ಸೋಮವಾರ, ಜೂನ್ 25, 2012

ಗಣಕಿಂಡಿ - ೧೬೨ (ಜೂನ್ ೨೫, ೨೦೧೨)

ಅಂತರಜಾಲಾಡಿ

ಒಪ್ಪಣ್ಣ

ಕರಾವಳಿಯ ಕಾಸರಗೋಡಿನಿಂದ ಹಿಡಿದು ಗೋಕರ್ಣ, ಮಲೆನಾಡಿನ ಸಾಗರ, ಶಿರ್ಶಿ, ಸಿದ್ಧಾಪುರ - ಈ ಊರುಗಳಲ್ಲಿ ಹಬ್ಬಿರುವ ಹವ್ಯಕ ಜನಾಂಗ ಬಳಸುವ ಭಾಷೆ ಹವ್ಯಕ ಅಥವಾ ಹವಿಗನ್ನಡ. ಇದು ಕನ್ನಡ ಭಾಷೆಯದೇ ಒಂದು ಪ್ರಭೇದ. ಬಹುಮಟ್ಟಿಗೆ ಹಳೆಗನ್ನಡವನ್ನು ಹೋಲುವ ಭಾಷೆ. ಹಳೆಗನ್ನಡಕ್ಕೂ ಹೊಸಗನ್ನಡಕ್ಕೂ ಜೀವಂತ ಕೊಂಡಿ ಎಂದು ಕರೆಯಲೂ ಬಹುದು. ಹವ್ಯಕ ಭಾಷೆಯನ್ನು ಬಳಸುವ ಮಂದಿ ಲಕ್ಷದಲ್ಲಿದ್ದಾರೆ. ಅದೊಂದು ವಿಶಿಷ್ಟ ಜನಾಂಗ. ಹವ್ಯಕ ಭಾಷೆಯು ಕನ್ನಡ ಭಾಷೆಯದೇ ಲಿಪಿಯನ್ನು ಬಳಸುತ್ತದೆ. ಹವ್ಯಕ ಭಾಷೆಯ, ಬಹುಶಃ ಏಕೈಕ, ಜಾಲತಾಣ oppanna.com. ಮೊದಲು ಬ್ಲಾಗ್ ರೂಪದಲ್ಲಿದ್ದ (೨೦೦೯) ಇದು ತನ್ನದೇ ಜಾಲತಾಣವನ್ನು ೨೦೧೦ರಲ್ಲಿ ಪಡೆಯಿತು. ಹವ್ಯಕ ಭಾಷೆಯಂತೆ ಈ ಜಾಲತಾಣವೂ ಕನ್ನಡ ಲಿಪಿಯನ್ನು (ಯುನಿಕೋಡ್) ಬಳಸುತ್ತದೆ. ಸುಮಾರು ೬೦೦ ಮಂದಿ ಸದಸ್ಯರಿರುವ ಈ ಜಾಲತಾಣದಲ್ಲಿ ಹವ್ಯಕ ಭಾಷೆಯಲ್ಲಿ ಲೇಖನಗಳು, ಚರ್ಚೆಗಳು ನಡೆಯುತ್ತಿರುತ್ತವೆ. ಸುಮಾರು ೨೦೦೦ ಲೇಖನ ಮತ್ತು ಚರ್ಚಾ ವಿಷಯಗಳಿವೆ.

ಡೌನ್‌ಲೋಡ್

ಕೇರಂ

ಕೇರಂ ಆಟ ಯಾರಿಗೆ ಗೊತ್ತಿಲ್ಲ? ಈ ಆಟ ತುಂಬ ಜನಪ್ರಿಯ. ಇದನ್ನೇ ಗಣಕದಲ್ಲಿ ಆಡುವಂತಿದ್ದರೆ? ಹೌದು, ಈಗ ಅದೂ ದೊರೆಯುತ್ತಿದೆ. ಈ ಆಟ ಡೌನ್‌ಲೋಡ್ ಮಾಡಿಕೊಳ್ಳಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ playcarrom.com. ಆಟ ಫ್ಲಾಶ್ ಫೈಲ್ ಆಗಿದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಸುಮ್ಮನೆ ಡಬಲ್ ಕ್ಲಿಕ್ ಮಾಡಿ ಆಡುವುದು. ಯಾವುದೇ ಇನ್‌ಸ್ಟಾಲ್ ಮಾಡುವ ರಗಳೆ ಇಲ್ಲ. ಇದು ಇನ್ನೂ ಅರಂಭದ ಆವೃತ್ತಿ. ಇದರಲ್ಲಿ ಬೇರೆ ಬೇರೆ ಹಂತಗಳಿಲ್ಲ (ಉದಾ -ಸರಳ, ಕ್ಲಿಷ್ಟ, ಇತ್ಯಾದಿ). ಧ್ವನಿಯೂ ಇಲ್ಲ. ಸ್ಟ್ರೈಕರ್ ಕಾಯಿಗೆ ಕುಟ್ಟಿದಾಗ ಬರುವ ಧ್ವನಿ ಕೇಳುವಂತಿದ್ದರೆ ಚೆನ್ನಾಗಿತ್ತು. ಅದೇ ರೀತಿ ನಾವು ಕಾಯಿಗೆ ಸ್ಟ್ರೈಕರ್ ಗುರಿ ಇಡುವಾಗ ಒಂದು ರೇಖೆಯ ಮೂಲಕ ಗುರಿ ಎಲ್ಲಿದೆ ಎಂದು ತೋರಿಸುವಂತಿದ್ದರೆ ಚೆನ್ನಾಗಿರುತ್ತಿತ್ತು. ಬಹುಶಃ ಮುಂದಿನ ಆವೃತ್ತಿಗಳಲ್ಲಿ ಈ ಸವಲತ್ತುಗಳು ಲಭ್ಯವಾಗಬಹುದು ಎಂದು ಆಶಿಸೋಣ.

e - ಸುದ್ದಿ


ಭಾಷೆಗಳಿಗೆ ಗೂಗ್ಲ್ ಸಹಾಯ

ಶತಕೋಟಿಗಟ್ಟಲೆ ಡಾಲರುಗಳ ದೊಡ್ಡ ರಾಶಿಯ ಮೇಲೆ ಕುಳಿತ ಅತಿ ಶ್ರೀಮಂತ ಗೂಗ್ಲ್ ಕೆಲವು ಲೋಕೋಪಯೋಗಿ ಕೆಲಸಗಳನ್ನೂ ಮಾಡುತ್ತದೆ. ಆ ಮೂಲಕ ಈ ದೊಡ್ಡ ರಾಶಿಯನ್ನು ಅಲ್ಪ ಸ್ವಲ್ಪ ಕರಗಿಸುತ್ತದೆ. ಇಂತಹ ಒಂದು ಕ್ರಿಯಾಯೋಜನೆ ಅಳಿದುಳಿದ ಹಾಗೂ ನಶಿಸುತ್ತಿರುವ ಭಾಷೆಗಳಿಗೆ ಸಹಾಯ ಮಾಡುವುದು. ಇತ್ತೀಚೆಗೆ ಗೂಗ್ಲ್ ತನ್ನ ಬ್ಲಾಗಿನಲ್ಲಿ ಈ ಬಗ್ಗೆ ಹೇಳಿಕೊಂಡಿದೆ. ವಿನಾಶದಂಚಿನಲ್ಲಿರುವ ಭಾಷೆಗಳಿಗೆ ಸಹಾಯ ಮಾಡಲೆಂದೇ ಇರುವ ಸಂಸ್ಥೆಗಳ ಜೊತೆ ಅದು ಕೈಜೋಡಿಸುತ್ತದೆ ಹಾಗೂ ಧನಸಹಾಯ ಮಾಡುತ್ತದೆ. ಹೆದರಬೇಡಿ, ಈ ಪಟ್ಟಿಯಲ್ಲಿ ಕನ್ನಡ ಭಾಷೆ ಇಲ್ಲ.

e- ಪದ
ನೈಜ ಪರದೆ (ರೆಟಿನ ಡಿಸ್‌ಪ್ಲೇ - Retina Display) - ಆಪಲ್ ಕಂಪೆನಿ ಸೃಷ್ಟಿಸಿದ ವ್ಯಾಪಾರೀ ಪದ. ಎಲ್ಲ ಗಣಕ ಪರದೆಗಳಲ್ಲಿ ಒಂದು ಇಂಚಿಗೆ ಇಂತಿಷ್ಟು ಎಂದು ಚುಕ್ಕಿಗಳಿರುತ್ತವೆ. ಇವು ಅತಿ ಹೆಚ್ಚಾದಾಗ ಚಿತ್ರವು ಚುಕ್ಕಿಗಳಿಂದಾಗಿದೆ ಎಂದು ನಮ್ಮ ಕಣ್ಣಿಗೆ ತಿಳಿಯುವುದಿಲ್ಲ. ಇಂತಹ ಪರದೆಗಳಿಗೆ ರೆಟಿನ ಡಿಸ್‌ಪ್ಲೇ ಎನ್ನುತ್ತಾರೆ. ಆಪಲ್ ಐಫೋನ್ 4S ನಲ್ಲಿ ಮೊದಲ ಬಾರಿಗೆ ಇಂತಹ ಪರದೆಗಳನ್ನು ಬಳಸಲಾಯಿತು.

e - ಸಲಹೆ

ಬೆಳ್ಳಾರಿಯ ವೀರಭದ್ರ ಅವರ ಪ್ರಶ್ನೆ: ಸಾಮಾನ್ಯ ಎಲ್‌ಸಿಡಿ ಪರದೆಗಳಲ್ಲಿ ಮೂರು ಆಯಾಮದ ಸಿನಿಮಾ ನೋಡಬಹುದೆ? ಇಲ್ಲವಾದಲ್ಲಿ ಏನೇನು ಬದಲಾವಣೆ ಮಾಡಿಕೊಳ್ಳಬೇಕು?
ಉ: ಇಲ್ಲ. ಮೂರು ಆಯಾಮದ ಪರದೆ ಪ್ರತ್ಯೇಕ ಸಿಗುತ್ತದೆ. ಅದನ್ನು ಕೊಂಡುಕೊಳ್ಳಬೇಕು. ಅದರ ಜೊತೆ ದೊರೆಯುವ ಕನ್ನಡಕ ಹಾಕಿಕೊಂಡು ವೀಕ್ಷಿಸಬೇಕು. ಮೂರು ಆಯಾಮದ ಪರದೆಗಳು ಗಣಕಕ್ಕೂ ದೊರೆಯುತ್ತಿವೆ.

ಕಂಪ್ಯೂತರ್ಲೆಕೋಲ್ಯ ಬೆಳಿಗ್ಗೆ ಎದ್ದು ಕನ್ನಡಿ ಮುಂದೆ ನಿಂತುಕೊಂಡು ತನ್ನ ಪ್ರತಿಬಿಂಬ ನೋಡಹೊರಟ. ಆಗ ಆತನಿಗೆ ಕನ್ನಡಿಯಲ್ಲಿ ಕಂಡು ಬಂದುದು “Error 404: image not found”.

ಶುಕ್ರವಾರ, ಜೂನ್ 22, 2012

ಗಣಕಿಂಡಿ - ೧೬೧ (ಜೂನ್ ೧೮, ೨೦೧೨)

ಅಂತರಜಾಲಾಡಿ

ವೃತ್ತಿನಿರತರ ಸಮಾಜತಾಣ

ಒಬ್ಬರಿಗೊಬ್ಬರು ಸಂಪರ್ಕದಲ್ಲಿರಲು ಇರುವ ಸಮಾಜತಾಣಗಳು (social networking websites) ಹಲವಾರಿವೆ. ಈಗೀಗ ಇಂತಹ ಜಾಲತಾಣಗಳು ವಿಷಯಾಧಾರಿತವಾಗಿ ವಿಶೇಷವಾಗಲು ತೊಡಗಿವೆ. ಉದಹರಣೆಗೆ ತಮ್ಮತಮ್ಮ ವೃತ್ತಿಗಳ ಬಗ್ಗೆ ಒಬ್ಬರಿಗೊಬ್ಬರು ಸಂಪರ್ಕದಲ್ಲಿರಲು, ವೃತ್ತಿಗಳಿಗೆ ಅನುಗುಣವಾಗಿ ವಿವಿಧ ತಂಡಗಳನ್ನು ಕಟ್ಟಿಕೊಂಡು ವಿಚಾರವಿನಿಮಯ ಮಾಡಿಕೊಳ್ಳಲು, ತಮ್ಮ ತಮ್ಮ ವೃತ್ತಿವಿಷಯಗಳ ಬಗ್ಗೆ ಚರ್ಚೆ ನಡೆಸಲು -ಹೀಗೆ ಹಲವು ರೀತಿಯಲ್ಲಿ ವೃತ್ತಿಪರಿಣತರಿಗಾಗಿ ಇರುವ ಸಮಾಜಜಾಲತಾಣ www.linkedin.com. ಇದನ್ನು ವೃತ್ತಿಪರಿಣತರ (professionals) ಫೇಸ್‌ಬುಕ್ ಎನ್ನಬಹುದು.

ಡೌನ್‌ಲೋಡ್

ಶೇರು ಮಾರುಕಟ್ಟೆ

ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವವರು ಬಹಳ ಮಂದಿ ಇದ್ದಾರೆ. ಯಾವ ಕಂಪೆನಿಯ ಶೇರು ಈಗ ಯಾವ ಬೆಲೆಯಲ್ಲಿ ಮಾರಾಟವಾಗುತ್ತಿದೆ, ಯಾವುದನ್ನು ಕೊಳ್ಳಬಹುದು, ಯಾವುದನ್ನು ಮಾರಬಹುದು, ಇತ್ಯಾದಿ ಚಿಂತನೆ ಮಾಡುತ್ತಲೇ ಇರುತ್ತಾರೆ. ಇಂತಹವರಿಗಾಗಿ ಹಲವಾರು ಜಾಲತಾಣಗಳು, ಡೌನ್‌ಲೋಡ್ ಮಾಡಿಕೊಳ್ಳಬಲ್ಲ ತಂತ್ರಾಂಶಗಳೂ ಲಭ್ಯವಿವೆ. ಅಂತಹ ಒಂದು ತಂತ್ರಾಂಶ STOCKTICKER. ಇದು ಒಂದು ಟಿಕರ್. ಅಂದರೆ ಟಿವಿಯಲ್ಲಿ ಸುದ್ದಿಯನ್ನು ಕೆಳಗೆ ಸ್ಕ್ರಾಲ್ ಮಾಡುತ್ತಿರುತ್ತಾರಲ್ಲ, ಅದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಯಾವ ಕಂಪೆನಿಯ ಶೇರಿನ ಬೆಲೆ ಎಷ್ಟಿದೆ ಎಂಬುದನ್ನು ಸ್ಕ್ರಾಲ್ ಮಾಡುತ್ತಿರುತ್ತದೆ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/stockscroll.

e - ಸುದ್ದಿ

ಗೂಗ್ಲ್ ಬಳಸಿ ಕೊಲೆ

ಇಲ್ಲ, ಯಾರೂ ಗೂಗ್ಲ್ ಅನ್ನು ಒಂದು ಆಯುಧವಾಗಿ ಬಳಸಿ ಕೊಲೆ ಮಾಡಿಲ್ಲ. ಕೊಲೆ ಮಾಡುವುದು ಹೇಗೆ, ಯಾವ ಯಾವ ರೀತಿಯಲ್ಲಿ ಕೊಲೆ ಮಾಡಬಹುದು, ಕೊಲೆ ಮಾಡಿ ದಕ್ಕಿಸಿಕೊಳ್ಳುವುದು ಹೇಗೆ? -ಇತ್ಯಾದಿ ಪ್ರಶ್ನೆಗಳನ್ನು ಗೂಗ್ಲ್‌ಗೆ ಎಸೆದು ಉತ್ತರ ಪಡೆದು ನಂತರ ಕೊಲೆ ಮಾಡಲಾಯಿತು. ಇದು ನಡೆದುದು ಅಮೆರಿಕದ ಫ್ಲಾರಿಡಾದಲ್ಲಿ. ಕೊಲೆಗಾರ ಮತ್ತು ಆತನ ಗರ್ಲ್‌ಫ್ರೆಂಡ್ ಸೇರಿ ಕೊಲೆ ಮಾಡಿದ್ದರು. ಕೊಲೆಗೆ ಮೊದಲು ಮತ್ತು ನಂತರ ಅವರು ಫೇಸ್‌ಬುಕ್‌ನಲ್ಲೂ ಅದರ ಬಗ್ಗೆ ಮಾತನಾಡಿಕೊಂಡಿದ್ದರು. ಅಂತರಜಾಲದಲ್ಲಿ ಇಷ್ಟೆಲ್ಲ ಹೆಜ್ಜೆಗುರುತು ಬಿಟ್ಟ ನಂತರ ತಪ್ಪಿಸಿಕೊಳ್ಳಲಾಗುತ್ತದೆಯೇ? ಈಗ ಇಬ್ಬರೂ ಕೃಷ್ಣಜನ್ಮಸ್ಥಾನದಲ್ಲಿದ್ದಾರೆ.

e- ಪದ

ಡಾಂಗಲ್ (dongle) - ಯಾವುದಾದರೊಂದು ತಂತ್ರಾಂಶವನ್ನು ನಿಯಂತ್ರಿಸಲು ಅಥವಾ ತಂತ್ರಾಂಶವು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸಲು ಗಣಕಕ್ಕೆ ಜೋಡಿಸುವ ಒಂದು ಯಂತ್ರಾಂಶ ಸಾಧನ. ಇದು ಯುಎಸ್‌ಬಿ ಕಿಂಡಿ ಮೂಲಕ ಜೋಡಣೆಗೊಳ್ಳುತ್ತದೆ. ಸಾಮಾನ್ಯವಾಗಿ ತಂತ್ರಾಂಶಗಳನ್ನು ಕೃತಿಚೌರ್ಯ ಮಾಡದಂತೆ ತಡೆಗಟ್ಟಲು ಇಂತಹ ಸಾಧನಗಳ ಬಳಕೆ ಮಾಡಲಾಗುತ್ತದೆ. ತಂತ್ರಾಂಶ ಕೆಲಸ ಮಾಡಬೇಕಾದರೆ ಈ ಸಾಧನ ಇದೆಯೇ ಎಂದು ಅದು ಹುಡುಕುತ್ತದೆ. ಅಂದರೆ ಬೇರೆ ಬೇರೆ ಗಣಕಗಳಲ್ಲಿ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಂಡರೂ ಡಾಂಗಲ್ ಜೋಡಣೆಯಾಗದ ಗಣಕದಲ್ಲಿ ಅದು ಕೆಲಸ ಮಾಡುವುದಿಲ್ಲ.

e - ಸಲಹೆ

ಬಸವರಾಜು ಅವರ ಪ್ರಶ್ನೆ: ದಯವಿಟ್ಟು ಯಾವುದಾದರೂ ಜ್ಯೋತಿಷ್ಯದ ತಂತ್ರಾಂಶ ತಿಳಿಸುತ್ತೀರಾ?
ಉ: ಇದೇ ಅಂಕಣದಲ್ಲಿ ನೀಡಲಾಗಿತ್ತು. www.vedicastrologer.org. ಜಾಲತಾಣದಲ್ಲಿ ಲಭ್ಯ.

ಕಂಪ್ಯೂತರ್ಲೆ


ಅಂತರಜಾಲ ಸಂಪರ್ಕ ಕಡಿದುಹೋದಾಗ ಮಾಡಬಹುದಾದ ಕೆಲಸಗಳು:
·    ಯಡ್ಯೂರಪ್ಪ ಭೇಟಿ ನೀಡಿದ ದೇವಸ್ಥಾನಗಳನ್ನು ಪಟ್ಟಿ ಮಾಡುವುದು.
·    ಮೇಜಿನ ಮೇಲಿನ ಧೂಳಿನಲ್ಲಿ ಬರೆದಿಟ್ಟ ಫೋನ್ ಸಂಖ್ಯೆಗೆ ಕರೆ ಮಾಡುವುದು.
·    ಕುಸುಮ ಬಾಲೆಯನ್ನು ಕನ್ನಡಕ್ಕೆ ಅನುವಾದಿಸುವುದು.
·    ಕೋಳಿ ಮೊದಲೋ ಮೊಟ್ಟೆ ಮೊದಲೋ ಸಮಸ್ಯೆಗೆ ಉತ್ತರ ಕಂಡುಹಿಡಿಯುವುದು.

ಸೋಮವಾರ, ಜೂನ್ 11, 2012

ಗಣಕಿಂಡಿ - ೧೬೦ (ಜೂನ್ ೧೧, ೨೦೧೨)

ಅಂತರಜಾಲಾಡಿ

ಉಚಿತ ತಂತ್ರಜ್ಞಾನ ಪುಸ್ತಕಗಳು

ನೀವೊಬ್ಬ ತಂತ್ರಜ್ಞ ಅಥವಾ ತಂತ್ರಜ್ಞ ಆಗಬೇಕೆಂದು ಹಂಬಲಿಸುವವರಿದ್ದೀರಾ? ಹಾಗಿದ್ದರೆ ನಿಮಗೆ ತಂತ್ರಜ್ಞಾನ ಸಂಬಂಧಿ ಪುಸ್ತಕಗಳು ಬೇಕೇ ಬೇಕು. ಒಂದೆರಡು ಪುಸ್ತಕಗಳು ಸಾಲದು. ಹಲವಾರು ಪುಸ್ತಕಗಳು ಬೇಕು. ಎಲ್ಲವನ್ನೂ ಕೊಂಡುಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ. ಕೆಲವು ತಂತ್ರಜ್ಞಾನ ಸಂಬಂಧಿ ಪುಸ್ತಕಗಳು ಉಚಿತವಾಗಿ ಸಿಗುವಂತಿದ್ದರೆ ಹೇಗೆ? ಹೌದು. ಅಂತಹ ಜಾಲತಾಣಗಳು ಕೆಲವಿವೆ. ಅಂತಹ ಒಂದು ಜಾಲತಾಣ www.freetechbooks.com. ಇಲ್ಲಿ ತಂತ್ರಜ್ಞಾನದ ಅದರಲ್ಲೂ ಮುಖ್ಯವಾಗಿ ಮಾಹಿತಿ ತಂತ್ರಜ್ಞಾನದ ಕೆಲವು ಆಯ್ದ ವಿಷಯಗಳ ಬಗ್ಗೆ ಪುಸ್ತಕಗಳು ಉಚಿತವಾಗಿ ದೊರೆಯುತ್ತವೆ. ಇನ್ನು ತಡವೇಕೆ? ಡೌನ್‌ಲೋಡ್ ಮಾಡಿ, ಓದಿ, ತಂತ್ರಜ್ಞರಾಗಿ.

ಡೌನ್‌ಲೋಡ್


ಯುಎಸ್‌ಬಿ ವೀಕ್ಷಣೆ

ಗಣಕದ ಯುಎಸ್‌ಬಿ ಕಿಂಡಿಗೆ ಜೋಡಿಸಿ ಕೆಲಸ ಮಾಡುವಂತಹ ಸಾಧನಗಳು ಮಾರುಕಟ್ಟೆಯಲ್ಲಿ ಸಾವಿರಾರಿವೆ. ಅವುಗಳಲ್ಲಿ ಕನಿಷ್ಠ ಅರ್ಧ ಡಝನ್ ಆದರೂ ನಾವು ಬಳಸುತ್ತೇವೆ. ಉದಾಹರಣೆಗೆ ಯುಎಸ್‌ಬಿ ಮೋಡೆಮ್, ೩ಜಿ ಡಾಟಾಕಾರ್ಡ್, ಯುಎಸ್‌ಬಿ ಮೆಮೊರಿ ಡ್ರೈವ್, ಮೌಸ್, ಕೀಲಿಮಣೆ, ಕ್ಯಾಮರ, ಐಪೋಡ್, ಐಫ್ಯಾಡ್, ಇತ್ಯಾದಿ. ಕೆಲವೊಮ್ಮೆ ಇವುಗಳನ್ನು ಗಣಕ ಸರಿಯಾಗಿ ಗುರುತಿಸುವುದಿಲ್ಲ. ಇನ್ನು ಕೆಲವೊಮ್ಮೆ ಸರಿಯಾಗಿ ಗುರುತಿಸಿದರೂ ಅದನ್ನು ಬಳಸಲು ಬೇಕಾದ ಡ್ರೈವರ್ ತಂತ್ರಾಂಶ ಗಣಕದಲ್ಲಿ ಇರುವುದಿಲ್ಲ ಮತ್ತು ಅದನ್ನು ಎಲ್ಲಿಂದ ಡೌನ್‌ಲೋನ್ ಮಾಡಿಕೊಳ್ಳಬೇಕು ಎಂದು ಅದಕ್ಕೆ ಅರಿವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಬಳಕೆಗೆ ಬರುವುದು USBDeview ತಂತ್ರಾಂಶ. ಇದು ಬಹಳ ಚಿಕ್ಕ ತಂತ್ರಾಂಶ. ಆದರೂ ಬಹು ಉಪಯುಕ್ತ. ಯುಎಸ್‌ಬಿ ಕಿಂಡಿಗೆ ಈಗ ಜೋಡಣೆಯಾಗಿರುವುದು ಮಾತ್ರವಲ್ಲ ಈ ಹಿಂದೆ ಜೋಡಣೆಯಾದ ಎಲ್ಲ ಸಾಧನಗಳ ಸಂಪೂರ್ಣ ವಿವರ ಇದು ನೀಡುತ್ತದೆ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/KAnEha.

e - ಸುದ್ದಿ

ಸ್ಟಕ್ಸ್‌ನೆಕ್ಸ್ಟ್ ಅಮೆರಿಕ ಮತ್ತು ಇಸ್ರೇಲಿನವರ ಕಿತಾಪತಿ

ಕಳೆದ ವರ್ಷ ಇರಾನ್‌ನ ಪರಮಾಣು ಸ್ಥಾವರಗಳ ನಿಯಂತ್ರಣ ವ್ಯವಸ್ಥೆಗಳ ಒಳಗೆ ನುಸುಳಿ ಧಾಳಿ ಇಟ್ಟ ಸ್ಟಕ್ಸ್‌ನೆಕ್ಸ್ಟ್ ಎಂಬ ವೈರಸ್ ತುಂಬ ಕುಖ್ಯಾತಿ ಪಡೆದಿತ್ತು. ಇದು ಇರಾನ್‌ನ ಪರಮಾಣು ಸ್ಥಾವರಗಳನ್ನು ನಿಯಂತ್ರಿಸುವ ಗಣಕ ಮತ್ತು ಇತರೆ ಸಂಬಂಧಿ ವ್ಯವಸ್ಥೆಗಳಿಗೆ ಮಾತ್ರ ಧಾಳಿ ಇಟ್ಟಿತ್ತು. ಇದರ ಬಗ್ಗೆ ಈಗ ನಿಜವಾದ ಸಂಗತಿ ಹೊರಬಿದ್ದಿದೆ. ಇದನ್ನು ಅಮೆರಿಕ ಮತ್ತು ಇಸ್ರೇಲಿ ಸರಕಾರಗಳು ಜೊತೆ ಸೇರಿ ಉದ್ದೇಶಪೂರಿತವಾಗಿಯೇ ತಯಾರಿಸಿದ್ದು ಎಂದು ಸತ್ಯ ಸಂಗತಿ ತಿಳಿದುಬಂದಿದೆ. ಇರಾನ್ ಎಂದಿಗೂ ಪರಮಾಣು ಶಕ್ತಿ ಹೊಂದಬಾರದು ಎಂದು ಅಮೆರಿಕ ಮತ್ತು ಇಸ್ರೇಲ್ ದೇಶಗಳು ಶತಾಯಗತಾಯ ಪ್ರಯತ್ನಿಸುತ್ತಿವೆ. ಈ ವೈರಸ್‌ನ ಧಾಳಿಯಿಂದಾಗಿ ಇರಾನ್‌ಗೆ ಹೊಡೆತ ಬಿದ್ದಿದ್ದಂತೂ ಹೌದು.

e- ಪದ

ಸ್ಮಾರ್ಟ್ ಟಿವಿ (SmartTV) - ಅಂತರಜಾಲ ಸಂಪರ್ಕ, ಜಾಲತಾಣ ವೀಕ್ಷಣೆ, ಡಿಎಲ್‌ಎನ್‌ಎ ಸವಲತ್ತು -ಇತ್ಯಾದಿಗಳನ್ನು ಒಳಗೊಂಡ ಅತ್ಯಾಧುನಿಕ ಟಿವಿ. ಮನೆಯ ಗಣಕದಲ್ಲಿ ಡಿಎಲ್‌ಎನ್‌ಎ ಸವಲತ್ತು ಇದ್ದಲ್ಲಿ ಅದರಿಂದ ವೀಡಿಯೋವನ್ನು ವೈಫೈ ಮೂಲಕ ಪ್ರಸಾರ ಮಾಡಿ ಸ್ಮಾರ್ಟ್‌ಟಿವಿಯಲ್ಲಿ ವೀಕ್ಷಿಸಬಹುದು.

e - ಸಲಹೆ


ಚಂದ್ರಶೇಖರ ಅವರ ಪ್ರಶ್ನೆ: ನನ್ನಲ್ಲಿ ಆಪಲ್ ಐಪ್ಯಾಡ್ ಇದೆ. ಅದರಲ್ಲಿರುವ ಫೋಟೋಗಳನ್ನು ಮುದ್ರಿಸುವುದು ಹೇಗೆ?
ಉ: ನಿಮ್ಮ ಗಣಕದಲ್ಲಿ ಆಪಲ್‌ನವರ ಐಟ್ಯೂನ್ಸ್ ಎಂಬ ತಂತ್ರಾಂಶವನ್ನು (www.apple.com/itunes) ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ಆ ತಂತ್ರಾಂಶದ ಮೂಲಕ ಫೋಟೋವನ್ನು ಐಪ್ಯಾಡ್‌ನಿಂದ ಗಣಕಕ್ಕೆ ವರ್ಗಾಯಿಸಿಕೊಳ್ಳಿ. ನಂತರ ಆ ಫೋಟೋವನ್ನು ಯುಎಸ್‌ಬಿ ಡ್ರೈವ್‌ಗೆ ಹಾಕಿಕೊಂಡು ಯಾವುದೇ ಫೋಟೋ ಸ್ಟುಡಿಯೋಕ್ಕೆ ನೀಡಿದರೆ ಅವರು ಮುದ್ರಿಸಿ ಕೊಡುತ್ತಾರೆ.

ಕಂಪ್ಯೂತರ್ಲೆ


ಗೂಗ್ಲ್ ಅನುವಾದದಲ್ಲಿ “the bus engine state may be on or off” ಎಂಬ ವಾಕ್ಯವನ್ನು ಕನ್ನಡಕ್ಕೆ ಅನುವಾದಿಸಿದಾಗ ದೊರೆತದ್ದು “ಬಸ್ ಎಂಜಿನ್ ರಾಜ್ಯದ ಆನ್ ಅಥವಾ ಆಫ್ ಆಗಿರಬಹುದು”

ಸೋಮವಾರ, ಜೂನ್ 4, 2012

ಗಣಕಿಂಡಿ - ೧೫೯ (ಜೂನ್ ೦೪, ೨೦೧೨)

ಅಂತರಜಾಲಾಡಿ

ಬ್ರಾಡ್‌ಬ್ಯಾಂಡ್ ವೇಗ ಅಳೆಯಿರಿ

ನೀವೊಂದು ಇಂಟರ್‌ನೆಟ್ ಡಾಟಾ ಕಾರ್ಡ್ ಕೊಂಡುಕೊಂಡಿದ್ದೀರಿ. ಅಂತರಜಾಲ ಸಂಪರ್ಕ ಸೇವೆ ನೀಡುವ ಕಂಪೆನಿಯವರು ತಮ್ಮ ಜಾಹೀರಾತಿನಲ್ಲಿ ಈ ಡಾಟಾ ಕಾರ್ಡ್ ೬.೨ ಎಂಬಿಪಿಎಸ್ ತನಕದ ವೇಗವನ್ನು ನೀಡುತ್ತದೆ ಎಂದು ಹೇಳಿಕೊಂಡಿರುತ್ತಾರೆ. ಅದು ನಿಜವಾಗಿಯೂ ಅಷ್ಟು ವೇಗವನ್ನು ನೀಡುತ್ತದೆಯೇ ಎಂದು ತಿಳಿಯಬೇಡವೇ? ಈ ವೇಗದಲ್ಲಿ ಎರಡು ವಿಧ -ಡೌನ್‌ಲೋಡ್ ಮತ್ತು ಅಪ್‌ಲೋಡ್. ಈ ಎರಡು ವೇಗಗಳನ್ನೂ ಅಳೆದು ತಿಳಿಸಲು ಹಲವು ತಂತ್ರಾಂಶಗಳೂ ಜಾಲತಾಣಗಳೂ ಇವೆ. ಅಂತಹ ಒಂದು ಜಾಲತಾಣ www.broadbandspeedchecker.co.uk. ನಿಮ್ಮ ಡಾಟಾ ಕಾರ್ಡ್ ನಿಜಕ್ಕೂ ಕಂಪೆನಿಯವರು ಹೇಳಿಕೊಂಡಷ್ಟು ವೇಗವನ್ನು ನೀಡುತ್ತದೆಯೇ ಎಂದು ಪರಿಶೀಲಿಸಿ.

ಡೌನ್‌ಲೋಡ್

ಲೇಬಲ್ ಮುದ್ರಿಸಿ

ನೀವೊಂದು ಕಾರ್ಯಕ್ರಮ ನಡೆಸುವವರಿದ್ದೀರಿ. ಅದಕ್ಕೆ ನೂರಾರು ಜನರನ್ನು ಆಹ್ವಾನಿಸಬೇಕಾಗಿದೆ. ಎಲ್ಲರ ಹೆಸರು ವಿಳಾಸವನ್ನು ಲೇಬಲ್ ಕಾಗದದಲ್ಲಿ ಮುದ್ರಿಸಿ ಅದನ್ನು ಬೇರೆ ಬೇರೆ ಲಕೋಟೆಗಳಿಗೆ ಅಂಟಿಸಬೇಕಾಗಿದೆ. ಈ ರೀತಿ ಲೇಬಲ್ ಮುದ್ರಣಕ್ಕೆ ಸಹಾಯ ಮಾಡುವ ತಂತ್ರಾಂಶಗಳು ಹಲವಾರಿವೆ. ಹೆಚ್ಚಿನವು ವಾಣಿಜ್ಯಕ ತಂತ್ರಾಂಶಗಳು. ಅಂತಹ ಒಂದು ಉಚಿತ ತಂತ್ರಾಂಶ Label Printer ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.ssuitesoft.com/labelprinter.htm. ಮಾರುಕಟ್ಟೆಯಲ್ಲಿ ಲೇಬಲ್ ಅಂಟಿಸಿದ ಕಾಗದ ಸಿಗುತ್ತದೆ. ಅದನ್ನು ಲೇಸರ್ ಅಥವಾ ಇಂಕ್‌ಜೆಟ್ ಮುದ್ರಕದಲ್ಲಿ ಹಾಕಿ ಲೇಬಲ್ ಮುದ್ರಿಸಬಹುದು.

e - ಸುದ್ದಿ

ಪೇಸ್‌ಬುಕ್‌ನಲ್ಲಿ ಹಣದ ಚಿತ್ರ ಹಾಕಿ ಕಳ್ಳರನ್ನು ಆಹ್ವಾನಿಸಿದಳಂತೆ

ಇದು ಆಸ್ಟ್ರೇಲಿಯದಲ್ಲಿ ನಡೆದ ಕಥೆ. ೧೭ ವರ್ಷ ಪ್ರಾಯದ ಯುವತಿಯೊಬ್ಬಳು ತನ್ನ ಅಜ್ಜಿಯಲ್ಲಿ ಇದ್ದ ಹಣದ ಸಂಗ್ರಹವನ್ನು ಎಣಿಕೆ ಮಾಡಲು ಸಹಾಯ ಮಾಡಿದಳು. ನಂತರ ಆ ಹಣವನ್ನೆಲ್ಲ ಒಟ್ಟಿಗೆ ಇಟ್ಟು ಅದರ ಫೋಟೋ ತೆಗೆದು ತಾನು ಅಜ್ಜಿಗೆ ಹಣ ಲೆಕ್ಕ ಮಾಡಲು ಸಹಾಯ ಮಾಡಿದೆ ಎಂಬ ಶೀರ್ಷಿಕೆಯೊಡನೆ ಫೇಸ್‌ಬುಕ್‌ನಲ್ಲಿ ದಾಖಲಿಸಿದಳು. ಕೆಲವೆ ಗಂಟೆಗಳಲ್ಲಿ ಅವಳ ಅಜ್ಜಿಯ ಮನೆಗೆ ಕಳ್ಳರು ಧಾಳಿಯಿಟ್ಟು ಹಣ ದೋಚಿದರು! ಸೂಕ್ಷ್ಮ ಮಾಹಿತಿಗಳನ್ನು ಫೇಸ್‌ಬುಕ್‌ನಲ್ಲಿ ದಾಕಲಿಸುವಾಗ ಎಚ್ಚರವಿರಲಿ ಎಂದು ಪೋಲೀಸರು ಜನರಿಗೆ ವಿನಂತಿ ಮಾಡಿಕೊಂಡಿದ್ದಾರೆ.

e- ಪದ

ಎಸ್‌ಇಒ (SEO - Search Engine Optimization) - ಜಾಲಶೋಧಕಗಳಲ್ಲಿ ತಮ್ಮ ಜಾಲತಾಣವು ಹುಡುಕಾಟದ ಫಲಿತಾಂಶಗಳಲ್ಲಿ ಎಲ್ಲಕ್ಕಿಂತ ಮೊದಲು ಬರುವಂತೆ ಮಾಡಲು ಜಾಲತಾಣದಲ್ಲಿ ಮಾಡುವ ಬದಲಾವಣೆಗಳು. ಈ ವಿಷಯದಲ್ಲೆ ವಿಶೇಷ ಪ್ರಾವೀಣ್ಯ ಹೊಂದಿರುವ ಹಲವಾರು ಕಂಪೆನಿಗಳಿವೆ. ಇದನ್ನೆ ವೃತ್ತಿಯಾಗಿ ಮಾಡಿಕೊಂಡಿರುವವರಿದ್ದಾರೆ.

e - ಸಲಹೆ


ಸುದರ್ಶನ ಅವರ ಪ್ರಶ್ನೆ: ನನ್ನಲ್ಲಿ ಸೋನಿ CCD-TRV 107E  ವೀಡಿಯೋ ಕ್ಯಾಮರ ಇದೆ. ಅದರಲ್ಲಿ ಯುಎಸ್‌ಬಿ ಕಿಂಡಿ ಇಲ್ಲ. ಅದನ್ನು ಬಳಸಿ ತೆಗೆದ ವೀಡಿಯೋಗಳನ್ನು ಗಣಕಕ್ಕೆ ವರ್ಗಾಯಿಸುವುದು ಹೇಗೆ?
ಉ: ನಿಮ್ಮದು ಡಿಜಿಟಲ್ ಕ್ಯಾಮ್‌ಕಾರ್ಡರ್ ಅಲ್ಲ. ಅದು ವೀಡಿಯೋಗಳನ್ನು ಅನಲಾಗ್ ವಿಧಾನದಲ್ಲಿ ರೆಕಾರ್ಡಿಂಗ್ ಮಾಡಿಕೊಳ್ಳುತ್ತದೆ. ಅದರಿಂದ ಗಣಕಕ್ಕೆ ವರ್ಗಾಯಿಸಬೇಕಾದರೆ ಗಣಕದಲ್ಲಿ ವಿಶೇಷ ಅನಲಾಗ್-ಟು-ಡಿಜಿಟಲ್ ಪರಿವರ್ತಕ ಕಾರ್ಡ್ ಹಾಕಿಕೊಳ್ಳಬೇಕು.

ಕಂಪ್ಯೂತರ್ಲೆ


ಸ್ಪರ್ಶಸಂವೇದಿ ಪರದೆಗಳಿಗೆ (touchscreen) ಚಟವಾಗಿ ಅಂಟಿಕೊಂಡವನೊಬ್ಬ ಒಂದು ಚಿತ್ರಕಲಾ ಪ್ರದರ್ಶನಕ್ಕೆ ಹೋಗಿದ್ದ. ಆತ ಚಿತ್ರದ ಮೇಲೆ ಬೆರಳಿನಿಂದ ಬಲದಿಂದ ಎಡಕ್ಕೆ ಉಜ್ಜುತ್ತಿದ್ದ. ಚಿತ್ರಕಾರನಿಗೆ ಆಶ್ಚರ್ಯವಾಯಿತು. ಆಕ ಹೀಗೇಕೆ ಮಾಡುತ್ತಿದ್ದಾನೆ ಎಂದು ವಿಚಾರಿಸಿದಾಗ ತಿಳಿದುಬಂದುದೇನೆಂದರೆ ಆತನಿಗೆ ಮುಂದಿನ ಚಿತ್ರ ನೋಡಬೇಕಿತ್ತು!