ಸೋಮವಾರ, ಏಪ್ರಿಲ್ 12, 2010

ಗಣಕಿಂಡಿ - ೦೪೭ (ಎಪ್ರಿಲ್ ೧೨, ೨೦೧೦)

ಅಂತರಜಾಲಾಡಿ

ಸುಳ್ಳುಸುದ್ದಿಗಳಿಗೊಂದು ಜಾಲತಾಣ

ಸುದ್ದಿ ಎಲ್ಲರಿಗೂ ಬೇಕು. ಆದರೆ ಸುಳ್ಳು ಸುದ್ದಿ? ಅರ್ಥಾತ್ ವಿಡಂಬನಾತ್ಮಕ ಸುದ್ದಿ. ನಿಜವಾಗಿ ನೋಡಿದರೆ ಅವು ಸುದ್ದಿ ಅಲ್ಲ. ಆದರೆ ಸದ್ಯ ಪ್ರಚಲಿತ ವಿಷಯಗಳನ್ನೇ ತಿರುಚಿ ನಿಜವಾದ ಸುದ್ದಿಯೇನೋ ಎಂಬಂತೆ ಬಿಂಬಿಸಿ ತಯಾರಿಸಿದ ರೋಚಕ “ಸುದ್ದಿ”ಗಳು. ಓದಲು ನಿಜವಾಗಿಯೂ ಉಲ್ಲಾಸದಾಯಕವಾಗಿರುತ್ತವೆ. ಕೆಲವೊಮ್ಮೆ ವಿಚಾರಪ್ರದವಾಗಿಯೂ ಇರುತ್ತವೆ. ಇಂತಹ ಸುದ್ದಿಗಳ ಜಾಲತಾಣ www.fakingnews.com. ಇದು ಭಾರತೀಯರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾದ ಜಾಲತಾಣ. ಅಂದರೆ ಇಲ್ಲಿರುವುದೆಲ್ಲ ಭಾರತೀಯ “ಸುದ್ದಿ”ಗಳು. ಇದರಲ್ಲಿ ಕೆಲವು ನಿಜಕ್ಕೂ ಸ್ವಾರಸ್ಯಕರವಾದ “ಸುದ್ದಿ”ಗಳು ಪ್ರಕಟವಾಗಿವೆ. ಉದಾಹರಣೆಗೆ ಗೂಗ್ಲ್ ವೇವ್ ಅರ್ಥವಾಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ತಂತ್ರವ್ಯಸನಿ (ಗೀಕ್). ಈ ಜಾಲತಾಣವು ಜಗತ್ಪ್ರಸಿದ್ಧ ಓನಿಯನ್ (www.theonion.com) ಜಾಲತಾಣವನ್ನು ಮಾದರಿಯಾಗಿ ಇಟ್ಟುಕೊಂಡು ತಯಾರಾಗಿದೆ. ಇದೇ ಮಾದರಿಯಲ್ಲಿ ಕನ್ನಡದಲ್ಲಿ ಬೊಗಳೆ ಓದಬೇಕೆ? ಹಾಗಿದ್ದರೆ www.anveshi.net  ಜಾಲತಾಣಕ್ಕೆ ಭೇಟಿ ನೀಡಿ.

ಡೌನ್‌ಲೋಡ್

ಕ್ಯಾಮರಾ ತಂತ್ರಾಂಶ

ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಹುಪಾಲು ಲ್ಯಾಪ್‌ಟಾಪ್ ಗಣಕಗಳಲ್ಲಿ (ಮಡಿಲ ಗಣಕ?) ವೆಬ್‌ಕ್ಯಾಮ್ ಅಂದರೆ ಕ್ಯಾಮರಾ ಅಳವಡಿಸಿರುತ್ತಾರೆ. ಆದರೆ ಲ್ಯಾಪ್‌ಟಾಪ್ ತಯಾರಕರು ಅದನ್ನು ಬಳಸಲು ಯಾವುದೇ ತಂತ್ರಾಂಶ ನೀಡಿರುವುದಿಲ್ಲ. ಈ ಕ್ಯಾಮರಾ ಬಳಸಿ ನೀವು ನಿಮ್ಮ ಸ್ನೇಹಿತರ ಜೊತೆ ಅಂತರಜಾಲ ಮುಖೇನ ವೀಡಿಯೋ ಚಾಟ್ ಮಾಡಬಹುದು. ಅಂದರೆ ನೀವು ಮತ್ತು ನಿಮ್ಮ ಸ್ನೇಹಿತ ಒಬ್ಬರನ್ನೊಬ್ಬರು ನೋಡಿಕೊಂಡು ಮಾತನಾಡಬಹುದು. ಈ ವೆಬ್‌ಕ್ಯಾಮ್‌ಗಳನ್ನು ಬಳಸಲು ತಂತ್ರಾಂಶ ಬೇಕು ತಾನೆ? ಅಂತಹ ಒಂದು ಉಚಿತ ತಂತ್ರಾಂಶ webcamXP ದೊರೆಯುವ ಜಾಲತಾಣ www.webcamxp.com. ಇದನ್ನು ಬಳಸಿ ಅಮೇರಿಕದಲ್ಲಿರುವ ಹುಡುಗ ಭಾರತದಲ್ಲಿರುವ ಹಡುಗಿಯ ವಧುಪರೀಕ್ಷೆಯನ್ನೂ ನಡೆಸಬಹುದು! ಇದನ್ನು ಬಳಸಿ ಇದರಲ್ಲಿ ಮೂಡುವ ವೀಡಿಯೋ ನೋಡಿಕೊಂಡು ತಲೆ ಬಾಚಿ ನೋಡೋಣ!


e - ಸುದ್ದಿ

ಕಳೆದುಹೋದವನ್ನು ಪತ್ತೆ ಹಚ್ಚಿ

ನಮ್ಮಲ್ಲಿ ಕೆಲವರಿಗೆ ಬೀಗದ ಕೈ, ಛತ್ರಿ, ಐಪ್ಯಾಡ್, ಪೊಬೈಲ್ ಫೋನ್, ಇತ್ಯಾದಿಗಳನ್ನು ಆಗಾಗ ಕಳೆದುಕೊಳ್ಳುವ ಅಭ್ಯಾಸವಿದೆ. ಅವುಗಳನ್ನು ಕಳ್ಳರು ಕದಿಯುತ್ತಾರೆಂದಲ್ಲ. ಅವನ್ನು ಎಲ್ಲಿ ಇಟ್ಟಿದ್ದೆನೆಂಬುದು ಅವರಿಗೆ ಮರೆತು ಹೋಗಿರುತ್ತದೆ. ಮೊಬೈಲ್ ಫೋನಾದರೆ ಆ ಸಂಖ್ಯೆಗೆ ಇನ್ನೊಂದು ಫೋನಿನಿಂದ ಕರೆ ಮಾಡಿ ಪತ್ತೆ ಹಚ್ಚಬಹುದು. ಇತರೆ ವಸ್ತುಗಳನ್ನು ಎಲ್ಲಿಟ್ಟಿದ್ದೆ ಎಂದು ಜ್ಞಾಪಿಸಿಕೊಳ್ಳುವುದು ಹೇಗೆ? ಜಪಾನಿನ ವಿಜ್ಞಾನಿಗಳು ಇದಕ್ಕೆಂದೇ ಒಂದು ಗ್ಯಾಜೆಟ್ ತಯಾರಿಸಿದ್ದಾರೆ. ಇದು ಕಣ್ಣಿಗೆ ಧರಿಸುವ ಕನ್ನಡಕದ ತರಹ ಇರುತ್ತದೆ. ಆದರೆ ಇದರಲ್ಲಿ ಒಂದು ಕ್ಯಾಮರಾ, ಒಂದು ಚಿಕ್ಕ ಪರದೆ ಮತ್ತು ಬುದ್ಧಿವಂತ ಗಣಕ ಎಲ್ಲ ಇವೆ. ಇದನ್ನು ಧರಿಸಿ ಮನೆಯೆಲ್ಲ ಓಡಾಡಿ ಕಣ್ಣಿಗೆ ಬಿದ್ದ ಎಲ್ಲ ವಸ್ತುಗಳ ಹೆಸರುಗಳನ್ನು ದೊಡ್ಡದಾಗಿ ಹೇಳುತ್ತಾ ಹೋಗಬೇಕು. ಗಣಕ ಅವನ್ನೆಲ್ಲ ದಾಖಲಿಸುತ್ತ ಹೋಗುತ್ತದೆ. ಮುಂದೆ ಯಾವಾಗಾದರೊಮ್ಮೆ ಯಾವುದಾದರು ವಸ್ತು ಎಲ್ಲಿಟ್ಟಿದ್ದೆ ಎಂದು ಜ್ಞಾಪಿಸಿಕೊಳ್ಳಬೇಕಾದಾಗ ಅದರ ಹೆಸರನ್ನು ಹೇಳಿದರೆ ಸಾಕು. ಗಣಕ ತನ್ನಲ್ಲಿರುವ ಮಾಹಿತಿಯನ್ನು ಜಾಲಾಡಿ ಕೊನೆಯ ಬಾರಿಗೆ ಆ ವಸ್ತುವನ್ನು ಎಲ್ಲಿ ನೋಡಿದ್ದೆ ಎಂಬ ವೀಡಿಯೋ ತುಣುಕನ್ನು ಕನ್ನಡಕದ ಮೂಲೆಯಲ್ಲಿರುವ ಚಿಕ್ಕ ಪರದೆಯಲ್ಲಿ ಪ್ಲೇ ಮಾಡಿ ತೋರಿಸುತ್ತದೆ. ಅದೇನೋ ಸರಿ. ಆದರೆ ಕನ್ನಡಕವನ್ನೇ ಎಲ್ಲಿಟ್ಟಿದ್ದೆ ಎಂದು ಮರೆತರೆ?

e- ಪದ

ಮನೆಯೊಳಗೆ ಮನೆಯೊಡೆಯನಿಲ್ಲ

ಕಾಬ್‌ವೆಬ್ ಸೈಟ್ (cobweb Site) - ಹಲವು ಸಮಯಗಳಿಂದ ಯಾವುದೇ ಮಾಹಿತಿಯನ್ನು ನವೀಕರಿಸದ ಜಾಲತಾಣ. ಜಾಲತಾಣವನ್ನು ತಯಾರಿಸುವುದು ಸುಲಭ. ಆದರೆ ಅದಕ್ಕೆ ಆಗಾಗ ಮಾಹಿತಿಯನ್ನು ಸೇರಿಸುವುದು ಮಾತ್ರ ಅಷ್ಟು ಸುಲಭದ ಕೆಲಸವಲ್ಲ. ಆದುದರಿಂದ ವಿಶ್ವವ್ಯಾಪಿ ಜಾಲದಲ್ಲಿ ಕೋಟಿಗಟ್ಟಲೆ ಜಾಲತಾಣಗಳು ಗೊರಕೆ ಹೊಡೆಯುತ್ತಿವೆ ಅಥವಾ ಮನೆಯೊಡೆಯನಿಲ್ಲದ ಮನೆಯೊಳಗೆ ಜೇಡರ ಬಲೆ ತುಂಬಿದಂತಿವೆ. ನಮ್ಮ ಬಹುಪಾಲು ಸರಕಾರಿ ಮತ್ತು ಅರೆ ಸರಕಾರಿ ಜಾಲತಾಣಗಳ ಹಣೆಬರೆಹ ಹೀಗೆಯೇ ಇದೆ. ತುಂಬ ಗದ್ದಲ ಮಾಡಿ ಜಾಲತಾಣದ ಉದ್ಘಾಟನೆ ಮಾಡುತ್ತಾರೆ. ನಂತರ ಅದಕ್ಕೆ ಕಾಲಕಾಲಕ್ಕೆ ಮಾಹಿತಿ ಸೇರಿಸುವ ಗೊಡವೆಗೆ ಯಾರೂ ಹೋಗುವುದಿಲ್ಲ. ಉದಾಹರಣೆಗೆ ಕರ್ನಾಟಕ ಸರಕಾರದ ವಿಶ್ವಕೋಶ ಕಣಜ (kanaja.in). ಉದ್ಘಾಟನೆಯ ನಂತರ ಈ ಜಾಲತಾಣಕ್ಕೆ ಯಾವ ಮಾಹಿತಿಯನ್ನೂ ಸೇರಿಸಿಲ್ಲ.

e - ಸಲಹೆ

ದಾವಣಗೆರೆಯ ಶಮಂತ್ ವಿ.ಎಂ. ಅವರ ಪ್ರಶ್ನೆ: ನಾನು ಡಿಜಿಟಲ್ ಕ್ಯಾಮರದಿಂದ ತೆಗೆದ ಮಹತ್ವದ ಫೋಟೋಗಳನ್ನು ಸಿ.ಡಿ. ಒಂದರಲ್ಲಿ ಉಳಿಸಿಟ್ಟಿದ್ದೆ.  ಆದರೆ ಆ ಸಿ.ಡಿ. ಮಧ್ಯ ಭಾಗದಿಂದ ಸ್ವಲ್ಪ ಸೀಳು ಬಿಟ್ಟಿದೆ. ಈಗ ಆ ಸಿ.ಡಿ. ಗಣಕ ಯಂತ್ರದ ಸಿ.ಡಿ. ಚಾಲಕದಲ್ಲಿ ಆರಂಭವಾಗುತ್ತಿಲ್ಲ. ಅವು ಮಹತ್ವದ ಛಾಯಾಚಿತ್ರಗಳಾಗಿದ್ದು ಅವುಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಸಾಧ್ಯವೇ ದಯವಿಟ್ಟು ತಿಳಿಸಿ.  ನಾನು ನಿಮ್ಮ ಗಣಕಿಂಡಿ ಅಂಕಣದ ಓದುಗ. 
ಉ: ಹಿಂದೊಮ್ಮೆ ಇಂತಹದೇ ಪ್ರಶ್ನೆಗೆ ಉತ್ತರಿಸಲಾಗಿತ್ತು. ನೀವು CD Recovery Toolbox ಎಂಬ ಉಚಿತ ತಂತ್ರಾಂಶವನ್ನು ಬಳಸಿ ಪ್ರಯತ್ನಿಸಬಹುದು. ನೀವು ಇದನ್ನು http://bit.ly/4JUUGn ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

   
ಕಂಪ್ಯೂತರ್ಲೆ

ಗಣಕ ತಗಾದೆಗಳು

ಚಾಟ್‌ನಲ್ಲಿ ಹೋದ ಮಾನ ಇಮೈಲ್‌ನಲ್ಲಿ ವಾಪಾಸು ಬರುವುದಿಲ್ಲ.
ಆರ್ಕುಟ್‌ನಲ್ಲಿ ಹೋದ ಮಾನ ಫೇಸ್‌ಬುಕ್‌ನಲ್ಲಿ ವಾಪಾಸು ಬರುವುದಿಲ್ಲ.
ಬ್ಲಾಗ್ ಮಾಡಲು ಸೋಮಾರಿಯಾದವನು ಟ್ವೀಟ್ ಮಾಡಿದನಂತೆ.
ಟ್ವೀಟ್ ಮಾಡುವುದರಿಂದ ಹುಲಿಗಳನ್ನು ಉಳಿಸಲು ಸಾಧ್ಯವಿಲ್ಲ.

2 ಕಾಮೆಂಟ್‌ಗಳು:

 1. ಕಣಜ ಅಪ್-ಡೇಟ್ ಆಗಲಿಲ್ಲ ಎಂಬ ನಿಮ್ಮ ವಾದವನ್ನು ನಾನು ಒಪ್ಪುವುದಿಲ್ಲ.
  ಉದಾ: ಮೊದಲು ಎಲ್ಲಾ ಮೆನುಗಳಿಗೂ ಸಬ್-ಮೆನು ಇತ್ತು. ಈಗ ಮಾಯವಾಗಿದೆ.
  kanaja Site Statistics ಎದುರು 12,599 Visits
  53,849 Pageviews
  4.27 Pages/Visit
  ಎಂದು ಬರೆದಿದೆ. ನೀವು ಎಷ್ಟೇ ಸಲ ಪುಟ ಓಪನ್ ಮಾಡಿ, ಆ ಸಂಖ್ಯೆಗಳು ಬದಲಾಗುವುದಿಲ್ಲವೆಂಬುದು ಅಚ್ಚರಿ.
  ೧೦೨೪ ರೆಸಲ್ಯೂಶನಲ್ಲಿ ತಾಣ ಚೆನ್ನಾಗಿ ನೋಡಬಹುದು -ಅಂತ ಬರೆದಿದೆ. ವನ್ ದೈಮೆನ್ಸನಲ್ ರೆಸಲ್ಯೂಶನ್ ಹೊಂದಿರುವ ಏಕೈಕ ತಾಣ ಬಹುಷಃ ಕಣಜ.
  ಒಳಗಿನ ಕೆಲವು ಪುಟಗಳು ಸರಿಯಿವೆ. ಎಲ್ಲಾ ಪುಟಗಳಲ್ಲೂ ಬೇರೆ ಬೇರೆ "ದಿನದ ಲೇಖನ"ಗಳು ಕಾಣ ಸಿಗುತ್ತವೆ. ಆದರೆ ಅವು ಪ್ರತಿದಿನವೂ ಹಾಗೆಯೇ ಇರುತ್ತವೆ!

  ಪ್ರತ್ಯುತ್ತರಅಳಿಸಿ
 2. ಓಹ್, ನಮ್ಮದು ಕೂಡ ಒಂದು ವ-ರದ್ದಿ ತಾಣ ಅಂತ ಇಲ್ಲಿ ಘಂಟಾಘೋಷವಾಗಿ ಸಾರಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸಾರ್.

  ಪ್ರತ್ಯುತ್ತರಅಳಿಸಿ