ಮಂಗಳವಾರ, ಮೇ 11, 2010

ಗಣಕಿಂಡಿ - ೦೫೧ (ಮೇ ೧೦, ೨೦೧೦)

ಅಂತರಜಾಲಾಡಿ

ಫಾಂಟ್ ತಯಾರಿಸಬೇಕೇ?


ಯಾವುದೇ ಕಡತ ತಯಾರಿಸಬೇಕಾದರೂ ಒಂದು ಫಾಂಟ್ ಬೇಕೇ ಬೇಕು. ಸಾಮಾನ್ಯವಾಗಿ ಗಣಕದ ಕಾರ್ಯಾಚರಣೆಯ ವ್ಯವಸ್ಥೆ (ಉದಾ - ವಿಂಡೋಸ್) ಜೊತೆ ಹಲವಾರು ಫಾಂಟ್‌ಗಳು ನಿಮಗೆ ಉಚಿತವಾಗಿ ದೊರೆತಿರುತ್ತವೆ. ನಿಮ್ಮದೇ ಫಾಂಟ್ ತಯಾರಿಸಬೇಕೇ? ಅದಕ್ಕಾಗಿ ಹಲವಾರು ದುಬಾರಿ ತಂತ್ರಾಂಶಗಳು ಲಭ್ಯವಿವೆ. ಉಚಿತವಾಗಿ ಅಂತರಜಾಲ ಮೂಲಕ ಫಾಂಟ್ ತಯಾರಿಸಲು ಈಗ ಒಂದು ಸವಲತ್ತು ಲಭ್ಯವಿದೆ. ಅದಕ್ಕಾಗಿ ನೀವು ಭೇಟಿ ನೀಡಬೇಕಾದ ಜಾಲತಾಣ fontstruct.fontshop.com. ಈ ಜಾಲತಾಣವನ್ನು ಬಳಸಿ ನೀವು ತಯಾರಿಸಿದ ಫಾಂಟ್ ಮೇಲೆ ಸಂಪೂರ್ಣ ಹಕ್ಕು ನಿಮ್ಮದಾಗಿರುತ್ತದೆ. ಅದನ್ನು ನೀವು ಬೇಕಾದ ರೀತಿ ಬಳಸಬಹುದು ಹಾಗೂ ಜಗತ್ತಿಗೆಲ್ಲ ಹಂಚಬಹುದು.

ಡೌನ್‌ಲೋಡ್

ವೇಳಾಪಟ್ಟಿ ತಯಾರಿಸಿ

ನೀವು ಶಾಲೆಯ ಮುಖ್ಯೋಪಾಧ್ಯಾಯರೇ? ಅಥವಾ ನಿಮ್ಮ ಶಾಲೆಯ ವೇಳಾಪಟ್ಟಿ (ಟೈಮ್‌ಟೇಬಲ್) ತಯಾರಿಸುವ ಜವಾಬ್ದಾರಿ ನಿಮ್ಮ ತಲೆ ಮೇಲಿದೆಯೇ? ಈ ವೇಳಾಪಟ್ಟಿ ತಯಾರಿಸುವುದು ತುಂಬ ತಲೆನೋವಿನ ಕೆಲಸ. ಈ ವೇಳಾಪಟ್ಟಿಯನ್ನು ಗಣಕ ಬಳಸಿ ತಯಾರಿಸುವ ತಂತ್ರಾಂಶವೊಂದು ಸಿಗುವಂತಿದ್ದರೆ ಚೆನ್ನಾಗಿತ್ತು ಎಂದು ಅನಿಸಿದೆಯೇ? ಹಾಗಿದ್ದಲ್ಲಿ ನಿಮಗೆ ಬೇಕು FET ತಂತ್ರಾಂಶ. ಇದು ಸಂಪೂರ್ಣ ಉಚಿತ ಹಾಗೂ ಮುಕ್ತ ತಂತ್ರಾಂಶ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.lalescu.ro/liviu/fet.


e - ಸುದ್ದಿ

ಗೂಗ್ಲ್‌ಗೆ ದಂಡ

ಗೂಗ್ಲ್ ಒಡೆತನಕ್ಕೆ ಸೇರಿದ ಆರ್ಕುಟ್ ಜಾಲತಾಣ ಎಲ್ಲರಿಗೂ ಗೊತ್ತಿರಬಹುದು. ಅದರಲ್ಲಿ ಯಾರು ಬೇಕಾದರೂ ತಮಗಿಷ್ಟ ಬಂದಂತೆ ಮಾಹಿತಿ ಸೇರಿಸಬಹುದು. ಬ್ರೆಝಿಲ್ ದೇಶದಲ್ಲಿ ಈ ಆರ್ಕುಟ್ ಜಾಲತಾಣದಲ್ಲಿ ಯಾರೋ ಕಿಡಿಗೇಡಿ ಕ್ರೈಸ್ತ ಪಾದ್ರಿಯೊಬ್ಬರ ಬಗ್ಗೆ ಕೆಟ್ಟ ಕೆಟ್ಟದಾಗಿ ಏನೇನೋ ಬರೆದಿದ್ದ. ಇದಕ್ಕಾಗಿ ಬ್ರೆಝಿಲ್ ದೇಶದ ನ್ಯಾಯಾಲಯವು ಗೂಗ್ಲ್‌ನ್ನು ಹೊಣೆಯೆಂದು ತೀರ್ಮಾನಿಸಿ ಗೂಗ್ಲ್‌ಗೆ ಸುಮಾರು ೮೫೦೦ ಡಾಲರುಗಳಷ್ಟು ದಂಡ ವಿಧಿಸಿದೆ. ಆರ್ಕುಟ್‌ನಲ್ಲಿ ಯಾರು ಬೇಕಾದರೂ ಏನನ್ನಾದರೂ ಬರೆಯಬಹುದು. ಅದಕ್ಕಾಗಿ ಗೂಗ್ಲ್‌ನ್ನು ಹೊಣೆಗಾರನನ್ನಾಗಿ ತೀರ್ಮಾನಿಸಬಾರದು ಎಂಬ ಗೂಗ್ಲ್‌ನವರ ವಾದವನ್ನು ನ್ಯಾಯಾಲಯವು ಮಾನ್ಯ ಮಾಡಲಿಲ್ಲ.

e- ಪದ

ಏರೋ (Aero) - ವಿಂಡೋಸ್ ವಿಸ್ತ ಮತ್ತು ೭ ರಲ್ಲಿ ಅಳವಡಿಸಿರುವ ಇಂಟರ್‌ಫೇಸ್. ಇದನ್ನು ಚಾಲನೆಗೊಳಿಸಿದಲ್ಲಿ ನಿಮ್ಮ ಗಣಕದ ಪರದೆಯಲ್ಲಿ ಕಿಟಿಕಿಗಳು ತುಂಬ ಸುಂದರವಾಗಿ ಕಾಣಿಸುತ್ತವೆ. ಕಿಟಿಕಿಯ ಮೇಲಿನ ಬಾರ್ ಅರೆಪಾರದರ್ಶಕವಾಗಿ ಕಾನಿಸುತ್ತವೆ. ವಿಂಡೋಸ್ ೭ ರಲ್ಲಿ ಇನ್ನೂ ಒಂದು ಸವಲತ್ತನ್ನು ನೀಡಿದ್ದಾರೆ. ಈ ಬಾರ್‌ನ್ನು ಮೌಸ್‌ನಲ್ಲಿ ಹಿಡಿದು ಜೋರಾಗಿ ಅಳ್ಳಾಡಿಸಿದರೆ ಆ ಕಿಟಿಕಿ ಒಂದನ್ನು ಬಿಟ್ಟು ಉಳಿದೆಲ್ಲ ಕಿಟಿಕಿಗಳು ಕೆಳಗಿನ ಸ್ಟಾಟಸ್‌ಬಾರ್‌ನಲ್ಲಿ ಚಿಕ್ಕದಾಗಿ ಕುಳಿತುಕೊಳ್ಳುತ್ತವೆ.

e - ಸಲಹೆ

ಸುದರ್ಶನ ಅವರ ಪ್ರಶ್ನೆ: ನನ್ನಲ್ಲಿ ಒಂದು ಕ್ರಿಯೇಟಿವ್ ಎಂಪಿ೩ ಪ್ಲೇಯರ್ ಇದೆ. ಅದರಲ್ಲಿ ಕೆಲವು ಹಾಡುಗಳಿವೆ. ಇತ್ತೀಚೆಗೆ ಒಂದು ಖಾಯಿಲೆ ಅದಕ್ಕೆ ತಗುಲಿದೆ. ಅದನ್ನು ಗಣಕದ ಯುಎಸ್‌ಬಿ ಡ್ರೈವ್‌ನಲ್ಲಿ ತೂರಿಸಿದೊಡನೆ ಗಣಕ ತಟಸ್ಥವಾಗುತ್ತದೆ (ಹ್ಯಾಂಗಿಂಗ್). ಇದಕ್ಕೇನು ಪರಿಹಾರ?
ಉ: ನಿಮ್ಮ ಎಂಪಿ೩ ಪ್ಲೇಯರ್‌ನಲ್ಲಿ ವೈರಸ್ ಇರಬಹುದು. ನಿಮ್ಮಲ್ಲಿ ಉಬುಂಟು ಕಾರ್ಯಾಚರಣೆಯ ವ್ಯವಸ್ಥೆ ಇದ್ದಲ್ಲಿ ಗಣಕವನ್ನು ಅದಕ್ಕೆ ಬೂಟ್ ಮಾಡಿ. ನಂತರ ಎಂಪಿ೩ ಪ್ಲೇಯರನ್ನು ಸಂಪರ್ಕಿಸಿ, ಅದರಲ್ಲಿರುವ ಮುಖ್ಯ ಮಾಹಿತಿಗಳನ್ನು ಪ್ರತಿ ಮಾಡಿಕೊಂಡು ಅದನ್ನು ಪೂರ್ತಿ ಫಾರ್ಮಾಟ್ ಮಾಡಿ. ನಂತರ ವಿಂಡೋಸ್‌ಗೆ ಬೂಟ್ ಮಾಡಿ. ಕ್ರಿಯೇಟಿವ್ ಕಂಪೆನಿಯವರ (www.creative.com) ಜಾಲತಾಣದಿಂದ MP3 player recovery tool ಎಂಬ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿ ಅದರ ಮೂಲಕ ಎಂಪಿ೩ ಪ್ಲೇಯರ್‌ನ್ನು ಪುನಃ ಕೆಲಸ ಮಾಡುವಂತೆ ಸರಿಪಡಿಸಿಕೊಳ್ಳಬಹುದು.
   
ಕಂಪ್ಯೂತರ್ಲೆ

ಕೋಲ್ಯ ಗಣಕ ತೆಗೆದುಕೊಂಡ. ಮರುದಿನ ಕಂಪೆನಿಗೆ ಫೋನ್ ಮಾಡಿ ದೂರು ನೀಡಿದ “ನನ್ನ ಗಣಕದಲ್ಲಿ ಸಿ.ಡಿ. ಹಾಕಿದ್ದೇನೆ. ಈಗ ಹೊರಗೆ ತೆಗೆಯಲು ಬರುತ್ತಿಲ್ಲ. ನಿಮ್ಮ ಇಂಜಿನಿಯರ್ ಕಳುಹಿಸಿ”. ಕಂಪೆನಿಯಿಂದ ಇಂಜಿನಿಯರ್ ಬಂದು ಪರಿಶೀಲಿಸಿದ. ಕೋಲ್ಯ ಏನು ಮಾಡಿದ್ದ ಊಹಿಸಿಬಲ್ಲಿರಾ? ಆತನ ಗಣಕದಲ್ಲಿ ಸಿ.ಡಿ. ಡ್ರೈವ್ ಮತ್ತು ಗಣಕದ ಕೇಸಿಂಗ್ ಮಧ್ಯೆ ಸ್ವಲ್ಪ ಖಾಲಿ ಜಾಗ ಇತ್ತು. ಆತ ಸಿ.ಡಿ.ಯನ್ನು ಆ ಕಿಂಡಿಯಲ್ಲಿ ತೂರಿಸಿದ್ದ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ