ಸೋಮವಾರ, ಮೇ 14, 2012

ಗಣಕಿಂಡಿ - ೧೫೬ (ಮೇ ೦೭, ೨೦೧೨)

ಅಂತರಜಾಲಾಡಿ

ಹಾಡು ಕೇಳಿ

ಅಂತರಜಾಲ ಮೂಲಕ ಭಾರತೀಯ ಚಲನಚಿತ್ರಗೀತೆ, ಭಕ್ತಿಗೀತೆ, ಹಾಗೂ ಇತರೆ ಹಾಡುಗಳನ್ನು ಆಲಿಸಬೇಕೇ? ಅಂತಹ ಒಂದು ಜಾಲತಾಣ gaana.com. ಇದು ಇತ್ತೀಚೆಗಷ್ಟೆ ತಯಾರಾದ ಜಾಲತಾಣ. ಸುಮಾರು ಲಕ್ಷಕ್ಕೂ ಮೀರಿ ಹಾಡುಗಳು ಇಲ್ಲಿವೆ. ಹಾಡುಗಳನ್ನು ಹಿಂದಿ, ಕನ್ನಡ, ತಮಿಳು ಇತ್ಯಾದಿಯಾಗಿ ವಿಭಜಿಸಲಾಗಿದೆ. ಹಾಗೆಯೇ ಗಾಯಕ, ಸಿನಿಮಾ ಇತ್ಯಾದಿಯಾಗಿಯೂ ವಿಭಜಿಸಲಾಗಿದೆ. ಇದರ ಹುಡುಕುವ ಸವಲತ್ತು ತುಂಬ ಚೆನ್ನಾಗಿದೆ. ಅಂತರಜಾಲದಲ್ಲೇ ಆಲಿಸಬಹುದು. ಜೊತೆಗೆ ನಿಮ್ಮಲ್ಲಿ ಆಪಲ್ ಐಪ್ಯಾಡ್ ಇದ್ದರೆ ಅದಕ್ಕೆಂದೇ ಪ್ರತ್ಯೇಕ ಆಪ್ (app) ದೊರೆಯುತ್ತದೆ. ಇದೇ ಮಾದರಿಯ ಇನ್ನೂ ಎರಡು ಖ್ಯಾತ ಜಾಲತಾಣಗಳು - www.musicindiaonline.com, www.raaga.com.

ಡೌನ್‌ಲೋಡ್

ಸರಳ ವೀಡಿಯೋ

ಗಣಕದಲ್ಲಿ ವೀಡಿಯೋ ತಯಾರಿಸಲು ಹಾಗೂ ಈಗಾಗಲೇ ಇರುವ ವೀಡಿಯೋಗಳನ್ನು ಸಂಪಾದಿಸಲು (ಎಡಿಟ್ ಮಾಡಲು) ಅನುವು ಮಾಡಿಕೊಡುವ ತಂತ್ರಾಂಶಗಳು ನೂರಾರಿವೆ. ಹೆಚ್ಚಿನವು ದುಬಾರಿ ವಾಣಿಜ್ಯಕ ತಂತ್ರಾಂಶಗಳು. ಕೆಲವು ಉಚಿತ ಕೂಡ ಇವೆ. ಅಂತಹ ಒಂದು ಉಚಿತ ತಂತ್ರಾಂಶ Ezvid. ಇದನ್ನು ಬಳಸಿ ಸಂಪೂರ್ಣ ಹೊಸ ವೀಡಿಯೋ ತಯಾರಿಸಬಹುದು ಹಾಗೂ ಈಗಾಗಲೆ ಇರುವ ವೀಡಿಯೋಗಳನ್ನು ಸಂಪಾದಿಸಬಹುದು. ವೀಡಿಯೋ ಮಾಡಲು ಕ್ಯಾಮರಾದಿಂದ ಕ್ಲಿಪ್ ಅಥವಾ ಸ್ಥಿರ ಚಿತ್ರಗಳನ್ನು ಬೇಕಿದ್ದರೂ ಬಳಸಬಹುದು. ಉಚಿತ ಸಂಗೀತವೂ ಇದೆ. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.ezvid.com.

e - ಸುದ್ದಿ

೫ ಡಾಲರ್‌ಗೆ ಮಿಥ್ಯಾ ಗರ್ಲ್‌ಫ್ರೆಂಡ್

ಫೇಸ್‌ಬುಕ್‌ನಲ್ಲಿ ವೈವಾಹಿಕ ಸ್ಥಿತಿಯ ಮುಂದೆ ಏಕಾಂಗಿ ಎಂದು ಬರೆದುಕೊಳ್ಳುವುದು ಕೆಲವರಿಗೆ ಅವಮಾನದ ಸಂಗತಿ ಆಗಿರುತ್ತದೆ. ಇದು ಅಮೆರಿಕದಲ್ಲಿ. ಅಲ್ಲಿ ಗರ್ಲ್‌ಫ್ರೆಂಡ್ ಇಲ್ಲದವನು ಕೆಲಸಕ್ಕೆ ಬಾರದವನು ಎಂದೆನಿಸಿಕೊಳ್ಳುತ್ತಾನೆ. ಅದಕ್ಕೆ ಏನು ಮಾಡುವುದು? ೫ ಡಾಲರ್ ಖರ್ಚು ಮಾಡುವುದು! ೫ ಡಾಲರ್‌ಗೆ ಫೇಸ್‌ಬುಕ್‌ನಲ್ಲಿ ವ್ಯವಹರಿಸಲು ಮಿಥ್ಯಾ ಗರ್ಲ್‌ಫ್ರೆಂಡ್ ದೊರೆಯುತ್ತಾಳೆ! ಆಕೆ ನಿಮ್ಮ ಜೊತೆ ವ್ಯವಹರಿಸುತ್ತಾಳೆ ಕೂಡ. ನೀವು ಒಂದು ಫೋಟೋ ಹಾಕಿದರೆ ಅದಕ್ಕೆ ಇಷ್ಟಪಟ್ಟಿದ್ದೇನೆ ಎಂದು ಕ್ಲಿಕ್ ಮಾಡುತ್ತಾಳೆ. ನಮ್ಮ ಪೋಸ್ಟಿಂಗ್‌ಗೆ ಕಮೆಂಟ್ ಹಾಕುತ್ತಾಳೆ. ಆದರೆ ನಿಜವಾಗಿ “ಆಕೆ” ಇರುವುದಿಲ್ಲ. ಅದು ಒಂದು ಕಂಪ್ಯೂಟರ್ ಜನಿತ ರೋಬೋಟ್ ತಂತ್ರಾಂಶ ಆಗಿರುತ್ತದೆ.    

e- ಪದ

ಪತ್ರವಿಲೀನ (mail merge) - ದತ್ತಸಂಚಯದಲ್ಲಿ (ಡಾಟಾಬೇಸ್) ಅಡಕವಾಗಿರುವ ಮಾಹಿತಿಯನ್ನು (ಉದಾ -ಹೆಸರು, ವಿಳಾಸ) ಬಳಸಿ ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ಪತ್ರಗಳನ್ನು ತಯಾರಿಸಿ ಕಳುಹಿಸುವುದು. ಉದಾಹರಣೆಗೆ ಒಂದು ವಿಚಾರಸಂಕಿರಣದಲ್ಲಿ ೫೦ ಮಂದಿ ಸಂಪನ್ಮೂಲ ವ್ಯಕ್ತಿಗಳು ೫೦ ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡುವುವರಿದ್ದಾರೆ. ಅವರಿಗೆಲ್ಲ ಒಂದು ಪತ್ರವನ್ನು ಈ ಬಗ್ಗೆ ಅವರ ಭಾಷಣದ ವಿಷಯವನ್ನು ನಮೂದಿಸಿ ಕಳುಹಿಸಬೇಕಾಗಿದೆ. ಇಂತಹ ಸಂದರ್ಭಗಳಲ್ಲಿ ಮೈಲ್‌ಮರ್ಜ್ ಉಪಯೋಗಕ್ಕೆ ಬರುತ್ತದೆ.

e - ಸಲಹೆ

ವಿನಯ್ ಅವರ ಪ್ರಶ್ನೆ: ಸರಳವಾಗಿರುವಂತಹ ಒಂದು ವೀಡಿಯೋ ಎಡಿಟಿಂಗ್ ತಂತ್ರಾಂಶ ಯಾವುದಾದರೂ ಇದ್ದರೆ ದಯವಿಟ್ಟು ತಿಳಿಸಿ.
ಉ: ಇದೇ ಸಂಚಿಕೆಯಲ್ಲಿ ಸೂಚಿಸಿರುವ Ezvid ತಂತ್ರಾಂಶ ಬಳಸಿ ನೋಡಿ.

ಕಂಪ್ಯೂತರ್ಲೆ

ಗಣಕವಾಡು

ಕುಮಾರವ್ಯಾಸನೆಂದನಂದು
ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ

ಇಂದಿನ ಮರಿವ್ಯಾಸರನ್ನುತ್ತಾರೆ
ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ
ಕೀಲಿಮಣೆಯ ಕುಟ್ಟಿಯೇ ಕಲಿತೆನೆಂಬೊಂದಗ್ಗಳಿಕೆ

2 ಕಾಮೆಂಟ್‌ಗಳು:

  1. ಅಂತರಜಾಲದ ಮೂಲಕ ಹಾಡುಕೇಳುವ ತಾಣಗಳಲ್ಲಿ saavn.com ಕೂಡ ಚೆನ್ನಾಗಿದೆ. ಗಾನಾ ಡಾಟ್ ಕಾಮ್‌ನಲ್ಲಿಲ್ಲದ ಕೆಲ ಅಪರೂಪದ ಹಾಡುಗಳು ಇಲ್ಲಿ ಸಿಕ್ಕವು. ಗೂಗಲ್ ಮ್ಯೂಸಿಕ್‌ನ ಭಾರತೀಯ ಆವೃತ್ತಿಯ ಮೂಲಕ (www.google.co.in/music) ನನಗೆ ಇದರ ಪರಿಚಯವಾಯಿತು. ಅಂದಹಾಗೆ ಗೂಗಲ್ ಮ್ಯೂಸಿಕ್‌‌ನಲ್ಲಿರುವ ಸಂಗ್ರಹವೂ [ಬೇರೆಬೇರೆ ತಾಣಗಳಿಗೆ ಲಿಂಕು] ಚೆನ್ನಾಗಿಯೇ ಇದೆ!

    ಪ್ರತ್ಯುತ್ತರಅಳಿಸಿ
  2. Samsung Galaxy tab 10.1, ಇದರಲ್ಲಿ ಕನ್ನಡ ಲಿಪಿ ತಂತ್ರಾಂಶ ಬಳಸಬಹುದಾದರೆ ಅದು ಹೇಗೆ? - ತಿಳಿಸಿ.

    ಇನ್ನು gaana.com, ಇದರಲ್ಲಿ ಶಾಸ್ತ್ರೀಯ ಸಂಗೀತದ(ಹಿಂದುಸ್ಥಾನಿ/ಕರ್ನಾಟಕಿ) ಅಪರೂಪದ ಸಂಗ್ರಹ ಇರೋದ್ರಿಂದ, ನನಗೆ ತುಂಬಾ ಇಷ್ಟವಾಗಿದೆ.

    ಪ್ರತ್ಯುತ್ತರಅಳಿಸಿ