ಸೋಮವಾರ, ಏಪ್ರಿಲ್ 4, 2011

ಗಣಕಿಂಡಿ - ೦೯೮ (ಎಪ್ರಿಲ್ ೦೪, ೨೦೧೧)

ಅಂತರಜಾಲಾಡಿ

ಬಡವರಿಗೆ ಅಕ್ಕಿ ನೀಡಿ

ಪ್ರಪಂಚದಲ್ಲಿ ಕೋಟಿಗಟ್ಟಳೆ ಜನ ಬಡವರಿದ್ದಾರೆ. ಭಾರತದಲ್ಲೂ ಇದ್ದಾರೆ. ಬಡವರಿಗೆ ಆಹಾರ ದೊರಕಿಸಲು ಪ್ರಯತ್ನ ಮಾಡುವ ಸಂಸ್ಥೆಗಳು ಸಾವಿರಾರಿವೆ. ವಿಶ್ವ ಸಂಸ್ಥೆಯೂ ತನ್ನದೇ ಪ್ರಯತ್ನ ಮಾಡುತ್ತಿದೆ. ಹೀಗೆ ಕೆಲಸ ಮಾಡುವ ಸಂಸ್ಥೆಗಳು ಜನರಿಂದ ದೇಣಿಗೆ ಪಡೆದು ಕೆಲಸ ಮಾಡುತ್ತವೆ. ದೇಣಿಗೆ ಪಡೆಯುವುದು ಮಾತ್ರವಲ್ಲ, ನೀವು ರಸಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಹಾಯ ಮಾಡುವ ಜಾಲತಾಣವೊಂದಿದೆ. ಇದನ್ನು ವಿಶ್ವ ಸಂಸ್ಥೆಯ ಜಾಗತಿಕ ಆಹಾರ ಯೋಜನೆ ನಡೆಸುತ್ತಿದೆ. ಇದರಲ್ಲಿ ಕೆಲವು ರಸಪ್ರಶ್ನೆಗಳಿವೆ. ಇವುಗಳನ್ನು ಆಡುವ ಮೂಲಕ ನಿಮ್ಮ ಸಾಮಾನ್ಯ ಜ್ಞಾನ, ಇಂಗ್ಲಿಶ್ ಜ್ಞಾನ, ಮತ್ತು ಇತರೆ ವಿಷಯಗಳಲ್ಲಿಯ ಅರಿವು ಜಾಸ್ತಿ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲ, ಪ್ರತಿ ಸರಿ ಉತ್ತರಕ್ಕೂ ಒಂದು ಕಾಳು ಅಕ್ಕಿಯನ್ನು ನಿಮ್ಮ ಪರವಾಗಿ ಬಡವರಿಗೆ ವಿಶ್ವ ಸಂಸ್ಥೆ ದಾನವಾಗಿ ನೀಡುತ್ತದೆ. ಈ ಜಾಲತಾಣದ ವಿಳಾಸ freerice.com. ಈ ಜಾಲತಾಣಕ್ಕೆ ದಿನಾ ಭೇಟಿ ನೀಡಿ, ರಸಪ್ರಶ್ನೆಗಳಲ್ಲಿ ಭಾಗವಹಿಸಿ, ನಿಮ್ಮ ಜ್ಞಾನಭಂಡಾರ ಬೆಳೆಸಿಕೊಳ್ಳಿ, ಜೊತೆಗೆ ಹಸಿದವರಿಗೆ ಅನ್ನ ನೀಡಿ ನೆರವಾಗಿ.

ಡೌನ್‌ಲೋಡ್

ಅತೀ ಅವಶ್ಯ ತಂತ್ರಾಂಶಗಳು

ಗಣಕದಲ್ಲಿ ಏನೇ ಕೆಲಸ ಮಾಡಬೇಕಿದ್ದರೂ ಕೆಲವು ತಂತ್ರಾಂಶಗಳು ಇರುವುದು ಅತೀ ಅವಶ್ಯ. ಇವುಗಳಲ್ಲಿ ಬ್ರೌಸರ್, ಗ್ರಾಫಿಕ್ಸ್, ವೈರಸ್ ನಿರೋಧಕ, ಇತ್ಯಾದಿ ಹಲವು ವಿಧಗಳಿವೆ. ಪ್ರತಿಯೊಂದರಲ್ಲು ಹಲವು ಉಚಿತ ತಂತ್ರಾಂಶಗಳು ಲಭ್ಯವಿವೆ. ಇವುಗಳನ್ನು ಆಯಾ ತಂತ್ರಾಂಶದ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಮಸ್ಯೆ ಏನೆಂದರೆ ಈ ಎಲ್ಲ ತಂತ್ರಾಂಶಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಅವುಗಳ ಜಾಲತಾಣ ವಿಳಾಸಗಳನ್ನೂ ನೆನಪಿಟ್ಟುಕೊಳ್ಳುವುದು. ಈ ಎಲ್ಲ ತಂತ್ರಾಂಶಗಳು ಒಂದೇ ಕಡೆ ಲಭ್ಯವಿದ್ದರೆ ಒಳ್ಳೆಯದಲ್ಲವೇ? ಹೌದು. ಅಂತಹ ಒಂದು ಜಾಲತಾಣವಿದೆ. ಅದರ ವಿಳಾಸ ninite.com. ಈ ಜಾಲತಾಣದಲ್ಲಿ ನಿಮಗೆ ಬೇಕಾದ ಎಲ್ಲ ತಂತ್ರಾಂಶಗಳನ್ನು ಆಯ್ಕೆ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

e - ಸುದ್ದಿ

ಕೃತಿಚೌರ್ಯ ತಾಣಕ್ಕೆ ಕೊಂಡಿ ನೀಡಿದ್ದಕ್ಕೆ ಕಾರಾಗೃಹ

ಕೃತಿಚೌರ್ಯ ಮಾಡುವುದು ಅಪರಾಧ. ಇದುಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಕೃತಿಚೌರ್ಯ ಮಾಡಿ ಪುಸ್ತಕ, ತಂತ್ರಾಂಶ, ಸಂಗೀತ, ವೀಡಿಯೋ, ಇತ್ಯಾದಿಗಳನ್ನು ಅಂತರಜಾಲದಲ್ಲಿ ವಿತರಿಸುವುದೂ ಅಪರಾಧ. ಈ ರೀತಿ ಮಾಡುವ ಜಾಲತಾಣಗಳು ಹಲವಾರಿವೆ. ಸಾಮಾನ್ಯವಾಗಿ ಇಂತಹ ಜಾಲತಾಣಗಳು ಕಾನೂನು ವ್ಯವಸ್ಥೆ ಸರಿಯಿಲ್ಲದಿರುವ ದೇಶಗಳಲ್ಲಿರುತ್ತವೆ. ಆದರೆ ಅಮೆರಿಕದಿಂದ ವರದಿಯಾದ ಸುದ್ದಿಯೇ ಬೇರೆ. ಒಬ್ಬಾತ ತನ್ನ ಜಾಲತಾಣದಲ್ಲಿ ಇಂತಹ ಜಾಲತಾಣಗಳಿಗೆ ಕೊಂಡಿ ನೀಡಿದ್ದ. ಅಧಿಕಾರಿಗಳು ಈ ರೀತಿ ಸಂಪರ್ಕ ಕೊಂಡಿ ನೀಡುವುದು ಕೂಡ ಅಪರಾಧ ಎಂದು ತೀರ್ಮಾನಿಸಿದರು. ಈಗ ಆತನ ಜಾಲತಾಣವನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಆತನಿಗೆ ಐದು ವರ್ಷ ಕಾರಾಗೃಹವಾಸದ ಶಿಕ್ಷೆ ವಿಧಿಸಲಾಗಿದೆ. ಸದ್ಯಕ್ಕೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಅಂತಿಮ ತೀರ್ಮಾನವನ್ನು ಕಾಯಲಾಗುತ್ತಿದೆ.

e- ಪದ

ಅಂತಾರಾಷ್ಟ್ರೀಯ ಜಾಲತಾಣಸೂಚಿ (Internationalized Domain Names -IDN) -ಇಂಗ್ಲಿಶ್ ಹೊರತಾದ ಇತರೆ ಭಾಷೆಗಳಲ್ಲಿ ಜಾಲತಾಣದ ವಿಳಾಸ ಸೂಚಿಸುವುದು. ಉದಾಹರಣೆಗೆ ಕನ್ನಡಪ್ರಭ ಪತ್ರಿಕೆಯ ಜಾಲತಾಣ ಸೂಚಿ www.kannadaprabha.com ಎಂದಿದೆ. ಇಲ್ಲಿ ಕನ್ನಡಪ್ರಭ ಎಂಬುದನ್ನು ಕನ್ನಡ ಲಿಪಿಯಲ್ಲೇ ಸೂಚಿಸಿದರೆ ಅದು ಐಡಿಎನ್ ಆಗುತ್ತದೆ. ಹೀಗೆ ಮಾಡಲು ಎಲ್ಲ ಗಣಕ ಕಾರ್ಯಾಚರಣೆಯ ವ್ಯವಸ್ಥೆಗಳು ಮತ್ತು ಬ್ರೌಸರ್ ತಂತ್ರಾಂಶಗಳು ಯುನಿಕೋಡ್ ಶಿಷ್ಟತೆಯನ್ನು ಬಳಸಬೇಕಾಗುತ್ತದೆ. ಈಗ ಎಲ್ಲವೂ ಯುನಿಕೋಡ್ ಆಗಿರುವುದರಿಂದ ಬೇಕಿದ್ದವರೆಲ್ಲ ತಮ್ಮ ಭಾಷೆಯಲ್ಲೇ ಜಾಲತಾಣಸೂಚಿಗಳನ್ನು ಮಾಡಿಕೊಳ್ಳಬಹುದು. ಭಾರತೀಯ ಭಾಷೆಗಳ ವಿಷಯಕ್ಕೆ ಬಂದಾಗ ಕೆಲವು ಸಂದಿಗ್ಧಕಾರಿ ಸಂದರ್ಭಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ. ಉಳಿದಂತೆ ನಮ್ಮ ಭಾಷೆಯಲ್ಲಿ ಡೊಮೈನ್ ಹೆಸರು ಮಾಡಿಕೊಳ್ಳಬಹುದು.

e - ಸಲಹೆ

ಸಂತೋಷ್ ನುಳಗೇರಿ ಅವರ ಪ್ರಶ್ನೆ: ನನಗೆ ನನ್ನ ಲ್ಯಾಪ್ಟಾಪ್ ನಲ್ಲಿ "ನುಡಿ" ತಂತ್ರಾಂಶವನ್ನು ಇನ್ಸ್ಟಾಲ್ ಮಾಡುವುದು ಅತಿ ಅವಶ್ಯವಾಗಿದೆ. ಆದರೆ ನನ್ನ ಆಪರೇಟಿಂಗ್ ಸಿಸ್ಟಂ "ವಿಂಡೋಸ್ 7" ಆಗಿದ್ದು ಅದರಲ್ಲಿ ನುಡಿ ತಂತ್ರಾಂಶದ ಇತ್ತೀಚಿನ ವರ್ಶನ್ ಕೂಡ ಇನ್ಸ್ಟಾಲ್ ಮಾಡಲು ಆಗುತ್ತಿಲ್ಲ. ಈ ತಂತ್ರಾಂಶವಿಲ್ಲದೆ ನನಗೆ KPSC ಅಥವಾ ಇನ್ಯಾವುದೇ ಸರಕಾರೀ ವೆಬ್ಸೈಟ್ ನಲ್ಲಿ ಕನ್ನಡದಲ್ಲಿ ದಾಖಲಾದ ಅಕ್ಷರಗಳನ್ನು ಓದಲು ಆಗುತ್ತಿಲ್ಲ. ದಯವಿಟ್ಟು ಈ ಸಮಸ್ಯಗೆ ಉಪಾಯ ಅಥವಾ ಅನ್ಯಮಾರ್ಗವಿದ್ದರೆ ತಿಳಿಸಿ.
ಉ: ನಾನೂ ಪ್ರಯತ್ನಿಸಿ ನೋಡಿದೆ. ಹೌದು, ೬೪ ಬಿಟ್ ವಿಂಡೋಸ್ ೭ ರಲ್ಲಿ ನುಡಿ ತಂತ್ರಾಂಶ ಕೆಲಸ ಮಾಡುವುದಿಲ್ಲ. ನಿಮಗೆ ಜಾಲತಾಣದಲ್ಲಿಯ ಮಾಹಿತಿಯನ್ನು ಓದುವುದು ಮಾತ್ರ ಅಗತ್ಯವಾದಲ್ಲಿ ನುಡಿ ಫಾಂಟ್‌ಗಳನ್ನು windows\fonts ಫೋಲ್ಡರ್‌ಗೆ ಪ್ರತಿ ಮಾಡಿಕೊಂಡು ಓದಬಹುದು. ನೀವು ವಿಂಡೋಸ್ ೭ ಪ್ರೊಫೆಶನಲ್ ಅಥವಾ ಅಲ್ಟಿಮೇಟ್ ಬಳಸುತ್ತಿರುವಿರಾದರೆ ಅದರಲ್ಲಿ XP Mode ಹಾಕಿಕೊಂಡು ಅದರೊಳಗೆ ನುಡಿ ತಂತ್ರಾಂಶ ಇನ್‌ಸ್ಟಾಲ್ ಮಾಡಿಕೊಂಡು ಕೆಲಸ ಮಾಡಬಹುದು.

ಕಂಪ್ಯೂತರ್ಲೆ

ಇನ್ನಷ್ಟು ಗಣಕ (ತ)ಗಾದೆಗಳು:
  • ಅಂತರಜಾಲ ಸಂಪರ್ಕವಿಲ್ಲದ ಗಣಕವು ಆಹಾರ ಇಲ್ಲದ ರೆಫ್ರಿಜರೇಟರಿನಂತೆ
  • ಖಡ್ಗಕ್ಕಿಂತ ಕೀಬೋರ್ಡ್ ಶಕ್ತಿಶಾಲಿ
  • ಬಹುತೇಕ ವಾಹನಳಲ್ಲಿ ಆಗುವಂತೆ ಗಣಕ ಕೈಕೊಡಲೂ ಕೆಟ್ಟ ಡ್ರೈವರ್‌ಗಳೇ ಕಾರಣ

1 ಕಾಮೆಂಟ್‌: