ಬುಧವಾರ, ನವೆಂಬರ್ 4, 2009

ಗಣಕಿಂಡಿ - ೦೨೪ (ನವಂಬರ್ ೦೨, ೨೦೦೯)

ಅಂತರಜಾಲಾಡಿ

ಅಂತರಜಾಲದಲ್ಲಿ ಕನ್ನಡ ಬೆರಳಚ್ಚು

ಕನ್ನಡ ಯುನಿಕೋಡ್ ಬೆರಳಚ್ಚು ಮಾಡಲು ವಿಂಡೋಸ್ ಎಕ್ಸ್‌ಪಿ ಮತ್ತು ನಂತರದ ಎಲ್ಲ ಆವೃತ್ತಿಗಳಲ್ಲಿ ಸೌಲಭ್ಯ ಇದೆ. ಲಿನಕ್ಸ್‌ನಲ್ಲೂ ಇದೆ. ಆದರೆ ಇದನ್ನು ಸಕ್ರಿಯಗೊಳಿಸಿರಬೇಕಾಗುತ್ತದೆ. ಇದಕ್ಕಾಗಿ ನಿಮಗೆ ಆ ಗಣಕಕ್ಕೆ ಅಧಿಕಾರಿ ಪರವಾನಗಿ ಬೇಕಾಗಿರುತ್ತದೆ. ಕೆಲವು ಕಂಪೆನಿಗಳಲ್ಲಿ ಉದ್ಯೋಗಿಗಳಿಗೆ ಈ ಪರವಾನಿಗೆ ಇರುವುದಿಲ್ಲ. ಹಲವು ಸೈಬರ್‌ಕೆಫೆಗಳಲ್ಲೂ ಕನ್ನಡದ ಬೆಂಬಲವನ್ನು ಸಕ್ರಿಯಗೊಳಿಸಿರುವುದಿಲ್ಲ. ಇಂತಹ ಕಡೆಗಳಲ್ಲಿ ಕನ್ನಡದ ಇಮೈಲ್ ಮಾಡಲು, ಬ್ಲಾಗ್ ಮಾಡಲು ಅಥವಾ ಬೇರೆ ಯಾವ ಕಾರಣಕ್ಕಾದರೂ ಅಂತರಜಾಲತಾಣಗಳಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡಬೇಕಾಗಿ ಬಂದಾಗ ಏನು ಮಾಡುವುದು? ಹಲವು ಕನ್ನಡ ಜಾಲತಾಣಗಳಲ್ಲಿ ಅವರೇ ಇಂತಹ ಸವಲತ್ತು ನೀಡಿರುತ್ತಾರೆ. ಗೂಗ್ಲ್‌ನವರು ಇಂಗ್ಲಿಶ್‌ನಿಂದ ಕನ್ನಡಕ್ಕೆ ಲಿಪ್ಯಂತರದ ಸವಲತ್ತು ನೀಡಿದ್ದಾರೆ. ಇದರಲ್ಲಿ ಇಂಗ್ಲಿಶ್ ಲಿಪಿಯಲ್ಲಿ ಬೆರಳಚ್ಚು ಮಾಡಿದರೆ ಕನ್ನಡ ಲಿಪಿಗೆ ಮಾರ್ಪಾಟು ಆಗುತ್ತದೆ. ಇದನ್ನು ಬಳಸಲು bit.ly/1ohe3Q ಜಾಲತಾಣಕ್ಕೆ ಭೇಟಿ  ನೀಡಿ. ಇದೇ ರೀತಿಯ ಸವಲತ್ತು ನೀಡುವ ಇನ್ನೊಂದು ಜಾಲತಾಣ quillpad.com/kannada. ಗೂಗ್ಲ್‌ನವರು ಬುಕ್‌ಮಾರ್ಕ್‌ಲೆಟ್ ಎನ್ನುವ ಇನ್ನೊಂದು ಸವಲತ್ತನ್ನು ನೀಡಿದ್ದಾರೆ. ಇದನ್ನು ಬಳಸಿ ಯಾವ ಜಾಲತಾಣದಲ್ಲಿ ಬೇಕಾದರೂ ಕನ್ನಡದಲ್ಲಿ ಬೆರಳಚ್ಚು ಮಾಡಬಹುದು. ಇದರ ವಿಳಾಸ bit.ly/28zTqR.     

ಡೌನ್‌ಲೋಡ್

ಭಾಷಾಇಂಡಿಯ ಕೀಲಿಮಣೆ

ವಿಂಡೋಸ್ ಎಕ್ಸ್‌ಪಿ ಮತ್ತು ನಂತರದ ಆವೃತ್ತಿಗಳಲ್ಲಿ ಕನ್ನಡ ಯುನಿಕೋಡ್ ಬೆರಳಚ್ಚು ಮಾಡಲು ಕೀಲಿಮಣೆಯ ಸವಲತ್ತನ್ನು ನೀಡಿದ್ದಾರೆ. ಇದು ಕೇಂದ್ರ ಸರಕಾರದ ಶಿಷ್ಟತೆಗನುಗುಣವಾಗಿರುವ ಇನ್‌ಸ್ಕ್ರಿಪ್ಟ್ ವಿನ್ಯಾಸದಲ್ಲಿದೆ. ಕೆ.ಪಿ.ರಾವ್ ಅವರು ಮೂಲಭೂತವಾಗಿ ವಿನ್ಯಾಸ ಮಾಡಿರುವ, ನುಡಿ ತಂತ್ರಾಂಶದಲ್ಲಿ ಅಳವಡಿಸಿರುವ, ಕಗಪ ಕೀಲಿಮಣೆಯೆಂದು ಕರೆಯಲ್ಪಡುತ್ತಿರುವ ವಿನ್ಯಾಸವು ತುಂಬ ಜನಪ್ರಿಯವಾಗಿದೆ. ಯುನಿಕೋಡ್‌ನಲ್ಲಿ ಬೆರಳಚ್ಚು ಮಾಡಲು ಈ ಕೀಲಿಮಣೆ ಬೇಕಿದ್ದರೆ ಭಾಷಾಇಂಡಿಯ ಜಾಲತಾಣದಲ್ಲಿ ಲಭ್ಯವಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ವಿಂಡೋಸ್ ೭ ರಲ್ಲು ಕೆಲಸ ಮಾಡುವಂತಹ ಆವೃತ್ತಿಯೂ ಲಭ್ಯವಿದೆ. ಇದು ಬೇಕಿದ್ದರೆ ಭಾಷಾಇಂಡಿಯ ಜಾಲತಾಣಕ್ಕೆ ಭೇಟಿ ನೀಡಿ.

e - ಸುದ್ದಿ

ಗಗನವು ಎಲ್ಲೋ ಲ್ಯಾಪ್‌ಟಾಪ್ ಎಲ್ಲೋ!

ವಿಮಾನಪ್ರಯಾಣಕ್ಕೆ ಬೋರ್ಡಿಂಗ್ ಪಾಸ್ ತೆಗೆದುಕೊಂಡ ನಂತರ ಕಾಯುತ್ತಿರುವಾಗ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತ ಸಮಯದ ಪರಿವೆಯಿಲ್ಲದೆ ವಿಮಾನವನ್ನು ಕಳಕೊಳಕೊಂಡ ಪ್ರಕರಣಗಳು ಹಲವಾರಿವೆ. ನನಗೂ ಒಮ್ಮೆ ಹೀಗೆ ಆಗಿತ್ತು. ಪತ್ರಿಕೆಯೊಂದಕ್ಕೆ ಲೇಖನ ತಯಾರು ಮಾಡುತ್ತ ಕುಳಿತಿದ್ದಾಗ ವಿಮಾನ ಹೊರಟೇ ಹೋಗಿತ್ತು. ಪ್ರಯಾಣಿಕರು ಹೀಗೆ ಮಾಡಿದರೆ ಅವರಿಗೆ ಮಾತ್ರ ನಷ್ಟ. ವಿಮಾನದ ಪೈಲಟ್ ವಿಮಾನ ಹಾರಿಸುತ್ತ ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡುತ್ತ ವಿಮಾನ ಇಳಿಯಬೇಕಾದ ನಿಲ್ದಾಣ ತಪ್ಪಿ ಮುಂದೆ ಹೋದರೆ? ಹೌದು. ಅಮೆರಿಕದಲ್ಲಿ ಹೀಗೇ ಆಗಿತ್ತು. ಒಬ್ಬ ಪೈಲಟ್ ಇನ್ನೊಬ್ಬ ಪೈಲಟ್‌ಗೆ ತನ್ನ ಲ್ಯಾಪ್‌ಟಾಪ್‌ನಲ್ಲಿ ಪಾಠ ಮಾಡುತ್ತ ಸಮಯದ ಪರಿವೆ ಇಲ್ಲದೆ ತಾನು ಇಳಿಯಬೇಕಾದ ನಿಲ್ದಾಣದಿಂದ ಸುಮಾರು ೧೦೦ ಕಿ.ಮೀ. ಮುಂದೆ ಹೋಗಿಬಿಟ್ಟಿದ್ದರು. ಕೊನೆಗೊಮ್ಮೆ ಗಗನಸಖಿ ಬಂದು ಎಚ್ಚರಿಸಿದಾಗ ಪರಿಸ್ಥಿತಿ ಅರಿವಾಗಿ ಹಿಂದೆ ಬಂದು ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ವಿಮಾನ ಚಲಾಯಿಸುತ್ತಿರುವಾಗ ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡಬಾರದು ಎಂದು ಅಂತಾರಾಷ್ಟ್ರೀಯ ವಿಮಾನಯಾನ ನಿಯಮವಿದೆ.

e- ಪದ

ಪ್ರಾಕ್ಸಿ ಸರ್ವರ್ (Proxy Server) -ಕಂಪೆನಿಗಳಲ್ಲಿ ಎಲ್ಲರು ಬಳಸುವ ಗಣಕಗಳು ಮತ್ತು ಅಂತರಜಾಲದ ಮಧ್ಯೆ ಇರುವಂತಹ ಒಂದು ಸರ್ವರ್. ಇದರ ಮುಖ್ಯ ಉದ್ದೇಶ, ಉದ್ಯೋಗಿಗಳು ನೇರವಾಗಿ ಅಂತರಜಾಲವನ್ನು ಸಂಪರ್ಕಿಸುವುದನ್ನು ತಡೆಯುವುದು. ಕಂಪೆನಿಯ ನಿಯಮದನ್ವಯ ಅನುಮತಿ ಇರುವಂತಹ ಜಾಲತಾಣಗಳನ್ನು ಮಾತ್ರ ಉದ್ಯೋಗಿಗಳು ವೀಕ್ಷಿಸಲು ಇದು ಅನುವು ಮಾಡಿಕೊಡುತ್ತದೆ. ಎಲ್ಲ ಉದ್ಯೋಗಿಗಳು ತುಂಬ ವೀಕ್ಷಿಸುವಂತಹ ಜಾಲತಾಣಗಳ ಪ್ರತಿಯನ್ನು ತನ್ನಲ್ಲೇ ಇಟ್ಟುಕೊಂಡು ಅಂತಹ ಜಾಲತಾಣಗಳ ವೀಕ್ಷಣೆ ಸುಗಮವಾಗಿ ಆಗುವಂತೆಯೂ ಈ ಪ್ರಾಕ್ಸಿ ಸರ್ವರ್ ಮಾಡುತ್ತದೆ.


e - ಸಲಹೆ

ರೋಹಿತ್ ಸಿಂಗ್ ಅವರ ಪ್ರಶ್ನೆ: ನಾನು ತಿಂಗಳಿಗೆ ಒಂದು ಸಲ ಹಾರ್ಡ್ ಡಿಸ್ಕನ್ನು ಫಾರ್ಮಾಟ್ ಮಾಡಬಹುದೇ?
ಉ: ಮಾಡಬಹುದು. ಆದರೆ ಅಗತ್ಯವಿಲ್ಲ. ಫಾರ್ಮಾಟ್ ಮಾಡುವ ಬದಲು ಆಗಾಗ ಸ್ವಚ್ಛ ಮಾಡಿ (ಸಿಕ್ಲೀನರ್ ಬಳಸಬಹುದು. ನೋಡಿ ಗಣಕಿಂಡಿ, ಜುಲೈ ೨೦, ೨೦೦೯). ಅನಂತರ ಬೇಕಿದ್ದರೆ ಡಿಫ್ರಾಗ್ಮೆಂಟ್ ಮಾಡಬಹುದು. ಕಾರ್ಯಾಚರಣೆಯ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) ಇರುವ ವಿಭಾಗವನ್ನು (ಪಾರ್ಟೀಶನ್) ಆಗಾಗ ಫಾರ್ಮಾಟ್ ಮಾಡುವುದು ಅಷ್ಟು ಒಳ್ಳೆಯದಲ್ಲ.

ಕಂಪ್ಯೂತರ್ಲೆ

ಗಣಕ(ತ)ಗಾದೆಗಳು

ಕವಿಯಾಗಲಾರದವ ವಿಮರ್ಶಕನಾಗುತ್ತಾನೆ. ಪ್ರೋಗ್ರಾಮರ್ ಆಗಲಾರದವ ಟೆಸ್ಟರ್ ಆಗುತ್ತಾನೆ.
ಬ್ಲಾಗ್ ಮಾಡಲು ತಾಳ್ಮೆ ಇಲ್ಲದವ (ಟ್ವಿಟ್ಟರ್‌ನಲ್ಲಿ) ಟ್ವೀಟ್ ಮಾಡುತ್ತಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ