ಸೋಮವಾರ, ನವೆಂಬರ್ 21, 2011

ಗಣಕಿಂಡಿ - ೧೩೧ (ನವಂಬರ್ ೨೧, ೨೦೧೧)

ಅಂತರಜಾಲಾಡಿ

ಉಚಿತ ಗಣಿತ

ಗಣಿತ ಎಂದರೆ ಕಬ್ಬಿಣದ ಕಡಲೆ ಎನ್ನುವವರು ಬಹುಮಂದಿ. ಗಣಿತ ಎಂದರೆ ಸುಲಲಿತ ಎನ್ನುವರೂ ಇದ್ದಾರೆ. ಗಣಿತವನ್ನು ಕಲಿಸಲು ನೂರಾರು ಜಾಲತಾಣಗಳಿವೆ. ಹೆಚ್ಚಿನವು ಇಂಗ್ಲಿಶಿನಲ್ಲಿವೆ. ಕನ್ನಡದಲ್ಲಿ? ಅದೂ ಇದೆ. ಹೌದು ಕನ್ನಡ ಭಾಷೆಯಲ್ಲಿ ಗಣಿತವನ್ನು ಹೇಳಿಕೊಡುವ ಜಾಲತಾಣ www.freeganita.com. ಇದು ಸಂಪೂರ್ಣ ಉಚಿತ. ಪ್ರೌಢಶಾಲೆಯ ಪಠ್ಯಪುಸ್ತಕದಲ್ಲಿರುವ ಕೆಲವು ಸಮಸ್ಯೆಗಳು, ಪರಿಹಾರಗಳು, ಇತರೆ ವಿಷಯಗಳು ಇಲ್ಲಿವೆ. ಜೊತೆಗೆ ಪಠ್ಯದಲ್ಲಿಲ್ಲದ ಕೆಲವು ವಿಷಯಗಳೂ ಇವೆ. ವಿದ್ಯಾರ್ಥಿಗಳಿಗೂ ಅಧ್ಯಾಪಕರುಗಳಿಗೂ ಉಪಯುಕ್ತ ಜಾಲತಾಣ. ಕೊಂಡುಕೊಳ್ಳಲು ಡಿವಿಡಿಯೂ ಲಭ್ಯವಿದೆ.

ಡೌನ್‌ಲೋಡ್

ಟಚ್‌ಪ್ಯಾಡ್ ನಿರ್ಬಂಧಿಸಿ

ಲ್ಯಾಪ್‌ಟಾಪ್ ಗಣಕಗಳಲ್ಲಿರುವ ಟಚ್‌ಪ್ಯಾಡ್ ತುಂಬ ಉಪಯುಕ್ತ ಸಾಧನ. ಇದನ್ನು ಮೌಸ್ ರೀತಿಯಲ್ಲಿ ಬಳಸಬಹುದು ಮಾತ್ರವಲ್ಲ ಬಹುಪಾಲು ಸಮಯ ಹಾಗೆಯೇ ಬಳಸಲಾಗುತ್ತದೆ. ಇದರ ಮೇಲೆ ಬೆರಳು ಅಥವಾ ಅಂಗೈ ಇಟ್ಟರೆ ಅದು ಅದನ್ನು ಅರ್ಥೈಸಿಕೊಂಡು ಕೆಲಸ ಮಾಡುತ್ತದೆ. ಅಂದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕರ್ಸರ್ ಅನ್ನು ತೆಗೆದುಕೊಂಡು ಹೋಗಲು ಇದನ್ನು ಬಳಸಬಹುದು. ಆದರೆ ಬೆರಳಚ್ಚು ಮಾಡುತ್ತಿರುವಾಗ ಕೈ ಅಥವಾ ಬೆರಳು ಇದಕ್ಕೆ ತಗುಲಿದರೆ ಕರ್ಸರ್ ಇನ್ನೆಲ್ಲಿಗೋ ಧುಮುಕಿ ತೊಂದರೆಯಾಗುತ್ತದೆ. ಪ್ರತ್ಯೇಕ ಮೌಸ್ ಇದ್ದರಂತೂ ಈ ಟಚ್‌ಪ್ಯಾಡ್‌ನ ಅಗತ್ಯವೇ ಇಲ್ಲ. ಈ ಟಚ್‌ಪ್ಯಾಡ್ ಅನ್ನು ತಾತ್ಕಲಿಕವಾಗಿ ನಿರ್ಬಂಧಿಸಲು ಅನುವು ಮಾಡಿಕೊಡುವ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ touchpad-blocker.com.

e - ಸುದ್ದಿ

ಬ್ಲಾಗಿಸಿದ್ದಕ್ಕೆ ಹತ್ಯೆ

ಮೆಕ್ಸಿಕೊದಲ್ಲಿ ಮಾದಕ ವಸ್ತುಗಳ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಅದನ್ನು ಅವಲಂಬಿಸಿ ರಹಸ್ಯ ತಂಡಗಳು ಕೆಲಸ ಮಾಡುತ್ತಿವೆ. ಅವು ತುಂಬ ಅಪಾಯಕಾರಿ. ಮನುಷ್ಯರ ಜೀವದ ಜೊತೆ ಚೆಲ್ಲಾಡುವುದು ಅವರಿಗೆ ಅತಿ ಸಹಜ. ಇಂತಹ ತಂಡಗಳನ್ನು ವಿರೋಧಿಸಿ ಕೆಲಸ ಮಾಡುವ ಸ್ವಸಹಾಯ ಸಂಸ್ಥೆ, ವ್ಯಕ್ತಿಗಳೂ ಇದ್ದಾರೆ. ಅಂತಹ ಕೆಲವರು ಝೀಟ ಹೆಸರಿನ ತಂಡದ ಚಟುವಟಿಕೆಗಳನ್ನು ವರದಿ ಮಾಡಲೆಂದೇ ಒಂದು ಬ್ಲಾಗ್ ತಯಾರಿಸಿದ್ದರು. ಅದರಲ್ಲಿ ಆಗಾಗ ಸುದ್ದಿಗಳನ್ನು ನೀಡುತ್ತಿದ್ದರು. ಎಲ್ಲೆಲ್ಲಿ ಈ ತಂಡವು ಕೆಲಸ ಮಾಡುತ್ತಿದೆ, ಅದರ ಚಟುವಟಿಕೆಗಳೇನು, ಅದು ಎಷ್ಟು ಸಮಾಜ ವಿರೋಧಿ, ಎಂದೆಲ್ಲ ಬ್ಲಾಗ್ ಬರೆಯುತ್ತಿದ್ದರು. ಈ ರೀತಿ ಬ್ಲಾಗಿಸುತ್ತಿದ್ದ ನಾಲ್ಕು ಮಂದಿಯನ್ನು ಸಪ್ಟೆಂಬರ್ ತಿಂಗಳಿನಿಂದ ಕಳೆದ ವಾರದ ತನಕದ ಸಮಯದಲ್ಲಿ ಕೊಲ್ಲಲಾಗಿದೆ. ಪತ್ರಿಕೆಗಳಲ್ಲಿ ಗೂಂಡಾಗಳ ವಿರುದ್ಧ ಬರೆದು ಜೀವ ಕಳಕೊಂಡವರು ಹಲವರಿದ್ದಾರೆ. ಈಗ ಬ್ಲಾಗ್ ಬರೆದು ಜೀವ ಕಳಕೊಂಡವರ ಕಾಲ.

e- ಪದ

ಕೀಲಿ ಲೆಕ್ಕಿಗ (keylogger) - ಗಣಕದ ಕೀಲಿಮಣೆಯಲ್ಲಿ ಯಾವಯಾವ ಕೀಲಿಗಳನ್ನು ಒತ್ತಲಾಗುತ್ತಿದೆ ಎಂದು ದಾಖಲಿಸಿಟ್ಟುಕೊಳ್ಳುವ ತಂತ್ರಾಂಶ. ಸಾಮಾನ್ಯವಾಗಿ ಇಂತಹ ತಂತ್ರಾಂಶಗಳನ್ನು ಕಂಪೆನಿಗಳಲ್ಲಿ ತಮ್ಮ ಉದ್ಯೋಗಿಗಳು ಗಣಕದಲ್ಲಿ ಏನೇನು  ಮಾಡುತ್ತಿದ್ದಾರೆ ಎಂದು ಗೂಢಚರ್ಯೆ ನಡೆಸಲು ಬಳಸುತ್ತಾರೆ. ಇಂತಹ ತಂತ್ರಾಂಶಗಳನ್ನೊಳಗೊಂಡ ಗೂಢಚರ್ಯೆಯ ತಂತ್ರಾಂಶಗಳು ತುಂಬ ಅಪಾಯಕಾರಿ. ಅವು ಕೀಲಿಮಣೆಯಲ್ಲಿ ಒತ್ತಿದ ಎಲ್ಲ ಕೀಲಿಗಳನ್ನು ಅಂದರೆ ರಹಸ್ಯಪದ (ಪಾಸ್‌ವರ್ಡ್), ಬ್ಯಾಂಕಿಂಗ್ ಸಂಬಂಧಪಟ್ಟ ಎಲ್ಲ ಮಾಹಿತಿ, ಇತ್ಯಾದಿಗಳನ್ನು ಇನ್ಯಾರಿಗೋ ಇಮೈಲ್ ಮೂಲಕ ಕಳುಹಿಸುತ್ತವೆ. ಆದುದರಿಂದ ಉತ್ತಮ ವೈರಸ್ ನಿರೋಧಕ ತಂತ್ರಾಂಶವನ್ನು ಬಳಸಿ ನಿಮ್ಮ ಗಣಕದಲ್ಲಿ ಇಂತಹ ತಂತ್ರಾಂಶಗಳು ಇಲ್ಲ ಎಂದು ಆಗಾಗ ಖಾತರಿಸಿಕೊಳ್ಳುವುದು ಅತೀ ಅಗತ್ಯ.

e - ಸಲಹೆ

ಪ್ರ: ನನಗೆ ಅಟೋಕ್ಯಾಡ್ (AutoCAD) ಪೂರ್ತಿ ಆವೃತ್ತಿ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಎಲ್ಲಿ ಸಿಗುತ್ತದೆ?
ಉ: ಅದು ಉಚಿತ ತಂತ್ರಾಂಶ ಅಲ್ಲ. ಅದನ್ನು ಹಣ ನೀಡಿ ಕೊಂಡುಕೊಳ್ಳಬೇಕು.

ಕಂಪ್ಯೂತರ್ಲೆ

ಕೋಲ್ಯನ ಗಣಕಕ್ಕೆ ಏನೋ ತೊಂದರೆ ಆಗಿತ್ತು. ಪರಿಣತನಿಂದ ಪರೀಕ್ಷಿಸಿದ. ಆತ ಹೇಳಿದ - "ನಿನ್ನ ಕಂಪ್ಯೂಟರಿನಲ್ಲಿ worm ಇದೆ". ಅಕ್ಕಿಯಲ್ಲಿ ಹುಳವಾದಾಗ ಅಥವಾ ಹುಳ ಆಗದೆ ಇರಲಿ ಎಂದು ಅಕ್ಕಿ ಡಬ್ಬದೊಳಗೆ ಬೇವಿನ ಎಲೆಗಳನ್ನು ಹಾಕುವುದನ್ನು ತಿಳಿದಿದ್ದ ಕೋಲ್ಯ, ತನ್ನ ಗಣಕದೊಳಗೆ ಒಂದಿಷ್ಟು ಬೇವಿನ ಎಲೆಗಳನ್ನು ತುಂಬಿಸಿದ.

ಸೋಮವಾರ, ನವೆಂಬರ್ 14, 2011

ಗಣಕಿಂಡಿ - ೧೩೦ (ನವಂಬರ್ ೧೪, ೨೦೧೧)

ಅಂತರಜಾಲಾಡಿ

ಕನ್ನಡದಲ್ಲಿ ಗ್ಯಾಜೆಟ್ ಲೋಕ

ಗ್ಯಾಜೆಟ್‌ಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿವೆ. ಹಳ್ಳಿಹಳ್ಳಿಗಳಿಗೂ ಅವು ತಲುಪಿವೆ. ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಮಾತ್ರವಲ್ಲ ದಿನದ ಎಲ್ಲ ೨೪ ತಾಸುಗಳಲ್ಲೂ ಅವು ಒಂದಿಲ್ಲ ಒಂದು ರೀತಿಯಲ್ಲಿ ನಮ್ಮೆಲ್ಲರ ಜೀವನವನ್ನು ಹಾಸುಹೊಕ್ಕಿವೆ. ಈ ಗ್ಯಾಜೆಟ್‌ಗಳ ಲೋಕದಲ್ಲೊಂದು ವಿಹಂಗಮ ಯಾತ್ರೆ ನಡೆಸಬೇಕೇ? ಅದಕ್ಕೆಂದೇ ನೂರಾರು ಜಾಲತಾಣಗಳು ಇಂಗ್ಲಿಶ್ ಭಾಷೆಯಲ್ಲಿವೆ. ಕನ್ನಡದಲ್ಲಿ ಇಲ್ಲವೇ ಎನ್ನುತ್ತೀರಾ? ಈಗ ಅದೂ ಸಿದ್ಧವಾಗಿದೆ. kannada.gizbot.com ಜಾಲತಾಣಕ್ಕೆ ಭೇಟಿ ನೀಡಿ ಕನ್ನಡದಲ್ಲೇ ಗ್ಯಾಜೆಟ್‌ಗಳ ಬಗ್ಗೆ ಓದಿ ತಿಳಿಯಬಹುದು. ಸದ್ಯಕ್ಕೆ ಗಣಕ, ಮೊಬೈಲ್ ಮತ್ತು ಸಂಗೀತದ ಗ್ಯಾಜೆಟ್‌ಗಳ ವಿಭಾಗಗಳಿವೆ. ಮುಂದಕ್ಕೆ ಇನ್ನೂ ಹೆಚ್ಚು ಹೆಚ್ಚು ವಿಭಾಗಗಳು ಸೇರಿಕೊಳ್ಳಬಹುದು ಎಂದು ಆಶಿಸಬಹುದು.

ಡೌನ್‌ಲೋಡ್

ಆಲಿಸಿರಿ ಮತ್ತು ಟೈಪಿಸಿರಿ

ನೀವೊಬ್ಬ ಪತ್ರಿಕಾರ್ತ. ಒಬ್ಬ ಅತಿ ಗಣ್ಯ ವ್ಯಕ್ತಿಯ ಸಂದರ್ಶನವನ್ನು ನಿಮ್ಮ ಚಿಕ್ಕ ಎಂಪಿ-೩ ಪ್ಲೇಯರ್ ಬಳಸಿ ಧ್ವನಿ ಮುದ್ರಿಸಿಕೊಂಡಿದ್ದೀರಿ. ಅದನ್ನು ಗಣಕಕ್ಕೆ ವರ್ಗಾಯಿಸಿದ್ದೀರಿ. ಗಣಕದಲ್ಲಿರುವ ಯಾವುದಾದರೊಂದು ಬಹುಮಾಧ್ಯಮ ಪ್ಲೇಯರ್ ಬಳಸಿ ಧ್ವನಿಮುದ್ರಿತ ಸಂದರ್ಶನವನ್ನು ಆಲಿಸಿ ಸಂದರ್ಶನದ ಪಠ್ಯ ತಯಾರು ಮಾಡುತ್ತೀರಿ. ಇದರಲ್ಲಿ ಒಂದು ಚಿಕ್ಕ ತೊಡಕಿದೆ. ಸಂದರ್ಶನದ ಧ್ವನಿಮುದ್ರಣವನ್ನು ಸ್ವಲ್ಪ ಆಲಿಸಬೇಕು, ನಿಲ್ಲಿಸಬೇಕು, ಬೆರಳಚ್ಚು ಮಾಡಬೇಕು, ನಂತರ ಮುಂದುವರಿಸಬೇಕು -ಹೀಗೆ ಮಾಡುವಾಗ ಸಾಮಾನ್ಯವಾಗಿ ಪ್ರತಿ ಬಾರಿಯೂ ಒಂದೆರಡು ಸೆಕೆಂಡುಗಳಷ್ಟು ಹಿಂದಕ್ಕೆ ಹೋಗಬೇಕಾಗುತ್ತದೆ. ಹೀಗೆ ಮಾಡಲೆಂದೇ Listen N Write ಹೆಸರಿನ ಒಂದು ತಂತ್ರಾಂಶ ಲಭ್ಯವಿದೆ. ಅದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/vl49dk.

e - ಸುದ್ದಿ

ಚೌರ್ಯದ ಕೈಪಿಡಿಯನ್ನೇ ಕದ್ದರೆ?

ಅಂತರಜಾಲದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಯಾವುದೇ ಫೈಲ್ ಹಂಚಿಕೊಳ್ಳಲು ಅನುವು ಮಾಡಿಕೊಡುವ ಜಾಲವ್ಯವಸ್ಥೆ ಬಿಟ್‌ಟೊರೆಂಟ್. ಇದನ್ನು ಬಳಸಿ ಸಂಗೀತ, ಚಲನಚಿತ್ರ, ಪುಸ್ತಕ, ತಂತ್ರಾಂಶ ಇತ್ಯಾದಿಗಳನ್ನು ಜನರು ಕಾನೂನುಬಾಹಿರವಾಗಿ ಹಂಚಿಕೊಳ್ಳುತ್ತಿದ್ದಾರೆ. ಆಗಿಂದಾಗ್ಗೆ ಹೀಗೆ ಹಂಚಿಕೊಳ್ಳುವವರ ಮೇಲೆ ಆಯಾ ಕೃತಿಯ ಹಕ್ಕುಸ್ವಾಮ್ಯವುಳ್ಳವರು ದಾವೆ ಹೂಡುತ್ತಲೇ ಇದ್ದಾರೆ. dummies ಹೆಸರಿನ ಮಾಲಿಕೆಯಲ್ಲಿ ನೂರಾರು ಪುಸ್ತಕಗಳು ತುಂಬ ಜನಪ್ರಿಯವಾಗಿವೆ. ಈ ಮಾಲಿಕೆಯ ಪುಸ್ತಕಗಳನ್ನು ಟೊರೆಂಟ್ ಬಳಸಿ ಹಂಚಿಕೊಂಡವರ ಮೇಲೆ ಈ ಪುಸ್ತಕಗಳ ಪ್ರಕಾಶಕರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಅಷ್ಟೇ ಆಗಿದ್ದರೆ ಇದು ಇದೇ ಮಾದರಿಯ ಇತರೆ ದಾವೆಗಳಂತೆ ಎಂದುಕೊಳ್ಳಬಹುದಿತ್ತು. ಆದರೆ ಇಲ್ಲೊಂದು ಸ್ವಾರಸ್ಯವಿದೆ. ಈ ಮಾಲಿಕೆಯಲ್ಲಿ Torrent for dummies ಎಂಬ ಪುಸ್ತಕವೂ ಇದೆ! ಕದಿಯುವುದು ಹೇಗೆ ಎಂದು ಕೈಪಿಡಿ ಬರೆದು ಅದನ್ನೇ ಕದ್ದಿದ್ದಾರೆ ಎಂದು ದೂರು ನಿಡಿದಂತಾಗಲಿಲ್ಲವೇ? ಏನಂತೀರಾ? ಅಂದಹಾಗೆ ಟೊರೆಂಟ್ ಮೂಲಕ ಹಂಚುವ ಎಲ್ಲ ಪೈಲ್‌ಗಳೂ ಕಾನೂನುಬಾಹಿರವೇನಲ್ಲ.

e- ಪದ

ಜಾಲಶೋಧಕ (search engine) - ಒಂದು ಪದ ಅಥವಾ ಪದಪುಂಜವನ್ನು ನೀಡಿದರೆ ಅದು ಯಾವ ಕಡತದಲ್ಲಿ ಇದೆ ಎಂದು ಪತ್ತೆ ಹಚ್ಚಿ ಹೇಳುವ ತಂತ್ರಾಂಶ. ಈ ವಿವರಣೆ ಪ್ರಕಾರ ಈ ಪದವನ್ನು ಗಣಕದಲ್ಲಿ ಕೆಲಸ ಮಾಡುವ ಹುಡುಕುವ ಸೌಲಭ್ಯಕ್ಕೆ ಬಳಸಬಹುದು. ಆದರೆ ಬಳಕೆಯಲ್ಲಿ ಈ ಪದವು ಅಂತರಜಾಲದಲ್ಲಿ ಮಾಹಿತಿಯನ್ನು ಹುಡುಕುವ ಜಾಲತಾಣಗಳಿಗೆ (ಉದಾ - ಗೂಗ್ಲ್, ಬಿಂಗ್, ಯಾಹೂ, ಆಲ್ಟಾವಿಸ್ತ,..) ಬಳಕೆಯಾಗುತ್ತಿದೆ.

e - ಸಲಹೆ

ಬನಶಂಕರಿಯ ಟಿ ಆರ್ ಪ್ರಕಾಶರ ಪ್ರಶ್ನೆ: ನನಗೆ ಸಿಬಿಎಸ್‌ಇಯ ಪಠ್ಯ ಪುಸ್ತಕಗಳು ಬೇಕು. ಎಲ್ಲಿ ಸಿಗುತ್ತವೆ?
ಉ: cbse.nic.in ಜಾಲತಾಣದಲ್ಲಿ.

ಕಂಪ್ಯೂತರ್ಲೆ

ಎಲ್ಲರೂ ಕನ್ನಡವನ್ನು ಇಂಗ್ಲಿಶ್ ಲಿಪಿಯಲ್ಲಿ ಬರೆದು ಓದುಗರಿಗೆ ಹಿಂಸೆ ನೀಡುವುದನ್ನು ನೋಡಿ ಸಹಿಸಲಾರದೆ ಕೋಲ್ಯ ಏನು ಮಾಡಿದ ಗೊತ್ತೆ? ಒಂದು ಪುಟದಷ್ಟು ದೊಡ್ಡ ಪೂರ್ತಿ ಇಂಗ್ಲಿಶ್ ಭಾಷೆಯ ಇಮೈಲ್ ಅನ್ನು ಕನ್ನಡ ಲಿಪಿಯಲ್ಲಿ ಬೆರಳಚ್ಚು ಮಾಡಿ ಎಲ್ಲರಿಗೂ ಕಳುಹಿಸಿದ.

ಮಂಗಳವಾರ, ನವೆಂಬರ್ 8, 2011

ಗಣಕಿಂಡಿ - ೧೨೯ (ನವಂಬರ್ ೦೭, ೨೦೧೧)

ಅಂತರಜಾಲಾಡಿ

ಕನ್ನಡದಲ್ಲಿ ಕಂಪ್ಯೂಟರ್

ಮನೆಮನೆಗಳಲ್ಲಿ ಗಣಕ ಸ್ಥಾಪನೆಯಾಗಿರುವ ಈ ಕಾಲದಲ್ಲಿ ಕನ್ನಡ ಭಾಷೆಯಲ್ಲಿ ಗಣಕ ಬಳಸುವ ಬಗ್ಗೆ ಮಾಹಿತಿ ಎಷ್ಟು ಲಭ್ಯವಿದೆ? ಉತ್ತರ ಅಷ್ಟೇನೂ ಆಶಾದಾಯಕವಾಗಿಲ್ಲ. ಕೆಲವೇ ಕೆಲವು ಮಂದಿ ಕನ್ನಡ ಭಾಷೆಯಲ್ಲಿ ಮಾಹಿತಿ ತಂತ್ರಜ್ಞಾನ (ಗಣಕ, ಅಂತರಜಾಲ, ಮೊಬೈಲ್, ಇತ್ಯಾದಿ) ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಅಂತಹ ಒಂದು ಜಾಲತಾಣ www.compuinkannada.co.cc. ಈ ಜಾಲತಾಣದಲ್ಲಿ ಗಣಕ ಎಂದರೇನು, ಅದನ್ನು ಬಳಸುವುದು ಹೇಗೆ, ಕೆಲವು ಉಪಯುಕ್ತ ಸಲಹೆ ಸೂಚನೆಗಳು ಇವೆ. ಹಾಗೆಯೇ ಕೆಲವು ಉಚಿತ ತಂತ್ರಾಂಶಗಳೂ ಇವೆ. ಮಾಹಿತಿ ತಂತ್ರಜ್ಞಾನ ಎಷ್ಟು ಅಗಾಧವಾಗಿ ಬೆಳೆದಿದೆಯೆಂದರೆ ಅದರ ಬಗ್ಗೆ ಸಮಗ್ರ ಮಾಹಿತಿ ನೀಡಲು ಇಂತಹ ಸಾವಿರಾರು ಜಾಲತಾಣಗಳು ಬೇಕಾಗಿವೆ.

ಡೌನ್‌ಲೋಡ್

ಪದ

ಗಣಕದಲ್ಲಿ ಬೆರಳಚ್ಚು ಮಾಡಿ ಆ ಮಾಹಿತಿಯನ್ನು ಉಳಿಸುವುದು, ಸ್ವಲ್ಪ ಮಟ್ಟಿನ ವಿನ್ಯಾಸ ಮಾಡುವುದು (ದಪ್ಪ, ಅಡಿಗೆರೆ, ಓರೆ, ಇತ್ಯಾದಿ), ಇಂತಹ ಎಲ್ಲ ಕೆಲಸಗಳನ್ನು ಮಾಡಲು ಅನುವು ಮಾಡಿಕೊಡುವ ತಂತ್ರಾಂಶಕ್ಕೆ ಪದಸಂಸ್ಕಾರಕ (wordprocessor) ಎಂದು ಹೆಸರು. ಇಂತಹ ತಂತ್ರಾಂಶಗಳು ಹಲವಾರಿವೆ. ಕನ್ನಡದಲ್ಲಿ ಪದಸಂಸ್ಕರಣೆ ಮಾಡಲು ಅನುವು ಮಾಡಿಕೊಡುವ ತಂತ್ರಾಂಶಗಳೂ ಹಲವಾರಿವೆ. ಇಂತಹ ಒಂದು ತಂತ್ರಾಂಶ “ಪದ”. ಇದು ದೊರೆಯುವ ಜಾಲತಾಣ www.pada.co.in. ಇದು ವಿಂಡೋಸ್ ಮಾತ್ರವಲ್ಲ ಲಿನಕ್ಸ್‌ನಲ್ಲೂ ಕೆಲಸ ಮಾಡುತ್ತದೆ. ಒಂದು ಬಹುಮುಖ್ಯ ಸಂಗತಿಯೆಂದರೆ ಇದು ಯುನಿಕೋಡ್‌ನಲ್ಲಿ ಕೆಲಸ ಮಾಡುತ್ತದೆ. ಇದನ್ನು ಕೇವಲ ಕೀಲಿಮಣೆಯ ತಂತ್ರಾಂಶವಾಗಿಯೂ ಬಳಸಬಹುದು. ಅಂದರೆ ಇದನ್ನು ಚಾಲನೆಯಲ್ಲಿಟ್ಟುಕೊಂಡು ಮೈಕ್ರೋಸಾಫ್ಟ್ ವರ್ಡ್‌ನಂತಹ ತಂತ್ರಾಂಶಗಳಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡಬಹುದು. ಇದರಲ್ಲಿ ನೀಡಿರುವ ಇನ್ನೊಂಡದು ಸವಲತ್ತೆಂದರೆ ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳ ನಡುವೆ ಲಿಪ್ಯಂತರ ಮಾಡುವುದು. ಈ ತಂತ್ರಾಂಶ ಸದ್ಯಕ್ಕೆ ವಿಂಡೋಸ್‌ನ ೩೨ ಬಿಟ್ ಆವೃತ್ತಿಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ.

e - ಸುದ್ದಿ

ಅಪ್ಪ ಮಗಳಿಗೆ ಹೊಡೆದರೆ?

೧೬ ವರ್ಷದೊಳಗಿನ ಮಗಳಿಗೆ ಅಪ್ಪ ಹೊಡೆಯುವುದು, ಅದೂ ತಪ್ಪು ಮಾಡಿದಾಗ, ಅಂತಹ ಅಪರಾಧವಲ್ಲ ಎಂದು ನೀವೆಲ್ಲ ಹೇಳಬಹುದು. ಹಾಗೆಂದು ಅಮೆರಿಕಾದ ಒಬ್ಬ ನ್ಯಾಯಾಧೀಶರೂ ಹೇಳಿಕೊಳ್ಳಬಹುದು. ಆದರೆ ಇಲ್ಲಿ ಹೊಡೆದಿದ್ದು ಒಬ್ಬ ನ್ಯಾಯಾಧೀಶರೇ. ಮಗಳು ಅಂತರಜಾಲದಿಂದ ಕೃತಿಚೌರ್ಯ ಮಾಡಿ ಸಂಗೀತ, ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಿದ್ದಕ್ಕೆ ಅಪ್ಪ ವಿಧಿಸಿದ ಶಿಕ್ಷೆ ಎಂದರೆ ಬೆಲ್ಟ್ ಮೂಲಕ ಹಲವು ಬಾರಿ ಹೊಡೆತ. ಇದು ನಡೆದುದು ಏಳು ವರ್ಷಗಳ ಹಿಂದೆ. ಈಗ ಆ ಹುಡುಗಿಗೆ ೨೩ ವರ್ಷ ಪ್ರಾಯ. ಆಕೆ ಅಕಸ್ಮಾತ್ ಆ ಪ್ರಕರಣವನ್ನು ವೀಡಿಯೋ ಮಾಡಿಟ್ಟುಕೊಂಡಿದ್ದಳು. ಈಗ ಆಕೆಯ ಅಪ್ಪ ಮತ್ತೊಮ್ಮೆ ನ್ಯಾಯಾಧೀಶರಾಗಲು ಚುನಾವಣೆಗೆ ನಿಂತಿದ್ದಾರೆ. ಮಗಳು ತನಗೆ ಅಪ್ಪ ಹೊಡೆಯುತ್ತಿರುವ ವೀಡಿಯೋವನ್ನು ಅಂತರಜಾಲದಲ್ಲಿ ಹಾಕಿದ್ದಾಳೆ. ಇಂತಹ ಕ್ರೂರಿ ಅಪ್ಪನನ್ನು ಮತ್ತೊಮ್ಮೆ ನ್ಯಾಯಾಧೀಶರನ್ನಾಗಿ ಚುನಾಯಿಸಬೇಡಿ ಎಂದು ಜನರನ್ನು ಕೇಳಿಕೊಳ್ಳುತ್ತಿದ್ದಾಳೆ.

e- ಪದ


ಕಚಡಾತಂತ್ರಾಂಶ (crapware) - ತನ್ನ ಗುಣಮಟ್ಟಕ್ಕಿಂತಲೂ ಅತಿಹೆಚ್ಚು ಗಾತ್ರಕ್ಕೆ (ಕು)ಖ್ಯಾತವಾದ ತಂತ್ರಾಂಶ. ಸಾಮಾನ್ಯವಾಗಿ ಗಣಕ ಕೊಳ್ಳುವಾಗ ಹೆಚ್ಚು ಬಿಲ್ ಮಾಡಲಿಕ್ಕೋಸ್ಕರ ಹಲವಾರು ಅನಗತ್ಯ ಹಾಗೂ ತುಂಬ ಸ್ಥಳವನ್ನು ಮತ್ತು ಮೆಮೊರಿಯನ್ನು ಆಕ್ರಮಿಸಿಕೊಳ್ಳುವ ತಂತ್ರಾಂಶಗಳನ್ನು ಗಣಕದಲ್ಲಿ ಸೇರಿಸುವ ಪರಿಪಾಠ ಕೆಲವರಿಗಿದೆ. ಇವುಗಳನ್ನೆಲ್ಲ ಕಚಡಾತಂತ್ರಾಂಶಗಳ ಪಟ್ಟಿಗೆ ಸೇರಿಸಬಹುದು.  

e - ಸಲಹೆ

ಯೋಗೇಶರ ಪ್ರಶ್ನೆ: ನನಗೆ ಪ್ರಕಾಶಕ ತಂತ್ರಾಂಶ ಬೇಕು. ಎಲ್ಲಿ ಸಿಗುತ್ತದೆ?
ಉ: ಅದು ತುಂಬ ಹಳೆಯ ತಂತ್ರಾಂಶ. ಈಗ ಅದು ಲಭ್ಯವಿಲ್ಲ. ಅಂತರಜಾಲದಲ್ಲಿ ಕೆಲವು ಜಾಲತಾಣಗಳಲ್ಲಿ ಸಿಗಬಹುದು. ಆದರೆ ಅದು ಅಧಿಕೃತವಲ್ಲ. ಅಷ್ಟೆಲ್ಲ ಕಸರತ್ತು ಮಾಡಿ ಅದು ನಿಮಗೆ ದೊರೆತರೂ ಈಗಿನ ವಿಂಡೋಸ್ ಆವೃತ್ತಿಗಳಲ್ಲಿ ಅದು ಕೆಲಸ ಮಾಡುವುದು ಅನುಮಾನ.

ಕಂಪ್ಯೂತರ್ಲೆ

ಕೋಲ್ಯ ಕಚೇರಿಗೆ ಹೋದಾಗ ಆತನ ಬಾಸ್ ಗುರ್ರಾಯಿಸಿದ “ಯಾಕೆ ಆಫೀಸಿಗೆ ಬರುತ್ತಿದ್ದೀಯಾ? ನಿನಗೆ ಇಮೈಲ್ ಓದುವ ಅಭ್ಯಾಸ ಇಲ್ಲವಾ? ನಾನು ನಿನ್ನನ್ನು ಕೆಲಸದಿಂದ ತೆಗೆದು ಹಾಕಿದ್ದೇನೆ ಎಂದು ಮೂರು ವಾರಗಳ ಹಿಂದೆಯೇ ನಿನಗೆ ಇಮೈಲ್ ಮಾಡಿದ್ದೆನಲ್ಲಾ?”   

ಮಂಗಳವಾರ, ನವೆಂಬರ್ 1, 2011

ಗಣಕಿಂಡಿ - ೧೨೮ (ಅಕ್ಟೋಬರ್ ೩೧, ೨೦೧೧)

ಅಂತರಜಾಲಾಡಿ

ಕೆಲಸ ಹುಡುಕುವ ಮುನ್ನ

ಯಾವುದಾದರೂ ಸರಿ, ಒಂದು ಕೆಲಸ ಸಿಕ್ಕಿದರೆ ಸಾಕು ಎನ್ನುವ ಕಾಲ ಈಗಿಲ್ಲ. ತಮ್ಮ ತಮ್ಮ ಆಸಕ್ತಿಗೆ ಸರಿಹೊಂದುವ ಕೆಲಸ ಮಾಡಿದರೆ ಎಲ್ಲರಿಗೂ ಒಳ್ಳೆದು. ಅದಕ್ಕೆ ಸರಿಯಾದ ಕಂಪೆನಿ ಹುಡುಕಬೇಕು. ಕಂಪೆನಿ ಸೇರುವ ಮುನ್ನ ಅಥವಾ ಕಂಪೆನಿಗೆ ಅರ್ಜಿ ಗುಜರಾಯಿಸುವ ಮುನ್ನ ಆ ಕಂಪೆನಿ ಬಗ್ಗೆ ಪೂರ್ತಿ ವಿವರ ತಿಳಿದಿದ್ದರೆ ಒಳ್ಳೆಯದು. ಕಂಪೆನಿಯ ಜಾಲತಾಣದಲ್ಲೇನೋ ಕಂಪೆನಿಯ ಬಗ್ಗೆ ವಿವರ ಇರುತ್ತದೆ. ಆದರೆ ಅದರ ಬಗ್ಗೆ ಅಲ್ಲಿ ಕೆಲಸ ಮಾಡಿದವರಿಂದ ಹಿಂಮಾಹಿತಿ (feedback) ಸಿಗುವುದಿಲ್ಲ. ಅಲ್ಲಿ ಕೆಲಸ ಮಾಡಿದವರನ್ನು ಪರಿಚಯ ಮಾಡಿಕೊಂಡು ಅವರಿಂದ ಮಾಹಿತಿ ತಿಳಿದುಕೊಳ್ಳುವುದು ಎಲ್ಲ ಸಂದರ್ಭಗಳಲ್ಲಿ ಅಸಾಧ್ಯ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಇರುವ ಜಾಲತಾಣ www.glassdoor.com. ಈ ಜಾಲತಾಣದಲ್ಲಿ ಕಂಪೆನಿಗಳ ವಿಮರ್ಶೆ ಮಾತ್ರವಲ್ಲ, ಅಲ್ಲಿ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳು, ಸಂಬಳ ಎಷ್ಟಿರಬಹುದು, ಇತ್ಯಾದಿ ಎಲ್ಲ ಮಾಹಿತಿಗಳಿವೆ.

ಡೌನ್‌ಲೋಡ್

ರೂಪಾಯಿ ಚಿಹ್ನೆ

ಭಾರತ ಸರಕಾರವು ನಮ್ಮ ರೂಪಾಯಿಗೆ ಒಂದು ಚಿಹ್ನೆಯನ್ನು ಘೋಷಿಸಿರುವುದು ತಿಳಿದಿರಬಹುದು. ಈ ಚಿಹ್ನೆ ಇತ್ತೀಚೆಗೆ ಬಂದಿರುವುದು. ಗಣಕದಲ್ಲಿ ಕೆಲಸ ಮಾಡುವ ವಿಂಡೋಸ್ ಕಾರ್ಯಾಚರಣೆಯ ವ್ಯವಸ್ಥೆಯ ಎಲ್ಲ ಆವೃತ್ತಿಗಳು ಈ ಚಿಹ್ನೆಯ ಘೋಷಣೆಗೆ ಮೊದಲೇ ಬಂದವುಗಳು. ಅದುದರಿಂದ ಗಣಕದಲ್ಲಿ ಸಹಜವಾಗಿ ರೂಪಾಯಿ ಚಿಹ್ನೆ ಇರುವುದಿಲ್ಲ. ಮೈಕ್ರೋಸಾಫ್ಟ್ ಕಂಪೆನಿ ವಿಂಡೋಸ್ ೭ ಕಾರ್ಯಾಚರಣ ವ್ಯವಸ್ಥೆಗೆ ರೂಪಾಯಿ ಸೇರಿಸಿದೆ. ಭಾರತ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯೂ ತಮ್ಮ ಸಕಲಭಾರತಿ ಫಾಂಟ್‌ನಲ್ಲಿ ರೂಪಾಯಿ ಚಿಹ್ನೆ ಸೇರಿಸಿ ಬಿಡುಗಡೆ ಮಾಡಿದೆ. ಈ ಸಕಲಭಾರತಿ ಫಾಂಟ್‌ನಲ್ಲಿ ಕನ್ನಡ ಮತ್ತು ಇತರೆ ಭಾಷೆಯ ಅಕ್ಷರಗಳಿವೆ. ಇದನ್ನು ಡೌನ್‌ಲೋಡ್ ಮಾಡಿಕೊಳ್ಳಲು bit.ly/IndRupee ಜಾಲತಾಣಕ್ಕೆ ಭೇಟಿ ನೀಡಿ. 

e - ಸುದ್ದಿ

ಎಲ್ಲವೂ ಸ್ಪರ್ಶಸಂವೇದಿ

ಇತ್ತೀಚೆಗೆ ಬರುತ್ತಿರುವ ಬಹುಪಾಲು ಮೊಬೈಲ್ ಫೋನ್‌ಗಳಲ್ಲಿ ಸ್ಪರ್ಶಸಂವೇದಿ ಪರದೆಗಳಿರುವುದನ್ನು (touchscreen) ಗಮನಿಸಿರಬಹುದು. ಬೆರಳಿನಲ್ಲಿ ಸ್ಪರ್ಶ ಮಾಡುವುದರ ಮೂಲಕ ಕೆಲಸಗಳನ್ನು ಮಾಡಬಹುದು. ಈ ಸ್ಪರ್ಶಸಂವೇದಿ ಪರದೆಗಳು ಮೊಬೈಲ್ ಮಾತ್ರವಲ್ಲ, ಟ್ಯಾಬ್ಲೆಟ್ ಗಣಕಗಳಲ್ಲಿ, ಬ್ಯಾಂಕ್‌ಗಳ ಎಟಿಎಂ ಯಂತ್ರಗಳಲ್ಲಿ, ಹೀಗೆ ಹಲವು ಕಡೆ ಬಳಕೆ ಆಗುತ್ತಿದೆ. ಇಂತಹ ಪರದೆಗಳು ವಿಶಿಷ್ಟ ವಸ್ತುವಿನಿಂದ ಮಾಡಿದವು ಆಗಿರುತ್ತವೆ. ಇತ್ತೀಚೆಗೆ ಮೈಕ್ರೋಸಾಫ್ಟ್ ಸಂಶೋಧನಾ ಪ್ರಯೋಗಶಾಲೆಯಿಂದ ಒಂದು ಸ್ವಾರಸ್ಯಕರ ಸಂಶೋಧನೆಯ ವರದಿಯಾಗಿದೆ. ಅವರು ಯಾವುದೇ ವಸ್ತುವನ್ನೂ ಸ್ಪರ್ಶಸಂವೇದಿಯಾಗಿ ಮಾಡುವ ತಂತ್ರಜ್ಞಾನವನ್ನು ಆವಿಷ್ಕರಿಸಿದ್ದಾರೆ. ಅದು ನಿಮ್ಮ ಅಂಗೈ ಕೂಡ ಆಗಿರಬಹುದು. ಇದಕ್ಕಾಗಿ ಲೇಸರ್ ಮತ್ತು ಕ್ಯಾಮರಾ ಬಳಸಿದ್ದಾರೆ. ಮುಂದೊಂದು ದಿನ ಮಾರುಕಟ್ಟೆಗೆ ಬರುವ ಫೋನ್ ಮೇಜಿಗೆ ಕೀಲಿಮಣೆಯನ್ನು ಪ್ರೊಜೆಕ್ಟ್ ಮಾಡುತ್ತದೆ ಮತ್ತು ನೀವು ಅದರ ಮೇಲೆ ಕೈಯಾಡಿಸಿದರೆ ಸಾಕು!

e- ಪದ

ದ್ವಿಮಾನ (binary) - ಎರಡೇ ಅಂಕೆಗಳಿರುವ ಸಂಖ್ಯಾಪದ್ಧತಿ. ನಾವು ಸಾಮಾನ್ಯವಾಗಿ ಬಳಸುವ ಎಣಿಕೆಯ ಸಂಖ್ಯಾಪದ್ಧತಿಯಲ್ಲಿ ೦ ಯಿಂದ ೯ ರ ತನಕ ಒಟ್ಟು ಹತ್ತು ಅಂಕೆಗಳಿವೆ. ಇದನ್ನು ದಶಮಾನ ಪದ್ಧತಿ ಎನ್ನುತ್ತಾರೆ. ದ್ವಿಮಾನ ಪದ್ಧತಿಯಲ್ಲಿ ೦ ಮತ್ತು ೧ -ಎರಡೇ ಅಂಕೆಗಳಿರುತ್ತವೆ. ಗಣಕಗಳ ಒಳಗೆ ಬಳಕೆಯಾಗುವುದು ಈ ಸಂಖ್ಯಾಪದ್ಧತಿಯಾಗಿದೆ.   

e - ಸಲಹೆ

ಪ್ರ: ಕರ್ನಾಟಕ ಚುನಾವಣಾ ಆಯೋಗದ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಸೇರಿಸಬೇಕಾಗಿದೆ. ಅದಕ್ಕಾಗಿ ಯಾವುದಾದರು ಜಾಲತಾಣ ಇದೆಯೇ?   
ಉ: ಇದೆ. ನೋಡಿ - voterreg.kar.nic.in

ಕಂಪ್ಯೂತರ್ಲೆ

ಕೋಲ್ಯ ತನಗೆ ಲ್ಯಾಪ್‌ಟಾಪ್ ಮಾರಿದ ಕಂಪೆನಿಗೆ ಫೋನ್ ಮಾಡಿ ಹೇಳಿದ “ನನ್ನ ಹೆಂಡತಿ ಇಂಟರ್‌ನೆಟ್ ಮೂಲಕ ವ್ಯಾಪಾರ ಮಾಡುತ್ತ ಅದು ಕ್ರೆಡಿಟ್ ಕಾರ್ಡ್ ಕೇಳಿದಾಗ ನನ್ನ ಕ್ರೆಡಿಟ್ ಕಾರ್ಡನ್ನು ಲ್ಯಾಪ್‌ಟಾಪ್‌ನ ಕಾರ್ಡ್ ರೀಡರ್ ಒಳಗೆ ತೂರಿಸಿದ್ದಾಳೆ. ಅದನ್ನು ಈಗ ಹೊರಗೆ ತೆಗೆಯುವುದು ಹೇಗೆ?”