ಅಂತರಜಾಲಾಡಿ
ನವಪದವೀಧರರಿಗೆ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಪಡೆದುಕೊಳ್ಳುವುದು ಎಲ್ಲ ನವಪದವೀಧರರ ಆಸೆ. ಅದರಲ್ಲೂ ಇಂಜಿನಿಯರಿಂಗ್ ಪದವೀಧರರ ಮಟ್ಟಿಗೆ ಇದು ಅಪ್ಪಟ ಸತ್ಯ. ಹೆಚ್ಚಿನ ಕಂಪೆನಿಗಳು ಇಂಜಿನಿಯರಿಂಗ್ ಕಾಲೇಜುಗಳಿಗೇ ನೇರವಾಗಿ ಕ್ಯಾಂಪಸ್‌ನಲ್ಲೇ ಆಯ್ಕೆ ಪ್ರಕ್ರಿಯೆ ನಡೆಸುತ್ತಾರೆ. ಆದರೆ ಎಲ್ಲ ಕಾಲೇಜುಗಳಿಗೆ ಎಲ್ಲ ಕಂಪೆನಿಗಳು ಹೋಗುವುದಿಲ್ಲ. ಎಲ್ಲರಿಗೂ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲಸ ಸಿಗುವುದೂ ಇಲ್ಲ. ಬಿಸಿಎ, ಬಿಎಸ್‌ಸಿ, ಎಂಸಿಎ ಕಾಲೇಜುಗಳಿಗೂ ಹೋಗುವ ಕಂಪೆನಿಗಳ ಸಂಖ್ಯೆ ತುಂಬ ಕಡಿಮೆ. ಹಾಗಿದ್ದರೆ ಈ ಎಲ್ಲ ಪದವೀಧರರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೇ ಕೆಲಸ ಪಡೆಯಬೇಕಿದ್ದರೆ ಏನು ಮಾಡಬೇಕು? ಇಂತಹವರಿಗಾಗಿಯೇ ಒಂದೆರಡು ಜಾಲತಾಣಗಳಿವೆ. ಅಲ್ಲಿ ನೋಂದಾಯಿಸಿಕೊಂಡು ನೇಮಕಾತಿ ಪರೀಕ್ಷೆ ತೆಗೆದುಕೊಳ್ಳಬೇಕು. ಉತ್ತಮ ಅಂಕ ಬಂದರೆ ಆ ಜಾಲತಾಣದಲ್ಲಿ ನೋಂದಾಯಗೊಂಡ ಕಂಪೆನಿಗಳು ಈ ಪದವೀಧರರನ್ನು ಸಂದರ್ಶನ ನಡೆಸಿ ನೇಮಕಾತಿ ಮಾಡಿಕೊಳ್ಳುತ್ತವೆ. ಈ ಜಾಲತಾಣಗಳು www.myamcat.com ಮತ್ತು www.elitmus.com.
ಡೌನ್‌ಲೋಡ್
ರಾಸಾಯನಿಕ ತೂಕ
ಎಲ್ಲ ರಾಸಾಯನಿಕ ವಸ್ತುಗಳಿಗೂ ಒಂದು ಸೂತ್ರವಿದೆ. ಈ ಸೂತ್ರದ ಪ್ರಕಾರ ಅದರ ತೂಕ ನಿರ್ಧಾರವಾಗುತ್ತದೆ. ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಈ ರಾಸಾಯನಿಕ ತೂಕ ಲೆಕ್ಕಹಾಕುವುದು ಒಂದು ತಲೆನೋವಿನ ಕೆಲಸ. ಉದಾಹರಣೆಗೆ ಇಂಗಾಲದ ಡೈಆಕ್ಸೈಡಿನ ತೂಕ ೪೪.೦೧. ಪ್ರತಿ ಅಣುವಿನಲ್ಲೂ ಇರುವ ಪರಮಾಣುಗಳ ತೂಕ ಒಟ್ಟು ಮಾಡಿದರೆ ಅಣುವಿನ ತೂಕ ಸಿಗುತ್ತದೆ. ಲೆಕ್ಕಹಾಕಬೇಕಾದರೆ ಎಲ್ಲ ಮೂಲವಸ್ತುಗಳ ಪರಮಾಣು ತೂಕದ ಕೋಷ್ಟಕ ಕೈಯಲ್ಲಿರಬೇಕು. ಇದಕ್ಕೆಲ್ಲ ಒಂದು ಸುಲಭ ಪರಿಹಾರ FormulaWeight2011 ಎಂಬ ಉಚಿತ ತಂತ್ರಾಂಶ. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/rh1kFG.
e - ಸುದ್ದಿ
ಫೇಸ್‌ಬುಕ್ ಸಹಾಯಕ್ಕೆ
ಗಂಡ ಇನ್ನೊಂದು ಹುಡುಗಿಯ ಸಹವಾಸ ಮಾಡುವುದನ್ನು, ಮಾಡಬಯಸುವುದನ್ನು ಫೇಸ್‌ಬುಕ್ ಮೂಲಕ ಪತ್ತೆಹಚ್ಚಿದ ಹಲವು ಘಟನೆಗಳು ವಿದೇಶದಿಂದ ವರದಿಯಾಗಿವೆ. ಆ ಬಗ್ಗೆ ಇದೇ ಅಂಕಣದಲ್ಲಿ ಪ್ರಸ್ತಾವಿಸಿಯೂ ಆಗಿತ್ತು. ಈಗ ಅಂತಹುದೇ ಘಟನೆ ನಮ್ಮದೇ ದೇಶದ ಕೊಯಂಬತ್ತೂರಿನಿಂದ ವರದಿಯಾಗಿದೆ. ಮಹಾಲಕ್ಷ್ಮಿ ಎಂಬಾಕೆ ಕಾರ್ತಿಕೇಯನ್ ಎಂಬಾತನನ್ನು ಮದುವೆಯಾಗಿದ್ದಳು. ಒಂದು ಮಗುವಾದ ನಂತರ ಅವರ ನಡುವೆ ವಿರಸ ಬಂದು ಬೇರೆಬೇರೆಯಾಗಿ ಜೀವಿಸುತ್ತಿದ್ದರು. ಆತ ಎಲ್ಲಿದ್ದಾನೆ ಎಂದು ಆಕೆಗೆ ಸುಳಿವಿರಲಿಲ್ಲ. ಆತ ಗುಟ್ಟಾಗಿ ಇನ್ನೊಂದು ವಿವಾಹ ಮಾಡಿಕೊಳ್ಳಲು ಏರ್ಪಾಡು ನಡೆಸಿದ್ದ. ಆಕೆಗೆ ಅದರ ಸುಳಿವು ಸಿಕ್ಕಿತು. ಇತರೆ ಹೆಂಗಸರು ಮಾಡಿದಂತೆ ಆಕೆಯೂ ಹುಡುಗಿಯ ಹೆಸರಿನಲ್ಲಿ ಖಾತೆ ತೆರೆದು ಆತನನನ್ನು ಖೆಡ್ಡಾಕ್ಕೆ ಬೀಳಿಸಿದಳು. ಆತ ಇನ್ನೊಂದು ಮದುವೆಯಾಗಿ ದುಬಾಯಿಗೆ ಹಾರುವ ಯೋಜನೆ ಹಾಕಿದ್ದ. ಎಲ್ಲ ಮಣ್ಣುಪಾಲಾಯಿತು.
e- ಪದ
ಮ್ಯಾಕ್ ವಿಳಾಸ (MAC address) - ಇದು Media Access Control address ಎಂಬುದರ ಕಿರುರೂಪ. ಒಂದು ಗಣಕಜಾಲದ ಪ್ರತಿ ಸಂಧಿಜಾಗವನ್ನೂ ನಿರೂಪಿಸುವ ವಿಳಾಸ. ಸಾಮಾನ್ಯವಾಗಿ ಗಣಕವನ್ನು ಗಣಕಜಾಲಕ್ಕೆ ಸೇರಿಸಲು ಅಡಾಪ್ಟರ್ ಬಳಸುತ್ತಾರೆ. ಈ ಅಡಾಪ್ಟರ್ ಮೂಲಕ ಕೇಬಲ್ ಮೂಲಕ ಗಣಕಜಾಲಕ್ಕೆ ಸಂಪರ್ಕ ಮಾಡಿಕೊಳ್ಳಬಹುದು. ನಿಸ್ತಂತು (ವಯರ್‌ಲೆಸ್) ವಿಧಾನದ ಮೂಲಕವೂ ಜಾಲಕ್ಕೆ ಸೇರಿಕೊಳ್ಳಬಹುದು. ಅದಕ್ಕೂ ಒಂದು ಅಡಾಪ್ಟರ್ ಇರುತ್ತದೆ. ಈ ಅಡಾಪ್ಟರ್‌ನ ವಿಳಾಸವೇ ಮ್ಯಾಕ್ ವಿಳಾಸ. ನಿಸ್ತಂತು ವಿಧಾನದಲ್ಲಿ ಜಾಲಕ್ಕೆ ಸೇರಿಕೊಳ್ಳಬೇಕಿದ್ದಲ್ಲಿ ಹಲವು ಕಂಪೆನಿಗಳಲ್ಲಿ ಈ ಮ್ಯಾಕ್ ವಿಳಾಸ ಸರ್ವರ್‌ನಲ್ಲಿ ನಮೂದಾಗಿದ್ದರೆ ಮಾತ್ರ ಸೇರಿಕೊಳ್ಳಬಹುದು ಎಂಬ ನಿಯಮವನ್ನು ರೂಪಿಸಿರುತ್ತಾರೆ.
e - ಸಲಹೆ
ಮಂಗಳೂರಿನ ರವಿ ಅವರ ಪ್ರಶ್ನೆ: ಮೊಬೈಲ್ನಲ್ಲಿ ನುಡಿ ಅಥವಾ ಬರಹಗಳನ್ನು ಟೈಪ್ ಮಾಡಿ ಆನಂತರ ಅದನ್ನು ಗಣಕಯಂತ್ರಕ್ಕೆ ವರ್ಗಾಯಿಸಿ ನುಡಿ ಕಡತವನ್ನು ಮಾಡಲು ಸಾಧ್ಯವೇ? ಯಾವ ಮೊಬೈಲ್ನಲ್ಲಿ ಈ ವ್ಯವಸ್ಥೆ ಇದೆ? ಕನ್ನಡದಲ್ಲಿ ಇದು ಸಾಧ್ಯವಾದರೆ ಕೆಲವು ಬರಹಗಾರರಿಗೆ ಅನುಕೂಲವಾಗುತ್ತದೆ. ದಯವಿಟ್ಟು ಈ ಬಗ್ಗೆ ಮಾಹಿತಿ ಕೊಡಿ.
ಉ: ಸದ್ಯಕ್ಕೆ ಅಂತಹ ಸವಲತ್ತು ಇಲ್ಲ.
ಕಂಪ್ಯೂತರ್ಲೆ
ಜೀವನ ಫೇಸ್‌ಬುಕ್‌ನಂತೆ. ಎಲ್ಲರೂ ನಿಮ್ಮ ಕಷ್ಟವನ್ನು ಕೇಳಿಸಿಕೊಳ್ಳುತ್ತಾರೆ, ಅದನ್ನು ಇಷ್ಟಪಡುತ್ತಾರೆ, ಅದರ ಬಗ್ಗೆ ಕಮೆಂಟ್ ಮಾಡುತ್ತಾರೆ, ಆದರೆ ನಿಮ್ಮ ಕಷ್ಟವನ್ನು ಯಾರೂ ಪರಿಹರಿಸುವುದಿಲ್ಲ. ಯಾಕೆಂದರೆ ಎಲ್ಲರೂ ತಮ್ಮ ತಮ್ಮ ಸ್ಥಿತಿಯನ್ನು ಪೇಸ್‌ಬುಕ್‌ನಲ್ಲಿ ದಾಖಲಿಸುವದರಲ್ಲಿ ಬ್ಯುಸಿ ಆಗಿದ್ದಾರೆ.
http://itunes.apple.com/us/app/kannada-for-iphone/id419341024?mt=8
ಪ್ರತ್ಯುತ್ತರಅಳಿಸಿapple nalli idannu balasabahudu
Regards,
Pradeep
ಕಂಪ್ಯೂತರ್ಲೆ ಚನ್ನಾಗಿದೆ.
ಪ್ರತ್ಯುತ್ತರಅಳಿಸಿನಿಜಕ್ಕೂ ನೀವು ಬರೆದಿದ್ದು ಸತ್ಯ.
ನಮಸ್ಕಾರ ಪವನಜ. ಈ ಸಾರಿಯ "ನವಪದವೀಧರರಿಗೆ" ಮಾಹಿತಿ ಚೆನ್ನಾಗಿತ್ತು.
ಪ್ರತ್ಯುತ್ತರಅಳಿಸಿನಂದೊಂದು ಪ್ರಶ್ನೆ ಇದೆ.
ಬ್ಲ್ಯಾಕ್‌ಬೆರಿ OS 6.xನ ಬ್ರೋಸರ್‌ನಲ್ಲಿ ಕನ್ನಡ ಹೇಗೆ ಓದುವುದು?
Character Encodingನ್ನು UTF8ಗೆ ಬದಲಾಯಿಸಿದೆ. ಆದರೆ ಕನ್ನಡ ಅಕ್ಷರಗಳೆಲ್ಲ ಚೌಕ(square)ವಾಗಿ ಕಾಣಿಸುತ್ತಿವೆ. ಕನ್ನಡ ಫಾಂಟ್‌ಗಳನ್ನು ಹೇಗೆ/ಎಲ್ಲಿ copy ಮಾಡುವುದು ಎಂದು ತಿಳಿಯಲಿಲ್ಲ.
ನಾನು ಬಳಸ್ತಾ ಇರೋದು "BlackBerry Bold 9780"