ಬುಧವಾರ, ನವೆಂಬರ್ 10, 2010

ಗಣಕಿಂಡಿ - ೦೭೭ (ನವಂಬರ್ ೦೮, ೨೦೧೦)

ಅಂತರಜಾಲಾಡಿ

ಸಿರಿನುಡಿ

ಕನ್ನಡ ಭಾಷೆಗೆ ಸರಿಸುಮಾರು ಎರಡು ಸಹಸ್ರ ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆ ತುಂಬ ಶ್ರೀಮಂತ ಭಾಷೆ. ಈ ಭಾಷೆಯಲ್ಲಿ ಅತ್ಯನ್ನತ ಮಟ್ಟದ ಸಹಸ್ರಾರು ಸಾಹಿತ್ಯ ರಚನೆಯಾಗಿದೆ. ಕನ್ನಡ ಸಾಹಿತ್ಯವನ್ನು ಅಂತರಜಾಲದಲ್ಲಿ ಸೇರಿಸುವ ಕೆಲಸ ಮಾತ್ರ ಅಲ್ಲಲ್ಲಿ ಅಷ್ಟಿಟ್ಟು ಪ್ರಾತಿನಿಧಿಕವಾಗಿ ಆಗಿದೆಯಷ್ಟೆ. ಅಂತಹ ಒಂದು ಜಾಲತಾಣ  www.sirinudi.org. ಇದರಲ್ಲಿ ಕನ್ನಡ ಭಾಷೆಯ ಹಲವಾರು ಸಾಹಿತ್ಯ ಕೃತಿಗಳನ್ನು ಓದಬಹುದು. ಕನ್ನಡ ಭಾಷೆ ನಿಜಕ್ಕೂ ಜನರಿಗೆ ಉಪಯುಕ್ತ ಭಾಷೆಯಾಗಬೇಕಾದರೆ ಕನ್ನಡ ಭಾಷೆಯಲ್ಲಿ ಆಧುನಿಕ ವಿಜ್ಞಾನ ತಂತ್ರಜ್ಞಾನದ ಎಲ್ಲ ವಿಷಯಗಳೂ ಪ್ರತಿಬಿಂಬಿತವಾಗಬೇಕು. ಈ ಉದ್ದೇಶದಿಂದ ಪ್ರಾರಂಭವಾದ ಕನ್ನಡ ಭಾಷೆಯ ಪ್ರಪ್ರಥಮ ವಿಜ್ಞಾನ ಪತ್ರಿಕೆಯ ಸಂಚಿಕೆಗಳನ್ನು ಈ ಜಾಲತಾಣದಲ್ಲಿ ಓದಬಹುದು. ಹಾಗೆಯೇ ಅಡಿಗರು ಪ್ರಾರಂಭಿಸಿದ ಸಾಕ್ಷಿ ಪತ್ರಿಕೆಯ ಸಂಚಿಕೆಗಳೂ ಇಲ್ಲಿವೆ.

ಡೌನ್‌ಲೋಡ್

ಗಣಕ ಸ್ವಚ್ಛ ಮಾಡಿ

ಗಣಕದಲ್ಲಿ ತಂತ್ರಾಂಶಗಳನ್ನು ಮತ್ತೆ ಮತ್ತೆ ಇನ್‌ಸ್ಟಾಲ್ ಮತ್ತು ಅನ್‌ಇನ್‌ಸ್ಟಾಲ್ ಮಾಡಿದರೆ ಕೆಲವೊಮ್ಮೆ ತಂತ್ರಾಂಶಗಳು ಪೂರ್ತಿಯಾಗಿ ತೆಗೆಯಲ್ಪಡುವುದಿಲ್ಲ. ಹಾಗೆ ಆಗುತ್ತ ಗಣಕ ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಗಣಕದಲ್ಲೇ ಇರುವ ಅನ್‌ಇನ್‌ಸ್ಟಾಲ್ ಸವಲತ್ತು ಇಂತಹ ಸಂದರ್ಭದಲ್ಲಿ ಸಹಾಯಕ್ಕೆ ಬರುವುದಿಲ್ಲ. ಎಷ್ಟು ಪ್ರಯತ್ನ ಮಾಡಿದರೂ ತನ್ನ ಪಳೆಯುಳಿಕೆಯನ್ನು ಬಿಟ್ಟುಕೊಡದ ತಂತ್ರಾಂಶದ ಅವಶೇಷಗಳನ್ನು ತೆಗೆಯುವುದು ಅಷ್ಟು ಸುಲಭವಲ್ಲ. ತಂತ್ರಾಂಶಗಳನ್ನು ಯಾವುದೇ ಅವಶೇಷವಿಲ್ಲದೆ ಸ್ವಚ್ಛವಾಗಿ ತೆಗೆದುಹಾಕುವ ತಂತ್ರಾಂಶ Revo Uninstaller. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/bPK5Fb. ಇಲ್ಲಿ ನಿಮಗೆ ಉಚಿತ ಮತ್ತು ವಾಣಿಜ್ಯಕ ಎಂಬ ಎರಡು ಆವೃತ್ತಿಗಳು ಲಭ್ಯ. 

e - ಸುದ್ದಿ

ಆರ್ಕುಟ್ ಭಗ್ನಪ್ರೇಮಿ

ಭಗ್ನಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಹಳೆಯ ಕಥೆ. ಅದರ ಬಗ್ಗೆ ರೀಲುಗಟ್ಟಲೆ ಸಿನಿಮಾ ಮಾಡಿ ಆಗಿದೆ. ಇತ್ತೀಚೆಗೆ ನಮ್ಮದೇ ಭಾರತ ದೇಶದ ತ್ರಿಪುರಾ ರಾಜ್ಯದಿಂದ ವರದಿಯಾದ ಕಥೆ ಸ್ವಲ್ಪ ಆಧುನಿಕವಾಗಿದೆ. ಇದನ್ನು ಆರ್ಕುಟ್ ಭಗ್ನಪ್ರೇಮದ ಕಥೆ ಎನ್ನಬಹುದು. ವೈದ್ಯಕೀಯ ವಿದ್ಯಾರ್ಥಿ ರೂಪಕ್ ಆರ್ಕುಟ್‌ನಲ್ಲಿ ಒಂದು ಹುಡುಗಿಯನ್ನು ಪ್ರೀತಿಸಿದ್ದ. ಆಕೆ ಈತನನ್ನು ಕಡೆಗಣಿಸುತ್ತಿದ್ದಾಳೆ ಎಂದು ನೊಂದುಕೊಂಡ ಆತ ಆತ್ಮಹತ್ಯೆ ಮಾಡಿಕೊಂಡ. ಸ್ವಾರಸ್ಯವೆಂದರೆ ಆತ ಆಕೆಯನ್ನು ಒಮ್ಮೆಯೂ ಮುಖತಃ ಭೇಟಿ ಆಗಿರಲಿಲ್ಲ. ಕೊಲ್ಕತ್ತಾ ಮೂಲದ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದ ಆಕೆಯನ್ನು ಎರಡು ವರ್ಷಗಳ ಹಿಂದೆ ಆತ ಆರ್ಕುಟ್‌ನಲ್ಲಿ ಭೇಟಿಯಾಗಿದ್ದ.

e- ಪದ

ಚತುರವಾಣಿ (ಸ್ಮಾರ್ಟ್‌ಫೋನ್ - smartphone) - ಮೊಬೈಲ್ ಫೋನಿನ ಕೆಲಸಗಳನ್ನೂ ಮಾಡಬಲ್ಲ ಕಿಸೆಗಣಕ. ಇತ್ತೀಚೆಗೆ ಇಂತಹ ಫೋನುಗಳು ಅಗ್ಗವಾಗುತ್ತ ಜನಸಾಮಾನ್ಯರ ಕೈಗೆಟುಕುವಂತಾಗುತ್ತಿವೆ. ಈ ಫೋನುಗಳಲ್ಲಿ ಅಂತರಜಾಲ ನೋಡುವುದು, ಇಮೈಲ್ ಮಾಡುವುದು, ಪದಸಂಸ್ಕರಣೆ, ಜಿಪಿಎಸ್ ಬಳಸಿ ತಾನು ಇರುವ ಸ್ಥಾನ ತಿಳಿಯುವುದು, ಇನ್ನೂ ಏನೇನೋ ಮಾಡಬಹುದು. ಇಂತಹ ಫೋನುಗಳಿಗೆ ಸಹಸ್ರಾರು ತಂತ್ರಾಂಶಗಳು ಅಂತರಜಾಲದಲ್ಲಿ ಲಭ್ಯವಿವೆ. ಇವುಗಳು ಕೆಲಸ ಮಾಡಲು ಆಂಡ್ರೋಯಿಡ್, ವಿಂಡೋಸ್ ಫೋನ್, ಐಓಎಸ್, ಇತ್ಯಾದಿ ಯಾವುದಾದರೊಂದು ಕಾರ್ಯಾಚರಣೆಯ ವ್ಯವಸ್ಥೆ ಅಗತ್ಯ.

e - ಸಲಹೆ

ಗಿರೀಶ್ ಅವರ ಪ್ರಶ್ನೆ: ನನ್ನ ಗಣಕದ ಡೆಸ್ಕ್‌ಟಾಪ್ ಮೇಲೆ ಇರುವ ಎಲ್ಲ ಐಕಾನ್‌ಗಳು ತುಂಬ ಚಿಕ್ಕದಾಗಿವೆ. ಆವನ್ನು ದೊಡ್ಡದಾಗಿಸುವುದು ಹೇಗೆ? ನಾನು ವಿಂಡೋಸ್೭ ಬಳಸುತ್ತಿದ್ದೇನೆ.
ಉ: ಎಲ್ಲ ತಂತ್ರಾಂಶಗಳ ಕಿಟಿಕಿಗಳನ್ನು ಕಿರಿದಾಗಿಸಿ ಅಂದರೆ ಕೇವಲ ಡೆಸ್ಕ್‌ಟಾಪ್ ಮಾತ್ರ ಇರುವಂತೆ ಮಾಡಿ. ಈಗ Ctrl-A ಒತ್ತುವ ಮೂಲಕ ಎಲ್ಲ ಐಕಾನ್‌ಗಳನ್ನು ಆಯ್ಕೆ ಮಾಡಿ. ನಂತರ Ctrl ಕೀಲಿಯನ್ನು ಒತ್ತಿ ಹಿಡಿದುಕೊಂಡು ಮೌಸ್‌ನ ಚಕ್ರವನ್ನು ತಿರುಗಿಸಿ. 

ಕಂಪ್ಯೂತರ್ಲೆ

ಕೋಲ್ಯನಲ್ಲಿ ಇರುವ ಫೋನಿನಲ್ಲಿ ಕನ್ನಡ ಅಕ್ಷರಗಳು ಮೂಡಿಬರುತ್ತಿರಲಿಲ್ಲ. ನವಂಬರ್ ತಿಂಗಳು ಬಂದಿದೆ. ಮೊಬೈಲ್ ಫೋನಿನಲ್ಲಿ ಕನ್ನಡ ಮೂಡಿಬರದಿದ್ದರೆ ಚೆನ್ನಾಗಿರುವುದಿಲ್ಲ ತಾನೆ? ಆತ ಕಾಗದದಲ್ಲಿ ಕನ್ನಡ ಎಂದು ಬರೆದು ಅದನ್ನು ಕತ್ತರಿಸಿ ಫೋನಿಗೆ ಅಂಟಿಸಿ ಎಲ್ಲರಿಗೂ “ನನ್ನ ಫೋನಿನಲ್ಲಿ ಕನ್ನಡ ಕಾಣಿಸುತ್ತಿದೆ” ಎಂದು ತೋರಿಸಿದ.

4 ಕಾಮೆಂಟ್‌ಗಳು:

 1. ನಮಸ್ಕಾರ,
  ವಿಂಡೋಸ್ ಮೊಬೈಲ ನಲ್ಲಿ ಇಂಟರ್ನೆಟ ನಲ್ಲಿ ಕನ್ನಡ ಓದೋದಕ್ಕೆ ಏನು ಮಾಡಬೇಕು, ತುಂಬಾ ಟ್ರೈ ಮಾಡ್ದೆ ಆದರೆ ಅದು ಸಿಸ್ಟಮ್ ಫಾಂಟ್ ಬಿಟ್ಟು ಬೇರೆ ಫಾಂಟ್ ತಗೊಳ್ತ ಇಲ್ಲ.

  ಪ್ರತ್ಯುತ್ತರಅಳಿಸಿ
 2. @pradeep,

  ವಿಂಡೋಸ್ ಮೊಬೈಲ್‌ನಲ್ಲಿ ಸದ್ಯಕ್ಕೆ ಕನ್ನಡ ಇಲ್ಲ. ಕನ್ನಡ ಫಾಂಟ್ಅನ್ನು ಸೇರಿಸಿದರೆ ಎಲ್ಲವೂ ಕನ್ನಡ ಲಿಪಿಯಲ್ಲಿ ಕಲಸುಮೇಲೋಗರವಾಗಿ ಕಾಣಿಸುತ್ತದೆ. ನಂತರ hard reboot ಮಾಡಬೇಕಾಗುತ್ತದೆ. ಮೈಕ್ರೋಸಾಫ್ಟ್‌ನವರು ತಮ್ಮ Windows CE platform (which is the underlying platform for all Windows Mobile OSes) ನಲ್ಲಿ ಕನ್ನಡ ಸೇರಿದಂತೆ ಜಗತ್ತಿನ ಎಲ್ಲ ಭಾಷೆಗಳಿಗೆ ಅನುವು ಮಾಡಿಕೊಟ್ಟಿದ್ದಾರೆ. ನಾನು ೨೦೦೫ರಲ್ಲೇ ಕನ್ನಡ-ಹಿಂದಿ-ಇಂಗ್ಲಿಷ್ ಭಾಷೆಗಳ nOtepadಅನ್ನು ತಯಾರಿಸಿ proof-of-concept ಮಾಡಿ ತೋರಿಸಿದ್ದೆ. ಮೈಕ್ರೋಸಾಫ್ಟ್‌ ಇಂಡಿಯಾದವರಿಗೆ ಅದು ಗೊತ್ತೂ ಇದೆ. ಆದರೆ device manufacturers ಇನ್ನೂ ಭಾರತೀಯ ಭಾಷೆಗಳ ಸವಲತ್ತನ್ನು ನೀಡಿಲ್ಲ. ಎಲ್ಲ ಗ್ರಾಹಕರೂ ನಮಗೆ ಭಾರತೀಯ ಭಾಷೆ ನೀಡಲೇ ಬೇಕು ಎಂದು ಹಠಹಿಡಿದರೆ ಆಗ ಅವರು ನೀಡಬಹುದು.

  -ಪವನಜ

  ಪ್ರತ್ಯುತ್ತರಅಳಿಸಿ
 3. ಮಾಹಿತಿಗಾಗಿ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 4. ಬಂದುಗಳೇ,,,,

  ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ನೂರಾರುಕಡೆಗಳಲ್ಲಿ ಓಡಾಡುವಾಗ ಸಾಮಾನ್ಯವಾಗಿ ನೂರಾರು ಅಕ್ಷರಸ್ಥ ನಿರುದ್ಯೋಗಿಗಳನ್ನು ಕಂಡಿದ್ದೇನೆ.ಹಾಗೂ "ಯಾವ ಕೆಲಸನಾದ್ರೂ ಇದ್ರೆ ಕೊಡಿ ಸಾರ್ ಮಾಡ್ತಿನಿ" ಅನ್ನೋ ಅವರ ಮಾತು ನನಗೆ ಕೇಳಿಸದೇ ಇರಲಿಲ್ಲ. ಅದೇರೀತಿ ಹಲವಾರು ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನನ್ನ ಫ್ರಂಡ್ಸ್ ಗಳು Call ಮಾಡಿ "ನಾಲ್ಕೈದು ಕೆಲಸ ಖಾಲಿ ಇದೆ ಯಾರಾದ್ರೂ ಒಳ್ಳೆ ಹುಡುಗರು ಇದ್ರೆ ಹೇಳು" ಅನ್ನುವುದು ನನಗೆ ಮಾಮೂಲಾಗಿದೆ.

  "ಯಾವ ಕೆಲಸನಾದ್ರೂ ಇದ್ರೆ ಕೊಡಿ ಸಾರ್ ಮಾಡ್ತಿನಿ" ಅನ್ನುವವರು ನಾನು ಎಷ್ಟೇ ಹುಡುಕಿದರೂ ಆ timeಗೆ ಸಿಗೋದೇ ಇಲ್ಲ. ಅದಕ್ಕೆ ಫ್ರೆಂಡ್ಸ್ ನನಗೊಂದು idea ಬಂದಿದೆ. ಅದೇನೆಂದರೆ ನಿಮಗೆ or ನಿಮ್ಮ ಫ್ರೆಂಡ್ಸ್ ಗೆ ಕೆಲಸದ ಅವಶ್ಯಕತೆ ಇದ್ದಲ್ಲಿ ನಿಮ್ಮ Resume ಅನ್ನು ದಯವಿಟ್ಟು ನನಗೆ mail ಮಾಡಿ. ನಿಮ್ಮ ವಿದ್ಯಾರ್ಹತೆಗೆ ತಕ್ಕುದಾದ ಕೆಲಸವನ್ನು ನಾವೇ ನಿಮಗೆ ಹುಡುಕಿಕೊಡುತ್ತೆವೆ.(Phone number ಬರೆಯೊದನ್ನು ಮರೀಬೇಡಿ)
  www.netkannada.blogspot.com ಬ್ಲಾಗ್ ನಲ್ಲಿ ಎಲ್ಲೆಲ್ಲಿ Job ಖಾಲಿ ಇದೆ ಅದಕ್ಕೆ ಬೇಕಾದ ಅರ್ಹತೆಗಳೇನು ಎಂಬುದನ್ನು ಪ್ರಕಟಿಸುತ್ತೆನೆ.ಒಂದು ವೇಳೆ ನೀವು ನಿಮ್ಮ Resume ಕಳುಹಿಸಿದ್ದರೆ.sms Or Call ಮಾಡಿ ನಾವೇ ಹೇಳುತ್ತೆವೆ.

  ನೆನಪಿರಲಿ ಈ ಮಾಹಿತಿಗೆ ಯಾವುದೇ ಶುಲ್ಕವಿರುವುದಿಲ್ಲ ಇದು ಉಚಿತ ಸೇವೆ

  ಹೆಚ್ಚಿನ ಮಾಹಿತಿಗೆ:- 9740769286 ಅಥವಾ ontipremi@gmail.com

  ಪ್ರತ್ಯುತ್ತರಅಳಿಸಿ