ಸೋಮವಾರ, ಡಿಸೆಂಬರ್ 7, 2009

ಗಣಕಿಂಡಿ - ೦೨೯ (೭, ೨೦೦೯)

ಅಂತರಜಾಲಾಡಿ
ಪರಿಸರಕ್ಕಾಗಿ ತಂತ್ರಜ್ಞಾನವ್ಯಸನಿಗಳು
ಆಧುನಿಕ ತಂತ್ರಜ್ಞಾನದ ಅತಿಯಾದ ಬಳಕೆಯಿಂದಾಗಿ ಭೂಮಿ ಬಿಸಿಯಾಗುತ್ತಿದೆ, ಪ್ರಾಕೃತಿಕ ಸಂಪತ್ತು ಕಡಿಮೆಯಾಗುತ್ತಿದೆ, ಪ್ರದೂಷಣ ಜಾಸ್ತಿಯಾಗುತ್ತಿದೆ, ಇತ್ಯಾದಿ ಓದುತ್ತಲೇ ಇರುತ್ತೇವೆ. ತಂತ್ರಜ್ಞಾನವನ್ನೇ ಈ ಪರಿಸರದ ಒಳಿತಿಗಾಗಿ ಬಳಸಿದರೆ ಹೇಗೆ? ಸೌರವಿದ್ಯುತ್ ಬಳಕೆ ಎಲ್ಲರಿಗೂ ಗೊತ್ತು. ಹಾಗೆಯೇ ಗಾಳಿಯಂತ್ರ. ಇದೇ ರೀತಿ ತಂತ್ರಜ್ಞಾನವನ್ನು ಇನ್ನೂ ಹಲವು ರೀತಿಯಲ್ಲಿ ಪರಿಸರದ ಉಳಿವಿಗಾಗಿ ಬಳಸಬಹುದು. ಪರಿಸರಕ್ಕಾಗಿ ತಂತ್ರಜ್ಞಾನವನ್ನು ಯಾವ ರೀತಿ ಬಳಸಬಹುದು ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸುವ ಜಾಲತಾಣ www.ecogeek.org.

ಡೌನ್‌ಲೋಡ್
ಅಳಿಸಿದ ಮೇಲೆ ಅಳುತ್ತೀರಾ?
ಹೌದು. ಹಲವು ಬಾರಿ ಫೈಲುಗಳನ್ನು ಇವು ಬೇಡ ಎಂದು ಅಳಿಸಿ ಹಾಕಿದ ಮೇಲೆ, ಛೇ, ಹಾಗೆ ಮಾಡಬಾರದಿತ್ತು, ಅದೀಗ ಬೇಕಾಗಿತ್ತು, ಏನು ಮಾಡಲಿ ಎಂದು ಚಿಂತಿಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಅಳಿಸಿದುದನ್ನು ಮತ್ತೆ ಹಿಂದಕ್ಕೆ ಪಡೆಯುವಂತೆ ಮಾಡುವ ತಂತ್ರಾಂಶ ಬೇಕು. ಅಂತಹ ಒಂದು ತಂತ್ರಾಂಶ NTFS Undelete. ಇದು ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/5471SB. ಇಲ್ಲೊಂದು ಎಚ್ಚರಿಕೆ ನೀಡಬೇಕಾಗಿದೆ. ವಿಂಡೋಸ್ ತಂತ್ರಾಂಶವು ನೀವು ಒಂದು ಫೈಲನ್ನು ಅಳಿಸಿದಾಗ ಅದನ್ನು ನಿಜವಾಗಿ ಅಳಿಸುವುದಿಲ್ಲ. ಆ ಫೈಲು ಬಳಸಿದ ಜಾಗವನ್ನು ಬೇರೆ ಫೈಲುಗಳಿಗೆ ಲಭ್ಯ ಎಂದು ದಾಖಲಿಸುತ್ತದೆ. ಆ ಮಾಹಿತಿ ಅಲ್ಲೇ ಇರುತ್ತದೆ. ಇನ್ನೊಂದು ಫೈಲು ತಯಾರಿಸಿದಾಗ ಈ ಜಾಗವನ್ನು ಅದು ಬಳಸುವ ಸಾಧ್ಯತೆಗಳಿವೆ. ಆದುದರಿಂದ ಒಂದು ಫೈಲು ಅಳಿಸಿ ಎಷ್ಟು ಸಮಯದೊಳಗೆ ನೀವು ಈ ತಂತ್ರಾಂಶವನ್ನು ಬಳಸುತ್ತೀರಿ ಎಂಬುದನ್ನು ಹೊಂದಿಕೊಂಡು ನಿಮಗೆ ಆ ಫೈಲಿನ ಮಾಹಿತಿ ಪೂರ್ತಿಯಾಗಿ ವಾಪಾಸು ದೊರಕುತ್ತೋ ಇಲ್ಲವೋ ಎಂಬುದು ಹೊಂದಿಕೊಂಡಿದೆ.

e - ಸುದ್ದಿ
ರಜಾ ಹಾಕಿ ಮಜಾ ಮಾಡಿದರೆ
ಮಾನಸಿಕವಾಗಿ ಖಿನ್ನತೆಯಿಂದ ನರಳುತ್ತಿರುವುದಾಗಿ ವೈದ್ಯರಿಂದ ಶಿಫಾರಸುಪತ್ರ ತೆಗೆದುಕೊಂಡು ಅದರ ಬಲದಿಂದ ವೈದ್ಯಕೀಯ ರಜೆ ಪಡೆದು ಸಮುದ್ರಕಿನಾರೆಯಲ್ಲಿ ಮಜಾ ಮಾಡಿದ್ದ ಉದ್ಯೋಗಿಯೊಬ್ಬಳನ್ನು ಕೆಲಸದಿಂದ ತೆಗೆದುಹಾಕಿದ ಘಟನೆ ಕೆನಡಾದಿಂದ ವರದಿಯಾಗಿದೆ. ಅದರಲ್ಲೇನು ಮಹಾ? ನಮ್ಮ ದೇಶದಲ್ಲೂ ಸುಳ್ಳು ನೆವ ನೀಡಿ ರಜಾಪಡೆದು ಸಿಕ್ಕಿಬಿದ್ದು ಕೆಲಸ ಕಳೆದುಕೊಂಡ ಉದಾಹರಣೆಗಳಿಲ್ಲವೇ ಎಂದು ಕೇಳಬಹುದು. ಆದರೆ ಇಲ್ಲಿ ಆಕೆ ಸಿಕ್ಕಿಬಿದ್ದದ್ದು ಫೇಸ್‌ಬುಕ್‌ನಿಂದಾಗಿ. ತಾನು ಸಮುದ್ರಕಿನಾರೆಯಲ್ಲಿ ಸಂತೋಷವಾಗಿ ಕಾಲಕಳೆದುದರ ಭಾವಚಿತ್ರಗಳನ್ನು ಆಕೆ ತನ್ನ ಫೇಸ್‌ಬುಕ್ ಜಾಲತಾಣದಲ್ಲಿ ದಾಖಲಿಸಿದ್ದಳು. ಅದನ್ನು ನೋಡಿದ ವಿಮಾ ಕಂಪೆನಿಯವರು “ನೀನು ಖಿನ್ನಳಾಗಿಲ್ಲ, ಆದುದರಿಂದ ನಿನಗೆ ಸಂಬಳಸಹಿತ ವೈದ್ಯಕೀಯ ರಜೆಯ ಸವಲತ್ತು ನೀಡಲಾಗುವುದಿಲ್ಲ” ಎಂದರು. ಇದೇ ಕಾರಣ ನೀಡಿ ಕಂಪೆನಿಯೂ ಆಕೆಯ ಸಹಾಯಕ್ಕೆ ಬರಲಿಲ್ಲ.

e- ಪದ

ತಂತ್ರಜ್ಞಾನವ್ಯಸನಿ (ಗೀಕ್, geek) - ತಂತ್ರಜ್ಞಾನಕ್ಕೆ ಅತಿಯಾಗಿ ಅಂಟಿಕೊಂಡಿರುವ ವ್ಯಕ್ತಿ. ಇದು ಉತ್ತಮ ಪದವಾಗಿಯೂ ಕೆಟ್ಟ ಪದವಾಗಿಯೂ ಬಳಕೆಯಲ್ಲಿದೆ. ಯಾವಾಗಲೂ ತಂತ್ರಜ್ಞಾನಕ್ಕೆ ಅಂಟಿಕೊಂಡಿರುವುದು ಒಳ್ಳೆಯದೋ ಕೆಟ್ಟದೋ ಎಂಬ ನಿಮ್ಮ ತೀರ್ಮಾನಕ್ಕೆ ಅನುಗುಣವಾಗಿ ಇದು ಒಳ್ಳೆಯ ಪದವೋ ಕೆಟ್ಟ ಪದವೋ ಎಂದು ತೀರ್ಮಾನಕ್ಕೆ ನೀವು ಬರಬಹುದು.


e - ಸಲಹೆ

ನುಡಿಯಿಂದ ಯುನಿಕೋಡ್‌ಗೆ

ಮೈಸೂರಿನ ಅಮಾಸೆ ಮಂಜುನಾಥರ ಪ್ರಶ್ನೆ: ನಾನೊಂದು ಬ್ಲಾಗ್ ಮಾಡಿಕೊಳ್ಳಬೇಕೆಂದುಕೊಂಡಿದ್ದೇನೆ. ಈಗ ನನ್ನ ಸಮಸ್ಯೆಯೇನೆಂದರೆ ನಾನು ನನ್ನ ಸಿಸ್ಟಂನಲ್ಲಿ ನುಡಿಯಲ್ಲಿ ಟೈಪ್ ಮಾಡಿಟ್ಟುಕೊಂಡಿರುವ text ಅನ್ನು ಬರಹಕ್ಕೆ ಕನ್ವರ್ಟ್ ಮಾಡಿ ಬ್ಲಾಗ್‌ಗೆ ಪೋಸ್ಟ್ ಮಾಡುವುದು ಹೇಗೆ? ದಯವಿಟ್ಟು ತಿಳಿಸಿಕೊಡಿ. ಯಾಕೆಂದರೆ ಬ್ಲಾಗ್‌ನಲ್ಲಿಯೇ ಟೈಪ್ ಮಾಡುವುದು ಬಹಳ ತ್ರಾಸದಾಯಕ ಮತ್ತು ತುಂಬ ಸಮಯ ಹಿಡಿಯುತ್ತದೆ. ಪರಿಹಾರ ತಿಳಿಸಿ.
ಉ: ಇದನ್ನು ಹಿಂದೊಮ್ಮೆ ವಿವರಿಸಲಾಗಿತ್ತು. ನುಡಿ ಮತ್ತು ಬರಹ ಒಂದೇ ಫಾಂಟ್ ಸಂಕೇತವನ್ನು ಬಳಸುತ್ತವೆ. ಮೊದಲನೆಯದಾಗಿ ನುಡಿ ಫಾಂಟ್‌ನಲ್ಲಿರುವ ಪಠ್ಯವನ್ನು ಬರಹ ಫಾಂಟ್‌ಗೆ ಬದಲಿಸಿ. ಬ್ಲಾಗ್‌ಗೆ ಸೇರಿಸಲು ಅಥವಾ ಇಮೈಲ್ ಮಾಡಲು ಪಠ್ಯವು ಯುನಿಕೋಡ್‌ನಲ್ಲಿರಬೇಕು. ಇದಕ್ಕಾಗಿ ಬರಹ ತಂತ್ರಾಂಶದಲ್ಲಿ ಒಂದು ಸವಲತ್ತು ಲಭ್ಯವಿದೆ. ಬರಹ ಡೈರೆಕ್ಟನ್ನು ಪ್ರಾರಂಭಿಸಿ. ಪಠ್ಯವು ಮೈಕ್ರೋಸಾಫ್ಟ್ ವರ್ಡ್‌ನಲ್ಲಿದ್ದರೆ ಅದನ್ನು ಆಯ್ಕೆ ಮಾಡಿ ನಕಲು ಮಾಡಿ (Ctrl-C ಒತ್ತಿ). ನಂತರ ಸಿಸ್ಟಂ ಟ್ರೇನಲ್ಲಿರುವ (ಪರದೆಯ ಬಲಭಾಗದ ಕೆಳಮೂಲೆಯಲ್ಲಿರುವ ಗಡಿಯಾರದ ಪಕ್ಕದಲ್ಲಿರುವ) ಬರಹ ಡೈರೆಕ್ಟ್‌ನ ಚಿತ್ರಿಕೆ (ಐಕಾನ್) ಮೇಲೆ ಮೌಸ್‌ನ ಬಲ ಗುಂಡಿ ಕ್ಲಿಕ್ ಮಾಡಿ Convert To -> Kannada -> Unicode ಎಂದು ಆಯ್ಕೆ ಮಾಡಿ. ನಂತರ ನಿಮಗೆ ಬೇಕಾದಲ್ಲಿ ಪಠ್ಯವನ್ನು ಅಂಟಿಸಿ (Ctrl-V ಒತ್ತಿ).

ಕಂಪ್ಯೂತರ್ಲೆ

“ಹಲೋ, ನನ್ನ ಕಂಪ್ಯೂಟರ್ ಕೆಲಸ ಮಾಡುತ್ತಿಲ್ಲ”
“ನೀವು ವಿಂಡೋಸ್‌ನಲ್ಲಿ ಕೆಲಸ ಮಾಡುತ್ತಿದ್ದೀರಾ?”
“ಇಲ್ಲಪ್ಪ. ನಾನು ಕುರ್ಚಿಯಲ್ಲಿ ಕುಳಿತು ಮೇಜಿನ ಮೇಲೆ ಕೆಲಸ ಮಾಡುತ್ತಿದ್ದೇನೆ”

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ