ಮಂಗಳವಾರ, ಮಾರ್ಚ್ 20, 2012

ಗಣಕಿಂಡಿ - ೧೪೮ (ಮಾರ್ಚ್ ೧೯, ೨೦೧೨)

ಅಂತರಜಾಲಾಡಿ

ಪ್ರತಿದಿನ ವಿಜ್ಞಾನ

ವಿಜ್ಞಾನ ಎಂದೆಂದಿಗೂ ಕುತೂಹಲಕಾರಿಯೇ. ನಾವು ಪ್ರತಿದಿನ ಮನೆಗಳಲ್ಲಿ ಮಾಡುವ ಹಲವು ಕೆಲಸಗಳ ಹಿಂದೆ ವಿಜ್ಞಾನದ ತತ್ತ್ವಗಳಿವೆ. ಅಂಗಳಕ್ಕೆ ಬಂದು ಆಕಾಶ ನೋಡಿದರೆ ಕಾಣುವ ನಕ್ಷತ್ರಗಳು ಶತಮಾನಗಳಿಂದ ಮಾನವನ ಆಸಕ್ತಿಯನ್ನು ಕೆರಳಿಸುತ್ತಲೇ ಬಂದಿವೆ. ದೋಸೆ ಕಾವಲಿ ಬಿಸಿಯಾಗಿದೆಯೇ ಎಂದು ತಿಳಿಯಲು ಗೃಹಿಣಿ ಸ್ವಲ್ಪ ನೀರು ಚಿಮುಕಿಸಿ ನೋಡುವುದರ ಹಿಂದೆ ಭೌತಶಾಸ್ತ್ರದ ಸಿದ್ಧಾಂತ ಅಡಗಿದೆ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮತ್ತು ಅದನ್ನು ತಿಳಿದುಕೊಳ್ಳಲು ಆಸಕ್ತಿ ಮೂಡಿಸುವುದು ಪಾಲಕರ ಮತ್ತು ಶಿಕ್ಷಕರ ಹೊಣೆಗಾರಿಕೆ. ಇದರಿಂದ ತಪ್ಪಿಸಕೊಳ್ಳುವಂತೆಯೇ ಇಲ್ಲ. ವಿಜ್ಞಾನವಿಲ್ಲದೆ ಜೀವನವಿಲ್ಲ. ದೈನಂದಿನ ಜೀವನದಲ್ಲಿ ಅಡಕವಾಗಿರುವ ವಿಜ್ಞಾನದ ಸಿದ್ಧಾಂತಗಳ ಬಗ್ಗೆ ಅರಿವು ಮೂಡಿಸುವ ಜಾಲತಾಣ www.scienceofeverydaylife.com. ವಿಜ್ಞಾನದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪಾಲಕರಿಗೆ, ಎಲ್ಲ ಹಂತಗಳವರಿಗೆ, ಇಲ್ಲಿ ಸೂಕ್ತ ಮಾಹಿತಿ, ಪ್ರಾತ್ಯಕ್ಷಿಕೆ ಎಲ್ಲ ಇವೆ.

ಡೌನ್‌ಲೋಡ್


ಕನ್ನಡಕ್ಕಾಗೊಂದು ಟೂಲ್‌ಬಾರ್

ಅಂತರಜಾಲ ವೀಕ್ಷಣೆ ಮಾಡಲು ಬಳಸುವ ಬ್ರೌಸರ್ ತಂತ್ರಾಂಶಗಳಿಗೆ ಟೂಲ್‌ಬಾರ್‌ಗಳು ಹಲವು ಲಭ್ಯವಿವೆ. ಉದಾಹರಣೆಗೆ ಗೂಗಲ್ ಟೂಲ್‌ಬಾರ್ ಮತ್ತು ಬಿಂಗ್ ಟೂಲ್‌ಬಾರ್. ಇವುಗಳು ಕೆಲವು ದಿನನಿತ್ಯದ ಕೆಲಸಗಳನ್ನು ಸುಲಭ ಮಾಡಿಕೊಡುತ್ತವೆ. ಈಗ ಅದೇ ಮಾದರಿಯಲ್ಲಿ ಒಂದು ವಿನೋದ ಟೂಲ್‌ಬಾರ್ ಲಭ್ಯವಿದೆ. ಇದನ್ನು ಮಾಡಿದವರು ಕನ್ನಡಿಗರು. ಅಂದರೆ ಕನ್ನಡಿಗರು ಸಾಮಾನ್ಯವಾಗಿ ಬಳಸುವ ಜಾಲತಾಣಗಳು, ಓದುವ ಬ್ಲಾಗ್‌ಗಳು, ಕಣಜ, ಗಣಕಿಂಡಿ, ವರ್ಡ್‌ನಿಂದ ಪಿಡಿಎಫ್‌ಗೆ -ಇತ್ಯಾದಿ ಹಲವು ಜಾಲತಾಣಗಳಿಗೆ ಇದರಲ್ಲಿ ಸಂಪರ್ಕ ನೀಡಲಾಗಿದೆ. ಪ್ರತಿ ಸಲ ಈ ಜಾಲತಾಣಗಳಿಗೆ ಭೇಟಿ ನೀಡಲು ಆಯಾ ಗುಂಡಿಯನ್ನು ಒತ್ತಿದರೆ ಸಾಕು. ಇದೇನೂ ಅದ್ಭುತ ಸಂಶೋಧನೆಯಲ್ಲ. ಆದರೆ ಪ್ರತಿದಿನ ಮಾಡುವ ಕೆಲಸಗಳಿಗೆ ಒಂದು ಮಾದರಿ ಶಾರ್ಟ್‌ಕಟ್ ಇದ್ದಂತೆ. ಈ ಟೂಲ್‌ಬಾರ್ ನಿಮಗೆ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ vinoda.ourtoolbar.com.  

e - ಸುದ್ದಿ

ಕಳೆದುಹೋದ ಫೋನಿಗೇನಾಗುತ್ತದೆ?

ಈಗೀಗ ಬಹುತೇಕ ಮಂದಿ ಬಳಸುವ ಸ್ಮಾರ್ಟ್‌ಫೋನ್‌ಗಳು ಒಂದು ರೀತಿಯಲ್ಲಿ ಲ್ಯಾಪ್‌ಟಾಪ್ ಗಣಕದಂತೆಯೇ. ಅದರಲ್ಲಿ ಸೂಕ್ಷ್ಮ ಮಾಹಿತಿಗಳೆಲ್ಲ ಇರುತ್ತವೆ. ಉದಾಹರಣೆಗೆ ಅಂತರಜಾಲ ಬ್ಯಾಕಿಂಗ್‌ನ ಪಾಸ್‌ವರ್ಡ್. ಇಂತಹ ಸ್ಮಾರ್ಟ್‌ಫೋನ್ ಕಳೆದುಹೋದಾಗ? ಅದು ಸಿಕ್ಕಿದವರು ಫೋನ್ ಜೊತೆ ಏನು ಮಾಡುತ್ತಾರೆ? ಈ ಬಗ್ಗೆ ಸಿಮ್ಯಾಂಟೆಕ್ ಕಂಪೆನಿಯವರು ಒಂದು ಸಂಶೋಧನೆ ಮಾಡಿದರು. ೫೦ ಫೋನ್‌ಗಳಲ್ಲಿ ಕಾಲ್ಪನಿಕ ವ್ಯಕ್ತಿಗಳ ಮಾಹಿತಿಗಳನ್ನು ತುಂಬಿಸಿ ಉತ್ತರ ಅಮೆರಿಕದ ಬೇರೆಬೇರೆ ನಗರಗಳಲ್ಲಿ ಕಳೆದುಕೊಂಡರು. ಶೇಕಡ ೪೫ ಮಂದಿ ಫೋನಿನಲ್ಲಿದ್ದ ಮಾಹಿತಿಯನ್ನು ಓದಿದ್ದರು. ೫೭% ಮಂದಿ “saved passwords” ಎಂದು ಹೆಸರಿದ್ದ ಫೈಲನ್ನು ತೆರೆದು ನೋಡಿದ್ದರು. ಕೇವಲ ಅರ್ಧದಷ್ಟು ಮಂದಿ ಫೋನ್ ಸಿಕ್ಕವರು ಮಾತ್ರ ಫೋನಿನ ಯಜಮಾನನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದರು.

e- ಪದ

ಸೋಪ (Stop Online Piracy Act - SOPA) - ಅಂತರಜಾಲದ ಮೂಲಕ ನಡೆಯುವ ಕೃತಿಚೌರ್ಯವನ್ನು ತಡೆಯಲು ಅಮೆರಿಕ ಸರಕಾರ ಹೊಸದಾಗಿ ಮಾಡಲು ಪ್ರಯತ್ನಿಸುತ್ತಿರುವ ಕಾನೂನಿನ ಹೆಸರು. ಆದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ತಾಕತ್ತುಳ್ಳ ಮಸೂದೆ, ಆದುದರಿಂದ ಇದನ್ನು ಕಾನೂನಾಗಿ ತರಬಾರದು ಎಂದು ಹಲವು ಅಂತರಜಾಲ ಕಂಪೆನಿಗಳು ಇದರ ವಿರುದ್ಧವಾಗಿವೆ. ಅಂತರಜಾಲದ ತುಂಬೆಲ್ಲ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

e - ಸಲಹೆ

ಪವನ್ ಅವರ ಪ್ರಶ್ನೆ: ನನ್ನ ಬಳಿ ಅಂತರಜಾಲಕ್ಕೆ ಸಂಬಂಧಪಟ್ಟ ಹೊಸ ಐಡಿಯ ಇದೆ. ಇದು ಹೊಸದೇ, ಇದನ್ನು ಪೇಟೆಂಟ್ ಮಾಡಬಹುದೇ, ಅಥವಾ ಈಗಾಗಲೇ ಈ ಐಡಿಯವನ್ನು ಯಾರಾದರೂ ಪೇಟೆಂಟ್ ಮಾಡಿದ್ದಾರೋ, ಎಂದೆಲ್ಲ ತಿಳಿಯುವುದು ಹೇಗೆ? ಈ ಬಗ್ಗೆ ಯಾವುದಾದರೂ ಅಂತರಜಾಲತಾಣ ಇದೆಯೇ?
ಉ: www.uspto.gov, www.google.com/patents ಮತ್ತು www.freepatentsonline.com ಜಾಲತಾಣಗಳನ್ನು ನೋಡಿ.

ಕಂಪ್ಯೂತರ್ಲೆ

ಮನಶ್ಶಾಂತಿ ಬೇಕಿದ್ದವರು ಈ ಹೊಸ ನಮೂನೆಯ ಉಪವಾಸ ಮಾಡಿ: ಒಂದು ದಿನ ಕಂಪ್ಯೂಟರ್, ಫೋನ್,  ಟ್ವಿಟ್ಟರ್, ಫೇಸ್‌ಬುಕ್, ಟಿವಿ, ವಾಹನ -ಯಾವುದೂ ಇಲ್ಲದೆ ಬದುಕಿ.

ಸೋಮವಾರ, ಮಾರ್ಚ್ 12, 2012

ಗಣಕಿಂಡಿ - ೧೪೭ (ಮಾರ್ಚ್ ೧೨, ೨೦೧೨)

ಅಂತರಜಾಲಾಡಿ

ಅಪರಂಜಿ

ರಾಶಿ ಎಂದೇ ಖ್ಯಾತರಾಗಿದ್ದ ಶಿವರಾಂ ಅವರ ಕೊರವಂಜಿ ಕನ್ನಡದಲ್ಲಿ ಹಾಸ್ಯ ಪತ್ರಿಕೆ ಎಂಬುದನ್ನು ಹಟ್ಟುಹಾಕಿದ ಪತ್ರಿಕೆ. ನಲವತ್ತರ ದಶಕದಲ್ಲಿ ತುಂಬ ಜನಪ್ರಿಯವಾಗಿತ್ತು. ಜಗತ್ಪ್ರಸಿದ್ಧರಾದ ಆರ್. ಕೆ.ಲಕ್ಷ್ಮಣರನ್ನು ಹುಟ್ಟುಹಾಕಿದ್ದು ಕೊರವಂಜಿ. ಇನ್ನೂ ಹಲವಾರು ಹಾಸ್ಯ ಸಾಹಿತಿಗಳು ಕೊರವಂಜಿ ಮೂಲಕ ಬೆಳಕು ಕಂಡರು. ಇಪ್ಪತ್ತೈದು ವರ್ಷಗಳ ಕಾಲ ಸತತವಾಗಿ ಕನ್ನಡದ ನಗೆ ರಸಿಕರನ್ನು ರಂಜಿಸಿ ಕೊನೆಗೆ 1967ರ ಏಪ್ರಿಲ್ ಸಂಚಿಕೆಯೊಂದಿಗೆ ಕೊರವಂಜಿಯ ಪ್ರಕಟಣೆ ನಿಲ್ಲಬೇಕಾಯಿತು. ರಾ.ಶಿ.ಯವರು ಹೇಳಿದಂತೆ ಕೊರವಂಜಿ ಕಾಡಿಗೆ ಹೋದಳು. 1983ರಲ್ಲಿ ಅಪರಂಜಿ ಜೀವತಳೆಯಿತು. ಕೊರವಂಜಿ ಬಳಗ ಮತ್ತೆ ಅಪರಂಜಿ ಮೂಲಕ ಮನೆಮನೆಗಳಿಗೆ ತಲುಪಿತು. ಜೊತೆಗೆ ಹೊಸ ಬಳಗವನ್ನೂ ಹುಟ್ಟು ಹಾಕಿತು. ಇಷ್ಟೆಲ್ಲ ಇತಿಹಾಸವಿರುವ ಅಪರಂಜಿ ಈಗ ಅಂತರಜಾಲದಲ್ಲಿ ಲಭ್ಯ. ಜೊತೆಗೆ ಬೋನಸ್ ಆಗಿ ಕೊರವಂಜಿಯ ಹಳೆಯ ಸಂಚಿಕೆಗಳ ಸಿ.ಡಿ. ಕೊಂಡುಕೊಳ್ಳಲೂ ಲಭ್ಯ. ಜಾಲತಾಣದ ವಿಳಾಸ aparanjimag.in. ಅಂದಹಾಗೆ ಕನ್ನಡದ ಖ್ಯಾತ ವಿಜ್ಞಾನಸಾಹಿತಿ ನಾಗೇಶ ಹೆಗಡೆಯರು ಹಾಸ್ಯ ಕೂಡ ಬರೆಯುತ್ತಾರೆ ಗೊತ್ತಾ? ಇದೇ ಜಾಲತಾಣದಲ್ಲಿ ಅವರ ಹಾಸ್ಯ ಲೇಖನ ಓದಬಹುದು.

ಡೌನ್‌ಲೋಡ್

ಧೂಮಕೇತು ಮಾಹಿತಿ

ಅಂತರಿಕ್ಷದಲ್ಲಿ ಸಾವಿರಾರು ಧೂಮಕೇತುಗಳಿವೆ. ಹ್ಯಾಲಿ ಧೂಮಕೇತು ಜಗತ್ಪ್ರಸಿದ್ಧ. 76 ವರ್ಷಗಳಿಗೊಮ್ಮೆ ತಪ್ಪದೆ ಇದು ಭೇಟಿ ನೀಡುತ್ತದೆ. ಇದೇ ರೀತಿ ಕೆಲವು ಧೂಮಕೇತುಗಳು ತಪ್ಪದೆ ನಿಯಮಿತ ಸಮಯಾವಧಿಯಲ್ಲಿ ಭೇಟಿ ನೀಡುತ್ತವೆ. ಹೀಗೆ ಸೌರವ್ಯೂಹದಲ್ಲಿರುವ ಎಲ್ಲ ತಿಳಿದಿರುವ ಧೂಮಕೇತುಗಳ ಮಾಹಿತಿ ಭಂಡಾರ ಬೇಕೇ? ಅಂತಹ ಒಂದು ತಂತ್ರಾಂಶ ಲಭ್ಯವಿದೆ. ಇದರ ಹೆಸರು Halley. ಇದು ಬೇಕಿದ್ದಲ್ಲಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ www.ipa.nw.ru/halley/en. ಇದು ಇನ್‌ಸ್ಟಾಲ್ ಮಾಡುವಾಗ ಇನ್ನಷ್ಟು ದೊಡ್ಡ ಡಾಟಾಬೇಸ್ ಅನ್ನು ಡೌನ್‌ಲೋಡ್ ಮಾಡುತ್ತದೆ. ಆಗಾಗ್ಗೆ ಇದರ ಮಾಹಿತಿಯನ್ನು ನವೀಕರಿಸುತ್ತಿರಬಹುದು. ಈ ಮೂಲಕ ಹೊಸದಾಗಿ ಪತ್ತೆಯಾದ ಧೂಮಕೇತುಗಳ ವಿವರಗಳನ್ನೂ ತಿಳಿಯಬಹುದು. ಖಗೋಳಶಾಸ್ತ್ರದಲ್ಲಿ ಆಸಕ್ತಿಯಿರುವವರಿಗೆ ಉಪಯುಕ್ತ ತಂತ್ರಾಂಶ. 

e - ಸುದ್ದಿ

ಗುಪ್ತಪದ

ಜಾಲತಾಣ, ತಂತ್ರಾಂಶ, ಇಮೈಲ್, ಇತ್ಯದಿಗಳಿಗೆ ಗುಪ್ತಪದ (ಪಾಸ್‌ವರ್ಡ್) ಬಳಸಲೇಬೇಕಾಗಿರುವುದು ಗಣಕ ಬಳಸುವ ಎಲ್ಲರಿಗೂ ತಿಳಿದಿರುವ ವಿಷಯ. ಈ ಗುಪ್ತಪದವನ್ನು ಆರಿಸಿಕೊಳ್ಳಲು ಕೆಲವು ಸೂತ್ರಗಳನ್ನು ಪಾಲಿಸಿದರೆ ಒಳ್ಳೆಯದು. ಅದು ಯಾವುದೇ ನಿಘಂಟು ಪದವಾಗಿರಬಾರದು, ನಿಮ್ಮ ಹೆರು ಅಥವಾ ಅದರ ಹೃಸ್ವರೂಪ ಆಗಿರಬಾರದು, ಕೆಲವು ಅಂಕಿಗಳು ವಿಶೇಷ ಅಕ್ಷರಗಳೂ ಇರತಕ್ಕದ್ದು, ಇತ್ಯಾದಿ. ಹೀಗೆ ಸೂತ್ರಗಳನ್ನು ಮಾಡಿರುವುದು ನಿಮ್ಮ ಗುಪ್ತಪದ ಇತರರಿಗೆ ಸುಲಭದಲ್ಲಿ ತಿಳಿಯದಿರಲಿ ಎಂದು. ಜನರು ಯಾವ ರೀತಿಯ ಗುಪ್ತಪದ ಬಳಸುತ್ತಿದ್ದಾರೆ ಎಂಬುದಾಗಿ ಇತ್ತೀಚೆಗೆ ಒಂದು ಸಮೀಕ್ಷೆ ನಡೆಸಲಾಯಿತು. ಸಮೀಕ್ಷೆಯಿಂದ ತಿಳಿದು ಬಂದ ಅಂಶ ಆಘಾತಕಾರಿ - ಬಹುಮಂದಿ ಬಳಸುವ ಪಾಸ್‌ವರ್ಡ್ ಯಾವುದು ಗೊತ್ತೆ - ಅದು password!

e- ಪದ

ಲಾಗಿನ್ (Login) ಮತ್ತು ಪಾಸ್‌ವರ್ಡ್ (Password) : ಗಣಕವನ್ನು ಉಪಯೋಗಿಸಲು, ವಿ-ಅಂಚೆಯ ಪೆಟ್ಟಿಗೆಯನ್ನು ತೆರೆಯಲು, ಅಂತರಜಾಲ ಮೂಲಕ ವಾಣಿಜ್ಯ ವ್ಯವಹಾರ ಮಾಡಲು, ಇನ್ನೂ ಹಲವಾರು ಇಂತಹ ಸಮದರ್ಭಗಳಲ್ಲಿ ನೀವು ಬಳಸಬೇಕಾದ ಹೆಸರು ಮತ್ತು ಗುಪ್ತಪದ.

e - ಸಲಹೆ

ಲೋಹಿತ್ ಅವರ ಪ್ರಶ್ನೆ: ನನಗೆ ಎಸ್‌ಕ್ಯೂಎಲ್ ಸರ್ವರ್ ಬಗ್ಗೆ ಸಂದರ್ಶನಕ್ಕೆ ತಯಾರಾಗಬೇಕಾಗಿದೆ. ಇದಕ್ಕೆಂದೇ ವಿಶೇಷವಾಗಿ ಬರೆದ ಪುಸ್ತಕ ಯಾವುದಾದರೂ ಇದೆಯೇ?
ಉ: ಖಂಡಿತ ಇವೆ. ಒದು ಉದಾಹರಣೆ - bit.ly/yBs6Md

ಕಂಪ್ಯೂತರ್ಲೆ

ಒಂದು ಬಹುಮಹಡಿಯ ಕಟ್ಟಡದಲ್ಲಿ ಕಂಡ ಫಲಕ: “ಬೆಂಕಿ ಕಂಡಲ್ಲಿ ಮೊದಲು ಅಪಾಯದ ಜಾಗದಿಂದ ಪಾರಾಗಿ. ಅದರ ಬಗ್ಗೆ ಟ್ವೀಟ್ ಮಾಡುವುದುನ್ನು ನಂತರ ಮಾಡಬಹುದು”.

ಸೋಮವಾರ, ಮಾರ್ಚ್ 5, 2012

ಗಣಕಿಂಡಿ - ೧೪೬ (ಮಾರ್ಚ್ ೦೫, ೨೦೧೨)

ಅಂತರಜಾಲಾಡಿ

ಈಜು ಕಲಿಯಬೇಕೇ?

ಪುಸ್ತಕ ಓದಿ ಈಜು ಕಲಿಯಲು ಸಾಧ್ಯವೇ ಎಂಬ ಮಾತಿದೆ. ಅದನ್ನೇ ಮುಂದುವರಿಸಿ ಗಣಕ ನೋಡಿ ಈಜು ಕಲಿಯಲು ಸಾಧ್ಯವೇ ಎಂಬ ಗಾದೆ ಸೃಷ್ಟಿ ಮಾಡಬಹುದು. ಅದು ಹಾಗಿರಲಿ. ಈಜು ಕಲಿಯಲು ಸಹಾಯಮಾಡುವ ಜಾಲತಾಣವೂ ಇದೆ ಎಂದರೆ ನಂಬಲೇಬೇಕು. ಬೇರೆ ಬೇರೆ ಪ್ರಾಯದವರಿಗೆ ಸರಿಹೊಂದುವ ಪಾಠಗಳು ಈ ಜಾಲತಾಣದಲ್ಲಿವೆ. ಎಲ್ಲ ಪಾಠಗಳೂ ವೀಡಿಯೋ ಸಹಿತ ಇವೆ. ಅವನ್ನು ನೋಡಿ ನಿಮ್ಮ ಮಕ್ಕಳಿಗೆ ಈಜು ಕಲಿಸಬಹುದು ಎಂಬುದು ಜಾಲತಾಣ ನಿರ್ಮಾಪಕರ ಅಂಬೋಣ. ಹಾಗೆಂದು ಹೇಳಿ ಮಕ್ಕಳಿಗೆ ಮಾತ್ರ ಈಜು ಕಲಿಸಲಿಕ್ಕಾಗಿರುವ ಜಾಲತಾಣವೇ ಎಂದು ಪ್ರಶ್ನೆ ಎಸೆಯಬೇಡಿ. ಉತ್ತರವೂ ಅಲ್ಲೇ ಇದೆ. ಎಲ್ಲರೂ ಈ ಜಾಲತಾಣವನ್ನು ಬಳಸಬಹುದು ಎಂದು ಅವರು ಹೇಳಿದ್ದಾರೆ. ಅಂದ ಹಾಗೆ ಈ ಜಾಲತಾಣದ ವಿಳಾಸ www.uswim.com. ಹೌದು, ಈಜು ಕಲಿಸುವ ವೀಡಿಯೋಗಳು ಜಾಲತಾಣದಲ್ಲಿವೆ. ಆದರೆ ಈಜುಕೊಳದ ಪಕ್ಕಬಂದಾಗ ಅದು ಮರೆತು ಹೋಗಿದ್ದರೆ? ಚಿಂತೆ ಬೇಡ. ನಿಮ್ಮಲ್ಲಿ ದುಬಾರಿ ಐಫೋನ್ ಇದ್ದಲ್ಲಿ ಪಾಠಗಳನ್ನು ಐಫೋನ್‌ಗೆ ಡೌನ್‌ಲೋಡ್ ಮಾಡಿಕೊಂಡು ಕೊಳದ ಪಕ್ಕ ನೋಡಿಕೊಂಡು ಈಜು ಕಲಿಯಬಹುದು. ಐಫೋನ್ ನೀರಿನೊಳಕ್ಕೆ ಬೀಳದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಿಮ್ಮದು!

ಡೌನ್‌ಲೋಡ್

ವಿಮಾನ ಚಾಲಕರಾಗಿ

ಗಣಕಗಳಲ್ಲಿ ಆಡುವ ಆಟಗಳಲ್ಲಿ ಮೈಕ್ರೋಸಾಫ್ಟ್ ಫ್ಲೈಟ್ ಸಿಮುಲೇಟರ್ ತುಂಬ ಪ್ರಖ್ಯಾತ. ಇದು ಅನುಕರಣೆಯ ಆಟಗಳ (simulation game) ವಿಭಾಗಕ್ಕೆ ಸೇರುತ್ತದೆ. ಅಮೆರಿಕದಲ್ಲಿ ೨೦೦೧ರಲ್ಲಿ ಅವಳಿ ಕಟ್ಟಡಗಳ ಮೇಲೆ ವಿಮಾನ ಗುದ್ದಿಸಿದ ಉಗ್ರಗಾಮಿಗಳು ಈ ಅಟದ ಮೂಲಕವೇ ವಿಮಾನ ಹಾರಾಟವನ್ನು ಕಲಿತದ್ದು ಎಂಬ ಪ್ರತೀತಿ ಇದೆ. ಈ ಆಟ ಅಷ್ಟು ನೈಜವಾಗಿದೆ. ಇದು ತನಕ ಈ ಆಟ ಹಣ ಕೊಟ್ಟು ಕೊಂಡರೆ ಮಾತ್ರ ಆಡುವಂತಹದ್ದಾಗಿತ್ತು. ಈಗ ಮೈಕ್ರೋಸಾಫ್ಟ್‌ನವರು ಇದರ ಉಚಿತ ಆವೃತ್ತಿ ನೀಡಿದ್ದಾರೆ. ಇದನ್ನು microsoftflight.com ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಕೆಲವು ವಿಮಾನ ಮಾತ್ರ ಉಚಿತ ಆವೃತ್ತಿಯಲ್ಲಿವೆ. ಹೆಚ್ಚಿನ ವಿಮಾನಗಳು ಬೇಕಿದ್ದಲ್ಲಿ ಹಣ ಕೊಟ್ಟು ಕೊಂಡುಕೊಂಡು ಡೌನ್‌ಲೋಡ್ ಮಾಡಿಕೊಳ್ಳಬೇಕು.  

e - ಸುದ್ದಿ

ಪೈರೇಟ್ ಬೇ


ಒಬ್ಬರಿಗೊಬ್ಬರು ಫೈಲುಗಳನ್ನು ಹಂಚಿಕೊಳ್ಳುವ ತಂತ್ರಜ್ಞಾನ ವ್ಯಕ್ತಿಯಿಂದ-ವ್ಯಕ್ತಿಗೆ (person-to-person - P2P). ಈ ವಿಧಾನದಲ್ಲಿ ಬಳಕೆಯಾಗುವುದು ಟೊರೆಂಟ್ ಫೈಲ್‌ಗಳು. ಈ ರೀತಿ ಟೊರೆಂಟ್‌ಗಳನ್ನು ಹುಡುಕಲು ಅನುವು ಮಾಡಿಕೊಡುವ ಜಾಲತಾಣ ಪೈರೇಟ್ ಬೇ. ಇದನ್ನು ಮುಚ್ಚಿಸಿಬಿಡಬೇಕು ಎಂದು ಸಂಗೀತ ಮತ್ತು ಚಲನಚಿತ್ರ ತಯಾರಿಸುವ ಕಂಪೆನಿಗಳು ಶತಾಯಗತಾಯ ಪ್ರಯತ್ನಿಸುತ್ತಿವೆ. ಅವರು ಮೆಗಾಅಪ್‌ಲೋಡ್ ಜಾಲತಾಣವನ್ನು ಮುಚ್ಚಿಸಿ ಅದರ ನಿರ್ಮಾತೃವನ್ನು ಸೆರೆಮನೆಗೆ ದೂಡಿದ ಕಥೆ ಇದೇ ಅಂಕಣದಲ್ಲಿ ವರದಿಯಾಗಿದೆ.  ತನ್ನ ಪರಿಸ್ಥಿತಿಯೂ ಹಾಗೆಯೇ ಆಗಬಹುದು ಎಂದು ಆಲೋಚಿಸಿದ ಪೈರೇಟ್ ಬೇ ಮುಂದಾಲೋಚನೆಯಿಂದ ತಾನು ಹುಡುಕಿಕೊಡುವ ಫೈಲ್‌ಗಳ ಕೊಂಡಿ ನೀಡುವ ವಿಧಾನವನ್ನೇ ಬದಲಿಸಿದೆ. ಇನ್ನು ಅದು ನೇರವಾಗಿ ಟೊರೆಂಟ್ ಫೈಲ್‌ಗಳನ್ನು ನೀಡುವುದಿಲ್ಲ. ಬದಲಿಗೆ ಮ್ಯಾಗ್ನೆಟ್ ಲಿಂಕ್‌ಗಳನ್ನು ನೀಡುತ್ತದೆ.

e- ಪದ

ಮ್ಯಾಗ್ನೆಟ್ ಲಿಂಕ್ (magnet link) - ವ್ಯಕ್ತಿಯಿಂದ ವ್ಯಕ್ತಿಗೆ ಫೈಲ್ ಹಂಚಲು ಅನುವು ಮಾಡುವ ವಿಧಾನದಲ್ಲಿ ಬಳಕೆಯಾಗುವ ಫೈಲ್ ಇರುವ ಜಾಗದ ವಿಳಾಸವನ್ನು ತಿಳಿಸಲು ಬಳಸುವ ಒಂದು ವಿಧಾನ. ಈ ವಿಧಾನದಲ್ಲಿ ಫೈಲಿನ ವಿಳಾಸದ ಬದಲಿಗೆ ಫೈಲಿನಲ್ಲಿರುವ ಮಾಹಿತಿಯ ಮೂಲಕ ಫೈಲನ್ನು ವಿವರಿಸಲಾಗುತ್ತದೆ. ಟೊರೆಂಟ್‌ನ ಹೊಸ ಅವತಾರ ಎನ್ನಬಹುದು.

e - ಸಲಹೆ

ಮಡಿಕೇರಿಯ ರವೀಂದ್ರರ ಪ್ರಶ್ನೆ: ಕನ್ನಡದಲ್ಲಿ (ಕಗಪ ಕೀಲಿಮಣೆ ವಿನ್ಯಾಸ) ವೇಗವಾಗಿ ಬೆರಳಚ್ಚು ಮಾಡುವುದನ್ನು ಕಲಿಯಲು ಯಾವುದಾದರೂ ತಂತ್ರಾಂಶ ಇದೆಯೇ? ತಿಳಿಸಿ. ಇಂಗ್ಲಿಷಿನಲ್ಲಿ ಇಂತಹ ತಂತ್ರಾಂಶಗಳು ಬಹಳ ಇವೆ. ಕನ್ನಡದಲ್ಲಿ ಇಂತಹ ತಂತ್ರಾಂಶಗಳ ಕೊರತೆ ಇದೆ. (ಗಣಕ ಪರಿಷತ್ ನವರು ಕೀಲಿಮಣೆ ಭೋಧಕ ಎಂಬ ತಂತ್ರಾಂಶ ತಯಾರಿಸಿದ್ದಾರೆ. ಆದರೆ ಇದು ಮಕ್ಕಳಿಗಷ್ಟೇ ಉಪಯುಕ್ತವಾಗುವಂತಹುದು)  ಇಂತಹ ತಂತ್ರಾಂಶ ಅಭಿವೃದ್ಧಿ ಪಡಿಸಿದಲ್ಲಿ ಗಣಕಯಂತ್ರದಲ್ಲಿ  ಹೊಸದಾಗಿ ಬೆರಳಚ್ಚು ಕಲಿಯುವವರಿಗೆ ಅನುಕೂಲವಾಗುತ್ತದೆ. ಆಸಕ್ತ ತಂತ್ರಜ್ಞರು ಇತ್ತ ಗಮನ ಹರಿಸಬಹುದಾಗಿದೆ.
ಉ: ಅಂತಹ ತಂತ್ರಾಂಶ ನನಗೆ ತಿಳಿದಂತೆ ಇಲ್ಲ. ಹೌದು. ತಂತ್ರಾಂಶ ತಯಾರಕರು ಹಾಗೂ ಆಸಕ್ತರು ಈ ಕಡೆ ಗಮನ ಹರಿಸಬೇಕು.

ಕಂಪ್ಯೂತರ್ಲೆ

ಇನ್ನೊಂದು ಗಣಕ (ತ)ಗಾದೆ:

ಸೂರ್ಯ ಲಾಗ್‌ಔಟ್ ಆದನೆಂದು ಚಿಂತಿಸುತ್ತ ಕುಳಿತರೆ ಲಾಗ್‌ಇನ್ ಆದ ಚಂದಿರನ ಸೌಂದರ್ಯವನ್ನು ಆನಂದಿಸುವುದನ್ನು ಕಳಕೊಳ್ಳುತ್ತೀರಿ

ಸೋಮವಾರ, ಫೆಬ್ರವರಿ 27, 2012

ಗಣಕಿಂಡಿ - ೧೪೫ (ಫೆಬ್ರವರಿ ೨೭, ೨೦೧೨)

ಅಂತರಜಾಲಾಡಿ

ಗುಂಪುನಿಧಿ ಜಾಲತಾಣ

ನಿಮ್ಮಲ್ಲಿ ಒಂದು ಅದ್ಭುತ ಯೋಜನೆ ಇದೆ. ಅದನ್ನು ಪರಿಪೂರ್ಣಗೊಳಿಸಿದರೆ ಹಲವರಿಗೆ ತುಂಬ ಉಪಯೋಗವಾಗುವುದು. ಅದು ಸಮಾಜೋದ್ಧಾರದ ಯೋಜನೆ ಇರಬಹುದು, ಸರಳವಾದ ಆದರೆ ತುಂಬ ಉಪಯುಕ್ತವಾದ ತಂತ್ರಾಂಶ ಅಥವಾ ಜಾಲತಾಣ ತಯಾರಿ ಇರಬಹುದು, ಯಾವುದೋ ತಂತ್ರಜ್ಞಾನಾಧಾರಿತ ಯಂತ್ರ ತಯಾರಿ ಇರಬಹುದು, ಅಥವಾ ಜೀವಶಾಸ್ತ್ರ, ತಳಿತಂತ್ರಜ್ಞಾನ ಇರಬಹುದು -ಹೀಗೆ ಏನೂ ಬೇಕಾದರೂ ಆಗಿರಬಹುದು. ಆದರೆ ನಿಮ್ಮಲ್ಲಿ ಅದನ್ನು ಕಾರ್ಯಗತಗೊಳಿಸಲು ಬೇಕಾದ ಬಂಡವಾಳ ಇಲ್ಲ. ಈ ಸಮಸ್ಯೆಗೆ ಒಂದು ಸರಳ ಪರಿಹಾರವೆಂದರೆ ಜನರಿಂದಲೇ ಗುಂಪುನಿಧಿ ಸಂಗ್ರಹ ಮಾಡುವುದು. ಹೀಗೆ ಮಾಡಲು ನೀವು ಒಂದು ಜಾಲತಾಣ ನಿರ್ಮಿಸಿ ಜನರನ್ನು ಕೇಳಿಕೊಳ್ಳಬಹುದು. ಆದರೆ ನಿಮ್ಮಲ್ಲಿ ಯೋಜನೆ ಇದೆ, ಅದು ಯಾವುದೋ ಒಂದು ಜಾಲತಾಣದಲ್ಲಿದೆ ಎಂದು ಜನರಿಗೆ ತಿಳಿಯುವುದು ಹೇಗೆ? ಈ ಸಮಸ್ಯೆಗೆ ಪರಿಹಾರ ರೂಪವಾಗಿ ಕೆಲವು ಗುಂಪುನಿಧಿಸಂಗ್ರಹದ ಜಾಲತಾಣಗಳಿವೆ. ಅಂತಹ ಒಂದು ಜಾಲತಾಣ www.rockethub.com. 

ಡೌನ್‌ಲೋಡ್

3-D ಗ್ರಾಫಿಕ್ಸ್

ಗಣಕದಲ್ಲಿ ಮೂರು ಆಯಾಮದ ಪ್ರತಿಕೃತಿ ತಯಾರಿಸುವುದು ಒಂದು ಪೂರ್ಣಪ್ರಮಾಣದ ಉದ್ಯೋಗವೇ ಆಗಿದೆ. ಹಲವು ಚಲನಚಿತ್ರಗಳೂ ಗ್ರಾಫಿಕ್ಸ್ ಬಳಸಿಯೇ ಇರುತ್ತವೆ. ಜ್ಯುರಾಸಿಕ್ ಪಾರ್ಕ್ ಯಾರಿಗೆ ಗೊತ್ತಿಲ್ಲ? ಅದರಲ್ಲಿ ಬರುವ ಡೈನೋಸಾರಸ್ ಗಣಕ ಬಳಸಿ ಗ್ರಾಫಿಕ್ಸ್ ಮೂಲಕ ತಯಾರಾಗಿರುವುದು. ಇಂತಹ ಮಾದರಿಗಳನ್ನು ತಯಾರಿಸಬೇಕಾದರೆ ದುಬಾರಿ ಗಣಕ ಮತ್ತು ಜೊತೆಗೆ ದುಬಾರಿ ತಂತ್ರಾಂಶ ಬೇಕು. ಮೂರು ಆಯಾಮದ ಗ್ರಾಫಿಕ್ಸ್ ತಯಾರಿಸಲು ಅನುವು ಮಾಡಿಕೊಡುವ ಒಂದು ಉಚಿತ ಹಾಗೂ ಮುಕ್ತ ತಂತ್ರಾಂಶ  Art of Illusion. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.artofillusion.org.

e - ಸುದ್ದಿ

ಕಳ್ಳರನ್ನು ಓಡಿಸಲು ಟ್ವಿಟ್ಟರ್ ಸಹಾಯ

ಇಜಿಪ್ಟ್ ಮತ್ತು ಇನ್ನೂ ಕೆಲವು ದೇಶಗಳಲ್ಲಿ ಆಡಳಿತ ನಡೆಸುತ್ತಿದ್ದ ನಿರಂಕುಶ ಪ್ರಭುತ್ವವನ್ನು ಹೊಡೆದೋಡಿಸಲು ಚಳವಳಿಗೆ ಜನರನ್ನು ಸೇರಿಸಲು ಟ್ವಿಟ್ಟರ್ ಬಳಕೆಯಾದ ಕಥೆ ಇದೇ ಅಂಕಣದಲ್ಲಿ ವರದಿಯಾಗಿತ್ತು. ಈಗ ಸ್ವಲ್ಪ ಬೇರೆ ರೀತಿಯ ಕಥೆ. ಕೀನ್ಯ ದೇಶದ ಒಂದು ನಗರಾಧಿಪತಿಗೆ ನಡುರಾತ್ರಿ ಒಂದು ಫೋನ್ ಕರೆ ಬರುತ್ತದೆ - “ನಮ್ಮ ಪಕ್ಕದ ಮನೆಗೆ ಕಳ್ಳರು ನುಗ್ಗುತ್ತಿದ್ದಾರೆ, ಸಹಾಯ ಮಾಡಿ” ಎಂದು. ಅವರು ಕೂಡಲೆ ಟ್ವಿಟ್ಟರ್‌ನಲ್ಲಿ ಸಂದೇಶ ದಾಖಲಿಸಿ ಆ ಸ್ಥಳದ ಸುತ್ತಮುತ್ತ ಇರುವವರನ್ನು ಸಹಾಯ ಮಾಡಲು ಕೋರಿಕೊಳ್ಳುತ್ತಾರೆ. ಅವರನ್ನು ಟ್ವಿಟ್ಟರಿನಲ್ಲಿ ಹಿಂಬಾಲಿಸುತ್ತಿದ್ದ ಹಲವು ಮಂದಿ ಕೂಡಲೆ ಆ ಮನೆಯ ಮುಂದೆ ಜಮಾಯಿಸಿ ಕಳ್ಳರನ್ನು ಹೊಡೆದೋಡಿಸುತ್ತಾರೆ.

e- ಪದ

ಗುಂಪುನಿಧಿ (crowdfunding) - ಹಲವಾರು ಮಂದಿ ಸೇರಿ ಸಹಯೋಗಿ ವಿಧಾನದಿಂದ ಯಾವುದಾದರೊಂದು ಯೋಜನೆಗೆ ಧನಸಹಾಯ ಒದಗಿಸುವುದು. ಸಾಮಾನ್ಯವಾಗಿ ಇದನ್ನು ಅಂತರಜಾಲದ ಮೂಲಕ ಮಾಡಲಾಗುತ್ತದೆ. ಈಗೀಗ ಇಂತಹ ಕೆಲಸಗಳಿಗೆಂದೇ ಜಾಲತಾಣಗಳು ಹುಟ್ಟಿಕೊಂಡಿವೆ.

e - ಸಲಹೆ

ಹುಬ್ಬಳ್ಳಿಯ ಗೋವರ್ಧನರ ಪ್ರಶ್ನೆ: ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಬಗ್ಗೆ ಕನ್ನಡದಲ್ಲಿ ತಿಳಿದುಕೊಳ್ಳಲು ಯಾವ ವೆಬ್ ಸೈಟ್ನಲ್ಲಿ ಸಿಗುತ್ತದೆ?

ಉ: ನನಗೆ ತಿಳಿದಂತೆ ಅಂತಹ ಯಾವ ಜಾಲತಾಣವೂ ಇಲ್ಲ. ಓದುಗರಲ್ಲಿ ಯಾರಿಗಾದರೂ ತಿಳಿದಿದ್ದರೆ ತಿಳಿಸಬೇಕಾಗಿ ವಿನಂತಿ. ಕೆಲವು ವಿಜ್ಞಾನ ಬ್ಲಾಗುಗಳಿವೆ. ಆದರೆ ಅವು ನಿಮಗೆ ಬೇಕಾದಂತಹವಲ್ಲ. ಕರ್ನಾಟಕ ಸರಕಾರದ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯವರು ಈ ಕಡೆ ಸ್ವಲ್ಪ ಗಮನ ನೀಡಬೇಕು.

ಕಂಪ್ಯೂತರ್ಲೆ

ಕೋಲ್ಯ ಮೈಕ್ರೋಸಾಫ್ಟ್ ಕಂಪೆನಿಗೆ ಫೋನ್ ಮಾಡಿ ಕೇಳಿದ “ವಿಂಡೋಸ್ ೩೨ ಬಿಟ್‌ಗಿಂತ ವಿಂಡೋಸ್ ೬೪ ಬಿಟ್ ಒಳ್ಳೆಯದು ಎಂದು ಯಾರೋ ಹೇಳಿದರು. ಆದರೆ ನನ್ನಲ್ಲಿ ವಿಂಡೋಸ್ ೩೨ ಬಿಟ್ ಡಿವಿಡಿ ಇದೆ. ನಾನು ಅದನ್ನು ಎರಡು ಸಲ ಇನ್‌ಸ್ಟಾಲ್ ಮಾಡಿದರೆ ಅದು ವಿಂಡೋಸ್ ೬೪ ಬಿಟ್ ಆಗುತ್ತದೆಯೇ?”


ಮಂಗಳವಾರ, ಫೆಬ್ರವರಿ 21, 2012

ಗಣಕಿಂಡಿ - ೧೪೪ (ಫೆಬ್ರವರಿ ೨೦, ೨೦೧೨)

ಅಂತರಜಾಲಾಡಿ

ಸ್ವತಂತ್ರ ಉದ್ಯೋಗಿಯಾಗಿ

ನಿಮಗೆ ಒಂದು ಸಣ್ಣ ಕೆಲಸ ಮಾಡಿಸಬೇಕಾಗಿದೆ. ಉದಾಹರಣೆಗೆ ನಿಮ್ಮ ಸಣ್ಣ ಕಂಪೆನಿಯ ಬಗ್ಗೆ ಒಂದು ಚಿಕ್ಕ ಜಾಲತಾಣ ಅಥವಾ ಪ್ರಸೆಂಟೇಶನ್. ಇದಕ್ಕಾಗಿ ದೊಡ್ಡ ಕಂಪೆನಿಯನ್ನು ಹಿಡಿದರೆ ಅವರು ಹೇಳುವಷ್ಟು ಹಣ ಕೊಡಲು ನಿಮ್ಮಿಂದ ಅಸಾಧ್ಯ. ಆಗ ನೀವು ಇಂತಹ ಕೆಲಸಗಳನ್ನು ಮಾಡುವ ಸ್ವತಂತ್ರ ಉದ್ಯೋಗಿಯನ್ನು (freelancer) ಹುಡುಕುತ್ತೀರಿ. ಅದೇ ರೀತಿ ನೀವೇ ಒಬ್ಬ ಸ್ವತಂತ್ರ ಉದ್ಯೋಗಿಯಾಗಿ ಕೆಲಸ ಹುಡುಕುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಈ ಎರಡು ರೀತಿಯವರನ್ನು ಒಂದುಗೂಡಿಸುವ ಹಲವಾರು ಜಾಲತಾಣಗಳಿವೆ. ಅಂತಹ ಒಂದುಜಾಲತಾಣ www.freelancer.in. ಲಭ್ಯವಿರುವ ಕೆಲಸಗಳನ್ನು ಹಲವು ವಿಧಗಳಲ್ಲಿ ಪಟ್ಟಿ ಮಾಡಲಾಗಿದೆ. ಕೆಲಸ ಬೇಕಿದ್ದವರು ಇವುಗಳಲ್ಲಿ ತಮ್ಮ ಪರಿಣತಿಗೆ ಸರಿಹೊಂದುವುದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಹರಾಜಿನಲ್ಲಿ ಭಾಗವಹಿಸಬೇಕು.

ಡೌನ್‌ಲೋಡ್

ವಸಾಹುತುಶಾಹಿಗಳಿಗೆ

ಕಾಲೊನಿ ನಿರ್ಮಾಣ ಒಂದು ರೀತಿಯ ಆಟ. ಗಣಕಗಳಲ್ಲಿ ಹಾಗೂ ಅಂತರಜಾಲದಲ್ಲಿ ಇಂತಹ ಆಟಗಳು ಹಲವಾರಿವೆ. ತುಂಬ ಜನಪ್ರಿಯವೂ ಆಗಿವೆ. ಈ ಆಟಗಳು ತುಂಬ ದುಬಾರಿ. ಹಾಗಿದ್ದೂ ಉಚಿತ ಆಟಗಳೂ ಇವೆ. ಅವು ವಾಣಿಜ್ಯಕ ಆಟಗಳಷ್ಟು ಉತ್ತಮ ಇಲ್ಲದಿರಬಹುದು. ಆದರೆ ಅದೇ ಮಾದರಿಯ ಅನುಭವ ನೀಡಬಲ್ಲವು. ಕಾಲೊನಿ ನಿರ್ಮಾಣದ ಅಂತಹ ಒಂದು ಉಚಿತ ಆಟ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.freecol.org. ೧೯೪೨ನೆಯ ಇಸವಿಯಲ್ಲಿ ಪ್ರಾರಂಭವಾಗುವ ಆಟದ ಉದ್ದೇಶ ಅಮೆರಿಕದಲ್ಲಿ ವಸಾಹುತುಗಳ ನಿರ್ಮಾಣ. ಇಂಗ್ಲೆಂಡ್, ಫ್ರಾನ್ಸ್, ನೆದರ್ಲ್ಯಾಂಡ್ ಮತ್ತು ಸ್ಪೈನ್ ದೇಶಗಳು ಅಮೆರಿಕದಲ್ಲಿ ವಸಾಹುತು ನಿರ್ಮಾಣ ಮಾಡಿದ ಕಥೆಯನ್ನು ಆಧರಿಸಿ ಈ ಆಟವನ್ನು ತಯಾರಿಸಲಾಗಿದೆ. ಈ ಆಟ ಆಡಲು ನಿಮ್ಮ ಗಣಕದಲ್ಲಿ ಜಾವಾ ಇರತಕ್ಕದ್ದು. ಅದನ್ನು java.com/en/download ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

e - ಸುದ್ದಿ

ಗೂಗ್ಲ್ ಗೋಪ್ಯತೆ ಬದಲಾವಣೆ

ಗೂಗ್ಲ್ ಬಳಸುವವರಿಗೆ ಅದರ ಹಲವು ಸೇವೆಗಳೂ ಪರಿಚಿತ. ಅವುಗಳಲ್ಲಿ ಪ್ರಮುಖವಾದವು ಜಿಮೈಲ್ (ಇಮೈಲ್), ಪಿಕಾಸಾ, ಯುಟ್ಯೂಬ್, ಗೂಗ್ಲ್+, ಇತ್ಯಾದಿ. ಪ್ರತಿ ಸೇವೆಗೂ ತನ್ನದೇ ಆದ ಗೋಪ್ಯತೆ ನಿಯಮಗಳಿದ್ದವು. ಈಗ ಗೂಗ್ಲ್ ಹೊಸ ನಿಯಮ ಪ್ರಕಾರ ಎಲ್ಲ ಸೇವೆಗಳಿಗೂ ಒಂದೇ ವ್ಯಕ್ತಿತ್ವ ಮತ್ತು ನಿಯಮ ಜಾರಿ ಆಗುತ್ತದೆ. ಅಂದರೆ ನಿಮಗೆ ಯುಟ್ಯೂಬ್‌ನಲ್ಲಿ ಒಂದು ಅವತಾರ, ಗೂಗ್ಲ್+ ನಲ್ಲಿ ಇನ್ನೊಂದು, ಪಿಕಾಸಾದಲ್ಲಿ ಮಗದೊಂದು ಅವತಾರ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಈ ಹೊಸ ನಿಯಮದಿಂದಾಗಿ ಗೂಗ್ಲ್‌ಗೆ ನಿಮ್ಮ ಬಗ್ಗೆ ನಿಮ್ಮ ಹೆಂಡತಿಗಿಂತಲೂ ಹೆಚ್ಚು ತಿಳಿದಿರುತ್ತದೆ ಎಂದು ತಂತ್ರಜ್ಞಾನದ ಬಗ್ಗೆ ವಿಮರ್ಶೆ ಬರೆಯುವ ಜಾಲತಾಣಗಳು ಟೀಕಿಸಿವೆ.

e- ಪದ

ನೋಮೋಫೋಬಿಯ (Nomophobia) - ಮೊಬೈಲ್ ಫೋನ್ ಇಲ್ಲದಾಗುವ ಭಯ. ಇದು ಇಂಗ್ಲಿಶಿನಲ್ಲಿ no-mobile-phone phobia ಎಂಬುದರ ಹೃಸ್ವ ರೂಪ. ಫೋಬಿಯ ಎಂದರೆ ಭಯ. ಹೈಡ್ರೋಫೋಬಿಯ ಎಂದರೆ ನೀರಿನ ಭಯ. ಅದೇ ರೀತಿ ಇದು ಒಂದು ಹೊಸ ನಮೂನೆಯ ಭಯ.

e - ಸಲಹೆ

ಬಿ. ಎಸ್. ಪಾಟೀಲರ ಪ್ರಶ್ನೆ: ನಾನೊಬ್ಬ ಸಂಶೋಧಕ. ಸಂಶೋಧನೆಗೆ ಸಹಾಯ ಮಾಡುವ ಮುಖ್ಯವಾಗಿ ಸಂಶೋಧನಾ ನಿಯತಕಾಲಿಕೆಗಳಲ್ಲಿ ಬಂದ ವಿಷಯಗಳನ್ನು ಹುಡುಕುವ ಸೌಲಭ್ಯವೇನಾದರೂ ಇದೆಯೇ?
ಉ: ಗೂಗ್ಲ್‌ನವರ scholar.google.com ಬಳಸಬಹುದು. worldwidescience.org ಕೂಡ ಬಳಸಬಹುದು. ಇವೆರಡು ಉಚಿತ. ವಾಣಿಜ್ಯಕ ಸೌಲಭ್ಯಗಳು ಹಲವಾರಿವೆ.

ಕಂಪ್ಯೂತರ್ಲೆ

ಎರಡನೆಯ ತರಗತಿಯ ಗಣಿತ ಪ್ರಶ್ನೆ: ಗಂಡ ಹೆಂಡತಿ ಮಗ ಮಗಳು ಇರುವ ಮನೆಯಲ್ಲಿ ಎರಡು ಲ್ಯಾಂಡ್‌ಲೈನ್ ಫೋನ್, ಐದು ಪೊಬೈಲ್ ಫೋನ್‌ಗಳಿವೆ. ಅವುಗಳಲ್ಲಿ ಎರಡು ಮೊಬೈಲ್ ಫೋನ್‌ಗಳಿಗೆ ಡ್ಯುವಲ್ ಸಿಮ್ ಸೌಲಭ್ಯ ಇದೆ. ಹಾಗಿದ್ದರೆ ಆ ಮನೆಯಲ್ಲಿರುವ ಒಟ್ಟು ಫೋನ್ ಸಂಪರ್ಕಗಳೆಷ್ಟು?

ಸೋಮವಾರ, ಫೆಬ್ರವರಿ 13, 2012

ಗಣಕಿಂಡಿ - ೧೪೩ (ಫೆಬ್ರವರಿ ೧೩, ೨೦೧೨)

ಅಂತರಜಾಲಾಡಿ

ಸಾಮುದಾಯಿಕ ರೇಡಿಯೋ


ಭಾರತ ಸರಕಾರವು ಸಾಮುದಾಯಿಕ ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಲು ಅನುಮತಿ ನೀಡುತ್ತಿದೆ. ಇದು ೨೦೦೨ನೆಯ ಇಸವಿಯಿಂದ ಆಚರಣೆಯಲ್ಲಿದೆ. ಆದರೆ ಇದರ ಬಗ್ಗೆ ಹೆಚ್ಚಿನ ಜನರಿಗೆ ಪೂರ್ತಿ ಮಾಹಿತಿ ಇಲ್ಲ. ೩ ವರ್ಷಗಳಿಂದ ಸಮಾಜ ಸೇವೆಯಲ್ಲಿರುವ ಯಾವುದೇ ಸರಕಾರೇತರ ಸಂಸ್ಥೆ ಈ ಸಾಮುದಾಯಿಕ ರೇಡಿಯೋ ಕೇಂದ್ರ ಸ್ಥಾಪಿಸಲು ಪರವಾನಗಿಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿರುವ ಜಾಲತಾಣ ccfcindia.net. ಈ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು, ಪ್ರಶ್ನೋತ್ತರಗಳು, ಅರ್ಜಿ, ಸಲ್ಲಿಸಿದ ಅರ್ಜಿಯ ಸ್ಥಿತಿ, ಎಲ್ಲ ಮಾಹಿತಿಗಳು ಲಭ್ಯವಿವೆ.

ಡೌನ್‌ಲೋಡ್

ಸಂಗೀತ ಡೌನ್‌ಲೋಡ್ ಮಾಡಿ

ವಿಶ್ವವ್ಯಾಪಿಜಾಲದಲ್ಲಿರುವ ಕೋಟ್ಯನುಕೋಟಿ ಜಾಲತಾಣಗಳಲ್ಲಿ ಹಲವು ಜಾಲತಾಣಗಳಲ್ಲಿ ಹಲವು ಮಂದಿ ಉಚಿತವಾಗಿ ಸಂಗೀತವನ್ನು ಹಂಚುತ್ತಿರುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಎಂಪಿ೩ ವಿಧಾನದಲ್ಲಿ ಸಂಗೀತದ ಫೈಲುಗಳನ್ನು ಡೌನ್‌ಲೋಡ್ ಮಾಡಲು ನೀಡುತ್ತಾರೆ. ಈ ರೀತಿ ಎಲ್ಲೆಲ್ಲ ಸಂಗೀತ ಉಚಿತವಾಗಿ ಲಭ್ಯವಿದೆ ಎಂದು ತಿಳಿಯುವುದು ಹೇಗೆ? ನಂತರ ಅದನ್ನು ಒಂದೊಂದಾಗಿ ಡೌನ್‌ಲೋಡ್ ಮಾಡಬೇಕಲ್ಲ? ಈ ಎಲ್ಲ ಕೆಲಸಗಳನ್ನು ಒಂದೆ ಕಡೆ ಒಟ್ಟಿಗೆ ಮಾಡಲು ಅನುವು ಮಾಡಿಕೊಡುವ ಉಚಿತ ತಂತ್ರಾಂಶ music2pc. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.music2pc.com.  

e - ಸುದ್ದಿ


ತನ್ನನ್ನು ತಾನೆ ಬೆಂಬತ್ತಿದ ಭೂಪ

ಒಂದು ತಣ್ಣಗಿನ ಕತ್ತಲಿನ ರಾತ್ರಿಯಲ್ಲಿ ಇಂಗ್ಲೆಂಡಿನ ರಸ್ತೆಯೊಂದರಲ್ಲಿ ಗುಪ್ತವಾಗಿ ಮಫ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಪೋಲಿಸನೊಬ್ಬನಿಗೆ ಪೋಲೀಸ್ ಕೇಂದ್ರದಿಂದ ವಯರ್‌ಲೆಸ್ ಮೂಲಕ ಸಂದೇಶ ಬಂದಿತು. ಅದರ ಪ್ರಕಾರ ಅವನಿರುವ ಜಾಗದ ಸನಿಹದಲ್ಲೇ ಒಬ್ಬ ಸಂಶಯಾಸ್ಪದ ವ್ಯಕ್ತಿ ತಿರುಗಾಡುತ್ತಿದ್ದಾನೆ. ಹಾಗೆಂದು ಅವರು ಕ್ಲೋಸ್ಡ್ ಸರ್ಕ್ಯುಟ್ ಟಿವಿಯಲ್ಲಿ ನೋಡಿ ವರದಿ ಮಾಡುತ್ತಿದ್ದರು. ಸರಿ. ಆತನನ್ನು ಹಿಡಿದೇ ಬಿಡೋಣ ಎಂದುಕೊಂಡ ಪೋಲೀಸ್ ಆತನ ಹುಡುಕಾಟದಲ್ಲಿ ತೊಡಗುತ್ತಾನೆ. ಆತ ಹೋದಂತೆಲ್ಲ ಕೇಂದ್ರ ಕಚೇರಿಯಿಂದ ಟಿವಿ ನೋಡಿ ಸಂಶಯಾಸ್ಪದ ವ್ಯಕ್ತಿ ಇರುವ ಜಾಗದ ಮಾಹಿತಿ ಬರುತ್ತಲೇ ಇರುತ್ತದೆ. ಈತ ಹುಡುಕುತ್ತಲೇ ಇರುತ್ತಾನೆ. ೨೦ ನಿಮಿಷಗಳ ಸಾಹಸದ ನಂತರ ಆತನಿಗೆ ಅರಿವಾದುದೇನೆಂದರೆ ಕೇಂದ್ರದಿಂದ ಸಂಶಯಾಸ್ಪದ ವ್ಯಕ್ತಿ ಎಂದು ವರದಿ ಮಾಡಿದ್ದು ತನ್ನನ್ನೇ ಟಿವಿಯಲ್ಲಿ ನೋಡಿ ಎಂದು!

e- ಪದ

ಫ್ರೀಮಿಯಂ (Freemium) - ತಂತ್ರಾಂಶವನ್ನು ಕೆಲವು ಮಿತಿಗಳೊಡನೆ ಉಚಿತವಾಗಿ  ಹಂಚುವುದು. ತಂತ್ರಾಂಶದ ಎಲ್ಲ ಸವಲತ್ತುಗಳನ್ನು ಬಳಸಬೇಕಾದರೆ ಹಣ ನೀಡಬೇಕಾಗುತ್ತದೆ.

e - ಸಲಹೆ


ಕಿರಣ್ ಹೆಬ್ಬಾರ್ ಅವರ ಪ್ರಶ್ನೆ: ನಾನು uk truck simulator ಎಂಬ ಆಟವನ್ನು ಡೌನ್‌ಲೋಡ್ ಮಾಡಿದ್ದೇನೆ. ಇದಕ್ಕೆ ಸೀರಿಯಲ್ ನಂಬರ್ ಅಥವಾ ಕೀ ಎಲ್ಲಿಸಿಗುತ್ತದೆ?
ಉ: ನೀವು ಆಟದ ಪ್ರಾಯೋಗಿಕ ಆವೃತ್ತಿಯನ್ನು ಡೌನ್‌ಲೋಡ್ ಮಾಡಿದ್ದೀರಿ. ಪೂರ್ತಿ ಆವೃತ್ತಿ ಬೇಕಿದ್ದರೆ ಹಣ ನೀಡಿ ಕೊಂಡುಕೊಳ್ಳಬೇಕು.

ಕಂಪ್ಯೂತರ್ಲೆ

ಕೋಲ್ಯನ ಮಗ ಯಾವಾಗಲೂ ಗಣಕದಲ್ಲಿ ಆಟ ಆಡುತ್ತಿದ್ದ. ಕೋಲ್ಯ ಮಗನಿಗೆ ದಬಾಯಿಸಿದ “ಕಂಪ್ಯೂಟರ್‌ನಲ್ಲಿ ಗೇಮ್ ಆಡಿದ್ದು ಸಾಕು. ಸ್ವಲ್ಪ ಹೊರಗೆ ಹೋಗಿ ಆಡು”. ಕೋಲ್ಯನ ಮಗ ಹೊರಗೆ ಹೋದ. ಹೋಗುವಾಗ ಗಣಕಕ್ಕೆ ರಿಮೋಟ್ (ದೂರನಿಯಂತ್ರಕ) ತೆಗೆದುಕೊಂಡು ಹೋದ. ಮನೆಹೊರಗಿನಿಂದ ರಿಮೋಟ್ ಮೂಲಕ ಆಟ ಆಡಿದ.

ಸೋಮವಾರ, ಫೆಬ್ರವರಿ 6, 2012

ಗಣಕಿಂಡಿ - ೧೪೨ (ಫೆಬ್ರವರಿ ೦೬, ೨೦೧೨)

ಅಂತರಜಾಲಾಡಿ

ಸಂಗೀತ ಹಂಚಿ

ಸಂಗೀತಗಾರರಿಗೆ ತಾವು ತಯಾರಿಸಿದ ಸಂಗೀತವನ್ನು ಇತರೆ ಸಂಗೀತಗಾರರಿಗೆ ಹಾಗೂ ಜಗತ್ತಿಗೆಲ್ಲ ಹಂಚಲು ಅನುವು ಮಾಡಿಕೊಡುವ ಜಾಲತಾಣ ಸೌಂಡ್‌ಕ್ಲೌಡ್. ಸಂಗೀತ ತಯಾರಿಕೆಯ ಹಂತದಲ್ಲಿರುವಾಗ ಇತರೆ ಸಂಗೀತಗಾರರಿಗೆ ಹಾಗೂ ಸ್ನೇಹಿತರಿಗೆ ಅದನ್ನು ಕೇಳಿಸಿ ಅವರಿಂದ ಹಿಂಮಾಹಿತಿ ಪಡೆದು ತಮ್ಮ ಸಂಗೀತ ಸಂಯೋಜನೆಯನ್ನು ಸುಧಾರಿಸಲು ಈ ಜಾಲತಾಣ ಅನುವು ಮಾಡಿಕೊಡುತ್ತದೆ. ಸಂಗಿತವನ್ನು ತಮ್ಮ ಬ್ಲಾಗ್ ಅಥವಾ ಜಾಲತಾಣದಲ್ಲಿ ಅಡಕಗೊಳಿಸಲು ಇದು ಸಹಾಯ ಮಾಡುತ್ತದೆ. ಸಂಗೀತದ ಬೇರೆ ಬೇರೆ ಭಾಗಗಳಿಗೆ ಸೂಕ್ತ ಶೀರ್ಷಿಕೆ ನೀಡಬಹುದು - “ಈ ಭಾಗದಲ್ಲಿ  ಕೊಳಲು ಅದ್ಭುತವಾಗಿದೆ, ಈ ಭಾಗದಲ್ಲಿ ಆಲಾಪನೆ ಚೆನ್ನಾಗಿದೆ” - ಇತ್ಯಾದಿ ಟಪ್ಪಣಿ ಸೇರಿಸಬಹುದು. ಈ ಜಾಲತಾಣದ ವಿಳಾಸ - soundcloud.com. 

ಡೌನ್‌ಲೋಡ್

ಪ್ರೌನ್

ಓಟದ ಆಟಗಳು ಸಾವಿರಾರಿವೆ. ಹೆಚ್ಚಿನ ಓಟದ ಆಟಗಳಲ್ಲಿ ಯಾವುದಾದರು ವಾಹನವನ್ನು ರಸ್ತೆಯಲ್ಲಿ ಇಲ್ಲವೇ ಕಾಡಿನಲ್ಲಿ ಓಡಿಸಬೇಕು. ಇಲ್ಲೊಂದು ಬೇರೆಯೇ ಬಗೆಯ ಓಟದ ಆಟವಿದೆ. ಇದರಲ್ಲಿ ಯಾವುದೇ ವಾಹನವಿಲ್ಲ. ರಸ್ತೆಯೂ ಇಲ್ಲ. ಬದಲಿಗೆ ಒಂದು ಕೊನೆಯೇ ಇಲ್ಲದ ದಪ್ಪ ಹಗ್ಗಕ್ಕೆ ಅಂಟಿಕೊಂಡ ಒಂದು ಗೋಲವನ್ನು ಓಡಿಸಬೇಕು. ದಾರಿಯಲ್ಲಿ ಎದುರಾಗುವ ಅಡ್ಡಿಗಳನ್ನು ತಪ್ಪಿಸಲು ಗೋಲವನ್ನು ಹಗ್ಗದ ಇನ್ನೊಂದು ಬದಿಗೆ ತಿರುಗಿಸಬೇಕು. ಬೇರೆ ಯಾವ ರೀತಿಯ ಹೊಡೆದಾಟಗಳಿಲ್ಲ. ಇದರಲ್ಲಿ ಹಲವು ಹಂತಗಳಿವೆ. ಹಾಗೆಯೇ ೪ ಜನರು ಬೇಕಿದ್ದರೂ ಒಟ್ಟಿಗೆ ಆಡಬಹುದು. ನಿಮ್ಮದೇ ಹಳೆಯ ಓಟದ ವಿರುದ್ಧ ನೀವೇ ಮತ್ತೊಮ್ಮೆ ಓಡಿಸಬಹುದು. ಈ ಆಟದ ಹೆಸರು ಪ್ರೌನ್. ಇದು ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ www.proun-game.com. 

e - ಸುದ್ದಿ

ಟ್ವೀಟ್ ಮಾಡು ಜೈಲಿಗೆ ಹೋಗು

ಟ್ವೀಟ್ ಮಾಡಿ ಜೈಲಿಗೆ ಹೋದ ಇನ್ನೊಂದು ಹೊಸ ಪ್ರಕರಣ. ಇದು ದಕ್ಷಿಣ ಕೊರಿಯಾದಿಂದ ವರದಿಯಾಗಿದೆ. ದಕ್ಷಿಣ ಕೊರಿಯಾದ ಒಬ್ಬಾತ ಉತ್ತರ ಕೊರಿಯ ಸರಕಾರದ ಟ್ವಿಟ್ಟರ್ ಖಾತೆಯಲ್ಲಿ ಬಂದುದನ್ನು ಮರುಟ್ವೀಟ್ ಮಾಡಿದ್ದ. ಅದರಲ್ಲಿ ಉತ್ತರ ಕೊರಿಯಾದ ಹೊಗಳಿಕೆ ಇತ್ತು. ಈತ ಅದನ್ನು ಗೇಲಿ ಮಾಡಲೆಂದು ತನ್ನ ಹೆಸರು ಮತ್ತು ಫೋಟೋ ಸೇರಿಸಿದ್ದ. ಆದರೆ ದಕ್ಷಿಣ ಕೊರಿಯ ಸರಕಾರದ ಪ್ರಕಾರ ಆತ ರಾಷ್ಟ್ರೀಯ ಸುರಕ್ಷತೆಯ ಕಾನೂನನ್ನು ಉಲ್ಲಂಘಿಸಿದ್ದಾನೆ. ಅದಕ್ಕಾಗಿ ಆತನನ್ನು ಸೆರೆಮನೆಗೆ ದೂಡಲಾಗಿದೆ. ತಾನು ಉತ್ತರ ಕೊರಿಯಾವನ್ನು ಹಾಸ್ಯ ಮಾಡಿದ್ದು ಎಂದು ಆತ ವಿವರಿಸಿದರೂ ಅಧಿಕಾರಿಗಳು ಅದನ್ನು ಒಪ್ಪಲಿಲ್ಲ.

e- ಪದ

ಟ್ಯಾಬ್ಲೆಟ್ ಗಣಕ (tablet PC)  - ಇವುಗಳ ಗಾತ್ರ ಸುಮಾರು ೮ ಇಂಚಿನಿಂದ ೧೦ ಇಂಚು ಉದ್ದ, ೫ ರಿಂದ ೮ ಇಂಚು ಅಗಲ, ಸುಮಾರು ಅರ್ಧ ಇಂಚು ದಪ್ಪ ಇರುತ್ತವೆ. ಇವುಗಳಿಗೆ ಭೌತಿಕ ಕೀಲಿಮಣೆ ಇರುವುದಿಲ್ಲ. ಬದಲಿಗೆ ಸ್ಪರ್ಶಸಂವೇದಿ (touchsensitive screen) ಪರದೆ ಇರುತ್ತದೆ. ಅದರಲ್ಲಿ ಕೀಲಿಮಣೆ ಮೂಡಿಬರುತ್ತದೆ. ಜನಸಾಮಾನ್ಯರಿಗೆ ಬಹುಮಟ್ಟಿಗೆ ಅಗತ್ಯವಿರುವ ಕೆಲಸಗಳನ್ನೆಲ್ಲ ಇದು ಮಾಡಬಲ್ಲುದು. ಉದಾಹರಣೆಗೆ ಇಮೈಲ್, ಅಂತರಜಾಲ ವೀಕ್ಷಣೆ, ಕಡತ ತಯಾರಿ, ವಿ-ಪುಸ್ತಕ ಓದುವುದು -ಇತ್ಯಾದಿ.

e - ಸಲಹೆ


ಹುಬ್ಬಳ್ಳಿಯ ಪ್ರಶಾಂತ್ ಅವರ ಪ್ರಶ್ನೆ: ಹೊಸ ಫೋಲ್ಡರ್ ಮಾಡಿ  "con" ಅಂತ ಹೆಸೆರು ನೀಡುವಾಗ ಯಾಕೆ ತೆಗೆದುಕೊಳ್ಳುವುದಿಲ್ಲ ಮತ್ತು ಇಂತಹದೆ ಯಾವ ಯಾವ ಹೆಸರುಗಳು ತೆಗೆದುಕೊಳ್ಳುವುದಿಲ್ಲ?

ಉ: ಇದಕ್ಕೆ ಉತ್ತರ ಮೈಕ್ರೋಸಾಫ್ಟ್ ಕಾರ್ಯಚರಣೆಯ ವ್ಯವಸ್ಥೆಗಳ ಇತಿಹಾಸದಲ್ಲಿದೆ. ವಿಂಡೋಸ್ ಬರುವುದಕ್ಕೆ ಮೊದಲು ಡಾಸ್ (DOS) ಇತ್ತು. ಅದರಲ್ಲಿ CON ಅಂದರೆ Console ಅಂದರೆ ಪರದೆ ಎಂದು ಅರ್ಥ. ಇದು ಡಾಸ್‌ನಲ್ಲಿ ಕಾದಿರಿಸಿದ ಪದ (reserved word). ಆದುದರಿಂದ ಇದನ್ನು ಯಾವುದೇ ಫೋಲ್ಡರ್ ಅಥವಾ ಫೈಲುಗಳಿಗೆ ಹೆಸರಾಗಿ ಬಳಸುವಂತಿಲ್ಲ. ಇದೇ ಮಾತು LPT, PRN, ಇತ್ಯಾದಿಗಳಿಗೆ ಅನ್ವಯಿಸುತ್ತದೆ.

ಕಂಪ್ಯೂತರ್ಲೆ

ಕಥೆ ಹೇಳು ಎಂದು ಹಠಮಾಡುತ್ತಿರುವ ಕಂದನಿಗೆ ಅಪ್ಪ ಹೇಳಿದ್ದು - “ನೀನು ಹೋಗಿ ಮಲಗಿಕೊ. ಕಥೆಯನ್ನು ಎಸ್‌ಎಂಎಸ್ ಮಾಡುತ್ತೇನೆ”.