ಬುಧವಾರ, ಡಿಸೆಂಬರ್ 30, 2009

ಗಣಕಿಂಡಿ - ೦೩೨ (೨೮, ೨೦೦೯)

ಅಂತರಜಾಲಾಡಿ

ಭರವಸೆಯಾಗಣಿ


ಕೋಪನ್‌ಹಾಗನ್‌ನಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳ ನಾಯಕರುಗಳು ಸೇರಿ ಜಾಗತಿಕ ತಾಪಮಾನ ಹೆಚ್ಚಳವನ್ನು ಕಡಿಮೆ ಮಾಡುವ ಬಗ್ಗೆ ಚರ್ಚಿಸಿದ್ದು ನಿಮಗೆ ಗೊತ್ತಿರಬಹುದು. ಈ ಚರ್ಚೆ ಕೊನೆಗೆ ಯಾವುದೇ ನಿರ್ದಿಷ್ಟ ತೀರ್ಮಾನಕ್ಕೆ ಬರದೆ ಕೊನೆಗೊಂಡಿದ್ದೂ ತಿಳಿದಿರಬಹುದು. ಈ ನಾಯಕರು ಹೀಗೆಯೇ ಮಾಡಬಹುದು ಎಂದು ಹಲವು ಮಂದಿ ಪರಿಸರವಾದಿಗಳು, ವಿಜ್ಞಾನಿಗಳು, ಚಿಂತಕರು ಮೊದಲೇ ಊಹಿಸಿದ್ದರು. ಈ ನಾಯಕರುಗಳೆಂದರೆ ಯಾರು? ಜನಸಾಮಾನ್ಯರು ಆರಿಸಿ ಕಳಿಸಿದವರು ತಾನೆ? ನಾಯಕರುಗಳ ಮೇಲೆ ಜನಸಾಮಾನ್ಯರು ಒತ್ತಡ ಹೇರಿದರೆ
ಅವರು ಕೆಲಸ ಮಾಡಿಯೇ ಮಾಡುತ್ತಾರೆ. ಹೀಗೆ ಜನಸಾಮಾನ್ಯರೆಲ್ಲ ಸೇರಿ ಜಗತ್ತನ್ನು ವಿನಾಶದಿಂದ ಉಳಿಸಬೇಕೆಂಬ ಚಿಂತನೆಯಿಂದ ಕೋಪನ್‌ಹಾಗನ್ ಶಿಖರ ಸಮ್ಮೇಳನದ ಸಮಯಕ್ಕೆ ಸರಿಯಾಗಿ ನಿರ್ಮಿಸಿದ ಜಾಲತಾಣ ಹೋಪನ್‌ಹಾಗನ್. ಇದರ ವಿಳಾಸ - hopenhagen.org. ಇಲ್ಲಿ ನಿಮ್ಮ ಹೆಸರು ನೋಂದಾಯಿಸಿ ಈ ಚಳವಳಿಯಲ್ಲಿ ನೀವೂ ಜೊತೆಗೂಡಬಹುದು. 

ಡೌನ್‌ಲೋಡ್
ಗೂಢಲಿಪಿಕಾರಕ

ನಿಮ್ಮ ಗಣಕದ ಹಾರ್ಡ್‌ಡಿಸ್ಕ್‌ನಲ್ಲಾಗಲಿ, ಯುಎಸ್‌ಬಿ ಡ್ರೈವ್‌ನಲ್ಲಾಗಲಿ ಸಂಗ್ರಹಿಸಿಟ್ಟ ಮಾಹಿತಿಯನ್ನು ಇತರರು ಓದುವ ಸಾಧ್ಯತೆಗಳಿವೆ. ಅಮೂಲ್ಯ ಮಾಹಿತಿಯನ್ನು ಇತರರು ಓದದಂತೆ ರಕ್ಷಿಸಿಡಬೇಕಾದರೆ ಅದನ್ನು ಗೂಢಲಿಪೀಕರಿಸಿಡಬೇಕು. ಅಂದರೆ ಮಾಹಿತಿಯನ್ನು ಸಂಗ್ರಹಿಸಿಡುವ ಸಂಕೇತೀಕರಣದಲ್ಲಿ ಬದಲಾವಣೆ ಮಾಡಬೇಕು. ಹೀಗೆ ಬದಲಾವಣೆ ಮಾಡಿದ ಮಾಹಿತಿಯನ್ನು ಓದಬೇಕಾದರೆ ಹಿಂದಿನ ವಿಧಾನಕ್ಕೆ ಬದಲಿಸಿ ಓದಬೇಕು. ಈ ರೀತಿ ಮಾಡಲು ಒಂದು ಮುಕ್ತ ತಂತ್ರಾಂಶ ಲಭ್ಯವಿದೆ. ಅದರ ಹೆಸರು TrueCrypt. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ - truecrypt.org. ಇದು ವಿಂಡೋಸ್ ಮಾತ್ರವಲ್ಲದೆ ಲೈನಕ್ಸ್‌ನಲ್ಲೂ ಕೆಲಸ ಮಾಡುತ್ತದೆ.

e - ಸುದ್ದಿ
ಮಗು ಸಾಯುತ್ತಿದ್ದಾಗ ಟ್ವಿಟ್ಟರ್ ಮಾಡುತ್ತಿದ್ದ ತಾಯಿ!
ಟ್ವಿಟ್ಟರ್‌ನ ಅತಿರೇಕಗಳ ಉದಾಹರಣೆಗೆ ಮತ್ತೊಂದು ಸೇರ್ಪಡೆ. ಫ್ಲಾರಿಡಾವಾಸಿ ತಾಯಿಯೊಬ್ಬಳು ತನ್ನ ಎರಡು ವರ್ಷದ ಮಗು ಈಜುಕೊಳದಲ್ಲಿ ಬಿದ್ದಾಗ ಟ್ವಿಟ್ಟರ್‌ನಲ್ಲಿ ಕಾಲ ಕಳೆಯುತ್ತಿದ್ದಳು. ಹಾಗೆಂತ ಹೇಳಿ ಆಕೆ ತನ್ನ ಮಗುವನ್ನು ಉಳಿಸಲು ಪ್ರಯತ್ನಿಸಲಿಲ್ಲ ಎಂದುಕೊಳ್ಳಬೇಡಿ. ಎರಡು ವರ್ಷದ ಮಗು ಈಜುಕೊಳದ ಪಕ್ಕದಲ್ಲಿ ಓಡಾಡುತ್ತಿದ್ದಾಗ ಮಗುವಿನ ಮೇಲೆ ಕಣ್ಣಿಡುವುದು ಬಿಟ್ಟು ಟ್ವೀಟ್ ಮಾಡುತ್ತಿದ್ದುದು ಆಕೆಯ ತಪ್ಪು ಎಂದು ಜಾಲನಾಗರಿಕರೆಲ್ಲ ಬೊಬ್ಬೆಹಾಕುತ್ತಿದ್ದಾರೆ. ಆಕೆ ತನ್ನ ಮಗು ಈಜುಕೊಳದಲ್ಲಿ ಬಿದ್ದುದನ್ನೂ ಟ್ವಿಟ್ಟರಿನಲ್ಲಿ ದಾಖಲಿಸಿದ್ದಾಳೆ. ಈಗಷ್ಟೆ ನನ್ನ ಮಗು ಈಜುಕೊಳದಲ್ಲಿ ಬಿದ್ದಿದೆ. ದಯವಿಟ್ಟು ನನ್ನ ಮಗುವಿನ ಪರವಾಗಿ ದೇವರಲ್ಲಿ ಬೇಡಿಕೊಳ್ಳಿ ಎಂದು ತನ್ನ ಹಿಂಬಾಲಕರಲ್ಲಿ ಆಕೆ ಕೇಳಿಕೊಂಡಿದ್ದಾಳೆ. ಅಂದರೆ ಮಗುವನ್ನು ಎತ್ತಿ ತಂದ ನಂತರ ಪ್ರಥಮೋಪಚಾರ ಮಾಡಿ, ಪೋಲೀಸು ಮತ್ತು ಅಂಬುಲೆನ್ಸ್‌ಗೆ ಕರೆ ನೀಡಿ, ಅವರು ಬರಲು ಕಾಯುತ್ತಿದ್ದಾಗ ಆಕೆ ಈ ರೀತಿ ಬರೆದಿದ್ದಾಳೆ. ಏನಿದ್ದರೂ ಆಕೆಯ ಪರ ಮತ್ತು ವಿರೋಧವಾಗಿ ಅಂತರಜಾಲದಲ್ಲಿ ವಾಗ್ವಾದಗಳು ನಡೆದವು.  

e- ಪದ

ಕಾಪ್ಚ (CAPTCHA=Completely Automated Public Turing test to tell Computers and Humans Apart) -ಅಂತರಜಾಲತಾಣಗಳಲ್ಲಿ ನೋಂದಾಯಿಸಿಕೊಳ್ಳುವಾಗ ಒಂದು ಚಿತ್ರದ ರೂಪದಲ್ಲಿ ತೋರಿಸುವ ಹಾಗೂ ಅದನ್ನು ಅಲ್ಲೇ ನೀಡಿರುವ ಬಾಕ್ಸ್‌ನಲ್ಲಿ ಬೆರಳಚ್ಚು ಮಾಡಬೇಕಾಗಿರುವ ಪದಗುಚ್ಛ. ಇದು ಜಾಲತಾಣಗಳಲ್ಲಿ ಮನುಷ್ಯರೇ ನೋಂದಾಯಿಸಿಕೊಳ್ಳತಕ್ಕದ್ದು ಎಂಬ ನಿಯಮವನ್ನು ಜಾರಿಗೆ ತರಲು ಮಾಡಿರುವ ಉಪಾಯ. ಜಾಲತಾಣಗಳಲ್ಲಿ ಸ್ವಯಂಚಾಲಿತ ತಂತ್ರಾಂಶಗಳ ಮೂಲಕ ಗಲೀಜು ಜಾಲತಾಣಗಳ ಜಾಹೀರಾತು ಹಾಕುವುದನ್ನು ತಪ್ಪಿಸಲು ಇದನ್ನು ಬಳಸಲಾಗುತ್ತದೆ.


e - ಸಲಹೆ


ಮೈಸೂರಿನ ಪ್ರಸನ್ನ ರಾವ್ ಅವರ ಪ್ರಶ್ನೆ: ವೈರಸ್ ವಿರೋಧಿ ತಂತ್ರಾಂಶಗಳು ಮಾರುಕಟ್ಟೆಯಲ್ಲಿ ಸಾವಿರಾರು ಇವೆ. ಇವುಗಳಲ್ಲಿ ಮನೆ ಬಳಕೆಗೆ ಯಾವುದು ಒಳ್ಳೆಯದು?
ಉ: ನೀವು ಎವಿಜಿಯ ಉಚಿತ ಆವೃತ್ತಿಯನ್ನು ಬಳಸಬಹುದು. ಇದನ್ನು http://bit.ly/72S4S ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕಂಪ್ಯೂತರ್ಲೆ

ಕನ್ನಡದಲ್ಲಿ ಬ್ಲಾಗಿಂಗ್ ಮಾಡಬೇಕಾದರೆ ಯುನಿಕೋಡ್ ಬಳಸಬೇಕು ಎಂದು ಕೋಲ್ಯನಿಗೆ ಯಾರೋ ಹೇಳಿದ್ದರು. ಕೋಲ್ಯ ತಾನು ಗಣಕ ತೆಗೆದುಕೊಂಡ ಕಂಪೆನಿಗೆ ಫೋನ್ ಮಾಡಿ ಕೇಳಿದ “ರೀ ನಾನು ನಿಮ್ಮಿಂದ ಒಂದು ಕಂಪ್ಯೂಟರ್ ತೆಗೆದುಕೊಂಡಿದ್ದೇನೆ. ಅದರಲ್ಲಿ ಯುನಿಕೋಡ್ ಇಲ್ಲ. ನೀವು ಯುನಿಕೋಡ್‌ನ್ನು ಒಂದು ಸಿ.ಡಿ.ಯಲ್ಲಿ ಹಾಕಿ ನನಗೆ ಕಳುಹಿಸಿಕೊಡಿ”.
(ಮಾಹಿತಿಗೆ: ಯುನಿಕೋಡ್ ಒಂದು ಶಿಷ್ಟತೆಯೇ ವಿನಃ ಒಂದು ತಂತ್ರಾಂಶ ಅರ್ಥಾತ್ ಸಾಫ್ಟ್‌ವೇರ್ ಅಲ್ಲ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ