ಸೋಮವಾರ, ಫೆಬ್ರವರಿ 21, 2011

ಗಣಕಿಂಡಿ - ೦೯೨ (ಫೆಬ್ರವರಿ ೨೧, ೨೦೧೧)

ಅಂತರಜಾಲಾಡಿ

ಜೆನೆಟಿಕ್ಸ್ ಕಲಿಯಿರಿ

ಡಿ.ಎನ್.ಎ., ಜೀನ್, ಪ್ರೊಟೀನ್, ಕ್ರೋಮೋಸೋಮ್, ಅನುವಂಶೀಯತೆ -ಇತ್ಯಾದಿ ಪದಗಳನ್ನು ಕೇಳಿರಬಹುದು. ಇವೆಲ್ಲ ಏನು? ಇವೆಲ್ಲ ಕಾಣಸಿಗುವುದು ಜೆನೆಟಿಕ್ಸ್ ಎಂಬ ವಿಜ್ಞಾನ ವಿಭಾಗದಲ್ಲಿ. ಈ ವಿಷಯಗಳ ಬಗ್ಗೆ ಪೂರ್ಣ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ಜಾಲತಾಣ learn.genetics.utah.edu. ಈ ಜಾಲತಾಣದಲ್ಲಿ ಈ ಜೆನೆಟಿಕ್ಸ್ ಬಗ್ಗೆ ಹಲವಾರು ಮಾಹಿತಿಗಳು ಪಠ್ಯ, ಚಿತ್ರ, ಧ್ವನಿ ಮತ್ತು ವೀಡಿಯೋ ಅಂದರೆ ಬಹುಮಾಧ್ಯಮ ರೂಪದಲ್ಲಿ ಲಭ್ಯವಿವೆ. ಕುಲಾಂತರಿ ತಳಿಗಳ ಬಗ್ಗೆ ಕೇಳಿರಬಹುದು. ಅವುಗಳ ಬಗ್ಗೆಯೂ ವಿವರ ಇಲ್ಲಿವೆ. ಹಾಗೆಯೇ ಆಕರಕೋಶಗಳು (stemcell), ಜೀನ್ ಚಿಕಿತ್ಸೆ -ಇತ್ಯಾದಿಗಳ ಬಗ್ಗೆಯೂ ಮಾಹಿತಿ ಇದೆ. ಪ್ರತಿಸ್ಪಂದನಾತ್ಮಕವಾಗಿ ಡಿ.ಎನ್.ಎ. ಅಣುವನ್ನು ತಯಾರಿಸಬೇಕೇ? ಅದಕ್ಕೂ ಇಲ್ಲಿ ಸೌಲಭ್ಯವಿದೆ. ವಿಜ್ಞಾನ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮಾತ್ರವಲ್ಲ ಜನಸಾಮಾನ್ಯರಿಗೂ ಉಪಯುಕ್ತ ಜಾಲತಾಣ.

ಡೌನ್‌ಲೋಡ್

ವೀಡಿಯೋಗೆ ಶೀರ್ಷಿಕೆ ಸೇರಿಸಿ

ಚಲನಚಿತ್ರಗಳನ್ನು ವೀಕ್ಷಿಸುವಾಗ ಅದರ ಕೆಳಗಿನ ಭಾಗದಲ್ಲಿ ಪಠ್ಯ ರೂಪದಲ್ಲಿ ಮಾತುಗಳು ಮೂಡಿಬರುವುದನ್ನು ಗಮನಿಸಿರಬಹುದು. ಇವಕ್ಕೆ ಸಬ್‌ಟೈಟಲ್ ಎನ್ನುತ್ತಾರೆ. ಇಂತಹ ಶೀರ್ಷಿಕೆಗಳನ್ನು ನೀವು ಮನೆಯಲ್ಲೇ ತಯಾರಿಸಿದ ವೀಡಿಯೋಗಳಿಗೂ ಸೇರಿಸಬೇಕು ಎಂದು ಕೆಲವೊಮ್ಮೆ ಅನಿಸಿರಬೇಕಲ್ಲವೇ? ಅದಕ್ಕಾಗಿ ವಾಣಿಜ್ಯಕ ತಂತ್ರಾಂಶಗಳು ಹಲವಾರಿವೆ. ಇಂತಹ ಒಂದು ಉಚಿತ ತಂತ್ರಾಂಶ Subtitle Edit ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ www.nikse.dk/se. ಇದು ಉಚಿತ ತಂತ್ರಾಂಶವಾಗಿದ್ದರೂ ಇದರಲ್ಲಿ ಸಾಮಾನ್ಯವಾಗಿ ಇಂತಹ ತಂತ್ರಾಂಶಗಳಲ್ಲಿ ಇರಬೇಕಾದ ಬಹುಮಟ್ಟಿನ ಎಲ್ಲ ಸವಲತ್ತುಗಳಿವೆ.

e - ಸುದ್ದಿ

ಸ್ಪೆಲ್ಲಿಂಗ್ ಬದಲಾವಣೆಯಿಂದ ಕೊಲೆ

ಸ್ಮಾರ್ಟ್‌ಫೋನ್‌ಗಳು ಬಹುಮಟ್ಟಿಗೆ ಗಣಕಗಳಂತೆಯೇ. ಬೆರಳಚ್ಚು ಮಾಡುತ್ತಿದ್ದಂತೆ ಸ್ಪೆಲ್ಲಿಂಗ್ ತಪ್ಪುಗಳನ್ನು ಅದು ಸರಿಪಡಿಸುತ್ತದೆ. ಕೆಲವೊಮ್ಮೆ ನಾವು ಬೆರಳಚ್ಚು ಮಾಡಿದ್ದು ಸರಿಯಿದ್ದರೂ ಅದರ ನಿಘಂಟುವಿನಲ್ಲಿ ಆ ಪದ ಇಲ್ಲದಿದ್ದಲ್ಲಿ ಅದು ತಪ್ಪು ಎಂದು ತೋರಿಸುವುದು ಮಾತ್ರವಲ್ಲ ಅದನ್ನು ತಿದ್ದಿಯೂ ಬಿಡುತ್ತದೆ. ಇಂಗ್ಲೆಂಡಿನಲ್ಲಿ ಹೀಗೆ ತಿದ್ದುವಿಕೆಯಿಂದಾಗಿ ಒಂದು ಕೊಲೆಯೇ ಆಗಿಹೋಯಿತು. ನೀಲ್ ಬ್ರೂಕ್ ಎಂಬಾತ ಜೋಸೆಫ್ ಎಂಬಾತನಿಗೆ ಸಂದೇಶ ಕಳುಹಿಸುವಾಗ mutter ಎಂದು ಬೆರಳಚ್ಚು ಮಾಡಿದ್ದನ್ನು ಆತನ ಫೋನ್ nutter ಎಂದು ತಿದ್ದಿ ಕಳುಹಿಸಿತು. ಕೋಪಗೊಂಡ ಜೋಸೆಫ್ ಬ್ರೂಕ್‌ನ ಮನೆಗೆ ಬಂದು ಜಗಳವಾಡಿದ. ಜಗಳ ಕೊನೆಗೆ ಜೋಸೆಫ್‌ನ ಮರಣದಲ್ಲಿ ಕೊನೆಯಾಯಿತು.

e- ಪದ


ಕೇಬಲ್ ಮೋಡೆಮ್ (cable modem) - ಟೆಲಿವಿಶನ್‌ಗಳಿಗಾಗಿರುವ ಕೇಬಲ್ ಮೂಲಕ ಅಂತರಜಾಲ ಸಂಪರ್ಕ ಪಡೆಯಲು ಕೇಬಲ್ ಮತ್ತು ಗಣಕದ ಮಧ್ಯೆ ಸಂಪರ್ಕಕ್ಕೆ ಬಳಸುವ ಸಾಧನ. ಮನೆಗಳಿಗೆ ಟಿ.ವಿ. ಸಂಪರ್ಕ ನೀಡುವ ಕೇಬಲ್‌ಗಳಲ್ಲಿ ಟಿ.ವಿ. ಸಂಪರ್ಕವಲ್ಲದೆ ಅಂತರಜಾಲ ಸಂಪರ್ಕವೂ ಸಾಧ್ಯ. ಇದರ ಮೂಲಕ ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆಯಬಹುದು. ದೊಡ್ಡ ನಗರಗಳಲ್ಲಿ ಈ ರೀತಿಯ ವಿಧಾನ ಬಳಕೆಯಲ್ಲಿದೆ ಅಥವಾ ಬಳಕೆಯಲ್ಲಿತ್ತು ಎನ್ನಬಹುದು. ಈಗ ಇವುಗಳ ಬಳಕೆ ಇಲ್ಲವಾಗುತ್ತಿದೆ.

e - ಸಲಹೆ

ಮೈಸೂರಿನ ಪೂರ್ಣಿಮಾ ರಾವ್ ಅವರ ಪ್ರಶ್ನೆ: ನಾನು ರಿಸೈಕಲ್ ಬಿನ್‌ನಿಂದ ಕೂಡ ಅಳಿಸಿ ಹಾಕಿದ ಫೈಲನ್ನು ಪುನಃ ಪಡೆಯಬಹುದೇ?
ಉ: ಈ ಪ್ರಶ್ನೆಗೆ ಹಲವು ಸಲ ಉತ್ತರಿಸಿಯಾಗಿದೆ. ಫೈಲ್ ಅಳಿಸಿದ ನಂತರ ಎಷ್ಟು ಮಾಹಿತಿಯನ್ನು ಹಾರ್ಡ್‌ಡಿಸ್ಕ್‌ನಲ್ಲಿ ಸೇರಿಸಲಾಗಿದೆ ಎಂಬುದನ್ನು ಇದು ಅವಲಂಬಿಸಿದೆ. ನೀವು www.piriform.com/recuva ತಾಲತಾಣದಲ್ಲಿ ದೊರೆಯುವ recuva ತಂತ್ರಾಂಶವನ್ನು ಬಳಸಿ ಪ್ರಯತ್ನಿಸಿ.

ಕಂಪ್ಯೂತರ್ಲೆ

ಪ್ರತಿ ಗಣಕದಲ್ಲೂ ಇಂಟರ್‌ನೆಟ್ ಇರುವಂತೆ ಮಾಡಲು ಅಮೆರಿಕದ ಅಧ್ಯಕ್ಷ ಒಬಾಮ ಪ್ರಯತ್ನಿಸುತ್ತಿದ್ದಾರೆ -ಸುದ್ದಿ. “ನನ್ನ ಗಣಕದಲ್ಲೂ ಇಂಟರ್‌ನೆಟ್ ತುಂಬಿಸಿ ಕಳುಹಿಸಿ” ಎಂದು ಪತ್ರ ಬರೆದ ಕೋಲ್ಯ ಅಧ್ಯಕ್ಷರಿಗೆ ಪತ್ರದ ಸಮೇತ ತನ್ನ ಗಣಕವನ್ನು ರವಾನಿಸಿದ.

ಸೋಮವಾರ, ಫೆಬ್ರವರಿ 14, 2011

ಗಣಕಿಂಡಿ - ೦೯೧ (ಫೆಬ್ರವರಿ ೧೪, ೨೦೧೧)

ಅಂತರಜಾಲಾಡಿ

ಜನಗಣತಿ

ಹತ್ತುವರ್ಷಗಳಿಗೊಮ್ಮೆ ಭಾರತದ ಜನಗಣತಿಯನ್ನು ನಡೆಸಲಾಗುತ್ತದೆ. ೧೯೫೧ರಿಂದ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಸಲಾಗುತ್ತಿದೆ. ಈ ಜನಗಣತಿಯ ಅಧಿಕೃತ ಜಾಲತಾಣ www.censusindia.gov.in. ಈ ಜಾಲತಾಣದಲ್ಲಿ ಜನ ಗಣತಿಯ ಬಗ್ಗೆ ಎಲ್ಲ ಮಾಹಿತಿಗಳು ಲಭ್ಯ. ಎಲ್ಲ ನಮೂನೆಯ ಫಾರಮ್‌ಗಳೂ ಇವೆ. ಅವು ಕನ್ನಡ ಸಹಿತ ಎಲ್ಲ ಭಾರತೀಯ ಭಾಷಗಳಲ್ಲಿವೆ. ಅವುಗಳನ್ನು ಓದಿ ಅಲ್ಲಿ ಕೇಳಲಾಗುತ್ತಿರುವ ಮಾಹಿತಿಗಳ ಬಗ್ಗೆ ಏನು ಉತ್ತರಿಸಬೇಕು ಎಂದು ಈಗಲೇ ನೀವು ಸಿದ್ಧರಾಗಬಹುದು. ಪ್ರಥಮ ಜನಗಣತಿಯಿಂದ ಹಿಡಿದು ಹಿಂದಿನ ಕೆಲವು ಜನಗಣತಿಗಳ ಛಾಯಾಚಿತ್ರಗಳೂ ಇಲ್ಲಿವೆ. ಈ ಹಿಂದಿನ ಜನಗಣತಿಯ ಅಂಕೆಸಂಖ್ಯೆಗಳನ್ನು ಇಲ್ಲಿ ಪಡೆದುಕೊಳ್ಳಬಹದು. ಭಾಷಾವಾರು ಅಂಕೆಸಂಖ್ಯಗಳು ತುಂಬ ಕುತೂಹಲಕಾರಿಯಾಗಿವೆ. ಉದಾಹರಣೆಗೆ ಸಂಸ್ಕೃತ ಮೃತಭಾಷೆ ಎನ್ನುವವರು ಎಷ್ಟು ಜನ ಅದನ್ನು ತಮ್ಮ ಮಾತೃಭಾಷೆ ಎಂದು ನೋಂದಾಯಿಸಿದ್ದಾರೆ ಎಂಬ ಮಾಹಿತಿಯನ್ನು ನೋಡಬಹುದು.

ಡೌನ್‌ಲೋಡ್

ಧ್ವನಿಯಲ್ಲೇ ಆಟ

ಗಣಕದಲ್ಲಿ ಆಡುವ ಆಟಗಳು ಸಾವಿರಾರಿವೆ. ಗಣಕ ಆಟಗಳ ತಯಾರಿ ಒಂದು ದೊಡ್ಡ ಉದ್ಯಮವೇ ಆಗಿದೆ. ಈ ಆಟಗಳನ್ನು ದೃಷ್ಟಿ ಸರಿಯಾಗಿರುವವರಿಗಾಗಿ ರಚಿಸಲಾಗಿದೆ. ದೃಷ್ಟಿಮಾಂದ್ಯವಿದ್ದವರು ಏನು ಮಾಡಬೇಕು. ಅವರಿಗಾಗಿ ಗಣಕ ಪರದೆಯಲ್ಲಿ ಮೂಡಿದ್ದನ್ನೂ ಓದುವ ತಂತ್ರಾಂಶಗಳು ಲಭ್ಯವಿವೆ. ಆದರೆ ಆಟಗಳು? ದೃಷ್ಟಿಮಾಂದ್ಯ ದೋಷವಿದ್ದವರಿಗಾಗಿ ಗಣಕದಲ್ಲಿ ಆಡಲು ಹಲವು ಧ್ವನಿ ಆಧಾರಿತ ಆಟಗಳಿವೆ. ಇವುಗಳು ಕೇವಲ ಧ್ವನಿಯ ಮೂಲಕ ಆಡುವ ಆಟಗಳು. ಇಂತಹ ಆಟಗಳು ದೊರೆಯುವ ಜಾಲತಾಣ www.audiogames.net. ಈ ಜಾಲತಾಣದಲ್ಲಿ ಧ್ವನಿ ಆಧಾರಿತ ಆಟಗಳಿಗೆ ಸೂಚಿ ಹಾಗೂ ಸಂಪರ್ಕಕೊಂಡಿಗಳಿವೆ. ಕೆಲವು ಆಟಗಳು ಇದೇ ಜಾಲತಾಣದಲ್ಲಿ ಲಭ್ಯವಿವೆ. ನೀವು ಆಟ ತಯಾರಕರಾದರೆ ಇಂತಹ ಆಟಗಳನ್ನು ತಯಾರಿಸಿ ಈ ಜಾಲತಾಣಕ್ಕೆ ಸೇರಿಸಬಹುದು.

e - ಸುದ್ದಿ

ಹೊಂಡಮುಚ್ಚಲು ಫೋನ್

ಶೀರ್ಷಿಕೆ ನೋಡಿ ತಪ್ಪಾಗಿ ಅರ್ಥೈಸಬೇಡಿ. ಹಳತಾದ ಫೋನ್‌ಗಳನ್ನು ರಸ್ತೆಹೊಂಡಗಳನ್ನು ಮುಚ್ಚಲು ಬಳಸುತ್ತಿಲ್ಲ. ಕೆಲಸ ಮಾಡುತ್ತಿರುವ ಸ್ಮಾರ್ಟ್‌ಫೋನ್‌ಗಳನ್ನು ಬಳಸಿ ರಸ್ತೆಹೊಂಡಗಳನ್ನು ಪತ್ತೆಹಚ್ಚಲಾಗುತ್ತಿದೆ. ಇದು ನಡೆಯುತ್ತಿರುವುದು ಬೋಸ್ಟನ್ ನಗರದಲ್ಲಿ. ಸ್ಮಾರ್ಟ್‌ಫೋನ್‌ಗಳಲ್ಲಿ ಅಲುಗಾಟವನ್ನು ಪತ್ತಹಚ್ಚುವ ಅಕ್ಸಲರೋಮೀಟರ್ ಎಂಬ ಸಾಧನವಿರುತ್ತದೆ. ಇದನ್ನು ಬಳಸಿ ಹಲವು ನಮೂನೆಯ ಆಟಗಳನ್ನು ಮತ್ತು ಇತರೆ ಉಪಯುಕ್ತ ತಂತ್ರಾಂಶಗಳನ್ನು ತಯಾರಿಸಲಾಗಿದೆ. ಉಪಗ್ರಹಗಳನ್ನು ಬಳಸಿ ತಾನು ಇರುವ ಸ್ಥಳವನ್ನು ಪತ್ತೆಹಚ್ಚುವ ಸವಲತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಇದೆ. ಈಗ ತಯಾರಾಗಿರುವ ಹೊಸ ತಂತ್ರಾಂಶವನ್ನು ಫೋನಿನಲ್ಲಿ ಅಳವಡಿಸಿ ಅದನ್ನು ಕಾರಿನಲ್ಲಿ ಇಟ್ಟು ಚಲಾಯಿಸಿಕೊಂಡು ಹೋಗುವಾಗ ಕಾರು ಹೊಂಡವನ್ನು ಅನುಭವಿಸಿದಂತೆಲ್ಲ ಅದು ಹೊಂಡ ಇರುವ ಸ್ಥಳದ ಮಾಹಿತಿಯನ್ನು ಕೇಂದ್ರ ಕಚೇರಿಗೆ ರವಾನಿಸುತ್ತದೆ. ಸರಕಾರಿ ಅಧಿಕಾರಿಗಳು ಹೊಂಡ ಮುಚ್ಚುವ ವಾಹನವನ್ನು ಅಲ್ಲಿಗೆ ಕಳುಹಿಸುತ್ತಾರೆ.

e- ಪದ

ಅಕ್ಸಲರೋಮೀಟರ್ (accelerometer) - ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸಾಧನ ಇರುತ್ತದೆ. ಇದು ಗುರುತ್ವಾಕರ್ಷಣ ಶಕ್ತಿಯ ಹೊರತಾದ ವೇಗೋತ್ಕರ್ಷ ಮತ್ತು ಅಲುಗಾಟವನ್ನು ಪತ್ತೆ ಹಚ್ಚುತ್ತದೆ. ಇದು ಮೂರು ಅಕ್ಷಗಳಲ್ಲಿ ಫೋನಿನ ಚಲನೆ ಮತ್ತು ವೇಗವನ್ನು ದಾಖಲಿಸುತ್ತದೆ. ಹಲವು ತಂತ್ರಾಂಶಗಳಲ್ಲಿ ಇದರ ಬಳಕೆ ಆಗುತ್ತಿದೆ. ಉದಾಹರಣೆಗೆ walkon ಎಂಬ ತಂತ್ರಾಂಶವು ಒಬ್ಬ ಎಷ್ಟು ಹೆಜ್ಜೆ ನಡೆದಿದ್ದಾನೆ, ಇದರಿಂದ ಎಷ್ಟು ಕ್ಯಾಲೊರಿ ಖರ್ಚು ಆಯಿತು ಎಂದು ವರದಿ ನಿಡುತ್ತದೆ.

e - ಸಲಹೆ

ನಾರಾಯಣ ಭಟ್ ಅವರ ಪ್ರಶ್ನೆ: ವೀಡಿಯೋ ಎಡಿಟ್ ಮಾಡಲು ಯಾವುದಾದರು ಉಚಿತ ತಂತ್ರಾಂಶ ಇದೆಯೇ?
ಉ: ಉತ್ತಮ ವಾಣಿಜ್ಯಕ ತಂತ್ರಾಂಶದ ಮಟ್ಟದ ಉಚಿತ ತಂತ್ರಾಂಶ ಸಿಗುವುದು ಸ್ವಲ್ಪ ಕಷ್ಟ. trakAxPC ತಂತ್ರಾಂಶವನ್ನು ಬಳಸಿ ನೋಡಬಹುದು. ಇದರಲ್ಲಿ ಉಚಿತ ಮತ್ತು ವಾಣಿಜ್ಯಕ ಎಂಬ ಎರಡು ಆವೃತ್ತಿಗಳಿವೆ. ಡೌನ್‌ಲೋಡ್ ಮಾಡಲು bit.ly/f0D59p ಜಾಲತಾಣಕ್ಕೆ ಭೇಟಿ ನೀಡಿ.

ಕಂಪ್ಯೂತರ್ಲೆ


ಒಬ್ಬ ಟ್ವಿಟ್ಟರ್ ವ್ಯಸನಿ ವಾಹನಚಾಲನೆಯ ಪರೀಕ್ಷೆ ತೆಗೆದುಕೊಂಡಿದ್ದ. ಆತನಿಗೆ ಪ್ರಶ್ನೆ ಕೇಳಲಾಯಿತು -“ಕೆಂಪು ದೀಪ ಎದುರಾದಾಗ ಏನು ಮಾಡುತ್ತೀಯಾ?”. ಆತ ಉತ್ತರಿಸಿದ “ಗೊತ್ತಿಲ್ಲ. ಬಹುಶಃ ಒಂದೆರಡು ಟ್ವೀಟ್ ಮಾಡುತ್ತೇನೆ”. ಆತ ಪರೀಕ್ಷೆಯಲ್ಲಿ ನಪಾಸಾದ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ ತಾನೆ?

ಮಂಗಳವಾರ, ಫೆಬ್ರವರಿ 8, 2011

ಗಣಕಿಂಡಿ - ೦೯೦ (ಫೆಬ್ರವರಿ ೦೭, ೨೦೧೧)

ಅಂತರಜಾಲಾಡಿ

ಏರೋಇಂಡಿಯ

ಪ್ರತಿವರ್ಷ ಬೆಂಗಳೂರಿನಲ್ಲಿ ಏರೋಇಂಡಿಯ ಪ್ರದರ್ಶನ ಜರುಗುತ್ತದೆ. ಇದು ಕೇವಲ ಭಾರತ ಮಾತ್ರವಲ್ಲ ಏಶಿಯಾಕ್ಕೇ ಅತಿ ದೊಡ್ಡ ವೈಮಾನಿಕ ಪ್ರದರ್ಶನ. ಇದರಲ್ಲಿ ವಿವಿಧ ವಿಮಾನಗಳ ಪ್ರದರ್ಶನ, ಅವುಗಳ ಹಾರಾಟ, ಈ ಕ್ಷೇತ್ರದಲ್ಲಿರುವ ವಿವಿಧ ಕಂಪೆನಿಗಳ ಸ್ಟಾಲ್‌ಗಳು ಇವೆಲ್ಲ ಇರುತ್ತವೆ. ಈ ವರ್ಷ ಈ ಕಾರ್ಯಕ್ರಮ ಫೆಬ್ರವರಿ ತಿಂಗಳ ೯ರಿಂದ ೧೩ರ ತನಕ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಜಾಲತಾಣ  www.aeroindia.in. ಈ ಜಾಲತಾಣದಲ್ಲಿ ಕಾರ್ಯಕ್ರಮದ ವಿವರ ತಿಳಿಯಬಹುದಲ್ಲದೆ ಪ್ರದರ್ಶನ ನೋಡಲು ನೋಂದಾಯಿಸಿಕೊಳ್ಳಲೂಬಹುದು. ಎಲ್ಲೆಲ್ಲ ಪ್ರದರ್ಶನಕ್ಕೆ ಟಿಕೇಟು ದೊರೆಯುತ್ತದೆ ಎಂಬ ವಿವರವೂ ಈ ಜಾಲತಾಣದಲ್ಲಿದೆ.

ಡೌನ್‌ಲೋಡ್

ವೀಡಿಯೋ ಹೊರತೆಗೆಯಿರಿ

ಯುಟ್ಯೂಬ್‌ನಂತೆ ಹಲವು ಜಾಲತಾಣಗಳಲ್ಲಿ ವಿಡಿಯೋ ತುಣುಕುಗಳು ಇರುವುದನ್ನು ಗಮನಿಸಿರಬಹುದು. ಅವುಗಳನ್ನು ಪ್ಲೇ ಮಾಡಿ ನೋಡಿಯೂ ಇರಬಹುದು. ಈ ವೀಡಿಯೋ ಒಮ್ಮೆ ಪ್ಲೇ ಮಾಡಿದ ನಂತರ ಎಲ್ಲಿಗೆ ಹೋಗುತ್ತದೆ? ಅದನ್ನು ಇನ್ನೊಮ್ಮೆ ಪ್ಲೇ ಮಾಡಬೇಕಾದರೆ ಅಥವಾ ಶಾಶ್ವತವಾಗಿ ನಿಮ್ಮ ಗಣಕದಲ್ಲಿ ಸಂಗ್ರಹಿಸಿಡಬೇಕಾದರೆ ಏನು ಮಾಡಬೇಕು? ವೀಡಿಯೋ ಪ್ಲೇ ಮಾಡುವಾಗ ಮಾತ್ರವಲ್ಲ ಯಾವುದೇ ಜಾಲತಾಣ ವೀಕ್ಷಿಸುವಾಗ ಗಣಕದ ತಾತ್ಕಾಲಿಕ ಸಂಗ್ರಹ ಜಾಲದಲ್ಲಿ ವೀಡಿಯೋ, ಚಿತ್ರ, ಪಠ್ಯಗಳೆಲ್ಲ ಸಂಗ್ರಹವಾಗಿರುತ್ತವೆ. ಈ ಜಾಗ ಭರ್ತಿಯಾದಾಗ ಅವೆಲ್ಲವು ಅಳಿಸಲ್ಪಡುತ್ತವೆ. ಈ ಜಾಗದಿಂದ ವೀಡಿಯೋವನ್ನು ಪ್ರತಿ ಮಾಡಿಕೊಳ್ಳಲು ಹಾಗೂ ಪ್ಲೇ ಮಾಡಲು ಅನುವು ಮಾಡಿಕೊಡುವ ತಂತ್ರಾಂಶ  VideoCacheView. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/gqy6sD.

e - ಸುದ್ದಿ

ಹಣದ ವಾಸನೆ

ಕಿಸೆಯಲ್ಲಿ ಗರಿಗರಿಯಾದ ನೋಟುಗಳಿದ್ದರೆ ಮನಸ್ಸಿಗೆ ಏನೋ ಸಂತೃಪ್ತಿ ತಾನೆ? ಈ ಗರಿಗರಿ ನೋಟುಗಳಿಗೆ ಅದರದ್ದೇ ಆದ ವಾಸನೆ ಇರುವುದನ್ನು ಗಮನಿಸಿರಬಹುದು. ಹಣವಿಲ್ಲದೆ ಕೇವಲ ವಾಸನೆ ಬರುವಂತಿದ್ದರೆ? ಹೌದು. ಇದನ್ನು ಮೈಕ್ರೋಸಾಫ್ಟ್ ಕಂಪೆನಿಯ ಉಪಾಧ್ಯಕ್ಷರಾದ ಪಾಟ್ರಿಕ್ ಮ್ಯಾಕ್‌ಕಾರ್ತಿ ಮಾಡಿ ತೋರಿಸಿದ್ದಾರೆ. ಅವರು ಅಮೆರಿಕದ ನೋಟುಗಳ ಪರಿಮಳ ಬೀರುವ ಪರ್ಫ್ಯೂಮ್ ತಯಾರಿಸಿದ್ದಾರೆ. ಈ ಸುವಾಸನಾದ್ರವ್ಯವನ್ನು ಬಟ್ಟೆ ಮೇಲೆ ಸಿಂಪಡಿಸಿದರೆ ಗರಿಗರಿಯಾದ ಹೊಸ ನೋಟುಗಳ ವಾಸನೆ ಬರುತ್ತದೆ. ಹೆಂಗಸರಿಗೆ ಮತ್ತು ಗಂಡಸರಿಗೆ ಎಂಬ ಎರಡು ಪರಿಮಳಗಳಲ್ಲಿ ಇವು ಈಗಾಗಲೆ ಮಾರುಕಟ್ಟೆಯಲ್ಲಿ ಲಭ್ಯವಿವೆ. ಭಾರತೀಯ ಆವೃತ್ತಿ ಅಂದರೆ ನಮ್ಮ ನೋಟುಗಳ ವಾಸನೆ ಬೀರುವವು ಯಾವಾಗ ಬರುತ್ತವೆ ಎಂದು ಅವರು ಹೇಳಿಲ್ಲ.

e- ಪದ

ಇಂಟರ್‌ನೆಟ್ ಪ್ರೋಟೋಕಾಲ್ (Internet Protocol - IP) - ಗಣಕಜಾಲದಲ್ಲಿ ಮಾಹಿತಿಯ ಸಂವಹನಕ್ಕೆ ಬಳಸುವ ಸಾರ್ವತ್ರಿಕವಾಗಿ ಒಪ್ಪಿಗೆಯಾದ ವಿಧಾನಕ್ಕೆ ಪ್ರೋಟೋಕೋಲ್ ಎಂದು ಹೆಸರು. ಅಂತರಜಾಲದಲ್ಲಿ ಗಣಕದಿಂದ ಗಣಕಕ್ಕೆ ಪ್ರವಹಿಸುವ ಮಾಹಿತಿಯು ಇಂಟರ್‌ನೆಟ್ ಪ್ರೋಟೋಕೋಲ್‌ನ್ನು ಬಳಸುತ್ತದೆ. ಅಂತರಜಾಲಕ್ಕೆ ಸೇರ್ಪಡೆಯಾದ ಪ್ರತಿಯೊಂದು ಗಣಕಕ್ಕೂ ಒಂದು ಪ್ರತ್ಯೇಕವಾದ ವಿಳಾಸವಿರುತ್ತದೆ. ಇದನ್ನು IP address ಎಂದು ಕರೆಯುತ್ತಾರೆ. ಗಣಕದಿಂದ ಗಣಕಕ್ಕೆ ಅಂತರಜಾಲದ ಮೂಲಕ ಮಾಹಿತಿ ಕಳುಹಿಸಿದಾಗ (ವಿ-ಪತ್ರ, ಡೌನ್‌ಲೋಡ್, ಜಾಲತಾಣಪುಟ, ಇತ್ಯಾದಿ) ಆ ಮಾಹಿತಿಯು ಚಿಕ್ಕ ಚಿಕ್ಕ ಪ್ಯಾಕೆಟ್‌ಗಳಾಗಿ ಕಳುಹಿಸಲ್ಪಡುತ್ತದೆ. ಪ್ರತಿ ಪ್ಯಾಕೆಟ್ ಮೇಲೂ ಅದು ಹೊರಟ ಗಣಕದ ವಿಳಾಸ, ತಲುಪಬೇಕಾದ ಗಣಕದ ವಿಳಾಸ ಇರುತ್ತದೆ. ಎಲ್ಲ ಪ್ಯಾಕೆಟ್‌ಗಳು ಒಂದೇ ದಾರಿಯ ಮೂಲಕ ಹರಿದು ಬರುತ್ತವೆ ಮತ್ತು ಮೂಲ ಸರಣಿ/ಸರದಿಯಲ್ಲಿ ಬರುತ್ತವೆ ಎಂಬ ಖಾತ್ರಿಯೇನಿಲ್ಲ. ಕೊನೆಗೊಮ್ಮೆ ಎಲ್ಲ ಪ್ಯಾಕೆಟ್‌ಗಳು ಒಟ್ಟು ಸೇರಿ ಮೂಲ ಮಾಹಿತಿಯ ರೂಪ ಧರಿಸುತ್ತವೆ. ಈ ರೀತಿ ಬೇರೆ ಬೇರೆ ಸಮಯದಲ್ಲಿ ಬಂದು ಸೇರಿದ ಪ್ಯಾಕೆಟ್‌ಗಳನ್ನು ಮೂಲ ರೂಪಕ್ಕೆ ಒಟ್ಟು ಸೇರಿಸುವ ಕೆಲಸವನ್ನು ಇನ್ನೊಂದು ಪ್ರೋಟೋಕೋಲ್, Transmission Control Protocol (TCP), ಮಾಡುತ್ತದೆ. ಇದಕ್ಕೆ TCP/IP ಎಂಬ ಹೆಸರೂ ಇದೆ.

e - ಸಲಹೆ

ಮೇಘ ಅವರ ಪ್ರಶ್ನೆ: ನನ್ನ ಗಣಕದ ಮದರ್‌ಬೋರ್ಡ್‌ನ ಸಿ.ಡಿ. ಎಲ್ಲೋ ಕಳೆದುಹೋಗಿದೆ. ಅದರ ಡ್ರೈವರ್‌ಗಳನ್ನು ಇನ್ನೊಮ್ಮೆ ಇನ್‌ಸ್ಟಾಲ್ ಮಾಡಬೇಕಾಗಿದೆ. ಅವು ಎಲ್ಲಿ ಸಿಗುತ್ತವೆ?
ಉ: ನಿಮ್ಮ ಮದರ್‌ಬೋರ್ಡ್ ಯಾವ ಕಂಪೆನಿಯದು, ಯಾವ ಆವೃತ್ತಿ, ಯಾವ ವರ್ಷ ತಯಾರಾದುದು, ಇತ್ಯಾದಿ ಮಾಹಿತಿ ಇದ್ದರೆ ಆ ಕಂಪೆನಿಯ ಜಾಲತಾಣದಲ್ಲಿ ಹುಡುಕಿದರೆ ಸಿಗಬಹುದು. ಜೊತೆಗೆ www.driverskit.com/MotherBoard.html ಜಾಲತಾಣದಲ್ಲೂ ಪ್ರಯತ್ನಿಸಿ ನೋಡಬಹುದು.

ಕಂಪ್ಯೂತರ್ಲೆ

ಇನ್ನಷ್ಟು ಟ್ವಿಟ್ಟರ್ ಫೇಸ್‌ಬುಕ್ (ತ)ಗಾದೆಗಳು

·    ಸಾವಿರ ಟ್ವಿಟ್ಟರ್ ಹಿಂಬಾಲಕರು ಮೊದಲು ಒಬ್ಬ ಹಿಂಬಾಲಕನಿಂದ ಪ್ರಾರಂಭವಾಗುತ್ತದೆ
·    ದಶಸಹಸ್ರ ಟ್ವೀಟ್‌ಗಳು ಮೊದಲು ಒಂದು ಟ್ವೀಟ್‌ನಿಂದ ಆರಂಭವಾಗುತ್ತದೆ.
·    ಫೇಸ್‌ಬುಕ್‌ಗೆ ಬಂದವನು ಟ್ವಿಟ್ಟರ್‌ಗೆ ಬರಲೇಬೇಕು
·    ಟ್ವಿಟ್ಟರ್‌ನಲ್ಲಿ ಕೆಡಿಸಿಕೊಂಡ ಹೆಸರನ್ನು ಫೇಸ್‌ಬುಕ್‌ನಲ್ಲಿ ಸರಿಪಡಿಸಿಕೊಳ್ಳಲಾಗುವುದಿಲ್ಲ

ಮಂಗಳವಾರ, ಫೆಬ್ರವರಿ 1, 2011

ಗಣಕಿಂಡಿ - ೦೮೯ (ಜನವರಿ ೩೧, ೨೦೧೧)

ಅಂತರಜಾಲಾಡಿ

ಕಿರಿಕಿರಿ ಕರೆ ತಪ್ಪಿಸಿ

“ಹಲೋ, ನಾನು xyz ಬ್ಯಾಂಕಿನಿಂದ ಮಾತನಾಡುತ್ತಿದ್ದೇನೆ. ನಿಮಗೆ ಕ್ರೆಡಿಟ್ ಕಾರ್ಡ್ ಬೇಕೇ?” ಎಂಬ ಮಾದರಿಯ ಕರೆಗಳು ನಿಮ್ಮ ಚರ ಅಥವಾ ಸ್ಥಿರ ದೂರವಾಣಿಗೆ ಬರುತ್ತಲೇ ಇವೆಯಾ? ಇಂತಹ ಕಿರಿಕಿರಿ ಕರೆಗಳಿಂದ ತಪ್ಪಿಸಿಕೊಳ್ಳಬೇಕಾದರೆ ನಿಮ್ಮ ದೂರವಾಣಿಯನ್ನು ರಾಷ್ಟ್ರೀಯ ಕರೆ ಮಾಡಬೇಡಿ ಎಂಬ ಪಟ್ಟಿಯಲ್ಲಿ ಸೇರಿಸಬೇಕು. ವಾಣಿಜ್ಯಕ ಕರೆ ಮಾಡುವವರು ಕರೆ ಮಾಡುವ ಮೊದಲು ತಾವು ಕರೆ ಮಾಡಲು ಹೊರಟ ದೂರವಾಣಿ ಸಂಖ್ಯೆ ಈ ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲಿಸಿ ನೋಡತಕ್ಕದ್ದು. ಈ ಪಟ್ಟಿಯಲ್ಲಿ ಇರುವ ದೂರವಾಣಿಗೆ ಕರೆ ಮಾಡಿದರೆ ದಂಡ ತೆರಬೇಕಾಗುತ್ತದೆ. ಈ ಜಾಲತಾಣದ ವಿಳಾಸ - ndncregistry.gov.in. ಈ ಪಟ್ಟಿಯಲ್ಲಿ ನಿಮ್ಮ ದೂರವಾಣಿ ಸಂಖ್ಯೆ ದಾಖಲಾಗಿದೆಯೇ ಎಂದು ಪರಿಶೀಲಿಸಿ. ಇಲ್ಲವಾದಲ್ಲಿ ಕೂಡಲೆ ದಾಖಲಿಸಿ. ಕಿರಿಕಿರಿ ಕರೆಗಳಿಂದ ಮುಕ್ತವಾಗಿ.

ಡೌನ್‌ಲೋಡ್

ಮೈಕ್ರೋಸಾಫ್ಟ್ ಗಣಿತ


ಗಣಿತದ ಸಮೀಕರಣಗಳು ತಲೆತಿನ್ನುತ್ತಿದ್ದರೆ ಅವುಗಳನ್ನು ಗಣಕದಲ್ಲಿ ಬಿಡಿಸುವ ತಂತ್ರಾಂಶಗಳು ಕೆಲವಿವೆ. ಆದರೆ ಅವುಗಳಲ್ಲಿ ಹೆಚ್ಚಿನವು ವಾಣಿಜ್ಯಕ ಅಂದರೆ ಹಣ ಕೊಟ್ಟು ಕೊಂಡುಕೊಳ್ಳಬೇಕಾದವು. ಇತ್ತೀಚೆಗೆ ಮೈಕ್ರೋಸಾಫ್ಟ್ ಕಂಪೆನಿ ಇಂತಹ ಒಂದು ತಂತ್ರಾಂಶವನ್ನು ಉಚಿತವಾಗಿ ನೀಡಲು ಪ್ರಾರಂಭಿಸಿದೆ. ಇದರ ಹೆಸರು Microsoft Mathematics. ಇದರಲ್ಲಿ ಗಣಿತದ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸಬಹುದು. ಸಮೀಕರಣಗಳನ್ನು ಬಿಡಿಸಬಹುದು ಹಾಗೂ ಅವುಗಳ ಗ್ರಾಫ್ ತಯಾರಿಸಬಹುದು. ಈ ಗ್ರಾಫ್‌ಗಳನ್ನು ಎರಡು ಆಯಾಮ ಮತ್ತು ಮೂರು ಆಯಾಮಗಳಲ್ಲಿ ಚಿತ್ರಿಸಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೋಡಬೇಕಾದ ಜಾಲತಾಣ  http://bit.ly/gAfS92.

e - ಸುದ್ದಿ

ಚಿತ್ರಗಳಿಗೂ ಜೀವಿತಾವಧಿ

ಔಷಧಿಗಳಿಗೆ ಬಳಸಬೇಕಾದ ತಾರೀಕಿನ ಮಿತಿ ಅಂದರೆ ಎಕ್ಸ್‌ಪೈರಿ ಡೇಟ್ ನಮೂದಿಸಿರುವುದು ಗೊತ್ತಿದೆ ತಾನೆ? ಅದೇ ರೀತಿ ಚಿತ್ರಗಳಿಗೂ ಇಂತಹ ದಿನಾಂಕದ ನಂತರ ಅದು ಗೋಚರವಾಗದಂತೆ ಮಾಡುವ ತಂತ್ರಜ್ಞಾನವನ್ನು ಜರ್ಮನಿಯ ವಿಜ್ಞಾನಿಗಳು ಅನ್ವೇಷಿಸಿದ್ದಾರೆ. ಇದರ ಉಪಯೋಗ ಏನು ಅಂತ ಆಲೋಚಿಸುತ್ತಿದ್ದೀರಾ? ನೀವು ಫೇಸ್‌ಬುಕ್‌ನಂತಹ ಜಾಲತಾಣದಲ್ಲಿ ಒಂದು ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಚಿತ್ರ ರೂಪದಲ್ಲಿ ಹಾಕಿದ್ದೀರಿ ಎಂದುಕೊಳ್ಳೋಣ. ಆ ಕಾರ್ಯಕ್ರಮ ಜರುಗಿದ ನಂತರ ಆ ಚಿತ್ರ ನಿಮ್ಮ ಜಾಲತಾಣದಲ್ಲಿ ಇರಬಾರದು ಅಥವಾ ಅದು ಅದೃಶ್ಯವಾಗಿರಬೇಕು. ವಿದೇಶಿಯರಿಗೆ ಈ ತಂತ್ರಜ್ಞಾನದ ಇನ್ನೊಂದು ದೊಡ್ಡ ಅಗತ್ಯವಿದೆ. ಅವರಲ್ಲಿ ಹೆಂಡತಿ/ಗಂಡ/ಗರ್ಲ್‌ಫ್ರೆಂಡ್/ಬಾಯ್‌ಫ್ರೆಂಡ್ ಆಗಾಗ ಬದಲಾಗುತ್ತಿರುತ್ತದೆ. ಫೇಸ್‌ಬುಕ್‌ನಂತಹ ಜಾಲತಾಣದಲ್ಲಿ ಹಳೆಯ ಚಿತ್ರವೇ ಇದ್ದರೆ ಆಭಾಸವಾಗುತ್ತದೆ. ಅದಕ್ಕೆ ಚಿತ್ರಗಳಿಗೆ ಇಂತಿಷ್ಟು ದಿನಗಳ ನಂತರ ಕಾಣಿಸದಂತೆ ಮಾಡುವ ತಂತ್ರಜ್ಞಾನದ ಅಗತ್ಯವಿದೆ.

e- ಪದ

ಜಾಲತಾಣಸೂಚಿ (ಯು.ಆರ್.ಎಲ್., URL = Uniform Resource Locator) - ಇದು ಅಂತರಜಾಲ ತಾಣವನ್ನು ಸೂಚಿಸುತ್ತದೆ. ಅಂತರಜಾಲ ತಾಣವನ್ನು ಗಣಕಗಳು ಮತ್ತು ತಾಣ ವೀಕ್ಷಕ ತಂತ್ರಾಂಶಗಳು (ಬ್ರೌಸರ್ ಸಾಫ್ಟ್‌ವೇರ್, ಉದಾ. ಇಂಟರ್‌ನೆಟ್ ಎಕ್ಸ್‌ಪ್ಲೋರರ್) ಈ ಜಾಲತಾಣಸೂಚಿಯ ಮೂಲಕ ಅಥವಾ ತಾಣದ ಅಂಕೀಯ ವಿಳಾಸದ (IP address. IP = Internet Protocol) ಮೂಲಕ ಪತ್ತೆ ಹಚ್ಚುತ್ತವೆ. ಜಾಲತಾಣಸೂಚಿಗೆ ಕೆಲವು ಉದಾಹರಣೆಗಳು - www.vishvakannada.com, www.kannadaprabha.com.

e - ಸಲಹೆ

ಆದರ್ಶ ಅವರ ಪ್ರಶ್ನೆ: ನನ್ನ ಗಣಕದಲ್ಲಿ ೪ ಗಿಗಾಬೈಟ್ ಮಾಹಿತಿಯನ್ನು ಡಿ.ವಿ.ಡಿ.ಯಲ್ಲಿ ಬರೆಯಲು ಸುಮಾರು ೩೨ ನಿಮಿಷ ತಗಲುತ್ತದೆ. ಇದು ನಿಧಾನವಾಗಲಿಲ್ಲವೇ? ಸಾಮಾನ್ಯವಾಗಿ ಎಷ್ಟು ಸಮಯ ಬೇಕಾಗುತ್ತದೆ?
ಉ: ಡಿ.ವಿ.ಡಿ. ರೈಟರ್‌ನಲ್ಲಿ ಅದರ ವೇಗವನ್ನು 8x, 12x, ಇತ್ಯಾದಿಯಾಗಿ ನಮೂದಿಸಿರುತ್ತಾರೆ. ಹೆಚ್ಚು ವೇಗದಲ್ಲಿ ಬರೆದರೆ ಕಡಿಮೆ ಸಮಯ ಸಾಕು. ಆದರೆ ನಿಧಾನವಾಗಿ ಬರೆಯುವುದು ಒಳ್ಳೆಯದು. ಡಿ.ವಿ.ಡಿ. ಬರೆಯುವಾಗ ಗಣಕದಲ್ಲಿ ಇತರೆ ಕೆಲಸ ಮಾಡಿದರೆ ಕೂಡ ವೇಗ ಕಡಿಮೆಯಾಗುತ್ತದೆ. ಹಾಗೆಯೇ ಗಣಕದಲ್ಲಿ ಹೆಚ್ಚು ಮೆಮೊರಿ ಇದ್ದರೆ ಒಳ್ಳೆಯದು.

ಕಂಪ್ಯೂತರ್ಲೆ


ಅಮೆರಿಕಾದ ಪಕ್ಕದಲ್ಲಿ ಇದೆ ಎಂದು ನಂಬಿರುವ ಬರ್ಮುಡ ತ್ರಿಕೋನ ತುಂಬ (ಕು)ಪ್ರಸಿದ್ಧ. ಅಟ್ಲಾಂಟಿಕ್ ಸಾಗರದಲ್ಲಿರುವ ಈ ಕಾಲ್ಪನಿಕ ತ್ರಿಕೋನ ಪ್ರದೇಶದಲ್ಲಿ ಹಲವಾರು ವಿಮಾನ ಮತ್ತು ಹಡಗುಗಳು ನಾಪತ್ತೆಯಾಗಿವೆ. ಇದಕ್ಕೆ ಕಾರಣ ಇದುತನಕ ಗೊತ್ತಾಗಿಲ್ಲ. ಈಗ ಗಣಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಉಪಯುಕ್ತ ಸಮಯವನ್ನು ನಾಪತ್ತೆ ಮಾಡುವ ಬರ್ಮುಡ ತ್ರಿಕೋನ ಪತ್ತೆಯಾಗಿದೆ. ಅದರ ಮೂರು ಮೂಲೆಗಳಲ್ಲಿ ಕ್ರಮವಾಗಿ ಜಿಮೈಲ್, ಫೇಸ್‌ಬುಕ್ ಮತ್ತು ಟ್ವಿಟ್ಟರ್ ಇವೆ. ಈ ಮೂರು ಸೇರಿ ಎಲ್ಲರ ಉಪಯುಕ್ತ ಸಮಯವನ್ನು ನಾಪತ್ತೆ ಮಾಡುತ್ತವೆ.