ಅಂತರಜಾಲದಲ್ಲಿ ಫೋಟೋಶಾಪ್
ಹೆಚ್ಚಿನ ಮಂದಿ ಚಿತ್ರ ರಚಿಸಲು, ಛಾಯಾಚಿತ್ರಗಳನ್ನು ಸಂಪಾದಿಸಲು ಬಳಸುವುದು ಅಡೋಬ್ನವರ ಫೋಟೋಶಾಪ್ ತಂತ್ರಾಂಶ. ಇದು ಬಲು ದುಬಾರಿ ತಂತ್ರಾಂಶ. ಆದುದರಿಂದಲೇ ಬಹುಪಾಲು ಭಾರತೀಯರು ಬಳಸುತ್ತಿರುವುದು ಅಧಿಕೃತವಾಗಿ ಖರೀದಿ ಮಾಡದ, ಅವರಿವರಿಂದ ನಕಲು ಮಾಡಿದ ತಂತ್ರಾಂಶ ಪ್ರತಿಗಳನ್ನು. ಕಾನೂನು ಪ್ರಕಾರ ಇದು ಅಪರಾಧ. ಕಾನೂನನ್ನು ಮುರಿಯದೆ ಅಡೋಬ್ ಫೋಟೋಶಾಪ್ ಬಳಸಲು ಈಗ ಅವರೇ ಒಂದು ಸೌಕರ್ಯ ನೀಡಿದ್ದಾರೆ. ಅದುವೇ www.photoshop.com ಎಂಬ ಜಾಲತಾಣ. ಫೋಟೋಶಾಫ್ ತಂತ್ರಾಂಶವನ್ನು ನಿಮ್ಮ ಗಣಕದಲ್ಲಿ ಇನ್ಸ್ಟಾಲ್ ಮಾಡಿ ನೀವು ಏನೇನು ಮಾಡಬಹುದೋ ಅವುಗಳಲ್ಲಿ ಅತೀ ಅಗತ್ಯವಿರುವ ಬಹುಪಾಲು ಕೆಲಸಗಳನ್ನು ಈ ತಾಣವನ್ನು ಬಳಸಿ ಮಾಡಬಹುದು. ನಿಮ್ಮ ಕೆಲಸವನ್ನು ಜಾಲತಾಣದಲ್ಲೇ ಸಂಗ್ರಹಿಸಿಡಲು ಸ್ವಲ್ಪ ಜಾಗವನ್ನೂ ನಿಡುತ್ತಿದ್ದಾರೆ. ಇವೆಲ್ಲ ಸಂಪೂರ್ಣ ಉಚಿತ.
ಡೌನ್ಲೋಡ್
ವಿಂಡೋಸ್ನ ಹೊಸ ಆವೃತ್ತಿ
ಮೈಕ್ರೋಸಾಫ್ಟ್ ವಿಂಡೋಸ್ ಬಳಸದವರಾರು? ಬಹುಪಾಲು ಜನ ಬಳಸುವುದು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು (ಆಪರೇಟಿಂಗ್ ಸಿಸ್ಟಮ್). ವಿಂಡೋಸ್ನ ಹೊಸ ಆವೃತ್ತಿ, ವಿಂಡೋಸ್ ೭, ಸದ್ಯಕ್ಕೆ ಪ್ರಯೋಗಾತ್ಮಕವಾಗಿ ಲಭ್ಯವಿದೆ. ಇದು ಬೇಕಿದ್ದರೆ bit.ly/QIK1h ತಾಣಕ್ಕೆ ಭೇಟಿ ನೀಡಿ. ವಿಂಡೋಸ್ ೭ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ. ಈಗ ಲಭ್ಯವಿರುವ ಪ್ರಯೋಗಾತ್ಮಕ ಆವೃತ್ತಿ ಮುಂದಿನ ವರ್ಷದ ಮಾರ್ಚ್ ತಿಂಗಳ ತನಕ ಮಾತ್ರ ಸರಿಯಾಗಿ ಕೆಲಸ ಮಾಡುತ್ತದೆ. ಆದುದರಿಂದ ಇದನ್ನು ನಿಮ್ಮ ಪ್ರಮುಖ ಕಾರ್ಯಾಚರಣ ವ್ಯವಸ್ಥೆ ಆಗಿ ಬಳಸಬೇಡಿ. ಇನ್ನು ಇನ್ಸ್ಟಾಲ್ ಮಾಡಿಕೊಂಡು ಇದರಲ್ಲಿ ಕನ್ನಡವನ್ನು ಯಾವ ರೀತಿ ಅಳವಡಿಸಿದ್ದಾರೆ ಎಂದು ಪರೀಕ್ಷಿಸಿ ತಪ್ಪುಗಳಿದ್ದಲ್ಲಿ ಕೂಡಲೆ ಮೈಕ್ರೋಸಾಫ್ಟ್ ಕಂಪೆನಿಗೆ ವರದಿ ಮಾಡಿ. ಅಂತಿಮ ಆವೃತ್ತಿ ಬಂದ ನಂತರ ಕನ್ನಡವನ್ನು ಅಳವಡಿಸಿದುದರಲ್ಲಿ ತಪ್ಪುಗಳಿದ್ದಲ್ಲಿ ದೂರುವುದಕ್ಕಿಂತ ಈಗಲೇ ಪರೀಕ್ಷಿಸಿ ನೋಡುವುದು ಒಳ್ಳೆಯದು.
e - ಸುದ್ದಿ
ದರೋಡೆಗಾರರ ಪತ್ತೆ ಹಚ್ಚಿದ ಗೂಗ್ಲ್ ಬೀದಿ ನೋಟ
e- ಪದ
ಕುಕೀ (cookie) -ಮತ್ತೆ ಮತ್ತೆ ಭೇಟಿ ನೀಡುವ ಗ್ರಾಹಕನನ್ನು ಗುರುತಿಸಲು ಅಂತರಜಾಲ ತಾಣಗಳು ಗ್ರಾಹಕನ ಗಣಕದಲ್ಲಿ ಬರೆದಿಡುವ ಕಿರು ಮಾಹಿತಿ. ಇದನ್ನು ಬಳಸುವುದರಿಂದ ಜಾಲತಾಣಗಳಲ್ಲಿ ಪದೇ ಪದೇ ಲಾಗಿನ್ ಆಗುವ ಅಗತ್ಯ ಬೀಳುವುದಿಲ್ಲ. ಅಷ್ಟು ಮಾತ್ರವಲ್ಲ ನಿಮ್ಮ ಸಂಪೂರ್ಣ ವಿವರವನ್ನು ಮತ್ತೆ ಮತ್ತೆ ದಾಖಲಿಸುವ ಅಗತ್ಯವೂ ಬೀಳುವುದಿಲ್ಲ. ಆದರೆ ಕೆಲವು ಪೋಕರಿ ಜಾಲತಾಣಗಳು ಕುಕೀ ಬಳಸಿ ನೀವು ಬೇರೆ ಯಾವ ತಾಣಗಳಿಗೆ ಭೇಟಿ ನೀಡುತ್ತೀರಿ, ನಿಮ್ಮ ವೀಕ್ಷಣೆಯ ಪರಿ ಯಾವುದು, ಇತ್ಯಾದಿ ಎಲ್ಲ ದಾಖಲಿಸಿಕೊಳ್ಳುತ್ತವೆ. ಆಗಾಗ ನಿಮ್ಮ ಗಣಕದಲ್ಲಿ ಸಂಗ್ರಹವಾಗಿರುವ ಕುಕೀಗಳನ್ನು ಅಳಿಸುವುದು ಒಳ್ಳೆಯದು.
e - ಸಲಹೆ
ಗೂಗ್ಲ್ ಬಳಸಿ ಮಾಹಿತಿಯನ್ನು ಹುಡುಕುವಾಗ ಹುಡುಕಿದ ಮಾಹಿತಿಗೆ ಸಂಬಂಧಿಸಿದ ಹತ್ತು ಜಾಲತಾಣಗಳನ್ನು ಮಾತ್ರ ಒಂದು ಪುಟದಲ್ಲಿ ನೀಡುವುದನ್ನು ಗಮನಿಸಿದ್ದೀರಾ? ಮುಂದಿನ ಹತ್ತು ಜಾಲತಾಣಗಳ ಕೊಂಡಿಗಳನ್ನು ವೀಕ್ಷಸಲು ಮುಂದಿನ ಪುಟಕ್ಕೆ ಹೋಗಲು Next ಎಂಬುದನ್ನು ಕ್ಲಿಕ್ ಮಾಡಬೇಕು. ಹೀಗೆ ಮಾಡುತ್ತ ಹೋಗುವ ಬದಲು, location bar ನಲ್ಲಿ ಗೂಗ್ಲ್ ನೀಡುವ ಉದ್ದ ಕೊಂಡಿಯ ಮುಂದೆ &num=100 ಎಂದು ಸೇರಿಸಿ Enter ಕೀಲಿಯನ್ನು ಒತ್ತಿರಿ. ಈಗ ಪ್ರತಿ ಪುಟದಲ್ಲಿ ೧೦೦ ಜಾಲತಾಣಗಳ ಕೊಂಡಿಯನ್ನು ಗೂಗ್ಲ್ ನೀಡುತ್ತದೆ.
ಕಂಪ್ಯೂತರ್ಲೆ
ಕೋಲ್ಯ ಕಂಪ್ಯೂಟರ್ ಕೊಂಡುಕೊಳ್ಳಲು ಅಂಗಡಿಗೆ ಹೋದ. ಅಂಗಡಿಯಾತ ಹೇಳಿದ “ಈ ಕಂಪ್ಯೂಟರ್ ನಿಮ್ಮ ಕೆಲಸವನ್ನು ೫೦% ರಷ್ಟು ಕಡಿಮೆ ಮಾಡುತ್ತದೆ.” ಕೋಲ್ಯ ಹೇಳಿದ “ಹಾಗಾದರೆ ಎರಡು ಕಂಪ್ಯೂಟರ್ ಪ್ಯಾಕ್ ಮಾಡು. ಆಗ ನಾನು ಯಾವ ಕೆಲಸವನ್ನೂ ಮಾಡಬೇಕಾಗಿರುವುದಿಲ್ಲ.”