ಸೋಮವಾರ, ಅಕ್ಟೋಬರ್ 12, 2009

ಗಣಕಿಂಡಿ - ೦೨೧ (ಅಕ್ಟೋಬರ್ ೧೨, ೨೦೦೯)

ಅಂತರಜಾಲಾಡಿ

ಜಾಲಬುದ್ಧಿವಂತರಾಗಿ

ಅಂತರಜಾಲದಲ್ಲಿ ವಿಹರಿಸುವಾಗ ಎಚ್ಚರವಾಗಿರಬೇಕು. ವೈರಸ್, ವರ್ಮ್‌ಗಳು ಧಾಳಿ ಇಡುವುದು ಅತಿ ಸಾಮಾನ್ಯ. ಇತ್ತೀಚೆಗಂತೂ ಫಿಶಿಂಗ್ ಹಾವಳಿಯೂ ಅಧಿಕವಾಗಿದೆ. ಮಕ್ಕಳು ಅಂತರಜಾಲವನ್ನು ಬಳಸುವಾಗ ದೊಡ್ಡವರು ಎಚ್ಚರಿಕೆ ವಹಿಸಬೇಕು. ಇಮೈಲ್ ವಿಳಾಸವನ್ನು ಜಾಲತಾಣಗಳಲ್ಲಿ ಎಲ್ಲೆಂದರಲ್ಲಿ ನೀಡುವಂತಿಲ್ಲ. ಅಂತರಜಾಲ ಬ್ಯಾಂಕಿಂಗ್ ಮಾಡುವವರ ಪ್ರವೇಶಪದ (ಪಾಸ್‌ವರ್ಡ್) ಕದಿಯುವ ತಂತ್ರಾಂಶಗಳೂ ಇವೆ. ಹೌದು ಸ್ವಾಮಿ, ಇಷ್ಟೆಲ್ಲ ತೊಂದರೆ ಇದ್ದರೆ ಅಂತರಜಾಲವನ್ನೇ ಬಳಸದೆ ಇರಬಹುದಲ್ಲ ಎನ್ನುತೀರಾ? ಹಾಗೇನಿಲ್ಲ. ಎಚ್ಚರದಿಂದಿರಬೇಕು, ಅಷ್ಟೆ. ಯಾವ ರೀತಿ ಎಚ್ಚರದಿಂದಿರಬೇಕು ಎಂದು ಕೇಳುತ್ತಿದ್ದೀರಾ? ಉತ್ತರಕ್ಕೆ getnetwise.org  ಜಾಲತಾಣಕ್ಕೆ ಭೇಟಿ ನೀಡಿ.  

ಡೌನ್‌ಲೋಡ್

ಬಿಟ್ಟು ಬಿಟ್ಟು ಡೌನ್‌ಲೋಡ್ ಮಾಡಿ

ಅಂತರಜಾಲದಿಂದ ದೊಡ್ಡ ಪೈಲುಗಳನ್ನು ಡೌನ್‌ಲೋಡ್ ಮಾಡುತ್ತಿರುವಾಗ ವಿದ್ಯುತ್ ಸರಬರಾಜು ನಿಂತರೆ, ಅಂತರಜಾಲ ಸಂಪರ್ಕ ಕಡಿತವಾದರೆ ಅಥವಾ ಅವಸರದ ಕಾರ್ಯ ನಿಮಿತ್ತ ನಿಮಗೆ ಹೊರಗೆ ಹೋಗಬೇಕಾಗಿದ್ದರೆ ಡೌನ್‌ಲೋಡನ್ನು ನಿಲ್ಲಿಸಬೇಕಾಗುತ್ತದೆ. ಮುಂದೆ ಆ ಡೌನ್‌ಲೋಡನ್ನು ಪುನ ಪ್ರಾರಂಭಿಸಿದಾಗ ಅದು ಮತ್ತೆ ಮೊದಲಿನಿಂದಲೇ ಪ್ರಾರಂಭಿಸುತ್ತದೆ. ಇಂತಹ ಸಂದರ್ಭದಲ್ಲಿ ಉಪಯೋಗಕ್ಕೆ ಬರುವುದು Orbit downloader ಎಂಬ ತಂತ್ರಾಂಶ. ಇದರ ಮೂಲಕ ಡೌನ್‌ಲೋಡ್ ಮಾಡಿದರೆ ಮೊದಲು ಎಲ್ಲಿ ತನಕ ಆಗಿತ್ತೋ ಅಲ್ಲಿಂದ ಮುಂದುವರೆಸಬಹುದು. ದೊಡ್ಡ ಫೈಲನ್ನು ಡೌನ್‌ಲೋಡ್ ಮಾಡುತ್ತಿರುವಿರಾದರೆ, ರಾತ್ರಿ ಹೊತ್ತು ಅದನ್ನು ಡೌನ್‌ಲೋಡಿಗೆ ಹಾಕಿ, ಡೌನ್‌ಲೋಡ್ ಆದೊಡನೆ ಗಣಕವನ್ನು ಸ್ವಿಚ್ ಆಫ್ ಮಾಡು ಎಂದು ಆದೇಶ ನೀಡಿ ನಿರಾತಂಕವಾಗಿ ನಿದ್ದೆ ಮಾಡಬಹುದು. ಈ ಉಚಿತ ತಂತ್ರಾಂಶ ಸಿಗುವ ಜಾಲತಾಣ orbitdownloader.com.

e - ಸುದ್ದಿ

ಹುಳಗಳ ವಿರುದ್ಧ ಇರುವೆ

ಹೂವು, ತರಕಾರಿ ಅಥವಾ ಉಪಯುಕ್ತ ಬೆಳೆಗಳ ಮೇಲೆ ಧಾಳಿ ಮಾಡುವ ಹುಳ, ಕೀಟಗಳನ್ನು ನಾಶ ಮಾಡಲು ಅಂತಹ ಕೀಟಗಳನ್ನೇ ಹುಡುಕಿ ಅವುಗಳ ಮೇಲೆ ಧಾಳಿ ಮಾಡುವ ಕೀಟಗಳನ್ನು ತಯಾರಿ ಮಾಡಿ ಬಳಸುತ್ತಿರುವ ವಿಷಯ ಗೊತ್ತಿರಬಹುದು. ಈಗ ಗಣಕಗಳಲ್ಲಿ ಅದೇ ವಿಧಾನವನ್ನು ಬಳಸಿ ಜಯಶೀಲರಾಗಿದ್ದಾರೆ. ಗಣಕಜಾಲಗಳಿಗೆ ಧಾಳಿ ಮಾಡಿ ಅವುಗಳನ್ನು ಪೀಡಿಸುವ ಗಣಕ ವೈರಸ್‌ಗಳಿಗೆ ವರ್ಮ್ (ಹುಳ?) ಎನ್ನುತ್ತಾರೆ. ಈಗ ಅಮೇರಿಕಾದ ಪ್ರಯೋಗಶಾಲೆಯೊಂದರಲ್ಲಿ ಇಂತಹ ಹುಳಗಳನ್ನೇ ಹುಡುಕಿ ಅವುಗಳ ಮೇಲೆ ಧಾಳಿ ಮಾಡುವ ಡಿಜಿಟಲ್ ಇರುವೆಗಳನ್ನು ತಯಾರಿಸಿದ್ದಾರೆ. ಜೈವಿಕ ಇರುವೆಗಳ ಮಾದರಿಯಲ್ಲೇ ಇವು ಗಣಕಜಾಲದಲ್ಲಿ ಹುಳ ಪತ್ತೆಯಾದಾಗ ಗುಂಪಾಗಿ ಅದರ ಮೇಲೆ ಧಾಳಿ ಮಾಡಿ ಅದನ್ನು ನಾಶ ಮಾಡುತ್ತವೆ. ಬಹುಶಃ ಇನ್ನೊಂದು ವರ್ಷದ ಒಳಗೆ ಇವು ನಮ್ಮ ಬಳಕೆಗೆ ದೊರಕಬಹುದು.

e- ಪದ

ಝೋಂಬಿ (zombie) -ಕಿಡಿಗೇಡಿಗಳ ವಶಕ್ಕೊಳಪಟ್ಟು ಇನ್ನೊಂದು ಗಣಕಜಾಲದ ಮೇಲೆ ಧಾಳಿ ಮಾಡಲು ಬಳಕೆಯಾಗುತ್ತಿರುವ ಗಣಕ. ಗಣಕ ಜಾಲದೊಳಗೆ ಅನಧಿಕೃತವಾಗಿ ಪ್ರವೇಶಿಸುವವರಿಗೆ ಹ್ಯಾಕರ್‌ಗಳೆನ್ನುತ್ತಾರೆ. ಕೆಲವೊಮ್ಮ ಈ ಹ್ಯಾಕರ್‌ಗಳು ತಮ್ಮ ಅಂಕೆಗೊಳಪಟ್ಟ ಗಣಕವನ್ನು ಬಳಸಿ ಇನ್ನೊಂದು ಜಾಲತಾಣಕ್ಕೆ ಅಥವಾ ಗಣಕಜಾಲಕ್ಕೆ ಧಾಳಿ ಇಡುತ್ತಾರೆ. ಪ್ರಪಂಚಾದ್ಯಂತ ಸಾವಿರಾರು ಗಣಕಗಳನ್ನು ಏಕಕಾಲಕ್ಕೆ ತಮ್ಮ ವಶಕ್ಕೆ ತೆಗೆದುಕೊಂಡು ಹೀಗೆ ಧಾಳಿ ಮಾಡಿದಾಗ ಧಾಳಿಗೊಳಪಟ್ಟ ಜಾಲತಾಣ ಕುಸಿಯುತ್ತದೆ. ಇದಕ್ಕೆ denial of service attack ಎನ್ನುತ್ತಾರೆ.

e - ಸಲಹೆ

ನೀವು ಕನ್ನಡದಲ್ಲಿ ಪಿಡಿಎಫ್ ಮಾದರಿಯ ಕಡತಗಳನ್ನು ತಯಾರಿಸಿ ಇತರರಿಗೆ ಕಳುಹಿಸಿದಾಗ ಕೆಲವೊಮ್ಮೆ ಅವರ ಗಣಕದಲ್ಲಿ ಅದನ್ನು ಓದಲು ಆಗದೆ ಇರುವ ಸಾಧ್ಯತೆಗಳಿರುತ್ತವೆ. ಇದಕ್ಕೆ ಕಾರಣ ಅವರ ಗಣಕದಲ್ಲಿ ನೀವು ಬಳಸಿದ ಕನ್ನಡದ ಫಾಂಟ್ ಇಲ್ಲದಿರುವುದು ಮತ್ತು ನೀವು ಬಳಸಿದ ಫಾಂಟನ್ನು ಪಿಡಿಎಫ್ ಕಡತದಲ್ಲಿ ಅಡಕವಾಗಿಸದಿರುವುದು. ನೀವು ಆಗಸ್ಟ್ ೨೫, ೨೦೦೯ರ ಗಣಕಿಂಡಿಯಲ್ಲಿ ಸೂಚಿಸಿದ PDFCreator ಬಳಸುತ್ತಿರುವವರಾದರೆ, ಅದರಲ್ಲಿ ಒಂದು ಆಯ್ಕೆ ಇದೆ. ಅದರ ಆಯ್ಕೆ (options) ಯಲ್ಲಿ ಪಿಡಿಎಫ್ ವಿಭಾಗದಲ್ಲಿ ಫಾಂಟ್ ಎಂಬಲ್ಲಿ Embed all fonts ಎಂದು ಆಯ್ಕೆ ಮಾಡಿ.

ಕಂಪ್ಯೂತರ್ಲೆ

ಗಣಕವೇದವಾಕ್ಯ

ವಾಟಾಳ್ ನಾಗರಾಜ್ ಕನ್ನಡಕ ತೆಗೆಯುವ ತನಕ,  ಜಯಲಲಿತ ಮದುವೆಯಾಗುವ ತನಕ, ಕರುಣಾನಿಧಿ ಕನ್ನಡಕ ತೆಗೆಯುವ ತನಕ, ದೇವೇಗೌಡ ಪ್ಯಾಂಟ್ ಧರಿಸುವ ತನಕ, ಬಂಗಾರಪ್ಪ ಪಕ್ಷ ಬದಲಿಸುವುದನ್ನು ನಿಲ್ಲಿಸುವ ತನಕ, ರಾಜಕಾರಣಿಗಳು ಸುಳ್ಳು ಹೇಳುವುದನ್ನು ನಿಲ್ಲಿಸುವ ತನಕ ನಿಮ್ಮ ಗಣಕದಲ್ಲಿ ವೈರಸ್ ಇದ್ದೇ ಇರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ