ಸೋಮವಾರ, ಏಪ್ರಿಲ್ 16, 2012

ಗಣಕಿಂಡಿ - ೧೫೨ (ಎಪ್ರಿಲ್ ೧೬, ೨೦೧೨)

ಅಂತರಜಾಲಾಡಿ

ಚಾಕೊಲೇಟ್ ಪ್ರಿಯರಿಗೆ

ಚಾಕೊಲೇಟ್ ಇಷ್ಟವಿಲ್ಲದವರ‍್ಯಾರು? ಪುಟ್ಟ ಕಂದನಿಂದ ಹಿಡಿದು ತಾತನವರೆಗು ಎಲ್ಲರಿಗು ಚಾಕೊಲೇಟ್ ಇಷ್ಟ. ಈಗೇನೋ ಭಾರತದಲ್ಲಿ ಹಲವಾರು ನಮೂನೆಯ ಚಾಕೊಲೇಟ್‌ಗಳು ಲಭ್ಯ. ಎರಡು ದಶಕಗಳ ಹಿಂದೆ ಪರಿಸ್ಥಿತಿ ಇಂತಿರಲಿಲ್ಲ. ಆದರೂ ಜಾಗತಿಕ ಮಟ್ಟದಲ್ಲಿ ನೋಡಿದರೆ ನಮ್ಮ ದೇಶದಲ್ಲಿ ದೊರೆಯುವ ಚಾಕೊಲೇಟ್‌ಗಳ ವೈವಿಧ್ಯ ತುಂಬ ಕಡಿಮೆಯೇ. ಚಾಕೊಲೆಟ್‌ಗಳಿಗೆಂದೇ ಮೀಸಲಾದ ಜಾಲತಾಣ www.chocablog.com. ಹಲವು ನಮೂನೆಯ ಚಾಕೊಲೇಟ್‌ಗಳು, ಅವುಗಳ ತಯಾರಿಯ ಪಾಕವಿಧಾನ, ಚಾಕೊಲೇಟ್ ಕೊಳ್ಳಬೇಕಿದ್ದರೆ ಅದಕ್ಕೂ ಅನುಕೂಲ ಎಲ್ಲ ಈ ಜಾಲತಾಣದಲ್ಲಿವೆ.

ಡೌನ್‌ಲೋಡ್

ಮತ್ತೊಂದು ಟೊರೆಂಟ್ ತಂತ್ರಾಂಶ

ಅಂತರಜಾಲದಲ್ಲಿ ತಂತ್ರಾಂಶ, ಸಂಗೀತ, ಚಲನಚಿತ್ರ, ಅಥವಾ ಇನ್ಯಾವುದೇ ಫೈಲುಗಳನ್ನು ಪ್ರಪಂಚಾದ್ಯಂತ ವಿವಿಧ ವ್ಯಕ್ತಿಗಳು ತಮ್ಮ ಗಣಕಗಳಲ್ಲಿ ಸಂಗ್ರಹಿಸಿಟ್ಟು ಆಸಕ್ತರಿಗೆ ಡೌನ್‌ಲೋಡ್ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಈ ರೀತಿಯ ಸೌಲಭ್ಯಕ್ಕೆ P2P ಅಂದರೆ ಪರ್ಸನ್-ಟು-ಪರ್ಸನ್ ಅರ್ಥಾತ್ ವ್ಯಕ್ತಿಯಿಂದ ವ್ಯಕ್ತಿಗೆ ಎಂದು ಕರೆಯುತ್ತಾರೆ. ಬಿಟ್‌ಟೊರೆಂಟ್ ಇದಕ್ಕೆ ಪ್ರಖ್ಯಾತ. ಇಂತಹ ಟೊರೆಂಟ್ ಪ್ರೊಟೊಕೋಲ್ ಮೂಲಕ ಫೈಲ್‌ಗಳನ್ನು ಟೌನ್‌ಲೋಡ್ ಮಾಡಲು ಅನುವು ಮಾಡಿಕೊಡುವ ಒಂದು ತಂತ್ರಾಂಶ Tixati. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.tixati.com.  

e - ಸುದ್ದಿ

ಫೇಸ್‌ಬುಕ್ ನೋಡುವುದು ಅಪರಾಧವಲ್ಲ

ಕೆಲಸದ ಸಮಯದಲ್ಲಿ ಫೇಸ್‌ಬುಕ್ ನೋಡುವುದು ಅಪರಾಧ ಎಂದು ಹೆಚ್ಚಿನವರು ತೀರ್ಮಾನ ಮಾಡುತ್ತಾರೆ. ಭಾರತದ ಬಹುತೇಕ ಕಂಪೆನಿಗಳಲ್ಲಿ ಫೇಸ್‌ಬುಕ್ ತಾಲತಾಣ ಮಾತ್ರವಲ್ಲ ಅದೇ ಮಾದರಿಯ ಇತರೆ ಸಮಾಜ ಜಾಲತಾಣಗಳನ್ನೂ ನಿರ್ಬಂಧಿಸಿರುತ್ತಾರೆ. ಆದರೆ ಅಮೇರಿಕದಿಂದ ಒಂದು ನ್ಯಾಯಾಲಯದ ತೀರ್ಮಾನ ಈಗ ಬಂದಿದೆ. ಅದರ ಪ್ರಕಾರ ಕೆಲಸದ ಸಮಯದಲ್ಲಿ ಕಚೇರಿಯಲ್ಲಿ ಫೇಸ್‌ಬುಕ್ ನೋಡುವುದು ಅಪರಾಧವಲ್ಲ. ಈ ತೀರ್ಮಾನ ಬಂದಿರುವುದು ಸ್ಯಾನ್‌ಫ್ರಾನ್ಸಿಸ್ಕೋದಿಂದ.

e- ಪದ

ರೂಟಿಂಗ್ (Rooting) - ಇದು ಆಂಡ್ರೋಯಿಡ್ ಫೋನ್‌ಗಳಲ್ಲಿ ಬಳಕೆಯಾಗುತ್ತಿರುವ ಪದ. ಸಾಮಾನ್ಯವಾಗಿ ಫೋನ್ ತಯಾರಕರು ಗ್ರಾಹಕರಿಗೆ ಫೋನಿನ ಮೇಲೆ ಸಂಪೂರ್ಣ ಸಾರ್ವಭೌಮತ್ವ ನೀಡಿರುವುದಿಲ್ಲ. ರೂಟಿಂಗ್ ಮಾಡುವುದರ ಮೂಲಕ ಫೋನಿನ ಮೇಲೆ ಸಂಪೂರ್ಣ ಅಧಿಕಾರ ಹೊಂದಬಹುದು. ಆಗ ಕೆಲವು ಅಯ್ಕೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯ ದೊರೆಯುತ್ತದೆ. ಕೆಲವು ತಂತ್ರಾಂಶಗಳನ್ನು ರೂಟಿಂಗ್ ಮಾಡಿದರೆ ಮಾತ್ರ ಇನ್‌ಸ್ಟಾಲ್ ಮಾಡಲು ಸಾಧ್ಯ.

e - ಸಲಹೆ

ಕೆ. ಬಸವರಾಜು ಅವರ ಪ್ರಶ್ನೆ: ನನಗೆ ಫೇಸ್‌ಬುಕ್‌ನಲ್ಲಿ ನನ್ನ ಹೆಸರು ಬದಲಾಯಿಸಬೇಕಾಗಿದೆ. ಇದು ಸಾಧ್ಯವೇ? ಸಾಧ್ಯವಿದ್ದರೆ ಹೇಗೆ?
ಉ: ಇದು ಬಹಳ ಸುಲಭ. Home ನಲ್ಲಿ Account Settings ಮೇಲೆ ಕ್ಲಿಕ್ ಮಾಡಿ. ನಂತರ Name ಎಂದಿರುವ ಸಾಲಿನ ಕೊನೆಯಲ್ಲಿ ಇರುವ Edit ಎಂಬುದರ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಬೇಕಾದ ಹೆಸರನ್ನು ಆಯ್ಕೆ ಮಾಡಿಕೊಳ್ಳಿ. ನೀವು ಫೇಸ್‌ಬುಕ್ ಅನ್ನು ಇಂಗ್ಲಿಶಿನಲ್ಲಿ ಬಳಸುತ್ತಿದ್ದೀರಿ ಎಂದು ಊಹಿಸಿ ಬರೆದಿದ್ದೇನೆ. ಕನ್ನಡದಲ್ಲಿ ಬಳಸುತ್ತಿದ್ದರೂ ಇವೇ ಅಯ್ಕೆಗಳು ಲಭ್ಯವಿವೆ.

ಕಂಪ್ಯೂತರ್ಲೆ


ಕೋಲ್ಯನಿಗೆ ತನ್ನ ಆಂಡ್ರೋಯಿಡ್ ಫೋನಿನಲ್ಲಿ ಯಾವುದೋ ತಂತ್ರಾಂಶ ಇನ್‌ಸ್ಟಾಲ್ ಮಾಡಬೇಕಾಗಿತ್ತು. ಅದು ರೂಟಿಂಗ್ ಮಾಡಿದರೆ ಮಾತ್ರ ಸಾಧ್ಯ ಎಂದು ಆತನ ತಂತ್ರಜ್ಞ ಸ್ನೇಹಿತ ಫೋನಿನಲ್ಲಿ ಹೇಳಿದ್ದ. ಕೋಲ್ಯ ಫೋನನ್ನು ಹೂಕುಂಡದಲ್ಲಿ ಊರಿ ಇಟ್ಟು, ಸ್ವಲ್ಪ ನೀರು ಚಿಮುಕಿಸಿ -ರೂಟಿಂಗ್ ಆಗಲೆಂದು ಕಾಯತೊಡಗಿದ.

2 ಕಾಮೆಂಟ್‌ಗಳು:

  1. Pavanja sir, How do you get this much of superb Compu Tharles.
    Are these your own thoughts? My most fav section in Ganakindi.

    My frst qstn was about Patents n I found the solution from you.
    My second qstn is, I'll read your article & drop comments from my office.
    Heege, kannada vannu English padagalalli type maduva badalu, kannada beralachinalli comment madalu ishta. Are there any ways of typing in Kannada without installing any software (As I'm not supposed to install any software for office system on my own)..?

    - Pavan
    Tech-Lives.com

    ಪ್ರತ್ಯುತ್ತರಅಳಿಸಿ
  2. ನಮಸ್ಕಾರ
    ನಂದೊಂದು ಪ್ರಶ್ನೆ..
    ಎಮ್ಮೆಸ್ ಆಫೀಸಿನಲ್ಲಿ ವರ್ಡ್ ಡಾಕ್ಯುಮೆಂಟನ್ನು ಪಿಡಿಎಫ್ ರೂಪದಲ್ಲಿ ಉಳಿಸಲು ಅವಕಾಶ ಇದೆಯಷ್ಟೇ. ಆದರೆ ಇದನ್ನು ಬಳಸಿ ಕನ್ನಡ ಫೈಲುಗಳನ್ನು ಪರಿವರ್ತಿಸಲು ಒದ್ದಾಡುತ್ತಿದ್ದೆ. ಆಮೇಲೆ ಗೊತ್ತಾಗಿದ್ದೆಂದರೆ ಕನ್ನಡ ಫಾಂಟನ್ನು ಬೊಲ್ಡ್ ಮಾಡಿದಾಗಲಷ್ಟೇ ಪಿಡಿಎಫ್ಗೆ ಪರಿವರ್ತಿಸಲು ಸಾಧ್ಯ! ಆದರೆ ಇಂಗ್ಲೀಷಿನಲ್ಲಿ ಈ ಸಮಸ್ಯೆ ಇಲ್ಲ.... ಯಾಕೆ ಹೀಗೆ ? ಬೋಲ್ಡ್ ಮಾಡದೇ ಪರಿವರ್ತಿಸಲು ಸಾದ್ಯ ಇಲ್ಲವೇ?

    ಅಂದಹಾಗೆ ಯುನಿಕೋಡ್ನಲ್ಲಿ ಟೈಪಿಸಿದ್ದನ್ನು ಬರಹ/ ನ್ಡುಡಿಗೆ ಪರಿವರ್ತಿಸೊದು ಹೇಗೆ?

    ಪ್ರತ್ಯುತ್ತರಅಳಿಸಿ