ಪಿಯುಸಿ ನಂತರ ಮುಂದೆ ಸೇರಲು ಕಾಲೇಜುಗಳ ವಿವರ ಇರುವ ಜಾಲತಾಣದ ವಿಳಾಸ ಕಳೆದ ವಾರ ಕೊಡಲಾಗಿತ್ತು. ಈಗಷ್ಟೇ ಅದೇ ಮಾದರಿಯ ಆದರೆ ಇನ್ನಷ್ಟು ಹೆಚ್ಚು ಮಾಹಿತಿಗಳ ಮತ್ತೊಂದು ಜಾಲತಾಣ ಸೃಷ್ಟಿಯಾಗಿದೆ. ಇದರ ವಿಳಾಸ www.colkonnect.com ಬಹುಶಃ ಇವರು ಗೂಗ್ಲ್‌ನವರಿಂದ ತುಂಬ ಪ್ರಭಾವಿತರಾಗಿರಬೇಕು. ಯಾಕೆಂದರೆ ಬೀಟಾ (Beta) ಎಂದು ಹಾಕಿಕೊಂಡಿದ್ದಾರೆ. ಇದರಲ್ಲಿ ಕರ್ನಾಟಕದ ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಮಾತ್ರ ಇದೆ. ಈ ತಾಣದ ವೈಶಿಷ್ಟ್ಯವೆಂದರೆ ಕಾಲೇಜುಗಳ ರ್ಯಾಂಕಿಂಗ್, ಅಂದರೆ ಕರ್ನಾಟಕದ ಯಾವ ಕಾಲೇಜು ಯಾವ ಸ್ಥಾನದಲ್ಲಿದೆ, ಹೋದ ವರ್ಷಗಳಲ್ಲಿ ಇಲ್ಲಿಗೆ ಸೇರಬೇಕಾದರೆ ಸಿಇಟಿ ಪರೀಕ್ಷೆಯಲ್ಲಿ ಯಾವ ಸ್ಥಾನ ಬಂದಿರಬೇಕಿತ್ತು, ಇತ್ಯಾದಿ ಮಾಹಿತಿಗಳಿವೆ. ಒಂದು ಕೋರ್ಸು ಮಾಡಲು ಎಷ್ಟು ಖರ್ಚು ಆಗಬಹುದು ಎಂಬ ಲೆಕ್ಕ ಮಾಡುವ ಸೌಲಭ್ಯವೂ ಇದೆ.
ಡೌನ್‌ಲೋಡ್
ಛಾಯಾಚಿತ್ರದಿಂದ ಕಲಾಚಿತ್ರ
ನಿಮ್ಮ ಛಾಯಾಚಿತ್ರವನ್ನು ಕಲಾಚಿತ್ರವಾಗಿ ಪರಿವರ್ತಿಸಬೇಕೇ? ಅದಕ್ಕಾಗಿ ಉತ್ತಮ ಕಲಾವಿದರನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. www.fotosketcher.com ತಾಣದಿಂದ ಫೋಟೋಸ್ಕೆಚರ್ ಎಂಬ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ನಿಮ್ಮ ಛಾಯಾಚಿತ್ರವನ್ನು ಅದಕ್ಕೆ ನೀಡಿ ಕೆಲವು ಆಯ್ಕೆಗಳನ್ನು ಮಾಡಿಕೊಂಡು ಆದೇಶ ನೀಡಿದರೆ ನಿಮ್ಮ ಕಲಾಚಿತ್ರ ಸಿದ್ಧ. ಪೆನ್ಸಿಲ್, ಶಾಯಿ ಅಥವಾ ಬಣ್ಣದ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಹುಡುಗಿಯರು ಆರ್ಕುಟ್‌ನಂತಹ ತಾಣಗಳಲ್ಲಿ ತಮ್ಮ ಛಾಯಾಚಿತ್ರಗಳನ್ನು ಹಾಕುವುದು ಅಷ್ಟು ಒಳ್ಳೆಯದಲ್ಲ. ಅವರು ಈ ತಂತ್ರಾಂಶವನ್ನು ಬಳಸಿ ಛಾಯಾಚಿತ್ರವನ್ನು ಕಲಾಚಿತ್ರವನ್ನಾಗಿಸಿ ಹಾಕಬಹುದು.
e - ಸುದ್ದಿ
ಬುದ್ಧ ನಕ್ಕ

e- ಪದ
ಬ್ಲೂಟೂತ್ (Bluetooth) - ನಿಸ್ತಂತು (ವಯರ್ಲೆಸ್) ತಂತ್ರಜ್ಞಾನ ಮೂಲಕ ತಂತಿ ಇಲ್ಲದೆ ಸಂಪರ್ಕ ಸಾಧಿಸುವ ಇನ್ನೊಂದು ವಿಧಾನ. ಇದನ್ನು ಸಾಮಾನ್ಯವಾಗಿ ಹೆಡ್‌ಫೋನ್‌ಗಳನ್ನು ಮೊಬೈಲ್ ಫೋನಿಗೆ ಜೋಡಿಸಲು ಬಳಸುತ್ತಾರೆ. ಗಣಕದಿಂದ ಸಂಪರ್ಕ ಸಾಧಿಸಲೂ ಬಳಸಬಹುದು. ಇದರ ವ್ಯಾಪ್ತಿ ಮತ್ತು ಮಾಹಿತಿಯ ಸಾರಿಗೆಯ ಶಕ್ತಿ ತುಂಬ ಕಡಿಮೆ. ಒಂದು ಮೊಬೈಲ್ ಫೋನಿನಿಂದ ಇನ್ನೊಂದು ಮೊಬೈಲ್ ಫೋನಿಗೆ ಬ್ಲೂಟೂತ್ ಮೂಲಕ ಒಂದು ಛಾಯಾಚಿತ್ರ ಕಳುಹಿಸಲು ಸುಮಾರು ಎರಡರಿಂದ ಐದಾರು ನಿಮಿಷ ಹಿಡಿಯುವ ಸಾಧ್ಯತೆಗಳಿವೆ. ಇತ್ತೀಚೆಗಿನ ದಿನಗಳಲ್ಲಿ ಕಾರಿನಲ್ಲಿ ಜೋಡಿಸುವ ಸಂಗೀತ ಉಪಕರಣಗಳಲ್ಲೂ ಈ ಸೌಲಭ್ಯ ದೊರಕುತ್ತಿದೆ.
e - ಸಲಹೆ
ಪೇಜ್‌ಮೇಕರ್ ಬಳಸಿ ಕನ್ನಡದ ಕಡತಗಳನ್ನು ತಯಾರಿಸುವಾಗ ಒಂದು ಸಮಸ್ಯೆ ಕಾಡುತ್ತದೆ. ಅದೇನೆಂದರೆ ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ತಯಾರಿಸಿದ ಫೈಲುಗಳನ್ನು ಆಯಾತ ಮಾಡುವ ಸಮಸ್ಯೆ. ವರ್ಡ್‌ನಲ್ಲಿ ಬೆರಳಚ್ಚು ಮಾಡಿ DOC ಆಗಿ ಉಳಿಸಿದರೆ ಅದನ್ನು ಪೇಜ್‌ಮೇಕರ್ ಗುರುತಿಸುವುದಿಲ್ಲ. RTF ಆಗಿ ಉಳಿಸಿದರೆ ಪೇಜ್‌ಮೇಕರ್ ಗುರುತಿಸುತ್ತದೆ. ಆದರೆ ಆಯಾತ ಮಾಡಿದಾಗ ಸರಿಯಾಗಿ ಬರುವುದಿಲ್ಲ. ಇದಕ್ಕೆ ಪರಿಹಾರವೆಂದರೆ ವರ್ಡ್‌ನಲ್ಲಿರುವ ಮಾಹಿತಿಯನ್ನು ನಕಲು ಮಾಡಿ ವರ್ಡ್‌ಪ್ಯಾಡ್‌ಗೆ ಅಂಟಿಸಿ ಅನಂತರ ಅದನ್ನು RTF ಫೈಲ್ ಆಗಿ ಉಳಿಸುವುದು. ವರ್ಡ್‌ಪ್ಯಾಡ್‌ನಿಂದ RTF ಆಗಿ ಉಳಿಸಿದ ಕನ್ನಡದ ಫೈಲನ್ನು ಪೇಜ್‌ಮೇಕರ್ ಯಾವುದೇ ಕಿರಿಕಿರಿಯಿಲ್ಲದೆ ಆಯಾತ ಮಾಡಿಕೊಳ್ಳುತ್ತದೆ.
ಕಂಪ್ಯೂತರ್ಲೆ
ತರ್ಲೆ ಅನುವಾದಗಳು
ಗಣಕದಲ್ಲಿ ಬಳಸುವ ಇಂಗ್ಲಿಶ್ ಪದಗಳನ್ನು ಕನ್ನಡಕ್ಕೆ ಅನುವಾದ ಮಾಡಿದಾಗ-
Save = ಕಾಪಾಡಿ
Save as = ಈ ರೀತಿ ಕಾಪಾಡಿ
Help = ನನ್ನನ್ನು ಕಾಪಾಡಿ
Save and Exit = ಕಾಪಾಡಿ ಮತ್ತು ತೊಲಗಿ
Open = ಬಿಚ್ಚು
Bold = ಧೈರ್ಯವಂತ
Bluetooth = ನೀಲಿಹಲ್ಲು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ