ರ ಬದಲಾವಣೆ ಮಾಡಿ


ಅಂತರಜಾಲದಲ್ಲಿ ಛಾಯಾಚಿತ್ರಗಳನ್ನು ಸೇರಿಸಲು ಅವುಗಳನ್ನು ನಿಮ್ಮ ಗೆಳೆಯರ ಜೊತೆ ಹಂಚಿಕೊಳ್ಳು ಹಲವಾರು ಜಾಲತಾಣಗಳಿವೆ (ಉದಾ -ಪಿಕಾಸಾ, ಫ್ಲಿಕರ್). ಸಾಮಾನ್ಯವಾಗಿ ಕ್ಯಾಮರಾದಲ್ಲಿ ತೆಗೆದ ಛಾಯಾಚಿತ್ರಗಳ ಗಾತ್ರ ತುಂಬ ದೊಡ್ಡದಿರುತ್ತದೆ. ಅಂತರಜಾಲದಲ್ಲಿ ಸೇರಿಸಲು ಅಷ್ಟು ದೊಡ್ಡ ಗಾತ್ರದ ಚಿತ್ರಗಳ ಅಗತ್ಯವಿಲ್ಲ. ಅದೂ ಅಲ್ಲದೆ ದೊಡ್ಡ ಗಾತ್ರದ ಚಿತ್ರಗಳನ್ನು ಸೇರಿಸುವಾಗ ಮಾಹಿತಿಯ ಸಂವಹನ ಜಾಸ್ತಿಯಾಗುತ್ತದೆ. ಅಂದರೆ ನಿಮ್ಮ ಅಂತರಜಾಲ ಸೇವೆಯ ಬಿಲ್ ಜಾಸ್ತಿ ಆಗುತ್ತದೆ. ನಿಮ್ಮ ಚಿತ್ರಗಳನ್ನು ಅಂತರಜಾಲದಿಂದ ಪ್ರತಿ ಮಾಡಿಕೊಂಡು ತಮ್ಮದೇ ಎಂಬಂತೆ ಹಂಚುವವರೂ ಇರುತ್ತಾರೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದರೆ ಚಿತ್ರಗಳ ಗಾತ್ರ ಚಿಕ್ಕದಾಗಿಸುವ ಮತ್ತು ಚಿತ್ರದ ಮೇಲೆ ಹಕ್ಕುಸ್ವಾಮ್ಯದ ಸಂದೇಶ ಮತ್ತು ನಿಮ್ಮ ಹೆಸರನ್ನು ಸೇರಿಸುವ ತಂತ್ರಾಂಶದ ಅಗತ್ಯ. ಇಂತಹ ಒಂದು ಉಚಿತ ತಂತ್ರಾಂಶ FastStone Photo Resizer. ಇದು ಬೇಕಿದ್ದಲ್ಲಿ ನೀವು ಭೇಟಿನೀಡಬೇಕಾದ ಜಾಲತಾಣ http://bit.ly/aPXDDc.


e - ಸುದ್ದಿ

ಟಾಯ್ಲೆಟ್ ಪೇಪರ್ ಪಡೆಯಲು ಟ್ವಿಟ್ಟರ್ ಸಹಾಯ

ಜಪಾನ್ ದೇಶದಲ್ಲೊಬ್ಬ ಶೌಚಾಲಯದಲ್ಲಿ ಕೆಲಸ ಪ್ರಾರಂಭಿಸಿದ ನಂತರ ಆತನಿಗೆ ತಿಳಿಯಿತು ಅಲ್ಲಿ ಟಾಯ್ಲೆಟ್ ಪೇಪರ್ ಮುಗಿದಿದೆ ಎಂದು. ಆತ ಏನು ಮಾಡಬೇಕು? ಪಕ್ಕಾ ತಂತ್ರವ್ಯಸನಿಯಾದ (ಗೀಕ್) ಆತ ಅಲ್ಲಿಂದಲೇ ತನ್ನ ಪರಿಸ್ಥಿತಿಯನ್ನು ಟ್ವೀಟ್ ಮಾಡಿದ. ಅದನ್ನು ಓದಿದ ಪುಣ್ಯಾತ್ಮನೊಬ್ಬ ಆತನಿಗೆ ಟಾಯ್ಲೆಟ್ ಪೇಪರ್ ಒದಗಿಸಿದ. ಅದಕ್ಕಾಗಿ ಆತ ೨೦ ನಿಮಿಷ ಕಾಯಬೇಕಾಗಿ ಬಂತು. ಬಾಲಿವುಡ್ ನಟಿ ಗುಲ್‌ಪನಾಗ್ ಒಮ್ಮೆ ಶತಾಬ್ದಿ ರೈಲಿನ ಟಾಯ್ಲೆಟ್ ಒಳಗೆ ಸಿಕ್ಕಿಹಾಕಿಕೊಂಡಾಗ ತನ್ನ ಪರಿಸ್ಥಿತಿ ಬಗ್ಗೆ ಅಲ್ಲಿಂದಲೇ ಟ್ವೀಟ್ ಮಾಡಿದ್ದಳು.

e- ಪದ

ಸ್ಟಾಟಸ್‌ಬಾರ್ (status bar) - ಯಾವುದೇ ತಂತ್ರಾಂಶದ (ಉದಾ -ಬ್ರೌಸರ್) ಕೆಳಭಾಗದಲ್ಲಿರುವ ಪಟ್ಟಿ. ಇದು ಆ ತಂತ್ರಾಂಶದ ಸದ್ಯದ ಸ್ಥಿತಿಯನ್ನು ತೋರಿಸುತ್ತಿರುತ್ತದೆ. ಆದುದರಿಂದಲೇ ಅದಕ್ಕೆ ಆ ಹೆಸರು ಬಂದಿರುವುದು. ಉದಾಹರಣೆಗೆ ಬ್ರೌಸರ್‌ನಲ್ಲಿ ಒಂದು ಜಾಲತಾಣದ ವಿಳಾಸವನ್ನು ಬೆರಳಚ್ಚು ಮಾಡಿ ತೆರೆಯಲು ಪ್ರಯತ್ನಿಸಿದಾಗ ಆ ಜಾಲತಾಣ ತೆರೆಯಲು ಸ್ವಲ್ಪ ಸಮಯ ಹಿಡಿಯುತ್ತದೆ. ಅ ಸಂದರ್ಭದಲ್ಲಿ ಈ ಸ್ಟಾಟಸ್ ಬಾರ್ ಅದನ್ನೇ ಕಾಯುತ್ತಿದ್ದೇನೆ, ತೆರೆಯುತ್ತಿದ್ದೇನೆ, ಇತ್ಯಾದಿಯಾಗಿ ಹೇಳುತ್ತದೆ.

e - ಸಲಹೆ

ವಿಡೋಸ್೭ ರಲ್ಲಿ ಎಕ್ಸ್‌ಪಿ 

ಪ್ರ: ನಾನು ಇತ್ತೀಚೆಗೆ ಒಂದು ಲ್ಯಾಪ್‌ಟಾಪ್ ಕೊಂಡುಕೊಂಡೆ. ಅದರಲ್ಲಿ ವಿಂಡೋಸ್ ೭ ಪ್ರೊಫೆಶನಲ್ ಇದೆ. ನನಗೆ ಫೋಟೋಶಾಪ್, ಕೋರೆಲ್‌ಡ್ರಾ, ಪೇಜ್‌ಮೇಕರ್, ಇತ್ಯಾದಿ ಕೆಲವು ಹಳೆಯ ತಂತ್ರಾಂಶಗಳನ್ನು ಈ ಲ್ಯಾಪ್‌ಟಾಪ್‌ನಲ್ಲಿ ಇನ್‌ಸ್ಟಾಲ್ ಮಾಡಲು ಆಗುತ್ತಿಲ್ಲ. ಇದಕ್ಕೆ ಏನು ಪರಿಹಾರ?
ಉ: ಈ ಸಮಸ್ಯೆ ವಿಂಡೋಸ್೭ರ ೬೪ಬಿಟ್ ಆವೃತ್ತಿಯನ್ನು ಬಳಸುವವರಿಗೆ ಇದೆ. ಇದಕ್ಕೆ ಪರಿಹಾರವೆಂದರೆ ವಿಂಡೋಸ್೭ರಲ್ಲಿ ಎಕ್ಸ್‌ಪಿಯನ್ನು ಒಂದು ಮಿಥ್ಯಾ ಕಾರ್ಯಾಚರಣೆಯ ವ್ಯವಸ್ಥೆಯಾಗಿ ಅಳವಡಿಸಿಕೊಳ್ಳುವುದು. ಇದನ್ನು ಎಕ್ಸ್‌ಪಿ ಮೋಡ್ ಎನ್ನುತ್ತಾರೆ. ಇದು ಉಚಿತವಾಗಿ ಮೈಕ್ರೋಸಾಫ್ಟ್ ಜಾಲತಾಣದಲ್ಲಿ ದೊರೆತಯುತ್ತದೆ (http://bit.ly/b8YTSF). 
   
ಕಂಪ್ಯೂತರ್ಲೆ

ಮೈಗಳ್ಳ ಸರಕಾರಿ ಗುಮಾಸ್ತರಿಗಾಗಿಯೆಂದೇ ಒಂದು ಹೊಸ ನಮೂನೆಯ ಗಣಕ ತಯಾರಾಗಿದೆ. ಅದರಲ್ಲಿ ಒಂದು ಗುಪ್ತ ಕೀಲಿ ಇರುತ್ತದೆ. ಅದನ್ನು ಒತ್ತಿದೊಡನೆ ಪರದೆಯ ಮೇಲೆ “ಸದ್ಯ ಗಣಕ ಸರಿಯಾಗಿ ಕೆಲಸ ಮಾಡುತ್ತಿಲ್ಲ ಒಂದೆರಡು ಘಂಟೆಗಳ ನಂತರ ಪ್ರಯತ್ನಿಸಿ” ಎಂಬ ಸಂದೇಶ ಮೂಡುತ್ತದೆ. ಸಾರ್ವಜನಿಕರಿಗೆ ಆ ಸಂದೇಶವನ್ನು ತೋರಿಸಿ ಗುಮಾಸ್ತರು ತಮ್ಮ ಎಂದಿನ ಚಾಳಿಯಲ್ಲಿರಬಹುದು.

ಮಂಗಳವಾರ, ಮೇ 11, 2010

ಗಣಕಿಂಡಿ - ೦೫೧ (ಮೇ ೧೦, ೨೦೧೦)

ಅಂತರಜಾಲಾಡಿ

ಫಾಂಟ್ ತಯಾರಿಸಬೇಕೇ?


ಯಾವುದೇ ಕಡತ ತಯಾರಿಸಬೇಕಾದರೂ ಒಂದು ಫಾಂಟ್ ಬೇಕೇ ಬೇಕು. ಸಾಮಾನ್ಯವಾಗಿ ಗಣಕದ ಕಾರ್ಯಾಚರಣೆಯ ವ್ಯವಸ್ಥೆ (ಉದಾ - ವಿಂಡೋಸ್) ಜೊತೆ ಹಲವಾರು ಫಾಂಟ್‌ಗಳು ನಿಮಗೆ ಉಚಿತವಾಗಿ ದೊರೆತಿರುತ್ತವೆ. ನಿಮ್ಮದೇ ಫಾಂಟ್ ತಯಾರಿಸಬೇಕೇ? ಅದಕ್ಕಾಗಿ ಹಲವಾರು ದುಬಾರಿ ತಂತ್ರಾಂಶಗಳು ಲಭ್ಯವಿವೆ. ಉಚಿತವಾಗಿ ಅಂತರಜಾಲ ಮೂಲಕ ಫಾಂಟ್ ತಯಾರಿಸಲು ಈಗ ಒಂದು ಸವಲತ್ತು ಲಭ್ಯವಿದೆ. ಅದಕ್ಕಾಗಿ ನೀವು ಭೇಟಿ ನೀಡಬೇಕಾದ ಜಾಲತಾಣ fontstruct.fontshop.com. ಈ ಜಾಲತಾಣವನ್ನು ಬಳಸಿ ನೀವು ತಯಾರಿಸಿದ ಫಾಂಟ್ ಮೇಲೆ ಸಂಪೂರ್ಣ ಹಕ್ಕು ನಿಮ್ಮದಾಗಿರುತ್ತದೆ. ಅದನ್ನು ನೀವು ಬೇಕಾದ ರೀತಿ ಬಳಸಬಹುದು ಹಾಗೂ ಜಗತ್ತಿಗೆಲ್ಲ ಹಂಚಬಹುದು.

ಡೌನ್‌ಲೋಡ್

ವೇಳಾಪಟ್ಟಿ ತಯಾರಿಸಿ

ನೀವು ಶಾಲೆಯ ಮುಖ್ಯೋಪಾಧ್ಯಾಯರೇ? ಅಥವಾ ನಿಮ್ಮ ಶಾಲೆಯ ವೇಳಾಪಟ್ಟಿ (ಟೈಮ್‌ಟೇಬಲ್) ತಯಾರಿಸುವ ಜವಾಬ್ದಾರಿ ನಿಮ್ಮ ತಲೆ ಮೇಲಿದೆಯೇ? ಈ ವೇಳಾಪಟ್ಟಿ ತಯಾರಿಸುವುದು ತುಂಬ ತಲೆನೋವಿನ ಕೆಲಸ. ಈ ವೇಳಾಪಟ್ಟಿಯನ್ನು ಗಣಕ ಬಳಸಿ ತಯಾರಿಸುವ ತಂತ್ರಾಂಶವೊಂದು ಸಿಗುವಂತಿದ್ದರೆ ಚೆನ್ನಾಗಿತ್ತು ಎಂದು ಅನಿಸಿದೆಯೇ? ಹಾಗಿದ್ದಲ್ಲಿ ನಿಮಗೆ ಬೇಕು FET ತಂತ್ರಾಂಶ. ಇದು ಸಂಪೂರ್ಣ ಉಚಿತ ಹಾಗೂ ಮುಕ್ತ ತಂತ್ರಾಂಶ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.lalescu.ro/liviu/fet.


e - ಸುದ್ದಿ

ಗೂಗ್ಲ್‌ಗೆ ದಂಡ

ಗೂಗ್ಲ್ ಒಡೆತನಕ್ಕೆ ಸೇರಿದ ಆರ್ಕುಟ್ ಜಾಲತಾಣ ಎಲ್ಲರಿಗೂ ಗೊತ್ತಿರಬಹುದು. ಅದರಲ್ಲಿ ಯಾರು ಬೇಕಾದರೂ ತಮಗಿಷ್ಟ ಬಂದಂತೆ ಮಾಹಿತಿ ಸೇರಿಸಬಹುದು. ಬ್ರೆಝಿಲ್ ದೇಶದಲ್ಲಿ ಈ ಆರ್ಕುಟ್ ಜಾಲತಾಣದಲ್ಲಿ ಯಾರೋ ಕಿಡಿಗೇಡಿ ಕ್ರೈಸ್ತ ಪಾದ್ರಿಯೊಬ್ಬರ ಬಗ್ಗೆ ಕೆಟ್ಟ ಕೆಟ್ಟದಾಗಿ ಏನೇನೋ ಬರೆದಿದ್ದ. ಇದಕ್ಕಾಗಿ ಬ್ರೆಝಿಲ್ ದೇಶದ ನ್ಯಾಯಾಲಯವು ಗೂಗ್ಲ್‌ನ್ನು ಹೊಣೆಯೆಂದು ತೀರ್ಮಾನಿಸಿ ಗೂಗ್ಲ್‌ಗೆ ಸುಮಾರು ೮೫೦೦ ಡಾಲರುಗಳಷ್ಟು ದಂಡ ವಿಧಿಸಿದೆ. ಆರ್ಕುಟ್‌ನಲ್ಲಿ ಯಾರು ಬೇಕಾದರೂ ಏನನ್ನಾದರೂ ಬರೆಯಬಹುದು. ಅದಕ್ಕಾಗಿ ಗೂಗ್ಲ್‌ನ್ನು ಹೊಣೆಗಾರನನ್ನಾಗಿ ತೀರ್ಮಾನಿಸಬಾರದು ಎಂಬ ಗೂಗ್ಲ್‌ನವರ ವಾದವನ್ನು ನ್ಯಾಯಾಲಯವು ಮಾನ್ಯ ಮಾಡಲಿಲ್ಲ.

e- ಪದ

ಏರೋ (Aero) - ವಿಂಡೋಸ್ ವಿಸ್ತ ಮತ್ತು ೭ ರಲ್ಲಿ ಅಳವಡಿಸಿರುವ ಇಂಟರ್‌ಫೇಸ್. ಇದನ್ನು ಚಾಲನೆಗೊಳಿಸಿದಲ್ಲಿ ನಿಮ್ಮ ಗಣಕದ ಪರದೆಯಲ್ಲಿ ಕಿಟಿಕಿಗಳು ತುಂಬ ಸುಂದರವಾಗಿ ಕಾಣಿಸುತ್ತವೆ. ಕಿಟಿಕಿಯ ಮೇಲಿನ ಬಾರ್ ಅರೆಪಾರದರ್ಶಕವಾಗಿ ಕಾನಿಸುತ್ತವೆ. ವಿಂಡೋಸ್ ೭ ರಲ್ಲಿ ಇನ್ನೂ ಒಂದು ಸವಲತ್ತನ್ನು ನೀಡಿದ್ದಾರೆ. ಈ ಬಾರ್‌ನ್ನು ಮೌಸ್‌ನಲ್ಲಿ ಹಿಡಿದು ಜೋರಾಗಿ ಅಳ್ಳಾಡಿಸಿದರೆ ಆ ಕಿಟಿಕಿ ಒಂದನ್ನು ಬಿಟ್ಟು ಉಳಿದೆಲ್ಲ ಕಿಟಿಕಿಗಳು ಕೆಳಗಿನ ಸ್ಟಾಟಸ್‌ಬಾರ್‌ನಲ್ಲಿ ಚಿಕ್ಕದಾಗಿ ಕುಳಿತುಕೊಳ್ಳುತ್ತವೆ.

e - ಸಲಹೆ

ಸುದರ್ಶನ ಅವರ ಪ್ರಶ್ನೆ: ನನ್ನಲ್ಲಿ ಒಂದು ಕ್ರಿಯೇಟಿವ್ ಎಂಪಿ೩ ಪ್ಲೇಯರ್ ಇದೆ. ಅದರಲ್ಲಿ ಕೆಲವು ಹಾಡುಗಳಿವೆ. ಇತ್ತೀಚೆಗೆ ಒಂದು ಖಾಯಿಲೆ ಅದಕ್ಕೆ ತಗುಲಿದೆ. ಅದನ್ನು ಗಣಕದ ಯುಎಸ್‌ಬಿ ಡ್ರೈವ್‌ನಲ್ಲಿ ತೂರಿಸಿದೊಡನೆ ಗಣಕ ತಟಸ್ಥವಾಗುತ್ತದೆ (ಹ್ಯಾಂಗಿಂಗ್). ಇದಕ್ಕೇನು ಪರಿಹಾರ?
ಉ: ನಿಮ್ಮ ಎಂಪಿ೩ ಪ್ಲೇಯರ್‌ನಲ್ಲಿ ವೈರಸ್ ಇರಬಹುದು. ನಿಮ್ಮಲ್ಲಿ ಉಬುಂಟು ಕಾರ್ಯಾಚರಣೆಯ ವ್ಯವಸ್ಥೆ ಇದ್ದಲ್ಲಿ ಗಣಕವನ್ನು ಅದಕ್ಕೆ ಬೂಟ್ ಮಾಡಿ. ನಂತರ ಎಂಪಿ೩ ಪ್ಲೇಯರನ್ನು ಸಂಪರ್ಕಿಸಿ, ಅದರಲ್ಲಿರುವ ಮುಖ್ಯ ಮಾಹಿತಿಗಳನ್ನು ಪ್ರತಿ ಮಾಡಿಕೊಂಡು ಅದನ್ನು ಪೂರ್ತಿ ಫಾರ್ಮಾಟ್ ಮಾಡಿ. ನಂತರ ವಿಂಡೋಸ್‌ಗೆ ಬೂಟ್ ಮಾಡಿ. ಕ್ರಿಯೇಟಿವ್ ಕಂಪೆನಿಯವರ (www.creative.com) ಜಾಲತಾಣದಿಂದ MP3 player recovery tool ಎಂಬ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿ ಅದರ ಮೂಲಕ ಎಂಪಿ೩ ಪ್ಲೇಯರ್‌ನ್ನು ಪುನಃ ಕೆಲಸ ಮಾಡುವಂತೆ ಸರಿಪಡಿಸಿಕೊಳ್ಳಬಹುದು.
   
ಕಂಪ್ಯೂತರ್ಲೆ

ಕೋಲ್ಯ ಗಣಕ ತೆಗೆದುಕೊಂಡ. ಮರುದಿನ ಕಂಪೆನಿಗೆ ಫೋನ್ ಮಾಡಿ ದೂರು ನೀಡಿದ “ನನ್ನ ಗಣಕದಲ್ಲಿ ಸಿ.ಡಿ. ಹಾಕಿದ್ದೇನೆ. ಈಗ ಹೊರಗೆ ತೆಗೆಯಲು ಬರುತ್ತಿಲ್ಲ. ನಿಮ್ಮ ಇಂಜಿನಿಯರ್ ಕಳುಹಿಸಿ”. ಕಂಪೆನಿಯಿಂದ ಇಂಜಿನಿಯರ್ ಬಂದು ಪರಿಶೀಲಿಸಿದ. ಕೋಲ್ಯ ಏನು ಮಾಡಿದ್ದ ಊಹಿಸಿಬಲ್ಲಿರಾ? ಆತನ ಗಣಕದಲ್ಲಿ ಸಿ.ಡಿ. ಡ್ರೈವ್ ಮತ್ತು ಗಣಕದ ಕೇಸಿಂಗ್ ಮಧ್ಯೆ ಸ್ವಲ್ಪ ಖಾಲಿ ಜಾಗ ಇತ್ತು. ಆತ ಸಿ.ಡಿ.ಯನ್ನು ಆ ಕಿಂಡಿಯಲ್ಲಿ ತೂರಿಸಿದ್ದ!

ಸೋಮವಾರ, ಮೇ 3, 2010

ಗಣಕಿಂಡಿ - ೦೫೦ (ಮೇ ೦೩, ೨೦೧೦)

ಅಂತರಜಾಲಾಡಿ

ಭ್ರಮಾಲೋಕ

ಕೆಲವು ಚಿತ್ರಗಳನ್ನು ನೋಡಿದಾಗ ಅದರೊಳಗೆ ಇನ್ನೋನೋ ಇದ್ದಂತೆ ಭಾಸವಾಗುತ್ತದೆ. ಮತ್ತೆ ಕೆಲವು ಚಿತ್ರಗಳು ಚಲನೆಯ ಭ್ರಮೆಯನ್ನು ಮೂಡಿಸುತ್ತವೆ. ನಿಜವಾಗಿ ನೋಡಿದರೆ ಚಿತ್ರ ಚಲಿಸುತ್ತಿರುವುದಿಲ್ಲ. ಇಂತಹ ಭ್ರಮೆಗಳನ್ನು ಸೃಷ್ಟಿಸುವ ಹಲವು ನಮೂನೆಯ ಚಿತ್ರಗಳನ್ನು ನೋಡಬೇಕಾದರೆ ನೀವು ಭೇಟಿ ನೀಡಬೇಕಾದ ಜಾಲತಾಣ www.moillusions.com. ಇಲ್ಲಿರುವ ಚಿತ್ರಗಳನ್ನು ಹಲವು ವಿಭಾಗಗಳಲ್ಲಿ ನೀಡಲಾಗಿದೆ. ನಿಮಗಿಷ್ಟವಾದ ವಿಭಾಗಕ್ಕೆ ನೀವು ಭೇಟಿ ನೀಡಬಹುದು.

ಡೌನ್‌ಲೋಡ್

ವೈರಸ್ ಖಾಯಿಲೆಯಿಂದ ಗುಣಪಡಿಸಿ


ಕೆಲವೊಮ್ಮೆ ವೈರಸ್ ಧಾಳಿಯಿಂದಾಗಿ ಹಾರ್ಡ್‌ಡಿಸ್ಕ್‌ನ ಬೂಟ್ ಜಾಗದಲ್ಲೇ ವೈರಸ್ ಕುಳಿತಿರುತ್ತದೆ. ಇಂತಹ ಸಂದರ್ಭದಲ್ಲಿ ವೈರಸ್ ನಿರೋಧಕ ತಂತ್ರಾಂಶಗಳು ಕೆಲಸ ಮಾಡುವುದಿಲ್ಲ. ಯಾಕೆಂದರೆ ಅವುಗಳಿಗಿಂತ ಮೊದಲೇ ವೈರಸ್ ಹೋಗಿ ಗಣಕದ ಮೆಮೊರಿಯಲ್ಲಿ ಕುಳಿತಿರುತ್ತವೆ. ಸಿ.ಡಿ.ಯಿಂದ ಬೂಟ್ ಮಾಡಿ ವೈರಸ್ ಅಳಿಸುವುದೊಂದೇ ಇದಕ್ಕೆ ಪರಿಹಾರ. ಇಂತಹ ಒಂದು ತಂತ್ರಾಂಶ Dr.Web LiveCD . ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/dsW7Wt. ಇದನ್ನು ಬಳಸಬೇಕಾದರೆ ನೀವು ಸ್ವಲ್ಪ ಪರಿಣತರಾಗಿರಬೇಕು. ಈ ಜಾಲತಾಣದಲ್ಲಿ ದೊರೆಯುವ ಸಿ.ಡಿ. ಇಮೇಜನ್ನು ಬಳಸಿ ಒಂದು ಸಿ.ಡಿ. ತಯಾರಿಸಿ ಆ ಸಿ.ಡಿ.ಯಿಂದ ಬೂಟ್ ಮಾಡಿ ಹಾರ್ಡ್‌ಡಿಸ್ಕನ್ನು ಸರಿಪಡಿಸಿಕೊಳ್ಳಬಹುದು. 

e - ಸುದ್ದಿ

ಫೇಸ್‌ಬುಕ್ ಮೂಲಕ ಕಿಡ್ನಿ ದಾನ

ಅಮೇರಿಕದ ಕನೆಕ್ಟಿಕಟ್ ನಗರದ ಮೇಯರ್ ಅಲ್ಮೋನ್‌ಗೆ ಫೇಸ್‌ಬುಕ್‌ನಲ್ಲಿ ಸುಮಾರು ೧೬೦೦ ಮಂದಿ ಗೆಳೆಯರಿದ್ದರು. ಅವರೆಲ್ಲರ ಸಂದೇಶಗಳನ್ನು ಆಕೆ ಓದುತ್ತಿದ್ದಂತೆ ಒಂದು ಸಂದೇಶ ಆಕೆಯ ಗಮನ ಸೆಳೆಯಿತು. ಒಬ್ಬಾತ ತನಗೆ ಮೂತ್ರಪಿಂಡ ಬೇಕಾಗಿದೆ ಎಂದು ಸಂದೇಶ ನೀಡಿದ್ದ. ಆಕೆ ಕೂಡಲೆ ಆತನನ್ನು ಸಂಪರ್ಕಿಸಿ, ತನ್ನ ಮೂತ್ರಪಿಂಡವೊಂದನ್ನು ಆತನಿಗೆ ದಾನ ಮಾಡಿದಳು. ಈಗ ಇಬ್ಬರೂ ಆರೋಗ್ಯವಾಗಿದ್ದಾರೆ. ನಮ್ಮ ರಾಜಕಾರಣಿಗಳಿಂದ ಇಂತಹ ಕಾರ್ಯವೊಂದನ್ನು ನಿರೀಕ್ಷಿಸಬಹುದೇ?

e- ಪದ


ಎನ್‌ಟಿಎಫ್‌ಎಸ್ (NTFS - New Technology File System) - ವಿಂಡೋಸ್ ಎನ್‌ಟಿ, ಎಕ್ಸ್‌ಪಿ ಮತ್ತು ಅನಂತರದ ಕಾರ್ಯಾಚರಣೆಯ ವ್ಯವಸ್ಥೆಯನ್ನು ಅಳವಡಿಸಿದ ಗಣಕಗಳಲ್ಲಿ ಬಳಕೆಯಾಗುತ್ತಿರುವ ಕಡತ (ಫೈಲು) ಸಂಗ್ರಹ ವ್ಯವಸ್ಥೆ. ಇದು ಗಣಕದ ಹಾರ್ಡ್‌ಡಿಸ್ಕ್ ಮತ್ತು ಇತರೆ ಸಂಗ್ರಹ ಸಾಧನಗಳಲ್ಲಿ ಸಂಗ್ರಹವಾಗಿರುವ ಕಡತಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಡುತ್ತದೆ. ಯಾವ ಕಡತ ಎಲ್ಲಿದೆ, ಅದು ಬಳಸಿರುವ ಜಾಗದ ಸಂಖ್ಯೆಗಳು ಯಾವುವು, ಎಲ್ಲಿಂದ ಪ್ರಾರಂಭವಾಗಿ ಎಲ್ಲಿ ತನಕ ಇದೆ, ಎಲ್ಲ ವಿವರಗಳನ್ನು ಇದು ದಾಖಲಿಸಿಡುತ್ತದೆ. ಒಂದು ಕಡತವನ್ನು ಅಳಿಸಿದಾಗ ಆ ಕಡತವು ನಿಜವಾಗಿ ಅಳಿಸಲ್ಪಡುವುದಿಲ್ಲ. ಆ ಕಡತವು ಬಳಸಿರುವ ಜಾಗವು ಬೇರೆ ಕಡತಗಳಿಗೆ ಲಭ್ಯ ಎಂದು ಅದು ದಾಖಲಿಸಿಕೊಳ್ಳುತ್ತದೆ. ಇನ್ನೊಂದು ಕಡತವು ಆ ಜಾಗವನ್ನು ಬಳಸಿಲ್ಲವಾದಲ್ಲಿ ಅಳಿಸಿದ ಕಡತವನ್ನು ಕೆಲವು ತಂತ್ರಾಂಶಗಳನ್ನು ಬಳಸಿ ಪುನಃ ಪಡೆಯಬಹುದು.

e - ಸಲಹೆ

ತುರುವೇಕೆರೆಯ ಉಷಾ ಶ್ರೀನಿವಾಸ್ ಅವರ ಪ್ರಶ್ನೆ: ಕಳೆದವಾರದ ಸಂಚಿಕೆಯಲ್ಲಿ ಶ್ರೀಧರ್ ಹೂಗಾರ್‌ರವರ ಪ್ರಶ್ನೆಗೆ ತಾವು ಫಾರ್ಮಾಟ್ ಮಾಡಿದ ನಂತರ ಯಾವುದೇ ಫೈಲ್‌ಗಳೂ ಸಿಗಲಾರವು ಎಂದು ಉತ್ತರಿಸಿದ್ದೀರಿ. ಆದರೆ ಡೇಟಾ ರಿಕವರಿ ಸಾಫ್ಟ್‌ವೇರ್‌ನಿಂದ ಇಂತಹ ಫೈಲ್‌ಗಳು ದೊರೆಯುತ್ತವೆ ಎಂದು ನನ್ನ ಸ್ನೇಹಿತನೊಬ್ಬ ಹೇಳಿದ್ದಾನೆ. ಇದು ಸಾಧ್ಯವೇ? ಸಾಧ್ಯವಾದರೆ ಈ ಸಾಫ್ಟ್‌ವೇರ್ ಉಚಿತವಾಗಿ ನೆಟ್‌ನಲ್ಲಿ ಲಭ್ಯವೇ? ದಯಮಾಡಿ ತಿಳಿಸಿ.
ಉ: ಕಳೆದವಾರದ ಪ್ರಶ್ನೆಯಲ್ಲಿ ಶ್ರೀಧರ್ ಹೂಗಾರ್ ಅವರು ತಿಳಿಸಿದ್ದೇನೆಂದರೆ ಅವರು ಡೆಸ್ಕ್‌ಟಾಪ್‌ನಲ್ಲಿ ಅಂದರೆ C ಡ್ರೈವ್‌ನಲ್ಲಿ ಫೈಲ್ ಸೇವ್ ಮಾಡಿದ್ದರು. ನಂತರ ಫಾರ್ಮಾಟ್ ಮಾಡಿದ್ದರು. ಇದು ಫೈಲನ್ನು ಅಳಿಸುವುದಕ್ಕಿಂತ ಸ್ವಲ್ಪ ಜಾಸ್ತಿ. ಕೇವಲ ಅಳಿಸಿದ್ದಾದರೆ ಅದನ್ನು NTFS Undelete ಎಂಬ ತಂತ್ರಾಂಶ ಬಳಸಿ ಪುನಃ ಪಡೆಯಲು ಪ್ರಯತ್ನಿಸಬಹುದು. ಈ ಬಗ್ಗೆ ನಾನು ಈಗಾಗಲೇ ವಿವರವಾಗಿ ಬರೆದಿದ್ದೇನೆ. ೭-೧೨-೨೦೦೯ರ ಗಣಕಿಂಡಿ ನೋಡಿ (http://bit.ly/cfILh6). C ಡ್ರೈವ್ ಅನ್ನು ಫಾರ್ಮಾಟ್ ಮಾಡುವುದರಲ್ಲಿ ಎರಡು ವಿಧಗಳಿವೆ. ಒಂದು quick format ಮತ್ತು full format. quick format ಮಾಡಿದ ನಂತರವೂ ಅದರಲ್ಲಿಯ ಮಾಹಿತಿಯನ್ನು ಪುನಃ ಪಡೆಯಲು ಸಾಧ್ಯವಿದೆ. ಆದರೆ full format ಮಾಡಿದರೆ ಮಾಹಿತಿಯನ್ನು ಪುನಃ ಪಡೆಯುವುದು ಬಹುಮಟ್ಟಿಗೆ ಅಸಾಧ್ಯವೇ. C ಡ್ರೈವ್ ಅನ್ನು ಫಾರ್ಮಾಟ್ ಮಾಡಿದರೆ ಗಣಕ ಕೆಲಸ ಮಾಡುವುದಿಲ್ಲ. ಆದರೂ ಅದರಲ್ಲಿ ಪುನಃ ವಿಂಡೋಸ್ ಇನ್‌ಸ್ಟಾಲ್ ಮಾಡಿಲ್ಲವಾದಲ್ಲಿ ಸಿ.ಡಿ.ಯಿಂದ ಬೂಟ್ ಮಾಡಿ ಅಳಿಸಿದ ಮಾಹಿತಿಯನ್ನು ಪುನಃ ಪಡೆಯಲು ಪ್ರಯತ್ನಿಸಬಹುದು. ಇದೇ ಸಂಚಿಕೆಯಲ್ಲಿ ನೀಡಿದ Dr.Web LiveCD ಅನ್ನು ಬಳಸಿ ಪ್ರಯತ್ನಿಸಬಹುದು.
   
ಕಂಪ್ಯೂತರ್ಲೆ

ಟ್ವಿಟ್ಟರ್ ಗಾದೆಗಳು

  • ಟ್ವೀಟ್ ಮಾಡುವುದರಿಂದ ಹುಲಿಗಳನ್ನು ಉಳಿಸಲಾಗುವುದಿಲ್ಲ.
  • ಯಾರು ಮಂತ್ರಿಯಾದರೇನಂತೆ ಟ್ವೀಟ್ ಮಾಡುವುದು ತಪ್ಪುವುದಿಲ್ಲ.
  • ಆರ್ಕುಟ್‌ಗೆ ಒಂದು ಕಾಲ, ಟ್ವಿಟ್ಟರ್‌ಗೆ ಒಂದು ಕಾಲ.
  • ಇಂಟರ್‌ನೆಟ್‌ಗೆ ಬಂದವನು ಟ್ವಿಟ್ಟರ್‌ಗೆ ಬರದಿರುವನೇ?