ಸೋಮವಾರ, ಜುಲೈ 2, 2012

ಗಣಕಿಂಡಿ - ೧೬೩ (ಜುಲೈ ೦೨, ೨೦೧೨)

ಅಂತರಜಾಲಾಡಿ

ತುಳು ಅಕಾಡೆಮಿ

ಸುಮಾರು ೨೦ ಲಕ್ಷ ಜನ ಮಾತನಾಡುವ ಭಾಷೆ ತುಳು. ಕೇರಳದ ಕಾಸರಗೋಡು, ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮಾತನಾಡುವ ಭಾಷೆ ಇದು. ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಇನ್ನೂ ಸೇರ್ಪಡೆಯಾಗಿಲ್ಲ. ಒಂದು ಕಾಲದಲ್ಲಿ ತುಳು ಭಾಷೆಗೆ ತನ್ನದೇ ಆದ ಲಿಪಿ ಇತ್ತು. ಈಗ ಅದು ಬಳಕೆಯಲ್ಲಿಲ್ಲ. ಈಗ ಬಹುಪಾಲು ತುಳು ಭಾಷಿಕರು ತುಳುವನ್ನು ಕನ್ನಡ ಲಿಪಿಯಲ್ಲೇ ಬರೆಯುತ್ತಾರೆ. ಕರ್ನಾಟಕ ಸರಕಾರವು ತುಳು ಭಾಷೆಗೆ ಒಂದು ಅಕಾಡೆಮಿಯನ್ನು ಸ್ಥಾಪಿಸಿದೆ. ಅದರ ಜಾಲತಾಣ www.tuluacademy.org. ಎಲ್ಲ ಸರಕಾರಿ ಜಾಲತಾಣಗಳಂತೆ ಎಲ್ಲ ಪದಾಧಿಕಾರಿಗಳ ಹೆಸರು, ಇತರೆ ಅಕಾಡೆಮಿಯ ಇತರೆ ವಿವರಗಳು ಇವೆ. ತುಳು ಭಾಷೆಯಲ್ಲಿ ಮಾತ್ರ ಏನೇನೂ ಲೇಖನ, ಮಾಹಿತಿ ಇಲ್ಲ. ಇಲ್ಲೋ ಒಂದೆರಡು ವಾಕ್ಯಗಳು ಮಾತ್ರ ತುಳು ಭಾಷೆಯಲ್ಲಿ ಇವೆ.

ಡೌನ್‌ಲೋಡ್

ಪಿಯಾನೋ

ಪಿಯಾನೊ ಕಲಿಯಬೇಕೇ? ಕಲಿತು ಬಾರಿಸಬೇಕೇ? ಪಿಯಾನೊ ತುಂಬ ದುಬಾರಿ ಸಂಗೀತ ಉಪಕರಣ. ಸುಲಭದಲ್ಲಿ ಪಿಯಾನೊ ಕಲಿಯಬೇಕಾದರೆ ಅದಕ್ಕೆಂದೇ ಒಂದು ಉಚಿತ ತಂತ್ರಾಂಶ ಲಭ್ಯವಿದೆ. ಅದರ ಹೆಸರು Midi Player Tool. ಈ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಂಡರೆ ಗಣಕದ ಪರದೆಯ ಮೇಲೆ ಮಿಥ್ಯಾ ಪಿಯಾನೋ ಕಾಣಿಸುತ್ತದೆ. ಅದನ್ನು ಮೌಸ್ ಬಳಸಿ ಅಥವಾ ಕೀಲಿಮಣೆ ಬಳಸಿ ಬಾರಿಸಬಹುದು. ಸಂಗೀತದ ಸಂಕೇತ ಭಾಷೆ ಗೊತ್ತಿದ್ದಲ್ಲಿ ಅವುಗಳನ್ನು ಊಡಿಸಿ ಸಂಗೀತ ನುಡಿಸಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲಾಣ sourceforge.net/projects/miditool.

e - ಸುದ್ದಿ


ಇನ್ನು ಪೈರೇಟ್ ಬೇ ಬಳಸಬಹುದು

ಭಾರತ ಸರಕಾರವು ಪೈರೇಟ್‌ಬೇ ಜಾಲತಾಣವನ್ನು ನಿರ್ಬಂಧಿಸಿದ ಬಗ್ಗೆ ಇದೇ ಅಂಕಣದಲ್ಲಿ ಪ್ರಸ್ತಾಪಿಸಲಾಗಿತ್ತು. ನಿಜವಾಗಿ ನೋಡಿದರೆ ನಿರ್ಬಂಧ ವಿಧಿಸಿದ್ದು ಚೆನ್ನೈ ಹೈಕೋರ್ಟ್. ಟೊರೆಂಟ್ ಜಾಲತಾಣಗಳ ಮೂಲಕ ಸಿನಿಮಾಗಳನ್ನು ಕೃತಿಚೌರ್ಯ ಮಾಡಿ ಹಂಚುತ್ತಿದ್ದರು. ಅವುಗಳ ಸೂಚಿ ಪೈರೇಟ್‌ಬೇ ಜಾಲತಾಣದಲ್ಲಿ ದೊರೆಯುತ್ತಿತ್ತು. ಆದರೆ ಹೈಕೋರ್ಟ್ ಪೈರೇಟ್‌ಬೇ ಜಾಲತಾಣ ಮತ್ತು ಟೊರೆಂಟ್ ಜಾಲವನ್ನು ನಿರ್ಬಂಧಿಸಿತ್ತು. ಅಂತರಜಾಲ ಸಂಪರ್ಕ ಸೇವೆ ನೀಡುವವರು ಇದರ ವಿರುದ್ಧ ಅಪೀಲ್ ಮಾಡಿದ್ದರು. ಎಲ್ಲ ಜಾಲತಾಣಗಳನ್ನು ನಿರ್ಬಂಧಿಸಬೇಕಾಗಿಲ್ಲ, ಕೃತಿಚೌರ್ಯ ಮಾಡುವ ಜಾಲತಾಣದ ಮುಖ್ಯವಾಗಿ ಆ ಫೈಲ್ ಇರುವ ಜಾಲತಾಣದ ವಿಳಾಸವನ್ನು ಮಾತ್ರ ನಿರ್ಬಂಧಿಸಿದರೆ ಸಾಕು ಎಂಬ ವಾದವನ್ನು ಕೋರ್ಟ್ ಒಪ್ಪಿಕೊಂಡಿತು.

e- ಪದ


ಮೈಕ್ರೋಸಾಫ್ಟ್ ಸರ್ಫೇಸ್ ಟ್ಯಾಬ್ಲೆಟ್ (Microsoft Surface Tablet) - ಮೈಕ್ರೋಸಾಫ್ಟ್‌ನವರು ಇತ್ತೀಚೆಗೆ ಘೋಷಿಸಿದ ಎರಡು ಹೊಚ್ಚ ಹೊಸ ಟ್ಯಾಬ್ಲೆಟ್ ಗಣಕಗಳು. ಇವು ವಿಂಡೋಸ್ ೮ ಆಧಾರಿತವಾಗಿವೆ. ೨೦೧೨ರ ಕೊನೆಯಾರ್ಧದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

e - ಸಲಹೆ

ಗಾಬ್ರಿಯೆಲ್ ಅವರ ಪ್ರಶ್ನೆ: ನನಗೆ ಇಂಗ್ಲಿಶ್‌ನಿಂದ ಕನ್ನಡಕ್ಕೆ ಅನುವಾದ ಮಾಡುವ ತಂತ್ರಾಂಶ ಬೇಕು. ಲಭ್ಯವಿದೆಯೇ?
ಉ: ಪೂರ್ತಿಪ್ರಮಾಣದ ಅನುವಾದಕ ಇಲ್ಲ. ಗೂಗ್ಲ್‌ನವರ ಅನುವಾದ ಸವಲತ್ತು ಬಳಸಿ ನೋಡಬಹುದು (translate.google.com). ಅದೂ ಪರಿಪೂರ್ಣವಾಗಿಲ್ಲ.

ಕಂಪ್ಯೂತರ್ಲೆ


ಫೇಸ್‌ಬುಕ್ ಗಾದೆ: ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ ಸಾಲ ಕೇಳಿದರಂತೆ

ಸೂಚನೆ

ಮೂರು ವರ್ಷಗಳಿಂದ ಸತತವಾಗಿ ಹರಿದು ಬರುತ್ತಿದ್ದ ಗಣಕಿಂಡಿ ಅಂಕಣಕ್ಕೆ ಸದ್ಯ ವಿರಾಮ. ಮುಂದಿನ ವಾರದಿಂದ ಅಂಕಣ ಇರುವುದಿಲ್ಲ. ಎಲ್ಲ ಹಳೆಯ ಲೇಖನಗಳನ್ನು ಮತ್ತು ಹೆಚ್ಚಿನ ಮಾಹಿತಿಯನ್ನು ganakindi.blogspot.in ಜಾಲತಾಣದಲ್ಲಿ ಓದಬಹುದು.
(ಈ ಸಂಚಿಕೆ ಕನ್ನಡಪ್ರಭದಲ್ಲಿ ಪ್ರಕಟವಾಗಿಲ್ಲ)

ಸೋಮವಾರ, ಜೂನ್ 25, 2012

ಗಣಕಿಂಡಿ - ೧೬೨ (ಜೂನ್ ೨೫, ೨೦೧೨)

ಅಂತರಜಾಲಾಡಿ

ಒಪ್ಪಣ್ಣ

ಕರಾವಳಿಯ ಕಾಸರಗೋಡಿನಿಂದ ಹಿಡಿದು ಗೋಕರ್ಣ, ಮಲೆನಾಡಿನ ಸಾಗರ, ಶಿರ್ಶಿ, ಸಿದ್ಧಾಪುರ - ಈ ಊರುಗಳಲ್ಲಿ ಹಬ್ಬಿರುವ ಹವ್ಯಕ ಜನಾಂಗ ಬಳಸುವ ಭಾಷೆ ಹವ್ಯಕ ಅಥವಾ ಹವಿಗನ್ನಡ. ಇದು ಕನ್ನಡ ಭಾಷೆಯದೇ ಒಂದು ಪ್ರಭೇದ. ಬಹುಮಟ್ಟಿಗೆ ಹಳೆಗನ್ನಡವನ್ನು ಹೋಲುವ ಭಾಷೆ. ಹಳೆಗನ್ನಡಕ್ಕೂ ಹೊಸಗನ್ನಡಕ್ಕೂ ಜೀವಂತ ಕೊಂಡಿ ಎಂದು ಕರೆಯಲೂ ಬಹುದು. ಹವ್ಯಕ ಭಾಷೆಯನ್ನು ಬಳಸುವ ಮಂದಿ ಲಕ್ಷದಲ್ಲಿದ್ದಾರೆ. ಅದೊಂದು ವಿಶಿಷ್ಟ ಜನಾಂಗ. ಹವ್ಯಕ ಭಾಷೆಯು ಕನ್ನಡ ಭಾಷೆಯದೇ ಲಿಪಿಯನ್ನು ಬಳಸುತ್ತದೆ. ಹವ್ಯಕ ಭಾಷೆಯ, ಬಹುಶಃ ಏಕೈಕ, ಜಾಲತಾಣ oppanna.com. ಮೊದಲು ಬ್ಲಾಗ್ ರೂಪದಲ್ಲಿದ್ದ (೨೦೦೯) ಇದು ತನ್ನದೇ ಜಾಲತಾಣವನ್ನು ೨೦೧೦ರಲ್ಲಿ ಪಡೆಯಿತು. ಹವ್ಯಕ ಭಾಷೆಯಂತೆ ಈ ಜಾಲತಾಣವೂ ಕನ್ನಡ ಲಿಪಿಯನ್ನು (ಯುನಿಕೋಡ್) ಬಳಸುತ್ತದೆ. ಸುಮಾರು ೬೦೦ ಮಂದಿ ಸದಸ್ಯರಿರುವ ಈ ಜಾಲತಾಣದಲ್ಲಿ ಹವ್ಯಕ ಭಾಷೆಯಲ್ಲಿ ಲೇಖನಗಳು, ಚರ್ಚೆಗಳು ನಡೆಯುತ್ತಿರುತ್ತವೆ. ಸುಮಾರು ೨೦೦೦ ಲೇಖನ ಮತ್ತು ಚರ್ಚಾ ವಿಷಯಗಳಿವೆ.

ಡೌನ್‌ಲೋಡ್

ಕೇರಂ

ಕೇರಂ ಆಟ ಯಾರಿಗೆ ಗೊತ್ತಿಲ್ಲ? ಈ ಆಟ ತುಂಬ ಜನಪ್ರಿಯ. ಇದನ್ನೇ ಗಣಕದಲ್ಲಿ ಆಡುವಂತಿದ್ದರೆ? ಹೌದು, ಈಗ ಅದೂ ದೊರೆಯುತ್ತಿದೆ. ಈ ಆಟ ಡೌನ್‌ಲೋಡ್ ಮಾಡಿಕೊಳ್ಳಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ playcarrom.com. ಆಟ ಫ್ಲಾಶ್ ಫೈಲ್ ಆಗಿದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಸುಮ್ಮನೆ ಡಬಲ್ ಕ್ಲಿಕ್ ಮಾಡಿ ಆಡುವುದು. ಯಾವುದೇ ಇನ್‌ಸ್ಟಾಲ್ ಮಾಡುವ ರಗಳೆ ಇಲ್ಲ. ಇದು ಇನ್ನೂ ಅರಂಭದ ಆವೃತ್ತಿ. ಇದರಲ್ಲಿ ಬೇರೆ ಬೇರೆ ಹಂತಗಳಿಲ್ಲ (ಉದಾ -ಸರಳ, ಕ್ಲಿಷ್ಟ, ಇತ್ಯಾದಿ). ಧ್ವನಿಯೂ ಇಲ್ಲ. ಸ್ಟ್ರೈಕರ್ ಕಾಯಿಗೆ ಕುಟ್ಟಿದಾಗ ಬರುವ ಧ್ವನಿ ಕೇಳುವಂತಿದ್ದರೆ ಚೆನ್ನಾಗಿತ್ತು. ಅದೇ ರೀತಿ ನಾವು ಕಾಯಿಗೆ ಸ್ಟ್ರೈಕರ್ ಗುರಿ ಇಡುವಾಗ ಒಂದು ರೇಖೆಯ ಮೂಲಕ ಗುರಿ ಎಲ್ಲಿದೆ ಎಂದು ತೋರಿಸುವಂತಿದ್ದರೆ ಚೆನ್ನಾಗಿರುತ್ತಿತ್ತು. ಬಹುಶಃ ಮುಂದಿನ ಆವೃತ್ತಿಗಳಲ್ಲಿ ಈ ಸವಲತ್ತುಗಳು ಲಭ್ಯವಾಗಬಹುದು ಎಂದು ಆಶಿಸೋಣ.

e - ಸುದ್ದಿ


ಭಾಷೆಗಳಿಗೆ ಗೂಗ್ಲ್ ಸಹಾಯ

ಶತಕೋಟಿಗಟ್ಟಲೆ ಡಾಲರುಗಳ ದೊಡ್ಡ ರಾಶಿಯ ಮೇಲೆ ಕುಳಿತ ಅತಿ ಶ್ರೀಮಂತ ಗೂಗ್ಲ್ ಕೆಲವು ಲೋಕೋಪಯೋಗಿ ಕೆಲಸಗಳನ್ನೂ ಮಾಡುತ್ತದೆ. ಆ ಮೂಲಕ ಈ ದೊಡ್ಡ ರಾಶಿಯನ್ನು ಅಲ್ಪ ಸ್ವಲ್ಪ ಕರಗಿಸುತ್ತದೆ. ಇಂತಹ ಒಂದು ಕ್ರಿಯಾಯೋಜನೆ ಅಳಿದುಳಿದ ಹಾಗೂ ನಶಿಸುತ್ತಿರುವ ಭಾಷೆಗಳಿಗೆ ಸಹಾಯ ಮಾಡುವುದು. ಇತ್ತೀಚೆಗೆ ಗೂಗ್ಲ್ ತನ್ನ ಬ್ಲಾಗಿನಲ್ಲಿ ಈ ಬಗ್ಗೆ ಹೇಳಿಕೊಂಡಿದೆ. ವಿನಾಶದಂಚಿನಲ್ಲಿರುವ ಭಾಷೆಗಳಿಗೆ ಸಹಾಯ ಮಾಡಲೆಂದೇ ಇರುವ ಸಂಸ್ಥೆಗಳ ಜೊತೆ ಅದು ಕೈಜೋಡಿಸುತ್ತದೆ ಹಾಗೂ ಧನಸಹಾಯ ಮಾಡುತ್ತದೆ. ಹೆದರಬೇಡಿ, ಈ ಪಟ್ಟಿಯಲ್ಲಿ ಕನ್ನಡ ಭಾಷೆ ಇಲ್ಲ.

e- ಪದ
ನೈಜ ಪರದೆ (ರೆಟಿನ ಡಿಸ್‌ಪ್ಲೇ - Retina Display) - ಆಪಲ್ ಕಂಪೆನಿ ಸೃಷ್ಟಿಸಿದ ವ್ಯಾಪಾರೀ ಪದ. ಎಲ್ಲ ಗಣಕ ಪರದೆಗಳಲ್ಲಿ ಒಂದು ಇಂಚಿಗೆ ಇಂತಿಷ್ಟು ಎಂದು ಚುಕ್ಕಿಗಳಿರುತ್ತವೆ. ಇವು ಅತಿ ಹೆಚ್ಚಾದಾಗ ಚಿತ್ರವು ಚುಕ್ಕಿಗಳಿಂದಾಗಿದೆ ಎಂದು ನಮ್ಮ ಕಣ್ಣಿಗೆ ತಿಳಿಯುವುದಿಲ್ಲ. ಇಂತಹ ಪರದೆಗಳಿಗೆ ರೆಟಿನ ಡಿಸ್‌ಪ್ಲೇ ಎನ್ನುತ್ತಾರೆ. ಆಪಲ್ ಐಫೋನ್ 4S ನಲ್ಲಿ ಮೊದಲ ಬಾರಿಗೆ ಇಂತಹ ಪರದೆಗಳನ್ನು ಬಳಸಲಾಯಿತು.

e - ಸಲಹೆ

ಬೆಳ್ಳಾರಿಯ ವೀರಭದ್ರ ಅವರ ಪ್ರಶ್ನೆ: ಸಾಮಾನ್ಯ ಎಲ್‌ಸಿಡಿ ಪರದೆಗಳಲ್ಲಿ ಮೂರು ಆಯಾಮದ ಸಿನಿಮಾ ನೋಡಬಹುದೆ? ಇಲ್ಲವಾದಲ್ಲಿ ಏನೇನು ಬದಲಾವಣೆ ಮಾಡಿಕೊಳ್ಳಬೇಕು?
ಉ: ಇಲ್ಲ. ಮೂರು ಆಯಾಮದ ಪರದೆ ಪ್ರತ್ಯೇಕ ಸಿಗುತ್ತದೆ. ಅದನ್ನು ಕೊಂಡುಕೊಳ್ಳಬೇಕು. ಅದರ ಜೊತೆ ದೊರೆಯುವ ಕನ್ನಡಕ ಹಾಕಿಕೊಂಡು ವೀಕ್ಷಿಸಬೇಕು. ಮೂರು ಆಯಾಮದ ಪರದೆಗಳು ಗಣಕಕ್ಕೂ ದೊರೆಯುತ್ತಿವೆ.

ಕಂಪ್ಯೂತರ್ಲೆಕೋಲ್ಯ ಬೆಳಿಗ್ಗೆ ಎದ್ದು ಕನ್ನಡಿ ಮುಂದೆ ನಿಂತುಕೊಂಡು ತನ್ನ ಪ್ರತಿಬಿಂಬ ನೋಡಹೊರಟ. ಆಗ ಆತನಿಗೆ ಕನ್ನಡಿಯಲ್ಲಿ ಕಂಡು ಬಂದುದು “Error 404: image not found”.

ಶುಕ್ರವಾರ, ಜೂನ್ 22, 2012

ಗಣಕಿಂಡಿ - ೧೬೧ (ಜೂನ್ ೧೮, ೨೦೧೨)

ಅಂತರಜಾಲಾಡಿ

ವೃತ್ತಿನಿರತರ ಸಮಾಜತಾಣ

ಒಬ್ಬರಿಗೊಬ್ಬರು ಸಂಪರ್ಕದಲ್ಲಿರಲು ಇರುವ ಸಮಾಜತಾಣಗಳು (social networking websites) ಹಲವಾರಿವೆ. ಈಗೀಗ ಇಂತಹ ಜಾಲತಾಣಗಳು ವಿಷಯಾಧಾರಿತವಾಗಿ ವಿಶೇಷವಾಗಲು ತೊಡಗಿವೆ. ಉದಹರಣೆಗೆ ತಮ್ಮತಮ್ಮ ವೃತ್ತಿಗಳ ಬಗ್ಗೆ ಒಬ್ಬರಿಗೊಬ್ಬರು ಸಂಪರ್ಕದಲ್ಲಿರಲು, ವೃತ್ತಿಗಳಿಗೆ ಅನುಗುಣವಾಗಿ ವಿವಿಧ ತಂಡಗಳನ್ನು ಕಟ್ಟಿಕೊಂಡು ವಿಚಾರವಿನಿಮಯ ಮಾಡಿಕೊಳ್ಳಲು, ತಮ್ಮ ತಮ್ಮ ವೃತ್ತಿವಿಷಯಗಳ ಬಗ್ಗೆ ಚರ್ಚೆ ನಡೆಸಲು -ಹೀಗೆ ಹಲವು ರೀತಿಯಲ್ಲಿ ವೃತ್ತಿಪರಿಣತರಿಗಾಗಿ ಇರುವ ಸಮಾಜಜಾಲತಾಣ www.linkedin.com. ಇದನ್ನು ವೃತ್ತಿಪರಿಣತರ (professionals) ಫೇಸ್‌ಬುಕ್ ಎನ್ನಬಹುದು.

ಡೌನ್‌ಲೋಡ್

ಶೇರು ಮಾರುಕಟ್ಟೆ

ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವವರು ಬಹಳ ಮಂದಿ ಇದ್ದಾರೆ. ಯಾವ ಕಂಪೆನಿಯ ಶೇರು ಈಗ ಯಾವ ಬೆಲೆಯಲ್ಲಿ ಮಾರಾಟವಾಗುತ್ತಿದೆ, ಯಾವುದನ್ನು ಕೊಳ್ಳಬಹುದು, ಯಾವುದನ್ನು ಮಾರಬಹುದು, ಇತ್ಯಾದಿ ಚಿಂತನೆ ಮಾಡುತ್ತಲೇ ಇರುತ್ತಾರೆ. ಇಂತಹವರಿಗಾಗಿ ಹಲವಾರು ಜಾಲತಾಣಗಳು, ಡೌನ್‌ಲೋಡ್ ಮಾಡಿಕೊಳ್ಳಬಲ್ಲ ತಂತ್ರಾಂಶಗಳೂ ಲಭ್ಯವಿವೆ. ಅಂತಹ ಒಂದು ತಂತ್ರಾಂಶ STOCKTICKER. ಇದು ಒಂದು ಟಿಕರ್. ಅಂದರೆ ಟಿವಿಯಲ್ಲಿ ಸುದ್ದಿಯನ್ನು ಕೆಳಗೆ ಸ್ಕ್ರಾಲ್ ಮಾಡುತ್ತಿರುತ್ತಾರಲ್ಲ, ಅದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಯಾವ ಕಂಪೆನಿಯ ಶೇರಿನ ಬೆಲೆ ಎಷ್ಟಿದೆ ಎಂಬುದನ್ನು ಸ್ಕ್ರಾಲ್ ಮಾಡುತ್ತಿರುತ್ತದೆ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/stockscroll.

e - ಸುದ್ದಿ

ಗೂಗ್ಲ್ ಬಳಸಿ ಕೊಲೆ

ಇಲ್ಲ, ಯಾರೂ ಗೂಗ್ಲ್ ಅನ್ನು ಒಂದು ಆಯುಧವಾಗಿ ಬಳಸಿ ಕೊಲೆ ಮಾಡಿಲ್ಲ. ಕೊಲೆ ಮಾಡುವುದು ಹೇಗೆ, ಯಾವ ಯಾವ ರೀತಿಯಲ್ಲಿ ಕೊಲೆ ಮಾಡಬಹುದು, ಕೊಲೆ ಮಾಡಿ ದಕ್ಕಿಸಿಕೊಳ್ಳುವುದು ಹೇಗೆ? -ಇತ್ಯಾದಿ ಪ್ರಶ್ನೆಗಳನ್ನು ಗೂಗ್ಲ್‌ಗೆ ಎಸೆದು ಉತ್ತರ ಪಡೆದು ನಂತರ ಕೊಲೆ ಮಾಡಲಾಯಿತು. ಇದು ನಡೆದುದು ಅಮೆರಿಕದ ಫ್ಲಾರಿಡಾದಲ್ಲಿ. ಕೊಲೆಗಾರ ಮತ್ತು ಆತನ ಗರ್ಲ್‌ಫ್ರೆಂಡ್ ಸೇರಿ ಕೊಲೆ ಮಾಡಿದ್ದರು. ಕೊಲೆಗೆ ಮೊದಲು ಮತ್ತು ನಂತರ ಅವರು ಫೇಸ್‌ಬುಕ್‌ನಲ್ಲೂ ಅದರ ಬಗ್ಗೆ ಮಾತನಾಡಿಕೊಂಡಿದ್ದರು. ಅಂತರಜಾಲದಲ್ಲಿ ಇಷ್ಟೆಲ್ಲ ಹೆಜ್ಜೆಗುರುತು ಬಿಟ್ಟ ನಂತರ ತಪ್ಪಿಸಿಕೊಳ್ಳಲಾಗುತ್ತದೆಯೇ? ಈಗ ಇಬ್ಬರೂ ಕೃಷ್ಣಜನ್ಮಸ್ಥಾನದಲ್ಲಿದ್ದಾರೆ.

e- ಪದ

ಡಾಂಗಲ್ (dongle) - ಯಾವುದಾದರೊಂದು ತಂತ್ರಾಂಶವನ್ನು ನಿಯಂತ್ರಿಸಲು ಅಥವಾ ತಂತ್ರಾಂಶವು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸಲು ಗಣಕಕ್ಕೆ ಜೋಡಿಸುವ ಒಂದು ಯಂತ್ರಾಂಶ ಸಾಧನ. ಇದು ಯುಎಸ್‌ಬಿ ಕಿಂಡಿ ಮೂಲಕ ಜೋಡಣೆಗೊಳ್ಳುತ್ತದೆ. ಸಾಮಾನ್ಯವಾಗಿ ತಂತ್ರಾಂಶಗಳನ್ನು ಕೃತಿಚೌರ್ಯ ಮಾಡದಂತೆ ತಡೆಗಟ್ಟಲು ಇಂತಹ ಸಾಧನಗಳ ಬಳಕೆ ಮಾಡಲಾಗುತ್ತದೆ. ತಂತ್ರಾಂಶ ಕೆಲಸ ಮಾಡಬೇಕಾದರೆ ಈ ಸಾಧನ ಇದೆಯೇ ಎಂದು ಅದು ಹುಡುಕುತ್ತದೆ. ಅಂದರೆ ಬೇರೆ ಬೇರೆ ಗಣಕಗಳಲ್ಲಿ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಂಡರೂ ಡಾಂಗಲ್ ಜೋಡಣೆಯಾಗದ ಗಣಕದಲ್ಲಿ ಅದು ಕೆಲಸ ಮಾಡುವುದಿಲ್ಲ.

e - ಸಲಹೆ

ಬಸವರಾಜು ಅವರ ಪ್ರಶ್ನೆ: ದಯವಿಟ್ಟು ಯಾವುದಾದರೂ ಜ್ಯೋತಿಷ್ಯದ ತಂತ್ರಾಂಶ ತಿಳಿಸುತ್ತೀರಾ?
ಉ: ಇದೇ ಅಂಕಣದಲ್ಲಿ ನೀಡಲಾಗಿತ್ತು. www.vedicastrologer.org. ಜಾಲತಾಣದಲ್ಲಿ ಲಭ್ಯ.

ಕಂಪ್ಯೂತರ್ಲೆ


ಅಂತರಜಾಲ ಸಂಪರ್ಕ ಕಡಿದುಹೋದಾಗ ಮಾಡಬಹುದಾದ ಕೆಲಸಗಳು:
·    ಯಡ್ಯೂರಪ್ಪ ಭೇಟಿ ನೀಡಿದ ದೇವಸ್ಥಾನಗಳನ್ನು ಪಟ್ಟಿ ಮಾಡುವುದು.
·    ಮೇಜಿನ ಮೇಲಿನ ಧೂಳಿನಲ್ಲಿ ಬರೆದಿಟ್ಟ ಫೋನ್ ಸಂಖ್ಯೆಗೆ ಕರೆ ಮಾಡುವುದು.
·    ಕುಸುಮ ಬಾಲೆಯನ್ನು ಕನ್ನಡಕ್ಕೆ ಅನುವಾದಿಸುವುದು.
·    ಕೋಳಿ ಮೊದಲೋ ಮೊಟ್ಟೆ ಮೊದಲೋ ಸಮಸ್ಯೆಗೆ ಉತ್ತರ ಕಂಡುಹಿಡಿಯುವುದು.

ಸೋಮವಾರ, ಜೂನ್ 11, 2012

ಗಣಕಿಂಡಿ - ೧೬೦ (ಜೂನ್ ೧೧, ೨೦೧೨)

ಅಂತರಜಾಲಾಡಿ

ಉಚಿತ ತಂತ್ರಜ್ಞಾನ ಪುಸ್ತಕಗಳು

ನೀವೊಬ್ಬ ತಂತ್ರಜ್ಞ ಅಥವಾ ತಂತ್ರಜ್ಞ ಆಗಬೇಕೆಂದು ಹಂಬಲಿಸುವವರಿದ್ದೀರಾ? ಹಾಗಿದ್ದರೆ ನಿಮಗೆ ತಂತ್ರಜ್ಞಾನ ಸಂಬಂಧಿ ಪುಸ್ತಕಗಳು ಬೇಕೇ ಬೇಕು. ಒಂದೆರಡು ಪುಸ್ತಕಗಳು ಸಾಲದು. ಹಲವಾರು ಪುಸ್ತಕಗಳು ಬೇಕು. ಎಲ್ಲವನ್ನೂ ಕೊಂಡುಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ. ಕೆಲವು ತಂತ್ರಜ್ಞಾನ ಸಂಬಂಧಿ ಪುಸ್ತಕಗಳು ಉಚಿತವಾಗಿ ಸಿಗುವಂತಿದ್ದರೆ ಹೇಗೆ? ಹೌದು. ಅಂತಹ ಜಾಲತಾಣಗಳು ಕೆಲವಿವೆ. ಅಂತಹ ಒಂದು ಜಾಲತಾಣ www.freetechbooks.com. ಇಲ್ಲಿ ತಂತ್ರಜ್ಞಾನದ ಅದರಲ್ಲೂ ಮುಖ್ಯವಾಗಿ ಮಾಹಿತಿ ತಂತ್ರಜ್ಞಾನದ ಕೆಲವು ಆಯ್ದ ವಿಷಯಗಳ ಬಗ್ಗೆ ಪುಸ್ತಕಗಳು ಉಚಿತವಾಗಿ ದೊರೆಯುತ್ತವೆ. ಇನ್ನು ತಡವೇಕೆ? ಡೌನ್‌ಲೋಡ್ ಮಾಡಿ, ಓದಿ, ತಂತ್ರಜ್ಞರಾಗಿ.

ಡೌನ್‌ಲೋಡ್


ಯುಎಸ್‌ಬಿ ವೀಕ್ಷಣೆ

ಗಣಕದ ಯುಎಸ್‌ಬಿ ಕಿಂಡಿಗೆ ಜೋಡಿಸಿ ಕೆಲಸ ಮಾಡುವಂತಹ ಸಾಧನಗಳು ಮಾರುಕಟ್ಟೆಯಲ್ಲಿ ಸಾವಿರಾರಿವೆ. ಅವುಗಳಲ್ಲಿ ಕನಿಷ್ಠ ಅರ್ಧ ಡಝನ್ ಆದರೂ ನಾವು ಬಳಸುತ್ತೇವೆ. ಉದಾಹರಣೆಗೆ ಯುಎಸ್‌ಬಿ ಮೋಡೆಮ್, ೩ಜಿ ಡಾಟಾಕಾರ್ಡ್, ಯುಎಸ್‌ಬಿ ಮೆಮೊರಿ ಡ್ರೈವ್, ಮೌಸ್, ಕೀಲಿಮಣೆ, ಕ್ಯಾಮರ, ಐಪೋಡ್, ಐಫ್ಯಾಡ್, ಇತ್ಯಾದಿ. ಕೆಲವೊಮ್ಮೆ ಇವುಗಳನ್ನು ಗಣಕ ಸರಿಯಾಗಿ ಗುರುತಿಸುವುದಿಲ್ಲ. ಇನ್ನು ಕೆಲವೊಮ್ಮೆ ಸರಿಯಾಗಿ ಗುರುತಿಸಿದರೂ ಅದನ್ನು ಬಳಸಲು ಬೇಕಾದ ಡ್ರೈವರ್ ತಂತ್ರಾಂಶ ಗಣಕದಲ್ಲಿ ಇರುವುದಿಲ್ಲ ಮತ್ತು ಅದನ್ನು ಎಲ್ಲಿಂದ ಡೌನ್‌ಲೋನ್ ಮಾಡಿಕೊಳ್ಳಬೇಕು ಎಂದು ಅದಕ್ಕೆ ಅರಿವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಬಳಕೆಗೆ ಬರುವುದು USBDeview ತಂತ್ರಾಂಶ. ಇದು ಬಹಳ ಚಿಕ್ಕ ತಂತ್ರಾಂಶ. ಆದರೂ ಬಹು ಉಪಯುಕ್ತ. ಯುಎಸ್‌ಬಿ ಕಿಂಡಿಗೆ ಈಗ ಜೋಡಣೆಯಾಗಿರುವುದು ಮಾತ್ರವಲ್ಲ ಈ ಹಿಂದೆ ಜೋಡಣೆಯಾದ ಎಲ್ಲ ಸಾಧನಗಳ ಸಂಪೂರ್ಣ ವಿವರ ಇದು ನೀಡುತ್ತದೆ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/KAnEha.

e - ಸುದ್ದಿ

ಸ್ಟಕ್ಸ್‌ನೆಕ್ಸ್ಟ್ ಅಮೆರಿಕ ಮತ್ತು ಇಸ್ರೇಲಿನವರ ಕಿತಾಪತಿ

ಕಳೆದ ವರ್ಷ ಇರಾನ್‌ನ ಪರಮಾಣು ಸ್ಥಾವರಗಳ ನಿಯಂತ್ರಣ ವ್ಯವಸ್ಥೆಗಳ ಒಳಗೆ ನುಸುಳಿ ಧಾಳಿ ಇಟ್ಟ ಸ್ಟಕ್ಸ್‌ನೆಕ್ಸ್ಟ್ ಎಂಬ ವೈರಸ್ ತುಂಬ ಕುಖ್ಯಾತಿ ಪಡೆದಿತ್ತು. ಇದು ಇರಾನ್‌ನ ಪರಮಾಣು ಸ್ಥಾವರಗಳನ್ನು ನಿಯಂತ್ರಿಸುವ ಗಣಕ ಮತ್ತು ಇತರೆ ಸಂಬಂಧಿ ವ್ಯವಸ್ಥೆಗಳಿಗೆ ಮಾತ್ರ ಧಾಳಿ ಇಟ್ಟಿತ್ತು. ಇದರ ಬಗ್ಗೆ ಈಗ ನಿಜವಾದ ಸಂಗತಿ ಹೊರಬಿದ್ದಿದೆ. ಇದನ್ನು ಅಮೆರಿಕ ಮತ್ತು ಇಸ್ರೇಲಿ ಸರಕಾರಗಳು ಜೊತೆ ಸೇರಿ ಉದ್ದೇಶಪೂರಿತವಾಗಿಯೇ ತಯಾರಿಸಿದ್ದು ಎಂದು ಸತ್ಯ ಸಂಗತಿ ತಿಳಿದುಬಂದಿದೆ. ಇರಾನ್ ಎಂದಿಗೂ ಪರಮಾಣು ಶಕ್ತಿ ಹೊಂದಬಾರದು ಎಂದು ಅಮೆರಿಕ ಮತ್ತು ಇಸ್ರೇಲ್ ದೇಶಗಳು ಶತಾಯಗತಾಯ ಪ್ರಯತ್ನಿಸುತ್ತಿವೆ. ಈ ವೈರಸ್‌ನ ಧಾಳಿಯಿಂದಾಗಿ ಇರಾನ್‌ಗೆ ಹೊಡೆತ ಬಿದ್ದಿದ್ದಂತೂ ಹೌದು.

e- ಪದ

ಸ್ಮಾರ್ಟ್ ಟಿವಿ (SmartTV) - ಅಂತರಜಾಲ ಸಂಪರ್ಕ, ಜಾಲತಾಣ ವೀಕ್ಷಣೆ, ಡಿಎಲ್‌ಎನ್‌ಎ ಸವಲತ್ತು -ಇತ್ಯಾದಿಗಳನ್ನು ಒಳಗೊಂಡ ಅತ್ಯಾಧುನಿಕ ಟಿವಿ. ಮನೆಯ ಗಣಕದಲ್ಲಿ ಡಿಎಲ್‌ಎನ್‌ಎ ಸವಲತ್ತು ಇದ್ದಲ್ಲಿ ಅದರಿಂದ ವೀಡಿಯೋವನ್ನು ವೈಫೈ ಮೂಲಕ ಪ್ರಸಾರ ಮಾಡಿ ಸ್ಮಾರ್ಟ್‌ಟಿವಿಯಲ್ಲಿ ವೀಕ್ಷಿಸಬಹುದು.

e - ಸಲಹೆ


ಚಂದ್ರಶೇಖರ ಅವರ ಪ್ರಶ್ನೆ: ನನ್ನಲ್ಲಿ ಆಪಲ್ ಐಪ್ಯಾಡ್ ಇದೆ. ಅದರಲ್ಲಿರುವ ಫೋಟೋಗಳನ್ನು ಮುದ್ರಿಸುವುದು ಹೇಗೆ?
ಉ: ನಿಮ್ಮ ಗಣಕದಲ್ಲಿ ಆಪಲ್‌ನವರ ಐಟ್ಯೂನ್ಸ್ ಎಂಬ ತಂತ್ರಾಂಶವನ್ನು (www.apple.com/itunes) ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ಆ ತಂತ್ರಾಂಶದ ಮೂಲಕ ಫೋಟೋವನ್ನು ಐಪ್ಯಾಡ್‌ನಿಂದ ಗಣಕಕ್ಕೆ ವರ್ಗಾಯಿಸಿಕೊಳ್ಳಿ. ನಂತರ ಆ ಫೋಟೋವನ್ನು ಯುಎಸ್‌ಬಿ ಡ್ರೈವ್‌ಗೆ ಹಾಕಿಕೊಂಡು ಯಾವುದೇ ಫೋಟೋ ಸ್ಟುಡಿಯೋಕ್ಕೆ ನೀಡಿದರೆ ಅವರು ಮುದ್ರಿಸಿ ಕೊಡುತ್ತಾರೆ.

ಕಂಪ್ಯೂತರ್ಲೆ


ಗೂಗ್ಲ್ ಅನುವಾದದಲ್ಲಿ “the bus engine state may be on or off” ಎಂಬ ವಾಕ್ಯವನ್ನು ಕನ್ನಡಕ್ಕೆ ಅನುವಾದಿಸಿದಾಗ ದೊರೆತದ್ದು “ಬಸ್ ಎಂಜಿನ್ ರಾಜ್ಯದ ಆನ್ ಅಥವಾ ಆಫ್ ಆಗಿರಬಹುದು”

ಸೋಮವಾರ, ಜೂನ್ 4, 2012

ಗಣಕಿಂಡಿ - ೧೫೯ (ಜೂನ್ ೦೪, ೨೦೧೨)

ಅಂತರಜಾಲಾಡಿ

ಬ್ರಾಡ್‌ಬ್ಯಾಂಡ್ ವೇಗ ಅಳೆಯಿರಿ

ನೀವೊಂದು ಇಂಟರ್‌ನೆಟ್ ಡಾಟಾ ಕಾರ್ಡ್ ಕೊಂಡುಕೊಂಡಿದ್ದೀರಿ. ಅಂತರಜಾಲ ಸಂಪರ್ಕ ಸೇವೆ ನೀಡುವ ಕಂಪೆನಿಯವರು ತಮ್ಮ ಜಾಹೀರಾತಿನಲ್ಲಿ ಈ ಡಾಟಾ ಕಾರ್ಡ್ ೬.೨ ಎಂಬಿಪಿಎಸ್ ತನಕದ ವೇಗವನ್ನು ನೀಡುತ್ತದೆ ಎಂದು ಹೇಳಿಕೊಂಡಿರುತ್ತಾರೆ. ಅದು ನಿಜವಾಗಿಯೂ ಅಷ್ಟು ವೇಗವನ್ನು ನೀಡುತ್ತದೆಯೇ ಎಂದು ತಿಳಿಯಬೇಡವೇ? ಈ ವೇಗದಲ್ಲಿ ಎರಡು ವಿಧ -ಡೌನ್‌ಲೋಡ್ ಮತ್ತು ಅಪ್‌ಲೋಡ್. ಈ ಎರಡು ವೇಗಗಳನ್ನೂ ಅಳೆದು ತಿಳಿಸಲು ಹಲವು ತಂತ್ರಾಂಶಗಳೂ ಜಾಲತಾಣಗಳೂ ಇವೆ. ಅಂತಹ ಒಂದು ಜಾಲತಾಣ www.broadbandspeedchecker.co.uk. ನಿಮ್ಮ ಡಾಟಾ ಕಾರ್ಡ್ ನಿಜಕ್ಕೂ ಕಂಪೆನಿಯವರು ಹೇಳಿಕೊಂಡಷ್ಟು ವೇಗವನ್ನು ನೀಡುತ್ತದೆಯೇ ಎಂದು ಪರಿಶೀಲಿಸಿ.

ಡೌನ್‌ಲೋಡ್

ಲೇಬಲ್ ಮುದ್ರಿಸಿ

ನೀವೊಂದು ಕಾರ್ಯಕ್ರಮ ನಡೆಸುವವರಿದ್ದೀರಿ. ಅದಕ್ಕೆ ನೂರಾರು ಜನರನ್ನು ಆಹ್ವಾನಿಸಬೇಕಾಗಿದೆ. ಎಲ್ಲರ ಹೆಸರು ವಿಳಾಸವನ್ನು ಲೇಬಲ್ ಕಾಗದದಲ್ಲಿ ಮುದ್ರಿಸಿ ಅದನ್ನು ಬೇರೆ ಬೇರೆ ಲಕೋಟೆಗಳಿಗೆ ಅಂಟಿಸಬೇಕಾಗಿದೆ. ಈ ರೀತಿ ಲೇಬಲ್ ಮುದ್ರಣಕ್ಕೆ ಸಹಾಯ ಮಾಡುವ ತಂತ್ರಾಂಶಗಳು ಹಲವಾರಿವೆ. ಹೆಚ್ಚಿನವು ವಾಣಿಜ್ಯಕ ತಂತ್ರಾಂಶಗಳು. ಅಂತಹ ಒಂದು ಉಚಿತ ತಂತ್ರಾಂಶ Label Printer ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.ssuitesoft.com/labelprinter.htm. ಮಾರುಕಟ್ಟೆಯಲ್ಲಿ ಲೇಬಲ್ ಅಂಟಿಸಿದ ಕಾಗದ ಸಿಗುತ್ತದೆ. ಅದನ್ನು ಲೇಸರ್ ಅಥವಾ ಇಂಕ್‌ಜೆಟ್ ಮುದ್ರಕದಲ್ಲಿ ಹಾಕಿ ಲೇಬಲ್ ಮುದ್ರಿಸಬಹುದು.

e - ಸುದ್ದಿ

ಪೇಸ್‌ಬುಕ್‌ನಲ್ಲಿ ಹಣದ ಚಿತ್ರ ಹಾಕಿ ಕಳ್ಳರನ್ನು ಆಹ್ವಾನಿಸಿದಳಂತೆ

ಇದು ಆಸ್ಟ್ರೇಲಿಯದಲ್ಲಿ ನಡೆದ ಕಥೆ. ೧೭ ವರ್ಷ ಪ್ರಾಯದ ಯುವತಿಯೊಬ್ಬಳು ತನ್ನ ಅಜ್ಜಿಯಲ್ಲಿ ಇದ್ದ ಹಣದ ಸಂಗ್ರಹವನ್ನು ಎಣಿಕೆ ಮಾಡಲು ಸಹಾಯ ಮಾಡಿದಳು. ನಂತರ ಆ ಹಣವನ್ನೆಲ್ಲ ಒಟ್ಟಿಗೆ ಇಟ್ಟು ಅದರ ಫೋಟೋ ತೆಗೆದು ತಾನು ಅಜ್ಜಿಗೆ ಹಣ ಲೆಕ್ಕ ಮಾಡಲು ಸಹಾಯ ಮಾಡಿದೆ ಎಂಬ ಶೀರ್ಷಿಕೆಯೊಡನೆ ಫೇಸ್‌ಬುಕ್‌ನಲ್ಲಿ ದಾಖಲಿಸಿದಳು. ಕೆಲವೆ ಗಂಟೆಗಳಲ್ಲಿ ಅವಳ ಅಜ್ಜಿಯ ಮನೆಗೆ ಕಳ್ಳರು ಧಾಳಿಯಿಟ್ಟು ಹಣ ದೋಚಿದರು! ಸೂಕ್ಷ್ಮ ಮಾಹಿತಿಗಳನ್ನು ಫೇಸ್‌ಬುಕ್‌ನಲ್ಲಿ ದಾಕಲಿಸುವಾಗ ಎಚ್ಚರವಿರಲಿ ಎಂದು ಪೋಲೀಸರು ಜನರಿಗೆ ವಿನಂತಿ ಮಾಡಿಕೊಂಡಿದ್ದಾರೆ.

e- ಪದ

ಎಸ್‌ಇಒ (SEO - Search Engine Optimization) - ಜಾಲಶೋಧಕಗಳಲ್ಲಿ ತಮ್ಮ ಜಾಲತಾಣವು ಹುಡುಕಾಟದ ಫಲಿತಾಂಶಗಳಲ್ಲಿ ಎಲ್ಲಕ್ಕಿಂತ ಮೊದಲು ಬರುವಂತೆ ಮಾಡಲು ಜಾಲತಾಣದಲ್ಲಿ ಮಾಡುವ ಬದಲಾವಣೆಗಳು. ಈ ವಿಷಯದಲ್ಲೆ ವಿಶೇಷ ಪ್ರಾವೀಣ್ಯ ಹೊಂದಿರುವ ಹಲವಾರು ಕಂಪೆನಿಗಳಿವೆ. ಇದನ್ನೆ ವೃತ್ತಿಯಾಗಿ ಮಾಡಿಕೊಂಡಿರುವವರಿದ್ದಾರೆ.

e - ಸಲಹೆ


ಸುದರ್ಶನ ಅವರ ಪ್ರಶ್ನೆ: ನನ್ನಲ್ಲಿ ಸೋನಿ CCD-TRV 107E  ವೀಡಿಯೋ ಕ್ಯಾಮರ ಇದೆ. ಅದರಲ್ಲಿ ಯುಎಸ್‌ಬಿ ಕಿಂಡಿ ಇಲ್ಲ. ಅದನ್ನು ಬಳಸಿ ತೆಗೆದ ವೀಡಿಯೋಗಳನ್ನು ಗಣಕಕ್ಕೆ ವರ್ಗಾಯಿಸುವುದು ಹೇಗೆ?
ಉ: ನಿಮ್ಮದು ಡಿಜಿಟಲ್ ಕ್ಯಾಮ್‌ಕಾರ್ಡರ್ ಅಲ್ಲ. ಅದು ವೀಡಿಯೋಗಳನ್ನು ಅನಲಾಗ್ ವಿಧಾನದಲ್ಲಿ ರೆಕಾರ್ಡಿಂಗ್ ಮಾಡಿಕೊಳ್ಳುತ್ತದೆ. ಅದರಿಂದ ಗಣಕಕ್ಕೆ ವರ್ಗಾಯಿಸಬೇಕಾದರೆ ಗಣಕದಲ್ಲಿ ವಿಶೇಷ ಅನಲಾಗ್-ಟು-ಡಿಜಿಟಲ್ ಪರಿವರ್ತಕ ಕಾರ್ಡ್ ಹಾಕಿಕೊಳ್ಳಬೇಕು.

ಕಂಪ್ಯೂತರ್ಲೆ


ಸ್ಪರ್ಶಸಂವೇದಿ ಪರದೆಗಳಿಗೆ (touchscreen) ಚಟವಾಗಿ ಅಂಟಿಕೊಂಡವನೊಬ್ಬ ಒಂದು ಚಿತ್ರಕಲಾ ಪ್ರದರ್ಶನಕ್ಕೆ ಹೋಗಿದ್ದ. ಆತ ಚಿತ್ರದ ಮೇಲೆ ಬೆರಳಿನಿಂದ ಬಲದಿಂದ ಎಡಕ್ಕೆ ಉಜ್ಜುತ್ತಿದ್ದ. ಚಿತ್ರಕಾರನಿಗೆ ಆಶ್ಚರ್ಯವಾಯಿತು. ಆಕ ಹೀಗೇಕೆ ಮಾಡುತ್ತಿದ್ದಾನೆ ಎಂದು ವಿಚಾರಿಸಿದಾಗ ತಿಳಿದುಬಂದುದೇನೆಂದರೆ ಆತನಿಗೆ ಮುಂದಿನ ಚಿತ್ರ ನೋಡಬೇಕಿತ್ತು!

ಸೋಮವಾರ, ಮೇ 28, 2012

ಗಣಕಿಂಡಿ - ೧೫೮ (ಮೇ ೨೮, ೨೦೧೨)

ಅಂತರಜಾಲಾಡಿ

ಕನ್ನಡ ಬರುತ್ತೆ

ಕನ್ನಡರಿಗರಲ್ಲದವರು ಮೊದಲು ಕಲಿಯುವ ಕನ್ನಡ ಪದಗುಚ್ಛ “ಕನ್ನಡ ಬರೊಲ್ಲ”. ಅಂತಹವರನ್ನು ಕಂಡಾಗ ಕನ್ನಡಿಗರು ಕೇಳುವ ಮೊದಲ ಪ್ರಶ್ನೆ “ಕನ್ನಡ ಬರುತ್ತಾ?”. ಈ “ಕನ್ನಡ ಬರೊಲ್ಲ” ಎನ್ನುವವರನ್ನು “ಕನ್ನಡ ಬರುತ್ತೆ” ಎಂದು ಬದಲಾಯಿಸಲು ಸಹಾಯ ಮಾಡುವ ಜಾಲತಾಣ www.kannadabaruthe.com. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಕೆಲವು “ಕನ್ನಡ ಬರುತ್ತೆ” ಮಂದಿಗಳು ಸೇರಿ ಪ್ರಾರಂಭ ಮಾಡಿರುವ ಜಾಲತಾಣ ಇದು. ಬೆಂಗಳೂರಿನಲ್ಲಿರುವ ಲಕ್ಷಕ್ಕಿಂತಲೂ ಅಧಿಕ ಹೊರನಾಡಿಗರಿಗೆ ಕನ್ನಡ ಕಲಿಸುವ ಒಳ್ಳೆಯ ಉದ್ದೇಶದಿಂದ ತಯಾರಾದ ಜಾಲತಾಣ ಇದು. ಇದಕ್ಕೆ ನೀವೂ ಕೈಜೋಡಿಸಬಹುದು.

ಡೌನ್‌ಲೋಡ್

ಬೀಳುವ ಅಕ್ಷರಗಳು

ಇಂಗ್ಲಿಶ್ ವರ್ಣಮಾಲೆಯ ಅಕ್ಷರಗಳನ್ನು ಸೇರಿಸಿ ಪದಗಳನ್ನು ತಯಾರು ಮಾಡುವ ಆಟಗಳು ಹಲವಾರಿವೆ. ಅಂತಹ ಒಂದು ಆಟ LettersFall. ಇದು ಬಹುಮಟ್ಟಿಗೆ ಟೆಟ್ರಿಸ್ ಆಟವನ್ನು ಹೋಲುತ್ತದೆ. ಅಕ್ಷರಗಳು ಮೇಲಿನಿಂದ ಬೀಳುತ್ತಿರುತ್ತವೆ. ಅವುಗಳನ್ನು ಆಯ್ಕೆ ಮಾಡಿಕೊಂಡು ಅರ್ಥಪೂರ್ಣ ಇಂಗ್ಲಿಶ್ ಪದಗಳನ್ನು ತಯಾರು ಮಾಡಬೇಕು. ಈ ಕೆಲಸ ವೇಗವಾಗಿ ಮಾಡಬೇಕು. ಯಾಕೆಂದರೆ ಬೀಳುತ್ತಿರುವ ಅಕ್ಷರಗಳು ಇರುವ ಸ್ಥಳದಲ್ಲಿ ತುಂಬಿಬಿಟ್ಟರೆ ನೀವು ಸೋತಂತೆ. ಆಟದಲ್ಲಿ ಹಲವು ಮಟ್ಟಗಳಿವೆ. ಮೇಲಿನ ಮಟ್ಟಗಳಿಗೆ ಹೋದಂತೆ ಆಟ ಕ್ಲಿಷ್ಟವಾಗುತ್ತ ಹೋಗುತ್ತದೆ. ಇದೊಂದು ಉತ್ತಮ ಕಲಿಕಾರಂಜನೆಯ ತಂತ್ರಾಂಶ. ಈ ಆಟ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/LetterFall.

e - ಸುದ್ದಿ

ಇನ್‌ಡಿಸೈನ್‌ನಲ್ಲಿ ಕನ್ನಡ

Kannada in Indesign CS 6ವಾಣಿಜ್ಯಕ ಡಿಟಿಪಿ ತಂತ್ರಾಂಶಗಳ (ಉದಾ- ಕೋರೆಲ್‌ಡ್ರಾ, ಪೇಜ್‌ಮೇಕರ್, ಇನ್‌ಡಿಸೈನ್, ಕ್ವಾರ್ಕ್, ಫೋಟೋಶಾಪ್, ಇತ್ಯಾದಿ) ಒಂದು ಬಹುದೊಡ್ಡ ಕೊರತೆಯೆಂದರೆ ಅವು ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳ ಬೆಂಬಲ ನೀಡದಿರುವುದು. ಇಲ್ಲಿ ನಾನು ಯುನಿಕೋಡ್ ಶಿಷ್ಟತೆಯ ಬೆಂಬಲ ನೀಡಿದ್ದಲ್ಲಿ ಮಾತ್ರ ಅವು ಬೆಂಬಲಿಸುತ್ತವೆ ಎಂಬ ಸೂತ್ರವನ್ನು ಪಾಲಿಸುತ್ತಿದ್ದೇನೆ. ಇತ್ತೀಚೆಗೆ ಮಾರುಕಟ್ಟೆಗೆ ಅಡೋಬಿ ಕಂಪೆನಿಯವರು ಬಿಡುಗಡೆ ಮಾಡಿರುವ ಇನ್‌ಡಿಸೈನ್ ಸಿಎಸ್೬ ತಂತ್ರಾಂಶವು ಕನ್ನಡ ಯನಿಕೋಡ್ ಅನ್ನು ಬೆಂಬಲಿಸುತ್ತದೆ. ಇದೊಂದು ಉತ್ತಮ ಸುದ್ದಿ. ಆದರೆ ತಂತ್ರಾಂಶ ತುಂಬ ದುಬಾರಿ. ಡಿಟಿಪಿಗೋಸ್ಕರ ಇರುವ ಮುಕ್ತ ತಂತ್ರಾಂಶಗಳು (ಜಿಂಪ್, ಇಂಕ್‌ಸ್ಕೇಪ್ ಮತ್ತು ಸ್ಕ್ರೈಬಸ್) ಮೊದಲಿನಿಂದಲೇ ಭಾರತೀಯ ಭಾಷೆಗಳ (ಯುನಿಕೋಡ್) ಬೆಂಬಲ ನೀಡುತ್ತಿವೆ. ಆದರೆ ಅವು ಅಷ್ಟು ಪರಿಪೂರ್ಣ ಇಲ್ಲ ಮತ್ತು ವೃತ್ತಿನಿರತರು ತಯಾರಿಸಿದ ತಂತ್ರಾಂಶಗಳ ಗುಣಮಟ್ಟಕ್ಕೆ ಬಂದಿಲ್ಲ.

e- ಪದ

ವಿಪಿಎನ್ (VPN - Virtual Private Network) - ಅಂತರಜಾಲವನ್ನು ಬಳಸಿಕೊಂಡು ಖಾಸಗಿಯಾಗಿ ಭೌಗೋಳಿಕವಾಗಿ ಬೇರೆ ಬೇರೆ ಸ್ಥಳಗಳಲ್ಲಿರುವ ಖಾಸಗಿ ಜಾಲಗಳನ್ನು ಬೆಸೆದು ಮಾಡಿದ ಒಂದು ಖಾಸಗಿ ಜಾಲ. ದೊಡ್ಡ ದೊಡ್ಡ ಐಟಿ ಕಂಪೆನಿಗಳು ಇಂತಹ ಜಾಲವನ್ನು ಮಾಡಿಕೊಂಡಿರುತ್ತವೆ. ಅದಕ್ಕೆ ಉದ್ಯೋಗಿಗಳು ತಮ್ಮ ಮನೆಯಿಂದಲೇ ಲಾಗಿನ್ ಆಗಿ ಕೆಲಸ ಮಾಡುವ ಸೌಕರ್ಯವನ್ನೂ ನೀಡಿರುತ್ತವೆ.

e - ಸಲಹೆ

ಸುನಿಲ್ ಅವರ ಪ್ರಶ್ನೆ: ಬ್ರೌಸರ್‌ಗಳನ್ನು (ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಕ್ರೋಮ್, ಇತ್ಯಾದಿ) ಪೆನ್ ಡ್ರೈವ್‌ಗಳಲ್ಲಿ ಸೇವ್  ಮಾಡಿ ಅಲ್ಲಿಂದ  ಲಾಗಿನ್  ಮಾಡಿ ಬ್ರೌಸ್ ಮಾಡುವುದರಿಂದ ಆ ಪಾಸ್‌ವರ್ಡ್ ಗಣಕಕ್ಕೂ ಲೀಕ್ ಆಗುತ್ತಾ? ಇದು ಸುರಕ್ಷಿತವಾ?

ಉ: ಈ ರೀತಿ ಮಾಡುವುದು ಸುರಕ್ಷಿತ.

ಕಂಪ್ಯೂತರ್ಲೆ

ಕೋಲ್ಯ ಸರಕಾರಿ ಕಚೇರಿಯೊಂದಕ್ಕೆ ಹೋಗಿದ್ದ. ಅಲ್ಲಿದ್ದ ಅಧಿಕಾರಿ ಗಣಕವನ್ನು ದೃಷ್ಠಿಬೀರಿ ನೋಡಿಕೊಂಡು ಕೂತಿದ್ದ. ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅದು ಯಾಕೆ ಎಂದು ಆತ ವಿಚಾರಿಸಿದಾಗ ತಿಳಿದಿದ್ದು ಏನೆಂದರೆ ಆತ ಗಣಕ ನೋಡಲ್ ಅಧಿಕಾರಿಯಾಗಿದ್ದ. ಆದುದರಿಂದ ಗಣಕ ನೋಡಿಕೊಂಡು ಕೂತಿದ್ದ.

ಸೋಮವಾರ, ಮೇ 21, 2012

ಗಣಕಿಂಡಿ - ೧೫೭ (ಮೇ ೨೧, ೨೦೧೨)

ಅಂತರಜಾಲಾಡಿ

ಡಿಎಲ್‌ಎನ್‌ಎ ಜಾಲತಾಣ

ಮನೆಗಳಲ್ಲಿ ಬಳಸುವ ಮನರಂಜನೆಯ ಉಪಕರಣಗಳನ್ನು ಮತ್ತು ಗಣಕಗಳನ್ನು ಒಂದು ಶಿಷ್ಟ ಜಾಲದಲ್ಲಿ ಬೆಸೆಯಲು ಸ್ಥಾಪಿಸಿರುವ ಸಂಸ್ಥೆಯ ಜಾಲತಾಣ www.dlna.org. ಈ ಜಾಲತಾಣದಲ್ಲಿ ಡಿಎಲ್‌ಎನ್‌ಎ ಶಿಷ್ಟತೆ ಬಗ್ಗೆ ವಿವರಗಳು ದೊರೆಯುತ್ತವೆ. ಹಲವಾರು ಉದಾಹರಣೆಗಳೂ ಇವೆ. ಯಾವ ಯಾವ ಕಂಪೆನಿಯ ಯಾವ ಯಾವ ಉಪಕರಣಗಳು ಡಿಎಲ್‌ಎನ್‌ಎ ಪ್ರಮಾಣಪತ್ರ ಪಡೆದಿವೆ ಎಂಬ ಯಾದಿಯೂ ಇದೆ. ಸ್ಮಾರ್ಟ್ ಟಿವಿ ಕೊಳ್ಳಲು ಆಲೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಜಾಲತಾಣಕ್ಕೆ ಭೇಟಿ ನೀಡಿ ಯಾವ ಯಾವ ಟಿವಿಗಳು ಪ್ರಮಾಣಪತ್ರ ಪಡೆದಿವೆ ಎಂದು ಪರಿಶೀಲಿಸಲು ಮರೆಯಬೇಡಿ. ನಿಮ್ಮಲ್ಲಿ ಸ್ಮಾರ್ಟ್‌ಫೋನ್ ಇದ್ದಲ್ಲಿ ಅದಕ್ಕೆ ಸೂಕ್ತ ಆಪ್ (ಕಿರುತಂತ್ರಾಂಶ) ಕೂಡ ಲಭ್ಯ. ಅದನ್ನು ಬಳಸಿ ಅಂಗಡಿಯಲ್ಲಿ ಟಿವಿಯ ಮಾದರಿ ಸಂಖ್ಯೆ ಊಡಿಸಿ ಪರಿಶೀಲಿಸಬಹುದು.

ಡೌನ್‌ಲೋಡ್

ಜ್ಯೋತಿಷ್ಯ ತಂತ್ರಾಂಶ

ಭಾರತೀಯ ಜ್ಯೋತಿಷ್ಯವನ್ನು ಆಧಾರಿಸಿ ತಯಾರಿಸಿದ ಒಂದು ಉಚಿತ ತಂತ್ರಾಂಶ ಬೇಕೇ? ಅದನ್ನು ಬಳಸಿ ನಿಮ್ಮ ಜಾತಕ (ಕುಂಡಲಿ) ತಯಾರಿಸಿಬೇಕೇ? ಯಾವ ಯಾವ ಸಮಯದಲ್ಲಿ ನಿಮಗೆ ಯಾವ ಯಾವ ದೆಸೆಗಳಿವೆ, ಯಾವಾಗ ಈ ದೆಸೆಗಳಿಗೆ ಸಂಧಿಕಾಲ ಬರುತ್ತದೆ ಎಂದೆಲ್ಲ ತಿಳಿಯಬೇಕೇ? ಹಾಗಿದ್ದಲ್ಲಿ ನಿಮಗೆ ಬೇಕು Jagannatha Hora ತಂತ್ರಾಂಶ. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.vedicastrologer.org. ಜ್ಯೋತಿಷ್ಯದ ಬಗೆಗೆ ಹಲವು ವಿ-ಪುಸ್ತಕಗಳು, ಆಡಿಯೋ ಫೈಲ್‌ಗಳೂ ಇಲ್ಲಿ ಲಭ್ಯ.

e - ಸುದ್ದಿ

ಕಾಂಗ್ರಸ್ ಜಾಲತಾಣಕ್ಕೆ ಲಗ್ಗೆ

ಕೇಂದ್ರ ಸರಕಾರವು ಟೊರೆಂಟ್ ಮತ್ತು ವಿಮಿಯೋ ಇತ್ಯಾದಿ ವೀಡಿಯೋ ಹಂಚುವಿಕೆಯ ಜಾಲತಾಣಗಳನ್ನು ನಿರ್ಬಂಧಿಸಿ ಅಂತರಜಾಲಸಂಪರ್ಕ ಸೇವೆ ನೀಡುವ ಕಂಪೆನಿಗಳಿಗೆ ಅವುಗಳನ್ನು ನಿರ್ಬಂಧಿಸುವಂತೆ ಸೂಚಿಸಿತ್ತು. ಅದರಂತೆಯೇ ಕೆಲವು ದಿನಗಳಿಂದ ಹೆಚ್ಚಿನ ಜನರಿಗೆ ಈ ಜಾಲತಾಣಗಳನ್ನು ಬಳಸಲು ಆಗುತ್ತಿರಲಿಲ್ಲ ಮತ್ತು ಟೊರೆಂಟ್ ಬಳಸಿ ಏನನ್ನೂ ಡೌನ್‌ಲೋಡ್ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಇದರಿಂದ ಕೋಪಗೊಂಡ ಅನಾಮಧೇಯರ ಗುಂಪು (Anonymous) ಕಾಂಗ್ರೆಸ್ ಮತ್ತು ಭಾರತದ ಸುಪ್ರೀಂ ಕೋರ್ಟ್ ಜಾಲತಾಣಗಳಿಗೆ ಹ್ಯಾಕ್ ಮಾಡಿ ಅವುಗಳನ್ನು ಕುಲಗೆಡಿಸಿದರು. ಟೊರೆಂಟ್ ಕೆಲಸ ಮಾಡುತ್ತಿಲ್ಲ ಎಂದು ಅರಿತ ಕೆಲವು ಪ್ರಚಂಡರು ಓಪನ್ ಡಿಎನ್‌ಎಸ್ ಬಳಸಿ ತಮ್ಮ ಕೆಲಸ ಮಾಡಿಕೊಂಡರು.

e- ಪದ

ಡಿಎಲ್‌ಎನ್‌ಎ (DLNA - Digital Living Network Alliance) - ಮನೆಗಳಲ್ಲಿ ಬಳಸುವ ಮನರಂಜನೆಯ ಉಪಕರಣಗಳನ್ನು ಮತ್ತು ಗಣಕಗಳನ್ನು ಒಂದು ಶಿಷ್ಟ ಜಾಲದಲ್ಲಿ ಬೆಸೆಯಲು ಸ್ಥಾಪಿಸಿರುವ ಸಂಸ್ಥೆ. ಇದು ಇದಕ್ಕೆ ಸಂಬಂಧಿತ ಶಿಷ್ಟತೆಗಳನ್ನು ತಯಾರಿಸುತ್ತದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಸ್ಮಾರ್ಟ್‌ಟಿವಿಗಳು ಡಿಎಲ್‌ಎನ್‌ಎ ಪ್ರಮಾಣಪತ್ರ ಪಡೆದಿರುತ್ತವೆ. ಆದಿಲ್ಲದಿದ್ದಲ್ಲಿ ಅವುಗಳು ಎಲ್ಲ ಕೆಲಸಗಳನ್ನು ಸರಿಯಾಗಿ ಮಾಡುತ್ತವೆ ಎಂಬುದು ಅನುಮಾನ.

e - ಸಲಹೆ

ಪ್ರ: ಓಪನ್ ಡಿಎನ್‌ಎಸ್ ವಿಳಾಸ ಏನು?
ಉ: ಓಪನ್ ಅಥವಾ ಮುಕ್ತ ಡಿಎನ್‌ಎಸ್‌ನ ಐಪಿ ವಿಳಾಸಗಳು - 208.67.222.222 ಮತ್ತು 208.67.220.220

ಕಂಪ್ಯೂತರ್ಲೆ

ಒಂದು ವೈವಾಹಿಕ ಜಾಹೀರಾತು: ----  ಜಾತಿಯ ಹುಡುಗನಿಗೆ ಅದೇ ಜಾತಿಯ, ೨೫ ವರ್ಷದ ಒಳಗಿನ ಪ್ರಾಯದ ಪದವೀಧರೆಯಾದ ಹುಡುಗಿ ಬೇಕಾಗಿದೆ. ಹುಡುಗಿ ಫೇಸ್‌ಬುಕ್ ಮತ್ತು ಟ್ವಿಟ್ಟರ್ ಬಳಸುತ್ತಿರಬಾರದು.

ಸೋಮವಾರ, ಮೇ 14, 2012

ಗಣಕಿಂಡಿ - ೧೫೬ (ಮೇ ೦೭, ೨೦೧೨)

ಅಂತರಜಾಲಾಡಿ

ಹಾಡು ಕೇಳಿ

ಅಂತರಜಾಲ ಮೂಲಕ ಭಾರತೀಯ ಚಲನಚಿತ್ರಗೀತೆ, ಭಕ್ತಿಗೀತೆ, ಹಾಗೂ ಇತರೆ ಹಾಡುಗಳನ್ನು ಆಲಿಸಬೇಕೇ? ಅಂತಹ ಒಂದು ಜಾಲತಾಣ gaana.com. ಇದು ಇತ್ತೀಚೆಗಷ್ಟೆ ತಯಾರಾದ ಜಾಲತಾಣ. ಸುಮಾರು ಲಕ್ಷಕ್ಕೂ ಮೀರಿ ಹಾಡುಗಳು ಇಲ್ಲಿವೆ. ಹಾಡುಗಳನ್ನು ಹಿಂದಿ, ಕನ್ನಡ, ತಮಿಳು ಇತ್ಯಾದಿಯಾಗಿ ವಿಭಜಿಸಲಾಗಿದೆ. ಹಾಗೆಯೇ ಗಾಯಕ, ಸಿನಿಮಾ ಇತ್ಯಾದಿಯಾಗಿಯೂ ವಿಭಜಿಸಲಾಗಿದೆ. ಇದರ ಹುಡುಕುವ ಸವಲತ್ತು ತುಂಬ ಚೆನ್ನಾಗಿದೆ. ಅಂತರಜಾಲದಲ್ಲೇ ಆಲಿಸಬಹುದು. ಜೊತೆಗೆ ನಿಮ್ಮಲ್ಲಿ ಆಪಲ್ ಐಪ್ಯಾಡ್ ಇದ್ದರೆ ಅದಕ್ಕೆಂದೇ ಪ್ರತ್ಯೇಕ ಆಪ್ (app) ದೊರೆಯುತ್ತದೆ. ಇದೇ ಮಾದರಿಯ ಇನ್ನೂ ಎರಡು ಖ್ಯಾತ ಜಾಲತಾಣಗಳು - www.musicindiaonline.com, www.raaga.com.

ಡೌನ್‌ಲೋಡ್

ಸರಳ ವೀಡಿಯೋ

ಗಣಕದಲ್ಲಿ ವೀಡಿಯೋ ತಯಾರಿಸಲು ಹಾಗೂ ಈಗಾಗಲೇ ಇರುವ ವೀಡಿಯೋಗಳನ್ನು ಸಂಪಾದಿಸಲು (ಎಡಿಟ್ ಮಾಡಲು) ಅನುವು ಮಾಡಿಕೊಡುವ ತಂತ್ರಾಂಶಗಳು ನೂರಾರಿವೆ. ಹೆಚ್ಚಿನವು ದುಬಾರಿ ವಾಣಿಜ್ಯಕ ತಂತ್ರಾಂಶಗಳು. ಕೆಲವು ಉಚಿತ ಕೂಡ ಇವೆ. ಅಂತಹ ಒಂದು ಉಚಿತ ತಂತ್ರಾಂಶ Ezvid. ಇದನ್ನು ಬಳಸಿ ಸಂಪೂರ್ಣ ಹೊಸ ವೀಡಿಯೋ ತಯಾರಿಸಬಹುದು ಹಾಗೂ ಈಗಾಗಲೆ ಇರುವ ವೀಡಿಯೋಗಳನ್ನು ಸಂಪಾದಿಸಬಹುದು. ವೀಡಿಯೋ ಮಾಡಲು ಕ್ಯಾಮರಾದಿಂದ ಕ್ಲಿಪ್ ಅಥವಾ ಸ್ಥಿರ ಚಿತ್ರಗಳನ್ನು ಬೇಕಿದ್ದರೂ ಬಳಸಬಹುದು. ಉಚಿತ ಸಂಗೀತವೂ ಇದೆ. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.ezvid.com.

e - ಸುದ್ದಿ

೫ ಡಾಲರ್‌ಗೆ ಮಿಥ್ಯಾ ಗರ್ಲ್‌ಫ್ರೆಂಡ್

ಫೇಸ್‌ಬುಕ್‌ನಲ್ಲಿ ವೈವಾಹಿಕ ಸ್ಥಿತಿಯ ಮುಂದೆ ಏಕಾಂಗಿ ಎಂದು ಬರೆದುಕೊಳ್ಳುವುದು ಕೆಲವರಿಗೆ ಅವಮಾನದ ಸಂಗತಿ ಆಗಿರುತ್ತದೆ. ಇದು ಅಮೆರಿಕದಲ್ಲಿ. ಅಲ್ಲಿ ಗರ್ಲ್‌ಫ್ರೆಂಡ್ ಇಲ್ಲದವನು ಕೆಲಸಕ್ಕೆ ಬಾರದವನು ಎಂದೆನಿಸಿಕೊಳ್ಳುತ್ತಾನೆ. ಅದಕ್ಕೆ ಏನು ಮಾಡುವುದು? ೫ ಡಾಲರ್ ಖರ್ಚು ಮಾಡುವುದು! ೫ ಡಾಲರ್‌ಗೆ ಫೇಸ್‌ಬುಕ್‌ನಲ್ಲಿ ವ್ಯವಹರಿಸಲು ಮಿಥ್ಯಾ ಗರ್ಲ್‌ಫ್ರೆಂಡ್ ದೊರೆಯುತ್ತಾಳೆ! ಆಕೆ ನಿಮ್ಮ ಜೊತೆ ವ್ಯವಹರಿಸುತ್ತಾಳೆ ಕೂಡ. ನೀವು ಒಂದು ಫೋಟೋ ಹಾಕಿದರೆ ಅದಕ್ಕೆ ಇಷ್ಟಪಟ್ಟಿದ್ದೇನೆ ಎಂದು ಕ್ಲಿಕ್ ಮಾಡುತ್ತಾಳೆ. ನಮ್ಮ ಪೋಸ್ಟಿಂಗ್‌ಗೆ ಕಮೆಂಟ್ ಹಾಕುತ್ತಾಳೆ. ಆದರೆ ನಿಜವಾಗಿ “ಆಕೆ” ಇರುವುದಿಲ್ಲ. ಅದು ಒಂದು ಕಂಪ್ಯೂಟರ್ ಜನಿತ ರೋಬೋಟ್ ತಂತ್ರಾಂಶ ಆಗಿರುತ್ತದೆ.    

e- ಪದ

ಪತ್ರವಿಲೀನ (mail merge) - ದತ್ತಸಂಚಯದಲ್ಲಿ (ಡಾಟಾಬೇಸ್) ಅಡಕವಾಗಿರುವ ಮಾಹಿತಿಯನ್ನು (ಉದಾ -ಹೆಸರು, ವಿಳಾಸ) ಬಳಸಿ ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ಪತ್ರಗಳನ್ನು ತಯಾರಿಸಿ ಕಳುಹಿಸುವುದು. ಉದಾಹರಣೆಗೆ ಒಂದು ವಿಚಾರಸಂಕಿರಣದಲ್ಲಿ ೫೦ ಮಂದಿ ಸಂಪನ್ಮೂಲ ವ್ಯಕ್ತಿಗಳು ೫೦ ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡುವುವರಿದ್ದಾರೆ. ಅವರಿಗೆಲ್ಲ ಒಂದು ಪತ್ರವನ್ನು ಈ ಬಗ್ಗೆ ಅವರ ಭಾಷಣದ ವಿಷಯವನ್ನು ನಮೂದಿಸಿ ಕಳುಹಿಸಬೇಕಾಗಿದೆ. ಇಂತಹ ಸಂದರ್ಭಗಳಲ್ಲಿ ಮೈಲ್‌ಮರ್ಜ್ ಉಪಯೋಗಕ್ಕೆ ಬರುತ್ತದೆ.

e - ಸಲಹೆ

ವಿನಯ್ ಅವರ ಪ್ರಶ್ನೆ: ಸರಳವಾಗಿರುವಂತಹ ಒಂದು ವೀಡಿಯೋ ಎಡಿಟಿಂಗ್ ತಂತ್ರಾಂಶ ಯಾವುದಾದರೂ ಇದ್ದರೆ ದಯವಿಟ್ಟು ತಿಳಿಸಿ.
ಉ: ಇದೇ ಸಂಚಿಕೆಯಲ್ಲಿ ಸೂಚಿಸಿರುವ Ezvid ತಂತ್ರಾಂಶ ಬಳಸಿ ನೋಡಿ.

ಕಂಪ್ಯೂತರ್ಲೆ

ಗಣಕವಾಡು

ಕುಮಾರವ್ಯಾಸನೆಂದನಂದು
ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ

ಇಂದಿನ ಮರಿವ್ಯಾಸರನ್ನುತ್ತಾರೆ
ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ
ಕೀಲಿಮಣೆಯ ಕುಟ್ಟಿಯೇ ಕಲಿತೆನೆಂಬೊಂದಗ್ಗಳಿಕೆ

ಸೋಮವಾರ, ಮೇ 7, 2012

ಗಣಕಿಂಡಿ - ೧೫೫ (ಮೇ ೦೭, ೨೦೧೨)

ಅಂತರಜಾಲಾಡಿ

ವಿಜ್ಞಾನ ವಿಶೇಷ

ವಿಜ್ಞಾನ ಕ್ಷೇತ್ರದಲ್ಲಿಯ ಸಂಶೋಧನೆಗಳ ಬಗೆಗೆ ತಿಳಿಸುವ ಜಾಲತಾಣಗಳು ಹಲವಾರಿವೆ. ಅಂತಹ ಒಂದು ಪ್ರಮುಖ ಜಾಲತಾಣ www.eurekalert.org. ಪ್ರತಿದಿನ ನಡೆಯುತ್ತಿರುವ ಸಂಶೋಧನೆಗಳಲ್ಲಿ ಕೆಲವು ಪ್ರಮುಖ ಹಾಗೂ ಎಲ್ಲರೂ ಗಮನಿಸಲೇಬೇಕಾದ ಸಂಶೋಧನೆಗಳ ಸಾರಾಂಶ ಇಲ್ಲಿ ಸುದ್ದಿಯ ರೂಪದಲ್ಲಿ ಲಭ್ಯ. ಸಾಮಾನ್ಯವಾಗಿ ಇಂತಹ ಸಂಶೋಧನೆಗಳು ಸರಕಾರಿ ಪ್ರಯೋಗಾಲಯಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಖಾಸಗಿ ಪ್ರಯೋಗಾಲಯಗಳಲ್ಲಿ, ವೈದ್ಯಕೀಯ ಸಂಶೋಧನಾ ಆಸ್ಪತ್ರಗೆಳಲ್ಲಿ, ಎಲ್ಲ ಕಡೆ ನಡೆಯುತ್ತಿರುತ್ತವೆ. ಖ್ಯಾತ ಸಂಶೋಧನಾ ನಿಯತಕಾಲಿಕೆಗಳಲ್ಲಿ ಈ ಸಂಶೋಧನೆಗಳು ಪ್ರಬಂಧ ರೂಪದಲ್ಲಿ ದೊರೆಯುತ್ತವೆ. ಈ ಜಾಲತಾಣಗಳಲ್ಲಿ ಆ ರೂಪದಲ್ಲಿ ಅವು ಬರುವ ಮೊದಲೇ ಸುದ್ದಿಯ ರೂಪದಲ್ಲಿ ದೊರೆಯುತ್ತವೆ.

ಡೌನ್‌ಲೋಡ್

ಎಂಪಿ೩ ಪರಿವರ್ತಕ

ಸಂಗೀತದ ಫೈಲ್‌ಗಳು ಹಲವಾರು ಮಾದರಿಯಲ್ಲಿ ದೊರೆಯುತ್ತವೆ. ಉದಾಹರಣೆಗೆ - MP3, AAC, WAV, AC3, WMA, MID, MKA, OGG. ಈ ಮಾದರಿಗಳಲ್ಲಿ ತುಂಬ ಜನಪ್ರಿಯವಾಗಿರುವುದು ಎಂಪಿ3. ಇದನ್ನು ಗಣಕ, ಅಂತರಜಾಲ, ಎಂಪಿ3 ಪ್ಲೇಯರ್, ಟ್ಯಾಬ್ಲೆಟ್, ಮೊಬೈಲ್ ಫೋನ್ -ಹೀಗೆ ಎಲ್ಲ ಕಡೆ ಚಲಾಯಿಸಿ ಸಂಗೀತವನ್ನು ಆಲಿಸಬಹುದು. ಸಂಗೀತದ ಎಲ್ಲ ಮಾದರಿಯ ಫೈಲುಗಳನ್ನು ಎಂಪಿ3 ವಿಧಾನಕ್ಕೆ ಪರಿವರ್ತಿಸಲು ಹಲವು ತಂತ್ರಾಂಶಗಳು ಲಭ್ಯವಿವೆ. ಅಂತಹ ಇನ್ನೊಂದು ಉಚಿತ ತಂತ್ರಾಂಶ Music to MP3 Converter. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.musictomp3.org. ಇದರಲ್ಲಿ ಹಲವು ಆಯ್ಕೆಗಳಿವೆ. ಬಿಟ್‌ರೇಟ್, ಸಂಗೀತದ ಆರಂಭ ಮತ್ತು ಕೊನೆ, ಇತ್ಯಾದಿ. 

e - ಸುದ್ದಿ

ಮನೆಗೊಂದು ಕಾರ್ಯಾಚರಣ ವ್ಯವಸ್ಥೆ

ಮೈಕ್ರೋಸಾಫ್ಟ್ ಸಂಶೋಧನಾಲಯಕ್ಕೆ ೨೦ ವರ್ಷ ತುಂಬಿತು. ಈ ಸಂದರ್ಭದಲ್ಲಿ ಅವರು ನಿಮ್ಮ ಮನೆಗೊಂದು ಕಾರ್ಯಾಚರಣ ವ್ಯವಸ್ಥೆ (operating system) ತಯಾರಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಮನೆಗೊಂದು ಕೇಂದ್ರೀಯ ಗಣಕ ಇಟ್ಟುಕೊಂಡು ಅದರ ಮೂಲಕ ಮನೆಯಲ್ಲಿರುವ ಎಲ್ಲ ಉಪಕರಣಗಳು, ಗ್ಯಾಜೆಟ್‌ಗಳು, ಗಣಕಗಳು, ಟಿವಿ, ಫ್ರಿಜ್, ಸುರಕ್ಷೆಯ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ಇತ್ಯಾದಿ ಎಲ್ಲ ನಿಯಂತ್ರಿಸಬಹುದು. ಫ್ರಿಜ್‌ನಲ್ಲಿ ಹಾಲು ಮುಗಿದಾಗ ನಿಮಗೆ ಹಾಲು ಮುಗಿದಿದೆ ಎಂದು ಇಮೈಲ್ ಬರುವಂತೆ ಕೂಡ ಮಾಡಬಹುದು. ಬಾಗಿಲು ಮುಂದೆ ನಿಂತಾಗ ನಿಮ್ಮ ಮುಖವನ್ನು ಪರಿಶೀಲಿಸಿ ನೀವೇ ಎಂದು ಖಾತ್ರಿ ಮಾಡಿಕೊಂಡು ಬಾಗಿಲು ತೆರಯುವುದು ಒಂದು ಸವಲತ್ತು. ಬಹುಶಃ ಮುಂದಾನೊಂದು ಕಾಲದಲ್ಲಿ ನೀವು ನಿಮ್ಮ ಮನೆಯನ್ನು ಆಗಾಗ ರಿಬೂಟ್ ಮಾಡುತ್ತಿರಬೇಕಾಗಿ ಬರಬಹುದು!    

e- ಪದ

ಉಬುಂಟು (Ubuntu) - ಲಿನಕ್ಸ್ ಆಧಾರಿತ ಮುಕ್ತ ಮತ್ತು ಉಚಿತ ಕಾರ್ಯಾಚರಣ ವ್ಯವಸ್ಥೆಯ ತಂತ್ರಾಂಶ. ಇದನ್ನು ಜಗತ್ತಿನಾದ್ಯಂತ ಇರುವ ಸ್ವಯಂಸೇವಕರು ಸಹಯೋಗಿ ವಿಧಾನದಲ್ಲಿ ತಯಾರಿಸಿದ್ದಾರೆ.

e - ಸಲಹೆ
ಮಡಿಕೇರಿಯ ರವೀಂದ್ರ ಅವರ ಪ್ರಶ್ನೆ: ನಾನು ತಮ್ಮ ಗಣಕಿಂಡಿಯಲ್ಲಿ ತಿಳಿಸಿದಂತೆ ಗೂಗಲ್ ಡ್ರೈವ್ ಬಳಸುತ್ತಿದ್ದೇನೆ. ಆದರೆ ನನ್ನ ಗಣಕದಿಂದ ಫೈಲುಗಳನ್ನು ಅಪ್‌ಲೋಡ್ ಮಾಡುವಾಗ  ಅವು ಅಪ್‌ಲೋಡ್ ಆಗುತ್ತಿಲ್ಲ. Lost connection to server ಎಂದು error message  ಬರುತ್ತದೆ. ನನ್ನ ಅಂತರಜಾಲ ಸಂಪರ್ಕ ಸರಿಯಾಗಿದೆ. ಇದಕ್ಕೇನು ಪರಿಹಾರ?
ಉ: ಈ ದೋಷ ಬರುವುದು ಸಾಮಾನ್ಯವಾಗಿ ಅಂತರಜಾಲ ಸಂಪರ್ಕ ಚೆನ್ನಾಗಿಲ್ಲದಿದ್ದಾಗ. ನಿಮ್ಮ ಅಂತರಜಾಲ ಸಾರಿಗೆಯನ್ನು ಬೇರೆ ಯವುದಾದರೂ ತಂತ್ರಾಂಶ (ಉದಾ -ಟೊರೆಂಟ್, ಸಿಸ್ಟಮ್ ಅಥವಾ ಆಂಟಿವೈರಸ್ ಅಪ್‌ಡೇಟ್) ಬಳಸುತ್ತಿಲ್ಲ ಎಂದು ಖಾತ್ರಿಪಡಿಸಿಕೊಳ್ಳಿ. ನಂತರ Retry All ಎಂಬುದರ ಮೇಲೆ ಕ್ಲಿಕ್ ಮಾಡಿ ಪ್ರಯತ್ನಿಸಿ.

ಕಂಪ್ಯೂತರ್ಲೆ

ಫೋಟೋಶಾಪ್ ಗಾದೆಗಳು (ಹಳೆಯ ಮತ್ತು ಹೊಸತು):
·    ಫೊಟೋಶಾಪ್‌ನ ೩೦ ದಿನದ ಟ್ರಯಲ್ ಮುಗಿಯೋ ತನಕ ಅವಳು ಚೆನ್ನಾಗಿಯೇ ಕಾಣ್ತಾ ಇದ್ಳು.
·    ಮನೆಗಳಲ್ಲಿ ಇರುವ ಕನ್ನಡಿಗಳಿಗೆ ಫೋಟೋಶಾಪ್  ಅಳವಡಿಸಿರತಕ್ಕದ್ದು.
·    ಒಂದು ಫೋಟೋಶಾಪ್ ಮಾಡಿದ ಚಿತ್ರ ಸಾವಿರ ಸುಳ್ಳುಗಳನ್ನು ಹೇಳುತ್ತದೆ.
·    ಜಾತಕ ಸರಿಯಿಲ್ಲದಿದ್ದರೇನಂತೆ ಫೋಟೋಶಾಪ್ ಇದೆಯಲ್ಲ?

ಸೋಮವಾರ, ಏಪ್ರಿಲ್ 30, 2012

ಗಣಕಿಂಡಿ - ೧೫೪ (ಎಪ್ರಿಲ್ ೩೦, ೨೦೧೨)

ಅಂತರಜಾಲಾಡಿ

ಮನೆ ಕಟ್ಟಿ ನೋಡು

ಮನೆ ಕಟ್ಟಿ ನೋಡು ಮದುವೆ ಮಾಡಿನೋಡು ಎಂಬುದೊಂದು ಹಳೆಯ ಗಾದೆ. ಈ ಗಾದೆ ಸುಮ್ಮನೆ ಹುಟ್ಟಿಕೊಂಡಿಲ್ಲ. ಮನೆ ಕಟ್ಟಿಸುವುದು ಅಷ್ಟು ಕಷ್ಟದ ಕೆಲಸ. ಕಟ್ಟಿಸಲು ಮೊದಲು ಅದರ ವಿನ್ಯಾಸ ಆಗಬೇಕು. ಯಾವ ನಮೂನೆಯ ವಿನ್ಯಾಸ ಮಾಡಿದರೂ ಎಲ್ಲ ಮಂದಿಗೆ ಹಿಡಿಸುವುದು ಕಷ್ಟ. ಗೋಡೆ ಎಲ್ಲಿರಬೇಕು, ಅಡುಗೆಮನೆ ಎಲ್ಲಿ, ಕೋಣೆಗಳ ಗಾತ್ರ ಎಷ್ಟೆಷ್ಟು, ಮುಂದೆ ಎಷ್ಟು ಜಾಗ ಇರಬೇಕು, ಹೀಗೆ ಎಲ್ಲ ವಿಷಯಗಳಲ್ಲೂ ಪ್ರತಿಯೊಬ್ಬರಿಗೂ ಅವರದೇ ಅಭಿಪ್ರಾಯ ಇರುತ್ತದೆ. ಅಂದರೆ ಎಲ್ಲರೂ ಸೇರಿ ಎಷ್ಟು ಸಾಧ್ಯವೋ ಅಷ್ಟು ವಿನ್ಯಾಸಗಳನ್ನು ತಯಾರಿಸಬೇಕು. ಹೀಗೆ ಮನೆಯ ವಿನ್ಯಾಸ ತಯಾರಿಸಲು ಸಹಾಯ ಮಾಡುವ ಜಾಲತಾಣ www.homestyler.com.

ಡೌನ್‌ಲೋಡ್

ಗೂಗ್ಲ್ ಡ್ರೈವ್

ಅಂತರಜಾಲಾಧಾರಿತ ಸಂಗ್ರಹ ಸೇವೆ ನೀಡುವ ಜಾಲತಾಣಗಳು ಹಲವಾರಿವೆ. ಈ ಪಟ್ಟಿಗೆ ಹೊಸ ಸೇರ್ಪಡೆ ಗೂಗ್ಲ್ ಡ್ರೈವ್. ಒಂದು ರಿತಿಯಲ್ಲಿ ನೋಡಿದರೆ ಇದು ಈ ಮೊದಲು ಕೂಡ, ಸ್ವಲ್ಪ ಬೇರೆ ಅವತಾರದಲ್ಲಿ ಬಳಕೆಯಲ್ಲಿತ್ತು. ಅದುವೇ ಗೂಗ್ಲ್ ಡಾಕ್ಸ್. ಈ ಗೂಗ್ಲ್ ಡ್ರೈವ್ ಬಳಸಬೇಕಿದ್ದಲ್ಲಿ ನೀವು drive.google.com ಜಾಲತಾಣಕ್ಕೆ ಭೇಟಿ ನೀಡಿ ಅದನ್ನು ಚಾಲನೆಗೊಳಿಸಬೇಕು. ಗೂಗ್ಲ್ (ಜಿಮೈಲ್) ಖಾತೆ ಇರುವುದು ಮುಖ್ಯ. ನಿಮ್ಮ ಕಡತಗಳನ್ನು ಅಂತರಜಾಲದಲ್ಲಿ ಸಂಗ್ರಹಿಸಲು, ಇತರರಿಗೆ ಹಂಚಲು, ಇನ್ನೊಂದು ಸೇವೆ ಈ ಮೂಲಕ ಲಭ್ಯ. ಗಣಕದಲ್ಲಿ ಬಳಸಲು ಬೇಕಾದ ತಂತ್ರಾಂಶ ಡೌನ್‌ಲೋಡ್ ಮಾಡಿಕೊಳ್ಳಲು ಇದೇ ಜಾಲತಾಣದಲ್ಲಿ ಲಭ್ಯ. 

e - ಸುದ್ದಿ

ಅಂತರಜಾಲದ ಮೇಲೆ ಸರಕಾರದ ಬಿಗಿಮುಷ್ಟಿ

ಅಮೆರಿಕದಲ್ಲಿ ಅಂತರಜಾಲದಲ್ಲಿ ನಡೆಯುವ ವಹಿವಾಟುಗಳ ಮೇಲೆ ಬೇಹುಗಾರಿಕೆ ನಡೆಸಲು ಅನುವು ಮಾಡಿಕೊಡುವ ಸಿಸ್ಪ (CISPA - Cyber Intelligence Sharing and Protection Act)  ಎಂಬ ಕಾನೂನನ್ನು ಅಲ್ಲಿಯ ಪಾರ್ಲಿಮೆಂಟ್ ಅಂಗೀಕರಿಸಿದೆ. ಈ ಕಾನೂನು ಸರಕಾರಕ್ಕೆ ಅತೀವ ಅಧಿಕಾರವನ್ನು ನೀಡುತ್ತದೆ. ಅಂತರಜಾಲದಲ್ಲಿ ನಡೆಯುವ ಎಲ್ಲ ವ್ಯವಹಾರಗಳನ್ನು ಯಾವುದೇ ನ್ಯಾಯಾಲಯದ ಅಂಗೀಕಾರಕ್ಕೆ ಕಾಯದೆ ಅದರ ಮೇಲೆ ಬೇಹುಗಾರಿಕೆ ನಡೆಸುವ ಅಧಿಕಾರ ನೀಡುತ್ತದೆ. ನಾವು ಕಳುಹಿಸುವ ಇಮೈಲ್ ಕೂಡ ಇದರ ವ್ಯಾಪ್ತಿಗೆ ಬರುತ್ತದೆ. ಅಂತರಜಾಲ ಸಮುದಾಯಗಳು ಈ ಕಾನೂನು ಒಂದು ದುಷ್ಟ ಕಾನೂನು ಎಂದು ಗದ್ದಲ ಮಾಡುತ್ತಿವೆ.  

e- ಪದ

ಸಿಸ್ಪ (CISPA  - Cyber Intelligence Sharing and Protection Act) - ಅಂತರಜಾಲ ಬೇಹುಗಾರಿಕೆ ಮತ್ತು ತಡೆಗಟ್ಟುವಿಕೆಯ ನಿಯಮ. ಇದನ್ನು ಬಳಸಿ ಸರಕಾರವು ಯಾರ ಮೇಲೆ ಬೇಕಿದ್ದರೂ ಅಂತರಜಾಲ ಮೂಲಕ ಬೇಹುಗಾರಿಕೆ ನಡೆಸಬಹುದು. ಇದು ಅಮೆರಿಕದಲ್ಲಿ ಚಾಲನೆಗೆ ಬಂದಿದೆ.

e - ಸಲಹೆ

ಪ್ರಸನ್ನ ಆಡುವಳ್ಳಿಯವರ ಪ್ರಶ್ನೆ: ಮೈಕ್ರೋಸಾಫ್ಟ್ ಆಫೀಸಿನಲ್ಲಿ ವರ್ಡ್ ಡಾಕ್ಯುಮೆಂಟನ್ನು ಪಿಡಿಎಫ್ ರೂಪದಲ್ಲಿ ಉಳಿಸಲು ಅವಕಾಶ ಇದೆಯಷ್ಟೇ? ಆದರೆ ಇದನ್ನು ಬಳಸಿ ಕನ್ನಡ ಫೈಲುಗಳನ್ನು ಪರಿವರ್ತಿಸಲು ಒದ್ದಾಡುತ್ತಿದ್ದೆ. ಆಮೇಲೆ ಗೊತ್ತಾಗಿದ್ದೆಂದರೆ ಕನ್ನಡ ಫಾಂಟನ್ನು ಬೊಲ್ಡ್ ಮಾಡಿದಾಗಲಷ್ಟೇ ಪಿಡಿಎಫ್‌ಗೆ ಪರಿವರ್ತಿಸಲು ಸಾಧ್ಯ! ಆದರೆ ಇಂಗ್ಲೀಷಿನಲ್ಲಿ ಈ ಸಮಸ್ಯೆ ಇಲ್ಲ. ಯಾಕೆ ಹೀಗೆ? ಬೋಲ್ಡ್ ಮಾಡದೇ ಪರಿವರ್ತಿಸಲು ಸಾದ್ಯ ಇಲ್ಲವೇ?
ಉ: ನಾನು ಬೇಕಾದಷ್ಟು ಸಲ ವರ್ಡ್‌ನಿಂದ ಪಿಡಿಎಫ್ ಆಗಿ ಪರಿವರ್ತಿಸಿದ್ದೇನೆ. ನನಗೆ ಈ ಸಮಸ್ಯೆ ಕಂಡುಬಂದಿಲ್ಲ. ಬಹುಶಃ ನೀವು ಬಳಸುತ್ತಿರುವ ಫಾಂಟ್ ಬೋಲ್ಡ್ ರೂಪದಲ್ಲಿ ಮಾತ್ರ ಗಣಕದಲ್ಲಿ embeddable ಆಗಿ ಇರಬೇಕು. ಬೇರೆ ಫಾಂಟ್ ಬಳಸಿ ನೋಡಿ.
 
ಕಂಪ್ಯೂತರ್ಲೆ


ಕೋಲ್ಯ ತನ್ನ ಗರ್ಲ್‌ಫ್ರೆಂಡ್‌ಗೆ ದಿನಕ್ಕೆ ೫೦೦ ಎಸ್‌ಎಂಎಸ್ ಉಚಿತ ಇರುವ ಮೊಬೈಲ್ ಸಿಮ್ ತೆಗೆಸಿಕೊಟ್ಟ. ಮರುದಿನ ಆಕೆ ರಸ್ತೆಪಕ್ಕದ ತೆರೆದಿದ್ದ ಮ್ಯಾನ್‌ಹೋಲ್ ಒಳಗೆ ಬಿದ್ದಿದ್ದಳು.

ಮಂಗಳವಾರ, ಏಪ್ರಿಲ್ 24, 2012

ಗಣಕಿಂಡಿ - ೧೫೩ (ಎಪ್ರಿಲ್ ೨೩, ೨೦೧೨)

ಅಂತರಜಾಲಾಡಿ

ಹೋಮ್ ಟಾಕೀಸ್

ಟಾಕೀಸ್ ಎನ್ನುವುದು ಸಿನಿಮಾ ಮಂದಿರಕ್ಕೆ ಇನ್ನೊಂದು ಹೆಸರು. ಅದು ಮನೆಯಲ್ಲೇ ಇದ್ದರೆ ಹೇಗೆ? ಸಿನಿಮಾ ಥಿಯೇಟರಿಗೆ ಹೋಗಿ ಗಂಟೆಗಟ್ಟಲೆ ಕ್ಯೂ ನಿಲ್ಲುವ ತಾಪತ್ರಯವಿಲ್ಲದೆ ಸಿನಿಮ ನೋಡುವಂತಿದ್ದರೆ ಒಳ್ಳೆಯದಲ್ಲವೇ? ಹೌದು, ಅದಕ್ಕಾಗಿಯೇ ಡಿವಿಡಿ ಪ್ಲೇಯರ್‌ಗಳೂ ಡಿವಿಡಿ ತಟ್ಟೆಗಳೂ ಇವೆ ಎನ್ನುತ್ತೀರಾ? ಆದರೆ ಹೊಸ ಸಿನಿಮಾಗಳು ಡಿವಿಡಿ ರೂಪದಲ್ಲಿ ಬರಲು ವರ್ಷಗಳೇ ಹಿಡಿಯುತ್ತವೆ. ಕೆಲವು ಅಪರೂಪದ ಸಿನಿಮಾಗಳು ಅದರಲ್ಲೂ ಮುಖ್ಯವಾಗಿ ವ್ಯಾವಹಾರಿಕವಾಗಿ ಅಷ್ಟೇನೂ ಯಶಸ್ಸು ಕಾಣದವು ಆದರೆ ಉತ್ತಮವಾಗಿರುವ ಚಲನಚಿತ್ರಗಳು ಸಿಗುವುದು ಕಷ್ಟ. ಈ ಎಲ್ಲ ಸಮಸ್ಯೆಗಳಿಗೆ ಉತ್ತರ ರೂಪವಾಗಿ ಹೋಮ್ ಟಾಕೀಸ್ ಬಂದಿದೆ. ಮನೆಯಲ್ಲಿ ಉತ್ತಮ ಬ್ರಾಡ್‌ಬ್ಯಾಂಡ್ ಅಂತರಜಾಲ ಸಂಪರ್ಕ ಇದ್ದರೆ ಸಾಕು. www.hometalkies.com  ಜಾಲತಾಣದ ಮೂಲಕ ಚಲನಚಿತ್ರ ವೀಕ್ಷಣೆ ಮಾಡಬಹುದು. ಹೌದು, ಇದು ಕಾನೂನುಬದ್ಧವಾಗಿದೆ.

ಡೌನ್‌ಲೋಡ್

ಕ್ಯಾಮರ ಮಾಹಿತಿ ಬದಲಾಯಿಸಿ

ಡಿಜಿಟಲ್ ಕ್ಯಾಮರದಲ್ಲಿ ತೆಗೆದ ಫೋಟೋದ ಜೊತೆ ಹಲವು ಮಾಹಿತಿಗಳು ರೆಕಾರ್ಡ್ ಆಗಿರುತ್ತವೆ. ಅವುಗಳಲ್ಲಿ ಪ್ರಮುಖವಾದವು -ಕ್ಯಾಮರ ಹೆಸರು, ಮಾದರಿ, ಷಟರ್ ವೇಗ, ಅಪೆರ್ಚ್‌ರ್, ಐಎಸ್‌ಓ ಸಂಖ್ಯೆ, ಲೆನ್ಸ್‌ನ ಫೋಕಲ್ ಲೆಂತ್, ಇತ್ಯಾದಿ. ಗಣಕದಲ್ಲಿ ಸಂಗ್ರಹಿತವಾದ ಫೋಟೋವನ್ನು ಸೂಕ್ತ ತಂತ್ರಾಂಶದಲ್ಲಿ ತೆರೆದು Properties ಎಂಬುದನ್ನು ಆಯ್ಕೆ ಮಾಡಿ ನೋಡಿದರೆ ಈ ಹೆಚ್ಚುವರಿ ಮಾಹಿತಿ ನೋಡಲು ಸಿಗುತ್ತದೆ. ಸಾಮಾನ್ಯವಾಗಿ ಯವುದೇ ಫೋಟೋ ಎಡಿಟಿಂಗ್ ತಂತ್ರಾಂಶದಲ್ಲಿ ಇದನ್ನು ಬದಲಾಯಿಸಲು ಆಗುವುದಿಲ್ಲ. ಈ ಮಾಹಿತಿಯನ್ನು ಬದಲಾಯಿಸಲು ಅನುವು ಮಾಡಿಕೊಡುವ ಒಂದು ಉಚಿತ ತಂತ್ರಾಂಶ PhotoME ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.photome.de

e - ಸುದ್ದಿ

ಡಿಜಿಟಲ್ ಓದುಗ ಹೆಚ್ಚು ಓದುತ್ತಾನೆ

ಇತ್ತೀಚೆಗೆ ಇ-ಬುಕ್ ಅರ್ಥಾತ್ ವಿದ್ಯುನ್ಮಾನ ಪುಸ್ತಕ ಜನಪ್ರಿಯವಾಗುತ್ತಿದೆ. ಈ ಪುಸ್ತಕಗಳನ್ನು ಗಣಕ (ಅಂತರಜಾಲ), ಇಬುಕ್ ರೀಡರ್, ಟ್ಯಾಬ್ಲೆಟ್, ಮೊಬೈಲ್ ಫೋನ್ -ಇತ್ಯಾದಿಗಳಲ್ಲೆಲ್ಲ ಓದಬಹುದು. ಯಾವ ಸಮಯದಲ್ಲಿ ಬೇಕಾದರೂ ಎಲ್ಲಿ ಬೇಕಾದರೂ ಓದಬಹುದು. ದೊಡ್ಡ ದೊಡ್ಡ ಕಪಾಟುಗಳ ಅಗತ್ಯವಿಲ್ಲ. ಈಗ ಬಂದ ಸುದ್ದಿ: ವಿದ್ಯುನ್ಮಾನ ಪುಸ್ತಕ ಓದುಗ ಮಾಮೂಲಿ ಮುದ್ರಿತ ಪುಸ್ತಕಗಳ ಓದುಗರಿಗಿಂತ ಜಾಸ್ತಿ ಪುಸ್ತಕ ಓದುತ್ತಾರೆ. ಈ ಸಮೀಕ್ಷೆ ನಡೆದುದು ಅಮೆರಿಕದಲ್ಲಿ. ಈ ಪರಿಸ್ಥಿತಿ ಭಾರತಕ್ಕೆ ಬರಲು ಹೆಚ್ಚು ಸಮಯ ಬೇಕಾಗಿಲ್ಲ.

e- ಪದ

ಎಕ್ಸಿಫ್ ಮಾಹಿತಿ (Exif  - Exchangeable image file format) - ಡಿಜಿಟಲ್ ಕ್ಯಾಮರಾಗಳಲ್ಲಿ ಫೋಟೋ ತೆಗದಾಗ ಫೋಟೋದ ಬಗ್ಗೆ ಹೆಚ್ಚಿನ ಮಾಹಿತಿ ಉದಾ- ಕ್ಯಾಮರ ಹೆಸರು, ಮಾದರಿ, ಷಟರ್ ವೇಗ, ಅಪೆರ್ಚ್‌ರ್, ಐಎಸ್‌ಓ ಸಂಖ್ಯೆ, ಲೆನ್ಸ್‌ನ ಫೋಕಲ್ ಲೆಂತ್, ಇತ್ಯಾದಿಗಳನ್ನು ಫೋಟೋದ ಜೊತೆಗೇ ಸಂಗ್ರಹಿಸಡುವ ಜಾಗತಿಕ ಶಿಷ್ಟತೆ. ಎಲ್ಲ ಡಿಜಿಟಲ್ ಕ್ಯಾಮರಾಗಳೂ ಸ್ಮಾರ್ಟ್‌ಫೋನ್‌ಗಳೂ ಇದನ್ನು ಬಳಸುತ್ತವೆ.

e - ಸಲಹೆ

ಪವನ್ ಅವರ ಪ್ರಶ್ನೆ: ಗಣಕದಲ್ಲಿ ಕನ್ನಡ ಟೈಪ್ ಮಾಡುವುದು, ಅದರಲ್ಲೂ ಮುಖ್ಯವಾಗಿ ಕಚೇರಿಯಲ್ಲಿ, ಸೈಬರ್ ಕೆಫೆಗಳಲ್ಲಿ, ಯಾವುದೇ ತಂತ್ರಾಂಶ ಇನ್‌ಸ್ಟಾಲ್ ಮಾಡದೆ, ಹೇಗೆ? (ಈ ಪ್ರಶ್ನೆ ಮತ್ತೆ ಮತ್ತೆ ಕೇಳಬರುತಿದೆ).
ಉ: ಇದರ ಬಗ್ಗೆ ದೀರ್ಘವಾದ ಉತ್ತರ ಬರೆಯಬೇಕಾಗುತ್ತಿದೆ. ಅದೃಷ್ಟಕ್ಕೆ ವಿಕಾಸ್ ಹೆಗಡೆಯವರು ಈಗಾಗಲೆ ಆ ಕೆಲಸ ಮಾಡಿದ್ದಾರೆ. ಅದನ್ನು ಓದಲು bit.ly/KannadaTyping ಜಾಲತಾಣಕ್ಕೆ ಭೇಟಿ ನೀಡಿ.

ಕಂಪ್ಯೂತರ್ಲೆ

ಟ್ವಿಟ್ಟರ್‌ವ್ಯಸನಿ ಕೋಲ್ಯನಿಗೆ ತನ್ನ ನಾಯಿ ಕಳೆದುಹೋದರೆ ಅದನ್ನು ಮರಳಿ ಪಡೆಯುವುದು ಹೇಗೆ ಎಂಬ ಚಿಂತೆಯಾಯಿತು. ಅದಕ್ಕೊಂದು ಕೊರಳ ಪಟ್ಟಿ ತಂದು ಅದರಲ್ಲಿ ತನ್ನ ಟ್ವಿಟ್ಟರ್ ಹ್ಯಾಂಡಲ್ (ಅಡ್ಡಹೆಸರು) ಬರೆಸಿದ.

ಸೋಮವಾರ, ಏಪ್ರಿಲ್ 16, 2012

ಗಣಕಿಂಡಿ - ೧೫೨ (ಎಪ್ರಿಲ್ ೧೬, ೨೦೧೨)

ಅಂತರಜಾಲಾಡಿ

ಚಾಕೊಲೇಟ್ ಪ್ರಿಯರಿಗೆ

ಚಾಕೊಲೇಟ್ ಇಷ್ಟವಿಲ್ಲದವರ‍್ಯಾರು? ಪುಟ್ಟ ಕಂದನಿಂದ ಹಿಡಿದು ತಾತನವರೆಗು ಎಲ್ಲರಿಗು ಚಾಕೊಲೇಟ್ ಇಷ್ಟ. ಈಗೇನೋ ಭಾರತದಲ್ಲಿ ಹಲವಾರು ನಮೂನೆಯ ಚಾಕೊಲೇಟ್‌ಗಳು ಲಭ್ಯ. ಎರಡು ದಶಕಗಳ ಹಿಂದೆ ಪರಿಸ್ಥಿತಿ ಇಂತಿರಲಿಲ್ಲ. ಆದರೂ ಜಾಗತಿಕ ಮಟ್ಟದಲ್ಲಿ ನೋಡಿದರೆ ನಮ್ಮ ದೇಶದಲ್ಲಿ ದೊರೆಯುವ ಚಾಕೊಲೇಟ್‌ಗಳ ವೈವಿಧ್ಯ ತುಂಬ ಕಡಿಮೆಯೇ. ಚಾಕೊಲೆಟ್‌ಗಳಿಗೆಂದೇ ಮೀಸಲಾದ ಜಾಲತಾಣ www.chocablog.com. ಹಲವು ನಮೂನೆಯ ಚಾಕೊಲೇಟ್‌ಗಳು, ಅವುಗಳ ತಯಾರಿಯ ಪಾಕವಿಧಾನ, ಚಾಕೊಲೇಟ್ ಕೊಳ್ಳಬೇಕಿದ್ದರೆ ಅದಕ್ಕೂ ಅನುಕೂಲ ಎಲ್ಲ ಈ ಜಾಲತಾಣದಲ್ಲಿವೆ.

ಡೌನ್‌ಲೋಡ್

ಮತ್ತೊಂದು ಟೊರೆಂಟ್ ತಂತ್ರಾಂಶ

ಅಂತರಜಾಲದಲ್ಲಿ ತಂತ್ರಾಂಶ, ಸಂಗೀತ, ಚಲನಚಿತ್ರ, ಅಥವಾ ಇನ್ಯಾವುದೇ ಫೈಲುಗಳನ್ನು ಪ್ರಪಂಚಾದ್ಯಂತ ವಿವಿಧ ವ್ಯಕ್ತಿಗಳು ತಮ್ಮ ಗಣಕಗಳಲ್ಲಿ ಸಂಗ್ರಹಿಸಿಟ್ಟು ಆಸಕ್ತರಿಗೆ ಡೌನ್‌ಲೋಡ್ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಈ ರೀತಿಯ ಸೌಲಭ್ಯಕ್ಕೆ P2P ಅಂದರೆ ಪರ್ಸನ್-ಟು-ಪರ್ಸನ್ ಅರ್ಥಾತ್ ವ್ಯಕ್ತಿಯಿಂದ ವ್ಯಕ್ತಿಗೆ ಎಂದು ಕರೆಯುತ್ತಾರೆ. ಬಿಟ್‌ಟೊರೆಂಟ್ ಇದಕ್ಕೆ ಪ್ರಖ್ಯಾತ. ಇಂತಹ ಟೊರೆಂಟ್ ಪ್ರೊಟೊಕೋಲ್ ಮೂಲಕ ಫೈಲ್‌ಗಳನ್ನು ಟೌನ್‌ಲೋಡ್ ಮಾಡಲು ಅನುವು ಮಾಡಿಕೊಡುವ ಒಂದು ತಂತ್ರಾಂಶ Tixati. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.tixati.com.  

e - ಸುದ್ದಿ

ಫೇಸ್‌ಬುಕ್ ನೋಡುವುದು ಅಪರಾಧವಲ್ಲ

ಕೆಲಸದ ಸಮಯದಲ್ಲಿ ಫೇಸ್‌ಬುಕ್ ನೋಡುವುದು ಅಪರಾಧ ಎಂದು ಹೆಚ್ಚಿನವರು ತೀರ್ಮಾನ ಮಾಡುತ್ತಾರೆ. ಭಾರತದ ಬಹುತೇಕ ಕಂಪೆನಿಗಳಲ್ಲಿ ಫೇಸ್‌ಬುಕ್ ತಾಲತಾಣ ಮಾತ್ರವಲ್ಲ ಅದೇ ಮಾದರಿಯ ಇತರೆ ಸಮಾಜ ಜಾಲತಾಣಗಳನ್ನೂ ನಿರ್ಬಂಧಿಸಿರುತ್ತಾರೆ. ಆದರೆ ಅಮೇರಿಕದಿಂದ ಒಂದು ನ್ಯಾಯಾಲಯದ ತೀರ್ಮಾನ ಈಗ ಬಂದಿದೆ. ಅದರ ಪ್ರಕಾರ ಕೆಲಸದ ಸಮಯದಲ್ಲಿ ಕಚೇರಿಯಲ್ಲಿ ಫೇಸ್‌ಬುಕ್ ನೋಡುವುದು ಅಪರಾಧವಲ್ಲ. ಈ ತೀರ್ಮಾನ ಬಂದಿರುವುದು ಸ್ಯಾನ್‌ಫ್ರಾನ್ಸಿಸ್ಕೋದಿಂದ.

e- ಪದ

ರೂಟಿಂಗ್ (Rooting) - ಇದು ಆಂಡ್ರೋಯಿಡ್ ಫೋನ್‌ಗಳಲ್ಲಿ ಬಳಕೆಯಾಗುತ್ತಿರುವ ಪದ. ಸಾಮಾನ್ಯವಾಗಿ ಫೋನ್ ತಯಾರಕರು ಗ್ರಾಹಕರಿಗೆ ಫೋನಿನ ಮೇಲೆ ಸಂಪೂರ್ಣ ಸಾರ್ವಭೌಮತ್ವ ನೀಡಿರುವುದಿಲ್ಲ. ರೂಟಿಂಗ್ ಮಾಡುವುದರ ಮೂಲಕ ಫೋನಿನ ಮೇಲೆ ಸಂಪೂರ್ಣ ಅಧಿಕಾರ ಹೊಂದಬಹುದು. ಆಗ ಕೆಲವು ಅಯ್ಕೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯ ದೊರೆಯುತ್ತದೆ. ಕೆಲವು ತಂತ್ರಾಂಶಗಳನ್ನು ರೂಟಿಂಗ್ ಮಾಡಿದರೆ ಮಾತ್ರ ಇನ್‌ಸ್ಟಾಲ್ ಮಾಡಲು ಸಾಧ್ಯ.

e - ಸಲಹೆ

ಕೆ. ಬಸವರಾಜು ಅವರ ಪ್ರಶ್ನೆ: ನನಗೆ ಫೇಸ್‌ಬುಕ್‌ನಲ್ಲಿ ನನ್ನ ಹೆಸರು ಬದಲಾಯಿಸಬೇಕಾಗಿದೆ. ಇದು ಸಾಧ್ಯವೇ? ಸಾಧ್ಯವಿದ್ದರೆ ಹೇಗೆ?
ಉ: ಇದು ಬಹಳ ಸುಲಭ. Home ನಲ್ಲಿ Account Settings ಮೇಲೆ ಕ್ಲಿಕ್ ಮಾಡಿ. ನಂತರ Name ಎಂದಿರುವ ಸಾಲಿನ ಕೊನೆಯಲ್ಲಿ ಇರುವ Edit ಎಂಬುದರ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಬೇಕಾದ ಹೆಸರನ್ನು ಆಯ್ಕೆ ಮಾಡಿಕೊಳ್ಳಿ. ನೀವು ಫೇಸ್‌ಬುಕ್ ಅನ್ನು ಇಂಗ್ಲಿಶಿನಲ್ಲಿ ಬಳಸುತ್ತಿದ್ದೀರಿ ಎಂದು ಊಹಿಸಿ ಬರೆದಿದ್ದೇನೆ. ಕನ್ನಡದಲ್ಲಿ ಬಳಸುತ್ತಿದ್ದರೂ ಇವೇ ಅಯ್ಕೆಗಳು ಲಭ್ಯವಿವೆ.

ಕಂಪ್ಯೂತರ್ಲೆ


ಕೋಲ್ಯನಿಗೆ ತನ್ನ ಆಂಡ್ರೋಯಿಡ್ ಫೋನಿನಲ್ಲಿ ಯಾವುದೋ ತಂತ್ರಾಂಶ ಇನ್‌ಸ್ಟಾಲ್ ಮಾಡಬೇಕಾಗಿತ್ತು. ಅದು ರೂಟಿಂಗ್ ಮಾಡಿದರೆ ಮಾತ್ರ ಸಾಧ್ಯ ಎಂದು ಆತನ ತಂತ್ರಜ್ಞ ಸ್ನೇಹಿತ ಫೋನಿನಲ್ಲಿ ಹೇಳಿದ್ದ. ಕೋಲ್ಯ ಫೋನನ್ನು ಹೂಕುಂಡದಲ್ಲಿ ಊರಿ ಇಟ್ಟು, ಸ್ವಲ್ಪ ನೀರು ಚಿಮುಕಿಸಿ -ರೂಟಿಂಗ್ ಆಗಲೆಂದು ಕಾಯತೊಡಗಿದ.

ಸೋಮವಾರ, ಏಪ್ರಿಲ್ 9, 2012

ಗಣಕಿಂಡಿ - ೧೫೧ (ಎಪ್ರಿಲ್ ೦೯, ೨೦೧೨)

ಅಂತರಜಾಲಾಡಿ

ಮೇಘದಲ್ಲೊಂದು ಪೆಟ್ಟಿಗೆ

ಈಗೀಗ ಕ್ಲೌಡ್ ಅರ್ಥಾತ್ ಅಂತರಜಾಲಾಧಾರಿತ ಸಂಗ್ರಹ ಮತ್ತು ಗಣಕೀಕರಣ ಸಹಜವಾಗುತ್ತಿದೆ. ಈ ಅಂತರಜಾಲದಲ್ಲಿಯ ಸಂಗ್ರಹವನ್ನು ಹಣ ನೀಡಿ ಕೊಂಡುಕೊಳ್ಳಬೇಕು. ಇವುಗಳಲ್ಲಿ ತುಂಬ ಪ್ರಸಿದ್ಧವಾದವು ಅಮೆಝಾನ್, ಮೈಕ್ರೋಸಾಫ್ಟ್, ಇತ್ಯಾದಿ. ಕೆಲವು ಉಚಿತ ಮೇಘಾಧಾರಿತ ಸಂಗ್ರಹಗಳೂ ಇವೆ. ಅಂತಹವುಗಳಲ್ಲಿ ತುಂಬ ಜನಪ್ರಿಯವಾದುದು ಡ್ರಾಪ್‌ಬಾಕ್ಸ್. ಇದನ್ನು ನೇರವಾಗಿ ಅದರ ಜಾಲತಾಣದಿಂದ, ನಿಮ್ಮ ಗಣಕದಿಂದ ಅಥವಾ ಸ್ಮಾರ್ಟ್‌ಫೋನ್‌ನಿಂದ ಬಳಸಬಹುದು. ಗಣಕದಲ್ಲಿ ಇದನ್ನು ಬಳಸಲು ಅವರೇ ಒಂದು ಚಿಕ್ಕ ತಂತ್ರಾಂಶವನ್ನು ನೀಡಿದ್ದಾರೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಫೋನ್‌ಗಳಿಗೆ ಸೂಕ್ತ ಆಪ್ ನೀಡಿದ್ದಾರೆ. ಡ್ರಾಪ್‌ಬಾಕ್ಸ್‌ನ ಜಾಲತಾಣ ವಿಳಾಸ - www.dropbox.com. ಗಣಕದಲ್ಲಿ ಅದಕ್ಕಂದೇ ಒಂದು ಫೋಲ್ಡರ್ ಮಾಡಿಟ್ಟುಕೊಂಡು ಅಲ್ಲಿ ಫೈಲ್‌ಗಳನ್ನು ಸೇರಿಸಿದರೆ ಸಾಕು. ಅದು ಅಂತರಜಾಲದಲ್ಲಿ, ಗಣಕದಲ್ಲಿ, ಫೋನ್‌ನಲ್ಲಿ -ಎಲ್ಲ ಕಡೆ ಸರಿಹೊಂದಿಕೊಳ್ಳುತ್ತದೆ, ಒಂದು ಕಡೆ ನವೀಕರಿಸಿದರೆ ಎಲ್ಲ ಕಡೆ ನವೀಕರಣಗೊಳ್ಳುತ್ತವೆ.

ಡೌನ್‌ಲೋಡ್

ಆಂಡ್ರೋಯಿಡ್ ಫೋನ್ ವೀಕ್ಷಿಸಿ

ಈಗೀಗ ಆಂಡ್ರೋಯಿಡ್ ಸ್ಮಾರ್ಟ್‌ಫೋನ್ ಬಳಕೆ ತುಂಬ ಸಹಜವಾಗುತ್ತಿದೆ. ಆಂಡ್ರೋಯಿಡ್ ಫೋನ್ ಬಳಸುತ್ತಿರುವವರಿಗೆ ಒಂದು ತಲೆನೋವಿನ ವಿಷಯವೆಂದರೆ ಅದರಲ್ಲಿರುವ ವಿಳಾಸ ಪುಸ್ತಕ ಮತ್ತು ಗಣಕದಲ್ಲಿರುವ ವಿಳಾಸ ಪುಸ್ತಕಗಳನ್ನು ಒಂದಕ್ಕೊಂದು ಸರಿಹೊಂದಿಸುತ್ತಿರುವುದು. ಅದಕ್ಕಾಗಿ ಬಳಸುವ ತಂತ್ರಾಂಶ ಸರಿಯಿಲ್ಲದಿದ್ದರೆ ಪ್ರತಿ ಸಲ ಸಿಂಕ್ ಮಾಡಿದಾಗ ಹೆಸರುಗಳನ್ನು ದ್ವಿಪ್ರತಿ ಮಾಡುತ್ತ ಹೋಗಿ ಕೊನೆಗೊಂದು ದಿನ ನಿಮ್ಮ ಫೋನಿನಲ್ಲಿ ಹತ್ತು, ಹದಿನೈದು ಸಾವಿರ ಹೆಸರುಗಳಾಗುತ್ತವೆ. ಆಂಡ್ರೋಯಿಡ್ ಫೋನಿನಲ್ಲಿ ಏನೇನಿದೆ ಎಂದು ಗಣಕಕ್ಕೆ ಸಂಪರ್ಕ ಮಾಡಿ ಗಣಕದಿಂದಲೇ ಎಲ್ಲ ಕೆಲಸಗಳನ್ನು ಮಾಡಲು ಅನುವು ಮಾಡಿಕೊಡುವ ತಂತ್ರಾಂಶ MyPhoneExplorer. ಇದರಲ್ಲಿ ಎರಡು ಭಾಗ ಇವೆ. ಒಂದು ಭಾಗ ನಿಮ್ಮ ಫೋನಿನಲ್ಲಿ ಇರತಕ್ಕದ್ದು. ಅದನ್ನು ಆಂಡ್ರೋಯಿಡ್ ಮಾರುಕಟ್ಟೆಯಿಂದ (play.google.com/store) ನೇರವಾಗಿ ಫೋನಿಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಗಣಕದಲ್ಲಿರಬೇಕಾದ ಇದರ ಜೊತೆಗಾರ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಕೊಂಡಿ - www.fjsoft.at/en.

e - ಸುದ್ದಿ

ಆಟೋಪ್ಲೇ ತಂದ ಕುತ್ತು

ಐರ್ಲ್ಯಾಂಡಿನಲ್ಲಿ ಒಬ್ಬ ಪಾದ್ರಿಯವರು ಕೆಲವು ತಂದೆ ತಾಯಿಯರಿಗೆ ಗಣಕವನ್ನು ಬಳಸಿ ಪ್ರವಚನ ನೀಡುತ್ತಿದ್ದರು. ಪ್ರವಚನದ ಕೊನೆಯಲ್ಲಿ ಯುಎಸ್‌ಬಿ ಡ್ರೈವ್ ಒಂದನ್ನು ಗಣಕಕ್ಕೆ ಸೇರಿಸಿ ಅದರಲ್ಲಿರುವ ಪ್ರೆಸೆಂಟೇಶನ್ ತೋರಿಸಲು ಹೊರಟರು. ಯುಎಸ್‌ಬಿ ಡ್ರೈವ್ ತೂರಿಸಿದೊಡನೆ ಅದರಲ್ಲಿದ್ದ ವೀಡಿಯೋವು ಆಟೋಪ್ಲೇ ಮೂಲಕ ಪ್ಲೇ ಆಯಿತು. ಪಾದ್ರಿಯವರ ದುರಾದೃಷ್ಟಕ್ಕೆ ಅದರಲ್ಲಿದ್ದುದು ಅಶ್ಲೀಲ ನೀಲಿ ಚಿತ್ರವಾಗಿತ್ತು. ಅದು ಅಲ್ಲಿಗೆ ಹೇಗೆ ಬಂತು ಎಂಬುದನ್ನು ಈಗ ಪೋಲೀಸರು ಪತ್ತೆಹಚ್ಚುತ್ತಿದ್ದಾರೆ. ಪಾದ್ರಿಯವರೀಗ ಆಟೋಪ್ಲೇ ನಿಲ್ಲಿಸುವುದು ಹೇಗೆ ಎಂದು ಗಣಕ ತಂತ್ರಜ್ಞರಿಂದ ತರಬೇತಿ ಪಡೆಯುತ್ತಿದ್ದಾರೆ.

e- ಪದ

ಸಿಂಕ್ (Sync - Synchronization) - ಗಣಕ, ಫೋನ್, ಬೇರೆ ಬೇರೆ ಸಾಧನಗಳು (ಎಂಪಿ೩ ಪ್ಲೇಯರ್‌ಗಳು), ಅಂತರಜಾಲತಾಣ -ಇತ್ಯಾದಿಗಳಲ್ಲಿ ಒಂದೇ ಫೈಲ್ ಇದ್ದಾಗ ಒಂದು ಕಡೆ ಫೈಲ್ ಬದಲಾಯಿಸಿದಾಗ ಅದನ್ನು ಎಲ್ಲ ಕಡೆ ಬದಲಾಯಿಸಿ ಎಲ್ಲವೂ ಒಂದೇ ಅಗಿರುವಂತೆ ಸರಿಹೊಂದಿಸುವುದು. ಇಂಗ್ಲಿಶಿನಲ್ಲಿ ಈ ಪ್ರಕ್ರಿಯೆಗೆ synching ಎಂದೂ ಕರೆಯುತ್ತಾರೆ.

e - ಸಲಹೆ

ಪ್ರ: ನಾನು ನನ್ನ ಗಣಕಕ್ಕೆ ಯಾವುದೇ ಯುಎಸ್‌ಬಿ ಡ್ರೈವ್ ತೂರಿಸಿದೊಡನೆ ಅದರಲ್ಲಿರುವ ತಂತ್ರಾಂಶ ತನ್ನಿಂದತಾನೆ ಚಾಲೂಗೊಳ್ಳುತ್ತದೆ. ಈ ರೀತಿ ಆಗದಂತೆ ಮಾಡಲು ಸಾಧ್ಯವೇ?
ಉ: ಸಾಧ್ಯವಿದೆ. ಇದನ್ನು ಆಟೋಪ್ಲೇ ಎನ್ನುತ್ತಾರೆ. ಅದನ್ನು ನಿಲ್ಲಿಸತಕ್ಕದ್ದು. ಇದಕ್ಕಾಗಿ ನೀವು ಮಾಡಬೇಕಾದುದೇನೆಂದರೆ - Control Panel > Hardware and Sound > AutoPlay ಇಲ್ಲಿಗೆ ಹೋಗಿ Software and games ಎಂಬುದರ ಮುಂದೆ Ask me everytime ಎಂಬುದಾಗಿ ಆಯ್ಕೆ ಮಾಡಿಕೊಳ್ಳಬೇಕು.

ಕಂಪ್ಯೂತರ್ಲೆ

ಒಬ್ಬಾತ ತನ್ನ ಎಂಪಿ೩ ಪ್ಲೇಯರ್‌ಗೆ ಟೈಟಾನಿಕ್ ಎಂದು ನಾಮಕರಣ ಮಾಡಿದ್ದ. ಪ್ರತಿ ಸಲ ಅದನ್ನು ಗಣಕಕ್ಕೆ ಸಂಪರ್ಕಿಸಿ ಸಿಂಕ್ ಮಾಡಿದಾಗಲೂ “ಟೈಟಾನಿಕ್ ಈಸ್ ಸಿಂಕಿಂಗ್” ಎಂದು ಸಂದೇಶ ಮೂಡಿಬರುತ್ತಿತ್ತು.

ಸೋಮವಾರ, ಏಪ್ರಿಲ್ 2, 2012

ಗಣಕಿಂಡಿ - ೧೫೦ (ಎಪ್ರಿಲ್ ೦೨, ೨೦೧೨)

ಅಂತರಜಾಲಾಡಿ

ಭಾರತದ ಹೂವುಗಳು

ಹೂವುಗಳನ್ನು ಮೆಚ್ಚದವರಾರು? ಹೂವುಗಳು ಎಲ್ಲರಿಗೂ ಇಷ್ಟ. ಹೂವುಗಳ ಫೋಟೋ ತೆಗೆಯುವವರೂ ತುಂಬ ಮಂದಿ. ಹೂವುಗಳ ಫೋಟೋ ನೋಡಿದೊಡನೆ ಮನಸ್ಸಿನಲ್ಲಿ ಅದರ ಬಗ್ಗೆ ಹಲವು ನೆನಪುಗಳು ಮೂಡುತ್ತವೆ. ಅದೆಲ್ಲ ಸರಿ. ಆದರೆ ಅದರ ಹೆಸರು ಗೊತ್ತಾಗುತ್ತದೆಯೇ? ಕೆಲವು ಸಾಮಾನ್ಯ ಹೂವುಗಳಿಗೆ ಕೂಡ ನಮಗೆ ನಾವು ಮನೆಯಲ್ಲಿ ಬಳಸುವ ಹೆಸರು ಗೊತ್ತಿರುತ್ತದೆ, ಆದರೆ ಅದರ ವೈಜ್ಞಾನಿಕ ಹೆಸರು ಗೊತ್ತಿರುವುದಿಲ್ಲ. ಅಂತಹವರಿಗಾಗಿಯೇ ಒಂದು ಜಾಲತಾಣವಿದೆ. ಭಾರತೀಯ ಹೂವುಗಳಿಗೆಂದೇ ಇರುವ ಜಾಲತಾಣ www.flowersofindia.net. ಭಾರತದ ಪ್ರಮುಖ ಹೂವುಗಳ ಫೋಟೋ ಮತ್ತು ವಿವರ ಇಲ್ಲಿವೆ. 

ಡೌನ್‌ಲೋಡ್


ಅಂತರಿಕ್ಷದಲ್ಲಿ ಕೋಪದ ಹಕ್ಕಿಗಳು

ಸ್ಮಾರ್ಟ್‌ಫೋನ್‌ಗಳಲ್ಲಿ ಆಡುವ ಆಟಗಳಲ್ಲಿ ಜನಪ್ರಿಯತೆಯಲ್ಲಿ ಮೊದಲನೆಯ ಸ್ಥಾನದಲ್ಲಿರುವುದು ಆಂಗ್ರಿ ಬರ್ಡ್ಸ್. ಇದು ಐಫೋನ್, ಆಂಡ್ರೋಯಿಡ್ ಮತ್ತು ಗಣಕಗಳಿಗೂ ಲಭ್ಯವಿದೆ. ಮಾರ್ಚ್ ೨೨ರಂದು ಇದರ ಹೊಸ ಆವೃತ್ತಿ ಆಂಗ್ರಿ ಬರ್ಡ್ಸ್ ಸ್ಪೇಸ್ ಬಂದಿದೆ. ಇದು ಡೌನ್‌ಲೋಡ್‌ಗೆ ಲಭ್ಯವಾಗಿ ೨೪ ಗಂಟೆಗಳಲ್ಲಿ ೫೦ ಲಕ್ಷ ಮಂದಿ ಇದನ್ನು ಡೌನ್‌ಲೋಡ್ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರ ಇಷ್ಟವಿರುವವರಿಗೆಲ್ಲ ಈ ಆಟ ತುಂಬ ಪ್ರಿಯವಾಗಲೇ ಬೇಕು. ಯಾಕೆಂದರೆ ಈ ಆಟ ನಡೆಯುವುದು ಶೂನ್ಯ ಗುರುತ್ವಾಕರ್ಷಣೆಯ ಅಂತರಿಕ್ಷದಲ್ಲಿ. ಕವಣೆಯಿಂದ ಎಸೆದರೆ ಭೂಮಿಯ ಮೇಲೆ ಗುರುತ್ವಾಕರ್ಷಣೆಯಿಂದಾಗಿ ಅದು ಬಾಗಿದ ಪಥದಲ್ಲಿ ಸಾಗುತ್ತದೆ. ಅಂತರಿಕ್ಷದಲ್ಲಿ ಅದರ ಪಥ ಅದು ಯಾವ ವಸ್ತುವಿನ ಗುರುತ್ವಾಕರ್ಷಣೆಯಗೆ ಒಳಪಟ್ಟಿದೆಯೋ ಇಲ್ಲವೋ ಎನ್ನುವುದನ್ನು ಅವಲಂಬಿಸಿದೆ. ಇದನ್ನು ಈ ಆಟದಲ್ಲಿ ತೋರಿಸಲಾಗಿದೆ. ಅದ್ಭುತ ಆಟ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ space.angrybirds.com.

e - ಸುದ್ದಿ

ಗೂಗ್ಲ್ ಅರ್ತ್ ಮೂಲಕ ಕುಟುಂಬದ ಪತ್ತೆ

೫ ವರ್ಷ ಪ್ರಾಯದವನಿದ್ದಾಗ ರೈಲಿನಲ್ಲಿ ತಪ್ಪಿಸಿಕೊಂಡ ಹುಡುಗನೊಬ್ಬ ೨೫ ವರ್ಷಗಳ ನಂತರ ಗೂಗ್ಲ್ ಅರ್ತ್ ಮತ್ತು ಫೇಸ್‌ಬುಕ್ ಬಳಸಿ ತನ್ನ ಕುಟುಂಬದವರನ್ನು ಪತ್ತೆ ಮಾಡಿದ ಸುದ್ದಿ ಬಂದಿದೆ. ಇದೊಂದು ಥೇಟ್ ಸಿನಿಮಾ ಕಥೆಯಂತಿದೆ. ರೈಲಿನಿಂದ ಸರಿಯಾದ ನಿಲ್ದಾಣದಲ್ಲಿ ಇಳಿಯದೆ ತಪ್ಪಿಕೊಂಡ ಹುಡುಗ ಕೊಲ್ಕತ್ತ ಸೇರಿ ಅಲ್ಲಿ ಬಿಕ್ಷುಕರ ಕೈಗೆ ಸಿಕ್ಕಿದ. ಅವರಿಂದ ಅವನನ್ನು ಬಿಡಿಸಿಕೊಂಡುದು ಆಸ್ಟ್ರೇಲಿಯನ್ ದಂಪತಿಗಳು. ಅವರೊಂದಿಗೆ ಆಸ್ಟ್ರೇಲಿಯಕ್ಕೆ ಪಯಣ. ಅಲ್ಲಿಯೇ ಕಲಿತು ದೊಡ್ಡವನಾಗಿ ಉತ್ತಮ ಸಂಪಾದನೆ. ತನ್ನ ಊರಿನ ಹೆಸರು ಮಾತ್ರ ಆತನಿಗೆ ಚೆನ್ನಾಗಿ ನೆನಪಿತ್ತು. ತಿಂಗಳುಗಳ ಕಾಲ ಗೂಗ್ಲ್ ಅರ್ತ್‌ನಲ್ಲಿ ಹುಡುಕಾಡಿ ಕೊನೆಗೂ ತನ್ನ ಊರು, ರೈಲು ನಿಲ್ದಾಣ ಎಲ್ಲ ಪತ್ತೆ ಹಚ್ಚಿದ. ಫೇಸ್‌ಬುಕ್ ಮೂಲಕ ಕೆಲವರ ಪರಿಚಯವನ್ನೂ ಮಾಡಿಕೊಂಡ. ಕೊನೆಗೊಮ್ಮೆ ಊರಿಗೆ ಬಂದು ತಾಯಿಯ ಜೊತೆಗೂಡಿದ. ಈಗ ಆತ ಆಸ್ಟ್ರೇಲಿಯಾಕ್ಕೆ ವಾಪಾಸು ಹೋಗಿದ್ದಾನೆ, ಪುನಃ ಬರುತ್ತೇನೆ ಎಂಬ ವಾಗ್ದಾನದೊಂದಿದೆ.

e- ಪದ

ನೂಕ್ (Nook) - ಬಾರ್ನ್ಸ್ ಮತ್ತು ನೋಬಲ್ ಕಂಪೆನಿಯವರು ತಯಾರಿಸಿರುವ ವಿದ್ಯುನ್ಮಾನ ಪುಸ್ತಕ ಓದುಗ (ebook reader). ಇದು ಬಹುಮಟ್ಟಿಗೆ ಟ್ಯಾಬ್ಲೆಟ್‌ಗಳನ್ನು ಹೋಲುತ್ತದೆ. ಅಮೆಝಾನ್‌ನವರ ಕಿಂಡಲ್‌ಗೆ ಪ್ರತಿಸ್ಪರ್ಧಿ. ಕಿಂಡಲ್‌ನಂತೆ ಇಲ್ಲೂ ಭಾರತೀಯ ಭಾಷೆಗಳ ಬೆಂಬಲ ನೀಡಿಲ್ಲ.

e - ಸಲಹೆ

ನಾಗರತ್ನ ಅವರ ಪ್ರಶ್ನೆ: ನನಗೆ ನನ್ನ ಫೇಸ್‌ಬುಕ್ ಖಾತೆ ಅಳಿಸಿಹಾಕಬೇಕು. ಹೇಗೆ?
ಉ: Account Settings  > Security  >  Deactivate your account

ಕಂಪ್ಯೂತರ್ಲೆ


ಬ್ಯಾಂಕಿನ ಲಾಗಿನ್ ಮತ್ತು ಪಾಸ್‌ವರ್ಡ್ ಕದಿಯಲು ಬರುವ ಇಮೈಲ್‌ಗಳು ತೆರೆಯುವ ನಕಲಿ ಬ್ಯಾಂಕ್ ಜಾಲತಾಣದಲ್ಲಿ ನಾನು ನಮೂದಿಸುವ ಲಾಗಿನ್ ಮತ್ತು ಪಾಸ್‌ವರ್ಡ್ ಪೆದ್ದ ಮತ್ತು ಮೂರ್ಖ.

ಸೋಮವಾರ, ಮಾರ್ಚ್ 26, 2012

ಗಣಕಿಂಡಿ - ೧೪೯ (ಮಾರ್ಚ್ ೨೬, ೨೦೧೨)

ಅಂತರಜಾಲಾಡಿ

ವಿದ್ಯುನ್ಮಾನ ಮದುವೆ

ಅಂತರಜಾಲದಲ್ಲಿ ಪ್ರತಿಯೊಂದಕ್ಕೂ ಒಂದೊಂದು ಜಾಲತಾಣವಿರುವಾಗ ಮದುವೆಗೂ ಬೇಕಲ್ಲವೇ? ಹೌದು. ಅದಕ್ಕೂ ಹಲವಾರು ಜಾಲತಾಣಗಳಿವೆ. ಅಂತಹ ಒಂದು ಜಾಲತಾಣ www.ewedding.com. ಮದುವೆಯನ್ನು ಯೋಚಿಸುವಲ್ಲಿಂದ ಹಿಡಿದು ಮಧುಚಂದ್ರ ಮುಗಿಸಿ ಬರುವ ತನಕ ವಿವಿಧ ಹಂತಗಳಿಗೆ ಇದರಲ್ಲಿ ಸೂಕ್ತ ವಿಭಾಗಗಳಿವೆ. ವಧೂವರರ ಭಾವಚಿತ್ರ, ಅವರು ಹೇಗೆ ಭೇಟಿಯಾದರೆಂಬ ವಿವರ, ಎಲ್ಲಿ ಯಾವಾಗ ಮದುವೆ, ಬಂಧುಮಿತ್ರರಿಗೆ ಆಹ್ವಾನ ಕಳುಹಿಸುವುದು, ತಮಗೇನು ಬೇಕು ಎಂಬ ಆಶಾಪಟ್ಟಿ, ಹೀಗೆ ಹಲವು ರೀತಿಯಲ್ಲಿ ಮದುವೆಗೆ ಸಹಾಯ ಮಾಡುವ ಸವಲತ್ತುಗಳಿವೆ. ಮದುವೆಗೆ ಬರುವವರು ತಮಗೆ ಯಾವ ರೀತಿಯ ಆಹಾರ ಬೇಕು ಎಂಬಂತಹ ವೋಟಿಂಗ್ ಕೂಡ ತಯಾರಿಸಬಹುದು!

ಡೌನ್‌ಲೋಡ್

ಅಂಟುಚೀಟಿ

ಹಳದಿ ಬಣ್ಣದ ಅಂಟುಚೀಟಿ ಬಳಸಿದ್ದೀರಿ ತಾನೆ. ಏನೇನೋ ಕೆಲಸಗಳನ್ನು ಮಾಡಬೇಕಾಗಿದೆ. ಕೆಲವೆಲ್ಲ ಮರೆತು ಹೋಗುತ್ತವೆ. ಅದಕ್ಕಾಗಿ ಅಲ್ಲಿ ಇಲ್ಲ ಸಿಕ್ಕ ಸಿಕ್ಕಲ್ಲೆಲ್ಲ ಹಳದಿ ಬಣ್ಣದ (ಈಗೀಗ ಬೇರೆ ಬೇರೆ ಬಣ್ಣಗಳಲ್ಲು ಬರುತ್ತಿವೆ) ಅಂಟಿಸಿ ಪುನಃ ತೆಗೆಯಬಹುದಾದ ಸ್ಟಿಕೀ ನೋಟ್ಸ್‌ಗಳನ್ನು ಬಳಸುವ ಅಭ್ಯಾಸ ನಮ್ಮಲ್ಲಿ ಹಲವರಿಗಿದೆ. ಗಣಕಗಳಲ್ಲೂ ಇದೇ ಮಾದರಿಯ ಸ್ಟಿಕಿನೋಟ್ಸ್ ತಂತ್ರಾಂಶ ಲಭ್ಯವಿದೆ. ಅಂತಹ ಒಂದು ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ  www.zhornsoftware.co.uk/stickies/. ಇದು ವಿಂಡೋಸ್ ಜೊತೆ ಬರುವ ಸ್ಟಿಕಿನೋಟ್ಸ್ ತಂತ್ರಾಂಶಕ್ಕಿಂತ ಚೆನ್ನಾಗಿದೆ. ಇದರಲ್ಲಿ ಚಿತ್ರಗಳನ್ನೂ ಸೇರಿಸಬಹುದು. ಸ್ನೇಹಿತರ ಜೊತೆ ಹಂಚಿಕೊಳ್ಳಲೂಬಹುದು.

e - ಸುದ್ದಿ

ನಕಲಿ ಫೇಸ್‌ಬುಕ್ ಖಾತೆ ಮೂಲಕ ಗೂಢಚರ್ಯೆ


ಫೇಸ್‌ಬುಕ್‌ನಲ್ಲಿರುವ ಸದಸ್ಯರನ್ನು ಒಂದು ದೇಶ ಎಂದು ಲೆಕ್ಕಕ್ಕೆ ತೆಗೆದುಕೊಂಡರೆ ಅದು ಜಗತ್ತಿನ ಮೂರನೆ ಅತಿ ದೊಡ್ಡ ದೇಶವಾಗುತ್ತದೆ. ಅದರಲ್ಲಿ ಹಲವು ನಕಲಿ ಖಾತೆಗಳಿವೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈಗ ಬಂದ ಸುದ್ದಿ ರಕ್ಷಣಾತಜ್ಞರು ಗಮನ ನೀಡಬೇಕಂತಹದು. ಫೇಸ್‌ಬುಕ್‌ನಲ್ಲಿ ಚೀನಾ ದೇಶದವರು ಅಮೆರಿಕದ ರಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ನಕಲಿ ಖಾತೆ ತೆಗೆದಿದ್ದರು. ಅದನ್ನು ಬಳಸಿ ಅವರು ಇತರೆ ರಕ್ಷಣಾ ಖಾತೆಯ ಸದಸ್ಯರುಗಳ ಜೊತೆ ಸ್ನೇಹ ಗಳಿಸಿ (ಫೇಸ್‌ಬುಕ್‌ನಲ್ಲಿ) ಅವರ ವೈಯಕ್ತಿಕ ವಿವರಗಳನ್ನು (ಫೋನ್ ಸಂಖ್ಯೆ, ಇಮೈಲ್, ಕುಟುಂಬದ ಸದಸ್ಯರ ಹೆಸರು, ಇತ್ಯಾದಿ) ಪಡೆದುಕೊಂಡಿದ್ದರು. ಇತ್ತೀಚೆಗೆ ಫೇಸ್‌ಬುಕ್‌ನವರು ಆ ಖಾತೆಯನ್ನು ಅಳಿಸಹಾಕಿದ್ದಾರೆ. 

e- ಪದ

ಕಿಂಡಲ್ (Kindle) - ಅಮೆಝಾನ್ ಕಂಪೆನಿಯವರು ತಯಾರಿಸಿರುವ ವಿದ್ಯುನ್ಮಾನ ಪುಸ್ತಕ ಓದುಗ (ebook reader). ಇದು ಒಂದು ಯಂತ್ರಾಂಶ ಅಥವಾ ಗ್ಯಾಜೆಟ್. ಇದು ಬಹುಮಟ್ಟಿಗೆ ಟ್ಯಾಬ್ಲೆಟ್‌ಗಳನ್ನು ಹೋಲುತ್ತದೆ. ಇದರ ಕೆಲವು ಗುಣವೈಶಿಷ್ಟ್ಯಗಳು - ಇ-ಇಂಕ್ ಬಳಕೆ, ಲೇಖನಗಳನ್ನು ಬೇಕಾದಲ್ಲಿ ಹೈಲೈಟ್ ಮಾಡುವ ಸವಲತ್ತು, ಅಲ್ಲಲ್ಲಿ ಟಿಪ್ಪಣಿ ಮಾಡುವುದು, ಪಠ್ಯದಿಂದ ಧ್ವನಿಗೆ ಬದಲಾವಣೆ ಅಂದರೆ ಪುಸ್ತಕಗಳನ್ನು ಅದುವೇ ಓದಿ ಹೇಳುತ್ತದೆ, ಇತ್ಯಾದಿ. ಆದರೆ ಕಿಂಡಲ್‌ನಲ್ಲಿ ಇನ್ನೂ ಭಾರತೀಯ ಭಾಷೆಗಳ ಬೆಂಬಲ ನೀಡಿಲ್ಲ.

e - ಸಲಹೆ

ಮಧುಕೇಶ ದೊಡ್ಡೇರಿ ಅವರ ಪ್ರಶ್ನೆ: ನನ್ನ ಡೆಲ್ ಲ್ಯಾಪ್‌ಟಾಪ್‌ನಲ್ಲಿ ೫ ನಿಮಿಷ ಮಾತ್ರ ಸಂಗೀತ (ಆಡಿಯೋ) ಬರುತ್ತದೆ. ನಂತರ ಅದು ನಿಂತುಹೋಗುತ್ತದೆ. ಇದಕ್ಕೆ ಏನು ಪರಿಹಾರ?
ಉ: ನಮ್ಮ ಲ್ಯಾಪ್ಟಟಾಪ್‌ನ ಆಡಿಯೋ ಡ್ರೈವರ್ ಕೆಟ್ಟು ಹೋಗಿರಬೇಕು. device manager ಅನ್ನು ಪ್ರಾರಂಭಿಸಿ ಅದರಲ್ಲಿ ಕಂಡು ಬರುವ ಆಡಿಯೋ ಡ್ರೈವರ್ ಅನ್ನು ಕಿತ್ತುಹಾಕಿ. ನಂತರ ಲ್ಯಾಪ್‌ಟಾಪ್ ಅನ್ನು ರಿಬೂಟ್ ಮಾಡಿ. ಆಗ ಅದು ತನಗೆ ಬೇಕಾದ ಡ್ರೈವರ್ ಅನ್ನು ಪುನಃ ಇನ್‌ಸ್ಟಾಲ್ ಮಾಡಿಕೊಳ್ಳುತ್ತದೆ.

ಕಂಪ್ಯೂತರ್ಲೆ

ಇಂಟರ್‌ನೆಟ್ (ತ)ಗಾದೆ: ಪ್ರಪಂಚದಲ್ಲಿ ಎರಡೇ ನಮೂನೆಯ ಜನರಿರುವುದು -ಆನ್‌ಲೈನ್ ಇರುವವರು ಮತ್ತು ಇಲ್ಲದವರು.

ಮಂಗಳವಾರ, ಮಾರ್ಚ್ 20, 2012

ಗಣಕಿಂಡಿ - ೧೪೮ (ಮಾರ್ಚ್ ೧೯, ೨೦೧೨)

ಅಂತರಜಾಲಾಡಿ

ಪ್ರತಿದಿನ ವಿಜ್ಞಾನ

ವಿಜ್ಞಾನ ಎಂದೆಂದಿಗೂ ಕುತೂಹಲಕಾರಿಯೇ. ನಾವು ಪ್ರತಿದಿನ ಮನೆಗಳಲ್ಲಿ ಮಾಡುವ ಹಲವು ಕೆಲಸಗಳ ಹಿಂದೆ ವಿಜ್ಞಾನದ ತತ್ತ್ವಗಳಿವೆ. ಅಂಗಳಕ್ಕೆ ಬಂದು ಆಕಾಶ ನೋಡಿದರೆ ಕಾಣುವ ನಕ್ಷತ್ರಗಳು ಶತಮಾನಗಳಿಂದ ಮಾನವನ ಆಸಕ್ತಿಯನ್ನು ಕೆರಳಿಸುತ್ತಲೇ ಬಂದಿವೆ. ದೋಸೆ ಕಾವಲಿ ಬಿಸಿಯಾಗಿದೆಯೇ ಎಂದು ತಿಳಿಯಲು ಗೃಹಿಣಿ ಸ್ವಲ್ಪ ನೀರು ಚಿಮುಕಿಸಿ ನೋಡುವುದರ ಹಿಂದೆ ಭೌತಶಾಸ್ತ್ರದ ಸಿದ್ಧಾಂತ ಅಡಗಿದೆ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮತ್ತು ಅದನ್ನು ತಿಳಿದುಕೊಳ್ಳಲು ಆಸಕ್ತಿ ಮೂಡಿಸುವುದು ಪಾಲಕರ ಮತ್ತು ಶಿಕ್ಷಕರ ಹೊಣೆಗಾರಿಕೆ. ಇದರಿಂದ ತಪ್ಪಿಸಕೊಳ್ಳುವಂತೆಯೇ ಇಲ್ಲ. ವಿಜ್ಞಾನವಿಲ್ಲದೆ ಜೀವನವಿಲ್ಲ. ದೈನಂದಿನ ಜೀವನದಲ್ಲಿ ಅಡಕವಾಗಿರುವ ವಿಜ್ಞಾನದ ಸಿದ್ಧಾಂತಗಳ ಬಗ್ಗೆ ಅರಿವು ಮೂಡಿಸುವ ಜಾಲತಾಣ www.scienceofeverydaylife.com. ವಿಜ್ಞಾನದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪಾಲಕರಿಗೆ, ಎಲ್ಲ ಹಂತಗಳವರಿಗೆ, ಇಲ್ಲಿ ಸೂಕ್ತ ಮಾಹಿತಿ, ಪ್ರಾತ್ಯಕ್ಷಿಕೆ ಎಲ್ಲ ಇವೆ.

ಡೌನ್‌ಲೋಡ್


ಕನ್ನಡಕ್ಕಾಗೊಂದು ಟೂಲ್‌ಬಾರ್

ಅಂತರಜಾಲ ವೀಕ್ಷಣೆ ಮಾಡಲು ಬಳಸುವ ಬ್ರೌಸರ್ ತಂತ್ರಾಂಶಗಳಿಗೆ ಟೂಲ್‌ಬಾರ್‌ಗಳು ಹಲವು ಲಭ್ಯವಿವೆ. ಉದಾಹರಣೆಗೆ ಗೂಗಲ್ ಟೂಲ್‌ಬಾರ್ ಮತ್ತು ಬಿಂಗ್ ಟೂಲ್‌ಬಾರ್. ಇವುಗಳು ಕೆಲವು ದಿನನಿತ್ಯದ ಕೆಲಸಗಳನ್ನು ಸುಲಭ ಮಾಡಿಕೊಡುತ್ತವೆ. ಈಗ ಅದೇ ಮಾದರಿಯಲ್ಲಿ ಒಂದು ವಿನೋದ ಟೂಲ್‌ಬಾರ್ ಲಭ್ಯವಿದೆ. ಇದನ್ನು ಮಾಡಿದವರು ಕನ್ನಡಿಗರು. ಅಂದರೆ ಕನ್ನಡಿಗರು ಸಾಮಾನ್ಯವಾಗಿ ಬಳಸುವ ಜಾಲತಾಣಗಳು, ಓದುವ ಬ್ಲಾಗ್‌ಗಳು, ಕಣಜ, ಗಣಕಿಂಡಿ, ವರ್ಡ್‌ನಿಂದ ಪಿಡಿಎಫ್‌ಗೆ -ಇತ್ಯಾದಿ ಹಲವು ಜಾಲತಾಣಗಳಿಗೆ ಇದರಲ್ಲಿ ಸಂಪರ್ಕ ನೀಡಲಾಗಿದೆ. ಪ್ರತಿ ಸಲ ಈ ಜಾಲತಾಣಗಳಿಗೆ ಭೇಟಿ ನೀಡಲು ಆಯಾ ಗುಂಡಿಯನ್ನು ಒತ್ತಿದರೆ ಸಾಕು. ಇದೇನೂ ಅದ್ಭುತ ಸಂಶೋಧನೆಯಲ್ಲ. ಆದರೆ ಪ್ರತಿದಿನ ಮಾಡುವ ಕೆಲಸಗಳಿಗೆ ಒಂದು ಮಾದರಿ ಶಾರ್ಟ್‌ಕಟ್ ಇದ್ದಂತೆ. ಈ ಟೂಲ್‌ಬಾರ್ ನಿಮಗೆ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ vinoda.ourtoolbar.com.  

e - ಸುದ್ದಿ

ಕಳೆದುಹೋದ ಫೋನಿಗೇನಾಗುತ್ತದೆ?

ಈಗೀಗ ಬಹುತೇಕ ಮಂದಿ ಬಳಸುವ ಸ್ಮಾರ್ಟ್‌ಫೋನ್‌ಗಳು ಒಂದು ರೀತಿಯಲ್ಲಿ ಲ್ಯಾಪ್‌ಟಾಪ್ ಗಣಕದಂತೆಯೇ. ಅದರಲ್ಲಿ ಸೂಕ್ಷ್ಮ ಮಾಹಿತಿಗಳೆಲ್ಲ ಇರುತ್ತವೆ. ಉದಾಹರಣೆಗೆ ಅಂತರಜಾಲ ಬ್ಯಾಕಿಂಗ್‌ನ ಪಾಸ್‌ವರ್ಡ್. ಇಂತಹ ಸ್ಮಾರ್ಟ್‌ಫೋನ್ ಕಳೆದುಹೋದಾಗ? ಅದು ಸಿಕ್ಕಿದವರು ಫೋನ್ ಜೊತೆ ಏನು ಮಾಡುತ್ತಾರೆ? ಈ ಬಗ್ಗೆ ಸಿಮ್ಯಾಂಟೆಕ್ ಕಂಪೆನಿಯವರು ಒಂದು ಸಂಶೋಧನೆ ಮಾಡಿದರು. ೫೦ ಫೋನ್‌ಗಳಲ್ಲಿ ಕಾಲ್ಪನಿಕ ವ್ಯಕ್ತಿಗಳ ಮಾಹಿತಿಗಳನ್ನು ತುಂಬಿಸಿ ಉತ್ತರ ಅಮೆರಿಕದ ಬೇರೆಬೇರೆ ನಗರಗಳಲ್ಲಿ ಕಳೆದುಕೊಂಡರು. ಶೇಕಡ ೪೫ ಮಂದಿ ಫೋನಿನಲ್ಲಿದ್ದ ಮಾಹಿತಿಯನ್ನು ಓದಿದ್ದರು. ೫೭% ಮಂದಿ “saved passwords” ಎಂದು ಹೆಸರಿದ್ದ ಫೈಲನ್ನು ತೆರೆದು ನೋಡಿದ್ದರು. ಕೇವಲ ಅರ್ಧದಷ್ಟು ಮಂದಿ ಫೋನ್ ಸಿಕ್ಕವರು ಮಾತ್ರ ಫೋನಿನ ಯಜಮಾನನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದರು.

e- ಪದ

ಸೋಪ (Stop Online Piracy Act - SOPA) - ಅಂತರಜಾಲದ ಮೂಲಕ ನಡೆಯುವ ಕೃತಿಚೌರ್ಯವನ್ನು ತಡೆಯಲು ಅಮೆರಿಕ ಸರಕಾರ ಹೊಸದಾಗಿ ಮಾಡಲು ಪ್ರಯತ್ನಿಸುತ್ತಿರುವ ಕಾನೂನಿನ ಹೆಸರು. ಆದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ತಾಕತ್ತುಳ್ಳ ಮಸೂದೆ, ಆದುದರಿಂದ ಇದನ್ನು ಕಾನೂನಾಗಿ ತರಬಾರದು ಎಂದು ಹಲವು ಅಂತರಜಾಲ ಕಂಪೆನಿಗಳು ಇದರ ವಿರುದ್ಧವಾಗಿವೆ. ಅಂತರಜಾಲದ ತುಂಬೆಲ್ಲ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

e - ಸಲಹೆ

ಪವನ್ ಅವರ ಪ್ರಶ್ನೆ: ನನ್ನ ಬಳಿ ಅಂತರಜಾಲಕ್ಕೆ ಸಂಬಂಧಪಟ್ಟ ಹೊಸ ಐಡಿಯ ಇದೆ. ಇದು ಹೊಸದೇ, ಇದನ್ನು ಪೇಟೆಂಟ್ ಮಾಡಬಹುದೇ, ಅಥವಾ ಈಗಾಗಲೇ ಈ ಐಡಿಯವನ್ನು ಯಾರಾದರೂ ಪೇಟೆಂಟ್ ಮಾಡಿದ್ದಾರೋ, ಎಂದೆಲ್ಲ ತಿಳಿಯುವುದು ಹೇಗೆ? ಈ ಬಗ್ಗೆ ಯಾವುದಾದರೂ ಅಂತರಜಾಲತಾಣ ಇದೆಯೇ?
ಉ: www.uspto.gov, www.google.com/patents ಮತ್ತು www.freepatentsonline.com ಜಾಲತಾಣಗಳನ್ನು ನೋಡಿ.

ಕಂಪ್ಯೂತರ್ಲೆ

ಮನಶ್ಶಾಂತಿ ಬೇಕಿದ್ದವರು ಈ ಹೊಸ ನಮೂನೆಯ ಉಪವಾಸ ಮಾಡಿ: ಒಂದು ದಿನ ಕಂಪ್ಯೂಟರ್, ಫೋನ್,  ಟ್ವಿಟ್ಟರ್, ಫೇಸ್‌ಬುಕ್, ಟಿವಿ, ವಾಹನ -ಯಾವುದೂ ಇಲ್ಲದೆ ಬದುಕಿ.

ಸೋಮವಾರ, ಮಾರ್ಚ್ 12, 2012

ಗಣಕಿಂಡಿ - ೧೪೭ (ಮಾರ್ಚ್ ೧೨, ೨೦೧೨)

ಅಂತರಜಾಲಾಡಿ

ಅಪರಂಜಿ

ರಾಶಿ ಎಂದೇ ಖ್ಯಾತರಾಗಿದ್ದ ಶಿವರಾಂ ಅವರ ಕೊರವಂಜಿ ಕನ್ನಡದಲ್ಲಿ ಹಾಸ್ಯ ಪತ್ರಿಕೆ ಎಂಬುದನ್ನು ಹಟ್ಟುಹಾಕಿದ ಪತ್ರಿಕೆ. ನಲವತ್ತರ ದಶಕದಲ್ಲಿ ತುಂಬ ಜನಪ್ರಿಯವಾಗಿತ್ತು. ಜಗತ್ಪ್ರಸಿದ್ಧರಾದ ಆರ್. ಕೆ.ಲಕ್ಷ್ಮಣರನ್ನು ಹುಟ್ಟುಹಾಕಿದ್ದು ಕೊರವಂಜಿ. ಇನ್ನೂ ಹಲವಾರು ಹಾಸ್ಯ ಸಾಹಿತಿಗಳು ಕೊರವಂಜಿ ಮೂಲಕ ಬೆಳಕು ಕಂಡರು. ಇಪ್ಪತ್ತೈದು ವರ್ಷಗಳ ಕಾಲ ಸತತವಾಗಿ ಕನ್ನಡದ ನಗೆ ರಸಿಕರನ್ನು ರಂಜಿಸಿ ಕೊನೆಗೆ 1967ರ ಏಪ್ರಿಲ್ ಸಂಚಿಕೆಯೊಂದಿಗೆ ಕೊರವಂಜಿಯ ಪ್ರಕಟಣೆ ನಿಲ್ಲಬೇಕಾಯಿತು. ರಾ.ಶಿ.ಯವರು ಹೇಳಿದಂತೆ ಕೊರವಂಜಿ ಕಾಡಿಗೆ ಹೋದಳು. 1983ರಲ್ಲಿ ಅಪರಂಜಿ ಜೀವತಳೆಯಿತು. ಕೊರವಂಜಿ ಬಳಗ ಮತ್ತೆ ಅಪರಂಜಿ ಮೂಲಕ ಮನೆಮನೆಗಳಿಗೆ ತಲುಪಿತು. ಜೊತೆಗೆ ಹೊಸ ಬಳಗವನ್ನೂ ಹುಟ್ಟು ಹಾಕಿತು. ಇಷ್ಟೆಲ್ಲ ಇತಿಹಾಸವಿರುವ ಅಪರಂಜಿ ಈಗ ಅಂತರಜಾಲದಲ್ಲಿ ಲಭ್ಯ. ಜೊತೆಗೆ ಬೋನಸ್ ಆಗಿ ಕೊರವಂಜಿಯ ಹಳೆಯ ಸಂಚಿಕೆಗಳ ಸಿ.ಡಿ. ಕೊಂಡುಕೊಳ್ಳಲೂ ಲಭ್ಯ. ಜಾಲತಾಣದ ವಿಳಾಸ aparanjimag.in. ಅಂದಹಾಗೆ ಕನ್ನಡದ ಖ್ಯಾತ ವಿಜ್ಞಾನಸಾಹಿತಿ ನಾಗೇಶ ಹೆಗಡೆಯರು ಹಾಸ್ಯ ಕೂಡ ಬರೆಯುತ್ತಾರೆ ಗೊತ್ತಾ? ಇದೇ ಜಾಲತಾಣದಲ್ಲಿ ಅವರ ಹಾಸ್ಯ ಲೇಖನ ಓದಬಹುದು.

ಡೌನ್‌ಲೋಡ್

ಧೂಮಕೇತು ಮಾಹಿತಿ

ಅಂತರಿಕ್ಷದಲ್ಲಿ ಸಾವಿರಾರು ಧೂಮಕೇತುಗಳಿವೆ. ಹ್ಯಾಲಿ ಧೂಮಕೇತು ಜಗತ್ಪ್ರಸಿದ್ಧ. 76 ವರ್ಷಗಳಿಗೊಮ್ಮೆ ತಪ್ಪದೆ ಇದು ಭೇಟಿ ನೀಡುತ್ತದೆ. ಇದೇ ರೀತಿ ಕೆಲವು ಧೂಮಕೇತುಗಳು ತಪ್ಪದೆ ನಿಯಮಿತ ಸಮಯಾವಧಿಯಲ್ಲಿ ಭೇಟಿ ನೀಡುತ್ತವೆ. ಹೀಗೆ ಸೌರವ್ಯೂಹದಲ್ಲಿರುವ ಎಲ್ಲ ತಿಳಿದಿರುವ ಧೂಮಕೇತುಗಳ ಮಾಹಿತಿ ಭಂಡಾರ ಬೇಕೇ? ಅಂತಹ ಒಂದು ತಂತ್ರಾಂಶ ಲಭ್ಯವಿದೆ. ಇದರ ಹೆಸರು Halley. ಇದು ಬೇಕಿದ್ದಲ್ಲಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ www.ipa.nw.ru/halley/en. ಇದು ಇನ್‌ಸ್ಟಾಲ್ ಮಾಡುವಾಗ ಇನ್ನಷ್ಟು ದೊಡ್ಡ ಡಾಟಾಬೇಸ್ ಅನ್ನು ಡೌನ್‌ಲೋಡ್ ಮಾಡುತ್ತದೆ. ಆಗಾಗ್ಗೆ ಇದರ ಮಾಹಿತಿಯನ್ನು ನವೀಕರಿಸುತ್ತಿರಬಹುದು. ಈ ಮೂಲಕ ಹೊಸದಾಗಿ ಪತ್ತೆಯಾದ ಧೂಮಕೇತುಗಳ ವಿವರಗಳನ್ನೂ ತಿಳಿಯಬಹುದು. ಖಗೋಳಶಾಸ್ತ್ರದಲ್ಲಿ ಆಸಕ್ತಿಯಿರುವವರಿಗೆ ಉಪಯುಕ್ತ ತಂತ್ರಾಂಶ. 

e - ಸುದ್ದಿ

ಗುಪ್ತಪದ

ಜಾಲತಾಣ, ತಂತ್ರಾಂಶ, ಇಮೈಲ್, ಇತ್ಯದಿಗಳಿಗೆ ಗುಪ್ತಪದ (ಪಾಸ್‌ವರ್ಡ್) ಬಳಸಲೇಬೇಕಾಗಿರುವುದು ಗಣಕ ಬಳಸುವ ಎಲ್ಲರಿಗೂ ತಿಳಿದಿರುವ ವಿಷಯ. ಈ ಗುಪ್ತಪದವನ್ನು ಆರಿಸಿಕೊಳ್ಳಲು ಕೆಲವು ಸೂತ್ರಗಳನ್ನು ಪಾಲಿಸಿದರೆ ಒಳ್ಳೆಯದು. ಅದು ಯಾವುದೇ ನಿಘಂಟು ಪದವಾಗಿರಬಾರದು, ನಿಮ್ಮ ಹೆರು ಅಥವಾ ಅದರ ಹೃಸ್ವರೂಪ ಆಗಿರಬಾರದು, ಕೆಲವು ಅಂಕಿಗಳು ವಿಶೇಷ ಅಕ್ಷರಗಳೂ ಇರತಕ್ಕದ್ದು, ಇತ್ಯಾದಿ. ಹೀಗೆ ಸೂತ್ರಗಳನ್ನು ಮಾಡಿರುವುದು ನಿಮ್ಮ ಗುಪ್ತಪದ ಇತರರಿಗೆ ಸುಲಭದಲ್ಲಿ ತಿಳಿಯದಿರಲಿ ಎಂದು. ಜನರು ಯಾವ ರೀತಿಯ ಗುಪ್ತಪದ ಬಳಸುತ್ತಿದ್ದಾರೆ ಎಂಬುದಾಗಿ ಇತ್ತೀಚೆಗೆ ಒಂದು ಸಮೀಕ್ಷೆ ನಡೆಸಲಾಯಿತು. ಸಮೀಕ್ಷೆಯಿಂದ ತಿಳಿದು ಬಂದ ಅಂಶ ಆಘಾತಕಾರಿ - ಬಹುಮಂದಿ ಬಳಸುವ ಪಾಸ್‌ವರ್ಡ್ ಯಾವುದು ಗೊತ್ತೆ - ಅದು password!

e- ಪದ

ಲಾಗಿನ್ (Login) ಮತ್ತು ಪಾಸ್‌ವರ್ಡ್ (Password) : ಗಣಕವನ್ನು ಉಪಯೋಗಿಸಲು, ವಿ-ಅಂಚೆಯ ಪೆಟ್ಟಿಗೆಯನ್ನು ತೆರೆಯಲು, ಅಂತರಜಾಲ ಮೂಲಕ ವಾಣಿಜ್ಯ ವ್ಯವಹಾರ ಮಾಡಲು, ಇನ್ನೂ ಹಲವಾರು ಇಂತಹ ಸಮದರ್ಭಗಳಲ್ಲಿ ನೀವು ಬಳಸಬೇಕಾದ ಹೆಸರು ಮತ್ತು ಗುಪ್ತಪದ.

e - ಸಲಹೆ

ಲೋಹಿತ್ ಅವರ ಪ್ರಶ್ನೆ: ನನಗೆ ಎಸ್‌ಕ್ಯೂಎಲ್ ಸರ್ವರ್ ಬಗ್ಗೆ ಸಂದರ್ಶನಕ್ಕೆ ತಯಾರಾಗಬೇಕಾಗಿದೆ. ಇದಕ್ಕೆಂದೇ ವಿಶೇಷವಾಗಿ ಬರೆದ ಪುಸ್ತಕ ಯಾವುದಾದರೂ ಇದೆಯೇ?
ಉ: ಖಂಡಿತ ಇವೆ. ಒದು ಉದಾಹರಣೆ - bit.ly/yBs6Md

ಕಂಪ್ಯೂತರ್ಲೆ

ಒಂದು ಬಹುಮಹಡಿಯ ಕಟ್ಟಡದಲ್ಲಿ ಕಂಡ ಫಲಕ: “ಬೆಂಕಿ ಕಂಡಲ್ಲಿ ಮೊದಲು ಅಪಾಯದ ಜಾಗದಿಂದ ಪಾರಾಗಿ. ಅದರ ಬಗ್ಗೆ ಟ್ವೀಟ್ ಮಾಡುವುದುನ್ನು ನಂತರ ಮಾಡಬಹುದು”.

ಸೋಮವಾರ, ಮಾರ್ಚ್ 5, 2012

ಗಣಕಿಂಡಿ - ೧೪೬ (ಮಾರ್ಚ್ ೦೫, ೨೦೧೨)

ಅಂತರಜಾಲಾಡಿ

ಈಜು ಕಲಿಯಬೇಕೇ?

ಪುಸ್ತಕ ಓದಿ ಈಜು ಕಲಿಯಲು ಸಾಧ್ಯವೇ ಎಂಬ ಮಾತಿದೆ. ಅದನ್ನೇ ಮುಂದುವರಿಸಿ ಗಣಕ ನೋಡಿ ಈಜು ಕಲಿಯಲು ಸಾಧ್ಯವೇ ಎಂಬ ಗಾದೆ ಸೃಷ್ಟಿ ಮಾಡಬಹುದು. ಅದು ಹಾಗಿರಲಿ. ಈಜು ಕಲಿಯಲು ಸಹಾಯಮಾಡುವ ಜಾಲತಾಣವೂ ಇದೆ ಎಂದರೆ ನಂಬಲೇಬೇಕು. ಬೇರೆ ಬೇರೆ ಪ್ರಾಯದವರಿಗೆ ಸರಿಹೊಂದುವ ಪಾಠಗಳು ಈ ಜಾಲತಾಣದಲ್ಲಿವೆ. ಎಲ್ಲ ಪಾಠಗಳೂ ವೀಡಿಯೋ ಸಹಿತ ಇವೆ. ಅವನ್ನು ನೋಡಿ ನಿಮ್ಮ ಮಕ್ಕಳಿಗೆ ಈಜು ಕಲಿಸಬಹುದು ಎಂಬುದು ಜಾಲತಾಣ ನಿರ್ಮಾಪಕರ ಅಂಬೋಣ. ಹಾಗೆಂದು ಹೇಳಿ ಮಕ್ಕಳಿಗೆ ಮಾತ್ರ ಈಜು ಕಲಿಸಲಿಕ್ಕಾಗಿರುವ ಜಾಲತಾಣವೇ ಎಂದು ಪ್ರಶ್ನೆ ಎಸೆಯಬೇಡಿ. ಉತ್ತರವೂ ಅಲ್ಲೇ ಇದೆ. ಎಲ್ಲರೂ ಈ ಜಾಲತಾಣವನ್ನು ಬಳಸಬಹುದು ಎಂದು ಅವರು ಹೇಳಿದ್ದಾರೆ. ಅಂದ ಹಾಗೆ ಈ ಜಾಲತಾಣದ ವಿಳಾಸ www.uswim.com. ಹೌದು, ಈಜು ಕಲಿಸುವ ವೀಡಿಯೋಗಳು ಜಾಲತಾಣದಲ್ಲಿವೆ. ಆದರೆ ಈಜುಕೊಳದ ಪಕ್ಕಬಂದಾಗ ಅದು ಮರೆತು ಹೋಗಿದ್ದರೆ? ಚಿಂತೆ ಬೇಡ. ನಿಮ್ಮಲ್ಲಿ ದುಬಾರಿ ಐಫೋನ್ ಇದ್ದಲ್ಲಿ ಪಾಠಗಳನ್ನು ಐಫೋನ್‌ಗೆ ಡೌನ್‌ಲೋಡ್ ಮಾಡಿಕೊಂಡು ಕೊಳದ ಪಕ್ಕ ನೋಡಿಕೊಂಡು ಈಜು ಕಲಿಯಬಹುದು. ಐಫೋನ್ ನೀರಿನೊಳಕ್ಕೆ ಬೀಳದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಿಮ್ಮದು!

ಡೌನ್‌ಲೋಡ್

ವಿಮಾನ ಚಾಲಕರಾಗಿ

ಗಣಕಗಳಲ್ಲಿ ಆಡುವ ಆಟಗಳಲ್ಲಿ ಮೈಕ್ರೋಸಾಫ್ಟ್ ಫ್ಲೈಟ್ ಸಿಮುಲೇಟರ್ ತುಂಬ ಪ್ರಖ್ಯಾತ. ಇದು ಅನುಕರಣೆಯ ಆಟಗಳ (simulation game) ವಿಭಾಗಕ್ಕೆ ಸೇರುತ್ತದೆ. ಅಮೆರಿಕದಲ್ಲಿ ೨೦೦೧ರಲ್ಲಿ ಅವಳಿ ಕಟ್ಟಡಗಳ ಮೇಲೆ ವಿಮಾನ ಗುದ್ದಿಸಿದ ಉಗ್ರಗಾಮಿಗಳು ಈ ಅಟದ ಮೂಲಕವೇ ವಿಮಾನ ಹಾರಾಟವನ್ನು ಕಲಿತದ್ದು ಎಂಬ ಪ್ರತೀತಿ ಇದೆ. ಈ ಆಟ ಅಷ್ಟು ನೈಜವಾಗಿದೆ. ಇದು ತನಕ ಈ ಆಟ ಹಣ ಕೊಟ್ಟು ಕೊಂಡರೆ ಮಾತ್ರ ಆಡುವಂತಹದ್ದಾಗಿತ್ತು. ಈಗ ಮೈಕ್ರೋಸಾಫ್ಟ್‌ನವರು ಇದರ ಉಚಿತ ಆವೃತ್ತಿ ನೀಡಿದ್ದಾರೆ. ಇದನ್ನು microsoftflight.com ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಕೆಲವು ವಿಮಾನ ಮಾತ್ರ ಉಚಿತ ಆವೃತ್ತಿಯಲ್ಲಿವೆ. ಹೆಚ್ಚಿನ ವಿಮಾನಗಳು ಬೇಕಿದ್ದಲ್ಲಿ ಹಣ ಕೊಟ್ಟು ಕೊಂಡುಕೊಂಡು ಡೌನ್‌ಲೋಡ್ ಮಾಡಿಕೊಳ್ಳಬೇಕು.  

e - ಸುದ್ದಿ

ಪೈರೇಟ್ ಬೇ


ಒಬ್ಬರಿಗೊಬ್ಬರು ಫೈಲುಗಳನ್ನು ಹಂಚಿಕೊಳ್ಳುವ ತಂತ್ರಜ್ಞಾನ ವ್ಯಕ್ತಿಯಿಂದ-ವ್ಯಕ್ತಿಗೆ (person-to-person - P2P). ಈ ವಿಧಾನದಲ್ಲಿ ಬಳಕೆಯಾಗುವುದು ಟೊರೆಂಟ್ ಫೈಲ್‌ಗಳು. ಈ ರೀತಿ ಟೊರೆಂಟ್‌ಗಳನ್ನು ಹುಡುಕಲು ಅನುವು ಮಾಡಿಕೊಡುವ ಜಾಲತಾಣ ಪೈರೇಟ್ ಬೇ. ಇದನ್ನು ಮುಚ್ಚಿಸಿಬಿಡಬೇಕು ಎಂದು ಸಂಗೀತ ಮತ್ತು ಚಲನಚಿತ್ರ ತಯಾರಿಸುವ ಕಂಪೆನಿಗಳು ಶತಾಯಗತಾಯ ಪ್ರಯತ್ನಿಸುತ್ತಿವೆ. ಅವರು ಮೆಗಾಅಪ್‌ಲೋಡ್ ಜಾಲತಾಣವನ್ನು ಮುಚ್ಚಿಸಿ ಅದರ ನಿರ್ಮಾತೃವನ್ನು ಸೆರೆಮನೆಗೆ ದೂಡಿದ ಕಥೆ ಇದೇ ಅಂಕಣದಲ್ಲಿ ವರದಿಯಾಗಿದೆ.  ತನ್ನ ಪರಿಸ್ಥಿತಿಯೂ ಹಾಗೆಯೇ ಆಗಬಹುದು ಎಂದು ಆಲೋಚಿಸಿದ ಪೈರೇಟ್ ಬೇ ಮುಂದಾಲೋಚನೆಯಿಂದ ತಾನು ಹುಡುಕಿಕೊಡುವ ಫೈಲ್‌ಗಳ ಕೊಂಡಿ ನೀಡುವ ವಿಧಾನವನ್ನೇ ಬದಲಿಸಿದೆ. ಇನ್ನು ಅದು ನೇರವಾಗಿ ಟೊರೆಂಟ್ ಫೈಲ್‌ಗಳನ್ನು ನೀಡುವುದಿಲ್ಲ. ಬದಲಿಗೆ ಮ್ಯಾಗ್ನೆಟ್ ಲಿಂಕ್‌ಗಳನ್ನು ನೀಡುತ್ತದೆ.

e- ಪದ

ಮ್ಯಾಗ್ನೆಟ್ ಲಿಂಕ್ (magnet link) - ವ್ಯಕ್ತಿಯಿಂದ ವ್ಯಕ್ತಿಗೆ ಫೈಲ್ ಹಂಚಲು ಅನುವು ಮಾಡುವ ವಿಧಾನದಲ್ಲಿ ಬಳಕೆಯಾಗುವ ಫೈಲ್ ಇರುವ ಜಾಗದ ವಿಳಾಸವನ್ನು ತಿಳಿಸಲು ಬಳಸುವ ಒಂದು ವಿಧಾನ. ಈ ವಿಧಾನದಲ್ಲಿ ಫೈಲಿನ ವಿಳಾಸದ ಬದಲಿಗೆ ಫೈಲಿನಲ್ಲಿರುವ ಮಾಹಿತಿಯ ಮೂಲಕ ಫೈಲನ್ನು ವಿವರಿಸಲಾಗುತ್ತದೆ. ಟೊರೆಂಟ್‌ನ ಹೊಸ ಅವತಾರ ಎನ್ನಬಹುದು.

e - ಸಲಹೆ

ಮಡಿಕೇರಿಯ ರವೀಂದ್ರರ ಪ್ರಶ್ನೆ: ಕನ್ನಡದಲ್ಲಿ (ಕಗಪ ಕೀಲಿಮಣೆ ವಿನ್ಯಾಸ) ವೇಗವಾಗಿ ಬೆರಳಚ್ಚು ಮಾಡುವುದನ್ನು ಕಲಿಯಲು ಯಾವುದಾದರೂ ತಂತ್ರಾಂಶ ಇದೆಯೇ? ತಿಳಿಸಿ. ಇಂಗ್ಲಿಷಿನಲ್ಲಿ ಇಂತಹ ತಂತ್ರಾಂಶಗಳು ಬಹಳ ಇವೆ. ಕನ್ನಡದಲ್ಲಿ ಇಂತಹ ತಂತ್ರಾಂಶಗಳ ಕೊರತೆ ಇದೆ. (ಗಣಕ ಪರಿಷತ್ ನವರು ಕೀಲಿಮಣೆ ಭೋಧಕ ಎಂಬ ತಂತ್ರಾಂಶ ತಯಾರಿಸಿದ್ದಾರೆ. ಆದರೆ ಇದು ಮಕ್ಕಳಿಗಷ್ಟೇ ಉಪಯುಕ್ತವಾಗುವಂತಹುದು)  ಇಂತಹ ತಂತ್ರಾಂಶ ಅಭಿವೃದ್ಧಿ ಪಡಿಸಿದಲ್ಲಿ ಗಣಕಯಂತ್ರದಲ್ಲಿ  ಹೊಸದಾಗಿ ಬೆರಳಚ್ಚು ಕಲಿಯುವವರಿಗೆ ಅನುಕೂಲವಾಗುತ್ತದೆ. ಆಸಕ್ತ ತಂತ್ರಜ್ಞರು ಇತ್ತ ಗಮನ ಹರಿಸಬಹುದಾಗಿದೆ.
ಉ: ಅಂತಹ ತಂತ್ರಾಂಶ ನನಗೆ ತಿಳಿದಂತೆ ಇಲ್ಲ. ಹೌದು. ತಂತ್ರಾಂಶ ತಯಾರಕರು ಹಾಗೂ ಆಸಕ್ತರು ಈ ಕಡೆ ಗಮನ ಹರಿಸಬೇಕು.

ಕಂಪ್ಯೂತರ್ಲೆ

ಇನ್ನೊಂದು ಗಣಕ (ತ)ಗಾದೆ:

ಸೂರ್ಯ ಲಾಗ್‌ಔಟ್ ಆದನೆಂದು ಚಿಂತಿಸುತ್ತ ಕುಳಿತರೆ ಲಾಗ್‌ಇನ್ ಆದ ಚಂದಿರನ ಸೌಂದರ್ಯವನ್ನು ಆನಂದಿಸುವುದನ್ನು ಕಳಕೊಳ್ಳುತ್ತೀರಿ

ಸೋಮವಾರ, ಫೆಬ್ರವರಿ 27, 2012

ಗಣಕಿಂಡಿ - ೧೪೫ (ಫೆಬ್ರವರಿ ೨೭, ೨೦೧೨)

ಅಂತರಜಾಲಾಡಿ

ಗುಂಪುನಿಧಿ ಜಾಲತಾಣ

ನಿಮ್ಮಲ್ಲಿ ಒಂದು ಅದ್ಭುತ ಯೋಜನೆ ಇದೆ. ಅದನ್ನು ಪರಿಪೂರ್ಣಗೊಳಿಸಿದರೆ ಹಲವರಿಗೆ ತುಂಬ ಉಪಯೋಗವಾಗುವುದು. ಅದು ಸಮಾಜೋದ್ಧಾರದ ಯೋಜನೆ ಇರಬಹುದು, ಸರಳವಾದ ಆದರೆ ತುಂಬ ಉಪಯುಕ್ತವಾದ ತಂತ್ರಾಂಶ ಅಥವಾ ಜಾಲತಾಣ ತಯಾರಿ ಇರಬಹುದು, ಯಾವುದೋ ತಂತ್ರಜ್ಞಾನಾಧಾರಿತ ಯಂತ್ರ ತಯಾರಿ ಇರಬಹುದು, ಅಥವಾ ಜೀವಶಾಸ್ತ್ರ, ತಳಿತಂತ್ರಜ್ಞಾನ ಇರಬಹುದು -ಹೀಗೆ ಏನೂ ಬೇಕಾದರೂ ಆಗಿರಬಹುದು. ಆದರೆ ನಿಮ್ಮಲ್ಲಿ ಅದನ್ನು ಕಾರ್ಯಗತಗೊಳಿಸಲು ಬೇಕಾದ ಬಂಡವಾಳ ಇಲ್ಲ. ಈ ಸಮಸ್ಯೆಗೆ ಒಂದು ಸರಳ ಪರಿಹಾರವೆಂದರೆ ಜನರಿಂದಲೇ ಗುಂಪುನಿಧಿ ಸಂಗ್ರಹ ಮಾಡುವುದು. ಹೀಗೆ ಮಾಡಲು ನೀವು ಒಂದು ಜಾಲತಾಣ ನಿರ್ಮಿಸಿ ಜನರನ್ನು ಕೇಳಿಕೊಳ್ಳಬಹುದು. ಆದರೆ ನಿಮ್ಮಲ್ಲಿ ಯೋಜನೆ ಇದೆ, ಅದು ಯಾವುದೋ ಒಂದು ಜಾಲತಾಣದಲ್ಲಿದೆ ಎಂದು ಜನರಿಗೆ ತಿಳಿಯುವುದು ಹೇಗೆ? ಈ ಸಮಸ್ಯೆಗೆ ಪರಿಹಾರ ರೂಪವಾಗಿ ಕೆಲವು ಗುಂಪುನಿಧಿಸಂಗ್ರಹದ ಜಾಲತಾಣಗಳಿವೆ. ಅಂತಹ ಒಂದು ಜಾಲತಾಣ www.rockethub.com

ಡೌನ್‌ಲೋಡ್

3-D ಗ್ರಾಫಿಕ್ಸ್

ಗಣಕದಲ್ಲಿ ಮೂರು ಆಯಾಮದ ಪ್ರತಿಕೃತಿ ತಯಾರಿಸುವುದು ಒಂದು ಪೂರ್ಣಪ್ರಮಾಣದ ಉದ್ಯೋಗವೇ ಆಗಿದೆ. ಹಲವು ಚಲನಚಿತ್ರಗಳೂ ಗ್ರಾಫಿಕ್ಸ್ ಬಳಸಿಯೇ ಇರುತ್ತವೆ. ಜ್ಯುರಾಸಿಕ್ ಪಾರ್ಕ್ ಯಾರಿಗೆ ಗೊತ್ತಿಲ್ಲ? ಅದರಲ್ಲಿ ಬರುವ ಡೈನೋಸಾರಸ್ ಗಣಕ ಬಳಸಿ ಗ್ರಾಫಿಕ್ಸ್ ಮೂಲಕ ತಯಾರಾಗಿರುವುದು. ಇಂತಹ ಮಾದರಿಗಳನ್ನು ತಯಾರಿಸಬೇಕಾದರೆ ದುಬಾರಿ ಗಣಕ ಮತ್ತು ಜೊತೆಗೆ ದುಬಾರಿ ತಂತ್ರಾಂಶ ಬೇಕು. ಮೂರು ಆಯಾಮದ ಗ್ರಾಫಿಕ್ಸ್ ತಯಾರಿಸಲು ಅನುವು ಮಾಡಿಕೊಡುವ ಒಂದು ಉಚಿತ ಹಾಗೂ ಮುಕ್ತ ತಂತ್ರಾಂಶ  Art of Illusion. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.artofillusion.org.

e - ಸುದ್ದಿ

ಕಳ್ಳರನ್ನು ಓಡಿಸಲು ಟ್ವಿಟ್ಟರ್ ಸಹಾಯ

ಇಜಿಪ್ಟ್ ಮತ್ತು ಇನ್ನೂ ಕೆಲವು ದೇಶಗಳಲ್ಲಿ ಆಡಳಿತ ನಡೆಸುತ್ತಿದ್ದ ನಿರಂಕುಶ ಪ್ರಭುತ್ವವನ್ನು ಹೊಡೆದೋಡಿಸಲು ಚಳವಳಿಗೆ ಜನರನ್ನು ಸೇರಿಸಲು ಟ್ವಿಟ್ಟರ್ ಬಳಕೆಯಾದ ಕಥೆ ಇದೇ ಅಂಕಣದಲ್ಲಿ ವರದಿಯಾಗಿತ್ತು. ಈಗ ಸ್ವಲ್ಪ ಬೇರೆ ರೀತಿಯ ಕಥೆ. ಕೀನ್ಯ ದೇಶದ ಒಂದು ನಗರಾಧಿಪತಿಗೆ ನಡುರಾತ್ರಿ ಒಂದು ಫೋನ್ ಕರೆ ಬರುತ್ತದೆ - “ನಮ್ಮ ಪಕ್ಕದ ಮನೆಗೆ ಕಳ್ಳರು ನುಗ್ಗುತ್ತಿದ್ದಾರೆ, ಸಹಾಯ ಮಾಡಿ” ಎಂದು. ಅವರು ಕೂಡಲೆ ಟ್ವಿಟ್ಟರ್‌ನಲ್ಲಿ ಸಂದೇಶ ದಾಖಲಿಸಿ ಆ ಸ್ಥಳದ ಸುತ್ತಮುತ್ತ ಇರುವವರನ್ನು ಸಹಾಯ ಮಾಡಲು ಕೋರಿಕೊಳ್ಳುತ್ತಾರೆ. ಅವರನ್ನು ಟ್ವಿಟ್ಟರಿನಲ್ಲಿ ಹಿಂಬಾಲಿಸುತ್ತಿದ್ದ ಹಲವು ಮಂದಿ ಕೂಡಲೆ ಆ ಮನೆಯ ಮುಂದೆ ಜಮಾಯಿಸಿ ಕಳ್ಳರನ್ನು ಹೊಡೆದೋಡಿಸುತ್ತಾರೆ.

e- ಪದ

ಗುಂಪುನಿಧಿ (crowdfunding) - ಹಲವಾರು ಮಂದಿ ಸೇರಿ ಸಹಯೋಗಿ ವಿಧಾನದಿಂದ ಯಾವುದಾದರೊಂದು ಯೋಜನೆಗೆ ಧನಸಹಾಯ ಒದಗಿಸುವುದು. ಸಾಮಾನ್ಯವಾಗಿ ಇದನ್ನು ಅಂತರಜಾಲದ ಮೂಲಕ ಮಾಡಲಾಗುತ್ತದೆ. ಈಗೀಗ ಇಂತಹ ಕೆಲಸಗಳಿಗೆಂದೇ ಜಾಲತಾಣಗಳು ಹುಟ್ಟಿಕೊಂಡಿವೆ.

e - ಸಲಹೆ

ಹುಬ್ಬಳ್ಳಿಯ ಗೋವರ್ಧನರ ಪ್ರಶ್ನೆ: ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಬಗ್ಗೆ ಕನ್ನಡದಲ್ಲಿ ತಿಳಿದುಕೊಳ್ಳಲು ಯಾವ ವೆಬ್ ಸೈಟ್ನಲ್ಲಿ ಸಿಗುತ್ತದೆ?

ಉ: ನನಗೆ ತಿಳಿದಂತೆ ಅಂತಹ ಯಾವ ಜಾಲತಾಣವೂ ಇಲ್ಲ. ಓದುಗರಲ್ಲಿ ಯಾರಿಗಾದರೂ ತಿಳಿದಿದ್ದರೆ ತಿಳಿಸಬೇಕಾಗಿ ವಿನಂತಿ. ಕೆಲವು ವಿಜ್ಞಾನ ಬ್ಲಾಗುಗಳಿವೆ. ಆದರೆ ಅವು ನಿಮಗೆ ಬೇಕಾದಂತಹವಲ್ಲ. ಕರ್ನಾಟಕ ಸರಕಾರದ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯವರು ಈ ಕಡೆ ಸ್ವಲ್ಪ ಗಮನ ನೀಡಬೇಕು.

ಕಂಪ್ಯೂತರ್ಲೆ

ಕೋಲ್ಯ ಮೈಕ್ರೋಸಾಫ್ಟ್ ಕಂಪೆನಿಗೆ ಫೋನ್ ಮಾಡಿ ಕೇಳಿದ “ವಿಂಡೋಸ್ ೩೨ ಬಿಟ್‌ಗಿಂತ ವಿಂಡೋಸ್ ೬೪ ಬಿಟ್ ಒಳ್ಳೆಯದು ಎಂದು ಯಾರೋ ಹೇಳಿದರು. ಆದರೆ ನನ್ನಲ್ಲಿ ವಿಂಡೋಸ್ ೩೨ ಬಿಟ್ ಡಿವಿಡಿ ಇದೆ. ನಾನು ಅದನ್ನು ಎರಡು ಸಲ ಇನ್‌ಸ್ಟಾಲ್ ಮಾಡಿದರೆ ಅದು ವಿಂಡೋಸ್ ೬೪ ಬಿಟ್ ಆಗುತ್ತದೆಯೇ?”


ಮಂಗಳವಾರ, ಫೆಬ್ರವರಿ 21, 2012

ಗಣಕಿಂಡಿ - ೧೪೪ (ಫೆಬ್ರವರಿ ೨೦, ೨೦೧೨)

ಅಂತರಜಾಲಾಡಿ

ಸ್ವತಂತ್ರ ಉದ್ಯೋಗಿಯಾಗಿ

ನಿಮಗೆ ಒಂದು ಸಣ್ಣ ಕೆಲಸ ಮಾಡಿಸಬೇಕಾಗಿದೆ. ಉದಾಹರಣೆಗೆ ನಿಮ್ಮ ಸಣ್ಣ ಕಂಪೆನಿಯ ಬಗ್ಗೆ ಒಂದು ಚಿಕ್ಕ ಜಾಲತಾಣ ಅಥವಾ ಪ್ರಸೆಂಟೇಶನ್. ಇದಕ್ಕಾಗಿ ದೊಡ್ಡ ಕಂಪೆನಿಯನ್ನು ಹಿಡಿದರೆ ಅವರು ಹೇಳುವಷ್ಟು ಹಣ ಕೊಡಲು ನಿಮ್ಮಿಂದ ಅಸಾಧ್ಯ. ಆಗ ನೀವು ಇಂತಹ ಕೆಲಸಗಳನ್ನು ಮಾಡುವ ಸ್ವತಂತ್ರ ಉದ್ಯೋಗಿಯನ್ನು (freelancer) ಹುಡುಕುತ್ತೀರಿ. ಅದೇ ರೀತಿ ನೀವೇ ಒಬ್ಬ ಸ್ವತಂತ್ರ ಉದ್ಯೋಗಿಯಾಗಿ ಕೆಲಸ ಹುಡುಕುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಈ ಎರಡು ರೀತಿಯವರನ್ನು ಒಂದುಗೂಡಿಸುವ ಹಲವಾರು ಜಾಲತಾಣಗಳಿವೆ. ಅಂತಹ ಒಂದುಜಾಲತಾಣ www.freelancer.in. ಲಭ್ಯವಿರುವ ಕೆಲಸಗಳನ್ನು ಹಲವು ವಿಧಗಳಲ್ಲಿ ಪಟ್ಟಿ ಮಾಡಲಾಗಿದೆ. ಕೆಲಸ ಬೇಕಿದ್ದವರು ಇವುಗಳಲ್ಲಿ ತಮ್ಮ ಪರಿಣತಿಗೆ ಸರಿಹೊಂದುವುದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಹರಾಜಿನಲ್ಲಿ ಭಾಗವಹಿಸಬೇಕು.

ಡೌನ್‌ಲೋಡ್

ವಸಾಹುತುಶಾಹಿಗಳಿಗೆ

ಕಾಲೊನಿ ನಿರ್ಮಾಣ ಒಂದು ರೀತಿಯ ಆಟ. ಗಣಕಗಳಲ್ಲಿ ಹಾಗೂ ಅಂತರಜಾಲದಲ್ಲಿ ಇಂತಹ ಆಟಗಳು ಹಲವಾರಿವೆ. ತುಂಬ ಜನಪ್ರಿಯವೂ ಆಗಿವೆ. ಈ ಆಟಗಳು ತುಂಬ ದುಬಾರಿ. ಹಾಗಿದ್ದೂ ಉಚಿತ ಆಟಗಳೂ ಇವೆ. ಅವು ವಾಣಿಜ್ಯಕ ಆಟಗಳಷ್ಟು ಉತ್ತಮ ಇಲ್ಲದಿರಬಹುದು. ಆದರೆ ಅದೇ ಮಾದರಿಯ ಅನುಭವ ನೀಡಬಲ್ಲವು. ಕಾಲೊನಿ ನಿರ್ಮಾಣದ ಅಂತಹ ಒಂದು ಉಚಿತ ಆಟ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.freecol.org. ೧೯೪೨ನೆಯ ಇಸವಿಯಲ್ಲಿ ಪ್ರಾರಂಭವಾಗುವ ಆಟದ ಉದ್ದೇಶ ಅಮೆರಿಕದಲ್ಲಿ ವಸಾಹುತುಗಳ ನಿರ್ಮಾಣ. ಇಂಗ್ಲೆಂಡ್, ಫ್ರಾನ್ಸ್, ನೆದರ್ಲ್ಯಾಂಡ್ ಮತ್ತು ಸ್ಪೈನ್ ದೇಶಗಳು ಅಮೆರಿಕದಲ್ಲಿ ವಸಾಹುತು ನಿರ್ಮಾಣ ಮಾಡಿದ ಕಥೆಯನ್ನು ಆಧರಿಸಿ ಈ ಆಟವನ್ನು ತಯಾರಿಸಲಾಗಿದೆ. ಈ ಆಟ ಆಡಲು ನಿಮ್ಮ ಗಣಕದಲ್ಲಿ ಜಾವಾ ಇರತಕ್ಕದ್ದು. ಅದನ್ನು java.com/en/download ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

e - ಸುದ್ದಿ

ಗೂಗ್ಲ್ ಗೋಪ್ಯತೆ ಬದಲಾವಣೆ

ಗೂಗ್ಲ್ ಬಳಸುವವರಿಗೆ ಅದರ ಹಲವು ಸೇವೆಗಳೂ ಪರಿಚಿತ. ಅವುಗಳಲ್ಲಿ ಪ್ರಮುಖವಾದವು ಜಿಮೈಲ್ (ಇಮೈಲ್), ಪಿಕಾಸಾ, ಯುಟ್ಯೂಬ್, ಗೂಗ್ಲ್+, ಇತ್ಯಾದಿ. ಪ್ರತಿ ಸೇವೆಗೂ ತನ್ನದೇ ಆದ ಗೋಪ್ಯತೆ ನಿಯಮಗಳಿದ್ದವು. ಈಗ ಗೂಗ್ಲ್ ಹೊಸ ನಿಯಮ ಪ್ರಕಾರ ಎಲ್ಲ ಸೇವೆಗಳಿಗೂ ಒಂದೇ ವ್ಯಕ್ತಿತ್ವ ಮತ್ತು ನಿಯಮ ಜಾರಿ ಆಗುತ್ತದೆ. ಅಂದರೆ ನಿಮಗೆ ಯುಟ್ಯೂಬ್‌ನಲ್ಲಿ ಒಂದು ಅವತಾರ, ಗೂಗ್ಲ್+ ನಲ್ಲಿ ಇನ್ನೊಂದು, ಪಿಕಾಸಾದಲ್ಲಿ ಮಗದೊಂದು ಅವತಾರ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಈ ಹೊಸ ನಿಯಮದಿಂದಾಗಿ ಗೂಗ್ಲ್‌ಗೆ ನಿಮ್ಮ ಬಗ್ಗೆ ನಿಮ್ಮ ಹೆಂಡತಿಗಿಂತಲೂ ಹೆಚ್ಚು ತಿಳಿದಿರುತ್ತದೆ ಎಂದು ತಂತ್ರಜ್ಞಾನದ ಬಗ್ಗೆ ವಿಮರ್ಶೆ ಬರೆಯುವ ಜಾಲತಾಣಗಳು ಟೀಕಿಸಿವೆ.

e- ಪದ

ನೋಮೋಫೋಬಿಯ (Nomophobia) - ಮೊಬೈಲ್ ಫೋನ್ ಇಲ್ಲದಾಗುವ ಭಯ. ಇದು ಇಂಗ್ಲಿಶಿನಲ್ಲಿ no-mobile-phone phobia ಎಂಬುದರ ಹೃಸ್ವ ರೂಪ. ಫೋಬಿಯ ಎಂದರೆ ಭಯ. ಹೈಡ್ರೋಫೋಬಿಯ ಎಂದರೆ ನೀರಿನ ಭಯ. ಅದೇ ರೀತಿ ಇದು ಒಂದು ಹೊಸ ನಮೂನೆಯ ಭಯ.

e - ಸಲಹೆ

ಬಿ. ಎಸ್. ಪಾಟೀಲರ ಪ್ರಶ್ನೆ: ನಾನೊಬ್ಬ ಸಂಶೋಧಕ. ಸಂಶೋಧನೆಗೆ ಸಹಾಯ ಮಾಡುವ ಮುಖ್ಯವಾಗಿ ಸಂಶೋಧನಾ ನಿಯತಕಾಲಿಕೆಗಳಲ್ಲಿ ಬಂದ ವಿಷಯಗಳನ್ನು ಹುಡುಕುವ ಸೌಲಭ್ಯವೇನಾದರೂ ಇದೆಯೇ?
ಉ: ಗೂಗ್ಲ್‌ನವರ scholar.google.com ಬಳಸಬಹುದು. worldwidescience.org ಕೂಡ ಬಳಸಬಹುದು. ಇವೆರಡು ಉಚಿತ. ವಾಣಿಜ್ಯಕ ಸೌಲಭ್ಯಗಳು ಹಲವಾರಿವೆ.

ಕಂಪ್ಯೂತರ್ಲೆ

ಎರಡನೆಯ ತರಗತಿಯ ಗಣಿತ ಪ್ರಶ್ನೆ: ಗಂಡ ಹೆಂಡತಿ ಮಗ ಮಗಳು ಇರುವ ಮನೆಯಲ್ಲಿ ಎರಡು ಲ್ಯಾಂಡ್‌ಲೈನ್ ಫೋನ್, ಐದು ಪೊಬೈಲ್ ಫೋನ್‌ಗಳಿವೆ. ಅವುಗಳಲ್ಲಿ ಎರಡು ಮೊಬೈಲ್ ಫೋನ್‌ಗಳಿಗೆ ಡ್ಯುವಲ್ ಸಿಮ್ ಸೌಲಭ್ಯ ಇದೆ. ಹಾಗಿದ್ದರೆ ಆ ಮನೆಯಲ್ಲಿರುವ ಒಟ್ಟು ಫೋನ್ ಸಂಪರ್ಕಗಳೆಷ್ಟು?

ಸೋಮವಾರ, ಫೆಬ್ರವರಿ 13, 2012

ಗಣಕಿಂಡಿ - ೧೪೩ (ಫೆಬ್ರವರಿ ೧೩, ೨೦೧೨)

ಅಂತರಜಾಲಾಡಿ

ಸಾಮುದಾಯಿಕ ರೇಡಿಯೋ


ಭಾರತ ಸರಕಾರವು ಸಾಮುದಾಯಿಕ ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಲು ಅನುಮತಿ ನೀಡುತ್ತಿದೆ. ಇದು ೨೦೦೨ನೆಯ ಇಸವಿಯಿಂದ ಆಚರಣೆಯಲ್ಲಿದೆ. ಆದರೆ ಇದರ ಬಗ್ಗೆ ಹೆಚ್ಚಿನ ಜನರಿಗೆ ಪೂರ್ತಿ ಮಾಹಿತಿ ಇಲ್ಲ. ೩ ವರ್ಷಗಳಿಂದ ಸಮಾಜ ಸೇವೆಯಲ್ಲಿರುವ ಯಾವುದೇ ಸರಕಾರೇತರ ಸಂಸ್ಥೆ ಈ ಸಾಮುದಾಯಿಕ ರೇಡಿಯೋ ಕೇಂದ್ರ ಸ್ಥಾಪಿಸಲು ಪರವಾನಗಿಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿರುವ ಜಾಲತಾಣ ccfcindia.net. ಈ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು, ಪ್ರಶ್ನೋತ್ತರಗಳು, ಅರ್ಜಿ, ಸಲ್ಲಿಸಿದ ಅರ್ಜಿಯ ಸ್ಥಿತಿ, ಎಲ್ಲ ಮಾಹಿತಿಗಳು ಲಭ್ಯವಿವೆ.

ಡೌನ್‌ಲೋಡ್

ಸಂಗೀತ ಡೌನ್‌ಲೋಡ್ ಮಾಡಿ

ವಿಶ್ವವ್ಯಾಪಿಜಾಲದಲ್ಲಿರುವ ಕೋಟ್ಯನುಕೋಟಿ ಜಾಲತಾಣಗಳಲ್ಲಿ ಹಲವು ಜಾಲತಾಣಗಳಲ್ಲಿ ಹಲವು ಮಂದಿ ಉಚಿತವಾಗಿ ಸಂಗೀತವನ್ನು ಹಂಚುತ್ತಿರುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಎಂಪಿ೩ ವಿಧಾನದಲ್ಲಿ ಸಂಗೀತದ ಫೈಲುಗಳನ್ನು ಡೌನ್‌ಲೋಡ್ ಮಾಡಲು ನೀಡುತ್ತಾರೆ. ಈ ರೀತಿ ಎಲ್ಲೆಲ್ಲ ಸಂಗೀತ ಉಚಿತವಾಗಿ ಲಭ್ಯವಿದೆ ಎಂದು ತಿಳಿಯುವುದು ಹೇಗೆ? ನಂತರ ಅದನ್ನು ಒಂದೊಂದಾಗಿ ಡೌನ್‌ಲೋಡ್ ಮಾಡಬೇಕಲ್ಲ? ಈ ಎಲ್ಲ ಕೆಲಸಗಳನ್ನು ಒಂದೆ ಕಡೆ ಒಟ್ಟಿಗೆ ಮಾಡಲು ಅನುವು ಮಾಡಿಕೊಡುವ ಉಚಿತ ತಂತ್ರಾಂಶ music2pc. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.music2pc.com.  

e - ಸುದ್ದಿ


ತನ್ನನ್ನು ತಾನೆ ಬೆಂಬತ್ತಿದ ಭೂಪ

ಒಂದು ತಣ್ಣಗಿನ ಕತ್ತಲಿನ ರಾತ್ರಿಯಲ್ಲಿ ಇಂಗ್ಲೆಂಡಿನ ರಸ್ತೆಯೊಂದರಲ್ಲಿ ಗುಪ್ತವಾಗಿ ಮಫ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಪೋಲಿಸನೊಬ್ಬನಿಗೆ ಪೋಲೀಸ್ ಕೇಂದ್ರದಿಂದ ವಯರ್‌ಲೆಸ್ ಮೂಲಕ ಸಂದೇಶ ಬಂದಿತು. ಅದರ ಪ್ರಕಾರ ಅವನಿರುವ ಜಾಗದ ಸನಿಹದಲ್ಲೇ ಒಬ್ಬ ಸಂಶಯಾಸ್ಪದ ವ್ಯಕ್ತಿ ತಿರುಗಾಡುತ್ತಿದ್ದಾನೆ. ಹಾಗೆಂದು ಅವರು ಕ್ಲೋಸ್ಡ್ ಸರ್ಕ್ಯುಟ್ ಟಿವಿಯಲ್ಲಿ ನೋಡಿ ವರದಿ ಮಾಡುತ್ತಿದ್ದರು. ಸರಿ. ಆತನನ್ನು ಹಿಡಿದೇ ಬಿಡೋಣ ಎಂದುಕೊಂಡ ಪೋಲೀಸ್ ಆತನ ಹುಡುಕಾಟದಲ್ಲಿ ತೊಡಗುತ್ತಾನೆ. ಆತ ಹೋದಂತೆಲ್ಲ ಕೇಂದ್ರ ಕಚೇರಿಯಿಂದ ಟಿವಿ ನೋಡಿ ಸಂಶಯಾಸ್ಪದ ವ್ಯಕ್ತಿ ಇರುವ ಜಾಗದ ಮಾಹಿತಿ ಬರುತ್ತಲೇ ಇರುತ್ತದೆ. ಈತ ಹುಡುಕುತ್ತಲೇ ಇರುತ್ತಾನೆ. ೨೦ ನಿಮಿಷಗಳ ಸಾಹಸದ ನಂತರ ಆತನಿಗೆ ಅರಿವಾದುದೇನೆಂದರೆ ಕೇಂದ್ರದಿಂದ ಸಂಶಯಾಸ್ಪದ ವ್ಯಕ್ತಿ ಎಂದು ವರದಿ ಮಾಡಿದ್ದು ತನ್ನನ್ನೇ ಟಿವಿಯಲ್ಲಿ ನೋಡಿ ಎಂದು!

e- ಪದ

ಫ್ರೀಮಿಯಂ (Freemium) - ತಂತ್ರಾಂಶವನ್ನು ಕೆಲವು ಮಿತಿಗಳೊಡನೆ ಉಚಿತವಾಗಿ  ಹಂಚುವುದು. ತಂತ್ರಾಂಶದ ಎಲ್ಲ ಸವಲತ್ತುಗಳನ್ನು ಬಳಸಬೇಕಾದರೆ ಹಣ ನೀಡಬೇಕಾಗುತ್ತದೆ.

e - ಸಲಹೆ


ಕಿರಣ್ ಹೆಬ್ಬಾರ್ ಅವರ ಪ್ರಶ್ನೆ: ನಾನು uk truck simulator ಎಂಬ ಆಟವನ್ನು ಡೌನ್‌ಲೋಡ್ ಮಾಡಿದ್ದೇನೆ. ಇದಕ್ಕೆ ಸೀರಿಯಲ್ ನಂಬರ್ ಅಥವಾ ಕೀ ಎಲ್ಲಿಸಿಗುತ್ತದೆ?
ಉ: ನೀವು ಆಟದ ಪ್ರಾಯೋಗಿಕ ಆವೃತ್ತಿಯನ್ನು ಡೌನ್‌ಲೋಡ್ ಮಾಡಿದ್ದೀರಿ. ಪೂರ್ತಿ ಆವೃತ್ತಿ ಬೇಕಿದ್ದರೆ ಹಣ ನೀಡಿ ಕೊಂಡುಕೊಳ್ಳಬೇಕು.

ಕಂಪ್ಯೂತರ್ಲೆ

ಕೋಲ್ಯನ ಮಗ ಯಾವಾಗಲೂ ಗಣಕದಲ್ಲಿ ಆಟ ಆಡುತ್ತಿದ್ದ. ಕೋಲ್ಯ ಮಗನಿಗೆ ದಬಾಯಿಸಿದ “ಕಂಪ್ಯೂಟರ್‌ನಲ್ಲಿ ಗೇಮ್ ಆಡಿದ್ದು ಸಾಕು. ಸ್ವಲ್ಪ ಹೊರಗೆ ಹೋಗಿ ಆಡು”. ಕೋಲ್ಯನ ಮಗ ಹೊರಗೆ ಹೋದ. ಹೋಗುವಾಗ ಗಣಕಕ್ಕೆ ರಿಮೋಟ್ (ದೂರನಿಯಂತ್ರಕ) ತೆಗೆದುಕೊಂಡು ಹೋದ. ಮನೆಹೊರಗಿನಿಂದ ರಿಮೋಟ್ ಮೂಲಕ ಆಟ ಆಡಿದ.

ಸೋಮವಾರ, ಫೆಬ್ರವರಿ 6, 2012

ಗಣಕಿಂಡಿ - ೧೪೨ (ಫೆಬ್ರವರಿ ೦೬, ೨೦೧೨)

ಅಂತರಜಾಲಾಡಿ

ಸಂಗೀತ ಹಂಚಿ

ಸಂಗೀತಗಾರರಿಗೆ ತಾವು ತಯಾರಿಸಿದ ಸಂಗೀತವನ್ನು ಇತರೆ ಸಂಗೀತಗಾರರಿಗೆ ಹಾಗೂ ಜಗತ್ತಿಗೆಲ್ಲ ಹಂಚಲು ಅನುವು ಮಾಡಿಕೊಡುವ ಜಾಲತಾಣ ಸೌಂಡ್‌ಕ್ಲೌಡ್. ಸಂಗೀತ ತಯಾರಿಕೆಯ ಹಂತದಲ್ಲಿರುವಾಗ ಇತರೆ ಸಂಗೀತಗಾರರಿಗೆ ಹಾಗೂ ಸ್ನೇಹಿತರಿಗೆ ಅದನ್ನು ಕೇಳಿಸಿ ಅವರಿಂದ ಹಿಂಮಾಹಿತಿ ಪಡೆದು ತಮ್ಮ ಸಂಗೀತ ಸಂಯೋಜನೆಯನ್ನು ಸುಧಾರಿಸಲು ಈ ಜಾಲತಾಣ ಅನುವು ಮಾಡಿಕೊಡುತ್ತದೆ. ಸಂಗಿತವನ್ನು ತಮ್ಮ ಬ್ಲಾಗ್ ಅಥವಾ ಜಾಲತಾಣದಲ್ಲಿ ಅಡಕಗೊಳಿಸಲು ಇದು ಸಹಾಯ ಮಾಡುತ್ತದೆ. ಸಂಗೀತದ ಬೇರೆ ಬೇರೆ ಭಾಗಗಳಿಗೆ ಸೂಕ್ತ ಶೀರ್ಷಿಕೆ ನೀಡಬಹುದು - “ಈ ಭಾಗದಲ್ಲಿ  ಕೊಳಲು ಅದ್ಭುತವಾಗಿದೆ, ಈ ಭಾಗದಲ್ಲಿ ಆಲಾಪನೆ ಚೆನ್ನಾಗಿದೆ” - ಇತ್ಯಾದಿ ಟಪ್ಪಣಿ ಸೇರಿಸಬಹುದು. ಈ ಜಾಲತಾಣದ ವಿಳಾಸ - soundcloud.com

ಡೌನ್‌ಲೋಡ್

ಪ್ರೌನ್

ಓಟದ ಆಟಗಳು ಸಾವಿರಾರಿವೆ. ಹೆಚ್ಚಿನ ಓಟದ ಆಟಗಳಲ್ಲಿ ಯಾವುದಾದರು ವಾಹನವನ್ನು ರಸ್ತೆಯಲ್ಲಿ ಇಲ್ಲವೇ ಕಾಡಿನಲ್ಲಿ ಓಡಿಸಬೇಕು. ಇಲ್ಲೊಂದು ಬೇರೆಯೇ ಬಗೆಯ ಓಟದ ಆಟವಿದೆ. ಇದರಲ್ಲಿ ಯಾವುದೇ ವಾಹನವಿಲ್ಲ. ರಸ್ತೆಯೂ ಇಲ್ಲ. ಬದಲಿಗೆ ಒಂದು ಕೊನೆಯೇ ಇಲ್ಲದ ದಪ್ಪ ಹಗ್ಗಕ್ಕೆ ಅಂಟಿಕೊಂಡ ಒಂದು ಗೋಲವನ್ನು ಓಡಿಸಬೇಕು. ದಾರಿಯಲ್ಲಿ ಎದುರಾಗುವ ಅಡ್ಡಿಗಳನ್ನು ತಪ್ಪಿಸಲು ಗೋಲವನ್ನು ಹಗ್ಗದ ಇನ್ನೊಂದು ಬದಿಗೆ ತಿರುಗಿಸಬೇಕು. ಬೇರೆ ಯಾವ ರೀತಿಯ ಹೊಡೆದಾಟಗಳಿಲ್ಲ. ಇದರಲ್ಲಿ ಹಲವು ಹಂತಗಳಿವೆ. ಹಾಗೆಯೇ ೪ ಜನರು ಬೇಕಿದ್ದರೂ ಒಟ್ಟಿಗೆ ಆಡಬಹುದು. ನಿಮ್ಮದೇ ಹಳೆಯ ಓಟದ ವಿರುದ್ಧ ನೀವೇ ಮತ್ತೊಮ್ಮೆ ಓಡಿಸಬಹುದು. ಈ ಆಟದ ಹೆಸರು ಪ್ರೌನ್. ಇದು ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ www.proun-game.com

e - ಸುದ್ದಿ

ಟ್ವೀಟ್ ಮಾಡು ಜೈಲಿಗೆ ಹೋಗು

ಟ್ವೀಟ್ ಮಾಡಿ ಜೈಲಿಗೆ ಹೋದ ಇನ್ನೊಂದು ಹೊಸ ಪ್ರಕರಣ. ಇದು ದಕ್ಷಿಣ ಕೊರಿಯಾದಿಂದ ವರದಿಯಾಗಿದೆ. ದಕ್ಷಿಣ ಕೊರಿಯಾದ ಒಬ್ಬಾತ ಉತ್ತರ ಕೊರಿಯ ಸರಕಾರದ ಟ್ವಿಟ್ಟರ್ ಖಾತೆಯಲ್ಲಿ ಬಂದುದನ್ನು ಮರುಟ್ವೀಟ್ ಮಾಡಿದ್ದ. ಅದರಲ್ಲಿ ಉತ್ತರ ಕೊರಿಯಾದ ಹೊಗಳಿಕೆ ಇತ್ತು. ಈತ ಅದನ್ನು ಗೇಲಿ ಮಾಡಲೆಂದು ತನ್ನ ಹೆಸರು ಮತ್ತು ಫೋಟೋ ಸೇರಿಸಿದ್ದ. ಆದರೆ ದಕ್ಷಿಣ ಕೊರಿಯ ಸರಕಾರದ ಪ್ರಕಾರ ಆತ ರಾಷ್ಟ್ರೀಯ ಸುರಕ್ಷತೆಯ ಕಾನೂನನ್ನು ಉಲ್ಲಂಘಿಸಿದ್ದಾನೆ. ಅದಕ್ಕಾಗಿ ಆತನನ್ನು ಸೆರೆಮನೆಗೆ ದೂಡಲಾಗಿದೆ. ತಾನು ಉತ್ತರ ಕೊರಿಯಾವನ್ನು ಹಾಸ್ಯ ಮಾಡಿದ್ದು ಎಂದು ಆತ ವಿವರಿಸಿದರೂ ಅಧಿಕಾರಿಗಳು ಅದನ್ನು ಒಪ್ಪಲಿಲ್ಲ.

e- ಪದ

ಟ್ಯಾಬ್ಲೆಟ್ ಗಣಕ (tablet PC)  - ಇವುಗಳ ಗಾತ್ರ ಸುಮಾರು ೮ ಇಂಚಿನಿಂದ ೧೦ ಇಂಚು ಉದ್ದ, ೫ ರಿಂದ ೮ ಇಂಚು ಅಗಲ, ಸುಮಾರು ಅರ್ಧ ಇಂಚು ದಪ್ಪ ಇರುತ್ತವೆ. ಇವುಗಳಿಗೆ ಭೌತಿಕ ಕೀಲಿಮಣೆ ಇರುವುದಿಲ್ಲ. ಬದಲಿಗೆ ಸ್ಪರ್ಶಸಂವೇದಿ (touchsensitive screen) ಪರದೆ ಇರುತ್ತದೆ. ಅದರಲ್ಲಿ ಕೀಲಿಮಣೆ ಮೂಡಿಬರುತ್ತದೆ. ಜನಸಾಮಾನ್ಯರಿಗೆ ಬಹುಮಟ್ಟಿಗೆ ಅಗತ್ಯವಿರುವ ಕೆಲಸಗಳನ್ನೆಲ್ಲ ಇದು ಮಾಡಬಲ್ಲುದು. ಉದಾಹರಣೆಗೆ ಇಮೈಲ್, ಅಂತರಜಾಲ ವೀಕ್ಷಣೆ, ಕಡತ ತಯಾರಿ, ವಿ-ಪುಸ್ತಕ ಓದುವುದು -ಇತ್ಯಾದಿ.

e - ಸಲಹೆ


ಹುಬ್ಬಳ್ಳಿಯ ಪ್ರಶಾಂತ್ ಅವರ ಪ್ರಶ್ನೆ: ಹೊಸ ಫೋಲ್ಡರ್ ಮಾಡಿ  "con" ಅಂತ ಹೆಸೆರು ನೀಡುವಾಗ ಯಾಕೆ ತೆಗೆದುಕೊಳ್ಳುವುದಿಲ್ಲ ಮತ್ತು ಇಂತಹದೆ ಯಾವ ಯಾವ ಹೆಸರುಗಳು ತೆಗೆದುಕೊಳ್ಳುವುದಿಲ್ಲ?

ಉ: ಇದಕ್ಕೆ ಉತ್ತರ ಮೈಕ್ರೋಸಾಫ್ಟ್ ಕಾರ್ಯಚರಣೆಯ ವ್ಯವಸ್ಥೆಗಳ ಇತಿಹಾಸದಲ್ಲಿದೆ. ವಿಂಡೋಸ್ ಬರುವುದಕ್ಕೆ ಮೊದಲು ಡಾಸ್ (DOS) ಇತ್ತು. ಅದರಲ್ಲಿ CON ಅಂದರೆ Console ಅಂದರೆ ಪರದೆ ಎಂದು ಅರ್ಥ. ಇದು ಡಾಸ್‌ನಲ್ಲಿ ಕಾದಿರಿಸಿದ ಪದ (reserved word). ಆದುದರಿಂದ ಇದನ್ನು ಯಾವುದೇ ಫೋಲ್ಡರ್ ಅಥವಾ ಫೈಲುಗಳಿಗೆ ಹೆಸರಾಗಿ ಬಳಸುವಂತಿಲ್ಲ. ಇದೇ ಮಾತು LPT, PRN, ಇತ್ಯಾದಿಗಳಿಗೆ ಅನ್ವಯಿಸುತ್ತದೆ.

ಕಂಪ್ಯೂತರ್ಲೆ

ಕಥೆ ಹೇಳು ಎಂದು ಹಠಮಾಡುತ್ತಿರುವ ಕಂದನಿಗೆ ಅಪ್ಪ ಹೇಳಿದ್ದು - “ನೀನು ಹೋಗಿ ಮಲಗಿಕೊ. ಕಥೆಯನ್ನು ಎಸ್‌ಎಂಎಸ್ ಮಾಡುತ್ತೇನೆ”.

ಸೋಮವಾರ, ಜನವರಿ 30, 2012

ಗಣಕಿಂಡಿ - ೧೪೧ (ಜನವರಿ ೩೦, ೨೦೧೨)

ಅಂತರಜಾಲಾಡಿ

ಬಹುಭಾಷೆಯಲ್ಲಿ ವಿಡಿಯೋ ಹಂಚಿ

ನಿಮ್ಮಲ್ಲಿ ಒಂದು ಅದ್ಭುತವಾದ ವೀಡಿಯೋ ಇದೆ. ಅದನ್ನು ನೀವೇ ತಯಾರಿಸಿದ್ದು. ಅದು ಯಾವುದಾದರೂ ವಿಷಯ, ಸ್ಥಳದ ಬಗ್ಗೆ ಇರಬಹುದು ಅಥವಾ ಯಾವುದಾದರೂ ವೈಜ್ಞಾನಿಕ ವಿಷಯವನ್ನು ವಿವರಿಸುವ ವೀಡಿಯೋ ಇರಬಹುದು. ಅದನ್ನು ಜಗತ್ತಿಗೆಲ್ಲ ಹಂಚಲು ಯುಟ್ಯೂಬ್ ಇದೆ. ಆದರೆ ಅದನ್ನು ಹಲವು ಭಾಷೆಗಳಲ್ಲಿ ಹಂಚಬೇಕಾದರೆ? ಅದಕ್ಕಾಗಿಯೇ ಒಂದು ಜಾಲತಾಣವಿದೆ. ಅದರ ವಿಳಾಸ dotsub.com. ಈ ಜಾಲತಾಣದಲ್ಲಿ ನಿಮ್ಮ ವೀಡಿಯೋ ಸೇರಿಸಿ. ಅಲ್ಲೇ ನೀಡಿರುವ ಸವಲತ್ತನ್ನು ಬಳಸಿ ಅದನ್ನು ಪಠ್ಯವಾಗಿ ಟೈಪಿಸಿ. ಹಾಗೆಯೇ ವೀಡಿಯೋಕ್ಕೆ ಸಬ್‌ಟೈಟಲ್‌ಗಳನ್ನೂ ಸೇರಿಸಿ. ಅವು ಇಂಗ್ಲಿಶ್ ಭಾಷೆಯಲ್ಲಿದ್ದರೆ ಚೆನ್ನು. ಅದನ್ನು ನೋಡಿದ ಯಾವನೋ ಒಬ್ಬ ಪುಣ್ಯಾತ್ಮ ತನಗೆ ಪ್ರಾವೀಣ್ಯವಿರುವ ಇನ್ನೊಂದು ಭಾಷೆಗೆ ಅನುವಾದಿಸಬಹುದು. ಅಂತೆಯೇ ನೀವು ಕೂಡ ಅಲ್ಲಿ ನೀಡಿರುವ ಸಹಸ್ರಾರು ಉಪಯುಕ್ತ ವೀಡಿಯೋಗಳನ್ನು ಕನ್ನಡಕ್ಕೆ ಭಾಷಾಂತರಿಸಬಹುದು. 

ಡೌನ್‌ಲೋಡ್


ಪರದೆ ಬಿಂಬ

ಕೆಲವೊಮ್ಮ ಗಣಕದ ಪರದೆಯ (ಮೋನಿಟರ್ ಅಥವಾ ಸ್ಕ್ರೀನ್) ಮೇಲೆ ಮೂಡಿಬಂದುದನ್ನು ಚಿತ್ರ ರೂಪದಲ್ಲಿ ಸೆರೆಹಿಡಿಯಬೇಕಾಗುತ್ತದೆ. ಅದು ಇಡಿಯ ಪರದೆ ಇರಬಹುದು ಅಥವಾ ಅದರ ಒಂದು ಭಾಗ ಇರಬಹುದು. ಹಾಗೆ ಮಾಡಲು ಅನುವು ಮಾಡಿಕೊಡುವ ಸರಳ ಸವಲತ್ತು ವಿಂಡೋಸ್‌ನಲ್ಲೇ ಇದೆ ಅದುವೇ PrtSc ಕೀಲಿ. ಆದರೆ ಅದನ್ನು ಒತ್ತಿದರೆ ಇಡಿಯ ಸ್ಕ್ರೀನ್ ಅನ್ನು ಸೆರೆಹಿಡಿಯಬಹುದು. Alt ಮತ್ತು PrtSc ಕೀಲಿಗಳನ್ನು ಒಟ್ಟಿಗೆ ಒತ್ತಿದರೆ ಸದ್ಯ ಪ್ರಾಮುಖ್ಯದಲ್ಲಿರುವ ಕಿಟಿಕಿಯನ್ನು ಸೆರೆಹಿಡಿಯಬಹುದು. ಆದರೆ ಯಾವುದೋ ಒಂದು ಭಾಗವನ್ನು ಸೆರೆಹಿಡಿಯಬೇಕಾದರೆ? ಅದಕ್ಕೆ ಅನುವು ಮಾಡಿಕೊಡುವ ತಂತ್ರಾಂಶಗಳು ಹಲವಾರಿವೆ. ಅಂತಹ ಒಂದು ತಂತ್ರಾಂಶ  Gadwin PrintScreen. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.gadwin.com/printscreen/.

e - ಸುದ್ದಿ

ಮೆಗಾಅಪ್‌ಲೋಡ್ ಕಾನೂನಿನ ತೆಕ್ಕೆಗೆ

ಒಬ್ಬರಿಗೊಬ್ಬರು ಫೈಲುಗಳನ್ನು ಹಂಚಲು ಅನುವು ಮಾಡಿಕೊಡುವ ಒಂದು ಬೃಹತ್ ಜಾಲತಾಣ ಮೆಗಾಅಪ್‌ಲೋಡ್ ಆಗಿತ್ತು. ಅದರಲ್ಲಿ ಯಾರು ಏನು ಬೇಕಾದರೂ ಸೇರಿಸಬಹುದಿತ್ತು ಹಾಗೆ ಮಾಡಿ ಅದರ ಕೊಂಡಿಯನ್ನು ಸ್ನೇಹಿತರಿಗೆ ನೀಡಿದರೆ ಆಯಿತು. ಅವರು ಅಲ್ಲಿಂದ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಿತ್ತು. ಹೀಗೆ ಮಾಡುವುರಿಂದ ಕೃತಿಸ್ವಾಮ್ಯದ ಫೈಲುಗಳನ್ನು ಚೌರ್ಯ ಮಾಡಿದಂತಾಗುತ್ತದೆ ಎಂದು ಆ ಜಾಲತಾಣ ಮತ್ತು ಅದರ ನಿರ್ಮಾತೃ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಿ ಅದನ್ನು ಕಾನೂನು ಬಾಹಿರ ಎಂದು ಘೋಷಿಸಲಾಯಿತು. ನಂತರ ಅದರ ನಿರ್ಮಾತೃವನ್ನು ನ್ಯೂಝೀಲ್ಯಾಂಡ್‌ನಲ್ಲಿ ಅಮೆರಿಕ ದೇಶದ ಕೋರಿಕೆಯ ಮೇರೆಗೆ ಸೆರೆಹಿಡಿಯಲಾಯಿತು. ಈಗ ಮೆಗಾಅಪ್‌ಲೋಡ್ ಜಾಲತಾಣದಲ್ಲಿ ಎಫ್‌ಬಿಐಯವರ ನೋಟೀಸು ಮಾತ್ರ ಇದೆ. ಮೆಗಾಅಪ್‌ಲೋಡ್ ಮಾದರಿಯ ಜಾಲತಾಣಗಳು ಹಲವಾರಿವೆ. ಅವರ ಗತಿ ಏನು ನೋಡಬೇಕಾಗಿದೆ.

e- ಪದ

ಸೂಪರ್‌ಕಂಪ್ಯೂಟರ್ (supercomputer) -ಅತ್ಯಂತ ವೇಗವಾಗಿ ಕೆಲಸ ಮಾಡುವ ಗಣಕ. ಇದು ಎಷ್ಟು ವೇಗವಾಗಿ ಕೆಲಸ ಮಾಡಬಲ್ಲುದೆಂದರೆ ಇದಕ್ಕೆ ಅತಿ ವೇಗವಾಗಿ ಕೆಲಸ ನೀಡಬೇಕು. ಹಾಗೆ ಮಾಡಲು ಹಲವಾರು ಸಾಮಾನ್ಯ ಗಣಕಗಳ ಬಳಕೆ ಮಾಡಲಾಗುತ್ತದೆ. ಕ್ಷಿಪಣಿಗಳ ನಿಯಂತ್ರಣದಲ್ಲಿ, ಹವಾಮಾನ ಮುನ್ಸೂಚನೆಯ ಲೆಕ್ಕ ಹಾಕಲು, ಹಲವು ಅತಿ ಕ್ಲಿಷ್ಟ ವೈಜ್ಞಾನಿಕ ಸಮೀಕರಣಗಳನ್ನು ಪರಿಹರಿಸಲು -ಇತ್ಯಾದಿ ಕೆಲಸಗಳಲ್ಲಿ ಇವುಗಳ ಬಳಕೆ ಆಗುತ್ತದೆ.

e - ಸಲಹೆ

ಪೂಜಾಶ್ರೀ ಅವರ ಪ್ರಶ್ನೆ: ಒಂದು ಚಿತ್ರದಿಂದ ಕೆಲವು ವ್ಯಕ್ತಿಗಳನ್ನು ತೆಗೆದು ಹಾಕಬೇಕಾಗಿದೆ. ಹೇಗೆ ಮಾಡಲಿ?
ಉ: ಫೋಟೋಶಾಪ್ ಬಳಸಿ. ಅದರಲ್ಲಿ select ಎಂಬ ಸವಲತ್ತಿದೆ. ಅದನ್ನು ಬಳಸಿ ಬೇಡವಾದ ವ್ಯಕ್ತಿಯನ್ನು ಆಯ್ಕೆ ಮಾಡಿ. ನಂತರ delete ಕೀಲಿಯನ್ನು ಒತ್ತಿ.

ಕಂಪ್ಯೂತರ್ಲೆ

ರಾಹುಲ್ ಗಾಂಧಿಯವರ ಸಾಧನೆಗಳು ಏನೇನು ಎಂದು ತಿಳಿಯುವ ಕುತೂಹಲವೇ? ಅದಕ್ಕೆಂದೇ ಒಂದು ಜಾಲತಾಣವಿದೆ. ಅದರ ವಿಳಾಸ - rahulgandhiachievements.com. ಅಲ್ಲಿಗೆ ಭೇಟಿ ನೀಡಿದರೆ ಅವರ ಸಾಧನೆಗಳೇನೇನು ಎಂದು ಮನವರಿಕೆಯಾಗುತ್ತದೆ :-)

ಮಂಗಳವಾರ, ಜನವರಿ 24, 2012

ಗಣಕಿಂಡಿ - ೧೪೦ (ಜನವರಿ ೨೩, ೨೦೧೨)

ಅಂತರಜಾಲಾಡಿ

ಯೇಲ್ ವಿವಿ ಪಾಠಗಳು

ಅಮೆರಿಕದ ಯೇಲ್ ವಿಶ್ವವಿದ್ಯಾಲಯದ ಕೆಲವು ಪಾಠಗಳನ್ನು ಅವರು ಅಂತರಜಾಲದಲ್ಲಿ ಎಲ್ಲರಿಗೂ ದೊರೆಯುವಂತೆ ಉಚಿತವಾಗಿ ನೀಡಿದ್ದಾರೆ. ಇದರಲ್ಲಿ ಪಾಠಗಳ ವಿಡಿಯೋಗಳು, ಪಠ್ಯ, ಪರಿಯೋಜನೆ, ಪರೀಕ್ಷೆ ಪತ್ರಿಕೆಗಳು ಎಲ್ಲ ಇವೆ. ಇವೆಲ್ಲ ಎಲ್ಲರಿಗೂ ಉಚಿತವಾಗಿ ಲಭ್ಯ. ಆದರೆ ಇವುಗಳನ್ನು ಓದಿದೊಡನೆ ನಿಮಗೆ ಯೇಲ್ ವಿಶ್ವವಿದ್ಯಾಲಯದ ಡಿಗ್ರಿ ದೊರೆಯುವುದಿಲ್ಲ. ಅದಕ್ಕೆ ಅಲ್ಲಿಗೇ ಹೋಗಿ ನೋಂದಾಯಿಸಿಕೊಳ್ಳಬೇಕು. ಆದರೆ ಜ್ಞಾನ ಮಾತ್ರ ಸಾಕು, ಡಿಗ್ರಿ ಬೇಕಾಗಿಲ್ಲ ಎಂಬವರಿಗೆ ಇದು ಉತ್ತಮ ಆಕರ. ಇಲ್ಲಿಯೇ ಕಾಲೇಜು ಕಲಿಯುವವರಿಗೂ ಪೂರಕ ಸಾಮಗ್ರಿಯಾಗಿ ಬಳಸಬಹುದು. ಜಾಲತಾಣದ ವಿಳಾಸ - oyc.yale.edu

ಡೌನ್‌ಲೋಡ್

ಗಣಕ ಸುಸ್ಥಿತಿಗೆ

TweakNow PowerPack ತಂತ್ರಾಂಶವು ಗಣಕವನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಗಣಕವನ್ನು ತಿಂಗಳುಗಟ್ಟಲೆ ಬಳಸುತ್ತಿದ್ದಂತೆ ಅದು ಹಲವು ಅನವಶ್ಯಕ ಕಚಡಗಳನ್ನು ತುಂಬಿಕೊಳ್ಳುತ್ತದೆ. ಇವುಗಳನ್ನೆಲ್ಲ ಆಗಾಗ ಗುಡಿಸಿ ಗಣಕವನ್ನು ಸ್ವಚ್ಛ ಮಾಡುತ್ತಿರಬೇಕಾಗುತ್ತದೆ. ಹಾಗೆ ಮಾಡುವುದರಿಂದ ಗಣಕ ವೇಗವಾಗಿ ಕೆಲಸ ಮಾಡುತ್ತದೆ. ಈ ರೀತಿ ಮಾಡಲು ಅನುವು ಮಾಡಿಕೊಡುವ ಹಲವು ತಂತ್ರಾಂಶಗಳಿವೆ. ಅಂತಹ ಒಂದು ಉಚಿತ ತಂತ್ರಾಂಶ TweakNow PowerPack. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ - www.tweaknow.com

e - ಸುದ್ದಿ

ಕೆಲಸದ ನಂತರ ಇಮೈಲ್ ಮಾಡಿದರೆ...

ಈಗೀಗಂತೂ ಎಲ್ಲರ ಕೈಯಲ್ಲಿ ಸ್ಮಾರ್ಟ್‌ಫೋನ್‌ಗಳಿವೆ. ಅದರಿಂದಾಗಿ ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಕೆಲಸ ಮಾಡುವ ಮಂದಿ ಕಚೇರಿ ಬಿಟ್ಟು ಮನೆಗೆ ಹೋದ ಮೇಲೂ, ಹೋಗುತ್ತಿರುವಾಗಲೂ, ಇಮೈಲ್‌ಗಳಿಗೆ ಉತ್ತರಿಸುತ್ತಿರುತ್ತಾರೆ. ಈ ಜಾಡ್ಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಉದ್ಯೋಗಿಗಳಿಗೆ ಮಾತ್ರವಲ್ಲ, ಇತರೆ ಕಂಪೆನಿಗಳ ಅಧಿಕಾರಿಗಳಿಗೂ ಅಂಟಿಕೊಂಡಿದೆ. ಇದರಿಂದಾಗಿ ಕೆಲಸಗಳು ವೇಗವಾಗಿ ನಡೆಯುತ್ತವೆ ಎಂಬುದೇನೋ ನಿಜ. ಆದರೆ ಇತ್ತೀಚೆಗೆ ಬ್ರೆಝಿಲ್ ಸರಕಾರ ಒಂದು ಫರ್ಮಾನ್ ಹೊರಡಿಸಿದೆ. ಕೆಲಸದ ಅವಧಿಯ ನಂತರ ಕಂಪೆನಿಯ ಕೆಲಸಕ್ಕೆ ಸಂಬಂಧಿಸಿದ ಇಮೈಲ್‌ಗಳಿಗೆ ಉತ್ತರಿಸಿದರೆ ಆ ಸಮಯವನ್ನು ಓವರ್‌ಟೈಂ ಎಂದು ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದು ಎಂದು ಈ ಆಜ್ಞೆ ತಿಳಿಸುತ್ತದೆ. ಈಗ ಎಲ್ಲ ಅಧಿಕಾರಿಗಳಿಗೆ ಚಿಂತೆಹಚ್ಚಿಕೊಂಡಿದೆ.

e- ಪದ


ಸರ್ವರ್ (server) - ಗಣಕಜಾಲದ ಕೇಂದ್ರದಲ್ಲಿದ್ದುಕೊಂಡು ಜಾಲವನ್ನು ನಿಯಂತ್ರಿಸುತ್ತಿರುವ ಮುಖ್ಯ ಗಣಕ. ಈ ಸರ್ವರ್‌ಗಳಲ್ಲಿಯೂ ಹಲವು ನಮೂನೆಗಳಿವೆ. ಉದಾಹರಣೆಗೆ ಫೈಲ್ ಸರ್ವರ್, ಡಾಟಾಬೇಸ್ ಸರ್ವರ್, ಪ್ರಿಂಟ್ ಸರ್ವರ್. ಅವುಗಳ ಕಾರ್ಯವನ್ನು ಅವುಗಳ ಹೆಸರೇ ಸೂಚಿಸುತ್ತದೆ. ಕಂಪೆನಿಗಳಲ್ಲಿ ಉದ್ಯೋಗಿಗಳ ವೈಯಕ್ತಿಕ ವಿವರಗಳು, ಲಾಗಿನ್ ಮಾಹಿತಿ ಎಲ್ಲ ಈ ಸರ್ವರ್‌ಗಳಲ್ಲಿರುತ್ತವೆ. ಬೆಳಿಗ್ಗೆ ಕೆಲಸಕ್ಕೆ ಬಂದೊಡನೆ ಮೊತ್ತಮೊದಲು ಈ ಸರ್ವರ್‌ಗೆ ಲಾಗಿನ್ ಆಗಿ ಕಂಪೆನಿಯ ಜಾಲಕ್ಕೆ ಸೇರಿಕೊಂಡು ಕೆಲಸ ಮಾಡುತ್ತಾರೆ.

e - ಸಲಹೆ

ಪ್ರಶಾಂತ್ ಅವರ ಪ್ರಶ್ನೆ: ವಿಂಡೋಸ್‌ನಲ್ಲಿರುವ ಟೆಂಪ್ ಫೋಲ್ಡರ್‌ನಲ್ಲಿ  ಫೈಲುಗಳು ಡಿಲೀಟ್ ಆಗುತ್ತಿಲ್ಲ. ಅವುಗಳನ್ನು ಡಿಲೀಟ್ ಮಾಡಲು ಹೋದರೆ  ಟ್ರೈ ಅಗೈನ್ ಎಂದು ತೋರಿಸುತ್ತದೆ. ಅವುಗಳನ್ನು ಹೇಗೆ ಡಿಲೀಟ್ ಮಾಡಹುದು?
ಉ: ಈ ಅಂಕಣದಲ್ಲಿ ಸೂಚಿಸಿರುವ TweakNow PowerPack ಬಳಸಿ.

ಕಂಪ್ಯೂತರ್ಲೆ

ಅಧ್ಯಾಪಕ: ಯಾಕೆ ಹೋಂವರ್ಕ್ ಮಾಡಿಕೊಂಡು ಬಂದಿಲ್ಲ?
ವಿದ್ಯಾರ್ಥಿ: ಸಾರ್, ನಾನು ಅದನ್ನು ಈಗಾಗಲೆ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿ ನಿಮ್ಮನ್ನು ಟ್ಯಾಗ್ ಮಾಡಿದ್ದೇನೆ. ನೋಡಿಲ್ವಾ?

ಸೋಮವಾರ, ಜನವರಿ 16, 2012

ಗಣಕಿಂಡಿ - ೧೩೯ (ಜನವರಿ ೧೬, ೨೦೧೨)

ಅಂತರಜಾಲಾಡಿ

ವಿಜ್ಞಾನ ಲೇಖನ ಹುಡುಕಿ

ಪ್ರಯೋಗಶಾಲೆಯಲ್ಲಿ ಮಾಡಿದ ಸಂಶೋಧನೆಯ ವಿವರಗಳನ್ನು ಇತರೆ ವಿಜ್ಞಾನಿಗಳೊಡನೆ ಹಂಚಿಕೊಳ್ಳುವುದಕ್ಕೆ ಮತ್ತು ಜಗತ್ತಿಗೆಲ್ಲ ತಿಳಿಯಪಡಿಸುವುದಕ್ಕೆ ಸಾಮಾನ್ಯವಾಗಿ ವಿಜ್ಞಾನಿಗಳು ಸಂಶೋಧನಾ ನಿಯತಕಾಲಿಕೆಗಳ ಮೊರೆಹೋಗುತ್ತಾರೆ. ವಿಜ್ಞಾನಕ್ಷೇತ್ರದಲ್ಲಿ ಇದು ಸಹಜ. ಇಂತಹ ಸಂಶೋಧನಾ ಪತ್ರಿಕೆಗಳು, ಜಾಲತಾಣಗಳು, ದತ್ತಸಂಗ್ರಹಗಳು ಹಲವಾರಿವೆ. ಯಾವುದೇ ಹೊಸ ಸಂಶೋಧನೆ ಪ್ರಾರಂಭಿಸುವ ಮುನ್ನ ಇದುತನಕ ಆ ಕ್ಷೇತ್ರದಲ್ಲಿ ಆಗಿರುವ ಕೆಲಸಗಳ ಬಗ್ಗೆ ಮಾಹಿತಿ ಕಲೆಹಾಕುವುದು ಅತೀ ಅಗತ್ಯ. ಸಾಮಾನ್ಯವಾಗಿ ಪಿಎಚ್‌ಡಿ ಮಾಡಲು ಹೊರಡುವವರು ಈ ಕೆಲಸಕ್ಕಾಗಿ ಕೆಲವೊಮ್ಮೆ ಮೂರರಿಂದ ಆರು ತಿಂಗಳು ಸಮಯ ಉಪಯೋಗಿಸುತ್ತಾರೆ. ಈ ಸಂಶೋಧನಾ ಮಾಹಿತಿಗಳು ಹಲವು ನಿಯತಕಾಲಿಕೆಗಳಲ್ಲಿ, ಜಾಲತಾಣಗಳಲ್ಲಿ, ಪಿಎಚ್‌ಡಿ ಪ್ರಬಂಧಗಳಲ್ಲಿ ಎಲ್ಲ ಹಂಚಿಹೋಗಿರುತ್ತದೆ. ಇಂತಹ ಮಾಹಿತಿಗಳನ್ನು ಎಲ್ಲ ಕಡೆಗಳಿಂದ ಸಂಯುಕ್ತಗೊಳಿಸಿ ಹುಡುಕಿಕೊಡುವ ಜಾಲತಾಣ worldwidescience.org.  

ಡೌನ್‌ಲೋಡ್

ವೀಡಿಯೋಕೋಡರ್

ಡಿವಿಡಿ ಅಥವಾ ಬ್ಲೂರೇ ಡಿಸ್ಕ್‌ಗಳಲ್ಲಿ ಸಿನಿಮಾಗಳನ್ನು ಅಳವಡಿಸಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಯಾವುದಾದರೊಂದು ಕಾರಣಕ್ಕೆ ಈ ಡಿಸ್ಕಿನಿಂದ ಸಿನಿಮಾ ಅಥವಾ ವೀಡಿಯೋವನ್ನು ಡಿಜಿಟೈಸ್ ಮಾಡಿ ಗಣಕಕ್ಕೆ ಸೇರಿಸಬೇಕಾಗಿರುತ್ತದೆ. ಈ ರೀತಿ ಪರಿವರ್ತಿಸುವುದಕ್ಕೆ ಟ್ರಾನ್ಸ್‌ಕೋಡಿಂಗ್ ಎನ್ನುತ್ತಾರೆ. ಹೀಗೆ ಮಾಡುವುದರಿಂದ .mkv ಅಥವಾ .mp4 ವಿಧಾನದ ಫೈಲ್ ತಯಾರಾಗಿ ಸಿಗುತ್ತದೆ.  ಅದನ್ನು ಅಂತರಜಾಲಕ್ಕೆ ಸೇರಿಸಲೂ ಬಹದು. ಹೀಗೆ ಟ್ರಾನ್ಸ್‌ಕೋಡ್ ಮಾಡಲು ಅನುವು ಮಾಡಿಕೊಡುವ ತಂತ್ರಾಂಶ VidCoder. ಇದು ಮುಕ್ತ ತಂತ್ರಾಂಶ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ vidcoder.codeplex.com.  

e - ಸುದ್ದಿ

ವಯಸ್ಕರಿಗೆ ಮಾತ್ರ

ಇದು ಈ ಲೇಖನಕ್ಕೆ ಅನ್ವಯಿಸುವುದಿಲ್ಲ. ಅಮೆರಿಕದಲ್ಲಿ ಕೆಲವು ನಮೂನೆಯ ತಿಂಡಿ, ಚಾಕೊಲೇಟ್‌ಗಳನ್ನು ವಯಸ್ಕರಿಗೆ ಮಾತ್ರ ಮಾರಬೇಕೆಂಬ ನಿಯಮವಿದೆ. ಅಲ್ಲಿಯ ಕೆಲವು ತಿಂಡಿಗಳಲ್ಲಿ ಅದರಲ್ಲು ಮುಖ್ಯವಾಗಿ ಚಾಕೊಲೇಟ್‌ಗಳಲ್ಲಿ ಮದ್ಯ (ರಮ್) ಅಡಕವಾಗಿರುತ್ತದೆ. ಆದುದರಿಂದ ಇತಹ ನಿಯಮ. ಇಂತಹ ತಿಂಡಿಗಳನ್ನು ಕಿಯೋಸ್ಕ್ ಮೂಲಕ ಮಾರಬೇಕಾದರೆ? ಆಗ ಅದನ್ನು ಮಕ್ಕಳು ಕೊಳ್ಳದಂತೆ ನೋಡಿಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭಕ್ಕೆಂದೆ ವಿಶೇಷವಾದ ತಂತ್ರಾಂಶ ಈಗ ಸಿದ್ಧವಾಗಿದೆ. ಕಿಯೋಸ್ಕ್ ಮುಂದೆ ನಿಂತಿರುವುದು ಚಿಕ್ಕ ಮಕ್ಕಳಾಗಿದ್ದಲ್ಲಿ ಅದು ತಿಂಡಿ ನೀಡುವುದಿಲ್ಲ.           

e- ಪದ


ಸಂಯುಕ್ತಗೊಳಿಸಿದ ಹುಡುಕುವಿಕೆ (Federated search) - ಒಮ್ಮೆಗೆ ಹಲವು ಮಾಹಿತಿಯ ಆಕರಗಳಿಂದ ಮಾಹಿತಿಯನ್ನು ಹುಡುಕಿ ತೆಗೆಯುವುದು. ಉದಾಹರಣೆಗೆ ಹಲವು ನಿಯತಕಾಲಿಕಗಳು, ಗೂಗಲ್, ದತ್ತಸಂಗ್ರಹಗಳು, ಜಾಲತಾಣಗಳು -ಇವುಗಳನ್ನೆಲ್ಲ ಜಾಲಾಡಿ ಬೇಕಾದ ಮಾಹಿತಿಯನ್ನು ಹುಡುಕಿ ತೆಗೆಯುವುದು. ವಿಂಡೋಸ್ 7ರಲ್ಲಿ ಈ ಸೌಲಭ್ಯವಿದೆ. ಅದು ಹುಡುಕುವ ಮಾಹಿತಿಯು ಗಣಕದ ಪೈಲುಗಳಲ್ಲಿ, ಇಮೈಲ್‌ಗಳಲ್ಲಿ ಅಥವಾ ಅಂತರಜಾಲದಲ್ಲಿ -ಈ ಎಲ್ಲ ಜಾಗಗಳಲ್ಲಿ ಎಲ್ಲಿದ್ದರೂ ಹುಡುಕಿ ಕೊಡುತ್ತದೆ.

e - ಸಲಹೆ

ಹುಬ್ಬಳ್ಳಿಯ ಪ್ರಶಾಂತರ ಪ್ರಶ್ನೆ: ನನ್ನಲ್ಲಿ ಕೆಲವು .png ಫೈಲುಗಳಿವೆ. ಅವುಗಳನ್ನು ಹೇಗೆ ತೆರೆಯುವುದು?
ಉ: ಅವನ್ನು Paint.NET ತಂತ್ರಾಂಶದ ಮೂಲಕ ತೆರೆಯಬಹುದು. ಅದು www.getpaint.net ಜಾಲತಾಣದಲ್ಲಿ ದೊರೆಯುತ್ತದೆ.

ಕಂಪ್ಯೂತರ್ಲೆ

ಮರ್ಫಿಯ ನಿಯಮಗಳು ಜಗತ್ಪ್ರಸಿದ್ಧ. ಗಣಕ ಹಾಗೂ ಅಂತರಜಾಲಕ್ಕೆ ಅನ್ವಯಿಸಿದಂತೆ ಮರ್ಫಿಯ ನಿಯಮಗಳು:
  • ಯಾವುದೇ ಸಮಯದಲ್ಲಿ ಎರಡು ಯಂತ್ರಗಳು ಒಂದಕ್ಕೊಂದು ಹೊಂದಿಕೊಳ್ಳುವ ಸಾಧ್ಯತೆ ಸೊನ್ನೆ.
  • ಗಣಕಕ್ಕೆ ಜೋಡಿಸಬಲ್ಲ ಉಪಕರಣವು ನಿಮ್ಮಲ್ಲಿರುವ ಗಣಕಕ್ಕೆ ಹೊಂದಿಕೊಳ್ಳುವ ಸಾಧ್ಯತೆಯು ಆ ಸಂದರ್ಭದಲ್ಲಿ ಆ ಉಪಕರಣದ ಅವಶ್ಯಕತೆಯು ಎಷ್ಟಿದೆಯೊ ಅದಕ್ಕೆ ವಿಲೋಮ ಅನುಪಾತದಲ್ಲಿರುತ್ತದೆ.
  • ಯಾವುದೇ ಎರಡು ಕೇಬಲ್‌ಗಳು ಅವುಗಳನ್ನು ಜೋಡಿಸುವ ಅಡಾಪ್ಟರಿಗೆ ಹೊಂದಿಕೊಳ್ಳುವ ಸಾಧ್ಯತೆ ಯಾವಾಗಲೂ ಅತಿ ಕಡಿಮೆ ಇರುತ್ತದೆ.
  • ಪ್ರಿಂಟರ್ ಕೈಕೊಡುವ ಸಾಧ್ಯತೆಯು ನಿಮಗೆ ಮುದ್ರಣದ ಅವಶ್ಯಕತೆ ಎಷ್ಟಿದೆಯೊ ಅದಕ್ಕೆ ಅನುಲೋಮ ಅನುಪಾತದಲ್ಲಿರುತ್ತದೆ.

ಸೋಮವಾರ, ಜನವರಿ 9, 2012

ಗಣಕಿಂಡಿ - ೧೩೮ (ಜನವರಿ ೦೯, ೨೦೧೨)

ಅಂತರಜಾಲಾಡಿ

ಸ್ವಸ್ತಿಪಾನ ಘೋಷಕ


ನಮ್ಮಲ್ಲಿ ಹಲವರಿಗೆ ಸಭಾಕಂಪನ ಇರುತ್ತದೆ. ಸಾರ್ವಜನಿಕವಾಗಿ ಮಾತನಾಡುವುದು ಕೂಡ ಒಂದು ಕಲೆಯೇ. ನಿಮಗೆ ಬೇಕೋ ಬೇಡವೋ ಆದರೆ ಕೆಲವು ಉದ್ಯೋಗಗಳಿಗೆ ಅದು ಬೇಕೇ ಬೇಕು. ಅಂತಹ ಸಂದರ್ಭಗಳಲ್ಲಿ ಈ ಸಾರ್ವಜನಿಕವಾಗಿ ಮಾತನಾಡುವ ಕಲೆ ಅಥವಾ ಭಾಷಣಕಲೆಯನ್ನು ಕರಗತ ಮಾಡಿಕೊಳ್ಳಲೇ ಬೇಕು. ಇಂತಹವರಿಗಾಗಿಯೇ ಒಂದು ಜಾಗತಿಕ ಸಂಸ್ಥೆ ಇದೆ. ಅದುವೇ toastmasters. ಇದಕ್ಕೆ ಕನ್ನಡದಲ್ಲಿ ಸ್ವಸ್ತಿಪಾನ ಘೋಷಕ ಎಂಬ ಪಾರಿಭಾಷಿಕ ಪದ ಮೈಸೂರು ವಿಶ್ವವಿದ್ಯಾನಿಲಯದವರು ಪ್ರಕಟಿಸಿದ ನಿಘಂಟುವಿನಲ್ಲಿ ಇದೆ. ಈ ಟೋಸ್ಟ್‌ಮಾಸ್ಟರ‍್ಸ್ ಜಾಗತಿಕ ಸಂಸ್ಥೆಯ ಜಾಲತಾಣದ ವಿಳಾಸ www.toastmasters.org. ನಿಮ್ಮೂರಲ್ಲಿ ಇದರ ಶಾಖೆ ಇದೆಯೇ? ಇಲ್ಲವಾದಲ್ಲಿ ಒಂದು ಶಾಖೆ ಪ್ರಾರಂಭಿಸಿ ಜನರಿಗೆ ಸಹಾಯ ಮಾಡಬೇಕು ಎಂಬ ಇರಾದೆ ನಿಮಗಿದೆಯೇ? ಈ ಎಲ್ಲವುಗಳಿಗೆ ಪರಿಹಾರ ಈ ಜಾಲತಾಣದಲ್ಲಿದೆ.  

ಡೌನ್‌ಲೋಡ್

ಕನ್ನಡ ಜಾತಕ


ಹುಟ್ಟಿದ ಸಮಯ ಮತ್ತು ಆ ಸ್ಥಳದ ಅಕ್ಷಾಂಶ ರೇಖಾಂಶಗಳನ್ನು ನೀಡಿದರೆ ಆ ಸಂದರ್ಭದಲ್ಲಿ ಆಕಾಶದಲ್ಲಿ ಯಾವ ಯಾವ ಗ್ರಹಗಳು ಎಲ್ಲೆಲ್ಲಿ ಇದ್ದವು ಎಂಬುದನ್ನು ಸೂಚಿಸುವ ನಕ್ಷೆಯೇ ಜಾತಕ ಅಥವಾ ಜನ್ಮಕುಂಡಲಿ. ಇದನ್ನು ತಯಾರಿಸುವುದು ವಿಜ್ಞಾನದ ಸೂತ್ರಗಳ ಮೂಲಕ. ಇದಕ್ಕೆ ನಿರ್ದಿಷ್ಟ ನಿಯಮಗಳಿವೆ. ಅಂದರೆ ಇದನ್ನು ಗಣಕ ಬಳಸಿ ತಯಾರಿಸಬಹುದು. ಅಂತಹ ತಂತ್ರಾಂಶಗಳೂ ಹಲವಾರಿವೆ. ಕನ್ನಡದಲ್ಲೂ ಲಭ್ಯವಿವೆ. ಅಂತಹ ಒಂದು ಕನ್ನಡ ತಂತ್ರಾಂಶದ ಪ್ರಾಯೋಗಿಕ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾದರೆ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/xCK8Ky. ಇದು ಪ್ರಾಯೋಗಿಕ ಆವೃತ್ತಿಯಾದರೂ ಅಗತ್ಯ ಕೆಲಸವನ್ನು ಮಾಡುತ್ತದೆ. ಅಂದರೆ ಜನ್ಮ ಕುಂಡಲಿ ತಯಾರಿಸಿಕೊಡತ್ತದೆ. ಆದರೆ ಮುದ್ರಣವಾಗಲೀ ಇತರೆ ತಂತ್ರಾಂಶಗಳಿಗೆ ನಕಲು ಮಾಡಿಕೊಳ್ಳುವದಾಗಲಿ ಸಾಧ್ಯವಿಲ್ಲ. ಅದಕ್ಕೆ ನೀವು ವಾಣಿಜ್ಯಕ ಆವೃತ್ತಿಯನ್ನು ಕೊಂಡುಕೊಳ್ಳಬೇಕು.

e - ಸುದ್ದಿ

ಮೊಬೈಲ್‌ನಲ್ಲೂ ರೈಲು ಟಿಕೇಟು


ಭಾರತೀಯ ರೈಲ್ವೆ ಇಲಾಖೆಯು ರೈಲುಗಳಿಗೆ ಮುಂಗಡ ಆಸನ ಕಾದಿರುಸುವಿಕೆಯ ವ್ಯವಸ್ಥೆಯನ್ನು ಅಂತರಜಾಲದ ಮೂಲಕವೂ ನಡೆಸಿಕೊಂಡು ಬರುತ್ತಿರುವುದು ತಮಗೆ ತಿಳಿದೇ ಇರಬಹುದು. ಈ ಸೇವೆಗೆ ಇತ್ತೀಚೆಗೆ ಮೊಬೈಲ್‌ಗಳನ್ನೂ ಸೇರಿಸಿದೆ. ಅಂದರೆ ನೀವು ಮೊಬೈಲ್ ಫೋನ್‌ಗಳ ಮೂಲಕವೂ ಟಿಕೇಟು ಕಾದಿರಿಸಬಹುದು. ಹೊರಡುವ ಸ್ಥಳ, ಗಮ್ಯ ಸ್ಥಾನ ಹಾಗೂ ಪ್ರಯಾಣದ ದಿನಾಂಕ ನೀಡಿದರೆ ಲಭ್ಯ ರೈಲುಗಳ ಪಟ್ಟಿ ನೀಡುತ್ತದೆ. ನಂತರ ತಮಗೆ ಬೇಕಾದ ರೈಲಿಗೆ ಟಿಕೇಟು ಕಾದಿರಿಸಬಹುದು. ಈ ಸೌಲಭ್ಯ ಪಡೆಯಲು ನೀವು ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ ಟೈಪಿಸಬೇಕಾದ ವಿಳಾಸ - https://www.irctc.co.in/mobile        

e- ಪದ

ವಿಂಡೋಸ್ 8 (Windows 8) - ಮೈಕ್ರೋಸಾಫ್ಟ್ ಕಂಪೆನಿಯ ವಿಂಡೋಸ್ ತಂತ್ರಾಂಶದ ಮುಂದಿನ ಆವೃತ್ತಿ. ಇದು ೨೦೧೨ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ. ಇದನ್ನು ಮುಖ್ಯವಾಗಿ ಸ್ಪರ್ಶಸಂವೇದಿ ಪರದೆಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಅಂದರೆ ಮೈಕ್ರೋಸಾಫ್ಟ್ ವಿಂಡೋಸ್ ಆಧಾರಿತ ಟ್ಯಾಬ್ಲೆಟ್ ಗಣಕಗಳು ಮತ್ತೊಮ್ಮೆ ಮಾರುಕಟ್ಟೆಯನ್ನು ಪ್ರವೇಶಿಸಿ ಇತರೆ ಟ್ಯಾಬ್ಲೆಟ್‌ಗಳಿಗೆ ಸ್ಪರ್ಧೆ ನೀಡಲಿವೆ. ಇದರ ಮುಖ್ಯ ಆಕರ್ಷಣೆ ಮೆಟ್ರೋ ಹೆಸರಿನ ಯೂಸರ್ ಇಂಟರ್‌ಫೇಸ್. ಇದು ಪ್ರಾಯೋಗಿಕವಾಗಿ ಈಗಲೇ ಲಭ್ಯವಿದೆ.

e - ಸಲಹೆ


ಶ್ರೀಕಾಂತ ಅವರ ಪ್ರಶ್ನೆ: ನನಗೆ ಟೆಕ್ಸ್ಟ್ ನಿಂದ ಸ್ಪೀಚ್ ಗೆ ಬದಲಾಯಿಸುವ ಉಚಿತ ತಂತ್ರಾಂಶ ಬೇಕಾಗಿದೆ. ಅದು ದೊರೆಯುವ ಸ್ಥಳ ತಿಳಿಸಿ. 
ಉ: www.nvda-project.org. ಇದನ್ನು ಬಳಸಲು eSpeak ಎನ್ನುವ ಇನ್ನೊಂದು ತಂತ್ರಾಂಶ ಬೇಕು. ಅದು ದೊರೆಯುವ ಜಾಲತಾಣ espeak.sourceforge.net.

ಕಂಪ್ಯೂತರ್ಲೆ

ರಜನೀಕಾಂತ್ ಹೇಳಿದ್ದು: ನನ್ನ ಬಗ್ಗೆ ಅಸಂಬದ್ಧ ಜೋಕ್‌ಗಳನ್ನು ಇಂಟರ್‌ನೆಟ್ ಮೂಲಕ ಹಂಚುವುದನ್ನು ಕೂಡಲೇ ನಿಲ್ಲಿಸಿ. ಇಲ್ಲವಾದಲ್ಲಿ ನಾನು ಇಂಟರ್‌ನೆಟ್ ಅನ್ನು ಡಿಲೀಟ್ ಮಾಡಿಬಿಡುತ್ತೇನೆ. ಎಚ್ಚರಿಕೆ!

ಸೋಮವಾರ, ಜನವರಿ 2, 2012

ಗಣಕಿಂಡಿ - ೧೩೭ (ಜನವರಿ ೦೨, ೨೦೧೨)

ಅಂತರಜಾಲಾಡಿ

ಅಂತಾರಾಷ್ಟ್ರೀಯ ಸಹಕಾರಿ ವರ್ಷ

ವಿಶ್ವ ಸಂಸ್ಥೆಯು ಪ್ರತಿ ವರ್ಷ ಒಂದು ಸಾಮಾಜಿಕ ಬದ್ಧತಯೆ ವಿಷಯವನ್ನು ಎತ್ತಿಕೊಂಡು ಇಡಿಯ ವರ್ಷವನ್ನು ಆ ವಿಷಯದ ವರ್ಷ ಎಂದು ಘೋಷಿಸುತ್ತದೆ. ಅದೇ ರೀತಿ ೨೦೧೨ನ್ನು ಅಂತಾರಾಷ್ಟ್ರೀಯ ಸಹಕಾರಿ ವರ್ಷ ಎಂದು ಘೋಷಿಸಿದೆ. ಸಹಕಾರಿ ಕ್ಷೇತ್ರದ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವುದು, ಸಹಕಾರಿ ಸಂಸ್ಥೆಗಳ ಮೂಲಕ ಎಲ್ಲ ರಂಗ ಹಾಗೂ ಹಂತಗಳಲ್ಲಿ ಉದ್ಯೋಗ ಸೃಷ್ಠಿಗೆ ಪ್ರೋತ್ಸಾಹ ನೀಡುವುದು, ಬಡತನ ನಿರ್ಮೂಲನ -ಇತ್ಯಾದಿಗಳನ್ನೆಲ್ಲ ಸಾಧಿಸುವುದು ಈ ವರ್ಷದ ಆಶಯ. ಈ ಎಲ್ಲ ಕೆಲಸಗಳಿಗೆ ಸಹಾಯಕಾರಿಯಾಗಿವಂತೆ ಅಂತಾರಾಷ್ಟ್ರೀಯ ಸಹಕಾರಿ ವರ್ಷ ೨೦೧೨ ಎಂದು ಧ್ಯೇಯವಾಕ್ಯವಾಗಿರುವ ಜಾಲತಾಣ www.2012.coop. ಸಹಕಾರಿ ರಂಗದ ಸಾಧನೆಗಳ ಪರಿಚಯ, ಕಥೆಗಳು, ಸ್ಪರ್ಧೆಗಳು -ಎಲ್ಲ ಈ ಜಾಲತಾಣದಲ್ಲಿವೆ.

ಡೌನ್‌ಲೋಡ್

ಆಂಡ್ರೋಯಿಡ್‌ಗೆ ಕನ್ನಡ ನಿಘಂಟು

ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಈಗ ಜನಪ್ರಿಯತೆಯಲ್ಲಿ ಮೊದಲನೆಯ ಸ್ಥಾನದಲ್ಲಿರುವುದು ಆಂಡ್ರೋಯಿಡ್ ಕಾರ್ಯಾಚರಣೆಯ ವ್ಯವಸ್ಥೆ. ಈ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಲಕ್ಷಗಟ್ಟಳೆ ತಂತ್ರಾಂಶಗಳು ಆಂಡ್ರೋಯಿಡ್ ಮಾರುಕಟ್ಟೆಯಲ್ಲಿ (market.android.com) ಲಭ್ಯವಿವೆ. ಈ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಯಾಗಿರುವುದು ಇಂಗ್ಲಿಶ್-ಕನ್ನಡ ನಿಘಂಟು. ಇದರಲ್ಲಿ ಸುಮಾರು ೨೫,೦೦೦ ಪದಗಳಿವೆ. ಇದು ಉಚಿತವಾಗಿ ಲಭ್ಯವಿದೆ. ಆಂಡ್ರೋಯಿಡ್ ಮಾರುಕಟ್ಟೆಗೆ ಭೇಟಿ ನೀಡಿ ಇದನ್ನು ಹುಡುಕಬಹುದು. ನೇರವಾದ ಕೊಂಡಿ ಬೇಕಿದ್ದರೆ bit.ly/sRs0B0 ಎಂದು ಟೈಪಿಸಿ. ಇದು ಲಭ್ಯವಾಗುವಂತೆ ಮಾಡಿದ್ದು ಎಂ. ಆರ್ ಶಂಕರ್. ಒಂದು ವಿಶ್ವವಿದ್ಯಾಲಯ ಅಥವಾ ಸರಕಾರ ಮಾಡಬೇಕಿದ್ದ ಕೆಲಸ ಇದು. 

e - ಸುದ್ದಿ

ಕುರ್ಚಿ ಉಸ್ತುವಾರಿಗೆ ಜನ ಬೇಕಾಗಿದೆ

ಇದು ಅಂತಿಂತಹ ಕುರ್ಚಿ ಅಲ್ಲ. ಪ್ರಪಂಚದಲ್ಲಿ ಇಂತಹ ಕುರ್ಚಿ ಇರುವುದು ಬಹುಶಃ ಇದೊಂದೆ. ಇದನ್ನು ನೋಡಿಕೊಳ್ಳುವ ತಂತ್ರಜ್ಞಾನ ಪರಿಣತೆ ನಿಮಗಿದ್ದರೆ ಈ ಕೆಲಸ ನಿಮಗಾಗಿ. ಸಂಬಳವೂ ಕಡಿಮೆಯೇನಿಲ್ಲ. ಸುಮಾರು ೨೫,೦೦೦ ಬ್ರಿಟಿಶ್ ಪೌಂಡ್‌ಗಳು ಅಂದರೆ ಸುಮಾರು ೨೦ ಲಕ್ಷ ರೂಪಾಯಿಗಳು. ಈ ಕುರ್ಚಿಯ ವೈಶಿಷ್ಟ್ಯವೇನೆಂದರೆ ಇದು ಗಣಕ ನಿಯಂತ್ರಿತ. ಇದು ಅಂತರಜಾಲಕ್ಕೆ ನೇರವಾಗಿ ಸಂಪರ್ಕಿಸಬಲ್ಲುದು. ಇದಕ್ಕೆ ಗಾಲಿಗಳಿವೆ. ಇದರ ಚಲನೆಯನ್ನು ಕುರ್ಚಿಯಲ್ಲಿ ಕುಳಿತವನ ಆಲೋಚನೆಯಿಂದಲೇ ನಿಯಂತ್ರಿಸಬಹುದು. ಅದರಲ್ಲಿ ಅಡಕವಾಗಿರುವ ಸ್ಪೀಕರ್ ಕುರ್ಚಿಯ ಯಜಮಾನನ ತುಟಿ ಅಲುಗಾಟವನ್ನು ಅರ್ಥೈಸಿಕೊಂಡು ಅದರಂತೆ ಧ್ವನಿ ಹೊರಡಿಸಬಲ್ಲುದು. ಈಗ ಅರ್ಥವಾಗಿರಬಹುದಲ್ಲವೇ ಈ ಕುರ್ಚಿ ಯಾರಿಗೆ ಸೇರಿದ್ದು ಎಂದು? ಪ್ರಪಂಚದಲ್ಲಿ ಈಗ ಜೀವಂತ ಇರುವ ವ್ಯಕ್ತಿಗಳಲ್ಲಿ ಅತ್ಯಂತ ಬುದ್ಧಿವಂತ ಎಂದು ಕೆಲವರು ಹೇಳುವ ಸ್ಟೀಫನ್ ಹಾಕಿಂಗ್ ಅವರ ಕುರ್ಚಿ ಇದು. ಅವರ ಜಾಲತಾಣದಲ್ಲಿ (www.hawking.org.uk) ಈ ಬಗ್ಗೆ ಜಾಹೀರಾತು ಓದಬಹುದು.        

e- ಪದ

ಸಮಾಜ ಜಾಲತಾಣ (ಸಾಮಾಜಿಕ ಜಾಲತಾಣ) (social networking site) - ತನ್ನ ವೈಯಕ್ತಿಕ ವಿವರಗಳನ್ನು ಸಾರ್ವಜನಿಕವಾಗಿ ದಾಖಲಿಸಿ ಒಬ್ಬರಿನ್ನೊಬ್ಬರೊಡನೆ ಸಂಪರ್ಕ ಸಾಧಿಸಿ ಅದರ ಮೂಲಕ ಸಾಮಾಜಿಕ ಸಂಪರ್ಕಗಳ ಜಾಲಗಳನ್ನು ನಡೆಸಲು ಅನುವು ಮಾಡಿಕೊಡುವ ಜಾಲತಾಣ. ಫೇಸ್‌ಬುಕ್ ಇದಕ್ಕೆ ಉತ್ತಮ ಉದಾಹರಣೆ. ತಮ್ಮದೇ ಪ್ರತ್ಯೇಕ ಪಂಗಡಗಳನ್ನು ನಿರ್ಮಿಸಲು ಇದು ಅನುವು ಮಾಡಿಕೊಡುತ್ತದೆ. ಫೇಸ್‌ಬುಕ್ ಒಂದು ರಾಷ್ಟ್ರ ಎಂದು ಪರಿಗಣಿಸುವುದಾದರೆ ಇದು ಜಗತ್ತಿನ ಮೂರನೆ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗುತ್ತಿತ್ತು.

e - ಸಲಹೆ

ಮಹೇಶ ಜೊನ್ನಗಿರಿಮಠ ಅವರ ಪ್ರಶ್ನೆ: ನನಗೆ ಯುಟ್ಯೂಬ್‌ನಲ್ಲಿ ಪ್ರಸಾರವಾಗುವ ಟ್ಯುಟೋರಿಯಲ್ ವೀಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಂಡ್ ಮತ್ತೆ ಮತ್ತೆ ನೋಡಬೇಕು. ಅದಕ್ಕೆ ಅನುವುಮಾಡಿಕೊಡುವ ತಂತ್ರಾಂಶ ಇದೆಯೇ?
ಉ: ಈ ಬಗ್ಗೆ ಇದೇ ಅಂಕಣದಲ್ಲಿ ಹಲವು ಬಾರಿ ಉತ್ತರಿಸಲಾಗಿದೆ. ನೀವು ಯುಟ್ಯೂಬ್ ಡೌನ್‌ಲೋಡರ್ ತಂತ್ರಾಂಶವನ್ನು bit.ly/oRMpZ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಂಡು ಬಳಸಿ.

ಕಂಪ್ಯೂತರ್ಲೆ

ಆಧುನಿಕ ವೈವಾಹಿಕ ಜಾಹೀರಾತು

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಪರಿಣತನಾಗಿರುವ ಮೊದಲನೆಯ ಸಲ ಮದುವೆಯಾಗುತ್ತಿರುವ ಸ್ಫುರದ್ರೂಪಿ ವರನಿಗೆ ವಧು ಬೇಕಾಗಿದೆ. ಹುಡುಗಿ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸದಲ್ಲಿದ್ದು ಮೊದಲನೆಯ ಸಲ ವಿವಾಹವಾಗುತ್ತಿರುವವಳಾಗಿರಬೇಕು. ಹುಡುಗಿಯ ವಿವರಗಳನ್ನು ಫೋಟೋಶಾಪ್ ಮಾಡದ ಫೋಟೋ ಸಹಿತ ಇಮೈಲ್ ಮೂಲಕ ಕಳುಹಿಸಿಕೊಡಿ.