ಮಂಗಳವಾರ, ಮಾರ್ಚ್ 20, 2012

ಗಣಕಿಂಡಿ - ೧೪೮ (ಮಾರ್ಚ್ ೧೯, ೨೦೧೨)

ಅಂತರಜಾಲಾಡಿ

ಪ್ರತಿದಿನ ವಿಜ್ಞಾನ

ವಿಜ್ಞಾನ ಎಂದೆಂದಿಗೂ ಕುತೂಹಲಕಾರಿಯೇ. ನಾವು ಪ್ರತಿದಿನ ಮನೆಗಳಲ್ಲಿ ಮಾಡುವ ಹಲವು ಕೆಲಸಗಳ ಹಿಂದೆ ವಿಜ್ಞಾನದ ತತ್ತ್ವಗಳಿವೆ. ಅಂಗಳಕ್ಕೆ ಬಂದು ಆಕಾಶ ನೋಡಿದರೆ ಕಾಣುವ ನಕ್ಷತ್ರಗಳು ಶತಮಾನಗಳಿಂದ ಮಾನವನ ಆಸಕ್ತಿಯನ್ನು ಕೆರಳಿಸುತ್ತಲೇ ಬಂದಿವೆ. ದೋಸೆ ಕಾವಲಿ ಬಿಸಿಯಾಗಿದೆಯೇ ಎಂದು ತಿಳಿಯಲು ಗೃಹಿಣಿ ಸ್ವಲ್ಪ ನೀರು ಚಿಮುಕಿಸಿ ನೋಡುವುದರ ಹಿಂದೆ ಭೌತಶಾಸ್ತ್ರದ ಸಿದ್ಧಾಂತ ಅಡಗಿದೆ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮತ್ತು ಅದನ್ನು ತಿಳಿದುಕೊಳ್ಳಲು ಆಸಕ್ತಿ ಮೂಡಿಸುವುದು ಪಾಲಕರ ಮತ್ತು ಶಿಕ್ಷಕರ ಹೊಣೆಗಾರಿಕೆ. ಇದರಿಂದ ತಪ್ಪಿಸಕೊಳ್ಳುವಂತೆಯೇ ಇಲ್ಲ. ವಿಜ್ಞಾನವಿಲ್ಲದೆ ಜೀವನವಿಲ್ಲ. ದೈನಂದಿನ ಜೀವನದಲ್ಲಿ ಅಡಕವಾಗಿರುವ ವಿಜ್ಞಾನದ ಸಿದ್ಧಾಂತಗಳ ಬಗ್ಗೆ ಅರಿವು ಮೂಡಿಸುವ ಜಾಲತಾಣ www.scienceofeverydaylife.com. ವಿಜ್ಞಾನದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪಾಲಕರಿಗೆ, ಎಲ್ಲ ಹಂತಗಳವರಿಗೆ, ಇಲ್ಲಿ ಸೂಕ್ತ ಮಾಹಿತಿ, ಪ್ರಾತ್ಯಕ್ಷಿಕೆ ಎಲ್ಲ ಇವೆ.

ಡೌನ್‌ಲೋಡ್


ಕನ್ನಡಕ್ಕಾಗೊಂದು ಟೂಲ್‌ಬಾರ್

ಅಂತರಜಾಲ ವೀಕ್ಷಣೆ ಮಾಡಲು ಬಳಸುವ ಬ್ರೌಸರ್ ತಂತ್ರಾಂಶಗಳಿಗೆ ಟೂಲ್‌ಬಾರ್‌ಗಳು ಹಲವು ಲಭ್ಯವಿವೆ. ಉದಾಹರಣೆಗೆ ಗೂಗಲ್ ಟೂಲ್‌ಬಾರ್ ಮತ್ತು ಬಿಂಗ್ ಟೂಲ್‌ಬಾರ್. ಇವುಗಳು ಕೆಲವು ದಿನನಿತ್ಯದ ಕೆಲಸಗಳನ್ನು ಸುಲಭ ಮಾಡಿಕೊಡುತ್ತವೆ. ಈಗ ಅದೇ ಮಾದರಿಯಲ್ಲಿ ಒಂದು ವಿನೋದ ಟೂಲ್‌ಬಾರ್ ಲಭ್ಯವಿದೆ. ಇದನ್ನು ಮಾಡಿದವರು ಕನ್ನಡಿಗರು. ಅಂದರೆ ಕನ್ನಡಿಗರು ಸಾಮಾನ್ಯವಾಗಿ ಬಳಸುವ ಜಾಲತಾಣಗಳು, ಓದುವ ಬ್ಲಾಗ್‌ಗಳು, ಕಣಜ, ಗಣಕಿಂಡಿ, ವರ್ಡ್‌ನಿಂದ ಪಿಡಿಎಫ್‌ಗೆ -ಇತ್ಯಾದಿ ಹಲವು ಜಾಲತಾಣಗಳಿಗೆ ಇದರಲ್ಲಿ ಸಂಪರ್ಕ ನೀಡಲಾಗಿದೆ. ಪ್ರತಿ ಸಲ ಈ ಜಾಲತಾಣಗಳಿಗೆ ಭೇಟಿ ನೀಡಲು ಆಯಾ ಗುಂಡಿಯನ್ನು ಒತ್ತಿದರೆ ಸಾಕು. ಇದೇನೂ ಅದ್ಭುತ ಸಂಶೋಧನೆಯಲ್ಲ. ಆದರೆ ಪ್ರತಿದಿನ ಮಾಡುವ ಕೆಲಸಗಳಿಗೆ ಒಂದು ಮಾದರಿ ಶಾರ್ಟ್‌ಕಟ್ ಇದ್ದಂತೆ. ಈ ಟೂಲ್‌ಬಾರ್ ನಿಮಗೆ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ vinoda.ourtoolbar.com.  

e - ಸುದ್ದಿ

ಕಳೆದುಹೋದ ಫೋನಿಗೇನಾಗುತ್ತದೆ?

ಈಗೀಗ ಬಹುತೇಕ ಮಂದಿ ಬಳಸುವ ಸ್ಮಾರ್ಟ್‌ಫೋನ್‌ಗಳು ಒಂದು ರೀತಿಯಲ್ಲಿ ಲ್ಯಾಪ್‌ಟಾಪ್ ಗಣಕದಂತೆಯೇ. ಅದರಲ್ಲಿ ಸೂಕ್ಷ್ಮ ಮಾಹಿತಿಗಳೆಲ್ಲ ಇರುತ್ತವೆ. ಉದಾಹರಣೆಗೆ ಅಂತರಜಾಲ ಬ್ಯಾಕಿಂಗ್‌ನ ಪಾಸ್‌ವರ್ಡ್. ಇಂತಹ ಸ್ಮಾರ್ಟ್‌ಫೋನ್ ಕಳೆದುಹೋದಾಗ? ಅದು ಸಿಕ್ಕಿದವರು ಫೋನ್ ಜೊತೆ ಏನು ಮಾಡುತ್ತಾರೆ? ಈ ಬಗ್ಗೆ ಸಿಮ್ಯಾಂಟೆಕ್ ಕಂಪೆನಿಯವರು ಒಂದು ಸಂಶೋಧನೆ ಮಾಡಿದರು. ೫೦ ಫೋನ್‌ಗಳಲ್ಲಿ ಕಾಲ್ಪನಿಕ ವ್ಯಕ್ತಿಗಳ ಮಾಹಿತಿಗಳನ್ನು ತುಂಬಿಸಿ ಉತ್ತರ ಅಮೆರಿಕದ ಬೇರೆಬೇರೆ ನಗರಗಳಲ್ಲಿ ಕಳೆದುಕೊಂಡರು. ಶೇಕಡ ೪೫ ಮಂದಿ ಫೋನಿನಲ್ಲಿದ್ದ ಮಾಹಿತಿಯನ್ನು ಓದಿದ್ದರು. ೫೭% ಮಂದಿ “saved passwords” ಎಂದು ಹೆಸರಿದ್ದ ಫೈಲನ್ನು ತೆರೆದು ನೋಡಿದ್ದರು. ಕೇವಲ ಅರ್ಧದಷ್ಟು ಮಂದಿ ಫೋನ್ ಸಿಕ್ಕವರು ಮಾತ್ರ ಫೋನಿನ ಯಜಮಾನನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದರು.

e- ಪದ

ಸೋಪ (Stop Online Piracy Act - SOPA) - ಅಂತರಜಾಲದ ಮೂಲಕ ನಡೆಯುವ ಕೃತಿಚೌರ್ಯವನ್ನು ತಡೆಯಲು ಅಮೆರಿಕ ಸರಕಾರ ಹೊಸದಾಗಿ ಮಾಡಲು ಪ್ರಯತ್ನಿಸುತ್ತಿರುವ ಕಾನೂನಿನ ಹೆಸರು. ಆದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ತಾಕತ್ತುಳ್ಳ ಮಸೂದೆ, ಆದುದರಿಂದ ಇದನ್ನು ಕಾನೂನಾಗಿ ತರಬಾರದು ಎಂದು ಹಲವು ಅಂತರಜಾಲ ಕಂಪೆನಿಗಳು ಇದರ ವಿರುದ್ಧವಾಗಿವೆ. ಅಂತರಜಾಲದ ತುಂಬೆಲ್ಲ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

e - ಸಲಹೆ

ಪವನ್ ಅವರ ಪ್ರಶ್ನೆ: ನನ್ನ ಬಳಿ ಅಂತರಜಾಲಕ್ಕೆ ಸಂಬಂಧಪಟ್ಟ ಹೊಸ ಐಡಿಯ ಇದೆ. ಇದು ಹೊಸದೇ, ಇದನ್ನು ಪೇಟೆಂಟ್ ಮಾಡಬಹುದೇ, ಅಥವಾ ಈಗಾಗಲೇ ಈ ಐಡಿಯವನ್ನು ಯಾರಾದರೂ ಪೇಟೆಂಟ್ ಮಾಡಿದ್ದಾರೋ, ಎಂದೆಲ್ಲ ತಿಳಿಯುವುದು ಹೇಗೆ? ಈ ಬಗ್ಗೆ ಯಾವುದಾದರೂ ಅಂತರಜಾಲತಾಣ ಇದೆಯೇ?
ಉ: www.uspto.gov, www.google.com/patents ಮತ್ತು www.freepatentsonline.com ಜಾಲತಾಣಗಳನ್ನು ನೋಡಿ.

ಕಂಪ್ಯೂತರ್ಲೆ

ಮನಶ್ಶಾಂತಿ ಬೇಕಿದ್ದವರು ಈ ಹೊಸ ನಮೂನೆಯ ಉಪವಾಸ ಮಾಡಿ: ಒಂದು ದಿನ ಕಂಪ್ಯೂಟರ್, ಫೋನ್,  ಟ್ವಿಟ್ಟರ್, ಫೇಸ್‌ಬುಕ್, ಟಿವಿ, ವಾಹನ -ಯಾವುದೂ ಇಲ್ಲದೆ ಬದುಕಿ.

2 ಕಾಮೆಂಟ್‌ಗಳು: