ಮಂಗಳವಾರ, ಮಾರ್ಚ್ 22, 2011

ಗಣಕಿಂಡಿ - ೦೯೬ (ಮಾರ್ಚ್ ೨೧, ೨೦೧೧)

ಅಂತರಜಾಲಾಡಿ

ಇಂಗ್ಲಿಶ್ ಕಲಿಯಬೇಕೇ?

ಇಂಗ್ಲಿಶ್ ಭಾಷೆ ಕಲಿಯಬೇಕೇ? ಅದಕ್ಕಾಗಿ ಸಾವಿರಾರು ಜಾಲತಾಣಗಳಿವೆ. ಹೆಚ್ಚಿನವು ನಾಮಪದ, ಕ್ರಿಯಾಪದ, ವ್ಯಾಕರಣ -ಹೀಗೆ ವಿವರಣೆ ನೀಡುತ್ತ ಹೋಗುತ್ತವೆ. ಇಂಗ್ಲಿಶ್ ಭಾಷೆಯ ಒಂದು ದೊಡ್ಡ ದೌರ್ಬಲ್ಯವೆಂದರೆ ಉಚ್ಚರಣೆ. ಒಂದು ಪದವನ್ನು ಯಾವ ರೀತಿ ಉಚ್ಚರಿಸುವುದು ಎಂದು ಯಾರಾದರು ಹೇಳಿಕೊಡುವ ತನಕ ಅದನ್ನು ಯಾವ ರೀತಿ ಉಚ್ಚರಿಸಬೇಕು ಎಂದು ತಿಳಿಯುವುದಿಲ್ಲ. ಕೆಲವೊಮ್ಮೆ ಒಂದೇ ಪದವನ್ನು ಸಂದರ್ಭಕ್ಕೆ ಅನುಸರಿಸಿ ಬೇರೆ ಬೇರೆ ರೀತಿ ಉಚ್ಚರಿಸಲಾಗುತ್ತದೆ. ಪದಗಳು ಮಾತ್ರವಲ್ಲ, ವಾಕ್ಯಗಳನ್ನು ಉಚ್ಚರಿಸುವ ರೀತಿಯನ್ನೂ ಯಾರಾದರೂ ಹೇಳಿ ತೋರಿಸಬೇಕಾಗುತ್ತದೆ. ಇವೆಲ್ಲವನ್ನು ವೀಡಿಯೋಗಳ ಮೂಲಕ ವಿವರಿಸುವ ಜಾಲತಾಣ www.engvid.com. ಇಲ್ಲಿರುವ ವೀಡಿಯೋ ಪಾಠಗಳು ಪ್ರಾರಂಭಿಕ, ಮಧ್ಯಮ, ಉನ್ನತ -ಹೀಗೆ ಹಲವು ಹಂತಗಳಲ್ಲಿವೆ.

ಡೌನ್‌ಲೋಡ್

ಚಿತ್ರಸಂಚಾಲಕರಾಗಿ

ಚಿತ್ರಸಂಚಲನೆ ಅರ್ಥಾತ್ ಅನಿಮೇಶನ್ ನೋಡದವರಾರು? ಅಂತರಜಾಲದಲ್ಲಂತೂ ಯಾವ ಜಾಲತಾಣ ತೆರೆದರೂ ಅಲ್ಲೊಂದು ಫ್ಲಾಶ್ ಅನಿಮೇಶನ್ ಕಂಡುಬರುತ್ತದೆ. ಈ ಫ್ಲಾಶ್ ಅನಿಮೇಶನ್ ತಯಾರಿಸಲು ಅಡೋಬ್ ಕಂಪೆನಿಯವರ ದುಬಾರಿ ತಂತ್ರಾಂಶ ಇದೆ. ತಯಾರಾದ ಫೈಲ್ ಅನ್ನು ಪ್ಲೇ ಮಾಡಲು ಸಾಮಾನ್ಯವಾಗಿ ಎಲ್ಲ ಜಾಲತಾಣ ವೀಕ್ಷಕ ತಂತ್ರಾಂಶಗಳಿಗೆ (ಬ್ರೌಸರ್) ಅಗತ್ಯ ಪ್ಲಗ್‌ಇನ್ ಎಲ್ಲರೂ ಹಾಕಿಕೊಂಡಿರುತ್ತಾರೆ. ಈ ಚಿತ್ರಸಂಚಲನೆ ನೀವೇ ತಯಾರಿಸಬೇಕು ಎಂಬ ಆಸೆಯೇ? ಹಾಗಿದ್ದರೆ ನಿಮಗಾಗಿ ಒಂದು ಉಚಿತ ತಂತ್ರಾಂಶ ಲಭ್ಯವಿದೆ. ಅದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ synfig.org.

e - ಸುದ್ದಿ

ಸ್ಟಾಂಪ್ ಬದಲಿಗೆ ಎಸ್‌ಎಂಎಸ್

ಸ್ವೀಡನ್‌ನಲ್ಲಿ ಇನ್ನು ಮುಂದೆ ಅಂಚೆ ಸ್ಟಾಂಪ್‌ಗಳು ನಾಪತ್ತೆಯಾಗಲಿವೆ. ಅವರು ಒಂದು ಹೊಸ ಪ್ರಯೋಗ ಮಾಡುತ್ತಿದ್ದಾರೆ. ಯಾರಿಗಾದರೂ ಅಂಚೆ ಸ್ಟಾಂಪ್ ಬೇಕಾಗಿದ್ದಲ್ಲಿ ಅಂಚೆ ಕಚೇರಿಗೆ ಒಂದು ಎಸ್‌ಎಂಎಸ್ ಕಳುಹಿಸಬೇಕು. ಅಂಚೆ ಕಚೇರಿಯಿಂದ ಒಂದು ಸಂಖ್ಯೆ ಎಸ್‌ಎಂಎಸ್ ಮೂಲಕ ಬರುತ್ತದೆ. ಅಂಚೆ ಲಕೋಟೆಯ ಮೇಲೆ ಆ ಸಂಖ್ಯೆಯನ್ನು ಬರೆದರೆ ಸಾಕು. ಫೋನಿನಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಇದ್ದರೆ ಮಾತ್ರ ಈ ಸವಲತ್ತನ್ನು ಬಳಸಬಹುದು. ಡೆನ್‌ಮಾರ್ಕ್‌ನಲ್ಲಿ ಈಗಾಗಲೇ ಇಂತಹ ವ್ಯವಸ್ಥೆ ಜಾರಿಯಲ್ಲಿದೆ. ಅಂಚೆ ಸ್ಟಾಂಪ್‌ಗೆ ಎಂಜಲು ಹಾಕಿ ಅಂಟಿಸುವ ಕಾಲ ಮುಗಿಯುತ್ತ ಬಂತು.

e- ಪದ

ರೋಬೋಟ್ ಅಥವಾ ಬೋಟ್ (robot or bot) - ಮಾನವರ ಹಸ್ತಕ್ಷೇಪವಿಲ್ಲದೆ ತಾನೇ ಕೆಲಸ ಮಾಡುವ ಪ್ರೋಗ್ರಾಮ್. ಸಾಮಾನ್ಯವಾಗಿ ಇವುಗಳನ್ನು ಅಂತರಜಾಲ ಶೋಧಕಗಳು ಬಳಸುತ್ತವೆ. ಎಲ್ಲ ಜಾಲತಾಣಗಳಿಗೆ ಭೇಟಿ ನೀಡಿ ಅಲ್ಲಿ ನೀಡಿರುವ ಸೂಚಿ ಪದಗಳನ್ನು ಬಳಸಿ ಜಾಲತಾಣಗಳ ಯಾದಿ ಅಥವಾ ಸೂಚಿಯನ್ನು ತಯಾರಿಸಲು ಇವುಗಳ ಬಳಕೆ ಆಗುತ್ತದೆ. ಇನ್ನು ಕೆಲವು ಟ್ವಟ್ಟರ್‌ನಂತಹ ಜಾಲತಾಣಗಳಲ್ಲಿ ತಮ್ಮದೇ ಖಾತೆ ಹೊಂದಿ ಮಾತುಕಥೆಗಳನ್ನು ದಾಖಲಿಸುತ್ತಿರುತ್ತವೆ ಹಾಗೂ ಕೆಲವೊಮ್ಮೆ ಉತ್ತರವನ್ನೂ ನೀಡುತ್ತವೆ!
 
e - ಸಲಹೆ

ಪುನಿತ್ ಅವರ ಪ್ರಶ್ನೆ: ಯಾವುದೇ ಜಾಲತಾಣ ಯಾರ ಹೆಸರಿನಲ್ಲಿದೆ ಎಂದು ಪತ್ತೆಹಚ್ಚುವುದು ಹೇಗೆ?
ಉ: www.whois.net ಜಾಲತಾಣದ ಮೂಲಕ

ಕಂಪ್ಯೂತರ್ಲೆ

ಅಂತರಜಾಲ ದೇವಸ್ಥಾನದ ಅನುಕೂಲಗಳು-
 • ಬಿಕ್ಷುಕರ ಕಾಟವಿಲ್ಲ
 • ಚಪ್ಪಲಿ ಕಳವಾಗುವ ಭಯವಿಲ್ಲ
ಅನನುಕೂಲಗಳು-
 • ಮಂಗಳಾರತಿ, ತೀರ್ಥ ದೊರೆಯುವುದಿಲ್ಲ
 • ದೇವಸ್ಥಾನಕ್ಕೆ ಬಂದ ಇತರರನ್ನು ನೋಡಲು ಆಗುವುದಿಲ್ಲ

5 ಕಾಮೆಂಟ್‌ಗಳು:

 1. http://domaintools.net ಈ ತಾಣ whois.betಗಿಂತ ಚೆನ್ನಾಗಿದೆ :)

  ಪ್ರತ್ಯುತ್ತರಅಳಿಸಿ
 2. ಪವನಜ,
  ಉಚ್ಛಾರ ಸರಿಯಲ್ಲ, ಉಚ್ಚಾರ ಸರಿ ಎಂದು ನಮ್ರವಾಗಿ ಸೂಚಿಸುತ್ತೇನೆ.

  ಪ್ರತ್ಯುತ್ತರಅಳಿಸಿ
 3. @Sunaath - ಧನ್ಯವಾದಗಳು. ಸಾಮಾನ್ಯವಾಗಿ ನಾನು ಅನುಮಾನ ಬಂದಾಗ ನಿಘಂಟು ನೋಡುತ್ತೇನೆ. ಆದರೆ ಈಗಿನ ತೊಂದರೆ ಏನೆಂದರೆ ನಾನು ವಾರದ ಬಹುಭಾಗ ಮೈಸೂರಿನಲ್ಲಿರುತ್ತೇನೆ. ನನ್ನ ಪುಸ್ತಕಗಳೆಲ್ಲ ಬೆಂಗಳೂರಿನಲ್ಲಿವೆ. ಅಂದಹಾಗೆ, ಕನ್ನಡಪ್ರಭದವರು ತಪ್ಪನ್ನು ತಿದ್ದಿಲ್ಲ.

  -ಪವನಜ

  ಪ್ರತ್ಯುತ್ತರಅಳಿಸಿ
 4. ಉತ್ತಮ ಮಾಹಿತಿ ಪವನಜ ಸರ್. ವ೦ದನೆಗಳು.

  ಅನ೦ತ್

  ಪ್ರತ್ಯುತ್ತರಅಳಿಸಿ