ಸೋಮವಾರ, ನವೆಂಬರ್ 30, 2009

ಗಣಕಿಂಡಿ - ೦೨೮ (ನವಂಬರ್ ೩೦, ೨೦೦೯)

ಅಂತರಜಾಲಾಡಿ
ಕರ್ನಾಟಕ ಸಾಹಿತ್ಯ ಅಕಾಡೆಮಿ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಂತರಜಾಲತಾಣದ ವಿಳಾಸ karnatakasahithyaacademy.org. ಈ ಜಾಲತಾಣ ಸಂಪೂರ್ಣ ಫ್ಲಾಶ್‌ನಲ್ಲಿದೆ. ಯಾವುದೇ ಮಾಹಿತಿ ಪಠ್ಯ ರೂಪದಲ್ಲಿಲ್ಲ. ಅಂದರೆ ಇಲ್ಲಿರುವ ಮಾಹಿತಿಯನ್ನು ಗೂಗ್ಲ್, ಬಿಂಗ್ ಅಥವಾ ಬೇರೆ ಯಾವುದೇ ಶೋಧಕ ಬಳಸಿ ಹುಡುಕಲು ಅಸಾಧ್ಯ. ಉದಾಹರಣೆಗೆ ಈ ಜಾಲತಾಣದಲ್ಲಿ ಕನ್ನಡದ ಹಲವು ಜೀವಂತ ಮತ್ತು ದಿವಂಗತ ಸಾಹಿತಿಗಳ ವಿಳಾಸ ಇದೆ (ಹೌದು, ಎಂದೋ ನಿಧನರಾದ ಸಾಹಿತಿಗಳ ವಿಳಾಸವೂ ಇದೆ!). ನೀವು ಗೂಗ್ಲ್ ಬಳಸಿ ಸಾಹಿತಿಗಳ ಮಾಹಿತಿ ಹುಡುಕಿದಾಗ ಈ ಜಾಲತಾಣದಲ್ಲಿರುವ ಮಾಹಿತಿ ದೊರೆಯುವುದಿಲ್ಲ. ಇದಕ್ಕೆಲ್ಲ ಕಾರಣ ಈ ಜಾಲತಾಣ ಕನ್ನಡ ಯುನಿಕೋಡ್ ಬಳಸದೆ ಫ್ಲಾಶ್ ವಿಧಾನವನ್ನು ಬಳಸಿರುವುದು. ಕನ್ನಡದ ಜಾಲತಾಣ ಯಾವ ರೀತಿ ಇರಬಾರದು ಎಂಬುದಕ್ಕೆ ಈ ಜಾಲತಾಣ ಉತ್ತಮ ಉದಾಹರಣೆ. ಇದೇ ರೀತಿಯ ಇನ್ನೂ ಒಂದು ಉದಾಹರಣೆ ಬೇಕಿದ್ದರೆ ಕನ್ನಡ ಸಾಹಿತ್ಯ ಪರಿಷತ್ತಿನ ಜಾಲತಾಣವನ್ನು (kasapa.org) ನೋಡಬಹುದು. ಇದರಲ್ಲಿ ಈಗಲೂ ಚಂಪಾ ಅವರೇ ಅಧ್ಯಕ್ಷರಾಗಿದ್ದಾರೆ! ಇದು ಇನ್ನೂ ೨೦೦೬ರಲ್ಲೇ ಇದೆ.

ಡೌನ್‌ಲೋಡ್
ಪ್ರಪಂಚಾದ್ಯಂತ ಶಾಲೆಗಳಲ್ಲಿ ೫ ರಿಂದ ೮ ನೇ ತರಗತಿಳಿಗೆ ಕಲಿಸುವುದು ಲೋಗೋ (LOGO) ಎಂಬ ಮಕ್ಕಳಿಗಾಗಿಯೇ ಸಿದ್ಧವಾಗಿರುವ ಗಣಕ ಕ್ರಮವಿಧಿ ತಯಾರಿಯ ತಂತ್ರಾಂಶ/ಭಾಷೆ (programming language for children). ಇದನ್ನು ಉಪಯೋಗಿಸಿ ಮಕ್ಕಳು ಗಣಕದಲ್ಲಿ ಕ್ರಮವಿಧಿ ತಯಾರಿಯ ಮುಖ್ಯ ಅಂಶಗಳನ್ನು ಕಲಿಯುತ್ತಾರೆ. ೬೦ರ ದಶಕದಿಂದಲೇ ಪ್ರಪಂಚಾದ್ಯಂತ ಉಪಯೋಗಲ್ಲಿರುವ ಲೋಗೋ ಮೂಲ ಇಂಗ್ಲೀಷ್ ಭಾಷೆಯಲ್ಲಿದೆ. ಜರ್ಮನ್, ಫ್ರೆಂಚ್, ಇಟಾಲಿಯನ್, ಗ್ರೀಕ್, ಡಚ್, ಜಪಾನ್, ಇತ್ಯಾದಿ ಭಾಷೆಗಳಲ್ಲಿ ಲೋಗೋ ಲಭ್ಯವಿದೆ. ಭಾರತದ ಶಾಲೆಗಳಲ್ಲೂ ಇಂಗ್ಲಿಷ್ ಭಾಷೆಯ ಲೋಗೋವನ್ನು ಕಲಿಸುತ್ತಿದ್ದಾರೆ. ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕಲಿಸಲು ಕನ್ನಡ ಭಾಷೆಯಲ್ಲಿ ಲೋಗೋ ಲಭ್ಯವಿದೆ. ಲೋಗೋದಲ್ಲಿ ಕ್ರಮವಿಧಿ ರಚಿಸುವ ಮೂಲಕ ಮಕ್ಕಳು ಮತ್ತು ಗಣಕ ತಂತ್ರಾಂಶ ತಯಾರಿಯ ಕ್ಷೇತ್ರಕ್ಕೆ ಕಾಲಿಡುತ್ತಿರುವ ದೊಡ್ಡವರು ಗಣಿತ, ತರ್ಕಗಳಲ್ಲಿ ಪರಿಣತಿಯನ್ನು ಹೊಂದಬಹುದು. ಗಣಕ ಕ್ಷೇತ್ರದಲ್ಲಿ ಮುಂದೆ ಬರಲು ಇವೆರಡು ಬಹುಮೂಲ್ಯ ಪೂರಕಗಳು. ಕನ್ನಡಲೋಗೊ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ -vishvakannada.com/kannadalogo

e - ಸುದ್ದಿ
ಪೋಕರಿತನ ಮಾಡಿದ್ದಕ್ಕೆ ದಂಡ ಅಲ್ಲ ಕೆಲಸ
ನಮ್ಮಲ್ಲೊಂದು ಗಾದೆ ಇದೆ “ಕಳ್ಳನ ಕೈಯಲ್ಲಿ ಬೀಗದ ಕೈ ಕೊಡಬೇಕು” ಎಂದು. ಕಳ್ಳರನ್ನು ಹಿಡಿಯಲು ಸುಧಾರಿತ ಕಳ್ಳರನ್ನೇ ನೇಮಿಸುವುದನ್ನು ಚಲನಚಿತ್ರಗಳಲ್ಲಿ ನೋಡಿರುತ್ತೀರಿ. ಸುಮಾರು ಇದೇ ರೀತಿಯ ಸುದ್ದಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ಬಂದಿದೆ. ಐಫೋನ್‌ಗೆ ಒಂದು ರೀತಿಯ ವೈರಸ್ (ನಿಜವಾಗಿ ಅದು ವೈರಸ್ ಅಲ್ಲ, ಅದನ್ನು ಗಣಕ ಪರಿಭಾಷೆಯಲ್ಲಿ ವರ್ಮ್ (ಹುಳ?) ಎನ್ನುತ್ತಾರೆ) ತಯಾರಿಸಿದವನನ್ನು ಒಂದು ಕಂಪೆನಿ ಕೆಲಸಕ್ಕೆ ತೆಗೆದುಕೊಂಡಿದೆ. ಈ ವರ್ಮ್‌ಗಳು ಒಂದು ಗಣಕ ಅಥವಾ ಫೋನಿನಿಂದ ಇನ್ನೊಂದಕ್ಕೆ ಎಲ್ಲ ನಮೂನೆಯ ಸಂಪರ್ಕಜಾಲಗಳ ಮೂಲಕ ಹರಿದಾಡಿ ಕಿಡಿಗೇಡಿತನ ನಡೆಸುತ್ತವೆ. ಅದು ವೈರಸ್ ಆಗಿದ್ದರೂ ಒಂದು ಅದ್ಭುತ ತಂತ್ರಾಂಶವೇ ತಾನೆ? ಅದನ್ನು ತಯಾರಿಸಲು ಸಾಮಾನ್ಯ ಪ್ರೋಗ್ರಾಮರುಗಳಿಗಿಂತ ಹೆಚ್ಚಿನ ಕೌಶಲ್ಯ ಬೇಕಾಗುತ್ತದೆ. ಇಂತಹ ಕೌಶಲ್ಯ ಇರುವವರನ್ನು ಕೆಲಸಕ್ಕೆ ತೆಗೆದುಕೊಂಡರೆ ಕಂಪೆನಿಗೆ ಒಳ್ಳೆಯದೇ ತಾನೆ? ಹೇಗಿದೆ ತರ್ಕ? ಇಂತಹವರನ್ನು ವೈರಸ್ ನಿರೋಧಕ ತಂತ್ರಾಂಶ ತಯಾರಿಗೆ ಬಳಸಿಕೊಂಡರೆ ಇನ್ನಷ್ಟು ಒಳ್ಳೆಯದು.

e- ಪದ

ಟಾಸ್ಕ್‌ಬಾರ್

ಟಾಸ್ಕ್‌ಬಾರ್ (taskbar) -ಇದನ್ನು ವಿಂಡೋಸ್ ಟಾಸ್ಕ್‌ಬಾರ್ ಎಂದೂ ಕರೆಯುತ್ತಾರೆ. ಗಣಕದ ಪರದೆಯ ಕೆಳಭಾಗದಲ್ಲಿ ಗೋಚರಿಸುವ ಒಂದು ಪಟ್ಟಿ. ಸದ್ಯ ಚಾಲನೆಯಲ್ಲಿರುವ ತಂತ್ರಾಂಶಗಳ ಚಿತ್ರಿಕೆ (ಐಕಾನ್) ಇಲ್ಲಿ ಕಂಡುಬರುತ್ತದೆ. ಇದನ್ನು ಬಳಸಿ ಬೇಕಾದ ತಂತ್ರಾಂಶವನ್ನು ಮುಂದಕ್ಕೆ ತಂದು ಕೆಲಸ ಮಾಡಬಹುದು. ಈ ಟಾಸ್ಕ್‌ಬಾರ್ ಅನ್ನು ವಿಂಡೋಸ್ ೭ ರಲ್ಲಿಇನ್ನಷ್ಟು ಸುಧಾರಿಸಿದ್ದಾರೆ.

e - ಸಲಹೆ

ಟಾಸ್ಕ್‌ಬಾರ್ ನಾಪತ್ತೆಯಾದರೆ

ಕೆಲವೊಮ್ಮೆ ವಿಂಡೋಸ್ ಟಾಸ್ಕ್‌ಬಾರ್ ನಾಪತ್ತೆಯಾಗಿರುತ್ತದೆ. ಇದಕ್ಕೆ ಕಾರಣ ಟಾಸ್ಕ್‌ಬಾರ್‌ನಲ್ಲಿಯ ಆಟೋಹೈಡ್ (Auto-hide) ಎಂಬ ಆಯ್ಕೆ.  ಇದನ್ನು ಆಯ್ಕೆ ಮಾಡಿಕೊಂಡರೆ ಮೌಸ್ ಈ ಟಾಸ್ಕ್‌ಬಾರ್‌ನಿಂದ ದೂರ ಹೋದೊಡನೆ ಅದು ಅದೃಶ್ಯವಾಗುತ್ತದೆ. ಆಗ ಮೌಸ್ ಅನ್ನು ಪರದೆಯ ಕೆಳಭಾಗಕ್ಕೆ ತಂದರೆ ಟಾಸ್ಕ್‌ಬಾರ್ ಮತ್ತೆ ಗೋಚರಿಸುತ್ತದೆ. ಟಾಸ್ಕ್‌ಬಾರ್ ಅದೃಶ್ಯವಾಗಬಾರದು ಎಂದಿದ್ದಲ್ಲಿ ಅದರ ಮೇಲೆ ಮೌಸ್‌ನ ಬಲಗುಂಡಿಯನ್ನು ಕ್ಲಿಕ್ ಮಾಡಿ Properties ಅನ್ನು ಆಯ್ಕೆ ಮಾಡಿ ನಂತರ Auto-hide the taskbar ಎಂಬ ಆಯ್ಕೆಯನ್ನು ರದ್ದು ಮಾಡಿ.

ಕಂಪ್ಯೂತರ್ಲೆ

ಗೂಗ್ಲ್‌ನವರು ಇತ್ತೀಚೆಗೆ ನಿಘಂಟು ಸವಲತ್ತು ನೀಡಿದ್ದಾರೆ (google.com/dictionary). ಇದರಲ್ಲಿ ಜಗತ್ತಿನ ಹಲವು ಭಾಷೆಗಳ ನಡುವೆ ಪದ ಅಥವಾ ಪದಗುಚ್ಛಗಳ ಅರ್ಥ ವಿವರ ತಿಳಿಯುವ ಸವಲತ್ತು ಇದೆ. ಇದರಲ್ಲಿ ಇಂಗ್ಲಿಷ್ ಮತ್ತು ಕನ್ನಡ ಮಧ್ಯೆ ಕೆಲವು ಪದಗಳ ಅರ್ಥ ಹುಡುಕಿದಾಗ ದೊರಕಿದ್ದು:
second-storey man = ಚಾವಣಿ ಚೋರ, ಮಾಳಿಗೆ ಕಳ್ಳ
wise woman = ಮಾಟಗಾತಿ, ಮಂತ್ರವಾದಿನಿ
old woman = ರಗಳೆ ಮನುಷ್ಯ, ಪುಕ್ಕಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ