ಮಂಗಳವಾರ, ಮೇ 31, 2011

ಗಣಕಿಂಡಿ - ೧೦೬ (ಮೇ ೩೦, ೨೦೧೧)

ಅಂತರಜಾಲಾಡಿ

ಕಾನೂನು ಖಟ್ಲೆ ಹುಡುಕಿ

ನಮ್ಮ ದೇಶದಲ್ಲಿರುವಷ್ಟು ಕಾನೂನುಗಳು ಮತ್ತು ಅವುಗಳಿಗೆ ತಂದಿರುವ ತಿದ್ದುಪಡಿಗಳು ಪ್ರಪಂಚದ ಬೇರೆ ಯಾವ ದೇಶದಲ್ಲೂ ಇಲ್ಲವೇನೋ? ಪ್ರತಿಯೊಂದು ವಿಷಯಕ್ಕೂ ಒಂದೊಂದು ಕಾನೂನು ಇದೆ. ಕೆಲವು ಕಾನೂನುಗಳಂತೂ ಬ್ರಿಟಿಶರ ಕಾಲದವುಗಳು. ಹಲವು ಸಲ ಈ ಕಾನೂನುಗಳನ್ನು ಬೇರೆ ಬೇರೆ ನ್ಯಾಯಾಲಯಗಳು ಹಲವು ರೀತಿಯಲ್ಲಿ ಅರ್ಥೈಸಿಕೊಂಡಿದ್ದು ಕೊನೆಗೆ ಸರ್ವೋಚ್ಚ ನ್ಯಾಯಾಲಯ ಅದಕ್ಕೆ ಅಂತಿಮ ತೀರ್ಪು ನೀಡಿದ ಉದಾಹರಣೆಗಳು ಸಾಕಷ್ಟಿವೆ. ಅಂದರೆ ಕಾನೂನು ಪುಸ್ತಕ ಓದಿದರೆ ಸಾಲದು. ಅದನ್ನು ಅನುಸರಿಸಿ ನಡೆದಿರುವ ಹಲವು ದಾವೆಗಳು ಮತ್ತು ಅವುಗಳಿಗೆ ನೀಡಿರುವ ತೀರ್ಪುಗಳು ಗೊತ್ತಿರಬೇಕು. ಸಾಮಾನ್ಯವಾಗಿ ಈ ಎಲ್ಲ ವಿಷಯಗಳನ್ನು ದೊಡ್ಡ ದೊಡ್ಡ ಪುಸ್ತಕಗಳ ರೂಪದಲ್ಲಿ ಪ್ರಕಟಿಸುತ್ತಾರೆ. ಅವುಗಳು ಬಹುಪಾಲು ನ್ಯಾಯವಾದಿಗಳ ಕಚೇರಿಗಳಲ್ಲಿರುತ್ತವೆ. ಯಾವ ಕಪಾಟಿನ ಯಾವ ಪುಸ್ತಕದ ಯಾವ ಪುಟದಲ್ಲಿ ನಿಮಗೆ ಅಗತ್ಯವಾದ ಮಾಹಿತಿ ಇದೆ ಎಂದು ತಿಳಿಯುವುದು ಹೇಗೆ? ಈ ಎಲ್ಲ ವಿಷಯಗಳು ಒಂದು ಮೌಸ್ ಕ್ಲಿಕ್‌ನ ಮೂಲಕ ಸಿಗುವಂತಿದ್ದರೆ ಒಳ್ಳೆಯದಲ್ಲವೇ? ಹೌದು. ಈಗ ಅದಕ್ಕಾಗಿಯೇ ಒಂದು ಕಾನೂನು ಶೋಧಕ ಜಾಲತಾಣ ಸಿದ್ಧವಾಗಿದೆ. ಅದರ ವಿಳಾಸ - www.legalcrystal.com.
 
ಡೌನ್‌ಲೋಡ್


ಎಕ್ಸೆಲ್‌ಗೆ ಇನ್ನಷ್ಟು ಜೋಡಣೆ

ಮೈಕ್ರೋಸಾಫ್ಟ್ ಎಕ್ಸೆಲ್ ಯಾರಿಗೆ ಗೊತ್ತಿಲ್ಲ. ಲೆಕ್ಕಾಚಾರ ಮಾಡಲು, ಕೋಷ್ಟಕ ಮತ್ತು ಚಾರ್ಟ್ ತಯಾರಿಸಲು, ಮಾಹಿತಿಗಳ ಸಂಸ್ಕರಣೆ ಮತ್ತು ವಿಶ್ಲೇಷಣೆ ಮಾಡಲು ಬಹುಮಂದಿ ಬಳಸುವ ತಂತ್ರಾಂಶ ಇದು. ಜನಸಾಮಾನ್ಯರ ದಿನನಿತ್ಯದ ಕೆಲಸಗಳಿಗೆ ಇದರಲ್ಲಿ ಅಡಕವಾಗಿರುವ ಸವಲತ್ತುಗಳು ಧಾರಾಳ ಸಾಕು. ಆದರೂ ನೀವು ತುಂಬ ಪರಿಣತರಾಗಿದ್ದು ಇನ್ನೂ ಬೇಕು ಎನ್ನುವವರಾದರೆ ನಿಮಗೊಂದು ಸಿಹಿಸುದ್ದಿ ಇದೆ. ಮೈಕ್ರೋಸಾಫ್ಟ್ ಎಕ್ಸೆಲ್‌ಗೆ ಸೇರಿಸಲು ಉಚಿತ ಸವಲತ್ತುಗಳ ಗುಚ್ಛ Extools ಲಭ್ಯವಿದೆ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.excel-extools.com. ಇಲ್ಲಿ ಎಕ್ಸೆಲ್ ೨೦೦೩ ಮತ್ತು ಹಿಂದಿನ ಆವೃತ್ತಿಗೆ ಹಾಗೂ ೨೦೦೭ ಮತ್ತು ನಂತರದ ಆವೃತ್ತಿಗಳಿಗೆ ಎಂದು ಎರಡು ನಮೂನೆಯಲ್ಲಿ ಡೌನ್‌ಲೋಡ್‌ಗೆ ಲಭ್ಯವಿವೆ. ಒಂದು ತುಂಬ ಉಪಯುಕ್ತ ಸವಲತ್ತೆಂದರೆ ಸಂಖ್ಯೆಯಿಂದ ಪದಗಳಿಗೆ ಪರಿವರ್ತಿಸುವುದು. ಎಕ್ಸೆಲ್‌ಗೆ ಸಂಬಂಧಪಡದಿದ್ದರೂ ಇದರ ಜೊತೆ ನೀಡಿರುವ ಇನ್ನೊಂದು ಸವಲತ್ತು ನಿಮ್ಮ ಗಣಕದಲ್ಲಿ ಇರುವ ಎಲ್ಲ ಫಾಂಟ್‌ಗಳ ಪಟ್ಟಿ ತಯಾರಿಸಿಕೊಡುತ್ತದೆ.

e - ಸುದ್ದಿ

ಗೂಗ್ಲ್ ವಾಲೆಟ್

ಗೂಗ್ಲ್‌ನವರು ಒಂದು ಹೊಸ ತಂತ್ರಜ್ಞಾನವನ್ನು ತಮ್ಮ ಆಂಡ್ರೋಯಿಡ್ ಫೋನ್‌ಗಳಲ್ಲಿ ಅಳವಡಿಸುವವರಿದ್ದಾರೆ. ಇದು ಸಮೀಪ ಕ್ಷೇತ್ರ ಸಂವಹನವನ್ನು ಬಳಸುತ್ತದೆ. ಅಂಗಡಿಯಲ್ಲಿ ಸಾಮಾನು ಕೊಂಡುಕೊಂಡು ಕೊನೆಗೆ ಹಣ ಪಾವತಿ ಮಾಡಬೇಕಾದಾಗ ನಗದುಕಟ್ಟೆಯಲ್ಲಿರುವ ಸಂವೇದಕದ ಮುಂದೆ ಗೂಗ್ಲ್ ವಾಲೆಟ್ ತಂತ್ರಜ್ಞಾನ ಅಳವಡಿಸಿರುವ ಮೊಬೈಲ್ ಫೋನನ್ನು ಹಿಡಿದರೆ ಸಾಕು. ನಿಮ್ಮ ಖಾತೆಯಿಂದ ಅಂಗಡಿಯಾತನ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಈ ತಂತ್ರಜ್ಞಾನ ಇನ್ನೂ ಬಳಕೆಗೆ ಬರಬೇಕಷ್ಟೆ. ಸದ್ಯಕ್ಕೆ ಇದನ್ನು ನ್ಯೂಯಾರ್ಕ್ ಮತ್ತು ಸ್ಯಾನ್‌ಫ್ರಾನ್ಸಿಸ್ಕೋ ನಗರಗಳಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಫೋನ್ ಕಳೆದುಕೊಳ್ಳುವ ಚಾಳಿಯವರಿಗೆ ಇದು ಮತ್ತೊಷ್ಟು ತಲೆನೋವಿನ ಸುದ್ದಿ.
 
e- ಪದ

ಸಮೀಪ ಕ್ಷೇತ್ರ ಸಂವಹನ (NFC - Near Field Communication) - ಅತಿ ಸಮೀಪದಲ್ಲಿರುವ ವಿದ್ಯುನ್ಮಾನ ಉಪಕರಣಗಳ ನಡುವೆ ನಡೆಯುವ ಸಂವಹನ. ೪ ಸೆಮೀ ಅಥವಾ ಅದಕ್ಕಿಂತಲೂ ಕಡಿಮೆ ವ್ಯಾಪ್ತಿಯಲ್ಲಿ ನಡೆಯುವ ನಿಸ್ತಂತು (ವಯರ್‌ಲೆಸ್) ಸಂವಹನ. ಇದು ಬಹುಮಟ್ಟಿಗೆ ಬ್ಲೂಟೂತ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಆದರೆ ಇದರ ತರಂಗಾಂತರ, ಶಕ್ತಿ ಮತ್ತು ವ್ಯಾಪ್ತಿಗಳು ಕಡಿಮೆ. ಪ್ರಮುಖವಾಗಿ ಮೊಬೈಲ್ ದೂರವಾಣಿಗಳಲ್ಲಿ ಇವುಗಳ ಬಳಕೆ.

e - ಸಲಹೆ

ಜಿ. ಎಚ್. ಶ್ರೀಧರ ಅವರ ಪ್ರಶ್ನೆ: ನನ್ನ ಡಿ.ವಿ.ಡಿ.ಯಲ್ಲಿ ಕೆಲವು ದೊಡ್ಡ ಫೈಲುಗಳಿವೆ. ಅವುಗಳನ್ನು ಚಿಕ್ಕ ಫೈಲುಗಳಾಗಿ ಕತ್ತರಿಸಿ ಸಿ.ಡಿ.ಗಳಲ್ಲಿ ಸಂಗ್ರಹಿಸಬೇಕಾಗಿದೆ. ಹೀಗೆ ಮಾಡಲು ಯಾವುದಾದರು ತಂತ್ರಾಂಶ ಇದೆಯೇ?
ಉ: ಇದೆ. ನೀವು www.winmend.com/file-splitter ಜಾಲತಾಣದಿಂದ File Splitter ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಿ. 

ಕಂಪ್ಯೂತರ್ಲೆ

ಒಬ್ಬಾತ ಒಂದು ಹುಡುಗಿಯನ್ನು ಒಂದು ಮದುವೆ ಮನೆಯಲ್ಲಿ ನೋಡಿದ. ಆಕೆಯ ಮುದ್ದು ಮುಖ ಆತನಿಗೆ ಇಷ್ಟವಾಯಿತು. ಆಕೆಯ ಮುದ್ದುಮುಖವನ್ನು ತನಗೆ ಬೇಕು ಎಂದು ಬುಕ್ಕಿಂಗ್ ಮಾಡಿಕೊಂಡ. ಹಾಗಿದ್ರೆ ಇದನ್ನು ಫೇಸ್‌ಬುಕಿಂಗ್ ಎನ್ನಬಹುದೇ?

ಬುಧವಾರ, ಮೇ 25, 2011

ಗಣಕಿಂಡಿ - ೧೦೫ (ಮೇ ೨೩, ೨೦೧೧)

ಅಂತರಜಾಲಾಡಿ

ಕೃತಕ ಕ್ಯಾಮರ

ಡಿಜಿಟಲ್ ಕ್ಯಾಮರಾಗಳು ಈಗ ಸರ್ವೇಸಾಮಾನ್ಯವಾಗಿವೆ. ಅವುಗಳಲ್ಲೂ ಹಲವು ನಮೂನೆಗಳಿವೆ. ಪರಿಣತರು ಬಳಸುವುದು ಎಸ್‌ಎಲ್‌ಆರ್ (SLR = Single Lens Reflect) ಕ್ಯಾಮರಾಗಳು. ಈ ಕ್ಯಾಮರಾಗಳ ಪ್ರಮುಖ ಸೌಲಭ್ಯ ಎಂದರೆ ಹಲವು ನಮೂನೆಯ ಲೆನ್ಸ್‌ಗಳನ್ನು (ಮಸೂರ) ಜೋಡಿಸಬಹುದು. ಈಗೀಗ ಇಂತಹ ಕ್ಯಾಮರಾಗಳ ಬೆಲೆ ೨೦ ಸಾವಿರ ರೂ.ಗಳಿಂದ ಪ್ರಾರಂಭವಾಗುತ್ತವೆ. ಅಂದರೆ ಸಾಮಾನ್ಯ ಮಂದಿಯ ಕೈಗೆಟುಕಬಲ್ಲವು. ಈ ಕ್ಯಾಮರಾಗಳನ್ನು ಬಳಸಲು ಪರಿಣತಿ ಬೇಕು. ಅವುಗಳಲ್ಲಿ ಇರುವ ಶಟ್ಟರ್ ವೇಗ, ಅಪೆರ್ಚರ್ ಅಗಲ, ಐಎಸ್‌ಓ ಸಂಖ್ಯೆ ಇತ್ಯಾದಿಗಳನ್ನು ಕಲಿತುಕೊಳ್ಳಬೇಕು. ಒಂದು ಘಟನೆಯನ್ನು ಚಿತ್ರೀಕರಿಸಿದಾಗ ಅದು ಬೇರೆ ಬೇರೆ ಆಯ್ಕೆಗಳಲ್ಲಿ ಹೇಗೆ ಮೂಡಿಬರಹುದು ಎಂಬ ಮಾಹಿತಿ ತಿಳಿದಿರಬೇಕು. ಇದನ್ನು ಕೃತಕ ಕ್ಯಾಮರಾ ಮೂಲಕ ಕಲಿಸುವ ಜಾಲತಾಣ camerasim.com.

ಡೌನ್‌ಲೋಡ್

ಗಣಕದಲ್ಲಿ ಪ್ರಯೋಗಶಾಲೆ

ಶಾಲಾಕಾಲೇಜು ದಿನಗಳಲ್ಲಿ ಪ್ರಯೋಗಶಾಲೆಯಲ್ಲಿ ಪ್ರಯೋಗ ನಡೆಸಿದ್ದು ನೆನಪಿದೆಯಾ? ಈಗಲೂ ನೀವು ವಿದ್ಯಾರ್ಥಿ ಅಥವಾ ಶಿಕ್ಷಕರಾಗಿದ್ದರೆ ಪ್ರಯೋಗಶಾಲೆಗೆ ಭೇಟಿ ನೀಡಲೇ ಬೇಕು. ನಿಮಗೆ ಬೇಕಾದ ಎಲ್ಲ ಉಪಕರಣಗಳು ನಿಮ್ಮ ಪ್ರಯೋಗಶಾಲೆಯಲ್ಲಿ ಇಲ್ಲದಿದ್ದರೆ ಏನು ಮಾಡುತ್ತೀರಿ? ಕೆಲವು ಪ್ರಯೋಗಗಳನ್ನಂತೂ ಕೇವಲ ಊಹಿಸಿಕೊಳ್ಳಬೇಕಷ್ಟೆ. ಆದರೆ ಇಂದಿನ ಗಣಕಯುಗದಲ್ಲಿ ಪರಿಸ್ಥಿತಿ ಹಾಗಿಲ್ಲ. ಪ್ರಯೋಗಶಾಲೆಯಲ್ಲಿ ಉಪಕರಣಗಳಿಲ್ಲದಿರಲಿ, ಅಥವಾ ಪ್ರಯೋಗ ಮಾಡಿ ನೋಡಲು ಅಸಾಧ್ಯವಾದ ಪ್ರಯೋಗವಿರಲಿ, ಇವುಗಳನ್ನೆಲ್ಲ ಗಣಕದಲ್ಲೇ ಕೃತಕವಾಗಿ ನಿರ್ಮಿಸಿದ ಪರಿಸರದಲ್ಲಿ ಮಾಡಿ ನೋಡಬಹದು (simulation). ಅದರಿಂದ ಕಲಿಯಬಹುದು. ಇದಕ್ಕಾಗಿ ದುಬಾರಿ ತಂತ್ರಾಂಶಗಳು ಹಲವಾರಿವೆ. ಕೆಲವು ಉಚಿತವಾಗಿಯೂ ಲಭ್ಯವಿವೆ. ಕೊಲೊರಾಡೋ ವಿಶ್ವವಿದ್ಯಾಲಯದವರು ಇಂತಹ ಹಲವು ಪ್ರಯೋಗಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಇವು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಖಗೋಳಶಾಸ್ತ್ರ -ಇತ್ಯಾದಿ. ಇವುಗಳನ್ನು ಪ್ರತ್ಯೇಕವಾಗಿ ಒಂದೊಂದಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಥವಾ ಎಲ್ಲವನ್ನೂ ಒಟ್ಟಿಗೆ ಡೌನ್‌ಲೋಡ್ ಮಾಡಿಕೊಳ್ಳಬೇಕಿದ್ದರೆ bit.ly/j6T2SH ಜಾಲತಾಣಕ್ಕೆ ಭೇಟಿ ನೀಡಿ.

e - ಸುದ್ದಿ

ನಂಗಿಷ್ಟವೆಂಬ ಮಗು

ಫೇಸ್‌ಬುಕ್ ಬಳಸುವವರಿಗೆ ಅದರಲ್ಲಿರುವ ಲೈಕ್ (Like) ಎಂಬ ಬಟನ್ ಪರಿಚಯವಿರಬಹುದು. ಯಾರಾದರೂ ಏನಾದರೂ ಸಂದೇಶ (ಇದಕ್ಕೆ ಪೋಸ್ಟಿಂಗ್ ಎನ್ನುತ್ತಾರೆ) ಸೇರಿಸಿದ್ದರೆ ಅದು ನಮಗಿಷ್ಟ ಎಂದು ಸೂಚಿಸಲು ಈ ಗುಂಡಿ ಮೇಲೆ ಕ್ಲಿಕ್ ಮಾಡಬೇಕು. ಈ ಫೇಸ್‌ಬುಕ್ ಜನಪ್ರಿಯತೆ ಎಷ್ಟಿದೆಯೆಂದರೆ ಈಜಿಪ್ಟ್‌ನಲ್ಲಿ ಒಬ್ಬರು ತಮ್ಮ ಮಗುವಿಗೆ ಫೇಸ್‌ಬುಕ್ ಎಂದೇ ಹೆಸರಿಟ್ಟಿದ್ದರು. ಈಗ ಇಸ್ರೇಲಿನಿಂದ ಅದಕ್ಕೂ ಮೀರಿದ ಸುದ್ದಿ ಬಂದಿದೆ. ಅಲ್ಲೊಂದು ದಂಪತಿ ತಮ್ಮ ಮಗುವಿಗೆ “ಲೈಕ್” ಎಂದು ಹೆಸರಿಟ್ಟಿದ್ದಾರೆ. ಮಗು ದೊಡ್ಡವಳಾದ ಮೇಲೆ ಎಲ್ಲರೂ ಅವಳನ್ನು ಲೈಕ್ ಎಂದು ಕರೆಯುವುದು ಎಷ್ಟು ವಿಚಿತ್ರ ಅನ್ನಿಸಬಹುದಲ್ಲವೇ?
 
e- ಪದ

ಅಂಕೀಕರಿಸು, ಅಂಕೀಕರಣ (digitise, digitisation) - ಪಾರಂಪರಿಕವಾಗಿರುವ ಮಾಹಿತಿಯನ್ನು ಗಣಕದ ಮಾಹಿತಿಯಾಗಿ ಪರಿವರ್ತಿಸುವುದು. ಉದಾಹರಣೆಗೆ ಮುದ್ರಿತ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್ (OCR) ಮೂಲಕ ಪಠ್ಯವಾಗಿ ಪರಿವರ್ತಿಸುವುದು. ಇದು ಕನ್ನಡದಲ್ಲಿ ಇನ್ನೂ ಬಳಕೆಗೆ ಬಂದಿಲ್ಲ. ಮುದ್ರಿತ ಭೂಪಟಗಳನ್ನು ಸ್ಕ್ಯಾನ್ ಮಾಡಿ ಅಂಕೀಕರಣ ಮಾಡುವುದು ಇನ್ನೊಂದು ಉದಾಹರಣೆ.

e - ಸಲಹೆ

ಸುಕೇಶ ಅವರ ಪ್ರಶ್ನೆ: ಬರಹ ಫಾಂಟ್‌ನಿಂದ ನುಡಿ ಫಾಂಟ್‌ಗೆ ಬದಲಾಯಿಸುವ ತಂತ್ರಾಂಶ ಇದೆಯೇ?
ಉ: ಬರಹ ಮತ್ತು ನುಡಿ ಎರಡೂ ಒಂದೇ ಸಂಕೇತೀಕರಣವನ್ನು ಬಳಸುತ್ತವೆ. ಅಂದರೆ “ಅ” ಎಂಬ ಅಕ್ಷರಭಾಗದ (ಗ್ಲಿಫ್) ಸಂಕೇತ ಎರಡರಲ್ಲೂ ಒಂದೇ ಅಗಿರುತ್ತದೆ. ನೀವು ವರ್ಡ್ ಬಳಸುವವರಾದರೆ ಸುಮ್ಮನೆ ಎಲ್ಲವನ್ನೂ ಆಯ್ಕೆ ಮಾಡಿಕೊಂಡು ಬರಹ ಫಾಂಟ್‌ನಿಂದ ನುಡಿ ಫಾಂಟ್‌ಗೆ ಬದಲಾಯಿಸಿಕೊಳ್ಳಿ.

ಕಂಪ್ಯೂತರ್ಲೆ

ಫೇಸ್‌ಬುಕ್ ಅನ್ನು ಕನ್ನಡೀಕರಿಸಿದಾಗ ಅದರ “ಲೈಕ್” ಬಟನ್‌ಗೆ ಕನ್ನಡದಲ್ಲಿ “ನನಗಿಷ್ಟ” ಎಂಬ ಗುಂಡಿ ಇದೆ ಎಂದಿಟ್ಟುಕೊಳ್ಳಿ (ನೀವು ಫೇಸ್‌ಬುಕ್‌ನಲ್ಲಿ ನಿಮ್ಮ ಭಾಷೆಯನ್ನು ಕನ್ನಡ ಎಂದು ಆಯ್ಕೆ ಮಾಡಿಕೊಂಡರೂ ಆ ಬಟನ್ ಸದ್ಯಕ್ಕೆ ಇಂಗ್ಲೀಶಿನಲ್ಲಿಯೇ ಇದೆ). ಇಸ್ರೇಲ್ ದಂಪತಿಗಂತೆ ಇಲ್ಲೂ ಒಬ್ಬರು ತಮ್ಮ ಮಗಳಿಗೆ “ನನಗಿಷ್ಟ” ಎಂಬ ಹೆಸರಿಟ್ಟರೆ ಎಲ್ಲರೂ ಆಕೆಯನ್ನು ನನಗಿಷ್ಟ ಎಂದು ಕರೆದರೆ ಹೇಗಿರುತ್ತದೆ?

ಮಂಗಳವಾರ, ಮೇ 17, 2011

ಗಣಕಿಂಡಿ - ೧೦೪ (ಮೇ ೧೬, ೨೦೧೧)

ಅಂತರಜಾಲಾಡಿ

ಕನ್ನಡದ ಹೆಮ್ಮೆಯ ಕಣಜ

ಕರ್ನಾಟಕ ಸರಕಾರದ ಜ್ಞಾನಕೋಶದ ಜಾಲತಾಣ ಕಣಜ. ಇದು ಕರ್ನಾಟಕ ಜ್ಞಾನ ಆಯೋಗದ ಕೊಡುಗೆ. ವಿದ್ಯುನ್ಮಾನ ಮಾಧ್ಯಮದ ಮೂಲಕ ಕನ್ನಡ ಭಾಷೆಯಲ್ಲಿ ಎಲ್ಲ ಬಗೆಯ ಅರಿವಿನ ಹರಿವುಗಳು ಮುಕ್ತವಾಗಿ ಸಿಗುವಂತೆ ಮಾಡಲು ವ್ಯವಸ್ಥಿತ ಜಾಲತಾಣ ರೂಪಿಸುವ ಯೋಜನೆ, ಇರುವ ಜ್ಞಾನದ ಸಂಗ್ರಹ, ಪರಿಷ್ಕಾರ ಮತ್ತು ಹೊಸ ಜ್ಞಾನದ ಸೃಷ್ಟಿ - ಇವು ಕಣಜದ ಸ್ಥೂಲ ಚಟುವಟಿಕೆಗಳು. ಸಂತಸದ ಸಂಗತಿಯೆಂದರೆ ಈ ಜಾಲತಾಣ ಸಂಪೂರ್ಣವಾಗಿ ಯುನಿಕೋಡ್‌ನಲ್ಲಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ವಿಶ್ವಕನ್ನಡ ಸಮ್ಮೇಳನಗಳ ಜಾಲತಾಣಗಳಂತೆ ಜಾಲಶೋಧಕಗಳಿಗೆ (ಗೂಗ್ಲ್, ಬಿಂಗ್, ಇತ್ಯಾದಿ) ಜಾಲತಾಣದಲ್ಲಿರುವ ಮಾಹಿತಿಯನ್ನು ಹುಡುಕಲು ಅಸಾಧ್ಯವಾದುದಲ್ಲ. ಕಣಜ ಜಾಲತಾಣದಲ್ಲಿರುವ ಮಾಹಿತಿಯನ್ನು ಈ ಜಾಲತಾಣದಲ್ಲೇ ನೀಡಿರುವ ಹುಡುಕುವ ಸವಲತ್ತನ್ನು ಬಳಸಿ ಹುಡುಕಬಹುದು ಅಥವಾ ಗೂಗ್ಲ್ ಬಳಸಿಯೂ ಹುಡುಕಬಹುದು. ಈ ಜಾಲತಾಣದಲ್ಲಿ ನಿಘಂಟು ಕೂಡ ಇದೆ. ಜಾಲತಾಣದಿಂದ ಮಾಹಿತಿ  ಪಡೆಯಬಹುದು ಮತ್ತು ಸೇರಿಸುವ ಆಸಕ್ತಿ ನಿಮಗಿದ್ದಲ್ಲಿ ಅದನ್ನೂ ಮಾಡಬಹುದು. ಕನ್ನಡದ ಒಂದು ಉತ್ತಮ ಜಾಲತಾಣ ಹೇಗಿರಬೇಕೆಂಬುದುಕ್ಕೆ ಕಣಜವನ್ನು ಉದಾಹರಿಸಬಹುದು. ಕಣಜದ ವಿಳಾಸ - kanaja.in.

ಡೌನ್‌ಲೋಡ್

ಕಳೆದ ಮಾಹಿತಿ ಪುನಃ ಪಡೆಯಿರಿ

ಗಣಕದ ಹಾರ್ಡ್‌ಡಿಸ್ಕ್‌ಗಳನ್ನು ಸಾಮಾನ್ಯವಾಗಿ ಎಲ್ಲರೂ ಹಲವು ವಿಭಜನೆ (ಪಾರ್ಟೀಶನ್) ಮಾಡಿರುತ್ತಾರೆ. ಈ ಎಲ್ಲ ವಿಭಜನೆಗಳ ಯಾದಿ ಮತ್ತು ಯಾವ ಪಾರ್ಟೀಶನ್‌ನಲ್ಲಿ ಕಾರ್ಯಾಚರಣೆಯ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) ಇದೆ ಎಂಬುದನ್ನು ತಿಳಿಸುವುದಕ್ಕೆ ಹಾರ್ಡ್‌ಡಿಸ್ಕ್‌ನಲ್ಲಿ ಮಾಸ್ಟರ್ ಬೂಟ್ ರೆಕಾರ್ಡ್ ಎಂಬ ಜಾಗ ಇರುತ್ತದೆ. ಈ ಮಾಸ್ಟರ್ ಬೂಟ್ ರೆಕಾರ್ಡ್ ಇರುವ ಜಾಗಕ್ಕೇನಾದರೂ ತೊಂದರೆ ಆದರೆ ಅರ್ಥಾತ್ ಅಲ್ಲಿರುವ ಮಾಹಿತಿ ಓದಲು ಅಸಾಧ್ಯವಾದರೆ ಹಾರ್ಡ್‌ಡಿಸ್ಕ್ ಕೆಲಸ ಮಾಡುವುದಿಲ್ಲ ಮಾತ್ರವಲ್ಲ ಗಣಕ ಬೂಟ್ ಆಗುವುದೂ ಇಲ್ಲ. ಇಂತಹ ಸಂದರ್ಭದಲ್ಲಿ ಹಾರ್ಡ್‌ಡಿಸ್ಕ್‌ನ್ನು ಸರಿಪಡಿಸಲು ಸಹಾಯ ಮಾಡುವ ತಂತ್ರಾಂಶ TestDisk. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/lQaWUo. ಇದು ಸಂಪೂರ್ಣ ಮುಕ್ತ ತಂತ್ರಾಂಶ.

e - ಸುದ್ದಿ

ಹೋಟೆಲ್ ಟವೆಲ್‌ಗಳಿಗೂ ಆರ್‌ಎಫ್‌ಐಡಿ

ಹೋಟೆಲ್‌ಗಳಿಂದ ಟವೆಲ್‌ಗಳನ್ನು ಗಿರಾಕಿಗಳು ಕದ್ದೊಯ್ಯುವುದು ಸಾಮಾನ್ಯ ಸಂಗತಿ. ಗಿರಾಕಿಗಳ ಚೀಲಗಳನ್ನು ಪರಿಶೀಲಿಸಿ ಅವರನ್ನು ಇರಿಸುಮುರಿಸಿಗೊಳಪಡಿಸುವುದನ್ನು ಯಾವ ಹೋಟೆಲ್‌ನವರೂ ಇಷ್ಟಪಡುವುದಿಲ್ಲ. ಹಾಗಿದ್ದರೆ ಟವೆಲ್ ಕಳವನ್ನು ತಡೆಯುವುದು ಹೇಗೆ. ಈ ಸಮಸ್ಯೆಗೆ ಹೊನೊಲುಲುವಿನ ಮೂರು ಹೋಟೆಲ್‌ಗಳವರು ಒಂದು ಪರಿಹಾರ ಕಂಡುಕೊಂಡಿದ್ದಾರೆ. ಅದುವೇ ಟವೆಲ್‌ಗಳಿಗೆ ಅಳವಡಿಸಿರುವ ನೀರಲ್ಲಿ ನೆನೆದರೆ ಹಾಳಾಗದ ಆರ್‌ಎಫ್‌ಐಡಿ ಬಿಲ್ಲೆಗಳು. ಟವೆಲ್‌ಗಳಿಗೆ ಮಾತ್ರವಲ್ಲ, ಬೆಡ್‌ಶೀಟ್, ರಾತ್ರಿ ಬಳಸುವ ಗೌನ್ ಇತ್ಯಾದಿ ಎಲ್ಲ ಬಟ್ಟೆಗಳಿಗೂ ಈ ಬಿಲ್ಲೆಗಳನ್ನು ಅಳವಡಿಸಿದ್ದಾರೆ. ಇದರಿಂದಾಗಿ ಕಳವು ತಡೆಗಟ್ಟುವುದು ಮಾತ್ರವಲ್ಲ, ಟವೆಲ್‌ಗಳು ಎಲ್ಲಿವೆ, ಯಾವ ದಿನ ಟವೆಲ್ ಬದಲಿಸಿದ್ದು, ಯಾವುದನ್ನು ಯಾವಾಗ ಬದಲಿಸಬೇಕು -ಇತ್ಯಾದಿ ಮಾಹಿತಿಗಳೂ ಗಣಕದಲ್ಲಿ ಲಭ್ಯವಿರುತ್ತವೆ.
 
e- ಪದ

ಆರ್‌ಎಫ್‌ಐಡಿ (RFID - radio frequency identification) - ರೇಡಿಯೋ ತರಂಗ ಗುರುತು ಬಿಲ್ಲೆ. ವಸ್ತುಗಳಿಗೆ ಇವುಗಳನ್ನು ಲಗತ್ತಿಸುವುದುರಿಂದ ಆ ವಸ್ತುವಿನ ಗುಣವೈಶಿಷ್ಟ್ಯ, ಅದು ಎಲ್ಲಿದೆ, ಇತ್ಯಾದಿ ಮಾಹಿತಿಗಳನ್ನು ಈ ಬಿಲ್ಲೆಗಳಿಂದ ಹೊರಸೂಸುವ ರೇಡಿಯೋ ತರಂಗಗಳನ್ನು ಪತ್ತೆ ಮಾಡುವ ಮೂಲಕ ತಿಳಿಯಬಹುದು. ಈ ತರಂಗಗಳ ವ್ಯಾಪ್ತಿ ತುಂಬ ಕಡಿಮೆ. ಇವುಗಳನ್ನು ಸಾಮಾನ್ಯವಾಗಿ ಅಂಗಡಿಗಳಲ್ಲಿ ಮಾರುವ ವಸ್ತುಗಳಿಗೆ ಲಗತ್ತಿಸಲು ಬಳಸುತ್ತಾರೆ. ಮುಂದೆ ಬರಲಿರುವ “ಬುದ್ಧಿವಂತ ಮನೆ”ಗಳಲ್ಲಿ ಬಳಸುವ “ಬುದ್ಧಿವಂತ” ಮೈಕ್ರೋವೇವ್ ಓವನ್, ರೆಫ್ರಿಜರೇಟರ್, ಇತ್ಯಾದಿಗಳಲ್ಲಿ ಈ ಆರ್‌ಎಫ್‌ಐಡಿಗಳನ್ನು ಪತ್ತೆ ಮಾಡಿ ಅರ್ಥೈಸಿಕೊಳ್ಳಬಲ್ಲ ಸೌಲಭ್ಯಗಳಿರುತ್ತವೆ. ನೀವು ಆರ್‌ಎಫ್‌ಐಡಿ ಲಗತ್ತಿಸಿರುವ ಹಾಲಿನ ಪೊಟ್ಟಣವನ್ನು ಫ್ರಿಜ್‌ನಲ್ಲಿಟ್ಟಿದ್ದರೆ, ಪೊಟ್ಟಣ ಖಾಲಿಯಾದಾಗ ಫ್ರಿಜ್ ನಿಮಗೆ ಅಂತರಜಾಲದ ಮೂಲಕ ಇಮೈಲ್ ಮಾಡಿ ಹಾಲು ಕೊಂಡುತರಲು ಜ್ಞಾಪಿಸಬಲ್ಲುದು!

e - ಸಲಹೆ

ಚಿನ್ನಿ ಅವರ ಪ್ರಶ್ನೆ: ನನಗೆ ಒಂದು ಜಾಲತಾಣವನ್ನು ಸಂಪೂರ್ಣವಾಗಿ ನನ್ನ ಗಣಕಕ್ಕೆ ಡೌನ್‌ಲೋಡ್ ಮಾಡಿಕೊಂಡು ಅಂತರಜಾಲ ಸಂಪರ್ಕವಿಲ್ಲದಿದ್ದಾಗಲೂ ಅವುಗಳನ್ನು ಓದಲು ಅನುವು ಮಾಡುವ ತಂತ್ರಾಂಶ ಬೇಕು. ಅಂತಹ ತಂತ್ರಾಂಶ ಲಭ್ಯವಿದೆಯೇ?
ಉ: ಇದೆ. www.httrack.com ಜಾಲತಾಣದಲ್ಲಿದೆ.

ಕಂಪ್ಯೂತರ್ಲೆ

ಗ್ರಾಹಕ ಮತ್ತು ಗಣಕ ತಂತ್ರಜ್ಞರ ನಡುವಿನ ಸಂಭಾಷಣೆ-
“ನನ್ನ ಲ್ಯಾಪ್‌ಟಾಪ್ ಚಾರ್ಜ್ ಆಗುತ್ತಿಲ್ಲ. ಮೂರು ಘಂಟೆಯಿಂದ ಚಾರ್ಜ್ ಮಾಡುತ್ತಿದ್ದೇನೆ”
“ಹೇಗೆ ಚಾರ್ಜ್ ಮಾಡುತ್ತಿದ್ದೀರಾ? ನಿಮ್ಮ ಲ್ಯಾಪ್‌ಟಾಪ್‌ನ ಚಾರ್ಜರನ್ನು ನೀವು ಇನ್ನೂ ಲ್ಯಾಪ್‌ಟಾಪ್‌ಗೆ ಸಂಪರ್ಕಿಸಿಯೇ ಇಲ್ಲ”
“ನಾನು ನನ್ನ ಐಫೋನ್ ಮೂಲಕ ಚಾರ್ಜ್ ಮಾಡುತ್ತಿದ್ದೇನೆ”

ಸೋಮವಾರ, ಮೇ 9, 2011

ಗಣಕಿಂಡಿ - ೧೦೩ (ಮೇ ೦೯, ೨೦೧೧)

ಅಂತರಜಾಲಾಡಿ

ವಜ್ರದೊಂದಿಗೆ ಆಡಿ

ಆಟ ಆಡಲು ಇಷ್ಟಪಡದವರಾರು? ಆಟಗಳಲ್ಲಿ ಹಲವು ಬಗೆ. ವೇಗವಾಗಿ ಆಡಬೇಕಾದ ಆಟಗಳು, ರೇಸಿಂಗ್, ಶೂಟಿಂಗ್, ಇತ್ಯಾದಿ. ಇನ್ನೊಂದು ಬಗೆಯವು ಸಮಸ್ಯೆಗಳನ್ನು ನಿಡಿಸುವಂತವು. ಬೆಲೆಬಾಳುವ ಕಲ್ಲು ಅಥವಾ ವಜ್ರಗಳನ್ನು ಹೆಕ್ಕುವ ಆಟ ಮತ್ತೊಂದು. ಬೆಲೆಬಾಳುವ ಕಲ್ಲುಗಳೊಡನೆ ಆಡುವ ಆಟ ಬಿಜ್ಯುವೆಲ್‌ಡ್. ಹೆಸರೇ ಹೇಳುವಂತೆ ಆಭರಣಗಳನ್ನು ಹೊಂದಿ ಅಥವಾ ಅವುಗಳೋಡನೆ ಆಡಿ. ಈ ಆಟ ತುಂಬ ಖ್ಯಾತವಾದುದು. ಇದನ್ನು ಡೌನ್‌ಲೋಡ್ ಮಾಡಿಕೊಂಡು ಆಡಬೇಕಾದರೆ ಹಣ ನೀಡಬೇಕು. ಆದರೆ ಹಣ ನೀಡದೆ ಅಂತರಜಾಲತಾಣದಲ್ಲಿಯೇ ಈ ಆಟವನ್ನು ಆಡಬಹುದು. ಅದಕ್ಕಾಗಿ ನೀವು ಭೇಟಿ ನಿಡಬೇಕಾಗಿರುವ ಜಾಲತಾಣ - www.digbejeweled.com.

ಡೌನ್‌ಲೋಡ್

ಆಂಡ್ರೋಯಿಡ್‌ನಿಂದ ಔಟ್‌ಲುಕ್‌ಗೆ

ಮೊಬೈಲ್ ಫೋನ್ ನಡೆಸುವ ಕಾರ್ಯಾಚರಣೆಯ ವ್ಯವಸ್ಥೆಗಳಲ್ಲಿ ಇತ್ತೀಚೆಗೆ ತುಂಬ ಜನಪ್ರಿಯವಾಗುತ್ತಿರುವುದು ಆಂಡ್ರೋಯಿಡ್. ಇದು ಸ್ಮಾರ್ಟ್‌ಫೋನ್. ಅಂದರೆ ವಿಳಾಸ ಪುಸ್ತಕ, ಇಮೈಲ್, ಅಂತರಜಾಲ ವೀಕ್ಷಣೆ, ದಿನಚರಿ, ಇತ್ಯಾದಿ ಎಲ್ಲ ಸವಲತ್ತುಗಳಿವೆ. ಈ ಫೋನಿನಲ್ಲಿರುವ ವಿಳಾಸಗಳನ್ನು ಮತ್ತು ನಿಮ್ಮ ಕಾರ್ಯಕ್ರಮ ವೇಳಾಪಟ್ಟಿಯನ್ನು ನಿಮ್ಮ ಗಣಕಕ್ಕೆ ಪ್ರತಿ ಮಾಡಿಕೊಂಡರೆ ಒಳ್ಳೆಯದಲ್ಲವೇ? ಸಾಮಾನ್ಯವಾಗಿ ಗಣಕದಲ್ಲಿ ಇದನ್ನೆಲ್ಲ ಇಟ್ಟುಕೊಳ್ಳುವ ತಂತ್ರಾಂಶ ಮೈಕ್ರೋಸಾಫ್ಟ್ ಔಟ್‌ಲುಕ್. ಈ ಔಟ್‌ಲುಕ್‌ನಲ್ಲೂ ನೀವು ವಿಳಾಸ ಸಂಗ್ರಹಿಸಿಟ್ಟುಕೊಳ್ಳಬಹುದು. ಔಟ್‌ಲುಕ್‌ನಿಂದ ಆಂಡ್ರೋಯಿಡ್ ಫೋನಿಗೆ ಮತ್ತು ಫೋನಿನಿಂದ ಗಣಕಕ್ಕೆ ಮಾಹಿತಿಗಳನ್ನು ವರ್ಗಾಯಿಸಲು ಅನುವು ಮಾಡಿಕೊಡುವ ಉಚಿತ ತಂತ್ರಾಂಶ ಬೇಕಿದ್ದರೆ ನೀವು ಭೆಟಿ ನೀಡಬೇಕಾದ ಜಾಲತಾಣ - www.android-sync.com.      

e - ಸುದ್ದಿ

ಒಸಾಮ ಸತ್ತಿದ್ದು ಮೊದಲು ಟ್ವಿಟ್ಟರ್‌ನಲ್ಲಿ

ಟ್ವಿಟ್ಟರ್ ಇತ್ತೀಚೆಗೆ ತುಂಬ ಪ್ರಖ್ಯಾತವಾಗುತ್ತಿದೆ. ಹಲವು ಪ್ರಮುಖ ಸುದ್ದಿಗಳು ಟ್ವಿಟ್ಟರ್ ಮೂಲಕ ಜಗತ್ತಿಗೆ ಪ್ರಕಾಶನಗೊಳ್ಳುತ್ತಿವೆ. ಒಸಾಮ ಬಿನ್ ಲಾಡೆನ್ ಮರಣ ಈ ಪಟ್ಟಿಗೆ ಹೊಸ ಸೇರ್ಪಡೆ. ಪಾಕಿಸ್ತಾನದ ಅಬ್ಬೊಟ್ಟಾಬಾದ್‌ನಲ್ಲಿ ಲಾಡೆನ್ ಮೇಲೆ ನಡುರಾತ್ರಿಯಲ್ಲಿ ಧಾಳಿ ನಡೆಯುತ್ತಿದ್ದಾಗ ಪಕ್ಕದಲ್ಲೇ ವಾಸಿಸುತ್ತಿದ್ದ ಸೋಯೆಬ್ ಅಥರ್ ಎಂಬ ತಂತ್ರಾಂಶ ತಜ್ಞರು ತನ್ನ ಮನೆಯ ಪಕ್ಕದಲ್ಲಿ ನಡೆಯುತ್ತಿರುವುದನ್ನು ಟ್ವೀಟ್ ಮಾಡುತ್ತಿದ್ದರು. ರಾತ್ರಿ ೧ ಘಂಟೆಗೆ ಅವರು ಟ್ವೀಟ್ ಮಾಡಿದ್ದರು - “ರಾತ್ರಿ ಒಂದು ಘಂಟೆಗೆ ಅಬ್ಬೊಟ್ಟಾಬಾದ್‌ನಲ್ಲಿ ಹೆಲಿಕಾಫ್ಟರ್ ಹಾರಾಡುತ್ತಿದೆ. ಇದು ಒಂದು ಅಪರೂಪದ ಘಟನೆ”. ಅದರ ನಂತರ ಅವರು ಸುಮಾರು ಟ್ವೀಟ್ ಮಾಡಿದ್ದರು “ದೊಡ್ಡ ಸ್ಫೋಟ, ಕಿಟಿಕಿಗಳೆಲ್ಲ ಅಲ್ಲಾಡುತ್ತಿವೆ”, “ಒಂದು ಹೆಲಿಕಾಫ್ಟರ್ ಪತನ”, ಇತ್ಯಾದಿ. ಅವರು ತಮಗೆ ಅರಿವಿಲ್ಲದೇ ಬಿನ್ ಲಾಡೆನ್ ಮೇಲಿನ ಧಾಳಿಯ ವೀಕ್ಷಕ ವಿವರಣೆ ನೀಡಿದ್ದರು. ಇದರಿಂದಾಗಿ ಅವರು ಈಗ ಅಂತರಜಾಲದಲ್ಲಿ ಒಬ್ಬ ಖ್ಯಾತನಾಮರಾಗಿದ್ದಾರೆ. ೩೩ ವರ್ಷದ ಅವರಿಗೆ ಟ್ವಿಟ್ಟರ್ ಮೂಲಕ ಮದುವೆಗೆ ಆಹ್ವಾನವೂ ಬಂದಿದೆ! ಅಂದ ಹಾಗೆ ಲಾಡೆನ್ ಸತ್ತ ಸುದ್ದಿಯನ್ನು ಜಗತ್ತಿಗೆ ಮೊತ್ತಮೊದಲು ತಿಳಿಸಿದ್ದು ಅಮೆರಿಕದ ರಿಪಬ್ಲಿಕನ್ ಪಕ್ಷದ ಡೆನ್ನಿಸ್ ರೋಸ್ ಎಂಬವರು. ಅವರು “ಬಿನ್ ಲಾಡೆನ್ ಸತ್ತ. ದೇವರು ಅಮೆರಿಕಾಕ್ಕೆ ದಯಪಾಲಿಸಲಿ” ಎಂದು ಟ್ವೀಟ್ ಮಾಡಿದ್ದರು.
 
e- ಪದ

ಪಿಂಗ್ ಅರ್ಥಾತ್ ಪಿಎನ್‌ಜಿ (PNG (pronounced ping as in ping-pong); for Portable Network Graphics) - ಅಂತರಜಾಲ ಮತ್ತು ಗಣಕಗಳಲ್ಲಿ ಚಿತ್ರಗಳನ್ನು ತೋರಿಸಲು ಬಳಸುವ ಇನ್ನೊಂದು ಫೈಲ್ ವಿಧಾನ. ಇದು ಜಿಫ್‌ಗಿಂತ (GIF) ಉತ್ತಮ. ಆದರೆ ಫೈಲ್ ಗಾತ್ರವೂ ಜಿಫ್‌ಗಿಂತ ದೊಡ್ಡದು. ಈ ವಿಧಾನದಲ್ಲಿ ಚಿತ್ರಸಂಚಲನೆ (ಅನಿಮೇಶನ್) ಮಾಡಲು ಆಗುವುದಿಲ್ಲ.

e - ಸಲಹೆ

ನಾಗರಾಜರಾವ್ ಜವಳಿ ಅವರ ಪ್ರಶ್ನೆ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಪುಸ್ತಕಗಳನ್ನು ವಿಂಡೋಸ್‌ನಲ್ಲಿ ಡೌನ್‌ಲೋಡ್  ಮಾಡಲಿಕ್ಕೆ ಸಹಾಯಮಾಡುವ ಯಾವುದಾದರೂ ಉಚಿತ ತಂತ್ರಾಂಶವನ್ನು ದಯವಿಟ್ಟು ತಿಳಿಸುವಿರಾ?
ಉ: ನೀವು DLI Downloader ಎಂಬ ತಂತ್ರಾಂಶವನ್ನು ಬಳಸಬಹುದು. ಇದು bit.ly/mkPTJf  ಜಾಲತಾಣದಲ್ಲಿ ಲಭ್ಯ.

ಕಂಪ್ಯೂತರ್ಲೆ

ಇಮೈಲ್‌ಗೆ ಉತ್ತರಿಸದಿದ್ದರೇನು ಫಲ?
ಕಮೆಂಟ್‌ಗೆ ಪ್ರತಿ ಕಮೆಂಟ್ ಹಾಕದಿದ್ದರೇನು ಫಲ?
ಪೋಕಿಗೆ ಪ್ರತಿ ಪೋಕು ಮಾಡದಿದ್ದರೇನು ಫಲ?
ಟ್ವೀಟ್‌ಗೆ ಪ್ರತಿ ಟ್ವೀಟ್ ಮಾಡದಿದ್ದರೇನು ಫಲ?
ಮೆಸೇಜ್‌ಗೂ ಉತ್ತರಿಸದಿರೆ ಏನು ಫಲ ಗಣಕಜ್ಞ

ಸೋಮವಾರ, ಮೇ 2, 2011

ಗಣಕಿಂಡಿ - ೧೦೨ (ಮೇ ೦೨, ೨೦೧೧)

ಅಂತರಜಾಲಾಡಿ

ಪ್ರಥಮ ಅಂತರಿಕ್ಷ ಯಾತ್ರೆ

ಐವತ್ತು ವರ್ಷಗಳ ಹಿಂದೆ ರಷ್ಯ ದೇಶದ ಗಗನಯಾತ್ರಿ ಯೂರಿ ಗಗರಿನ್ ಅಂತರಿಕ್ಷಕ್ಕೆ ಸಾಗಿದ ಪ್ರಥಮ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ೧೦೮ ನಿಮಿಷಗಳ ಕಾಲ ಅಂತರಿಕ್ಷದಲ್ಲಿ ಭೂಮಿಗೆ ಸುತ್ತು ಬಂದು ನಂತರ ಕೆಳಗಿಳಿದರು. ಈ ವಿಶೇಷ ಸಂದರ್ಭದಲ್ಲಿ ಯೂರಿ ಗಗರಿನ್ ಅವರ ಪ್ರಥಮ ಅಂತರಿಕ್ಷ ಯಾತ್ರೆಯನ್ನು ಪುನಃ ನಿರ್ಮಿಸಲಾಗಿದೆ. ಕೆಲವು ಮೂಲ ವೀಡಿಯೋ ಮತ್ತು ಅಂತಾರಾಷ್ಟ್ರೀಯ ಅಂತರಿಕ್ಷ ತಾಣವನ್ನು ಬಳಸಿ ಆ ೧೦೮ ನಿಮಿಷಗಳನ್ನು ಮತ್ತೊಮ್ಮೆ ನಿರ್ಮಿಸಲಾಗಿದೆ. ಯೂರಿ ಗಗರಿನ್ ಅವರ ಮೂಲ ಧ್ವನಿಯೂ ಇದೆ. ಖಗೋಳಶಾಸ್ತ್ರದ ಬಗ್ಗೆ ಆಸಕ್ತಿಯಿರುವವರೆಲ್ಲರೂ ನೋಡಲೇಬೇಕಾದ ವೀಡಿಯೋ ಇದಾಗಿದೆ. ಇದನ್ನು ನೋಡಬೇಕಾದರೆ ನೀವು ಭೇಟಿ ನೀಡಬೇಕಾದ ಜಾಲತಾಣ www.firstorbit.org. ವೀಡಿಯೋವನ್ನು ಡೌನ್‌ಲೋಡ್ ಬೇಕಿದ್ದರೂ ಮಾಡಿಕೊಳ್ಳಬಹುದು.

ಡೌನ್‌ಲೋಡ್

ಫೈಲ್ ಹೊಂದಾಣಿಸಿ

ನಿಮ್ಮ ಗಣಕದಲ್ಲಿಯ ಮಾಹಿತಿಯನ್ನು ಆಗಾಗ ಪ್ರತಿ ಮಾಡಿಟ್ಟುಕೊಳ್ಳುವುದು ಒಳ್ಳೆಯದು. ಯಾವುದೇ ಕಾರಣಕ್ಕೆ ಹಾರ್ಡ್‌ಡಿಸ್ಕ್ ಕೈಕೊಟ್ಟಾಗ ಈ ಮಾಹಿತಿಯನ್ನು ಪುನಃ ಗಣಕಕ್ಕೆ ವರ್ಗಾಯಿಸಿ ಕೆಲಸ ಮಾಡಬಹುದು. ಈ ರೀತಿ ಗಣಕದ ಹಾರ್ಡ್‌ಡಿಸ್ಕ್‌ನಿಂದ ಹೊರಗಡೆ ಇರುವ ಹಾರ್ಡ್‌ಡಿಸ್ಕ್‌ಗೆ ಪ್ರತಿ ಮಾಡಿಕೊಳ್ಳುವುದಕ್ಕೆ ಬ್ಯಾಕ್‌ಅಪ್ ಎನ್ನುತ್ತಾರೆ. ವಾರಕ್ಕೊಮ್ಮೆಯಾದರೂ ಮಾಹಿತಿಯನ್ನು ಬ್ಯಾಕ್‌ಅಪ್ ಮಾಡಿಕೊಳ್ಳುವುದು ಒಳ್ಳೆಯದು. ಕೆಲವೊಮ್ಮೆ ಹಾರ್ಡ್‌ಡಿಸ್ಕ್‌ನಲ್ಲಿ ಮಾತ್ರವಲ್ಲ, ಯುಎಸ್‌ಬಿ ಡ್ರೈವ್‌ಗಳಲ್ಲೂ ಫೈಲ್‌ಗಳನ್ನು ಪ್ರತಿ ಮಾಡಿಕೊಳ್ಳುತ್ತೇವೆ. ಕೆಲವೊಮ್ಮೆ ಅವುಗಳನ್ನು ಬೇರೆ ಗಣಕದಲ್ಲಿ ಎಡಿಟ್ ಮಾಡುವುದೂ ಇದೆ. ಹೀಗೆಲ್ಲ ಮಾಡಿದಾಗ ಒಂದೇ ಫೈಲ್‌ನ ಹಲವು ಪ್ರತಿಗಳು ಬೇರೆಬೇರೆ ಕಡೆ ಸಂಗ್ರಹವಾಗಿರುತ್ತವೆ. ಕೆಲವೊಮ್ಮೆ ಒಂದೇ ಗಣಕದ ಬೇರೆ ಬೇರೆ ಫೋಲ್ಡರ್‌ಗಳಲ್ಲೂ ಒಂದೇ ಫೈಲ್‌ನ ಹಲವು ಆವೃತ್ತಿಗಳಿರುವ ಸಾಧ್ಯತೆಗಳಿವೆ. ಹೀಗೆ ಇರುವ ಎಲ್ಲ ಫೈಲುಗಳನ್ನು ಮತ್ತು ಫೋಲ್ಡರುಗಳನ್ನು ಒಂದಕ್ಕೊಂದು ಸರಿಹೊಂದಿಸುವಂತೆ (synchronization) ಮಾಡಲು ಸಹಾಯ ಮಾಡುವ ತಂತ್ರಾಂಶ ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ freefilesync.sourceforge.net.    

e - ಸುದ್ದಿ

ಫೋನನ್ನು ಹಿಂಬಾಲಿಸಿದ್ದಕ್ಕೆ ದಾವೆ

ಆಪಲ್ ಕಂಪೆನಿಯ ಐಫೋನ್ ಅದರ ಬಳಕೆದಾರ ಎಲ್ಲೆಲ್ಲಿ ಹೋಗುತ್ತಿದ್ದಾನೆ ಎಂಬುದರ ಬೇಹುಗಾರಿಕೆ ಮಾಡುತ್ತಿದೆ ಎಂದು ಹಿಂದಿನ ವಾರ ವರದಿ ಮಾಡಿದ್ದೇವೆ ತಾನೆ? ಈಗ ಅದರ ಮುಂದಿನ ಸುದ್ದಿ ಬಂದಿದೆ. ಅಮೆರಿಕದ ಕಾನೂನು ಪ್ರಕಾರ ಈ ರೀತಿ ಬೇಹುಗಾರಿಕೆ ಮಾಡುವುದು ತಪ್ಪು. ಗ್ರಾಹಕರ ವೈಯಕ್ತಿಕ ಗೋಪ್ಯತೆಯನ್ನು ಉಲ್ಲಂಘಿಸಿದ್ದಕ್ಕೆ ಆಪಲ್ ಕಂಪೆನಿಯ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಈ ವಿಷಯದಲ್ಲಿ ಆಪಲ್‌ಗೆ ಗೂಗಲ್‌ನ ಸಖ್ಯವಿದೆ. ಗೂಗಲ್‌ನವರ ಆಂಡ್ರೋಯಿಡ್ ತಂತ್ರಾಂಶವು (ಇದು ಕೂಡ ಒಂದು ಮೊಬೈಲ್ ಕಾರ್ಯಾಚರಣೆಯ ವ್ಯವಸ್ಥೆಯ ತಂತ್ರಾಂಶ) ಗ್ರಾಹಕರು ಎಲ್ಲೆಲ್ಲಿ ಹೋಗುತ್ತಿದ್ದಾರೆ ಎಂಬುದನ್ನು ದಾಖಲಿಸಿ ಗೂಗಲ್ ಕಂಪೆನಿಗೆ ರವಾನಿಸುತ್ತಿದೆ ಎಂದು ಗೂಗಲ್ ಕಂಪೆನಿಯ ಮೇಲೆ ಕೂಡ ದಾವೆ ಹೂಡಲಾಗಿದೆ. 

e- ಪದ

ಜೆಪೆಗ್ (JPEG - Joint Photographic Experts Group) - ಚಿತ್ರಗಳನ್ನು ಗಣಕದಲ್ಲಿ ಸಂಗ್ರಹಿಸಲು ಮತ್ತು ಜಾಲತಾಣಗಳಲ್ಲಿ ತೋರಿಸಲು ಬಳಕೆಯಾಗುವ ಒಂದು ಗ್ರಾಫಿಕ್ಸ್ರ್ ಫೈಲ್ ವಿಧಾನ. ಇದು ಹಿಂದಿನ ವಾರ ವಿವರಿಸಿದ ಜಿಫ್ (GIF) ವಿಧಾನಕ್ಕಿಂತ ಉತ್ಕೃಷ್ಟ. ಇದರಲ್ಲಿ ನಿಜ ಬಣ್ಣಗಳಿಗೆ ಆದಷ್ಟು ಸಮೀಪವಾಗಿ ಚಿತ್ರವನ್ನು ಮೂಡಿಸಬಹುದು. ಈಗೀಗ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಹುಪಾಲು ಡಿಜಿಟಲ್ ಕ್ಯಾಮೆರಾಗಳಲ್ಲಿ ಫೋಟೋಗಳನ್ನು ಜೆಪೆಗ್ ವಿಧಾನದಲ್ಲಿ ಸಂಗ್ರಹಿಸಲಾಗುತ್ತಿದೆ.

e - ಸಲಹೆ

ಕಿರಣ ಬಿರಾದಾರ ಅವರ ಪ್ರಶ್ನೆ: ನನಗೆ ಗೂಗಲ್ ಅರ್ಥ್ (google earth)  ಬೇಕು. ಇದು ಎಲ್ಲಿ ದೊರೆಯುತ್ತದೆ?
ಉ: www.google.com/earth ಜಾಲತಾಣದಲ್ಲಿ.

ಕಂಪ್ಯೂತರ್ಲೆ

ಅಧ್ಯಾಪಕ: ಮೈಕ್ರೋಸಾಫ್ಟ್ ಎಕ್ಸೆಲ್ ಎಂದರೇನು?
ವಿದ್ಯಾರ್ಥಿ: ಸರ್ಫ್ ಎಕ್ಸೆಲ್‌ನವರು ಕಂಪ್ಯೂಟರ್‌ಗಳನ್ನು ಸ್ವಚ್ಛ ಮಾಡಲು ತಯಾರಿಸಿರುವ ಹೊಸ ಸೋಪ್ ಪೌಡರ್.