ಸೋಮವಾರ, ಮಾರ್ಚ್ 5, 2012

ಗಣಕಿಂಡಿ - ೧೪೬ (ಮಾರ್ಚ್ ೦೫, ೨೦೧೨)

ಅಂತರಜಾಲಾಡಿ

ಈಜು ಕಲಿಯಬೇಕೇ?

ಪುಸ್ತಕ ಓದಿ ಈಜು ಕಲಿಯಲು ಸಾಧ್ಯವೇ ಎಂಬ ಮಾತಿದೆ. ಅದನ್ನೇ ಮುಂದುವರಿಸಿ ಗಣಕ ನೋಡಿ ಈಜು ಕಲಿಯಲು ಸಾಧ್ಯವೇ ಎಂಬ ಗಾದೆ ಸೃಷ್ಟಿ ಮಾಡಬಹುದು. ಅದು ಹಾಗಿರಲಿ. ಈಜು ಕಲಿಯಲು ಸಹಾಯಮಾಡುವ ಜಾಲತಾಣವೂ ಇದೆ ಎಂದರೆ ನಂಬಲೇಬೇಕು. ಬೇರೆ ಬೇರೆ ಪ್ರಾಯದವರಿಗೆ ಸರಿಹೊಂದುವ ಪಾಠಗಳು ಈ ಜಾಲತಾಣದಲ್ಲಿವೆ. ಎಲ್ಲ ಪಾಠಗಳೂ ವೀಡಿಯೋ ಸಹಿತ ಇವೆ. ಅವನ್ನು ನೋಡಿ ನಿಮ್ಮ ಮಕ್ಕಳಿಗೆ ಈಜು ಕಲಿಸಬಹುದು ಎಂಬುದು ಜಾಲತಾಣ ನಿರ್ಮಾಪಕರ ಅಂಬೋಣ. ಹಾಗೆಂದು ಹೇಳಿ ಮಕ್ಕಳಿಗೆ ಮಾತ್ರ ಈಜು ಕಲಿಸಲಿಕ್ಕಾಗಿರುವ ಜಾಲತಾಣವೇ ಎಂದು ಪ್ರಶ್ನೆ ಎಸೆಯಬೇಡಿ. ಉತ್ತರವೂ ಅಲ್ಲೇ ಇದೆ. ಎಲ್ಲರೂ ಈ ಜಾಲತಾಣವನ್ನು ಬಳಸಬಹುದು ಎಂದು ಅವರು ಹೇಳಿದ್ದಾರೆ. ಅಂದ ಹಾಗೆ ಈ ಜಾಲತಾಣದ ವಿಳಾಸ www.uswim.com. ಹೌದು, ಈಜು ಕಲಿಸುವ ವೀಡಿಯೋಗಳು ಜಾಲತಾಣದಲ್ಲಿವೆ. ಆದರೆ ಈಜುಕೊಳದ ಪಕ್ಕಬಂದಾಗ ಅದು ಮರೆತು ಹೋಗಿದ್ದರೆ? ಚಿಂತೆ ಬೇಡ. ನಿಮ್ಮಲ್ಲಿ ದುಬಾರಿ ಐಫೋನ್ ಇದ್ದಲ್ಲಿ ಪಾಠಗಳನ್ನು ಐಫೋನ್‌ಗೆ ಡೌನ್‌ಲೋಡ್ ಮಾಡಿಕೊಂಡು ಕೊಳದ ಪಕ್ಕ ನೋಡಿಕೊಂಡು ಈಜು ಕಲಿಯಬಹುದು. ಐಫೋನ್ ನೀರಿನೊಳಕ್ಕೆ ಬೀಳದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಿಮ್ಮದು!

ಡೌನ್‌ಲೋಡ್

ವಿಮಾನ ಚಾಲಕರಾಗಿ

ಗಣಕಗಳಲ್ಲಿ ಆಡುವ ಆಟಗಳಲ್ಲಿ ಮೈಕ್ರೋಸಾಫ್ಟ್ ಫ್ಲೈಟ್ ಸಿಮುಲೇಟರ್ ತುಂಬ ಪ್ರಖ್ಯಾತ. ಇದು ಅನುಕರಣೆಯ ಆಟಗಳ (simulation game) ವಿಭಾಗಕ್ಕೆ ಸೇರುತ್ತದೆ. ಅಮೆರಿಕದಲ್ಲಿ ೨೦೦೧ರಲ್ಲಿ ಅವಳಿ ಕಟ್ಟಡಗಳ ಮೇಲೆ ವಿಮಾನ ಗುದ್ದಿಸಿದ ಉಗ್ರಗಾಮಿಗಳು ಈ ಅಟದ ಮೂಲಕವೇ ವಿಮಾನ ಹಾರಾಟವನ್ನು ಕಲಿತದ್ದು ಎಂಬ ಪ್ರತೀತಿ ಇದೆ. ಈ ಆಟ ಅಷ್ಟು ನೈಜವಾಗಿದೆ. ಇದು ತನಕ ಈ ಆಟ ಹಣ ಕೊಟ್ಟು ಕೊಂಡರೆ ಮಾತ್ರ ಆಡುವಂತಹದ್ದಾಗಿತ್ತು. ಈಗ ಮೈಕ್ರೋಸಾಫ್ಟ್‌ನವರು ಇದರ ಉಚಿತ ಆವೃತ್ತಿ ನೀಡಿದ್ದಾರೆ. ಇದನ್ನು microsoftflight.com ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಕೆಲವು ವಿಮಾನ ಮಾತ್ರ ಉಚಿತ ಆವೃತ್ತಿಯಲ್ಲಿವೆ. ಹೆಚ್ಚಿನ ವಿಮಾನಗಳು ಬೇಕಿದ್ದಲ್ಲಿ ಹಣ ಕೊಟ್ಟು ಕೊಂಡುಕೊಂಡು ಡೌನ್‌ಲೋಡ್ ಮಾಡಿಕೊಳ್ಳಬೇಕು.  

e - ಸುದ್ದಿ

ಪೈರೇಟ್ ಬೇ


ಒಬ್ಬರಿಗೊಬ್ಬರು ಫೈಲುಗಳನ್ನು ಹಂಚಿಕೊಳ್ಳುವ ತಂತ್ರಜ್ಞಾನ ವ್ಯಕ್ತಿಯಿಂದ-ವ್ಯಕ್ತಿಗೆ (person-to-person - P2P). ಈ ವಿಧಾನದಲ್ಲಿ ಬಳಕೆಯಾಗುವುದು ಟೊರೆಂಟ್ ಫೈಲ್‌ಗಳು. ಈ ರೀತಿ ಟೊರೆಂಟ್‌ಗಳನ್ನು ಹುಡುಕಲು ಅನುವು ಮಾಡಿಕೊಡುವ ಜಾಲತಾಣ ಪೈರೇಟ್ ಬೇ. ಇದನ್ನು ಮುಚ್ಚಿಸಿಬಿಡಬೇಕು ಎಂದು ಸಂಗೀತ ಮತ್ತು ಚಲನಚಿತ್ರ ತಯಾರಿಸುವ ಕಂಪೆನಿಗಳು ಶತಾಯಗತಾಯ ಪ್ರಯತ್ನಿಸುತ್ತಿವೆ. ಅವರು ಮೆಗಾಅಪ್‌ಲೋಡ್ ಜಾಲತಾಣವನ್ನು ಮುಚ್ಚಿಸಿ ಅದರ ನಿರ್ಮಾತೃವನ್ನು ಸೆರೆಮನೆಗೆ ದೂಡಿದ ಕಥೆ ಇದೇ ಅಂಕಣದಲ್ಲಿ ವರದಿಯಾಗಿದೆ.  ತನ್ನ ಪರಿಸ್ಥಿತಿಯೂ ಹಾಗೆಯೇ ಆಗಬಹುದು ಎಂದು ಆಲೋಚಿಸಿದ ಪೈರೇಟ್ ಬೇ ಮುಂದಾಲೋಚನೆಯಿಂದ ತಾನು ಹುಡುಕಿಕೊಡುವ ಫೈಲ್‌ಗಳ ಕೊಂಡಿ ನೀಡುವ ವಿಧಾನವನ್ನೇ ಬದಲಿಸಿದೆ. ಇನ್ನು ಅದು ನೇರವಾಗಿ ಟೊರೆಂಟ್ ಫೈಲ್‌ಗಳನ್ನು ನೀಡುವುದಿಲ್ಲ. ಬದಲಿಗೆ ಮ್ಯಾಗ್ನೆಟ್ ಲಿಂಕ್‌ಗಳನ್ನು ನೀಡುತ್ತದೆ.

e- ಪದ

ಮ್ಯಾಗ್ನೆಟ್ ಲಿಂಕ್ (magnet link) - ವ್ಯಕ್ತಿಯಿಂದ ವ್ಯಕ್ತಿಗೆ ಫೈಲ್ ಹಂಚಲು ಅನುವು ಮಾಡುವ ವಿಧಾನದಲ್ಲಿ ಬಳಕೆಯಾಗುವ ಫೈಲ್ ಇರುವ ಜಾಗದ ವಿಳಾಸವನ್ನು ತಿಳಿಸಲು ಬಳಸುವ ಒಂದು ವಿಧಾನ. ಈ ವಿಧಾನದಲ್ಲಿ ಫೈಲಿನ ವಿಳಾಸದ ಬದಲಿಗೆ ಫೈಲಿನಲ್ಲಿರುವ ಮಾಹಿತಿಯ ಮೂಲಕ ಫೈಲನ್ನು ವಿವರಿಸಲಾಗುತ್ತದೆ. ಟೊರೆಂಟ್‌ನ ಹೊಸ ಅವತಾರ ಎನ್ನಬಹುದು.

e - ಸಲಹೆ

ಮಡಿಕೇರಿಯ ರವೀಂದ್ರರ ಪ್ರಶ್ನೆ: ಕನ್ನಡದಲ್ಲಿ (ಕಗಪ ಕೀಲಿಮಣೆ ವಿನ್ಯಾಸ) ವೇಗವಾಗಿ ಬೆರಳಚ್ಚು ಮಾಡುವುದನ್ನು ಕಲಿಯಲು ಯಾವುದಾದರೂ ತಂತ್ರಾಂಶ ಇದೆಯೇ? ತಿಳಿಸಿ. ಇಂಗ್ಲಿಷಿನಲ್ಲಿ ಇಂತಹ ತಂತ್ರಾಂಶಗಳು ಬಹಳ ಇವೆ. ಕನ್ನಡದಲ್ಲಿ ಇಂತಹ ತಂತ್ರಾಂಶಗಳ ಕೊರತೆ ಇದೆ. (ಗಣಕ ಪರಿಷತ್ ನವರು ಕೀಲಿಮಣೆ ಭೋಧಕ ಎಂಬ ತಂತ್ರಾಂಶ ತಯಾರಿಸಿದ್ದಾರೆ. ಆದರೆ ಇದು ಮಕ್ಕಳಿಗಷ್ಟೇ ಉಪಯುಕ್ತವಾಗುವಂತಹುದು)  ಇಂತಹ ತಂತ್ರಾಂಶ ಅಭಿವೃದ್ಧಿ ಪಡಿಸಿದಲ್ಲಿ ಗಣಕಯಂತ್ರದಲ್ಲಿ  ಹೊಸದಾಗಿ ಬೆರಳಚ್ಚು ಕಲಿಯುವವರಿಗೆ ಅನುಕೂಲವಾಗುತ್ತದೆ. ಆಸಕ್ತ ತಂತ್ರಜ್ಞರು ಇತ್ತ ಗಮನ ಹರಿಸಬಹುದಾಗಿದೆ.
ಉ: ಅಂತಹ ತಂತ್ರಾಂಶ ನನಗೆ ತಿಳಿದಂತೆ ಇಲ್ಲ. ಹೌದು. ತಂತ್ರಾಂಶ ತಯಾರಕರು ಹಾಗೂ ಆಸಕ್ತರು ಈ ಕಡೆ ಗಮನ ಹರಿಸಬೇಕು.

ಕಂಪ್ಯೂತರ್ಲೆ

ಇನ್ನೊಂದು ಗಣಕ (ತ)ಗಾದೆ:

ಸೂರ್ಯ ಲಾಗ್‌ಔಟ್ ಆದನೆಂದು ಚಿಂತಿಸುತ್ತ ಕುಳಿತರೆ ಲಾಗ್‌ಇನ್ ಆದ ಚಂದಿರನ ಸೌಂದರ್ಯವನ್ನು ಆನಂದಿಸುವುದನ್ನು ಕಳಕೊಳ್ಳುತ್ತೀರಿ

3 ಕಾಮೆಂಟ್‌ಗಳು: