ಮಂಗಳವಾರ, ಆಗಸ್ಟ್ 30, 2011

ಗಣಕಿಂಡಿ - ೧೧೯ (ಆಗಸ್ಟ್ ೨೯, ೨೦೧೧)

ಅಂತರಜಾಲಾಡಿ

ಸೂರ್ಯಾತೀತಗ್ರಹ ಮಾಹಿತಿಸಂಚಯ
ಬ್ರಹ್ಮಾಂಡದಲ್ಲಿ ನಮ್ಮ ಸೂರ್ಯನಿಗೆ ಮಾತ್ರವೇ ಗ್ರಹಗಳಿವೆ ಎಂದು ನಂಬಿದ್ದ ಕಾಲವೊಂದಿತ್ತು. ಆದರೆ ಈಗ ವಿಜ್ಞಾನ ತಂತ್ರಜ್ಞಾನ ತುಂಬ ಮುಂದುವರೆದಿದೆ. ಸೂರ್ಯನ ಹೊರತಾಗಿಯೂ ವಿಶ್ವದಲ್ಲಿರುವ ಕೋಟ್ಯಾನುಕೋಟಿ ನಕ್ಷತ್ರಗಳಲ್ಲಿ ಬಹುಪಾಲು ನಕ್ಷತ್ರಗಳಿಗೆ ಸುತ್ತುತ್ತಿರುವ ಗ್ರಹಗಳಿವೆ ಎಂದು ತೀರ್ಮಾನಕ್ಕೆ ಬರಲಾಗಿದೆ. ಅಂತಹವುಗಳಲ್ಲಿ ಇದುತನಕ ೫೭೩ ಸೂರ್ಯಾತೀತ ಗ್ರಹಗಳನ್ನು (exoplantes) ಪತ್ತೆಹಚ್ಚಲಾಗಿದೆ. ಇವುಗಳನ್ನು ಪತ್ತೆಹಚ್ಚುವುದು ತುಂಬ ಕಷ್ಟದ ಕೆಲಸ. ಅದಕ್ಕಾಗಿ ಕೆಲವು ವಿಶಿಷ್ಟ ವಿಧಾನಗಳನ್ನು ಬಳಸಲಾಗುತ್ತದೆ. ಹೀಗೆ ಪತ್ತೆಹಚ್ಚಿದ ಎಲ್ಲ ಗ್ರಹಗಳ ವಿವರಗಳು exoplanet.eu ಜಾಲತಾಣದಲ್ಲಿ ಲಭ್ಯವಿವೆ. ಸೂರ್ಯಾತೀತ ಗ್ರಹಗಳ ಬಗ್ಗೆ ಎಲ್ಲ ವಿವರಗಳು ಇಲ್ಲಿ ದೊರೆಯುತ್ತವೆ. ಜೊತೆಗೆ www.exoplanetology.com ಮತ್ತು exoplanets.org ಜಾಲತಾಣಗಳಿಗೂ ಭೇಟಿ ನೀಡಿ.

ಡೌನ್‌ಲೋಡ್


ಲ್ಯಾಪ್‌ಟಾಪ್, ಫೋನ್ ಸುರಕ್ಷೆ

ಲ್ಯಾಪ್‌ಟಾಪ್ ಅಥವಾ ಫೋನ್ ಕಳವಾಗುವುದು ಸಹಜ. ಹೀಗೆ ಕಳವಾದಾಗ ಪತ್ತೆ ಹಚ್ಚಲು ಸಹಾಯ ಮಾಡುವ ತಂತ್ರಾಂಶಗಳೂ ಹಲವಾರಿವೆ. ಅಂತಹ ಒಂದು ಉಚಿತ ತಂತ್ರಾಂಶ Prey. ಇದು ಲ್ಯಾಪ್‌ಟಾಪ್ ಮತ್ತು ಆಂಡ್ರೋಯಿಡ್ ಫೋನ್‌ಗಳಲ್ಲಿ ಕೆಲಸ ಮಾಡುತ್ತದೆ. ಲ್ಯಾಪ್‌ಟಾಪ್‌ನಲ್ಲಿ ಇದನ್ನು ಇನ್‌ಸ್ಟಾಲ್ ಮಾಡಿ ಕೆಲವು ಆಯ್ಕೆಗಳನ್ನು ನಮೂದಿಸಬೇಕು. ಲ್ಯಾಪ್‌ಟಾಪ್ ಕಳವಾದಾಗ ಫೋನ್ ಅಥವಾ ಅಂತರಜಾಲದ ಮೂಲಕ ಈ ತಂತ್ರಾಂಶವನ್ನು ಚಾಲನೆಗೊಳಿಸಬೇಕು. ನಂತರ ಅದು ನಾವು ನಿಗದಿ ಮಾಡಿದ ಸಮಯಕ್ಕೆ ಸರಿಯಾಗಿ ಲ್ಯಾಪ್‌ಟಾಪ್‌ನಲ್ಲಿ ಏನೇನು ನಡೆಯುತ್ತಿದೆ ಎಂದು ವರದಿ ಕಳುಹಿಸುತ್ತಿರುತ್ತದೆ. ಇದರ ಮೂಲಕ ಲ್ಯಾಪ್‌ಟಾಪ್ ಎಲ್ಲಿದೆ, ಯಾರು ಹೇಗೆ ಬಳಸುತ್ತಿದ್ದಾರೆ ಎಂಬ ಮಾಹಿತಿ ಪಡೆದು ಅದನ್ನು ಪೋಲೀಸರಿಗೆ ನೀಡಿ ಕಳ್ಳರನ್ನು ಹಿಡಿಯಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ preyproject.com.

e - ಸುದ್ದಿ

ತಂತ್ರಜ್ಞನಿಂದ ಕದ್ದರೆ?

ಕೆಲವು ತಿಂಗಳುಗಳ ಹಿಂದೆ ಇಂಗ್ಲೆಂಡಿನಲ್ಲಿ ಹದಿಹರೆಯದವರು ಅಂಗಡಿ ಮನೆಗಳನ್ನು ಲೂಟಿ ಮಾಡಿದ್ದು ನೆನಪಿರಬಹುದು. ಆ ಸಂದರ್ಭದಲ್ಲಿ ಒಬ್ಬ ಯುವಕ ಒಂದು ಮನೆಯಿಂದ ಲ್ಯಾಪ್‌ಟಾಪ್ ಒಂದನ್ನು ಕದ್ದ. ಆದರೆ ಆತನ ದುರದೃಷ್ಟಕ್ಕೆ ಆತ ಕದ್ದಿದ್ದು ಒಬ್ಬ ತಂತ್ರಾಂಶ ಸುರಕ್ಷಾ ಪರಿಣತನದಾಗಿತ್ತು. ಆತ ತನ್ನ ಲ್ಯಾಪ್‌ಟಾಪ್‌ನಲ್ಲಿ Prey ಎಂಬ ತಂತ್ರಾಂಶವನ್ನು ಅಳವಡಿಸಿದ್ದ. ಕಳ್ಳ ತಾನು ಕದ್ದ ಲ್ಯಾಪ್‌ಟಾಪ್‌ನಲ್ಲಿ ಏನೇನು ಮಾಡುತ್ತಿದ್ದಾನೆ ಎಂಬುದನ್ನು ಆ ತಂತ್ರಾಂಶ ಇಮೈಲ್ ಮಾಡತೊಡಗಿತು. ಎರಡು ದಿನಗಳ ನಂತರ ಕಳ್ಳ ತನ್ನ ಫೇಸ್‌ಬುಕ್ ಖಾತೆಗೆ ಲಾಗಿನ್ ಆದ. ಅಲ್ಲಿಂದ ಆತನ ಸಂಪೂರ್ಣ ವಿವರ ಪಡೆದು ಪೋಲೀಸರಿಗೆ ನೀಡಿ ಆತನನ್ನು ಬಂಧಿಸಲಾಯಿತು. 
 
e- ಪದ

ಮರುಟ್ವೀಟ್ (retweet) - ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ವಿಟ್ಟರಿನಲ್ಲಿ ಒಬ್ಬರು ದಾಖಲಿಸಿದ ಟ್ವೀಟ್ ಅನ್ನು ಇನ್ನೊಬ್ಬರು ಪುನರಾವರ್ತಿಸುವುದು. ಒಬ್ಬರ ಟ್ವೀಟ್ ಎಷ್ಟು ಜನಪ್ರಿಯವಾಗಿದೆ ಎಂಬುದಕ್ಕೆ ಎಷ್ಟು ಜನರು ಅದನ್ನು ಮರುಟ್ವೀಟ್ ಮಾಡಿದ್ದಾರೆ ಎಂಬುದೂ ಒಂದು ಅಳತೆಗೋಲಾಗಿದೆ. ಇತ್ತೀಚೆಗೆ ಆಕ್ಸ್‌ಫರ್ಡ್ ನಿಘಂಟು ಈ ಪದವನ್ನು ತನ್ನ ನಿಘಂಟಿನಲ್ಲಿ ಅಧಿಕೃತವಾಗಿ ಸೇರಿಸಿದೆ.

e - ಸಲಹೆ

ವೀರು ಅವರ ಪ್ರಶ್ನೆ: C ಪ್ರೋಗ್ರಾಮ್ಮಿಂಗ್ ಕಲಿಯಲು ಉಚಿತ ಟ್ಯುಟೋರಿಯಲ್ ಜಾಲತಾಣ ಯಾವುದಾರೂ ಇದೆಯೇ?
ಉ: ಹಲವಾರಿವೆ. ಒಂದು ಉದಾಹರಣೆ - www.tutorials4u.com/c/

ಕಂಪ್ಯೂತರ್ಲೆ

iMac, iPhone, iPod, iTab, ಇತ್ಯಾದಿಗಳನ್ನು ತಯಾರಿಸುವ ಆಪಲ್ ಕಂಪೆನಿಯ ಸಿಇಓ ಆಗಿದ್ದ ಸ್ಟೀವ್ ಜಾಬ್ಸ್ ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ಇತ್ತರು. ಅವರ ರಾಜೀನಾಮೆಯಲ್ಲಿದ್ದುದು ಒಂದೇ ಪದ -“iResign”

ಮಂಗಳವಾರ, ಆಗಸ್ಟ್ 23, 2011

ಗಣಕಿಂಡಿ - ೧೧೮ (ಆಗಸ್ಟ್ ೨೨, ೨೦೧೧)

ಅಂತರಜಾಲಾಡಿ

ಸ್ಲೈಡ್ ಹಂಚಿ

ಸಭೆ, ವಿಚಾರ ಸಂಕಿರಣ, ಕಮ್ಮಟ, ಗೋಷ್ಠಿಗಳಲ್ಲಿ ಮಂಡಿಸಬೇಕಾದ ವಿಷಯವನ್ನು ಪರಿಣಾಮಕಾರಿಯಾಗಿ ತಿಳಿಸಲು ಸಾಮಾನ್ಯವಾಗಿ ಗಣಕ ಬಳಸಿ ಪ್ರೆಸೆಂಟೇಶನ್ ಮಾಡಲಾಗುತ್ತದೆ. ಬಹುಜನರು ಇದಕ್ಕಾಗಿ ಬಳಸುವುದು ಮೈಕ್ರೋಸಾಫ್ಟ್ ಪವರ್‌ಪಾಯಿಂಟ್ ತಂತ್ರಾಂಶ. ಈ ರೀತಿ ತಯಾರಿಸಿದ ಪ್ರಸೆಂಟೇಶನ್ ಸ್ಲೈಡ್‌ಗಳನ್ನು ಜಗತ್ತಿಗೆ ಹಂಚಲು ಒಂದು ಜಾಲತಾಣ ಇದೆ. ಅದರ ವಿಳಾಸ - www.slideshare.net. ಈ ಜಾಲತಾಣ ಬಹುಮಟ್ಟಿಗೆ ಯುಟ್ಯೂಬ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ನೀವು ಇಲ್ಲಿ ನಿಮ್ಮ ಪ್ರೆಸೆಂಟೇಶನ್ ಸ್ಲೈಡ್‌ಗಳನ್ನು ಸೇರಿಸಿ ಅದರ ಕೊಂಡಿಯನ್ನು ನಿಮ್ಮ ಮಿತ್ರರಿಗೆ ಕಳುಹಿಸಿದರೆ ಅವರು ತಮ್ಮ ಗಣಕದಲ್ಲಿ ಅಂತರಜಾಲದ ಮೂಲಕ ಈ ಸ್ಲೈಡ್‌ಗಳನ್ನು ನೋಡಬಹುದು. ಜಾಲತಾಣದಲ್ಲಿ ಈಗಾಗಲೆ ಇರುವ ಸಾವಿರಾರು ಪ್ರಸೆಂಟೇಶನ್ ಸ್ಲೈಡ್‌ಗಳನ್ನು ವಿಷಯವಾರು ವಿಂಗಡಿಸಿರಿಸಲಾಗಿದೆ.

ಡೌನ್‌ಲೋಡ್

ಪ್ರಸಾರಕೇಂದ್ರ

ಬಾನುಲಿ ಹಾಗೂ ದೂರದರ್ಶನ ಕೇಂದ್ರಗಳು ಗೊತ್ತಲ್ಲ? ಅದೇ ರೀತಿ ಅಂತರಜಾಲದ ಮೂಲಕ ರೇಡಿಯೋ ಹಾಗೂ ಟಿ.ವಿ. ಪ್ರಸಾರ ಕೇಂದ್ರಗಳನ್ನು ಸ್ಥಾಪಿಸಬಹುದು. ಅದಕ್ಕೆ ತುಂಬ ಹಣ ಖರ್ಚು ಆಗುತ್ತದೆ. ಸುಲಭದಲ್ಲಿ ಒಂದು ಪ್ರಸಾರ ಕೇಂದ್ರ ಪ್ರಾರಂಭಿಸಬೇಕೇ? ಅದಕ್ಕೆಂದೇ ಒಂದು ತಂತ್ರಾಂಶ ಉಚಿತವಾಗಿ www.sopcast.com ಜಾಲತಾಣದಲ್ಲಿ ಲಭ್ಯವಿದೆ. ಈ ತಂತ್ರಾಂಶದ ವೈಶಿಷ್ಟ್ಯವೇನೆಂದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ (person-to-person, P2P) ವಿಧಾನವನ್ನು ಬಳಸುತ್ತದೆ. ಟೊರೆಂಟ್ ಬಳಸುವವರಿಗೆ ಈ ವಿಧಾನ ಪರಿಚಿತ. ನಿಮ್ಮ ಗಣಕವನ್ನು ಬ್ರಾಡ್‌ಬಾಂಡ್ ಮೂಲಕ ಅಂತರಜಾಲಕ್ಕೆ ಸಂರ್ಕಿಸಿ ಈ ತಂತ್ರಾಂಶ ಮೂಲಕ ಹಾಡು, ಚಲನಚಿತ್ರಗಳನ್ನು ಜಗತ್ತಿಗೆಲ್ಲ ಪ್ರಸಾರ ಮಾಡಬಹುದು. ಅದನ್ನು ನೋಡುವವರಲ್ಲೂ ಅದೇ ತಂತ್ರಾಂಶ ಇರತಕ್ಕದ್ದು. ನಿಮ್ಮ ಸಂಘದ ಕಾರ್ಯಕ್ರಮ, ಮಗಳ ಹುಟ್ಟುಹಬ್ಬದ ಆಚರಣೆ, ಮದುವೆ, ಏನೇ ಇರಬಹುದು, ಈ ವಿಧಾನದಲ್ಲಿ ನಿಮ್ಮ ಮಿತ್ರರಿಗೆಲ್ಲ ಪ್ರಸಾರ ಮಾಡಬಹುದು.

e - ಸುದ್ದಿ

ಕಾರು ಓಡಿಸಿದಷ್ಟೇ ತೆರಿಗೆ

ಕಾರು ಓಡಿಸಿದಷ್ಟೇ ಪೆಟ್ರೋಲು ಖರ್ಚಾಗುವುದು ಎಲ್ಲಿರಿಗೂ ತಿಳಿದ ವಿಷಯ. ಆದರೆ ತೆರಿಗೆ ವಿಷಯದಲ್ಲಿ ಹಾಗಿಲ್ಲ. ನೀವು ಕಾರು ಓಡಿಸಿ ಅಥವಾ ಸುಮ್ಮನೆ ಗ್ಯಾರೇಜಿನಲ್ಲಿಟ್ಟಿರಿ, ವರ್ಷಕ್ಕೆ ಇಂತಿಷ್ಟು ಎಂದು ತೆರಿಗೆ ಕಟ್ಟಲೇ ಬೇಕು (ಭಾರತದಲ್ಲಿ ೧೫ ವರ್ಷಗಳ ತೆರಿಗೆಯನ್ನು ಕಾರು ಕೊಂಡುಕೊಳ್ಳುವಾಗಲೇ ತೆರಬೇಕು). ನೆದರ್‌ಲ್ಯಾಂಡ್ ದೇಶದಲ್ಲಿ ಒಂದು ಹೊಸ ಪ್ರಯೋಗ ನಡೆಯುತ್ತಿದೆ. ಕಾರುಗಳಲ್ಲಿರುವ ಉಪಗ್ರಹಾಧಾರಿತ ಜಿಪಿಎಸ್ ತಂತ್ರಜ್ಞಾನದ ಮೂಲಕ ಕಾರು ಯಾವಾಗ ಎಷ್ಟು ದೂರ ಕ್ರಮಿಸಿದೆ ಎಂದು ದಾಖಲಿಸಲಾಗುತ್ತದೆ. ತಿಂಗಳ ಅಥವಾ ವರ್ಷದ ಕೊನೆಗೆ ಕಾರು ಒಟ್ಟು ಎಷ್ಟು ದೂರ ಸಂಚರಿಸಿದೆಯೋ ಅದಕ್ಕೆ ಅನುಗುಣವಾಗಿ ತೆರಿಗೆ ಕಟ್ಟತಕ್ಕದ್ದು. ಇಂಧನ ಉಳಿಸಿ ಪರಿಸರವನ್ನು ಉಳಿಸಲು ಸಹಾಯಮಾಡಲು ಜನರಿಗೆ ಉತ್ತೇಜನ ನೀಡಲು ಈ ಹೊಸ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ.  
 
e- ಪದ

ಬಹುಮಾಧ್ಯಮ ಪ್ರಸಾರ (Streaming or media streaming) - ಅಂತರಜಾಲದ ಮೂಲಕ ಬಹುಮಾಧ್ಯಮ ಅದರಲ್ಲೂ ಮುಖ್ಯವಾಗಿ ಧ್ವನಿ ಮತ್ತು ವೀಡಿಯೋಗಳನ್ನು ಪ್ರಸಾರ ಮಾಡುವುದು.  ಇಲ್ಲಿ ಧ್ವನಿ ಮತ್ತು ವೀಡಿಯೋ ಮಾಹಿತಿಯು ನಿರಂತರ ಪ್ರವಾಹ ರೂಪದಲ್ಲಿ ಪ್ರಸಾರವಾಗುತ್ತಿರುತ್ತದೆ. ಅಂದರೆ ಸಂಗೀತ ಅಥವಾ ಚಲನಚಿತ್ರವನ್ನು ಗಣಕಕ್ಕೆ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಯುಟ್ಯೂಬ್ ಇದಕ್ಕೆ ಉತ್ತಮ ಉದಾಹರಣೆ. ಆದರೆ ಇಂತಹ ಪ್ರಸಾರಗಳನ್ನು ಸಂಗ್ರಹಿಸಿ ಗಣಕಕ್ಕೆ ಪ್ರತಿ ಮಾಡಿಕೊಳ್ಳಲೂ ತಂತ್ರಾಂಶಗಳು ಲಭ್ಯವಿವೆ.

e - ಸಲಹೆ

ತೀರ್ಥಹಳ್ಳಿಯ ಅಶ್ವಿನ್ ಅವರ ಪ್ರಶ್ನೆ: ನೋಕಿಯ 3110 ಫೋನಿನಿಂದ ಎಲ್ಲ ವಿಳಾಸಗಳನ್ನು ಗಣಕಕ್ಕೆ ಪ್ರತಿ ಮಾಡಿಕೊಳ್ಳುವುದು ಹೇಗೆ?
ಉ: ನೋಕಿಯಾ ಜಾಲತಾಣದಿಂದ PCSuite ಎಂಬ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಈ ತಂತ್ರಾಂಶ ಬಳಸಿ ಯುಎಸ್‌ಬಿ ಕೇಬಲ್ ಮೂಲಕ ಮೊಬೈಲಿನಿಂದ ಗಣಕಕ್ಕೆ ವಿಳಾಸಗಳನ್ನು ಪ್ರತಿ ಮಾಡಿಕೊಳ್ಳಬಹುದು.

ಕಂಪ್ಯೂತರ್ಲೆ

ಕೋಲ್ಯನ ಗಣಕದಲ್ಲೇನೋ ತೊಂದರೆಯಾಗಿತ್ತು. ಗ್ರಾಹಕ ಸೇವೆಗೆ ಫೋನ್ ಮಾಡಿದ. “ಎಷ್ಟು ವಿಂಡೋಗಳನ್ನು ತೆರೆದಿದ್ದೀರಾ” ಎಂಬ ಪ್ರಶ್ನೆ ಬಂತು. ಕೋಲ್ಯ ಉತ್ತರಿಸಿದ “ನಾನು ಹವಾನಿಯಂತ್ರಿತ ಕೊಠಡಿಯಲ್ಲಿದ್ದೇನೆ. ಯಾವ ವಿಂಡೋವೂ ತೆರೆದಿಲ್ಲ”.

ಬುಧವಾರ, ಆಗಸ್ಟ್ 17, 2011

ಗಣಕಿಂಡಿ - ೧೧೭ (ಆಗಸ್ಟ್ ೧೫, ೨೦೧೧)

ಅಂತರಜಾಲಾಡಿ

ಭಾರತ ನನ್ನ ದೇಶ

ನಮ್ಮ ದೇಶದ ಅಧಿಕೃತ ಅಂತರಜಾಲತಾಣ ಇರಲೇಬೇಕಲ್ಲ? ಹೌದು, ಇದೆ. ಅದರ ವಿಳಾಸ - india.gov.in. ಇದು ಭಾರತ ಸರಕಾರದ ಅಧಿಕೃತ ಜಾಲತಾಣ. ನಮ್ಮ ದೇಶದ ಬಗ್ಗೆ ಎಲ್ಲ ವಿವರಗಳು ಇಲ್ಲಿವೆ. ಉದಾ- ರಾಷ್ಟ್ರೀಯ ಹಬ್ಬಗಳು, ಪ್ರಾಣಿ, ಹೂವು, ಪಕ್ಷಿ, ಗೀತೆ, ನದಿ, ಇತ್ಯಾದಿ. ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಅವುಗಳ ಮಾಹಿತಿಗಳು ಇಲ್ಲಿವೆ ಅಥವಾ ಆಯಾ ಸರಕಾರಗಳ ಅಧಿಕೃತ ಜಾಲತಾಣಗಳಿಗೆ ಕೊಂಡಿಗಳಿವೆ. ಪಾಸ್‌ಪೋರ್ಟ್ ಪಡೆಯುವುದು ಹೇಗೆ, ಸರಕಾರದ ಹಲವು ಅರ್ಜಿಗಳು, ಗಝೆಟ್‌ಗಳು ಎಲ್ಲ ಮಾಹಿತಿ ಇಲ್ಲಿವೆ. ಸರಕಾರಕ್ಕೆ ನೇರವಾಗಿ ದೂರು ನೀಡಬೇಕೆ? ಅದಕ್ಕೂ ಇಲ್ಲಿ ಸವಲತ್ತು ಇದೆ. ಇದು ನಿಜಕ್ಕೂ ಉಪಯೋಗಕಾರಿ. ಇದು ಕೆಲಸ ಮಾಡುತ್ತದೋ ಇಲ್ಲವೋ ಎಂಬ ಬಗ್ಗೆ ನನಗೆ ಅನುಮಾನವಿತ್ತು. ನಾನು ಒಂದು ದೂರು ಸಲ್ಲಿಸಿದಾಗ ಅದರ ಬಗ್ಗೆ ಕ್ರಮ ತೆಗೆದುಕೊಂಡು ನನಗೆ ಪತ್ರವೂ ಬಂದಿತ್ತು. ನಮ್ಮ ರಾಜ್ಯದಲ್ಲಿರುವ ಒಟ್ಟು ಜಿಲ್ಲೆಗಳ ಮಾಹಿತಿ ಮಾತ್ರ ತಪ್ಪಾಗಿದೆ.

ಡೌನ್‌ಲೋಡ್

ಅರ್ಜಿಗಳು

ಪಾಸ್‌ಪೋರ್ಟ್‌ಗೆ ಅರ್ಜಿ ಗುಜರಾಯಿಸಬೇಕಾಗಿದೆ. ಆದರೆ ಅರ್ಜಿ ಎಲ್ಲಿ ಸಿಗುತ್ತದೆ? ವಾಹನದ ಪರವಾನಗಿ ಪತ್ರ ಕಳೆದುಹೋಗಿದೆ. ಇನ್ನೊಂದು ಪ್ರತಿ ಬೇಕಾಗಿದೆ. ಅದಕ್ಕೂ ಅರ್ಜಿ ಹಾಕಬೇಕಾಗಿದೆ. ಹೀಗೆ ಒಂದಲ್ಲ ಒಂದು ನಮೂನೆಯ ಅರ್ಜಿ ಎಲ್ಲರಿಗೂ ಬೇಕಾಗಿ ಬರುತ್ತದೆ. ಇಲ್ಲಿ ನೀಡಿರುವ ಎರಡು ಉದಾಹರಣೆಗಳಲ್ಲಿ ಆಯಾ ಖಾತೆಯ ಜಾಲತಾಣಕ್ಕೆ ಭೇಟಿ ನೀಡಿ ಹುಡುಕಾಡಿದರೆ ಅರ್ಜಿ ಸಿಗುತ್ತದೆ. ಎಲ್ಲ ಅರ್ಜಿಗಳು ಒಂದೇ ಕಡೆ ಸಿಗುವಂತಿದ್ದರೆ ಒಳ್ಳೆಯದು ಅಂದುಕೊಳ್ಳುತ್ತಿದ್ದೀರಾ? ಅದೂ ಸಿದ್ಧವಾಗಿದೆ. www.downloadformsindia.com ಜಾಲತಾಣಕ್ಕೆ ಭೇಟಿ ನೀಡಿ ನಿಮಗೆ ಬೇಕಾದ ರಾಜ್ಯ ಅಥವಾ ಕೆಂದ್ರ ಸರಕಾರದ ಸೂಕ್ತ ಖಾತೆಯ ಅರ್ಜಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

e - ಸುದ್ದಿ

ಟ್ವೀಟ್ ಮಾಡುವ ವಾಶಿಂಗ್ ಮೆಶಿನ್

ಅಮೆರಿಕದ ಅಪಾರ್ಟ್‌ಮೆಂಟ್‌ಗಳಲ್ಲಿ ಬಟ್ಟೆ ತೊಳೆಯುವ ಯಂತ್ರ ಇಟ್ಟುಕೊಳ್ಳುವ ಹಾಗಿಲ್ಲ. ಅದಕ್ಕೆಂದೆ ನೆಲಮಹಡಿಯಲ್ಲಿ ಒಂದು ಕೋಣೆ ಇರುತ್ತದೆ. ಅಲ್ಲಿ ಹಲವಾರು ಯಂತ್ರಗಳಿರುತ್ತವೆ. ಇಪ್ಪತ್ತನೆಯ ಮಹಡಿಯಲ್ಲಿರುವವರು ತಮ್ಮೆಲ್ಲ ಕೊಳೆ ಬಟ್ಟೆಗಳನ್ನು ತುಂಬಿಕೊಂಡು ಆ ಕೊಠಡಿಗೆ ಹೋದಾಗ ಎಲ್ಲ ಯಂತ್ರಗಳು ಬಳಕೆಯಲ್ಲಿದ್ದರೆ ಅವರು ಯಾವುದಾದರು ಯಂತ್ರ ಖಾಲಿ ಆಗುವ ತನಕ ಕಾಯ ಬೇಕಾಗುತ್ತದೆ. ಈಗ ಕೆಲವು ಬುದ್ಧಿವಂತ ಯಂತ್ರಗಳು ಮಾರುಕಟ್ಟೆಗೆ ಬರತೊಡಗಿವೆ. ಅದನ್ನೆ ಸ್ವಲ್ಪ ಬದಲಾಯಿಸಿ ಒಬ್ಬರು ಟ್ವೀಟ್ ಮಾಡುವ ಯಂತ್ರ ತಯಾರಿಸಿದ್ದಾರೆ. ಕೊಠಡಿಯಲ್ಲಿರುವ ಎಲ್ಲ ಯಂತ್ರಗಳನ್ನು ಇದಕ್ಕೆ ಜೋಡಿಸಲಾಗಿದೆ. ಯಾವ ಯಂತ್ರ ಖಾಲಿಯಾದರೂ ಅದು ಟ್ವೀಟ್ ಮಾಡುತ್ತದೆ. ಮನೆಯಲ್ಲೆ ಕುಳಿತು ಈ ಸಂದೇಶ ಬಂದೊಡನೆ ಬಟ್ಟೆ ತೆಗೆದುಕೊಂಡು ಕೆಳಗಿಳಿದು ಬಂದರೆ ಆಯಿತು.  
 
e- ಪದ

ಸಹಯೋಗಿ ತಂತ್ರಾಂಶ (groupware) - ಹಲವು ಮಂದಿ ಜೊತೆ ಸೇರಿ ಸಹಯೋಗದಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುವ ತಂತ್ರಾಂಶ. ಉದಾಹರಣೆಗೆ ಒಂದು ಕಡತ ತಯಾರಿಸುವುದು. ಈ ಕೆಲಸಕ್ಕೆ ಹಲವು ಮಂದಿ ಕೈಜೋಡಿಸಬಹುದು. ಒಬ್ಬರು ತಯಾರಿಸಿದ ಭಾಗಕ್ಕೆ ಇನ್ನೊಬ್ಬರು ಟಿಪ್ಪಣಿ ಹಾಕಬಹುದು. ಎಲ್ಲರೂ ಜೊತೆ ಸೇರಿ ಸಮೂಹ ಚಾಟ್ ಮಾಡಬಹುದು. ಇಮೈಲ್ ಕಳುಹಿಸುವುದೂ ಇದರಲ್ಲಿ ಅಡಕವಾಗಿದೆ.

e - ಸಲಹೆ

ತೇಜೇಶ್ ಅವರ ಪ್ರಶ್ನೆ: ನನಗೆ ಗೂಗ್ಲ್ ಕ್ರೋಮ್ ಬ್ರೌಸರ್ ಬೇಕಾಗಿದೆ. ಆದರೆ ಅದು ಅಂತರಜಾಲ ಸಂಪರ್ಕ ಇಲ್ಲದಿದ್ದರೂ ಇನ್‌ಸ್ಟಾಲ್ ಮಾಡುವಂತಿರಬೇಕು.
ಉ: ಈ ಕೊಂಡಿಯನ್ನು ಬಳಸಿ - http://dl.google.com/chrome/install/154.36/chrome_installer.exe.

ಕಂಪ್ಯೂತರ್ಲೆ

ಒಂದು ಹುಡುಗಿಯ ಟೀಶರ್ಟ್‌ನಲ್ಲಿ ಕಂಡಿದ್ದು -“ನಾನು ಫೇಸ್‌ಬುಕ್ ಅಲ್ಲ. ಎಲ್ಲರೂ ನನ್ನನ್ನು ಮೆಚ್ಚಬೇಕಾಗಿಲ್ಲ”.

ಮಂಗಳವಾರ, ಆಗಸ್ಟ್ 9, 2011

ಗಣಕಿಂಡಿ - ೧೧೬ (ಆಗಸ್ಟ್ ೦೮, ೨೦೧೧)

ಅಂತರಜಾಲಾಡಿ

ಆತ್ಮಹತ್ಯೆ ಬೇಡ

ಖಿನ್ನತೆ ಒಂದು ಬಹುಸಾಮಾನ್ಯ ಖಾಯಿಲೆ. ಇದು ಹೆಚ್ಚಾಗಿ ಹಲವು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆ ಸಾಮಾನ್ಯವಾಗಿ ಪ್ರತಿ ವ್ಯಕ್ತಿಗೂ ಒಮ್ಮೆಯಾದರೂ ಬಂದೇ ಬರುತ್ತದೆ. ಕೆಲವರಿಗೆ ಇಂತಹ ಸಂದರ್ಭದಲ್ಲಿ ಒತ್ತಡ ತಡೆದುಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಂಡೇ ಬಿಡುತ್ತಾರೆ. ಇಂತಹವರಿಗೆ ಆಪ್ತಸಲಹೆ ಅತಿ ಮುಖ್ಯ. ಅತ್ಮೀಯರಲ್ಲಿ ಹೇಳಿಕೊಳ್ಳಲಾಗುವುದಿಲ್ಲ. ಅದಕ್ಕಾಗಿಯೇ ಸಹಾಯವಾಣಿ ಇದೆ. ಅಂತರಜಾಲತಾಣವೂ ಇದೆ. ಅಂತಹ ಒಂದು ಜಾಲತಾಣ www.aasra.info. ನಿಮ್ಮ ಪರಿಚಯದವರು ಯಾರಾದರೂ ನಿಮ್ಮಲ್ಲಿ ಆಗಾಗ “ಈ ಜೀವನ ಸಾಕಾಗಿದೆ. ಸಾಯೋಣ ಅನ್ನಿಸುತ್ತಿದೆ” ಎಂದೆಲ್ಲ ಗಳಹುತ್ತಿದ್ದರೆ ಅವರಿಗೆ ಈ ಜಾಲತಾಣಕ್ಕೆ ಭೇಟಿ ನೀಡಲು ಸಲಹೆ ನೀಡಿ.

ಡೌನ್‌ಲೋಡ್

ಯುಎಸ್‌ಬಿ ಲೈನಕ್ಸ್

ಲೈನಕ್ಸ್ ಒಂದು ಪ್ರಮುಖ ಕಾರ್ಯಾಚರಣೆಯ ವ್ಯವಸ್ಥೆ (operating system). ಅಷ್ಟೇ ಹೇಳಿದರೆ ಸಾಲದು. ಇದು ಸಂಪೂರ್ಣ ಉಚಿತ ಮತ್ತು ಮುಕ್ತ ತಂತ್ರಾಂಶ. ಇತ್ತೀಚೆಗೆ ಇದು ತುಂಬ ಜನಪ್ರಿಯವಾಗುತ್ತಿದೆ. ಲೈನಕ್ಸ್ ಬಳಸಬೇಕಿದ್ದರೆ ಪರಿಣತರಿಂದ ಮಾತ್ರ ಸಾಧ್ಯ ಎಂಬ ಕಾಲವೊಂದಿತ್ತು. ಆದರೆ ಈಗ ಹಾಗಿಲ್ಲ. ನಿಮ್ಮಲ್ಲಿ ಇರುವ ಗಣಕದಲ್ಲೇ ವಿಂಡೋಸ್ ಜೊತೆಗೇ ಲೈನಕ್ಸ್ ಕೂಡ ಹಾಕಿಕೊಳ್ಳಬಹುದು. ಆದರೆ ಅದಕ್ಕಾಗಿ ಹಾರ್ಡ್‌ಡಿಸ್ಕನ್ನು ವಿಭಾಗ ಮಾಡಿ ಅದರಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಮೊದಲು ಕಲಿತು ಆಮೇಲೆ ಹಾಕಿಕೊಳ್ಳೋಣ ಎನ್ನುವವರಿಗೆ ಸಿ.ಡಿ. ಅಥವಾ ಡಿ.ವಿ.ಡಿ.ಯಿಂದಲೇ ಬೂಟ್ ಮಾಡಿ ಅದರಿಂದಲೇ ಕೆಲಸ ಮಾಡುವ ಸೌಲಭ್ಯವೂ ಇದೆ. ಇನ್ನೂ ಒಂದು ಸೌಲಭ್ಯವಿದೆ. ಅದು ಯುಎಸ್‌ಬಿಯಿಂದ ಕೆಲಸ ಮಾಡುವುದು. ಇದಕ್ಕಾಗಿ LinuxLive USB Creator ಎನ್ನುವ ತಂತ್ರಾಶ www.linuxliveusb.com ಜಾಲತಾಣದಲ್ಲಿ ಲಭ್ಯವಿದೆ.

e - ಸುದ್ದಿ

ಹಾಡು ಪ್ರತಿಮಾಡಿಕೊಳ್ಳುವುದು ಕಾನೂನುಬದ್ಧವಾಗಲಿದೆ

ನೀವು ಹಣಕೊಟ್ಟು ಕೊಂಡುಕೊಂಡ ಸಿ.ಡಿ. ಅಥವಾ ಡಿ.ವಿ.ಡಿ.ಯಲ್ಲಿರುವ ಸಂಗೀತ ಅಥವಾ ಚಲನಚಿತ್ರವನ್ನು ನಿಮ್ಮೆದೇ ವೈಯಕ್ತಿಕ ಮನರಂಜನೆಯ ಉಪಕರಣಕ್ಕೆ (ಐಪಾಡ್, ಎಂಪಿ೩ ಪ್ಲೇಯರ್, ಇತ್ಯಾದಿ) ಪರಿವರ್ತಿಸಿ ವರ್ಗಾಯಿಸಿ ಬಳಸುತ್ತಿರುವಿರಿ ತಾನೆ? ಕಾನೂನು ಪ್ರಕಾರ ಇದು ಕೃತಿಚೌರ್ಯವಾಗುತ್ತದೆ ಎಂಬುದು ಎಷ್ಟು ಜನರಿಗೆ ಗೊತ್ತಿದೆ? ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಕೊನೆಗೂ ಈ ರೀತಿ ಪರಿವರ್ತಿಸಿ ಬಳಸುವುದು ಅಪರಾಧವಲ್ಲ ಎಂದು ಇಂಗ್ಲೆಂಡಿನಲ್ಲಿ ಕಾನೂನು ಮಾಡಲಾಗುತ್ತಿದೆ. ಭಾರತದಲ್ಲಿ ಇನ್ನೂ ಇದರ ಬಗ್ಗೆ ಚರ್ಚೆ ಪ್ರಾರಂಭವಾಗಿಲ್ಲ. 
 
e- ಪದ

ವೈಯಕ್ತಿಕ ಮನರಂಜನೆಯ ಉಪಕರಣ (personal media player or portable media player (PMP) or digital audio player (DAP)) - ಡಿಜಿಟಲ್ ವಿಧಾನದಲ್ಲಿ ಹಾಡು, ಸಂಗೀತ, ಚಲನಚಿತ್ರ, ಫೋಟೋ, ಇತ್ಯಾದಿಗಳನ್ನು ಸಂಗ್ರಹಿಸಿಟ್ಟುಕೊಂಡು ಅದನ್ನು ಚಲಾಯಿಸಿ ವೀಕ್ಷಿಸಲು ಮತ್ತು ಆಲಿಸಲು ಅನುವು ಮಾಡಿಕೊಡುವ ಉಪಕರಣ. ಉದಾ -ಆಪಲ್ ಐಪಾಡ್, ಕ್ರಿಯೇಟಿವ್ ಎಂಪಿ೩ ಪ್ಲೇಯರ್, ಮೈಕ್ರೋಸಾಫ್ಟ್ ಝೂನ್, ಇತ್ಯಾದಿ.

e - ಸಲಹೆ

ಪೂರ್ವಿ ಅವರ ಪ್ರಶ್ನೆ: ನನಗೆ ಟೈಪಿಂಗ್ ವೇಗ ಹೆಚ್ಚಿಸಲು ಸಹಾಯ ಮಾಡುವ ಉಚಿತ ತಂತ್ರಾಂಶ ಬೇಕು. ಎಲ್ಲಿ ಸಿಗುತ್ತದೆ?
ಉ: ನಿಮಗೆ ಟೈಪಿಂಗ್ ಟ್ಯೂಟರ್ ತಂತ್ರಾಂಶ ಬೇಕಾಗಿದೆ. ನಿವು www.tipp10.com/en/ ಜಾಲತಾಣದಲ್ಲಿ ದೊರೆಯುವ TIPP10 ತಂತ್ರಾಂಶವನ್ನು ಬಳಸಬಹುದು.

ಕಂಪ್ಯೂತರ್ಲೆ

ಒಬ್ಬಾತ ತನ್ನ ಫೇಸ್‌ಬುಕ್ ಸ್ಥಿತಿಯಲ್ಲಿ “ನಾನು ಈ ರಾತ್ರಿ ಟೆರೇಸ್‌ನಲ್ಲಿ ಮಲಗುತ್ತೇನೆ” ಎಂದು ದಾಖಲಿಸಿದ. ಎರಡೇ ನಿಮಿಷಗಳಲ್ಲಿ ಹದಿನೈದು ಸೊಳ್ಳೆಗಳು ಅವನ ಸ್ಥಿತಿಯನ್ನು ಮೆಚ್ಚಿದ್ದವು!

ಬುಧವಾರ, ಆಗಸ್ಟ್ 3, 2011

ಗಣಕಿಂಡಿ - ೧೧೫ (ಆಗಸ್ಟ್ ೦೧, ೨೦೧೧)

ಅಂತರಜಾಲಾಡಿ

ಇ-ದಾನ ಮಾಡಿ

ನಿಮ್ಮಲ್ಲಿ ನಿಮಗೆ ಉಪಯೋಗವಿಲ್ಲದ ಆದರೆ ಸಂಪೂರ್ಣ ಕೆಟ್ಟು ಹೋಗಿರದ ಹಲವಾರು ವಸ್ತುಗಳಿರಬಹುದು. ಅದು ಬೆಲೆಬಾಳುವ ಉಪಕರಣವಿರಬಹುದು, ಬಟ್ಟೆಬರೆಯಿರಬಹುದು, ಅಥವಾ ಸೈಕಲ್, ಹೀಗೆ ಯಾವುದು ಬೇಕಿದ್ದರೂ ಆಗಿರಬಹುದು. ಅವುಗಳನ್ನು ಉಪಯೋಗ ಮಾಡುವಂತಹ ಬಡವರಿಗೆ, ನಿರ್ಗತಿಕರಿಗೆ ದಾನ ಮಾಡುವ ಇಚ್ಛೆಯೂ ನಿಮಗಿರಬಹುದು. ಆದರೆ ದಾನ ಮಾಡುವುದು ಹೇಗೆ? ಅಗತ್ಯವಿರುವವರು ಎಲ್ಲಿದ್ದಾರೆ? ಅವರನ್ನು ಸಂಪರ್ಕಿಸುವುದು ಹೇಗೆ? ಎಂದೆಲ್ಲಾ ಆಲೋಚಿಸುತ್ತಿದ್ದೀರಾ? ಹಾಗಿದ್ದರೆ ನೀವು www.e-daan.com ಜಾಲತಾಣಕ್ಕೆ ಭೇಟಿ ನೀಡಬಹುದು. ದಾನ ನೀಡುವವರನ್ನು ಮತ್ತು ದಾನ ಪಡೆಯುವವರನ್ನು ಈ ಜಾಲತಾಣ ಒಂದುಗೂಡಿಸುತ್ತದೆ. ಸಾಮಾನ್ಯವಾಗಿ ದಾನ ಪಡೆಯುವವರು ಅಂತರಜಾಲ ಬಳಸುವವರಾಗಿರುವುದಿಲ್ಲ. ವಸ್ತುಗಳನ್ನು ಎನ್‌ಜಿಓಗಳ ಮೂಲಕ ವಿತರಣೆ ಮಾಡಲಾಗುತ್ತದೆ.

ಡೌನ್‌ಲೋಡ್

ನಿಸ್ತಂತು ಜಾಲಕೇಂದ್ರ

ಅಂತರಜಾಲ ಸಂಪರ್ಕ ಪಡೆಯಲು ಹಲವು ವಿಧಾನಗಳಿವೆ. ಲ್ಯಾಪ್‌ಟಾಪ್‌ಗಳಲ್ಲಂತೂ ನಿಸ್ತಂತು ಸಂಪರ್ಕವೂ ಸಾಧ್ಯ. ಲ್ಯಾಪ್‌ಟಾಪನ್ನು ಕೇಬಲ್ ಅಥವಾ ಯುಎಸ್‌ಬಿ ಮೋಡೆಮ್ ಮೂಲಕ ಅಂತರಜಾಲಕ್ಕೆ ಸಂಪರ್ಕಿಸಲೂ ಸಾಧ್ಯ. ಎಲ್ಲ ಲ್ಯಾಪ್‌ಟಾಪ್‌ಗಳಲ್ಲಿ ನಿಸ್ತಂತು ಸೌಲಭ್ಯ ಇರುತ್ತದೆ. ಈ ನಿಸ್ತಂತು ಸವಲತ್ತನ್ನು ಅಂತರಜಾಲಕ್ಕೆ ಸಂಪರ್ಕ ನೀಡುವ ವ್ಯವಸ್ಥೆಯಾಗಿಯೂ ಬದಲಿಸಬಹುದು. ಅಂದರೆ ನಿಮ್ಮ ಲ್ಯಾಪ್‌ಟಾಪನ್ನು ಬ್ರಾಡ್‌ಬಾಂಡ್ ಸಂಪರ್ಕ ಮೂಲಕ ಅಂತರಜಾಲಕ್ಕೆ ಸಂಪರ್ಕಿಸಿದ್ದೀರಿ ಎಂದುಕೊಳ್ಳೋಣ. ನಂತರ ಅದರಲ್ಲಿರುವ ನಿಸ್ತಂತು ಸವಲತ್ತನ್ನು ಅಂತರಜಾಲ ಸಂಪರ್ಕವನ್ನು ಇತರೆ ಗಣಕ ಅಥವಾ ಸ್ಮಾರ್ಟ್‌ಫೋನ್‌ಗಳಿಗೆ ಅಂತರಜಾಲ ಸಂಪರ್ಕ ಪಡೆದುಕೊಳ್ಳುವ ವ್ಯವಸ್ಥೆಯಾಗಿ ಬಳಸಬಹುದು. ಅಂದರೆ ಈಗ ನಿಮ್ಮ ಲ್ಯಾಪ್‌ಟಾಪ್ ಅಂತರಜಾಲ ಸಂಪರ್ಕ ನೀಡುವ ಕೇಂದ್ರವಾಗುತ್ತದೆ. ಮನೆಯಲ್ಲಿ ಇರುವ ಇತರೆ ಗಣಕ ಹಾಗೂ ಸ್ಮಾರ್ಟ್‌ಫೋನ್‌ಗಳು ಇದನ್ನು ಬಳಸಬಹುದು. ಈ ರೀತಿ ಮಾಡಿಕೊಳ್ಳಲು ಅನುವು ಮಾಡಿಕೊಡುವ Connectify ತಂತ್ರಾಂಶ ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ www.connectify.me

e - ಸುದ್ದಿ

ಫೋಟೋಶಾಪ್ ಮಾಡಿ ಜಾಹೀರಾತು ನೀಡಿದರೆ...

ಫೋಟೋಶಾಪ್ ಬಳಸಿ ಫೋಟೋಗಳನ್ನು ತಿದ್ದಬಹುದು. ಕಪ್ಪನೆಯ ಹುಡುಗಿಯನ್ನು ಬಿಳಿ ಬಣ್ಣದ ಚೆಲುವೆಯನ್ನಾಗಿಸಬಹುದು. ಇಂಗ್ಲೆಂಡಿನಲ್ಲಿ ಇದೇ ವಿಧಾನವನ್ನು ಜಾಹೀರಾತೊಂದರಲ್ಲಿ ಬಳಸಲಾಯಿತು. ಸೌಂದರ್ಯವರ್ಧಕವೊಂದರ ಜಾಹೀರಾತಾಗಿತ್ತದು. ತಮ್ಮ ಉತ್ಪನ್ನವನ್ನು ಬಳಸಿ ಸುಂದರ ತ್ವಚೆಯನ್ನು ಹೊಂದಬಹುದು ಎಂಬುದನ್ನು ಸೂಚಿಸಲು ಅವರು ಫೋಟೋಶಾಪ್ ಮಾಡಿದ ಫೋಟೋವನ್ನು ಬಳಸಿದ್ದರು. ಸಂಸದರೊಬ್ಬರು ಈ ಜಾಹೀರಾತಿನ ವಿರುದ್ಧ ದೂರು ನೀಡಿದರು. ಮೂಲ ಫೋಟೋ ಕೇಳಿದಾಗ ಕಂಪೆನಿಯವರು ಅದನ್ನು ನೀಡಲು ನಿರಾಕರಿಸಿದರು. ಈಗ ಜಾಹೀರಾತು ನಿಯಂತ್ರಣ ಸಂಸ್ಥೆಯವರು ಆ ಜಾಹೀರಾತನ್ನು ಮುಟ್ಟುಗೋಲು ಹಾಕಿದ್ದಾರೆ.   
 
e- ಪದ

ಸ್ಪ್ರೆಡ್‌ಶೀಟ್ ತಂತ್ರಾಂಶ (spreadsheet software) - ಅಡ್ಡ ಮತ್ತು ನೀಟ ಸಾಲುಗಳಲ್ಲಿ ಮಾಹಿತಿಗಳನ್ನು ನಮೂದಿಸಿ ಕೋಷ್ಟಕ ತಯಾರಿಸಿ ಅದನ್ನು ಬಳಸಿ ಹಲವು ವಿಧಾನಗಳಲ್ಲಿ ಮಾಹಿತಿ ಸಂಸ್ಕರಣೆ ಮಾಡಲು ಅನುವು ಮಾಡಿಕೊಡುವ ತಂತ್ರಾಂಶ. ಮೈಕ್ರೋಸಾಫ್ಟ್ ಎಕ್ಸೆಲ್ ಇದಕ್ಕೆ ಉತ್ತಮ ಉದಾಹರಣೆ. ಇವುಗಳಲ್ಲಿ ಗಣಿತ ಸಮೀಕರಣಗಳನ್ನು ಬಳಸಿ ಹಲವು ನಮೂನೆಯ ಲೆಕ್ಕಾಚಾರ ಮಾಡಬಹುದು. ಕೇವಲ ಪಠ್ಯಗಳ ಮೇಲೂ ಕೆಲವು ಸಂಸ್ಕರಣೆಗಳನ್ನು ಮಾಡಬಹುದು.

e - ಸಲಹೆ

ರಣಜಿತ್ ಅವರ ಪ್ರಶ್ನೆ: ಸಂಗೀತದಿಂದ ಧ್ವನಿಯನ್ನು ಬೇರ್ಪಡಿಸಲು ಸಾಧ್ಯವೇ?
ಉ: ಇದು ಪರಿಣತರಿಂದ ಮಾತ್ರ ಸಾಧ್ಯ. ಇದನ್ನು ಸಾಧಿಸಲು ಹಲವು ವಿಧಾನಗಳಿವೆ. ವಿವರಗಳಿಗೆ bit.ly/a8nF8T ಜಾಲತಾಣ ನೋಡಿ.

ಕಂಪ್ಯೂತರ್ಲೆ

ಕೋಲ್ಯನ ಮಗ ಶಾಲೆಗೆ ಪ್ರಥಮ ತರಗತಿಗೆ ಮೊದಲ ದಿನ ಹೋಗಿ ಸಾಯಂಕಾಲ ಮನೆಗೆ ವಾಪಾಸು ಬಂದಿದ್ದ. ಶಾಲೆಯ ಪ್ರಥಮ ದಿನ ಹೇಗಿತ್ತು ಎಂದು ಕೋಲ್ಯ ವಿಚಾರಿಸಿದ. ಮಗ ಹೇಳಿದ “ಎಂತಹ ಶಾಲೆಯೋ ಅದು. ಅಲ್ಲಿ ವೈಫೈ ಕೂಡ ಇಲ್ಲ”.