ಸೋಮವಾರ, ಫೆಬ್ರವರಿ 6, 2012

ಗಣಕಿಂಡಿ - ೧೪೨ (ಫೆಬ್ರವರಿ ೦೬, ೨೦೧೨)

ಅಂತರಜಾಲಾಡಿ

ಸಂಗೀತ ಹಂಚಿ

ಸಂಗೀತಗಾರರಿಗೆ ತಾವು ತಯಾರಿಸಿದ ಸಂಗೀತವನ್ನು ಇತರೆ ಸಂಗೀತಗಾರರಿಗೆ ಹಾಗೂ ಜಗತ್ತಿಗೆಲ್ಲ ಹಂಚಲು ಅನುವು ಮಾಡಿಕೊಡುವ ಜಾಲತಾಣ ಸೌಂಡ್‌ಕ್ಲೌಡ್. ಸಂಗೀತ ತಯಾರಿಕೆಯ ಹಂತದಲ್ಲಿರುವಾಗ ಇತರೆ ಸಂಗೀತಗಾರರಿಗೆ ಹಾಗೂ ಸ್ನೇಹಿತರಿಗೆ ಅದನ್ನು ಕೇಳಿಸಿ ಅವರಿಂದ ಹಿಂಮಾಹಿತಿ ಪಡೆದು ತಮ್ಮ ಸಂಗೀತ ಸಂಯೋಜನೆಯನ್ನು ಸುಧಾರಿಸಲು ಈ ಜಾಲತಾಣ ಅನುವು ಮಾಡಿಕೊಡುತ್ತದೆ. ಸಂಗಿತವನ್ನು ತಮ್ಮ ಬ್ಲಾಗ್ ಅಥವಾ ಜಾಲತಾಣದಲ್ಲಿ ಅಡಕಗೊಳಿಸಲು ಇದು ಸಹಾಯ ಮಾಡುತ್ತದೆ. ಸಂಗೀತದ ಬೇರೆ ಬೇರೆ ಭಾಗಗಳಿಗೆ ಸೂಕ್ತ ಶೀರ್ಷಿಕೆ ನೀಡಬಹುದು - “ಈ ಭಾಗದಲ್ಲಿ  ಕೊಳಲು ಅದ್ಭುತವಾಗಿದೆ, ಈ ಭಾಗದಲ್ಲಿ ಆಲಾಪನೆ ಚೆನ್ನಾಗಿದೆ” - ಇತ್ಯಾದಿ ಟಪ್ಪಣಿ ಸೇರಿಸಬಹುದು. ಈ ಜಾಲತಾಣದ ವಿಳಾಸ - soundcloud.com

ಡೌನ್‌ಲೋಡ್

ಪ್ರೌನ್

ಓಟದ ಆಟಗಳು ಸಾವಿರಾರಿವೆ. ಹೆಚ್ಚಿನ ಓಟದ ಆಟಗಳಲ್ಲಿ ಯಾವುದಾದರು ವಾಹನವನ್ನು ರಸ್ತೆಯಲ್ಲಿ ಇಲ್ಲವೇ ಕಾಡಿನಲ್ಲಿ ಓಡಿಸಬೇಕು. ಇಲ್ಲೊಂದು ಬೇರೆಯೇ ಬಗೆಯ ಓಟದ ಆಟವಿದೆ. ಇದರಲ್ಲಿ ಯಾವುದೇ ವಾಹನವಿಲ್ಲ. ರಸ್ತೆಯೂ ಇಲ್ಲ. ಬದಲಿಗೆ ಒಂದು ಕೊನೆಯೇ ಇಲ್ಲದ ದಪ್ಪ ಹಗ್ಗಕ್ಕೆ ಅಂಟಿಕೊಂಡ ಒಂದು ಗೋಲವನ್ನು ಓಡಿಸಬೇಕು. ದಾರಿಯಲ್ಲಿ ಎದುರಾಗುವ ಅಡ್ಡಿಗಳನ್ನು ತಪ್ಪಿಸಲು ಗೋಲವನ್ನು ಹಗ್ಗದ ಇನ್ನೊಂದು ಬದಿಗೆ ತಿರುಗಿಸಬೇಕು. ಬೇರೆ ಯಾವ ರೀತಿಯ ಹೊಡೆದಾಟಗಳಿಲ್ಲ. ಇದರಲ್ಲಿ ಹಲವು ಹಂತಗಳಿವೆ. ಹಾಗೆಯೇ ೪ ಜನರು ಬೇಕಿದ್ದರೂ ಒಟ್ಟಿಗೆ ಆಡಬಹುದು. ನಿಮ್ಮದೇ ಹಳೆಯ ಓಟದ ವಿರುದ್ಧ ನೀವೇ ಮತ್ತೊಮ್ಮೆ ಓಡಿಸಬಹುದು. ಈ ಆಟದ ಹೆಸರು ಪ್ರೌನ್. ಇದು ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ www.proun-game.com

e - ಸುದ್ದಿ

ಟ್ವೀಟ್ ಮಾಡು ಜೈಲಿಗೆ ಹೋಗು

ಟ್ವೀಟ್ ಮಾಡಿ ಜೈಲಿಗೆ ಹೋದ ಇನ್ನೊಂದು ಹೊಸ ಪ್ರಕರಣ. ಇದು ದಕ್ಷಿಣ ಕೊರಿಯಾದಿಂದ ವರದಿಯಾಗಿದೆ. ದಕ್ಷಿಣ ಕೊರಿಯಾದ ಒಬ್ಬಾತ ಉತ್ತರ ಕೊರಿಯ ಸರಕಾರದ ಟ್ವಿಟ್ಟರ್ ಖಾತೆಯಲ್ಲಿ ಬಂದುದನ್ನು ಮರುಟ್ವೀಟ್ ಮಾಡಿದ್ದ. ಅದರಲ್ಲಿ ಉತ್ತರ ಕೊರಿಯಾದ ಹೊಗಳಿಕೆ ಇತ್ತು. ಈತ ಅದನ್ನು ಗೇಲಿ ಮಾಡಲೆಂದು ತನ್ನ ಹೆಸರು ಮತ್ತು ಫೋಟೋ ಸೇರಿಸಿದ್ದ. ಆದರೆ ದಕ್ಷಿಣ ಕೊರಿಯ ಸರಕಾರದ ಪ್ರಕಾರ ಆತ ರಾಷ್ಟ್ರೀಯ ಸುರಕ್ಷತೆಯ ಕಾನೂನನ್ನು ಉಲ್ಲಂಘಿಸಿದ್ದಾನೆ. ಅದಕ್ಕಾಗಿ ಆತನನ್ನು ಸೆರೆಮನೆಗೆ ದೂಡಲಾಗಿದೆ. ತಾನು ಉತ್ತರ ಕೊರಿಯಾವನ್ನು ಹಾಸ್ಯ ಮಾಡಿದ್ದು ಎಂದು ಆತ ವಿವರಿಸಿದರೂ ಅಧಿಕಾರಿಗಳು ಅದನ್ನು ಒಪ್ಪಲಿಲ್ಲ.

e- ಪದ

ಟ್ಯಾಬ್ಲೆಟ್ ಗಣಕ (tablet PC)  - ಇವುಗಳ ಗಾತ್ರ ಸುಮಾರು ೮ ಇಂಚಿನಿಂದ ೧೦ ಇಂಚು ಉದ್ದ, ೫ ರಿಂದ ೮ ಇಂಚು ಅಗಲ, ಸುಮಾರು ಅರ್ಧ ಇಂಚು ದಪ್ಪ ಇರುತ್ತವೆ. ಇವುಗಳಿಗೆ ಭೌತಿಕ ಕೀಲಿಮಣೆ ಇರುವುದಿಲ್ಲ. ಬದಲಿಗೆ ಸ್ಪರ್ಶಸಂವೇದಿ (touchsensitive screen) ಪರದೆ ಇರುತ್ತದೆ. ಅದರಲ್ಲಿ ಕೀಲಿಮಣೆ ಮೂಡಿಬರುತ್ತದೆ. ಜನಸಾಮಾನ್ಯರಿಗೆ ಬಹುಮಟ್ಟಿಗೆ ಅಗತ್ಯವಿರುವ ಕೆಲಸಗಳನ್ನೆಲ್ಲ ಇದು ಮಾಡಬಲ್ಲುದು. ಉದಾಹರಣೆಗೆ ಇಮೈಲ್, ಅಂತರಜಾಲ ವೀಕ್ಷಣೆ, ಕಡತ ತಯಾರಿ, ವಿ-ಪುಸ್ತಕ ಓದುವುದು -ಇತ್ಯಾದಿ.

e - ಸಲಹೆ


ಹುಬ್ಬಳ್ಳಿಯ ಪ್ರಶಾಂತ್ ಅವರ ಪ್ರಶ್ನೆ: ಹೊಸ ಫೋಲ್ಡರ್ ಮಾಡಿ  "con" ಅಂತ ಹೆಸೆರು ನೀಡುವಾಗ ಯಾಕೆ ತೆಗೆದುಕೊಳ್ಳುವುದಿಲ್ಲ ಮತ್ತು ಇಂತಹದೆ ಯಾವ ಯಾವ ಹೆಸರುಗಳು ತೆಗೆದುಕೊಳ್ಳುವುದಿಲ್ಲ?

ಉ: ಇದಕ್ಕೆ ಉತ್ತರ ಮೈಕ್ರೋಸಾಫ್ಟ್ ಕಾರ್ಯಚರಣೆಯ ವ್ಯವಸ್ಥೆಗಳ ಇತಿಹಾಸದಲ್ಲಿದೆ. ವಿಂಡೋಸ್ ಬರುವುದಕ್ಕೆ ಮೊದಲು ಡಾಸ್ (DOS) ಇತ್ತು. ಅದರಲ್ಲಿ CON ಅಂದರೆ Console ಅಂದರೆ ಪರದೆ ಎಂದು ಅರ್ಥ. ಇದು ಡಾಸ್‌ನಲ್ಲಿ ಕಾದಿರಿಸಿದ ಪದ (reserved word). ಆದುದರಿಂದ ಇದನ್ನು ಯಾವುದೇ ಫೋಲ್ಡರ್ ಅಥವಾ ಫೈಲುಗಳಿಗೆ ಹೆಸರಾಗಿ ಬಳಸುವಂತಿಲ್ಲ. ಇದೇ ಮಾತು LPT, PRN, ಇತ್ಯಾದಿಗಳಿಗೆ ಅನ್ವಯಿಸುತ್ತದೆ.

ಕಂಪ್ಯೂತರ್ಲೆ

ಕಥೆ ಹೇಳು ಎಂದು ಹಠಮಾಡುತ್ತಿರುವ ಕಂದನಿಗೆ ಅಪ್ಪ ಹೇಳಿದ್ದು - “ನೀನು ಹೋಗಿ ಮಲಗಿಕೊ. ಕಥೆಯನ್ನು ಎಸ್‌ಎಂಎಸ್ ಮಾಡುತ್ತೇನೆ”.

6 ಕಾಮೆಂಟ್‌ಗಳು:

  1. Appreciate your work in translating computer related word to Kannada word but "
    ittechege yako nimma lekhanagalallu kannada dari tapputtideye???
    "ಹುಬ್ಬಳ್ಳಿಯ 'ಪ್ರಾಶಂತ್' ಅವರ ಪ್ರಶ್ನೆ" ???

    ಪ್ರತ್ಯುತ್ತರಅಳಿಸಿ
  2. ಹೆಸರು ಹೇಳಲು ನಾಚಿಕೊಳ್ಳುವ ಅನಾನಿಮಸ್ ಅವರೇ, ನಿಮ್ಮ ಭೂತಕನ್ನಡಿ ಇಟ್ಟು ಓದಿ ಪ್ರತಿಕ್ರಿಯಿಸುವ ಹವ್ಯಾಸಕಕ್ಕೆ ಧನ್ಯವಾದಗಳು. ನಿಮ್ಮಂತಹವರು ಇದ್ದರೇ ನಮ್ಮಂತಹವರ ಬಾಳು ಹಾಗೂ ಲೇಖನ ಧನ್ಯ. ತಪ್ಪನ್ನು ಸರಿಪಡಿಸಿದ್ದೇನೆ.
    ಹಾಗೆಯೇ ಲೇಖನಗಳ ಬಗ್ಗೆ ವಸ್ತುನಿಷ್ಠ ವಿಮರ್ಶೆ ಮಾಡಬೇಕಾಗಿ ಕೋರುತ್ತೇನೆ.

    -ಪವನಜ

    ಪ್ರತ್ಯುತ್ತರಅಳಿಸಿ
  3. Pavanaja sir, it is taking "LPT" as folder name. I think you probably missed out something. It is "LPT1".

    I'm glad to add few more words to the list - NUL, AUX, LPT1, LPT2, LPT3, COM1, COM2, COM3, COM4

    Now, the reasons are (As you told):



    CON - Keyboard and display
    PRN - System list device, usually a parallel port
    AUX - Auxiliary device, usually a serial port
    CLOCK$ - System real-time clock
    NUL - Bit-bucket device
    A:-Z: - Drive letters
    COM1 - First serial communications port
    COM2 - Second serial communications port
    COM3 - Third serial communications port
    COM4 - Fourth serial communications port
    LPT1 - First parallel printer port
    LPT2 - Second parallel printer port
    LPT3 - Third parallel printer port

    ಪ್ರತ್ಯುತ್ತರಅಳಿಸಿ
  4. ಜಗದೀಶ ಯಲ್ಲಾಪುರ.
    ಪವನಜರವರೆ ಟ್ಯಾಬ್ಲೆಟ್ ಗಣಕದಲ್ಲಿ ಕನ್ನಡ ( ನುಡಿ, ಬರಹ ಅಥವಾ ಯುನಿಕೊಡ್ ಕನ್ನಡ) ಟೈಪ್ ಮಾಡಬಹುದೆ? ಅದನ್ನು ಫೈಲ್ ರೀತಿಯಲ್ಲಿ ಉಳಿಸಿ ಮೇಲ್ ಮಾಡಲು ಅವಕಾಶಗಳಿವೆಯೇ? ಟ್ಯಾಬ್ಲೆಟ್ ಗಣಕಗಳ ಕುರಿತು ಸ್ವಲ್ಪ ಮಾಹಿತಿ ನೀಡಿ ದನ್ಯವಾದಗಳು

    ಪ್ರತ್ಯುತ್ತರಅಳಿಸಿ