ಮಂಗಳವಾರ, ಸೆಪ್ಟೆಂಬರ್ 27, 2011

ಗಣಕಿಂಡಿ - ೧೨೩ (ಸಪ್ಟಂಬರ್ ೨೫, ೨೦೧೧)

ಅಂತರಜಾಲಾಡಿ

ಪಂಚತಂತ್ರ

ಪಂಚತಂತ್ರದ ಕಥೆ ಗೊತ್ತಿಲ್ಲದವರು ಇರಲಿಕ್ಕಿಲ್ಲ. ಹಾಗೆಂದ ತಕ್ಷಣ “ಇಲ್ಲ, ನಮಗೆ ಎಲ್ಲ ಕಥೆಗಳು ಗೊತ್ತಿಲ್ಲ. ಹಿಂದೊಮ್ಮೆ ಓದಿದ್ದೆವು, ಆದರೆ ಈಗ ನೆನಪಿಲ್ಲ” ಎನ್ನುವವರೂ ಇದ್ದಾರೆ. ದೊಡ್ಡವರಾದಂತೆ ಹಿಂದೆ ಯಾವಾಗಲೋ ಮಕ್ಕಳಾಗಿದ್ದಾಗ ಓದಿದ ಕಥೆಗಳು ಮರೆತು ಹೋಗುತ್ತವೆ. ಆದರೆ ಮಕ್ಕಳಿಗೆ ಕಥೆ ಹೇಳಲು ಅವುಗಳನ್ನು ಮತ್ತೊಮ್ಮೆ ಓದಬೇಕಾಗುತ್ತದೆ. ಪಂಚತಂತ್ರದ ಕಥೆಗಳು ಎಂದೆಂದಿಗೂ ಪ್ರಸ್ತುತ. ಪಂಚತಂತ್ರದ ಕಥೆಗಳನ್ನು ಅಂತರಜಾಲದಲ್ಲೂ (ಇಂಗ್ಲೀಶಿನಲ್ಲಿ) ಓದಬಹುದು. ಅದಕ್ಕೆಂದೇ ಒಂದು ಜಾಲತಾಣವಿದೆ. ಅದರ ವಿಳಾಸ - panchatantra.org. ಮೊನ್ನೆಯಷ್ಟೇ ಮಕ್ಕಳ ಪ್ರೀತಿಯ “ಅಂಕಲ್ ಪೈ” ತೀರಿಕೊಂಡರು. ಅವರು ಅಮರ ಚಿತ್ರ ಕಥೆಗಳ ಮೂಲಕ ಪಂಚತಂತ್ರ ಮತ್ತು ಇತರೆ ಕಥೆಗಳನ್ನು ಜನಮನದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದ್ದಾರೆ. ಅಮರ ಚಿತ್ರ ಕಥೆಗಳ ಜಾಲತಾಣ www.amarchitrakatha.com .

ಡೌನ್‌ಲೋಡ್

ಯುಎಸ್‌ಬಿ ಡ್ರೈವ್ ವೇಗ ಪತ್ತೆ ಹಚ್ಚಿ

ನೀವೊಂದು ಯುಎಸ್‌ಬಿ ಡ್ರೈವ್ ಕೊಂಡುಕೊಂಡಿದ್ದೀರಾ. ಅಂಗಡಿಯವನು ಅದು ಇಂತಿಷ್ಟು ವೇಗದಲ್ಲಿ ಮಾಹಿತಿಯನ್ನು ಬರೆಯಬಲ್ಲುದು ಹಾಗು ಇಂತಿಷ್ಟು ವೇಗದಲ್ಲಿ ಮಾಹಿತಿಯನ್ನು ಓದಬಹುದು ಎಂದು ಹೇಳಿರಬಹುದು. ಯುಎಸ್‌ಬಿ ಡ್ರೈವ್‌ನ ಓದುವ ಮತ್ತು ಬರೆಯುವ ವೇಗಗಳು ಅತಿ ದೊಡ್ಡ ಗಾತ್ರದ ಫೈಲನ್ನು ಬರೆಯುವಾಗ ಅಥವಾ ಓದುವಾಗ ಅತಿ ಮುಖ್ಯವಾಗುತ್ತವೆ. ಯುಎಸ್‌ಬಿ ಡ್ರೈವ್‌ಗಳು ಹಲವು ವೇಗಗಳಲ್ಲಿ ದೊರೆಯುತ್ತವೆ. ನೀವು ಕೊಂಡುಕೊಂಡ ಡ್ರೈವ್ ಅಂಗಡಿಯಾತ ಹೇಳಿದಷ್ಟು ವೇಗವನ್ನು ನಿಜವಾಗಿಯೂ ನೀಡುತ್ತಿದೆಯೆ ಎಂದು ಪತ್ತೆ ಹಚ್ಚುವುದು ಹೇಗೆ? ಅದಕ್ಕೆಂದೇ ಒಂದು ಉಚಿತ ತಂತ್ರಾಂಶ HD_Speed ಲಭ್ಯವಿದೆ. ಅದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/oyeBtJ.

e - ಸುದ್ದಿ

ಕಾರು ಪತ್ತೆಗೆ ತಂತ್ರಾಂಶ

ಅಮೆರಿಕದ ಮಾರುಕಟ್ಟೆ ಸಂಕೀರ್ಣಗಳಲ್ಲಿ ಕಾರು ಪಾರ್ಕಿಂಗ್ ತುಂಬ ದೊಡ್ಡದಾಗಿರುತ್ತವೆ. ಕೆಲವೊಮ್ಮೆ ಹಲವಾರು ಮಹಡಿಗಳನ್ನು ಹೊಂದಿದ್ದು ಎಲ್ಲಿ ಕಾರು ಇಟ್ಟಿದ್ದೇನೆ ಎಂದು ನೆನಪಿಟ್ಟುಕೊಳ್ಳವುದು ಕಷ್ಟವಾಗುತ್ತದೆ. ಈ ರೀತಿಯ ಬಹುಮಹಡಿಯ ಪಾರ್ಕಿಂಗ್ ಸೌಲಭ್ಯ ಈಗ ಬೆಂಗಳೂರಿಗೂ ಬಂದಿದೆ. ವ್ಯಾಪಾರ ಮುಗಿಸಿ ಬಂದು ಕಾರು ಎಲ್ಲಿಟ್ಟಿದ್ದೆ ಎಂದು ಹುಡುಕುವುದೇ ಒಮ್ಮೊಮ್ಮೆ ದೊಡ್ಡ ತಲೆನೋವಿನ ಕೆಲಸವಾಗುತ್ತದೆ. ಈಗ ಇಂತಹವರಿಗಾಗಿಯೇ ಒಂದು ತಂತ್ರಾಂಶ ತಯಾರಾಗಿದೆ. ಪಾರ್ಕಿಂಗ್ ಜಾಗದಲ್ಲಿ ಕ್ಯಾಮರ ಇರುತ್ತದೆ. ಎಲ್ಲ ಕಾರುಗಳ ನೋಂದಣಿ ಸಂಖ್ಯೆಯನ್ನು ಅದು ಗಮನಿಸುತ್ತಿರುತ್ತದೆ. ಕಾರು ಹುಡುಕುವವರು ತಮ್ಮ ಐಫೋನ್‌ನಲ್ಲಿ ತಮ್ಮ ಕಾರು ಸಂಖ್ಯೆ ನಮೂದಿಸಿದೊಡನೆ ಆ ಸಂಖ್ಯೆಯ ಕಾರು ಎಲ್ಲಿದೆ ಎಂದು ತಿಳಿಸುತ್ತದೆ. ಈ ತಂತ್ರಾಂಶವನ್ನು ಕಾರು ಕಳ್ಳರನ್ನು ಪತ್ತೆಹಚ್ಚಲೂ ಬಳಸಬಹುದು. 
 
e- ಪದ

ಡಾಟಾ ವೇರ್‌ಹೌಸ್ (data warehouse) ಯಾವುದೇ ವಿಷಯಕ್ಕೆ ಸಂಬಂಧಿಸಿದ ದತ್ತಸಂಚಯವನ್ನು ಅಥವಾ ದತ್ತಸಂಚಯಗಳನ್ನು ಸಂಗ್ರಹಿಸಿಡುವ ವ್ಯವಸ್ಥೆ ಅರ್ಥಾತ್ ದತ್ತಸಂಚಯ ಉಗ್ರಾಣ. ಹಲವು ಬಗೆಯ ನಿರ್ಧಾರಗಳನ್ನು ಕೈಗೊಳ್ಳುವಾಗ ಸಂಸ್ಥೆಗಳು ಈ ಉಗ್ರಾಣದಿಂದ ಪಡೆದ ವಿವಿಧ ಮಾದರಿಯ ವರದಿಗಳನ್ನು ಬಳಸುತ್ತವೆ.

e - ಸಲಹೆ

ರಾಜು ಅವರ ಪ್ರಶ್ನೆ: ನಾನು ದ್ವಿತೀಯ ಪಿಯುಸಿ ಆರ್ಟ್ಸ್ ವಿದ್ಯಾರ್ಥಿಯಾಗಿದ್ದು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು ಬೇಕಾಗಿವೆ. ಎಲ್ಲಿ ಸಿಗುತ್ತವೆ?
ಉ: bit.ly/mZb5xp ನೋಡಿ. 

ಕಂಪ್ಯೂತರ್ಲೆ

ಗಣಕ ತಜ್ಞ ಕೋಲ್ಯನನ್ನು ಬೆಂಗಳೂರಿನ ಸಾರಿಗೆ ಉಸ್ತುವಾರಿಗೆ ಮುಖ್ಯಸ್ಥನನ್ನಾಗಿ ನೇಮಿಸಿದರು. ಬೆಂಗಳೂರಿನಲ್ಲೆಲ್ಲ ನಮ್ಮ ಮೆಟ್ರೋ ಕೆಲಸ ನಡೆಯುತ್ತಿರುವುದರಿಂದ ರಸ್ತೆಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿವೆ. ಇಂತಹ ಸಂದರ್ಭಗಳಿಗೆಂದು ಕೋಲ್ಯ ಒಂದು ಬೋರ್ಡ್ ತಯಾರಿಸಿದ. ರಸ್ತೆ ಮುಚ್ಚಿದಾಗೆಲ್ಲ ಅದನ್ನು ಬಳಸುವಂತೆ ಆದೇಶ ಹೊರಡಿಸಿದ. ಆ ಫಲಕದಲ್ಲಿ ಹೀಗೆಂದು ಬರೆದಿತ್ತು “404 Not found -  ರಸ್ತೆ ನಾಪತ್ತೆಯಾಗಿದೆ”.

ಗುರುವಾರ, ಸೆಪ್ಟೆಂಬರ್ 22, 2011

ಗಣಕಿಂಡಿ - ೧೨೨ (ಸಪ್ಟಂಬರ್ ೧೯, ೨೦೧೧)

ಅಂತರಜಾಲಾಡಿ

ಹಕ್ಕಿ ನೋಡಿದಿರಾ?

ಸಾವಿರಾರು ಕಿಲೋಮೀಟರ್ ದೂರದಿಂದ ಹಕ್ಕಿಗಳು ವಲಸೆ ಬರುವುದು ಗೊತ್ತಿರಬಹುದು. ಮೈಸೂರಿನ ಪಕ್ಕದ ರಂಗನತಿಟ್ಟು ಇಂತಹ ಹಕ್ಕಿಗಳಿಗೆ ಖ್ಯಾತವಾಗಿದೆ. ಇದೇ ರೀತಿ ಇನ್ನೂ ಹಲವಾರು ಸ್ಥಳಗಳಲ್ಲಿ ವಲಸೆಬಂದ ಹಕ್ಕಿಗಳನ್ನು ಗಮನಿಸಬಹುದು. ಕೆಲವೊಮ್ಮೆ ಅಷ್ಟೇನೂ ಪ್ರಚಲಿತವಲ್ಲದ ಜಾಗದಲ್ಲೂ ವಲಸೆಬಂದ ಹಕ್ಕಿಗಳನ್ನು ನೋಡಬಹುದು. ಈ ವರ್ಷ ಕಂಡುಬಂದ ಹಕ್ಕಿ ಪ್ರಭೇದ ಇನ್ನೊಂದು ವರ್ಷ ಕಂಡುಬರಬೇಕೆಂದೇನೂ ಇಲ್ಲ. ಹೀಗೆ ಕಂಡುಬಂದ ಹಕ್ಕಿಗಳನ್ನು ವರದಿ ಮಾಡಿ ಅವುಗಳ ಬಗ್ಗೆ ಮಾಹಿತಿಸಂಚಯ ಮಾಡಲೆಂದೇ ಒಂದು ಜಾಲತಾಣವಿದೆ. ಅದರ ವಿಳಾಸ - www.migrantwatch.in. ಈ ಜಾಲತಾಣದಲ್ಲಿ ನೋಂದಾಯಿಸಿಕೊಂಡು ನೀವು ಗಮನಿಸಿದ ವಲಸೆಹಕ್ಕಿಗಳ ಬಗ್ಗೆ ಮಾಹಿತಿ ದಾಖಲಿಸಬಹುದು.

ಡೌನ್‌ಲೋಡ್

ಫೋಟೋದಿಂದ ಕಲಾಚಿತ್ರಕ್ಕೆ

ಫೋಟೋ ನೋಡಿಕೊಂಡು ಅದರಂತೆಯೇ ಇರುವ ಕಲಾಚಿತ್ರ ರಚಿಸುವ ಕಲಾವಿದರನ್ನು ಕಂಡಿರಬಹುದು. ಅಂತಹವರ ಕೈಯಿಂದ ನಿಮ್ಮ ಅಥವಾ ನಿಮ್ಮ ಆಪ್ತರ ಚಿತ್ರಗಳನ್ನು ಬರೆಸಿರಲೂ ಬಹುದು. ಗಣಕವನ್ನು ಬಳಸಿ ಇಂತಹ ಚಿತ್ರ ತಯಾರಿಸುವಂತಿದ್ದರೆ ಒಳ್ಳೆಯದು ಅನ್ನಿಸಿದೆಯೇ? ನೀವು ಗ್ರಾಫಿಕ್ಸ್ ತಂತ್ರಾಂಶ ಪರಿಣತರಾದರೆ ಈ ಕೆಲಸವನ್ನು ನೀವೇ ಮಾಡಬಹುದು. ಆದರೆ ಅಂತಹ ಯಾವ ವಿದ್ಯೆಯೂ ನಿಮಗೆ ಗೊತ್ತಿಲ್ಲದಿದ್ದಲ್ಲಿ ಫೋಟೋದಿಂದ ಕಲಾಚಿತ್ರವನ್ನು ತಯಾರಿಸಲೆಂದೇ ಉಚಿತ ತಂತ್ರಾಂಶವೊಂದಿದೆ. ಅದರ ಹೆಸರು  FotoSketcher. ಇದನ್ನು ಬಳಸಿ ಫೋಟೋವನ್ನು ಹಲವು ನಮೂನೆಯಲ್ಲಿ ಕಲಾಚಿತ್ರವನ್ನಾಗಿಸಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ - www.fotosketcher.com.

e - ಸುದ್ದಿ

ಬೆಂಗಳೂರ್‌ಡ್ ಆಗಿಲ್ಲ

ಅಮೇರಿಕದಲ್ಲಿ ಒಂದು ಪದ ಬಳಕೆಗೆ ಬಂದಿದೆ. ಅದುವೇ ಬೆಂಗಳೂರ್‌ಡ್ (Banglored). ಅಮೆರಿಕದಿಂದ ಮಾಹಿತಿ ತಂತ್ರಜ್ಞಾನದ ಕೆಲಸಗಳು ಭಾರತಕ್ಕೆ ಅದರಲ್ಲೂ ಬೆಂಗಳೂರಿಗೆ ವರ್ಗಾವಣೆಯಾಗಿ ಅಲ್ಲಿ ನಿರುದ್ಯೋಗದ ಸಮಸ್ಯೆ ಸೃಷ್ಠಿಯಾಗಿದೆ ಎಂಬುದನ್ನು ಸೂಚಿಸಲು ಇದನ್ನು ಬಳಸುತ್ತಾರೆ. ನಾನು ಬೆಂಗಳೂರ್‌ಡ್ ಆದೆ ಎಂದರೆ ನನ್ನ ಕಂಪೆನಿ ನಾನು ಮಾಡುತ್ತಿದ್ದ ಕೆಲಸವನ್ನು ಬೆಂಗಳೂರಿಗೆ ವರ್ಗಾಯಿಸಿದೆ ಹಾಗೂ ಅದರಿಂದಾಗಿ ನಾನು ಕೆಲಸ ಕಳಕೊಂಡೆ ಎಂದು ಅರ್ಥ. ಆದರೆ ಇತ್ತೀಚೆಗೆ ಬಂದ ವರದಿ ಇದನ್ನು ಸುಳ್ಳಾಗಿಸಿದೆ. ಅಮೆರಿಕದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿಯ ನಿರುದ್ಯೋಗವು ಶೇಕಡ ೪.೭ರಿಂದ ೩.೮ಕ್ಕೆ ಇಳಿದಿದೆ. ಇದೇ ಸಮಯದಲ್ಲಿ ಅಮೆರಿಕದಲ್ಲಿ ನಿರುದ್ಯೋಗವು ಶೇಕಡ ೮.೯ರಿಂದ ೯.೧ಕ್ಕೆ ಏರಿದೆ. 
 
e- ಪದ

ದತ್ತಸಂಚಯ (database) - ಗಣಕದಲ್ಲಿ ಕ್ರಮಬದ್ಧವಾಗಿ ಜೋಡಿಸಿದ ದತ್ತಾಂಶಗಳ (ಮಾಹಿತಿ ತುಣುಕು) ಗುಚ್ಛ. ಈ ದತ್ತಗಳನ್ನು ಹಲವು ವಿಧಗಳಲ್ಲಿ ಜೋಡಿಸಿಡಲಾಗುತ್ತದೆ. ದತ್ತಸಂಚಯಗಳಿಗೆ ಉದಾಹರಣೆಗಳು - ಗ್ರಂಥಾಲಯದಲ್ಲಿಯ ಪುಸ್ತಕಗಳ ವಿವರಗಳು, ಕಂಪೆನಿಯಲ್ಲಿರುವ ನೌಕರರ ಮಾಹಿತಿಗಳು, ಬಸ್ ವೇಳಾಪಟ್ಟಿ -ಇತ್ಯಾದಿ. ಗಣಕ ಬಳಸಿ ನಡೆಸುವ ಬಹುಪಾಲು ಕೆಲಸಗಳು ದತ್ತಸಂಚಯಗಳನ್ನು ಬಳಸಿಯೇ ಆಗುತ್ತವೆ.

e - ಸಲಹೆ


ಶ್ರೀಹರ್ಷ ಅವರ ಪ್ರಶ್ನೆ: ನಾನು ಪ್ರೌಢ ಶಾಲಾ ಶಿಕ್ಷಕ. ನನಗೆ ಹತ್ತನೆಯ ತರಗತಿಯ ಮಾದರಿ ಮತ್ತು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು ಬೇಕು. ಆವು ಅಂತರಜಾಲದಲ್ಲಿ ದೊರೆಯುತ್ತವೆಯೇ?
ಉ: ಕರ್ನಾಟಕ ಸರಕಾರದ ಪ್ರೌಢ ಶಿಕ್ಷಣ ಇಲಾಖೆಯವರ ಜಾಲತಾಣದಲ್ಲಿದೆ. ಜಾಲತಾಣಸೂಚಿ - bit.ly/pu5cUW 

ಕಂಪ್ಯೂತರ್ಲೆ

ದಿನಕ್ಕೊಂದು ಆಪಲ್ ದೂರವಿಡುವುದು ವೈದ್ಯರನ್ನು - ಇದು ಹಳೆಯ ಗಾದೆ.
ದಿನಕ್ಕೊಂದು ಆಪಲ್ ಉತ್ಪನ್ನ ದಿವಾಳಿಗೆ ದಾರಿ - ಇದು ಇಂದಿನ ಗಾದೆ.

ಬುಧವಾರ, ಸೆಪ್ಟೆಂಬರ್ 14, 2011

ಗಣಕಿಂಡಿ - ೧೨೧ (ಸಪ್ಟಂಬರ್ ೧೨, ೨೦೧೧)

ಅಂತರಜಾಲಾಡಿ

ಪಿಡಿಎಫ್‌ನಿಂದ ಎಕ್ಸೆಲ್‌ಗೆ 

ನಿಮಗೆ ಒಬ್ಬರು ಒಂದು ಪಿಡಿಎಫ್ ಕಡತ ಕಳುಹಿಸುತ್ತಾರೆ. ಅದು ಒಂದು ಅರ್ಜಿ ಆಗಿರುತ್ತದೆ ಅಥವಾ ಒಂದು ಕೋಷ್ಟಕವಾಗಿರುತ್ತದೆ. ಅದನ್ನು ತುಂಬಿಸಿ ಅವರಿಗೆ ವಾಪಾಸು ಕಳುಹಿಸಬೇಕು. ಇಂತಹ ಸಂದರ್ಭದಲ್ಲಿ ಉಪಯೋಗಕ್ಕೆ ಬರುವುದು ಪಿಡಿಎಫ್‌ನಿಂದ ಮೈಕ್ರೋಸಾಫ್ಟ್ ಎಕ್ಸೆಲ್‌ಗೆ ಪೈಲನ್ನು ಬದಲಾಯಿಸುವ ತಂತ್ರಾಂಶ. ಆದರೆ ಅಂತಹ ಬಹುತೇಕ ತಂತ್ರಾಂಶಗಳನ್ನು ಹಣ ಕೊಟ್ಟು ಕೊಳ್ಳಬೇಕು. ಪಿಡಿಎಫ್ ಫೈಲ್‌ಗಳನ್ನು ಎಕ್ಸೆಲ್ ಫೈಲ್‌ಗಳಾಗಿ ಪರಿವರ್ತಿಸಲು ಒಂದು ಜಾಲತಾಣ ಇದೆ. ಅಲ್ಲಿ ನಿಮ್ಮ ಪಿಡಿಎಫ್ ಕಡತವನ್ನು ಸೇರಿಸಿದರೆ ಅದು ಕೆಲವೇ ನಿಮಷಗಳಲ್ಲಿ ಅದನ್ನು ಮೈಕ್ರೋಸಾಫ್ಟ್ ಎಕ್ಸೆಲ್ ಕಡತವಾಗಿ ಪರಿವರ್ತಿಸಿ ನೀಡುತ್ತದೆ. ಆ ಜಾಲತಾಣದ ವಿಳಾಸ - www.pdftoexcelonline.com. ನಿಮಗೆ ಆ ತಂತ್ರಾಂಶವನ್ನು ಕೊಂಡುಕೊಳ್ಳಬೇಕು ಎಂದೆನಿಸಿದರೆ ಇದೇ ಜಾಲತಾಣದಿಂದ ಕೊಳ್ಳಬಹುದು.

ಡೌನ್‌ಲೋಡ್

ರಸಾಯನಶಾಸ್ತ್ರಜ್ಞರಿಗೆ

ರಸಾಯನಶಾಸ್ತ್ರದಲ್ಲಿ ಒಂದು ಪ್ರಮುಖ ವಿಷಯ ಅಣುಗಳ ರಚನೆ ಮತ್ತು ಅವುಗಳನ್ನು ತೋರಿಸುವುದು. ಕಾಗದದಲ್ಲಿ ಹಲವು ವಿಧದಲ್ಲಿ ಸೂತ್ರ ಪ್ರಕಾರ ಅಣು ರಚನೆಗಳನ್ನು ತೋರಿಸಬಹುದು. ಆದರೂ ಕೆಲವು ಸಂದರ್ಭಗಳಲ್ಲಿ ಮೂರು ಆಯಾಮದಲ್ಲಿ ಅವುಗಳನ್ನು ಮೂಡಿಸಿದರೇ ಅದು ಹೆಚ್ಚು ಸ್ಪಷ್ಟವಾಗುವುದು. ಅಣುಗಳ ರಚನೆಯನ್ನು ಗಣಕದಲ್ಲಿ ತಯಾರಿಸಲು ಅನುವು ಮಾಡಿಕೊಡುವ ತಂತ್ರಾಂಶ Chemitorium. ಪರಮಾಣುಗಳನ್ನು ಬಳಸಿ ಅಣುಗಳ ರಚನೆಯನ್ನು ಮೂಡಿಸಲು ಇದು ಸಹಾಯಮಾಡುತ್ತದೆ. ಸಾಮಾನ್ಯ ಅಣುಗಳ ರಚನೆ ಅದಕ್ಕೆ ಮೊದಲೇ ಗೊತ್ತಿರುತ್ತದೆ. ಪರಮಾಣುಗಳನ್ನು ತಂದು ಜೋಡಿಸಿದರೆ ಸಾಕು. ಮೂಡಿದ ರಚನೆಯನ್ನು ಮೂರು ಆಯಾಮಗಳಲ್ಲಿ ನೋಡಬಹುದು. ಅದನ್ನು ವಿವಿಧ ಕೋನಗಳಲ್ಲಿ ತಿರುಗಿಸಬಹುದು ಹಾಗೂ ಇತರೆ ತಂತ್ರಾಂಶಗಳಿಗೆ ರಫ್ತು ಮಾಡಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/rnwx03. ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಉಪಯುಕ್ತ ತಂತ್ರಾಂಶ.

e - ಸುದ್ದಿ

ಸುಳ್ಳು ತಂತ್ರಾಂಶಕ್ಕೆ ದಂಡ

ಸಾಮಾನ್ಯವಾಗಿ ಗುಣವಾಗದ ಖಾಯಿಲೆಗಳನ್ನು ಗುಣ ಮಾಡುತ್ತೇವೆ ಎಂದು ಜಾಹೀರಾತು ನೋಡಿರುತ್ತೀರಿ. ಅದೇ ರೀತಿ ಐಫೋನ್ ಮೂಲಕ ಮೊಡವೆಗಳನ್ನು ಗುಣ ಮಾಡುತ್ತೇವೆ ಎಂದು ಎರಡು ಕಂಪೆನಿಗಳು ಜಾಹೀರಾತು ನೀಡಿ ಅವುಗಳನ್ನು ಮಾರಿ ದುಡ್ಡು ಮಾಡುತ್ತಿದ್ದವು. ಅವರ ಪ್ರಕಾರ ಐಫೋನ್‌ನ ಪರದೆಯಿಂದ ಕೆಲವು ವಿಶಿಷ್ಟ ಬಣ್ಣದ ಬೆಳಕುಗಳನ್ನು ಹೊಮ್ಮಿಸಿ ಅದನ್ನು ಮೊಡವೆ ಇರುವ ಪ್ರದೇಶದ ಮೇಲೆ ಬೀಳಿಸಿದರೆ ಮೊಡವೆ ಗುಣವಾಗುತ್ತದೆ. ಇದನ್ನು ಪ್ರಯೋಗಶಾಲೆಯಲ್ಲಿ ಪರಿಶೀಲಿಸಿ ಇದು ಸುಳ್ಳು ಜಾಹೀರಾತು ಎಂದು ಸರಕಾರವು ನಿರ್ಧರಿಸಿತು. ಅಂತೆಯೇ ಕಂಪೆನಿಗಳಿಗೆ ತಿಳಿಸಿ ಆ ತಂತ್ರಾಂಶಗಳನ್ನು ಮಾರುಕಟ್ಟೆಯಿಂದ ವಾಪಾಸು ಪಡೆಯಲಾಯಿತು ಮತ್ತು ಕಂಪೆನಿಗಳಿಗೆ ದಂಡ ವಿಧಿಸಲಾಯಿತು. ನಮ್ಮ ದೇಶದಲ್ಲಿ?   
 
e- ಪದ

ದತ್ತ (data) - ಗಣಕಗಳಲ್ಲಿ ದಾಖಲಿಸುವ ಹಾಗೂ ಸಂಗ್ರಹಿಸುವ ಮಾಹಿತಿ. ಸಾಮಾನ್ಯವಾಗಿ ಈ ಪದವನ್ನು ಪಠ್ಯವಲ್ಲದ ದ್ವಿಮಾನ ಅಂಕೀಯ ಮಾಹಿತಿಯ ಬಗ್ಗೆ ಹೇಳುವಾಗ ಬಳಸುತ್ತಾರೆ. ಗಣಕಕ್ಕೆ ನೀಡುವ ಆದೇಶಗುಚ್ಛಕ್ಕೆ ಪ್ರೋಗ್ರಾಮ್ (ಕ್ರಮವಿಧಿ) ಎನ್ನುತ್ತಾರೆ. ಕ್ರಮವಿಧಿಯು ದತ್ತವನ್ನು ಬಳಸಿ ಕ್ರಮವಿಧಿಯಲ್ಲಿ ನೀಡಿದ ಸೂತ್ರಗಳ ಪ್ರಕಾರ ಕೆಲಸ ಮಾಡಿ ದತ್ತವನ್ನು ಸಂಸ್ಕರಿಸಿ ದೊರೆತ ಮಾಹಿತಿಯನ್ನು ಹೊರನೀಡುತ್ತದೆ.

e - ಸಲಹೆ

ಪ್ರವೀಣರ ಪ್ರಶ್ನೆ: ನಾನು ಯಾವುದೇ ತಂತ್ರಾಂಶದಲ್ಲಿ ನಕಲು ಮಾಡಿ ಅಂಟಿಸುವಾಗ (copy and paste) “file integrity violated” ಎಂಬ ದೋಷಸಂದೇಶ ಬರುತ್ತಿದೆ. ಇದಕ್ಕೇನು ಪರಿಹಾರ?
ಉ: ಬಹುಶಃ ನೀವು teracopy ಎಂಬ ತಂತ್ರಾಂಶವನ್ನು ಬಳಸುತ್ತಿರಬೇಕು. ಅದನ್ನು ತೆಗೆದುಹಾಕಿ ಪ್ರಯತ್ನಿಸಿ.

ಕಂಪ್ಯೂತರ್ಲೆ

ಕೋಲ್ಯ ಉವಾಚ: ಈ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧ ಆಂದೋಲನ ತುಂಬ ಅತಿಯಾಯಿತು. ನನ್ನ ಕಂಪ್ಯೂಟರ್‌ನಲ್ಲಿ ಯಾವ ಫೈಲ್ ತೆರೆಯಲು ಹೊರಟರೂ “file corrupted” ಎಂದು ಹೇಳುತ್ತಿದೆ.

ಸೋಮವಾರ, ಸೆಪ್ಟೆಂಬರ್ 5, 2011

ಗಣಕಿಂಡಿ - ೧೨೦ (ಸಪ್ಟಂಬರ್ ೦೫, ೨೦೧೧)

ಅಂತರಜಾಲಾಡಿ

ನಾವು ಶಿಕ್ಷಕರು

ಅಂತರಜಾಲದಲ್ಲಿ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ -ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಸಿಗುತ್ತದೆ. ಶಿಕ್ಷಕರು ಈ ಮಾಹಿತಿಗಳನ್ನು ಬಳಸಿಕೊಳ್ಳಬಹುದು. ತಮ್ಮ ಪಾಠಗಳಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬಹುದು. ಆದರೆ ಶಿಕ್ಷಕರಿಗಾಗಿಯೇ ಮಾಹಿತಿಕೋಶ ಅಥವಾ ಜಾಲತಾಣ ಇದೆಯೇ? ಇದೆ. ಅಂತಹ ಒಂದು ಜಾಲತಾಣ www.wetheteachers.com. ಇದು ಶಿಕ್ಷಕರಿಂದ ಶಿಕ್ಷಕರಿಗಾಗಿ ನಿರ್ಮಾಗೊಂಡ ಜಾಲತಾಣ. ಶಿಕ್ಷಕರು ಇತರೆ ಶಿಕ್ಷಕರ ಜೊತೆ ಪಾಠ ಮಾಡಲು ಸಹಾಯಕಾರಿಯಾದ ಹಲವಾರು ಮಾಹಿತಿಗಳನ್ನು ಈ ಜಾಲತಾಣ ಮೂಲಕ ಹಂಚಿಕೊಳ್ಳಬಹುದು. ಅವು ಸ್ಲೈಡ್, ಪಠ್ಯ, ವಿದ್ಯಾರ್ಥಿಗಳಿಗೆ ನೀಡುವ ಚಟುವಟಿಕೆ, ಶಿಕ್ಷಕರ ದಿನಚರಿ, ವಿದ್ಯಾರ್ಥಿಗಳ ಅಥವಾ ಶಾಲೆಗೆ ಅಗತ್ಯ ದತ್ತಸಂಚಯದ ವಿನ್ಯಾಸ, ಶಿಕ್ಷಕರಿಗೆ ಉಪಯುಕ್ತ ತಂತ್ರಾಂಶ, ಇತ್ಯಾದಿ ಇರಬಹುದು. ನೀವು ಶಿಕ್ಷಕರಾದರೆ ಈ ಜಾಲತಾಣಕ್ಕೆ ಖಂಡಿತ ಭೇಟಿ ನೀಡಬೇಕು. ಇದು ಕೆಲವು ಶಿಕ್ಷಕರು ಸೇರಿ ಪ್ರಾರಂಭಿಸಿದ ಜಾಲತಾಣ. ಇತ್ತೀಚೆಗೆ ಖಾಸಗಿ ಕಂಪೆನಿಯೊಂದು ಈ ಜಾಲತಾಣವನ್ನು ಕೊಂಡುಕೊಂಡಿದೆ. ಆದರೆ ಇದರ ಮೂಲ ಉದ್ದೇಶಕ್ಕೆ ಭಂಗ ಬಾರದ ರೀತಿಯಲ್ಲಿ ಇದನ್ನು ಮುಂದುವರೆಸಿಕೊಂಡು ಹೋಗುವುದಾಗಿ ಅದು ಹೇಳಿಕೊಂಡಿದೆ. 

ಡೌನ್‌ಲೋಡ್

ಪದಕೋಶ

ಇಂಗ್ಲಿಶ್ ಭಾಷೆಗೆ ನಿಘಂಟು ಮತ್ತು ಸಮಾನಾರ್ಥ ಪದಕೋಶಗಳು ಹಲವಾರು ಲಭ್ಯವಿವೆ. ಅಂತಹ ಒಂದು ಉಚಿತ ಪದಕೋಶ ಮತ್ತು ಸಮಾನಾರ್ಥ ಪದಕೋಶವನ್ನು wordweb.info ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಉಚಿತ ಮತ್ತು ವಾಣಿಜ್ಯಕ ಎಂಬ ಎರಡು ಆವೃತ್ತಿಗಳಿವೆ. ಉಚಿತ ಆವೃತ್ತಿಯಲ್ಲಿ ಸುಮಾರು ೧,೫೦,೦೦೦ ಪದಗಳಿವೆ ಮತ್ತು ೫,೦೦೦ ಪದಗಳಿಗೆ ಮಾತ್ರ ಉಚ್ಛಾರವಿದೆ. ಇದು ಮೈಕ್ರೋಸಾಫ್ಟ್ ವರ್ಡ್ ಜೊತೆ ಸುಲಲಿತವಾಗಿ ಮಿಳಿತವಾಗುತ್ತದೆ. ವರ್ಡ್‌ನಲ್ಲಿ ಬೆರಳಚ್ಚು ಮಾಡುತ್ತಿದ್ದಂತೆ ಯಾವುದೇ ಪದದ ಅರ್ಥ ಬೇಕಿದ್ದರೆ ಅಥವಾ ಬಳಸಿದ ಪದಕ್ಕೆ ಸಮಾನಾರ್ಥವಾದ ಬೇರೆ ಪದ ಬಳಸಬೇಕಿದ್ದರೆ ಒಂದು ಸರಳವಾದ ಕೀಲಿಸರಣಿ ಒತ್ತಿದರೆ ಆಯಿತು. ಅದು ನೀಡುವ ಆಯ್ಕೆಯಲ್ಲಿ ನಿಮಗಿಷ್ಟವಾದ ಪದವನ್ನು ಬಳಸಬಹುದು. ಇದೇ ಜಾಲತಾಣದಲ್ಲಿ ಮೊಬೈಲ್ ಫೋನ್‌ಗಳಿಗೂ ಇದೇ ತಂತ್ರಾಂಶದ ಆವೃತ್ತಿ ಲಭ್ಯವಿದೆ.

e - ಸುದ್ದಿ

ತನ್ನ ಫೋಟೋ ತೆಗೆದು ಸಿಕ್ಕಿಬಿದ್ದ ಕಳ್ಳ

ಕಳ್ಳನೊಬ್ಬ ಒಬ್ಬಾಕೆಯ ಫೋನ್ ಕದ್ದ. ಆತನಿಗೆ ತನ್ನ ಫೋಟೋ ತೆಗೆಯುವ ಹುಚ್ಚು ಇತ್ತು. ಫೋನಿನಲ್ಲಿ ಇದ್ದ ಕ್ಯಾಮರಾ ಬಳಸಿ ತನ್ನ ಫೋಟೋ ತಾನೇ ಕ್ಲಿಕ್ಕಿಸಿದ. ಆತನ ದುರದೃಷ್ಟಕ್ಕೆ ಹಾಗೂ ಫೋನ್ ಕಳಕೊಂಡಾಕೆಯ ಅದೃಷ್ಟಕ್ಕೆ ಆ ಫೋನಿನಲ್ಲಿ ಫೋಟೋಬಕೆಟ್ ತಂತ್ರಾಂಶ ಇತ್ತು. ಅದು ಆ ಫೋನ್ ಬಳಸಿ ಏನೇ ಫೋಟೋ ತೆಗೆದರೂ ಅದನ್ನು ಫೋಟೋಬಕೆಟ್ ತಾಲತಾಣದಲ್ಲಿದ್ದ ಆಕೆಯ ಖಾತೆಗೆ ಸೇರಿಸುತ್ತಿತ್ತು. ಕಳ್ಳನ ಫೋಟೋವೂ ಅದೇ ರೀತಿ ಅಲ್ಲಿಗೆ ಹೋಗಿ ಸೇರಿಕೊಂಡಿತು. ಅಲ್ಲಿ ಕಳ್ಳನ ಫೋಟೋ ನೋಡಿದ ಆಕೆ ಅದನ್ನು ಪೋಲೀಸರಿಗೆ ತಿಳಿಸಿದಳು. ಮುಂದೇನಾಯಿತು ಎಂದು ವಿವರಿಸುವ ಅಗತ್ಯ ಇಲ್ಲ ತಾನೆ? (ಫೋಟೋಬಕೆಟ್ ಪಿಕಾಸಾ, ಫ್ಲಿಕರ್ ಮಾದರಿಯಲ್ಲಿ ಫೊಟೋಗಳನ್ನು ಹಂಚಿಕೊಳ್ಳುವ ಒಂದು ಜಾಲತಾಣ).   
 
e- ಪದ

ಮ್ಯಾಂಗೋ (Mango) - ಮೈಕ್ರೋಸಾಫ್ಟ್ ವಿಂಡೋಸ್ ಫೋನ್‌ನ ಆವೃತ್ತಿ ೭.೧ ರ ಸಂಕೇತನಾಮ. ಸ್ಮಾರ್ಟ್‌ಫೋನ್ ಕಾರ್ಯಾಚರಣ ವ್ಯವಸ್ಥೆಗಳಲ್ಲಿ (operating system) ವಿಂಡೋಸ್ ಫೋನ್ ಕೂಡ ಒಂದು. ಮ್ಯಾಂಗೋದಲ್ಲಿ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ನೀಡಲಾಗಿದೆ. ಮ್ಯಾಂಗೋ ಅಳವಡಿಸಿದ ಸ್ಮಾರ್ಟ್‌ಫೋನ್ ಇನ್ನೂ ಜಾಗತಿಕ ಮಾರುಕಟ್ಟೆಗೆ ಹಾಗೂ ಭಾರತಕ್ಕೆ ತಲುಪಿಲ್ಲ.

e - ಸಲಹೆ

ಹಲವು ಮಂದಿ ಮತ್ತೆ ಮತ್ತೆ ಕೇಳುತ್ತಿರುವ ಪ್ರಶ್ನೆ: ಕನ್ನಡ ಚಲನಚಿತ್ರ ಹಾಗೂ ಹಾಡುಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಯಾವ ಜಾಲತಾಣದಲ್ಲಿ ಸಿಗುತ್ತದೆ?
ಉ: ಚಲನಚಿತ್ರ ಹಾಗೂ ಹಾಡುಗಳನ್ನು ಅವುಗಳ ಹಕ್ಕುಸ್ವಾಮ್ಯವುಳ್ಳವರ ಅನುಮತಿಯಿಲ್ಲದೆ ಅಥವಾ ಅವುಗಳನ್ನು ಹಣನೀಡಿ ಕೊಂಡುಕೊಳ್ಳದೆ ಡೌನ್‌ಲೋಡ್ ಮಾಡಿಕೊಳ್ಳುವುದು ಕಾನೂನು ಪ್ರಕಾರ ಅಪರಾಧ. ಅಂತರಜಾಲದಲ್ಲಿ ಈ ರೀತಿ ಕಾನೂನುಬಾಹಿರವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಅನುವು ಮಾಡಿಕೊಡುವ ಕೆಲವು ಜಾಲತಾಣಗಳೂ ಇವೆ. ಆದರೆ ಅವು ಕಾನೂನುಬಾಹಿರವಾದುದರಿಂದ ಅವುಗಳ ಕೊಂಡಿಯನ್ನು ಗಣಕಿಂಡಿ ಅಂಕಣದಲ್ಲಿ ನೀಡುವಂತಿಲ್ಲ. ನೀವು ಕೂಡ ಕಾನೂನುಬಾಹಿರವಾಗಿ ಯಾವುದೇ ಹಾಡು, ಚಲನಚಿತ್ರ, ತಂತ್ರಾಂಶ ಡೌನ್‌ಲೋಡ್ ಮಾಡಬೇಡಿ.

ಕಂಪ್ಯೂತರ್ಲೆ

“ನನ್ನಲ್ಲಿ ಟ್ವಿಟ್ಟರ್, ಫೇಸ್‌ಬುಕ್, ಆರ್ಕುಟ್, ಗೂಗ್ಲ್+, ಫೋರ್‌ಸ್ಕ್ವೇರ್, ಎಲ್ಲ ಇವೆ. ನಿನ್ನಲ್ಲಿ ಏನಿದೆ?”
“ನನ್ನಲ್ಲಿ ಕೆಲಸವಿದೆ”