ಸೋಮವಾರ, ಡಿಸೆಂಬರ್ 26, 2011

ಗಣಕಿಂಡಿ - ೧೩೬ (ಡಿಸೆಂಬರ್ ೨೬, ೨೦೧೧)

ಅಂತರಜಾಲಾಡಿ

ಟೆಲಿಮಾತು

ನಮ್ಮ ದೇಶದ ಶೇಕಡ ೭೦ರಷ್ಟು ಜನರಲ್ಲಿ ಈಗ ಮೊಬೈಲ್ ಮತ್ತು ಸ್ಥಿರ ದೂರವಾಣಿ ಸಂಪರ್ಕ ಇದೆ. ಸರಕಾರದ ಬಿಎಸ್‌ಎನ್‌ಎಲ್ ಜೊತೆ ಹಲವಾರು ಖಾಸಗಿ ಕಂಪೆನಿಗಳು ಕೂಡ ಸೇವೆ ನೀಡುತ್ತಿವೆ. ಒಬ್ಬರಿಂದೊಬ್ಬರು ಜಿದ್ದಿಗೆ ಇಳಿದವರಂತೆ ನೂರಾರು ನಮೂನೆಯ ಮತ್ತು ಬೆಲೆಯ ಸೇವೆಗಳನ್ನು ನೀಡುತ್ತಿವೆ. ಹಾಗೂ ಪ್ರ್ರತಿದಿನ ಹೊಸಹೊಸ ಸ್ಕೀಮ್‌ಗಳ ಘೋಷಣೆ ಮಾಡುತ್ತಿರುತ್ತವೆ. ಯಾವ ಕಂಪೆನಿಯ ಯಾವ ಸ್ಕೀಮ್ ಕೊಂಡರೆ ನಿಮ್ಮ ಅಗತ್ಯಕ್ಕೆ ಸರಿಹೊಂದುತ್ತದೆ ಮತ್ತು ನಿಮಗೆ ಅತ್ಯಧಿಕ ಉಪಯೋಗ ಆಗುತ್ತದೆ ಎಂದು ತಿಳಿಯುವುದು ಹೇಗೆ? ಈ ಸಮಸ್ಯೆಗೆ ಪರಿಹಾರವೆಂಬಂತೆ telecomtalk.info ಜಾಲತಾಣವಿದೆ.

ಡೌನ್‌ಲೋಡ್

ಮತ್ತೊಂದು ಎಕ್ಸ್‌ಪ್ಲೋರರ್

ಮೈಕ್ರೋಸಾಫ್ಟ್ ವಿಂಡೋಸ್ ಬಳಸುತ್ತಿರುವವರಿಗೆ ಅದರಲ್ಲಿ ಅಡಕವಾಗಿರುವ ಎಕ್ಸ್‌ಪ್ಲೋರರ್ ಗೊತ್ತಿರುತ್ತದೆ. ಅದನ್ನು ಬಳಸಿ ಫೈಲ್‌ಗಳ ಬಗ್ಗೆ ವಿವರ ತಿಳಿಯುವುದು, ಫೋಲ್ಡರ್ ಒಳಗೆ ಏನೇನು ಫೈಲ್‌ಗಳಿವೆ, ಒಂದು ಫೋಲ್ಡರಿನಿಂದ ಇನ್ನೊಂದು ಫೋಲ್ಡರಿಗೆ ಫೈಲ್ ಪ್ರತಿ ಮಾಡುವುದು -ಇತ್ಯಾದಿ ಎಲ್ಲ ಕೆಲಸಗಳನ್ನು ಮಾಡಬಹುದು. ಈಗ ಬೆಟರ್ ಎಕ್ಸ್‌ಪ್ಲೋರರ್ ಎಂಬ ಹೆಸರಿನ ಇನ್ನೊಂದು ಉಚಿತ ಹಾಗೂ ಮುಕ್ತ ಎಕ್ಸ್‌ಪ್ಲೋರರ್ ಲಭ್ಯವಿದೆ. ವಿಂಡೋಸ್ ಎಕ್ಸ್‌ಪ್ಲೋರರ್‌ನ ಎಲ್ಲ ಗುಣಗಳು ಇದರಲ್ಲಿವೆ. ಜೊತೆಗೆ ಇನ್ನೂ ಕೆಲವು ಹೆಚ್ಚಿನ ಸೌಲಭ್ಯಗಳಿವೆ. ಒಂದು ಪ್ರಮುಖವಾದುದೆಂದರೆ ಆಫಿಸ್ ೨೦೦೭ ಮತ್ತು ೨೦೧೦ರಲ್ಲಿ ಕಂಡುಬರುವ ಮಾದರಿಯ ರಿಬ್ಬನ್. ಇದು ತುಂಬ ಉಪಯುಕ್ತ. ನಿಮಗೆ ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bexplorer.codeplex.com.  

e - ಸುದ್ದಿ

ಕಡತ ಹಂಚಲನುವುಮಾಡುವುದು ತಪ್ಪಲ್ಲ

ವ್ಯಕ್ತಿಯಿಂದ ವ್ಯಕ್ತಿಗೆ ಅಂತರಜಾಲದ ಮೂಲಕ ಕಡತಗಳನ್ನು ಹಂಚುವುದಕ್ಕೆ person to person ಆರ್ಥಾತ್ P2P ಎಂಬ ಹೆಸರಿದೆ. ಈ ತಂತ್ರಜ್ಞಾನದಲ್ಲಿ ಒಂದು ಪ್ರಮುಖವಾದ ತಂತ್ರಾಂಶ ಬಿಟ್‌ಟೊರೆಂಟ್ ಪ್ರೊಟೊಕಾಲ್. ಇದೇ ಮಾದರಿಯ ಇನ್ನೊಂದು ತಂತ್ರಾಂಶವನ್ನು ಸ್ಪೈನ್ ದೇಶದಲ್ಲೊಬ್ಬ ತಯಾರಿಸಿದ್ದ. ಸಂಗೀತ ಮತ್ತು ವೀಡಿಯೊಗಳನ್ನು ತಯಾರಿಸುವ ಕಂಪೆನಿಗಳು ಆತನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದವು. ಈಗ ನ್ಯಾಯಾಲಯದಿಂದ ತೀರ್ಪು ಹೊರಬಂದಿದೆ. ಆತ ತಪ್ಪಿತಸ್ಥನಲ್ಲ. ಆತ ಕೇವಲ ತಂತ್ರಾಂಶ ಮಾತ್ರ ತಯಾರಿಸಿದ್ದ. ಅದನ್ನು ಬಳಸಿ ಸಂಗೀತ ಹಂಚಿಕೊ೦ಡು ಕೃತಿಚೌರ್ಯ ಮಾಡಿದ್ದರೆ ಅದು ಹಾಗೆ ಮಾಡಿದವರ ತಪ್ಪೇ ಹೊರತು ತಂತ್ರಾಂಶ ತಯಾರಕನದಲ್ಲ ಎಂದು ತೀರ್ಮಾನ ಬಂದಿದೆ.       

e- ಪದ

ಕ್ರಮವಿಧಿ (program) - ಗಣಕಕ್ಕೆ ಕೆಲಸ ಮಾಡಲು ನೀಡುವ ತರ್ಕಬದ್ಧವಾದ ಹಾಗೂ ಕ್ರಮಬದ್ಧವಾದ ಆದೇಶಗಳ ಗುಚ್ಛ. ಗಣಕಕ್ಕೆ ಸ್ವಂತ ಮೆದುಳಿಲ್ಲ. ನಾವು ನೀಡಿದ ಆದೇಶಗಳಂತೆ ಅದು ಕೆಲಸ ಮಾಡುತ್ತದೆ. ಒಂದು ವೃತ್ತದ ತ್ರಿಜ್ಯವನ್ನು ನೀಡಿ ಅದರ ವಿಸ್ತೀರ್ಣವನ್ನು ಲೆಕ್ಕ ಹಾಕಿ ಕೊಡು ಎಂದು ಅದಕ್ಕೆ ಸುಮ್ಮನೆ ಆದೇಶ ನೀಡುವಂತಿಲ್ಲ. ತ್ರಿಜ್ಯ ಗೊತ್ತಿದ್ದರೆ ವಿಸ್ತೀರ್ಣ ಲೆಕ್ಕ ಹಾಕುವ ಸೂತ್ರವನ್ನೂ ನೀಡಬೇಕಾಗುತ್ತದೆ. ತಪ್ಪು ಸೂತ್ರ ನೀಡದರೆ ಅದಕ್ಕೆ ಗೊತ್ತಾಗುವುದಿಲ್ಲ. ಎಲ್ಲರಿಗೂ ಪರಿಚಿತವಿರುವ ಇದೇ ಕ್ರಿಯೆಗೆ ಕ್ರಮವಿಧಿ ರಚನೆ ಅರ್ಥಾತ್ programming ಎನ್ನುತ್ತಾರೆ.

e - ಸಲಹೆ

ಗುಲ್ಬರ್ಗದ ಬಿರಾದಾರ ಅವರ ಪ್ರಶ್ನೆ: ಕಳೆದ ವಾರದ ಸಂಚಿಕೆಯಲ್ಲಿ ಕನ್ನಡಕ್ಕೆ ಯುನಿಕೋಡ್ ಫಾಂಟ್‌ಗಳು ಸಾಕಷ್ಟಿಲ್ಲ. ಆದುದರಿಂದ ಯುನಿಕೋಡ್ ಬಳಕೆ ಕಡಿಮೆ ಎಂದು ಬರೆದಿದ್ದೀರಿ. ಹಾಗಿದ್ದರೆ ಯುನಿಕೋಡ್ ಬಳಸಲು ಸಾಧ್ಯವಿಲ್ಲವೇ?
ಉ: ಯುನಿಕೋಡ್ ಒಂದು ಜಾಗತಿಕ ಶಿಷ್ಟತೆ. ಪ್ರಪಂಚದ ಎಲ್ಲ ತಂತ್ರಾಂಶ ಮತ್ತು ಜಾಲತಾಣಗಳು ಅದನ್ನು ಬಳಸುತ್ತಿವೆ. ಕನ್ನಡ ಯುನಿಕೋಡ್ ಬಳಸಲು ಯಾವ ಅಡ್ಡಿ ಆತಂಕಗಳೂ ಇಲ್ಲ. ನಾನು ಹೇಳಿದ್ದು ಉತ್ತಮ ಮುದ್ರಣ ಗುಣಮಟ್ಟದ ಫಾಂಟ್‌ಗಳ ಕೊರತೆ ಇದೆ ಎಂದು ಮಾತ್ರ. ಕ್ರಮವಿಧಿ ರಚನೆಗೆ ಯುನಿಕೋಡನ್ನೇ ಬಳಸಬೇಕು. ಕನ್ನಡಕ್ಕೆ ಈಗಾಗಲೇ ಹಲವಾರು ಯುನಿಕೋಡ್ ಬೆಂಬಲಿತ ಓಪನ್‌ಟೈಪ್ ಫಾಂಟ್‌ಗಳು ಲಭ್ಯವಿವೆ. ಅವುಗಳಲ್ಲಿ ಕೆಲವು - ತುಂಗ, ಏರಿಯಲ್ ಯುನಿಕೋಡ್ ಎಂಎಸ್ (ಇವೆರಡು ಮೈಕ್ರೋಸಾಫ್ಟ್ ಕಂಪೆನಿಗೆ ಸೇರಿದ್ದು), ಸಂಪಿಗೆ, ಮಲ್ಲಿಗೆ, ಕೇದಗೆ, ಸಕಲಭಾರತಿ, ಸರಸ್ವತಿ, ಜನಕನ್ನಡ, ಪೂರ್ಣಚಂದ್ರಜೇಜಸ್ವಿ, ಇತ್ಯಾದಿ.

ಕಂಪ್ಯೂತರ್ಲೆ

ಅಂತರಜಾಲದ ಕೊನೆ

ಅಂತರಜಾಲದಲ್ಲಿ ಸುತ್ತಾಡಿ ಸುತ್ತಾಡಿ ಬೋರ್ ಆಯಿತೇ? ಈ ಅನಂತಜಾಲಕ್ಕೆ ಕೊನೆಯೇ ಇಲ್ಲವೇ ಎಂದು ಆಶ್ಚರ್ಯಪಡುತ್ತಿದ್ದೀರಾ? ಇದೆ. ಎಲ್ಲದರಂತೆ ಅಂತರಜಾಲಕ್ಕೂ ಒಂದು ಕೊನೆ ಇದೆ. ಅದನ್ನು ನೋಡಬೇಕಾದರೆ ನೀವು ಮಾಡಬೇಕಾದ್ದು ಇಷ್ಟೆ. www.internet-end.com ಜಾಲತಾಣಕ್ಕೆ ಭೇಟಿ ನೀಡಬೇಕು. ಅಷ್ಟೆ.

ಸೋಮವಾರ, ಡಿಸೆಂಬರ್ 19, 2011

ಗಣಕಿಂಡಿ - ೧೩೫ (ಡಿಸೆಂಬರ್ ೧೯, ೨೦೧೧)

ಅಂತರಜಾಲಾಡಿ

ನವೀನ ತಂತ್ರಜ್ಞಾನ ಸುದ್ದಿ

ಕೈಮೇಲೆ ಅಥವಾ ಯಾವುದೇ ಮೇಲ್ಮೈ ಮೇಲೆ ಬೆರಳಚ್ಚು ಮಾಡುವುದು, ಮೊದಲು ಫೋಟೋ ತೆಗೆದು ನಂತರ ಫೋಕಸ್ ಮಾಡುವ ಕ್ಯಾಮರಾ, ಬೆಳಕಿನ ಕಣಗಳ ಫೋಟೋ ತೆಗೆಯುವುದು, ಕೇವಲ ೩ ಮೈಕ್ರೋಮೀಟರ್ (೧ ಮೈಕ್ರೋಮೀಟರ್ = ಮೀಟರಿನ ದಶಲಕ್ಷದಲ್ಲೊಂದು ಭಾಗ) ಗಾತ್ರದ ಉಗಿಯಂತ್ರ - ಇವೆಲ್ಲ ಕಾಣಸಿಗುವುದು ಮುಂಬರುವ ಜೇಮ್ಸ್ ಬಾಂಡ್ ಸಿನಿಮಾದಲ್ಲಲ್ಲ. ಇವೆಲ್ಲ ಪ್ರಪಂಚದ ಬೇರೆಬೇರೆ ಪ್ರಯೋಗಶಾಲೆಗಳಲ್ಲಿ ತಯಾರಾಗಿರುವ ಸದ್ಯ ಸುದ್ದಿಯಲ್ಲಿರುವ ನವೀನ ತಂತ್ರಜ್ಞಾನಗಳು. ಇಂಗ್ಲಿಶಿನಲ್ಲಿ ಇಂತಹವುಗಳಿಗೆ innovations ಅನ್ನುತ್ತಾರೆ. ಇಂತಹ ಹೊಸ ಕಲ್ಪನೆ, ಸಾಧ್ಯತೆ, ಸಾಧಸನೆಗಳ ಸುದ್ದಿಗಳನ್ನೇ ಪ್ರತಿನಿತ್ಯ ಹೊತ್ತು ತರುವ ಜಾಲತಾಣ www.innovationnewsdaily.com.

ಡೌನ್‌ಲೋಡ್

ಕನ್ನಡಕ್ಕೆರಡು ಉಚಿತ ಯುನಿಕೋಡ್ ಫಾಂಟ್

ಜಾಗತಿಕ ಶಿಷ್ಟತೆ ಯುನಿಕೋಡ್. ಇದನ್ನು ಬಳಸುವುದರಿಂದ ಲಭ್ಯವಾಗುವ ಅನುಕೂಲಕಗಳು ಅನೇಕ. ಆದರೂ ಗಣಕದಲ್ಲಿ ಕನ್ನಡ ಯುನಿಕೋಡ್ ಬಳಸುವವರ ಸಂಖ್ಯೆ ಇನ್ನೂ ಗಣನೀಯವಾಗಿಲ್ಲ. ಇದಕ್ಕೆ ಒಂದು ಬಲವಾದ ಕಾರಣವೆಂದರೆ ಕನ್ನಡಕ್ಕೆ ಯುನಿಕೋಡ್ ಬೆಂಬಲಿತ ಓಪನ್‌ಟೈಪ್ ಫಾಂಟ್‌ಗಳ ಕೊರತೆ. ಮೈಕ್ರೋಸಾಫ್ಟ್‌ನವರು ನೀಡಿರುವ “ತುಂಗ” ಹೆಸರಿನ ಫಾಂಟ್ ಮಾತ್ರ ಸದ್ಯ ಪರಿಪೂರ್ಣ ಕನ್ನಡ ಓಪನ್‌ಟೈಪ್ ಫಾಂಟ್. ಆದರೆ ಇದು ಪರದೆಯಲ್ಲಿ ಓದಲಿಕ್ಕಾಗಿ ತಯಾರಾಗಿರುವ ಫಾಂಟ್. ಮುದ್ರಣಕ್ಕಾಗಿ ಅತ್ಯುತ್ತಮ ಗುಣಮಟ್ಟದ ಫಾಂಟ್‌ಗಳು ಇನ್ನೂ ಬಂದಿಲ್ಲ. ಕೆಲವು ಕನ್ನಡ ತಂತ್ರಜ್ಞಾನಾಸಕ್ತರು ಇತ್ತೀಚೆಗೆ “ಗುಬ್ಬಿ” ಮತ್ತು “ನವಿಲು” ಹೆಸರಿನ ಎರಡು ಓಪನ್‌ಟೈಪ್ ಫಾಂಟ್‌ಗಳನ್ನು ಕನ್ನಡಕ್ಕೆ ಮುಕ್ತವಾಗಿ ನೀಡಿದ್ದಾರೆ. ಇವನ್ನು bit.ly/t9JwoE  ಜಾಲತಾಣದಿಂದ ಪಡೆದುಕೊಳ್ಳಬಹುದು. ಇವು ಇನ್ನೂ ಪರಿಪೂರ್ಣವಾಗಿಲ್ಲ ಆದರೆ ಇವು ಮುಕ್ತವಾಗಿರುವುದರಿಂದ ನೀವೂ ಇವನ್ನು ಸುಧಾರಿಸಬಹುದು. ಹವ್ಯಾಸಿಗಳಿಗೆ ಫಾಂಟ್‌ಗಳನ್ನು ಮುಕ್ತವಾಗಿ ನೀಡಲು ಸಾಧ್ಯವಾಗಿರುವಾಗ ಸರಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಿಗೆ ಯಾಕೆ ಇದು ಇನ್ನೂ ಸಾಧ್ಯವಾಗಿಲ್ಲ ಎಂಬುದು ತಿಳಿಯುತ್ತಿಲ್ಲ.

e - ಸುದ್ದಿ

ಸಹಪ್ರಯಾಣಿಕ ಆರಿಸಿ

ದೂರದ ಊರಿಗೆ ಸುದೀರ್ಘ ಪ್ರಯಾಣ ಮಾಡುವಾಗ ನಮ್ಮ ಪಕ್ಕದ ಆಸನದಲ್ಲಿ ನಮ್ಮ ಪರಿಚಿತರೇ ಇದ್ದರೆ ಒಳ್ಳೆಯದಲ್ಲವೇ? ಸಾಮಾನ್ಯವಾಗಿ ನಾವು ಒಬ್ಬರಿಗೊಬ್ಬರು ಫೋನ್ ಅಥವಾ ಇಮೈಲ್ ಮಾಡಿ ಯಾರಾದರೂ ಸಿಗುತ್ತಾರೋ ಎಂದು ವಿಚಾರಿಸುತ್ತೇವೆ. ವಿಮಾನದಲ್ಲಿ ಹೋಗುವಾಗ ಹಾಗೆ ಮಾಡುವುದು ಕಷ್ಟ. ಏಕೆಂದರೆ ವಿಮಾನದಲ್ಲಿ ದೀರ್ಘ ಪ್ರಯಾಣ ಮಾಡುವುದು ಯಾವಾಗಲೂ ಮಾಡುವ ಕೆಲಸವಲ್ಲ. ಅಂತಹ ಸಂದರ್ಭದಲ್ಲಿ ಪಕ್ಕದ ಆಸನಕ್ಕೆ ನಮಗಿಷ್ಟ ಬಂದವರನ್ನು ಆರಿಸುವುದು ಇನ್ನೂ ಕಷ್ಟ. ಈ ಸಮಸ್ಯೆಗೆ ಕೆಎಲ್‌ಎಂ ವಿಮಾನ ಸಾರಿಗೆ ಒಂದು ಪರಿಹಾರ ಕಂಡುಕೊಂಡಿದೆ. ೨೦೧೨ರಲ್ಲಿ ಅಸ್ತಿತ್ವಕ್ಕೆ ಬರುವ ಈ ಸೌಲಭ್ಯವನ್ನು ಬಳಸಿ ಪ್ರಯಾಣಿಕರು ಫೇಸ್‌ಬುಕ್ ಅಥವಾ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ತಮಗಿಷ್ಟ ಸಹಪ್ರಯಾಣಿಕರನ್ನು ಆರಿಸಿಕೊಳ್ಳಬಹುದು.       

e- ಪದ

ಪಠ್ಯದಿಂದ ಧ್ವನಿಗೆ (text-to-speech) - ಗಣಕದ ಪರೆದೆಯಲ್ಲಿ ಮೂಡಿಬರುವ ಪಠ್ಯಗಳನ್ನು ಧ್ವನಿಗೆ ಪರಿವರ್ತಿಸುವ ತಂತ್ರಾಂಶ. ಇಂತಹ ತಂತ್ರಾಂಶಗಳು ದೃಷ್ಟಿಶಕ್ತಿವಂಚಿತರಿಗೆ ತುಂಬ ಉಪಯುಕ್ತ. ಕನ್ನಡಕ್ಕೂ ಇವು ಲಭ್ಯ. ಹೆಚ್ಚಿನ ಮಾಹಿತಿಗೆ kanaja.in ತಾಲತಾಣ ನೋಡಿ.

e - ಸಲಹೆ

ಬಸವರಾಜ ಚಿಕ್ಕಮಠ ಅವರ ಪ್ರಶ್ನೆ: ನನ್ನ ಅಂಕಲ್ ಅಮೆರಿಕದಿಂದ ಐಫೋನ್ 4S ತರುತ್ತಿದ್ದಾರೆ. ಅದಕ್ಕೆ ಭಾರತದಲ್ಲಿ ಗ್ಯಾರಂಟಿ ಸಿಗಬಹುದೇ? ಅಮೆರಿಕದಿಂದ ತರಬೇಕಿದ್ದರೆ ಏನೆಲ್ಲ ಎಚ್ಚರಿಕೆ ವಹಿಸಬೇಕು?
ಉ: ಅಮೆರಿಕದಲ್ಲಿ ಗ್ಯಾಜೆಟ್ ಕೊಳ್ಳುವಾಗ ಸ್ವಲ್ಪ ಜಾಸ್ತಿ ಹಣ ನೀಡಿದರೆ ಆಂತಾರಾಷ್ಟ್ರೀಯ ಗ್ಯಾರಂಟಿ ನೀಡುತ್ತಾರೆ. ಅದನ್ನು ಪಡೆದುಕೊಳ್ಳಬೇಕು. ಭಾರತದ ಸಿಮ್ ಕಾರ್ಡ್ ಬಳಸಬೇಕಾದರೆ ಫೋನ್‌ಗೆ ಅಮೆರಿಕದಲ್ಲಿ ಯಾವುದೇ ಮೊಬೈಲ್ ಸೇವೆಗೆ ಚಂದಾದಾರರಾಗಿರಬಾರದು ಅಥವಾ ಅದು ಅನ್‌ಲಾಕ್ ಆಗಿರಬೇಕು. ಅನ್‌ಲಾಕ್ ಆದ ಫೋನಿಗೆ ಯಾವ ಸಿಮ್ ಬೇಕಿದ್ದರೂ ಹಾಕಬಹುದು.

ಕಂಪ್ಯೂತರ್ಲೆ

ವಿಕಿಪೀಡಿಯ: ನನಗೆ ಎಲ್ಲವೂ ಗೊತ್ತು.
ಗೂಗಲ್: ನನ್ನ ಬಳಿ ಎಲ್ಲವೂ ಇವೆ.
ಫೇಸ್‌ಬುಕ್: ನನಗೆ ಎಲ್ಲರೂ ಗೊತ್ತು.
ಇಂಟರ್‌ನೆಟ್: ನಾನಿಲ್ಲದೆ ನೀವೇನೂ ಇಲ್ಲ.
ಕರ್ನಾಟಕ ಸರಕಾರ: ಕರೆಂಟ್ ಇದ್ದರೆ ತಾನೆ ಇದೆಲ್ಲ?!
(ಫೇಸ್‌ಬುಕ್‌ನಿಂದ ಕದ್ದದ್ದು. ಜೋಕುಗಳಿಗೆ ಕಾಪಿರೈಟ್ ಇಲ್ಲ!)

ಮಂಗಳವಾರ, ಡಿಸೆಂಬರ್ 13, 2011

ಗಣಕಿಂಡಿ - ೧೩೪ (ಡಿಸೆಂಬರ್ ೧೨, ೨೦೧೧)

ಅಂತರಜಾಲಾಡಿ

ಆವರ್ತಕೋಷ್ಟಕ ಜಾಲತಾಣ

ಇದು ಅಂತಾರಾಷ್ಟ್ರೀಯ ರಸಾಯನಶಾಸ್ತ್ರ ವರ್ಷ. ಸ್ವಲ್ಪ ರಾಸಾಯನಿಕ ವಸ್ತುಗಳ ಅದರಲ್ಲೂ ಮೂಲವಸ್ತುಗಳ ಕಡೆಗೆ ಗಮನ ಕೊಡೋಣ. ಎಲ್ಲ ಮೂಲವಸ್ತುಗಳನ್ನು ಕ್ರಮಬದ್ಧವಾಗಿ ಜೋಡಿಸಿದ ಆವರ್ತಕೋಷ್ಟಕ (periodic table) ಎಲ್ಲ ರಸಾಯನಶಾಸ್ತ್ರ ವಿದ್ಯಾರ್ಥಿಗಳಿಗೆ ಅತಿ ಮುಖ್ಯ. ಮೂಲವಸ್ತುಗಳ ವಿವಿಧ ಗುಣವೈಶಿಷ್ಟ್ಯಗಳನ್ನು ಒಂದು ಕ್ರಮದಲ್ಲಿ ಇದರಲ್ಲಿ ಜೋಡಿಸಲಾಗಿದೆ. ಈ ಆವರ್ತಕೋಷ್ಟಕದ ಬಗ್ಗೆ ಹಲವಾರು ಜಾಲತಾಣಗಳಿವೆ. ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಗಣಕದಲ್ಲಿ ಅನುಸ್ಥಾಪಿಸಬಲ್ಲ ತಂತ್ರಾಂಶಗಳೂ ಇವೆ. ಆವರ್ತಕೋಷ್ಟಕ ಮತ್ತು ಮೂಲವಸ್ತುಗಳ ಬಗ್ಗೆ ಒಂದು ಜನಪ್ರಿಯ ಜಾಲತಾಣ www.webelements.com. ಎಲ್ಲ ಮೂಲವಸ್ತುಗಳ ಗುಣವೈಶಿಷ್ಟ್ಯಗಳ ವಿವರಗಳಲ್ಲದೆ ಹಲವು ಮಾದರಿಗಳು, ವೈಜ್ಞಾನಿಕ ಆಟಿಕೆಗಳೂ ಇಲ್ಲಿ ಮಾರಾಟಕ್ಕಿವೆ.

ಡೌನ್‌ಲೋಡ್

ಮಕ್ಕಳಿಗಾಗಿ ಪ್ರೋಗ್ರಾಮ್ಮಿಂಗ್

ಗಣಕವನ್ನು ಬಳಸುವುದು ಒಂದಾದರೆ ಗಣಕದಲ್ಲಿ ಕ್ರಮವಿಧಿ ರಚಿಸುವುದು (ಪ್ರೋಗ್ರಾಮ್ಮಿಂಗ್) ಇನ್ನೊಂದು. ಇದು ಕೇವಲ ಆಸಕ್ತರಿಗೆ ಹಾಗೂ ಪರಿಣತರಿಗೆ. ಗಣಕದಲ್ಲಿ ಕ್ರಮವಿಧಿ ರಚಿಸಲು ಹಲವು ಭಾಷೆಗಳು (programming languages) ಲಭ್ಯವಿವೆ. ಉದಾ -C, C++, Java, C#, ASP.NET, ಇತ್ಯಾದಿ. ಇವೆಲ್ಲ ದೊಡ್ಡವರಿಗಾಗಿ ಹಾಗೂ ಕಲಿಯಲು ಕ್ಲಿಷ್ಟವಾದ ಭಾಷೆಗಳು. ಮಕ್ಕಳಿಗಾಗಿ ಲೋಗೋ ಎಂಬ ಭಾಷೆ ಸುಮಾರು ವರ್ಷಗಳಿಂದ ಬಳಕೆಯಲ್ಲಿದೆ. ಲೋಗೋ ಮಾದರಿಯಲ್ಲೇ ಮಕ್ಕಳಿಗೆಂದೇ ರಚಿಸಲಾದ ಕ್ರಮವಿಧಿ ರಚನೆಯ ಭಾಷೆ Scratch. ಇದರ ವೈಶಿಷ್ಟ್ಯವೇನೆಂದರೆ ಇದರಲ್ಲಿ ಎಲ್ಲವೂ ಚಿತ್ರಗಳ (ಗ್ರಾಫಿಕ್ಸ್) ಮೂಲಕ ಆಗುತ್ತದೆ. ಈ ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು ಬೇಟಿ ನೀಡಬೇಕಾದ ಜಾಲತಾಣ scratch.mit.edu. ಇದು ೧೬ ವರ್ಷದ ಒಳಗಿನ ಮಕ್ಕಳನ್ನೇ ಗಮನದಲ್ಲಿಟ್ಟುಕೊಂಡು ತಯಾರಾದ ತಂತ್ರಾಂಶ. ಇದನ್ನು ಅಧ್ಯಾಪಕರೂ ಬಳಸಬಹುದು.

e - ಸುದ್ದಿ

ರಷ್ಯದಲ್ಲೊಂದು ಟ್ವಿಟ್ಟರ್ ಯುದ್ಧ

ಟ್ವಿಟ್ಟರನ್ನು ರಾಜಕೀಯ ಕಾರಣಗಳಿಗೆ, ಜನರನ್ನು ಸೇರಿಸಲು, ಚಳವಳಿಗಳಿಗೆ ಜನರನ್ನು ಪ್ರಚೋದಿಸಲು ಮತ್ತು ಸೇರಿಸಲು ಬಳಸುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇಜಿಪ್ಟ್‌ನಲ್ಲಿ ನಡೆದ ಚಳವಳಿಯಲ್ಲಿ ಟ್ವಿಟ್ಟರ್ ಮತ್ತು ಫೇಸ್‌ಬುಕ್ ಪ್ರಮುಖ ಪಾತ್ರವಹಿಸಿವೆ. ರಷ್ಯದಲ್ಲಿ ಇತ್ತೀಚೆಗೆ ಚುನಾವಣೆ ನಡೆಯಿತು. ಅದರಲ್ಲಿ ತುಂಬ ಮೋಸ ನಡೆದಿದೆ ಎಂದು ಜನರೆಲ್ಲ ಕೂಗಾಡಿದರು. ಹಾಗೆ ಅವರು ಕೂಗಾಡಲು ಬಳಸಿದ್ದು ಟ್ವಿಟ್ಟರ್. ಅದಕ್ಕೆಂದೆ ಒಂದು ಹಾಶ್‌ಟ್ಯಾಗ್ ಬಳಸಿ ಅವರು ಸರಕಾರವನ್ನು ದೂಷಿಸುತ್ತಿದ್ದರು. ಆದರೆ ಅದು ಸಾವಿರಾರು ಸರಕಾರಿ ಪರವಾದ ಆದರೆ ಅದೇ ಹಾಶ್‌ಟ್ಯಾಗ್ ಬಳಸಿ ಮಾಡಿದ ಟ್ವೀಟ್‌ಗಳ ರಾಶಿಯಲ್ಲಿ ಎಲ್ಲೋ ಮುಳುಗಿ ಹೋಯಿತು. ಇಲ್ಲಿ ಏನಾಗಿತ್ತೆಂದರೆ ಯಾರೋ, ಬಹುಶಃ ಸರಕಾರೀ ಪೋಷಿತ, ಸಾವಿರಾರು ಬಾಟ್‌ಗಳನ್ನು ಮೊದಲೇ ತಯಾರಿಸಿಟ್ಟಿದ್ದರು. ಈ ಸ್ವಯಂಚಾಲಿತ ಟ್ವಿಟ್ಟರ್ ಖಾತೆಗಳು (ಬಾಟ್‌ಗಳು) ಅದೇ ಹಾಶ್‌ಟ್ಯಾಗ್‌ಗೆ ಸರಕಾರದ ಪರವಾಗಿ ಸ್ವಯಂಚಾಲಿತವಾಗಿ ಟ್ವೀಟ್ ಮಾಡುತ್ತಿದ್ದವು. ಸ್ವಾರಸ್ಯವೆಂದರೆ ಈ ಬಾಟ್‌ಗಳನ್ನು ಚುನಾವಣೆಗೆ ಕೆಲವು ತಿಂಗಳುಗಳ ಮೊದಲೇ ತಯಾರಿಸಲಾಗಿತ್ತು. ಆದರೆ ಅವು ಆಗ ಸುಮ್ಮನೆ ನಿದ್ರಿಸುತ್ತಿದ್ದವು. ಟ್ವಿಟ್ಟರ್ ಮೂಲಕ ಈ ರೀತಿಯ ಧಾಳಿ ನಡೆಯಬಹುದು ಎಂದು ಪೂರ್ವಭಾವಿಯಾಗಿ ಊಹಿಸಿ ಅದಕ್ಕೆ ಪ್ರತಿಧಾಳಿಯನ್ನು ತಯಾರಿಸಿಟ್ಟಿದ್ದು ಇದೇ ಮೊದಲ ಬಾರಿ ಇರಬೇಕು.       

e- ಪದ

ಹಾಶ್‌ಟ್ಯಾಗ್ (hashtag) - ಟ್ವಿಟ್ಟರ್‌ನಲ್ಲಿ ಮಾಡುವ ಪೋಸ್ಟಿಂಗ್‌ಗಳನ್ನು ಸುಲಭವಾಗಿ ವಿಷಯಾಧಾರಿತವಾಗಿ ಹುಡುಕಲು ಸಹಾಯಮಾಡುವಂತೆ ಟ್ವೀಟ್‌ಗಳಿಗೆ ಲಗತ್ತಿಸುವ ಟ್ಯಾಗ್. ಉದಾಹರಣೆಗೆ #kannada. ಇದು ಕನ್ನಡದ ಬಗ್ಗೆ ಮಾಡುವ ಎಲ್ಲ ಟ್ವೀಟ್‌ಗಳನ್ನು ಸುಲಭವಾಗಿ ಹುಡುಕಿ ಕೊಡುತ್ತದೆ.

e - ಸಲಹೆ

ಪ್ರಮೋದ್ ಶೆಟ್ಟಿಯವರ ಪ್ರಶ್ನೆ: ನನಗೆ ಚಿತ್ರದ ಮೇಲೆ ಅಕ್ಷರ ಮೂಡಿಸುವ ತಂತ್ರಾಂಶ ಬೇಕಿತ್ತು, ತುಂಬಾ ಜಾಲಾಡಿದೆ ಸಿಗಲಿಲ್ಲ. ದಯವಿಟ್ಟು ನಿಮಗೆ ಗೊತ್ತಿದ್ದರೆ ನನಗೆ ತಿಳಿಸಿ.
ಉ: ಈ ಹಿಂದೆಯೇ ಗಣಕಿಂಡಿಯಲ್ಲಿ ಪ್ರಸ್ತಾಪಿಸಿದ್ದ FastStone Photo Resizer ತಂತ್ರಾಂಶವನ್ನು www.faststone.org ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಂಡು ಬಳಸಿ. ಇದು ಫೋಟೋಗಳ ಮೇಲೆ ನಿಮ್ಮ ಹೆಸರನ್ನು ಮೂಡಿಸಲು ಇರುವ ತಂತ್ರಾಂಶ. ನಿಮ್ಮ ಕೆಲಸಕ್ಕೂ ಆಗುತ್ತದೆ.

ಕಂಪ್ಯೂತರ್ಲೆ

ಮತ್ತೊಂದಿಷ್ಟು (ತ)ಗಾದೆಗಳು:
·    ಸರಿಯಾಗಿ ವೆಬ್‌ಸೈಟ್ ವಿಳಾಸ ಟೈಪ್ ಮಾಡದೆ ಇಂಟರ್‌ನೆಟ್ ಬರುತ್ತಿಲ್ಲ ಎಂದು ದೂರಿದನಂತೆ.
·    ನಿಜವಾದ ಪ್ರಜಾಪ್ರಭುತ್ವವಿರುವುದು ಅಂತರಜಾಲದಲ್ಲಿ ಮಾತ್ರ.

ಮಂಗಳವಾರ, ಡಿಸೆಂಬರ್ 6, 2011

ಗಣಕಿಂಡಿ - ೧೩೩ (ಡಿಸೆಂಬರ್ ೦೫, ೨೦೧೧)

ಅಂತರಜಾಲಾಡಿ

ಪದ್ಯಪಾನ

ಇದು ಮದ್ಯಪಾನವಲ್ಲ, ಪದ್ಯಪಾನ. ಅಂದರೆ ಪದ್ಯಗಳನ್ನು ಆಸ್ವಾದಿಸುವುದು. ಆದರೆ ಅಷ್ಟಕ್ಕೆ ಸೀಮಿತವಾಗಬೇಕಿಲ್ಲ. ಪದ್ಯಗಳ ಬಗ್ಗೆ ಚರ್ಚಿಸಬಹುದು, ಪದ್ಯಾಧಾರಿತ ಸಮಸ್ಯೆಗಳನ್ನು ಬಿಡಿಸಬಹುದು, ನೀವೊಬ್ಬ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಯಾಗಿದ್ದಲ್ಲಿ ಪದ್ಯ ರಚಿಸಿ ಇಲ್ಲಿ ದಾಖಲಿಸಬಹುದು, ಇತ್ಯಾದಿ. ಹೌದು. ಇದೆಲ್ಲ ಎಲ್ಲಿ ಎಂದು ಕೇಳುತ್ತೀರಾ? ಬನ್ನಿ, padyapaana.com ಜಾಲತಾಣಕ್ಕೆ ಭೇಟಿ ನೀಡಿ. ಪದ್ಯ ಓದಿ ಅದಕ್ಕೆ ನಿಮ್ಮ ಟೀಕೆ ಟಿಪ್ಪಣಿ ಸೇರಿಸಿ, ಸಮಸ್ಯೆ ಪರಿಹರಿಸಿ -ಒಟ್ಟಿನಲ್ಲಿ ಕಾವ್ಯಾನಂದರಾಗಿ. ಈಗಿನ ಕಾಲದಲ್ಲಿ ಛಂದಸ್ಸುಬದ್ಧವಾಗಿ ಪದ್ಯ ರಚಿಸುವವರಿದ್ದಾರೆಯೇ? ರಚಿಸುವವರಿರಲಿ, ಓದಿ ಅರ್ಥಮಾಡಿಕೊಳ್ಳುವವರಾದರೂ ಇದ್ದಾರೆಯೇ? ಎಂದು ಆಲೋಚಿಸುತ್ತಿದ್ದೀರಾ? ಈ ಜಾಲತಾಣಕ್ಕೊಮ್ಮೆ ಭೇಟಿ ನೀಡಿ. ಛಂದಸ್ಸನ್ನು ಅರ್ಥಮಾಡಿಕೊಳ್ಳುವುದು ಮಾತ್ರವಲ್ಲ ಛಂದೋಬದ್ಧವಾಗಿ ಪದ್ಯ ರಚಿಸುವವರೂ ಇಲ್ಲಿದ್ದಾರೆ.

ಡೌನ್‌ಲೋಡ್

ಗಣಕದಲ್ಲೊಂದು ಪೆನ್ಸಿಲ್

ಒಂದಾನೊಂದು ಕಾಲದಲ್ಲಿ ಪೆನ್ಸಿಲ್ ಬಳಸಿ ಚಿತ್ರ ರಚಿಸಿದ್ದೀರಾ? ಪೆನ್ಸಿಲ್ ಚಿತ್ರಗಳೆಂದರೆ ನಿಮಗೆ ಅಚ್ಚುಮೆಚ್ಚೇ? ಮನೆ ಮನೆಗೂ ಗಣಕ ಬಂದರೇನಂತೆ ಈಗಲೂ ಪೆನ್ಸಿಲ್ ಚಿತ್ರ ನಿಮ್ಮ ಹವ್ಯಾಸವೇ? ಈ ಎಲ್ಲ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ ನಿಮಗೆ ಪೆನ್ಸಿಲ್ ತಂತ್ರಾಂಶ ಬೇಕು. ಇದನ್ನು ಕೇವಲ ಪೆನ್ಸಿಲ್ ಚಿತ್ರಗಳಿಗೆ ಮಾತ್ರವಲ್ಲ, ಹೀಗೆ ತಯಾರಿಸಿದ ಚಿತ್ರಗಳನ್ನು ಜೋಡಿಸಿ ಚಿತ್ರಸಂಚಲನೆ (ಅನಿಮೇಶನ್) ತಯಾರಿಸಲೂ ಬಳಸಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನಿಡಬೇಕಾದ ಜಾಲತಾಣ www.pencil-animation.org. ಇದೊಂದು ಮುಕ್ತ ತಂತ್ರಾಂಶ. ಅಂದರೆ ಇದನ್ನು ನೀವು ಕೂಡ ಸುಧಾರಿಸಬಹುದು.

e - ಸುದ್ದಿ

ಕಮೆಂಟ್‌ಗಳಿಗಂಜಬೇಕಿಲ್ಲವಯ್ಯಾ

ಹಿಂದೊಮ್ಮೆ ನಾನು ಕಂಪ್ಯೂತರ್ಲೆಯಲ್ಲಿ ಬರೆದಿದ್ದೆ "ಕಮೆಂಟ್‌ಗಳಿಗೆ ಹೆದರಿ ಬ್ಲಾಗನ್ನೇ ನಿಲ್ಲಿಸಿದರಂತೆ" ಎಂದು. ಇದೀಗ ಇಟಲಿಯಿಂದ ಬಂದ ಸುದ್ದಿ: ಅಂತರಜಾಲತಾಣಗಳ ಸಂಪಾದಕರುಗಳು ಅಲ್ಲಿಯ ಲೇಖನ/ಬ್ಲಾಗುಗಳಿಗೆ ಓದುಗರು ದಾಖಲಿಸುವ ಕಮೆಂಟುಗಳಿಗೆ ಹೊಣೆಗಾರರಾಗುವುದಿಲ್ಲ ಎಂದು. ಇದನ್ನು ಸ್ವಲ್ಪ ವಿವರಿಸಿಬೇಕು. ಒಬ್ಬಾತ ಜಾಲತಾಣವೊಂದರಲ್ಲಿ ಲೇಖನ ಅಥವಾ ಬ್ಲಾಗ್ ಬರೆಯುತ್ತಾನೆ. ಅದರ ಕೆಳಗೆ ಓದುಗರು ತಮ್ಮ ಕಮೆಂಟ್ (ಟೀಕೆ ಟಿಪ್ಪಣಿ) ದಾಖಲಿಸುತ್ತಾರೆ. ಈ ಟೀಕೆ ಕೆಲವೊಮ್ಮೆ ತೀಕ್ಷ್ಣವಾಗಿರುವುದು ಮಾತ್ರವಲ್ಲ ಇನ್ಯಾರದೋ ಮಾನ ಹರಾಜು ಮಾಡುವಂತದ್ದೂ ಆಗಿರಬಹುದು. ಅಂತಹ ಸಂದರ್ಭಗಳಲ್ಲಿ ಆ ಜಾಲತಾಣದ ಸಂಪಾದಕರ ಮೇಲೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿ ಪರಿಹಾರ ವಸೂಲಿ ಮಾಡಲಾಗುತ್ತಿತ್ತು. ಟೀಕೆಗಳಿಗೆ ಜಾಲತಾಣದ ಸಂಪಾದಕ ಹೊಣೆಯಲ್ಲ ಎಂದು ಇದೀಗ ಇಟಲಿ ದೇಶದ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.    

e- ಪದ

ಕಿನೆಕ್ಟ್ (Kinect) - ಮೈಕ್ರೋಸಾಫ್ಟ್ ಕಂಪೆನಿ ತಯಾರಿಸಿರುವ ಆಟ ಆಡುವ ಒಂದು ಸಾಧನ. ಇಂತಹ ಆಟದ ಸಾಧನಗಳಿಗೆ ಇಂಗ್ಲಿಶಿನಲ್ಲಿ gaming console ಎನ್ನುತ್ತಾರೆ. ಇದರ ವೈಶಿಷ್ಟ್ಯವೆಂದರೆ ಇದು ದೇಹದ ಚಲನವಲನವನ್ನು ಅರ್ಥ ಮಾಡಿಕೊಳ್ಳುತ್ತದೆ. ಸಾಮಾನ್ಯವಾಗಿ ಇಂತಹ ಕನ್ಸೋಲ್‌ಗಳಿಗಿರುವಂತೆ ಇದಕ್ಕೆ ಜೋಯ್‌ಸ್ಟಿಕ್ ಇಲ್ಲ. ಕೈ, ಮುಖ ಅಥವಾ ಇಡಿಯ ದೇಹವನ್ನೇ ಕುಣಿಸಿದರೆ ಕಿನೆಕ್ಟ್ ಅದನ್ನು ಅರ್ಥ ಮಾಡಿಕೊಂಡು ಅದರಂತೆ ಆಟ ಆಡುತ್ತದೆ. ಉದಾಹರಣೆಗೆ ಆಟದಲ್ಲಿ ಬೆಂಕಿ ಎದುರಾಗಿದೆ ನೀವು ಅದರ ಮೇಲಿಂದ ನೆಗೆಯಬೇಕು ಎಂದಾದಲ್ಲಿ ನೀವು ನಿಂತಲ್ಲಿಯೇ (ಅಂದರೆ ಕಿನೆಕ್ಟ್ ಮುಂದೆ) ಕುಪ್ಪಳಿಸಬೇಕು. ಕಿನೆಕ್ಟ್‌ನಲ್ಲಿರುವ ಕ್ಯಾಮರಾ ಅದನ್ನು ಅರ್ಥಮಾಡಿಕೊಂಡು ಆಟದಲ್ಲಿರುವ ವ್ಯಕ್ತಿಯನ್ನು (ನಿಮ್ಮ ಪ್ರತಿನಿಧಿ) ಕುಣಿಸುತ್ತದೆ.

e - ಸಲಹೆ

ಟಿ. ಆರ್. ಪ್ರಕಾಶರ ಪ್ರಶ್ನೆ: ನನಗೊಂದು ಕನ್ನಡದ ಜಾಲತಾಣ (ವೆಬ್‌ಸೈಟ್) ನಿರ್ಮಿಸಬೇಕಾಗಿದೆ. ಹೇಗೆ ಎಂದು ಸಲಹೆ ನೀಡುತ್ತೀರಾ?
ಉ: ಮೊದಲು ನಿಮ್ಮ ಹೆಸರಿನಲ್ಲಿ ಒಂದು ಡೊಮೈನ್ ನೇಮ್ (ಜಾಲತಾಣ ಹೆಸರು) ನೋಂದಾಯಿಸಿಕೊಳ್ಳಿ. ಅನಂತರ blogger.com ಅಥವಾ wordpress.com ಜಾಲತಾಣದಲ್ಲಿ ಒಂದು ಖಾತೆ ತೆರೆಯಿರಿ. ನಿಮ್ಮ ಡೊಮೈನ್ ಹೆಸರನ್ನು ಈ ಖಾತೆಗೆ ನೇಮಿಸಿ.

ಕಂಪ್ಯೂತರ್ಲೆ

ಮೈಕ್ರೋಸಾಫ್ಟ್‌ನವರು ಗಣಕದ ಕಾರ್ಯಾಚರಣೆಯ ವ್ಯವಸ್ಥೆಯನ್ನು ಎಷ್ಟು ಸುಲಭ ಮತ್ತು ಸರಳಗೊಳಿಸಿದರೆಂದರೆ ಜನರೆಲ್ಲ ಗಣಕವನ್ನೇ ಬಳಸಿ ದೇಹಕ್ಕೆ ವ್ಯಾಯಾಮವೇ ಇಲ್ಲದಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಮೈಕ್ರೋಸಾಫ್ಟ್‌ನವರೇ ಕಿನೆಕ್ಟ್ ಅನ್ನು ತಯಾರಿಸಿದ್ದಾರೆ. ಅದರ ಮುಂದೆ ಕುಣಿದು ಕುಪ್ಪಳಿಸಿ ದೇಹದ ಕೊಬ್ಬು ಕರಗಿಸಬಹುದು.

ಗುರುವಾರ, ಡಿಸೆಂಬರ್ 1, 2011

ಗಣಕಿಂಡಿ - ೧೩೨ (ನವಂಬರ್ ೨೮, ೨೦೧೧)

ಅಂತರಜಾಲಾಡಿ

ಕನ್ನಡ ಪದಬಂಧ

ಪತ್ರಿಕೆಗಳಲ್ಲಿ ಬರುವ ಪದಬಂಧ ನೋಡದವರಾರು? ಕೆಲವು ಮನೆಗಳಲ್ಲಂತೂ ಪದಬಂಧ ಬಿಡಿಸುವ ವಿಷಯದಲ್ಲಿ ನಾನು ತಾನು ಎಂದು ಜಗಳಗಳೇ ನಡೆಯುತ್ತದೆ. ಪತ್ರಿಕೆಯಲ್ಲಿ ಪದಬಂಧ ಬಿಡಿಸಬೇಕಾದರೆ ಪೆನ್ಸಿಲ್ ತೆಗೆದುಕೊಂಡು ಬರೆಯಬೇಕು, ಬರೆದುದನ್ನು ಅಳಿಸಿ ಬರೆಯಬೇಕು, ಹೀಗೆ ನಡೆಯುತ್ತದೆ. ಯಾವುದಾದರೊಂದು ಚೌಕದಲ್ಲಿ ತುಂಬಿಸಬೇಕಾದ ಅಕ್ಷರ ಏನು ಇರಬಹುದು ಎಂಬ ಸುಳುಹು ನೀಡಲು ಅಸಾಧ್ಯ. ಆದರೆ ಗಣಕ ಅಥವಾ ಅಂತರಜಾಲ ಮೂಲಕ ಪದಬಂಧ ಮಾಡಿದರೆ ಅದರಲ್ಲಿ ಈ ರೀತಿಯ ಹೆಚ್ಚಿನ ಸೌಕರ್ಯ ನೀಡಲು ಸಾಧ್ಯ. ಅಡ್ಡ ನೀಟ ಸುಳುಹುಗಳಲ್ಲದೆ, ಪ್ರತಿಯೊಂದು ಚೌಕಕ್ಕೂ ಪ್ರತ್ಯೇಕ ಸುಳುಹು ಅಥವಾ ಉತ್ತರ ನೀಡಬಹುದು. ಇಂಗ್ಲಿಶ್ ಭಾಷೆಯಲ್ಲಿ ಇಂತಹ ಪದಬಂಧಗಳನ್ನು ನೀಡುವ ಜಾಲತಾಣಗಳು ಬೇಕಾದಷ್ಟಿವೆ. ಕನ್ನಡದಲ್ಲಿ? ಹೌದು. ಈಗ ಕನ್ನಡ ಭಾಷೆಯಲ್ಲೂ ಅಂತರಜಾಲ ಮೂಲಕ ಪದಬಂಧ ಬಿಡಿಸಬಹುದು. ಅದಕ್ಕಾಗಿ ನೀವು www.indicross.com ಜಾಲತಾಣಕ್ಕೆ ಭೇಟಿ ನೀಡಬೇಕು.

ಡೌನ್‌ಲೋಡ್

ಕನ್ನಡ ನಿಘಂಟು

ಕಿಟ್ಟೆಲ್ ಅವರಿಂದ ಪ್ರಾರಂಭಿಸಿ ಜಿವಿಯವರ ತನಕ ಹಲವಾರು ನಿಘಂಟುಗಳು ಕನ್ನಡದಲ್ಲಿ ಬಂದಿವೆ. ಕೆಲವು ನಿಘಂಟುಗಳನ್ನು ಅಂತರಜಾಲ ತಾಣಗಳ ಮೂಲಕವೂ ಬಳಸಬಹುದು (ಉದಾ - baraha.com, kanaja.in). ಬರಹ ಜಾಲತಾಣದಲ್ಲಿ ನೀಡಿರುವ ನಿಘಂಟನ್ನು ಅಂತರಜಾಲತಾಣದ ಮೂಲಕ ಬಳಸಬಹುದು. ಅದನ್ನು ನಿಮ್ಮ ಗಣಕದಲ್ಲೇ ಅನುಸ್ಥಾಪಿಸಬಲ್ಲ ಒಂದು ತಂತ್ರಾಂಶ ಸವಲತ್ತಿನ ಮೂಲಕ ಬಳಸುವಂತಿದ್ದರೆ ಒಳ್ಳೆಯದು ಅನ್ನಿಸಬಹುದಲ್ಲವೇ? ಹೌದು ಅಂತಹ ಒಂದು ತಂತ್ರಾಂಶ ಸವಲತ್ತನ್ನು ಅಜೇಯ ಎಂಬವರು ತಯಾರಿಸಿದ್ದಾರೆ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/rLM40n. ಇವರು ಈ ತಂತ್ರಾಂಶವನ್ನು ಮುಕ್ತ ಪರವಾನಗಿಯಲ್ಲಿ ನೀಡಿದ್ದಾರೆ. ಅಂದರೆ ತಂತ್ರಾಂಶದ ಮೂಲ ಆಕರಕ್ರಮವಿಧಿಯೂ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯ. ಅಷ್ಟೇ ಅಲ್ಲ, ಇದು ಜಾಗತಿಕ ಶಿಷ್ಟತೆಯಾಗಿರುವ ಯುನಿಕೋಡ್‌ನಲ್ಲಿದೆ.

e - ಸುದ್ದಿ

ಅವಸಾನವಿಲ್ಲದ ಬ್ಯಾಟರಿ

ನಾವು ಬಳಸುವ ಬ್ಯಾಟರಿ ಸೆಲ್‌ಗಳಲ್ಲಿ ಎರಡು ವಿಧ. ಒಮ್ಮೆ ಉಪಯೋಗಿಸಿ ಎಸೆಯುವಂತದ್ದು ಮತ್ತು ಮತ್ತೆ ಮತ್ತೆ ರಿಚಾರ್ಜ್ ಮಾಡಿ ಬಳಸುವಂತದ್ದು. ಈ ರಿಚಾರ್ಜ್ ಮಾಡಬಹುದಾದ ಬ್ಯಾಟರಿಗಳು ಎಂದೆಂದಿಗೂ ರಿಚಾರ್ಜ್ ಮಾಡಬಲ್ಲವೇನೂ ಅಲ್ಲ. ಸಾಮಾನ್ಯವಾಗಿ ೨೫೦ರಿಂದ ೪೦೦ ಸಲ ರಿಚಾರ್ಜ್ ಮಾಡಬಹುದು. ಆದರೆ ಈಗ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ೪೦,೦೦೦ ಸಲ ರಿಚಾರ್ಜ್ ಮಾಡಬಹುದಾದ ಬ್ಯಾಟರಿ ಸೆಲ್ ಸಂಶೋಧಿಸಿದ್ದಾರೆ.  

e- ಪದ

ಧ್ವನಿಯಿಂದ ಪಠ್ಯಕ್ಕೆ (speech to text) - ಧ್ವನಿಮುದ್ರಿತ ಅಥವಾ ನೇರವಾಗಿ ಬರುತ್ತಿರುವ ಧ್ವನಿಯನ್ನು ಪಠ್ಯ ರೂಪಕ್ಕೆ ಪರಿವರ್ತಿಸುವ ತಂತ್ರಾಂಶ. ಧ್ವನಿಯಿಂದ ಪಠ್ಯಕ್ಕೆ ಪರಿವರ್ತಿಸುವ ತಂತ್ರಾಂಶ ಸರಿಯಾಗಿ ಕೆಲಸ ಮಾಡಬೇಕಾದರೆ ಅದಕ್ಕೆ ಚೆನ್ನಾಗಿ ತರಬೇತಿ ನೀಡಬೇಕು. ಕಾರ್ಯದರ್ಶಿಗೆ ಪತ್ರವನ್ನು ಬಾಯಿಯಲ್ಲಿ ಹೇಳಿ ಆಕೆ ಅದನ್ನು ಶಾರ್ಟ್‌ಹ್ಯಾಂಡ್ ರೂಪದಲ್ಲಿ ಬರೆದುಕೊಂಡು ನಂತರ ಅದನ್ನು ಬೆರಳಚ್ಚು ಮಾಡಿ ಪತ್ರ ತಯಾರುಮಾಡುವ ಕಾಲ ಹಳೆಯದಾಯಿತು. ಈಗ ಈ ಕೆಲಸವನ್ನು ಧ್ವನಿಯಿಂದ ಪಠ್ಯಕ್ಕೆ ಪರಿವರ್ತಿಸುವ ತಂತ್ರಾಂಶ ಮಾಡುತ್ತದೆ.

e - ಸಲಹೆ

ಶ್ರೀನಿಧಿ ಡಿ. ಎಸ್. ಅವರ ಪ್ರಶ್ನೆ: ವೀಡಿಯೋದಲ್ಲಿ ಅಡಕವಾಗಿರುವ ಧ್ವನಿಯನ್ನು ಪಠ್ಯವಾಗಿ ಪರಿವರ್ತಿಸುವ ತಂತ್ರಾಂಶ ಇದೆಯೇ?
ಉ: ಇಂಗ್ಲಿಶ್ ಭಾಷೆಗೆ ತುಂಬ ಇವೆ. ಉದಾ - Dragon ಎಂಬ ವಾಣಿಜ್ಯಕ ತಂತ್ರಾಂಶ (nuance.com). ಉಚಿತ ತಂತ್ರಾಂಶ ಬೇಕಿದ್ದಲ್ಲಿ www.deskshare.com ಜಾಲತಾಣಕ್ಕೆ ಭೇಟಿ ನೀಡಿ Dictation Pro ಎಂಬ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಕನ್ನಡಕ್ಕೆ ಇನ್ನೂ ಇಂತಹ ತಂತ್ರಾಂಶ ತಯಾರಾಗಿಲ್ಲ.

ಕಂಪ್ಯೂತರ್ಲೆ

ಗಣಕವಾಡು

ಓದಿ ಕಮೆಂಟ್ ಮಾಡುವವ ಉತ್ತಮನು
ಓದಿಯೂ ಕಮೆಂಟ್ ಮಾಡದವ ಮಧ್ಯಮನು
ಓದದಲೆ ಕಮೆಂಟ್ ಮಾಡುವವ ತಾನಧಮ ಗಣಕಜ್ಞ