ಸೋಮವಾರ, ಸೆಪ್ಟೆಂಬರ್ 6, 2010

ಗಣಕಿಂಡಿ - ೦೬೮ (ಸಪ್ಟಂಬರ್ ೦೬, ೨೦೧೦)

ಅಂತರಜಾಲಾಡಿ

ಮುಕ್ತ ಸೃಜನಶೀಲರು

ನೀವು ಒಬ್ಬ ಸೃಜನಶಿಲ ಲೇಖಕ ಅಥವಾ ಕಲಾವಿದರಾಗಿರಬಹುದು. ನಿಮ್ಮ ಸೃಷ್ಟಿಯನ್ನು ಇತರರಿಗೆ ಹಂಚಲು ನಿಮಗೆ ಇಷ್ಟವಿದೆ. ಆದರೆ ಅದನ್ನು ಯಾವ ಪರವಾನಗಿಯಲ್ಲಿ ನೀಡುತ್ತೀರಿ? ಸಂಪೂರ್ಣ ಉಚಿತವೇ? ಅದನ್ನು ಲಾಭರಹಿತ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬಹುದು; ವಾಣಿಜ್ಯಕ ಉದ್ದೇಶಕ್ಕೆ ಬಳಸಿಕೊಳ್ಳಬೇಕಿದ್ದರೆ ನಿಮಗೆ ಹಣ ನೀಡಬೇಕು ಆಥವಾ ವಾಣಿಜ್ಯಕ ಉದ್ದೇಶಕ್ಕೆ ಖಂಡಿತ ಪರವಾನಗಿ ಇಲ್ಲ; ಬದಲಾವಣೆ ಮಾಡಲು ಪರವಾನಗಿ ಇದೆಯೇ? ಇದ್ದರೆ ಯಾವ ರೀತಿ? -ಹೀಗೆ ಹಲವಾರು ಸಾಧ್ಯತೆಗಳಿವೆ. ಹೀಗೆ ಎಲ್ಲ ನಮೂನೆಯ ಪರವಾನಗಿಗಳನ್ನು ಪಟ್ಟಿ ಮಾಡಿ ಅದರಲ್ಲಿ ಯಾವುದು ಬೇಕೋ ಅದನ್ನು ಬಳಸಲು ನಿಮಗೆ ಅನುವು ಮಾಡಿಕೊಡುವ ಜಾಲತಾಣ creativecommons.org. ಇದನ್ನು ಸಾಮಾನ್ಯವಾಗಿ ತಂತ್ರಾಂಶ ಕ್ಷೇತ್ರದಲ್ಲಿ ಬಳಕೆಯಾಗುವ ಮುಕ್ತ ತಂತ್ರಾಂಶ (opensource software) ಪರವಾನಗಿಗೆ ಪರ್ಯಾಯವಾಗಿ ಬಳಸುತ್ತಾರೆ. ಆದರೆ ಇವೆರಡೂ ಒಂದೇ ಅಲ್ಲ.

ಡೌನ್‌ಲೋಡ್

e-ಪುಸ್ತಕ ಓದುಗರಿಗೆ  

ಇತ್ತೀಚೆಗೆ ವಿದ್ಯುನ್ಮಾನ ಪುಸ್ತಕಗಳು ತುಂಬ ಜನಪ್ರಿಯವಾಗುತ್ತಿವೆ. ಇವುಗಳಲ್ಲಿ ಅತ್ಯಂತ ಸರಳವಾಗಿರುವುದು ಎಂದರೆ ಅಡೋಬಿ ಪಿಡಿಎಫ್ ವಿಧಾನದ ಕಡತಗಳು. ಇವುಗಳನ್ನು ಸುಮ್ಮನೆ ಮೌಸ್ ಬಳಸಿ ಮುಂದಿನ ಪುಟಕ್ಕೆ, ಅಂದರೆ ಕೆಳಗಡೆ, ಸರಿಸಿ ಓದಬಹುದು. ಈ ರೀತಿ ಓದುವುದರಿಂದ ಪುಸ್ತಕ ಓದಿದ ಪೂರ್ತಿ ಭಾವನೆ ಬರುವುದಿಲ್ಲ. ಪುಸ್ತಕ ಓದಿದಂತೆ ಒಂದು ಪುಟ ಆದ ನಂತರ ಇನ್ನೊಂದು ಪುಟಕ್ಕೆ ಹೋಗಬೇಕಾದರೆ ಪುಟವನ್ನು ಗಣಕದ ಪರದೆಯಲ್ಲಿ ತಿರುವಿದಂತೆ ಭಾಸವಾಗುವಂತೆ ಮಾಡಿದರೆ ಚೆನ್ನಾಗಿರುತ್ತದಲ್ಲವೇ? ಇಂತಹ ತಂತ್ರಾಂಶಗಳು ಹಲವಾರಿವೆ. ಅಂತಹ ಒಂದು ಉಚಿತ ತಂತ್ರಾಂಶ martview. ಇದನ್ನು ಬಳಸಿ ಅವರು ತಮ್ಮ ಅಂತರಜಾಲತಾಣದಲ್ಲಿ ನೀಡಿರುವ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿ ಓದಬಹುದು ಮಾತ್ರವಲ್ಲ, ನಿಮ್ಮ ಗಣಕದಲ್ಲಿರುವ ಯಾವುದೇ ಪಿಡಿಎಫ್ ಪುಸ್ತಕವನ್ನು ಕೂಡ ಈ ವಿಧಾನದಲ್ಲಿ ಓದಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://martview.com/index.php

e - ಸುದ್ದಿ

ತನ್ನನ್ನು ತಾನೆ ವಿವರಿಸಿ ಸಿಕ್ಕಿಹಾಕಿಕೊಂಡ

ಪತ್ರಿಕೆಗಳಲ್ಲಿ ಬರುವ ವರದಿಗಳಲ್ಲಿ ತಪ್ಪಿರುವುದು ಸಹಜ. ಘಟನೆ ನಡೆದ ಸ್ಥಳದಲ್ಲಿ ಇದ್ದವರಿಗೆ ತಪ್ಪು ವರದಿ ಓದಿದಾಗ ಮೈ ಉರಿಯುತ್ತದೆ. ಸಂಪಾದಕ ಅಥವಾ ವರದಿಗಾರರಿಗೆ ಪತ್ರ ಅಥವಾ ಇಮೈಲ್ ಮೂಲಕ ಸರಿಯಾದ ಘಟನೆಯನ್ನು ವಿವರಿಸಿ ಬರೆಯುತ್ತಾರೆ. ಜರ್ಮನಿಯಲ್ಲಿ ಹೀಗೆಯೇ ಆಯಿತು. ಒಬ್ಬ ದರೋಡೆಗಾರನ ಚಹರೆಯನ್ನು ಪತ್ರಿಕೆಯಲ್ಲಿ ವಿವರಿಸಿದುದು ಸರಿಯಿರಲಿಲ್ಲ. ಆತನ ವಿವರ ಸರಿಯಿಲ್ಲ, ಅದು ಈ ರೀತಿ ಇರಬೇಕು, ಎಂದು ವಿವರಿಸುವ ಇಮೈಲ್ ಪತ್ರಿಕಾ ಕಛೇರಿಗೆ ಬಂತು. ಹಾಗೆ ಕಳುಹಿಸಿದ್ದು ಘಟನೆ ನಡೆದ ಸ್ಥಳದಲ್ಲಿದ್ದ ವೀಕ್ಷಕ ಅಲ್ಲ. ಆ ದರೋಡೆಗಾರನೇ ಅದನ್ನು ಕಳುಹಿಸಿದ್ದ. ವಿವರ ಓದಿದ ಪೋಲೀಸರು ಅತನನ್ನು ಹಿಡಿದರು ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ತಾನೆ?

e- ಪದ

ಮುಕ್ತ ಸೃಜನಶೀಲರು (creative commons) - ಸೃಜನಶೀಲ ಕೆಲಸವನ್ನು ಇತರರಿಗೆ ಉಚಿತವಾಗಿ ಹಂಚಲು ನೀಡುವ ಹಲವು ನಮೂನೆಯ ಪರವಾನಗಿಗಳನ್ನು ವಿವರಿಸುವ ನಿಯಮಗಳು. ಅಂತರಜಾಲದಲ್ಲಿ ಈ ಪರವಾನಗಿಯಲ್ಲಿ ನೀಡಿರುವ ಹಲವು ಲೇಖನ, ಸಂಗೀತ, ಧ್ವನಿ ಮತ್ತು ವೀಡಿಯೋ ಪಾಠಗಳು ಲಭ್ಯವಿವೆ. ಇವನ್ನು ಸಾಮಾನ್ಯವಾಗಿ ವೈಯಕ್ತಿಕ ಅಥವಾ ಶೈಕ್ಷಣಿಕ ಉದ್ದೇಶಗಳಿಗೆ ಉಚಿತವಾಗಿ ಬಳಸಿಕೊಳ್ಳಲು ಪರವಾನಗಿ ನೀಡಿರುತ್ತಾರೆ.

e - ಸಲಹೆ

ನಾರಾಯಣ ಭಟ್ ಅವರ ಪ್ರಶ್ನೆ: ಕ್ಯಾಮರಾದಿಂದ ತೆಗೆದ ಫಿಲಂಗಳನ್ನು(35mm; ಕಪ್ಪು-ಬಿಳುಪು, ಕಲರ್) ಡಿಜಿಟಲ್ ಮಾಧ್ಯಮಕ್ಕೆ ಸುಲಭವಾಗಿ ಪರಿವರ್ತಿಸಬಹುದೆ? ದಯವಿಟ್ಟು ತಿಳಿಸಿ.
ಉ: ಸಾಧ್ಯ. ಅದಕ್ಕೆಂದೇ ಇರುವ ವಿಶೇಷ ಫಿಲ್ಮ್/ಸ್ಲೈಡ್ ಸ್ಕ್ಯಾನರ್ ಬಳಸಿ ಫಿಲಂನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ಬೆಂಗಳೂರು, ಮುಂಬೈ ಮುಂತಾದ ಮಹಾನಗರಗಳಲ್ಲಿ ಈ ರೀತಿಯ ಸೇವೆ ನೀಡುವವರಿದ್ದಾರೆ.

ಕಂಪ್ಯೂತರ್ಲೆ

ಕೋಲ್ಯ: ನನ್ನ ಸಿ.ಡಿ. ಡ್ರೈವ್‌ನಲ್ಲಿ ನಾಲ್ಕು ಸಿ.ಡಿ.ಗಳನ್ನು ಒಟ್ಟಿಗೆ ಹಾಕಲು ಆಗುತ್ತಿಲ್ಲ.
ತಂತ್ರಜ್ಞ: ಆದರೆ ನಾಲ್ಕು ಸಿ.ಡಿ. ಹಾಕಬಹುದು ಎಂದು ನಿಮಗೆ ಯಾರು ಹೇಳಿದ್ದು?
ಕೋಲ್ಯ: ಸಿ.ಡಿ. ಡ್ರೈವ್‌ನ ಮೇಲೆ 4xCD ಎಂದು ಬರೆದಿದೆ.

3 ಕಾಮೆಂಟ್‌ಗಳು: