ಮಂಗಳವಾರ, ಜನವರಿ 26, 2010

ಗಣಕಿಂಡಿ - ೦೩೬ (ಜನವರಿ ೨೫, ೨೦೧೦)

ಅಂತರಜಾಲಾಡಿ

ಮಳೆಕೊಯ್ಲು ತಾಣ

ಕುಡಿಯುವ ನೀರು ಭೂಮಿಯಲ್ಲಿ ಕಡಿಮೆಯಾಗುತ್ತಲೇ ಇದೆ. ಇದಕ್ಕೆ ಜನಸಂಖ್ಯೆ ಮತ್ತು ನೀರಿನ ಬೇಡಿಕೆಯ ಹೆಚ್ಚಳ ಈ ಎರಡು ಪ್ರಮುಖ ಕಾರಣಗಳು. ಬೆಂಗಳೂರಿಗೆ ನೀರನ್ನು ೯೫ ಕಿ.ಮೀ. ದೂರದಿಂದ ಅದೂ ೫೦೦ ಮೀ. ಆಳದಿಂದ ಎತ್ತಿ ತರಲಾಗುತ್ತಿದೆ. ಭೂಮಿಗೆ ಬೀಳುವ ಮಳೆಯ ನೀರನ್ನೇ ಹಿಡಿದಿಟ್ಟುಕೊಂಡರೆ ಸಮಸ್ಯೆ ಒಂದು ಮಟ್ಟಿಗೆ ಪರಿಹಾರವಾಗುತ್ತದೆ. ಬೆಂಗಳೂರಿನಲ್ಲಿ ಇನ್ನು ಮುಂದೆ ಕಟ್ಟುವ ಎಲ್ಲ ಮನೆಗಳಲ್ಲಿ ಮಳೆಕೊಯ್ಲನ್ನು ಸರಕಾರವು ಖಡ್ಡಾಯವಾಗಿಸಿದೆ. ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ವಿಧಾನಗಳು, ನೀರನ್ನು ಶುದ್ಧೀಕರಿಸುವುದು ಹೇಗೆ, ವಿವಿಧ ವಿಧಾನಗಳು -ಇವುಗಳನ್ನೆಲ್ಲ ವಿವರಿಸುವ ಜಾಲತಾಣಗಳು - rainwaterharvesting.org ಮತ್ತು  rainwaterclub.org.

ಡೌನ್‌ಲೋಡ್
ಪರದೆಯನ್ನು ಹಿಡಿದಿಡಿ
ಗಣಕದ ಪರದೆಯಲ್ಲಿ ಕಾಣಿಸುವುದನ್ನೆಲ್ಲ ಅಥವಾ ನಡೆಯತ್ತಿರುವ ಕ್ರಿಯಗಳನ್ನೆಲ್ಲ ಹಿಡಿದಿಟ್ಟು ಒಂದು ಚಲನಚಿತ್ರದ ಮಾದರಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳುವಂತಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ನಿಮಗೆ ಎಂದಾದರೂ ಅನ್ನಿಸಿದೆಯೇ? ಈ ರೀತಿ ಕೆಲಸ ಮಾಡಬಲ್ಲ ತಂತ್ರಾಂಶ ವಿಂಕ್. ಇದನ್ನು ಬಳಸಿ ಪರದೆಯಲ್ಲಿ ನಡೆಯುತ್ತಿರುವ ಕ್ರಿಯೆಗಳಲ್ಲದೆ, ಮೌಸ್‌ನ ಓಡಾಟ, ಕುಟ್ಟಿದ ಕೀಲಿಗಳು, ಜೊತೆಗೆ ನೀವು ಮೈಕ್ ಮುಂದೆ ಮಾತನಾಡಿದ್ದು ಎಲ್ಲವನ್ನು ಚಲನಚಿತ್ರದಂತೆ ಸಂಗ್ರಹಿಸಿಟ್ಟುಕೊಳ್ಳಬಹುದು. ಇದು ಪಾಠಮಾಡುವವರಿಗೆ ತುಂಬ ಉಪಯುಕ್ತ. ಯಾವುದಾದರೊಂದು ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆ ಎಂಬುದಾಗಿ ವಿವರಿಸುತ್ತಿದ್ದಂತೆ ಈ ತಂತ್ರಾಂಶ ಈ ಎಲ್ಲ ವಿವರಣೆಗಳನ್ನು ಸಂಗ್ರಹಿಸಿ ಕೊನೆಗೆ ಒಂದು ಟ್ಯುಟೋರಿಯಲ್ ವೀಡಿಯೋವನ್ನೆ ಮಾಡಿಕೊಡುತ್ತದೆ. ಈ ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/5iCdgY

e - ಸುದ್ದಿ
ಜೋಕ್ ಮಾಡಿದ್ದಕ್ಕೆ ಸೆರೆಮನೆಗೆ
ವಿಮಾನಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಕಷ್ಟವಾದಾಗ ವಿಮಾನದಲ್ಲಿ ಬಾಂಬ್ ಇದೆ ಎಂದು ಹುಸಿ ಫೋನ್ ಮಾಡಿ ಸೆರೆಮನೆಗೆ ಹೋದವರ ಬಗ್ಗೆ ನೀವು ಕೇಳಿರಬಹುದು. ಈಗ ಅದರ ಟ್ವಿಟ್ಟರ್ ಅಧ್ಯಾಯ ಪ್ರಾರಂಭವಾಗಿದೆ. ಇಂಗ್ಲೆಂಡಿನಲ್ಲಿ ಅತಿಯಾದ ಮಂಜುಗಡ್ಡೆ ತುಂಬಿದುದರಿಂದಾಗಿ ವಿಮಾನ ನಿಲ್ದಾಣವನ್ನು ಮುಚ್ಚಿದುದರ ಬಗ್ಗೆ ರೋಸಿ ಹೋದ ಒಬ್ಬಾತ ಟ್ವಿಟ್ಟರ್‌ನಲ್ಲಿ ತನ್ನ ರೋಷವನ್ನು ಹೊರಹಾಕಿದ. ಆತ ಬರೆದಿದ್ದೇನೆಂದರೆ “ನಿಮಗೆ ಇನ್ನು ಒಂದು ವಾರ ಗಡುವು ನೀಡುತ್ತೇನೆ. ಅದರ ಒಳಗೆ ವಿಮಾನ ನಿಲ್ದಾಣವನ್ನು ಪುನಃ ಚಾಲನೆ ಮಾಡದಿದ್ದರೆ ಅದನ್ನು ಬಾಂಬ್ ಇಟ್ಟು ಸ್ಫೋಟಿಸುತ್ತೇನೆ”. ಈ ಜೋಕನ್ನು ಪೋಲೀಸರು ಗಂಭೀರವಾಗಿ ಪರಿಗಣಿಸಿ ಆತನನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಪ್ರಕಾರ ಬಂಧಿಸಿದರು. ಜಾಮೀನಿನಲ್ಲಿ ಹೊರಬಂದ ಆತ ಇನ್ನೆಂದೂ ಜೋಕ್ ಮಾಡುವುದಿಲ್ಲ ಎಂಬುದಾಗಿ ಪ್ರತಿಜ್ಞೆ ಮಾಡಿದ್ದಾನೆ.    

e- ಪದ

ವಿ-ಕಸ (e-waste = electronic waste, ವಿದ್ಯುನ್ಮಾನ ಕಸ) - ಇಲೆಕ್ಟ್ರಾನಿಕ್ ಉಪಕರಣಗಳನ್ನು ಎಸೆದಾಗ ಉಂಟಾಗುವ ಕಸ. ಗಣಕ, ಮೊಬೈಲ್ ಫೋನ್, ಮುದ್ರಕ, ಟಿವಿ, ಇತ್ಯಾದಿ ಉಪಕರಣಗಳನ್ನು ಎಸೆಯುವುದರಿಂದ ಪರಿಸರದ ಮೇಲೆ ಅತಿ ದೊಡ್ಡ ಹಾನಿ ಆಗುತ್ತದೆ. ಈ ಎಲ್ಲ ಉಪಕರಣಗಳಲ್ಲಿ ಪಾದರಸ, ಸೀಸ, ಆರ್ಸೆನಿಕ್, ಇತ್ಯಾದಿ ವಿಷಕಾರಿ ವಸ್ತುಗಳಿರುತ್ತವೆ. ಈ ಉಪಕರಣಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಈ ವಿಷಕಾರಿ ವಸ್ತುಗಳು, ಭೂಮಿ ಮತ್ತು ನೀರಿನ ಮೂಲಕ ಕೊನೆಗೆ ನಮ್ಮ ಹೊಟ್ಟೆಗೆ ಸೇರುತ್ತವೆ. ಆದುದರಿಂದ ಈ ವಿ-ಕಸ ಎನ್ನುವುದು ಅತಿದೊಡ್ಡ ಸಮಸ್ಯೆಯಾಗಿದೆ.


e - ಸಲಹೆ

ನಾಗರಾಜ ಅವರ ಪ್ರಶ್ನೆ: ನಾನು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿರುವ ನೆಟ್‌ಬುಕ್ ಕಂಪ್ಯೂಟರ್ ಕೊಂಡುಕೊಳ್ಳುವ ಆಲೋಚನೆಯಲ್ಲಿದ್ದೇನೆ. ನಾನು ಡಿಟಿಪಿ ಮಾಡುವವನು. ಈ ನೆಟ್‌ಬುಕ್ ಕಂಪ್ಯೂಟರ್‌ನಲ್ಲಿ ಹಳೆಯ ತಂತ್ರಾಂಶಗಳಾದ ಪೇಜ್‌ಮೇಕರ್, ಫೋಟೋಶಾಪ್, ಕೋರೆಲ್‌ಡ್ರಾ ಇತ್ಯಾದಿಗಳು ಕೆಲಸ ಮಾಡಬಲ್ಲವೇ?
ಉ: ನೆಟ್‌ಬುಕ್ ಕಂಪ್ಯೂಟರ್‌ನ ಮೆಮೊರಿ ಸಾಮಾನ್ಯವಾಗಿ ೧ಜಿಬಿ ಇರುತ್ತದೆ. ಇದು ನೀವು ತಿಳಿಸಿದ ತಂತ್ರಾಂಶಗಳಿಗೆ ಸಾಕು. ಆದರೆ ಒಂದು ಚಿಕ್ಕ ಸಮಸ್ಯೆ ಇದೆ. ಬಹುಪಾಲು ನೆಟ್‌ಬುಕ್ ಕಂಪ್ಯೂಟರ್‌ಗಳು ವಿಂಡೋಸ್ ೭ ಹೋಮ್ ಆವೃತ್ತಿಯನ್ನು ಒಳಗೊಂಡಿರುತ್ತವೆ. ಇದರಲ್ಲಿ ನೀವು ತಿಳಿಸಿದ ಯಾವ ತಂತ್ರಾಂಶವೂ ಇನ್‌ಸ್ಟಾಲ್ ಆಗುವುದಿಲ್ಲ. ವಿಂಡೋಸ್ ಎಕ್ಸ್‌ಪಿಯನ್ನು ಒಳಗೊಂಡಿರುವ ನೆಟ್‌ಬುಕ್ ಕೊಂಡಕೊಂಡರೆ ನಿಮ್ಮ ಹಳೆಯ ತಂತ್ರಾಂಶಗಳನ್ನು ಬಳಸಿ ಡಿಟಿಪಿ ಕೆಲಸಗಳನ್ನು ಮಾಡಬಹುದು.

ಕಂಪ್ಯೂತರ್ಲೆ

ಆಧುನಿಕ ಗಾದೆಗಳು:

  • ಕೆಲಸವಿಲ್ಲದ ಪ್ರೋಗ್ರಾಮ್ಮರ್ ಮೌಸ್ ಸ್ವಚ್ಛ ಮಾಡಿದನಂತೆ.
  • ಊರಿಗೆ ಬಂದ ವೈರಸ್ ನಿಮ್ಮ ಕಂಪ್ಯೂಟರ್‌ಗೂ ಬಾರದಿರುತ್ತದೆಯೇ?
  • ಕೆಲಸವೆಲ್ಲ ಆದ ಮೇಲೆ ಮೌಸ್ ತಂದರೇನು ಫಲ?

ಸೋಮವಾರ, ಜನವರಿ 18, 2010

ಗಣಕಿಂಡಿ - ೦೩೫ (ಜನವರಿ ೧೮, ೨೦೧೦)

ಅಂತರಜಾಲಾಡಿ

ಕನ್ನಡ ಕಲಿಯಿರಿ

ಕರ್ನಾಟಕಕ್ಕೆ ಹೊರಗಡೆಯಿಂದ ಪ್ರತಿನಿತ್ಯ ಸಾವಿರಾರು ಜನ ಬರುತ್ತಲೇ ಇದ್ದಾರೆ. ಇವರಲ್ಲಿ ಕೆಲವರು ಕನ್ನಡ ಕಲಿಯಲು ಆಸಕ್ತಿ ತೋರುತ್ತಾರೆ. ಅಂತಹವರಿಗೆ ಕನ್ನಡ ಕಲಿಸುವುದು ಹೇಗೆ? ಅದಕ್ಕಾಗಿ ಮಾರುಕಟ್ಟೆಯಲ್ಲಿ ಕೆಲವು ಪುಸ್ತಕಗಳು ಲಭ್ಯವಿವೆ. ಕೆಲವೊಮ್ಮೆ ಸ್ವಲ್ಪ ಕಾಲ ಮಾತ್ರ ವಾಸಿಸಲು ಕರ್ನಾಟಕಕ್ಕೆ ಬರುವವರಿರುತ್ತಾರೆ. ಅವರಿಗೆ ಪೂರ್ತಿ ಕನ್ನಡ ಕಲಿಯುವ ಆವಶ್ಯಕತೆಯಿರುವುದಿಲ್ಲ. ಅವರಿಗೆ ಮತ್ತು ಕರ್ನಾಟಕಕ್ಕೆ ಬರುವ ಪ್ರವಾಸಿಗಳಿಗೆ ಕನ್ನಡದ ಕೆಲವು ಪದ ಮತ್ತು ವಾಕ್ಯಗಳನ್ನು ಕಲಿಸುವ ಜಾಲತಾಣ ಕನ್ನಡ ಇನ್‌ಫೋಮೀಡಿಯ. ಇದರ ಇನ್ನೊಂದು ವೈಶಿಷ್ಟ್ಯವೆಂದರೆ ಇದನ್ನು ನಡೆಸುತ್ತಿರುವವರು ಸೈಂಟ್ ಜೋಸೆಫ್ಸ್ ಕಾಲೇಜಿನ ವಿದ್ಯಾರ್ಥಿಗಳು. ಈ ಜಾಲತಾಣದ ವಿಳಾಸ kannadainfomedia.com.

ಡೌನ್‌ಲೋಡ್
ಚಿತ್ರಕಾರರಾಗಬೇಕೆ?
ಅಡೋಬ್ ಫೋಟೋಶಾಪ್ ಯಾರಿಗೆ ಗೊತ್ತಿಲ್ಲ? ಗ್ರಾಫಿಕ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಗೊತ್ತಿರುವ ತಂತ್ರಾಂಶ ಇದು. ಇದು ತುಂಬ ಚೆನ್ನಾಗಿ ಏನೋ ಇದೆ. ಆದರೆ ಅತಿ ದುಬಾರಿ. ಇದಕ್ಕೆ ಪರ್ಯಾಯವಾಗಿ ಉಚಿತ ಹಾಗೂ ಮುಕ್ತ ತಂತ್ರಾಂಶಗಳಿವೆ. ಇವುಗಳಲ್ಲಿ ಎರಡನ್ನು ಇಲ್ಲಿ ಹೆಸರಿಸಬಹುದು. ಒಂದು Paint.NET. ಇದು ತುಂಬ ಸರಳವಾಗಿದೆ. ಇದು ಬೇಕಿದ್ದಲ್ಲಿ ನೀವು getpaint.net ಜಾಲತಾಣಕ್ಕೆ ಭೇಟಿ ನೀಡಬೇಕು. ಇನ್ನೂ ಸ್ವಲ್ಪ ಹೆಚ್ಚು ಸೌಕರ್ಯಗಳನ್ನು ಹೊಂಡಿರುವ ಅಂತೆಯೇ ಸ್ವಲ್ಪ ಕ್ಲಿಷ್ಟವಾದ ಮುಕ್ತ ಹಾಗೂ ಉಚಿತ ಗ್ರಾಫಿಕ್ಸ್ ತಂತ್ರಾಂಶ ಜಿಂಪ್. ಇದು ದೊರಕುವ ಜಾಲತಾಣ gimp.org.

e - ಸುದ್ದಿ
ಪೋಲೀಸರಿಂದ ತಪ್ಪಿಸಿಕೊಳ್ಳಲು ಟ್ವಿಟ್ಟರ್ ಸಹಾಯ
ನಮ್ಮೂರಿನಲ್ಲಿ ಪೋಲೀಸರು ರಸ್ತೆ ಮಧ್ಯೆ ವಾಹನ ಚಾಲಕರನ್ನು ತಪಾಸಣೆ ಮಾಡಲು ಪ್ರಾರಂಬಿಸುತ್ತಿದ್ದಂತೆ ಆ ರಸ್ತೆಯಲ್ಲಿ ಹೋಗಿ ಬರುವ ವಾಹನ ಚಾಲಕರು ಎದರುಗಡೆಯಿಂದ ಬರುತ್ತಿರುವ ವಾಹನ ಚಾಲಕರುಗಳಿಗೆ ಮುಂದೆ ಪೋಲೀಸರಿದ್ದಾರೆ ಎಂದು ಸಂಕೇತ ನೀಡುವುದು ತಿಳಿದಿರಬಹುದು. ಅಮೇರಿಕದಲ್ಲಿ ಹೆಂಡ ಕುಡಿದು ವಾಹನ ಚಾಲನೆ ನಡೆಸುವವರನ್ನು ಪತ್ತೆ ಹಚ್ಚಲು ಪೋಲೀಸರು ಧಿಡೀರ್ ತಪಾಸಣೆ ಮಾಡುತ್ತಿರುತ್ತಾರೆ. ಪೋಲೀಸರು ಯಾವ ರಸ್ತೆಯಲ್ಲಿ ಈ ರೀತಿ ತಪಾಸಣೆ ನಡೆಸುತ್ತಿದ್ದಾರೆ ಎಂಬುದನ್ನು ವಾಹನ ಚಾಲಕರು ಕೂಡಲೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಲು ಪ್ರಾರಂಭಿಸಿದ್ದಾರೆ. ಹೆಂಡ ಕುಡಿದು ವಾಹನ ನಡೆಸುವವರು ತಾವು ಹೋಗಬೇಕಾದ ರಸ್ತೆಯಲ್ಲಿ ಪೋಲೀಸರು ಇದ್ದಾರೆಯೋ ಎಂಬುದನ್ನು ಟ್ವಿಟ್ಟರ್ ಮೂಲಕ ಪತ್ತೆ ಹಚ್ಚಿ ನಂತರ ಹೊರಡುತ್ತಾರೆ.

e- ಪದ

ಹಬ್ (hub) - ಗಣಕಜಾಲದಲ್ಲಿರುವ ಹಲವಾರು ಸಾಧನ ಮತ್ತು ಗಣಕಗಳನ್ನು ಬೆಸೆಯುವ ಸಾಧನ. ಸಾಮಾನ್ಯವಾಗಿ ಕಂಪೆನಿಗಳಲ್ಲಿ ಮತ್ತು ಕೆಲವೊಮ್ಮೆ ಮನೆಗಳಲ್ಲಿ ಕೂಡ ಹಲವಾರು ಗಣಕಗಳನ್ನು ಒಂದು ಆಂತರಿಕ ಜಾಲದಲ್ಲಿ ಬೆಸೆಯುವಾಗ ಇಂತಹ ಸಾಧನಗಳ ಬಳಕೆ ಆಗುತ್ತದೆ. ಎಲ್ಲ ಗಣಕಗಳನ್ನು ಈ ಹಬ್‌ಗೆ ಜೋಡಿಸಲಾಗುತ್ತದೆ. ಮುದ್ರಕ, ಸ್ಕ್ಯಾನರ್, ಅಂತರಜಾಲಕ್ಕೆ ಸಂಪರ್ಕ ಸಾಧಿಸುವ ಮೋಡೆಮ್ -ಹೀಗೆ ಹಲವಾರು ರೀತಿಯ ಸಾಧನಗಳನ್ನು ಹಬ್ ಮೂಲಕ ಗಣಕಜಾಲಕ್ಕೆ ಸೇರಿಸಲಾಗುತ್ತದೆ.

e - ಸಲಹೆ

ವಿವೇಕ ವೈದ್ಯ ಅವರ ಪ್ರಶ್ನೆ: ನನಗೆ ಆನ್‌ಲೈನ್ ಕೆಲಸಗಳಲ್ಲಿ ತುಂಬ ಆಸಕ್ತಿ ಇದೆ. ಆದರೆ ಹೆಚ್ಚಿನ ಜಾಲತಾಣಗಳು ಕೆಲಸಕ್ಕೆ ಮೊದಲೆ ಹಣ ಕೇಳುತ್ತಿವೆ. ಅಂತಹ ಜಾಲತಾಣಗಳನ್ನು ನಂಬಿ ಹಣ ನೀಡಬಹುದೇ?
ಉ: ಖಂಡಿತ ಬೇಡ. ಯಾವುದಾದರೂ ಜಾಲತಾಣ ಕೆಲಸಕ್ಕೆ  ಮೊದಲೆ ಹಣ ಕೇಳಿದರೆ ಅದರಲ್ಲೇನೋ ದೋಷ ಇದೆ ಎಂದು ತೀರ್ಮಾನಿಸಬಹುದು. ಸಾಮಾನ್ಯವಾಗಿ ಇಂತಹ ಜಾಲತಾಣಗಳು ಏನು ಮಾಡುತ್ತವೆಯೆಂದರೆ ನಾವು ಒಂದು ಕಿಟ್ ನೀಡುತ್ತೇವೆ. ಅದನ್ನು ಖರೀದಿಸಬೇಕು. ಅನಂತರ ಪ್ರತಿತಿಂಗಳು ಆ ಕಿಟ್ ಅನ್ನು ಬಳಸಿ ಪ್ರತಿದಿನ ಕೆಲವು ಜಾಲತಾಣಗಳನ್ನು ವೀಕ್ಷಿಸತಕ್ಕದ್ದು. ಒಂದು ಜಾಲತಾಣ ವೀಕ್ಷಣೆ ಮಾಡಿದ್ದಕ್ಕೆ ಇಂತಿಷ್ಟು ಎಂಬುದಾಗಿ ಹಣ ನಿಗದಿ ಮಾಡಲಾಗುತ್ತದೆ. ಅದರಂತೆ ನಿಮಗೆ ಹಣ ಸಂಪಾದನೆ ಆಗುತ್ತದೆ ಎಂಬುದಾಗಿ ನಂಬಿಸುತ್ತಾರೆ. ಇಂತಹ ಬಹುಪಾಲು ಕಂಪೆನಿಗಳು ನೀವು ಕಿಟ್ ಕೊಂಡುಕೊಂಡ ನಂತರ ನಿಮ್ಮ ಯಾವ ಇಮೈಲ್‌ಗಳಿಗೂ ಉತ್ತರಿಸುವುದೇ ಇಲ್ಲ.

ಕಂಪ್ಯೂತರ್ಲೆ

ಗೂಗ್ಲ್ ಟಾಯ್ಲೆಟ್‌ಗೆ!

ಹೌದು. ಗೂಗ್ಲ್ ಟಾಯ್ಲೆಟ್ ಕೆಳಗೆ ಹೋಗುತ್ತಿದೆ! ಏನು ಹಾಗೆಂದರೆ? ವಿಯೆಟ್ನಾಂನಲ್ಲಿ ಗೂಗ್ಲ್ ಹೆಸರಿನ ಟಾಯ್ಲೆಟ್ ಪೇಪರ್ ಇದೆ!

ಬುಧವಾರ, ಜನವರಿ 13, 2010

ಗಣಕಿಂಡಿ - ೦೩೪ (ಜನವರಿ ೧೧, ೨೦೧೦)

ಅಂತರಜಾಲಾಡಿ

ಉಚಿತ ವೀಡಿಯೋ ಪಾಠಗಳು

ಅಂತರಜಾಲದ ಮೂಲಕ ಪಾಠ ಮಾಡುವುದು ಈಗೀಗ ಸರ್ವೇಸಾಮಾನ್ಯವಾಗುತ್ತಿದೆ. ದೂರಶಿಕ್ಷಣದಲ್ಲಂತೂ ಇದಿಲ್ಲದೆ ನಡೆಯುವುದೇ ಇಲ್ಲವೆನ್ನುವಂತಾಗಿದೆ. ಸಾಮಾನ್ಯವಾಗಿ ಇವೆಲ್ಲ ಹಣ ಕೊಟ್ಟು ನೋಡಬೇಕಾದಂತ ಶೈಕ್ಷಣಿಕ ವೀಡಿಯೋ ಪಾಠಗಳಾಗಿರುತ್ತವೆ. ದೂರಶಿಕ್ಷಣದಲ್ಲಾದರೋ ಈ ವೀಡಿಯೋಗಳಿಗೆ ಶುಲ್ಕವನ್ನು ವಾರ್ಷಿಕ ಶುಲ್ಕದಲ್ಲಿ ಸೇರಿಸಿರುತ್ತಾರೆ. ಅಂತರಜಾಲದಲ್ಲಿ ಉಚಿತ ವೀಡಿಯೋ ಪಾಠಗಳೂ ಇವೆ. ಖ್ಯಾತ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳಿಂದ ಉಚಿತ ವೀಡಿಯೋ ಪಾಠಗಳನ್ನು ನೋಡಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ academicearth.org. ಖಗೋಳ ವಿಜ್ಞಾನದಿಂದ ಹಿಡಿದು ವೈದ್ಯಕೀಯದ ತನಕ ಹಲವು ವಿಷಯಗಳ ಬಗ್ಗೆ ಪಾಠಗಳ ವೀಡಿಯೋಗಳನ್ನು ಇಲ್ಲಿ ಉಚಿತವಾಗಿ ನೋಡಬಹುದು.

ಡೌನ್‌ಲೋಡ್
ಡ್ರೈವರ್ ಪತ್ತೆಹಚ್ಚಿ
ಕೆಲವೊಮ್ಮೆ ಗಣಕ ಸರಿಯಾಗಿ ಕೆಲಸ ಮಾಡದಿರುವುದಕ್ಕೆ ಅಥವಾ ನಿಧಾನವಾಗಿ ಕೆಲಸ ಮಾಡುವುದಕ್ಕೆ ಸರಿಯಾದ ಡ್ರೈವರ್ ದೊರಕದಿರುವುದೂ ಕಾರಣವಾಗಿರುತ್ತದೆ. ಉದಾಹರಣೆಗೆ ನಿಮ್ಮ ಗಣಕದಲ್ಲಿ ಯಾವುದೋ ಯಂತ್ರಾಂಶ ಸೇರಿಸಲ್ಪಟ್ಟಿದೆಯೆಂದಿಟ್ಟುಕೊಳ್ಳಿ. ಬಹುಮಾಧ್ಯಮದ (ಮಲ್ಟಿಮೀಡಿಯಾ) ಕಾರ್ಡ್, ಗ್ರಾಫಿಕ್ಸ್ ಕಾರ್ಡ್, ವಯರ್‌ಲೆಸ್ ಅಥವಾ ಬ್ಲೂಟೂತ್ ಸಂಪರ್ಕ ಸಾಧನ, ಇತ್ಯಾದಿ ಯಾವುದೋ ಇರಬಹುದು. ಅದನ್ನು ನಡೆಸಲು ಬೇಕಾದ ಡ್ರೈವರ್ ತಂತ್ರಾಂಶ ಗಣಕದಲ್ಲಿ ಇಲ್ಲದಿರಬಹುದು. ಗಣಕದ ಡಿವೈಸ್ ಮ್ಯಾನೇಜರ್ ಎಂಬ ಸವಲತ್ತನ್ನು ಬಳಸಿ ಹುಡುಕಿದರೆ ಈ ಯಂತ್ರಾಂಶದ ಮುಂದೆ ಅದು ಒಂದು ಹಳದಿ ಬಣ್ಣದ ಪ್ರಶ್ನಾರ್ಥಕ ಚಿಹ್ನೆ ಮೂಲಕ ಡ್ರೈವರ್ ಇಲ್ಲ ಎಂಬುದನ್ನು ಸೂಚಿಸುತ್ತದೆ. ಯಾವ ಯಂತ್ರಾಂಶ ಎಂದು ಗೊತ್ತಿದ್ದರೆ ಅದಕ್ಕೆ ಸರಿಯಾದ ಡ್ರೈವರ್ ಹುಡುಕಬಹುದು. ಕೆಲವೊಮ್ಮೆ unknown device ಎಂದು ಸೂಚಿಸಿದಾಗ ಫಜೀತಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಗೊತ್ತಿಲ್ಲದ ಸಾಧನ ಯಾವುದೆಂದು ಪತ್ತೆಹಚ್ಚಲು Unknown Device Identifier ಎನ್ನುವ ಉಚಿತ ತಂತ್ರಾಂಶವನ್ನು http://bit.ly/8v5GIJ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು.

e - ಸುದ್ದಿ
ಆಟ ಆಡಿ ಖದೀಮ ಸಿಕ್ಕಿಬಿದ್ದ 
ಮಾದಕ ವಸ್ತುಗಳ ವ್ಯವಹಾರದಲ್ಲಿ ನಿರತನಾಗಿದ್ದ ಖದೀಮನೊಬ್ಬ ಗಣಕ ಆಟದಿಂದಾಗಿ ಸಿಕ್ಕಿಬಿದ್ದ ಸುದ್ದಿ ಬಂದಿದೆ. ಈತನನ್ನು ಹಿಡಿಯಲು ೨೦೦೭ನೆಯ ಇಸವಿಯಿಂದಲೇ ಪೋಲೀಸರು ಜಾಲ ಹರಡಿದ್ದರು. ಆತ ಇನ್ನೇನು ಸಿಕ್ಕಿಯೇಬಿಟ್ಟ ಅನ್ನುವಷ್ಟರಲ್ಲಿ ಆತ ಅಮೇರಿಕಾದಿಂದ ಕೆನಡ ದೇಶಕ್ಕೆ ತಪ್ಪಿಸಿಕೊಂಡುಬಿಟ್ಟಿದ್ದಾನೆ ಎಂಬ ಮಾಹಿತಿ ಸಿಕ್ಕಿತು. ಆತನ ಬಗ್ಗೆ ಅವರಿಗೆ ಇನ್ನೊಂದು ಮಾಹಿತಿಯೂ ಸಿಕ್ಕಿತು. ಅದೇನೆಂದರೆ ಆತ ವರ್ಲ್ಡ್ ಆಫ್ ವಾರ್‌ಕ್ರಾಫ್ಟ್ ಎಂಬ ಅಂತರಜಾಲ ಆಧಾರಿತ ಸುಪ್ರಸಿದ್ಧ ಆಟದ ವ್ಯಸನಿಯಾಗಿದ್ದ ಎಂಬುದು. ಇದರ ಆಧಾರದಿಂದ ಆತ ಯಾವ ಹೆಸರಿನಲ್ಲಿ ಯಾವಾಗಲೂ ಆಡುತ್ತಾನೆ ಎಂಬ ಸುಳಿವಿನ ಮೂಲಕ ಆ ಆಟ ನಡೆಸುವ ಕಂಪೆನಿಯ ಸಹಯೋಗದಿಂದ ಆತನನ್ನು ಕೊನೆಗೂ ಕೆನಡ ದೇಶದಲ್ಲಿ ಸೆರೆಹಿಡಿಯಲಾಯಿತು.

e- ಪದ

ಡ್ರೈವರ್ (driver) - ಯಂತ್ರಾಂಶ ಅಥವಾ ಸಾಧನಗಳನ್ನು ನಿಯಂತ್ರಿಸುವ ತಂತ್ರಾಂಶ. ಗಣಕದೊಳಗೆ ಅಳವಡಿಸಿರುವ ಅಥವಾ ಹೊರಗಡೆಯಿಂದ ಸಂಪರ್ಕಿಸಲ್ಪಟ್ಟಿರುವ ಯಾವುದೇ ಯಂತ್ರಾಂಶ ಅಥವಾ ಸಾಧನವು ಕೆಲಸ ಮಾಡಬೇಕಾದರೆ ಅದಕ್ಕೆ ಸರಿಯಾದ ಡ್ರೈವರ್ ತಂತ್ರಾಂಶ ಅತೀ ಅಗತ್ಯ. ಉದಾಹರಣೆಗೆ ಮುದ್ರಕ, ಕ್ಯಾಮರಾ, ಬಹುಮಾಧ್ಯಮ ಸಲಕರಣೆ, ಸ್ಕ್ಯಾನರ್, ಇತ್ಯಾದಿಗಳು. ಇವುಗಳನ್ನು ಕೊಂಡುಕೊಳ್ಳುವಾಗ ಅವುಗಳ ಜೊತೆ ಈ ಡ್ರೈವರ್ ತಂತ್ರಾಂಶವನ್ನು ಸಿ.ಡಿ.ಯಲ್ಲಿ ನೀಡಿರುತ್ತಾರೆ. ಅದನ್ನು ಇನ್‌ಸ್ಟಾಲ್ ಮಾಡಿದ ನಂತರ ಆ ಸಿ.ಡಿ.ಯನ್ನು ಜೋಪಾನವಾಗಿ ತೆಗೆದಿಟ್ಟುಕೊಳ್ಳಬೇಕು. ಇನ್ನೊಮ್ಮೆ ಯಾವಾಗಾದರೂ ಆ ಸಲಕರಣೆಯನ್ನು ಮತ್ತೊಮ್ಮೆ ಇನ್‌ಸ್ಟಾಲ್ ಮಾಡಬೇಕಾಗಿ ಬಂದಾಗ ಈ ಡ್ರೈವರ್ ತಂತ್ರಾಂಶ ಬೇಕಾಗುತ್ತದೆ. ಸಾಮಾನ್ಯವಾಗಿ ಸಲಕರಣೆ ತಯಾರಕರು ಹೊಸ ಕಾರ್ಯಾಚರಣೆಯ ವ್ಯವಸ್ಥೆ ಬಿಡುಗಡೆಯಾದಾಗ ಅಥವಾ ಯಾವುದಾದರೂ ದೋಷ ಪತ್ತೆಯಾದಾಗ ಡ್ರೈವರ್ ತಂತ್ರಾಂಶದ ಹೊಸ ಆವೃತ್ತಿಯನ್ನು ತಮ್ಮ ಜಾಲತಾಣದಲ್ಲಿ ನೀಡುತ್ತಾರೆ. ಆಗಾಗ ಡ್ರೈವರ್ ತಂತ್ರಾಂಶವನ್ನು ನವೀಕರಿಸಿಕೊಂಡರೆ ಒಳ್ಳೆಯದು.


e - ಸಲಹೆ

ವೈ. ಎಂ. ಲೋಕೇಶ್ ಅವರ ಪ್ರಶ್ನೆ: ನೀವು ಕನ್ನಡ ಪ್ರಭ ಪತ್ರಿಕೆಯಲ್ಲಿ ಗಣಕಿಂಡಿ ಅಂಕಣದ ಮೂಲಕ ನೀಡುವ ಮಾಹಿತಿಗಳು ನನಗೆ ತುಂಬ ಉಪಯುಕ್ತವಾಗಿವೆ. ಅದರಲ್ಲಿ ನೀವು ನೀಡುವ ಸಲಹೆಗಳು, ಜಾಲತಾಣಗಳ ವಿಳಾಸಗಳು ತುಂಬ ಉಪಯುಕ್ತವಾಗಿವೆ. ನನಗೆ ಎಲ್ಲ ಲೇಖನಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗಿದೆ. ಹಿಂದಿನ ಸಂಚಿಕೆಯ ಲೇಖನಗಳು ಎಲ್ಲಿ ದೊರಕುತ್ತವೆ?
ಉ: ನೀವು ganakindi.blogspot.com ಜಾಲತಾಣದಲ್ಲಿ ಎಲ್ಲ ಲೇಖನಗಳನ್ನು ಓದಬಹುದು.

ಕಂಪ್ಯೂತರ್ಲೆ

ಹಿಂಬದಿಯಲ್ಲಿ ಟೈಪ್ ಮಾಡುವುದು ಹೇಗೆ?

ಕೆಲವು ಮುದ್ರಕಗಳು ಪುಟದ ಎರಡು ಬದಿಯಲ್ಲೂ ಮುದ್ರಿಸಬಲ್ಲವು. ಬೆಂಗಳೂರಿನ ಖ್ಯಾತ ಮಾಹಿತಿ ತಂತ್ರಜ್ಞಾನ ಕಂಪೆನಿ ತನ್ನ ಎಲ್ಲ ಉದ್ಯೋಗಿಗಳಿಗೆ ಸೂಚನೆ ನೀಡಿತ್ತು. ಅದೇನೆಂದರೆ ಕಾಗದ ಉಳಿಸಲು ಕಾಗದದ ಎರಡು ಬದಿಗಳಲ್ಲೂ ಮುದ್ರಿಸಬೇಕು ಎಂಬುದಾಗಿತ್ತು. ಒಬ್ಬ ಉದ್ಯೋಗಿ ತನ್ನ ಮೇಲಧಿಕಾರಿಗೆ ಬರೆದ ಇಮೈಲ್ ಈ ರೀತಿ ಇತ್ತು: “ನಾನು ನಿಮ್ಮ ಸೂಚನೆಯಂತೆ ಕಾಗದದದ ಹಿಂಬದಿಯಲ್ಲೂ ಮುದ್ರಿಸಲಿಕ್ಕಾಗಿ ಎರಡು ಬದಿಯಲ್ಲೂ ಟೈಪ್ ಮಾಡಲು ಪ್ರಯತ್ನಿಸಿದೆ. ನಾನು ಮೈಕ್ರೋಸಾಫ್ಟ್ ವರ್ಡ್ ತಂತ್ರಾಂಶವನ್ನು ಬಳಸುತ್ತಿದ್ದೇನೆ. ಅದರಲ್ಲಿ ಮೊದಲನೆಯೆ ಪುಟ ಮುಗಿದ ತಕ್ಷಣ ತಾನಾಗಿಯೇ ಎರಡನೆಯದನ್ನು ಪ್ರಾರಂಭಿಸಿತು. ಮೊದಲನೆಯ ಪುಟದ ಹಿಂಬದಿಯಲ್ಲಿ ಟೈಪ್ ಮಾಡುವುದು ಹೇಗೆ ಎಂಬುದನ್ನು ದಯವಿಟ್ಟು ತಿಳಿಸಬೇಕು”.

ಬುಧವಾರ, ಜನವರಿ 6, 2010

ಗಣಕಿಂಡಿ - ೦೩೩ (ಜನವರಿ ೦೪, ೨೦೧೦)

ಅಂತರಜಾಲಾಡಿ

ಅಂತಾರಾಷ್ಟ್ರೀಯ ಜೀವ ವೈವಿಧ್ಯ ವರ್ಷ
 
೨೦೧೦ನೆಯ ಇಸವಿಯನ್ನು ಅಂತಾರಾಷ್ಟ್ರೀಯ ಜೀವ ವೈವಿಧ್ಯ ವರ್ಷ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ಜೀವ ವೈವಿಧ್ಯವೆಂದರೆ ಭೂಮಿಯ ಮೇಲೆ ಇದ್ದ, ಇರುವ ಮತ್ತು ಮುಂದೆಯೂ ಇರಬೇಕಾದ ಎಲ್ಲ ಜಾತಿಯ ಜೀವಿಗಳಲ್ಲಿರುವ ವೈವಿಧ್ಯ. ಪರಿಸರ ನಾಶದ ಜೊತೆಗೆ ಸಾವಿರಾರು ಜೀವಜಾತಿಗಳೂ ನಾಶವಾಗುತ್ತಿವೆ. ಬೆಂಗಳೂರಿನಿಂದ ಗುಬ್ಬಚ್ಚಿಗಳು ನಾಪತ್ತೆಯಾಗಿರುವುದು ಇದಕ್ಕೆ ಒಂದು ಉದಾಹರಣೆ. ಜೀವವೈವಿಧ್ಯ ಕಡಿಮೆಯಾಗದಂತೆ ಎಲ್ಲರೂ ಸೇರಿ ಕೆಲಸ ಮಾಡಬೇಕಾಗಿದೆ. ಹೀಗೆ ಎಲ್ಲರೂ ಒಟ್ಟುಗೂಡಿ ಕೆಲಸ ಮಾಡಲಿಕ್ಕೆಂದೇ ಇರುವ ಜಾಲತಾಣ www.countdown2010.net. ೨೦೧೦ರ ಜೀವವೈವಿಧ್ಯದ ಗುರಿ, ಜೀವವೈವಿಧ್ಯ ಉಳಿಸಬೇಕಾದರೆ ಮಾಡಬೇಕಾದ ಕೆಲಸಗಳು, ಇತ್ಯಾದಿ ಎಲ್ಲ ವಿವರಗಳು ಈ ಜಾಲತಾಣದಲ್ಲಿದೆ.

ಡೌನ್‌ಲೋಡ್
ನೆಕ್ಸುಯಿಝ್ ಆಟ
ಆಟ ಯಾರಿಗೆ ಇಷ್ಟವಿಲ್ಲ? ಗಣಕದಲ್ಲಿ ಆಟ ಆಡುವುದರ ಬಗ್ಗೆ ಪರ ಮತ್ತು ವಿರೋಧ ಅಭಿಪ್ರಾಯಗಳಿವೆ. ಅಭಿಪ್ರಾಯಗಳು ಏನೇ ಇರಲಿ. ನಮಗೆ ಆಟಗಳ ಜಾಲತಾಣಗಳ ವಿಳಾಸ ಕೊಡಿ ಎಂದು ಕೇಳುವವರಿದ್ದಾರೆ. ಬಹುಪಾಲು ಆಟಗಳು ದುಬಾರಿ ಬೆಲೆಬಾಳುವವು. ತುಂಬ ಜನಪ್ರಿಯವಾಗಿರುವ ಉಚಿತ ಮತ್ತು ಮುಕ್ತ ಆಟ ನೆಕ್ಸುಯಿಝ್. ಇದು ದೊರಕುವ ಜಾಲತಾಣದ ವಿಳಾಸ http://bit.ly/6ajDsz. ಹೆಚ್ಚಿನ ಮುಕ್ತ ತಂತ್ರಾಂಶಗಳಂತೆ ಇದು ಕೂಡ ವಿಂಡೋಸ್ ಮಾತ್ರವಲ್ಲ ಮ್ಯಾಕ್ ಮತ್ತು ಲೈನಕ್ಸ್‌ಗೂ ಲಭ್ಯವಿದೆ. ಇದು ಮೂರು ಆಯಾಮಗಳ ಶೂಟಿಂಗ್ ಗೇಮ್. ಹೆಚ್ಚಿನ ಮಾತೇಕೆ? ನೀವೇ ಡೌನ್‌ಲೋಡ್ ಮಾಡಿ ಆಡಿ ನೋಡಿ.

e - ಸುದ್ದಿ
ನಗುವಿಗೂ ಪೇಟೆಂಟ್!  
ಏನಿದುಅಸಂಬದ್ಧ ಅಂದುಕೊಂಡಿರಾ? ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಸದ ಬುಟ್ಟಿಯಿಂದ ಹಿಡಿದು ಮೌಸ್‌ಅನ್ನು ಮೂರು ಸಲ ಕ್ಲಿಕ್ ಮಾಡುವುದಕ್ಕೂ ಪೇಟೆಂಟ್ ಪಡೆಯಲಾಗಿದೆ. ಕಸದ ಬುಟ್ಟಿ ಎಂದರೆ ಗಣಕ ಪರದೆಯ ಮೇಲೆ ಕಾಣಿಸುವ ಕಸದ ಬುಟ್ಟಿಯ ಚಿತ್ರಿಕೆ (ಐಕಾನ್). ಈ ಪೇಟೆಂಟ್ ಪಡೆದಿದ್ದು ಆಪಲ್ ಕಂಪೆನಿ, ತುಂಬ ಹಿಂದೆ. ಈಗಿನ ಸುದ್ದಿ ಐಬಿಎಂ ಕಂಪೆನಿ ಪಡೆದುಕೊಂಡ ಪೇಟೆಂಟಿನದ್ದು. ಗಣಕ, ಅಂತರಜಾಲ ಮಾತುಕತೆ, ಇಮೈಲ್, ಚಾಟ್, ಟ್ವಿಟ್ಟರ್, ಬ್ಲಾಗ್ -ಇತ್ಯಾದಿಗಳಲ್ಲಿ ಪುದಗುಚ್ಛಗಳನ್ನು ಸೂಚಿಸಲು ಆ ಪದಗಳ ಮೊದಲ ಅಕ್ಷರಗಳನ್ನು ಜೋಡಿಸಿ ಬಳಸಲಾಗುತ್ತದೆ. ಉದಾಹರಣೆಗೆ LOL ಅಂದರೆ laughing out loud. ಈ ರೀತಿ ಕಿರುಪಠ್ಯ ಬಳಸುವ ವಿಧಾನಕ್ಕೆ ಐಬಿಎಂ ಕಂಪೆನಿಗೆ ಪೇಟೆಂಟ್ ನೀಡಲಾಗಿದೆ. ಜನಬಳಕೆಯಲ್ಲಿ ಈಗಾಗಲೇ ಇರುವ ರೀತಿನೀತಿಗಳಿಗೆ ಪೇಟೆಂಟ್ ಪಡೆಯುವುದನ್ನು ಹಿಂದೊಮ್ಮೆ ಇದೇ ಐಬಿಎಂ ಕಂಪೆನಿ ಗೇಲಿ ಮಾಡಿತ್ತು. ಈಗ? ಓದುವುದು ಶಾಸ್ತ್ರ, ಇಕ್ಕುವುದು ಗಾಳ ಅಂತೀರಾ? 

e- ಪದ

ಸಂಕೇತೀಕರಣ (encoding) -ಗಣಕದಲ್ಲಿ ಸಂಗ್ರಸಿಡಲು ಮತ್ತು ಮಾಹಿತಿಯ ವಿನಿಮಯಕ್ಕಾಗಿ ಅಕ್ಷರಗಳನ್ನು ಡಿಜಿಟಲ್ ವಿಧಾನಕ್ಕೆ ಪರಿವರ್ತಿಸುವ ವಿಧಾನ. ಇದರಲ್ಲಿ ಹಲವು ಬಗೆ ಇವೆ. ಉದಾಹರಣೆಗೆ ಆಸ್ಕಿ (ASCII) ಮತ್ತು ಯುನಿಕೋಡ್ (Unicode). ಒಂದು ವಿಧಾನದಲ್ಲಿ ಮಾಹಿತಿಯನ್ನು ಸಂಗ್ರಹಿಸಿಟ್ಟರೆ ಅದು ಎಲ್ಲ ತಂತ್ರಾಂಶಗಳಿಗೆ ಮತ್ತು ಸಂಪರ್ಕವಾಹಿನಿಗಳಿಗೆ ಅರ್ಥವಾಗಬೇಕು. ಅದಕ್ಕೆಂದೇ ಜಾಗತಿಕ ಶಿಷ್ಟತೆಯ ಬಳಕೆಯಾಗುತ್ತಿದೆ. ಆಸ್ಕಿ ಶಿಷ್ಟತೆಯಲ್ಲಿ ಜಗತ್ತಿನ ಎಲ್ಲ ಭಾಷೆಗಳಿಗೆ ಸ್ಥಳಾವಕಾಶ ಮಾಡಲು ಸಾಧ್ಯವಿಲ್ಲ. ಆದುದರಿಂದ ಇತ್ತೀಚೆಗೆ ಜಗತ್ತಿನಾದ್ಯಂತ ಯುನಿಕೋಡ್‌ನ ಬಳಕೆ ಆಗುತ್ತಿದೆ.


e - ಸಲಹೆ

ಜಿ. ಎಚ್. ಶ್ರೀಧರ ಅವರ ಪ್ರಶ್ನೆ: ನಾನು ಸುಮಾರು ಒಂದು ವರ್ಷದ ಹಿಂದೆ ಒಂದು ಸಿ.ಡಿ.ಯಲ್ಲಿ ಕೆಲವು ಫೈಲುಗಳನ್ನು ಬರೆದು ಇಟ್ಟಿದ್ದೆ. ಈಗ ಅದನ್ನು ಓದಲಾಗುತ್ತಿಲ್ಲ. ಅದರ ಗಾತ್ರ ೩೦೦ ಎಂ.ಬಿ. ಎಂದು ತೋರಿಸುತ್ತಿದೆ. ಆದರೆ ಯಾವ ಫೈಲೂ ಕಾಣಿಸುತ್ತಿಲ್ಲ. ನನ್ನ ಫೈಲುಗಳು ಎಲ್ಲಿ ಹೋದವು? ಅವುಗಳನ್ನು ವಾಪಾಸು ಪಡೆಯುವುದು ಹೇಗೆ?
ಉ: ಕೆಲವು ಕಡಿಮೆ ಗುಣಮಟ್ಟದ ಸಿ.ಡಿ.ಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿಟ್ಟಾಗ ಕೆಲವೊಮ್ಮೆ ಈ ರೀತಿ ಆಗುತ್ತದೆ. ಇಂತಹ ಸಿ.ಡಿ., ಡಿ.ವಿ.ಡಿ.ಗಳಿಂದ ಮಾಹಿತಿಯನ್ನು ವಾಪಾಸು ಪಡೆಯಲು CD Recovery Toolbox ಎಂಬ ಉಚಿತ ತಂತ್ರಾಂಶ ಲಭ್ಯವಿದೆ. ನೀವು ಇದನ್ನು http://bit.ly/4JUUGn ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕಂಪ್ಯೂತರ್ಲೆ

ಗೂಗ್ಲ್‌ನವರು ಏನು ಮಾಡಿದರೂ ಸುದ್ದಿಯಾಗುತ್ತದೆ. ಇತ್ತೀಚೆಗೆ ಗೂಗ್ಲ್ ವೇವ್ ಎಂಬ ಸವಲತ್ತನ್ನು ಅಂತರಜಾಲದಲ್ಲಿ ಬಳಕೆದಾರರಿಗೆ ನೀಡಿದ್ದಾರೆ. ಇದು ಉಚಿತವಾಗಿದ್ದರೂ ಯಾರಾದರೂ ಆಹ್ವಾನಿಸಿದವರಿಗೆ ಮಾತ್ರ ಬಳಕೆಗೆ ಲಭ್ಯ. ಈ ಆಹ್ವಾನಕ್ಕಾಗಿ ಜಾಲನಾಗರಿಕರಲ್ಲಿ ತುಂಬ ಗುದ್ದಾಟಗಳೂ ನಡೆದಿವೆ. ಹೀಗೆ ಆಹ್ವಾನ ಪಡೆದ ನಂತರ ಅದನ್ನು ಬಳಸಲು ಹೆಚ್ಚಿನವರಿಗೆ ಅರ್ಥವಾಗಲಿಲ್ಲ. ಹೀಗೆ ಗೂಗ್ಲ್ ವೇವ್ ಅರ್ಥವಾಗಲಿಲ್ಲ ಎಂಬ ಬೇಸರದಲ್ಲಿ ತಂತ್ರಜ್ಞನೊಬ್ಬ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ವಡೋದರದಿಂದ ಬಂದಿದೆ. ಇದರ ಬಗ್ಗೆ ಹೆಚ್ಚಿನ ವಿವರ ಬೇಕಿದ್ದಲ್ಲಿ http://bit.ly/8T83L2 ಜಾಲತಾಣಕ್ಕೆ ಭೇಟಿ ನೀಡಬಹುದು.