ಬುಧವಾರ, ಸೆಪ್ಟೆಂಬರ್ 23, 2009

ಗಣಕಿಂಡಿ - ೦೧೯ (ಸಪ್ಟಂಬರ್ ೨೧, ೨೦೦೯)

ಅಂತರಜಾಲಾಡಿ

ಮೈಸೂರು ದಸರ ಎಷ್ಟೊಂದು ಸುಂದರ

ಹಳೆಯ ಚಿತ್ರಗೀತೆಯೊಂದರ ಪ್ರಾರಂಭದ ಸಾಲು “ಮೈಸೂರು ದಸರ, ಎಷ್ಟೊಂದು ಸುಂದರ, ಚೆಲ್ಲಿದೆ ನಗೆಯಾ ಪನ್ನೀರಾ...”. ಹೌದು. ಮೈಸೂರು ದಸರ ನಿಜಕ್ಕೂ ಬಲು ಸುಂದರ. ಮೈಸೂರು ದಸರ ಜಗತ್ಪ್ರಸಿದ್ಧ. ಅದನ್ನು ನೋಡಿ ಆನಂದಿಸಲು ದೇಶವಿದೇಶಗಳಿಂದ ಸಾವಿರಾರು ಜನರು ಬರುತ್ತಾರೆ. ದಸರ ಸಮಯದಲ್ಲಿ ಹಲವಾರು ಕಾರ್ಯಕ್ರಮಗಳು ಮೈಸೂರಿನಾದ್ಯಂತ ಜರಗುತ್ತವೆ. ಯಾವ ದಿನ ಎಲ್ಲಿ ಏನು ಕಾರ್ಯಕ್ರಮ ನಡೆಯುತ್ತದೆ, ಎಲ್ಲಿ ವಸತಿ ಸಿಗಬಹುದು, ಮೈಸೂರಿನ ಸುತ್ತಮುತ್ತ ಯಾವ ಯಾವ ಪ್ರೇಕ್ಷಣೀಯ ಸ್ಥಳಗಳಿವೆ, ಅಲ್ಲಿಗೆ ಹೋಗುವುದು ಹೇಗೆ, ಅಷ್ಟು ಮಾತ್ರವಲ್ಲ, ಮೈಸೂರಿನಲ್ಲಿ ಎಲ್ಲೆಲ್ಲಿ ಬ್ಯಾಂಕುಗಳ ಎಟಿಎಂಗಳಿವೆ -ಹೀಗೆ ಹಲವಾರು ಉಪಯುಕ್ತ ಮಾಹಿತಿಗಳನ್ನು ನೀಡುವ ಜಾಲತಾಣ - www.mysoredasara.com. ಇದು ಇಂಗ್ಲಿಶ್ ಹಾಗೂ ಕನ್ನಡ ಭಾಷೆಗಳಲ್ಲಿದೆ. ಮೈಸೂರು ದಸರ ಕಾರ್ಯಕ್ರಮದ ಅಧಿಕೃತ ಜಾಲತಾಣ ಇದು. ಉತ್ತಮ ಗುಣಮಟ್ಟದ ಈ ಜಾಲತಾಣದ ಕನ್ನಡ ವಿಭಾಗ ಯುನಿಕೋಡ್‌ನಲ್ಲಿದೆ.

ಡೌನ್‌ಲೋಡ್

ಯುಟ್ಯೂಬಿನಿಂದ ವೀಡಿಯೋ ಬೇಕೆ?

ಚಿಕ್ಕ ಚಿಕ್ಕ ವೀಡಿಯೋ ತುಣುಕುಗಳಿಂದ ಹಿಡಿದು ಪೂರ್ತಿ ಪ್ರಮಾಣದ ಚಲನಚಿತ್ರಗಳ ತನಕ ಎಲ್ಲ ರೀತಿಯ ವೀಡಿಯೋಗಳಿರುವ ಜಾಲತಾಣ ಯುಟ್ಯೂಬ್ (youtube.com). ಈ ಜಾಲತಾಣದಲ್ಲಿ ಸಹಸ್ರಾರು ವೀಡಿಯೋಗಳಿವೆ. ಹಲವು ಉಪಯುಕ್ತ, ಶೈಕ್ಷಣಿಕ ವೀಡಿಯೋಗಳೂ ಇವೆ. ಇವನ್ನೆಲ್ಲ ಆ ಜಾಲತಾಣದಲ್ಲೇ ವೀಕ್ಷಿಸಬೇಕು. ಅಂದರೆ ಪ್ರತಿ ಸಾರಿ ವೀಡಿಯೋ ವೀಕ್ಷಿಸಲೂ ಜಾಲತಾಣಕ್ಕೆ ಭೇಟಿ ನೀಡಬೇಕು. ಇನ್ನೂ ಒಂದು ಸಮಸ್ಯೆಯಿದೆ. ಉತ್ತಮ ಬ್ರಾಡ್‌ಬ್ಯಾಂಡ್ ಸಂಪರ್ಕವಿದ್ದರೂ ವೀಡಿಯೋ ನಿಂತು ನಿಂತು ಬರುತ್ತದೆ. ಯುಟ್ಯೂಬ್ ಜಾಲತಾಣದಿಂದ ವೀಡಿಯೋಗಳನ್ನು ನಿಮ್ಮ ಗಣಕಕ್ಕೆ ಡೌನ್‌ಲೋಡ್ ಮಾಡಿಕೊಳ್ಳಲು ಸಹಾಯ ಮಾಡುವ ತಂತ್ರಾಂಶ - YouTube Downloader. ಇದು ಬೇಕಿದ್ದಲ್ಲಿ http://bit.ly/oRMpZ ಜಾಲತಾಣಕ್ಕೆ ಭೇಟಿ ನೀಡಿ.

e - ಸುದ್ದಿ

ಅಂತರಜಾಲಕ್ಕಿಂತ ಪಾರಿವಾಳವೇ ವೇಗ

ಅಂತರಜಾಲದ ಮೂಲಕ ೮೦ ಕಿಮೀ ದೂರಕ್ಕೆ ಮಾಹಿತಿ ಸಾಗಿಸಲು ಎಷ್ಟು ಸಮಯ ಹಿಡಿಯಬಹುದು? ಮಾಹಿತಿಯ ಗಾತ್ರವನ್ನು ಇದು ಅವಲಂಬಿಸಿದೆ. ಈಗಿನ ಬ್ರಾಡ್‌ಬ್ಯಾಂಡ್ ಸಂಪರ್ಕ ಕಾಲದಲ್ಲಿ ಇದೇನು ತುಂಬ ಸಮಯ ತೆಗೆದುಕೊಳ್ಳುವ ಕೆಲಸವಲ್ಲ ಅಂತೀರಾ? ಹಾಗಿದ್ದರೆ ದಕ್ಷಿಣ ಆಫ್ರಿಕಾಕ್ಕೆ ಬನ್ನಿ. ಅಲ್ಲಿ ಅಂತರಜಾಲಕ್ಕಿಂತ ಪಾರಿವಾಳವೇ ವೇಗ ಎಂದು ಸಾಧಿಸಿ ತೋರಿಸಲಾಗಿದೆ. ತನ್ನ ಕಾಲಿಗೆ ಮಾಹಿತಿಭರಿತ ಡಾಟಾ ಕಾರ್ಡ್ ಕಟ್ಟಿಕೊಂಡ ಪಾರಿವಾಳವು ೮೦ ಕಿಮೀ ದೂರವನ್ನು ೬೮ ನಿಮಿಷಗಳಲ್ಲಿ ಸಾಗಿತು. ಅಂತರಜಾಲದ ಮೂಲಕ ಅಷ್ಟೇ ಮಾಹಿತಿಯನ್ನು ಸಾಗಿಸಲು ಪ್ರಯತ್ನಿಸಲಾಯಿತು. ೧೨೭ ನಿಮಿಷಗಳ ನಂತರ ಕೇವಲ ಶೇಕಡ ೪ರಷ್ಟು ಮಾಹಿತಿಯನ್ನು ಸಾಗಿಸಲು ಸಾಧ್ಯವಾಯಿತು. ಇದು ದಕ್ಷಿಣ ಆಫ್ರಿಕಾದ ಕತೆ. ನಮ್ಮಲ್ಲಿ ಪರಿಸ್ಥಿತಿ ಅಷ್ಟು ಕೆಟ್ಟಿಲ್ಲ ಎನ್ನುತ್ತೀರಾ? ಹಾಗಿದ್ದರೆ ಬೆಂಗಳೂರಿನಂತಹ ದೊಡ್ಡ ನಗರದಿಂದ ಕೇವಲ ೨೦ ಕಿಮೀ ದೂರ ಹೋಗಿ ನೋಡಿ.

e- ಪದ

ಗುಂಪುಗುತ್ತಿಗೆ

ಕ್ರೌಡ್‌ಸೋರ್ಸಿಂಗ್ -(crowdsourcing) --ಜನರಿಂದ ಸಹಾಯ ಪಡೆದುಕೊಂಡು ವಾಣಿಜ್ಯ ಅಥವಾ ಇನ್ನಾವುದಾದರೂ ಸಮಸ್ಯೆಗೆ ಪರಿಹಾರ ಅಥವಾ ತಂತ್ರಾಂಶ ತಯಾರಿಸುವುದು. ಉದಾಹರಣೆಗೆ ಜನರೆಲ್ಲ ಸೇರಿ ಒಂದು ನಿಘಂಟು ತಯಾರಿಸುವುದು. ಅನುವಾದ ಆಗಬೇಕಾಗಿರುವ ಪದ ಅಥವಾ ಪದಗುಚ್ಛಗಳನ್ನು ಅಂತರಜಾಲದಲ್ಲಿ ಇಟ್ಟು ಎಲ್ಲರನ್ನು ಇವುಗಳನ್ನು ಅನುವಾದಿಸಲು ಆಹ್ವಾನಿಸುವುದು. ಈ ವಿಧಾನದಲ್ಲಿ ಸಹಾಯಹಸ್ತ ನೀಡುವ ಯಾರಿಗೂ ಸಂಭಾವನೆ ನೀಡಲಾಗುವುದಿಲ್ಲ. ಹೊರಗುತ್ತಿಗೆಗೆ ಬಳಸುವ ವಿಖ್ಯಾತ ಪದ ಔಟ್‌ಸೋರ್ಸಿಂಗ್ ಪದವನ್ನೇ ತಿರುಚಿ ಈ ಪದದ ಸೃಷ್ಟಿ ಮಾಡಲಾಗಿದೆ.

e - ಸಲಹೆ

ಗಣಕಿಂಡಿ ಓದುಗರಾದ ಉಮೇಶ ಗೌಡರ ಪ್ರಶ್ನೆ: ನಾನು ಕನ್ನಡ ಬ್ಲಾಗುಗಳನ್ನು ಮತ್ತು ಕೆಲವು ಕನ್ನಡ ಜಾಲತಾಣಗಳನ್ನು ಓದುವಾಗ ಚಿಕ್ಕಚಿಕ್ಕ ಚೌಕಗಳನ್ನು ಮಾತ್ರ ಕಾಣುತ್ತೇನೆ. ಕನ್ನಡದಲ್ಲಿ ಅಕ್ಷರಗಳು ಕಾಣಿಸುವುದಿಲ್ಲ. ಇದಕ್ಕೆ ಪರಿಹಾರವೇನು?
ಉ: ನಿಮ್ಮ ಗಣಕದಲ್ಲಿ ಕನ್ನಡ ಯುನಿಕೋಡ್ ಶಿಷ್ಟತೆಯನ್ನು ನೀವು ಚಾಲನೆಗೊಳಿಸದಿದ್ದಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಇತ್ತೀಚೆಗೆ ಬಹುಪಾಲು ಕನ್ನಡ ಜಾಲತಾಣಗಳು ಮತ್ತು ಬ್ಲಾಗ್ ತಾಣಗಳು ಯುನಿಕೋಡ್ ಶಿಷ್ಟತೆಯನ್ನು ಪಾಲಿಸುತ್ತಿವೆ. ಇದು ಜಾಗತಿಕ ಶಿಷ್ಟತೆ. ಇಂತಹ ಜಾಲತಾಣಗಳನ್ನು ವೀಕ್ಷಿಸಲು ನಿಮ್ಮ ಗಣಕವು ಭಾರತೀಯ ಭಾಷೆಗಳ ಯುನಿಕೋಡ್ ಬೆಂಬಲಿತವಾಗಿರಬೇಕು. ವಿಂಡೋಸ್‌ನಲ್ಲಾದರೆ ಎಕ್ಸ್‌ಪಿ ಮತ್ತು ನಂತರದ ಎಲ್ಲ ಆವೃತ್ತಿಗಳಲ್ಲಿ ಈ ಸೌಲಭ್ಯ ಇದೆ. ಆದರೆ ಅದನ್ನು ಚಾಲನೆಗೊಳಿಸಬೇಕು. ಅದು ಹೇಗೆ? ವಿವರಗಳಿಗೆ ಈ ಜಾಲತಾಣ ನೋಡಿ http://bit.ly/Qhzcl

ಕಂಪ್ಯೂತರ್ಲೆ

ಮಾಹಿತಿಯ ತೂಕವೆಷ್ಟು?

ಇದು ಮೈಕ್ರೋಸಾಫ್ಟ್ ಕಂಪೆನಿಯವರು ತಮ್ಮ ಗ್ರಾಹಕರು ಮತ್ತು ಇತರರು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲು, ಒಬ್ಬರೊಬ್ಬರಿಗೆ ಸಹಾಯ ಮಾಡಲು ಹಾಗೂ ಪರಸ್ಪರ ವಿಚಾರವಿನಿಮಯ ಮಾಡಿಕೊಳ್ಳಲು ನಿರ್ಮಿಸಿರುವ ಚರ್ಚಾಕೂಟದಲ್ಲಿ ಒಬ್ಬರು ನಿಜವಾಗಿಯೂ ಕೇಳಿದ ಪ್ರಶ್ನೆ: “ಒಂದು ಗಿಗಾಬೈಟ್ ಮಾಹಿತಿ ಎಷ್ಟು ತೂಗುತ್ತದೆ? ನಾನು ಲ್ಯಾಪ್‌ಟಾಪ್ ಕೊಂಡುಕೊಂಡಾಗ ಇದ್ದ ತೂಕಕ್ಕಿಂತ ಅದರಲ್ಲಿ ನಾನು ಸಾಕಷ್ಟು ಮಾಹಿತಿಗಳನ್ನು ಸೇರಿಸಿದ ಕಾರಣ ಈಗ ಅದರ ತೂಕ ಜಾಸ್ತಿಯಾಗಿದೆ. ಹೀಗೆ ಜಾಸ್ತಿಯಾಗಿ ನನ್ನ ಹಾರ್ಡ್‌ಡಿಸ್ಕ್ ಪೂರ್ತಿ ತುಂಬಿದಾಗ ಅದರ ತೂಕ ಎಷ್ಟು ಜಾಸ್ತಿ ಆಗುವುದು?”

2 ಕಾಮೆಂಟ್‌ಗಳು: