ಸೋಮವಾರ, ಏಪ್ರಿಲ್ 25, 2011

ಗಣಕಿಂಡಿ - ೧೦೧ (ಎಪ್ರಿಲ್ ೨೫, ೨೦೧೧)

ಅಂತರಜಾಲಾಡಿ

ಮುಕ್ತ ಗ್ರಂಥಾಲಯ

ಅಂತರಜಾಲದಲ್ಲಿ ಪುಸ್ತಕಗಳ ಅಂಗಡಿಗಳು ಇರುವುದು ತಿಳಿದೇ ಇರಬಹುದು. ಅಂತೆಯೇ ಗ್ರಂಥಾಲಯಗಳೂ ಇವೆ. ಅಂತಹ ಒಂದು ಮುಕ್ತ ಗ್ರಂಥಾಲಯ openlibrary.org. ಇದರ ವೈಶಿಷ್ಟ್ಯವೇನೆಂದರೆ ಇದಕ್ಕೆ ನಾವು ನೀವು ಎಲ್ಲರೂ ಪುಸ್ತಕ ಅಥವಾ ಪುಸ್ತಕದ ಸೂಚಿ ಹಾಗೂ ಕೊಂಡಿ ಸೇರಿಸಬಹುದು. ಇದರಲ್ಲಿ ಲಕ್ಷಕ್ಕಿಂತಲೂ ಅಧಿಕ ವಿದ್ಯುನ್ಮಾನ ಪುಸ್ತಕಗಳಿವೆ. ಮೊದಲೇ ತಿಳಿಸಿದಂತೆ ಇದು ಗ್ರಂಥಾಲಯ. ಅಂದರೆ ಪುಸ್ತಕವನ್ನು ನೀವು ಓದಿ ಹಿಂತಿರುಗಿಸಬೇಕು. ಅಂತರಜಾಲದ ಮೂಲಕ ದೊರಕುವ ವಿ-ಪುಸ್ತಕಗಳನ್ನು ಓದಿ ಹಿಂತಿರುಗಿಸುವುದು ಎಂದರೆ ಹೇಗೆ ಎಂಬ ಅನುಮಾನವೇ? ಅದಕ್ಕೆ ಹಲವು ವಿಧಾನಗಳಿವೆ. ಒಂದು ಅತಿ ಸರಳ ವಿಧಾನವೆಂದರೆ ಜಾಲತಾಣದಲ್ಲೇ ಓದುವುದು. ಭೌತಿಕ ಪುಸ್ತಕದ ಪುಟ ಮಗುಚಿದಂತೆ ಜಾಲತಾಣದಲ್ಲೂ ಪುಟ ಮಗುಚಿದ ಅನುಭವ ಮೂಡುವಂತೆ ಮಾಡುವ ತಂತ್ರಾಂಶದ ಬಳಕೆ ಇಲ್ಲಿ ಆಗಿದೆ. ಇತರೆ ವಿಧಾನಗಳೂ ಇವೆ. ಈ ಜಾಲತಾಣವಲ್ಲದೆ ಇತರೆ ಜಾಲತಾಣಗಳಲ್ಲಿ ದೊರೆಯುವ ಪುಸ್ತಕಗಳಿಗೆ ಕೊಂಡಿಯೂ ಇಲ್ಲಿದೆ.  

ಡೌನ್‌ಲೋಡ್

ಛಾಯಾಚಿತ್ರ ತಿದ್ದಿ

ಡಿಜಿಟಲ್ ಕ್ಯಾಮರಾಗಳು ಈಗ ಸರ್ವೇಸಾಮಾನ್ಯವಾಗಿವೆ. ಮೊಬೈಲ್ ಫೋನ್‌ಗಳಲ್ಲೂ ಉತ್ತಮ ಗುಣಮಟ್ಟದ ಕ್ಯಾಮರಾಗಳು ಅಳವಡಿಕೆಯಾಗುತ್ತಿವೆ. ಹೀಗೆ ತೆಗೆದ ಛಾಯಾಚಿತ್ರಗಳನ್ನು ತಿದ್ದಬೇಕಾದರೆ ಏನು ಮಾಡಬೇಕು. ದುಡ್ಡಿದ್ದರೆ ಅಡೋಬಿಯವರ ದುಬಾರಿ ಫೋಟೋಶಾಪ್ ತಂತ್ರಾಂಶ ಕೊಂಡುಕೊಂಡು ಬಳಸಬಹುದು. ಅಥವಾ ಅವರದೇ ಉಚಿತ ಅಂತರಜಾಲ ಆವೃತ್ತಿ ಬಳಸಬಹುದು. ಎರಡೂ ಬೇಡ. ಬಹುಮಟ್ಟಿಗೆ ಜನಸಾಮಾನ್ಯರಿಗೆ ಬೇಕಾದಂತಹ ಎಲ್ಲ ಸೌಲಭ್ಯಗಳಿರುವ ಹಾಗೂ ಉಚಿತವಾಗಿರುವ ಒಂದು ತಂತ್ರಾಂಶ ಬೇಕೇ? ಹಾಗಿದ್ದರೆ ನೀವು www.photobie.com ಜಾಲತಾಣಕ್ಕೆ ಭೇಟಿ ನೀಡಬೇಕು. ಫೋಟೊ ತಿದ್ದುವುದಲ್ಲದೆ ಸಣ್ಣಮಟ್ಟಿನ ಚಿತ್ರಸಂಚಲನೆ (ಅನಿಮೇಶನ್) ಕೂಡ ತಯಾರಿಸಬಹುದು.

e - ಸುದ್ದಿ

ಎಚ್ಚರಿಕೆ, ನಿಮ್ಮ ಫೋನನ್ನು ಹಿಂಬಾಲಿಸಲಾಗುತ್ತಿದೆ

ಅತ್ಯಾಧುನಿಕ ಐಫೋನಿನಲ್ಲಿ ಜಿಪಿಎಸ್ ಸಹಿತ ಹಲವಾರು ಸವಲತ್ತುಗಳಿವೆ. ಈ ಸವಲತ್ತುಗಳನ್ನು ಬಳಸಿ ನೀವು ಇರುವ ಜಾಗದ ಭೂಪಟ, ಹೆಚ್ಚಿನ ವಿವರಗಳನ್ನು ಪಡೆಯಬಹುದು. ಉದಾಹರಣೆಗೆ ನೀವು ಇರುವ ಜಾಗಕ್ಕೆ ಸಮೀಪದಲ್ಲಿರುವ ಬ್ಯಾಂಕ್ ಎಟಿಎಂ, ಪೆಟ್ರೋಲ್ ಪಂಪ್, ಹೋಟೆಲ್, ಇತ್ಯಾದಿ ಮಾಹಿತಿ ಪಡೆಯುವುದು. ಇವೆಲ್ಲ ಉಪಯುಕ್ತ ಸವಲತ್ತುಗಳೇನೋ ಹೌದು. ಆದರೆ ಇದೇ ಮಾಹಿತಿಯನ್ನು ಆಪಲ್ ಕಂಪೆನಿ ಗ್ರಾಹಕರ ಫೋನಿನಂದ ಆಗಾಗ್ಗೆ ಲಪಟಾಯಿಸಿ ತನ್ನ ಸರ್ವರ್‌ಗಳಲ್ಲಿ ಸಂಗ್ರಹಿಸಿಡುತ್ತಿರುವುದನ್ನು ಇತ್ತೀಚೆಗೆ ಸಂಶೋಧಕರೊಬ್ಬರು ಪತ್ತೆಹಚ್ಚಿದ್ದಾರೆ. ಗ್ರಾಹಕರ ಅರಿವಿಲ್ಲದೆ, ಅವರ ಅಪ್ಪಣೆಯಿಲ್ಲದೆ, ಅವರು ಎಲ್ಲೆಲ್ಲಿಗೆ ಹೋಗುತ್ತಿದ್ದಾರೆ ಎಂಬ ಮಾಹಿತಿಯನ್ನು ಆಪಲ್ ಕಂಪೆನಿ ಸಂಗ್ರಹಿಸುತ್ತಿದೆ. ಕೆಲವೊಮ್ಮೆ ಈ ಮಾಹಿತಿ ಪೋಲೀಸರಿಗೆ ಉಪಯೋಗಿಯಾಗಿರುವುದೇನೋ ನಿಜ. ಆದರೆ ಇದು ಗ್ರಾಹಕರ ವೈಯಕ್ತಿಕ ಹಕ್ಕಿನ ಉಲ್ಲಂಘನೆ ಎಂದು ಅಮೆರಿಕ ತುಂಬೆಲ್ಲ ಗದ್ದಲ ನಡೆಯುತ್ತಿದೆ.

e- ಪದ

ಜಿಫ್ (GIF - Graphics Interchange Format) - ವಿಶ್ವವ್ಯಾಪಿಜಾಲದಲ್ಲಿ ಗ್ರಾಫಿಕ್ಸ್ ಅಂದರೆ ಚಿತ್ರಗಳನ್ನು ತೋರಿಸಲು ಬಳಸುವ ಒಂದು ಫೈಲ್ ತಯಾರಿಕೆಯ ವಿಧಾನ. ಇದರಲ್ಲಿ 87a ಮತ್ತು 89a ಎಂಬ ಎರಡು ವಿಧಾನಗಳಿವೆ. 89a ವಿಧಾನದಲ್ಲಿ ಚಿತ್ರಸಂಚಲನೆಯನ್ನೂ (ಅನಿಮೇಶನ್) ತೋರಿಸಬಹುದು. ಈ ವಿಧಾನದ ಚಿತ್ರಗಳಲ್ಲಿ ತುಂಬ ಬಣ್ಣಗಳನ್ನು ತೋರಿಸಲು ಆಗುವುದಿಲ್ಲ.

e - ಸಲಹೆ

ಮಡಿಕೇರಿಯ ಜಯಕೃಷ್ಣರ ಪ್ರಶ್ನೆ: ಮೈಕ್ರೋಸಾಫ್ಟ್ ವರ್ಡ್‌ನಿಂದ ಪಿಡಿಎಫ್‌ಗೆ ಬದಲಾಯಿಸಲು ಸಾದ್ಯವೇ?
ಉ: ಸಾಧ್ಯ. ಇದಕ್ಕಾಗಿ ಇದೇ ಅಂಕಣದಲ್ಲಿ ಈ ಹಿಂದೆ ಸೂಚಿಸಿದ PDFCreator ತಂತ್ರಾಂಶವನ್ನು pdfforge.org ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಂಡು ಬಳಸಿ. ಇದು ಒಂದು ಮುದ್ರಕವಾಗಿ ಗೋಚರಿಸುತ್ತದೆ. ನೀವು ವರ್ಡ್‌ನಿಂದ ಈ ಮುದ್ರಕಕ್ಕೆ ಮುದ್ರಣ ಆದೇಶ ನೀಡತಕ್ಕದ್ದು. ನೀವು Word2010 ಬಳಸುವವರಾದರೆ ಅದರಲ್ಲಿಯೇ ಪಿಡಿಎಫ್ ಕಡತ ತಯಾರಿಸುವ ಸೌಲಭ್ಯ ಇದೆ.

ಕಂಪ್ಯೂತರ್ಲೆ

ಇಂಟರ್‌ನೆಟ್ ಇಲ್ಲದ ಕಂಪ್ಯೂಟರ್, ಫೇಸ್‌ಬುಕ್ ಇಲ್ಲದ ಗಣಕ
ಟ್ವಿಟ್ಟರ್ ಇಲ್ಲದ ಮೊಬೈಲ್ - ಇವು ಮೂರು
ಸಪ್ಪನೆ ಕಾಣ -ಗಣಕಜ್ಞ

ಸೋಮವಾರ, ಏಪ್ರಿಲ್ 18, 2011

ಗಣಕಿಂಡಿ - ೧೦೦ (ಎಪ್ರಿಲ್ ೧೮, ೨೦೧೧)


ಈ ಸಂಚಿಕೆಯೊಂದಿಗೆ ಗಣಕಿಂಡಿ ಅಂಕಣಕ್ಕೆ ನೂರು ತುಂಬುತ್ತಿದೆ. ಈ ಅಂಕಣವನ್ನು ಮೆಚ್ಚಿ ಪ್ರೋತ್ಸಾಹಿಸಿದ ಎಲ್ಲ ಓದುಗರಿಗೆ ಧನ್ಯವಾದಗಳು. ಈ ಸಂಚಿಕೆಯನ್ನು "ನೂರು" ಎಂಬ ವಿಷಯದ ಸುತ್ತ ರಚಿಸಲಾಗಿದೆ.

ಅಂತರಜಾಲಾಡಿ

ಉತ್ತಮ ೧೦೦

ಪ್ರತಿಯೊಂದು ಕ್ಷೇತ್ರದಲ್ಲೂ ಟಾಪ್-೧೦, ಟಾಪ್-೧೦೦ ಪಟ್ಟಿ ಮಾಡುವ ಅಭ್ಯಾಸವಿದೆ. ಅದೇ ರೀತಿ ಅಂತರಜಾಲದಲ್ಲಿರುವ ಲಕ್ಷಗಟ್ಟಳೆ ಜಾಲತಾಣಗಳಲ್ಲಿರುವ ಅತ್ಯುತ್ತಮ ೧೦೦ ಜಾಲತಾಣಗಳ ಪಟ್ಟಿಗಳೂ ಇವೆ. ಹೌದು, ಪಟ್ಟಿ ಅಲ್ಲ, ಪಟ್ಟಿಗಳು. ಅಂದರೆ ಈ ರೀತಿಯ ಪಟ್ಟಿಗಳನ್ನು ಹಲವಾರು ಮಂದಿ ಮಾಡಿದ್ದಾರೆ. ಪ್ರತಿಯೊಬ್ಬರೂ ತಮಗೆ ಸರಿ ಎಂದು ತೋರಿದ ಕೆಲವು ಗುಣಲಕ್ಷಣಗಳನ್ನು ಈ ಪಟ್ಟಿ ತಯಾರಿಸಲು ಆಯ್ಕೆಯ ಮಾನದಂಡವಾಗಿ ಇಟ್ಟುಕೊಂಡಿದ್ದಾರೆ. ಇಂತಹ ಒಂದು ಪಟ್ಟಿಯ ಜಾಲತಾಣ www.100bestwebsites.org. ಈ ಪಟ್ಟಿಯನ್ನು ಜಾಲತಾಣಗಳ ಜನಪ್ರಿಯತೆಯ ಮೇಲಿಂದ ತಯಾರಿಸಿಲ್ಲ. ಆಯ್ಕೆಗೆ ಅನುಸರಿಸಿದ ಮಾನದಂಡ ಏನು ಎಂಬುದನ್ನು ಜಾಲತಾಣದಲ್ಲೇ ನೀಡಿದ್ದಾರೆ. ಪ್ರತಿ ಜಾಲತಾಣದ ಕೊಂಡಿಯ ಜೊತೆ ಚಿಕ್ಕ ವಿವರಣೆ ಇಲ್ಲಿದೆ.  ಇದೇ ಮಾದರಿಯ ಇನ್ನೊಂದು ಪಟ್ಟಿ ಇಲ್ಲಿದೆ - www.web100.com/web-100. ಉತ್ತಮ ಭಾರತೀಯ ಜಾಲತಾಣಗಳ ಪಟ್ಟಿ ಇನ್ನೂ ಪರಿಪೂರ್ಣವಾಗಿ ತಯಾರಾಗಿಲ್ಲ. 

ಡೌನ್‌ಲೋಡ್

ನೂರು ಡೌನ್‌ಲೋಡ್‌ಗಳು

ಗಣಕ ಬಳಸಲು ಹಲವಾರು ತಂತ್ರಾಂಶಗಳು ಬೇಕು. ಅಂತರಜಾಲದಲ್ಲಿ ಬೇಕಾದಷ್ಟು ತಂತ್ರಾಂಶಗಳು ಲಭ್ಯ. ಇಂತಹ ತಂತ್ರಾಂಶಗಳಲ್ಲಿ ವಾಣಿಜ್ಯಕ, ಉಚಿತ, ಮುಕ್ತ ಎಂದು ಹಲವು ಬಗೆ. ಹಲವಾರು ತಂತ್ರಾಂಶ ತಯಾರಕರು ತಮ್ಮ ಉತ್ಪನ್ನಗಳನ್ನು ತಮ್ಮ ತಮ್ಮ ಜಾಲತಾಣಗಳಲ್ಲಿ ನೀಡುತ್ತಾರೆ. ಕೆಲವು ಜಾಲತಾಣಗಳಲ್ಲಿ ಸಾವಿರಾರು ತಂತ್ರಾಂಶಗಳು ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯ. ಇಂತಹ ಜಾಲತಾಣಗಳಲ್ಲಿ ಹಲವು ಅತೀ ಅಗತ್ಯ ತಂತ್ರಾಂಶಗಳು ಎಂಬ ಪಟ್ಟಿ ನೀಡಿ ಅವನ್ನು ಪ್ರತ್ಯೇಕವಾಗಿ ನೀಡುತ್ತವೆ. ಇದೇ ಮಾದರಿಯಲ್ಲಿ ಅತೀ ಅಗತ್ಯ ಮತ್ತು ಉಪಯುಕ್ತ ೧೦೦ ಉಚಿತ ತಂತ್ರಾಂಶಗಳು ದೊರೆಯುವ ಜಾಲತಾಣ 100-downloads.com. ನಿಮ್ಮ ಗಣಕವನ್ನು ಸುಸ್ಥಿತಿಯಲ್ಲಿಡಲು, ದಿನನಿತ್ಯದ ಕೆಲಸಗಳನ್ನು ಮಾಡಲು, ಕೆಲವು ಉಪಯುಕ್ತ ಆನ್ವಯಿಕ ತಂತ್ರಾಂಶಗಳು -ಹೀಗೆ ಹಲವು ವಿಭಾಗಗಳಲ್ಲಿ ೧೦೦ ಉತ್ತಮ ತಂತ್ರಾಂಶಗಳು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯ.

e - ಸುದ್ದಿ
ನೂರು ವರ್ಷ. ಕೈಕೊಟ್ಟ ಭಾರಿ ಭರವಸೆಗಳು

ಕೈಕೊಟ್ಟ ನೂರಾರು ಭರವಸೆಗಳು ನಮಗೆಲ್ಲ ಅಭ್ಯಾಸವಾಗಿ ಹೋಗಿವೆ. ಇಲ್ಲಿ ಹೇಳಹೊರಟಿದ್ದು ರಾಜಕಾರಣಿಗಳು ನೀಡಿದ ಭರವಸೆಗಳನ್ನಲ್ಲ. ಬದಲಿಗೆ ತಂತ್ರಜ್ಞರು ನೀಡಿದ್ದು. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಂಶೋಧನೆ ಮತ್ತು ಉತ್ಪನ್ನಗಳು ಬರುತ್ತಲೇ ಇರುತ್ತವೆ. ಕೆಲವೊಮ್ಮೆ ತುಂಬ ಕ್ರಾಂತಿಕಾರಿ ಸಂಶೋಧನೆಗಳು ನಡೆದು ಜೀವನವನ್ನೇ ಸಂಪೂರ್ಣವಾಗಿ ಬದಲಿಸಬಲ್ಲ ಸಂಶೋಧನೆ ಎಂಬ ಹೆಸರು ಪಡೆಯುತ್ತವೆ. ಆದರೆ ಈ ರೀತಿ ಭರವಸೆ ನೀಡಿ ನಂತರ ಹೇಳಹೆಸರಿಲ್ಲದೆ ನಾಪತ್ತೆಯಾದವೂ ಹಲವಾರಿವೆ. ನೂರು ವರ್ಷಗಳಲ್ಲಿ ಈ ರೀತಿ ತುಂಬ ಭರವಸೆ ನೀಡಿ ನಂತರ ಬಳಕೆಗೆ ಬಾರದ ಸಂಶೋಧನೆಗಳ ಪಟ್ಟಿಯೂ ಅಂತರಜಾಲದಲ್ಲಿದೆ. ಇದರಲ್ಲಿರುವ ಕೆಲವು ಪ್ರಮುಖವಾದವುಗಳು - ಗಾಜಿನ ಗುಮ್ಮಟದೊಳಗೆ ಇಡೀ ನಗರ, ಹಾರುವ ಕಾರು, ಜ್ಞಾನದ ಗುಳಿಗೆ, ಹೊಂಡ ತೆಗೆಯಲು ಪರಮಾಣು ಬಾಂಬ್ ಬಳಕೆ, ಇತ್ಯಾದಿ. ಈ ಪಟ್ಟಿಯನ್ನು ಓದಬೇಕಿದ್ದಲ್ಲಿ gizmo.do/hY8mZJ  ಜಾಲತಾಣಕ್ಕೆ ಭೇಟಿ ನೀಡಿ.

e- ಪದ

ನೂರು ಡಾಲರ್ ಲ್ಯಾಪ್‌ಟಾಪ್ ($100 laptop - XO) -ಪ್ರಪಂಚದ ಪ್ರತಿ ಮಗುವಿಗೂ ಒಂದು ಲ್ಯಾಪ್‌ಟಾಪ್ ನೀಡಬೇಕು ಎಂಬ ಕಳಕಳಿಯಿಂದ ಪ್ರಾರಂಭವಾದ ಯೋಜನೆ. ನಿಕೊಲಾಸ್ ನೆಗ್ರೊಪೊಂಟೆಯವರ ಕನಸಿನ ಕೂಸು ಇದು. ೨೦೦೭ರಲ್ಲಿ ಇದರ ಘೋಷಣೆ ಆಯಿತು. ಇನ್ನೂ ಈ ಕನಸು ಪೂರ್ತಿಯಾಗಿ ನನಸಾಗಿಲ್ಲ. ಇತ್ತೀಚೆಗಂತೂ "೧೦೦ ಡಾಲರ್‌ಗೆ ಲ್ಯಾಪ್‌ಟಾಪ್ ನೀಡಲು ಸಾಧ್ಯವಿಲ್ಲ, ಅದುದರಿಂದ ಅದನ್ನು ೨೦೦ ಡಾಲರ್‌ಗೆ ಏರಿಸಬೇಕು" ಎಂಬ ಮಾತು ಕೇಳಿಬರುತ್ತಿದೆ.

e - ಸಲಹೆ

ಪ್ರ: ಘಂಟೆಗೆ ನೂರು ಡಾಲರು ಹಣ ಸಂಪಾದಿಸಿ ಎಂದು ಜಾಲತಾಣವೊಂದರಲ್ಲಿ ಜಾಹೀರಾತು ನೋಡಿದೆ. ಇದು ನಿಜವೇ ಅಥವಾ ಒಂದು ವಂಚನೆಯ ಜಾಲವೇ?
ಉ: ಘಂಟೆಗೆ ನೂರು ಡಾಲರು ಗಳಿಸಿ ಅಲ್ಲ ಕಳೆದುಕೊಳ್ಳಿ! ಅಂತರಜಾಲದ ಮೂಲಕ ನಡೆಯುವ ಹಲವಾರು ವಂಚನೆಗಳಲ್ಲಿ ಒಂದು ಎಂದರೆ ಅಂತರಜಾಲದ ಮೂಲಕ ಹಣ ಸಂಪಾದಿಸಿ ಎಂಬುದು. ನಿಮ್ಮಲ್ಲಿ ಗಣಕ ಮತ್ತು ಅಂತರಜಾಲ ಸಂಪರ್ಕವಿದ್ದರೆ ಸಾಕು, ಅಂತರಜಾಲದ ಮೂಲಕ ಹಣ ಸಂಪಾದಿಸುವುದು ಹೇಗೆ ಎಂದು ನಾವು ಹೇಳಿಕೊಡುತ್ತೇವೆ ಎಂದು ಜಾಹೀರಾತು ಹೇಳುತ್ತದೆ. ಅದರಲ್ಲಿ ತುಂಬ ಕುಖ್ಯಾತವಾದುದು ಘಂಟೆಗೆ ನೂರು ಡಾಲರು ಸಂಪಾದಿಸಿ ಎಂಬುದು. ಅವರ ಯೋಜನೆಗೆ ಸೇರಲು ಪ್ರಾರಂಭದಲ್ಲಿ ನೀವು ನೂರು ಡಾಲರು ಹಣ ನೀಡಬೇಕಾಗುತ್ತದೆ. ನಂತರ ನಿಮಗೆ ಒಂದು ತಂತ್ರಾಂಶವನ್ನು ಅಂತರಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸುತ್ತಾರೆ. ನಂತರ ಯಾವು ಯಾವುದೋ ಜಾಲತಾಣಗಳಲ್ಲಿ ಕ್ಲಿಕ್ ಮಾಡುವುದು, ಅಥವಾ ಅರ್ಜಿ ತುಂಬುವುದು, ಅಥವಾ ಇನ್ನೇನೋ ಮಾಡಲು ಹೇಳುತ್ತಾರೆ. ತಿಂಗಳ ಕೊನೆಗೆ ನಿಮಗೆ ಹಣವಂತೂ ಬರುವುದಿಲ್ಲ! ಈ ರೀತಿಯ ವಂಚನೆಗೆ ನೂರು ಡಾಲರು ವಂಚನೆ ಎಂಬ ಹೆಸರೇ ಇದೆ!

ಕಂಪ್ಯೂತರ್ಲೆ

ಕೌರವರು ಎಷ್ಟು ಮಂದಿ?

ಇದಕ್ಕೂ ಗಣಕಕ್ಕೂ ಏನು ಸಂಬಂಧ, ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಇದ್ದಂತೆ, ಎಂದು ಕೇಳುತ್ತಿದ್ದೀರಾ? ಸ್ವಲ್ಪ ತಾಳಿ, ವಿವರಿಸುತ್ತೇನೆ. ಧೃತರಾಷ್ಟ್ರ ಚಕ್ರವರ್ತಿಗೆ ೧೦೧ ಮಕ್ಕಳು ಎಂಬ ವಿಷಯ ಎಲ್ಲರಿಗೂ ಗೊತ್ತು ಎಂದು ಹೇಳಬಹುದು. ಆ ನೂರ  ಒಂದು ಹೆಸರುಗಳನ್ನು ಸ್ವಲ್ಪ ಹೇಳಿ ನೋಡೋಣ. ಧುರ್ಯೋಧನ, ದುಶ್ಶಾಸನ, ವಿಕರ್ಣ, ಯುಯುತ್ಸು (ದಾಸಿಪುತ್ರ), ದುಶ್ಶಳೆ (ಮಗಳು, ಜಯದ್ರಥನ ಹೆಂಡತಿ) ಇಷ್ಟು ಹೆಸರುಗಳು ಮಾತ್ರ ಕೂಡಲೆ ಎಲ್ಲರಿಗೂ ಬಾಯಿಗೆ ಬರುತ್ತವೆ. ಮುಂದಿನ ಹೆಸರುಗಳು ಮಹಾಭಾರತದ ಒಂದು ಲಕ್ಷ ಶ್ಲೋಕಗಳಲ್ಲಿ ಎಲ್ಲೋ ಹುದುಗಿವೆ. ಅದುದರಿಂದ ಧೃತರಾಷ್ಟ್ರನಿಗೂ ಕೇವಲ ಐದೇ ಮಕ್ಕಳು ಇದ್ದದ್ದು ಎಂದು ನಾವು ತೀರ್ಮಾನಿಸಬಹುದು. ಹಾಗಾದರೆ ಕೌರವರು ೧೦೧ ಆದದ್ದು ಹೇಗೆ? ಅದು ಹೀಗೆ: ಧೃತರಾಷ್ಟ್ರ ಹುಟ್ಟು ಕುರುಡ. ಅವನಿಗೆ ಹತ್ತು ಅಂಕೆಗಳನ್ನು ನೆನಪಿಟ್ಟುಕೊಳ್ಳಲು ಆಗುತ್ತಿರಲಿಲ್ಲ. ಅವನಿಗೆ ಗೊತ್ತಿದ್ದದ್ದು ಎರಡೇ ಅಂಕೆಗಳು -ಸೊನ್ನೆ ಮತ್ತು ಒಂದು. ಅವನು ಲೆಕ್ಕ ಮಾಡುತ್ತಿದ್ದದ್ದು (ಗಣಕಗಳಲ್ಲಿ ಚಾಲ್ತಿಯಲ್ಲಿರುವ) ದ್ವಿಮಾನ ಪದ್ಧತಿಯಲ್ಲಿ. ದಶಮಾನ ಪದ್ಧತಿಯ ೫ ದ್ವಿಮಾನ ಪದ್ಧತಿಯಲ್ಲಿ ೧೦೧ ಆಗುತ್ತದೆ!

ಓದುಗರಿಗೆ ಪ್ರಶ್ನೆ:

ಗಣಕಿಂಡಿ ಅಂಕಣದ ಎಲ್ಲ ಹಳೆಯ ಸಂಚಿಕೆಗಳನ್ನು ganakindi.blogspot.com ಜಾಲತಾಣದಲ್ಲಿ ಓದಬಹುದು. ಇದುವರೆಗಿನ ಎಲ್ಲ ಸಂಚಿಕೆಗಳಲ್ಲಿ ನಿಮಗೆ ಇಷ್ಟವಾದ ಅಂತರಜಾಲಾಡಿ, ಡೌನ್‌ಲೋಡ್, e - ಸುದ್ದಿ, e- ಪದ, e - ಸಲಹೆ, ಕಂಪ್ಯೂತರ್ಲೆ ಯಾವುದು ಮತ್ತು ಯಾಕೆ ಎಂದು ganakindi AT gmail DOT com ವಿಳಾಸಕ್ಕೆ ಇಮೈಲ್ ಮೂಲಕ ತಿಳಿಸಬೇಕು. ಪ್ರತಿಯೊಂದು ವಿಭಾಗಕ್ಕೂ ಸಕಾರಣ ಉತ್ತಮ ಆಯ್ಕೆಗೆ ಒಂದು ಪುಸ್ತಕ ಬಹುಮಾನ ನೀಡಲಾಗುವುದು. ಪುಸ್ತಕಗಳನ್ನು ಕನ್ನಡದ ಖ್ಯಾತ ವಿಜ್ಞಾನ ಲೇಖಕರುಗಳಾದ ನಾಗೇಶ ಹೆಗಡೆ, ಡಾ| ಪಿ. ಎಸ್. ಶಂಕರ, ಟಿ. ಆರ್. ಅನಂತರಾಮು, ಕೊಳ್ಳೆಗಾಲ ಶರ್ಮ, ಬೇಳೂರು ಸುದರ್ಶನ, ಟಿ. ಜಿ. ಶ್ರೀನಿಧಿ ಅವರು ಪ್ರಾಯೋಜಿಸುತ್ತಿದ್ದಾರೆ. ನಿಮ್ಮ ಉತ್ತರಗಳನ್ನು ಮೆ ೨ರ ಒಳಗೆ ತಿಳಿಸತಕ್ಕದ್ದು.




ಸೋಮವಾರ, ಏಪ್ರಿಲ್ 11, 2011

ಗಣಕಿಂಡಿ - ೦೯೯ (ಎಪ್ರಿಲ್ ೧೧, ೨೦೧೧)

ಅಂತರಜಾಲಾಡಿ

ಆಟೋರಿಕ್ಷ ದೂರುತಾಣ

ಆಟೋರಿಕ್ಷಗಳ ಕಿರಿಕಿರಿ ಯಾರಿಗೆ ಅನುಭವವಾಗಿಲ್ಲ? ಹೇಳಿದ ಜಾಗಕ್ಕೆ ಬರುವುದಿಲ್ಲ, ಮೀಟರ್ ಹಾಕುವುದಿಲ್ಲ, ಹಾಕಿದರೂ ಮೀಟರಿಗೆ ಎರಡು ಪಾಲು ಹಣ ಕೇಳುವುದು -ಹೀಗೆ ಹಲವಾರು ರೀತಿಯಲ್ಲಿ ನಾಗರಿಕರಿಗೆ ತೊಂದರೆ ಕೊಡುವ ಆಟೋರಿಕ್ಷ ಚಾಲಕರು ಬೇಕಾದಷ್ಟು ಮಂದಿ ಇದ್ದಾರೆ. ಪ್ರತಿ ಬಾರಿಯೂ ಸರಕಾರದ ಸೂಕ್ತ ಇಲಾಖೆಗೆ ಹೋಗಿ ದೂರು ಸಲ್ಲಿಸುವುದು ದೊಡ್ಡ ತಲೆನೋವಿನ ಕೆಲಸ. ದೂರು ಸಲ್ಲಿಸಿದರೂ ನಿಮ್ಮ ದೂರಿನ ಮೇಲೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಯುವುದು ಹೇಗೆ? ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಒಂದು ಜಾಲತಾಣವಿದೆ. ಅದುವೇ auto404.org. ಈ ಜಾಲತಾಣದಲ್ಲಿ ಆಟೋರಿಕ್ಷದ ನೋಂದಣಿ ಸಂಖ್ಯೆ, ದಿನಾಂಕ, ಸ್ಥಳ, ದೂರಿನ ವಿವರ ಎಲ್ಲ ದಾಖಲಿಸಬಹುದು. ಆಗಾಗ ನೀವು ಇಲ್ಲಿಗೆ ಭೇಟಿ ನೀಡಿ ನಿಮ್ಮ ದೂರಿನ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಯಬಹುದು. ಈ ಜಾಲತಾಣಕ್ಕೆ ಸರಕಾದ ಮಾನ್ಯತೆ ಇದೆ.

ಡೌನ್‌ಲೋಡ್

ಗಣಕದಲ್ಲೇ ಲೆಗೋ ಮಾಡಿರಿ

ಮಕ್ಕಳಲ್ಲಿ ಬುದ್ಧಿಮತ್ತೆ ಹೆಚ್ಚಿಸಲು ತುಂಬ ಸಹಾಯಕಾರಿಯಾದ ಆಟ ಲೆಗೋ. ಇದರಲ್ಲಿ ಚಿಕ್ಕ ಚಿಕ್ಕ ಇಟ್ಟಿಗೆಗಳಿರುತ್ತವೆ. ಇವುಗಳನ್ನು ಜೋಡಿಸಿ ಹಲವು ನಮೂನೆಯ ಮಾದರಿಗಳನ್ನು ತಯಾರಿಸಬಹುದು. ಮನೆ, ಕಾರು, ಕಟ್ಟಡ, ಇತ್ಯಾದಿ ಏನೇನೆಲ್ಲಾ ಮಾಡಬಹುದು. ಇವು ತುಂಬ ದುಬಾರಿ. ಈಗ ಈ ಲೆಗೋ ಇಟ್ಟಿಗೆಗಳನ್ನು ಜೋಡಿಸಿ ಮಾದರಿಗಳನ್ನು ತಯಾರಿಸಲು ಡಿಜಿmಲ್ ಲೆಗೋ ಬಂದಿದೆ. ಇದನ್ನು ಗಣಕದಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ನಂತರ ಗಣಕದಲ್ಲಿ ಮೌಸ್ ಬಳಸಿ ನಿಮಗಿಷ್ಟವಾದ ಮಾದರಿ ತಯಾರಿಸಬಹುದು. ಆಲೋಚನಾ ಶಕ್ತಿಯ ಬೆಳವಣಿಗೆಗೆ ಲೆಗೋ ಉತ್ತಮ ಆಟ. ಲೆಗೋ ಸೆಟ್ ಕೊಳ್ಳುವುದರಿಂದ ಮಾತ್ರವಲ್ಲ ಗಣಕದಲ್ಲಿ ಲೆಗೋ ಆಟ ಆಡುವದರಿಂದಲೂ ಬುದ್ಧಿಶಕ್ತಿ ಹೆಚ್ಚಿಸಕೊಳ್ಳಬಹುದು. ಈ ಡಿಜಿಟಲ್ ಲೆಗೋ ದೊರೆಯುವ ಜಾಲತಾಣದ ವಿಳಾಸ - ldd.lego.com.

e - ಸುದ್ದಿ

ನ್ಯಾಯಾಧೀಶರ ಬವಣೆ!

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಂಪೆನಿಗಳು ಒಬ್ಬರ ಮೇಲೆ ಒಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡುತ್ತಲೇ ಇವೆ. ಇತ್ತೀಚೆಗೆ ತುಂಬ ಸುದ್ದಿಯಲ್ಲಿರುವುದು ಗೂಗ್ಲ್ ಕಂಪೆನಿಯ ಮೇಲೆ ಒರೇಕಲ್ ಕಂಪೆನಿ ಹೂಡಿದ ಜಾವಾ ತಂತ್ರಾಂಶ ಸಂಬಂಧಿ ದಾವೆ. ಸನ್ ಕಂಪೆನಿ ಜಾವಾ ತಂತ್ರಾಂಶ ತಯಾರಿಸಿತ್ತು. ಕಂಪೆನಿ ದಿವಾಳಿಯೇಳುವ ಸ್ಥಿತಿಯಲ್ಲಿದ್ದಾಗ ಅದರಲ್ಲಿದ್ದ ಬಹುಪಾಲು ಜಾವಾ ಪರಿಣತರು ಗೂಗ್ಲ್ ಕಂಪೆನಿ ಸೇರಿಕೊಂಡರು. ನಂತರ ಗೂಗ್ಲ್ ಕಂಪೆನಿ ಜಾವಾ ಆಧಾರಿತ ಆಂಡ್ರೋಯಿಡ್ ಎಂಬ ತಂತ್ರಾಂಶ ಬಿಡುಗಡೆ ಮಾಡಿತು. ಏತನ್ಮಧ್ಯೆ ಒರೇಕಲ್ ಕಂಪೆನಿ ಸನ್ ಕಂಪೆಯನ್ನು ಅದರ ಎಲ್ಲ ಪೇಟೆಂಟ್ ಸಹಿತ ಕೊಂಡುಕೊಂಡಿತು. ಅಂದರೆ ಜಾವಾ ಈಗ ಒರೇಕಲ್ ಕಂಪೆನಿಗೆ ಸೇರಿದ್ದಾಗಿದೆ. ಜಾವಾ ತಂತ್ರಾಂಶವನ್ನು ಬಳಸಿ ಆಂಡ್ರೋಯಿಡ್ ತಯಾರಿಸಿದ್ದಕ್ಕೆ ಒರೇಕಲ್ ಕಂಪೆನಿ ಗೂಗ್ಲ್ ಮೇಲೆ ದಾವೆ ಹೂಡಿದೆ. ಈ ಖಟ್ಲೆಯನ್ನು ವಿಚಾರಿಸುತ್ತಿರುವ ನ್ಯಾಯಾಧೀಶರಿಗೆ ಇತ್ತೀಚೆಗೆ ಜಾವಾ ಎಂದರೆ ಏನು ಎಂದು ತರಗತಿ ತೆಗೆದುಕೊಳ್ಳಲಾಗಿದೆ! ಅವರು ಜಾವಾ ಬಗ್ಗೆ ತಿಳಿದುಕೊಂಡು ತೀರ್ಪು ನೀಡಬೇಕಾಗಿದೆ. 

e- ಪದ

ಜಾವಾ (Java) - ಗಣಕ ಕ್ರಮವಿಧಿ ತಯಾರಿಯ ಒಂದು ಭಾಷೆ (programming language). ಇದನ್ನು ೧೯೯೫ರಲ್ಲಿ ಸನ್ ಕಂಪೆನಿ ತಯಾರಿಸಿ ಬಿಡುಗಡೆ ಮಾಡಿತು. ಈ ಭಾಷೆ ತುಂಬ ಜನಪ್ರಿಯ ಭಾಷೆ. ಇದರ ವೈಶಿಷ್ಟ್ಯವೇನೆಂದರೆ ಒಮ್ಮೆ ಒಂದು ಗಣಕದಲ್ಲಿ ತಯಾರಿಸಿದರೆ ಜಾವಾವನ್ನು ಬೆಂಬಲಿಸುವ ಯಾವ ಗಣಕದಲ್ಲಿ ಬೇಕಾದರೂ ಅದನ್ನು ಬಳಸಬಹುದು. ಇದರಲ್ಲಿ ಹಲವು ಪ್ರಭೇದಗಳಿವೆ.

e - ಸಲಹೆ

ಮೈಸೂರಿನ ಪ್ರಸನ್ನ ರಾವ್ ಅವರ ಪ್ರಶ್ನೆ: ನನ್ನ ಗಣಕದಲ್ಲಿ ತುಂಬ ತಾತ್ಕಾಲಿಕ ಪೈಲ್‌ಗಳಿವೆ (temporary files). ಇವುಗಳನ್ನು ಅಳಿಸುವುದು ಅಗತ್ಯವೇ?
ಉ: ಹೌದು. ಆಗಾಗ ನಿಮ್ಮ ಗಣಕ ಸ್ವಚ್ಛ ಮಾಡುತ್ತಿರುವುದು ಒಳ್ಳೆಯದು. ನೀವು ಇದೇ ಅಂಕಣದಲ್ಲಿ ಹಿಂದೊಮ್ಮೆ ಸೂಚಿಸಿದ್ದ ccleaner ತಂತ್ರಾಂಶವನ್ನು www.piriform.com/ccleaner ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಂಡು ಬಳಸಿ.

ಕಂಪ್ಯೂತರ್ಲೆ

ಕೋಲ್ಯ ಪತ್ರಿಕೆಯೊಂದಕ್ಕೆ ಲೇಖನ ಕಳುಹಿಸಲು ಗಣಕದಲ್ಲಿ ಬೆರಳಚ್ಚು ಮಾಡಿ ಸಿದ್ಧಪಡಿಸಿದ. ಅದನ್ನು ಗಣಕ (ಇಮೈಲ್) ಮೂಲಕವೇ ಕಳುಹಿಸತಕ್ಕದ್ದು ಎಂದು ಪತ್ರಿಕೆಯವರು ತಾಕೀತು ಮಾಡಿದ್ದರು. ಕೋಲ್ಯ ಅಂಚೆಕಛೇರಿಗೆ ಹೋಗಿ "ಇಮೈಲ್‌ಗೆ ಅಂಟಿಸುವ ಸ್ಟಾಂಪ್ ಕೊಡಿ" ಎಂದು ಕೇಳಿದ.

ಸೋಮವಾರ, ಏಪ್ರಿಲ್ 4, 2011

ಗಣಕಿಂಡಿ - ೦೯೮ (ಎಪ್ರಿಲ್ ೦೪, ೨೦೧೧)

ಅಂತರಜಾಲಾಡಿ

ಬಡವರಿಗೆ ಅಕ್ಕಿ ನೀಡಿ

ಪ್ರಪಂಚದಲ್ಲಿ ಕೋಟಿಗಟ್ಟಳೆ ಜನ ಬಡವರಿದ್ದಾರೆ. ಭಾರತದಲ್ಲೂ ಇದ್ದಾರೆ. ಬಡವರಿಗೆ ಆಹಾರ ದೊರಕಿಸಲು ಪ್ರಯತ್ನ ಮಾಡುವ ಸಂಸ್ಥೆಗಳು ಸಾವಿರಾರಿವೆ. ವಿಶ್ವ ಸಂಸ್ಥೆಯೂ ತನ್ನದೇ ಪ್ರಯತ್ನ ಮಾಡುತ್ತಿದೆ. ಹೀಗೆ ಕೆಲಸ ಮಾಡುವ ಸಂಸ್ಥೆಗಳು ಜನರಿಂದ ದೇಣಿಗೆ ಪಡೆದು ಕೆಲಸ ಮಾಡುತ್ತವೆ. ದೇಣಿಗೆ ಪಡೆಯುವುದು ಮಾತ್ರವಲ್ಲ, ನೀವು ರಸಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಹಾಯ ಮಾಡುವ ಜಾಲತಾಣವೊಂದಿದೆ. ಇದನ್ನು ವಿಶ್ವ ಸಂಸ್ಥೆಯ ಜಾಗತಿಕ ಆಹಾರ ಯೋಜನೆ ನಡೆಸುತ್ತಿದೆ. ಇದರಲ್ಲಿ ಕೆಲವು ರಸಪ್ರಶ್ನೆಗಳಿವೆ. ಇವುಗಳನ್ನು ಆಡುವ ಮೂಲಕ ನಿಮ್ಮ ಸಾಮಾನ್ಯ ಜ್ಞಾನ, ಇಂಗ್ಲಿಶ್ ಜ್ಞಾನ, ಮತ್ತು ಇತರೆ ವಿಷಯಗಳಲ್ಲಿಯ ಅರಿವು ಜಾಸ್ತಿ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲ, ಪ್ರತಿ ಸರಿ ಉತ್ತರಕ್ಕೂ ಒಂದು ಕಾಳು ಅಕ್ಕಿಯನ್ನು ನಿಮ್ಮ ಪರವಾಗಿ ಬಡವರಿಗೆ ವಿಶ್ವ ಸಂಸ್ಥೆ ದಾನವಾಗಿ ನೀಡುತ್ತದೆ. ಈ ಜಾಲತಾಣದ ವಿಳಾಸ freerice.com. ಈ ಜಾಲತಾಣಕ್ಕೆ ದಿನಾ ಭೇಟಿ ನೀಡಿ, ರಸಪ್ರಶ್ನೆಗಳಲ್ಲಿ ಭಾಗವಹಿಸಿ, ನಿಮ್ಮ ಜ್ಞಾನಭಂಡಾರ ಬೆಳೆಸಿಕೊಳ್ಳಿ, ಜೊತೆಗೆ ಹಸಿದವರಿಗೆ ಅನ್ನ ನೀಡಿ ನೆರವಾಗಿ.

ಡೌನ್‌ಲೋಡ್

ಅತೀ ಅವಶ್ಯ ತಂತ್ರಾಂಶಗಳು

ಗಣಕದಲ್ಲಿ ಏನೇ ಕೆಲಸ ಮಾಡಬೇಕಿದ್ದರೂ ಕೆಲವು ತಂತ್ರಾಂಶಗಳು ಇರುವುದು ಅತೀ ಅವಶ್ಯ. ಇವುಗಳಲ್ಲಿ ಬ್ರೌಸರ್, ಗ್ರಾಫಿಕ್ಸ್, ವೈರಸ್ ನಿರೋಧಕ, ಇತ್ಯಾದಿ ಹಲವು ವಿಧಗಳಿವೆ. ಪ್ರತಿಯೊಂದರಲ್ಲು ಹಲವು ಉಚಿತ ತಂತ್ರಾಂಶಗಳು ಲಭ್ಯವಿವೆ. ಇವುಗಳನ್ನು ಆಯಾ ತಂತ್ರಾಂಶದ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಮಸ್ಯೆ ಏನೆಂದರೆ ಈ ಎಲ್ಲ ತಂತ್ರಾಂಶಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಅವುಗಳ ಜಾಲತಾಣ ವಿಳಾಸಗಳನ್ನೂ ನೆನಪಿಟ್ಟುಕೊಳ್ಳುವುದು. ಈ ಎಲ್ಲ ತಂತ್ರಾಂಶಗಳು ಒಂದೇ ಕಡೆ ಲಭ್ಯವಿದ್ದರೆ ಒಳ್ಳೆಯದಲ್ಲವೇ? ಹೌದು. ಅಂತಹ ಒಂದು ಜಾಲತಾಣವಿದೆ. ಅದರ ವಿಳಾಸ ninite.com. ಈ ಜಾಲತಾಣದಲ್ಲಿ ನಿಮಗೆ ಬೇಕಾದ ಎಲ್ಲ ತಂತ್ರಾಂಶಗಳನ್ನು ಆಯ್ಕೆ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

e - ಸುದ್ದಿ

ಕೃತಿಚೌರ್ಯ ತಾಣಕ್ಕೆ ಕೊಂಡಿ ನೀಡಿದ್ದಕ್ಕೆ ಕಾರಾಗೃಹ

ಕೃತಿಚೌರ್ಯ ಮಾಡುವುದು ಅಪರಾಧ. ಇದುಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಕೃತಿಚೌರ್ಯ ಮಾಡಿ ಪುಸ್ತಕ, ತಂತ್ರಾಂಶ, ಸಂಗೀತ, ವೀಡಿಯೋ, ಇತ್ಯಾದಿಗಳನ್ನು ಅಂತರಜಾಲದಲ್ಲಿ ವಿತರಿಸುವುದೂ ಅಪರಾಧ. ಈ ರೀತಿ ಮಾಡುವ ಜಾಲತಾಣಗಳು ಹಲವಾರಿವೆ. ಸಾಮಾನ್ಯವಾಗಿ ಇಂತಹ ಜಾಲತಾಣಗಳು ಕಾನೂನು ವ್ಯವಸ್ಥೆ ಸರಿಯಿಲ್ಲದಿರುವ ದೇಶಗಳಲ್ಲಿರುತ್ತವೆ. ಆದರೆ ಅಮೆರಿಕದಿಂದ ವರದಿಯಾದ ಸುದ್ದಿಯೇ ಬೇರೆ. ಒಬ್ಬಾತ ತನ್ನ ಜಾಲತಾಣದಲ್ಲಿ ಇಂತಹ ಜಾಲತಾಣಗಳಿಗೆ ಕೊಂಡಿ ನೀಡಿದ್ದ. ಅಧಿಕಾರಿಗಳು ಈ ರೀತಿ ಸಂಪರ್ಕ ಕೊಂಡಿ ನೀಡುವುದು ಕೂಡ ಅಪರಾಧ ಎಂದು ತೀರ್ಮಾನಿಸಿದರು. ಈಗ ಆತನ ಜಾಲತಾಣವನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಆತನಿಗೆ ಐದು ವರ್ಷ ಕಾರಾಗೃಹವಾಸದ ಶಿಕ್ಷೆ ವಿಧಿಸಲಾಗಿದೆ. ಸದ್ಯಕ್ಕೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಅಂತಿಮ ತೀರ್ಮಾನವನ್ನು ಕಾಯಲಾಗುತ್ತಿದೆ.

e- ಪದ

ಅಂತಾರಾಷ್ಟ್ರೀಯ ಜಾಲತಾಣಸೂಚಿ (Internationalized Domain Names -IDN) -ಇಂಗ್ಲಿಶ್ ಹೊರತಾದ ಇತರೆ ಭಾಷೆಗಳಲ್ಲಿ ಜಾಲತಾಣದ ವಿಳಾಸ ಸೂಚಿಸುವುದು. ಉದಾಹರಣೆಗೆ ಕನ್ನಡಪ್ರಭ ಪತ್ರಿಕೆಯ ಜಾಲತಾಣ ಸೂಚಿ www.kannadaprabha.com ಎಂದಿದೆ. ಇಲ್ಲಿ ಕನ್ನಡಪ್ರಭ ಎಂಬುದನ್ನು ಕನ್ನಡ ಲಿಪಿಯಲ್ಲೇ ಸೂಚಿಸಿದರೆ ಅದು ಐಡಿಎನ್ ಆಗುತ್ತದೆ. ಹೀಗೆ ಮಾಡಲು ಎಲ್ಲ ಗಣಕ ಕಾರ್ಯಾಚರಣೆಯ ವ್ಯವಸ್ಥೆಗಳು ಮತ್ತು ಬ್ರೌಸರ್ ತಂತ್ರಾಂಶಗಳು ಯುನಿಕೋಡ್ ಶಿಷ್ಟತೆಯನ್ನು ಬಳಸಬೇಕಾಗುತ್ತದೆ. ಈಗ ಎಲ್ಲವೂ ಯುನಿಕೋಡ್ ಆಗಿರುವುದರಿಂದ ಬೇಕಿದ್ದವರೆಲ್ಲ ತಮ್ಮ ಭಾಷೆಯಲ್ಲೇ ಜಾಲತಾಣಸೂಚಿಗಳನ್ನು ಮಾಡಿಕೊಳ್ಳಬಹುದು. ಭಾರತೀಯ ಭಾಷೆಗಳ ವಿಷಯಕ್ಕೆ ಬಂದಾಗ ಕೆಲವು ಸಂದಿಗ್ಧಕಾರಿ ಸಂದರ್ಭಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ. ಉಳಿದಂತೆ ನಮ್ಮ ಭಾಷೆಯಲ್ಲಿ ಡೊಮೈನ್ ಹೆಸರು ಮಾಡಿಕೊಳ್ಳಬಹುದು.

e - ಸಲಹೆ

ಸಂತೋಷ್ ನುಳಗೇರಿ ಅವರ ಪ್ರಶ್ನೆ: ನನಗೆ ನನ್ನ ಲ್ಯಾಪ್ಟಾಪ್ ನಲ್ಲಿ "ನುಡಿ" ತಂತ್ರಾಂಶವನ್ನು ಇನ್ಸ್ಟಾಲ್ ಮಾಡುವುದು ಅತಿ ಅವಶ್ಯವಾಗಿದೆ. ಆದರೆ ನನ್ನ ಆಪರೇಟಿಂಗ್ ಸಿಸ್ಟಂ "ವಿಂಡೋಸ್ 7" ಆಗಿದ್ದು ಅದರಲ್ಲಿ ನುಡಿ ತಂತ್ರಾಂಶದ ಇತ್ತೀಚಿನ ವರ್ಶನ್ ಕೂಡ ಇನ್ಸ್ಟಾಲ್ ಮಾಡಲು ಆಗುತ್ತಿಲ್ಲ. ಈ ತಂತ್ರಾಂಶವಿಲ್ಲದೆ ನನಗೆ KPSC ಅಥವಾ ಇನ್ಯಾವುದೇ ಸರಕಾರೀ ವೆಬ್ಸೈಟ್ ನಲ್ಲಿ ಕನ್ನಡದಲ್ಲಿ ದಾಖಲಾದ ಅಕ್ಷರಗಳನ್ನು ಓದಲು ಆಗುತ್ತಿಲ್ಲ. ದಯವಿಟ್ಟು ಈ ಸಮಸ್ಯಗೆ ಉಪಾಯ ಅಥವಾ ಅನ್ಯಮಾರ್ಗವಿದ್ದರೆ ತಿಳಿಸಿ.
ಉ: ನಾನೂ ಪ್ರಯತ್ನಿಸಿ ನೋಡಿದೆ. ಹೌದು, ೬೪ ಬಿಟ್ ವಿಂಡೋಸ್ ೭ ರಲ್ಲಿ ನುಡಿ ತಂತ್ರಾಂಶ ಕೆಲಸ ಮಾಡುವುದಿಲ್ಲ. ನಿಮಗೆ ಜಾಲತಾಣದಲ್ಲಿಯ ಮಾಹಿತಿಯನ್ನು ಓದುವುದು ಮಾತ್ರ ಅಗತ್ಯವಾದಲ್ಲಿ ನುಡಿ ಫಾಂಟ್‌ಗಳನ್ನು windows\fonts ಫೋಲ್ಡರ್‌ಗೆ ಪ್ರತಿ ಮಾಡಿಕೊಂಡು ಓದಬಹುದು. ನೀವು ವಿಂಡೋಸ್ ೭ ಪ್ರೊಫೆಶನಲ್ ಅಥವಾ ಅಲ್ಟಿಮೇಟ್ ಬಳಸುತ್ತಿರುವಿರಾದರೆ ಅದರಲ್ಲಿ XP Mode ಹಾಕಿಕೊಂಡು ಅದರೊಳಗೆ ನುಡಿ ತಂತ್ರಾಂಶ ಇನ್‌ಸ್ಟಾಲ್ ಮಾಡಿಕೊಂಡು ಕೆಲಸ ಮಾಡಬಹುದು.

ಕಂಪ್ಯೂತರ್ಲೆ

ಇನ್ನಷ್ಟು ಗಣಕ (ತ)ಗಾದೆಗಳು:
  • ಅಂತರಜಾಲ ಸಂಪರ್ಕವಿಲ್ಲದ ಗಣಕವು ಆಹಾರ ಇಲ್ಲದ ರೆಫ್ರಿಜರೇಟರಿನಂತೆ
  • ಖಡ್ಗಕ್ಕಿಂತ ಕೀಬೋರ್ಡ್ ಶಕ್ತಿಶಾಲಿ
  • ಬಹುತೇಕ ವಾಹನಳಲ್ಲಿ ಆಗುವಂತೆ ಗಣಕ ಕೈಕೊಡಲೂ ಕೆಟ್ಟ ಡ್ರೈವರ್‌ಗಳೇ ಕಾರಣ

ಶುಕ್ರವಾರ, ಏಪ್ರಿಲ್ 1, 2011

ಗಣಕಿಂಡಿ - ೦೯೭ (ಮಾರ್ಚ್ ೨೮, ೨೦೧೧)

ಅಂತರಜಾಲಾಡಿ

ಅಳಿದುಳಿದವರಿಗಾಗಿ

ಪ್ರಪಂಚದಲ್ಲಿ ಸಾವಿರಾರು ವರ್ಷಗಳ ಹಿಂದೆ ಎಲ್ಲೆಡೆ ಆದಿವಾಸಿಗಳೇ ಇದ್ದರು. ನಾಗರಿಕತೆ ಹೆಚ್ಚಿದಂತೆಲ್ಲ ಅವರೆಲ್ಲ ನಾಶವಾಗತೊಡಗಿದರು. ಆದರೆ ಈಗಲೂ ಪ್ರಪಂಚದ ಕೆಲವೆಡೆ ಕೆಲವೇ ಕೆಲವು ಆದಿವಾಸಿಗಳು ಉಳಿದುಕೊಂಡಿದ್ದಾರೆ. ಅವರು ಈಗಲೂ ಬೇಟೆಯಾಡಿ ಜೀವಿಸುತ್ತಿದ್ದಾರೆ. ಭಾರತದಲ್ಲಿ ಅಂಡಮಾನ್ ದ್ವೀಪದಲ್ಲಿ ಮಾತ್ರ ಇಂತಹ ಜನರು ಸುಮಾರು ೩೦೦ರಷ್ಟಿದ್ದಾರೆ. ಅವರಿದ್ದೆಡೆ ಹೋಗಬಾರದು ಎಂದು ಭಾರತ ಸರಕಾರವು ಕಾನೂನು ಮಾಡಿದೆ. ಇತ್ತೀಚೆಗೆ ಅಮೆಝಾನ್ ಕಾಡಿನಲ್ಲಿ ಅಂತಹ ಒಂದು ಜನಾಂಗದ ಪತ್ತೆಯಾಗಿದೆ. ಈ ರೀತಿಯ ಜನಾಂಗಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ಕೆಲವು ವಿಜ್ಞಾನಿಗಳು ವಾದಿಸುತ್ತಾರೆ. ಅವರನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ಹೋರಾಡುವವರ ಅಂತಾರಾಷ್ಟ್ರೀಯ ಸಂಘದ ಜಾಲತಾಣ www.survivalinternational.org. ಆದಿವಾಸಿಗಳ ಛಾಯಾಚಿತ್ರಗಳು, ಮಾಹಿತಿಗಳು ಹಾಗೂ ವೀಡಿಯೋಗಳು ಈ ಜಾಲತಾಣದಲ್ಲಿವೆ. ಇವರ ಕೆಲಸಕಾರ್ಯಗಳಿಗೆ ನೀವು ಯಾವ ರೀತಿ ಸಹಾಯ ಮಾಡಬಹುದು ಎಂಬ ವಿವರಗಳು ಜಾಲತಾಣದಲ್ಲಿವೆ.

ಡೌನ್‌ಲೋಡ್

ತುಂಡುಪದ ನಿಘಂಟು

ಇಂಗ್ಲಿಶ್ ಭಾಷೆಯಲ್ಲಿ ಬರೆಯುವಾಗ ಅಥವಾ ಬೆರಳಚ್ಚು ಮಾಡುವಾಗ ಒಂದು ದೀರ್ಘವಾದ ಪದವನ್ನು ಕೆಲವೊಮ್ಮೆ ತುಂಡು ಮಾಡಿ ಎರಡನೆಯ ಸಾಲಿನಲ್ಲಿ ಬರೆಯುವ ವಾಡಿಕೆಯಿದೆ. ಹೀಗೆ ಬರೆಯುವಾಗ ಮೊದಲನೆಯ ಸಾಲಿನ ಕೊನೆಯಲ್ಲಿ ಒಂದು ಚಿಕ್ಕ ಅಡ್ಡಗೆರೆ ಹಾಕುತ್ತೇವೆ. ಈ ಅಡ್ಡಗೆರೆಗೆ ಇಂಗ್ಲಿಶ್‌ನಲ್ಲಿ hyphen ಎನ್ನುತ್ತಾರೆ. ಹೀಗೆ ಪದಗಳನ್ನು ಎಲ್ಲೆಂದರಲ್ಲಿ ತುಂಡು ಮಾಡಲಾಗುವುದಿಲ್ಲ. ದೊಡ್ಡ ಪದಗಳನ್ನು ಎಲ್ಲೆಲ್ಲಿ ಯಾವ ಯಾವ ರೀತಿಯಲ್ಲಿ ತುಂಡು ಮಾಡಬಹುದು ಎಂದು ತಿಳಿಸಲು ನಿಘಂಟು ಇದೆ. ಈ ನಿಘಂಟನ್ನು ಬಹುತೇಕ ಎಲ್ಲ ಪುಟವಿನ್ಯಾಸದ ತಂತ್ರಾಂಶಗಳು ಬಳಸುತ್ತವೆ. ಇಂತಹ ಒಂದು ನಿಘಂಟು (hyphenation dictionary) ಉಚಿತವಾಗಿ ಬೇಕಾಗಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/gewezj. ಕನ್ನಡಕ್ಕೆ ಇಂತಹ ನಿಘಂಟನ್ನು ಯಾರೂ ಇದುತನಕ ತಯಾರು ಮಾಡಿದಂತಿಲ್ಲ. ಬಹುಶಃ ಇದಕ್ಕೆ ನಮ್ಮ ಭಾಷೆಯ ವೈಶಿಷ್ಟ್ಯವೂ ಕಾರಣವಿರಬಹುದು. ಕನ್ನಡ ಭಾಷೆಗೆ ಗಣಕ ಬಳಸಿ ಏನಾದರೂ ಸಹಾಯ ಮಾಡಬೇಕು ಎಂಬ ತುಡಿತವಿರುವವರು ಈ ಕೆಲಸ ಕೈಗೆತ್ತಿಕೊಳ್ಳಬಹುದು.

e - ಸುದ್ದಿ

ಎರಡು ಮದುವೆಯಾದವ ಫೇಸ್‌ಬುಕ್‌ನಿಂದಾಗಿ ಸಿಕ್ಕಿಬಿದ್ದ

ಎರಡು ಮದುವೆಯಾದವ ಫೇಸ್‌ಬುಕ್‌ನಿಂದಾಗಿ ಸಿಕ್ಕಿಬಿದ್ದ ಕಥೆ ಅಮೆರಿಕದಿಂದ ವರದಿಯಾಗಿದೆ. ಅಲ್ಲಿಯ ರಿಚರ್ಡ್ ಬಾರ್ಟನ್ ಎಂಬಾತ ಮೊದಲನೆಯ ಹೆಂಡತಿಯಿಂದ ವಿಚ್ಛೇದನ ಪಡೆಯುವ ಬಗ್ಗೆ ಮಾತನಾಡಿದ್ದ. ಆಕೆಯೂ ಒಪ್ಪಿದ್ದಳು. ಆದರೆ ಆತ ಕಾನೂನಿನ ಪ್ರಕಾರ ಮಾಡಬೇಕಾದ ಎಲ್ಲ ಕೆಲಸಗಳನ್ನು ಮಾಡಿರಲಿಲ್ಲ. ನಂತರ ಆತ ಆಕೆಯ ಬದುಕಿನಿಂದ ನಾಪತ್ತೆಯಾಗಿದ್ದ. ಆಕೆಯನ್ನು ಆತನ ಫೇಸ್‌ಬುಕ್ ಪುಟದಿಂದ ಆತ ತೆಗೆದುಹಾಕಿದ್ದ. ಆದರೂ ವರ್ಷಗಳ ಬಳಿಕ ಆಕೆ ಫೇಸ್‌ಬುಕ್‌ನಲ್ಲಿ ಆಕೆಯ ಸ್ನೇಹಿತರ ಸ್ನೇಹಿತರ, ಹಾಗೂ ಆತನ ಸ್ನೇಹಿತರ ಸ್ನೇಹಿತರ ಪುಟಗಳನ್ನು ಸುಮ್ಮನೆ ಜಾಲಾಡುತ್ತಿದ್ದಾಗ ಆತ ಇನ್ನೊಂದು ಮದುವೆಯಾಗಿರುವುದು ಪತ್ತೆಯಾಯಿತು. ಒಬ್ಬರ ಪುಟದಲ್ಲಿ ಆತನ ಎರಡನೆಯ ಮದುವೆಯ ಫೋಟೋಗಳಿದ್ದವು. ಆಕೆ ಪೋಲೀಸರಿಗೆ ದೂರು ನೀಡಿದಳು. ಪೋಲೀಸರು ಆತನನ್ನು ಬಂಧಿಸಿದರು.

e- ಪದ

ಅಪ್ಲಿಕೇಶನ್ ಸಾಫ್ಟ್‌ವೇರ್ (application software): ಆನ್ವಯಿಕ ತಂತ್ರಾಂಶ. ನಿರ್ದಿಷ್ಟ ಆವಶ್ಯಕತೆಗೆ ಅನುಗುಣವಾಗಿ ಅಭಿವೃದ್ಧಿಪಡಿಸಿದ ತಂತ್ರಾಂಶ. ಉದಾ: ವೇತನ ನಿರ್ವಹಣೆ, ಬಸ್, ರೈಲುಗಳಲ್ಲಿ ಸ್ಥಳ ಕಾಯ್ದಿರಿಸುವಿಕೆ ಇತ್ಯಾದಿ.

e - ಸಲಹೆ

ಸತೀಶ ಅವರ ಪ್ರಶ್ನೆ: ಕೆಲವು ಫೋಟೋ ವಿನಿಮಯ ಜಾಲತಾಣಗಳಲ್ಲಿ ಕಂಡುಬರುವ ಛಾಯಾಚಿತ್ರಗಳನ್ನು ಪ್ರತಿ ಮಾಡಿಕೊಳ್ಳಲು ಆಗುವುದಿಲ್ಲ. ನನಗೆ ಅಂತಹ ಚಿತ್ರಗಳನ್ನು ಪ್ರತಿಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಯಾವುದಾದರೂ ತಂತ್ರಾಂಶ ಇದೆಯೇ?
ಉ: bluefive.pair.com/snapshot.htm ಜಾಲತಾಣದಲ್ಲಿ ದೊರೆಯುವ ತಂತ್ರಾಂಶ ಬಳಸಿ. ಇದು ಒಂದು screencapture ತಂತ್ರಾಂಶ. ಅಂದರೆ ಪರದೆಯ ಯಾವ ಭಾಗವನ್ನು ಬೇಕಾದರೂ ಪ್ರತಿ ಮಾಡಿಕೊಂಡು ಯಾವುದಾದರೂ ಗ್ರಾಫಿಕ್ಸ್ ತಂತ್ರಾಂಶಕ್ಕೆ ಪ್ರತಿ ಮಾಡಿಕೊಳ್ಳಬಹುದು. ನೆನಪಿಡಿ. ಜಾಲತಾಣಗಳಲ್ಲಿ ನೀಡಿರುವ ಚಿತ್ರಗಳನ್ನು ಪ್ರತಿಮಾಡಿಕೊಳ್ಳುವುದೂ ಕಾನೂನು ಪ್ರಕಾರ ಅಪರಾಧವಾಗಬಹುದು. ಜಾಲತಾಣದಲ್ಲಿ ನೀಡಿರುವ ಪರವಾನಗಿ ಸೂಚನೆಯನ್ನು ಓದಿಕೊಳ್ಳಿ.

ಕಂಪ್ಯೂತರ್ಲೆ

ಕೆಲವು ಹಳೆಯ ಗಣಕ (ತ)ಗಾದೆಗಳು:
“ತಪ್ಪು ಮಾಡುವುದು ಮನುಷ್ಯ ಸ್ವಭಾವ. ಮಾಡಿದ ತಪ್ಪಿಗೆ ಗಣಕವನ್ನು ದೂರುವುದು ನೌಕರ ಸ್ವಭಾವ.”
“ಪ್ರಥಮ ಪ್ರಯತ್ನದಲ್ಲಿ ಯಶಸ್ವಿಯಾಗದಿದ್ದಲ್ಲಿ ಗಣಕವನ್ನು ದೂರು.”
“ಪ್ರೋಗ್ರಾಮ್‌ಗಿಂತ ಸ್ರ್ಕೀನ್‌ಸೇವರ್ ದೊಡ್ಡದು.”
“ಕೆಲಸ ಗೊತ್ತಿಲ್ಲದವನಿಗೆ ಗಣಕ ಸರಿಯಿಲ್ಲ.”
“ಮೆಮೊರಿಯಿದ್ದಷ್ಟೆ ಪ್ರೋಗ್ರಾಮ್ ಮಾಡು.”