ಬುಧವಾರ, ಡಿಸೆಂಬರ್ 29, 2010

ಗಣಕಿಂಡಿ - ೦೮೪ (ಡಿಸೆಂಬರ್ ೨೭, ೨೦೧೦)

ಅಂತರಜಾಲಾಡಿ

ಸಂಸ್ಕೃತ ಪುಸ್ತಕಮೇಳ

ಪ್ರಪಂಚದ ಅತಿ ಹಳೆಯ ಶುದ್ಧ ವೈಜ್ಞಾನಿಕ ಭಾಷೆ ಸಂಸ್ಕೃತ. ಇಂದಿಗೂ ಈ ಭಾಷೆಯನ್ನು ತಮ್ಮ ಮಾತೃಭಾಷೆ ಎಂದು ಜನಗಣತಿಯಲ್ಲಿ ನೋಂದಾಯಿಸುವವರು ಇಂದಿಗೂ ಇದ್ದಾರೆ. ಇಂದು ಗಣಕ ಪರಿಭಾಷೆಯಲ್ಲಿ ಬಳಕೆಯಲ್ಲಿರುವ ಸಹಜ ಭಾಷಾ ಸಂಸ್ಕರಣೆಗೆ (natural language processing) ಮೂಲಮಂತ್ರಗಳನ್ನು ನೀಡಿದ್ದು ಸಂಸ್ಕೃತ ಭಾಷೆಯಲ್ಲಿ ಪಾಣಿನಿ. ಭಾರತದ ಸಂವಿಧಾನವು ಅಧಿಕೃತವಾಗಿ ಅಂಗೀಕರಿಸಿರುವ ೨೨ ಭಾಷೆಗಳಲ್ಲಿ ಸಂಸ್ಕೃತವೂ ಸೇರಿದೆ. ವಿಶ್ವದ ಪ್ರಪ್ರಥಮ ಸಂಸ್ಕೃತ ಪುಸ್ತಕ ಮೇಳ ೨೦೧೧ರ ಜನವರಿ ೭ರಿಂದ ೧೦ರ ತನಕ ಬೆಂಗಳೂರಿನಲ್ಲಿ ಜರುಗಲಿದೆ. ಈ ಬಗ್ಗೆ ಸಮಸ್ತ ವಿವರ ನೀಡುವ ಜಾಲತಾಣ www.samskritbookfair.org. ಈ ಮೇಳದಲ್ಲಿ ನೀವೂ ಹಲವಾರು ರೀತಿಯಲ್ಲಿ ಭಾಗವಹಿಸಬಹುದು. ವಿವರಗಳು ಜಾಲತಾಣದಲ್ಲಿವೆ.

ಡೌನ್‌ಲೋಡ್

ಔಟ್‌ಲುಕ್‌ನಿಂದ ಜಿಮೈಲ್‌ಗೆ

ಜಿಮೈಲ್ ತುಂಬ ಜನಪ್ರಿಯ ಉಚಿತ ಇಮೈಲ್ ಸೇವೆ. ಹಲವರು ಜಿಮೈಲ್ ಜೊತೆ ಸಿಗುವ ವಿಳಾಸ ಪುಸ್ತಕದ ಸೌಕರ್ಯವನ್ನೂ ಬಳಸುತ್ತಾರೆ. ಇಮೈಲ್‌ಗಳನ್ನು ನಿಮ್ಮ ಗಣಕಕ್ಕೆ ಇಳಿಸಿಕೊಳ್ಳಲು ಮತ್ತು ಇಮೈಲ್ ಕಳುಹಿಸಲು ಬಳಸುವ ಜನಪ್ರಿಯ ತಂತ್ರಾಂಶ ಮೈಕ್ರೋಸಾಫ್ಟ್ ಔಟ್‌ಲುಕ್. ಇದರಲ್ಲೂ ವಿಳಾಸ ಪುಸ್ತಕದ ಸೌಕರ್ಯವಿದೆ. ಈ ಸೌಕರ್ಯದ ವೈಶಿಷ್ಟ್ಯವೇನೆಂದರೆ ಇದನ್ನು ಬಳಸಲು ಅಂತರಜಾಲಕ್ಕೆ ಸಂಪರ್ಕ ಅಗತ್ಯವಿಲ್ಲ. ಜಿಮೈಲ್‌ನಲ್ಲಿರುವ ಮತ್ತು ಔಟ್‌ಲುಕ್‌ನಲ್ಲಿರುವ ವಿಳಾಸಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುವ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/e0sNgT.

e - ಸುದ್ದಿ

ಫೇಸ್‌ಬುಕ್‌ನಲ್ಲಿ ಅವಮಾನ -ಪರಾರಿ

ಫಿಲಡೆಲ್ಪಿಯಾ ನಗರದಲ್ಲಿ ಸರಣಿ ಕಲೆ ಮತ್ತು ಲೈಂಗಿಕ ಅತ್ಯಾಚಾರ ಮಾಡಿದ ಆರೋಪಿಯನ್ನು ಪೋಲೀಸರು ಹುಡುಕುತ್ತಿದ್ದರು.  ಅದೇ ಸಮಯದಲ್ಲಿ ಯಾರೋ ಪೋಕರಿಗಳು ಒಬ್ಬಾತನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಸೇರಿಸಿ ಸರಣಿ ಕೊಲೆ ಮಾಡಿದವ ಈತನೇ ಎಂದು ಸಂದೇಶ ಹಾಕಿದ್ದರು. ಆತ ನಿಜವಾಗಿ ನಿರಪರಾಧಿ ಆಗಿದ್ದ. ಆದರೆ ಜನರು ಗುಂಪುಕಟ್ಟಿಕೊಂಡು ಆತನ ಮನೆ ಮುಂದೆ ಗದ್ದಲ ಮಾಡತೊಡಗಿದರು. ಆತ ತಾನಾಗಿಯೇ ಡಿ.ಎನ್.ಎ. ಪರೀಕ್ಷೆಗೆ ಒಳಪಡಿಸಿಕೊಂಡು ನಿರಪರಾಧಿ ಎಂದು ಪೋಲೀಸರಿಂದ ಹೇಳಿಕೆ ನೀಡಿಸಿದ ನಂತರವೇ ಆತ ನಿರಾಳವಾಗಿ ಇರಲು ಸಾಧ್ಯವಾದದ್ದು.

e- ಪದ

ರೌಟರ್ (router) - ಗಣಕಜಾಲಗಳಲ್ಲಿ ಬಳಕೆಯಾಗುವ ಸಾಧನ. ಇದು ಕನಿಷ್ಠ ಎರಡು ಜಾಲಗಳಿಗೆ ಸಂಪರ್ಕಗೊಂಡಿರುತ್ತದೆ. ಗಣಕಜಾಲಗಳಲ್ಲಿ ಮಾಹಿತಿಗುಚ್ಛಗಳನ್ನು ಜಾಲದಿಂದ ಜಾಲಕ್ಕೆ ಕಳುಹಿಸಲು ಇದರ ಬಳಕೆ ಆಗುತ್ತದೆ.

e - ಸಲಹೆ

ದಾವಣಗೆರೆ ಪುನೀತ್ ಅವರ ಪ್ರಶ್ನೆ: ಮೈಕ್ರೋಸಾಫ್ಟ್ ಆಫೀಸ್ ೨೦೦೭ನ್ನು ಡೌನ್‌ಲೋಡ್ ಮಾಡಬೇಕು. ಯಾವ ಜಾಲತಾಣದಲ್ಲಿ ಸಿಗುತ್ತದೆ?
ಉ: ಆಫೀಸ್ ತಂತ್ರಾಂಶ ಉಚಿತವಾಗಿ ಸಿಗುವುದಿಲ್ಲ. ಅದನ್ನು ಹಣಕೊಟ್ಟು ಕೊಂಡುಕೊಳ್ಳಬೇಕು. ವಿವಿಧ ಆವೃತ್ತಿಗಳ ಬೆಲೆ ತಿಳಿಯಲು ಹಾಗೂ ಕೊಂಡುಕೊಳ್ಳಲು microsoftstore.co.in ಜಾಲತಾಣಕ್ಕೆ ಭೇಟಿ ನೀಡಿ. ಅಂತರಜಾಲದ ಮೂಲಕ ಉಚಿತವಾಗಿ ಮೈಕ್ರೋಸಾಫ್ಟ್ ಆಫೀಸ್ ಬಳಸಬೇಕಿದ್ದರೆ office.live.com ಜಾಲತಾಣಕ್ಕೆ ಭೇಟಿ ನಿಡಿ.

ಕಂಪ್ಯೂತರ್ಲೆ

ಗಣಕವೇದವಾಕ್ಯ: ನೀವು ಅತಿ ಅವಸರದಲ್ಲಿದ್ದೀರೆಂಬುದನ್ನು ಗಣಕ, ಮುದ್ರಕ, ಇತ್ಯಾದಿ ಸಾಧನಗಳಿಗೆ ಅರಿವು ಮಾಡಬೇಡಿ. ನೀವು ಅತಿ ಅವಸರದಲ್ಲಿದ್ದಾಗಲೆ ಅವು ಕೈಕೊಡುತ್ತವೆ.

ಬುಧವಾರ, ಡಿಸೆಂಬರ್ 22, 2010

ಗಣಕಿಂಡಿ - ೦೮೩ (ಡಿಸೆಂಬರ್ ೨೦, ೨೦೧೦)

ಅಂತರಜಾಲಾಡಿ

ರಸಾಯನಶಾಸ್ತ್ರ ವರ್ಷ

೨೦೧೧ನೆಯ ಇಸವಿಯನ್ನು ರಸಾಯನಶಾಸ್ತ್ರ ವರ್ಷ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಮನುಕುಲದ ಒಳಿತಿಗಾಗಿ ರಸಾಯನಶಾಸ್ತ್ರದ ಕೊಡುಗೆಯನ್ನು ಜನರಿಗೆ ತಿಳಿಸಿ ಹೇಳುವುದು ಈ ವರ್ಷಾಚರಣೆಯ ಮೂಲ ಉದ್ದೇಶಗಳಲ್ಲೊಂದು. “ರಸಾಯನಶಾಸ್ತ್ರ - ನಮ್ಮ ಜೀವನ, ನಮ್ಮ ಭವಿಷ್ಯ” ಎಂಬ ಧ್ಯೇಯ ವಾಕ್ಯದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ೨೦೧೧ರಲ್ಲಿ ಪ್ರಪಂಚಾದ್ಯಂತ ನಡೆಸಲು ತಯಾರಿ ನಡೆದಿದೆ. ಈ ಕಾರ್ಯಕ್ರಮಗಳು ಏನೇನು, ಎಲ್ಲೆಲ್ಲಿ ಇವು ನಡೆಯುತ್ತಿವೆ, ಇತ್ಯಾದಿ ಮಾಹಿತಿಗಳಿಗೆ www.chemistry2011.org ಜಾಲತಾಣಕ್ಕೆ ಭೇಟಿ ನೀಡಿ. ನಿಮ್ಮೂರಿನಲ್ಲಿ ಈ ವರ್ಷಾಚರಣೆಯಲ್ಲಿ ನೀವು ಪಾಲ್ಗೊಳ್ಳಬೇಕೇ? ಅಥವಾ ಕಾರ್ಯಕ್ರಮದ ರೂವಾರಿ ನೀವಾಗಲು ಉತ್ಸುಕರಾಗಿದ್ದೀರಾ? ಹಾಗಿದ್ದರೆ ಇದೇ ಜಾಲತಾಣದಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ.

ಡೌನ್‌ಲೋಡ್

ಫೋಟೋಗಳಿಂದ ಸಿನಿಮಾಕ್ಕೆ

ನೀವು ಇತ್ತೀಚೆಗೆ ಯಾವುದಾದರು ಪ್ರೇಕ್ಷಣೀಯ ಸ್ಥಳಕ್ಕೆ ಹೋಗಿರುತ್ತೀರಿ. ಆಗ ತೆಗೆದ ಫೋಟೋಗಳನ್ನು ಒಂದಾದ ನಂತರ ಒಂದರಂತೆ ಗಣಕದ ಪರದೆಯಲ್ಲಿ ಮೂಡಿಸಿ ತೋರಿಸುತ್ತೀರಿ ತಾನೆ? ಅದರ ಬದಲಿಗೆ ಆ ಎಲ್ಲ ಫೋಟೋಗಳನ್ನು ಒಂದಾದ ನಂತರ ಒಂದು ಚಲನಚಿತ್ರದ ಮಾದರಿಯಲ್ಲಿ ಮೂಡಿಬರುವಂತೆ ಮಾಡಿದರೆ ಹೇಗೆ? ಅಷ್ಟು ಮಾತ್ರವಲ್ಲ ಅದನ್ನು ಸಿ.ಡಿ. ಅಥವಾ ಡಿ.ವಿ.ಡಿ.ಗೆ ವರ್ಗಾಯಿಸಿ ನಿಮ್ಮ ಡಿ.ವಿ.ಡಿ ಪ್ಲೇಯರ್‌ನಲ್ಲಿ ಪ್ಲೇ ಮಾಡಿ ಮನೆಯಲ್ಲಿರುವ ಟಿ.ವಿ. ಪರದೆಯಲ್ಲಿ ಮೂಡಿಸಿದರೆ ಇನ್ನೂ ಚೆನ್ನ ತಾನೆ? ಹೀಗೆ ಫೋಟೋಗಳಿಂದ ಚಲನಚಿತ್ರ ತಯಾರಿಸುವ ಒಂದು ಉಚಿತ ತಂತ್ರಾಂಶ Foto2Avi. ಇದು ದೊರೆಯುವ ಜಾಲತಾಣದ ವಿಳಾಸ bit.ly/hVFeyK.

e - ಸುದ್ದಿ


ಗೂಗ್ಲ್ ತೆರಿಗೆ

ಗೂಗ್ಲ್ ಬಳಸಿ ಯಾವುದಾದರೊಂದು ಮಾಹಿತಿಯನ್ನು ಹುಡುಕುವಾಗ ಪಕ್ಕದಲ್ಲಿ ಜಾಹೀರಾತುಗಳು ಬರುವುದನ್ನು ಗಮನಿಸಿದ್ದೀರಿ ತಾನೆ? ಈ ರೀತಿ ಜಾಹೀರಾತು ಹಾಕಲು ಗೂಗ್ಲ್‌ಗೆ ಹಣ ಕೊಡಬೇಕು. ಈ ಜಾಹೀರಾತುಗಳು ಗೂಗ್ಲ್‌ನಲ್ಲಿ ಮಾತ್ರವಲ್ಲ. ಬಹುತೇಕ ಎಲ್ಲ ಜಾಲತಾಣಗಳಲ್ಲೂ ಕಾಣಸಿಗುತ್ತವೆ. ಈ ರೀತಿ ಜಾಲತಾಣಗಳಲ್ಲಿ ಜಾಹೀರಾತು ನೀಡಲು ಇನ್ನು ಮುಂದೆ ಫ್ರಾನ್ಸ್ ದೇಶದಲ್ಲಿ ಶೇಕಡ ೧ ತೆರಿಗೆ ನೀಡಬೇಕಾಗುತ್ತದೆ. ಈ ತೆರಿಗೆ ಜನವರಿ ೨೦೧೧ರಿಂದ ಜಾರಿಗೆ ಬರಲಿದೆ. ಈ ತೆರಿಗೆಗೆ ಗೂಗ್ಲ್ ತೆರಿಗೆ ಎಂದು ಜನ ನಾಮಕರಣ ಮಾಡಿದ್ದಾರೆ. ಅಂದ ಹಾಗೆ ಈ ರೀತಿ ತೆರಿಗೆ ಹಾಕಬಹುದು ಎಂಬುದನ್ನು ನಮ್ಮ ಸರಕಾರಕ್ಕೆ ಯಾರೂ ತಿಳಿಸಬೇಡಿ!

e- ಪದ
ಸ್ವಪ್ರತಿಷ್ಠೆಯ ಹಡುಕಾಟ (Egosurfing) -ಇದು ಸಾಮಾನ್ಯವಾಗಿ ಗೂಗ್ಲ್ ಅಥವಾ ಬೇರೆ ಯಾವುದಾದರು ಜಾಲಶೋಧಕವನ್ನು ಬಳಸಿ ಅಂತರಜಾಲದಲ್ಲಿ ತನ್ನ ಬಗ್ಗೆ ಏನೇನು ದಾಖಲಾಗಿದೆ ಎಂಬುದನ್ನು ಹುಡುಕುವುದನ್ನು ಸೂಚಿಸಲು ಬಳಕೆಯಾಗುತ್ತಿದೆ. ಹೀಗೆ ಮಾಡುವುದರಿಂದ ತಮ್ಮ ಬಗ್ಗೆ ಬೇರೆ ಯಾರಾದರು ಎಲ್ಲಿಲ್ಲಿ ಏನೇನು ಮಾಹಿತಿ ಹಾಕಿದ್ದಾರೆ, ಏನೇನು ಹೊಗಳಿದ್ದಾರೆ ಅಥವಾ ತೆಗಳಿದ್ದಾರೆ ಎಲ್ಲ ತಿಳಿಯಬಹುದು.

e - ಸಲಹೆ

ಅಶ್ವಿನ್ ಅವರ ಪ್ರಶ್ನೆ: ೮, ೯ ಮತ್ತು ಹತ್ತನೆಯ ತರಗತಿಯ ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ವೀಡಿಯೋ ಪಾಠಗಳು ಎಲ್ಲಿ ಸಿಗುತ್ತವೆ?
ಉ: ಇದೇ ಅಂಕಣದಲ್ಲಿ ಹಿಂದೊಮ್ಮೆ ಸೂಚಿಸಿದ್ದ www.khanacademy.org ಜಾಲತಾಣ ನೋಡಿ. ಹಾಗೆಯೇ www.howstuffworks.com ಜಾಲತಾಣವನ್ನೂ ನೋಡಿ.

ಕಂಪ್ಯೂತರ್ಲೆ

ಹುಡುಗ: ನೀನು ನನ್ನನ್ನು ಪ್ರೀತಿಸುತ್ತಿದ್ದೀಯಾ?
ಹುಡುಗಿ: ಹೌದು
[ಹುಡುಗ ಓಡಲು ಪ್ರಾರಂಭಿಸುತ್ತಾನೆ]
ಹುಡುಗಿ: ಎಲ್ಲಿಗೆ ಓಡುತ್ತಿದ್ದೀಯಾ?
ಹುಡುಗ: ಫೇಸ್‌ಬುಕ್‌ನಲ್ಲಿ relationship status ಬದಲಿಸಲು ಹೋಗುತ್ತಿದ್ದೇನೆ.

ಸೋಮವಾರ, ಡಿಸೆಂಬರ್ 13, 2010

ಗಣಕಿಂಡಿ - ೦೮೨ (ಡಿಸೆಂಬರ್ ೧೩, ೨೦೧೦)

ಅಂತರಜಾಲಾಡಿ

ಭ್ರಷ್ಟಾಚಾರ ನಿರ್ಮೂಲನೆ

೨೦೧೦ನೆಯ ಇಸವಿಯನ್ನು ಹಗರಣಗಳ ವರ್ಷ ಎಂದೇ ಕರೆಯಬಹುದು. ಪ್ರತಿ ದಿನ ಒಂದಲ್ಲ ಒಂದು ಭ್ರಷ್ಟಾಚಾರದ ವರದಿ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದೆ. ಜನರಿಗಂತೂ ಈ ಭ್ರಷ್ಟಾಚಾರಗಳನ್ನು ನೋಡಿ ನೋಡಿ ರೋಸಿ ಹೋಗಿದೆ. ಇದಕ್ಕೆ ಕೊನೆಯೇ ಇಲ್ಲವೇ? ರಾಜಕಾರಣಿ ಮತ್ತು ಸರಕಾರಿ ಅಧಿಕಾರಿಗಳಿಂದ ಏನನ್ನೂ ನಿರೀಕ್ಷಿಸುವಂತಿಲ್ಲ. ಜನರೇ ಮುಂದೆ ಬಂದು ಇದಕ್ಕೆಲ್ಲ ಕೊನೆ ಹಾಕಿಸಬೇಕಾಗಿದೆ. ಅದಕ್ಕಾಗಿಯೇ ಒಂದು ಚಳವಳಿ ನಡೆಯಬೇಕಾಗಿದೆ. ಹಾಗೆಂದು ನೀವು ಭಾವಿಸುತ್ತಿದ್ದೀರಾ? ಹಾಗಿದ್ದರೆ ನಾವೆಲ್ಲ ಏನು ಮಾಡಬಹದು? ಏನು ಮಾಡಬೇಕು? ಎಲ್ಲರೂ ಒಂದುಗೂಡುವುದು ಹೇಗೆ? ಇಂತಹ ಒಂದು ಚಳವಳಿಗೆಂದೇ ಒಂದು ಜಾಲತಾಣ ಸಿದ್ಧವಾಗಿದೆ. ಅದರ ವಿಳಾಸ -killcorruption.org. ಇನ್ನು ತಡವೇಕೆ? ಅಲ್ಲಿಗೆ ಭೇಟಿ ನೀಡಿ ಮುಂದಿನ ಕಾರ್ಯಕ್ರಮಗಳಿಗೆ ನಿಮ್ಮ ಕೈಜೋಡಿಸಿ.

ಡೌನ್‌ಲೋಡ್


ಗುಪ್ತ ಟೊರೆಂಟ್

ಅಂತರಜಾಲದಲ್ಲಿ ತಂತ್ರಾಂಶ, ಸಂಗೀತ, ಚಲನಚಿತ್ರ, ಅಥವಾ ಇನ್ಯಾವುದೇ ಫೈಲುಗಳನ್ನು ಪ್ರಪಂಚಾದ್ಯಂತ ವಿವಿಧ ವ್ಯಕ್ತಿಗಳು ತಮ್ಮ ಗಣಕಗಳಲ್ಲಿ ಸಂಗ್ರಹಿಸಿಟ್ಟು ಆಸಕ್ತರಿಗೆ ಡೌನ್‌ಲೋಡ್ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಈ ರೀತಿಯ ಸೌಲಭ್ಯಕ್ಕೆ P2P ಅಂದರೆ ಪರ್ಸನ್-ಟು-ಪರ್ಸನ್ ಅರ್ಥಾತ್ ವ್ಯಕ್ತಿಯಿಂದ ವ್ಯಕ್ತಿಗೆ ಎಂದು ಕರೆಯುತ್ತಾರೆ. ಇದಕ್ಕಾಗಿ ಬಳಸುವುದು ಟೊರೆಂಟ್ ವಿಧಾನವನ್ನು. ಈ ರೀತಿಯಲ್ಲಿ ಡೌನ್‌ಲೋಡ್ ಮಾಡಲು ಹಲವು ತಂತ್ರಾಂಶಗಳಿವೆ. ಅಂತಹ ಒಂದು ತಂತ್ರಾಂಶ OneSwarm. ಇದರ ವೈಶಿಷ್ಟ್ಯವೇನೆಂದರೆ ಇದು ನಿಮ್ಮ ಪರಿಚಯವನ್ನು ಅಂದರೆ ನಿಮ್ಮ ಐಪಿ ವಿಳಾಸ ಇತ್ಯಾದಿಗಳನ್ನು ಗುಪ್ತವಾಗಿಡುತ್ತದೆ. ಈ ತಂತ್ರಾಂಶ ದೊರೆಯುವ ಜಾಲತಾಣ bit.ly/e7WKjo.

e - ಸುದ್ದಿ

ಸ್ಟೀವ್ ಜಾವ್ಸ್‌ಗೆ ಸಾಲ ವಾಪಾಸು ಬಂದಿಲ್ಲ

ಅಮೆರಿಕದಲ್ಲಿ ಪ್ರತಿ ಕಂಪೆನಿಯೂ ತಾನು ಇತರರಿಗೆ ಕೊಡಬೇಕಾದ ಮತ್ತು ಇತರರಿಂದ ತನಗೆ ಬರಬೇಕಾದ ಹಣ ಮತ್ತು ಆಸ್ತಿಗಳ ಬಗ್ಗೆ ಪ್ರತಿ ವರ್ಷ ಸರಕಾರಕ್ಕೆ ವರದಿ ನಿಡಬೇಕು. ಈ ರೀತಿ ಆಪಲ್ ಕಂಪೆನಿ ಈ ವರ್ಷ ನೀಡಿದ ವರದಿಯಲ್ಲಿ ತಾನು ಒಬ್ಬ ವ್ಯಕ್ತಿಗೆ 37.91 ಡಾಲರು ವಾಪಾಸು ನೀಡಬೇಕಾಗಿದೆ. ಅವರು ಅದನ್ನು ಇನ್ನೂ ಪಡೆದುಕೊಂಡಿಲ್ಲ ಎಂದು ಮಾಹಿತಿ ನೀಡಿದೆ. ಯಾಕೆ ಅವರು ಇನ್ನೂ ಪಡೆದುಕೊಂಡಿಲ್ಲ? ಅವರು ಯಾರು ಎಂಬ ಮಾಹಿತಿ, ಅವರ ವಿಳಾಸ ಸಿಕ್ಕಿಲ್ಲವೇ ಎಂಬ ಅನುಮಾನ ಬರುತ್ತಿದೆಯೇ? ಆ ವ್ಯಕ್ತಿ ಮತ್ತಿನ್ಯಾರೂ ಅಲ್ಲ. ಆಪಲ್ ಕಂಪೆನಿಯ ಮುಖ್ಯಸ್ಥ ಸ್ಟೀವ್ ಜೋವ್ಸ್ ಅವರೇ!

e- ಪದ

ಡಿಡಿಓಎಸ್ (DDoS =Distributed Denial of Service) -ಏಕಕಾಲದಲ್ಲಿ ಪ್ರಪಂಚದ ಹಲವು ಕಡೆಗಳಿಂದ ಒಂದೇ ಜಾಲತಾಣಕ್ಕೆ ಧಾಳಿ ಮಾಡಿ ಅದು ಯಾರಿಗೂ ದೊರಕದಂತೆ ಮಾಡುವುದು. ಎಲ್ಲ ಸರ್ವರ್‌ಗಳಿಗೂ ಏಕಕಾಲಕ್ಕೆ ಇಂತಿಷ್ಟೇ ಬೇಡಿಕೆಗಳನ್ನು ಪೂರೈಸುವ ಶಕ್ತಿ ಇರುತ್ತದೆ. ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆಗಳು ಬಂದರೆ ಅದು ಉತ್ತರಿಸುವುದಿಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಜಾಲತಾಣದಲ್ಲಿ ಘೋಷಿಸಿದಾಗ ಪ್ರಾರಂಭದಲ್ಲಿ ಒಂದೆರಡು ಗಂಟೆಗಳ ಕಾಲ ಅದನ್ನು ವೀಕ್ಷಿಸಲು ಅಸಾಧ್ಯವಾಗುವುದು ಇದೇ ಕಾರಣಕ್ಕೆ. ಡಿಡಿಓಎಸ್ ಧಾಳಿಯಲ್ಲಿ ಹ್ಯಾಕರ್‌ಗಳು ಜಗತ್ತಿನ ಲಕ್ಷಗಟ್ಟಳೆ ಗಣಕಗಳನ್ನು ವಶಕ್ಕೆ ತೆಗದುಕೊಂಡು ಅವುಗಳ ಮೂಲಕ ಒಂದು ಜಾಲತಾಣಕ್ಕೆ ಧಾಳಿ ಇಟ್ಟು ಅದನ್ನು ನಿಷ್ಕ್ರಿಯಗೊಳಿಸುತ್ತಾರೆ. ಇತ್ತೀಚೆಗೆ ತುಂಬ ಸುದ್ದಿ ಮಾಡಿದ ವಿಕಿಲೀಕ್ಸ್‌ಗೆ ಹಣ ಸಂದಾಯ ಮಾಡುವುದನ್ನು ನಿಲ್ಲಿಸಿದ ವೀಸಾ, ಮಾಸ್ಟರ್‌ಕಾರ್ಡ್ ಮತ್ತು ಪೇಪಾಲ್ ಜಾಲತಾಣಗಳಿಗೆ ಅನೋನಿಮ್ ಹೆಸರಿನಲ್ಲಿ ಧಾಳಿ ಮಾಡಿ ಅವುಗಳನ್ನು ಕೆಲವು ಗಂಟೆಗಳ ಕಾಲ ನಿಷ್ಕ್ರಿಯ ಮಾಡಿದ್ದರು.

e - ಸಲಹೆ

ಬೆಂಗಳೂರಿನ ಮಧುಸೂದನರ ಪಶ್ನ್ರೆ: ನಾನು ASP.NET ವಿದ್ಯಾರ್ಥಿ. ನನಗೆ ಅದರ ಬಗ್ಗೆ ಜಾಸ್ತಿ ತಿಳಿದುಕೊಳ್ಳಬೇಕು. ಯಾವ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಸಿಗುತ್ತದೆ?
ಉ: ಮೈಕ್ರೋಸಾಫ್ಟ್‌ನವರದೇ ಆದ msdn.microsoft.com ಮತ್ತು www.asp.net ಜಾಲತಾಣಗಳನ್ನು ನೋಡಿ. 

ಕಂಪ್ಯೂತರ್ಲೆ

ಭಯೋತ್ಪಾದಕರು ಹೈಟೆಕ್ ಆಗುತ್ತಿರುವುದು ಗೊತ್ತೇ ಇದೆ. ಇತ್ತೀಚೆಗೆ ಅವರು ಹೊಸ ನಮೂನೆಯ ಬಾಂಬ್ ತಯಾರಿಸಿದ್ದಾರೆ. ಒಂದು ಜಾಗದಲ್ಲಿ ಬಾಂಬ್ ಸ್ಫೋಟ ಆದ ತಕ್ಷಣ ಇದನ್ನು ನಾವೇ ಮಾಡಿದ್ದು ಎಂದು ಆ ಬಾಂಬ್ ಭಯೋತ್ಪಾದಕರ ಫೇಸ್ಬುಕ್ ಜಾಲತಾಣ ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ಅದು ದಾಖಲಿಸುತ್ತದೆ.

ಸೋಮವಾರ, ಡಿಸೆಂಬರ್ 6, 2010

ಗಣಕಿಂಡಿ - ೦೮೧ (ಡಿಸೆಂಬರ್ ೦೬, ೨೦೧೦)

ಅಂತರಜಾಲಾಡಿ

ಮುಕ್ತ ಶಿಕ್ಷಣ ಸಂಪನ್ಮೂಲ

ಶಿಕ್ಷಣ ದಿನ ಕಳೆದಂತೆ ಅತಿ ದುಬಾರಿಯಾಗುತ್ತಿದೆ. ಪುಸ್ತಕಗಳ ಬೆಲೆ ಗಮನಿಸಿದ್ದೀರಾ? ಸರಕಾರಿ ಪುಸ್ತಕಗಳ ಹೊರತಾಗಿ ಇತರೆ ಖಾಸಗಿ ಪುಸ್ತಕಗಳ ಬೆಲೆ ಗಗನಕ್ಕೇರಿದೆ. ಅದರಲ್ಲೂ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉತ್ತಮ ಚಿತ್ರಗಳಿಂದ ತುಂಬಿದ ಪುಸ್ತಕಗಳ ಬೆಲೆ ಇನ್ನೂ ಅಧಿಕ. ಶಿಕ್ಷಣ ಜನಸಾಮಾನ್ಯರಿಗೆ ಸುಲಭವಾಗಿ ದೊರಕುವಂತಿರಬೇಕು ಮತ್ತು ಮುಕ್ತವಾಗಿರಬೇಕೆಂದು ಹೇಳುವವರು ನಮ್ಮ ದೇಶದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಇದ್ದಾರೆ. ಇವರೆಲ್ಲ ಸೇರಿಕೊಂಡು ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಸಂಪನ್ಮೂಲಗಳನ್ನು ಮುಕ್ತವಾಗಿ ದೊರೆಯುವಂತೆ ಮಾಡಲು ಒಂದು ಜಾಲತಾಣವನ್ನು ನಿರ್ಮಿಸಿದ್ದಾರೆ. ಅದರ ವಿಳಾಸ -www.oercommons.org. ಇತರೆ ಮುಕ್ತ ಸಂಪನ್ಮೂಲಗಳಿಗೆ ಇದರಲ್ಲಿ ಸಂಪರ್ಕಕೊಂಡಿಗಳೂ ಇವೆ.

ಡೌನ್‌ಲೋಡ್

ಎಂಪಿ3 ಟ್ಯಾಗ್

ಗಣಕ ಮತ್ತು ಹಾಡುಗಳ ಪ್ಲೇಯರ್‌ಗಳಲ್ಲಿ ಬಳಕೆಯಾಗುವ ಹಾಡುಗಳು ಸಾಮಾನ್ಯವಾಗಿ ಎಂಪಿ೩ ವಿಧಾನದವುಗಳು. ಈ ಹಾಡುಗಳ ಕಡತಗಳಿಗೆ (ಫೈಲ್) ಹಲವು ಗುಣವಿಶೇಷಗಳಿರುತ್ತವೆ. ಅವುಗಳೆಂದರೆ ಹಾಡಿನ ಶೀರ್ಷಿಕೆ, ಕಲಾವಿದ, ಆಲ್ಬಮ್ ಹೆಸರು, ಆಲ್ಬಮ್ ಚಿತ್ರ, ದಿನಾಂಕ, ಇತ್ಯಾದಿ. ಹೆಚ್ಚಿನ ಗಣಕದಲ್ಲಿ ಈ ಹಾಡುಗಳನ್ನು ಪ್ಲೇ ಮಾಡುವಾಗ ಸಾಮಾನ್ಯವಾಗಿ ಈ ಗುಣವೈಶಿಷ್ಟ್ಯಗಳಿಗೆ ಅನುಗಣವಾಗಿ ಅವುಗಳನ್ನು ಪ್ಲೇ ಮಾಡಲಾಗುತ್ತದೆ. ಹೆಚ್ಚಿನ ಎಂಪಿ೩ ಪ್ಲೇಯರ್‌ಗಳಲ್ಲೂ (ಉದಾ -ಐಪಾಡ್) ಇದೇ ವಿಧಾನವನ್ನು ಬಳಸಲಾಗುತ್ತದೆ. ಹಾಡುಗಳನ್ನು ಸಿ.ಡಿ.ಯಿಂದ ಗಣಕದಲ್ಲಿ ಪ್ರತಿಮಾಡಿ ಎಂಪಿ೩ಗೆ ಪರಿವರ್ತನೆ ಮಾಡಿದಾಗ ಈ ಎಲ್ಲ ಗುಣವೈಶಿಷ್ಟ್ಯಗಳನ್ನು ದಾಖಲಿಸಬೇಕು. ಇಲ್ಲವಾದಲ್ಲಿ ಅವುಗಳನ್ನು ಪ್ಲೇ ಮಾಡಲು ಒದ್ದಾಡಬೇಕಾಗುತ್ತದೆ. ಹಾಡುಗಳಿಗೆ ಈ ಎಂಪಿ೩ ಗುಣವೈಶಿಷ್ಟ್ಯಗಳನ್ನು ದಾಖಲಿಸಲು ಅನುವುಮಾಡಿಕೊಡುವ ಒಂದು ಉಚಿತ ತಂತ್ರಾಂಶ Mp3tag. ಇದು ದೊರೆಯುವ ಜಾಲತಾಣ www.mp3tag.de/en

e - ಸುದ್ದಿ

1$ ಪರಿಹಾರ

ಗೂಗ್ಲ್ ಬೀದಿನೋಟ ಎಂಬ ಜಾಲತಾಣದಲ್ಲಿ ಬೀದಿಗಳನ್ನು ಅಂತರಜಾಲದ ಮೂಲಕ ವೀಕ್ಷಣೆ ಮಾಡಬಹುದು. ಮಕ್ಕಳನ್ನು ಅಮೇರಿಕಕ್ಕೆ ಕಳುಹಿಸಿರುವ ಭಾರತೀಯರು ಇಲ್ಲಿ ಕುಳಿತೇ ಅವರ ಮಕ್ಕಳ ಮನೆ, ಕಛೇರಿ, ಅವರು ಓಡಾಡುವ ರಸ್ತೆಗಳು, ಅಂಗಡಿಗಳನ್ನೆಲ್ಲ ನೋಡಬಹುದು. ಈ ರೀತಿ ಬೀದಿನೋಟವನ್ನು ದಾಖಲಿಸಲು ಗೂಗ್ಲ್‌ನವರು ಕಾರಿನ ಮೇಲೆ ಕ್ಯಾಮರಾ ಇಟ್ಟು ಬೀದಿ ಬೀದಿ ಓಡಿಸುತ್ತಾರೆ. ಹೀಗೆ ಬೀದಿನೋಟದಲ್ಲಿ ತಮ್ಮ ಖಾಸಗಿ ಮನೆ, ಬೀದಿಗಳನ್ನು ತೋರಿಸಿದ್ದರ ವಿರುದ್ಧ ಒಂದು ದಂಪತಿಗಳು ದಾವೆ ಹೂಡಿದರು. ಎರಡು ವರ್ಷಗಳ ಹೋರಾಟದ ನಂತರ ಅವರಿಗೆ ಪರಿಹಾರವೂ ದೊರೆಯಿತು. ಎಷ್ಟು ಗೊತ್ತೆ? ಕೇವಲ ೧ ಡಾಲರು! ಆ ದಂಪತಿಗಳು ಈಗಾಗಲೆ ರಿಯಲ್ ಎಸ್ಟೇಟ್ ಜಾಲತಾಣವೊಂದರಲ್ಲಿ ತಮ್ಮ ಮನೆ, ಬೀದಿ, ಆಸ್ತಿಗಳ ಫೋಟೋ ದಾಖಲಿಸಿದ್ದರು. ಹೀಗಿರುವಾಗ ಗೂಗ್ಲ್‌ನವರು ಏನು ವಿಶೇಷ ತಪ್ಪು ಮಾಡಿದಂತಾಯಿತು? ಹೌದು. ಗೂಗ್ಲ್‌ನವರು ಒಂದು ತಪ್ಪು ಮಾಡಿದ್ದರು. ಅದೇನೆಂದರೆ ಆ ದಂಪತಿಗಳ ಖಾಸಗಿ ರಸ್ತೆಯಲ್ಲಿ ತಮ್ಮ ಕಾರು ಚಲಾಯಿಸಿದ್ದು. ಅದಕ್ಕಾಗಿ ಪರಿಹಾರ ನೀಡಬೇಕೆಂದು ನ್ಯಾಯಾಲಯ ತೀರ್ಮಾನ ನಿಡಿತು.

e- ಪದ


ಡೊಮೈನ್ (domain) - ಅಂತರಜಾಲದಲ್ಲಿ ಮತ್ತು ಗಣಕ ಜಾಲದಲ್ಲಿ ಗಣಕಗಳು ಮತ್ತು ಇತರೆ ಸಾಧನಗಳು ಒಂದು ಗುಂಪಾಗಿ ಎಲ್ಲವಕ್ಕೂ ಏಕರೀತಿಯ ನಿಯಮಗಳ ಮೂಲಕ ನಿಯಂತ್ರಿಸಲಾಗುತ್ತದೆ. ಅಂತರಜಾಲದಲ್ಲಿ ಇವುಗಳನ್ನು ಸಂಖ್ಯೆಗಳ ಗುಚ್ಛದ ಮೂಲಕವೂ ಗುರುತಿಸಲಾಗುತ್ತದೆ. ಈ ರೀತಿಯ ಸಂಖ್ಯೆಗುಚ್ಛದ ವಿಳಾಸಕ್ಕೆ ಐಪಿ ವಿಳಾಸ ಎಂದು ಕರೆಯಲಾಗುತ್ತದೆ.

e - ಸಲಹೆ

ಪಣಜಿಯ ಸಂತೋಷರ ಪ್ರಶ್ನೆ: ನನ್ನಲ್ಲಿ ಒಂದು ಸ್ಯಾಮ್‌ಸಂಗ್ ಫೋನ್ ಇದೆ. ಗಣಕದಲ್ಲಿ ಹಾಡುಗಳನ್ನು ನನಗೆ ಬೇಕಾದ ರೀತಿಯಲ್ಲಿ ಸರಿಹೊಂದಿಸಿ ಅವುಗಳನ್ನು ಫೋನಿಗೆ ವರ್ಗಾಯಿಸಿದೆ. ಆದರೆ ಈಗ ಫೋನಿನಲ್ಲಿ ಹಾಡುಗಳು ನನಗೆ ಬೇಕಾದ ರೀತಿಯಲ್ಲಿ ಸಿಗುತ್ತಿಲ್ಲ. ಹಾಡುಗಳ ಶೀರ್ಷಿಕೆ ಪ್ರಕಾರ ಹಾಡುಗಳು ಕಾಣಿಸುತ್ತಿಲ್ಲ. ಇದಕ್ಕೇನು ಪರಿಹಾರ?
ಉ: ನೀವು ಹಾಡುಗಳನ್ನು ಫೋನಿಗೆ ವರ್ಗಾಯಿಸುವ ಮೊದಲು ಅವುಗಳ ಎಂಪಿ೩ ಟ್ಯಾಗ್‌ಗಳನ್ನು ಹಾಡುಗಳ ಶೀರ್ಷಿಕೆ, ಕಲಾವಿದ, ಇತ್ಯಾದಿ ಗುಣವೈಶಿಷ್ಟ್ಯಗಳನ್ನು ಸೇರಿಸಿ ನಂತರ ಫೋನಿಗೆ ವರ್ಗಾಯಿಸಬೇಕು. ಆಗ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ. ಈ ರೀತಿ ಎಂಪಿ೩ ಟ್ಯಾಗ್ ಸಂಪಾದಿಸಲು ಇದೇ ಅಂಕಣದಲ್ಲಿ ಸೂಚಿಸಿರುವ Mp3tag ತಂತ್ರಾಂಶ ಬಳಸಿ. 

ಕಂಪ್ಯೂತರ್ಲೆ

ತಲೆಕೆಡಿಸುವ ಜಾಲತಾಣಗಳು, ವೈರಸ್ ತುಂಬಿದ ಡೌನ್‌ಲೋಡ್‌ಗಳು, ಸಮಯ ಹಾಳುಮಾಡುವ e-ಸುದ್ದಿಗಳು, ಕೆಲಸಕ್ಕೆ ಬಾರದ e-ಸಲಹೆಗಳು, ನಗಿಸದ ಕಂಪ್ಯೂತರ್ಲೆಗಳು - ಗಣಕಿಂಡಿ ಇಷ್ಟೇನೆ.