ಮಂಗಳವಾರ, ಆಗಸ್ಟ್ 31, 2010

ಗಣಕಿಂಡಿ - ೦೬೭ (ಆಗಸ್ಟ್ ೩೦, ೨೦೧೦)

ಅಂತರಜಾಲಾಡಿ

ಖಾನ್ ಅಕಾಡೆಮಿ

ಅಂತರಜಾಲದಲ್ಲಿ ಶೈಕ್ಷಣಿಕ ಪಾಠಗಳನ್ನು ವೀಡಿಯೋ ಮೂಲಕ ನಡೆಸುವ ಹಲವಾರು ಜಾಲತಾಣಗಳಿವೆ. ಅವುಗಳಲ್ಲಿ ಬಹುಪಾಲು ವಾಣಿಜ್ಯಕವಾಗಿವೆ. ಪ್ರಾಥಮಿಕ, ಮಾಧ್ಯಮಿಕ ಮತ್ತು ಪಿ.ಯು.ಸಿ. ಮಟ್ಟದ ಉಚಿತ ವೀಡಿಯೋ ಪಾಠಗಳಿಗೆ ನೀವು www.khanacademy.org ಜಾಲತಾಣಕ್ಕೆ ಭೇಟಿ ನೀಡಬಹುದು. ಈ ಜಾಲತಾಣದಲ್ಲಿ ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ, ಹೀಗೆ ಹಲವಾರು ವಿಷಯಗಳ ಬಗ್ಗೆ ವೀಡಿಯೋ ಪಾಠಗಳಿವೆ. ಇಲ್ಲಿರುವ ಒಟ್ಟು ವೀಡಿಯೋಗಳ ಸಂಖ್ಯೆ ೧೬೦೦ಕ್ಕಿಂತ ಹೆಚ್ಚು. ಇಷ್ಟೆಲ್ಲವನ್ನೂ ಸಲ್ಮಾನ್ ಖಾನ್ ಎಂಬ ಒಬ್ಬನೇ ವ್ಯಕ್ತಿ ತಯಾರಿಸಿದ್ದು ಎನ್ನುವುದು ಅಚ್ಚರಿಯ ಸಂಗತಿ. ಇವುಗಳ ಪ್ರಯೋಜನವನ್ನು ನೀವು, ಶಾಲಾವಿದ್ಯಾರ್ಥಿಗಳು, ಶಿಕ್ಷಕರು ಎಲ್ಲರೂ ಪಡೆದುಕೊಳ್ಳಬಹುದು.

ಡೌನ್‌ಲೋಡ್

ಫ್ಲಿಕರ್‌ನಿಂದ ಡೌನ್‌ಲೋಡ್ ಮಾಡಿ

flickr.com ಜಾಲತಾಣ ನಿಮಗೆ ತಿಳಿದಿರಬಹುದು. ಈ ಜಾಲತಾಣದಲ್ಲಿ ಜನರು ಸೇರಿಸಿದ ಛಾಯಾಚಿತ್ರಗಳಿವೆ. ಈ ಜಾಲತಾಣಕ್ಕೆ ನೀವೂ ಛಾಯಾಚಿತ್ರ ಸೇರಿಸಿ ಜಗತ್ತಿಗೆಲ್ಲ ಹಂಚಬಹುದು. ಆದರೆ ಈ ಜಾಲತಾಣದಿಂದ ಚಿತ್ರಗಳನ್ನು ನಿಮ್ಮ ಗಣಕಕ್ಕೆ ಡೌನ್‌ಲೋಡ್ ಮಾಡಬೇಕಾದರೆ ಪ್ರತಿಯೊಂದು ಚಿತ್ರವನ್ನೂ ತೆರೆದು ಒಂದೊಂದಾಗಿ ಡೌನ್‌ಲೋಡ್ ಮಾಡಬೇಕು. ನಿಮ್ಮ ಸ್ನೇಹಿತನ ಜೊತೆ ಹಂಪಿಗೆ ಹೋಗಿದ್ದಾಗ ತೆಗೆದ ನೂರಾರು ಛಾಯಾಚಿತ್ರಗಳನ್ನು ಆತ ಪ್ಲಿಕರ್‌ನಲ್ಲಿ ಸೆರಿಸಿ ನಿಮಗೆ ಅದರ ಕೊಂಡಿ ಕಳುಸಿದ್ದಾನೆ ಎಂದಿಟ್ಟುಕೊಳ್ಳಿ. ಎಲ್ಲ ಚಿತ್ರಗಳನ್ನು ಒಂದೆ ಆದೇಶ ಮೂಲಕ ಡೌನ್‌ಲೋಡ್ ಮಾಡಲು ಒಂದು ಉಪಯುಕ್ತ ತಂತ್ರಾಂಶವಿದೆ. ಅದುವೇ Bulkr.  ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ clipyourphotos.com/bulkr. ಆದರೆ ನೆನಪಿಟ್ಟುಕೊಳ್ಳಿ -ಅಂತರಜಾಲದಲ್ಲಿರುವ ಛಾಯಾಚಿತ್ರಗಳನ್ನೆಲ್ಲ ನೀವು ಪ್ರತಿಮಾಡಿಕೊಳ್ಳುವಂತಿಲ್ಲ. ಯಾವ ಚಿತ್ರಗಳನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದು ಎಂಬುದಾಗಿ ಜಾಲತಾಣದಲ್ಲಿ ಹೇಳಿಕೆ ಇದೆಯೋ ಅಂತಹ ಜಾಲತಾಣದಿಂದ ಮಾತ್ರ ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.  

e - ಸುದ್ದಿ

ಫೋಟೋದಲ್ಲಿ ಸಿಕ್ಕಿಬಿದ್ದ ಕಳ್ಳ

ಅಮೃತವರ್ಷಿಣಿ ಚಲನಚಿತ್ರ ನೀವು ನೋಡಿರಬಹುದು. ಅದರಲ್ಲಿ ಕೊಲೆಗಾರನನ್ನು ಸೆರೆಹಿಡಿದಿದ್ದು ಕ್ಯಾಮರ. ನಿಜಜೀವನದಲ್ಲೂ ಇಂತಹುದೇ ಘಟನೆ ನಡೆದಿದೆ. ಅಮೇರಿಕದ ಮ್ಯಾಡಿಸನ್ ನಗರದಲ್ಲಿ ಒಬ್ಬಾತನಿಗೆ ಒಂದು ಕಟ್ಟಡದ ಮುಂದೆ  ತನ್ನ ಮತ್ತು ಕುಟುಂಬದವರ ಫೋಟೋ ತೆಗಸಿಕೊಳ್ಳಬೇಕಿತ್ತು. ಅದಕ್ಕಾಗಿ ಆತ ತನ್ನ ಬ್ಯಾಗನ್ನು ಸ್ವಲ್ಪ ದೂರ, ಕಟ್ಟಡದ ಮೆಟ್ಟಿಲಲ್ಲಿಟ್ಟು, ಕ್ಯಾಮರಾವನ್ನು ಒಂದು ಕಡೆ ನಿಲ್ಲಿಸಿ ಅದರಲ್ಲಿರುವ ಸ್ವಯಂಚಾಲಿತವಾಗಿ ಫೋಟೋ ತೆಗೆಯುವ ಸವಲತ್ತನ್ನು ಬಳಸಿದ. ಫೋಟೋ ತೆಗೆದ ನಂತರ ನೋಡಿದಾಗ ಆತನ ಬ್ಯಾಗ್ ನಾಪತ್ತೆಯಾಗಿತ್ತು. ಆತನ ಅದೃಷ್ಟಕ್ಕೆ ಬ್ಯಾಗ್ ಕದಿಯುವಾಗ ಕಳ್ಳ ಆತ ತೆಗೆದ ಫೋಟೋದಲ್ಲಿ ಸಿಕ್ಕಿಬಿದ್ದಿದ್ದ. ಆ ಫೋಟೋ ಪೋಲೀಸರಿಗೆ ತೋರಿಸಿದಾಗ ಅರ್ಧ ಘಂಟೆಯ ಒಳಗೆ ಕಳ್ಳನನ್ನು ಬ್ಯಾಗ್ ಸಮೇತ ಹಿಡಿದರು.

e- ಪದ

ಸ್ಟೆಗನೋಗ್ರಾಫಿ (Steganography) -ಒಂದು ಚಿತ್ರ ಅಥವಾ ಕಡತದೊಳಗೆ ಗುಪ್ತವಾಗಿ ಮಾಹಿತಿಯನ್ನು ಅಡಗಿಸಿ ಇನ್ನೊಬ್ಬರಿಗೆ ಕಳುಹಿಸುವುದು. ಸಾಮಾನ್ಯವಾಗಿ ಮಾಹಿತಿಯನ್ನು ಗೂಢಲಿಪೀಕರಿಸಿ (encryption) ಇನ್ನೊಬ್ಬರಿಗೆ ಕಳುಹಿಸುತ್ತಾರೆ. ಹಾಗೆ ಕಳುಹಿಸಿದಾಗ ಅದು ಏನೆಂದು ಆ ಮಾಹಿತಿ ತಲುಪಬೇಕಾದವರಿಗೆ ಹೊರತು ಬೇರೆ ಯಾರಿಗೂ ಏನೂ ಅರ್ಥವಾಗುವುದಿಲ್ಲ. ಆದರೆ ಗುಪ್ತ ಮಾಹಿತಿ ಹೋಗಿದೆ ಎಂದು ತಿಳಿಯುತ್ತದೆ. ಆದರೆ ಒಂದು ಚಿತ್ರದೊಳಗೆ ಮಾಹಿತಿ ಅಡಗಿಸಿ ಕಳುಹಿಸಿದರೆ ಬೇರೆಯವರಿಗೆ ಯಾವ ಸಂದೇಹವೂ ಬರುವುದಿಲ್ಲ.

e - ಸಲಹೆ

ಸಹನ ಅವರ ಪ್ರಶ್ನೆ: ನನಗೆ ಮನೆಬಳಕೆಗೆ ಉತ್ತಮ ಮತ್ತು ಉಚಿತ ವೈರಸ್ ನಿರೋಧಕ ತಂತ್ರಾಂಶ ಬೇಕು. ಯಾವುದನ್ನು ಬಳಸಬೇಕು? ಎಲ್ಲಿ ಸಿಗುತ್ತದೆ?
ಉ: ನೀವು Microsoft Security Essentials ಬಳಸಬಹುದು. ಇದು ಬೇಕಿದ್ದಲ್ಲಿ http://bit.ly/cHMEjx ಜಾಲತಾಣಕ್ಕೆ ಭೇಟಿ ನೀಡಿ.

ಕಂಪ್ಯೂತರ್ಲೆ

ಗಣಕವಾಡು

ಡೆಸ್ಕ್‌ಟಾಪ್ ಆದರೇನು ಶಿವ
ಲ್ಯಾಪ್‌ಟಾಪ್ ಆದರೇನು ಶಿವ
ವೈರಸ್‌ಗೆಲ್ಲ ಒಂದೇ ಶಿವ

ಸೋಮವಾರ, ಆಗಸ್ಟ್ 23, 2010

ಗಣಕಿಂಡಿ - ೦೬೬ (ಆಗಸ್ಟ್ ೨೩, ೨೦೧೦)

ಅಂತರಜಾಲಾಡಿ

ಪತ್ರಿಕಾಸಂಗ್ರಹಾಲಯ

ಹಳೆಯ ವಸ್ತುಗಳಿಗೆ, ಅಪರೂಪದ ವಸ್ತುಗಳಿಗೆ, ವಿಜ್ಞಾನ ಮತ್ತು ತಂತ್ರಜ್ಞಾನದ ಮಾದರಿಗಳಿಗೆ ಎಲ್ಲ ವಸ್ತುಸಂಗ್ರಹಾಲಯಗಳಿರುವುದು ತಿಳಿದಿರಬಹುದು. ಪತ್ರಿಕೆಗಳಿಗೆ? ಹೌದು. ಅವುಗಳಿಗೂ ಸಂಗ್ರಹಾಲಯವಿದೆ. ಈ ಸಂಗ್ರಹಾಲಯ ೨,೫೦,೦೦೦ ಚದರ ಅಡಿಗಳಷ್ಟು ವಿಸ್ತಾರವಾಗಿದ್ದು ಅಮೇರಿಕ ದೇಶದ ವಾಶಿಂಗ್ಟನ್ ನಗರದಲ್ಲಿದೆ. ಈ ಸಂಗ್ರಹಾಲಯಕ್ಕೆ ಪೂರಕವಾಗಿರುವ ಜಾಲತಾಣ www.newseum.org. ಇದರಲ್ಲಿ ವಸ್ತುಸಂಗ್ರಹಾಲಯದ ಭೇಟಿಗೆ ಟಿಕೆಟು, ಪುಸ್ತಕಗಳು, ಇನ್ನಿತರೆ ಸಂಬಂಧಿ ವಸ್ತುಗಳು ಎಲ್ಲ ಮಾರಾಟಕ್ಕಿವೆ. ಜೊತೆಗೆ ಪ್ರಪಂಚದ ಬಹುಪಾಲು ದೇಶಗಳ ಖ್ಯಾತ ಪತ್ರಿಕೆಗಳ ಈ ದಿನದ ಮುಖಪುಟವನ್ನೂ ನೋಡಬಹುದು. ಇವುಗಳಲ್ಲದೆ ಪತ್ರಿಕೋದ್ಯವಮಕ್ಕೆ ಸಂಬಂಧಿಸಿದ ಇನ್ನೂ ಹಲವಾರು ಉಪಯುಕ್ತ ಮಾಹಿತಿಗಳು ಇಲ್ಲಿವೆ. ಜನಸಾಮಾನ್ಯರಿಗೆ ಮಾತ್ರವಲ್ಲ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರುಗಳಿಗೂ ತುಂಬ ಉಪಯುಕ್ತ ಜಾಲತಾಣ.

ಡೌನ್‌ಲೋಡ್

ಅಣು ಮಾದರಿ

ರಸಾಯನ ಶಾಸ್ತ್ರದಲ್ಲಿ ಒಂದು ಕಷ್ಟದ ಕೆಲಸವೆಂದರೆ ಪರಮಾಣುಗಳ ಸಂಯೋಜನೆಯಿಂದಾಗುವ ಅಣುಗಳ ರಚನೆಗಳನ್ನು ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವುದು. ಈ ಅಣುಗಳು ಮೂರು ಆಯಾಮದಲ್ಲಿರುತ್ತವೆ. ಅವುಗಳನ್ನು ಎರಡು ಆಯಾಮದಲ್ಲಿ ರಾಸಾಯನಿಕ ಸೂತ್ರದ ಮೂಲಕ ಬರೆಯುತ್ತೇವೆ. ಕೆಲವು ರಾಸಾಯನಿಕಗಳಿಗೆ ಬೇರೆ ಬೇರೆ ರಚನೆಗಳಿದ್ದರೂ ಅವುಗಳ ರಾಸಾಯನಿಕ ಸೂತ್ರ ಒಂದೇ ಆಗಿರುತ್ತದೆ. ಅಣುಗಳನ್ನು ಮೂರು ಆಯಾಮದಲ್ಲಿ ತೋರಿಸುವ ತಂತ್ರಾಂಶ Avogadro. ಇದು ತುಂಬ ಕ್ಲಿಷ್ಟವಾದ ಸಂರಚನೆಗಳನ್ನು ಪರದೆಯ ಮೇಲೆ ಮೂರು ಆಯಾಮದಲ್ಲಿ ಮೂಡಿಸಿ ತೋರಿಸುತ್ತದೆ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/bb86CN. ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಉಪಯುಕ್ತ ತಂತ್ರಾಂಶ ಇದು. ಇದನ್ನು ಬಳಸಬೇಕಾದರೆ ರಸಾಯನಶಾಸ್ತ್ರದಲ್ಲಿ ಪರಿಣತರಾಗಿರಬೇಕು. ಅಣುವಿನಲ್ಲಿರುವ ಪ್ರತಿಯೊಂದು ಪರಮಾಣುವನ್ನೂ ತಿರುಗಿಸಿ, ಎಳೆದು, ತಿರುಚಿ, ಎಲ್ಲ ಮಾಡಬಹುದು, ರಾಸಾಯನಿಕ ಬಂಧಗಳ ಗುಣ ತಿಳಿಯಬಹುದು, ಪರಮಾಣುಗಳ ನಡುವಿನ ಕೋನ ಅಳೆಯಬಹುದು -ಹೀಗೆ ಹಲವು ಉಪಯುಕ್ತ ಸವಲತ್ತುಗಳು ಇದರಲ್ಲಿವೆ.

e - ಸುದ್ದಿ

ಬೊಗಳೆಗೆ ಶಿಕ್ಷೆ

“ನಾನು ಇವತ್ತು ಎಷ್ಟು ವೇಗವಾಗಿ ವಾಹನ ಓಡಿಸಿಕೊಂಡು ಬಂದೆ ಗೊತ್ತಾ” ಎಂದು ಬಡಾಯಿಕೊಚ್ಚಿಕೊಳ್ಳುವವರು ತುಂಬ ಇದ್ದಾರೆ. ಹಾಗೆ ಹೇಳಿಕೊಂಡು ಅದರಿಂದಾಗಿ ಶಿಕ್ಷೆಗೆ ಗುರಿಯಾದ ಸುದ್ದಿ ನಮಗೆ ತಿಳಿದಿಲ್ಲ. ಆದರೆ ಕೆನಡ ದೇಶದಲ್ಲಿ ೧೯ ವರ್ಷದ ಯುವಕನೊಬ್ಬ ಬಡಾಯಿಕೊಚ್ಚಿಕೊಂಡು ಶಿಕ್ಷೆಗೆ ಗುರಿಯಾದ ಸುದ್ದಿ ಬಂದಿದೆ. ಆದರೆ ಆತ ಬಡಾಯಿಕೊಚ್ಚಿಕೊಂಡಿದ್ದು ಸುತ್ತಮುತ್ತಲಿನವರ ಜೊತೆ ಅಲ್ಲ, ಅಂತರಜಾಲದಲ್ಲಿ. ಕಾರುಗಳ ಬಗ್ಗೆ ವಿಚಾರವಿನಿಮಯ ಮಾಡಲು ಇರುವ ಜಾಲತಾಣವೊಂದರಲ್ಲಿ ಆತ “ನಾನು ೪೦ ಕಿ.ಮೀ. ವೇಗದ ಮಿತಿ ಇರುವ ರಸ್ತೆಯಲ್ಲಿ ೧೪೦ ಕಿ.ಮೀ. ವೇಗದಲ್ಲಿ ಕಾರು ಓಡಿಸಿದೆ” ಎಂದು ಬರೆದಿದ್ದ. ಇದನ್ನು ಓದಿದ ಒಬ್ಬಾತ ಪೋಲೀಸರಿಗೆ ದೂರು ನೀಡಿ ಅವರು ಆತನನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಿದರು.

e- ಪದ

ಟ್ವೀಟಪ್ (Tweetup) - ಟ್ವಿಟ್ಟರ್ ಮೂಲಕ ಏರ್ಪಾಡು ಮಾಡಿದ ಸಭೆ ಅಥವಾ ಜನರ ಒಟ್ಟುಗೂಡುವಿಕೆ. ಟ್ವಿಟ್ಟರ್‌ನಲ್ಲಿ ಯಾವಾಗಲು ಮಾತುಕತೆ ನಡೆಸುವ ಸಮಾನಮನಸ್ಕರು ಟ್ವಿಟ್ಟರ್‌ನ ಮೂಲಕವೇ ಎಲ್ಲಿ ಯಾವಾಗ ಸಭೆ ಸೇರುವುದು ಎಂದು ಚರ್ಚಿಸಿ, ನಿರ್ಧರಿಸಿ ಅನಂತರ ಜೊತೆಗೂಡುವುದಕ್ಕೆ ಟ್ವೀಟಪ್ ಎನ್ನುತ್ತಾರೆ. ಈ ಪದ ಈಗ ಆಕ್ಸ್‌ಫರ್ಡ್ ನಿಘಂಟುವನ್ನು ಸೇರಿದೆ.

e - ಸಲಹೆ

ಮಧುಸೂದನ ಶೆಟ್ಟಿ ಅವರ ಪ್ರಶ್ನೆ: ನನಗೆ Microsoft Visual Studio full version ಬೇಕು. ಎಲ್ಲಿ ಸಿಗುತ್ತದೆ?
ಉ: www.microsoft.com/express ಜಾಲತಾಣದಲ್ಲಿ ನಿಮಗೆ ಉಚಿತ ಆವೃತ್ತಿ ಸಿಗುತ್ತದೆ. ಪೂರ್ತಿ ಆವೃತ್ತಿ ಉಚಿತವಾಗಿ ಸಿಗುವುದಿಲ್ಲ. ಅದನ್ನು ಕೊಂಡುಕೊಳ್ಳಬೇಕು.

ಕಂಪ್ಯೂತರ್ಲೆ

ಗಣಕತಜ್ಞನ ಹೆಂಡತಿ ಆತನಿಗೆ ದಬಾಯಿಸಿದಳು “ಸ್ವಲ್ಪ ಆ ನಿಮ್ಮ ಕಂಪ್ಯೂಟರ್ ಬಂದ್ ಮಾಡಿ ಮಗುವಿನ ತೊಟ್ಟಲು ತೂಗಿ”. ಆತ ಏನು ಮಾಡಿದ ಗೊತ್ತೆ? ಗಣಕದ ಸಿ.ಡಿ. ಡ್ರೈವ್‌ಗೆ ಒಂದು ಹಗ್ಗ ಕಟ್ಟಿ ಅದನ್ನು ತೊಟ್ಟಿಲಿಗೆ ಕಟ್ಟಿದ. ಗಣಕದಲ್ಲಿ ಸಿ.ಡಿ.ಡ್ರೈವ್ ಅನ್ನು ನಿರಂತರವಾಗಿ ತೆರದು ಮುಚ್ಚಿ ಮಾಡುವ ಒಂದು ಸಣ್ಣ ಪ್ರೋಗ್ರಾಮ್ ಬರೆದು ಅದನ್ನು ಚಲಾಯಿಸಿದ.

ಸೋಮವಾರ, ಆಗಸ್ಟ್ 16, 2010

ಗಣಕಿಂಡಿ - ೦೬೫ (ಆಗಸ್ಟ್ ೧೬, ೨೦೧೦)

ಅಂತರಜಾಲಾಡಿ

ವಾಟ್? ಏನೇನು?

ನಮ್ಮ ದೇಶದ ಎಲ್ಲ ರಾಜ್ಯಗಳು ಮಾರಾಟ ತೆರಿಗೆಯ ಬದಲಿಗೆ ಮೌಲ್ಯವರ್ಧಿತ ತೆರಿಗೆಯ (VAT) ವಿಧಾನವನ್ನು ಅಳವಡಿಸಿಕೊಂಡಿದ್ದು ನಿಮಗೆ ತಿಳಿದಿರಬಹುದು. ಈ ತೆರಿಗೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಆಯಾ ರಾಜ್ಯಗಳಲ್ಲೂ ಕಾಲಕಾಲಕ್ಕೆ ಈ ತೆರಿಗೆ ಬೇರೆ ಬೇರೆ ವಸ್ತುಗಳಿಗೆ ಬದಲಾಗುತ್ತಲೇ ಇರುತ್ತದೆ. ನೀವು ವ್ಯವಹಾರ ಮಾಡುವವರಾದರೆ ಈ ಬಗ್ಗೆ ನಿಮಗೆ ಮಾಹಿತಿ ಇರತಕ್ಕದ್ದು. ದೇಶಮಟ್ಟದಲ್ಲಿ ವ್ಯಾಪಾರ ಮಾಡುವವರಾದರೆ ಪ್ರತಿಯೊಂದು ರಾಜ್ಯದ ವ್ಯಾಟ್ ದರ ತಿಳಿದಿರಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ವ್ಯಾಟ್ ದರಗಳು, ಕಾಲಕಾಲಕ್ಕೆ ಸರಕಾರವು ಹೊರಡಿಸಿರುವ ಘೋಷಣೆಗಳು, ಇತ್ಯಾದಿ ಎಲ್ಲ ತಿಳಿಸುವ ಜಾಲತಾಣ www.stvat.com. ಇತ್ತೀಚೆಗೆ ಯಾಕೋ ಈ ಜಾಲತಾಣ ಸ್ವಲ್ಪ ನಿದ್ದೆಹೊಡೆದಂತೆ ಅನ್ನಿಸುತ್ತಿದೆ.

ಡೌನ್‌ಲೋಡ್

ಇಲಿಯ ಜಾಡನು ಹಿಡಿದು

ಗಣಕದಲ್ಲಿ ಕೆಲಸ ಮಾಡಿ ಮಾಡಿ ಸುಸ್ತಾದಾಗ ಸ್ವಲ್ಪ ಮೌಸ್ ಕಡೆಗೆ ಗಮನ ನೀಡೋಣ. ನೀವು ಕೆಲಸ ಮಾಡುವಾಗ ಮೌಸ್ ಅನ್ನು ಎಲ್ಲೆಲ್ಲ ಓಡಾಡಿಸಿದ್ದೀರಾ? ಯಾವ ಯಾವ ಜಾಗದಲ್ಲಿ ಎಷ್ಟು ಹೊತ್ತು ಅದನ್ನು ಅಲ್ಲಾಡಿಸದೆ ಹಿಡಿದಿದ್ದೀರಾ? ಇವನ್ನೆಲ್ಲ ಒಂದು ಸರಳ ರೇಖಾ ಚಿತ್ರದ ರೂಪದಲ್ಲಿ ಸೆರೆಹಿಡಿದು ತೊರಿಸವ ತಂತ್ರಾಂಶ  IOGraph. ಇದು ತಯಾರಿಸಿ ಕೊಡುವ ಚಿತ್ರ ಒಂದು ನವ್ಯ ಚಿತ್ರದಂತೆ ಕಂಡುಬಂದರೆ ಅದರಲ್ಲಿ ಆಶ್ಚರ್ಯವಿಲ್ಲ. ಅಥವಾ ನಿಮ್ಮ ಕಣ್ಣಿಗೆ ಅದು ಯಾವನೋ ಒಬ್ಬ ಪೋರ ಸುಮ್ಮನೆ ಅಡ್ಡಾದಿಡ್ಡಿ ಗೀಚಿದಂತೆ ಕಂಡುಬಂದರೂ ಬರಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ iographica.com.

e - ಸುದ್ದಿ

ಆಟದಿಂದ ಕಣ್ಣು ಗುಣಮುಖ

ಗಣಕ ಮತ್ತು ಗಣಕಾಧಾರಿತ ಆಟದ ಸಾಧನಗಳನ್ನು ಕೈಯಲ್ಲಿ ಹಿಡಿದು ಗಂಟೆಗಟ್ಟಳೆ ಆಡುವ ಮಕ್ಕಳನ್ನು ಗದರುವುದು ಸಹಜ. ಹೀಗೆ ಆಡುವುದರಿಂದ ದೋಷಪೂರಿತ ಕಣ್ಣನ್ನು ಸರಿಪಡಿಸಿಕೊಂಡ ಉದಾಹರಣೆ ಕೇಳಿದ್ದೀರಾ? ಬೆನ್ ಮಿಖೈಲಿಸ್ ಎಂಬ ಆರು ವರ್ಷದ ಹುಡುಗನ ಒಂದು ಕಣ್ಣಿನ ದೃಷ್ಟಿ ಶಕ್ತಿ ಕುಂಠಿತವಾಗುತ್ತಲೇ ಇತ್ತು. ಇದಕ್ಕೆ ಪರಿಹಾರವಾಗಿ ನೈನ್‌ಟೆನ್ಡು ಎಂಬ ಆಟದ ಸಾಧನದಲ್ಲಿ ದಿನಕ್ಕೆ ಎರಡು ಘಂಟೆಗಳ ಕಾಲ ಆಟ ಆಡಬೇಕು ಎಂದು ವೈದ್ಯರು ಸೂಚಿಸಿದರು. ಸರಿಯಾಗಿರುವ ಕಣ್ಣಿಗೆ ಆಡುವಾಗ ಪಟ್ಟಿ ಕಟ್ಟಿಕೊಳ್ಳಬೇಕು ಎಂದೂ ಜೊತೆಗೆ ಸೂಚಿಸಿದ್ದರು. ಹೀಗೆ ಆಡಿ ಆಡಿ ಆತನ ಕಣ್ಣಿನ ದೃಷ್ಟಿ ಸುಧಾರಿಸಿತು. ಆಟವೆಲ್ಲವೂ ಕೆಟ್ಟದಲ್ಲ.
 
e- ಪದ


ನಿಷ್ಪಕ್ಷ ಅಂತರಜಾಲ (net neutrality, Internet neutrality) - ಅಂತರಜಾಲವು ಎಲ್ಲ ನಮೂನೆಯ ನಿಯಮ ನಿರ್ಬಂಧಗಳಿಂದ ಮುಕ್ತವಾಗಿರಬೇಕು ಎಂಬ ಚಿಂತನೆ. ಅಂತರಜಾಲದ ಮೇಲೆ ಸರಕಾರ ಮತ್ತು ಅಂತರಜಾಲ ಸಂಪರ್ಕ ಸೇವೆ ನೀಡುವವರು ಕೆಲವೊಮ್ಮೆ ಕೆಲವು ನಮೂನೆಯ ನಿರ್ಬಂಧಗಳನ್ನು ಹೇರುತ್ತಾರೆ. ಉದಾಹರಣೆಗೆ ಇತ್ತೀಚೆಗೆ ಪಾಕಿಸ್ತಾನ ಸರಕಾರವು ಫೇಸ್‌ಬುಕ್ ಜಾಲತಾಣವನ್ನು ಆ ದೇಶದಲ್ಲಿ ನಿರ್ಬಂಧಿಸಿತ್ತು.

e - ಸಲಹೆ

ಆದರ್ಶ ಅವರ ಪ್ರಶ್ನೆ: ನಾನು ಕೆಲವು ಸಿ.ಡಿ. ಮತ್ತು ಡಿ.ವಿ.ಡಿ.ಗಳಲ್ಲಿ ಈಗಾಗಲೇ ಹಲವು ಮಾಹಿತಿ ಸೇರಿಸಿದ್ದೇನೆ, ಹಾಡುಗಳನ್ನು ಬರೆದಿದ್ದೇನೆ. ಅವುಗಳಲ್ಲಿ ಇನ್ನೂ ಖಾಲಿ ಜಾಗ ಇದೆ. ಅವುಗಳಿಗೆ ಇನ್ನೂ ಮಾಹಿತಿ ಸೇರಿಸಬಹುದೇ?
ಉ: ಸಾಧ್ಯ. ಆದರೆ ಅದಕ್ಕೆ ನೀವು ಸಿ.ಡಿ. ಅಥವಾ ಡಿ.ವಿ.ಡಿ.ಗೆ  ಮಾಹಿತಿ ಸೇರಿಸಿದಾಗ ಕೊನೆಯಲ್ಲಿ session close ಮಾಡಿರಬಾರದು.

ಕಂಪ್ಯೂತರ್ಲೆ


ನಿಧಾನ ಸಂಪರ್ಕವಿರುವಾಗ ಅಂತರಜಾಲದಿಂದ ದೊಡ್ಡ ಕಡತಗಳನ್ನು ಡೌನ್‌ಲೋಡ್ ಮಾಡುವಾಗ ಅದು ಪೂರ್ತಿಯಾಗಲು ಕಾಯುತ್ತಿರುವಾಗ ನೀವು ಏನೇನು ಮಾಡಬಹುದು? ಕೆಳಗೆ ನೀಡಿರುವವುಗಳನ್ನು ಪಟ್ಟಿ ಮಾಡಬಹುದು:-
·    ದೇವೇಗೌಡರು ಹೇಳಿರುವ ಎಲ್ಲ ಬೈಗುಳಗಳು
·    ಬಂಗಾರಪ್ಪನವರು ಬದಲಿಸಿರುವ ಎಲ್ಲ ಪಕ್ಷಗಳ ಹೆಸರುಗಳು
·    ಯಡ್ಯೂರಪ್ಪನವರು ಘೋಷಿಸಿ ನಂತರ ಬದಲಾಯಿಸಿದ ಅಥವಾ ಹಿಂದಕ್ಕೆ ಪಡೆದ ತೀರ್ಮಾನಗಳು
·    ಶಂಕುಸ್ಥಾಪನೆ ಮಾಡಿ ನಂತರ ಅರ್ಧಕ್ಕೆ ನಿಂತ ಅಥವಾ ಪ್ರಾರಂಭವೇ ಆಗಿರದ ಸರಕಾರಿ ಯೋಜನೆಗಳು
·    ಮತ್ತೆ ಮತ್ತೆ ಓದಿದರೂ ನಗು ಬಾರದ ಕಂಪ್ಯೂತರ್ಲೆ ಜೋಕುಗಳು

ಸೋಮವಾರ, ಆಗಸ್ಟ್ 9, 2010

ಗಣಕಿಂಡಿ - ೦೬೪ (ಆಗಸ್ಟ್ ೦೯, ೨೦೧೦)

ಅಂತರಜಾಲಾಡಿ

ರೈಲ್ವೆ ಮಾಹಿತಿ ಬೇಕೆ?

ಯಾವ ರೈಲು ಯಾವಾಗ ಬರುತ್ತದೆ? ಯಾವ ನಗರಕ್ಕೆ ಯಾವ್ಯಾವ ರೈಲುಗಳಿವೆ? ನಮ್ಮ ನಗರದ ಮೂಲಕ ಯವ್ಯಾವ ರೈಲುಗಳು ಹಾದು ಹೋಗುತ್ತವೆ? ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ತಲುಪಲು ಯಾವ ರೈಲಿಗೆ ಎಷ್ಟು ಸಮಯ ಹಿಡಿಯುತ್ತದೆ? ಇತ್ಯಾದಿ ಮಾಹಿತಿ ಬೇಕೆ? ಇದಕ್ಕಾಗಿ ನೀವು ಮಾಡಬೇಕಾದುದೆಂದರೆ www.trainenquiry.com ಜಾಲತಾಣವನ್ನು ವೀಕ್ಷಿಸುವುದು. ರೈಲುಗಳು ಸಮಯಕ್ಕೆ ಸರಿಯಾಗಿ ಚಲಿಸುತ್ತಿವೆಯೇ ಎಂಬ ಮಾಹಿತಿ ಕೂಡ ಇಲ್ಲಿ ಸಿಗುತ್ತದೆ. ರೈಲು ಟಿಕೆಟುಗಳನ್ನು ಮುಂಗಡ ಕಾದಿರಿಸಬೇಕೇ? ಹಾಗಿದ್ದರೆ ನೀವು www.irctc.co.in ಜಾಲತಾಣಕ್ಕೆ ಭೇಟಿ ನೀಡಬೇಕು.

ಡೌನ್‌ಲೋಡ್

ಸಂಗೀತ ಸಂಯೋಜಕರಾಗಿ

ಎ. ಆರ್. ರೆಹಮಾನ್ ಅವರು ಗಣಕ ಬಳಸಿ ಸಂಗೀತ ಸಂಯೋಜನೆ ಮಾಡುತ್ತಾರೆ ಎಂದು ಓದಿರಬಹುದು. ನಿಮ್ಮಲ್ಲಿ ಸಂಗೀತ ಸಂಯೋಜಕನಾಗುವಂತಹ ಪ್ರತಿಭೆ ಇದ್ದಲ್ಲಿ ಎಲ್ಲ ವಾದ್ಯಗಳೂ ನಿಮ್ಮೊಡನೆ ಇರದಿದ್ದಲ್ಲಿ ಗಣಕ ಬಳಸಿಯೇ ಸಂಗೀತ ಸಂಯೋಜನೆ ಮಾಡಬಹುದು. ಅದಕ್ಕೆ ಬೇಕಾದುದೇನೆಂದರೆ ಎಲ್ಲ ಬಗೆಯ ವಾದ್ಯಗಳ ಸ್ವರ ಸೃಷ್ಠಿಸಬಲ್ಲ ತಂತ್ರಾಂಶ. ಇಂತಹ ದುಬಾರಿ ತಂತ್ರಾಂಶಗಳು ಹಲವಾರಿವೆ. ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು jOrgan ಬಳಸಬಹುದು. ಇದು ದೊರೆಯುವ ಜಾಲತಾಣ http://bit.ly/bHYVpQ. ಇದನ್ನು ಬಳಸಲು ನಿಮ್ಮ ಗಣಕದಲ್ಲಿ ಜಾವಾ ಇರತಕ್ಕದ್ದು. ಈ ತಂತ್ರಾಂಶವನ್ನು ಬಳಸಲು ಹಲವು ಬಗೆಯ ವಾದ್ಯಗಳನ್ನೂ ನೀವು ಅದೇ ಜಾಲತಾಣದಿಂದ ಪ್ರತ್ಯೇಕವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇನ್ನು ಕೆಲವು ಬೇರೆ ಕಡೆ ದೊರೆಯುತ್ತವೆ. ಅದಕ್ಕೆ  ಕೊಂಡಿಗಳನ್ನು ಇದೇ ಜಾಲತಾಣದಲ್ಲಿ ನೀಡಲಾಗಿದೆ. ಈ ತಂತ್ರಾಂಶವು ಕೆಲವು ನಿಜವಾದ ವಾದ್ಯಗಳನ್ನೂ ಅವು ಗಣಕಕ್ಕೆ ಸಂಪರ್ಕಗೊಂಡಿದ್ದಲ್ಲಿ ನಿಯಂತ್ರಿಸಬಲ್ಲುದು.

e - ಸುದ್ದಿ

ಅಂತರಿಕ್ಷಕ್ಕೆ ಆಂಡ್ರೋಯಿಡ್ ಫೋನು

ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾವು ಇತ್ತೀಚೆಗೆ ಒಂದು ಪ್ರಯೋಗ ನಡೆಸಿತು. ಗೂಗ್ಲ್‌ನವರ ಆಂಡ್ರೋಯಿಡ್ ಫೋನನ್ನು ಅವರು ಒಂದು ಉಪಗ್ರಹಕ್ಕೆ ಕಟ್ಟಿ ಅಂತರಿಕ್ಷಕ್ಕೆ ಕಳುಹಿಸಿದರು. ಎರಡು ಫೋನುಗಳನ್ನು ಹೀಗೆ ಕಳುಹಿಸಲಾಗಿತ್ತು. ರಾಕೆಟ್ ಹಾರುತ್ತಿದ್ದಂತೆ ಅದು ವಿಡಿಯೋ ಚಿತ್ರೀಕರಣ ಮಾಡುತ್ತಿತ್ತು. ಕೊನೆಗೆ ಉಪಗ್ರಹ ಭೂಮಿಗೆ ವಾಪಾಸು ಬಂದಾಗ ಒಂದು ಫೋನು ಪ್ಯಾರಾಚೂಟ್ ತೊಂದರೆಯಿಂದಾಗಿ ಪುಡಿಪುಡಿಯಾಯಿತು. ಇನ್ನೊಂದು ಫೋನು ಹಾಗೆಯೇ ಇತ್ತು. ಅದು ಚಿತ್ರೀಕರಿಸಿದ ವೀಡಿಯೋ ಕೂಡ ಚೆನ್ನಾಗಿಯೇ ಇತ್ತು. ಅಂತರಿಕ್ಷಕ್ಕೆ ಕಳುಹಿಸುವಾಗಿನ ವಿಪರೀತವಾದ ಹವಾಮಾನ ಬದಲಾವಣೆಗಳನ್ನು ಫೋನು ಸಹಿಸಿಕೊಂಡಿತ್ತು. ಒಂದು ಮಾಮೂಲಿ ಫೋನಿನಲ್ಲಿ ಬಳಸುವ ಮಾಮೂಲಿ ಇಲೆಕ್ಟ್ರಾನಿಕ್ಸ್ ಉಪಕರಣಗಳು ಇಂತಹ ವಿಪರೀತ ಹವಾಮಾನವನ್ನು ಸಹಿಸಿಕೊಳ್ಳಬಲ್ಲುದೇ ಎಂದು ತಿಳಿಯುವುದು ನಾಸಾದವರ ಉದ್ದೇಶವಾಗಿತ್ತು. ಅದು ಸಾಧ್ಯ ಎಂದು ಸಾಬೀತಾಯಿತು.

e- ಪದ

ಸೈಬರ್ ಅಪರಾಧ (cybercrime) - ಗಣಕ ಅಥವಾ ಮಾಹಿತಿ ತಂತ್ರಜ್ಞಾನ ಬಳಸಿ ಮಾಡುವ ಅಪರಾಧ. ಗಣಕ ಅಥವಾ ಗಣಕ ಜಾಲಕ್ಕೆ ಅನಧಿಕೃತವಾಗಿ ಪ್ರವೇಶ ಮಾಡುವುದು, ಮಾಹಿತಿ ಕದಿಯುವುದು, ವೈರಸ್ ತಯಾರಿಸಿ ಧಾಳಿ ಇಡುವುದು, ಇಮೈಲ್ ಬಾಂಬ್ ಕಳುಹಿಸುವುದು, ಒಬ್ಬರನ್ನು ಬಿಡದೇ ಬೆಂಬತ್ತಿ ಇಮೈಲ್ ಕಳುಹಿಸಿ ಪೀಡಿಸುವುದು, ಪಾಸ್‌ವರ್ಡ್ ಕದಿಯುವುದು -ಇವೆಲ್ಲ ಕೆಲವು ಸೈಬರ್ ಅಪರಾಧಗಳು. ಇವೆಲ್ಲ ಶಿಕ್ಷಾರ್ಹ ಕೂಡ.

e - ಸಲಹೆ

ಅಜಿತ್ ಅವರ ಪ್ರಶ್ನೆ: ಗೂಗ್ಲ್ ಆಡ್‌ಸೆನ್ಸ್ (adsense) ಎಂದರೇನು?
ಉ: ಗೂಗ್ಲ್‌ನವರು ಅಂತರಜಾಲ ತಾಣಗಳಲ್ಲಿ ಜಾಹೀರಾತು ನೀಡಲು ಬಳಸುವ ವಿಧಾನ. ಉದಾಹರಣೆಗೆ ನೀವೊಂದು ಜಾಲತಾಣ ನಡೆಸುತ್ತಿದ್ದೀರೆಂದಿಟ್ಟುಕೊಳ್ಳೋಣ. ಗೂಗ್ಲ್ ಆಡ್‌ಸೆನ್ಸ್ ಮೂಲಕ ನಿಮ್ಮ ಜಾಲತಾಣದಲ್ಲಿ ಜಾಹೀರಾತು ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಹಣ ಬರುತ್ತದೆ. ಜಾಹೀರಾತು ನೀಡುವವರು ಗೂಗ್ಲ್‌ಗೆ ಹಣ ನೀಡಬೇಕು.

ಕಂಪ್ಯೂತರ್ಲೆ

ಗಣಕ(ತ)ಗಾದೆ

·    ಒಂದು ಚಿತ್ರ ಸಾವಿರ ಶಬ್ದಗಳನ್ನು ಹೇಳುತ್ತದೆ. ಒಂದು ಫೋಟೋಶಾಪ್ ಮಾಡಿದ ಚಿತ್ರ ಸಾವಿರ ಸುಳ್ಳುಗಳನ್ನು ಹೇಳುತ್ತದೆ.
·    ಫೋಟೋಶಾಪ್‌ನಲ್ಲಿ ಚಿತ್ರ ಬದಲಾಯಿಸಿದ ಮಾತ್ರಕ್ಕೆ ಹುಡುಗಿಗೆ ಹುಡುಗ ಸಿಗಲಾರ.

ಮಂಗಳವಾರ, ಆಗಸ್ಟ್ 3, 2010

ಗಣಕಿಂಡಿ - ೦೬೩ (ಆಗಸ್ಟ್ ೦೨, ೨೦೧೦)

ಅಂತರಜಾಲಾಡಿ

ಆಟವಾಡೋಣ

ಆಟ ಆಡುವುದು ಯಾರಿಗೆ ಇಷ್ಟವಿಲ್ಲ? ಗಣಕಾಧಾರಿತ ಆಟಗಳಲ್ಲಿ ಪ್ರಮುಖವಾಗಿ ಎರಡು ಬಗೆ. ಗಣಕದಲ್ಲೇ ಆಡುವಂತದ್ದು ಮತ್ತು ಅಂತರಜಾಲತಾಣದಲ್ಲಿ ಆಡುವಂತದ್ದು. ಅಂತರಜಾಲದಲ್ಲೇ ಅಂದರೆ ಜಾಲತಾಣದಲ್ಲಿ ಆಡುವಂತಹ ಆಟಗಳನ್ನು ನೀಡುವಂತಹ ಜಾಲತಾಣಗಳು ಹಲವಾರಿವೆ. ಅಂತಹ ಒಂದು ಭಾರತೀಯ ಜಾಲತಾಣ zapak.com. ಈ ಜಾಲತಾಣದಲ್ಲಿ ಉಚಿತವಾಗಿ ಆಡಬಲ್ಲ ಆಟಗಳು ಹಲವಾರಿವೆ. ಸಾಮಾನ್ಯವಾಗಿ ಆಟಗಳ ಕಡತಗಳು ತುಂಬ ದೊಡ್ಡ ಗಾತ್ರದಾಗಿರುತ್ತವೆ. ಅಂದರೆ ಒಳ್ಳೆಯ ಬ್ರಾಡ್‌ಬ್ಯಾಂಡ್ ಸಂಪರ್ಕ ಇದ್ದರೆ ಈ ಆಟಗಳನ್ನು ಚೆನ್ನಾಗಿ ಆಡಬಹುದು. ಭಾರತದಲ್ಲಿ ಎಲ್ಲರಿಗೂ ಇಂತಹ ಸಂಪರ್ಕ ಇಲ್ಲವೆಂದು ಅರಿತಿರುವ ಈ ಜಾಲತಾಣದವರು ಕಡಿಮೆ ವೇಗದ ಸಂಪರ್ಕ ಇರುವವರಿಗೆಂದೇ ಇನ್ನೊಂದು ಆವೃತ್ತಿಯನ್ನೂ ನೀಡಿದ್ದಾರೆ.


ಡೌನ್‌ಲೋಡ್

ಆಟ ತಯಾರಿಸಿ

ಗಣಕದಲ್ಲಿ ಆಟ ಆಡುವುದೇನೋ ಸರಿ. ಅದರಲ್ಲಿ ನಿಮ್ಮದೇನು ಸಾಧನೆ? ಸಾಧ್ಯವಿದ್ದರೆ ಆಟ ತಯಾರಿಸಿ ನೋಡೋಣ ಎಂದು ಯಾರಾದರು ನಿಮಗೆ ಪಂಥಾಹ್ವಾನ ಮಾಡಿದ್ದಾರೆಯೇ? “ಅಯ್ಯೋ ಅದಕ್ಕೆ ತುಂಬ ವರ್ಷಗಳಿಂದ ಪ್ರೋಗ್ರಾಮ್ಮಿಂಗ್ ಕಲಿತಿರಬೇಕು. ಅದು ಕಲಿಯದವರಿಂದ ಅಸಾಧ್ಯ” ಎಂದು ಕರುಬಬೇಕಿಲ್ಲ. ಯಾವುದೇ ಪ್ರೋಗ್ರಾಮ್ಮಿಂಗ್ ಕಲಿಯದೆಯೇ ಆಟ ತಯಾರಿಸಲು ಅನುವು ಮಾಡಿಕೊಡುವ ತಂತ್ರಾಂಶ Gamemaker. ಇದರಲ್ಲಿ ಉಚಿತ ಮತ್ತು ಹಣ ನೀಡಬೇಕಾಗಿರುವ ಎಂಬ ಎರಡು ಆವೃತ್ತಿಗಳಿವೆ. ಉಚಿತ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಅದನ್ನು ಕಲಿತ ನಂತರ ಬೇಕಿದ್ದರೆ ಹಣ ನೀಡಿ ಪೂರ್ತಿ ಆವೃತ್ತಿಯನ್ನು ಕೊಂಡುಕೊಳ್ಳಬಹುದು. ಗಣಕ ಆಟ ತಯಾರಿಸಿ ಅದನ್ನು ಮಾರಿ ಹಣ ಸಂಪಾದಿಸಲೂ ಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/9Sz28S.


e - ಸುದ್ದಿ

ಚಿತ್ರವ ತಿದ್ದಿದರೆ ಶಿಕ್ಷೆಯ ತಿದ್ದಿದಂತೆಯೇ?

ಅಮೇರಿಕದ ಡಾರಿಲ್ ಸೈಮನ್ ಎಂಬಾತನಿಗೆ ಹಲವು ಕಲೆಗಳು ತಿಳಿದಿದ್ದವು. ಅವುಗಳಲ್ಲಿ ಪ್ರಮುಖವಾದವು -ಕ್ರೆಡಿಟ್ ಕಾರ್ಡ್ ನಕಲು ಮಾಡುವುದು, ಕಾರು ಕಳವು ಮಾಡುವುದು, ಜಾದೂ ಮಾಡುವುದು ಹಾಗೂ ಫೋಟೋಶಾಪ್ ಮಾಡುವುದು. ಈತನ ಪಾಂಡಿತ್ಯ ಈ ಕಲೆಗಳಲ್ಲಿ ಚೆನ್ನಾಗಿದ್ದವು, ಒಂದನ್ನು ಹೊರತು ಪಡಿಸಿ. ಅದುವೇ ಫೋಟೋಶಾಪ್ ಬಳಸಿ ಪೋಟೋ ತಿದ್ದುವ ಕಲೆ. ಅದೊಂದರಲ್ಲಿ ಆತನ ಪರಿಣತಿ ಕಡಿಮೆಯಾಗಿತ್ತು. ಆತ ಪೋಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಾಗ, ತಾನು ಸಮಾಜ ಸೇವೆ ಕೂಡ ಮಾಡಿದ್ದೇನೆ ಎಂದು ತೋರಿಸಿ ಕಡಿಮೆ ಶಿಕ್ಷೆಗೆ ಪ್ರಯತ್ನಿಸಿದ. ಅದಕ್ಕಾಗಿ ಕೆಲವು ಸಮಾಜ ಸೇವೆಯ ಸಂಸ್ಥೆಗಳಲ್ಲಿ ಅನಾಥ ಮಕ್ಕಳಿಗೆ ತಾನು ಸಹಾಯ ಮಾಡುತ್ತಿರುವಂತೆ ತೋರಿಸುವ ಚಿತ್ರಗಳನ್ನು ಫೋಟೋಶಾಪ್ ಬಳಸಿ ತಯಾರಿಸಿ ಆತ ನ್ಯಾಯಾಧೀಶರಿಗೆ ನೀಡಿದ್ದ. ಆದರೆ ಈ ಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ತಂತ್ರಜ್ಞರು ಆತನ ಕರಾಮತಿಯನ್ನು ಪತ್ತೆಹಚ್ಚಿದರು. ಈಗ ಆತನಿಗೆ ೨೪ ವರ್ಷ ಶಿಕ್ಷೆಯಾಗಿದೆ. 

e- ಪದ

ಫೋಟೋಶಾಪ್ (photoshop) - ಗಣಕದಲ್ಲಿ ಚಿತ್ರ (ಗ್ರಾಫಿಕ್ಸ್) ತಯಾರಿಸಲು, ಛಾಯಾಚಿತ್ರಗಳನ್ನು ತಿದ್ದಲು ಅನುವು ಮಾಡಿಕೊಡುವ ಅಡೋಬಿ ಕಂಪೆನಿಯವರ ಜಗತ್ಪ್ರಸಿದ್ಧ ತಂತ್ರಾಂಶ. ಇದು ಎಷ್ಟು ಜನಪ್ರಿಯವೆಂದರೆ ಫೋಟೋಶಾಪ್ ಪದವನ್ನು ಇಂಗ್ಲಿಷ್ ನಿಘಂಟುವಿಗೆ ಸೇರಿಸಲಾಗಿದೆ. ಛಾಯಾಚಿತ್ರಗಳನ್ನು ತಿದ್ದುವುದಕ್ಕೆ ಫೋಟೋಶಾಪ್ ಮಾಡಿದೆ ಎಂದು ಹೇಳುವ ವಾಡಿಕೆಯೇ ಆಗಿಬಿಟ್ಟಿದೆ.

e - ಸಲಹೆ

ಚಿತ್ರದುರ್ಗದ ತಿಪ್ಪೇಸ್ವಾಮಿಯವರ ಪ್ರಶ್ನೆ: ನನಗೆ ಛಾಯಾಚಿತ್ರಗಳನ್ನು ಚಲನಚಿತ್ರವಾಗಿಸಿಕೊಡುವ ತಂತ್ರಾಂಶ ಬೇಕು (ಫೋಟೋ ಸ್ಲೈಡ್‌ಶೋ ಮೇಕರ್). ನಾನು ಕೆಲವನ್ನು ಡೌನ್‌ಲೋಡ್ ಮಾಡಿ ನೋಡಿದೆ. ಅವು ಫ್ಲಾಶ್ ಫೈಲ್ ಮಾಡಿಕೊಡುತ್ತವೆ. ನನಗೆ ಡಿ.ವಿ.ಡಿ. ಪ್ಲೇಯರ್‌ನಲ್ಲಿ ಬಳಸಬಲ್ಲ ಡಿ.ವಿ.ಡಿ.ಯನ್ನಾಗಿಸಿಕೊಡುವ ಉಚಿತ ತಂತ್ರಾಂಶ ಬೇಕು. ಅಂತಹ ತಂತ್ರಾಂಶ ಸಿಗುತ್ತದೆಯೇ?
ಉ: ನೀವು DVD slideshow GUI ಬಳಸಬಹುದು. ಇದು http://bit.ly/bE3pJO ಜಾಲತಾಣದಲ್ಲಿ ಸಿಗುತ್ತದೆ. ಇದು ನಿಮ್ಮ ಫೊಟೋಗಳನ್ನು ಡಿ.ವಿ.ಡಿ. ಸಿನಿಮಾದ ISO ಆಗಿ ಮಾಡಿಕೊಡುತ್ತದೆ. ನಂತರ ಇದನ್ನು ಡಿ.ವಿ.ಡಿ.ಗೆ ನೀವು ಬರೆದರೆ ನಿಮಗೆ ಡಿ.ವಿ.ಡಿ. ಪ್ಲೇಯರ್‌ನಲ್ಲಿ ಚಲಾಯಿಸಬಲ್ಲ ಚಲನಚಿತ್ರ ಸಿಗುತ್ತದೆ.

ಕಂಪ್ಯೂತರ್ಲೆ

ಒಮ್ಮೆ ಕೈಲಾಸದಲ್ಲಿ ಸುಬ್ರಹ್ಮಣ್ಯನಿಗೂ ಗಣಪನಿಗೂ ಪಂದ್ಯ ಏರ್ಪಟ್ಟಿತ್ತು -ಯಾರು ಮೊದಲು ಇಡೀ ಪ್ರಪಂಚಕ್ಕೆ ಮೂರು ಸಲ ಸುತ್ತು ಬರುತ್ತಾರೆ ಎಂದು. ಶಿವ ತೀರ್ಪುಗಾರ. ಆತ ಒಂದು ನಿಯಮ ರೂಪಿಸಿದ. ಅದರಂತೆ ಸುಬ್ರಹ್ಮಣ್ಯ ಮತ್ತು ಗಣಪ ಇಬ್ಬರೂ ಪ್ರಪಂಚ ಸುತ್ತಿದ್ದಕ್ಕೆ ದಾಖಲೆಗೆ ಎಲ್ಲ ಪ್ರಮುಖ ಸ್ಥಳಗಳಲ್ಲಿ ತಾನು ಇರುವ ಫೋಟೋ ನೀಡಬೇಕಿತ್ತು. ಸುಬ್ರಹ್ಮಣ್ಯ ನವಿಲು ಹತ್ತಿ ನಿಧಾನವಾಗಿ ಪ್ರಪಂಚ ಸುತ್ತಿ ಎಲ್ಲ ಜಾಗಗಳ ಫೋಟೋ ಸಮೇತ ಹಿಂತಿರುಗಿ ಬಂದ. ಆದರೆ ಗಣಪ ಆಗಲೇ ಪಂದ್ಯ ಗೆದ್ದಿದ್ದಾನೆ ಎಂದು ಘೋಷಿಸಲಾಗಿತ್ತು. ಆತ ಮಾಡಿದ್ದೇನೆಂದರೆ ಗೂಗ್ಲ್ ಮೂಲಕ ಎಲ್ಲ ಖ್ಯಾತ ಸ್ಥಳಗಳ ಚಿತ್ರ ಪಡೆದು ಅದನ್ನು ಫೊಟೋಶಾಪ್ ಮಾಡಿ ಎಲ್ಲ ಸ್ಥಳಗಳಲ್ಲಿ ತಾನಿರುವಂತೆ ಮೂಡಿಸಿ ಶಿವನಿಗೆ ಒಪ್ಪಿಸಿದ್ದ!