ಸೋಮವಾರ, ಸೆಪ್ಟೆಂಬರ್ 27, 2010

ಗಣಕಿಂಡಿ - ೦೭೧ (ಸಪ್ಟಂಬರ್ ೨೭, ೨೦೧೦)

ಅಂತರಜಾಲಾಡಿ

ಇನ್ನೊಂದು ನೋಬೆಲ್

ದನದ ಸೆಗಣಿಯಿಂದ ಐಸ್‌ಕ್ರೀಂ ತಯಾರಿಸುವುದು. ದನಗಳನ್ನು ಮನುಷ್ಯರಂತೆ ಪ್ರೀತಿಯಿಂದ ಮಾತನಾಡಿಸಿದರೆ ಅವು ಜಾಸ್ತಿ ಹಾಲು ಕೊಡುತ್ತವೆ. ಹೆಚ್ಚು ಹಣಕೊಟ್ಟು ಕೊಂಡುಕೊಂಡ ನಕಲಿ ಔಷಧಿ ಕಡಿಮೆ ಹಣಕೊಟ್ಟು ಕೊಂಡುಕೊಂಡ ನಕಲಿ ಔಷಧಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇವೆಲ್ಲ ಕಪೋಲಕಲ್ಪಿತ ಸಂಗತಿಗಳಲ್ಲ. ವೈಜ್ಞಾನಿಕವಾಗಿ ಸಂಶೋಧನೆ ಮಾಡಿ ಪ್ರಕಟಿಸಲ್ಪಟ್ಟ ಸಂಶೋಧನೆಗಳು. ಈ ಎಲ್ಲ ಸಂಶೋಧನೆಗಳಲ್ಲಿ ಒಂದು ಸಮಾನ ಅಂಶವಿದೆ. ಅದುವೇ ಇಗ್‌ನೋಬೆಲ್ ಪ್ರಶಸ್ತಿ. ಪ್ರತಿ ವರ್ಷ ಸಪ್ಟಂಬರ್ ಕೊನೆಗೆ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಜನರಲ್ಲಿ ನಗು ಮೂಡಿಸಿ ನಂತರ ಚಿಂತನೆಗೆ ಹಚ್ಚುವಂತಹ ಸಂಶೋಧನೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯ ಜಾಲತಾಣ  improbable.com. ಈ ವರ್ಷ ಸಪ್ಟಂಬರ್ ೩೦ಕ್ಕೆ ಈ ಪ್ರಶಸ್ತಿ ಘೋಷಣೆಯ ನೇರಪ್ರಸಾರವನ್ನು ಇದೇ ಜಾಲತಾಣದಲ್ಲಿ ವೀಕ್ಷಿಸಬಹುದು.

ಡೌನ್‌ಲೋಡ್

ಇಮೈಲ್ ವೀಕ್ಷಿಸಿ

ಇಮೈಲ್ ಎಲ್ಲರೂ ಬಳಸುತ್ತಿದ್ದಾರೆ. ಒಂದಕ್ಕಿಂತ ಹೆಚ್ಚು ಇಮೈಲ್ ವಿಳಾಸ ಹೊಂದಿರುವುದೂ ಸಾಮಾನ್ಯವಾಗಿದೆ. ಬೇರೆ ಬೇರೆ ಖಾತೆಗಳಲ್ಲಿ ಇಮೈಲ್ ಬಂದಿದೆಯೇ ಎಂದು ಆಗಾಗ ವೀಕ್ಷಿಸಿ ನೋಡುತ್ತಿರಬೇಕಾಗುತ್ತದೆ. ಹಲವಾರು ಖಾತೆ ಹೊಂದಿರುವವರಿಗೆ ಇದು ಸ್ವಲ್ಪ ಸಮಯ ಹಿಡಿಯುವ ಕೆಲಸ. ಈ ಕೆಲಸವನ್ನು ಸ್ವಯಂಚಾಲಿತವಾಗಿ ಮಾಡಲು ಒಂದು ತಂತ್ರಾಂಶವಿದೆ. ಇದನ್ನು ಗಣಕದಲ್ಲಿ ಇನ್‌ಸ್ಟಾಲ್ ಮಾಡಿಕೊಂಡು ಎಲ್ಲಇಮೈಲ್ ಖಾತೆಗಳ ವಿವರಗಳನ್ನು ದಾಖಲಿಸಿದರೆ ಇದುವೇ ಆ ಎಲ್ಲ ಖಾತೆಗಳನ್ನು ಆಗಾಗ ಪರಿಶೀಲಿಸಿ ಇಮೈಲ್ ಬಂದಿದೆಯೇ ಎಂದು ತಿಳಿಸುತ್ತದೆ. ಜನಪ್ರಿಯವಾಗಿರುವ ಎಲ್ಲ (ಜಿಮೈಲ್, ಹಾಟ್‌ಮೈಲ್, ಯಾಹೂ, ..) ಇಮೈಲ್‌ಗಳನ್ನು ಇದು ಪರಿಶೀಲಿಸಬಲ್ಲುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.poppeeper.com.  

e - ಸುದ್ದಿ

ಆಟ ಅತಿಯಾದಾಗ 

ಗಣಕ ಆಟಗಳಿಂದಾಗುವ ತೊಂದರೆಗಳ ಬಗ್ಗೆ ಓದಿರಬಹುದು. ಇದೀಗ ಇಂಗ್ಲೆಂಡಿನಿಂದ ಬಂದ ಸುದ್ದಿ. ಮೂರು ಮಕ್ಕಳ ತಾಯಿಯೊಬ್ಬಳು ಅಂತರಜಾಲ ಮೂಲಕ ಆಡುವ ಆಟದಲ್ಲಿ ತಿಂಗಳುಗಳಿಂದ ಎಷ್ಟು ತಲ್ಲೀನಳಾಗಿದ್ದಳೆಂದರೆ ಆಕೆ ಮಕ್ಕಳಿಗೆ ಊಟ ತಿಂಡಿ ಕೊಡುವುದನ್ನೇ ಮರೆತಿದ್ದಳು. ಆಕೆಯ ಮನೆಯಲ್ಲಿ ಇದ್ದ ನಾಯಿಗಳು ಆಹಾರವಿಲ್ಲದೆ ಸತ್ತು ಕೊಳೆತು ಹೋಗಿದ್ದವು. ಮಕ್ಕಳಿಗೆ ಆಕೆ ಬಿಸಿ ಅಡುಗೆ ಮಾಡುವ ಅಗತ್ಯವಿಲ್ಲದ ಅಂದರೆ ನೇರವಾಗಿ ಡಬ್ಬದಿಂದಲೇ ತಿನ್ನಿಸಬಲ್ಲ ಆಹಾರ ಕೊಡುತ್ತಿದ್ದಳು, ಅದೂ ಎಷ್ಟು ಹೊತ್ತಿಗೆ ಎಂಬ ಪರಿವೆಯೂ ಇಲ್ಲದೆ. ಕೊನೆಗೊಮ್ಮೆ ಆಕೆಯ ಪಕ್ಕದ ಮನೆಯವರು ಕಿಟಿಕಿಯ ಮೂಲಕ ಮನೆಯ ದುರವಸ್ತೆಯನ್ನು ಗಮನಿಸಿ ಪೋಲೀಸಿರಿಗೆ ತಿಳಿಸಿ ಅವರು ಬಂದು ಮಕ್ಕಳನ್ನು ಕಾಪಾಡಬೇಕಾಯಿತು. ಗಂಡ ಸತ್ತ ನಂತರ ಮಾನಸಿಕವಾಗಿ ಆಕೆ ಅಸ್ವಸ್ಥಳಾಗಿ ಹೀಗೆಲ್ಲ ಮಾಡಿದ್ದಾಳೆ ಎಂದು ಆಕೆಯ ವಕೀಲರು ವಾದಿಸುತ್ತಿದ್ದಾರೆ.

e- ಪದ

ಸೈಬರ್ ಸ್ಕ್ವಾಟಿಂಗ್ (cybersquatting) - ಮಾಹಿತಿ ಹೆದ್ದಾರಿಯಲ್ಲಿ (ಅಂತರಜಾಲ) ಅಡ್ಡವಾಗಿ ಕುಳಿತುಕೊಳ್ಳುವುದು? squatting ಪದಕ್ಕೆ ಕುಳಿತುಕೊಳ್ಳುವುದು ಎಂಬ ಅರ್ಥವಿದೆ. ಯಾವುದಾದರೊಂದು ಖ್ಯಾತ ಕಂಪೆನಿ ಅಥವಾ ಸಂಸ್ಥೆಯ ಹೆಸರಿನಲ್ಲಿ ಜಾಲತಾಣವೊಂದನ್ನು ನಮೂದಿಸಿ ಇಟ್ಟುಕೊಂಡು ಅನಂತರ ಅದನ್ನು ಅವರಿಗೇ ಅತಿ ಹೆಚ್ಚು ಹಣಕ್ಕೆ ಮಾರಲು ಪ್ರಯತ್ನಿಸುವುದು. ಇದು ಒಂದು ರೀತಿಯ ಬ್ಲ್ಯಾಕ್‌ಮೈಲ್ ತಂತ್ರ. ಆದರೆ ಈ ರೀತಿ ಮಾಡುವುದು ಕಾನೂನು ಪ್ರಕಾರ ಅಪರಾಧ ಎಂದು ನ್ಯಾಯಾಲಯಗಳು ತೀರ್ಮಾನ ನೀಡಿವೆ ಹಾಗೂ ಜಾಲತಾಣದ ಹೆಸರನ್ನು ನಿಜವಾಗಿ ಯಾರಿಗೆ ಸೇರಬೇಕೊ ಅವರಿಗೆ ನೀಡಿವೆ.

e - ಸಲಹೆ


ಮೈಸೂರಿನ ವಿಜಯಲಕ್ಷ್ಮಿಯವರ ಪ್ರಶ್ನೆ: ನನ್ನ ಗಣಕದಲ್ಲಿ ಸಂಗ್ರಹಿಸಿಟ್ಟದ್ದ ಹಲವಾರು ಫೋಟೋಗಳು ನಾಪತ್ತೆಯಾಗಿವೆ. ಅವುಗಳನ್ನು ವಾಪಾಸು ಪಡೆಯಲು ಯಾವುದದರೂ ತಂತ್ರಾಂಶವಿದೆಯೇ? 
ಉ: ನೀವು www.piriform.com/recuva ಬಳಸಿ ಪ್ರಯತ್ನಿಸಿ ನೋಡಿ.

ಕಂಪ್ಯೂತರ್ಲೆ

ನಾಯಿಗಳೇಕೆ ಟ್ವಿಟ್ಟರ್ ಬಳಸುವುದಿಲ್ಲ?
·    ಟ್ವಿಟ್ಟರ್‌ನಲ್ಲಿ ಬೊಗಳುವಿಕೆಯನ್ನು ಸೂಚಿಸಲಿಕ್ಕೆ ಆಗುವುದಿಲ್ಲ.
·    ಟ್ವಿಟ್ಟರ್‌ನಲ್ಲಿ ಬಾಲ ಅಲ್ಲಾಡಿಸುವುದನ್ನು ಸೂಚಿಸಲು ಆಗುವುದಿಲ್ಲ.

ಸೋಮವಾರ, ಸೆಪ್ಟೆಂಬರ್ 20, 2010

ಗಣಕಿಂಡಿ - ೦೭೦ (ಸಪ್ಟಂಬರ್ ೨೦, ೨೦೧೦)

ಅಂತರಜಾಲಾಡಿ

ವೈದ್ಯಕೀಯಜಾಲ

ವೈದ್ಯರಿಂದ ನಡೆಸಲ್ಪಡುವ ಜಾಲತಾಣ www.medicinenet.com. ಇದರ ಮುಖ್ಯ ಉದ್ದೇಶ ಜನರಿಗೆ ಖಾಯಿಲೆ ಮತ್ತು ಔಷಧಗಳ ಬಗೆಗೆ ಜನರಿಗೆ ತಿಳಿವಳಿಕೆ ನೀಡುವುದು. ಜನಸಾಮಾನ್ಯರಿಗೆ ಖಾಯಿಲೆಗಳ ಬಗ್ಗೆ ಹಲವು ತಪ್ಪು ಕಲ್ಪನೆಗಳಿರುತ್ತವೆ. ಬಹುಪಾಲು ವೈದ್ಯರಿಗೆ ತಮ್ಮಲ್ಲಿ ಬರುವವರಿಗೆ ತಿಳಿವಳಿಕೆ ನೀಡಲು ತಾಳ್ಮೆ ಇರುವುದಿಲ್ಲ ಮತ್ತು ಸಮಾಯಾಭಾವವಿರುತ್ತದೆ. ಇಂತಹ ಸಂದರ್ಭಗಳಲ್ಲಿ ತಮ್ಮ ಖಾಯಿಲೆ ಬಗ್ಗೆ ಸರಿಯಾದ ಮಾಹಿತಿ ಪಡೆಯಲು ಈ ಜಾಲತಾಣದ ಸಹಾಯ ಪಡೆಯಬಹುದು. ಕೆಲವು ಪ್ರಮುಖ ಚಿಕಿತ್ಸೆಗಳ ಬಗ್ಗೆಯೂ ಇಲ್ಲಿ ವಿವರಗಳಿವೆ. ಯಾವ ಔಷಧವನ್ನು ಯಾವ ಖಾಯಿಲೆಗೆ ಔಷಧಿಯಾಗಿ ಬಳಸಲಾಗುತ್ತದೆ ಹಾಗೂ ಅದರ ದುಷ್ಪರಿಣಾಮಗಳೇನು ಎಂಬ ವಿವರಗಳೂ ಇವೆ. ಇದು ಬಹಳ ಉಪಯುಕ್ತವಾದ ಸವಲತ್ತು. ಹಲವು ಬಾರಿ ನಾವು ತೆಗೆದುಕೊಳ್ಳುವ ಔಷಧದ ದುಷ್ಪರಿಣಾಮಗಳ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ವೈದ್ಯರೂ ತಿಳಿಸಿ ಹೇಳುವುದಿಲ್ಲ.

ಡೌನ್‌ಲೋಡ್

ಟೊರೆಂಟ್ ಹುಡುಕಿ

ಅಂತರಜಾಲದಲ್ಲಿ ತಂತ್ರಾಂಶ, ಸಂಗೀತ, ಚಲನಚಿತ್ರ, ಅಥವಾ ಇನ್ಯಾವುದೇ ಫೈಲುಗಳನ್ನು ಪ್ರಪಂಚಾದ್ಯಂತ ವಿವಿಧ ವ್ಯಕ್ತಿಗಳು ತಮ್ಮ ಗಣಕಗಳಲ್ಲಿ ಸಂಗ್ರಹಿಸಿಟ್ಟು ಆಸಕ್ತರಿಗೆ ಡೌನ್‌ಲೋಡ್ ಮಾಡಲು ಬಿಟ್‌ಟೊರೆಂಟ್ ಮೂಲಕ ಅವಕಾಶ ಮಾಡಿಕೊಟ್ಟಿರುತ್ತಾರೆ. ಆದರೆ ಯಾರ ಗಣಕದಲ್ಲಿ ಯಾವ ಕಡತ ಇದೆ ಎಂದು ಪತ್ತೆ ಹಚ್ಚುವುದು ಸುಲಭವಲ್ಲ. ಅದಕ್ಕೆಂದೇ ಹಲವಾರು ಜಾಲತಾಣಗಳಿವೆ. ನಮಗೆ ಬೇಕಾದ ಕಡತ ಹುಡುಕಲು ಪ್ರತಿ ಜಾಲತಾಣವನ್ನೂ ಜಾಲಾಡಬೇಕು. ಹೀಗೆ ಹಲವಾರು ಜಾಲತಾಣಗಳನ್ನು ಒಮ್ಮೆಗೇ ಹುಡುಕಲು ಒಂದು ತಂತ್ರಾಂಶವಿದೆ. ಅದುವೇ Torrent Search. ಇದನ್ನು ನಿಮ್ಮ ಗಣಕದಲ್ಲಿ ಅನುಸ್ಥಾಪಿಸಿಕೊಂಡರೆ ಇದನ್ನು ಬಳಸಿ ಹಲವಾರು ಟೊರೆಂಟ್ ಹುಡುಕುವ ಜಾಲತಾಣಗಳನ್ನು ಪ್ರತ್ಯೇಕವಾಗಿ ತೆರೆದು ಪ್ರಯತ್ನಪಡಬೇಕಾಗಿಲ್ಲ. ಈ ತಂತ್ರಾಂಶ ದೊರೆಯುವ ಜಾಲತಾಣ http://bit.ly/dfkfvv.

e - ಸುದ್ದಿ

ಮನೆ ದರೋಡೆ ಯಾಕಾಯಿತು?

ಫೇಸ್‌ಬುಕ್ ತುಂಬ ಜನಪ್ರಿಯ ಸೋಶಿಯಲ್ ನೆಟ್‌ವರ್ಕಿಂಗ್ ಜಾಲತಾಣ. ಇತ್ತೀಚೆಗೆ ಭಾರತದಲ್ಲೂ ಇದು ಜನಪ್ರಿಯತೆಯಲ್ಲಿ ಆರ್ಕುಟ್ ಅನ್ನು ಹಿಂದೆ ಹಾಕಿದೆ. ಜನರು ತಾವು ಏನು ಮಾಡುತ್ತಿದ್ದೇವೆ ಎಂಬುದಾಗಿ ಈ ಜಾಲತಾಣದಲ್ಲಿ ಬರೆಯತ್ತಾರೆ. ಅಮೆರಿಕಾದ ನಗರವೊಂದರಲ್ಲಿ ಅಗಸ್ಟ್ ಒಂದು ತಿಂಗಳಿನಲ್ಲಿ ಸುಮಾರು ೫೦ ಮನೆಗಳ ದರೋಡೆ ನಡೆದಿತ್ತು. ಎಲ್ಲ ಮನೆಗಳ ದರೋಡೆಯೂ ಮನೆಯವರು ಇಲ್ಲದಿದ್ದಾಗ ಆದುದು. ಪೋಲೀಸರು ಈ ಮನೆ ಮಾಲಿಕರ ಫೇಸ್‌ಬುಕ್ ಪುಟಗಳನ್ನು ಓದಿದಾಗ ಒಂದು ವಿಷಯ ಅವರಿಗೆ ವೇದ್ಯವಾಯಿತು. ಅವರೆಲ್ಲರೂ ನಾವು ಇಂತಹ ದಿನಾಂಕಗಳಂದು ಇಂತಹ ಊರಿಗೆ ಹೋಗುತ್ತಿದ್ದೇವೆ ಎಂದು ಬರೆದಿದ್ದರು. ಕಳ್ಳರು ಅವುಗಳನ್ನು ಓದಿ ಆ ಮನೆಗಳನ್ನು ದರೋಡೆ ಮಾಡಿದ್ದರು. ಕಳ್ಳರು ಸಿಕ್ಕಬಿದ್ದಾಗ ಅವರಿಂದ ಈ ಮಾಹಿತಿ ಪೋಲೀಸರಿಗೆ ದೊರಕಿತು. ಟ್ವಿಟ್ಟರ್, ಆರ್ಕುಟ್, ಫೇಸ್‌ಬುಕ್ ಇಂತಹ ಜಾಲತಾಣಗಳಲ್ಲಿ ನಿಮ್ಮ ಸಂಪೂರ್ಣ ಪ್ರವಾಸ ಮಾಹಿತಿ ನೀಡುವಾಗ ಎಚ್ಚರವಾಗಿರಿ. 

e- ಪದ

ದುರುಳ ತಂತ್ರಾಂಶ (malware) - ಇದು malicious software ಎಂಬುದರ ಸಂಕ್ಷಿಪ್ತ ರೂಪ. ಗಣಕದ ಒಡೆಯನಿಗೆ ಗೊತ್ತಿಲ್ಲದೆ ಗಣಕದೊಳಗೆ ನುಸುಳಿ ದುರುದ್ದೇಶದಿಂದ ಗಣಕದಿಂದ ಮಾಹಿತಿ ಕದಿಯುವ, ಪಾಸ್‌ವರ್ಡ್ ಕದಿಯುವ, ಗಣಕದಲ್ಲಿಯ ಮಾಹಿತಿಯನ್ನು ಕೆಡಿಸುವ ಹಾಗೂ ಇನ್ನೂ ಬೇರೆ ರೀತಿಯಲ್ಲಿ ಕೆಡುಕನ್ನುಂಟುಮಾಡುವ ಎಲ್ಲ ತಂತ್ರಾಂಶಗಳು ಇದರಡಿಯಲ್ಲಿ ಬರುತ್ತವೆ. ಇವುಗಳಲ್ಲಿ ತುಂಬ ಕುಖ್ಯಾತವಾದುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಕಂಪ್ಯೂಟರ್ ವೈರಸ್‌ಗಳು.

e - ಸಲಹೆ

ಶಾಂತಾಪಡಿ ಅವರ ಪ್ರಶ್ನೆ: ನನ್ನ ಫಯರ್‌ಫಾಕ್ಸ್ ಬ್ರೌಸರ್‌ನಲ್ಲಿ ಅಕ್ಷರಗಳು ತುಂಬ ಚಿಕ್ಕವಾಗಿ ಕಾಣಿಸುತ್ತವೆ. ಅವುಗಳನ್ನು ದೊಡ್ಡದಾಗಿ ಮಾಡುವುದು ಹೇಗೆ?
ಉ: ಒಂದು ಸರಳ ವಿಧಾನವಿದೆ. ಇದು ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಮತ್ತು ಗೂಗ್ಲ್ ಕ್ರೋಮ್‌ನಲ್ಲೂ ಕೆಲಸ ಮಾಡುತ್ತದೆ. Ctrl ಕೀಲಿಯನ್ನು ಒತ್ತಿ ಹಿಡಿದುಕೊಂಡು ಮೌಸ್‌ನ ಚಕ್ರವನ್ನು ತಿರುಗಿಸಿ. 

ಕಂಪ್ಯೂತರ್ಲೆ

ಟ್ವಿಟ್ಟರ್ ವ್ಯಸನಿ

·    ತನ್ನ ನಾಯಿಯ ಕುತ್ತಿಗೆಗೆ ಅದರ ಟ್ವಿಟ್ಟರ್ ಹೆಸರನ್ನು ಬರೆದು ನೇತುಹಾಕುತ್ತಾನೆ.
·    ಮನೆ ವಿಳಾಸ ಕೇಳಿದರೆ ತನ್ನ ಟ್ವಿಟ್ಟರ್ ಹೆಸರು ಹೇಳುತ್ತಾನೆ.
·    ತನ್ನ ಮನೆ ಮುಂದೆ ತನ್ನ ಟ್ವಿಟ್ಟರ್ ಹೆಸರನ್ನು ಬರೆದು ನೇತುಹಾಕುತ್ತಾನೆ.
·    ನಾನು ಊಟಕ್ಕೆ ಬರುತ್ತಿದ್ದೇನೆ ಎಂಬ ಸಂದೇಶವನ್ನು ತನ್ನ ಹೆಂಡತಿಗೆ ಟ್ವಿಟ್ಟರ್ ಮೂಲಕ ರವಾನಿಸುತ್ತಾನೆ.

ಸೋಮವಾರ, ಸೆಪ್ಟೆಂಬರ್ 13, 2010

ಗಣಕಿಂಡಿ - ೦೬೯ (ಸಪ್ಟಂಬರ್ ೧೩, ೨೦೧೦)

ಅಂತರಜಾಲಾಡಿ

ಪುಸ್ತಕಬೆಲೆ ಹೋಲಿಸಿ ಕೊಳ್ಳಿರಿ

ಪುಸ್ತಕಪ್ರಿಯರುಗಳಿಗೆ ಅಂತರಜಾಲದಲ್ಲಿ ಪುಸ್ತಕ ಕೊಳ್ಳಲು ಹಲವಾರು ಜಾಲತಾಣಗಳಿವೆ. ಅಂತರಜಾಲದ ಮೂಲಕ ಪುಸ್ತಕ ಕೊಳ್ಳುವುದರಿಂದ ಒಂದು ಲಾಭವಿದೆ. ಸಾಮಾನ್ಯವಾಗಿ ಪುಸ್ತಕದ ಮುಖಬೆಲೆಯ ಮೇಲೆ ಶೇಕಡ ೨೦ರ ವರೆಗೂ ರಿಯಾಯಿತಿ ಸಿಗುತ್ತದೆ. ಆದರೆ ಸಮಸ್ಯೆ ಏನೆಂದರೆ ಬೇರೆ ಬೇರೆ ಜಾಲತಾಣದವರು ಬೇರೆ ಬೇರೆ ರಿಯಾಯಿತಿ ನೀಡುತ್ತಾರೆ. ಎಲ್ಲ ಜಾಲತಾಣಗಳನ್ನು ಜಾಲಾಡಿ ಯಾವ ಜಾಲತಾಣದಲ್ಲಿ ನಿಮಗೆ ಬೇಕಾದ ಪುಸ್ತಕ ಕಡಿಮೆ ದರದಲ್ಲಿಸಿಗುತ್ತದೆ ಎಂದು ಪತ್ತೆಹಚ್ಚಬೇಕೇ? ಅದಕ್ಕೆಂದೇ ಒಂದು ಜಾಲತಾಣವಿದೆ.  ಅದುವೇ www.mysmartprice.com. ಭಾರತದ ಪ್ರಮುಖ ಪುಸ್ತಕ ಮಾರಾಟದ ಜಾಲತಾಣಗಳಲ್ಲಿ ಹುಡುಕಾಡಿ ಯಾವ ಜಾಲತಾಣದಲ್ಲಿ ನಿಮಗೆ ಬೇಕಾದ ಪುಸ್ತಕ ಅತಿ ಕಡಿಮೆ ಬೆಲೆಗೆ ಇದೆ ಎಂದು ಪತ್ತೆಹಚ್ಚಿ ಇದು ತಿಳಿಸುತ್ತದೆ.

ಡೌನ್‌ಲೋಡ್

ವಿಂಡೋಸ್೭ಕ್ಕೆ ಕನ್ನಡದ ಹೊದಿಕೆ


ಮೈಕ್ರೋಸಾಫ್ಟ್ ವಿಂಡೋಸ್ ೭ ಕಾರ್ಯಾಚರಣೆಯ ವ್ಯವಸ್ಥೆಗೆ (ಆಪರೇಟಿಂಗ್ ಸಿಸ್ಟಮ್) ಕನ್ನಡದ ಹೊದಿಕೆ ಲಭ್ಯವಿದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಂಡರೆ ವಿಂಡೋಸ್‌ನ ಬಹುಪಾಲು ಆದೇಶ ಮತ್ತು ಸಂದೇಶಗಳು ಕನ್ನಡ ಭಾಷೆಯಲ್ಲೇ ಬರುತ್ತವೆ. ಇದನ್ನು ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ಎಂದು ಕರೆಯುತ್ತಾರೆ. ಇದರಲ್ಲಿ ದಿನನಿತ್ಯ ಬಳಕೆಗೆ ಬೇಕಾಗುವ ಶೇಕಡ ೮೦ ಕನ್ನಡದ ಅನುಭವ ಬರುವಂತೆ ಅನುವಾದ ಮಾಡಲಾಗಿದೆ. ಈ ಕನ್ನಡದ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ಅನ್ನು bit.ly/bBdJ63  ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಧಿಕೃತ ವಿಂಡೋಸ್ ೭ ಇರುವವರು ಮಾತ್ರ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಹೊದಿಕೆಯನ್ನು ಅಳವಡಿಸಿದ ಮೇಲೆ ಗಣಕ ಪ್ರಾರಂಭಿಸಿದಾಗ ಇಂಟರ್‌ನೆಟ್ ಎಕ್ಸ್‌ಪ್ಲೋರರ್, ನೋಟ್‌ಪ್ಯಾಡ್, ಇತ್ಯಾದಿಗಳು ಕನ್ನಡದಲ್ಲಿರುತ್ತವೆ. ಅಂದರೆ ಅವುಗಳ ಮೆನುಗಳು ಕನ್ನಡ ಭಾಷೆಯಲ್ಲಿರುತ್ತವೆ. ಸಂವಾದ ಚೌಕಗಳೂ ಕನ್ನಡ ಭಾಷೆಯಲ್ಲಿ ಕಾಣಿಸುತ್ತವೆ. ಆದರೆ ಸಹಾಯ ಕಡತಗಳು ಮಾತ್ರ ಇಂಗ್ಲೀಷಿನಲ್ಲಿರುತ್ತವೆ.

e - ಸುದ್ದಿ

ಅಂತರಜಾಲವೇ ಸಹಾಯಕ್ಕೆ

ಅಂತರಜಾಲದಲ್ಲಿ ವಧುವರರ ಸಮಾವೇಶಕ್ಕೆ ಹಲವಾರು ಜಾಲತಾಣಗಳಿರುವುದು ನಿಮಗೆ ತಿಳಿದೇ ಇರಬಹುದು. ಈ ಜಾಲತಾಣಗಳಲ್ಲಿ ವಿವರ ದಾಖಲಿಸುವವರು ಸಾಚಾ ಎಂದೇ ಏನು ನಂಬಿಕೆ? ಈಗಾಗಲೇ ಮದುವೆ ಆದವರು ಈ ಸಂಗತಿಯನ್ನು ಮುಚ್ಚಿಟ್ಟು ಮತ್ತೊಮ್ಮೆ ಮದುವೆಗೆ ಜಾಹೀರಾತು ನೀಡುವುದು ವಿಶೇಷವೇನಲ್ಲ. ಆದರೆ ಇಂತಹ ಸಂಗತಿಯನ್ನು ಅಂತರಜಾಲವೇ ಹೊರಹಾಕಿದ್ದು ಮಾತ್ರ ಕೌತುಕ. ಕೊಲ್ಕತ್ತಾದ ಹುಡುಗಿಯೊಬ್ಬಳು ಅಮೇರಿಕಾದವನನ್ನು ಜಾಲತಾಣವೊಂದರಲ್ಲಿಯ ಜಾಹೀರಾತಿನ ಮೂಲಕ ಸಂಪರ್ಕಿಸಿ ಅಂತರಜಾಲದ ಮೂಲಕವೇ ಮಾತನಾಡಿ ವಿವಾಹಕ್ಕೆ ನಿಶ್ಚಯ ಮಾಡಿಕೊಂಡಿದ್ದಳು. ಆಕೆ ವಿವಾಹಕ್ಕೆ ಸಂಬಂಧಪಟ್ಟ ಏರ್ಪಾಡುಗಳನ್ನು ನೆರವೇರಿಸುವ ಜಾಲತಾಣವೊಂದರಲ್ಲಿ ತನ್ನ ಮದುವೆಗೆ ಬೇಕಾದ ಏರ್ಪಾಡುಗಳನ್ನು ಮಾಡಲು ಹೊರಟಳು. ಆಗ ಆಕೆಗೆ ಆಕಸ್ಮಿಕವಾಗಿ ತಾನು ಈಗ ಮದುವೆ ಮಾಡಿಕೊಳ್ಳಲು ಹೊರಟ ಹುಡುಗ ಇದೇ ಜಾಲತಾಣದಲ್ಲಿ ಎರಡು ವರ್ಷಗಳ ಹಿಂದೆ ಮದುವೆಗೆ ಕಲ್ಯಾಣ ಮಂಟಪವನ್ನು ಕಾದಿರಿಸಿದ್ದ ಎಂದು. ನಂತರ ಆಕೆ ಅಂತರಜಾಲದ ಮೂಲಕವೇ ಆತ ಯಾರನ್ನು ಮದುವೆ ಆಗಿದ್ದ ಎಂದೆಲ್ಲ ಪತ್ತೆ ಹಚ್ಚಿ ಆತ ಸುಳ್ಳುಗಾರ ಎಂಬುದನ್ನು ಕಂಡುಹಿಡಿದಳು. ಮದುವೆ ಮುರಿದುಬಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ?

e- ಪದ

ವೈರಲ್ ಮಾರ್ಕೆಟಿಂಗ್ (viral marketing) - ಅಂತರಜಾಲದಲ್ಲಿರುವ ಸೋಶಿಯಲ್ ನೆಟ್‌ವಕಿಂಗ್ (ಆರ್ಕುಟ್, ಫೇಸ್‌ಬುಕ್, ಟ್ವಿಟ್ಟರ್, ಇತ್ಯಾದಿ) ಜಾಲತಾಣಗಳನ್ನು ಬಳಸಿ ಜಾಹೀರಾತು ಮತ್ತು ವ್ಯಾಪಾರ. ಇದರಲ್ಲಿರುವ ವೈಶಿಷ್ಟ್ಯವೇನೆಂದರೆ ಜಾಹೀರಾತಿಗೆ ಅವರು ಹಣ ನೀಡುವುದು ಕಡಿಮೆ. ಜನರನ್ನೇ ಬಳಸಿ ತಮ್ಮ ಜಾಹೀರಾತನ್ನು ಇತರರು ಮತ್ತೆ ಪುನರುಚ್ಚರಿಸುವಂತೆ ಮಾಡುವುದು. ಉದಾಹರಣೆಗೆ ತಮ್ಮ ಜಾಲತಾಣದಲ್ಲಿ ಹೊಸ ನಮೂನೆಯ ಟೀಶರ್ಟ್ ಇದೆ. ಅದರ ಬಗ್ಗೆ ಟ್ವೀಟ್ ಮಾಡಿದವರಲ್ಲೊಬ್ಬರಿಗೆ ಉಚಿತ ಟೀಶರ್ಟ್ ಕೊಡುತ್ತೇವೆ ಎನ್ನುವುದು.

e - ಸಲಹೆ

ಬಾಲಾಜಿ ಅವರ ಪ್ರಶ್ನೆ: ನನಗೆ ಗ್ರಂಥಾಲಯ ಉಸ್ತುವಾರಿಯ ತಂತ್ರಾಂಶ ಬೇಕು. ಎಲ್ಲಿ ಸಿಗುತ್ತದೆ?
ಉ: calibre-ebook.com  ಜಾಲತಾಣದಿಂದ ಇಂತಹ ಒಂದು ತಂತ್ರಾಂಶವನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕಂಪ್ಯೂತರ್ಲೆ

ಸೂಪರ್ ಹೀರೋ ರಜನೀಕಾಂತ್ ಮತ್ತು ಗಣಕ

·    ರಜನೀಕಾಂತ್ ಗಣಕಕ್ಕೆ ವೈರಸ್ ಬರುವ ಮೊದಲೇ ರಜನೀಕಾಂತ್ ಅದನ್ನು ಕೊಲ್ಲುತ್ತಾರೆ.
·    ರಜನೀಕಾಂತ್ ಯಾರಿಗಾದರೂ ಒದ್ದರೆ ಅವರು ಎಷ್ಟು ದೂರ ಹೋಗಿ ಬೀಳುತ್ತಾರೆ ಎಂದರೆ ಗೂಗ್ಲ್ ಕೂಡ ಅವರನ್ನು ಹುಡುಕಲಾರದು.
·    ರಜನೀಕಾಂತ್ ಒಂದು ಸ್ಥಳಕ್ಕೆ ಅವರು ಕಳುಹಿಸಿದ ಇಮೈಲ್ ತಲುಪುವ ಮೊದಲೇ ತಲುಪಬಲ್ಲರು.
·    ರಜೀಕಾಂತ್ ಅವರ ಗಣಕಕ್ಕೆ ಯಾರದರೂ ಹ್ಯಾಕ್ ಮಾಡುವ ಮೊದಲೇ ರಜನೀಕಾಂತ್ ಅವರನ್ನು ದಾಳಿ ಮಾಡಿ ನಾಶ ಮಾಡಬಲ್ಲರು.

ಸೋಮವಾರ, ಸೆಪ್ಟೆಂಬರ್ 6, 2010

ಗಣಕಿಂಡಿ - ೦೬೮ (ಸಪ್ಟಂಬರ್ ೦೬, ೨೦೧೦)

ಅಂತರಜಾಲಾಡಿ

ಮುಕ್ತ ಸೃಜನಶೀಲರು

ನೀವು ಒಬ್ಬ ಸೃಜನಶಿಲ ಲೇಖಕ ಅಥವಾ ಕಲಾವಿದರಾಗಿರಬಹುದು. ನಿಮ್ಮ ಸೃಷ್ಟಿಯನ್ನು ಇತರರಿಗೆ ಹಂಚಲು ನಿಮಗೆ ಇಷ್ಟವಿದೆ. ಆದರೆ ಅದನ್ನು ಯಾವ ಪರವಾನಗಿಯಲ್ಲಿ ನೀಡುತ್ತೀರಿ? ಸಂಪೂರ್ಣ ಉಚಿತವೇ? ಅದನ್ನು ಲಾಭರಹಿತ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬಹುದು; ವಾಣಿಜ್ಯಕ ಉದ್ದೇಶಕ್ಕೆ ಬಳಸಿಕೊಳ್ಳಬೇಕಿದ್ದರೆ ನಿಮಗೆ ಹಣ ನೀಡಬೇಕು ಆಥವಾ ವಾಣಿಜ್ಯಕ ಉದ್ದೇಶಕ್ಕೆ ಖಂಡಿತ ಪರವಾನಗಿ ಇಲ್ಲ; ಬದಲಾವಣೆ ಮಾಡಲು ಪರವಾನಗಿ ಇದೆಯೇ? ಇದ್ದರೆ ಯಾವ ರೀತಿ? -ಹೀಗೆ ಹಲವಾರು ಸಾಧ್ಯತೆಗಳಿವೆ. ಹೀಗೆ ಎಲ್ಲ ನಮೂನೆಯ ಪರವಾನಗಿಗಳನ್ನು ಪಟ್ಟಿ ಮಾಡಿ ಅದರಲ್ಲಿ ಯಾವುದು ಬೇಕೋ ಅದನ್ನು ಬಳಸಲು ನಿಮಗೆ ಅನುವು ಮಾಡಿಕೊಡುವ ಜಾಲತಾಣ creativecommons.org. ಇದನ್ನು ಸಾಮಾನ್ಯವಾಗಿ ತಂತ್ರಾಂಶ ಕ್ಷೇತ್ರದಲ್ಲಿ ಬಳಕೆಯಾಗುವ ಮುಕ್ತ ತಂತ್ರಾಂಶ (opensource software) ಪರವಾನಗಿಗೆ ಪರ್ಯಾಯವಾಗಿ ಬಳಸುತ್ತಾರೆ. ಆದರೆ ಇವೆರಡೂ ಒಂದೇ ಅಲ್ಲ.

ಡೌನ್‌ಲೋಡ್

e-ಪುಸ್ತಕ ಓದುಗರಿಗೆ  

ಇತ್ತೀಚೆಗೆ ವಿದ್ಯುನ್ಮಾನ ಪುಸ್ತಕಗಳು ತುಂಬ ಜನಪ್ರಿಯವಾಗುತ್ತಿವೆ. ಇವುಗಳಲ್ಲಿ ಅತ್ಯಂತ ಸರಳವಾಗಿರುವುದು ಎಂದರೆ ಅಡೋಬಿ ಪಿಡಿಎಫ್ ವಿಧಾನದ ಕಡತಗಳು. ಇವುಗಳನ್ನು ಸುಮ್ಮನೆ ಮೌಸ್ ಬಳಸಿ ಮುಂದಿನ ಪುಟಕ್ಕೆ, ಅಂದರೆ ಕೆಳಗಡೆ, ಸರಿಸಿ ಓದಬಹುದು. ಈ ರೀತಿ ಓದುವುದರಿಂದ ಪುಸ್ತಕ ಓದಿದ ಪೂರ್ತಿ ಭಾವನೆ ಬರುವುದಿಲ್ಲ. ಪುಸ್ತಕ ಓದಿದಂತೆ ಒಂದು ಪುಟ ಆದ ನಂತರ ಇನ್ನೊಂದು ಪುಟಕ್ಕೆ ಹೋಗಬೇಕಾದರೆ ಪುಟವನ್ನು ಗಣಕದ ಪರದೆಯಲ್ಲಿ ತಿರುವಿದಂತೆ ಭಾಸವಾಗುವಂತೆ ಮಾಡಿದರೆ ಚೆನ್ನಾಗಿರುತ್ತದಲ್ಲವೇ? ಇಂತಹ ತಂತ್ರಾಂಶಗಳು ಹಲವಾರಿವೆ. ಅಂತಹ ಒಂದು ಉಚಿತ ತಂತ್ರಾಂಶ martview. ಇದನ್ನು ಬಳಸಿ ಅವರು ತಮ್ಮ ಅಂತರಜಾಲತಾಣದಲ್ಲಿ ನೀಡಿರುವ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿ ಓದಬಹುದು ಮಾತ್ರವಲ್ಲ, ನಿಮ್ಮ ಗಣಕದಲ್ಲಿರುವ ಯಾವುದೇ ಪಿಡಿಎಫ್ ಪುಸ್ತಕವನ್ನು ಕೂಡ ಈ ವಿಧಾನದಲ್ಲಿ ಓದಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://martview.com/index.php. 

e - ಸುದ್ದಿ

ತನ್ನನ್ನು ತಾನೆ ವಿವರಿಸಿ ಸಿಕ್ಕಿಹಾಕಿಕೊಂಡ

ಪತ್ರಿಕೆಗಳಲ್ಲಿ ಬರುವ ವರದಿಗಳಲ್ಲಿ ತಪ್ಪಿರುವುದು ಸಹಜ. ಘಟನೆ ನಡೆದ ಸ್ಥಳದಲ್ಲಿ ಇದ್ದವರಿಗೆ ತಪ್ಪು ವರದಿ ಓದಿದಾಗ ಮೈ ಉರಿಯುತ್ತದೆ. ಸಂಪಾದಕ ಅಥವಾ ವರದಿಗಾರರಿಗೆ ಪತ್ರ ಅಥವಾ ಇಮೈಲ್ ಮೂಲಕ ಸರಿಯಾದ ಘಟನೆಯನ್ನು ವಿವರಿಸಿ ಬರೆಯುತ್ತಾರೆ. ಜರ್ಮನಿಯಲ್ಲಿ ಹೀಗೆಯೇ ಆಯಿತು. ಒಬ್ಬ ದರೋಡೆಗಾರನ ಚಹರೆಯನ್ನು ಪತ್ರಿಕೆಯಲ್ಲಿ ವಿವರಿಸಿದುದು ಸರಿಯಿರಲಿಲ್ಲ. ಆತನ ವಿವರ ಸರಿಯಿಲ್ಲ, ಅದು ಈ ರೀತಿ ಇರಬೇಕು, ಎಂದು ವಿವರಿಸುವ ಇಮೈಲ್ ಪತ್ರಿಕಾ ಕಛೇರಿಗೆ ಬಂತು. ಹಾಗೆ ಕಳುಹಿಸಿದ್ದು ಘಟನೆ ನಡೆದ ಸ್ಥಳದಲ್ಲಿದ್ದ ವೀಕ್ಷಕ ಅಲ್ಲ. ಆ ದರೋಡೆಗಾರನೇ ಅದನ್ನು ಕಳುಹಿಸಿದ್ದ. ವಿವರ ಓದಿದ ಪೋಲೀಸರು ಅತನನ್ನು ಹಿಡಿದರು ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ತಾನೆ?

e- ಪದ

ಮುಕ್ತ ಸೃಜನಶೀಲರು (creative commons) - ಸೃಜನಶೀಲ ಕೆಲಸವನ್ನು ಇತರರಿಗೆ ಉಚಿತವಾಗಿ ಹಂಚಲು ನೀಡುವ ಹಲವು ನಮೂನೆಯ ಪರವಾನಗಿಗಳನ್ನು ವಿವರಿಸುವ ನಿಯಮಗಳು. ಅಂತರಜಾಲದಲ್ಲಿ ಈ ಪರವಾನಗಿಯಲ್ಲಿ ನೀಡಿರುವ ಹಲವು ಲೇಖನ, ಸಂಗೀತ, ಧ್ವನಿ ಮತ್ತು ವೀಡಿಯೋ ಪಾಠಗಳು ಲಭ್ಯವಿವೆ. ಇವನ್ನು ಸಾಮಾನ್ಯವಾಗಿ ವೈಯಕ್ತಿಕ ಅಥವಾ ಶೈಕ್ಷಣಿಕ ಉದ್ದೇಶಗಳಿಗೆ ಉಚಿತವಾಗಿ ಬಳಸಿಕೊಳ್ಳಲು ಪರವಾನಗಿ ನೀಡಿರುತ್ತಾರೆ.

e - ಸಲಹೆ

ನಾರಾಯಣ ಭಟ್ ಅವರ ಪ್ರಶ್ನೆ: ಕ್ಯಾಮರಾದಿಂದ ತೆಗೆದ ಫಿಲಂಗಳನ್ನು(35mm; ಕಪ್ಪು-ಬಿಳುಪು, ಕಲರ್) ಡಿಜಿಟಲ್ ಮಾಧ್ಯಮಕ್ಕೆ ಸುಲಭವಾಗಿ ಪರಿವರ್ತಿಸಬಹುದೆ? ದಯವಿಟ್ಟು ತಿಳಿಸಿ.
ಉ: ಸಾಧ್ಯ. ಅದಕ್ಕೆಂದೇ ಇರುವ ವಿಶೇಷ ಫಿಲ್ಮ್/ಸ್ಲೈಡ್ ಸ್ಕ್ಯಾನರ್ ಬಳಸಿ ಫಿಲಂನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ಬೆಂಗಳೂರು, ಮುಂಬೈ ಮುಂತಾದ ಮಹಾನಗರಗಳಲ್ಲಿ ಈ ರೀತಿಯ ಸೇವೆ ನೀಡುವವರಿದ್ದಾರೆ.

ಕಂಪ್ಯೂತರ್ಲೆ

ಕೋಲ್ಯ: ನನ್ನ ಸಿ.ಡಿ. ಡ್ರೈವ್‌ನಲ್ಲಿ ನಾಲ್ಕು ಸಿ.ಡಿ.ಗಳನ್ನು ಒಟ್ಟಿಗೆ ಹಾಕಲು ಆಗುತ್ತಿಲ್ಲ.
ತಂತ್ರಜ್ಞ: ಆದರೆ ನಾಲ್ಕು ಸಿ.ಡಿ. ಹಾಕಬಹುದು ಎಂದು ನಿಮಗೆ ಯಾರು ಹೇಳಿದ್ದು?
ಕೋಲ್ಯ: ಸಿ.ಡಿ. ಡ್ರೈವ್‌ನ ಮೇಲೆ 4xCD ಎಂದು ಬರೆದಿದೆ.

ಮಂಗಳವಾರ, ಆಗಸ್ಟ್ 31, 2010

ಗಣಕಿಂಡಿ - ೦೬೭ (ಆಗಸ್ಟ್ ೩೦, ೨೦೧೦)

ಅಂತರಜಾಲಾಡಿ

ಖಾನ್ ಅಕಾಡೆಮಿ

ಅಂತರಜಾಲದಲ್ಲಿ ಶೈಕ್ಷಣಿಕ ಪಾಠಗಳನ್ನು ವೀಡಿಯೋ ಮೂಲಕ ನಡೆಸುವ ಹಲವಾರು ಜಾಲತಾಣಗಳಿವೆ. ಅವುಗಳಲ್ಲಿ ಬಹುಪಾಲು ವಾಣಿಜ್ಯಕವಾಗಿವೆ. ಪ್ರಾಥಮಿಕ, ಮಾಧ್ಯಮಿಕ ಮತ್ತು ಪಿ.ಯು.ಸಿ. ಮಟ್ಟದ ಉಚಿತ ವೀಡಿಯೋ ಪಾಠಗಳಿಗೆ ನೀವು www.khanacademy.org ಜಾಲತಾಣಕ್ಕೆ ಭೇಟಿ ನೀಡಬಹುದು. ಈ ಜಾಲತಾಣದಲ್ಲಿ ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ, ಹೀಗೆ ಹಲವಾರು ವಿಷಯಗಳ ಬಗ್ಗೆ ವೀಡಿಯೋ ಪಾಠಗಳಿವೆ. ಇಲ್ಲಿರುವ ಒಟ್ಟು ವೀಡಿಯೋಗಳ ಸಂಖ್ಯೆ ೧೬೦೦ಕ್ಕಿಂತ ಹೆಚ್ಚು. ಇಷ್ಟೆಲ್ಲವನ್ನೂ ಸಲ್ಮಾನ್ ಖಾನ್ ಎಂಬ ಒಬ್ಬನೇ ವ್ಯಕ್ತಿ ತಯಾರಿಸಿದ್ದು ಎನ್ನುವುದು ಅಚ್ಚರಿಯ ಸಂಗತಿ. ಇವುಗಳ ಪ್ರಯೋಜನವನ್ನು ನೀವು, ಶಾಲಾವಿದ್ಯಾರ್ಥಿಗಳು, ಶಿಕ್ಷಕರು ಎಲ್ಲರೂ ಪಡೆದುಕೊಳ್ಳಬಹುದು.

ಡೌನ್‌ಲೋಡ್

ಫ್ಲಿಕರ್‌ನಿಂದ ಡೌನ್‌ಲೋಡ್ ಮಾಡಿ

flickr.com ಜಾಲತಾಣ ನಿಮಗೆ ತಿಳಿದಿರಬಹುದು. ಈ ಜಾಲತಾಣದಲ್ಲಿ ಜನರು ಸೇರಿಸಿದ ಛಾಯಾಚಿತ್ರಗಳಿವೆ. ಈ ಜಾಲತಾಣಕ್ಕೆ ನೀವೂ ಛಾಯಾಚಿತ್ರ ಸೇರಿಸಿ ಜಗತ್ತಿಗೆಲ್ಲ ಹಂಚಬಹುದು. ಆದರೆ ಈ ಜಾಲತಾಣದಿಂದ ಚಿತ್ರಗಳನ್ನು ನಿಮ್ಮ ಗಣಕಕ್ಕೆ ಡೌನ್‌ಲೋಡ್ ಮಾಡಬೇಕಾದರೆ ಪ್ರತಿಯೊಂದು ಚಿತ್ರವನ್ನೂ ತೆರೆದು ಒಂದೊಂದಾಗಿ ಡೌನ್‌ಲೋಡ್ ಮಾಡಬೇಕು. ನಿಮ್ಮ ಸ್ನೇಹಿತನ ಜೊತೆ ಹಂಪಿಗೆ ಹೋಗಿದ್ದಾಗ ತೆಗೆದ ನೂರಾರು ಛಾಯಾಚಿತ್ರಗಳನ್ನು ಆತ ಪ್ಲಿಕರ್‌ನಲ್ಲಿ ಸೆರಿಸಿ ನಿಮಗೆ ಅದರ ಕೊಂಡಿ ಕಳುಸಿದ್ದಾನೆ ಎಂದಿಟ್ಟುಕೊಳ್ಳಿ. ಎಲ್ಲ ಚಿತ್ರಗಳನ್ನು ಒಂದೆ ಆದೇಶ ಮೂಲಕ ಡೌನ್‌ಲೋಡ್ ಮಾಡಲು ಒಂದು ಉಪಯುಕ್ತ ತಂತ್ರಾಂಶವಿದೆ. ಅದುವೇ Bulkr.  ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ clipyourphotos.com/bulkr. ಆದರೆ ನೆನಪಿಟ್ಟುಕೊಳ್ಳಿ -ಅಂತರಜಾಲದಲ್ಲಿರುವ ಛಾಯಾಚಿತ್ರಗಳನ್ನೆಲ್ಲ ನೀವು ಪ್ರತಿಮಾಡಿಕೊಳ್ಳುವಂತಿಲ್ಲ. ಯಾವ ಚಿತ್ರಗಳನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದು ಎಂಬುದಾಗಿ ಜಾಲತಾಣದಲ್ಲಿ ಹೇಳಿಕೆ ಇದೆಯೋ ಅಂತಹ ಜಾಲತಾಣದಿಂದ ಮಾತ್ರ ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.  

e - ಸುದ್ದಿ

ಫೋಟೋದಲ್ಲಿ ಸಿಕ್ಕಿಬಿದ್ದ ಕಳ್ಳ

ಅಮೃತವರ್ಷಿಣಿ ಚಲನಚಿತ್ರ ನೀವು ನೋಡಿರಬಹುದು. ಅದರಲ್ಲಿ ಕೊಲೆಗಾರನನ್ನು ಸೆರೆಹಿಡಿದಿದ್ದು ಕ್ಯಾಮರ. ನಿಜಜೀವನದಲ್ಲೂ ಇಂತಹುದೇ ಘಟನೆ ನಡೆದಿದೆ. ಅಮೇರಿಕದ ಮ್ಯಾಡಿಸನ್ ನಗರದಲ್ಲಿ ಒಬ್ಬಾತನಿಗೆ ಒಂದು ಕಟ್ಟಡದ ಮುಂದೆ  ತನ್ನ ಮತ್ತು ಕುಟುಂಬದವರ ಫೋಟೋ ತೆಗಸಿಕೊಳ್ಳಬೇಕಿತ್ತು. ಅದಕ್ಕಾಗಿ ಆತ ತನ್ನ ಬ್ಯಾಗನ್ನು ಸ್ವಲ್ಪ ದೂರ, ಕಟ್ಟಡದ ಮೆಟ್ಟಿಲಲ್ಲಿಟ್ಟು, ಕ್ಯಾಮರಾವನ್ನು ಒಂದು ಕಡೆ ನಿಲ್ಲಿಸಿ ಅದರಲ್ಲಿರುವ ಸ್ವಯಂಚಾಲಿತವಾಗಿ ಫೋಟೋ ತೆಗೆಯುವ ಸವಲತ್ತನ್ನು ಬಳಸಿದ. ಫೋಟೋ ತೆಗೆದ ನಂತರ ನೋಡಿದಾಗ ಆತನ ಬ್ಯಾಗ್ ನಾಪತ್ತೆಯಾಗಿತ್ತು. ಆತನ ಅದೃಷ್ಟಕ್ಕೆ ಬ್ಯಾಗ್ ಕದಿಯುವಾಗ ಕಳ್ಳ ಆತ ತೆಗೆದ ಫೋಟೋದಲ್ಲಿ ಸಿಕ್ಕಿಬಿದ್ದಿದ್ದ. ಆ ಫೋಟೋ ಪೋಲೀಸರಿಗೆ ತೋರಿಸಿದಾಗ ಅರ್ಧ ಘಂಟೆಯ ಒಳಗೆ ಕಳ್ಳನನ್ನು ಬ್ಯಾಗ್ ಸಮೇತ ಹಿಡಿದರು.

e- ಪದ

ಸ್ಟೆಗನೋಗ್ರಾಫಿ (Steganography) -ಒಂದು ಚಿತ್ರ ಅಥವಾ ಕಡತದೊಳಗೆ ಗುಪ್ತವಾಗಿ ಮಾಹಿತಿಯನ್ನು ಅಡಗಿಸಿ ಇನ್ನೊಬ್ಬರಿಗೆ ಕಳುಹಿಸುವುದು. ಸಾಮಾನ್ಯವಾಗಿ ಮಾಹಿತಿಯನ್ನು ಗೂಢಲಿಪೀಕರಿಸಿ (encryption) ಇನ್ನೊಬ್ಬರಿಗೆ ಕಳುಹಿಸುತ್ತಾರೆ. ಹಾಗೆ ಕಳುಹಿಸಿದಾಗ ಅದು ಏನೆಂದು ಆ ಮಾಹಿತಿ ತಲುಪಬೇಕಾದವರಿಗೆ ಹೊರತು ಬೇರೆ ಯಾರಿಗೂ ಏನೂ ಅರ್ಥವಾಗುವುದಿಲ್ಲ. ಆದರೆ ಗುಪ್ತ ಮಾಹಿತಿ ಹೋಗಿದೆ ಎಂದು ತಿಳಿಯುತ್ತದೆ. ಆದರೆ ಒಂದು ಚಿತ್ರದೊಳಗೆ ಮಾಹಿತಿ ಅಡಗಿಸಿ ಕಳುಹಿಸಿದರೆ ಬೇರೆಯವರಿಗೆ ಯಾವ ಸಂದೇಹವೂ ಬರುವುದಿಲ್ಲ.

e - ಸಲಹೆ

ಸಹನ ಅವರ ಪ್ರಶ್ನೆ: ನನಗೆ ಮನೆಬಳಕೆಗೆ ಉತ್ತಮ ಮತ್ತು ಉಚಿತ ವೈರಸ್ ನಿರೋಧಕ ತಂತ್ರಾಂಶ ಬೇಕು. ಯಾವುದನ್ನು ಬಳಸಬೇಕು? ಎಲ್ಲಿ ಸಿಗುತ್ತದೆ?
ಉ: ನೀವು Microsoft Security Essentials ಬಳಸಬಹುದು. ಇದು ಬೇಕಿದ್ದಲ್ಲಿ http://bit.ly/cHMEjx ಜಾಲತಾಣಕ್ಕೆ ಭೇಟಿ ನೀಡಿ.

ಕಂಪ್ಯೂತರ್ಲೆ

ಗಣಕವಾಡು

ಡೆಸ್ಕ್‌ಟಾಪ್ ಆದರೇನು ಶಿವ
ಲ್ಯಾಪ್‌ಟಾಪ್ ಆದರೇನು ಶಿವ
ವೈರಸ್‌ಗೆಲ್ಲ ಒಂದೇ ಶಿವ

ಸೋಮವಾರ, ಆಗಸ್ಟ್ 23, 2010

ಗಣಕಿಂಡಿ - ೦೬೬ (ಆಗಸ್ಟ್ ೨೩, ೨೦೧೦)

ಅಂತರಜಾಲಾಡಿ

ಪತ್ರಿಕಾಸಂಗ್ರಹಾಲಯ

ಹಳೆಯ ವಸ್ತುಗಳಿಗೆ, ಅಪರೂಪದ ವಸ್ತುಗಳಿಗೆ, ವಿಜ್ಞಾನ ಮತ್ತು ತಂತ್ರಜ್ಞಾನದ ಮಾದರಿಗಳಿಗೆ ಎಲ್ಲ ವಸ್ತುಸಂಗ್ರಹಾಲಯಗಳಿರುವುದು ತಿಳಿದಿರಬಹುದು. ಪತ್ರಿಕೆಗಳಿಗೆ? ಹೌದು. ಅವುಗಳಿಗೂ ಸಂಗ್ರಹಾಲಯವಿದೆ. ಈ ಸಂಗ್ರಹಾಲಯ ೨,೫೦,೦೦೦ ಚದರ ಅಡಿಗಳಷ್ಟು ವಿಸ್ತಾರವಾಗಿದ್ದು ಅಮೇರಿಕ ದೇಶದ ವಾಶಿಂಗ್ಟನ್ ನಗರದಲ್ಲಿದೆ. ಈ ಸಂಗ್ರಹಾಲಯಕ್ಕೆ ಪೂರಕವಾಗಿರುವ ಜಾಲತಾಣ www.newseum.org. ಇದರಲ್ಲಿ ವಸ್ತುಸಂಗ್ರಹಾಲಯದ ಭೇಟಿಗೆ ಟಿಕೆಟು, ಪುಸ್ತಕಗಳು, ಇನ್ನಿತರೆ ಸಂಬಂಧಿ ವಸ್ತುಗಳು ಎಲ್ಲ ಮಾರಾಟಕ್ಕಿವೆ. ಜೊತೆಗೆ ಪ್ರಪಂಚದ ಬಹುಪಾಲು ದೇಶಗಳ ಖ್ಯಾತ ಪತ್ರಿಕೆಗಳ ಈ ದಿನದ ಮುಖಪುಟವನ್ನೂ ನೋಡಬಹುದು. ಇವುಗಳಲ್ಲದೆ ಪತ್ರಿಕೋದ್ಯವಮಕ್ಕೆ ಸಂಬಂಧಿಸಿದ ಇನ್ನೂ ಹಲವಾರು ಉಪಯುಕ್ತ ಮಾಹಿತಿಗಳು ಇಲ್ಲಿವೆ. ಜನಸಾಮಾನ್ಯರಿಗೆ ಮಾತ್ರವಲ್ಲ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರುಗಳಿಗೂ ತುಂಬ ಉಪಯುಕ್ತ ಜಾಲತಾಣ.

ಡೌನ್‌ಲೋಡ್

ಅಣು ಮಾದರಿ

ರಸಾಯನ ಶಾಸ್ತ್ರದಲ್ಲಿ ಒಂದು ಕಷ್ಟದ ಕೆಲಸವೆಂದರೆ ಪರಮಾಣುಗಳ ಸಂಯೋಜನೆಯಿಂದಾಗುವ ಅಣುಗಳ ರಚನೆಗಳನ್ನು ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವುದು. ಈ ಅಣುಗಳು ಮೂರು ಆಯಾಮದಲ್ಲಿರುತ್ತವೆ. ಅವುಗಳನ್ನು ಎರಡು ಆಯಾಮದಲ್ಲಿ ರಾಸಾಯನಿಕ ಸೂತ್ರದ ಮೂಲಕ ಬರೆಯುತ್ತೇವೆ. ಕೆಲವು ರಾಸಾಯನಿಕಗಳಿಗೆ ಬೇರೆ ಬೇರೆ ರಚನೆಗಳಿದ್ದರೂ ಅವುಗಳ ರಾಸಾಯನಿಕ ಸೂತ್ರ ಒಂದೇ ಆಗಿರುತ್ತದೆ. ಅಣುಗಳನ್ನು ಮೂರು ಆಯಾಮದಲ್ಲಿ ತೋರಿಸುವ ತಂತ್ರಾಂಶ Avogadro. ಇದು ತುಂಬ ಕ್ಲಿಷ್ಟವಾದ ಸಂರಚನೆಗಳನ್ನು ಪರದೆಯ ಮೇಲೆ ಮೂರು ಆಯಾಮದಲ್ಲಿ ಮೂಡಿಸಿ ತೋರಿಸುತ್ತದೆ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/bb86CN. ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಉಪಯುಕ್ತ ತಂತ್ರಾಂಶ ಇದು. ಇದನ್ನು ಬಳಸಬೇಕಾದರೆ ರಸಾಯನಶಾಸ್ತ್ರದಲ್ಲಿ ಪರಿಣತರಾಗಿರಬೇಕು. ಅಣುವಿನಲ್ಲಿರುವ ಪ್ರತಿಯೊಂದು ಪರಮಾಣುವನ್ನೂ ತಿರುಗಿಸಿ, ಎಳೆದು, ತಿರುಚಿ, ಎಲ್ಲ ಮಾಡಬಹುದು, ರಾಸಾಯನಿಕ ಬಂಧಗಳ ಗುಣ ತಿಳಿಯಬಹುದು, ಪರಮಾಣುಗಳ ನಡುವಿನ ಕೋನ ಅಳೆಯಬಹುದು -ಹೀಗೆ ಹಲವು ಉಪಯುಕ್ತ ಸವಲತ್ತುಗಳು ಇದರಲ್ಲಿವೆ.

e - ಸುದ್ದಿ

ಬೊಗಳೆಗೆ ಶಿಕ್ಷೆ

“ನಾನು ಇವತ್ತು ಎಷ್ಟು ವೇಗವಾಗಿ ವಾಹನ ಓಡಿಸಿಕೊಂಡು ಬಂದೆ ಗೊತ್ತಾ” ಎಂದು ಬಡಾಯಿಕೊಚ್ಚಿಕೊಳ್ಳುವವರು ತುಂಬ ಇದ್ದಾರೆ. ಹಾಗೆ ಹೇಳಿಕೊಂಡು ಅದರಿಂದಾಗಿ ಶಿಕ್ಷೆಗೆ ಗುರಿಯಾದ ಸುದ್ದಿ ನಮಗೆ ತಿಳಿದಿಲ್ಲ. ಆದರೆ ಕೆನಡ ದೇಶದಲ್ಲಿ ೧೯ ವರ್ಷದ ಯುವಕನೊಬ್ಬ ಬಡಾಯಿಕೊಚ್ಚಿಕೊಂಡು ಶಿಕ್ಷೆಗೆ ಗುರಿಯಾದ ಸುದ್ದಿ ಬಂದಿದೆ. ಆದರೆ ಆತ ಬಡಾಯಿಕೊಚ್ಚಿಕೊಂಡಿದ್ದು ಸುತ್ತಮುತ್ತಲಿನವರ ಜೊತೆ ಅಲ್ಲ, ಅಂತರಜಾಲದಲ್ಲಿ. ಕಾರುಗಳ ಬಗ್ಗೆ ವಿಚಾರವಿನಿಮಯ ಮಾಡಲು ಇರುವ ಜಾಲತಾಣವೊಂದರಲ್ಲಿ ಆತ “ನಾನು ೪೦ ಕಿ.ಮೀ. ವೇಗದ ಮಿತಿ ಇರುವ ರಸ್ತೆಯಲ್ಲಿ ೧೪೦ ಕಿ.ಮೀ. ವೇಗದಲ್ಲಿ ಕಾರು ಓಡಿಸಿದೆ” ಎಂದು ಬರೆದಿದ್ದ. ಇದನ್ನು ಓದಿದ ಒಬ್ಬಾತ ಪೋಲೀಸರಿಗೆ ದೂರು ನೀಡಿ ಅವರು ಆತನನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಿದರು.

e- ಪದ

ಟ್ವೀಟಪ್ (Tweetup) - ಟ್ವಿಟ್ಟರ್ ಮೂಲಕ ಏರ್ಪಾಡು ಮಾಡಿದ ಸಭೆ ಅಥವಾ ಜನರ ಒಟ್ಟುಗೂಡುವಿಕೆ. ಟ್ವಿಟ್ಟರ್‌ನಲ್ಲಿ ಯಾವಾಗಲು ಮಾತುಕತೆ ನಡೆಸುವ ಸಮಾನಮನಸ್ಕರು ಟ್ವಿಟ್ಟರ್‌ನ ಮೂಲಕವೇ ಎಲ್ಲಿ ಯಾವಾಗ ಸಭೆ ಸೇರುವುದು ಎಂದು ಚರ್ಚಿಸಿ, ನಿರ್ಧರಿಸಿ ಅನಂತರ ಜೊತೆಗೂಡುವುದಕ್ಕೆ ಟ್ವೀಟಪ್ ಎನ್ನುತ್ತಾರೆ. ಈ ಪದ ಈಗ ಆಕ್ಸ್‌ಫರ್ಡ್ ನಿಘಂಟುವನ್ನು ಸೇರಿದೆ.

e - ಸಲಹೆ

ಮಧುಸೂದನ ಶೆಟ್ಟಿ ಅವರ ಪ್ರಶ್ನೆ: ನನಗೆ Microsoft Visual Studio full version ಬೇಕು. ಎಲ್ಲಿ ಸಿಗುತ್ತದೆ?
ಉ: www.microsoft.com/express ಜಾಲತಾಣದಲ್ಲಿ ನಿಮಗೆ ಉಚಿತ ಆವೃತ್ತಿ ಸಿಗುತ್ತದೆ. ಪೂರ್ತಿ ಆವೃತ್ತಿ ಉಚಿತವಾಗಿ ಸಿಗುವುದಿಲ್ಲ. ಅದನ್ನು ಕೊಂಡುಕೊಳ್ಳಬೇಕು.

ಕಂಪ್ಯೂತರ್ಲೆ

ಗಣಕತಜ್ಞನ ಹೆಂಡತಿ ಆತನಿಗೆ ದಬಾಯಿಸಿದಳು “ಸ್ವಲ್ಪ ಆ ನಿಮ್ಮ ಕಂಪ್ಯೂಟರ್ ಬಂದ್ ಮಾಡಿ ಮಗುವಿನ ತೊಟ್ಟಲು ತೂಗಿ”. ಆತ ಏನು ಮಾಡಿದ ಗೊತ್ತೆ? ಗಣಕದ ಸಿ.ಡಿ. ಡ್ರೈವ್‌ಗೆ ಒಂದು ಹಗ್ಗ ಕಟ್ಟಿ ಅದನ್ನು ತೊಟ್ಟಿಲಿಗೆ ಕಟ್ಟಿದ. ಗಣಕದಲ್ಲಿ ಸಿ.ಡಿ.ಡ್ರೈವ್ ಅನ್ನು ನಿರಂತರವಾಗಿ ತೆರದು ಮುಚ್ಚಿ ಮಾಡುವ ಒಂದು ಸಣ್ಣ ಪ್ರೋಗ್ರಾಮ್ ಬರೆದು ಅದನ್ನು ಚಲಾಯಿಸಿದ.

ಸೋಮವಾರ, ಆಗಸ್ಟ್ 16, 2010

ಗಣಕಿಂಡಿ - ೦೬೫ (ಆಗಸ್ಟ್ ೧೬, ೨೦೧೦)

ಅಂತರಜಾಲಾಡಿ

ವಾಟ್? ಏನೇನು?

ನಮ್ಮ ದೇಶದ ಎಲ್ಲ ರಾಜ್ಯಗಳು ಮಾರಾಟ ತೆರಿಗೆಯ ಬದಲಿಗೆ ಮೌಲ್ಯವರ್ಧಿತ ತೆರಿಗೆಯ (VAT) ವಿಧಾನವನ್ನು ಅಳವಡಿಸಿಕೊಂಡಿದ್ದು ನಿಮಗೆ ತಿಳಿದಿರಬಹುದು. ಈ ತೆರಿಗೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಆಯಾ ರಾಜ್ಯಗಳಲ್ಲೂ ಕಾಲಕಾಲಕ್ಕೆ ಈ ತೆರಿಗೆ ಬೇರೆ ಬೇರೆ ವಸ್ತುಗಳಿಗೆ ಬದಲಾಗುತ್ತಲೇ ಇರುತ್ತದೆ. ನೀವು ವ್ಯವಹಾರ ಮಾಡುವವರಾದರೆ ಈ ಬಗ್ಗೆ ನಿಮಗೆ ಮಾಹಿತಿ ಇರತಕ್ಕದ್ದು. ದೇಶಮಟ್ಟದಲ್ಲಿ ವ್ಯಾಪಾರ ಮಾಡುವವರಾದರೆ ಪ್ರತಿಯೊಂದು ರಾಜ್ಯದ ವ್ಯಾಟ್ ದರ ತಿಳಿದಿರಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ವ್ಯಾಟ್ ದರಗಳು, ಕಾಲಕಾಲಕ್ಕೆ ಸರಕಾರವು ಹೊರಡಿಸಿರುವ ಘೋಷಣೆಗಳು, ಇತ್ಯಾದಿ ಎಲ್ಲ ತಿಳಿಸುವ ಜಾಲತಾಣ www.stvat.com. ಇತ್ತೀಚೆಗೆ ಯಾಕೋ ಈ ಜಾಲತಾಣ ಸ್ವಲ್ಪ ನಿದ್ದೆಹೊಡೆದಂತೆ ಅನ್ನಿಸುತ್ತಿದೆ.

ಡೌನ್‌ಲೋಡ್

ಇಲಿಯ ಜಾಡನು ಹಿಡಿದು

ಗಣಕದಲ್ಲಿ ಕೆಲಸ ಮಾಡಿ ಮಾಡಿ ಸುಸ್ತಾದಾಗ ಸ್ವಲ್ಪ ಮೌಸ್ ಕಡೆಗೆ ಗಮನ ನೀಡೋಣ. ನೀವು ಕೆಲಸ ಮಾಡುವಾಗ ಮೌಸ್ ಅನ್ನು ಎಲ್ಲೆಲ್ಲ ಓಡಾಡಿಸಿದ್ದೀರಾ? ಯಾವ ಯಾವ ಜಾಗದಲ್ಲಿ ಎಷ್ಟು ಹೊತ್ತು ಅದನ್ನು ಅಲ್ಲಾಡಿಸದೆ ಹಿಡಿದಿದ್ದೀರಾ? ಇವನ್ನೆಲ್ಲ ಒಂದು ಸರಳ ರೇಖಾ ಚಿತ್ರದ ರೂಪದಲ್ಲಿ ಸೆರೆಹಿಡಿದು ತೊರಿಸವ ತಂತ್ರಾಂಶ  IOGraph. ಇದು ತಯಾರಿಸಿ ಕೊಡುವ ಚಿತ್ರ ಒಂದು ನವ್ಯ ಚಿತ್ರದಂತೆ ಕಂಡುಬಂದರೆ ಅದರಲ್ಲಿ ಆಶ್ಚರ್ಯವಿಲ್ಲ. ಅಥವಾ ನಿಮ್ಮ ಕಣ್ಣಿಗೆ ಅದು ಯಾವನೋ ಒಬ್ಬ ಪೋರ ಸುಮ್ಮನೆ ಅಡ್ಡಾದಿಡ್ಡಿ ಗೀಚಿದಂತೆ ಕಂಡುಬಂದರೂ ಬರಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ iographica.com.

e - ಸುದ್ದಿ

ಆಟದಿಂದ ಕಣ್ಣು ಗುಣಮುಖ

ಗಣಕ ಮತ್ತು ಗಣಕಾಧಾರಿತ ಆಟದ ಸಾಧನಗಳನ್ನು ಕೈಯಲ್ಲಿ ಹಿಡಿದು ಗಂಟೆಗಟ್ಟಳೆ ಆಡುವ ಮಕ್ಕಳನ್ನು ಗದರುವುದು ಸಹಜ. ಹೀಗೆ ಆಡುವುದರಿಂದ ದೋಷಪೂರಿತ ಕಣ್ಣನ್ನು ಸರಿಪಡಿಸಿಕೊಂಡ ಉದಾಹರಣೆ ಕೇಳಿದ್ದೀರಾ? ಬೆನ್ ಮಿಖೈಲಿಸ್ ಎಂಬ ಆರು ವರ್ಷದ ಹುಡುಗನ ಒಂದು ಕಣ್ಣಿನ ದೃಷ್ಟಿ ಶಕ್ತಿ ಕುಂಠಿತವಾಗುತ್ತಲೇ ಇತ್ತು. ಇದಕ್ಕೆ ಪರಿಹಾರವಾಗಿ ನೈನ್‌ಟೆನ್ಡು ಎಂಬ ಆಟದ ಸಾಧನದಲ್ಲಿ ದಿನಕ್ಕೆ ಎರಡು ಘಂಟೆಗಳ ಕಾಲ ಆಟ ಆಡಬೇಕು ಎಂದು ವೈದ್ಯರು ಸೂಚಿಸಿದರು. ಸರಿಯಾಗಿರುವ ಕಣ್ಣಿಗೆ ಆಡುವಾಗ ಪಟ್ಟಿ ಕಟ್ಟಿಕೊಳ್ಳಬೇಕು ಎಂದೂ ಜೊತೆಗೆ ಸೂಚಿಸಿದ್ದರು. ಹೀಗೆ ಆಡಿ ಆಡಿ ಆತನ ಕಣ್ಣಿನ ದೃಷ್ಟಿ ಸುಧಾರಿಸಿತು. ಆಟವೆಲ್ಲವೂ ಕೆಟ್ಟದಲ್ಲ.
 
e- ಪದ


ನಿಷ್ಪಕ್ಷ ಅಂತರಜಾಲ (net neutrality, Internet neutrality) - ಅಂತರಜಾಲವು ಎಲ್ಲ ನಮೂನೆಯ ನಿಯಮ ನಿರ್ಬಂಧಗಳಿಂದ ಮುಕ್ತವಾಗಿರಬೇಕು ಎಂಬ ಚಿಂತನೆ. ಅಂತರಜಾಲದ ಮೇಲೆ ಸರಕಾರ ಮತ್ತು ಅಂತರಜಾಲ ಸಂಪರ್ಕ ಸೇವೆ ನೀಡುವವರು ಕೆಲವೊಮ್ಮೆ ಕೆಲವು ನಮೂನೆಯ ನಿರ್ಬಂಧಗಳನ್ನು ಹೇರುತ್ತಾರೆ. ಉದಾಹರಣೆಗೆ ಇತ್ತೀಚೆಗೆ ಪಾಕಿಸ್ತಾನ ಸರಕಾರವು ಫೇಸ್‌ಬುಕ್ ಜಾಲತಾಣವನ್ನು ಆ ದೇಶದಲ್ಲಿ ನಿರ್ಬಂಧಿಸಿತ್ತು.

e - ಸಲಹೆ

ಆದರ್ಶ ಅವರ ಪ್ರಶ್ನೆ: ನಾನು ಕೆಲವು ಸಿ.ಡಿ. ಮತ್ತು ಡಿ.ವಿ.ಡಿ.ಗಳಲ್ಲಿ ಈಗಾಗಲೇ ಹಲವು ಮಾಹಿತಿ ಸೇರಿಸಿದ್ದೇನೆ, ಹಾಡುಗಳನ್ನು ಬರೆದಿದ್ದೇನೆ. ಅವುಗಳಲ್ಲಿ ಇನ್ನೂ ಖಾಲಿ ಜಾಗ ಇದೆ. ಅವುಗಳಿಗೆ ಇನ್ನೂ ಮಾಹಿತಿ ಸೇರಿಸಬಹುದೇ?
ಉ: ಸಾಧ್ಯ. ಆದರೆ ಅದಕ್ಕೆ ನೀವು ಸಿ.ಡಿ. ಅಥವಾ ಡಿ.ವಿ.ಡಿ.ಗೆ  ಮಾಹಿತಿ ಸೇರಿಸಿದಾಗ ಕೊನೆಯಲ್ಲಿ session close ಮಾಡಿರಬಾರದು.

ಕಂಪ್ಯೂತರ್ಲೆ


ನಿಧಾನ ಸಂಪರ್ಕವಿರುವಾಗ ಅಂತರಜಾಲದಿಂದ ದೊಡ್ಡ ಕಡತಗಳನ್ನು ಡೌನ್‌ಲೋಡ್ ಮಾಡುವಾಗ ಅದು ಪೂರ್ತಿಯಾಗಲು ಕಾಯುತ್ತಿರುವಾಗ ನೀವು ಏನೇನು ಮಾಡಬಹುದು? ಕೆಳಗೆ ನೀಡಿರುವವುಗಳನ್ನು ಪಟ್ಟಿ ಮಾಡಬಹುದು:-
·    ದೇವೇಗೌಡರು ಹೇಳಿರುವ ಎಲ್ಲ ಬೈಗುಳಗಳು
·    ಬಂಗಾರಪ್ಪನವರು ಬದಲಿಸಿರುವ ಎಲ್ಲ ಪಕ್ಷಗಳ ಹೆಸರುಗಳು
·    ಯಡ್ಯೂರಪ್ಪನವರು ಘೋಷಿಸಿ ನಂತರ ಬದಲಾಯಿಸಿದ ಅಥವಾ ಹಿಂದಕ್ಕೆ ಪಡೆದ ತೀರ್ಮಾನಗಳು
·    ಶಂಕುಸ್ಥಾಪನೆ ಮಾಡಿ ನಂತರ ಅರ್ಧಕ್ಕೆ ನಿಂತ ಅಥವಾ ಪ್ರಾರಂಭವೇ ಆಗಿರದ ಸರಕಾರಿ ಯೋಜನೆಗಳು
·    ಮತ್ತೆ ಮತ್ತೆ ಓದಿದರೂ ನಗು ಬಾರದ ಕಂಪ್ಯೂತರ್ಲೆ ಜೋಕುಗಳು