ಸೋಮವಾರ, ಅಕ್ಟೋಬರ್ 25, 2010

ಗಣಕಿಂಡಿ - ೦೭೫ (ಅಕ್ಟೋಬರ್ ೨೫, ೨೦೧೦)

ಅಂತರಜಾಲಾಡಿ

ಕೃಷಿ ಮಾಧ್ಯಮ ಕೇಂದ್ರ

ಪತ್ರಿಕೆಗಳು ನೂರಾರಿವೆ. ಕೃಷಿಪರವಾಗಿರುವವೂ ಕೆಲವಿವೆ. ಕೃಷಿಪತ್ರಿಕೋದ್ಯಮದ ಬೆಳವಣಿಗೆಗೆ ಪೂರಕವಾಗಿ ಅಸ್ತಿತ್ವಕ್ಕೆ ಬಂದದ್ದು ಕೃಷಿ ಮಾಧ್ಯಮ ಕೇಂದ್ರ. ಈಗ ಇದಕ್ಕೆ ದಶಕದ ಸಂಭ್ರಮ. ಕೃಷಿ ಗ್ರಾಮೀಣ ಪತ್ರಿಕೋದ್ಯಮ ತರಬೇತಿ, ಕೃಷಿ ಪತ್ರಿಕೋದ್ಯಮ ಪ್ರಶಸ್ತಿ, ಅಭಿವೃದ್ಧಿ ಪತ್ರಿಕೋದ್ಯಮ ಕಾರ್ಯಾಗಾರ, ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಪುಸ್ತಕ ಪ್ರಕಟಣೆ -ರೀತಿ ಹಲವಾರು ಚಟುವಟಿಕೆಗಳನ್ನು ಈ ಕೇಂದ್ರ ಹಮ್ಮಿಕೊಂಡಿದೆ. ಈ ಕೇಂದ್ರದ ಜಾಲತಾಣ krushimadhyama.org. ಈ ಜಾಲತಾಣ ಕನ್ನಡ ಹಾಗೂ ಇಂಗ್ಲಿಶ್ ಭಾಷೆಗಳಲ್ಲಿವೆ. ಕಾಮ್ ನ್ಯೂಸ್ ಹೆಸರಿನ ಸುದ್ದಿಪತ್ರಿಕೆಯ ಈಗಿನ ಮತ್ತು ಹಳೆಯ ಸಂಚಿಕೆಗಳನ್ನೂ ಇದೇ ಜಾಲತಾಣದಲ್ಲಿ ಓದಬಹುದು. ಅಂದ ಹಾಗೆ ಇದೇ ಅಕ್ಟೋಬರ್ ೨೮ರಂದು ಚಿಕ್ಕಮಗಳೂರಿನಲ್ಲಿ ಈ ಕೇಂದ್ರ ತನ್ನ ದಶಮಾನೋತ್ಸವವನ್ನು ಆಚರಿಸುತ್ತಿದೆ.

ಡೌನ್‌ಲೋಡ್

ಮುಕ್ತ ಆಫೀಸ್

ಎಲ್ಲರೂ ಉಚಿತ ಹಾಗೂ ಮುಕ್ತವಾಗಿ ಬಳಸಬಲ್ಲ ಆಫೀಸ್ ತಂತ್ರಾಂಶಗುಚ್ಛ openoffice. ಇದು ಸನ್‌ಮೈಕ್ರೋಸಿಸ್ಟಮ್ ಕಂಪೆನಿಗೆ ಸೇರಿತ್ತು. ಸನ್ ಕಂಪೆನಿಯನ್ನು ಅರೇಕಲ್ ಕಂಪೆನಿ ಕೊಂಡುಕೊಂಡಿತು. ಆಗ ಈ ಮುಕ್ತ ಆಫೀಸ್‌ಗೆ ತೊಂದರೆಯಾಯಿತು. ಈ ತಂತ್ರಾಂಶವನ್ನು ಮುಕ್ತವಾಗಿಯೇ ಮುಂದುವರಿಯಲು ಅದು ಅನುವು ಮಾಡಿಕೊಡುತ್ತದೆಯೇ ಎಂಬ ಅನುಮಾನ ಈ ತಂತ್ರಾಂಶಕ್ಕಾಗಿ ಕೆಲಸ ಮಾಡುತ್ತಿರುವವರಿಗೆ ಬಂತು. ಈಗ ಅವರೆಲ್ಲ ಸೇರಿ libreoffice ಎಂಬ ಹೊಸ ಹೆಸರಿನಲ್ಲಿ ಇದನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ್ದಾರೆ. ಇದು ದೊರೆಯುವ ಜಾಲತಾಣ  www.documentfoundation.org. ಈ ಜಾಲತಾಣದಿಂದ ಕಾಲಕಾಲಕ್ಕೆ ಬಿಡುಗಡೆಯಾಗುವ ಹೊಸ ಹೊಸ ಆವೃತ್ತಿಗಳನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಿಕೊಳ್ಳಬಹುದು.

e - ಸುದ್ದಿ

ಯುನಿಕೋಡ್‌ನಲ್ಲಿ ರೂಪಾಯಿ

ಭಾರತ ಸರಕಾರವು ನಮ್ಮ ಹಣ ರೂಪಾಯಿಗೆ ಒಂದು ಹೊಸ ಚಿಹ್ನೆಯನ್ನು ಘೋಷಿಸಿದ್ದು ಎಲ್ಲರಿಗೂ ನೆನಪಿರಬಹುದು. ಈ ಚಿಹ್ನೆ ಮಾಹಿತಿ ತಂತ್ರಜ್ಞಾನದ ಎಲ್ಲ ಕಡೆ ಬಳಕೆಗೆ ಬರಬೇಕಿದ್ದರೆ ಪ್ರಥಮವಾಗಿ ಇದು ಯುನಿಕೋಡ್‌ನಲ್ಲಿ ಅಳವಡಿಕೆಯಾಗಬೇಕು. ಸಂತಸದ ಸುದ್ದಿಯೇನೆಂದರೆ ಅಕ್ಟೋಬರ್ ೧೧ರಂದು ಘೋಷಿಸಲ್ಲಪಟ್ಟ ಯುನಿಕೋಡ್‌ನ ಆವೃತ್ತಿ ೬.೦ ರಲ್ಲಿ ಭಾರತದ ರೂಪಾಯಿ ಚಿಹ್ನೆಗೆ ಸ್ಥಾನ ನೀಡಲಾಗಿದೆ. ಇದರ ಯುನಿಕೋಡ್ ಸಂಕೇತಸ್ಥಾನ 20B9. ಫಾಂಟ್ ತಯಾರಕರು ಇನ್ನುಮುಂದೆ ಈ ಸ್ಥಾನದಲ್ಲಿ ಹೊಸ ರೂಪಾಯಿ ಚಿಹ್ನೆಯನ್ನು ಸೇರಿಸಬಹುದು. ಆದರೆ ಎಲ್ಲ ಕಾರ್ಯಾಚರಣೆಯ ವ್ಯವಸ್ಥೆ, ದತ್ತಸಂಗ್ರಹ (ಡಾಟಾಬೇಸ್) ತಂತ್ರಾಂಶಗಳಲ್ಲಿ ಈ ಚಿಹ್ನೆಯನ್ನು ಅಳವಡಿಸಿಕೊಳ್ಳಬೇಕಾದರೆ ಇನ್ನೂ ಕನಿಷ್ಠ ಒಂದು ವರ್ಷ ಕಾಲಾವಧಿ ಬೇಕು. ಅಂದಹಾಗೆ ತಮಿಳು, ಗುಜರಾತಿ ಹಾಗೂ ಬೆಂಗಾಳಿ ಭಾಷೆಯ ರೂಪಾಯಿ ಚಿಹ್ನೆಗಳಿಗೆ ಯುನಿಕೋಡ್‌ನಲ್ಲಿ ಪ್ರತ್ಯೇಕ ಜಾಗವಿದೆ. ಕನ್ನಡ ಲಿಪಿಯಲ್ಲಿ ತುಳು, ಕೊಡವ, ಬ್ಯಾರಿ, ಇತ್ಯಾದಿ ಭಾಷೆಗಳನ್ನು ಯುನಿಕೋಡ್‌ನಲ್ಲಿ ಸೇರಿಸುವ ಬಗ್ಗೆ ಯಾರೂ ಕೆಲಸ ಮಾಡುತ್ತಿಲ್ಲ.

e- ಪದ

ಜಾಹೀರಾತು ತಂತ್ರಾಂಶ (adware) -ಬಳಕೆದಾರರಿಗೆ ಉಚಿತವಾಗಿರುವ ಆದರೆ ಜಾಹೀರಾತುಗಳನ್ನು ಪ್ರದರ್ಶಿಸುವ ತಂತ್ರಾಂಶ. ಕೆಲವು ತಂತ್ರಾಂಶಗಳು ಬಳಕೆಗೇನೋ ಉಚಿತವಾಗಿ ದೊರೆಯುತ್ತವೆ. ಆದರೆ ಅವುಗಳನ್ನು ಬಳಸುವಾಗ ಜಾಹೀರಾತುಗಳನ್ನು ಪ್ರದರ್ಶಿಸುತ್ತವೆ. ಆ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದರೆ ಅದು ನಿಮ್ಮನ್ನು ಸಂಬಂಧಪಟ್ಟ ಜಾಲತಾಣಕ್ಕೆ ಕರೆದೊಯ್ಯುತ್ತದೆ. ತಂತ್ರಾಂಶ ತಯಾರಿಯ ವೆಚ್ಚವನ್ನು ತಯಾರಕರು ಹೀಗೆ ಜಾಹೀರಾತುಗಳ ಮೂಲಕ ಪಡೆಯುತ್ತಾರೆ.

e - ಸಲಹೆ

ಸಂತೋಷಕುಮಾರರ ಪ್ರಶ್ನೆ: ಕನ್ನಡ ಭಾಷೆಯ e-ಪುಸ್ತಕಗಳ ಜಾಲತಾಣ ಇದೆಯೇ?
ಉ: ಕೇಂದ್ರ ಸರಕಾರದ ವಿದ್ಯನ್ಮಾನ ಗ್ರಂಥಾಲಯ ಜಾಲತಾಣದಲ್ಲಿ ಹಲವಾರು ಕನ್ನಡ ಪುಸ್ತಕಗಳಿವೆ. ಅದರ ವಿಳಾಸ www.dli.ernet.in.

ಕಂಪ್ಯೂತರ್ಲೆ


ಕೋಲ್ಯನ ಹುಟ್ಟುಹಬ್ಬಕ್ಕೆ ಯಾರೋ ಕೇಕ್‌ನ ಚಿತ್ರವನ್ನು ಶುಭಾಶಯವೆಂದು ಇಮೈಲ್ ಮೂಲಕ ಕಳುಹಿಸಿದ್ದರು. ಕೋಲ್ಯ ಅದನ್ನು ಮುದ್ರಿಸಿ ತಿನ್ನಲು ಹೊರಟ!

ಸೋಮವಾರ, ಅಕ್ಟೋಬರ್ 18, 2010

ಗಣಕಿಂಡಿ - ೦೭೪ (ಅಕ್ಟೋಬರ್ ೧೮, ೨೦೧೦)

ಅಂತರಜಾಲಾಡಿ

ಮೊಬೈಲ್‌ಫೋನು ಕೊಳ್ಳಬೇಕೇ?

ಒಂದು ಕಾಲವಿತ್ತು. ಮೊಬೈಲ್ ಫೋನ್ ಎಂದರೆ ಯಾರಿಗಾದರು ಕರೆ ಮಾಡುವುದು, ಯಾರಾದರು ಕರೆ ಮಾಡಿದರೆ ಮಾತನಾಡುವುದು, ಎಸ್‌ಎಂಎಸ್ ಕಳುಹಿಸುವುದು -ಇವಿಷ್ಟೆ ಮೊಬೈಲ್ ಫೋನಿನ ಕೆಲಸಗಳಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಮೊಬೈಲ್ ಫೋನು ಒಂದು ಕಿಸೆಗಣಕವಾಗಿ ಪರಿವರ್ತಿತವಾಗಿದೆ. ಅದರಲ್ಲಿ ಇಮೈಲ್, ಅಂತರಜಾಲ ವೀಕ್ಷಣೆ, ಕ್ಯಾಮರಾ ಬಳಸಿ ಫೋಟೋ ತೆಗೆಯುವುದು, ಬ್ಯಾಂಕಿಂಗ್, ತಾವಿರುವ ಸ್ಥಳದ ಮ್ಯಾಪ್ ನೋಡುವುದು, ಹೀಗೆ ಇನ್ನೂ ಏನೇನೋ ಮಾಡಬಹುದಾಗಿದೆ. ಫೋನಿನ ಗುಣಲಕ್ಷಣಗಳಿಗನುಗುಣವಾಗಿ ಬೆಲೆಯಲ್ಲೂ ವ್ಯತ್ಯಾಸವಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾವಿರಾರು ಫೋನುಗಳಲ್ಲಿ ಯಾವುದನ್ನು ಕೊಳ್ಳುವುದು, ಯಾವ ಫೋನಿನಲ್ಲಿ ಯಾವ ಸೌಲಭ್ಯಗಳಿವೆ ತಿಳಿಯುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯುವ ಜಾಲತಾಣ  www.fonearena.com.

ಡೌನ್‌ಲೋಡ್


ರೇಡಿಯೋ ಆಲಿಸಿರಿ


ಕಾಲ ಬದಲಾದಂತೆ ರೇಡಿಯೋವೂ ಬದಲಾಗಿದೆ. ಈಗ ಅಂತರಜಾಲದಲ್ಲಿ ಹಲವಾರು ರೇಡಿಯೋ ಕೇಂದ್ರಗಳಿವೆ. ಅವುಗಳ ಜಾಲತಾಣ ವಿಳಾಸ ತಿಳಿದಿದ್ದರೆ ಬ್ರೌಸರ್ ಮೂಲಕ ಅವುಗಳನ್ನು ಆಲಿಸಬಹುದು. ಇನ್ನೂ ಸರಳ ವಿಧಾನವೆಂದರೆ ಈ ಜಾಲತಾಣಗಳನ್ನು ತೆರೆದು ರೇಡಿಯೋ ಆಲಿಸಲು ಅನುವು ಮಾಡಿಕೊಡುವ ತಂತ್ರಾಂಶದ ಬಳಕೆ. ಇಂತಹ ತಂತ್ರಾಂಶಗಳೂ ಹಲವಾರಿವೆ. ಅಂತಹ ಒಂದು ಉಚಿತ ತಂತ್ರಾಂಶ  TapinRadio. ಇದು ತುಂಬ ಸರಳವಾಗಿದೆ. ಪ್ರಪಂಚದ ಸಾವಿರಾರು ರೇಡಿಯೋ ಜಾಲತಾಣಗಳಿಗೆ ಸೂಚಿ ಇದರಲ್ಲಿದೆ. ರೇಡಿಯೋ ಆಲಿಸುವುದು ಮಾತ್ರವಲ್ಲದೆ ಕಾರ್ಯಕ್ರಮಗಳನ್ನು ಮುದ್ರಿಸಿಕೊಳ್ಳುವ ಸವಲತ್ತೂ ಈ ತಂತ್ರಾಂಶದಲ್ಲಿದೆ. ಈ ಉಚಿತ ತಂತ್ರಾಂಶ ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/derkS3.

e - ಸುದ್ದಿ

ಟ್ವಿಟ್ಟರ್ ಮದುವೆ


ಅಂತರಜಾಲದಲ್ಲಿ ಚರ್ಚಾವೇದಿಕೆಗಳಲ್ಲಿ ಅಥವಾ ಬ್ಲಾಗ್‌ತಾಣಗಳಲ್ಲಿ ಭೇಟಿಯಾಗಿ ಪ್ರೇಮದಲ್ಲಿ ಪರಿವರ್ತನೆಯಾಗಿ ಮದುವೆಯಲ್ಲಿ ಅಂತ್ಯವಾಗುವುದು ಹೊಸದೇನಲ್ಲ. ಅದರದೇ ಮುಂದುವರಿದ ಅಧ್ಯಾಯ ಟ್ವಿಟ್ಟರ್. ಪಾಲ್ ಮತ್ತು ಸಾಯಿರಾ ಅವರು ಟ್ವಿಟ್ಟರ್‌ನಲ್ಲಿ ಯಾವಾಗಲೂ ಒಬ್ಬರನ್ನೊಬ್ಬರು ಹಿಂಬಾಲಿಸುತ್ತಿದ್ದರು, ಒಬ್ಬರಿಗೊಬ್ಬರು ಟ್ವೀಟ್ ಮಾಡುತ್ತಿದ್ದರು. ಹೀಗೆ ಮುಂದುವರಿದು ಕೊನೆಗೆ ಮದುವೆಯೂ ಆದರು. ಅಷ್ಟೇ ಅಲ್ಲ. ಈ ಮದುವೆಯ ಆಹ್ವಾನ, ಮದುವೆ ನಡೆದಾಗ ಎಲ್ಲ ನಡಾವಳಿಗಳು ಎಲ್ಲ ಟ್ವಿಟ್ಟರ್ ಮೂಲಕವೇ ಜರುಗಿದವು.

e- ಪದ

ಸೈಮಲ್‌ಕಾಸ್ಟ್ (Simulcast =simultaneous broadcast) - ಏಕಕಾಲದಲ್ಲಿ ಹಲವಾರು ವಿಧಾನಗಳಲ್ಲಿ ಬಹುಮಾಧ್ಯಮ ಕಾರ್ಯಕ್ರಮದ ಪ್ರಸಾರ. ಈ ಹಲವಾರು ವಿಧಾನಗಳಲ್ಲಿ ರೇಡಿಯೋ, ಟಿವಿ, ಅಂತರಜಾಲ, ಎಫ್‌ಎಂ, ಉಪಗ್ರಹ ಮೂಲಕ ಪ್ರಸಾರ ಎಲ್ಲ ಸೇರಿವೆ.

e - ಸಲಹೆ

ಜಗದೀಶರ ಪ್ರಶ್ನೆ: IMEI ಹಾಗೂ ಮೊಬೈಲ್ ಹ್ಯಾಂಡ್ ಸೆಟ್ ಸಂಖ್ಯೆಯ ಆಧಾರದ ಮೇಲೆ ಕಳೆದುಹೊದ ಮೊಬೈಲ್‌ಅನ್ನು ಪತ್ತೆ ಹಚ್ಚಲು ಯಾವುದಾದರೂ ಜಾಲತಾಣ ಇದೆಯೇ? ಇದ್ದರೆ ಈ ಬಗ್ಗೆ ಮಾಹಿತಿ ನೀಡಬೇಕಾಗಿ ವಿನಂತಿ. 
ಉ: trackimei.com

ಕಂಪ್ಯೂತರ್ಲೆ

ಫ್ಲಾಪಿ ಹೋಯ್ತು ಸಿ.ಡಿ. ಬಂತು ಡುಂ ಡುಂ
ಸಿ.ಡಿ. ಹೋಯ್ತು ಡಿ.ವಿ.ಡಿ. ಬಂತು ಡುಂ ಡುಂ
ಡಿ.ವಿ.ಡಿ. ಹೋಯ್ತು ಯು.ಎಸ್.ಬಿ ಬಂತು ಡುಂ ಡುಂ

ಸೋಮವಾರ, ಅಕ್ಟೋಬರ್ 11, 2010

ಗಣಕಿಂಡಿ - ೦೭೩ (ಅಕ್ಟೋಬರ್ ೧೧, ೨೦೧೦)

ಅಂತರಜಾಲಾಡಿ

ಕಾನೂನು ಮಾತನಾಡಿ

ಕಾನೂನು ಎಲ್ಲರಿಗೂ ಬೇಕು. ಆದರೆ ಕಾನೂನುಗಳ ಬಗ್ಗೆ ಎಷ್ಟು ಜನರಿಗೆ ಸರಿಯಾದ ಮಾಹಿತಿ ಇದೆ? ಕಾನೂನು ಪುಸ್ತಕಗಳೇನೋ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅವನ್ನು ಓದಿ ಅರ್ಥಮಾಡಿಕೊಳ್ಳಬೇಕಾದರೆ ಪ್ರತಿಯೊಬ್ಬರೂ ವಕೀಲರೇ ಆಗಬೇಕು. ಜನಸಾಮಾನ್ಯರಿಗೆ ಕಾನೂನುಗಳ ಬಗ್ಗೆ ಮಾಹಿತಿ ನೀಡುವ ಜಾಲತಾಣ www.lawisgreek.com. ಕಾನೂನು ಗ್ರೀಕ್ ಭಾಷೆ ಆಗಬೇಕಾಗಿಲ್ಲ, ಎಲ್ಲರಿಗೂ ಅರ್ಥವಾಗಬೇಕು ಎಂಬ ಉದ್ದೇಶದಿಂದ ಸರಳ ಭಾಷೆಯಲ್ಲಿ ಕಾನೂನುಗಳನ್ನು ಇಲ್ಲಿವಿವರಿಸಲಾಗಿದೆ. ವಕೀಲರುಗಳ ಬ್ಲಾಗ್ ಕೂಡ ಇಲ್ಲಿದೆ. ಜನಸಾಮಾನ್ಯರಿಗೆ ಮಾತ್ರವಲ್ಲ, ಕಾನೂನು ವಿದ್ಯಾರ್ಥಿಗಳಿಗೂ ವಕೀಲರಿಗೂ ಈ ಜಾಲತಾಣ ಉಪಯುಕ್ತವಾಗಿದೆ.

ಡೌನ್‌ಲೋಡ್

ಇನ್‌ವಾಯಿಸ್ ತಯಾರಿಸಿ

ನೀವು ಒಬ್ಬ ಚಿಕ್ಕ ವ್ಯಾಪಾರಿಯೇ (ಗಾತ್ರದಲ್ಲಲ್ಲ, ವ್ಯಾಪಾರದಲ್ಲಿ :))? ಹಾಗಿದ್ದಲ್ಲಿ ನಿಮಗೆ ಇನ್‌ವಾಯಿಸ್ ತಯಾರಿಸುವ ತಲೆನೋವು ಇದ್ದಿದ್ದೇ. ಈಗಂತೂ ವ್ಯಾಟ್ ಕಡ್ಡಾಯವಾಗಿರುವುದರಿಂದ ಯಾವುದೇ ವ್ಯವಹಾರ ಇನ್‌ವಾಯಿಸ್ ಇಲ್ಲದೆ ಸಾಧ್ಯವಿಲ್ಲ. ಇನ್‌ವಾಯಿಸ್ ತಯಾರಿಸಲು ಹಲವಾರು ವಾಣಿಜ್ಯಕ ತಂತ್ರಾಂಶಗಳಿವೆ. ಇವುಗಳಲ್ಲಿ ಹಲವಾರು ಸವಲತ್ತುಗಳೇನೋ ಇವೆ. ಅಂತೆಯೇ ಅವು ದುಬಾರಿ ಕೂಡ. ಸಣ್ಣ ವ್ಯಾಪಾರಿಗಳಿಗೆ ದುಬಾರಿ ತಂತ್ರಾಂಶ ಕೊಳ್ಳುವುದು ಕಷ್ಟ. ಇನ್‌ವಾಯಿಸ್ ತಯಾರಿಸಲು ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/c8ssgX.  

e - ಸುದ್ದಿ

ವಿಮಾನ ಪತ್ತೆ

ಆಪಲ್ ಐಫೋನ್‌ಗೆ ವಿಮಾನ ಪತ್ತೆಯ ತಂತ್ರಾಂಶ ಈಗ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಅದನ್ನು ಬಳಸಿ ಜಿಪಿಎಸ್ ತಂತ್ರಜ್ಞಾನದ ಮೂಲಕ ನೀವಿರುವ ಸ್ಥಳದ ಮೇಲೆ ಎಷ್ಟು ಹೊತ್ತಿಗೆ ಯಾವ ವಿಮಾನ ಹಾರಲಿದೆ ಎಂಬುದನ್ನು ಅದು ತಿಳಿಸುತ್ತದೆ. ಯಾವ ಕಂಪೆನಿಯ ವಿಮಾನ, ಎಲ್ಲಿಂದ ಎಲ್ಲಿಗೆ ಹೋಗುತ್ತದೆ, ಎಷ್ಟು ಎತ್ತರದಲ್ಲಿ ಹಾರುತ್ತದೆ ಇತ್ಯಾದಿ ಎಲ್ಲ ವಿವರಗಳು ಸುಲಭದಲ್ಲಿ ಲಭ್ಯ. ಈ ತಂತ್ರಾಂಶ ಈಗ ಅಮೆರಿಕದ ಪೋಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಈ ತಂತ್ರಾಂಶವನ್ನು ಬಳಸಿ ರಾಕೆಟ್ ಮೂಲಕ ವಿಮಾನವನ್ನು ಉರುಳಿಸಿದರೆ ಎಂಬುದು ಅವರ ಚಿಂತೆ. ಈ ತಂತ್ರಾಂಶ ಕೆಲಸ ಮಾಡದಂತೆ ಮಾಡಲು ಅವರು ತಿಣುಕಾಡುತ್ತಿದ್ದಾರೆ.

e- ಪದ

ಜಿಪಿಎಸ್(GPS -Global Positioning System) - ಅಂತರಿಕ್ಷದಲ್ಲಿ ಹಾರಾಡುತ್ತಿರುವ ಉಪಗ್ರಹಗಳನ್ನು ಬಳಸಿ ಒಂದು ಸ್ಥಳದ ನಿಖರವಾದ ಅಕ್ಷಾಂಶ ರೇಖಾಂಶವನ್ನು ಪತ್ತೆಹಚ್ಚುವುದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಇಂತಹ ಸರಳವಾದ ಉಪಕರಣಗಳು ದೊರೆಯುತ್ತಿವೆ. ಕಾರುಗಳಲ್ಲೂ ಅವುಗಳನ್ನು ಅಳವಡಿಸಬಹುದು. ಇದರ ಜೊತೆ ದೊರೆಯುವ ತಂತ್ರಾಂಶವನ್ನು ಬಳಸಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ದಾರಿ ತಿಳಿಯಬಹುದು. ರಸ್ತೆಬದಿಯಲ್ಲಿ ಇರುವವರನ್ನು ದಾರಿ ಕೇಳಬೇಕಾಗಿಲ್ಲ. ಕೆಲವು ಮೊಬೈಲ್ ಫೋನುಗಳಲ್ಲೂ ಈ ತಂತ್ರಜ್ಞಾನವಿದೆ. ಆದರೆ ಅದು ಮೊಬೈಲ್ ಗೋಪುರಗಳನ್ನು ಬಳಸಿ ಫೋನು ಇರುವ ಸ್ಥಳವನ್ನು ಹೇಳುತ್ತದೆ.

e - ಸಲಹೆ

ಚೇತನ ವಾಲಿಶೆಟ್ಟರ ಪ್ರಶ್ನೆ: ನನಗೆ ನನ್ನ ಸಿ.ಡಿ. ಡ್ರೈವ್ ಅನ್ನು ಅದರಲ್ಲಿರುವ ಗುಂಡಿ ಬಳಸದೆ ಕೀಬೋರ್ಡ್ ಮೂಲಕವೇ ತೆರಯಬೇಕು. ಇದು ಸಾಧ್ಯವೇ?
ಉ: ಸಾಧ್ಯ. ಸಿ.ಡಿ. ಡ್ರೈವ್‌ನ ಐಕಾನ್ ಮೇಲೆ ಮೌಸ್ ಇಟ್ಟು ಬಲ-ಕ್ಲಿಕ್ ಮಾಡಿ eject ಎಂದು ಆಯ್ಕೆ ಮಾಡಿ.

ಕಂಪ್ಯೂತರ್ಲೆ

ಗಣಕವಾಡು

ನೀ ಕುಟ್ಟುವ ಕೀಬೋರ್ಡ್ ಅದೆ ಕನ್ನಡ
ನೀ ನೋಡುವ ನೆಟ್ ಅದೆ ಕನ್ನಡ

ಸೋಮವಾರ, ಅಕ್ಟೋಬರ್ 4, 2010

ಗಣಕಿಂಡಿ - ೦೭೨ (ಅಕ್ಟೋಬರ್ ೦೪, ೨೦೧೦)

ಅಂತರಜಾಲಾಡಿ

ಮೈಸೂರು ಅರಮನೆ

ಮೈಸೂರು ಅಂಬಾವಿಲಾಸ ಅರಮನೆ ಜಗದ್ವಿಖ್ಯಾತ. ಇದೊಂದನ್ನೇ ನೋಡಲೆಂದು ಭಾರತಕ್ಕೆ ಬರುವ ಪ್ರವಾಸಿಗರಿದ್ದಾರೆ. ನೀವು ಮೈಸೂರು ಅರಮನೆ ನೊಡಿದ್ದೀರಾ? ನೋಡಿಲ್ಲವಾದರೆ ಅದನ್ನು ನೋಡಬೇಕಾದರೆ ಮೈಸೂರಿಗೇ ಹೋಗಬೇಕಾಗಿಲ್ಲ. ಅರಮನೆಯ ಪೂರ್ತಿ ಮೂರು ಆಯಾಮಗಳ ಚಿತ್ರ ಹಾಗೂ ವಾಸ್ತವ ಸದೃಶ ಪ್ರತಿಕೃತಿ ನೋಡಬೇಕಾದರೆ ನೀವು mysorepalace.tv ಜಾಲತಾಣಕ್ಕೆ ಭೇಟಿ ನೀಡಬೇಕು. ಅರಮನೆಯ ಒಳಗೆಲ್ಲ ಓಡಾಡಿದಂತೆ ನಿಮಗೆ ಭಾಸವಾಗುವ ಪ್ರತಿಕೃತಿಗಳು ಇಲ್ಲಿವೆ. ಅರಮನೆಯ ಬಗ್ಗೆ ಇತರೆ ಮಾಹಿತಿಗಳೂ ಇಲ್ಲಿವೆ. ಅರಮನೆ ನೋಡಿದವರಿಗೂ ನೋಡಿದ ಅನುಭವ ಮತ್ತೊಮ್ಮೆ ಮೂಡುವಂತೆ ಮಾಡುವ ಅತ್ಯತ್ತಮ ಜಾಲತಾಣ ಇದು. ಕನ್ನಡ ಭಾಷೆಯಲ್ಲೂ ಇದೆ.

ಡೌನ್‌ಲೋಡ್

ಆಟ ತಯಾರಿಸಿ

ಗಣಕದಲ್ಲಿ ಆಟ ಆಡುವುದು ತುಂಬ ಜನರಿಗೆ ಇಷ್ಟವಾದ ಕೆಲಸ. ಕೆಲವೊಮ್ಮೆ ಅದು ಒಂದು ಚಟವೂ ಹೌದು. ಆಟಗಳನ್ನು ಆಡುವಾಗ ನಾನೂ ಒಂದು ಗಣಕ ಆಟ ತಯಾರಿಸುವಂತಿದ್ದರೆ ಎಂದು ಅನ್ನಿಸಿದೆಯೇ? ಅದಕ್ಕಾಗಿ ತುಂಬ ಕ್ಲಿಷ್ಟವಾದ ಪ್ರೋಗ್ರಾಮ್ಮಿಂಗ್ ಕಲಿಯಬೇಕು ಅಂದುಕೊಂಡಿದ್ದೀರಾ? ಯಾವುದೇ ಪ್ರೋಗ್ರಾಮ್ಮಿಂಗ್ ಕಲಿಯದೇ ಗಣಕ ಆಟ ತಯಾರಿಸಲು ಅನುವು ಮಾಡಿಕೊಡುವ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.scirra.com.  

e - ಸುದ್ದಿ

ಇಂಗ್ಲೆಂಡಿನಲ್ಲಿ ೧೪ ವರ್ಷ ತುಂಬಿ ೧೫ನೆಯ ವರ್ಷಕ್ಕೆ ಕಾಲಿಟ್ಟ ಹುಡುಗಿಯೊಬ್ಬಳಿಗೆ ತನ್ನ ೧೫ನೆಯ ಹುಟ್ಟುಹಬ್ಬಕ್ಕೆ ೧೫ ಜನ ಆಪ್ತ ಸ್ನೇಹಿತೆಯರನ್ನು ಆಹ್ವಾನಿಸಬೇಕು ಎಂಬ ಬಯಕೆ ಆಯಿತು. ಅದಕ್ಕೆಂದೇ ಆಕೆ ಫೇಸ್‌ಬುಕ್ ಜಾಲತಾಣದಲ್ಲಿ ಒಂದು ಆಹ್ವಾನಪತ್ರಿಕೆಯನ್ನು ತಯಾರಿಸಿ ಹಾಕಿದಳು. ಆದರೆ ಆಕೆ ಮಾಡಿದ ತಪ್ಪೇನೆಂದರೆ ಆ ಆಹ್ವಾನ ಪತ್ರಿಕೆಯನ್ನು ಎಲ್ಲರಿಗೂ ಓದಲು ಸಾಧ್ಯವಾಗುವಂತೆ ಮಾಡಿದ್ದು. ಕೇವಲ ಸ್ನೇಹಿತರು ಮಾತ್ರ ಓದಬಲ್ಲರು ಎಂದು ಆಕೆ ಆಯ್ಕೆ ಮಾಡಿರಲಿಲ್ಲ. ಅದನ್ನು ಓದಿದ ೨೧,೦೦೦ ಮಂದಿ ಆಹ್ವಾನವನ್ನು ಸ್ವೀಕರಿಸಿ ಕಾರ್ಯಕ್ರಮಕ್ಕೆ ಬರುತ್ತೇವೆ ಎಂದು ನಮೂದಿಸಿದ್ದಾರೆ. ಈಗ ಆಕೆಯ ತಾಯಿಗೆ ತಲೆಬಿಸಿಯಾಗಿದೆ. ಅಕ್ಟೋಬರ್ ೭ರಂದು ಆಕೆಯ ಹುಟ್ಟುಹಬ್ಬಕ್ಕೆ ನಿಜಕ್ಕೂ ಎಷ್ಟು ಮಂದಿ ಬರುತ್ತಾರೆ ಎಂದು ಕಾದು ನೋಡಬೇಕಾಗಿದೆ.

e- ಪದ

ವಾಸ್ತವ ಸದೃಶ (virtual reality) - ಗಣಕ ಯಂತ್ರಾಂಶ ಮತ್ತು ತಂತ್ರಾಂಶ ಬಳಸಿ ನಿಜವಾದ ಸನ್ನಿವೇಶವನ್ನು ಅನುಭವಿಸಿದ ಭ್ರಮೆ ಉಂಟು ಮಾಡುವುದು. ಗಣಕ ಆಟಗಳಲ್ಲಿ ಇದು ತುಂಬ ಜನಪ್ರಿಯ. ನಿಜವಾಗಿಯೂ ವೈರಿಯನ್ನು ಹೊಡೆಯುತ್ತಿದ್ದೇನೆ ಎಂಬ ಭಾವನೆ ಬರುತ್ತದೆ. ವಿಮಾನ ಚಾಲನೆ, ಶಸ್ತ್ರಕ್ರಿಯೆ, ಇತ್ಯಾದಿಗಳನ್ನು ಕಲಿಸಲೂ ಈಗೀಗ ಈ ವಿಧಾನವನ್ನು ಬಳಸಲಾಗುತ್ತಿದೆ.

e - ಸಲಹೆ

ಗಿರಿ ಅವರ ಪ್ರಶ್ನೆ: ನಾನು ಯುಟ್ಯೂಬ್ ಬಳಸುತ್ತಿದ್ದೇನೆ. ಆದರೆ ಅದರಲ್ಲಿ ಡೌನ್‌ಲೋಡ್ ಐಕಾನ್ ಇಲ್ಲ. ಯುಟ್ಯೂಬ್‌ನಿಂದ ಡೌನ್‌ಲೋಡ್ ಮಾಡಲು ಏನು ಮಾಡಬೇಕು?
ಉ: ನೀವು YouTube Downloader ತಂತ್ರಾಂಶವನ್ನು ಬಳಸಬಹುದು. ಇದು ದೊರೆಯುವ ಜಾಲತಾಣ http://bit.ly/oRMpZ.

ಕಂಪ್ಯೂತರ್ಲೆ

ಗಣಕತಗಾದೆ: ತಂತ್ರಾಂಶದಲ್ಲಿಯ ಬಗ್ (ದೋಷ) ವು ಕುರ್ಚಿ ಮತ್ತು ಕೀಬೋರ್ಡ್ ಮಧ್ಯೆ ಕುಳಿತಿರುತ್ತದೆ.