ಮಂಗಳವಾರ, ನವೆಂಬರ್ 30, 2010

ಗಣಕಿಂಡಿ - ೦೮೦ (ನವಂಬರ್ ೨೯, ೨೦೧೦)

ಅಂತರಜಾಲಾಡಿ

ಲಿನಕ್ಸಾಯಣ


ಗಣಕ ನಡೆಸಲು ಕಾರ್ಯಾಚರಣೆಯ ವ್ಯವಸ್ಥೆ ಬೇಕು. ಹೆಚ್ಚಿನ ಮಂದಿ ಬಳಸುತ್ತಿರುವುದು ಮೈಕ್ರೋಸಾಫ್ಟ್ ವಿಂಡೋಸ್. ಆದರೆ ಅದು ತುಂಬ ದುಬಾರಿ. ಹಣ ಕೊಡದೆ, ಕಾನೂನು ಬಾಹಿರವಾಗಿ ವಿಂಡೋಸ್ ಬಳಸುತ್ತಿರುವವರು ನಮ್ಮಲ್ಲಿ ಅನೇಕ ಮಂದಿ ಇದ್ದಾರೆ. ಅಂತಹವರು ವಿಂಡೋಸ್ ಬದಲಿಗೆ ಸಂಪೂರ್ಣ ಉಚಿತ ಹಾಗೂ ಮುಕ್ತ ಕಾರ್ಯಾಚರಣೆಯ ವ್ಯವಸ್ಥೆ ಲಿನಕ್ಸ್ ಬಳಸಬಹುದು. ಲಿನಕ್ಸ್ ಅನ್ನು ಎಲ್ಲಿಂದ ಪಡೆದುಕೊಳ್ಳಬಹುದು? ಈ ಲಿನಕ್ಸ್ ಬಳಸುವುದು ಹೇಗೆ? ಅದರಲ್ಲಿ ಕನ್ನಡ ಮೂಡಿಸುವುದು ಮತ್ತು ಬೆರಳಚ್ಚು ಮಾಡುವುದು ಹೇಗೆ? - ಇತ್ಯಾದಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಕನ್ನಡ ಭಾಷೆಯಲ್ಲಿ ಬೇಕಿದ್ದಲ್ಲಿ ನೀವು ಲಿನಕ್ಸಾಯಣ ಜಾಲತಾಣಕ್ಕೆ ಭೇಟಿ ನೀಡಬಹುದು. ಇದರ ವಿಳಾಸ - linuxaayana.net.

ಡೌನ್‌ಲೋಡ್

ಡಾಸ್ ಆಟ ಆಡಿ

ಸುಮಾರು ಹದಿನೈದು ವರ್ಷಗಳ ಹಿಂದೆ ಡಾಸ್ ಕಾರ್ಯಾಚರಣೆಯ ವ್ಯವಸ್ಥೆಯಲ್ಲಿ ಆಟಗಳನ್ನು ಆಡಿದವರಲ್ಲಿ ನೀವೂ ಒಬ್ಬರೇ? ಆ ಆಟಗಳನ್ನು ಈಗಲೂ ಆಡಬೇಕು ಅನ್ನಿಸುತ್ತಿದೆಯೇ? ಹೌದಾದಲ್ಲಿ ನಿಮಗೆ ಡಾಸ್ ಆಟಗಳು ಸಿಗುವ ಜಾಲತಾಣವನ್ನು ತಿಳಿಸಬೇಕು. ಅದುವೇ dosgamesarchive.com. ಇಲ್ಲಿ ನೀವು ಹಳೆಯ ಜನಪ್ರಿಯ ಆಟಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಆಟಗಳಲ್ಲಿ ಪ್ಯಾಕ್‌ಮಾನ್, ಡಿಗ್ಗರ್, ಬ್ಲಾಕ್ಸ್, ಇತ್ಯಾದಿ ಸೇರಿವೆ. ಆಟಗಳನ್ನು ಹಲವು ವಿಭಾಗಗಳಲ್ಲಿ ವಿಭಜಿಸಿ ಅವುಗಳ ಸೂಚಿಯನ್ನು ನೀಡಲಾಗಿದೆ. ನೆನಪಿಡಿ -ಇವು ಯಾವುವೂ ಹೊಚ್ಚ ಹೊಸ ವಿಂಡೋಸ್‌ನಲ್ಲಿ ಕೆಲಸ ಮಾಡುವುದಿಲ್ಲ. ವಿಂಡೋಸ್‌ನಲ್ಲಿ ಇವುಗಳನ್ನು ಆಡಬೇಕಿದ್ದಲ್ಲಿ ಹಿಂದೊಮ್ಮೆ ಇದೇ ಅಂಕಣದಲ್ಲಿ ಸೂಚಿಸಿದ್ದ ಡಾಸ್‌ಬಾಕ್ಸ್‌ನ್ನು (dosbox.com) ಬಳಸಬೇಕು.  

e - ಸುದ್ದಿ

ವ್ಯಕ್ತಿಯಿಂದ ವ್ಯಕ್ತಿಗೆ ಗಣಕ ಕಡತಗಳ ವರ್ಗಾವಣೆಗೆ ಇರುವ ಒಂದು ವಿಧಾನ ಟೊರೆಂಟ್. ಇದರ ಬಳಕೆ ಅತಿ ಹೆಚ್ಚು ಆಗುತ್ತಿರುವುದು ಚಲನಚಿತ್ರಗಳ ಚೌರ್ಯಕ್ಕೆ. ಈ ರೀತಿ ಟೊರೆಂಟ್ ಜಾಲಕ್ಕೆ ಕೃತಿಚೌರ್ಯ ಮಾಡಿದ ಚಲನಚಿತ್ರ, ತಂತ್ರಾಂಶ, ಹಾಡು, ವೀಡಿಯೋ, ಇತ್ಯಾದಿಗಳನ್ನು ಸೇರಿಸುವುದು ಕಾನೂನು ಪ್ರಕಾರ ಅಪರಾಧ. ಈ ರೀತಿಯ ಅಪರಾಧ ಎಸಗಿದ್ದಾರೆ ಎಂಬ ಆರೋಪ ಹೊರಿಸಿ ಹೈದರಾಬಾದ್ ಪೋಲೀಸರು ನಾಲ್ಕು ಮಂದಿ ಯುವಕರನ್ನು ದಸ್ತಗಿರಿ ಮಾಡಿದ್ದಾರೆ. ಟೊರೆಂಟ್‌ಗಳಿಗೆ ಸೂಚಿ ನೀಡುವ ಜಾಲತಾಣ ನಡೆಸಿದ್ದು ಮಾತ್ರವಾಗಿದ್ದರೆ ಅವರನ್ನು ದಸ್ತಗಿರಿ ಮಾಡಲು ಕಷ್ಟವಾಗುತ್ತಿತ್ತು. ಆದರೆ ಚಲನಚಿತ್ರಗಳನ್ನು ಪ್ರತಿ ಮಾಡಿ ಈ ಜಾಲತಾಣಕ್ಕೆ ಸೇರಿಸಿದ್ದು ಅವರ ಅಪರಾಧ.

e- ಪದ

ಟೆದರಿಂಗ್ (Tethering) - ಮೊಬೈಲ್ ಫೋನನ್ನು ಗಣಕ ಯಾ ಲ್ಯಾಪ್‌ಟಾಪ್‌ನ್ನು ಅಂತರಜಾಲಕ್ಕೆ ಸಂಪರ್ಕಿಸಲು ಬಳಸುವ ಒಂದು ವಿಧಾನ. ಇದನ್ನು ಸಾಮಾನ್ಯವಾಗಿ 3G ಸವಲತ್ತು ಇರುವ ಮೊಬೈಲ್ ಫೋನಿನಲ್ಲಿ ಮಾತ್ರ ಬಳಸುತ್ತಾರೆ. ಹೀಗೆ ಪಡೆದ ಅಂತರಜಾಲ ಸಂಪರ್ಕವನ್ನು ಇತರೆ ಗಣಕಗಳ ಜೊತೆ ಹಂಚಿಕೊಳ್ಳಬಹುದು.

e - ಸಲಹೆ

ತಿಪ್ಪೇಸ್ವಾಮಿಯವರ ಪ್ರಶ್ನೆ: ನಾನು ನನ್ನ ಗಣಕದಿಂದ ತುಂಗ, ಶ್ರುತಿ ಮತ್ತು ವೃಂದ ಹೆಸರಿನ ಫಾಂಟ್‌ಗಳನ್ನು ಅಳಿಸಿಹಾಕಿದ್ದೆ. ಗಣಕದಲ್ಲಿ ಕನ್ನಡದ Language Interface Pack ಕೂಡ ಇದೆ. ಈಗ ಕನ್ನಡದಲ್ಲಿ ಮೆನು ಮೂಡಿಬರಬೇಕಾದ ಜಾಗದಲ್ಲಿ ಖಾಲಿ ಚೌಕಗಳು ಕಾಣಿಸುತ್ತಿವೆ. ಇದಕ್ಕೆ ಏನು ಪರಿಹಾರ? 
ಉ: ನೀವು ಯಾವ ಕಾರ್ಯಾಚರಣೆಯ ವ್ಯವಸ್ಥೆ ಬಳಸುತ್ತಿದ್ದೀರಿ ಎಂದು ತಿಳಿಸಿಲ್ಲ. ವಿಂಡೋಸ್ ಎಕ್ಸ್‌ಪಿ ಎಂದು ಭಾವಿಸುತ್ತೇನೆ. ಕಂಟ್ರೋಲ್ ಪ್ಯಾನೆಲ್‌ಗೆ ಹೋಗಿ ಭಾರತೀಯ ಭಾಷೆಯನ್ನು ಮತ್ತೊಮ್ಮೆ ಚಾಲನೆ ಮಾಡಿದಲ್ಲಿ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ. ಅಥವಾ ನಿಮ್ಮ ಸ್ನೇಹಿತರ ಗಣಕದಿಂದ ತುಂಗ ಫಾಂಟ್‌ನ್ನು ಪ್ರತಿ ಮಾಡಿಕೊಂಡು ನಿಮ್ಮ ಗಣಕಕ್ಕೆ ಸೇರಿಸಿದರೂ ಆಗಬಹುದು. 

ಕಂಪ್ಯೂತರ್ಲೆ

ಗಣಕವ್ಯಸನಿ ಒಬ್ಬ ಹಡಗು ಮುಳುಗಿದಾಗ ಬದುಕುಳಿದು ಜನವಸತಿಯಿಲ್ಲದ ದ್ವೀಪದಲ್ಲಿ ಸೇರಿಕೊಂಡ. ಅವನ ಲ್ಯಾಪ್‌ಟಾಪ್ ಆನ್ ಮಾಡಿದಾಗ ಅದು ಕೆಲಸ ಮಾಡಿತು. ಡಾಟಾ ಕಾರ್ಡ್ ಮೂಲಕ ಅಂತರಜಾಲ ಸಂಪರ್ಕವೂ ಸಿಕ್ಕಿತು. ಕೂಡಲೇ ಆತ ಗಣಕ ಸೇವಾ ಕೇಂದ್ರಕ್ಕೆ ಇಮೈಲ್ ಮಾಡಿದ - “ನಿಮ್ಮಲ್ಲಿ ಲ್ಯಾಪ್‌ಟಾಪ್‌ನ ಹಾರ್ಡ್‌ಡಿಸ್ಕಿನಿಂದ ಮರಳು ತೆಗೆಯುವ ತಂತ್ರಾಂಶ ಇದೆಯೇ?”

ಸೋಮವಾರ, ನವೆಂಬರ್ 22, 2010

ಗಣಕಿಂಡಿ - ೦೭೯ (ನವಂಬರ್ ೨೨, ೨೦೧೦)

ಅಂತರಜಾಲಾಡಿ

ಕಿಂದರಜೋಗಿ


ಮಕ್ಕಳಿಗಾಗಿ ಕಥೆ, ಕವನ, ನಾಟಕ, ಇತ್ಯಾದಿಗಳು ನಮ್ಮಲ್ಲಿ ಅಂದರೆ ಕನ್ನಡ ಭಾಷೆಯಲ್ಲಿ ಇರುವುದೇ ಬಹುಕಡಿಮೆ. ಹಾಗಿರುವಾಗ ಅಂತರಜಾಲದಲ್ಲಿ ಅವುಗಳನ್ನು ಭೂತಕನ್ನಡಿ ಹಾಕಿಯೇ ಹುಡುಕಬೇಕು. ಈಗೊಂದು ಸಿಹಿಸುದ್ದಿ ಬಂದಿದೆ. ಕನ್ನಡ ಭಾಷೆಯಲ್ಲಿ ಮಕ್ಕಳಿಗಾಗಿ ಒಂದು ಅಂತರಜಾಲ ನಿರ್ಮಾಣವಾಗಿದೆ. ಅದರಲ್ಲಿ ಕಥೆ, ಕವನ, ನಾಟಕ, ವಿಜ್ಞಾನ ಪ್ರಯೋಗಗಳು, ಕಾರ್ಟೂನ್ ಎಲ್ಲ ಇವೆ. ಇದು ಒಂದು ರೀತಿಯಲ್ಲಿ ಜನರಿಂದ ಜನರಿಗಾಗಿ ಇರುವ ಜಾಲತಾಣ. ಅಂದರೆ ನಾವು ನೀವು ಎಲ್ಲರೂ ಈ ಜಾಲತಾಣಕ್ಕೆ ಲೇಖನಗಳನ್ನು ನೀಡಬಹುದು. ಇದರ ವಿಳಾಸ - kindarajogi.com.

ಡೌನ್‌ಲೋಡ್

ವಿ-ಪುಸ್ತಕ ಪರಿವರ್ತಕ

ವಿದ್ಯುನ್ಮಾನ ಪುಸ್ತಕಗಳು ಈಗ ಜನಪ್ರಿಯವಾಗುತ್ತಿವೆ. ವಿ-ಪುಸ್ತಕಗಳನ್ನು ಓದಲೆಂದೇ ಗ್ಯಾಜೆಟ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಉದಾ:- ಐಪ್ಯಾಡ್, ಕಿಂಡಲ್, ನೂಕ್, ಇತ್ಯಾದಿ. ಗಣಕ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲೂ ಈ ಪುಸ್ತಕಗಳನ್ನು ಓದಬಹುದು. ಆದರೆ ಪ್ರತಿಯೊಬ್ಬರೂ ತಮ್ಮದೇ ವಿಧಾನದ ವಿ-ಪುಸ್ತಕವನ್ನು ಬಳಸುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಹಲವಾರು ನಮೂನೆಯ ವಿ-ಪುಸ್ತಕಗಳು ತುಂಬಿವೆ. ನಿಮ್ಮ ಫೋನಿಗೆ ಬೇಕಾದ ವಿಧಾನದ ಪುಸ್ತಕ ನಿಮ್ಮಲ್ಲಿ ಇಲ್ಲ, ಆದರೆ ನಿಮ್ಮಲ್ಲಿ ಇನ್ನೊಂದು ವಿಧಾನದ ವಿ-ಪುಸ್ತಕ ಇದೆ ಎಂದಾದಲ್ಲಿ ಈ ಪುಸ್ತಕಗಳನ್ನು ಒಂದು ವಿಧಾನದಿಂದ ಇನ್ನೊಂದು ವಿಧಾನಕ್ಕೆ ಪರಿವರ್ತಿಸಲು ಒಂದು ಮುಕ್ತ ತಂತ್ರಾಂಶ ಲಭ್ಯವಿದೆ. ಅದುವೇ  calibre. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ calibre-ebook.com/download. ಈ ಜಾಲತಾಣದಲ್ಲಿ ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್ ಕಾರ್ಯಾಚರಣೆಯ ವ್ಯವಸ್ಥೆಗಳಿಗೆ ತಂತ್ರಾಂಶ ಲಭ್ಯವಿದೆ.

e - ಸುದ್ದಿ

ಶ್ವಾನಟ್ವೀಟ್

“ನನ್ನ ಬೇರುಗಳಿಗೆ ನೀರು ಕಡಿಮೆಯಾಗುತ್ತಿದೆ” ಎಂದು ಟ್ವೀಟ್ ಮಾಡುವ ಗಿಡದ ಬಗ್ಗೆ ಈ ಅಂಕಣದಲ್ಲಿ ಹಿಂದೊಮ್ಮೆ ವರದಿ ಮಾಡಲಾಗಿತ್ತು. ಈಗ ಶ್ವಾನಪುರಾಣದ ಟ್ವಿಟ್ಟರ್ ಅಧ್ಯಾಯ ಪ್ರಾರಂಭವಾಗಿದೆ. ಪಪ್ಪಿಟ್ವೀಟ್ ಎಂಬ ಗ್ಯಾಜೆಟ್ ಅಮೆರಿಕದಲ್ಲಿ ಮಾರುಕಟ್ಟೆಗೆ ಬಂದಿದೆ. ಅದನ್ನು ನಾಯಿಯ ಕುತ್ತಿಗೆಯ ಪಟ್ಟಿಗೆ ಜೋಡಿಸಲಾಗುತ್ತದೆ. ಓಡಾಟ, ಬೊಗಳಾಟ, ನಿದ್ದೆ ಇತ್ಯಾದಿ ನಾಯಿಗಳು ಸಹಜವಾಗಿ ಮಾಡುವ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಅದಕ್ಕೆ ಇದೆ. ಅಷ್ಟು ಮಾತ್ರವಲ್ಲ. ಅದನ್ನು ನಿಸ್ತಂತು ವಿಧಾನದಲ್ಲಿ ಮನೆಯ ಗಣಕಕ್ಕೆ ಜೋಡಿಸಬಹುದು. ಇದರ ಜೊತೆ ದೊರೆಯುವ ತಂತ್ರಾಂಶದಲ್ಲಿ ಆಯಾಯ ಕ್ರಿಯೆಗೆ ಅನ್ವಯವಾಗುವಂತೆ ಟ್ವೀಟ್ ಮಾಡುವ ಸವಲತ್ತು ಇದೆ. ಇನ್ನು ಮುಂದೆ ಶ್ವಾನದೊಡೆಯ ಆಫೀಸಿನಲ್ಲಿದ್ದಾಗ ಮನೆಯ ನಾಯಿಯಿಂದ “ನಾನು ನಿದ್ದೆ ಮಾಡುತ್ತಿದ್ದೇನೆ”, “ನಾನು ಬೊಗಳಿದಾಗ ಊರೇ ಬೊಗಳುತ್ತದೆ” -ಇತ್ಯಾದಿ ಟ್ವೀಟ್ ಬರಬಹುದು.

e- ಪದ

ಸ್ಪರ್ಶಪರದೆ (ಟಚ್‌ಸ್ಕ್ರೀನ್ -touchscreen) -ಮುಟ್ಟಿದರೆ ಕೆಲಸ ಮಾಡುವ ಪರದೆಗಳು. ಇಂತಹವುಗಳ ಬಳಕೆ ಈಗೀಗ ಮೊಬೈಲ್ ಫೋನ್‌ಗಳಲ್ಲಿ ಸಹಜವಾಗುತ್ತಿದೆ. ಈ ಸ್ಪರ್ಶಪರದೆಗಳಲ್ಲಿ ಎರಡು ನಮೂನೆ. ಕಡ್ಡಿಯಿಂದ ಅಥವಾ ಉಗುರಿನಿಂದ ಒತ್ತಿದರೆ ಕೆಲಸ ಮಾಡುವಂತಹವು ಮತ್ತು ಬೆರಳಿನಿಂದ ಒತ್ತಿದರೆ ಮಾತ್ರ ಕೆಲಸ ಮಾಡುವಂತಹವು. ಈ ಸ್ಪರ್ಶಪರದೆಗಳನ್ನು ಎಟಿಎಂ ಮತ್ತು ಕಿಯೋಸ್ಕ್‌ಗಳಲ್ಲೂ ಬಳಸುತ್ತಾರೆ.

e - ಸಲಹೆ

ಪರಶುರಾಮ ಕಟ್ಟಿಮನಿಯವರ ಪ್ರಶ್ನೆ: Shared drive ನ ಕೆಳಗಿನ ಹಸ್ತದ ಚಿತ್ರವನ್ನು ಹೇಗೆ ತೆಗೆಯಬೇಕು?
ಉ: ಈ ಚಿತ್ರ ಅರ್ಥಾತ್ ಐಕಾನ್ ನಿಮ್ಮ ಡ್ರೈವ್ ಅಥವಾ ಫೋಲ್ಡರ್ ಗಣಕಜಾಲದಲ್ಲಿ ಇರುವ ಇತರರೊಂದಿಗೆ ಹಂಚಿಕೆಯಾಗಿದೆ ಎಂಬುದನ್ನು ಸೂಚಿಸುತ್ತದೆ. ಈ ಚಿತ್ರ ಇರುವ ತನಕ ನಿಮ್ಮ ಡ್ರೈವ್ ಅಥವಾ ಫೋಲ್ಡರ್ ಅನ್ನು ಅದೇ ಗಣಕಜಾಲದಲ್ಲಿ ಇರುವ ಇತರೆ ಮಂದಿ ಬಳಸಬಹುದು. ಹಂಚಿಕೆಯನ್ನು (sharing) ನಿಲ್ಲಿಸಿದೊಡನೆ ಈ ಚಿತ್ರವೂ ಮಾಯವಾಗುತ್ತದೆ. 

ಕಂಪ್ಯೂತರ್ಲೆ

ಟ್ವಿಟ್ಟರ್ ಗಾದೆ

ಆಡಿದ ಮಾತು ಮಾಡಿದ ಟ್ವೀಟ್ ಹಿಂದಕ್ಕೆ ಬರುವುದಿಲ್ಲ.

ಸೋಮವಾರ, ನವೆಂಬರ್ 15, 2010

ಗಣಕಿಂಡಿ - ೦೭೮ (ನವಂಬರ್ ೧೫, ೨೦೧೦)

ಅಂತರಜಾಲಾಡಿ

ಜ್ಞಾನಕೋಶ

ಅಂತರಜಾಲದಲ್ಲಿ ಕನ್ನಡ ಭಾಷೆಯಲ್ಲಿ ಜ್ಞಾನಕೋಶಗಳು ಇರುವುದೇ ಬೆರಳೆಣಿಕೆಯಷ್ಟು. ಅಂತಹ ಒಂದು ಜ್ಞಾನಕೋಶ  www.jnanakosha.org. ಹೆಸರೇ ಸೂಚಿಸುವಂತೆ ಈ ಜಾಲತಾಣದಲ್ಲಿ ಎಲ್ಲ ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸಲು ಪ್ರಯತ್ನ ಪಡಲಾಗಿದೆ. ಇದರ ಹಿಂದೆ ಕೆಲಸ ಮಾಡುವವರ ಪಟ್ಟಿ ನೋಡಿದರೆ ಅಲ್ಲೂ ಬೆರಳೆಣಿಕೆಯಷ್ಟೇ ಮಂದಿ ಇದ್ದಾರೆ. ಗಣಕ, ವಿಜ್ಞಾನ, ತಂತ್ರಜ್ಞಾನ, ಮ್ಯಾನೇಜ್‌ಮೆಂಟ್, ಕಾನೂನು, ಕೃಷಿ, ಆಯುರ್ವೇದ - ಹೀಗೆ ಎಲ್ಲ ವಿಷಯಗಳ ಸೂಚಿ ಇದೆ. ಆಯಾ ವಿಷಯಗಳ ಬಗ್ಗೆ ಕೆಲವು ಲೇಖನಗಳೂ ಇವೆ. ಚರ್ಚಾವೇದಿಕೆ ಹಾಗೂ ಬ್ಲಾಗ್‌ಗಳೂ ಇಲ್ಲಿವೆ. ಮಾಧ್ಯಮದವರ ಮುಂದೆ ತುಂಬ ಗದ್ದಲಮಾಡಿ ಬಿಡುಗಡೆ ಮಾಡಿದ ಸರಕಾರದ “ಕಣಜ” (kanaja.in) ಜಾಲತಾಣ ಇನ್ನೂ ಅಲ್ಲೇ ನಿದ್ದೆ ಮಾಡುತ್ತಿದೆ. ಕನ್ನಡದ ಮುಕ್ತ ವಿಶ್ವಕೋಶದ ವಿಳಾಸ kn.wikipedia.org.

ಡೌನ್‌ಲೋಡ್

ಮೊಬೈಲ್‌ಗೆ ತಂತ್ರಾಂಶ

ಈಗೀಗ ಮಾರುಕಟ್ಟೆಯಲ್ಲಿ ದೊರಕುತ್ತಿರುವ ಫೋನುಗಳು ಬಹುತೇಕ ಕಿಸೆಗಣಕಗಳೇ ಆಗಿವೆ. ಅವುಗಳಲ್ಲಿ ಏನೇನೆಲ್ಲಾ ಮಾಡಬಹುದು. ಆಟಗಳನ್ನೂ ಆಡಬಹುದು. ಅಂತೆಯೇ ಅವುಗಳಿಗೆ ಸಹಸ್ರಾರು ತಂತ್ರಾಂಶಗಳೂ ಲಭ್ಯವಿವೆ. ಗಣಕಗಳಿಗೆ ಹೇಗೆಯೋ ಅಂತೆಯೇ ಆಧುನಿಕ ಮೊಬೈಲ್ ಫೋನ್‌ಗಳಿಗೂ ಕಾರ್ಯಾಚರಣೆಯ ವ್ಯವಸ್ಥೆಗಳಿವೆ. ಅವುಗಳಲ್ಲೂ ಹಲವಾರು ನಮೂನೆಗಳಿವೆ. ಎಲ್ಲ ನಮೂನೆಯ ಫೋನುಗಳಿಗೆ ಹಾಗೂ ಕಾರ್ಯಾಚರಣೆಯ ವ್ಯವಸ್ಥೆಗಳಿಗೆ ತಂತ್ರಾಂಶಗಳು ಎಲ್ಲಿ ದೊರೆಯುತ್ತವೆ ಎಂದು ಹಲವು ಮಂದಿ ಮತ್ತೆ ಮತ್ತೆ ಇಮೈಲ್ ಮೂಲಕ ವಿಚಾರಿಸುತ್ತಿದ್ದಾರೆ. ಅಂತಹ ಒಂದು ಜಾಲತಾಣ bestmobileapp.org. ನಿಜವಾಗಿ ಈ ಜಾಲತಾಣದಲ್ಲಿ ತಂತ್ರಾಂಶ ದೊರೆಯುವುದಿಲ್ಲ. ತಂತ್ರಾಂಶ ಎಲ್ಲಿ ದೊರೆಯುತ್ತದೆ ಎಂಬ ಕೊಂಡಿ ಮಾತ್ರ ಇಲ್ಲಿದೆ. ಹಾಗೆ ದೊರೆಯುವ ಎಲ್ಲ ತಂತ್ರಾಂಶಗಳೂ ಕಾನೂನುಬದ್ಧವಾಗಿರಬೇಕಾಗಿಲ್ಲ. ನಿಮ್ಮ ಎಚ್ಚರಿಕೆಯಲ್ಲಿ ನೀವು ಇರುವುದು ಒಳ್ಳೆಯದು.

e - ಸುದ್ದಿ

ಇಲ್ಲದ ರೋಗಕ್ಕೆ ಮದ್ದು

ನಕಲಿ ವೈದ್ಯರಲ್ಲಿಗೆ ಹೋದರೆ ಸುಳ್ಳು ಸುಳ್ಳೇ ಯಾವುದೋ ದೊಡ್ಡ ಖಾಯಿಲೆ ನಿಮಗೆ ಬಂದಿದೆ ಎಂದು ನಂಬಿಸಿ ನೀರನ್ನೇ ಇಂಜೆಕ್ಷನ್ ಚುಚ್ಚಿ ಹಣ ಕೀಳುವವರ ಕಥೆ ನೀವು ಕೇಳಿರಬಹುದು. ಅಮೇರಿಕದ ಕೋಟ್ಯಾಧೀಶ ಸಂಗೀತ ಸಂಯೋಜಕರೊಬ್ಬರನ್ನು ಗಣಕ ತಂತ್ರಜ್ಷನೊಬ್ಬ ಹೀಗೇ ಮೋಸ ಮಾಡಿದ ಕಥೆ ವರದಿಯಾಗಿದೆ. ಡೇವಿಡ್ಸನ್ ಹೆಸರಿನ ಆ ಸಂಯೋಜಕರು ತಮ್ಮ ಗಣಕವನ್ನು ವಿಕ್ರಮ್ ಬೇಡಿ ಎಂಬಾತ ನಡೆಸುತ್ತಿದ್ದ ಗಣಕ ದುರಸ್ತಿ ಅಂಗಡಿಗೆ ತೆಗೆದುಕೊಂಡು ಹೋದರು. ತಮ್ಮ ಗಣಕದಲ್ಲಿರುವ ತಾನು ತಯಾರಿಸಿದ ಸಂಗೀತ ಸಂಯೋಜನೆಗಳನ್ನು ವೈರಸ್ ಹಾಳುಮಾಡಬಹುದೇನೋ ಎಂಬ ಭಯ ಅವರನ್ನು ಕಾಡುತ್ತಿತ್ತು. ಡೇವಿಡ್ಸನ್ ಅವರ ಅಮಾಯಕತೆಯನ್ನು ಅರಿತ ವಿಕ್ರಮ್ ಬೇಡಿ ಅವರನ್ನು ಬೆದರಿಸಿ, ನಿಮ್ಮ ಗಣಕದಲ್ಲಿ ವೈರಸ್ ಇದೆ, ಅದು ಯಾವುದೋ ದುಷ್ಟ ಕೂಟಕ್ಕೆ ನಿಮ್ಮನ್ನು ಸಂಪರ್ಕಿಸಿದೆ, ನಿಮ್ಮ ಗಣಕದ ವೈರಸ್‌ನಿಂದಾಗಿ ನನ್ನ ಅಂಗಡಿಯಲ್ಲಿರುವ ಎಲ್ಲ ಗಣಕಗಳು ಹಾಳಾಗಿವೆ, ಇನ್ನೂ ಏನೇನೋ ಸುಳ್ಳು ಹೇಳಿ ಬೆದರಿಸಿ ಅವರಿಂದ ಹಣ ಕಿತ್ತ. ಅದೂ ಕಡಿಮೆಯೇನಲ್ಲ, ಸುಮಾರು ೨೦ ಮಿಲಿಯ ಡಾಲರುಗಳು. ಈಗ ವಿಕ್ರಮ್ ಬೇಡಿ ಸೆರೆಯಲ್ಲಿದ್ದಾನೆ.

e- ಪದ

ಕರ್ನಿಂಗ್ (kerning) - ಪುಟವಿನ್ಯಾಸದಲ್ಲಿ(ಡಿಟಿಪಿ) ಬಳಕೆಯಾಗುವ ಪದ. ಮುಖ್ಯವಾಗಿ ಇಂಗ್ಲಿಶ್ ಭಾಷೆಯ ಪುಟವಿನ್ಯಾಸದಲ್ಲಿ ಮಾತ್ರ ಇದರ ಬಳಕೆಯಾಗುತ್ತದೆ. ಇಂಗ್ಲಿಶ್ ಭಾಷೆಯಲ್ಲಿ ಕೆಲವು ಅಕ್ಷರಗಳು ಉದಾ- V ಮತ್ತು A ಪಕ್ಕ ಪಕ್ಕ ಬಂದಾಗ, A ಅಕ್ಷರದ ಎಡಭಾಗ V ಅಕ್ಷರದ ಬಲಭಾಗದಲ್ಲಿ ಸ್ವಲ್ಪ ಒಳಕ್ಕೆ ಹೋಗಬಲ್ಲುದು. ಹೀಗೆ ಹೋಗುವಂತೆ ಮಾಡುವುದಕ್ಕೆ ಕರ್ನಿಂಗ್ ಎನ್ನುತ್ತಾರೆ. 

e - ಸಲಹೆ

ಷಣ್ಮುಖ ಅವರ ಪ್ರಶ್ನೆ: ನಾನು ಇತ್ತೀಚೆಗೆ ಒಂದು ಆಪಲ್ ಐಫೋನ್ ಕೊಂಡುಕೊಂಡಿದ್ದೇನೆ. ಅದಕ್ಕೆ ನನಗೆ ಹಾಡುಗಳನ್ನು ಸೇರಿಸಲು ಉಚಿತ ತಂತ್ರಾಂಶ ಬೇಕಾಗಿದೆ. ಎಲ್ಲಿ ಸಿಗುತ್ತದೆ?
ಉ: ನೀವು ಆಪಲ್ ಕಂಪೆನಿಯದ್ದೇ ಐಟ್ಯೂನ್ ಬಳಸಬಹುದು. ಇದು ದೊರೆಯುವ ಜಾಲತಾಣ http://bit.ly/9FVoeI

ಕಂಪ್ಯೂತರ್ಲೆ

ಗಣಕವಚನ

ಫೇಸ್‌ಬುಕ್‌ನಲ್ಲಿ ಖಾತೆ ತೆರೆದು ಗೋಡೆಬರಹಗಳಿಗೆ ಅಂಜಿದೊಡೆಂತಯ್ಯಾ?
ಆರ್ಕುಟ್‌ನಲ್ಲಿದ್ದುಕೊಂಡು ಸ್ಕ್ರಾಪ್ ಬರಹಗಳಿಗೆ ಅಂಜಿದೊಡೆಂತಯ್ಯಾ?
ಕಂಪ್ಯೂಟರ್ ಕೊಂಡುಕೊಂಡು ವೈರಸ್‌ಗಳಿಗೆ ಅಂಜಿದೊಡೆಂತಯ್ಯಾ?

ಬುಧವಾರ, ನವೆಂಬರ್ 10, 2010

ಗಣಕಿಂಡಿ - ೦೭೭ (ನವಂಬರ್ ೦೮, ೨೦೧೦)

ಅಂತರಜಾಲಾಡಿ

ಸಿರಿನುಡಿ

ಕನ್ನಡ ಭಾಷೆಗೆ ಸರಿಸುಮಾರು ಎರಡು ಸಹಸ್ರ ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆ ತುಂಬ ಶ್ರೀಮಂತ ಭಾಷೆ. ಈ ಭಾಷೆಯಲ್ಲಿ ಅತ್ಯನ್ನತ ಮಟ್ಟದ ಸಹಸ್ರಾರು ಸಾಹಿತ್ಯ ರಚನೆಯಾಗಿದೆ. ಕನ್ನಡ ಸಾಹಿತ್ಯವನ್ನು ಅಂತರಜಾಲದಲ್ಲಿ ಸೇರಿಸುವ ಕೆಲಸ ಮಾತ್ರ ಅಲ್ಲಲ್ಲಿ ಅಷ್ಟಿಟ್ಟು ಪ್ರಾತಿನಿಧಿಕವಾಗಿ ಆಗಿದೆಯಷ್ಟೆ. ಅಂತಹ ಒಂದು ಜಾಲತಾಣ  www.sirinudi.org. ಇದರಲ್ಲಿ ಕನ್ನಡ ಭಾಷೆಯ ಹಲವಾರು ಸಾಹಿತ್ಯ ಕೃತಿಗಳನ್ನು ಓದಬಹುದು. ಕನ್ನಡ ಭಾಷೆ ನಿಜಕ್ಕೂ ಜನರಿಗೆ ಉಪಯುಕ್ತ ಭಾಷೆಯಾಗಬೇಕಾದರೆ ಕನ್ನಡ ಭಾಷೆಯಲ್ಲಿ ಆಧುನಿಕ ವಿಜ್ಞಾನ ತಂತ್ರಜ್ಞಾನದ ಎಲ್ಲ ವಿಷಯಗಳೂ ಪ್ರತಿಬಿಂಬಿತವಾಗಬೇಕು. ಈ ಉದ್ದೇಶದಿಂದ ಪ್ರಾರಂಭವಾದ ಕನ್ನಡ ಭಾಷೆಯ ಪ್ರಪ್ರಥಮ ವಿಜ್ಞಾನ ಪತ್ರಿಕೆಯ ಸಂಚಿಕೆಗಳನ್ನು ಈ ಜಾಲತಾಣದಲ್ಲಿ ಓದಬಹುದು. ಹಾಗೆಯೇ ಅಡಿಗರು ಪ್ರಾರಂಭಿಸಿದ ಸಾಕ್ಷಿ ಪತ್ರಿಕೆಯ ಸಂಚಿಕೆಗಳೂ ಇಲ್ಲಿವೆ.

ಡೌನ್‌ಲೋಡ್

ಗಣಕ ಸ್ವಚ್ಛ ಮಾಡಿ

ಗಣಕದಲ್ಲಿ ತಂತ್ರಾಂಶಗಳನ್ನು ಮತ್ತೆ ಮತ್ತೆ ಇನ್‌ಸ್ಟಾಲ್ ಮತ್ತು ಅನ್‌ಇನ್‌ಸ್ಟಾಲ್ ಮಾಡಿದರೆ ಕೆಲವೊಮ್ಮೆ ತಂತ್ರಾಂಶಗಳು ಪೂರ್ತಿಯಾಗಿ ತೆಗೆಯಲ್ಪಡುವುದಿಲ್ಲ. ಹಾಗೆ ಆಗುತ್ತ ಗಣಕ ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಗಣಕದಲ್ಲೇ ಇರುವ ಅನ್‌ಇನ್‌ಸ್ಟಾಲ್ ಸವಲತ್ತು ಇಂತಹ ಸಂದರ್ಭದಲ್ಲಿ ಸಹಾಯಕ್ಕೆ ಬರುವುದಿಲ್ಲ. ಎಷ್ಟು ಪ್ರಯತ್ನ ಮಾಡಿದರೂ ತನ್ನ ಪಳೆಯುಳಿಕೆಯನ್ನು ಬಿಟ್ಟುಕೊಡದ ತಂತ್ರಾಂಶದ ಅವಶೇಷಗಳನ್ನು ತೆಗೆಯುವುದು ಅಷ್ಟು ಸುಲಭವಲ್ಲ. ತಂತ್ರಾಂಶಗಳನ್ನು ಯಾವುದೇ ಅವಶೇಷವಿಲ್ಲದೆ ಸ್ವಚ್ಛವಾಗಿ ತೆಗೆದುಹಾಕುವ ತಂತ್ರಾಂಶ Revo Uninstaller. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/bPK5Fb. ಇಲ್ಲಿ ನಿಮಗೆ ಉಚಿತ ಮತ್ತು ವಾಣಿಜ್ಯಕ ಎಂಬ ಎರಡು ಆವೃತ್ತಿಗಳು ಲಭ್ಯ. 

e - ಸುದ್ದಿ

ಆರ್ಕುಟ್ ಭಗ್ನಪ್ರೇಮಿ

ಭಗ್ನಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಹಳೆಯ ಕಥೆ. ಅದರ ಬಗ್ಗೆ ರೀಲುಗಟ್ಟಲೆ ಸಿನಿಮಾ ಮಾಡಿ ಆಗಿದೆ. ಇತ್ತೀಚೆಗೆ ನಮ್ಮದೇ ಭಾರತ ದೇಶದ ತ್ರಿಪುರಾ ರಾಜ್ಯದಿಂದ ವರದಿಯಾದ ಕಥೆ ಸ್ವಲ್ಪ ಆಧುನಿಕವಾಗಿದೆ. ಇದನ್ನು ಆರ್ಕುಟ್ ಭಗ್ನಪ್ರೇಮದ ಕಥೆ ಎನ್ನಬಹುದು. ವೈದ್ಯಕೀಯ ವಿದ್ಯಾರ್ಥಿ ರೂಪಕ್ ಆರ್ಕುಟ್‌ನಲ್ಲಿ ಒಂದು ಹುಡುಗಿಯನ್ನು ಪ್ರೀತಿಸಿದ್ದ. ಆಕೆ ಈತನನ್ನು ಕಡೆಗಣಿಸುತ್ತಿದ್ದಾಳೆ ಎಂದು ನೊಂದುಕೊಂಡ ಆತ ಆತ್ಮಹತ್ಯೆ ಮಾಡಿಕೊಂಡ. ಸ್ವಾರಸ್ಯವೆಂದರೆ ಆತ ಆಕೆಯನ್ನು ಒಮ್ಮೆಯೂ ಮುಖತಃ ಭೇಟಿ ಆಗಿರಲಿಲ್ಲ. ಕೊಲ್ಕತ್ತಾ ಮೂಲದ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದ ಆಕೆಯನ್ನು ಎರಡು ವರ್ಷಗಳ ಹಿಂದೆ ಆತ ಆರ್ಕುಟ್‌ನಲ್ಲಿ ಭೇಟಿಯಾಗಿದ್ದ.

e- ಪದ

ಚತುರವಾಣಿ (ಸ್ಮಾರ್ಟ್‌ಫೋನ್ - smartphone) - ಮೊಬೈಲ್ ಫೋನಿನ ಕೆಲಸಗಳನ್ನೂ ಮಾಡಬಲ್ಲ ಕಿಸೆಗಣಕ. ಇತ್ತೀಚೆಗೆ ಇಂತಹ ಫೋನುಗಳು ಅಗ್ಗವಾಗುತ್ತ ಜನಸಾಮಾನ್ಯರ ಕೈಗೆಟುಕುವಂತಾಗುತ್ತಿವೆ. ಈ ಫೋನುಗಳಲ್ಲಿ ಅಂತರಜಾಲ ನೋಡುವುದು, ಇಮೈಲ್ ಮಾಡುವುದು, ಪದಸಂಸ್ಕರಣೆ, ಜಿಪಿಎಸ್ ಬಳಸಿ ತಾನು ಇರುವ ಸ್ಥಾನ ತಿಳಿಯುವುದು, ಇನ್ನೂ ಏನೇನೋ ಮಾಡಬಹುದು. ಇಂತಹ ಫೋನುಗಳಿಗೆ ಸಹಸ್ರಾರು ತಂತ್ರಾಂಶಗಳು ಅಂತರಜಾಲದಲ್ಲಿ ಲಭ್ಯವಿವೆ. ಇವುಗಳು ಕೆಲಸ ಮಾಡಲು ಆಂಡ್ರೋಯಿಡ್, ವಿಂಡೋಸ್ ಫೋನ್, ಐಓಎಸ್, ಇತ್ಯಾದಿ ಯಾವುದಾದರೊಂದು ಕಾರ್ಯಾಚರಣೆಯ ವ್ಯವಸ್ಥೆ ಅಗತ್ಯ.

e - ಸಲಹೆ

ಗಿರೀಶ್ ಅವರ ಪ್ರಶ್ನೆ: ನನ್ನ ಗಣಕದ ಡೆಸ್ಕ್‌ಟಾಪ್ ಮೇಲೆ ಇರುವ ಎಲ್ಲ ಐಕಾನ್‌ಗಳು ತುಂಬ ಚಿಕ್ಕದಾಗಿವೆ. ಆವನ್ನು ದೊಡ್ಡದಾಗಿಸುವುದು ಹೇಗೆ? ನಾನು ವಿಂಡೋಸ್೭ ಬಳಸುತ್ತಿದ್ದೇನೆ.
ಉ: ಎಲ್ಲ ತಂತ್ರಾಂಶಗಳ ಕಿಟಿಕಿಗಳನ್ನು ಕಿರಿದಾಗಿಸಿ ಅಂದರೆ ಕೇವಲ ಡೆಸ್ಕ್‌ಟಾಪ್ ಮಾತ್ರ ಇರುವಂತೆ ಮಾಡಿ. ಈಗ Ctrl-A ಒತ್ತುವ ಮೂಲಕ ಎಲ್ಲ ಐಕಾನ್‌ಗಳನ್ನು ಆಯ್ಕೆ ಮಾಡಿ. ನಂತರ Ctrl ಕೀಲಿಯನ್ನು ಒತ್ತಿ ಹಿಡಿದುಕೊಂಡು ಮೌಸ್‌ನ ಚಕ್ರವನ್ನು ತಿರುಗಿಸಿ. 

ಕಂಪ್ಯೂತರ್ಲೆ

ಕೋಲ್ಯನಲ್ಲಿ ಇರುವ ಫೋನಿನಲ್ಲಿ ಕನ್ನಡ ಅಕ್ಷರಗಳು ಮೂಡಿಬರುತ್ತಿರಲಿಲ್ಲ. ನವಂಬರ್ ತಿಂಗಳು ಬಂದಿದೆ. ಮೊಬೈಲ್ ಫೋನಿನಲ್ಲಿ ಕನ್ನಡ ಮೂಡಿಬರದಿದ್ದರೆ ಚೆನ್ನಾಗಿರುವುದಿಲ್ಲ ತಾನೆ? ಆತ ಕಾಗದದಲ್ಲಿ ಕನ್ನಡ ಎಂದು ಬರೆದು ಅದನ್ನು ಕತ್ತರಿಸಿ ಫೋನಿಗೆ ಅಂಟಿಸಿ ಎಲ್ಲರಿಗೂ “ನನ್ನ ಫೋನಿನಲ್ಲಿ ಕನ್ನಡ ಕಾಣಿಸುತ್ತಿದೆ” ಎಂದು ತೋರಿಸಿದ.

ಸೋಮವಾರ, ನವೆಂಬರ್ 1, 2010

ಗಣಕಿಂಡಿ - ೦೭೬ (ನವಂಬರ್ ೦೧, ೨೦೧೦)

ಅಂತರಜಾಲಾಡಿ

ಕಂಪ್ಯೂನಲ್ಲಿಕನ್ನಡ

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಬೆಳೆಯಬೇಕಾಗಿದೆ. ಗಣಕದಲ್ಲಿ ಕನ್ನಡ ಬಳಕೆಯ ಬಗ್ಗೆ ಜನರಲ್ಲಿ ಹಲವಾರು ಸಂಶಯಗಳಿರುತ್ತವೆ. ಹಾಗೆಯೇ ಗಣಕ ಮತ್ತು ಅಂತರಜಾಲ ಬಳಕೆ ಬಗ್ಗೆ ಕನ್ನಡದಲ್ಲಿ ಮಾಹಿತಿ ಜನರಿಗೆ ಬೇಕಾಗಿದೆ. ಮಾಹಿತಿ ತಂತ್ರಜ್ಞಾನವೆಂದರೆ ಕೇವಲ ಗಣಕ ಮತ್ತು ಅಂತರಜಾಲವಲ್ಲ. ಮೊಬೈಲ್ ಫೋನು ಕೂಡ ಈ ಪಟ್ಟಿಗೆ ಸೇರುತ್ತದೆ. ೨೧ನೆಯ ಶತಮಾನದಲ್ಲಿ ಕನ್ನಡ ಉಳಿದು ಬೆಳೆಯಬೇಕಾದರೆ ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡದ ಅಳವಡಿಕೆ ಮತ್ತು ಬಳಕೆ ವ್ಯಾಪಕವಾಗಿ ಆಗಬೇಕು. ಈ ಆಶಯಗಳಿಗೆ ಪೂರಕವಾಗಿರುವ ಒಂದು ಜಾಲತಾಣ compuinkannada.co.cc. ಈ ಜಾಲತಾಣದಲ್ಲಿ ಕನ್ನಡ ಭಾಷೆಯಲ್ಲಿ ಮಾಹಿತಿ ತಂತ್ರಜ್ಞಾನದ ವಿವಿಧ ಅಂಗಗಳ ಬಗ್ಗೆ ಲೇಖನ, ಟ್ಯುಟೋರಿಯಲ್, ಉಚಿತ ತಂತ್ರಾಂಶ ಎಲ್ಲ ಇವೆ.

ಡೌನ್‌ಲೋಡ್

ಆಂಡ್ರೋಯಿಡ್‌ಗೆ ತಂತ್ರಾಂಶ

ಇತ್ತೀಚೆಗೆ ತುಂಬ ಜನಪ್ರಿಯವಾಗುತ್ತಿರುವ ಮೊಬೈಲ್ ಫೋನ್ ಕಾರ್ಯಾಚರಣೆಯ ವ್ಯವಸ್ಥೆ ಆಂಡ್ರೋಯಿಡ್. ಇದು ಗೂಗಲ್‌ನವರು ಬಿಡುಗಡೆ ಮಾಡಿದ ಕಾರ್ಯಾಚರಣೆಯ ವ್ಯವಸ್ಥೆ. ಇವುಗಳನ್ನು ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಎಂದು ಕರೆಯಲಾಗುವ ಮೊಬೈಲ್ ಫೋನ್‌ಗಳಲ್ಲಿ ಬಳಸುತ್ತಾರೆ. ಈ ಕಾರ್ಯಾಚರಣೆಯ ವ್ಯವಸ್ಥೆಯಲ್ಲಿ ಕೆಲಸ ಮಾಡುವ ತಂತ್ರಾಂಶಗಳು ಲಕ್ಷದಷ್ಟಿವೆ. ಇವುಗಳಲ್ಲಿ ಎಂದಿನಂತೆ ಉಚಿತ ಮತ್ತು ವಾಣಿಜ್ಯಕ ಎಂಬ ವಿಭಾಗಗಳಿವೆ. ಈ ಆಂಡ್ರೋಯಿಡ್ ಫೋನ್ ತಂತ್ರಾಂಶಗಳು ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ www.android.com. ಈ ಜಾಲತಾಣವನ್ನು ಗಣಕದ ಮೂಲಕ ಅಥವಾ ನಿಮ್ಮ ಆಂಡ್ರೋಯಿಡ್ ಫೋನ್ ಮೂಲಕವೂ ಪ್ರವೇಶಿಸಬಹುದು.

e - ಸುದ್ದಿ

ಉತ್ತಮ ಕಳ್ಳ

ಸ್ವೀಡನ್ ದೇಶದ ಪ್ರೊಫೆಸರ್ ಒಬ್ಬರು ತಮ್ಮ ಗಣಕವಿದ್ದ ಚೀಲವನ್ನು ತಮ್ಮ ಕಟ್ಟಡದ ಮೆಟ್ಟಿಲ ಬಳಿ ಇಟ್ಟು ಬಟ್ಟೆ ತೊಳೆಯುವ ಯಂತ್ರದ ಬಳಿಗೆ ಹೋಗಿದ್ದರು. ವಾಪಾಸು ಬಂದಾಗ ಅವರ ಚೀಲ ಕಳವಾಗಿತ್ತು. ಅವರು ಕೂಡಲೆ ಪೋಲೀಸರಿಗೆ ತಿಳಿಸಿದರು. ಒಂದು ಘಂಟೆಯ ನಂತರ ನೋಡಿದಾಗ ಅವರು ಚೀಲ ಇಟ್ಟ ಜಾಲಗದಲ್ಲಿ ಅವರ ಚೀಲ ಪ್ರತ್ಯಕ್ಷವಾಗಿತ್ತು. ಅದರಲ್ಲಿದ್ದ ಕ್ರೆಡಿಟ್ ಕಾರ್ಡ್, ಫೋನ್, ಡೈರಿ, ಇತ್ಯಾದಿ ವಸ್ತುಗಳು ಸುರಕ್ಷಿತವಾಗಿದ್ದವು. ಆದರೆ ಅವರ ಲ್ಯಾಪ್‌ಟಾಪ್ ಮಾತ್ರ ಇರಲಿಲ್ಲ. ಸುಮಾರು ಒಂದು ವಾರದ ನಂತರ ಅವರಿಗೆ ಒಂದು ಪ್ಯಾಕೆಟ್ ಕೋರಿಯರ್ ಮೂಲಕ ಬಂತು. ಅದರಲ್ಲಿ ಒಂದು ಯುಎಸ್‌ಬಿ ಡ್ರೈವ್ ಇತ್ತು. ಅದನ್ನು ಪರಿಶೀಲಿಸಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಅವರ ಲ್ಯಾಪ್‌ಟಾಪ್‌ನಲ್ಲಿ ಇದ್ದ ಅವರಿಗೆ ಅಗತ್ಯವಾಗಿದ್ದ ಎಲ್ಲ ಮಾಹಿತಿಗಳು ಆ ಯುಎಸ್‌ಬಿ ಡ್ರೈವ್‌ನಲ್ಲಿದ್ದವು. ಕಳ್ಳರಲ್ಲೂ ಒಳ್ಳೆಯವರಿರುತ್ತಾರೆ ಅಲ್ಲವೇ?

e- ಪದ

ಆಂಡ್ರೋಯಿಡ್ (Android) - ಮೊಬೈಲ್ ಫೋನ್‌ಗಳಲ್ಲಿ ಬಳಕೆಯಾಗುವ ಒಂದು ವಿಧದ ಕಾಯಾಚರಣೆಯ ವ್ಯವಸ್ಥೆ. ಇದು ಮೂಲತಃ ಮುಕ್ತ ತಂತ್ರಾಂಶವಾದ ಲಿನಕ್ಸ್‌ನಿಂದ ವಿಕಾಸವಾದುದು. ೨೦೦೫ರಲ್ಲಿ ಇದೇ ಹೆಸರಿನ ಕಂಪೆನಿ ಇದನ್ನು ಪ್ರಥಮವಾಗಿ ತಯಾರು ಮಾಡಿತು. ನಂತರ ಗೂಗಲ್ ಈ ಕಂಪೆನಿಯನ್ನು ಕೊಂಡುಕೊಂಡು ಮುಕ್ತವಾಗಿ ಬಿಡುಗಡೆ ಮಾಡಿದೆ. ಈಗ ಪ್ರಪಂಚದ ಸುಮಾರು ಶೇಕಡ ೨೦ ಸ್ಮಾರ್ಟ್‌ಫೋನ್‌ಗಳು ಈ ಕಾರ್ಯಾಚರಣೆಯ ವ್ಯವಸ್ಥೆಯನ್ನು ಬಳಸುತ್ತವೆ. ಈ ನಮೂನೆಯ ಫೋನುಗಳಲ್ಲಿ ಅಂತರಜಾಲ ಸಂಪರ್ಕ, ಇಮೈಲ್, ಜಿಪಿಎಸ್, ಇತ್ಯಾದಿ ಎಲ್ಲ ಸೌಲಭ್ಯಗಳಿರುತ್ತವೆ.

e - ಸಲಹೆ

ಆಂಡ್ರೋಯಿಡ್ ಫೋನಿನಲ್ಲಿ ಕನ್ನಡ

ಆಂಡ್ರೋಯಿಡ್ ಫೋನಿನಲ್ಲಿ ಕನ್ನಡ ಯುನಿಕೋಡ್ ಜಾಲತಾಣ ವೀಕ್ಷಣೆ ಮಾಡಬೇಕೇ? ಅದಕ್ಕಾಗಿ ನೀವು ಪ್ರಥಮವಾಗಿ ಒಪೆರಾ ಮಿನಿ ಎಂಬ ಜಾಲತಾಣ ವೀಕ್ಷಣೆಯ ತಂತ್ರಾಂಶವನ್ನು ಆಂಡ್ರೋಯಿಡ್ ಜಾಲತಾಣದಿಂದ ಫೋನಿಗೆ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಜಾಲತಾಣದ ವಿಳಾಸ ನಮೂದಿಸುವ ಜಾಗದಲ್ಲಿ about:config ಎಂದು ಟೈಪಿಸಬೇಕು. ಅಲ್ಲಿ ಮೂಡಿಬರುವ ಆಯ್ಕೆಗಳಲ್ಲಿ Use bitmap fonts for complex scripts ಎಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ಕನ್ನಡ ಯುನಿಕೋಡ್‌ನಲ್ಲಿರುವ ಜಾಲತಾಣಗಳ ವೀಕ್ಷಣೆ ಮಾಡಬಹುದು.

ಕಂಪ್ಯೂತರ್ಲೆ

ಐಟಿ ಮಂದಿ ಹಾಡು

ಮುದ್ದು ಕಂದನಾಗಿ ಹುಟ್ಟಿ ಕೀಬೋರ್ಡ್ ಮೌಸ್ ಕುಟ್ಟಿಕೊಂಡು
ಹಂಗೂ ಹಿಂಗೂ ಪ್ರೋಗ್ರಾಮ್ ಮಾಡಿ ಲೈಫು ಇಷ್ಟೇನೆ