ಸೋಮವಾರ, ನವೆಂಬರ್ 15, 2010

ಗಣಕಿಂಡಿ - ೦೭೮ (ನವಂಬರ್ ೧೫, ೨೦೧೦)

ಅಂತರಜಾಲಾಡಿ

ಜ್ಞಾನಕೋಶ

ಅಂತರಜಾಲದಲ್ಲಿ ಕನ್ನಡ ಭಾಷೆಯಲ್ಲಿ ಜ್ಞಾನಕೋಶಗಳು ಇರುವುದೇ ಬೆರಳೆಣಿಕೆಯಷ್ಟು. ಅಂತಹ ಒಂದು ಜ್ಞಾನಕೋಶ  www.jnanakosha.org. ಹೆಸರೇ ಸೂಚಿಸುವಂತೆ ಈ ಜಾಲತಾಣದಲ್ಲಿ ಎಲ್ಲ ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸಲು ಪ್ರಯತ್ನ ಪಡಲಾಗಿದೆ. ಇದರ ಹಿಂದೆ ಕೆಲಸ ಮಾಡುವವರ ಪಟ್ಟಿ ನೋಡಿದರೆ ಅಲ್ಲೂ ಬೆರಳೆಣಿಕೆಯಷ್ಟೇ ಮಂದಿ ಇದ್ದಾರೆ. ಗಣಕ, ವಿಜ್ಞಾನ, ತಂತ್ರಜ್ಞಾನ, ಮ್ಯಾನೇಜ್‌ಮೆಂಟ್, ಕಾನೂನು, ಕೃಷಿ, ಆಯುರ್ವೇದ - ಹೀಗೆ ಎಲ್ಲ ವಿಷಯಗಳ ಸೂಚಿ ಇದೆ. ಆಯಾ ವಿಷಯಗಳ ಬಗ್ಗೆ ಕೆಲವು ಲೇಖನಗಳೂ ಇವೆ. ಚರ್ಚಾವೇದಿಕೆ ಹಾಗೂ ಬ್ಲಾಗ್‌ಗಳೂ ಇಲ್ಲಿವೆ. ಮಾಧ್ಯಮದವರ ಮುಂದೆ ತುಂಬ ಗದ್ದಲಮಾಡಿ ಬಿಡುಗಡೆ ಮಾಡಿದ ಸರಕಾರದ “ಕಣಜ” (kanaja.in) ಜಾಲತಾಣ ಇನ್ನೂ ಅಲ್ಲೇ ನಿದ್ದೆ ಮಾಡುತ್ತಿದೆ. ಕನ್ನಡದ ಮುಕ್ತ ವಿಶ್ವಕೋಶದ ವಿಳಾಸ kn.wikipedia.org.

ಡೌನ್‌ಲೋಡ್

ಮೊಬೈಲ್‌ಗೆ ತಂತ್ರಾಂಶ

ಈಗೀಗ ಮಾರುಕಟ್ಟೆಯಲ್ಲಿ ದೊರಕುತ್ತಿರುವ ಫೋನುಗಳು ಬಹುತೇಕ ಕಿಸೆಗಣಕಗಳೇ ಆಗಿವೆ. ಅವುಗಳಲ್ಲಿ ಏನೇನೆಲ್ಲಾ ಮಾಡಬಹುದು. ಆಟಗಳನ್ನೂ ಆಡಬಹುದು. ಅಂತೆಯೇ ಅವುಗಳಿಗೆ ಸಹಸ್ರಾರು ತಂತ್ರಾಂಶಗಳೂ ಲಭ್ಯವಿವೆ. ಗಣಕಗಳಿಗೆ ಹೇಗೆಯೋ ಅಂತೆಯೇ ಆಧುನಿಕ ಮೊಬೈಲ್ ಫೋನ್‌ಗಳಿಗೂ ಕಾರ್ಯಾಚರಣೆಯ ವ್ಯವಸ್ಥೆಗಳಿವೆ. ಅವುಗಳಲ್ಲೂ ಹಲವಾರು ನಮೂನೆಗಳಿವೆ. ಎಲ್ಲ ನಮೂನೆಯ ಫೋನುಗಳಿಗೆ ಹಾಗೂ ಕಾರ್ಯಾಚರಣೆಯ ವ್ಯವಸ್ಥೆಗಳಿಗೆ ತಂತ್ರಾಂಶಗಳು ಎಲ್ಲಿ ದೊರೆಯುತ್ತವೆ ಎಂದು ಹಲವು ಮಂದಿ ಮತ್ತೆ ಮತ್ತೆ ಇಮೈಲ್ ಮೂಲಕ ವಿಚಾರಿಸುತ್ತಿದ್ದಾರೆ. ಅಂತಹ ಒಂದು ಜಾಲತಾಣ bestmobileapp.org. ನಿಜವಾಗಿ ಈ ಜಾಲತಾಣದಲ್ಲಿ ತಂತ್ರಾಂಶ ದೊರೆಯುವುದಿಲ್ಲ. ತಂತ್ರಾಂಶ ಎಲ್ಲಿ ದೊರೆಯುತ್ತದೆ ಎಂಬ ಕೊಂಡಿ ಮಾತ್ರ ಇಲ್ಲಿದೆ. ಹಾಗೆ ದೊರೆಯುವ ಎಲ್ಲ ತಂತ್ರಾಂಶಗಳೂ ಕಾನೂನುಬದ್ಧವಾಗಿರಬೇಕಾಗಿಲ್ಲ. ನಿಮ್ಮ ಎಚ್ಚರಿಕೆಯಲ್ಲಿ ನೀವು ಇರುವುದು ಒಳ್ಳೆಯದು.

e - ಸುದ್ದಿ

ಇಲ್ಲದ ರೋಗಕ್ಕೆ ಮದ್ದು

ನಕಲಿ ವೈದ್ಯರಲ್ಲಿಗೆ ಹೋದರೆ ಸುಳ್ಳು ಸುಳ್ಳೇ ಯಾವುದೋ ದೊಡ್ಡ ಖಾಯಿಲೆ ನಿಮಗೆ ಬಂದಿದೆ ಎಂದು ನಂಬಿಸಿ ನೀರನ್ನೇ ಇಂಜೆಕ್ಷನ್ ಚುಚ್ಚಿ ಹಣ ಕೀಳುವವರ ಕಥೆ ನೀವು ಕೇಳಿರಬಹುದು. ಅಮೇರಿಕದ ಕೋಟ್ಯಾಧೀಶ ಸಂಗೀತ ಸಂಯೋಜಕರೊಬ್ಬರನ್ನು ಗಣಕ ತಂತ್ರಜ್ಷನೊಬ್ಬ ಹೀಗೇ ಮೋಸ ಮಾಡಿದ ಕಥೆ ವರದಿಯಾಗಿದೆ. ಡೇವಿಡ್ಸನ್ ಹೆಸರಿನ ಆ ಸಂಯೋಜಕರು ತಮ್ಮ ಗಣಕವನ್ನು ವಿಕ್ರಮ್ ಬೇಡಿ ಎಂಬಾತ ನಡೆಸುತ್ತಿದ್ದ ಗಣಕ ದುರಸ್ತಿ ಅಂಗಡಿಗೆ ತೆಗೆದುಕೊಂಡು ಹೋದರು. ತಮ್ಮ ಗಣಕದಲ್ಲಿರುವ ತಾನು ತಯಾರಿಸಿದ ಸಂಗೀತ ಸಂಯೋಜನೆಗಳನ್ನು ವೈರಸ್ ಹಾಳುಮಾಡಬಹುದೇನೋ ಎಂಬ ಭಯ ಅವರನ್ನು ಕಾಡುತ್ತಿತ್ತು. ಡೇವಿಡ್ಸನ್ ಅವರ ಅಮಾಯಕತೆಯನ್ನು ಅರಿತ ವಿಕ್ರಮ್ ಬೇಡಿ ಅವರನ್ನು ಬೆದರಿಸಿ, ನಿಮ್ಮ ಗಣಕದಲ್ಲಿ ವೈರಸ್ ಇದೆ, ಅದು ಯಾವುದೋ ದುಷ್ಟ ಕೂಟಕ್ಕೆ ನಿಮ್ಮನ್ನು ಸಂಪರ್ಕಿಸಿದೆ, ನಿಮ್ಮ ಗಣಕದ ವೈರಸ್‌ನಿಂದಾಗಿ ನನ್ನ ಅಂಗಡಿಯಲ್ಲಿರುವ ಎಲ್ಲ ಗಣಕಗಳು ಹಾಳಾಗಿವೆ, ಇನ್ನೂ ಏನೇನೋ ಸುಳ್ಳು ಹೇಳಿ ಬೆದರಿಸಿ ಅವರಿಂದ ಹಣ ಕಿತ್ತ. ಅದೂ ಕಡಿಮೆಯೇನಲ್ಲ, ಸುಮಾರು ೨೦ ಮಿಲಿಯ ಡಾಲರುಗಳು. ಈಗ ವಿಕ್ರಮ್ ಬೇಡಿ ಸೆರೆಯಲ್ಲಿದ್ದಾನೆ.

e- ಪದ

ಕರ್ನಿಂಗ್ (kerning) - ಪುಟವಿನ್ಯಾಸದಲ್ಲಿ(ಡಿಟಿಪಿ) ಬಳಕೆಯಾಗುವ ಪದ. ಮುಖ್ಯವಾಗಿ ಇಂಗ್ಲಿಶ್ ಭಾಷೆಯ ಪುಟವಿನ್ಯಾಸದಲ್ಲಿ ಮಾತ್ರ ಇದರ ಬಳಕೆಯಾಗುತ್ತದೆ. ಇಂಗ್ಲಿಶ್ ಭಾಷೆಯಲ್ಲಿ ಕೆಲವು ಅಕ್ಷರಗಳು ಉದಾ- V ಮತ್ತು A ಪಕ್ಕ ಪಕ್ಕ ಬಂದಾಗ, A ಅಕ್ಷರದ ಎಡಭಾಗ V ಅಕ್ಷರದ ಬಲಭಾಗದಲ್ಲಿ ಸ್ವಲ್ಪ ಒಳಕ್ಕೆ ಹೋಗಬಲ್ಲುದು. ಹೀಗೆ ಹೋಗುವಂತೆ ಮಾಡುವುದಕ್ಕೆ ಕರ್ನಿಂಗ್ ಎನ್ನುತ್ತಾರೆ. 

e - ಸಲಹೆ

ಷಣ್ಮುಖ ಅವರ ಪ್ರಶ್ನೆ: ನಾನು ಇತ್ತೀಚೆಗೆ ಒಂದು ಆಪಲ್ ಐಫೋನ್ ಕೊಂಡುಕೊಂಡಿದ್ದೇನೆ. ಅದಕ್ಕೆ ನನಗೆ ಹಾಡುಗಳನ್ನು ಸೇರಿಸಲು ಉಚಿತ ತಂತ್ರಾಂಶ ಬೇಕಾಗಿದೆ. ಎಲ್ಲಿ ಸಿಗುತ್ತದೆ?
ಉ: ನೀವು ಆಪಲ್ ಕಂಪೆನಿಯದ್ದೇ ಐಟ್ಯೂನ್ ಬಳಸಬಹುದು. ಇದು ದೊರೆಯುವ ಜಾಲತಾಣ http://bit.ly/9FVoeI

ಕಂಪ್ಯೂತರ್ಲೆ

ಗಣಕವಚನ

ಫೇಸ್‌ಬುಕ್‌ನಲ್ಲಿ ಖಾತೆ ತೆರೆದು ಗೋಡೆಬರಹಗಳಿಗೆ ಅಂಜಿದೊಡೆಂತಯ್ಯಾ?
ಆರ್ಕುಟ್‌ನಲ್ಲಿದ್ದುಕೊಂಡು ಸ್ಕ್ರಾಪ್ ಬರಹಗಳಿಗೆ ಅಂಜಿದೊಡೆಂತಯ್ಯಾ?
ಕಂಪ್ಯೂಟರ್ ಕೊಂಡುಕೊಂಡು ವೈರಸ್‌ಗಳಿಗೆ ಅಂಜಿದೊಡೆಂತಯ್ಯಾ?

3 ಕಾಮೆಂಟ್‌ಗಳು:

 1. ಮಾಹಿತಿಗಳು ಉಪಯುಕ್ತವಾಗಿದೆ.

  ಕಂಪ್ಯೂತರ್ಲೆ ಮತ್ತು ಇಲ್ಲದ ರೋಗಕ್ಕೆ ಮದ್ದು ಸ್ವಾರಸ್ಯಕರವಾಗಿದೆ. :-)

  ಪ್ರತ್ಯುತ್ತರಅಳಿಸಿ
 2. ಜ್ಞಾನಕೋಶವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಹೌದು, ಈಗ ಕೇವಲ ಬೆರಳೆಣಿಕೆಯಷ್ಟೇ ಜನ ಇದರ ಹಿಂದೆ ಕೆಲಸ ಮಾಡುತ್ತಿದ್ದಾರೆ.

  ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದಿಲ್ಲೊಂದು ಜ್ಞಾನ ಇದ್ದೇ ಇದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜ್ಞಾನವನ್ನು ಸೇರಿಸಲು ಈ ತಾಣದಲ್ಲಿ ಮುಕ್ತ ಅವಕಾಶ ಯಾವಾಗಲೂ ಇದೆ. ಹಾಗೆ ಪ್ರತಿಯೊಬ್ಬರಿಂದ ಹನಿ ಹನಿಯಾಗಿ ಸೇರಿಸಲ್ಪಟ್ಟ ಜ್ಞಾನ ಮುಂದಿನ ಪೀಳಿಗೆಗೆ, ಕನ್ನಡಿಗರಿಗೆ ಕೊಡುಗೆಯಾಗಿರಲಿ ಎಂಬ ಆಶಯ.

  ಕನ್ನಡದಲ್ಲಿ ಪಡೆದ ಜ್ಞಾನ ಕನ್ನಡಿಗರನ್ನು ಹಲವಾರು ಕ್ಷೇತ್ರಗಳಲ್ಲಿ ಜಗತ್ತಿನಲ್ಲಿಯೇ ಸರ್ವಶ್ರೇಷ್ಛರನ್ನಾಗಿ ರೂಪಿಸುತ್ತದೆಯೆಂಬ ವಿಶ್ವಾಸ, ಹಾರೈಕೆ.

  ಪ್ರತ್ಯುತ್ತರಅಳಿಸಿ
 3. @ಮಹೇಶ - ನಿಮ್ಮ ಆಶಯ, ಧ್ಯೇಯ ಗುರಿ ತಲುಪಲಿ ಎಂದು ಆಶಿಸುತ್ತೇನೆ

  -ಪವನಜ

  ಪ್ರತ್ಯುತ್ತರಅಳಿಸಿ