ಮಂಗಳವಾರ, ಡಿಸೆಂಬರ್ 15, 2009

ಗಣಕಿಂಡಿ - ೦೩೦ (೧೪, ೨೦೦೯)

ಅಂತರಜಾಲಾಡಿ

ಭಾರತೀಯ ವಿದ್ಯುನ್ಮಾನ ಗ್ರಂಥಾಲಯ

ಪುಸ್ತಕಗಳನ್ನು ಅಂಕೀಕರಿಸಿ ಅಂದರೆ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಅದನ್ನು ಗಣಕದಲ್ಲಿ, ಸಿ.ಡಿ.ಯಲ್ಲಿ ಅಥವಾ ಅಂತರಜಾಲದಲ್ಲಿ ಓದಲು ಅನುವಾಗುವಂತೆ ಮಾಡುವ ವಿಧಾನಕ್ಕೆ e-book ಅರ್ಥಾತ್ ವಿದ್ಯುನ್ಮಾನ ಪುಸ್ತಕ ಎನ್ನುತ್ತಾರೆ. ಈ ರೀತಿಯ ವಿದ್ಯುನ್ಮಾನ ಪುಸ್ತಕಗಳಿಗೆಂದೇ ಹಲವಾರು ಜಾಲತಾಣಗಳಿವೆ. ಭಾರತ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಭಾರತೀಯ ವಿದ್ಯುನ್ಮಾನ ಪುಸ್ತಕ ಭಂಡಾರ. ಇದು ಅಂತರಜಾಲದಲ್ಲಿ ಉಚಿತವಾಗಿ ಓದಲು ಲಭ್ಯವಿದೆ. ಅದರ ವಿಳಾಸ www.new.dli.ernet.in. ಕನ್ನಡವೂ ಸೇರಿದಂತೆ ಭಾರತದ ಎಲ್ಲ ಭಾಷೆಯ ಸಹಸ್ರಾರು ಪುಸ್ತಕಗಳು ಇಲ್ಲಿ ಓದಲು ಲಭ್ಯವಿವೆ. ಆದರೆ ಪುಸ್ತಕಗಳನ್ನು ಜಾಲತಾಣದಲ್ಲಿಯೇ ಓದಬೇಕು. ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸವಲತ್ತನ್ನು ನೀಡಿಲ್ಲ. ಬಹುಶಃ ಇದಕ್ಕೆ ಪುಸ್ತಕಗಳ ಹಕ್ಕುಸ್ವಾಮ್ಯದ ಸಮಸ್ಯೆ ಅಡ್ಡಿಯಾಗಿರಬೇಕು.

ಡೌನ್‌ಲೋಡ್
ದಿನಚರಿ ಬರೆಯುವವರಿಗೆ
ಈಗಿನ ಕಾಲದಲ್ಲೂ ದಿನಚರಿ ಬರೆಯುವವರಿದ್ದಾರೆಯೇ? ಹಾಗೆ ಬರೆಯುವ ಅಭ್ಯಾಸವಿದ್ದವರಲ್ಲಿ ಎಷ್ಟು ಜನ ಗಣಕ ಬಳಕೆದಾರರಿದ್ದಾರೆ? ನೀವು ಅಂತವರಲ್ಲೊಬ್ಬರಾದರೆ ದಿನಚರಿಯನ್ನು ಪುಸ್ತಕದಲ್ಲಿ ಬರೆಯುವ ಬದಲು ಗಣಕದಲ್ಲಿ ಬರೆಯುವಂತಿದ್ದರೆ ಚೆನ್ನಾಗಿತ್ತು ಅನ್ನಿಸಿರಬಹುದಲ್ಲವೇ? ಹಾಗಿದ್ದರೆ ನಿಮಗೆ ಬೇಕು Efficient Diary ತಂತ್ರಾಂಶ. ಇದು ದೊರಕುವ ಜಾಲತಾಣದ ವಿಳಾಸ www.efficientdiary.com. ಇದರಲ್ಲಿ ಕನ್ನಡ ಲಿಪಿಯಲ್ಲಿ (ಯುನಿಕೋಡ್‌ನಲ್ಲಿ) ಮಾಹಿತಿ ದಾಖಲಿಸಲು ಆಗುವುದಿಲ್ಲ. ಕನ್ನಡಲ್ಲಿ ಬೆರಳಚ್ಚು ಮಾಡಬಲ್ಲ ದಿನಚರಿ ತಂತ್ರಾಂಶ iDailyDiary (http://bit.ly/4CL7Fv). ಇದರಲ್ಲಿ ಕನ್ನಡದಲ್ಲಿ ಬೆರಳಚ್ಚೇನೋ ಮಾಡಬಹುದು, ಆದರೆ ಮಾಹಿತಿಯನ್ನು ಹುಡುಕುವ ಸವಲತ್ತಿನಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡಲು ಆಗುವುದಿಲ್ಲ. ಕನ್ನಡದಲ್ಲಿ (ಯುನಿಕೋಡ್) ಸಂಪೂರ್ಣವಾಗಿ ಬಳಕೆ ಮಾಡಬಹುದಾದ  ಉಚಿತ ದಿನಚರಿ ತಂತ್ರಾಂಶ ಇನ್ನೂ ನನಗೆ ಪತ್ತೆಯಾಗಿಲ್ಲ. ನಿಮ್ಮಲ್ಲಿ ಯಾರಿಗಾದರೂ ಗೊತ್ತಿದ್ದರೆ ತಿಳಿಸಬಹುದು.

e - ಸುದ್ದಿ
ಆಟದ ಸಾಮಾನು ಕೊಡದಿದ್ದುದಕ್ಕೆ ಪೋಲೀಸರಿಗೆ ದೂರು!
ಅಮೇರಿಕ ದೇಶದಲ್ಲಿ ೯೧೧ ಎಂಬ ದೂರವಾಣಿ ಸಂಖ್ಯೆ ನಮ್ಮ ದೇಶದ ದೂರವಾಣಿ ಸಂಖ್ಯೆ ೧೦೦ಕ್ಕೆ ಸಮಾನ. ಇದಕ್ಕೆ ಕರೆ ಮಾಡಿದರೆ ನೇರವಾಗಿ ಪೋಲೀಸ್ ಕೇಂದ್ರಕ್ಕೆ ಹೋಗುತ್ತದೆ. ಆಪತ್‌ಕಾಲೀನ ಪರಿಸ್ಥಿತಿಯಲ್ಲಿ ದೂರು ನೀಡಲು ಇದನ್ನು ಬಳಸುತ್ತಾರೆ. ಒಂದು ದಿನ ಈ ಸಂಖ್ಯೆಗೆ ಒಬ್ಬ ೧೫ ವರ್ಷ ಪ್ರಾಯದ ಹುಡುಗನಿಂದ ಕರೆ ಬಂತು. ಆತನ ದೂರು ಏನು ಗೊತ್ತೆ? ಆತನ ಎಕ್ಸ್‌ಬಾಕ್ಸ್ ಎಂಬ ಗಣಕಾಧಾರಿತ ಆಟದ ಸಾಮಾನನ್ನು ಆತನ ಪೋಷಕರು ಆತನಿಗೆ ನೀಡುತ್ತಿಲ್ಲ ಎಂಬುದಾಗಿತ್ತು. ಮಕ್ಕಳು ಆಟದಲ್ಲೇ ಹೊತ್ತು ಕಳೆಯುತ್ತಿದ್ದರೆ ಅವರ ಆಟದ ಸಾಮಾನನ್ನು ಎತ್ತಿಡುವುದನ್ನು ಎಲ್ಲ ತಂದೆತಾಯಿಯರು ಮಾಡುತ್ತಾರೆ ತಾನೆ? ಹಾಗೆಯೇ ಅಲ್ಲಿಯೂ ಆಗಿತ್ತು. ಪೋಲೀಸರೇನೋ ಆತನ ಮನೆಗೆ ಬಂದರು. ಆದರೆ ಆತನಿಗೆ ಆಟದ ಸಾಮಾನು ಕೊಡಿಸಲಿಲ್ಲ. ಬದಲಿಗೆ ನಿನ್ನ ತಂದೆತಾಯಿ ಹೇಳಿದಂತೆ ಕೇಳು ಎಂದು ಬುದ್ಧಿವಾದ ಹೇಳಿ ಹೋದರು. 

e- ಪದ

ಚಿತ್ರಿಕೆ (icon) -ಯಾವುದಾದರೊಂದು ತಂತ್ರಾಂಶ ಅಥವಾ ಸವಲತ್ತನ್ನು ಚಾಲನೆಗೊಳಿಸಲು ಅನುವು ಮಾಡಿಕೊಡುವ ಆ ತಂತ್ರಾಂಶದ ಕಿರು ರೂಪದ ಲಾಂಛನ ಚಿಹ್ನೆ. ಉದಾಹರಣೆಗೆ ಪರದೆಯ ಮೇಲಿರುವ ಗಣಕದ ಚಿಹ್ನೆ. ಇದರ ಮೇಲೆ ಮೌಸ್‌ನಿಂದ ಕ್ಲಿಕ್ ಮಾಡಿದರೆ ನಿಮ್ಮ ಗಣಕದಲ್ಲಿರುವ ಡ್ರೈವ್‌ಗಳು ತೆರೆಯುತ್ತವೆ. ನೀವು ಬರಹ ತಂತ್ರಾಂಶ ಬಳಸುವವರಾದರೆ “ಕ” ರೂಪದ ಅದರ ಚಿತ್ರಿಕೆ ಮೇಲೆ ಕ್ಲಿಕ್ ಮಾಡಿದರೆ ಬರಹ ಚಾಲನೆಗೊಳ್ಳುತ್ತದೆ.


e - ಸಲಹೆ

ಎಲ್ಲೆಂದರಲ್ಲಿ ನಿಮ್ಮ ಗುಪ್ತಪದ ನೀಡಬೇಡಿ

ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ನೆಟ್‌ವರ್ಕಿಂಗ್ ಜಾಲತಾಣಗಳ ಹುಚ್ಚು ತುಂಬ ಜಾಸ್ತಿಯಾಗಿದೆ. ಒಬ್ಬರಿಗೊಬ್ಬರು ಸಂಪರ್ಕದಲ್ಲಿರಲು ಈ ಜಾಲತಾಣಗಳು ಸಹಾಯಮಾಡುತ್ತವೆ. ಎಂದೋ ಸಂಪರ್ಕ ಕಳೆದುಹೋದ ಸ್ನೇಹಿತ ಅಥವಾ ದೂರಸಂಬಂಧಿ ಇಂತಹ ಜಾಲತಾಣಗಳ ಮೂಲಕ ಮತ್ತೆ ದೊರೆತ ಉದಾಹರಣೆಗಳು ಸಾಕಷ್ಟಿವೆ. ಇಂತಹ ಜಾಲತಾಣಗಳಿಗೆ ಉದಾಹರಣೆ ಆರ್ಕುಟ್, ಫೇಸ್‌ಬುಕ್, ಮೈಸ್ಪೇಸ್ ಇತ್ಯಾದಿ. ಇದೇ ಮಾದರಿಯಲ್ಲಿ ಇತ್ತೀಚೆಗೆ ನೂರಾರು ಜಾಲತಾಣಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಎಲ್ಲವೂ ಸಂಭಾವಿತ ಜಾಲತಾಣಗಳಲ್ಲ. ಕೆಲವು ಜಾಲತಾಣಗಳಲ್ಲಿ ನೋಂದಣಿ ಮಾಡುವಾಗ ಅವು ನಿಮ್ಮ ಇಮೈಲ್‌ನ ಗುಪ್ತಪದ (ಪಾಸ್‌ವರ್ಡ್) ಕೇಳುತ್ತವೆ. ಹಾಗೆ ಅಲ್ಲಿ ನಿಮ್ಮ ಗುಪ್ತಪದ ದಾಖಲಿಸಿದರೆ, ಈ ಜಾಲತಾಣಗಳು ನಿಮ್ಮ ಇಮೈಲ್ ಖಾತೆಯ ವಿಳಾಸ ಪುಸ್ತಕದಲ್ಲಿ ಇರುವ ಎಲ್ಲ ವಿಳಾಸಗಳಿಗೆ ನಿಮ್ಮ ಅನುಮತಿಯಿಲ್ಲದೇ ಆಹ್ವಾನ ಕಳುಹಿಸುತ್ತವೆ. ಕೆಲವರಿಗೆ ಇದು ತುಂಬ ಕಿರಿಕಿರಿ ಉಂಟು ಮಾಡಬಹುದು. ಇದೇ ಜಾಲತಾಣದಿಂದ ಆಹ್ವಾನ ಕಳುಹಿಸಿದರೆ ಒಂದು ರೀತಿ. ಆದರೆ ಬೇರೆ ಇನ್ಯಾವುದೋ ಸಂಬಂಧವೇ ಇಲ್ಲದ ಜಾಲತಾಣದಿಂದ ಆಹ್ವಾನ ಕಳುಹಿಸಿದರೆ? ನಿಮ್ಮ ಸ್ನೇಹಿತ ನಿಮಗೆ ಅದನ್ನು ವಾಪಾಸು ಕಳುಹಿಸಿದರೆ ಮಾತ್ರ ನಿಮಗೆ ಅದು ಗೊತ್ತಾಗುತ್ತದೆ. ಉದಾಹರಣೆಗೆ ಡೇಟಿಂಗ್ ಜಾಲತಾಣ. ನಿಮ್ಮ ಸ್ನೇಹಿತರಿಗೆ ನಿಮ್ಮ ಇಮೈಲ್‌ನಿಂದ ಡೇಟಿಂಗ್ ಆಹ್ವಾನ ಹೋದರೆ ನಿಮಗೆ ಮತ್ತು ಅವರಿಗೆ ಎಷ್ಟು ಮುಜುಗುರವಾಗಬಹುದು? ಆದುದರಿಂದ ಇಂತಹ ಜಾಲತಾಣಗಳಲ್ಲಿ ನಿಮ್ಮ ಇಮೈಲ್ ಪಾಸ್‌ವರ್ಡ್ ನೀಡಬೇಡಿ.

ಕಂಪ್ಯೂತರ್ಲೆ

ಕೋಲ್ಯ ಬಟ್ಟೆ ಅಂಗಡಿಗೆ ಹೋಗಿ ಕಿಟಿಕಿ ಪರದೆ ಬಟ್ಟೆ ಕೇಳಿದ. ಅಂಗಡಿಯಾತ ಕಿಟಿಕಿಯ ಅಳತೆ ಕೇಳಿದ. ಕೋಲ್ಯ ಹೇಳಿದ “ಅದು ನನ್ನ ಕಂಪ್ಯೂಟರ್‌ಗೆ” ಎಂದು. ಅಂಗಡಿಯಾತನಿಗೆ ಆಶ್ಚರ್ಯವಾಯಿತು. “ಕಂಪ್ಯೂಟರ್‌ಗೇಕೆ ಕರ್ಟನ್” ಎಂದು ಕೇಳಿದಾಗ ಕೋಲ್ಯ ಹೇಳಿದ “ಯಾಕೆಂದರೆ ನನ್ನ ಕಂಪ್ಯೂಟರ್‌ಗೆ ವಿಂಡೋಸ್ ಫಿಟ್ ಮಾಡಿದ್ದೇನೆ. ಅದಕ್ಕೆ ಕರ್ಟನ್ ಬೇಕು”.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ