ಮಂಗಳವಾರ, ಮಾರ್ಚ್ 22, 2011

ಗಣಕಿಂಡಿ - ೦೯೬ (ಮಾರ್ಚ್ ೨೧, ೨೦೧೧)

ಅಂತರಜಾಲಾಡಿ

ಇಂಗ್ಲಿಶ್ ಕಲಿಯಬೇಕೇ?

ಇಂಗ್ಲಿಶ್ ಭಾಷೆ ಕಲಿಯಬೇಕೇ? ಅದಕ್ಕಾಗಿ ಸಾವಿರಾರು ಜಾಲತಾಣಗಳಿವೆ. ಹೆಚ್ಚಿನವು ನಾಮಪದ, ಕ್ರಿಯಾಪದ, ವ್ಯಾಕರಣ -ಹೀಗೆ ವಿವರಣೆ ನೀಡುತ್ತ ಹೋಗುತ್ತವೆ. ಇಂಗ್ಲಿಶ್ ಭಾಷೆಯ ಒಂದು ದೊಡ್ಡ ದೌರ್ಬಲ್ಯವೆಂದರೆ ಉಚ್ಚರಣೆ. ಒಂದು ಪದವನ್ನು ಯಾವ ರೀತಿ ಉಚ್ಚರಿಸುವುದು ಎಂದು ಯಾರಾದರು ಹೇಳಿಕೊಡುವ ತನಕ ಅದನ್ನು ಯಾವ ರೀತಿ ಉಚ್ಚರಿಸಬೇಕು ಎಂದು ತಿಳಿಯುವುದಿಲ್ಲ. ಕೆಲವೊಮ್ಮೆ ಒಂದೇ ಪದವನ್ನು ಸಂದರ್ಭಕ್ಕೆ ಅನುಸರಿಸಿ ಬೇರೆ ಬೇರೆ ರೀತಿ ಉಚ್ಚರಿಸಲಾಗುತ್ತದೆ. ಪದಗಳು ಮಾತ್ರವಲ್ಲ, ವಾಕ್ಯಗಳನ್ನು ಉಚ್ಚರಿಸುವ ರೀತಿಯನ್ನೂ ಯಾರಾದರೂ ಹೇಳಿ ತೋರಿಸಬೇಕಾಗುತ್ತದೆ. ಇವೆಲ್ಲವನ್ನು ವೀಡಿಯೋಗಳ ಮೂಲಕ ವಿವರಿಸುವ ಜಾಲತಾಣ www.engvid.com. ಇಲ್ಲಿರುವ ವೀಡಿಯೋ ಪಾಠಗಳು ಪ್ರಾರಂಭಿಕ, ಮಧ್ಯಮ, ಉನ್ನತ -ಹೀಗೆ ಹಲವು ಹಂತಗಳಲ್ಲಿವೆ.

ಡೌನ್‌ಲೋಡ್

ಚಿತ್ರಸಂಚಾಲಕರಾಗಿ

ಚಿತ್ರಸಂಚಲನೆ ಅರ್ಥಾತ್ ಅನಿಮೇಶನ್ ನೋಡದವರಾರು? ಅಂತರಜಾಲದಲ್ಲಂತೂ ಯಾವ ಜಾಲತಾಣ ತೆರೆದರೂ ಅಲ್ಲೊಂದು ಫ್ಲಾಶ್ ಅನಿಮೇಶನ್ ಕಂಡುಬರುತ್ತದೆ. ಈ ಫ್ಲಾಶ್ ಅನಿಮೇಶನ್ ತಯಾರಿಸಲು ಅಡೋಬ್ ಕಂಪೆನಿಯವರ ದುಬಾರಿ ತಂತ್ರಾಂಶ ಇದೆ. ತಯಾರಾದ ಫೈಲ್ ಅನ್ನು ಪ್ಲೇ ಮಾಡಲು ಸಾಮಾನ್ಯವಾಗಿ ಎಲ್ಲ ಜಾಲತಾಣ ವೀಕ್ಷಕ ತಂತ್ರಾಂಶಗಳಿಗೆ (ಬ್ರೌಸರ್) ಅಗತ್ಯ ಪ್ಲಗ್‌ಇನ್ ಎಲ್ಲರೂ ಹಾಕಿಕೊಂಡಿರುತ್ತಾರೆ. ಈ ಚಿತ್ರಸಂಚಲನೆ ನೀವೇ ತಯಾರಿಸಬೇಕು ಎಂಬ ಆಸೆಯೇ? ಹಾಗಿದ್ದರೆ ನಿಮಗಾಗಿ ಒಂದು ಉಚಿತ ತಂತ್ರಾಂಶ ಲಭ್ಯವಿದೆ. ಅದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ synfig.org.

e - ಸುದ್ದಿ

ಸ್ಟಾಂಪ್ ಬದಲಿಗೆ ಎಸ್‌ಎಂಎಸ್

ಸ್ವೀಡನ್‌ನಲ್ಲಿ ಇನ್ನು ಮುಂದೆ ಅಂಚೆ ಸ್ಟಾಂಪ್‌ಗಳು ನಾಪತ್ತೆಯಾಗಲಿವೆ. ಅವರು ಒಂದು ಹೊಸ ಪ್ರಯೋಗ ಮಾಡುತ್ತಿದ್ದಾರೆ. ಯಾರಿಗಾದರೂ ಅಂಚೆ ಸ್ಟಾಂಪ್ ಬೇಕಾಗಿದ್ದಲ್ಲಿ ಅಂಚೆ ಕಚೇರಿಗೆ ಒಂದು ಎಸ್‌ಎಂಎಸ್ ಕಳುಹಿಸಬೇಕು. ಅಂಚೆ ಕಚೇರಿಯಿಂದ ಒಂದು ಸಂಖ್ಯೆ ಎಸ್‌ಎಂಎಸ್ ಮೂಲಕ ಬರುತ್ತದೆ. ಅಂಚೆ ಲಕೋಟೆಯ ಮೇಲೆ ಆ ಸಂಖ್ಯೆಯನ್ನು ಬರೆದರೆ ಸಾಕು. ಫೋನಿನಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಇದ್ದರೆ ಮಾತ್ರ ಈ ಸವಲತ್ತನ್ನು ಬಳಸಬಹುದು. ಡೆನ್‌ಮಾರ್ಕ್‌ನಲ್ಲಿ ಈಗಾಗಲೇ ಇಂತಹ ವ್ಯವಸ್ಥೆ ಜಾರಿಯಲ್ಲಿದೆ. ಅಂಚೆ ಸ್ಟಾಂಪ್‌ಗೆ ಎಂಜಲು ಹಾಕಿ ಅಂಟಿಸುವ ಕಾಲ ಮುಗಿಯುತ್ತ ಬಂತು.

e- ಪದ

ರೋಬೋಟ್ ಅಥವಾ ಬೋಟ್ (robot or bot) - ಮಾನವರ ಹಸ್ತಕ್ಷೇಪವಿಲ್ಲದೆ ತಾನೇ ಕೆಲಸ ಮಾಡುವ ಪ್ರೋಗ್ರಾಮ್. ಸಾಮಾನ್ಯವಾಗಿ ಇವುಗಳನ್ನು ಅಂತರಜಾಲ ಶೋಧಕಗಳು ಬಳಸುತ್ತವೆ. ಎಲ್ಲ ಜಾಲತಾಣಗಳಿಗೆ ಭೇಟಿ ನೀಡಿ ಅಲ್ಲಿ ನೀಡಿರುವ ಸೂಚಿ ಪದಗಳನ್ನು ಬಳಸಿ ಜಾಲತಾಣಗಳ ಯಾದಿ ಅಥವಾ ಸೂಚಿಯನ್ನು ತಯಾರಿಸಲು ಇವುಗಳ ಬಳಕೆ ಆಗುತ್ತದೆ. ಇನ್ನು ಕೆಲವು ಟ್ವಟ್ಟರ್‌ನಂತಹ ಜಾಲತಾಣಗಳಲ್ಲಿ ತಮ್ಮದೇ ಖಾತೆ ಹೊಂದಿ ಮಾತುಕಥೆಗಳನ್ನು ದಾಖಲಿಸುತ್ತಿರುತ್ತವೆ ಹಾಗೂ ಕೆಲವೊಮ್ಮೆ ಉತ್ತರವನ್ನೂ ನೀಡುತ್ತವೆ!
 
e - ಸಲಹೆ

ಪುನಿತ್ ಅವರ ಪ್ರಶ್ನೆ: ಯಾವುದೇ ಜಾಲತಾಣ ಯಾರ ಹೆಸರಿನಲ್ಲಿದೆ ಎಂದು ಪತ್ತೆಹಚ್ಚುವುದು ಹೇಗೆ?
ಉ: www.whois.net ಜಾಲತಾಣದ ಮೂಲಕ

ಕಂಪ್ಯೂತರ್ಲೆ

ಅಂತರಜಾಲ ದೇವಸ್ಥಾನದ ಅನುಕೂಲಗಳು-
  • ಬಿಕ್ಷುಕರ ಕಾಟವಿಲ್ಲ
  • ಚಪ್ಪಲಿ ಕಳವಾಗುವ ಭಯವಿಲ್ಲ
ಅನನುಕೂಲಗಳು-
  • ಮಂಗಳಾರತಿ, ತೀರ್ಥ ದೊರೆಯುವುದಿಲ್ಲ
  • ದೇವಸ್ಥಾನಕ್ಕೆ ಬಂದ ಇತರರನ್ನು ನೋಡಲು ಆಗುವುದಿಲ್ಲ

ಸೋಮವಾರ, ಮಾರ್ಚ್ 14, 2011

ಗಣಕಿಂಡಿ - ೦೯೫ (ಮಾರ್ಚ್ ೧೪, ೨೦೧೧)

ಅಂತರಜಾಲಾಡಿ

ದೃಷ್ಟಿಶಕ್ತಿ ವಂಚಿತರಿಗೆ
 
ಪ್ರಪಂಚದಲ್ಲಿ ದೃಷ್ಟಿಶಕ್ತಿಯಿಂದ ಪೂರ್ತಿಯಾಗಿ ಅಥವಾ ಸ್ವಲ್ಪ ವಂಚಿತರಾದವರು ತುಂಬ ಮಂದಿ ಇದ್ದಾರೆ. ಅದರಲ್ಲೂ ಭಾರತದಂತಹ ಬಡ(?) ದೇಶದಲ್ಲಿ ಅವರ ಸಂಖ್ಯೆ ಒಟ್ಟು ಜನಸಂಖ್ಯೆಗೆ ಅನುಪಾತ ಮಾಡಿ ನೋಡಿದರೆ ತುಂಬ ಹೆಚ್ಚು. ಇಂತಹವರುಗಳಲ್ಲಿ ಬಡವರ ಸಂಖ್ಯೆ ಹೆಚ್ಚು. ಅವರಿಗೆ ಬದುಕಲು ಸಹಾಯ ಮಾಡುವ ಒಂದು ಸಂಸ್ಥೆಯ ಜಾಲತಾಣ  www.visionaid.org. ಇವರು ದೃಷ್ಟಿಶಕ್ತಿ ವಂಚಿತರುಗಳಿಗೆ ಹಲವು ರೀತಿಯಲ್ಲಿ ತಮ್ಮ ಕಾಲಿನಲ್ಲಿ ನಿಂತುಕೊಳ್ಳುವಂತೆ ಮಾಡಲು ಅನುವು ಮಾಡಿಕೊಡುತ್ತಾರೆ. ಉದಾಹರಣೆಗೆ ಗಣಕ ಶಿಕ್ಷಣ. ಇಂತಹವರಿಗಾಗಿಯೇ ಇರುವ ತಂತ್ರಾಂಶಗಳನ್ನು ಬಳಸಿ ಅವರು ಶಿಕ್ಷಣ ನೀಡುತ್ತಾರೆ. ಇವರ ಕೆಲಸ ಕಾರ್ಯಗಳಲ್ಲಿ ನೀವು ಸಹಾಯ ಮಾಡಬಹುದು. ಅದು ಹೇಗೆ ಎಂಬ ವಿವರ ಜಾಲತಾಣದಲ್ಲಿದೆ.

ಡೌನ್‌ಲೋಡ್


ಧ್ವನಿ ಮೂಲಕ ಗಣಕ ಬಳಸಿ

ದೃಷ್ಟಿಶಕ್ತಿ ವಂಚಿತರಿಗೆ ಗಣಕ ಬಳಸಲು ಒಂದು ವಿಧಾನವೆಂದರೆ ಗಣಕದ ಪರದೆಯ ಮೇಲೆ ಮೂಡಿ ಬರುವ ಎಲ್ಲ ಅಕ್ಷರಗಳನ್ನು ಓದಿ ಹೇಳುವ ತಂತ್ರಾಂಶದ (screen-reader software) ಬಳಕೆ. ಇಂತಹ ವಾಣಿಜ್ಯಕ ತಂತ್ರಾಂಶಗಳು ಹಲವಾರಿವೆ. ಉಚಿತ ತಂತ್ರಾಂಶಗಳೂ ಇವೆ. ಅಂತಹ ಒಂದು ಉಚಿತ ಮತ್ತು ಮುಕ್ತ ತಂತ್ರಾಂಶ ದೊರೆಯುವ ಜಾಲತಾಣ www.nvda-project.org. ಇದು ಮೈಕ್ರೋಸಾಫ್ಟ್ ವಿಂಡೋಸ್‌ನಲ್ಲಿ ಕೆಲಸ ಮಾಡುತ್ತದೆ. ಇದನ್ನು ಬಳಸಲು eSpeak ಎಂಬ ಇನ್ನೊಂದು ತಂತ್ರಾಂಶ ಬೇಕು. ಅದು ದೊರೆಯುವ ಜಾಲತಾಣ espeak.sourceforge.net. ಈ ತಂತ್ರಾಂಶಗಳಲ್ಲಿ ಕನ್ನಡದ ಬಳಕೆ ಇನ್ನೂ ಅಷ್ಟೊಂದು ಸಮರ್ಪಕವಾಗಿ ಆಗಿಲ್ಲ. ಇದು ಮುಕ್ತ ತಂತ್ರಾಂಶವಾಗಿರುವುದರಿಂದ ಇದರಲ್ಲಿ ಕನ್ನಡ ಇನ್ನೂ ಪರಿಪೂರ್ಣವಾಗಿ ಬಳಕೆಗೆ ಬಂದಿಲ್ಲ ಎಂದರೆ ಅದಕ್ಕೆ ಕನ್ನಡಿಗರೇ ಹೊಣೆ.

e - ಸುದ್ದಿ

ಸೋಲಿಗೆ ಫೇಸ್‌ಬುಕ್ ಕಾರಣ?

ಅಮೆರಿಕದ ಮಿಚಿಗನ್ ರಾಜ್ಯದ ರಾಜಕಾರಣಿಯಬ್ಬರು ತಮ್ಮ ಸೋಲಿಗೆ ಫೇಸ್‌ಬುಕ್ ಕಾರಣವೆಂದು ದೂರಿರುವುದು ಮಾತ್ರವಲ್ಲ ಅದಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಕೂಡ ಹೂಡಿದ್ದಾರೆ. ರಿಪಬ್ಲಿಕನ್ ಪಕ್ಷದ ಮೌಗ್ನಿ ಅವರು ಫೇಸ್‌ಬುಕ್‌ನಲ್ಲಿ ಖಾತೆ ತೆಗೆದು ಸಾವಿರಾರು ಹಿಂಬಾಲಕರನ್ನು ಪಡೆದು ಪ್ರಚಾರ ನಡೆಸಲು ಯೋಜನೆ ಹಾಕಿದ್ದರು. ಅವರು ತಮ್ಮ ಪುಟದ ತುಂಬ ತಮ್ಮ ವಿರೋಧಿಯ ಬಗ್ಗೆ ತೆಗಳಿಕೆಗಳನ್ನು ದಾಖಲಿಸಿದ್ದರು. ಆದರೆ ಫೇಸ್‌ಬುಕ್ ಅವರ ಪುಟವನ್ನೇ ತೆಗೆದುಹಾಕಿತು. ಈ ಕ್ರಮದಿಂದಾಗಿ ತಾನು ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಅವರು ಫೇಸ್‌ಬುಕ್ ಮೇಲೆ ದಾವೆ ಹೂಡಿದ್ದಾರೆ.

e- ಪದ

ಐಎಸ್‌ಪಿ (ISP - Internet Service Provider) - ಅಂತರಜಾಲ ಸಂಪರ್ಕ ಸೇವೆ ನೀಡುವವರು. ನಿಗದಿತ ಹಣ ತೆಗೆದುಕೊಂಡು ಹಲವಾರು ವಿಧಾನಗಳ ಮೂಲಕ ಮನೆಗೆ, ಕಛೇರಿಗೆ ಅಥವಾ ಓಡಾಟದಲ್ಲಿರುವವರಿಗೆ ಅಂತರಜಾಲಕ್ಕೆ ಸಂಪರ್ಕ ನೀಡುತ್ತಾರೆ. ಈ ಸಂಪರ್ಕ ಡಯಲ್‌ಅಪ್, ಬ್ರ್ಯಾಡ್‌ಬ್ಯಾಂಡ್, ನಿಸ್ತಂತು (ವಯರ್‌ಲೆಸ್), ಕೇಬಲ್ -ಹೀಗೆ ಹಲವಾರು ವಿಧಾನಗಳಲ್ಲಿ ಯಾವುದಾದರೊಂದು ವಿಧಾನದಲ್ಲಿರಬಹುದು.
 
e - ಸಲಹೆ

ಶಿವಮೊಗ್ಗದ ಶ್ರೀಪಾದ ರಾವ್ ಅವರ ಪ್ರಶ್ನೆ: ಕನ್ನಡದಿಂದ ಇಂಗ್ಲಿಷ್ ಇಲ್ಲ ಬೇರೆ ಭಾಷೆಗೆ ಭಾಷಾಂತರ ತಂತ್ರಾಂಶ ಇದ್ದರೆ ಮಾಹಿತಿ ನೀಡಿ.
ಉ: ಸದ್ಯಕ್ಕೆ ಅಂತಹ ಪರಿಪೂರ್ಣ ತಂತ್ರಾಂಶ ಲಭ್ಯವಿಲ್ಲ.

ಕಂಪ್ಯೂತರ್ಲೆ

ಮನೆಯಾಕೆ: ಯಾಕೆ ಒಂದು ವಾರದಿಂದ ಕೆಲಸಕ್ಕೆ ಬಂದಿಲ್ಲ?
ಕೆಲಸದಾಕೆ: ನಾನು ಊರಲ್ಲಿರಲಿಲ್ಲ. ಅದನ್ನು ಫೇಸ್‌ಬುಕ್‌ನಲ್ಲೂ ದಾಖಲಿಸಿದ್ದೆ. ನಿಮ್ಮ ಯಜಮಾನರು ಅದನ್ನು ಓದಿ “ಆದಷ್ಟು ಬೇಗನೆ ವಾಪಾಸು ಬಾ, ನೀನಿಲ್ಲದೆ ಬೋರ್ ಆಗುತ್ತಿದೆ ಎಂದು ಕಮೆಂಟ್ ಕೂಡ ಹಾಕಿದ್ದರು”.

ಮಂಗಳವಾರ, ಮಾರ್ಚ್ 8, 2011

ಗಣಕಿಂಡಿ - ೦೯೪ (ಮಾರ್ಚ್ ೦೭, ೨೦೧೧)


ಅಂತರಜಾಲಾಡಿ

ಕಡತ ಪರಿವರ್ತಿಸಿ

ಹಲವಾರು ನಮೂನೆಯ ಫೈಲ್‌ಗಳು ಎಲ್ಲರಲ್ಲೂ ಇರುವುದು ಸಹಜ. ಉದಾಹರಣೆಗೆ ಹಾಡು (mp3), ವೀಡಿಯೋ (mp4, avi, flv), ವರ್ಡ್, ಪಿಡಿಎಫ್, ಇತ್ಯಾದಿ. ಇವುಗಳನ್ನು ಒಂದು ನಮೂನೆಯಿಂದ ಇನ್ನೊಂದಕ್ಕೆ ಬದಲಾಯಿಸಬೇಕಾಗಿರುತ್ತದೆ. ನಿಮ್ಮಲ್ಲಿ ಒಂದು ವೀಡಿಯೋ ತುಣುಕು flv ರೂಪದಲ್ಲಿರುವುದಾದರೆ ಅದನ್ನು ನೋಕಿಯಾ ಮೊಬೈಲ್‌ಗೆ ವರ್ಗಾಯಿಸಬೇಕಾದರೆ ಅದು 3gp ವಿಧಾನದಲ್ಲಿರಬೇಕಾಗುತ್ತದೆ. ಹೀಗೆ ಪರಿವರ್ತಿಸಲು ಹಲವು ತಂತ್ರಾಂಶಗಳಿವೆ. ಅವುಗಳನ್ನು ನಿಮ್ಮ ಗಣಕದಲ್ಲಿ ಅನುಸ್ಥಾಪಿಸದೆ ಅಂತರಜಾಲದ ಮೂಲಕವೇ ಯಾವ ಫೈಲ್ ಆಗಿರಲಿ ಅದನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತಿಸಲು ಅನುವು ಮಾಡಿಕೊಡುವ ಜಾಲತಾಣ www.zamzar.com. ಇದು ಪರಿವರ್ತಿಸಿದ ಕಡತವನ್ನು ನಿಮ್ಮ ಇಮೈಲ್‌ಗೆ ಕಳುಹಿಸಿಕೊಡುತ್ತದೆ.


ಡೌನ್‌ಲೋಡ್

ನೋಕಿಯಾಟ

ಭಾರತದಲ್ಲಿ ಸದ್ಯದಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಮೊಬೈಲ್ ಫೋನ್ ನೋಕಿಯ ಕಂಪೆನಿಯದು. ಇವರ ಫೋನ್‌ಗಳಲ್ಲಿ ನೂರಾರು ಮಾದರಿಗಳಿವೆ. ಅವುಗಳಿಗೆ ವಿವಿಧ ಗುಣವೈಶಿಷ್ಟ್ಯಗಳಿವೆ ಮತ್ತು ವಿವಿಧ ಗಾತ್ರದ ಪರದೆಗಳಿವೆ. ಅಂತೆಯೇ ಇವುಗಳಿಗಾಗಿ ತಯಾರಾದ ಸಾವಿರಾರು ಆಟಗಳಿವೆ. ಈ ಆಟಗಳನ್ನು ನಿಮ್ಮ ನೋಕಿಯ ಮೊಬೈಲ್ ಫೋನ್‌ಗೆ ಅಳವಡಿಸಿಕೊಳ್ಳಬೇಕಾಗಿದೆಯೇ? ಹಾಗಿದ್ದರೆ ನೋಕಿಯ ಫೋನ್‌ಗಳಿಗಾಗಿ ತಯಾರಾದ ಆಟಗಳಿಗೆಂದೇ ಒಂದು ಜಾಲತಾಣವಿದೆ. ಅದರ ವಿಳಾಸ - nokiagamez.com. ಇಲ್ಲಿಗೆ ಭೇಟಿ ನೀಡಿ ಆಟಗಳನ್ನು ನಿಮ್ಮ ಗಣಕಕ್ಕೆ ಡೌನ್‌ಲೋಡ್ ಮಡಿಕೊಂಡು ನಂತರ Nokia PC Suite ಎಂಬ ತಂತ್ರಾಂಶದ ಮೂಲಕ ಫೋನ್‌ಗೆ ವರ್ಗಾಯಿಸಿ ಬಳಸಬೇಕು. ಈ ಜಾಲತಾಣದಲ್ಲಿ ಆಟಗಳಲ್ಲದೆ ಇತರೆ ಕೆಲವು ಉಪಯುಕ್ತ ತಂತ್ರಾಂಶ, ಸ್ಕ್ರೀನ್‌ಸೇವರ್ ಹಾಗೂ ಲೇಖನಗಳಿವೆ.

e - ಸುದ್ದಿ

ಮಿಥ್ಯಾ ತರಳೆಯ ನಂಬಿ...

ಇಲ್ಲದ ಹುಡುಗಿಯನ್ನು ಉಳಿಸಲು ೨ ಲಕ್ಷ ಡಾಲರು ಹಣ ಕಳೆದುಕೊಂಡವನೊಬ್ಬನ ಕಥೆ ಅಮೆರಿಕದ ಇಲಿನಾಯ್ಸ್‌ನಿಂದ ವರದಿಯಾಗಿದೆ. ಆತ ಅಂತರಜಾಲದ ಮೂಲಕ ಹುಡುಗಿಯೊಬ್ಬಳನ್ನು ಸ್ನೇಹಿತೆಯಾಗಿ ಮಾಡಿಕೊಂಡಿದ್ದ. ಆಕೆಯೊಡನೆ ಗೆಳೆತನ ಮುಂದುವರಿಯಿತು. ಎರಡು ವರ್ಷಗಳ ಕಾಲದಲ್ಲಿ ಆತ ಆಕೆಯನ್ನು ಎಷ್ಟು ನಂಬಿದ್ದನೆಂದರೆ ಆಕೆ ಕಷ್ಟದಲ್ಲಿದ್ದೇನೆಂದು ಹೇಳಿದ್ದು ನಂಬಿ ಆಗಾಗ ಹಣ ನೀಡುತ್ತಿದ್ದ. ಕೊನೆಗೊಮ್ಮೆ ಆಕೆ ನಾಪತ್ತೆಯಾದಳು. ಆಕೆಯನ್ನು ಯಾರೋ ಅಪಹರಿಸಿದ್ದಾರೆ ಎಂದು ಆತ ಪೋಲೀಸರಿಗೆ ದೂರು ನೀಡಿದ. ಪೋಲೀಸರ ಕಾರ್ಯಾಚರಣೆಯಲ್ಲಿ ಪತ್ತೆಯಾದ ವಿಷಯವೇನೆಂದರೆ ಅಂತಹ ಹುಡುಗಿ ಇರಲೇ ಇಲ್ಲ! ಅಂತರಜಾಲದಲ್ಲಿ ಭೇಟಿಯಾದವರನ್ನು ಪೂರ್ತಿಯಾಗಿ ನಂಬುವವರಿಗೆ ಇಲ್ಲಿದೆ ಒಂದು ಪಾಠ.

e- ಪದ

ಆಸ್ಕಿ (ASCII - American Standard Code for Information Interchange) - ಮಾಹಿತಿ ವಿನಿಮಯಕ್ಕಾಗಿ ಅಮೇರಿಕದ ಶಿಷ್ಟ ಸಂಕೇತ. ೮ ಬಿಟ್‌ಗಳನ್ನು ಬಳಸಿ ಮಾಹಿತಿಯನ್ನು ಶೇಖರಿಸಿಡಲು ಪ್ರಪಂಚಾದ್ಯಂತ ಎಲ್ಲ ಗಣಕಗಳೂ ಇಂಗ್ಲೀಷ್ ಭಾಷೆಯ ಎಲ್ಲ ಅಕ್ಷರ, ಅಂಕೆ, ಬರೆವಣಿಗೆಯ ಚಿಹ್ನೆ, ಇತ್ಯಾದಿಗಳಿಗೆ ನಿರ್ದಿಷ್ಟ ಸಂಕೇತ ಬಳಸುತ್ತಾರೆ. ಇದೇ ಆಸ್ಕಿ. ಎಲ್ಲರೂ ಒಂದೇ ಸಂಕೇತ ಬಳಸುವುದರಿಂದ ಮಾಹಿತಿ ವಿನಿಮಯದಲ್ಲಿ ಅಡಚಣೆಯುಂಟಾಗುವುದಿಲ್ಲ. ಇದೊಂದು ಮಾನಕ (standard) ಆಗಿದೆ. ಈ ವಿಧಾನದಲ್ಲಿ ಭಾರತೀಯ ಭಾಷೆಗಳಿಗೆ ಜಾಗವಿಲ್ಲ. ಆದುದರಿಂದ ಈಗ ೧೬ ಬಿಟ್ ಬಳಕೆಯ ಯುನಿಕೋಡ್ ಹೆಚ್ಚಾಗಿ ಮಾನಕವಾಗಿ ಬಳಕೆಯಾಗುತ್ತಿದೆ.

e - ಸಲಹೆ

ವಿಜೇತ ಗೌಡರ ಪ್ರಶ್ನೆ: ನನಗೆ Samsung SGH D780 PC Suite ತಂತ್ರಾಂಶ ಬೇಕು. ಎಲ್ಲಿ ಸಿಗುತ್ತದೆ?
ಉ: bit.ly/hayLRV ಜಾಲತಾಣಕ್ಕೆ ಭೇಟಿ ನೀಡಿ.

ಕಂಪ್ಯೂತರ್ಲೆ

ಗೂಗ್ಲ್‌ನವರು ನಿಘಂಟು ಸವಲತ್ತನ್ನು www.google.com/dictionary ಜಾಲತಾಣದಲ್ಲಿ ನೀಡಿದ್ದಾರೆ. ಇದರಲ್ಲಿ ಇಂಗ್ಲಿಷ್ ಮತ್ತು ಕನ್ನಡ ಮಧ್ಯೆ ಕೆಲವು ಪದಗಳ ಅರ್ಥ ಹುಡುಕಿದಾಗ ದೊರಕಿದ್ದು:
ಕಂದ = bulb
ಸಾರು = announce
ಅನ್ನ = bread
ಊಟ = package holiday (tour)

ಮಂಗಳವಾರ, ಮಾರ್ಚ್ 1, 2011

ಗಣಕಿಂಡಿ - ೦೯೩ (ಫೆಬ್ರವರಿ ೨೮, ೨೦೧೧)

ಅಂತರಜಾಲಾಡಿ

ಕವಿತೆ ನೀನೇಕೆ ಪದಗಳಲ್ಲಿ ಅವಿತೆ

ಕವಿತೆ ಎಲ್ಲರಿಗೂ ಇಷ್ಟ. ದೊಡ್ಡ ಕವನಸಂಗ್ರಹವೊಂದು ಅಂತರಜಾಲದಲ್ಲಿದೆ. ಇದರಲ್ಲಿ ಸಾವಿರಾರು ಕವಿಗಳ ಸಹಸ್ರಾರು ಕವಿತೆಗಳಿವೆ. ಯಾವುದೋ ಒಬ್ಬ ಖ್ಯಾತ ಕವಿಯ ಖ್ಯಾತ ಕವನವೊಂದರ ಸಾಲುಗಳನ್ನು ಎಲ್ಲೋ ಉದ್ಧರಿಸಬೇಕಾಗಿದೆ. ಆಗ ಏನು ಮಾಡುತ್ತೀರಿ? ಈ ಜಾಲತಾಣಕ್ಕೆ ಭೇಟಿ ನೀಡಿ. ನಿಮಗೆ ಬೇಕಾದ ಕವನ ಇಲ್ಲಿ ಸಿಗಲೂ ಬಹುದು. ಕವತೆಗಳಲ್ಲದೆ ಖ್ಯಾತ ಕವಿಗಳ ಮಾತುಗಳೂ, ಖ್ಯಾತ ಹೇಳಿಕೆಗಳೂ ಇಲ್ಲಿವೆ. ಹಲವಾರು ಕವನಗಳ ಸಂಗ್ರಹಗಳು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲೂ ಲಭ್ಯವಿವೆ. ಗುರುವರ್ಯ ರವೀಂದ್ರನಾಥ ಠಾಗೂರರ ನೋಬೆಲ್ ಪ್ರಶಸ್ತಿ ಪುರಸ್ಕೃತ ಗೀತಾಂಜಲಿ ಕೂಡ ಇಲ್ಲಿದೆ. ಈ ಜಾಲತಾಣದ ವಿಳಾಸ - www.poemhunter.com

ಡೌನ್‌ಲೋಡ್

ಶೇರುಮಾರುಕಟ್ಟೆ ವಿವರ

ಶೇರು ಮಾರುಕಟ್ಟೆ ತುಂಬ ಕಲ್ಪನಾತೀತ. ಯಾವ ಕಂಪೆನಿಯ ಶೇರು ಯಾವಾಗ ಮೇಲೆ ಹೋಗುತ್ತದೆ ಯಾವ ಕಂಪೆನಿಯ ಶೇರು ಕೆಳಗೆ ಹೋಗುತ್ತದೆ ಎಂದು ಇದಮಿತ್ಥಂ ಎಂದು ಊಹಿಸಿ ಹೇಳುವುದು ಕಷ್ಟ. ಆದರೂ ಈ ಮಾರುಕಟ್ಟೆಯಲ್ಲಿ ಹಣ ಹೂಡುವವರ ಮತ್ತು ಹಣ ಸಂಪಾದಿಸುವವರ ಸಂಖ್ಯೆ ಏನೂ ಕಡಿಮೆಯಿಲ್ಲ. ಶೇರು ಮಾರುಕಟ್ಟೆಯಲ್ಲಿ ಕಂಪೆನಿಗಳ ಶೇರುಬೆಲೆ ಮೇಲೆಕೆಳಗೆ ಆಗುತ್ತಲೇ ಇರುತ್ತವೆ. ಈ ವಿವರವನ್ನು ಘಳಿಗೆ ಘಳಿಗೆ ತಿಳಿಯಬೇಕೇ? ಅದಕ್ಕಾಗಿ ಹಲವಾರು ಜಾಲತಾಣಗಳಿವೆ. ಅಂತೆಯೇ ಗಣಕದಲ್ಲಿ ಅನಸ್ಥಾಪಿಸಬಲ್ಲ ತಂತ್ರಾಂಶಗಳೂ ಇವೆ. ಅಂತಹ ಒಂದು ತಂತ್ರಾಂಶ JStock. ಇದು ದೊರೆಯುವ ಜಾಲತಾಣ jstock.sourceforge.net. ನಿಮ್ಮಲ್ಲಿರುವ ಶೇರುಗಳ ವಿವರಗಳನ್ನು ದಾಖಲಿಸಿಟ್ಟುಕೊಳ್ಳುವ ಸವಲತ್ತೂ ಇದರಲ್ಲಿದೆ. ಪ್ರಪಂಚದ ೨೫ ದೇಶಗಳ ಶೇರುಮಾರುಕಟ್ಟೆಗಳ ಮೇಲೆ ಇದರ ಮೂಲಕ ಕಣ್ಣಿಡಬಹುದು.

e - ಸುದ್ದಿ

ಫೋನ್ ಮೂಲಕ ತಪ್ಪೊಪ್ಪಿಗೆ

ಕ್ಯಾಥೊಲಿಕ್ ಕ್ರಿಶ್ಚಿಯನ್ ಜನಾಂಗದಲ್ಲಿ ಇಗರ್ಜಿಗೆ ಹೋಗಿ ಪಾದ್ರಿಯ ಮುಂದೆ ತಪ್ಪೊಪ್ಪಿಗೆ ನಿವೇದನೆ ಮಾಡಿಕೊಳ್ಳುವ ಪದ್ಧತಿಯಿದೆ. ಹೀಗೆ ತಪ್ಪೊಪ್ಪಿಗೆ ಮಾಡಿಕೊಳ್ಳಲು ಸಹಾಯ ಮಾಡುವ ಐಫೋನ್ ತಂತ್ರಾಂಶವೊಂದು ಮಾರುಕಟ್ಟೆಗೆ ಬಂದಿದೆ. ಇದು ಹಲವಾರು ಪ್ರಶ್ನೋತ್ತರಗಳ ಮೂಲಕ ವ್ಯಕ್ತಿಯನ್ನು ತಪ್ಪೊಪ್ಪಿಗೆಗೆ ಅನುವು ಮಾಡುತ್ತದೆ. ಅಮೆರಿಕ ಬಿಶಪ್ ಒಬ್ಬರ ಸಹಾಯದಿಂದ ಇದನ್ನು ತಯಾರಿಸಲಾಗಿದೆ. ಆದರೆ ವ್ಯಾಟಿಕನ್ ಪೋಪ್ ಇದನ್ನು ಒಪ್ಪಿಲ್ಲ. ಅವರು ಮಾನವರ ಮೂಲಕವೇ ತಪ್ಪೊಪ್ಪಿಗೆ ಮತ್ತು ಅದಕ್ಕೆ ಸಂಬಂದಪಟ್ಟ ಪ್ರಶ್ನೋತ್ತರಗಳು ನಡೆಯತಕ್ಕದ್ದು ಎಂದಿದ್ದಾರೆ.

e- ಪದ

ಎಚ್‌ಡಿಎಮ್‌ಐ (HDMI - High-Definition Multimedia Interface) - ಡಿಜಿಟಲ್ ವಿಧಾನದಲ್ಲಿ ಧ್ವನಿ ಮತ್ತು ವೀಡಿಯೋ ಮಾಹಿತಿಯನ್ನು ವಿವಿಧ ಸಲಕರಣೆಗಳ ಮೂಲಕ ಒಂದರಿಂದ ಇನ್ನೊಂದಕ್ಕೆ ಪ್ರವಹಿಸಲು ಅನುವು ಮಾಡಿಕೊಡುತ್ತದೆ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಹೈಡೆಫಿನಿಶನ್ ಟಿ.ವಿ.ಗಳನ್ನು ಗಣಕಕ್ಕೆ, ಡಿ.ವಿ.ಡಿ/ಬ್ಲೂರೇ ಪ್ಲೇಯರ್‌ಗೆ ಅಥವಾ ಎಕ್ಸ್‌ಬಾಕ್ಸ್‌ಗೆ ಸಂಪರ್ಕಿಸಲು ಇದನ್ನು ಬಳಸುತ್ತಾರೆ. ಇದರ ಮೂಲಕ ಅಧಿಕ ಗುಣಮಟ್ಟದ ವೀಡಿಯೋ ಮಾಹಿತಿ ಸಂವಹನೆ ಮಾಡಬಹುದು. 

e - ಸಲಹೆ

ಪರಶುರಾಮರ ಪ್ರಶ್ನೆ: ನಾನು ಕನ್ನಡ ಯುನಿಕೋಡ್ ಬಳಸುತ್ತಿದ್ದೇನೆ. ಕನ್ನಡ ಅಂಕಿಗಳನ್ನು ಪಡೆಯುವುದು ಹೇಗೆ? ನನ್ನದು ವಿಂಡೋಸ್ ತಂತ್ರಾಂಶ.
ಉ: ವಿಂಡೋಸ್‌ನಲ್ಲಿ ಅಳವಡಿಸಿರುವ ಕೀಲಿಮಣೆಯನ್ನು ಬಳಸಿ. Ctrl ಮತ್ತು  Alt  ಮತ್ತು ಅಂಕಿಯ ಕೀಲಿಗಳನ್ನು ಒಟ್ಟಿಗೆ ಒತ್ತಿ.

ಕಂಪ್ಯೂತರ್ಲೆ

ಭಾರತೀಯ ಅಂಚೆ ಇನ್ನು ಮುಂದೆ ಅಂತರಜಾಲದ ಮೂಲಕ ಸೇವೆ ಒದಗಿಸಲಿದೆ ಎಂಬ ಸುದ್ದಿ ಓದಿದ ಕೋಲ್ಯ, ಆ ಜಾಲತಾಣಕ್ಕೆ ಭೇಟಿ ನೀಡಿ, ಅದರಲ್ಲಿ ಕಂಡುಬಂದ ಸ್ಟಾಂಪ್‌ಗಳು ಎಂಬಲ್ಲಿ ಕ್ಲಿಕ್ ಮಾಡಿ ಪರದೆಯಲ್ಲಿ ಮೂಡಿಬಂದ ಸ್ಟಾಂಪ್‌ನ ಮುಂದೆ ತನ್ನ ಅಂಚೆ ಲಕೋಟೆಯನ್ನು ಒತ್ತಿ ಹಿಡಿದ.